ಅಧ್ಯಾಯ ಹತ್ತೊಂಬತ್ತು
ಕಪಟತನ ಬಯಲಿಗೆ!
1. ಕಪಟತನದ ಕುರಿತು ಯೇಸು ಮತ್ತು ಯೆಹೋವನ ದೃಷ್ಟಿಕೋನವೇನು, ಮತ್ತು ಯೆಶಾಯನ ದಿನಗಳಲ್ಲಿ ಇದು ಯಾವ ರೂಪದಲ್ಲಿ ತೋರಿಬರುತ್ತದೆ?
“ನೀವು ಸಹ ಹೊರಗೆ ಜನರಿಗೆ ಸತ್ಪರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ” ಎಂದು ಯೇಸು ತನ್ನ ದಿನಗಳ ಧಾರ್ಮಿಕ ನಾಯಕರಿಗೆ ಹೇಳಿದನು. (ಮತ್ತಾಯ 23:28) ಕಪಟತನದ ಕುರಿತು ಯೇಸು ಮಾಡಿದ ಈ ಖಂಡನೆಯು, ಅವನ ಸ್ವರ್ಗೀಯ ಪಿತನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಯೆಶಾಯನ ಪ್ರವಾದನೆಯ 58ನೆಯ ಅಧ್ಯಾಯವು, ಯೆಹೂದದಲ್ಲಿ ಅತಿಯಾಗಿ ಹಬ್ಬಿರುವ ಕಪಟತನದ ಮೇಲೆ ಪ್ರತ್ಯೇಕವಾಗಿ ಗಮನವನ್ನು ಕೇಂದ್ರೀಕರಿಸುತ್ತದೆ. ಕಲಹ, ದಬ್ಬಾಳಿಕೆ ಮತ್ತು ಹಿಂಸಾಕೃತ್ಯಗಳು ದಿನನಿತ್ಯವೂ ನಡೆಯುವ ಸಂಗತಿಗಳಾಗಿವೆ ಮತ್ತು ಸಬ್ಬತ್ ಆಚರಣೆಯು ಅರ್ಥರಹಿತವಾದ ಮತಸಂಸ್ಕಾರವಾಗಿ ಅವನತಿಹೊಂದಿದೆ. ಜನರು ಯೆಹೋವನಿಗೆ ಕೇವಲ ನಾಮಮಾತ್ರದ ಸೇವೆಸಲ್ಲಿಸಿ, ಕಪಟ ರೀತಿಯ ಉಪವಾಸವನ್ನು ಮಾಡಿ ಗಾಢಭಕ್ತಿಯ ಪ್ರದರ್ಶನವನ್ನು ಮಾಡುತ್ತಾರೆ. ಆದುದರಿಂದ ಯೆಹೋವನು ಅವರ ನಿಜಸ್ಥಿತಿಯನ್ನು ಬಯಲಿಗೆಳೆಯುತ್ತಿರುವುದು ಆಶ್ಚರ್ಯಕರ ಸಂಗತಿಯೇನಲ್ಲ!
“ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು”
2. ಯೆಹೋವನ ಸಂದೇಶವನ್ನು ಪ್ರಕಟಿಸುವಾಗ ಯೆಶಾಯನು ಯಾವ ಮನೋಭಾವವನ್ನು ತೋರಿಸುತ್ತಾನೆ, ಮತ್ತು ಇಂದು ಯಾರು ಅವನಂತಿದ್ದಾರೆ?
2 ಯೆಹೂದದ ವರ್ತನೆಯು ಯೆಹೋವನಿಗೆ ಅಸಹ್ಯವಾಗಿದ್ದರೂ, ಆ ಜನಾಂಗವು ಪಶ್ಚಾತ್ತಾಪಪಡಬೇಕೆಂಬ ಹೃತ್ಪೂರ್ವಕವಾದ ವಿನಂತಿಯು ಆತನ ಮಾತುಗಳಲ್ಲಿದೆ. ಆದರೂ, ತನ್ನ ತಿದ್ದುಪಾಟು ಅಸ್ಪಷ್ಟವಾಗಿರುವಂತೆ ಯೆಹೋವನು ಬಯಸುವುದಿಲ್ಲ. ಈ ಕಾರಣದಿಂದ ಆತನು ಯೆಶಾಯನಿಗೆ ಆಜ್ಞಾಪಿಸುವುದು: “ಗಂಟಲೆತ್ತಿ ಕೂಗು, ಸಂಕೋಚಪಡಬೇಡ, ಕೊಂಬಿನಂತೆ ದನಿಗೈದು ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು, ಯಾಕೋಬವಂಶದವರಿಗೆ ಅವರ ಪಾಪಗಳನ್ನು ಅರುಹು.” (ಯೆಶಾಯ 58:1) ಯೆಶಾಯನು ಯೆಹೋವನ ಮಾತುಗಳನ್ನು ಧೈರ್ಯದಿಂದ ಸಾರುವುದರಿಂದ ಜನರು ಅವನ ಮೇಲೆ ರೇಗಿಕೊಳ್ಳಬಹುದಾದರೂ ಅವನು ಸ್ವಲ್ಪವೂ ಹಿಂಜರಿಯುವುದಿಲ್ಲ. ಅವನು ಆರಂಭದಲ್ಲಿ “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದಾಗ ಅವನಿಗಿದ್ದಂಥ ಸಮರ್ಪಣಾಭಾವವೇ ಈಗಲೂ ಇದೆ. (ಯೆಶಾಯ 6:8) ಆಧುನಿಕ ದಿನದ ಯೆಹೋವನ ಸಾಕ್ಷಿಗಳಿಗೆ ಯೆಶಾಯನು ತಾಳ್ಮೆಯ ಎಷ್ಟು ಒಳ್ಳೆಯ ಮಾದರಿಯಾಗಿದ್ದಾನೆ! ಈ ಸಾಕ್ಷಿಗಳು ಸಹ ದೇವರ ವಾಕ್ಯವನ್ನು ಸಾರಿ, ಧಾರ್ಮಿಕ ಕಪಟತನವನ್ನು ಬಯಲಿಗೆಳೆಯುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ.—ಕೀರ್ತನೆ 118:6; 2 ತಿಮೊಥೆಯ 4:1-5.
3, 4. (ಎ) ಯೆಶಾಯನ ದಿನಗಳಲ್ಲಿ ಜನರು ಯಾವ ಸುಳ್ಳು ವೇಷವನ್ನು ಹಾಕಿಕೊಳ್ಳುತ್ತಾರೆ? (ಬಿ) ಯೆಹೂದದಲ್ಲಿನ ನಿಜ ಸ್ಥಿತಿ ಏನು?
3 ಯೆಶಾಯನ ದಿನಗಳ ಜನರು ಬರೀ ತೋರಿಕೆಗಾಗಿ ಯೆಹೋವನನ್ನು ಹುಡುಕಿ ಆತನ ನೀತಿಯ ನ್ಯಾಯತೀರ್ಪುಗಳಲ್ಲಿ ಸಂತೋಷಿಸುತ್ತಾರೆ. ಯೆಹೋವನ ಮಾತುಗಳನ್ನು ನಾವು ಹೀಗೆ ಓದುತ್ತೇವೆ: “ಅವರಂತು ದಿನದಿನವೂ ನನ್ನ ದರ್ಶನಕ್ಕಾಗಿ ಬಂದು ನನ್ನ ಮಾರ್ಗವನ್ನು ತಿಳಿದುಕೊಳ್ಳುವದರಲ್ಲಿ ಹೆಚ್ಚಳಪಡುತ್ತಾರೆ; ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ.” (ಯೆಶಾಯ 58:2) ಆದರೆ ಯೆಹೋವನ ಮಾರ್ಗಗಳಲ್ಲಿ ಅವರು ತೋರಿಸುತ್ತಿರುವ ಆನಂದವು ಯಥಾರ್ಥವಾದದ್ದೊ? ಇಲ್ಲ. ಅವರು “ಧರ್ಮವನ್ನಾಚರಿಸುವ ಜನಾಂಗ”ದಂತೆ ಇದ್ದರೂ ಅದು ಕೇವಲ ಬಾಹ್ಯ ತೋರಿಕೆಯಾಗಿದೆ. ಸತ್ಯವಾಗಿ ಹೇಳುವುದಾದರೆ, ಅವರು “ದೇವರ ನಿಯಮಗಳನ್ನು” ಬಿಟ್ಟವರಾಗಿದ್ದಾರೆ.
4 ಇದು, ಸಮಯಾನಂತರ ಪ್ರವಾದಿ ಯೆಹೆಜ್ಕೇಲನಿಗೆ ತಿಳಿಸಲ್ಪಟ್ಟಂಥ ಸ್ಥಿತಿಗತಿಗೆ ಹೆಚ್ಚುಕಡಿಮೆ ಹೋಲುತ್ತದೆ. ಯೆಹೂದ್ಯರು ತಮ್ಮ ಮಧ್ಯೆ, “ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ” ಎಂದು ಹೇಳಿಕೊಳ್ಳುತ್ತಿದ್ದಾರೆಂದು ಯೆಹೋವನು ಯೆಹೆಜ್ಕೇಲನಿಗೆ ಹೇಳಿದನು. ಆದರೆ ಯೆಹೋವನು ಅವರ ಕಪಟಾಚರಣೆಯ ಕುರಿತು ಯೆಹೆಜ್ಕೇಲನನ್ನು ಎಚ್ಚರಿಸಿದನು: “ಅವರು ನಿನ್ನ ಬಳಿಗೆ ಬಂದು . . . ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂಡದರ ಮೇಲೆ ಹೋಗುತ್ತದೆ. ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ.” (ಯೆಹೆಜ್ಕೇಲ 33:30-32) ಹಾಗೆಯೇ, ಯೆಶಾಯನ ಸಮಕಾಲೀನರು ಸಹ ತಾವು ಸದಾ ಯೆಹೋವನನ್ನು ಹುಡುಕುತ್ತಿದ್ದೇವೆಂದು ವಾದಿಸುತ್ತಾರಾದರೂ, ಅವರು ಆತನ ಮಾತುಗಳಿಗೆ ವಿಧೇಯರಾಗುವುದಿಲ್ಲ.
ಕಪಟಾಚರಣೆಯ ಉಪವಾಸ
5. ಯೆಹೂದ್ಯರು ದೈವಿಕ ಮೆಚ್ಚಿಕೆಯನ್ನು ಪಡೆಯಲು ಪ್ರಯತ್ನಿಸುವುದು ಹೇಗೆ, ಮತ್ತು ಯೆಹೋವನಿಂದ ಬಂದ ಪ್ರತಿಕ್ರಿಯೆಯೇನು?
5 ದೈವಿಕ ಮೆಚ್ಚಿಕೆಯನ್ನು ಪಡೆಯುವ ಪ್ರಯತ್ನದಿಂದ ಯೆಹೂದ್ಯರು ಉಪವಾಸವನ್ನು ಔಪಚಾರಿಕವಾಗಿ ಮಾಡುತ್ತಿದ್ದರೂ, ಅವರು ಹಾಕಿಕೊಂಡಿರುವ ನೀತಿಯ ಸೋಗು ಅವರನ್ನು ಯೆಹೋವನಿಂದ ಇನ್ನೂ ವಿಮುಖಗೊಳಿಸುತ್ತದೆ. ತಬ್ಬಿಬ್ಬಾದ ಅವರು ಕೇಳುವುದು: “ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವದೇಕೆ”? ಆಗ ಯೆಹೋವನು ಮುಚ್ಚುಮರೆಯಿಲ್ಲದೆ ಉತ್ತರಕೊಡುವುದು: “ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡಿಸಿ ನಿಮ್ಮ ಆಳುಗಳನ್ನು ದುಡಿತಕ್ಕೆಳೆಯುತ್ತೀರಿ. ನೋಡಿರಿ, ನಿಮ್ಮ ಉಪವಾಸದ ಫಲವೇನಂದರೆ—ವ್ಯಾಜ್ಯ, ಕಲಹ, ಕೇಡಿನ ಗುದ್ದು, ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ. ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀತಟ್ಟನ್ನೂ ಬೂದಿಯನ್ನೂ ಆಸನಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?”—ಯೆಶಾಯ 58:3-5.
6. ಯೆಹೂದ್ಯರ ಉಪವಾಸಗಳು ಕಪಟಾಚಾರವೆಂದು ಅವರ ಯಾವ ಕ್ರಿಯೆಗಳು ತೋರಿಸುತ್ತವೆ?
6 ಉಪವಾಸಮಾಡುವಾಗ, ನೀತಿವಂತರೆಂಬ ನಟನೆಯನ್ನು ಮಾಡುತ್ತಿರುವಾಗ ಮತ್ತು ಯೆಹೋವನ ನೀತಿಯ ತೀರ್ಪನ್ನು ಕೇಳಿಕೊಳ್ಳುವಾಗಲೂ ಕೂಡ, ಆ ಜನರು ಸ್ವಾರ್ಥದಾಶೆಗಳನ್ನು ಮತ್ತು ವ್ಯಾಪಾರದ ವಹಿವಾಟುಗಳಿಂದ ಬರುವ ಪ್ರಯೋಜನಗಳನ್ನು ಬೆನ್ನಟ್ಟುತ್ತಾರೆ. ಅವರು ಕಲಹ, ದಬ್ಬಾಳಿಕೆ ಮತ್ತು ಹಿಂಸಾಚಾರಗಳಲ್ಲಿ ತೊಡಗುತ್ತಾರೆ. ತಮ್ಮ ಕೆಟ್ಟ ವರ್ತನೆಗಳನ್ನು ಮರೆಮಾಡಲಿಕ್ಕಾಗಿ ಅವರು ಜೊಂಡಿನಂತೆ ತಲೆ ಬೊಗ್ಗಿಸಿಕೊಂಡು ಶೋಕಪ್ರದರ್ಶನಗಳನ್ನು ಮಾಡುತ್ತಾರೆ. ಮತ್ತು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಡುತ್ತೇವೆಂದು ತೋರಿಸಲು ಗೋಣೀತಟ್ಟನ್ನು ಕಟ್ಟಿಕೊಂಡು ಬೂದಿಯಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಅವರು ದಂಗೆಯೇಳುವುದನ್ನು ಮುಂದುವರಿಸುತ್ತಾ ಇರುವಲ್ಲಿ ಇದೆಲ್ಲವನ್ನು ಮಾಡಿ ಪ್ರಯೋಜನವೇನು? ಯಥಾರ್ಥವಾದ ಉಪವಾಸದೊಂದಿಗೆ ಕೂಡಿರಬೇಕಾದ ಯಾವುದೇ ದೈವಿಕ ಶೋಕ ಮತ್ತು ಪಶ್ಚಾತ್ತಾಪವನ್ನು ಅವರು ತೋರಿಸುವುದಿಲ್ಲ. ಅವರ ಗೋಳಾಟವು ಗದ್ದಲದಿಂದ ತುಂಬಿರುವುದಾದರೂ ಅದು ಸ್ವರ್ಗದಲ್ಲಿ ಕೇಳಿಬರುವುದಿಲ್ಲ.
7. ಯೇಸುವಿನ ದಿನಗಳ ಯೆಹೂದ್ಯರು ಹೇಗೆ ಕಪಟತನದಿಂದ ವರ್ತಿಸಿದರು, ಮತ್ತು ಇಂದು ಕೂಡ ಅನೇಕರು ಹಾಗೆಯೇ ಮಾಡುತ್ತಿರುವುದು ಹೇಗೆ?
7 ಯೇಸುವಿನ ದಿನಗಳ ಯೆಹೂದ್ಯರು ಸಹ ತದ್ರೀತಿಯಲ್ಲೇ ವಿಧಿವಿಹಿತವಾದ ಉಪವಾಸದ ಪ್ರದರ್ಶನವನ್ನು ಮಾಡಿದರು ಮತ್ತು ಕೆಲವರು ಅದನ್ನು ವಾರಕ್ಕೆ ಎರಡಾವರ್ತಿ ಮಾಡಿದರು! (ಮತ್ತಾಯ 6:16-18; ಲೂಕ 18:11, 12) ಅನೇಕ ಧಾರ್ಮಿಕ ಮುಖಂಡರು ಕಠೋರವಾಗಿ ಮತ್ತು ಅಹಂಭಾವದಿಂದ ವರ್ತಿಸುವ ಮೂಲಕವೂ ಯೆಶಾಯನ ಸಂತತಿಯವರನ್ನು ಅನುಕರಿಸಿದರು. ಆದಕಾರಣ, ಯೇಸು ಧೈರ್ಯದಿಂದ ಆ ಧಾರ್ಮಿಕ ಕಪಟಿಗಳನ್ನು ಬಯಲಿಗೆಳೆದು, ಅವರ ಆರಾಧನಾ ರೀತಿಯು ನಿರರ್ಥಕವೆಂದು ಹೇಳಿದನು. (ಮತ್ತಾಯ 15:7-9) ಇಂದು ಕೂಡ, ಕೋಟ್ಯಂತರ ಜನರು “ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರ್ಯಗಳಿಗೆಲ್ಲಾ ಅಪ್ರಯೋಜಕರೂ ಆಗಿರುವದರಿಂದ ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ” ತೋರಿಸುತ್ತಾರೆ. (ತೀತ 1:16) ಅಂತಹವರು ದೇವರ ಕರುಣೆಯನ್ನು ನಿರೀಕ್ಷಿಸಬಹುದಾದರೂ ಅವರ ನಡತೆ ಅವರ ಕಪಟಾಚರಣೆಯನ್ನು ಬಹಿರಂಗಪಡಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳಾದರೊ ನಿಜ ದೈವಿಕ ಭಕ್ತಿ ಮತ್ತು ಶುದ್ಧ ಸಹೋದರ ಪ್ರೀತಿಯನ್ನು ತೋರಿಸುತ್ತಾರೆ.—ಯೋಹಾನ 13:35.
ನಿಜ ಪಶ್ಚಾತ್ತಾಪದಲ್ಲಿ ಏನೆಲ್ಲ ಒಳಗೂಡಿದೆ?
8, 9. ಯಥಾರ್ಥವಾದ ಪಶ್ಚಾತ್ತಾಪದೊಂದಿಗೆ ಯಾವ ಸಕಾರಾತ್ಮಕ ಕ್ರಿಯೆಗಳಿರತಕ್ಕದ್ದು?
8 ತನ್ನ ಜನರು ತಮ್ಮ ಪಾಪಗಳಿಗಾಗಿ ಉಪವಾಸಮಾಡುವುದನ್ನು ಮಾತ್ರ ಯೆಹೋವನು ಬಯಸುವುದಿಲ್ಲ; ಅವರು ಪಶ್ಚಾತ್ತಾಪಪಡುವಂತೆಯೂ ಬಯಸುತ್ತಾನೆ. ಆಗ ಮಾತ್ರ ಅವರು ಆತನ ಅನುಗ್ರಹವನ್ನು ಪಡೆಯುವರು. (ಯೆಹೆಜ್ಕೇಲ 18:23, 32) ಉಪವಾಸವು ಅರ್ಥಭರಿತವಾಗಿರಬೇಕಾದರೆ, ಅದರ ಜೊತೆಯಲ್ಲಿ ಗತಕಾಲದ ಪಾಪಗಳನ್ನು ತಿದ್ದಿ ಸರಿಪಡಿಸಿಕೊಳ್ಳಬೇಕು ಎಂದು ಆತನು ವಿವರಿಸುತ್ತಾನೆ. ಯೆಹೋವನು ಕೇಳುವ ಹೃದಯಶೋಧಕ ಪ್ರಶ್ನೆಯನ್ನು ಪರಿಗಣಿಸಿರಿ: “ನೋಡಿರಿ, ಕೇಡಿನ ಬಂಧಗಳನ್ನು ಬಿಚ್ಚುವದು, ನೊಗದ ಕಣ್ಣಿಗಳನ್ನು ಕಳಚುವದು, ಜಜ್ಜಿಹೋದವರನ್ನು ಬಿಡುಗಡೆಮಾಡುವದು, ನೊಗಗಳನ್ನೆಲ್ಲಾ ಮುರಿಯುವದು, . . . ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ”?—ಯೆಶಾಯ 58:6, 7.
9 ಬಂಧಗಳು ಮತ್ತು ನೊಗಗಳು ಕ್ರೂರವಾದ ದಾಸತ್ವವನ್ನು ಸೂಚಿಸಲು ಯೋಗ್ಯ ಪ್ರತೀಕಗಳಾಗಿವೆ. ಆದಕಾರಣ, ಉಪವಾಸಮಾಡುತ್ತಿದ್ದಾಗಲೇ ಜೊತೆವಿಶ್ವಾಸಿಗಳ ಶೋಷಣೆಮಾಡುವ ಬದಲಿಗೆ, ಆ ಜನರು “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ಆಜ್ಞೆಗೆ ವಿಧೇಯರಾಗಬೇಕಿತ್ತು. (ಯಾಜಕಕಾಂಡ 19:18) ಅವರು ಯಾರನ್ನು ಶೋಷಣೆಗೊಳಪಡಿಸಿ, ಅನ್ಯಾಯವಾಗಿ ದಾಸರಾಗುವಂತೆ ಮಾಡಿದ್ದಾರೋ ಅವರೆಲ್ಲರನ್ನೂ ಬಿಡುಗಡೆ ಮಾಡಬೇಕು.a ಉಪವಾಸಮಾಡುವಂತಹ ಪ್ರದರ್ಶನಾತ್ಮಕ ಧಾರ್ಮಿಕ ಕ್ರಿಯೆಗಳು, ಶುದ್ಧವಾದ ದೈವಿಕ ಭಕ್ತಿ ಮತ್ತು ಸಹೋದರ ಪ್ರೀತಿಯನ್ನು ತೋರಿಸುವುದಕ್ಕೆ ಎಂದಿಗೂ ಬದಲಿಗಳಾಗಲಾರವು. ಯೆಶಾಯನ ಸಮಕಾಲೀನನಾಗಿದ್ದ ಪ್ರವಾದಿಯಾದ ಮೀಕನು ಬರೆಯುವುದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.
10, 11. (ಎ) ಯೆಹೂದ್ಯರು ಉಪವಾಸಮಾಡುವುದಕ್ಕಿಂತಲೂ ಯಾವ ಹೆಚ್ಚು ಉತ್ತಮವಾದ ಕೆಲಸಗಳನ್ನು ಮಾಡಬಹುದು? (ಬಿ) ಯೆಹೋವನು ಯೆಹೂದ್ಯರಿಗೆ ಕೊಟ್ಟ ಸಲಹೆಯನ್ನು ಕ್ರೈಸ್ತರು ಇಂದು ಹೇಗೆ ಅನ್ವಯಿಸಿಕೊಳ್ಳಬಲ್ಲರು?
10 ನ್ಯಾಯ, ದಯೆ ಮತ್ತು ವಿನಯ ಎಂಬ ಗುಣಗಳು, ನಾವು ಇತರರಿಗೆ ಒಳ್ಳೇದನ್ನು ಮಾಡುವಂತೆ ಕೇಳಿಕೊಳ್ಳುತ್ತವೆ ಮತ್ತು ಇದು ಯೆಹೋವನ ಧರ್ಮಶಾಸ್ತ್ರದ ಸಾರಾಂಶವಾಗಿದೆ. (ಮತ್ತಾಯ 7:12) ತಮ್ಮಲ್ಲಿ ಯಥೇಷ್ಟವಾಗಿರುವ ವಸ್ತುಗಳನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವುದು, ಉಪವಾಸವನ್ನು ಮಾಡುವುದಕ್ಕಿಂತಲೂ ಎಷ್ಟೋ ಮಿಗಿಲಾಗಿರುವ ಸಂಗತಿಯಾಗಿದೆ. ಯೆಹೋವನು ಕೇಳುವುದು: “ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವದು, ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ”? (ಯೆಶಾಯ 58:7) ಹೌದು, ಉಪವಾಸಮಾಡುತ್ತಿದ್ದೇವೆಂಬ ಪ್ರದರ್ಶನವನ್ನು ಮಾಡುವ ಬದಲಿಗೆ, ಸೌಕರ್ಯವಿರುವವರು ತಮ್ಮ ಸ್ವಂತ ರಕ್ತಸಂಬಂಧಿಗಳಾಗಿರುವ ಯೆಹೂದದ ಜೊತೆನಿವಾಸಿಗಳಿಗೆ ಆಹಾರ, ವಸ್ತ್ರ, ಅಥವಾ ವಸತಿಯನ್ನು ಕೊಡಬೇಕಾಗಿತ್ತು.
11 ಸಹೋದರ ಪ್ರೀತಿ ಮತ್ತು ಕನಿಕರದ ಕುರಿತಾಗಿ ಯೆಹೋವನು ಹೇಳಿದ ಈ ಸೊಗಸಾದ ಮೂಲತತ್ತ್ವಗಳು, ಯೆಶಾಯನ ಕಾಲದ ಯೆಹೂದ್ಯರಿಗೆ ಮಾತ್ರ ಅನ್ವಯವಾಗುವುದಿಲ್ಲ. ಇವು ಕ್ರೈಸ್ತರಿಗೂ ಮಾರ್ಗದರ್ಶನವನ್ನು ಕೊಡುತ್ತವೆ. ಆದಕಾರಣವೇ, ಅಪೊಸ್ತಲ ಪೌಲನು ಬರೆದುದು: “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಹೆಚ್ಚೆಚ್ಚು ಕಠಿನವಾಗುತ್ತಾ ಹೋಗುತ್ತಿರುವ ಕಾಲದಲ್ಲಿ ನಾವು ಜೀವಿಸುತ್ತಿರುವ ವಿಶೇಷ ಕಾರಣದಿಂದಾಗಿ, ಕ್ರೈಸ್ತ ಸಭೆಯು ಪ್ರೀತಿ ಮತ್ತು ಸಹೋದರ ಪ್ರೇಮದ ಒಂದು ಆಶ್ರಯದಾಣವಾಗಿರತಕ್ಕದ್ದು.—2 ತಿಮೊಥೆಯ 3:1; ಯಾಕೋಬ 1:27.
ವಿಧೇಯತೆಯು ಯಥೇಚ್ಛ ಆಶೀರ್ವಾದಗಳನ್ನು ತರುತ್ತದೆ
12. ತನ್ನ ಜನರು ವಿಧೇಯರಾಗುವಲ್ಲಿ ಯೆಹೋವನು ಏನು ಮಾಡುವನು?
12 ಯೆಹೋವನ ಪ್ರೀತಿಯ ಗದರಿಕೆಗೆ ಕಿವಿಗೊಡಲು ಆತನ ಜನರಿಗೆ ಒಳನೋಟ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಯೆಹೋವನು ಹೇಳುವುದು: “ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು, ನಿಮ್ಮ ಕ್ಷೇಮವು ಬೇಗನೆ ವಿಕಸಿಸುವದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿ ಮುಂದರಿಯುವದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವದು. ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ, ಅನ್ನುವನು.” (ಯೆಶಾಯ 58:8, 9ಎ) ಎಷ್ಟೊಂದು ಅನುರಾಗಭರಿತ, ಆಕರ್ಷಕ ನುಡಿಗಳು! ಪ್ರೀತಿಪೂರ್ವಕವಾದ ದಯೆ ಮತ್ತು ನೀತಿಯಲ್ಲಿ ಆನಂದಿಸುವವರನ್ನು ಯೆಹೋವನು ಆಶೀರ್ವದಿಸಿ ರಕ್ಷಿಸುತ್ತಾನೆ. ಯೆಹೋವನ ಜನರು ತಮ್ಮ ನಿರ್ದಯತೆ ಮತ್ತು ಕಪಟಾಚಾರದ ಸಂಬಂಧದಲ್ಲಿ ಪಶ್ಚಾತ್ತಾಪಪಟ್ಟು ಆತನಿಗೆ ವಿಧೇಯರಾಗುವಲ್ಲಿ, ಅವರ ಸ್ಥಿತಿಯು ಸುಧಾರಿಸುವುದು. ಯೆಹೋವನು ಆ ಜನಾಂಗಕ್ಕೆ ಶಾರೀರಿಕವಾಗಿಯೂ ಆತ್ಮಿಕವಾಗಿಯೂ ‘ಕ್ಷೇಮವನ್ನು’ ಕೊಡುವನು. ಅವರ ಪಿತೃಗಳು ಐಗುಪ್ತವನ್ನು ಬಿಟ್ಟುಹೋಗುತ್ತಿದ್ದಾಗ ಆತನು ಅವರ ಮೇಲೆ ಹೇಗೆ ಕಾವಲಿಟ್ಟನೊ ಹಾಗೆಯೇ ಇವರನ್ನೂ ಕಾಯವನು. ಮತ್ತು ಅವರು ಸಹಾಯಕ್ಕಾಗಿ ಕರೆಯುವಾಗ ಆತನು ಒಡನೆ ಓಗೊಡುವನು.—ವಿಮೋಚನಕಾಂಡ 14:19, 20, 31.
13. ಯೆಹೋವನ ಸಲಹೆಗೆ ಕಿವಿಗೊಡುವಲ್ಲಿ ಯೆಹೂದ್ಯರಿಗೆ ಯಾವ ಆಶೀರ್ವಾದಗಳು ಕಾದಿರುವವು?
13 ಯೆಹೋವನು ಈಗ ಈ ಹಿಂದೆ ಕೊಟ್ಟಿದ್ದ ಬುದ್ಧಿವಾದಕ್ಕೆ ಕೂಡಿಸಿ ಹೀಗನ್ನುತ್ತಾನೆ: “ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನೂ ಬೆರಳಸನ್ನೆಯನ್ನೂ ಕೆಡುಕಿನ ನುಡಿಯನ್ನೂ ಹೋಗಲಾಡಿಸಿ ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವದು.” (ಯೆಶಾಯ 58:9ಬಿ, 10) ಸ್ವಾರ್ಥ ಮತ್ತು ಕಠೋರತೆಗಳು ತೊಂದರೆಗಳನ್ನು ಉಂಟುಮಾಡುವ ಗುಣಗಳಾಗಿದ್ದು, ಯೆಹೋವನ ಕೋಪವನ್ನು ಬರಮಾಡುತ್ತವೆ. ಆದರೆ ದಯೆ ಮತ್ತು ಉದಾರಭಾವವನ್ನು, ವಿಶೇಷವಾಗಿ ಹಸಿದಿರುವವರಿಗೂ ಸಂಕಟಪಡುತ್ತಿರುವವರಿಗೂ ತೋರಿಸುವಲ್ಲಿ, ದೇವರ ಹೇರಳವಾದ ಆಶೀರ್ವಾದವನ್ನು ಬರಮಾಡುತ್ತದೆ. ಆ ಯೆಹೂದ್ಯರು ಈ ಸತ್ಯಗಳನ್ನು ತಮ್ಮ ಮನಸ್ಸಿಗೆ ತೆಗೆದುಕೊಂಡರೆ ಎಷ್ಟು ಒಳ್ಳೇದಿತ್ತು! ಆಗ ಅವರ ಆತ್ಮಿಕ ಬೆಳಕೂ ಸಮೃದ್ಧಿಯೂ ಮಧ್ಯಾಹ್ನದ ಸೂರ್ಯನಂತೆ ಬೆಳಗಿ, ಎಲ್ಲ ಕತ್ತಲೆಯನ್ನು ತೊಲಗಿಸುವುದು. ಎಲ್ಲಕ್ಕಿಂತಲೂ ಮಿಗಿಲಾಗಿ, ತಮ್ಮ ವೈಭವ ಮತ್ತು ಆಶೀರ್ವಾದಗಳ ಮೂಲನಾದ ಯೆಹೋವನಿಗೆ ಅವರು ಗೌರವವನ್ನೂ ಸ್ತುತಿಯನ್ನೂ ತರುವರು.—1 ಅರಸುಗಳು 8:41-43.
ಪುನಸ್ಸ್ಥಾಪಿಸಲ್ಪಟ್ಟ ಜನಾಂಗ
14. (ಎ) ಯೆಶಾಯನ ಸಮಕಾಲೀನರು ಅವನ ಮಾತುಗಳಿಗೆ ಹೇಗೆ ಪ್ರತಿವರ್ತನೆ ತೋರಿಸುತ್ತಾರೆ? (ಬಿ) ಯೆಹೋವನು ಏನನ್ನು ಕೊಡುವುದನ್ನು ಮುಂದುವರಿಸುತ್ತಾನೆ?
14 ಆದರೆ ದುಃಖಕರವಾಗಿ, ಆ ಜನಾಂಗವು ಯೆಹೋವನ ವಿನಂತಿಯನ್ನು ಅಸಡ್ಡೆಮಾಡಿ ದುಷ್ಟತ್ವದಲ್ಲಿ ಇನ್ನೂ ಹೆಚ್ಚು ಆಳಕ್ಕೆ ಧುಮುಕುತ್ತದೆ. ಅಂತಿಮವಾಗಿ, ಯೆಹೋವನು ಮುಂಚೆಯೇ ಎಚ್ಚರಿಸಿದ್ದಂತೆ, ಅವರನ್ನು ದೇಶಭ್ರಷ್ಟರಾಗಿ ಕಳುಹಿಸುವಂತೆ ಆತನು ಒತ್ತಾಯಿಸಲ್ಪಡುತ್ತಾನೆ. (ಧರ್ಮೋಪದೇಶಕಾಂಡ 28:15, 36, 37, 64, 65) ಆದರೂ, ಯೆಶಾಯನ ಮೂಲಕ ತಿಳಿಸಲ್ಪಟ್ಟ ಯೆಹೋವನ ಮುಂದಿನ ಮಾತುಗಳು ಅವರಿಗೆ ನಿರೀಕ್ಷೆಯನ್ನು ಕೊಡುತ್ತ ಹೋಗುತ್ತವೆ. ದೇಶವು ಹಾಳುಬಿದ್ದಿರುವುದಾದರೂ, ಶಿಸ್ತಿಗೊಳಗಾದ, ಪಶ್ಚಾತ್ತಾಪಪಟ್ಟ ಜನಶೇಷವೊಂದು ಸಂತೋಷದಿಂದ ಯೆಹೂದ ದೇಶಕ್ಕೆ ಹಿಂದಿರುಗುವುದೆಂದು ದೇವರು ಮುಂತಿಳಿಸುತ್ತಾನೆ.
15. ಯೆಹೋವನು ಯಾವ ಹರ್ಷಕರವಾದ ಪುನಸ್ಸ್ಥಾಪನೆಯ ಕುರಿತು ಮುಂತಿಳಿಸುತ್ತಾನೆ?
15 ತನ್ನ ಜನರಿಗೆ ಸಾ.ಶ.ಪೂ. 537ರಲ್ಲಿ ಆಗಲಿರುವ ಪುನಸ್ಸ್ಥಾಪನೆಯನ್ನು ಸೂಚಿಸುತ್ತ ಯೆಹೋವನು ಯೆಶಾಯನ ಮೂಲಕ ಹೇಳುವುದು: “ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.” (ಯೆಶಾಯ 58:11) ಇಸ್ರಾಯೇಲ್ಯರ ಒಣಗಿಹೋಗಿದ್ದ ಸ್ವದೇಶವನ್ನು ಯೆಹೋವನು ಹೆಚ್ಚು ಫಲಭರಿತವಾದ ಭೂಮಿಯಾಗಿ ಮಾಡುವನು. ಹೆಚ್ಚು ಆಶ್ಚರ್ಯಕರವಾದ ವಿಷಯವೇನಂದರೆ, ಆತನು ತನ್ನ ಪಶ್ಚಾತ್ತಾಪಿ ಜನರ “ಎಲುಬುಗಳನ್ನು” ಆತ್ಮಿಕವಾಗಿ ನಿರ್ಜೀವವಾದ ಸ್ಥಿತಿಯಿಂದ ಪೂರ್ಣವಾಗಿ ಸಜೀವ ಸ್ಥಿತಿಗೆ ತಂದು ಚೇತನಗೊಳಿಸುವನು. (ಯೆಹೆಜ್ಕೇಲ 37:1-14) ಆ ಜನರು “ತಂಪಾದ ತೋಟ”ದಂತೆ ಆತ್ಮಿಕ ಫಲದಿಂದ ತುಂಬಿದವರಾಗಿರುವರು.
16. ದೇಶವು ಹೇಗೆ ಪುನಸ್ಸ್ಥಾಪಿಸಲ್ಪಡುವುದು?
16 ಈ ಪುನಸ್ಸ್ಥಾಪನೆಯಲ್ಲಿ, ಬಾಬೆಲಿನ ಆಕ್ರಮಣಕಾರರು ಸಾ.ಶ.ಪೂ. 607ರಲ್ಲಿ ನಾಶಗೊಳಿಸಿದ ಪಟ್ಟಣಗಳ ಪುನರ್ನಿರ್ಮಾಣವೂ ಸೇರಿರುವುದು. “ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು. ನೀವು ತಲತಲಾಂತರಗಳಿಂದ ಪಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; ಬಿದ್ದ ಗೋಡೆಯನ್ನು ಹಾಕುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ, ಎಂಬೀ ಬಿರುದುಗಳು ನಿಮಗುಂಟಾಗುವವು.” (ಯೆಶಾಯ 58:12) “ಪುರಾತನಕಾಲದಲ್ಲಿ ಹಾಳಾದ ನಿವೇಶನಗಳು” ಮತ್ತು “ತಲತಲಾಂತರಗಳಿಂದ ಪಾಳುಬಿದ್ದಿರುವ ಅಸ್ತಿವಾರ” ಎಂಬ ಸಮಾಂತರ ಪದಸಮೂಹಗಳು, ಹಿಂದಿರುಗಿ ಹೋಗುವ ಉಳಿಕೆಯವರು ಯೆಹೂದದ ಹಾಳಾಗಿದ್ದ ನಗರಗಳನ್ನು, ವಿಶೇಷವಾಗಿ ಯೆರೂಸಲೇಮನ್ನು ಪುನಃ ಕಟ್ಟುವರೆಂದು ತೋರಿಸುತ್ತವೆ. (ನೆಹೆಮೀಯ 2:5; 12:27; ಯೆಶಾಯ 44:28) ಅವರು “ಬಿದ್ದ ಗೋಡೆ”ಯನ್ನು ಸರಿಪಡಿಸುವರು; ಯೆರೂಸಲೇಮಿನ ಗೋಡೆಗಳಲ್ಲಿ ಹಾಗೂ ಇತರ ನಗರಗಳಲ್ಲಿ ಆಗಿರುವ ಒಡಕುಗಳನ್ನು “ಬಿದ್ದ ಗೋಡೆ” ಎಂಬ ಸಾಮುದಾಯಿಕ ಪದವು ಸೂಚಿಸುತ್ತದೆ.—ಯೆರೆಮೀಯ 31:38-40; ಆಮೋಸ 9:14.
ನಂಬಿಗಸ್ತಿಕೆಯಿಂದ ಸಬ್ಬತ್ತನ್ನು ಆಚರಿಸುವುದರಿಂದ ಬರುವ ಆಶೀರ್ವಾದಗಳು
17. ಸಬ್ಬತ್ ನಿಯಮಗಳನ್ನು ಪಾಲಿಸುವಂತೆ ಯೆಹೋವನು ತನ್ನ ಜನರನ್ನು ಹೇಗೆ ಕೇಳಿಕೊಳ್ಳುತ್ತಾನೆ?
17 ಸಬ್ಬತ್ತು, ತನ್ನ ಜನರ ಶಾರೀರಿಕ ಹಾಗೂ ಆತ್ಮಿಕ ಹಿತಕ್ಷೇಮದ ಕುರಿತು ದೇವರಿಗಿದ್ದ ಆಳವಾದ ಚಿಂತೆಯ ಅಭಿವ್ಯಕ್ತಿಯಾಗಿದೆ. ಯೇಸು ಹೇಳಿದ್ದು: “ಸಬ್ಬತ್ದಿನವು ಮನುಷ್ಯರಿಗೋಸ್ಕರ ಉಂಟಾಯಿತು.” (ಮಾರ್ಕ 2:27) ಯೆಹೋವನಿಂದ ಪವಿತ್ರೀಕರಿಸಲ್ಪಟ್ಟ ಈ ದಿನವು ಇಸ್ರಾಯೇಲ್ಯರಿಗೆ ದೇವರಿಗಾಗಿರುವ ತಮ್ಮ ಪ್ರೀತಿಯನ್ನು ತೋರಿಸುವ ವಿಶೇಷ ಸಂದರ್ಭವನ್ನು ಒದಗಿಸಿತು. ಆದರೆ ದುಃಖಕರವಾಗಿ, ಯೆಶಾಯನ ದಿನಗಳಷ್ಟಕ್ಕೆ ಇದು ವ್ಯರ್ಥ ಸಂಸ್ಕಾರಗಳನ್ನು ಆಚರಿಸಿ, ಸ್ವಾರ್ಥದಾಶೆಗಳಲ್ಲಿ ಲೋಲುಪರಾಗುವ ದಿನವಾಗಿ ಪರಿಣಮಿಸಿತ್ತು. ಆದಕಾರಣ, ಅವರ ಪಾಪಗಳನ್ನು ಇನ್ನೊಮ್ಮೆ ಖಂಡಿಸುವ ಸಂದರ್ಭ ಯೆಹೋವನಿಗೆ ಬಂದೊದಗುತ್ತದೆ. ಆತನು ಪುನಃ ಅವರ ಹೃದಯಗಳನ್ನು ತಲಪಲು ಪ್ರಯತ್ನಿಸುತ್ತಾನೆ. ಆತನು ಹೇಳುವುದು: “ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು ಆ ನನ್ನ ಪರಿಶುದ್ಧದಿವಸದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ ಸ್ವೇಚ್ಛೆಯಾಗಿ ನಡೆಯದೆ ಸ್ವಕಾರ್ಯದಲ್ಲಿ ನಿರತರಾಗದೆ ಹರಟೆಹರಟದೆ ಯೆಹೋವನ ಸಬ್ಬತ್ತೆಂಬ ಪರಿಶುದ್ಧದಿನವು ಉಲ್ಲಾಸಕರವೂ ಮಾನ್ಯವೂ ಆದದ್ದೆಂದು ಘನಪಡಿಸಿದರೆ ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ, ಮತ್ತು ನಾನು ನಿಮ್ಮನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ನಿಮ್ಮ ಪಿತೃವಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಮಾಡುವೆನು. ಯೆಹೋವನೇ ಇದನ್ನು ನುಡಿದಿದ್ದಾನೆ.”—ಯೆಶಾಯ 58:13, 14.
18. ಯೆಹೂದವು ಸಬ್ಬತ್ತನ್ನು ಗೌರವಿಸಲು ತಪ್ಪುವುದರಿಂದ ಆಗುವ ಪರಿಣಾಮವೇನು?
18 ಸಬ್ಬತ್ ದಿನವು ಆತ್ಮಿಕ ಚಿಂತನೆ, ಪ್ರಾರ್ಥನೆ ಮತ್ತು ಕುಟುಂಬದೋಪಾದಿ ಆರಾಧಿಸುವ ದಿನವಾಗಿದೆ. ತಮ್ಮ ಪರವಾಗಿ ಯೆಹೋವನು ಮಾಡಿರುವ ಅದ್ಭುತಕರವಾದ ಕಾರ್ಯಗಳ ಕುರಿತು ಮತ್ತು ಆತನ ನಿಯಮಗಳಲ್ಲಿ ಕಂಡುಬರುವ ನ್ಯಾಯ ಮತ್ತು ಪ್ರೀತಿಯ ಕುರಿತು ಚಿಂತಿಸಲು ಅದು ಯೆಹೂದ್ಯರಿಗೆ ಸಹಾಯಮಾಡಬೇಕಾಗಿತ್ತು. ಹೀಗೆ, ಈ ಪವಿತ್ರ ದಿನವನ್ನು ನಂಬಿಗಸ್ತಿಕೆಯಿಂದ ಪಾಲಿಸುವುದು, ಜನರು ದೇವರಿಗೆ ಹೆಚ್ಚು ನಿಕಟವಾಗುವಂತೆ ಸಹಾಯಮಾಡಬೇಕು. ಆದರೆ ಇದಕ್ಕೆ ಬದಲಾಗಿ ಅವರು ಸಬ್ಬತ್ತನ್ನು ತಪ್ಪಾಗಿ ಬಳಸುತ್ತಿದ್ದು, ಯೆಹೋವನ ಆಶೀರ್ವಾದವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ.—ಯಾಜಕಕಾಂಡ 26:34; 2 ಪೂರ್ವಕಾಲವೃತ್ತಾಂತ 36:21.
19. ಸಬ್ಬತ್ತನ್ನು ಪುನಃ ಒಮ್ಮೆ ಪಾಲಿಸಲು ಆರಂಭಿಸುವಲ್ಲಿ ಯಾವ ಹೇರಳ ಆಶೀರ್ವಾದಗಳು ದೇವಜನರಿಗಾಗಿ ಕಾದಿವೆ?
19 ಆದರೂ, ಯೆಹೂದ್ಯರು ಈ ಶಿಸ್ತಿನ ಕ್ರಮದಿಂದ ಪಾಠವನ್ನು ಕಲಿತುಕೊಳ್ಳುವುದಾದರೆ ಮತ್ತು ಪುನಃ ಸಬ್ಬತ್ತನ್ನು ಗೌರವಿಸುವುದಾದರೆ, ಅವರಿಗೆ ಹೇರಳ ಆಶೀರ್ವಾದಗಳು ಕಾದಿರುತ್ತವೆ. ಸತ್ಯಾರಾಧನೆಯ ಒಳ್ಳೆಯ ಪರಿಣಾಮಗಳು ಮತ್ತು ಸಬ್ಬತ್ತಿಗೆ ಕೊಡುವ ಗೌರವವು ತುಂಬಿತುಳುಕಿ ಅವರ ಜೀವನದ ಎಲ್ಲ ಅಂಶಗಳಿಗೆ ಹರಡುವುದು. (ಧರ್ಮೋಪದೇಶಕಾಂಡ 28:1-13; ಕೀರ್ತನೆ 19:7-11) ಉದಾಹರಣೆಗೆ, ಯೆಹೋವನು ತನ್ನ ಜನರನ್ನು “ಎತ್ತರವಾದ ಪ್ರದೇಶಗಳ ಮೇಲೆ” ಹತ್ತಿಸುವನು. ಈ ಪದಗಳು ಭದ್ರತೆಯನ್ನೂ ಒಬ್ಬನ ಶತ್ರುಗಳ ಮೇಲೆ ವಿಜಯವನ್ನೂ ಸೂಚಿಸುತ್ತವೆ. ಎತ್ತರ ಪ್ರದೇಶಗಳನ್ನು ಅಂದರೆ ಬೆಟ್ಟಗುಡ್ಡಗಳನ್ನು ವಶಪಡಿಸಿಕೊಳ್ಳುವವರೇ, ದೇಶವನ್ನು ವಶಪಡಿಸಿಕೊಳ್ಳುವವರಾಗಿದ್ದಾರೆ. (ಧರ್ಮೋಪದೇಶಕಾಂಡ 32:13; 33:29) ಒಂದು ಸಮಯದಲ್ಲಿ ಇಸ್ರಾಯೇಲ್ಯರು ಯೆಹೋವನಿಗೆ ವಿಧೇಯರಾಗಿದ್ದಾಗ ಆ ಜನಾಂಗವು ಆತನಿಂದ ಸಂರಕ್ಷಣೆಯನ್ನು ಪಡೆಯಿತು. ಆಗ ಇತರ ಜನಾಂಗಗಳು ಅವರನ್ನು ಗೌರವಿಸಿದರು, ಹೌದು, ಅವರಿಗೆ ಭಯಪಟ್ಟರು ಕೂಡ. (ಯೆಹೋಶುವ 2:9-11; 1 ಅರಸುಗಳು 4:20, 21) ಈಗ ಅವರು ಪುನಃ ವಿಧೇಯತೆ ತೋರಿಸುತ್ತ ಯೆಹೋವನ ಕಡೆಗೆ ತಿರುಗುವುದಾದರೆ, ಅವರ ಹಿಂದಿನ ಮಹಿಮೆಯಲ್ಲಿ ಸ್ವಲ್ಪಾಂಶವು ಪುನಸ್ಸ್ಥಾಪಿಸಲ್ಪಡುವುದು. ಆಗ ಯೆಹೋವನು ತನ್ನ ಜನರಿಗೆ “ಯಾಕೋಬನ ಸ್ವಾಸ್ತ್ಯ”ದಲ್ಲಿ ಸಂಪೂರ್ಣ ಭಾಗವನ್ನು, ಅಂದರೆ ಅವರ ಪಿತೃಗಳೊಂದಿಗೆ ಆತನು ಮಾಡಿದ ಒಡಂಬಡಿಕೆಯ ಮೂಲಕ ವಾಗ್ದಾನಿಸಿರುವ ಆಶೀರ್ವಾದಗಳನ್ನು, ವಿಶೇಷವಾಗಿ ವಾಗ್ದಾನ ದೇಶವನ್ನು ಕೈವಶಮಾಡಿಕೊಳ್ಳುವ ಆಶೀರ್ವಾದವನ್ನು ಕೊಡುವನು.—ಕೀರ್ತನೆ 105:8-11.
20. ಕ್ರೆಸ್ತರಿಗೆ ಯಾವ ‘ಸಬ್ಬತ್ ವಿಶ್ರಾಂತಿ’ ಇದೆ?
20 ಇದರಲ್ಲಿ ಕ್ರೈಸ್ತರಿಗೆ ಯಾವ ಪಾಠವಾದರೂ ಇದೆಯೆ? ಯೇಸು ಕ್ರಿಸ್ತನ ಮರಣಾನಂತರ ಮೋಶೆಯ ಧರ್ಮಶಾಸ್ತ್ರವು ಅದರ ಸಬ್ಬತ್ ನಿಯಮಗಳ ಸಮೇತ ರದ್ದಾಯಿತು. (ಕೊಲೊಸ್ಸೆ 2:16, 17) ಆದರೂ, ಸಬ್ಬತ್ ಆಚರಣೆಯು ಯೆಹೂದದಲ್ಲಿ ಪ್ರೋತ್ಸಾಹಿಸಬೇಕಾಗಿದ್ದ ಮನೋಭಾವವು, ಅಂದರೆ ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡುವ ಮತ್ತು ಯೆಹೋವನ ಸಮೀಪಕ್ಕೆ ಬರುವ ಆ ಮನೋಭಾವವು ಈಗಲೂ ಯೆಹೋವನ ಆರಾಧಕರಿಗೆ ಮಹತ್ವಪೂರ್ಣವಾಗಿದೆ. (ಮತ್ತಾಯ 6:33; ಯಾಕೋಬ 4:8) ಇದಲ್ಲದೆ, “ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿಯು ಇನ್ನೂ ಉಂಟು” ಎಂದು ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ ಹೇಳುತ್ತಾನೆ. ಯೆಹೋವನಿಗೆ ವಿಧೇಯರಾಗಿ, ಯೇಸು ಕ್ರಿಸ್ತನು ಸುರಿಸಿದ ರಕ್ತದಲ್ಲಿ ನಂಬಿಕೆಯ ಆಧಾರದ ಮೇರೆಗೆ ನೀತಿಯನ್ನು ಬೆನ್ನಟ್ಟುವ ಮೂಲಕ ಕ್ರೈಸ್ತರು ಆ ‘ಸಬ್ಬತ್ ವಿಶ್ರಾಂತಿಯನ್ನು’ ಪ್ರವೇಶಿಸುತ್ತಾರೆ. (ಇಬ್ರಿಯ 3:12, 18, 19; 4:6, 9-11, 14-16) ಈ ರೀತಿಯ ಸಬ್ಬತ್ ಆಚರಣೆಯನ್ನು ಕ್ರೈಸ್ತರು ವಾರಕ್ಕೊಂದಾವರ್ತಿ ಮಾಡದೆ ಪ್ರತಿ ದಿನವೂ ಮಾಡುತ್ತಾರೆ.—ಕೊಲೊಸ್ಸೆ 3:23, 24.
ಆತ್ಮಿಕ ಇಸ್ರಾಯೇಲ್ ‘ಭೂಮಿಯ ಎತ್ತರವಾದ ಪ್ರದೇಶವನ್ನು ಹತ್ತುತ್ತದೆ’
21, 22. ಯೆಹೋವನು ದೇವರ ಇಸ್ರಾಯೇಲನ್ನು ‘ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿರುವುದು’ ಹೇಗೆ?
21 ಬಾಬೆಲಿನ ಬಂಧನದೊಳಗಿಂದ 1919ರಲ್ಲಿ ಬಿಡುಗಡೆಯಾದಂದಿನಿಂದ ಅಭಿಷಿಕ್ತ ಕ್ರೈಸ್ತರು, ಸಬ್ಬತ್ತು ಏನನ್ನು ಮುನ್ಸೂಚಿಸಿತೊ ಅದನ್ನು ನಂಬಿಗಸ್ತಿಕೆಯಿಂದ ಆಚರಿಸಿರುತ್ತಾರೆ. ಇದರ ಫಲವಾಗಿ ಯೆಹೋವನು ಅವರನ್ನು ‘ಭೂಮಿಯ ಎತ್ತರವಾದ ಪ್ರದೇಶದ ಮೇಲೆ ಹತ್ತಿಸಿದ್ದಾನೆ.’ ಇದು ಯಾವ ಅರ್ಥದಲ್ಲಿ? ಸಾ.ಶ.ಪೂ. 1513ರಷ್ಟು ಹಿಂದೆ ಯೆಹೋವನು ಅಬ್ರಹಾಮನ ವಂಶಸ್ಥರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು; ಅವರು ವಿಧೇಯರಾದರೆ ಯಾಜಕರ ಒಂದು ರಾಜ್ಯ ಮತ್ತು ಒಂದು ಪವಿತ್ರ ಜನಾಂಗವಾಗಿ ಮಾಡಲ್ಪಡಲಿಕ್ಕಿದ್ದರು. (ವಿಮೋಚನಕಾಂಡ 19:5, 6) ಅವರು 40 ವರುಷಕಾಲ ಅರಣ್ಯದಲ್ಲಿ ಅಲೆದಾಡುತ್ತಿದ್ದಾಗ, ಒಂದು ಗಿಡುಗವು ತನ್ನ ಮರಿಗಳನ್ನು ಹೊತ್ತುಕೊಳ್ಳುವಂತೆ ಯೆಹೋವನು ಅವರನ್ನು ಸುರಕ್ಷಿತವಾಗಿ ಹೊತ್ತುಕೊಂಡು ಅವರಿಗೆ ಹೇರಳವಾದ ಒದಗಿಸುವಿಕೆಯನ್ನು ಮಾಡುವ ಮೂಲಕ ಅವರನ್ನು ಆಶೀರ್ವದಿಸಿದನು. (ಧರ್ಮೋಪದೇಶಕಾಂಡ 32:10-12) ಆದರೆ ನಂಬಿಕೆಯ ಕೊರತೆಯ ಕಾರಣದಿಂದ ಆ ಜನಾಂಗವು ತಮಗೆ ಸಿಗಬಹುದಾಗಿದ್ದ ಎಲ್ಲ ಸುಯೋಗಗಳನ್ನು ಕಳೆದುಕೊಂಡಿತು. ಹಾಗಾದರೂ, ಯೆಹೋವನಿಗೆ ಇಂದು ಯಾಜಕರ ರಾಜ್ಯವೊಂದಿದೆ. ಅದು ದೇವರ ಆತ್ಮಿಕ ಇಸ್ರಾಯೇಲೇ.—ಗಲಾತ್ಯ 6:16; 1 ಪೇತ್ರ 2:9.
22 ಈ “ಅಂತ್ಯಕಾಲ”ದಲ್ಲಿ, ಈ ಆತ್ಮಿಕ ಜನಾಂಗವು ಪುರಾತನ ಇಸ್ರಾಯೇಲು ಏನನ್ನು ಮಾಡುವುದರಲ್ಲಿ ವಿಫಲಗೊಂಡಿತೊ ಅದನ್ನು ಮಾಡಿದೆ. ಅವರು ಯೆಹೋವನಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. (ದಾನಿಯೇಲ 8:17) ಅದರ ಸದಸ್ಯರು ಯೆಹೋವನ ಉನ್ನತ ಮಟ್ಟಗಳನ್ನೂ ಶ್ರೇಷ್ಠಮಾರ್ಗಗಳನ್ನೂ ಕಟ್ಟುನಿಟ್ಟಾಗಿ ಅನುಸರಿಸುವಾಗ, ಯೆಹೋವನು ಅವರನ್ನು ಆತ್ಮಿಕ ಅರ್ಥದಲ್ಲಿ ಮೇಲಕ್ಕೆತ್ತುತ್ತಾನೆ. (ಜ್ಞಾನೋಕ್ತಿ 4:4, 5, 8; ಪ್ರಕಟನೆ 11:12) ತಮ್ಮ ಸುತ್ತಲೂ ಇರುವ ಅಶುದ್ಧತೆಯಿಂದ ಸಂರಕ್ಷಿಸಲ್ಪಟ್ಟಿರುವ ಅವರು ಉನ್ನತವಾದ ಜೀವನಶೈಲಿಯಲ್ಲಿ ಆನಂದಿಸುತ್ತಾರೆ. ಮತ್ತು ತಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲು ಪಟ್ಟುಹಿಡಿಯುವ ಬದಲು ಅವರು “ಯೆಹೋವನಲ್ಲಿ ಸಂತೋಷಿಸು”ತ್ತಾರೆ ಮತ್ತು ಆತನ ವಾಕ್ಯದಲ್ಲಿ ಸಂತೋಷಿಸುತ್ತಾರೆ. (ಕೀರ್ತನೆ 37:4) ಲೋಕವ್ಯಾಪಕವಾಗಿ ಅವರ ಮೇಲೆ ಬಂದಿರುವ ಸತತ ವಿರೋಧದ ಎದುರಿನಲ್ಲಿಯೂ ಯೆಹೋವನು ಅವರನ್ನು ಆತ್ಮಿಕವಾಗಿ ಭದ್ರವಾಗಿರಿಸಿದ್ದಾನೆ. ಅವರ ಆತ್ಮಿಕ “ದೇಶವು” 1919ರಿಂದ ಭೇದಿಸಲ್ಪಟ್ಟಿರುವುದಿಲ್ಲ. (ಯೆಶಾಯ 66:8, NW) ಅವರು ಹರ್ಷದಿಂದ ಲೋಕವ್ಯಾಪಕವಾಗಿ ಪ್ರಕಟಪಡಿಸುವ ಆತನ ಮಹೋನ್ನತ ಹೆಸರಿನ ಜನರಾಗಿ ಮುಂದುವರಿಯುತ್ತಾರೆ. (ಧರ್ಮೋಪದೇಶಕಾಂಡ 32:3; ಅ. ಕೃತ್ಯಗಳು 15:14) ಇದಲ್ಲದೆ, ಈಗ ಎಲ್ಲ ಜನಾಂಗಗಳ ದೀನರು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಯೆಹೋವನ ಮಾರ್ಗಗಳ ಕುರಿತು ಕಲಿಸಲ್ಪಟ್ಟು, ಆತನ ಪಥಗಳಲ್ಲಿ ನಡೆಯುವಂತೆ ಸಹಾಯಮಾಡಲ್ಪಡುವ ಮಹಾ ಸುಯೋಗದಲ್ಲಿ ಅವರೊಂದಿಗೆ ಭಾಗಿಗಳಾಗುತ್ತಾರೆ.
23. ತನ್ನ ಅಭಿಷಿಕ್ತ ಸೇವಕರು ‘ಯಾಕೋಬನ ಸ್ವಾಸ್ತ್ಯವನ್ನು ಅನುಭವಿಸುವಂತೆ’ ಯೆಹೋವನು ಮಾಡಿರುವುದು ಹೇಗೆ?
23 ತನ್ನ ಅಭಿಷಿಕ್ತ ಸೇವಕರು “ಯಾಕೋಬನ ಸ್ವಾಸ್ತ್ಯವನ್ನು . . . ಅನುಭವಿಸುವಂತೆ” ಯೆಹೋವನು ಮಾಡಿದ್ದಾನೆ. ಇಸಾಕನು ಏಸಾವನ ಬದಲಾಗಿ ಯಾಕೋಬನನ್ನು ಆಶೀರ್ವದಿಸಿದಾಗ, ಆ ಮೂಲಪಿತನ ಮಾತುಗಳಲ್ಲಿ ಅಬ್ರಹಾಮನ ವಾಗ್ದತ್ತ ಸಂತಾನದಲ್ಲಿ ನಂಬಿಕೆಯನ್ನಿಡುವ ಸಕಲರಿಗಾಗಿ ಆಶೀರ್ವಾದಗಳು ಮುಂತಿಳಿಸಲ್ಪಟ್ಟಿದ್ದವು. (ಆದಿಕಾಂಡ 27:27-29; ಗಲಾತ್ಯ 3:16, 17) ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಾತಿಗಳು ಯಾಕೋಬನಂತೆ—ಏಸಾವನಂತೆ ಅಲ್ಲ—‘ಪವಿತ್ರ ವಿಷಯಗಳನ್ನು,’ ವಿಶೇಷವಾಗಿ ದೇವರು ಸಮೃದ್ಧವಾಗಿ ನೀಡುವ ಆತ್ಮಿಕ ಆಹಾರವನ್ನು ‘ಮಾನ್ಯಮಾಡುತ್ತಾರೆ.’ (ಇಬ್ರಿಯ 12:16, 17, NW; ಮತ್ತಾಯ 4:4) ಯೆಹೋವನು ಈ ವಾಗ್ದತ್ತ ಸಂತಾನ ಮತ್ತು ಆ ಸಂತಾನದ ಜೊತೆಗಾರರ ಮೂಲಕ ಏನನ್ನು ಪೂರೈಸುತ್ತಿದ್ದಾನೊ ಅದರ ಕುರಿತಾದ ಜ್ಞಾನವೂ ಸೇರಿರುವ ಈ ಆತ್ಮಿಕ ಆಹಾರವು, ಬಲದಾಯಕವೂ ಚೈತನ್ಯದಾಯಕವೂ ಆಗಿದೆ ಮತ್ತು ಅವರ ಆತ್ಮಿಕ ಜೀವನಕ್ಕೆ ಮಹತ್ವವುಳ್ಳದ್ದಾಗಿದೆ. ಆದಕಾರಣ, ದೇವರ ವಾಕ್ಯವನ್ನು ಅವರು ಓದಿ ಮನನಮಾಡುವ ಮೂಲಕ ಸತತ ಆತ್ಮಿಕ ಪೋಷಣೆಯನ್ನು ಪಡೆದುಕೊಳ್ಳುವುದು ಅತ್ಯಾವಶ್ಯಕ. (ಕೀರ್ತನೆ 1:1-3) ಅವರು ಜೊತೆವಿಶ್ವಾಸಿಗಳೊಂದಿಗೆ ಕ್ರೈಸ್ತ ಕೂಟಗಳಲ್ಲಿ ಸಹವಾಸಿಸುವುದು ಆವಶ್ಯಕ. ಮತ್ತು ಆ ಪೋಷಣೆಯನ್ನು ಇತರರಿಗೆ ಸಂತೋಷದಿಂದ ಹಂಚುತ್ತಿರುವಾಗ, ಅವರು ಸ್ವತಃ ಸತ್ಯಾರಾಧನೆಯ ಉನ್ನತ ಮಟ್ಟಗಳನ್ನು ಎತ್ತಿಹಿಡಿಯುವುದೂ ಪ್ರಾಮುಖ್ಯವಾಗಿದೆ.
24. ಇಂದು ಸತ್ಯ ಕ್ರೈಸ್ತರು ಹೇಗೆ ನಡೆದುಕೊಳ್ಳುತ್ತಾರೆ?
24 ಯೆಹೋವನ ವಾಗ್ದಾನಗಳ ನೆರವೇರಿಕೆಗಾಗಿ ಅತ್ಯಾಸಕ್ತಿಯಿಂದ ಕಾಯುತ್ತಿರುವಾಗ, ಸತ್ಯ ಕ್ರೈಸ್ತರು ಎಲ್ಲ ರೀತಿಯ ಕಪಟಾಚರಣೆಯನ್ನು ತೊರೆಯುತ್ತಾ ಇರುವಂತಾಗಲಿ. “ಯಾಕೋಬನ ಸ್ವಾಸ್ತ್ಯವನ್ನು” ಅನುಭವಿಸಿ ಪೋಷಿಸಲ್ಪಟ್ಟಿರುವ ಅವರು, “ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ” ಆತ್ಮಿಕ ಭದ್ರತೆಯನ್ನು ಅನುಭವಿಸುತ್ತಾ ಇರಲಿ.
[ಪಾದಟಿಪ್ಪಣಿ]
a ತನ್ನ ಜನರ ನಡುವೆ ಯಾರಾದರೂ ಸಾಲದಲ್ಲಿ ಬೀಳುವಲ್ಲಿ, ಅವರು ದಾಸರಾಗಿ, ಮೂಲತಃ ಕೂಲಿ ಕೆಲಸಗಾರರಾಗಿ ತಮ್ಮನ್ನು ಮಾರಿಕೊಂಡು, ಸಾಲವನ್ನು ತೀರಿಸುವಂಥ ಏರ್ಪಾಡನ್ನು ಯೆಹೋವನು ಮಾಡಿದ್ದನು. (ಯಾಜಕಕಾಂಡ 25:39-43) ಆದರೂ, ದಾಸರನ್ನು ದಯೆಯಿಂದ ಉಪಚರಿಸುವುದನ್ನು ಧರ್ಮಶಾಸ್ತ್ರವು ಅವಶ್ಯಪಡಿಸಿತು. ಯಾರೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತಿತ್ತೊ ಅವರನ್ನು ಬಿಡುಗಡೆಮಾಡಬೇಕಾಗಿತ್ತು.—ವಿಮೋಚನಕಾಂಡ 21:2, 3, 26, 27; ಧರ್ಮೋಪದೇಶಕಾಂಡ 15:12-15.
[ಪುಟ 278ರಲ್ಲಿರುವ ಚಿತ್ರ]
ಯೆಹೂದ್ಯರು ಉಪವಾಸಮಾಡುತ್ತ ಪಶ್ಚಾತ್ತಾಪದ ನಾಟಕವಾಡುತ್ತಾ ತಮ್ಮ ತಲೆಗಳನ್ನು ಬೊಗ್ಗಿಸಿಕೊಂಡರು—ಆದರೆ ಅವರು ತಮ್ಮ ಮಾರ್ಗಗಳನ್ನು ಬದಲಾಯಿಸಲಿಲ್ಲ
[ಪುಟ 283ರಲ್ಲಿರುವ ಚಿತ್ರ]
ಸೌಕರ್ಯವುಳ್ಳವರು ಕೊರತೆಯಲ್ಲಿರುವವರಿಗೆ ವಸತಿ, ಬಟ್ಟೆ ಅಥವಾ ಆಹಾರ ವಸ್ತುಗಳನ್ನು ಕೊಡುತ್ತಾರೆ
[ಪುಟ 286ರಲ್ಲಿರುವ ಚಿತ್ರ]
ಯೆಹೂದವು ಪಶ್ಚಾತ್ತಾಪಪಡುವಲ್ಲಿ, ಹಾಳಾಗಿರುವ ತನ್ನ ನಗರಗಳನ್ನು ಪುನಃ ಕಟ್ಟುವಳು