ಉಪವಾಸ ಮಾಡುವಿಕೆಯನ್ನು ದೇವರು ಅವಶ್ಯಪಡುತ್ತಾನೊ?
ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮಶಾಸ್ತ್ರವು, ಒಂದೇ ಒಂದು ಸಂದರ್ಭದಲ್ಲಿ—ದೋಷಪರಿಹಾರಕ ವಾರ್ಷಿಕ ದಿನದಂದು—ಮಾತ್ರ ಉಪವಾಸ ಮಾಡುವುದನ್ನು ಅವಶ್ಯಪಡಿಸಿತು. ಆ ದಿನದಂದು ಇಸ್ರಾಯೇಲ್ಯರು ‘ತಮ್ಮ ಪ್ರಾಣಗಳನ್ನು ಬಾಧಿಸಿ’ಕೊಳ್ಳಬೇಕೆಂದು ಧರ್ಮಶಾಸ್ತ್ರವು ಆಜ್ಞಾಪಿಸಿತು; ಅಂದರೆ, ಅವರು ಉಪವಾಸ ಮಾಡಿದರೆಂದು ತಿಳಿದುಬರುತ್ತದೆ. (ಯಾಜಕಕಾಂಡ 16:29-31, NW; 23:27; ಕೀರ್ತನೆ 35:13) ಹಾಗಿದ್ದರೂ, ಈ ಉಪವಾಸವು ಬರಿಯ ಬಾಹ್ಯ ನಿಷ್ಠೆಯಾಗಿರಲಿಲ್ಲ. ದೋಷಪರಿಹಾರಕ ದಿನದ ಆಚರಣೆಯು, ತಮ್ಮ ಪಾಪಪೂರ್ಣತೆ ಹಾಗೂ ವಿಮೋಚನೆಗಾಗಿರುವ ಅಗತ್ಯದ ಹೆಚ್ಚಿನ ಅರಿವಿಗೆ ಇಸ್ರಾಯೇಲಿನ ಜನರನ್ನು ಪ್ರೇರಿಸಿತು. ಅವರು ತಮ್ಮ ಪಾಪಗಳಿಗಾಗಿ ದುಃಖವನ್ನು ಮತ್ತು ದೇವರ ಎದುರಿನಲ್ಲಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲು ಸಹ ಆ ದಿನ ಉಪವಾಸ ಮಾಡಿದರು.
ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇದು ಏಕೈಕ ಬಂಧಕ ಉಪವಾಸವಾಗಿದ್ದರೂ, ಇಸ್ರಾಯೇಲ್ಯರು ಇತರ ಸಂದರ್ಭಗಳಲ್ಲಿಯೂ ಉಪವಾಸಗಳನ್ನು ಆಚರಿಸಿದರು. (ವಿಮೋಚನಕಾಂಡ 34:28; 1 ಸಮುವೇಲ 7:6; 2 ಪೂರ್ವಕಾಲವೃತ್ತಾಂತ 20:3; ಎಜ್ರ 8:21; ಎಸ್ತೇರಳು 4:3, 16) ಇವುಗಳಲ್ಲಿ, ಪಶ್ಚಾತ್ತಾಪವನ್ನು ಪ್ರದರ್ಶಿಸುವ ಒಂದು ವಿಧವು ಇಚ್ಛಾಪೂರ್ವಕವಾದ ಉಪವಾಸಗಳಾಗಿದ್ದವು. ತಪ್ಪುಗೈಯುತ್ತಿರುವ ಯೆಹೂದದ ಜನರನ್ನು ಯೆಹೋವನು ಪ್ರೇರಿಸಿದ್ದು: “ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.” ಇದು ಒಂದು ಬಾಹ್ಯ ತೋರಿಕೆಯಾಗಿರಬಾರದಿತ್ತು, ಏಕೆಂದರೆ, “ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದು”ಕೊಳ್ಳಿರೆಂದು ದೇವರು ಮುಂದುವರಿದು ಹೇಳುತ್ತಾನೆ.—ಯೋವೇಲ 2:12-15.
ಸಕಾಲದಲ್ಲಿ, ಅನೇಕರು ಒಂದು ಬಾಹ್ಯ ನಿಷ್ಠೆಯಾಗಿ ಉಪವಾಸ ಮಾಡಿದರು. ಯೆಹೋವನು ಇಂತಹ ಅಪ್ರಾಮಾಣಿಕ ಉಪವಾಸ ಮಾಡುವಿಕೆಯನ್ನು ಹೇಸಿದನಾದುದರಿಂದ, ಕಪಟಿ ಇಸ್ರಾಯೇಲ್ಯರಿಗೆ ಹೀಗೆ ಕೇಳಿದನು: “ಮನುಷ್ಯನು ತನ್ನ ಆತ್ಮ [“ಪ್ರಾಣ,” NW]ವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀತಟ್ಟನ್ನೂ ಬೂದಿಯನ್ನೂ ಆಸನಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?” (ಯೆಶಾಯ 58:5) ತಮ್ಮ ಉಪವಾಸವನ್ನು ಒಂದು ಆಡಂಬರದ ಪ್ರದರ್ಶನವನ್ನಾಗಿ ಮಾಡುವ ಬದಲಿಗೆ, ಈ ಮೊಂಡು ಜನರು ಪಶ್ಚಾತ್ತಾಪಕ್ಕೆ ಯೋಗ್ಯವಾದ ಕೆಲಸಗಳನ್ನು ಉತ್ಪಾದಿಸುವಂತೆ ಕೇಳಿಕೊಳ್ಳಲ್ಪಟ್ಟರು.
ಯೆಹೂದ್ಯರಿಂದ ಸ್ಥಾಪಿಸಲ್ಪಟ್ಟ ಕೆಲವು ಉಪವಾಸಗಳು, ಆರಂಭದಿಂದಲೇ ದೇವರ ಅಸಮ್ಮತಿಯನ್ನು ಪಡೆದವು. ಉದಾಹರಣೆಗೆ, ಒಂದು ಸಮಯದಲ್ಲಿ ಯೆಹೂದದ ಜನರಿಗೆ, ಯೆರೂಸಲೇಮಿನ ಆಕ್ರಮಣ ಮತ್ತು ಸಾ.ಶ.ಪೂ. ಏಳನೆಯ ಶತಮಾನದಲ್ಲಿನ ಧ್ವಂಸದೊಂದಿಗೆ ಸಂಬಂಧಿಸಿದ ವಿಪತ್ಕಾರಕ ಘಟನೆಗಳನ್ನು ಸ್ಮರಿಸಲು, ನಾಲ್ಕು ವಾರ್ಷಿಕ ಉಪವಾಸಗಳಿದ್ದವು. (2 ಅರಸುಗಳು 25:1-4, 8, 9, 22-26; ಜೆಕರ್ಯ 8:19) ಬಾಬೆಲಿನ ಬಂಧನದಿಂದ ಯೆಹೂದ್ಯರು ಬಿಡಿಸಲ್ಪಟ್ಟ ತರುವಾಯ, ಪ್ರವಾದಿಯಾದ ಜೆಕರ್ಯನ ಮುಖಾಂತರ ಯೆಹೋವನು ಹೇಳಿದ್ದು: “ನೀವು ಈ ಎಪ್ಪತ್ತು ವರುಷಗಳಿಂದಲೂ . . . ಉಪವಾಸಮಾಡಿ ಗೋಳಾಡುತ್ತಿದ್ದಾಗ ಆ ನಿಮ್ಮ ಉಪವಾಸವು ನನಗಾಗಿಯೇ ಮಾಡಿದ್ದೋ?” ಈ ಉಪವಾಸಗಳನ್ನು ದೇವರು ಸಮ್ಮತಿಸಲಿಲ್ಲ, ಏಕೆಂದರೆ ಯೆಹೂದ್ಯರು ಸ್ವತಃ ಯೆಹೋವನಿಂದಲೇ ಬಂದಿದ್ದ ನ್ಯಾಯತೀರ್ಪುಗಳಿಗಾಗಿ ಉಪವಾಸ ಮಾಡಿ, ಗೋಳಾಡುತ್ತಿದ್ದರು. ವಿಪತ್ತಿಗೆ ನಡೆಸಿದ ತಮ್ಮ ಸ್ವಂತ ತಪ್ಪಿನ ಕಾರಣಕ್ಕಾಗಿ ಅಲ್ಲ, ಬದಲಿಗೆ ತಮ್ಮ ಮೇಲೆ ಎರಗಿದ ವಿಪತ್ತಿನ ಕಾರಣ ಅವರು ಉಪವಾಸ ಮಾಡುತ್ತಿದ್ದರು. ಅವರು ತಮ್ಮ ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಟ್ಟ ತರುವಾಯ, ಗತಕಾಲಕ್ಕಾಗಿ ದುಃಖಿಸುವ ಬದಲು ಅವರು ಹರ್ಷಿಸುವಂತಹ ಸಮಯವು ಅದಾಗಿತ್ತು.—ಜೆಕರ್ಯ 7:5.
ಉಪವಾಸ ಮಾಡುವಿಕೆಯು ಕ್ರೈಸ್ತರಿಗಾಗಿದೆಯೊ?
ತನ್ನ ಶಿಷ್ಯರು ಉಪವಾಸ ಮಾಡಬೇಕೆಂದು ಯೇಸು ಕ್ರಿಸ್ತನು ಎಂದಿಗೂ ಆಜ್ಞಾಪಿಸದಿದ್ದರೂ, ಅವನು ಮತ್ತು ಅವನ ಶಿಷ್ಯರು ದೋಷಪರಿಹಾರಕ ದಿನದಂದು ಉಪವಾಸ ಮಾಡಿದರು, ಏಕೆಂದರೆ ಅವರು ಮೋಶೆಯ ಧರ್ಮಶಾಸ್ತ್ರದ ಅಧೀನದಲ್ಲಿದ್ದರು. ಹೆಚ್ಚಿನದ್ದಾಗಿ, ಅವನ ಶಿಷ್ಯರಲ್ಲಿ ಕೆಲವರು ಇತರ ಸಂದರ್ಭಗಳಲ್ಲಿ ಇಚ್ಛಾಪೂರ್ವಕವಾಗಿ ಉಪವಾಸ ಮಾಡಿದರು, ಏಕೆಂದರೆ ಆ ರೂಢಿಯನ್ನು ಪೂರ್ತಿಯಾಗಿ ತ್ಯಜಿಸುವಂತೆ ಯೇಸು ಅವರಿಗೆ ಹೇಳಲಿಲ್ಲ. (ಅ. ಕೃತ್ಯಗಳು 13:2, 3; 14:23) ಆದರೂ, ಅವರು ಎಂದಿಗೂ ‘ತಾವು ಉಪವಾಸಿಗಳೆಂದು ಜನರಿಗೆ ತೋರುವದಕ್ಕಾಗಿ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳ’ಬಾರದಿತ್ತು. (ಮತ್ತಾಯ 6:16) ದೈವಭಕ್ತಿಯ ಇಂತಹ ಒಂದು ಬಾಹ್ಯ ಪ್ರದರ್ಶನವು, ಇತರ ಮಾನವರಿಂದ ಮೆಚ್ಚುಗೆಯ ನೋಟಗಳನ್ನು ಮತ್ತು ಸಮ್ಮತಿಯ ಅಭಿವ್ಯಕ್ತಿಗಳನ್ನು ತರಬಹುದು. ಆದರೂ, ದೇವರು ಇಂತಹ ಒಂದು ಆಡಂಬರದ ಪ್ರದರ್ಶನದಿಂದ ಸಂತೋಷಗೊಳ್ಳುವುದಿಲ್ಲ.—ಮತ್ತಾಯ 6:17, 18.
ಯೇಸು, ತನ್ನ ಮರಣದ ಸಮಯದಲ್ಲಿ ತನ್ನ ಹಿಂಬಾಲಕರ ಉಪವಾಸ ಮಾಡುವಿಕೆಯ ಕುರಿತಾಗಿಯೂ ಮಾತಾಡಿದನು. ಹೀಗೆ ಅವನು ಒಂದು ಮತಾಚರಣೆಯ ಉಪವಾಸವನ್ನು ಸ್ಥಾಪಿಸುತ್ತಿರಲಿಲ್ಲ. ಬದಲಿಗೆ, ಅವರು ಅನುಭವಿಸಲಿದ್ದ ಆಳವಾದ ದುಃಖಕ್ಕೆ ಒಂದು ಪ್ರತಿಕ್ರಿಯೆಯನ್ನು ಅವನು ಸೂಚಿಸುತ್ತಿದ್ದನು. ಒಮ್ಮೆ ಅವನು ಪುನರುತ್ಥಾನಗೊಂಡ ಬಳಿಕ, ಅವನು ಪುನಃ ಅವರೊಂದಿಗಿರುವನು, ಮತ್ತು ಅವರಿಗೆ ಉಪವಾಸ ಮಾಡಲು ಅಂತಹ ಒಂದು ಕಾರಣವು ಇನ್ನಿರದು.—ಲೂಕ 5:34, 35.
“ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ”ನಾದಾಗ, ಮೋಶೆಯ ಧರ್ಮಶಾಸ್ತ್ರವು ಕೊನೆಗೊಂಡಿತು. (ಇಬ್ರಿಯ 9:24-28) ಮತ್ತು ಆ ಧರ್ಮಶಾಸ್ತ್ರದ ಕೊನೆಯೊಂದಿಗೆ, ದೋಷಪರಿಹಾರಕ ದಿನದಂದು ಉಪವಾಸ ಮಾಡುವ ಆಜ್ಞೆಯು ಕೊನೆಗೊಂಡಿತು. ಹೀಗೆ, ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟ ಏಕೈಕ ಬಂಧಕ ಉಪವಾಸವು ತೆಗೆದುಹಾಕಲ್ಪಟ್ಟಿತು.
ಲೆಂಟಿನ ಕುರಿತಾಗಿ ಏನು?
ಹಾಗಾದರೆ, ಲೆಂಟಿನ ಸಮಯದಲ್ಲಿ ಉಪವಾಸ ಮಾಡುವ ಕ್ರೈಸ್ತಪ್ರಪಂಚದ ರೂಢಿಗಾಗಿರುವ ಆಧಾರವೇನು? ಕ್ಯಾತೊಲಿಕ್ ಹಾಗೂ ಪ್ರಾಟೆಸ್ಟಂಟ್ ಚರ್ಚುಗಳು—ಎರಡೂ—ಲೆಂಟನ್ನು ಅಂಗೀಕರಿಸುತ್ತವೆ, ಆದರೂ ಅದನ್ನು ಆಚರಿಸುವ ವಿಧವು ಚರ್ಚಿನಿಂದ ಚರ್ಚಿಗೆ ಬೇರೆಯಾಗಿರುತ್ತದೆ. ಈಸ್ಟರಿನ ಮೊದಲು ಪೂರ್ತಿ 40 ದಿನದ ಅವಧಿಯಲ್ಲಿ, ಕೆಲವರು ದಿನಕ್ಕೆ ಕೇವಲ ಒಂದು ಊಟವನ್ನು ಮಾಡುತ್ತಾರೆ. ಇತರರು ಬೂದಿ ಬುಧವಾರ ಮತ್ತು ಗುಡ್ ಫ್ರೈಡೆಯಂದು ಮಾತ್ರ ಪೂರ್ಣವಾಗಿ ಉಪವಾಸ ಮಾಡುತ್ತಾರೆ. ಕೆಲವರಿಗಾದರೊ ಲೆಂಟ್, ಮಾಂಸ, ಮೀನು, ಮೊಟ್ಟೆಗಳು, ಮತ್ತು ಹಾಲಿನ ಉತ್ಪಾದನೆಗಳಿಂದ ದೂರವಿರುವುದನ್ನು ಅವಶ್ಯಪಡಿಸುತ್ತದೆ.
ಲೆಂಟ್, ಯೇಸುವಿನ ದೀಕ್ಷಾಸ್ನಾನದ ನಂತರ ಅವನ 40 ದಿನದ ಉಪವಾಸದ ಮೇಲೆ ಆಧಾರಿಸಿರುವಂತೆ ತೋರುತ್ತದೆ. ಅವನು ಆಗ ಪ್ರತಿ ವರ್ಷವೂ ಅನುಸರಿಸಲ್ಪಡುವಂತೆ, ಒಂದು ಮತಾಚರಣೆಯನ್ನು ಸ್ಥಾಪಿಸುತ್ತಿದ್ದನೊ? ಖಂಡಿತವಾಗಿಯೂ ಇಲ್ಲ. ಆದಿ ಕ್ರೈಸ್ತರ ಮಧ್ಯೆ ಇಂತಹ ಯಾವುದೇ ಆಚರಣೆಯನ್ನು ಬೈಬಲು ದಾಖಲಿಸುವುದಿಲ್ಲ ಎಂಬ ವಾಸ್ತವಾಂಶದಿಂದ ಇದು ವ್ಯಕ್ತವಾಗುತ್ತದೆ. ಲೆಂಟ್ ಪ್ರಥಮವಾಗಿ ಕ್ರಿಸ್ತನ ನಂತರ, ನಾಲ್ಕನೆಯ ಶತಮಾನದಲ್ಲಿ ಆಚರಿಸಲ್ಪಟ್ಟಿತು. ಕ್ರೈಸ್ತಪ್ರಪಂಚದ ಇತರ ಅನೇಕ ಬೋಧನೆಗಳಂತೆ, ಅದನ್ನು ವಿಧರ್ಮಿ ಮೂಲಗಳಿಂದ ಎರವು ಪಡೆಯಲಾಯಿತು.
ಲೆಂಟ್, ಯೇಸುವಿನ ದೀಕ್ಷಾಸ್ನಾನದ ನಂತರ ಅರಣ್ಯದಲ್ಲಿ ಅವನ ಉಪವಾಸ ಮಾಡುವಿಕೆಯ ಅನುಕರಣೆಯಲ್ಲಿರುವುದಾದರೆ, ಅದು ಈಸ್ಟರ್ಗೆ—ಅವನ ಪುನರುತ್ಥಾನದ ಸಮಯವೆಂದು ತೋರುವ ಸಮಯಕ್ಕೆ—ನಡೆಸುವ ವಾರಗಳಲ್ಲಿ ಏಕೆ ಆಚರಿಸಲ್ಪಡುತ್ತದೆ? ಯೇಸು ತನ್ನ ಮರಣಕ್ಕೆ ಮುಂಚಿನ ದಿನಗಳಂದು ಉಪವಾಸ ಮಾಡಲಿಲ್ಲ. ಸುವಾರ್ತಾ ವೃತ್ತಾಂತಗಳು ಸೂಚಿಸುವುದೇನೆಂದರೆ, ಅವನು ಸಾಯುವ ಕೇವಲ ಕೆಲವೇ ದಿನಗಳ ಮುಂಚೆ, ಅವನು ಮತ್ತು ಅವನ ಶಿಷ್ಯರು ಬೇಥಾನ್ಯದಲ್ಲಿ ಮನೆಗಳನ್ನು ಸಂದರ್ಶಿಸಿ, ಊಟಮಾಡಿದರು. ಮತ್ತು ಅವನು ತನ್ನ ಮರಣದ ಮುಂಚಿನ ರಾತ್ರಿಯಂದು ಪಸ್ಕದ ಊಟವನ್ನು ಮಾಡಿದನು.—ಮತ್ತಾಯ 26:6, 7; ಲೂಕ 22:15; ಯೋಹಾನ 12:2.
ಯೇಸುವಿನ ದೀಕ್ಷಾಸ್ನಾನದ ನಂತರ, ಅವನು ಮಾಡಿದ ಉಪವಾಸದಿಂದ ಏನನ್ನೊ ಕಲಿಯಲಿಕ್ಕಿದೆ. ಅವನೊಂದು ಅತಿ ಮಹತ್ವದ ಶುಶ್ರೂಷೆಯನ್ನು ಆರಂಭಿಸುತ್ತಿದ್ದನು. ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಮತ್ತು ಇಡೀ ಮಾನವ ಕುಲದ ಭವಿಷ್ಯತ್ತು ಒಳಗೊಂಡಿದ್ದವು. ಇದು ಆಳವಾದ ಮನನ ಹಾಗೂ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ಪ್ರಾರ್ಥನಾಪೂರ್ವಕವಾಗಿ ತಿರುಗಿಕೊಳ್ಳುವ ಒಂದು ಸಮಯವಾಗಿತ್ತು. ಈ ಸಮಯದಲ್ಲಿ ಯೇಸು ಯೋಗ್ಯವಾಗಿಯೇ ಉಪವಾಸ ಮಾಡಿದನು. ಸರಿಯಾದ ಉದ್ದೇಶ ಮತ್ತು ಸೂಕ್ತವಾದ ಒಂದು ಸಂದರ್ಭದಲ್ಲಿ ಮಾಡಲ್ಪಟ್ಟಾಗ, ಉಪವಾಸ ಮಾಡುವಿಕೆಯು ಪ್ರಯೋಜನಕರವಾಗಿರಬಲ್ಲದು ಎಂಬುದನ್ನು ಇದು ಸೂಚಿಸುತ್ತದೆ.—ಹೋಲಿಸಿ ಕೊಲೊಸ್ಸೆ 2:20-23.
ಉಪವಾಸ ಮಾಡುವಿಕೆಯು ಪ್ರಯೋಜನಕರವಾಗಿರುವ ಸಮಯ
ದೇವರ ಆರಾಧಕನೊಬ್ಬನು ಇಂದು ಉಪವಾಸ ಮಾಡಬಹುದಾದ ಕೆಲವು ಸಂದರ್ಭಗಳನ್ನು ನಾವು ಪರಿಗಣಿಸೋಣ. ಪಾಪವೊಂದನ್ನು ಗೈದಿರುವ ವ್ಯಕ್ತಿಗೆ ಒಂದು ಸಮಯಾವಧಿಯ ವರೆಗೆ ಊಟಮಾಡುವ ಅನಿಸಿಕೆ ಆಗದಿರಬಹುದು. ಇದು ಇತರರ ಮೇಲೆ ಪ್ರಭಾವ ಬೀರಲು ಅಥವಾ ಪಡೆದ ಶಿಸ್ತಿಗಾಗಿ ಕೋಪದಿಂದಿರಲಿಕ್ಕಾಗಿ ಇರುವುದಿಲ್ಲ. ಮತ್ತು ನಿಶ್ಚಯವಾಗಿಯೂ, ಉಪವಾಸವು ತಾನೇ ದೇವರೊಂದಿಗೆ ವಿಷಯಗಳನ್ನು ಸರಿಪಡಿಸದು. ಹಾಗಿದ್ದರೂ, ನಿಜವಾಗಿಯೂ ಪಶ್ಚಾತ್ತಾಪಪಡುವ ವ್ಯಕ್ತಿಯೊಬ್ಬನಿಗೆ, ಯೆಹೋವನನ್ನು ಮತ್ತು ಬಹುಶಃ ಮಿತ್ರರು ಮತ್ತು ಕುಟುಂಬವನ್ನು ನೋಯಿಸಿದ್ದರ ಕಾರಣ ಆಳವಾದ ದುಃಖದ ಅನಿಸಿಕೆಯಾಗುವುದು. ಸಂಕಟ ಮತ್ತು ಕ್ಷಮಾಪಣೆಗಾಗಿ ಉದ್ರಿಕ್ತವಾದ ಪ್ರಾರ್ಥನೆಯು, ಆಹಾರಕ್ಕಾಗಿರುವ ಬಯಕೆಯನ್ನು ತಡೆಯಬಹುದು.
ಇಸ್ರಾಯೇಲಿನ ರಾಜ ದಾವೀದನಿಗೆ ತದ್ರೀತಿಯ ಒಂದು ಅನುಭವವಾಯಿತು. ಬತ್ಷೆಬೆಯಿಂದ ಹುಟ್ಟಿದ ತನ್ನ ಮಗನನ್ನು ಕಳೆದುಕೊಳ್ಳುವ ಪ್ರತೀಕ್ಷೆಯಿಂದ ಎದುರಿಸಲ್ಪಟ್ಟಾಗ, ಮಗುವಿನ ಸಂಬಂಧದಲ್ಲಿ ಕರುಣೆಯನ್ನು ಪಡೆಯಲು ಯೆಹೋವನಿಗೆ ಪ್ರಾರ್ಥನೆ ಮಾಡುವುದರ ಮೇಲೆ ತನ್ನ ಎಲ್ಲ ಪ್ರಯತ್ನಗಳನ್ನು ಅವನು ಕೇಂದ್ರೀಕರಿಸಿದನು. ಅವನು ಪ್ರಾರ್ಥನೆಯಲ್ಲಿ ಪೂರ್ಣವಾಗಿ ಲೀನವಾಗಿರುವಾಗ, ಉಪವಾಸ ಮಾಡಿದನು. ತದ್ರೀತಿಯಲ್ಲಿ, ಇಂದು ಕೆಲವು ಒತ್ತಡಭರಿತ ಪರಿಸ್ಥಿತಿಗಳ ಕೆಳಗೆ ಆಹಾರವನ್ನು ಸೇವಿಸುವುದು ಸೂಕ್ತವಾಗಿ ತೋರದಿರಬಹುದು.—2 ಸಮುವೇಲ 12:15-17.
ದೈವಭಕ್ತಿಯುಳ್ಳ ವ್ಯಕ್ತಿಯೊಬ್ಬನು ಯಾವುದೊ ಗಾಢವಾದ ಆತ್ಮಿಕ ವಿಷಯದ ಕುರಿತು ಕೇಂದ್ರೀಕರಿಸಲು ಬಯಸುವ ಸಮಯಗಳೂ ಇರಬಹುದು. ಬೈಬಲ್ ಮತ್ತು ಕ್ರೈಸ್ತ ಪ್ರಕಾಶನಗಳಲ್ಲಿನ ಸಂಶೋಧನೆಯು ಅಗತ್ಯವಾಗಿರಬಹುದು. ಮನನಕ್ಕಾಗಿ ಒಂದು ಸಮಯಾವಧಿಯು ಅಗತ್ಯವಾಗಿರಬಹುದು. ಲೀನವಾಗಿಸುವ ಅಂತಹ ಒಂದು ಅಧ್ಯಯನದ ಅವಧಿಯಲ್ಲಿ, ಊಟಗಳ ಸೇವನೆಯಿಂದ ಅಪಕರ್ಷಿಸಲ್ಪಡದಿರುವುದನ್ನು ವ್ಯಕ್ತಿಯೊಬ್ಬನು ಆರಿಸಿಕೊಳ್ಳಬಹುದು.—ಹೋಲಿಸಿ ಯೆರೆಮೀಯ 36:8-10.
ಗಂಭೀರವಾದ ನಿರ್ಣಯಗಳು ಮಾಡಲ್ಪಡಬೇಕಾಗಿದ್ದ ಸಮಯಗಳಲ್ಲಿ ದೇವರ ಸೇವಕರು ಉಪವಾಸ ಮಾಡಿದ ಶಾಸ್ತ್ರೀಯ ಉದಾಹರಣೆಗಳಿವೆ. ನೆಹೆಮೀಯನ ದಿನದಲ್ಲಿ, ಯೆಹೋವನಿಗೆ ಒಂದು ಪ್ರತಿಜ್ಞೆಯನ್ನು ಮಾಡಲಿಕ್ಕಿತ್ತು, ಮತ್ತು ಯೆಹೂದ್ಯರು ಅದನ್ನು ಉಲ್ಲಂಘಿಸುವಲ್ಲಿ ಅವರು ಒಂದು ಶಾಪಕ್ಕೆ ಈಡಾಗಲಿದ್ದರು. ಅವರು ತಮ್ಮ ವಿದೇಶೀಯ ಪತ್ನಿಯರನ್ನು ವಿಚ್ಛೇದಿಸಿ, ಸುತ್ತಮುತ್ತಲಿನ ರಾಷ್ಟ್ರಗಳಿಂದ ಪ್ರತ್ಯೇಕವಾಗಿ ಉಳಿಯುವ ವಾಗ್ದಾನವನ್ನು ಮಾಡಬೇಕಿತ್ತು. ಈ ಪ್ರತಿಜ್ಞೆಯನ್ನು ಮಾಡುವ ಮುಂಚೆ ಮತ್ತು ತಮ್ಮ ದೋಷದ ನಿವೇದನೆಯ ಸಮಯದಲ್ಲಿ, ಇಡೀ ಸಭೆಯು ಉಪವಾಸ ಮಾಡಿತು. (ನೆಹೆಮೀಯ 9:1, 38; 10:29, 30) ಆದುದರಿಂದ, ಗುರುತರವಾದ ನಿರ್ಣಯಗಳಿಂದ ಎದುರಿಸಲ್ಪಟ್ಟಾಗ, ಕ್ರೈಸ್ತನೊಬ್ಬನು ಒಂದಿಷ್ಟು ಸಮಯಾವಧಿಗಾಗಿ ಊಟಮಾಡದೆ ಇರಬಹುದು.
ಆದಿ ಕ್ರೈಸ್ತ ಸಭೆಯಲ್ಲಿನ ಹಿರಿಯರ ಮಂಡಳಿಗಳಿಂದ ನಿರ್ಣಯ ಮಾಡುವಿಕೆಯು, ಕೆಲವೊಮ್ಮೆ ಉಪವಾಸದಿಂದ ಜೊತೆಗೂಡಲ್ಪಟ್ಟಿತ್ತು. ಇಂದು, ಕಷ್ಟಕರ ನಿರ್ಣಯಗಳಿಂದ ಎದುರಿಸಲ್ಪಟ್ಟ ಸಭಾ ಹಿರಿಯರು—ಬಹುಶಃ ಒಂದು ನ್ಯಾಯ ನಿರ್ಣಾಯಕ ವಿದ್ಯಮಾನದ ಸಂಬಂಧದಲ್ಲಿ—ವಿಷಯವನ್ನು ಪರಿಗಣಿಸುವಾಗ ಆಹಾರದಿಂದ ದೂರವಿರಬಹುದು.
ನಿರ್ದಿಷ್ಟವಾದ ಸಂದರ್ಭಗಳಲ್ಲಿ ಉಪವಾಸ ಮಾಡಲು ಆರಿಸಿಕೊಳ್ಳುವುದು, ಒಂದು ವೈಯಕ್ತಿಕ ನಿರ್ಣಯವಾಗಿದೆ. ಈ ವಿಷಯದಲ್ಲಿ ಒಬ್ಬನು ಮತ್ತೊಬ್ಬನನ್ನು ಟೀಕಿಸಬಾರದು. ನಾವು “ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳ”ಲು ಬಯಸಬಾರದು; ಇಲ್ಲವೆ ಅದು ಗಂಭೀರವಾದ ಕರ್ತವ್ಯಗಳ ನಮ್ಮ ಪರಾಮರಿಕೆಗೆ ಅಡ್ಡಬರುವಷ್ಟು ಪ್ರಾಮುಖ್ಯತೆಯನ್ನು ನಾವು ಆಹಾರಕ್ಕೆ ನೀಡಬಾರದು. (ಮತ್ತಾಯ 23:28; ಲೂಕ 12:22, 23) ಮತ್ತು ನಾವು ಉಪವಾಸ ಮಾಡುವುದನ್ನು ದೇವರು ಅವಶ್ಯಪಡುವುದೂ ಇಲ್ಲ, ಉಪವಾಸ ಮಾಡುವುದರಿಂದ ನಮ್ಮನ್ನು ತಡೆಯುವುದೂ ಇಲ್ಲ ಎಂದು ಬೈಬಲು ತೋರಿಸುತ್ತದೆ.
[ಪುಟ 7 ರಲ್ಲಿರುವ ಚಿತ್ರ]
ಯೇಸು ತನ್ನ ದೀಕ್ಷಾಸ್ನಾನದ ನಂತರ 40 ದಿನಗಳ ವರೆಗೆ ಏಕೆ ಉಪವಾಸ ಮಾಡಿದನೆಂದು ನಿಮಗೆ ಗೊತ್ತೊ?