ಆ ರಕ್ಷಣೆಯ ದಿನವು ಇದೇ!
“ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.”—2 ಕೊರಿಂಥ 6:2.
1. ದೇವರೊಂದಿಗೆ ಮತ್ತು ಕ್ರಿಸ್ತನೊಂದಿಗೆ ಮೆಚ್ಚುಗೆಯ ನಿಲುವನ್ನು ಹೊಂದುವುದಕ್ಕಾಗಿ ಏನು ಅಗತ್ಯ?
ಮಾನವಕುಲದ ನ್ಯಾಯತೀರ್ಪಿಗಾಗಿ ಯೆಹೋವನು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. (ಅ. ಕೃತ್ಯಗಳು 17:31) ಅದು ನಮಗೆ ರಕ್ಷಣೆಯ ದಿನವಾಗಿ ಪರಿಣಮಿಸಬೇಕಾಗುವಲ್ಲಿ, ನಾವು ಆತನ ಮತ್ತು ಆತನ ನೇಮಿತ ನ್ಯಾಯಾಧಿಪತಿಯಾದ ಯೇಸು ಕ್ರಿಸ್ತನ ಮುಂದೆ ಒಂದು ಮೆಚ್ಚುಗೆಯ ನಿಲುವನ್ನು ಹೊಂದಿರುವ ಅಗತ್ಯವಿದೆ. (ಯೋಹಾನ 5:22) ಅಂತಹ ನಿಲುವು, ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿರುವ ನಡತೆ ಮತ್ತು ಇತರರು ಯೇಸುವಿನ ನಿಜ ಶಿಷ್ಯರಾಗಿರುವಂತೆ ಸಹಾಯಮಾಡಲು ನಮ್ಮನ್ನು ಪ್ರಚೋದಿಸುವ ನಂಬಿಕೆಯನ್ನು ಕೇಳಿಕೊಳ್ಳುತ್ತದೆ.
2. ಮಾನವಕುಲದ ಲೋಕವು ದೇವರಿಂದ ಏಕೆ ದೂರತೊಲಗಿ ಹೋಗಿದೆ?
2 ಬಾಧ್ಯತೆಯಾಗಿ ಪಡೆದಿರುವ ಪಾಪದಿಂದಾಗಿ, ಮಾನವಕುಲದ ಲೋಕವು ದೇವರಿಂದ ದೂರತೊಲಗಿ ಹೋಗಿದೆ. (ರೋಮಾಪುರ 5:12; ಎಫೆಸ 4:17, 18) ಆದುದರಿಂದ, ನಾವು ಯಾರಿಗೆ ಸಾರುತ್ತೇವೊ ಅವರು, ದೇವರೊಂದಿಗೆ ಸಮಾಧಾನಮಾಡಿಕೊಳ್ಳುವಲ್ಲಿ ಮಾತ್ರವೇ ರಕ್ಷಣೆಯನ್ನು ಪಡೆಯಬಲ್ಲರು. ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಬರೆದಾಗ, ಅಪೊಸ್ತಲ ಪೌಲನು ಈ ವಿಷಯವನ್ನು ಸ್ಪಷ್ಟಪಡಿಸಿದನು. ನ್ಯಾಯತೀರ್ಪು, ದೇವರೊಂದಿಗೆ ಸಮಾಧಾನಮಾಡಿಕೊಳ್ಳುವಿಕೆ ಮತ್ತು ರಕ್ಷಣೆಯ ಕುರಿತು ಪೌಲನು ಏನನ್ನು ಹೇಳುತ್ತಾನೆಂಬುದನ್ನು ನೋಡಲು ನಾವು 2 ಕೊರಿಂಥ 5:10–6:10ನ್ನು ಪರೀಕ್ಷಿಸೋಣ.
“ನಾವು ಮನುಷ್ಯರನ್ನು ಒಡಂಬಡಿಸುತ್ತೇವೆ”
3. ಪೌಲನು “ಮನುಷ್ಯರನ್ನು ಒಡಂಬಡಿಸು”ತ್ತಿದ್ದದ್ದು ಹೇಗೆ, ಮತ್ತು ಅದನ್ನು ಇಂದು ನಾವು ಏಕೆ ಮಾಡಬೇಕು?
3 “ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೇದಕ್ಕಾಗಲಿ ಕೆಟ್ಟದ್ದಕ್ಕಾಗಲಿ ಸರಿಯಾಗಿ ಪ್ರತಿಫಲವನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕು. ಕರ್ತನ ಭಯವು ನಮಗಿರುವದರಿಂದ ನಾವು ಮನುಷ್ಯರನ್ನು ಒಡಂಬಡಿಸುತ್ತೇವೆ,” ಎಂದು ಪೌಲನು ಬರೆದಾಗ ಅವನು ನ್ಯಾಯತೀರ್ಪನ್ನು ಸಾರುವಿಕೆಯೊಂದಿಗೆ ಪರಸ್ಪರ ಸಂಬಂಧಿಸಿದನು. (2 ಕೊರಿಂಥ 5:10, 11) ಸುವಾರ್ತೆಯನ್ನು ಸಾರುವ ಮೂಲಕ ಅಪೊಸ್ತಲನು ‘ಮನುಷ್ಯರನ್ನು ಒಡಂಬಡಿಸುತ್ತಾ ಇದ್ದನು.’ ನಮ್ಮ ಕುರಿತಾಗಿ ಏನು? ನಾವು ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಎದುರಿಸುತ್ತಿರುವುದರಿಂದ, ಯೇಸುವಿನಿಂದ ಒಳ್ಳೆಯ ನ್ಯಾಯತೀರ್ಪನ್ನು ಪಡೆಯಲು ಮತ್ತು ರಕ್ಷಣೆಯ ಮೂಲನಾದ ಯೆಹೋವ ದೇವರ ಸಮ್ಮತಿಯನ್ನು ಗಳಿಸಲಿಕ್ಕಾಗಿ ಅಗತ್ಯವಿರುವ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ನಾವು ಇತರರನ್ನು ಒಡಂಬಡಿಸಲು ನಮ್ಮಿಂದ ಸಾಧ್ಯವಿರುವಷ್ಟನ್ನು ಮಾಡಬೇಕು.
4, 5. (ಎ) ಯೆಹೋವನ ಸೇವೆಯಲ್ಲಿನ ನಮ್ಮ ಸಾಧನೆಗಳ ಕುರಿತಾಗಿ ನಾವು ಏಕೆ ಜಂಬಕೊಚ್ಚಿಕೊಳ್ಳಬಾರದು? (ಬಿ) ಪೌಲನು ‘ದೇವರ ಮಹಿಮೆಗಾಗಿ’ ಜಂಬಕೊಚ್ಚಿಕೊಂಡದ್ದು ಹೇಗೆ?
4 ಆದರೆ ದೇವರು ನಮ್ಮ ಶುಶ್ರೂಷೆಯನ್ನು ಆಶೀರ್ವದಿಸಿರುವಲ್ಲಿ, ನಾವು ಜಂಬಕೊಚ್ಚಿಕೊಳ್ಳಬಾರದು. ಕೊರಿಂಥದಲ್ಲಿ, ಕೆಲವರು ತಮ್ಮ ವಿಷಯದಲ್ಲೇ ಅಥವಾ ಇತರ ಪುರುಷರ ವಿಷಯದಲ್ಲಿ ಅಹಂಭಾವದಿಂದ ಉಬ್ಬಿಕೊಂಡಿದ್ದರು. ಇದು ಸಭೆಯಲ್ಲಿ ವಿಭಜನೆಗಳನ್ನು ಉಂಟುಮಾಡಿತು. (1 ಕೊರಿಂಥ 1:10-13; 3:3, 4) ಈ ಪರಿಸ್ಥಿತಿಗೆ ಸೂಚಿಸುತ್ತಾ, ಪೌಲನು ಬರೆದುದು: “ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹಿಗ್ಗದೆ [“ಜಂಬಕೊಚ್ಚಿಕೊಳ್ಳದೆ,” NW] ತೋರಿಕೆಯ ವಿಷಯದಲ್ಲಿ ಮಾತ್ರ ಹಿಗ್ಗುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳುವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯದಲ್ಲಿ ಹಿಗ್ಗುವದಕ್ಕೆ ನಿಮಗೆ ಆಸ್ಪದಕೊಡುತ್ತೇವೆ. ನಮಗೆ ಬುದ್ಧಿಪರವಶವಾಗಿದ್ದರೆ ಅದು ದೇವರ ಮಹಿಮೆಗಾಗಿಯೇ ಅದೆ; ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿ ಅದೆ.” (2 ಕೊರಿಂಥ 5:12, 13) ಅಹಂಕಾರಿಗಳು, ಸಭೆಯ ಐಕ್ಯ ಮತ್ತು ಆತ್ಮಿಕ ಕ್ಷೇಮದ ಕುರಿತಾಗಿ ಆಸಕ್ತರಾಗಿರಲಿಲ್ಲ. ಜೊತೆ ವಿಶ್ವಾಸಿಗಳು ದೇವರ ಮುಂದೆ ಉತ್ತಮ ಹೃದಯಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುವ ಬದಲಿಗೆ, ಅವರು ಹೊರಗಿನ ತೋರಿಕೆಗಳ ವಿಷಯದಲ್ಲಿ ಜಂಬಕೊಚ್ಚಿಕೊಳ್ಳಲು ಬಯಸಿದರು. ಆದುದರಿಂದ, ಪೌಲನು ಸಭೆಯನ್ನು ಗದರಿಸಿ, ಅನಂತರ ತಿಳಿಸಿದ್ದು: “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”—2 ಕೊರಿಂಥ 10:17.
5 ಪೌಲನು ಸ್ವತಃ ಜಂಬಕೊಚ್ಚಿಕೊಳ್ಳಲಿಲ್ಲವೊ? ತಾನು ಒಬ್ಬ ಅಪೊಸ್ತಲನಾಗಿದ್ದುದರ ಕುರಿತು ಅವನು ಹೇಳುತ್ತಿದ್ದ ವಿಷಯಗಳ ಕಾರಣ ಅನೇಕರು ಹಾಗೆ ನೆನಸಿದ್ದಿರಬಹುದು. ಆದರೆ ಅವನು ‘ದೇವರ ಮಹಿಮೆಗಾಗಿ’ ಜಂಬಕೊಚ್ಚಿಕೊಳ್ಳಬೇಕಾಗಿತ್ತು. ಕೊರಿಂಥದವರು ಯೆಹೋವನನ್ನು ಬಿಟ್ಟುಹೋಗದಿರುವಂತೆ, ಅವನು ಒಬ್ಬ ಅಪೊಸ್ತಲನಾಗಿರುವ ಅರ್ಹತೆಗಳ ಕುರಿತು ಜಂಬಕೊಚ್ಚಿಕೊಂಡನು. ಸುಳ್ಳು ಅಪೊಸ್ತಲರು ಕೊರಿಂಥದವರನ್ನು ತಪ್ಪಾದ ದಿಕ್ಕಿಗೆ ತಿರುಗಿಸುತ್ತಿದ್ದರಿಂದ, ಅವರನ್ನು ಪುನಃ ದೇವರ ಬಳಿ ತರಲಿಕ್ಕಾಗಿಯೇ ಪೌಲನು ಹಾಗೆ ಮಾಡಿದನು. (2 ಕೊರಿಂಥ 11:16-21; 12:11, 12, 19-21; 13:10) ಆದರೂ, ಪೌಲನು ತನ್ನ ಸಾಧನೆಗಳ ಕುರಿತು ಎಲ್ಲರನ್ನೂ ಪ್ರಭಾವಿಸಲಿಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಿರಲಿಲ್ಲ.—ಜ್ಞಾನೋಕ್ತಿ 21:4.
ಕ್ರಿಸ್ತನ ಪ್ರೀತಿಯು ನಿಮ್ಮನ್ನು ಒತ್ತಾಯಪಡಿಸುತ್ತದೊ?
6. ಕ್ರಿಸ್ತನ ಪ್ರೀತಿಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?
6 ಒಬ್ಬ ನೈಜ ಅಪೊಸ್ತಲನೋಪಾದಿ, ಪೌಲನು ಇತರರಿಗೆ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಕುರಿತಾಗಿ ಕಲಿಸಿದನು. ಅದು ಪೌಲನ ಜೀವಿತವನ್ನು ಪ್ರಭಾವಿಸಿತು. ಆದುದರಿಂದಲೇ ಅವನು ಹೀಗೆ ಬರೆದನು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಿದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡೆವು. ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಯೇಸು ತನ್ನ ಜೀವವನ್ನು ನಮಗೋಸ್ಕರ ಕೊಡುವ ಮೂಲಕ ನಮಗಾಗಿ ಎಷ್ಟೊಂದು ಪ್ರೀತಿಯನ್ನು ತೋರಿಸಿದನು! ನಿಶ್ಚಯವಾಗಿಯೂ ಅದು ನಮ್ಮ ಜೀವಿತಗಳಲ್ಲಿ ನಿರ್ಬಂಧಪಡಿಸುವ ಶಕ್ತಿಯಾಗಿರಬೇಕು. ನಮ್ಮ ಪರವಾಗಿ ತನ್ನ ಜೀವವನ್ನು ಕೊಟ್ಟದ್ದಕ್ಕಾಗಿ ಯೇಸುವಿಗಾಗಿ ಕೃತಜ್ಞತೆಯು, ಯೆಹೋವನು ತನ್ನ ಪ್ರಿಯ ಪುತ್ರನ ಮೂಲಕ ಒದಗಿಸಿರುವ ರಕ್ಷಣೆಯ ಸುವಾರ್ತೆಯನ್ನು ಹುರುಪಿನಿಂದ ಘೋಷಿಸಲು ನಮ್ಮನ್ನು ಪ್ರಚೋದಿಸಬೇಕು. (ಯೋಹಾನ 3:16; ಹೋಲಿಸಿರಿ ಕೀರ್ತನೆ 96:2.) ‘ಕ್ರಿಸ್ತನ ಪ್ರೀತಿಯು,’ ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೀವು ಹುರುಪಿನಿಂದ ಪಾಲ್ಗೊಳ್ಳುವಂತೆ ನಿಮ್ಮನ್ನು ಒತ್ತಾಯಪಡಿಸುತ್ತದೊ?—ಮತ್ತಾಯ 28:19, 20.
7. ‘ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳದಿರುವ’ ಅರ್ಥವೇನು?
7 ಅಭಿಷಿಕ್ತರು, ಕ್ರಿಸ್ತನು ತಮಗಾಗಿ ಮಾಡಿರುವ ಸಂಗತಿಗಳಿಗಾಗಿ ಕೃತಜ್ಞತೆಯನ್ನು ತೋರಿಸುವ ರೀತಿಯಲ್ಲಿ ತಮ್ಮ ಜೀವಿತಗಳನ್ನು ಉಪಯೋಗಿಸುವ ಮೂಲಕ, ‘ತಮಗೋಸ್ಕರ ಜೀವಿಸದೆ ಆತನಿಗಾಗಿ ಜೀವಿಸುತ್ತಾರೆ.’ ಪೌಲನು ಅಂದದ್ದು: “ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳುವದಿಲ್ಲ; ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ತಿಳುಕೊಳ್ಳುವದಿಲ್ಲ.” (2 ಕೊರಿಂಥ 5:16) ಕ್ರೈಸ್ತರು ಜನರನ್ನು ಶರೀರಸಂಬಂಧವಾಗಿ ವೀಕ್ಷಿಸಿ, ಪ್ರಾಯಶಃ ಅನ್ಯಜನಾಂಗದವರಿಗಿಂತ ಹೆಚ್ಚಾಗಿ ಯೆಹೂದ್ಯರಿಗೆ, ಅಥವಾ ಬಡವರಿಗಿಂತ ಹೆಚ್ಚಾಗಿ ಶ್ರೀಮಂತರಿಗೆ ಅನುಗ್ರಹವನ್ನು ತೋರಿಸಬಾರದಿತ್ತು. ಅಭಿಷಿಕ್ತರು “ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳುವುದಿಲ್ಲ,” ಯಾಕಂದರೆ ಜೊತೆ ವಿಶ್ವಾಸಿಗಳೊಂದಿಗಿನ ಅವರ ಆತ್ಮಿಕ ಸಂಬಂಧವೇ ಅವರಿಗೆ ಪ್ರಾಮುಖ್ಯವಾಗಿದೆ. ಯೇಸು ಭೂಮಿಯಲ್ಲಿದ್ದಾಗ ಅವನನ್ನು ಕಣ್ಣಾರೆ ನೋಡಿದ ಮನುಷ್ಯರು ಮಾತ್ರವೇ ‘ಕ್ರಿಸ್ತನನ್ನು ಶರೀರಸಂಬಂಧವಾಗಿ ತಿಳಿದಿದ್ದ’ವರಾಗಿರಲಿಲ್ಲ. ಮೆಸ್ಸೀಯನನ್ನು ನಿರೀಕ್ಷಿಸುತ್ತಿದ್ದವರಲ್ಲಿ ಕೆಲವರು, ಕ್ರಿಸ್ತನನ್ನು ಕೇವಲ ಒಬ್ಬ ಸಾಧಾರಣ ಮನುಷ್ಯನಾಗಿ ವೀಕ್ಷಿಸುತ್ತಿದ್ದರೂ, ಅವರು ಇನ್ನು ಮುಂದೆ ಹಾಗೆ ವೀಕ್ಷಿಸಬಾರದಿತ್ತು. ಅವನು ತನ್ನ ದೇಹವನ್ನು ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟಿದ್ದನು ಮತ್ತು ಒಬ್ಬ ಜೀವದಾಯಕ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಲ್ಪಟ್ಟಿದ್ದನು. ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಡುವ ಇತರರು, ಯೇಸು ಕ್ರಿಸ್ತನನ್ನು ಶಾರೀರಿಕವಾಗಿ ಎಂದೂ ನೋಡದೆಯೇ ತಮ್ಮ ಮಾಂಸಿಕ ದೇಹಗಳನ್ನು ಬಿಟ್ಟುಕೊಡಲಿದ್ದರು.—1 ಕೊರಿಂಥ 15:45, 50; 2 ಕೊರಿಂಥ 5:1-5.
8. ವ್ಯಕ್ತಿಗಳು ‘ಕ್ರಿಸ್ತನಲ್ಲಿರಲು’ ಆರಂಭಿಸಿರುವುದು ಹೇಗೆ?
8 ಅಭಿಷಿಕ್ತರನ್ನು ಸಂಬೋಧಿಸುತ್ತಾ, ಪೌಲನು ಕೂಡಿಸಿ ಹೇಳುವುದು: “ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.” (2 ಕೊರಿಂಥ 5:17) ‘ಕ್ರಿಸ್ತನಲ್ಲಿರುವುದು,’ ಅವನೊಂದಿಗೆ ಐಕ್ಯವನ್ನು ಅನುಭವಿಸುವುದನ್ನು ಅರ್ಥೈಸುತ್ತದೆ. (ಯೋಹಾನ 17:21) ಆ ವ್ಯಕ್ತಿಯನ್ನು ಯೆಹೋವನು ತನ್ನ ಮಗನ ಕಡೆಗೆ ಸೆಳೆದುಕೊಂಡು, ಅವನಿಗೆ ಪವಿತ್ರಾತ್ಮದಿಂದ ಜನ್ಮಕೊಟ್ಟಾಗ ಈ ಸಂಬಂಧವು ಆರಂಭಗೊಂಡಿತು. ದೇವರ ಆತ್ಮಜನಿತ ಪುತ್ರನೋಪಾದಿ, ಅವನು ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಪಾಲುಗಾರನಾಗುವ ಪ್ರತೀಕ್ಷೆಯುಳ್ಳ ‘ನೂತನಸೃಷ್ಟಿ’ಯಾಗುತ್ತಾನೆ. (ಯೋಹಾನ 3:3-8; ಗಲಾತ್ಯ 4:6, 7) ಅಂತಹ ಅಭಿಷಿಕ್ತ ಕ್ರೈಸ್ತರಿಗೆ, ಸೇವೆಯ ಮಹಾ ಸುಯೋಗವು ಕೊಡಲ್ಪಟ್ಟಿದೆ.
‘ದೇವರೊಂದಿಗೆ ಸಮಾಧಾನವಾಗಿರಿ’
9. ತನ್ನೊಂದಿಗೆ ಸಮಾಧಾನಮಾಡಿಕೊಳ್ಳುವುದನ್ನು ಸಾಧ್ಯಗೊಳಿಸಲಿಕ್ಕಾಗಿ ದೇವರು ಏನು ಮಾಡಿದ್ದಾನೆ?
9 ಯೆಹೋವನು ‘ನೂತನಸೃಷ್ಟಿ’ಗೆ ಎಷ್ಟೊಂದು ಅನುಗ್ರಹವನ್ನು ತೋರಿಸಿದ್ದಾನೆ! ಪೌಲನು ಹೇಳಿದ್ದು: “ಇದೆಲ್ಲಾ ದೇವರಿಂದಲೇ ಉಂಟಾದದ್ದು. ಆತನು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಮಾಧಾನಪಡಿಸಿಕೊಂಡು ಸಮಾಧಾನವಿಷಯವಾದ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ; ಆ ಸಮಾಧಾನವಾಕ್ಯವೇನಂದರೆ ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನೆಂಬದೇ. ಅದನ್ನು ಸಾರುವ ಸೇವೆಗೆ ನಮ್ಮನ್ನು ನೇಮಿಸಿದ್ದಾನೆ.” (2 ಕೊರಿಂಥ 5:18, 19) ಆದಾಮನು ಪಾಪಮಾಡಿದಂದಿನಿಂದ ಮಾನವಕುಲವು ದೇವರಿಂದ ದೂರತೊಲಗಿದೆ. ಆದರೆ ಯೇಸುವಿನ ಯಜ್ಞದ ಮೂಲಕ, ಸಮಾಧಾನಮಾಡಿಸಿಕೊಳ್ಳುವ ಮಾರ್ಗವನ್ನು ತೆರೆಯುವುದರಲ್ಲಿ ಯೆಹೋವನು ಪ್ರೀತಿಯಿಂದ ಆರಂಭದ ಹೆಜ್ಜೆಯನ್ನು ತೆಗೆದುಕೊಂಡನು.—ರೋಮಾಪುರ 5:6-12.
10. ಸಮಾಧಾನವಿಷಯವಾದ ಸೇವೆಯನ್ನು ಯೆಹೋವನು ಯಾರಿಗೆ ಒಪ್ಪಿಸಿದನು, ಮತ್ತು ಅದನ್ನು ಪೂರೈಸಲಿಕ್ಕಾಗಿ ಅವರು ಏನನ್ನು ಮಾಡಿದ್ದಾರೆ?
10 ಸಮಾಧಾನವಿಷಯವಾದ ಸೇವೆಯನ್ನು ಯೆಹೋವನು ಅಭಿಷಿಕ್ತರಿಗೆ ಒಪ್ಪಿಸಿರುವುದರಿಂದ, ಪೌಲನು ಹೀಗೆ ಹೇಳಸಾಧ್ಯವಿತ್ತು: “ನಾವು ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ಬುದ್ಧಿ ಹೇಳುವ ಹಾಗಾಯಿತು. ದೇವರೊಂದಿಗೆ ಸಮಾಧಾನವಾಗಿರೆಂದು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇವೆ.” (2 ಕೊರಿಂಥ 5:20) ಪುರಾತನ ಸಮಯಗಳಲ್ಲಿ, ಯುದ್ಧದ ಸಮಯದಲ್ಲಿ, ಮುಖ್ಯವಾಗಿ ಯುದ್ಧವನ್ನು ತಡೆಗಟ್ಟಲು ಸಾಧ್ಯವಿದೆಯೊ ಎಂದು ನೋಡಲಿಕ್ಕಾಗಿ ರಾಯಭಾರಿಗಳನ್ನು ಕಳುಹಿಸಲಾಗುತ್ತಿತ್ತು. (ಲೂಕ 14:31, 32) ಪಾಪಪೂರ್ಣ ಮಾನವಕುಲದ ಜಗತ್ತು ದೇವರಿಂದ ದೂರಸರಿದಿರುವುದರಿಂದ, ಸಮಾಧಾನಮಾಡುವುದಕ್ಕಾಗಿರುವ ತನ್ನ ಷರತ್ತುಗಳನ್ನು ಜನರಿಗೆ ತಿಳಿಸಲಿಕ್ಕಾಗಿ ದೇವರು ತನ್ನ ಅಭಿಷಿಕ್ತ ರಾಯಭಾರಿಗಳನ್ನು ಕಳುಹಿಸಿದ್ದಾನೆ. ‘ದೇವರೊಂದಿಗೆ ಸಮಾಧಾನವಾಗಿರಿ’ ಎಂದು ಕ್ರಿಸ್ತನಿಗೆ ಬದಲಿಗಳಾಗಿ, ಅಭಿಷಿಕ್ತರು ಬೇಡಿಕೊಳ್ಳುತ್ತಾರೆ. ಈ ಬೇಡಿಕೆಯು, ದೇವರೊಂದಿಗೆ ಸಮಾಧಾನವನ್ನು ಕೋರಲಿಕ್ಕಾಗಿ ಮತ್ತು ಕ್ರಿಸ್ತನ ಮೂಲಕ ಆತನು ಸಾಧ್ಯಮಾಡುವ ರಕ್ಷಣೆಯನ್ನು ಅಂಗೀಕರಿಸಲಿಕ್ಕಾಗಿರುವ ಕರುಣಾಭರಿತವಾದ ಮೊರೆಯಾಗಿದೆ.
11. ಪ್ರಾಯಶ್ಚಿತ್ತದಲ್ಲಿನ ನಂಬಿಕೆಯ ಮೂಲಕ ಕಟ್ಟಕಡೆಗೆ ದೇವರ ಮುಂದೆ ಒಂದು ನೀತಿಯ ನಿಲುವನ್ನು ಪಡೆದುಕೊಳ್ಳುವವರು ಯಾರು?
11 ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಡುವ ಎಲ್ಲ ಮನುಷ್ಯರು ದೇವರೊಂದಿಗೆ ಸಮಾಧಾನವನ್ನು ಮಾಡಿಕೊಳ್ಳಬಹುದು. (ಯೋಹಾನ 3:36) ಪೌಲನು ಹೇಳುವುದು: “ನಾವು ಆತನ ಮೂಲಕ ದೇವರ ನೀತಿಯಾಗುವಂತೆ, ದೇವರು ಪಾಪಜ್ಞಾನವಿಲ್ಲದ ಆತನನ್ನು [ಯೇಸುವನ್ನು] ನಮಗೋಸ್ಕರ ಪಾಪಸ್ವರೂಪಿಯಾಗಿ ಮಾಡಿದನು.” (2 ಕೊರಿಂಥ 5:21, NW) ಪರಿಪೂರ್ಣನಾದ ಯೇಸು ಕ್ರಿಸ್ತನು, ಬಾಧ್ಯತೆಯಾಗಿ ಬಂದಿರುವ ಪಾಪದಿಂದ ಬಿಡುಗಡೆಮಾಡಲ್ಪಡುವ ಆದಾಮನ ಸಂತತಿಯವರೆಲ್ಲರಿಗಾಗಿರುವ ಪಾಪಯಜ್ಞವಾಗಿದ್ದನು. ಅವರು ಯೇಸುವಿನ ಮೂಲಕ “ದೇವರ ನೀತಿ”ಯಾಗುತ್ತಾರೆ. ಈ ನೀತಿ ಅಥವಾ ದೇವರ ಮುಂದೆ ಒಂದು ನೀತಿಯ ನಿಲುವು, ಪ್ರಥಮವಾಗಿ ಕ್ರಿಸ್ತನ 1,44,000 ಮಂದಿ ಜೊತೆಬಾಧ್ಯಸ್ಥರಿಗೆ ದೊರಕುತ್ತದೆ. ನಿತ್ಯ ತಂದೆಯಾಗಿರುವ ಯೇಸು ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ, ಭೂಮಿಯ ಮೇಲಿನ ಅವನ ಮಕ್ಕಳು ಪರಿಪೂರ್ಣ ಮಾನವರೆಂಬ ನೀತಿಯುತ ನಿಲುವನ್ನು ಪಡೆಯುವರು. ಅವರು ದೇವರಿಗೆ ನಂಬಿಗಸ್ತರಾಗಿ ಉಳಿದು, ನಿತ್ಯಜೀವದ ಕೊಡುಗೆಯನ್ನು ಪಡೆದುಕೊಳ್ಳುವಂತೆ, ಅವನು ಅವರನ್ನು ಪರಿಪೂರ್ಣತೆಯಲ್ಲಿ ಒಂದು ನೀತಿಯ ನಿಲುವಿಗೆ ಏರಿಸುವನು.—ಯೆಶಾಯ 9:6; ಪ್ರಕಟನೆ 14:1; 20:4-6, 11-15.
“ಆ ಸುಪ್ರಸನ್ನತೆಯಕಾಲ”
12. ಯೆಹೋವನ ರಾಯಭಾರಿಗಳು ಮತ್ತು ಪ್ರತಿನಿಧಿಗಳು ಯಾವ ಮಹತ್ವಪೂರ್ಣ ಶುಶ್ರೂಷೆಯನ್ನು ನಡೆಸುತ್ತಾ ಇದ್ದಾರೆ?
12 ರಕ್ಷಣೆಗಾಗಿ, ನಾವು ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕು: “ನಾವು ಆತನೊಂದಿಗೆ ಕೆಲಸನಡಿಸುವವರಾಗಿದ್ದು—ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ. ಪ್ರಸನ್ನತೆಯಕಾಲದಲ್ಲಿ ನಿನ್ನ ಮನವೆಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.” (2 ಕೊರಿಂಥ 6:1, 2) ಯೆಹೋವನ ಅಭಿಷಿಕ್ತ ರಾಯಭಾರಿಗಳು ಮತ್ತು ಅವನ ಪ್ರತಿನಿಧಿಗಳಾದ “ಬೇರೆ ಕುರಿಗಳು” ತಮ್ಮ ಸ್ವರ್ಗೀಯ ತಂದೆಯ ಅಪಾತ್ರ ಕೃಪೆಯನ್ನು ಸ್ವೀಕರಿಸಿ, ಅದರ ಉದ್ದೇಶವನ್ನು ಪೂರೈಸುವುದರಿಂದ ತಪ್ಪಿಹೋಗುವುದಿಲ್ಲ. (ಯೋಹಾನ 10:16) ಈ “ಸುಪ್ರಸನ್ನತೆಯಕಾಲ”ದಲ್ಲಿ ಅವರು ತಮ್ಮ ಯಥಾರ್ಥ ನಡತೆ ಮತ್ತು ಹುರುಪಿನ ಶುಶ್ರೂಷೆಯ ಮೂಲಕ ದೈವಿಕ ಅನುಗ್ರಹವನ್ನು ಪಡೆಯಲಿಕ್ಕಾಗಿ ಪ್ರಯತ್ನಪಡುತ್ತಾರೆ ಮತ್ತು ಈ ಸಮಯವು “ಆ ರಕ್ಷಣೆಯ ದಿನ” ಆಗಿದೆಯೆಂದು ಭೂನಿವಾಸಿಗಳಿಗೆ ತಿಳಿಸುತ್ತಿದ್ದಾರೆ.
13. ಯೆಶಾಯ 49:8, 9ರ ತಿರುಳು ಏನಾಗಿದೆ, ಮತ್ತು ಅದು ಪ್ರಥಮವಾಗಿ ನೆರವೇರಿಸಲ್ಪಟ್ಟದ್ದು ಹೇಗೆ?
13 “ಇದೇ ಯೆಹೋವನ ನುಡಿ—ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ, ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ; ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿ . . . ಹಾಳಾಗಿದ್ದ ಸ್ವಾಸ್ತ್ಯಗಳನ್ನು ಅವರಿಗೆ ಹಂಚಿ ದೇಶವನ್ನು ಜೀರ್ಣೋದ್ಧಾರಮಾಡುವೆನು” ಎಂದು ಹೇಳುವ ಯೆಶಾಯ 49:8, 9ನ್ನು ಪೌಲನು ಉಲ್ಲೇಖಿಸುತ್ತಾನೆ. ಇಸ್ರಾಯೇಲಿನ ಜನರು ಬಾಬೆಲಿನ ಬಂಧಿವಾಸದಿಂದ ಬಿಡಿಸಲ್ಪಟ್ಟು, ತದನಂತರ ತಮ್ಮ ನಿರ್ಜನವಾದ ಸ್ವದೇಶಕ್ಕೆ ಹಿಂದಿರುಗಿಸಲ್ಪಟ್ಟಾಗ ಆ ಪ್ರವಾದನೆಯು ಪ್ರಥಮವಾಗಿ ನೆರವೇರಿತು.—ಯೆಶಾಯ 49:3, 9.
14. ಯೇಸುವಿನ ಸಂಬಂಧದಲ್ಲಿ ಯೆಶಾಯ 49:8 ಹೇಗೆ ನೆರವೇರಿತು?
14 ಯೆಶಾಯನ ಪ್ರವಾದನೆಯ ಮುಂದಿನ ನೆರವೇರಿಕೆಯಲ್ಲಿ, ಯೆಹೋವನು ತನ್ನ “ಸೇವಕ”ನಾದ ಯೇಸುವನ್ನು ‘[ದೇವರ] ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿ’ಸಿದನು. (ಯೆಶಾಯ 49:6, 8; ಹೋಲಿಸಿರಿ ಯೆಶಾಯ 42:1-4, 6, 7; ಮತ್ತಾಯ 12:18-21.) “ಪ್ರಸನ್ನತೆಯ ಕಾಲ” ಅಥವಾ “ಸುಪ್ರಸನ್ನತೆಯ ಕಾಲ”ವು, ಯೇಸು ಭೂಮಿಯ ಮೇಲಿದ್ದ ಸಮಯಕ್ಕೆ ಅನ್ವಯವಾಯಿತೆಂಬುದು ಸುವ್ಯಕ್ತ. ಅವನು ಪ್ರಾರ್ಥಿಸಿದನು ಮತ್ತು ದೇವರು ಅವನಿಗೆ ‘ಸದುತ್ತರವನ್ನು ದಯಪಾಲಿಸಿದನು.’ ಅದು ಯೇಸುವಿಗೆ “ರಕ್ಷಣೆಯ ದಿನ”ವಾಗಿ ರುಜುವಾಯಿತು, ಯಾಕಂದರೆ ಅವನು ಸಂಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡು, ಹೀಗೆ “ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.”—ಇಬ್ರಿಯ 5:7, 9; ಯೋಹಾನ 12:27, 28.
15. ಯಾವ ಸಮಯದಂದಿನಿಂದ ಆತ್ಮಿಕ ಇಸ್ರಾಯೇಲ್ಯರು ದೇವರ ಅಪಾತ್ರ ಕೃಪೆಗೆ ಯೋಗ್ಯರಾಗಿ ರುಜುಪಡಿಸಿಕೊಳ್ಳಬೇಕಿತ್ತು, ಮತ್ತು ಯಾವ ಉದ್ದೇಶದೊಂದಿಗೆ?
15 ಪೌಲನು ಯೆಶಾಯ 49:8ನ್ನು ಅಭಿಷಿಕ್ತ ಕ್ರೈಸ್ತರಿಗೆ ಅನ್ವಯಿಸುತ್ತಾನೆ. ದೇವರು ಒದಗಿಸುವ “ಸುಪ್ರಸನ್ನತೆಯ ಕಾಲ” ಮತ್ತು “ರಕ್ಷಣೆಯ ದಿನ”ದಲ್ಲಿ ಆತನ ಸುಚಿತ್ತವನ್ನು ಹುಡುಕದೇ ಇರುವ ಮೂಲಕ ‘ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳದಂತೆ’ ಅವನು ಅವರನ್ನು ವಿನಂತಿಸುತ್ತಾನೆ. ಪೌಲನು ಕೂಡಿಸಿ ಹೇಳುವುದು: “ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.” (2 ಕೊರಿಂಥ 6:2) “ಸುಪ್ರಸನ್ನತೆಯ ಕಾಲ”ವು ತಮಗೆ “ರಕ್ಷಣೆಯ ದಿನ”ವಾಗಿರಲಿಕ್ಕಾಗಿ, ಆತ್ಮಿಕ ಇಸ್ರಾಯೇಲ್ಯರು ಸಾ.ಶ. 33ರ ಪಂಚಾಶತ್ತಮದಂದಿನಿಂದ, ದೇವರ ಅಪಾತ್ರ ಕೃಪೆಗೆ ತಮ್ಮನ್ನು ಯೋಗ್ಯರಾಗಿ ರುಜುಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
‘ದೇವರ ಶುಶ್ರೂಷಕರೆಂದು ನಮ್ಮನ್ನು ಶಿಫಾರಸ್ಸುಮಾಡಿಕೊಳ್ಳುವುದು’
16. ಯಾವ ಕಷ್ಟಕರ ಪರಿಸ್ಥಿತಿಗಳಲ್ಲಿ ಪೌಲನು ತನ್ನನ್ನು ದೇವರ ಶುಶ್ರೂಷಕನಾಗಿ ಶಿಫಾರಸ್ಸುಮಾಡಿಕೊಂಡನು?
16 ಕೊರಿಂಥದ ಸಭೆಯೊಂದಿಗೆ ಸಹವಸಿಸುತ್ತಿದ್ದ ಕೆಲವರು, ದೇವರ ಅಪಾತ್ರ ಕೃಪೆಗೆ ತಮ್ಮನ್ನು ಯೋಗ್ಯರೆಂದು ರುಜುಪಡಿಸಿಕೊಳ್ಳುತ್ತಿರಲಿಲ್ಲ. ಪೌಲನು “ನಿಂದೆಗೆ ಅವಕಾಶಕೊಡದೆ” ಇದ್ದರೂ, ಅವನ ಅಪೊಸ್ತಲ ಸಂಬಂಧಿತ ಅಧಿಕಾರವನ್ನು ಕುಂದಿಸುವ ಪ್ರಯತ್ನದಿಂದ ಅವರು ಅವನ ಮೇಲೆ ಮಿಥ್ಯಾಪವಾದ ಹೊರಿಸಿದರು. “ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ” ಅವನು ಖಂಡಿತವಾಗಿಯೂ ತನ್ನನ್ನು ದೇವರ ಶುಶ್ರೂಷಕನೆಂದು ಶಿಫಾರಸ್ಸುಮಾಡಿಕೊಂಡನು. (2 ಕೊರಿಂಥ 6:3-5) ತದನಂತರ, ಪೌಲನು ತರ್ಕಿಸಿದ್ದೇನೆಂದರೆ, ತನ್ನ ಶತ್ರುಗಳು ಶುಶ್ರೂಷಕರಾಗಿದ್ದಲ್ಲಿ, ತಾನು ಹೆಚ್ಚಿನ ಸೆರೆವಾಸಗಳು, ಹೊಡೆತಗಳು, ಅಪಾಯಗಳು ಮತ್ತು ಅಭಾವಗಳನ್ನು ಅನುಭವಿಸಿರುವುದರಿಂದ “ಇನ್ನೂ ಹೆಚ್ಚು ಗಮನಾರ್ಹವಾಗಿ ಒಬ್ಬ ಶುಶ್ರೂಷಕನಾಗಿದ್ದೇನೆ.”—2 ಕೊರಿಂಥ 11:23-27, NW.
17. (ಎ) ಯಾವ ಗುಣಗಳನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮನ್ನು ದೇವರ ಶುಶ್ರೂಷಕರೋಪಾದಿ ಶಿಫಾರಸ್ಸುಮಾಡಿಕೊಳ್ಳುತ್ತೇವೆ? (ಬಿ) ‘ನೀತಿಯೆಂಬ ಆಯುಧಗಳು’ ಯಾವುವು?
17 ಪೌಲನು ಮತ್ತು ಅವನ ಸಂಗಾತಿಗಳಂತೆ, ನಾವು ದೇವರ ಶುಶ್ರೂಷಕರಾಗಿದ್ದೇವೆಂದು ಶಿಫಾರಸ್ಸುಮಾಡಿಕೊಳ್ಳಸಾಧ್ಯವಿದೆ. ಹೇಗೆ? “ಶುದ್ಧ ಮನಸ್ಸು” ಅಥವಾ ನಿರ್ಮಲಮನಸ್ಸಿನಿಂದ, ಮತ್ತು ನಿಷ್ಕೃಷ್ಟವಾದ ಬೈಬಲ್ ಜ್ಞಾನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಮೂಲಕವೇ. ನಾವು ಅನ್ಯಾಯವನ್ನು ಅಥವಾ ಕೋಪಿಸುವಂತೆ ಮಾಡುವ ಸಂದರ್ಭಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾ “ದೀರ್ಘಶಾಂತಿಯ” ಮೂಲಕ, ಮತ್ತು ಇತರರಿಗಾಗಿ ಸಹಾಯಕಾರಿ ಕೆಲಸಗಳನ್ನು ಮಾಡುತ್ತಾ “ದಯೆ”ಯ ಮೂಲಕ ನಮ್ಮನ್ನು ಶಿಫಾರಸ್ಸುಮಾಡಸಾಧ್ಯವಿದೆ. ಅಲ್ಲದೆ, ದೇವರ ಆತ್ಮದ ಮೂಲಕ ಮಾರ್ಗದರ್ಶನವನ್ನು ಸ್ವೀಕರಿಸುವ ಮೂಲಕ, “ಕಪಟವಿಲ್ಲದ ಪ್ರೀತಿ”ಯನ್ನು ಪ್ರದರ್ಶಿಸುವ ಮೂಲಕ, ಸತ್ಯವನ್ನಾಡುವ ಮೂಲಕ ಮತ್ತು ಶುಶ್ರೂಷೆಯನ್ನು ಪೂರೈಸಲು ಶಕ್ತಿಗಾಗಿ ಆತನ ಮೇಲೆ ಅವಲಂಬಿಸುವ ಮೂಲಕ ನಾವು ನಮ್ಮನ್ನು ದೇವರ ಸೇವಕರನ್ನಾಗಿ ಶಿಫಾರಸ್ಸುಮಾಡಸಾಧ್ಯವಿದೆ. ಆಸಕ್ತಿಕರವಾಗಿ, ಪೌಲನು ತನ್ನ ಶುಶ್ರೂಷಕನ ಸ್ಥಾನವನ್ನು ‘ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಕೊಳ್ಳುವ’ ಮೂಲಕವೂ ರುಜುಪಡಿಸಿದನು. ಪ್ರಾಚೀನ ಯುದ್ಧಗಳಲ್ಲಿ, ಸಾಮಾನ್ಯವಾಗಿ ಬಲಗೈಯನ್ನು ಕತ್ತಿ ಹಿಡಿಯಲು ಮತ್ತು ಎಡಗೈಯನ್ನು ಗುರಾಣಿ ಹಿಡಿಯಲು ಉಪಯೋಗಿಸಲಾಗುತ್ತಿತ್ತು. ಸುಳ್ಳು ಬೋಧಕರ ವಿರುದ್ಧ ಆತ್ಮಿಕ ಯುದ್ಧವನ್ನು ನಡೆಸಲಿಕ್ಕಾಗಿ, ಪೌಲನು ಕುಟಿಲತೆ, ಮೋಸ, ವಂಚನೆಯೆಂಬ, ಪಾಪಪೂರ್ಣ ಶರೀರದ ಆಯುಧಗಳನ್ನು ಬಳಸಲಿಲ್ಲ. (2 ಕೊರಿಂಥ 6:6, 7; 11:12-14; ಜ್ಞಾನೋಕ್ತಿ 3:32) ಸತ್ಯಾರಾಧನೆಯನ್ನು ಮುಂದೂಡಲು ಅವನು ನೀತಿಯ “ಆಯುಧಗಳನ್ನು” ಅಥವಾ ಮಾಧ್ಯಮವನ್ನು ಉಪಯೋಗಿಸಿದನು. ನಾವು ಸಹ ಹಾಗೆಯೇ ಮಾಡಬೇಕು.
18. ನಾವು ದೇವರ ಶುಶ್ರೂಷಕರಾಗಿರುವಲ್ಲಿ ಹೇಗೆ ನಡೆದುಕೊಳ್ಳುವೆವು?
18 ನಾವು ದೇವರ ಶುಶ್ರೂಷಕರಾಗಿರುವಲ್ಲಿ, ಪೌಲನು ಮತ್ತು ಅವನ ಜೊತೆಕೆಲಸಗಾರರಂತೆ ನಾವು ನಡೆದುಕೊಳ್ಳುವೆವು. ನಾವು ಗೌರವಿಸಲ್ಪಡಲಿ, ಗೌರವಿಸಲ್ಪಡದೆ ಇರಲಿ, ಕ್ರೈಸ್ತರಂತೆ ವರ್ತಿಸುವೆವು. ನಮ್ಮ ಕುರಿತಾದ ಕೆಟ್ಟ ವರದಿಗಳು ನಾವು ನಮ್ಮ ಕೆಲಸವನ್ನು ನಿಲ್ಲಿಸಿಬಿಡುವಂತೆ ಮಾಡಲಾರವು. ಅಲ್ಲದೆ ನಮ್ಮ ಕುರಿತಾಗಿ ಉತ್ತಮ ವರದಿಗಳು ಕೊಡಲ್ಪಡುವಾಗ ನಾವು ಅಹಂಕಾರಿಗಳು ಆಗದಿರುವೆವು. ನಾವು ಸತ್ಯವನ್ನಾಡಿ, ದೈವಭಕ್ತಿಯ ಕೆಲಸಗಳಿಗಾಗಿ ಮನ್ನಣೆಯನ್ನು ಪಡೆಯುವೆವು. ಶತ್ರುವಿನ ದಾಳಿಯ ಸಮಯದಲ್ಲಿ ಅಪಾಯಕರವಾದ ಸ್ಥಿತಿಯಲ್ಲಿರುವಾಗ, ನಾವು ಯೆಹೋವನಲ್ಲಿ ಭರವಸೆಯಿಡುವೆವು. ಮತ್ತು ನಾವು ಶಿಸ್ತನ್ನು ಕೃತಜ್ಞತಾಭಾವದಿಂದ ಸ್ವೀಕರಿಸುವೆವು.—2 ಕೊರಿಂಥ 6:8, 9.
19. ಆತ್ಮಿಕವಾಗಿ ‘ಅನೇಕರನ್ನು ಐಶ್ವರ್ಯವಂತರನ್ನಾಗಿ’ ಹೇಗೆ ಮಾಡಸಾಧ್ಯವಿದೆ?
19 ಸಮಾಧಾನಪಡಿಸುವಿಕೆಯ ಕುರಿತಾದ ಈ ಚರ್ಚೆಯನ್ನು ಅಂತ್ಯಗೊಳಿಸುತ್ತಾ, ಪೌಲನು ತಾನು ಮತ್ತು ತನ್ನ ಸಂಗಾತಿಗಳು “ದುಃಖಪಡುವವರಾಗಿದ್ದರೂ ಯಾವಾಗಲೂ ಸಂತೋಷಪಡುವವರೂ, ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯವನ್ನುಂಟು ಮಾಡುವವರೂ, ಏನೂ ಇಲ್ಲದವರಾಗಿದ್ದರೂ ಎಲ್ಲಾ ಇದ್ದವರೂ ಆಗಿ”ರುವುದಾಗಿ ಹೇಳುತ್ತಾನೆ. (2 ಕೊರಿಂಥ 6:10) ಆ ಶುಶ್ರೂಷಕರಿಗೆ ತಮ್ಮ ಬಾಧೆಗಳ ವಿಷಯದಲ್ಲಿ ದುಃಖಪಡಲು ಕಾರಣವಿದ್ದರೂ, ಅವರಿಗೆ ಆಂತರಿಕ ಆನಂದವಿತ್ತು. ಅವರು ಭೌತಿಕವಾಗಿ ಬಡವರಾಗಿದ್ದರೂ, ಆತ್ಮಿಕವಾಗಿ ‘ಐಶ್ವರ್ಯವಂತ’ರಾಗಿದ್ದರು. ಅವರ ನಂಬಿಕೆಯು ಅವರಿಗೆ ಆತ್ಮಿಕ ಐಶ್ವರ್ಯಗಳನ್ನು, ದೇವರ ಸ್ವರ್ಗೀಯ ಪುತ್ರರಾಗುವ ಪ್ರತೀಕ್ಷೆಯನ್ನು ಸಹ ತಂದಿದ್ದುದರಿಂದ ಅವರು ವಾಸ್ತವದಲ್ಲಿ ‘ಎಲ್ಲಾ ಇದ್ದವರಾಗಿದ್ದರು.’ ಮತ್ತು ಕ್ರೈಸ್ತ ಶುಶ್ರೂಷಕರೋಪಾದಿ ಅವರು ಒಂದು ಸಮೃದ್ಧ ಮತ್ತು ಆನಂದದ ಜೀವನದಲ್ಲಿ ಆನಂದಿಸಿದರು. (ಅ. ಕೃತ್ಯಗಳು 20:35) ಅವರಂತೆ ನಾವು ಈಗಲೇ, ಈ ರಕ್ಷಣೆಯ ದಿನದಲ್ಲೇ ಸಮಾಧಾನಮಾಡಿಸುವಿಕೆಯ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ‘ಅನೇಕರನ್ನು ಐಶ್ವರ್ಯವಂತರನ್ನಾಗಿ’ ಮಾಡಬಹುದು!
ಯೆಹೋವನಿಂದ ಬರುವ ರಕ್ಷಣೆಯಲ್ಲಿ ಭರವಸೆ
20. (ಎ) ಪೌಲನ ಹೃತ್ಪೂರ್ವಕ ಬಯಕೆ ಏನಾಗಿತ್ತು, ಮತ್ತು ವಿಳಂಬಿಸಲು ಸಮಯವಿರಲಿಲ್ಲವೇಕೆ? (ಬಿ) ನಾವು ಈಗ ಜೀವಿಸುತ್ತಿರುವ ಸಮಯವು ರಕ್ಷಣೆಯ ದಿನವೆಂದು ಯಾವುದು ಗುರುತಿಸುತ್ತದೆ?
20 ಸುಮಾರು ಸಾ.ಶ. 55ರಲ್ಲಿ ಪೌಲನು ಕೊರಿಂಥದವರಿಗೆ ತನ್ನ ಎರಡನೆಯ ಪತ್ರವನ್ನು ಬರೆಯುತ್ತಿದ್ದಾಗ, ಯೆಹೂದಿ ವಿಷಯಗಳ ವ್ಯವಸ್ಥೆಗೆ ಸುಮಾರು 15 ವರ್ಷಗಳು ಮಾತ್ರ ಉಳಿದಿದ್ದವು. ಯೆಹೂದ್ಯರೂ ಅನ್ಯಜನಾಂಗದವರೂ ಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನಮಾಡಿಕೊಳ್ಳಬೇಕೆಂದು ಅಪೊಸ್ತಲನು ತೀವ್ರವಾಗಿ ಬಯಸಿದನು. ಅದು ರಕ್ಷಣೆಯ ದಿನವಾಗಿತ್ತು ಮತ್ತು ವಿಳಂಬಿಸಲು ಸಮಯವಿರಲಿಲ್ಲ. 1914ರಿಂದ ನಾವು ತದ್ರೀತಿಯಲ್ಲಿ, ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿದ್ದೇವೆ. ಈಗ ನಡೆಯುತ್ತಿರುವ ರಾಜ್ಯ ಸಾರುವಿಕೆಯ ಭೌಗೋಲಿಕ ಕೆಲಸವು, ಈ ಸಮಯವನ್ನು ರಕ್ಷಣೆಯ ದಿನವಾಗಿ ಗುರುತಿಸುತ್ತದೆ.
21. (ಎ) 1999ಕ್ಕಾಗಿ ಯಾವ ವಾರ್ಷಿಕವಚನವನ್ನು ಆಯ್ದುಕೊಳ್ಳಲಾಗಿದೆ? (ಬಿ) ರಕ್ಷಣೆಯ ಈ ದಿನದಲ್ಲಿ ನಾವು ಏನನ್ನು ಮಾಡುತ್ತಿರಬೇಕು?
21 ಎಲ್ಲ ಜನಾಂಗಗಳ ಜನರು, ಯೇಸು ಕ್ರಿಸ್ತನ ಮೂಲಕ ರಕ್ಷಣೆಗಾಗಿರುವ ದೇವರ ಒದಗಿಸುವಿಕೆಯ ಕುರಿತಾಗಿ ಕೇಳುವ ಅಗತ್ಯವಿದೆ. ತಡಮಾಡಲು ಸಮಯವಿಲ್ಲ. ಪೌಲನು ಬರೆದುದು: “ಇದೇ ಆ ರಕ್ಷಣೆಯ ದಿನ.” 2 ಕೊರಿಂಥ 6:2ರ ಆ ಮಾತುಗಳು ಯೆಹೋವನ ಸಾಕ್ಷಿಗಳ, 1999ರ ವಾರ್ಷಿಕವಚನವಾಗಿರುವುದು. ಇದು ಎಷ್ಟೊಂದು ಸೂಕ್ತವಾಗಿದೆ! ಯಾಕಂದರೆ, ಯೆರೂಸಲೇಮ್ ಮತ್ತು ಅದರ ದೇವಾಲಯದ ನಾಶನಕ್ಕಿಂತಲೂ ಹೆಚ್ಚು ಕೆಟ್ಟದಾದ ಒಂದು ನಾಶನವು ನಮ್ಮೆದುರಿಗಿದೆ. ಸ್ವಲ್ಪದರಲ್ಲೇ, ಭೂಮಿಯಲ್ಲಿರುವವರೆಲ್ಲರನ್ನು ಒಳಗೂಡಿಸುವ ಈ ಇಡೀ ವಿಷಯಗಳ ವ್ಯವಸ್ಥೆಯ ಅಂತ್ಯವಾಗಲಿದೆ. ಕ್ರಿಯೆಗೈಯುವ ಸಮಯವು ನಾಳೆಯಲ್ಲ, ಇಂದೇ ಆಗಿದೆ. ಯೆಹೋವನಿಂದ ರಕ್ಷಣೆಯು ಬರುತ್ತದೆಂದು ನಾವು ನಂಬುತ್ತಿರುವಲ್ಲಿ, ಆತನನ್ನು ಪ್ರೀತಿಸುತ್ತಿರುವಲ್ಲಿ, ಮತ್ತು ನಿತ್ಯಜೀವವನ್ನು ಅಮೂಲ್ಯವೆಂದೆಣಿಸುತ್ತಿರುವಲ್ಲಿ, ನಮಗೆ ತೋರಿಸಲ್ಪಟ್ಟಿರುವ ದೇವರ ಅಪಾತ್ರ ಕೃಪೆಯ ಉದ್ದೇಶದಿಂದ ನಾವು ತಪ್ಪಿಹೋಗಲಿಕ್ಕಿಲ್ಲ. ಯೆಹೋವನನ್ನು ಗೌರವಿಸುವ ಹೃತ್ಪೂರ್ವಕ ಬಯಕೆಯೊಂದಿಗೆ, “ಇದೇ ಆ ರಕ್ಷಣೆಯ ದಿನ” ಎಂದು ನಾವು ಉದ್ಗರಿಸುವಾಗ ಆ ಮಾತುಗಳನ್ನು ನಾವು ನಿಜವಾಗಿ ನಂಬುತ್ತೇವೆಂದು ನಡೆನುಡಿಯಿಂದ ರುಜುಪಡಿಸುವೆವು.
ನೀವು ಹೇಗೆ ಉತ್ತರಿಸುವಿರಿ?
◻ ದೇವರೊಂದಿಗೆ ಸಮಾಧಾನಮಾಡಿಕೊಳ್ಳುವುದು ಏಕೆ ಅತಿ ಪ್ರಾಮುಖ್ಯವಾಗಿದೆ?
◻ ಸಮಾಧಾನದವಿಷಯವಾದ ಸೇವೆಯಲ್ಲಿ ಸೇರಿರುವ ರಾಯಭಾರಿಗಳು ಮತ್ತು ಪ್ರತಿನಿಧಿಗಳು ಯಾರು?
◻ ನಾವು ನಮ್ಮನ್ನು ದೇವರ ಸೇವಕರಾಗಿ ಹೇಗೆ ಶಿಫಾರಸ್ಸುಮಾಡಿಕೊಳ್ಳಲು ಸಾಧ್ಯವಿದೆ?
◻ ಯೆಹೋವನ ಸಾಕ್ಷಿಗಳ 1999ರ ವಾರ್ಷಿಕವಚನವು ನಿಮಗೆ ಯಾವ ಅರ್ಥವನ್ನು ಕೊಡುತ್ತದೆ?
[ಪುಟ 17 ರಲ್ಲಿರುವ ಚಿತ್ರ]
ಪೌಲನಂತೆ, ನೀವು ಹುರುಪಿನಿಂದ ಸಾರುತ್ತಾ, ಇತರರು ದೇವರೊಂದಿಗೆ ಸಮಾಧಾನಮಾಡಿಕೊಳ್ಳಲು ಸಹಾಯಮಾಡುತ್ತಿದ್ದೀರೊ?
ಅಮೆರಿಕ
ಫ್ರಾನ್ಸ್
ಕೋಟ್ಡೀವಾರ್
[ಪುಟ 18 ರಲ್ಲಿರುವ ಚಿತ್ರ]
ರಕ್ಷಣೆಯ ಈ ದಿನದಲ್ಲಿ, ಯೆಹೋವ ದೇವರೊಂದಿಗೆ ಸಮಾಧಾನಮಾಡಿಕೊಳ್ಳುತ್ತಿರುವ ಜನಸ್ತೋಮಗಳಲ್ಲಿ ನೀವೂ ಒಬ್ಬರಾಗಿದ್ದೀರೊ?