ಯೆಹೋವನ ಒದಗಿಸುವಿಕೆಯಾದ—“ವಶಮಾಡಲ್ಪಟ್ಟವರು”
“ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು.”—ಯೆಶಾಯ 61:5.
1. “ಕೊಡುವಾತನು” ಎಂಬ ಶಬ್ದವು ನಮ್ಮ ಮನಸ್ಸುಗಳಿಗೆ ಯೆಹೋವನ ನೆನಪನ್ನು ತರಬಹುದೇಕೆ?
ದೇವರು ಎಂಥ ಉದಾರಿಯಾದ ಕೊಡುವಾತನು! ಅಪೊಸ್ತಲ ಪೌಲನು ಹೇಳಿದ್ದು: “ [ಯೆಹೋವನು] ತಾನೇ ಎಲ್ಲರಿಗೆ ಜೀವ ಶ್ವಾಸ ಮುಂತಾದ್ದೆಲ್ಲವನ್ನು ಕೊಡುವವನು.” (ಅ.ಕೃತ್ಯಗಳು 17:25) ದೇವರಿಂದ ನಾವು ಪಡೆಯುವ ‘ಎಲ್ಲಾ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಎಲ್ಲಾ ವರಗಳ’ ಕುರಿತು ಆಲೋಚಿಸುವುದರಿಂ, ನಾವು ಪ್ರತಿಯೊಬ್ಬರು ಪ್ರಯೋಜನ ಪಡೆಯಬಲ್ಲೆವು.—ಯಾಕೋಬ 1:5, 17; ಕೀರ್ತನೆ 29:11; ಮತ್ತಾಯ 7:7; 10:19; 13:12; 21:43.
2, 3. (ಎ) ದೇವರ ದಾನಗಳಿಗೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು? (ಬಿ) ಯಾವ ಅರ್ಥದಲ್ಲಿ ಲೇವಿಯರು “ವಶಮಾಡಲ್ಪಟ್ಟವರು” ಆಗಿದ್ದರು?
2 ಸಕಾರಣದಿಂದಲೇ ಕೀರ್ತನೆಗಾರನು, ಯೆಹೋವನಿಗೆ ಹೇಗೆ ಹಿಂದೆ ಸಲ್ಲಿಸಬಹುದೆಂಬದರ ಕುರಿತು ಯೋಚನೆಗೀಡಾಗಿದ್ದನು. (ಕೀರ್ತನೆ 116:12) ಮಾನವರಲ್ಲಿ ಇರಬಹುದಾದ ಅಥವಾ ಅವರು ಕೊಡಶಕ್ತರಾದ ಯಾವುದೂ ನಮ್ಮ ನಿರ್ಮಾಣಿಕನಿಗೆ ನಿಜವಾಗಿಯೂ ಅಗತ್ಯವಿಲ್ಲ. (ಕೀರ್ತನೆ 50:10, 12) ಆದರೂ ಜನರು ಸತ್ಯಾರಾಧನೆಯಲ್ಲಿ ಗಣ್ಯತಾಪೂರ್ವಕವಾಗಿ ತಮ್ಮನ್ನು ಕೊಟ್ಟುಕೊಳ್ಳುವಾಗ ಅದು ಅವನಿಗೆ ಮೆಚ್ಚಿಕೆಯಾಗುತ್ತದೆಂದು ಯೆಹೋವನು ಸೂಚಿಸುತ್ತಾನೆ. (ಇಬ್ರಿಯ 10:5-7 ಕ್ಕೆ ಹೋಲಿಸಿರಿ.) ಮಾನವರೆಲ್ಲರೂ ತಮ್ಮನ್ನು ಸಮರ್ಪಣೆಯಲ್ಲಿ ತಮ್ಮ ನಿರ್ಮಾಣಿಕನಿಗೆ ಕೊಟ್ಟುಕೊಳ್ಳಬೇಕು, ಪ್ರತಿಯಾಗಿ ಆತನು, ಪುರಾತನ ಕಾಲದ ಲೇವಿಯರ ವಿಷಯದಲ್ಲಿ ಹೇಗೋ ಹಾಗೆ, ಅಧಿಕ ಸುಯೋಗಗಳನ್ನು ನೀಡಬಹುದು. ಇಸ್ರಾಯೇಲ್ಯರೆಲ್ಲರೂ ದೇವರಿಗೆ ಸಮರ್ಪಿತರಾಗಿದ್ದರೂ, ಗುಡಾರದಲ್ಲಿ ಮತ್ತು ಆಲಯದಲ್ಲಿ ಯಜ್ಞಗಳನ್ನು ಅರ್ಪಿಸುವ ಯಾಜಕರಾಗಿ ದೇವರು ಆರೋನನ ಲೇವಿ ಕುಟುಂಬವನ್ನು ಆರಿಸಿಕೊಂಡನು. ಉಳಿದ ಲೇವಿಯರ ವಿಷಯದಲ್ಲೇನು?
3 ಯೆಹೋವನು ಮೋಶೆಗೆ ಹೇಳಿದ್ದು: “ನೀನು ಲೇವಿ ಕುಲದವರನ್ನು ಹತ್ತರಕ್ಕೆ ಕರೆದು ನಿಲ್ಲಿಸು. . . . ಅವರು ದೇವದರ್ಶನದ ಗುಡಾರಗಳ ಸಾಮಾನನ್ನು ಕಾಯಬೇಕು. . . . ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲ್ಯರಲ್ಲಿ ಆರೋನನಿಗೆ ಸಂಪೂರ್ಣವಾಗಿ ವಶಮಾಡಲ್ಪಟ್ಟವರು [ಹಿಬ್ರೂ, ನೆಥುನಿಮ್] ಇವರೇ.” (ಅರಣ್ಯಕಾಂಡ 3:6, 8, 9, 41) ಈ ಲೇವಿಯರು ಗುಡಾರದ ಸೇವೆಯಲ್ಲಿ ತಮ್ಮ ಕೆಲಸಗಳನ್ನು ನಿರ್ವಹಿಸುವುದಕ್ಕಾಗಿ ಆರೋನನಿಗೆ “ವಶಮಾಡಲ್ಪಟ್ಟವರು” ಆಗಿದ್ದರು, ಆದ್ದರಿಂದ ದೇವರು ಹೀಗನ್ನಶಕ್ತನಾದನು: “ಇಸ್ರಾಯೇಲ್ಯರಲ್ಲಿ ಇವರು ನನಗೆ ಸಂಪೂರ್ಣವಾಗಿ ವಶವಾದವರು.” (ಅರಣ್ಯಕಾಂಡ 8:16, 19; 18:6) ಕೆಲವು ಲೇವಿಯರು ಚಿಕ್ಕ ಸೇವೆಗಳನ್ನು ನಡಿಸುತ್ತಿದ್ದರು; ಇತರರು ದೇವರ ನಿಯಮಗಳನ್ನು ಕಲಿಸುವುದೇ ಮುಂತಾದ ಅತಿ ದೊಡ್ಡ ಸುಯೋಗಗಳನ್ನು ಪಡೆಯುತ್ತಿದ್ದರು. (ಅರಣ್ಯಕಾಂಡ 1:50, 51; 1 ಪೂರ್ವಕಾಲ 6:48; 23:3, 4, 24-32; 2 ಪೂರ್ವಕಾಲ 35:3-5) ನಾವೀಗ ನಮ್ಮ ಗಮನವನ್ನು ಇನ್ನೊಂದು “ವಶಮಾಡಲ್ಪಟ್ಟ” ಜನರ ಕಡೆಗೆ ಮತ್ತು ಒಂದು ಆಧುನಿಕ ಅನುರೂಪತೆಯ ಕಡೆಗೆ ತಿರುಗಿಸೋಣ.
ಇಸ್ರಾಯೇಲ್ಯರು ಬಾಬೆಲಿನಿಂದ ಹಿಂತಿರುಗುತ್ತಾರೆ
4, 5. (ಎ) ಯಾವ ಇಸ್ರಾಯೇಲ್ಯರು ಬಾಬೆಲಿನ ಸೆರೆವಾಸದಿಂದ ಹಿಂತಿರುಗಿದರು? (ಬಿ) ಸೆರೆವಾಸದಿಂದ ಇಸ್ರಾಯೇಲ್ಯರ ಹಿಂತಿರುಗುವಿಕೆಯು ಆಧುನಿಕ ಕಾಲದಲ್ಲಿ ಯಾವುದಕ್ಕೆ ಅನುರೂಪವಾಗಿದೆ?
4 ಸತ್ಯಾರಾಧನೆಯನ್ನು ಪುನಃಸ್ಥಾಪಿಸುವುದಕ್ಕಾಗಿ ಇಸ್ರಾಯೇಲ್ಯರ ಒಂದು ಉಳಿಕೆಯವರು ಗವರ್ನರನಾದ ಜೆರುಬ್ಬಾಬೆಲನ ನಾಯಕತ್ವದ ಕೆಳಗೆ ಹೇಗೆ ಬಾಬೆಲಿನಿಂದ ತಮ್ಮ ಸ್ವದೇಶಕ್ಕೆ ಹಿಂತಿರುಗಿದರೆಂದು ಎಜ್ರ ಮತ್ತು ನೆಹೆಮೀಯರು ತಿಳಿಸುತ್ತಾರೆ. ಹಿಂತಿರುಗಿ ಬಂದವರ ಒಟ್ಟು ಸಂಖ್ಯೆಯು 42,360 ಎಂಬದಾಗಿ ಎರಡೂ ವೃತ್ತಾಂತಗಳು ವರದಿ ಮಾಡಿವೆ. ಆ ಸಂಖ್ಯೆಯಲ್ಲಿ ಸಾವಿರಾರು ಮಂದಿ “ಇಸ್ರಾಯೇಲ್ ಪುರುಷರು” ಆಗಿದ್ದರು. ದಾಖಲೆಗಳು ಅನಂತರ ಯಾಜಕರ ಪಟ್ಟಿಯನ್ನು ಮಾಡಿವೆ. ಅನಂತರ ಲೇವ್ಯ ಗಾಯಕರೂ ದ್ವಾರಪಾಲಕರೂ ಸೇರಿರುವ ಸುಮಾರು 350 ಲೇವಿಯರ ದಾಖಲೆಯಿದೆ. ಇಸ್ರಾಯೇಲ್ಯರಾಗಿ ತೋರಿಬಂದ, ಯಾಜಕರಾಗಿರಲೂ ಬಹುದಾಗಿದ್ದ, ಆದರೆ ತಮ್ಮ ವಂಶಾವಳಿಯನ್ನು ರುಜುಪಡಿಸಲಾರದ ಇನ್ನು ಸಾವಿರಾರು ಮಂದಿಯ ಕುರಿತೂ ಎಜ್ರ ಮತ್ತು ನೆಹೆಮೀಯರು ಬರೆದಿದ್ದಾರೆ.—ಎಜ್ರ 1:1, 2; 2:2-42, 59-64; ನೆಹೆಮೀಯ 7:7-45, 61-66.
5 ಸೆರೆವಾಸಕ್ಕೆ ಒಯ್ಯಲ್ಪಟ್ಟಿದ್ದ ಮತ್ತು ತರುವಾಯ ಯೆರೂಸಲೇಮ್ ಮತ್ತು ಯೆಹೂದಕ್ಕೆ ಹಿಂತಿರುಗಿ ಬಂದ ಇಸ್ರಾಯೇಲ್ಯ ಉಳಿಕೆಯವರು ದೇವರಿಗೆ ಮಹತ್ತಾದ ಭಕ್ತಿಯನ್ನೂ ಸತ್ಯಾರಾಧನೆಗಾಗಿ ಆಳವಾದ ವಚನಬದ್ಧತೆಯನ್ನು ಪ್ರದರ್ಶಿಸಿದ್ದರು. ಸೂಚಿಸಿದ ಪ್ರಕಾರ, ಆಧುನಿಕ ಕಾಲದಲ್ಲಿ, ಮಹಾ ಬಾಬೆಲಿನ ಸೆರೆವಾಸದಿಂದ 1919 ರಲ್ಲಿ ಹೊರಬಂದ ಆತ್ಮಿಕ ಇಸ್ರಾಯೇಲ್ಯ ಉಳಿಕೆಯವರಲ್ಲಿ ಒಂದು ಒಪ್ಪುವ ಅನುರೂಪತೆಯನ್ನು ನಾವು ಕಾಣುತ್ತೇವೆ.
6. ದೇವರು ನಮ್ಮ ಕಾಲದಲ್ಲಿ ಆತ್ಮಿಕ ಇಸ್ರಾಯೇಲ್ಯರನ್ನು ಹೇಗೆ ಉಪಯೋಗಿಸಿದ್ದಾನೆ?
6 1919 ರಲ್ಲಿ ಅವರ ಬಿಡುಗಡೆಯಾದಂದಿನಿಂದ ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಉಳಿಕೆಯವರು ಸತ್ಯಾರಾಧನೆಯಲ್ಲಿ ಹುರುಪಿನಿಂದ ಮುಂದುವರಿದಿದ್ದಾರೆ. “ದೇವರ ಇಸ್ರಾಯೇಲ್” ನಲ್ಲಿ ಕೂಡಿರುವ 1,44,000 ಮಂದಿಯಲ್ಲಿ ಕೊನೆಯವರನ್ನು ಒಟ್ಟುಗೂಡಿಸುವುದಕ್ಕೆ ಅವರ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಿದನು. (ಗಲಾತ್ಯ 6:16; ಪ್ರಕಟನೆ 7:3, 4) ಅಭಿಷಿಕ್ತ ಉಳಿಕೆಯವರು ಒಂದು ಗುಂಪಿನೋಪಾದಿ, ಯಾವುದನ್ನು ಲೋಕವ್ಯಾಪಕವಾಗಿ ಹಂಚಲು ಪರಿಶ್ರಮಪಟ್ಟು ದುಡಿದರೋ, ಆ ಹೇರಳವಾದ ಜೀವ-ದಾಯಕ ಆತ್ಮಿಕ ಅಹಾರವನ್ನು ಒದಗಿಸಲು ಉಪಯೋಗಿಸಲ್ಪಟ್ಟ “ನಂಬಿಗಸ್ತನೂ ವಿವೇಕಿಯೂ ಆದ ಆಳಿ” ನಲ್ಲಿ ಸಂಘಟಿತರಾಗಿದ್ದಾರೆ.—ಮತ್ತಾಯ 24:45-47.
7. ಸತ್ಯಾರಾಧನೆಯಲ್ಲಿ ಅಭಿಷಿಕ್ತರೊಂದಿಗೆ ಯಾರು ಜತೆಗೂಡುತ್ತಾ ಇದ್ದಾರೆ?
7 ಹಿಂದಿನ ಲೇಖನವು ತೋರಿಸಿದ ಮೇರೆಗೆ, ಈಗ ಸಮೀಪದಲ್ಲೇ ಇರುವ ಮಹಾ ಸಂಕಟದಿಂದ ಪಾರಾಗುವ ದೇವ-ದತ್ತ ನಿರೀಕ್ಷೆ ಇರುವ “ಬೇರೆ ಕುರಿಗಳ” ಲಕ್ಷಾಂತರ ಜನರು ಈಗ ಯೆಹೋವನ ಸೇವಕರಲ್ಲಿ ಕೂಡಿರುತ್ತಾರೆ. ಎಲ್ಲಿ ಇನ್ನು ಮುಂದೆ ಹಸಿವು ಮತ್ತು ಬಾಯಾರಿಕೆ ಇರುವುದಿಲ್ಲವೋ ಮತ್ತು ದುಃಖದ ಅಶ್ರುಗಳು ಇನ್ನು ಮುಂದೆ ಸುರಿಯಲಾರವೋ ಆ ಭೂಮಿಯಲ್ಲಿ ಸದಾ ಆತನ ಸೇವೆ ಮಾಡುತ್ತಾ ಇರಲು ಅವರು ಬಯಸುತ್ತಾರೆ. (ಯೋಹಾನ 10:16; ಪ್ರಕಟನೆ 7:9-17; 21:3-5) ಇಂಥವರಿಗೆ ಅನುರೂಪವಾದ ಯಾವುದೇ ವಿಷಯವನ್ನು ಬಾಬೆಲಿನಿಂದ ಹಿಂದಿರುಗಿದವರ ವೃತ್ತಾಂತದಲ್ಲಿ ನಾವು ಕಾಣುತ್ತೇವೋ? ಹೌದು!
ಇಸ್ರಾಯೇಲ್ಯರಲ್ಲದವರೂ ಹಿಂತಿರುಗಿದರು
8. ಬಾಬೆಲಿನಿಂದ ಹಿಂತಿರುಗಿದ ಇಸ್ರಾಯೇಲ್ಯರೊಂದಿಗೆ ಯಾರು ಜತೆಗೂಡಿದ್ದರು?
8 ಬಾಬೆಲಿನಲ್ಲಿದ್ದ ಯೆಹೋವನ ಪ್ರೇಮಿಗಳಿಗೆ ವಾಗ್ದಾನ ದೇಶಕ್ಕೆ ಹಿಂತಿರುಗುವ ಕರೆಯು ನೀಡಲ್ಪಟ್ಟಾಗ, ಸಾವಿರಾರು ಇಸ್ರಾಯೇಲ್ಯೇತರರು ಪ್ರತಿಕ್ರಿಯೆ ತೋರಿಸಿದರು. ಎಜ್ರ ಮತ್ತು ನೆಹೆಮೀಯರಿಂದ ಒದಗಿಸಲ್ಪಟ್ಟ ಪಟ್ಟಿಯಲ್ಲಿ “ನೆತಿನಿಮ್” (ಅರ್ಥ, “ವಶಮಾಡಲ್ಪಟ್ಟವರು”) ರ ಮತ್ತು “ಸೊಲೊಮೋನನ ದಾಸರ ಸಂತಾನ” ದವರ ಒಟ್ಟು ಸಂಖ್ಯೆಯು 392 ಎಂದು ನಾವು ಓದುತ್ತೇವೆ. ಬೇರೆ 7,500 ಮಂದಿಯ ಕುರಿತೂ ದಾಖಲೆಗಳು ತಿಳಿಸುತ್ತವೆ: ‘ದಾಸದಾಸಿಯರು,’ ಹಾಗೂ ಲೇವ್ಯೇತರ “ಗಾಯಕರೂ ಗಾಯಕಿಗಳೂ.” (ಎಜ್ರ 2:43-58, 65; ನೆಹೆಮೀಯ 7:46-60, 67) ಇಸ್ರಾಯೇಲ್ಯರಲ್ಲದ ಅಷ್ಟು ಮಂದಿಯನ್ನು ಹಿಂತಿರುಗುವಂತೆ ಮಾಡಿದ್ದು ಯಾವುದು?
9. ಸೆರೆವಾಸದಿಂದ ಹಿಂತಿರುಗಿ ಬಂದದರ್ದಲ್ಲಿ ದೇವರ ಆತ್ಮವು ಒಳಗೂಡಿದ್ದು ಹೇಗೆ?
9 “ಆಗ . . . ದೇವ ಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯ ಕಟ್ಟುವದಕ್ಕಾಗಿ ಹೊರಟು ಹೋದರು” ಎಂದು ಎಜ್ರ 1:5 ಹೇಳುತ್ತದೆ. ಹೌದು, ಹಿಂತಿರುಗಿ ಬಂದ ಆ ಎಲ್ಲರನ್ನು ಯೆಹೋವನು ಪ್ರೇರೇಪಿಸಿದನು. ಆತನು ಅವರ ಆತ್ಮವನ್ನು, ಅಂದರೆ ಅವರ ಪ್ರೇರೇಪಕ ಮಾನಸಿಕ ಪ್ರವೃತ್ತಿಯನ್ನು ಹುರಿದುಂಬಿಸಿದನು. ತನ್ನ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮವನ್ನು ಉಪಯೋಗಿಸುವ ಮೂಲಕ ಪರಲೋಕದಿಂದಲೂ ದೇವರು ಇದನ್ನು ಮಾಡಶಕ್ತನು. ಹೀಗೆ “ಯೆಹೋವನಿಗೋಸ್ಕರ ಆಲಯ ಕಟ್ಟಲು” ಹೊರಡವರೆಲ್ಲರಿಗೆ “ [ದೇವರ] ಆತ್ಮವೇ” ಸಹಾಯವನ್ನು ನೀಡಿತು.—ಜೆಕರ್ಯ 4:1, 6; ಹಗ್ಗಾಯ 1:14.
ಆಧುನಿಕ-ದಿನದ ಅನುರೂಪತೆ
10, 11. ಬಾಬೆಲಿನಿಂದ ಹಿಂತಿರುಗಿದ ಇಸ್ರಾಯೇಲ್ಯೇತರರಿಗೆ ಯಾವ ಅನುರೂಪತೆಯನ್ನು ಕೊಡಬಹುದು?
10 ಹಿಂತಿರುಗಿ ಬಂದ ಅಂಥ ಇಸ್ರಾಯೇಲ್ಯೇತರ ಜನರಿಂದ ಯಾರು ಮುನ್ಸೂಚಿಸಲ್ಪಟ್ಟಿರುತ್ತಾರೆ? ಕ್ರೈಸ್ತರಲ್ಲಿ ಹೆಚ್ಚಿನವರು ಹೀಗೆ ಉತ್ತರಿಸಬಹುದು: ‘ನೆತಿನಿಮರು ಇಂದಿನ “ಬೇರೆ ಕುರಿಗಳಿ” ಗೆ ಅನುರೂಪವಾಗಿದ್ದಾರೆ.’ ನಿಜ, ಆದರೆ ನೆತಿನಿಮರು ಮಾತ್ರವಲ್ಲ; ಹಿಂತಿರುಗಿಬಂದ ಎಲ್ಲಾ ಇಸ್ರಾಯೇಲ್ಯೇತರರು ಆತ್ಮಿಕ ಇಸ್ರಾಯೇಲ್ಯರಲ್ಲದ ಇಂದಿನ ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ.
11 ಯು ಮೇ ಸರ್ವೈವ್ ಇಂಟು ಗಾಡ್ಸ್ ನ್ಯೂವರ್ಲ್ಡ್a ಎಂಬ ಪುಸ್ತಕವು ಅವಲೋಕಿಸಿದ್ದು: “ಗವರ್ನರ ಜೆರುಬ್ಬಾಬೆಲನೊಂದಿಗೆ ಬಾಬೆಲನ್ನು ಬಿಟ್ಟು ಹೊರಟು ಬಂದವರು 42,360 ಮಂದಿ ಇಸ್ರಾಯೇಲ್ಯ ಉಳಿಕೆಯವರು ಮಾತ್ರವೇ ಅಲ್ಲ. . . . ಸಾವಿರಾರು ಮಂದಿ ಇಸ್ರಾಯೇಲ್ಯೇತರರೂ ಅಲಿದ್ದರು. . . . ನೆತಿನಿಮರು ಮಾತ್ರವಲ್ಲದೆ ಇಸ್ರಾಯೇಲ್ಯರಲ್ಲದ ಬೇರೆಯವರು ಅಂದರೆ ದಾಸರು, ಗಾಯಕ ಮತ್ತು ಗಾಯಕಿಯರ ಕಸಬಿನವರು ಮತ್ತು ರಾಜ ಸೊಲೊಮೋನನ ದಾಸರ ಸಂತಾನದವರು ಅಲಿದ್ದರು.” ಆ ಪುಸ್ತಕವು ವಿವರಿಸಿದ್ದು: “ಇಸ್ರಾಯೇಲ್ಯೇತರರಾದ ಎಲ್ಲರು ಅಂದರೆ ನೆತಿನಿಮರು, ದಾಸರು, ಗಾಯಕ ಮತ್ತು ಗಾಯಕಿಯರು ಮತ್ತು ಸೊಲೊಮೋನನ ದಾಸರ ಸಂತತಿಯವರು ಎಲ್ಲರೂ ಸೆರೆವಾಸದ ದೇಶವನ್ನು ಬಿಟ್ಟು ಇಸ್ರಾಯೇಲ್ಯ ಉಳಿಕೆಯವರೊಂದಿಗೆ ಹಿಂದಿರುಗಿ ಬಂದರು. . . . ಹೀಗೆ ಇಂದು ಆತ್ಮಿಕ ಇಸ್ರಾಯೇಲ್ಯರಲ್ಲದ ವಿವಿಧ ಜನಾಂಗಗಳ ಜನರು ಆತ್ಮಿಕ ಇಸ್ರಾಯೇಲ್ಯ ಉಳಿಕೆಯವರೊಂದಿಗೆ ತಮ್ಮನ್ನು ಜತೆಗೂಡಿಸಿಕೊಳ್ಳುವರು ಮತ್ತು ಅವರೊಂದಿಗೆ ಯೆಹೋವ ದೇವರ ಆರಾಧನೆಯನ್ನು ಪ್ರವರ್ಧಿಸುವರು ಎಂದು ನೆನಸುವುದು ಯೋಗ್ಯವೋ? ಹೌದು.” ಅಂಥವರು ‘ಆಧುನಿಕ ದಿನದ ಮೂಲಬಿಂಬ ನೆತಿನಿಮರು, ಗಾಯಕರು ಮತ್ತು ಸೊಲೊಮೋನನ ದಾಸರ ಸಂತತಿಯರಾಗಿ ಪರಿಣಮಿಸಿದ್ದಾರೆ.’
12. ಆತ್ಮಿಕ ಇಸ್ರಾಯೇಲ್ಯರಿಗೆ ದೇವರು ಒಂದು ವಿಶೇಷ ರೀತಿಯಲ್ಲಿ ತನ್ನ ಆತ್ಮವನ್ನು ಉಪಯೋಗಿಸುವುದು ಹೇಗೆ, ಆದರೆ ಆತನ ಆರಾಧಕರೆಲರ್ಲಿಗೆ ಅದು ದೊರೆಯುವುದೆಂದು ನಾವು ಭರವಸವಿಡಬಲ್ಲೆವೇಕೆ?
12 ಪುರಾತನ ನಮೂನೆಯಲ್ಲಿದ್ದಂತೆ, ಯಾರು ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆಯುಳ್ಳವರೋ ಅವರಿಗೆ ಸಹ ದೇವರು ತನ್ನ ಆತ್ಮವನ್ನು ಒದಗಿಸುತ್ತಾನೆ. ಅವರು ಹೊಸದಾಗಿ ಹುಟ್ಟುವುದಿಲ್ಲ, ನಿಜ. 1,44,000 ಮಂದಿಯಲ್ಲಿ ಪ್ರತಿಯೊಬ್ಬನಿಗೆ ದೇವರ ಆತ್ಮಿಕ ಪುತ್ರನಾಗಿ ಹೊಸದಾಗಿ ಹುಟ್ಟುವ ಮತ್ತು ಪವಿತ್ರ ಆತ್ಮದಿಂದ ಅಭಿಷೇಕ ಹೊಂದುವ ಅಸದೃಶ ಅನುಭವವು ಆಗುವದು. (ಯೋಹಾನ 3:3, 5; ರೋಮಾಪುರ 8:16; ಎಫೆಸ 1:13, 14) ನಿಶ್ಚಯವಾಗಿಯೂ ಚಿಕ್ಕ ಹಿಂಡಿನ ಪರವಾದ ಆ ಅಭಿಷೇಕವು ದೇವರಾತ್ಮದ ಅಸಾಮಾನ್ಯ ಪ್ರದರ್ಶನೆಯಾಗಿರುತ್ತದೆ. ಆದರೆ ದೇವರ ಚಿತ್ತವನ್ನು ಮಾಡಲು ಸಹ ದೇವರಾತ್ಮದ ಅಗತ್ಯವಿದೆ. ಆದಕಾರಣ ಯೇಸು ಅಂದದ್ದು: ‘ಪರಲೋಕದಲ್ಲಿರುವ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆ.’ (ಲೂಕ 11:13) ಬೇಡಿಕೊಳ್ಳುವವನು ಸ್ವರ್ಗೀಯ ನಿರೀಕ್ಷೆಯವನಾಗಿರಲಿ ಅಥವಾ ಬೇರೆ ಕುರಿಗಳ ನಿರೀಕ್ಷೆಯವನಾಗಿರಲಿ, ಯೆಹೋವನ ಆತ್ಮವು ಆತನ ಚಿತ್ತವನ್ನು ನಿರ್ವಹಿಸಲಿಕ್ಕಾಗಿ ಹೇರಳವಾಗಿ ದೊರೆಯುತ್ತದೆ.
13. ದೇವರ ಸೇವಕರೆಲ್ಲರ ಮೇಲೆ ದೇವರ ಆತ್ಮವು ಕಾರ್ಯನಡಿಸಬಲ್ಲದು ಹೇಗೆ?
13 ದೇವರ ಆತ್ಮವು ಇಸ್ರಾಯೇಲ್ಯರನ್ನು ಮತ್ತು ಇಸ್ರಾಯೇಲ್ಯೇತರರನ್ನು ಇಬ್ಬರನ್ನೂ ಯೆರೂಸಲೇಮಿಗೆ ಹಿಂತಿರುಗುವಂತೆ ಪ್ರೇರೇಪಿಸಿತ್ತು, ಮತ್ತು ಇಂದು ಆತನ ನಿಷ್ಠೆಯುಳ್ಳ ಜನರೆಲ್ಲರಿಗೆ ಅದು ಬಲವನ್ನು ಮತ್ತು ಸಹಾಯವನ್ನು ಕೊಡುತ್ತದೆ. ಒಬ್ಬ ಕ್ರೈಸ್ತನ ದೇವ-ದತ್ತ ನಿರೀಕ್ಷೆಯು ಪರಲೋಕದ ಜೀವನವಾಗಿರಲಿ ಅಥವಾ ಭೂಮಿಯ ಮೇಲಣ ಜೀವಿತವಾಗಿರಲಿ, ಅವನು ಸುವಾರ್ತೆಯನ್ನು ಸಾರಲೇ ಬೇಕು, ಮತ್ತು ಅದರಲ್ಲಿ ನಂಬಿಗಸ್ತನಾಗಿರುವಂತೆ ಪವಿತ್ರಾತ್ಮವು ಅವನನ್ನು ಶಕ್ತನನ್ನಾಗಿ ಮಾಡುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು—ನಮ್ಮ ನಿರೀಕ್ಷೆ ಏನೇ ಆಗಿರಲಿ—ನಮಗೆಲ್ಲರಿಗೆ ಪೂರ್ಣ ಪ್ರಮಾಣದಲ್ಲಿ ಬೇಕಾದ ಆ ಆತ್ಮದ ಫಲಗಳನ್ನು ಬೆಳೆಸಿಕೊಳ್ಳಲೇಬೇಕು.—ಗಲಾತ್ಯ 5:22-26.
ವಿಶೇಷ ಸೇವೆಗಾಗಿ ವಶಮಾಡಲ್ಪಟ್ಟವರು
14, 15. (ಎ) ಹಿಂತಿರುಗಿದ ಇಸ್ರಾಯೇಲ್ಯೇತರರಲ್ಲಿ, ಯಾವ ಎರಡು ಗುಂಪುಗಳು ಪ್ರತ್ಯೇಕವಾಗಿ ಎತ್ತಿಹೇಳಲ್ಪಟ್ಟಿವೆ? (ಬಿ) ನೆತಿನಿಮರು ಯಾರು, ಮತ್ತು ಅವರು ಏನು ಮಾಡುತ್ತಿದ್ದರು?
14 ಹಿಂತಿರುಗಿ ಬರಲು ಆತ್ಮದಿಂದ ಪ್ರೇರೇಪಿಸಲ್ಪಟ್ಟ ಸಾವಿರಾರು ಮಂದಿ ಇಸ್ರಾಯೇಲ್ಯೇತರರಲ್ಲಿ—ನೆತಿನಿಮರು ಮತ್ತು ಸೊಲೊಮೋನನ ದಾಸರ ಸಂತತಿಯವರು—ಎಂಬ ಎರಡು ಚಿಕ್ಕ ಗುಂಪುಗಳನ್ನು ದೇವರ ವಾಕ್ಯವು ಪ್ರತ್ಯೇಕವಾಗಿ ತಿಳಿಸಿದೆ. ಅವರು ಯಾರಾಗಿದ್ದರು? ಅವರೇನು ಮಾಡುತ್ತಿದ್ದರು? ಮತ್ತು ಇಂದು ಅದರ ಅರ್ಥವು ಏನಾಗಿರಬಹುದು?
15 ನೆತಿನಿಮರು ಇಸ್ರಾಯೇಲ್ಯೇತರ ಮೂಲಗಳಿದ್ದ ಒಂದು ಗುಂಪಾಗಿದ್ದರು ಮತ್ತು ಅವರಿಗೆ ಲೇವ್ಯರೊಂದಿಗೆ ಸೇವೆ ನಡಿಸುವ ಸುಯೋಗವಿತ್ತು. ಗಿಬ್ಯೋನಿನ ಕಾನಾನ್ಯರು “ಸಮೂಹಕ್ಕೋಸ್ಕರವೂ ಮತ್ತು ಯೆಹೋವನ ಯಜ್ಞವೇದಿಗೋಸ್ಕರವೂ ಕಟ್ಟಿಗೆ ಒಡೆಯುವವರಾಗಿ ಮತ್ತು ನೀರು ತರುವವರಾಗಿ” ಪರಿಣಮಿಸಿದ್ದನ್ನು ನೆನಪಿಗೆ ತನ್ನಿರಿ. (ಯೆಹೋಶುವ 9:27) ಪ್ರಾಯಶಃ ಅವರ ಕೆಲವು ವಂಶಜರು ಬಾಬೆಲಿನಿಂದ ಹಿಂತಿರುಗಿದ ನೆತಿನಿಮರಲ್ಲಿ ಹಾಗೂ ದಾವೀದನ ಆಳಿಕೆಯಲ್ಲಿ ಮತ್ತು ಇತರ ಸಮಯದಲ್ಲಿ ನೆತಿನಿಮರಾಗಿ ಸೇರಿಸಲ್ಪಟ್ಟ ಇತರರಲ್ಲಿ ಕೂಡಿದ್ದರಬಹುದು. (ಎಜ್ರ 8:20) ನೆತಿನಿಮರು ಏನನ್ನು ಮಾಡುತ್ತಿದ್ದರು? ಲೇವಿಯರನ್ನು ಯಾಜಕರಿಗೆ ಸಹಾಯ ಮಾಡಲು ಕೊಡಲಾಗಿತ್ತು, ತದನಂತರ ನೆತಿನಿಮರನ್ನು ಲೇವಿಯರಿಗೆ ಸಹಾಯ ಮಾಡಲು ಕೊಡಲಾಯಿತು. ಸುನ್ನತಿಯಾಗಿದ್ದ ವಿದೇಶೀಯರಿಗೆ ಸಹ ಇದೊಂದು ಸುಯೋಗವಾಗಿತ್ತು.
16. ಕಾಲಾನಂತರ ನೆತಿನಿಮರ ಪಾತ್ರವು ಬದಲಾದದ್ದು ಹೇಗೆ?
16 ಆ ಗುಂಪು ಬಾಬೆಲಿನಿಂದ ಹಿಂತಿರುಗಿ ಬಂದಾಗ ಅದರಲ್ಲಿದ್ದ ಲೇವಿಯರು, ಯಾಜಕರ ಅಥವಾ ನೆತಿನಿಮರ ಮತ್ತು “ಸೊಲೊಮೋನನ ದಾಸರ” ಸಂತಾನದವರ ಸಂಖ್ಯೆಗೆ ಹೋಲಿಸುವಲ್ಲಿ ಕೊಂಚವೇ ಇದ್ದರು. (ಎಜ್ರ 8:15-20) ಡಾ. ಜೇಮ್ಸ್ ಹೇಸ್ಟಿಂಗ್ಸ್ರ ಡಿಕ್ಷನರಿ ಆಫ್ ದ ಬೈಬ ಅವಲೋಕಿಸುವುದು: “ಕೆಲವು ಸಮಯದ ನಂತರ [ನೆತಿನಿಮರು] ಪವಿತ್ರ ಅಧಿಕೃತ ವರ್ಗವಾಗಿ ಎಷ್ಟು ಪೂರ್ಣವಾಗಿ ಸ್ಥಾಪಿಸಲ್ಪಟ್ಟರೆಂದರೆ, ಅವರಿಗೆ ವಿಶೇಷ ಸುಯೋಗಗಳನ್ನು ನೀಡಲಾಗಿತ್ತು.” ಪಂಡಿತೋಚಿತ ಪತ್ರಿಕೆಯಾದ ವೇಟಸ್ ಟೆಸ್ಟಾಮೆಂಟಮ್ ಗಮನಿಸುವುದು: “ಒಂದು ಬದಲಾವಣೆಯು ಸಂಭವಿಸಿತು. ಸೆರೆವಾಸದಿಂದ ಹಿಂತಿರುಗಿದ ನಂತರ ಈ [ವಿದೇಶೀಯರು] ಆ ಮೇಲೆ ಆಲಯದ ದಾಸರಾಗಿ ಅಲ್ಲ, ಶುಶ್ರೂಷಕರಾಗಿ ನೋಡಲ್ಪಟ್ಟರು, ಆಲಯದಲ್ಲಿ ಪೌರೋಹಿತ್ಯ ನಡಸುತ್ತಿದ್ದ ಇತರ ಗುಂಪಿನವರಿಗೆ ಸಮರೂಪದ ಒಂದು ಸ್ಥಾನವನ್ನು ಪಡೆದರು.”—“ಒಂದು ಬದಲಾದ ದರ್ಜೆ” ಚೌಕಟ್ಟನ್ನು ನೋಡಿರಿ.
17. ನೆತಿನಿಮರಿಗೆ ಹೆಚ್ಚನ್ನು ಮಾಡಲು ಸಿಕ್ಕಿದ್ದು ಏಕೆ ಮತ್ತು ಇದಕ್ಕೆ ಯಾವ ಬೈಬಲ್ ರುಜುವಾತು ಇದೆ?
17 ನೆತಿನಿಮರು ಯಾಜಕರ ಮತ್ತು ಲೇವಿಯರ ಸರಿಸಮಾನ ಸ್ಥಾನಕ್ಕೆ ಬರಲಿಲ್ಲವೆಂಬದು ನಿಶ್ಚಯ. ಕೊನೆಯ ಗುಂಪುಗಳು ಇಸ್ರಾಯೇಲ್ಯರಾಗಿದ್ದರು, ಸ್ವತಃ ಯೆಹೋವನಿಂದ ಆರಿಸಲ್ಪಟ್ಟವರಾಗಿದ್ದರು ಮತ್ತು ಇಸ್ರಾಯೇಲ್ಯೇತರರು ಅದರಲ್ಲಿ ಅತಿಕ್ರಮಿಸಲಿಕ್ಕಿರಲಿಲ್ಲ. ಆದರೂ, ಲೇವಿಯರ ಸಂಖ್ಯೆಯು ಕಡಿಮೆಯಾಗಿದದ್ದರಿಂದ, ನೆತಿನಿಮರಿಗೆ ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡುವಂತೆ ಕೊಡಲಾಗಿತ್ತು ಎಂದು ಬೈಬಲು ಸೂಚಿಸಿರುತ್ತದೆ. ಆಲಯದ ಸಮೀಪದಲ್ಲಿ ಅವರಿಗೆ ನಿವಾಸ ಸ್ಥಾನಗಳನ್ನು ನೇಮಿಸಲಾಗಿತ್ತು. ನೆಹೆಮೀಯನ ದಿನಗಳಲ್ಲಿ ಆಲಯದ ಸಮೀಪದ ಗೋಡೆಗಳನ್ನು ದುರುಸ್ತಿಮಾಡುವುದರಲ್ಲಿ ಯಾಜಕರೊಂದಿಗೆ ಅವರು ಕೆಲಸಮಾಡಿದ್ದರು. (ನೆಹೆಮೀಯ 3:22-26) ಮತ್ತು ಲೇವಿಯರಿಗೆ ಆಲಯದ ಸೇವೆಯ ಕಾರಣ ಹೇಗೆ ಕರವಿಮುಕ್ತಿ ದೊರೆತಿತ್ತೋ ಹಾಗೆಯೇ ನೆತಿನಿಮರು ಕರವಿಮುಕ್ತರಾಗಿರುವಂತೆ ಪಾರಸಿಯ ಅರಸನು ವಿಧಿಸಿದ್ದನು. (ಎಜ್ರ 7:24) ಅವರು ಲೇವಿಯರಾಗಿ ಎಂದೂ ಎಣಿಸಲ್ಪಡದಿದ್ದರೂ, ಈ “ವಶಮಾಡಲ್ಪಟ್ಟವರು” (ಲೇವಿಯರು ಮತ್ತು ನೆತಿನಿಮರು) ಆಗ ಆತ್ಮಿಕ ವಿಷಯಗಳಲ್ಲಿ ಎಷ್ಟು ಹತ್ತಿರವಾಗಿ ಜತೆಗೂಡಿದ್ದರು ಮತ್ತು ಅಗತ್ಯಕ್ಕನುಸಾರ ನೆತಿನಿಮರ ನೇಮಕಗಳು ಹೇಗೆ ಹೆಚ್ಚಾದವು ಎಂಬದನ್ನು ಇದು ಸೂಚಿಸುತ್ತದೆ, ಆದರೂ ಅವರನ್ನು ಎಂದಿಗೂ ಲೇವಿಯರೆಂದು ಪರಿಗಣಿಸಿರಲಿಲ್ಲ. ಎಜ್ರನು ಅನಂತರ ಹಿಂತಿರುಗುವ ಸೆರೆವಾಸಿಗಳನ್ನು ಒಟ್ಟುಗೂಡಿಸಿದಾಗ, ಆರಂಭದಲ್ಲಿ ಅವರೊಂದಿಗೆ ಯಾವ ಲೇವಿಯರೂ ಇರಲಿಲ್ಲ. ಆದುದರಿಂದ ಕೆಲವರನ್ನಾದರೂ ಒಟ್ಟುಗೂಡಿಸುವಂತೆ ಅವನು ಗಾಢ ಪ್ರಯತ್ನಗಳನ್ನು ಮಾಡಿದ್ದನು. ಫಲಿತಾಂಶವಾಗಿ 38 ಲೇವಿಯರು ಮತ್ತು 220 ನೆತಿನಿಮರು “ನಮ್ಮ ದೇವರ ಆಲಯದಲ್ಲಿ ಸೇವೆಮಾಡಲು” ಹಿಂತಿರುಗಿಬಂದರು.—ಎಜ್ರ 8:15-20.
18. ಸೊಲೊಮೋನನ ದಾಸರ ಸಂತಾನವು ಯಾವ ಕೆಲಸವನ್ನು ನಿರ್ವಹಿಸಿದ್ದಿರಬಹುದು?
18 ಪ್ರತ್ಯೇಕವಾಗಿ ತಿಳಿಸಲ್ಪಟ್ಟ ಇಸ್ರಾಯೇಲ್ಯೇತರರ ಎರಡನೆಯ ಗುಂಪು ಸೊಲೊಮೋನನ ದಾಸರ ಸಂತಾನವಾಗಿತ್ತು. ಅವರ ಕುರಿತಾಗಿ ಬೈಬಲ್ ಕೆಲವೇ ವಿವರಣೆಗಳನ್ನು ಕೊಡುತ್ತದೆ: ಕೆಲವರು “ಸೋಫೆರೆತ್ . . . ಸಂತಾನದವರು” ಆಗಿದ್ದರು. ಎಜ್ರನು ಆ ಹೆಸರಿಗೆ ಒಂದು ನಿರ್ದೇಶಕ ಗುಣವಾಚಿಯನ್ನು ಸೇರಿಸಿ ಅದನ್ನು ಹಸ್ಸೋಫೆರೆತ್ ಎಂದು ಮಾಡಿದ್ದಾನೆ, ಇದಕ್ಕೆ “ಶಾಸ್ತ್ರಿ” ಎಂಬರ್ಥವಿರ ಸಾಧ್ಯವಿದೆ. (ಎಜ್ರ 2:55; ನೆಹೆಮೀಯ 7:57) ಹೀಗೆ ಅವರು ಶಾಸ್ತ್ರಿಗಳ ಅಥವಾ ನಕಲುಗಾರರ ಮಂಡಲಿ, ಆಲಯ⁄ನಿರ್ವಾಹಕ ಮಂಡಲಿಯವರೂ ಆಗಿದ್ದಿರ ಸಾಧ್ಯವಿದೆ. ವಿದೇಶೀಯ ಗೋತ್ರಗಳಿಂದ ಬಂದಾಗ್ಯೂ, ಸೊಲೊಮೋನನ ದಾಸರ ಸಂತಾನದವರು ಬಾಬೆಲನ್ನು ಬಿಟ್ಟು ಯೆಹೋವನ ಆರಾಧನೆಯ ಪುನಃಸ್ಥಾಪನೆಯಲ್ಲಿ ಭಾಗಿಗಳಾಗಲು ಹಿಂತಿರುಗಿ ಬಂದ ಮೂಲಕ ಯೆಹೋವನಲ್ಲಿ ತಮ್ಮ ಭಕ್ತಿಯನ್ನು ರುಜುಪಡಿಸಿದರು.
ಇಂದು ನಮ್ಮನ್ನು ವಶಪಡಿಸಿಕೊಳ್ಳುವುದು
19. ಇಂದಿನ ಅಭಿಷಿಕ್ತರ ಮತ್ತು ಬೇರೆ ಕುರಿಗಳ ನಡುವೆ ಯಾವ ಸಂಬಂಧವಿದೆ?
19 ನಮ್ಮ ಸಮಯದಲ್ಲಿ ದೇವರು ಅಭಿಷಿಕ್ತ ಉಳಿಕೆಯವರನ್ನು ಶುದ್ಧಾರಾಧನೆಯನ್ನು ಮುಂದೂಡಲು ಮತ್ತು ಸುವಾರ್ತೆಯನ್ನು ಸಾರಲು ಮಹತ್ತಾಗಿ ಉಪಯೋಗಿಸಿದ್ದಾನೆ. (ಮಾರ್ಕ 13:10) ಅವರೊಂದಿಗೆ ಬೇರೆ ಕುರಿಗಳು ಆರಾಧನೆಯಲ್ಲಿ ದಶಸಾವಿರ, ಶತಸಾವಿರ, ಮತ್ತು ಅನಂತರ ಲಕ್ಷಾಂತರ ಸಂಖ್ಯೆಯಲ್ಲಿ ಜತೆಗೂಡುವುದನ್ನು ಕಾಣುವುದರಲ್ಲಿ ಅವರೆಷ್ಟು ಉಲ್ಲಾಸಪಟ್ಟಿರುತ್ತಾರೆ! ಮತ್ತು ಉಳಿಕೆಯವರು ಮತ್ತು ಬೇರೆ ಕುರಿಗಳ ನಡುವೆ ಅದೆಂಥ ಆನಂದಕರ ಸಹಕಾರವು ತೋರಿಬಂದಿದೆ!—ಯೋಹಾನ 10:16.
20. ನೆತಿನಿಮ್ ಮತ್ತು ಸೊಲೊಮೋನನ ದಾಸರ ಸಂತಾನಕ್ಕೆ ಒಂದು ಅನುರೂಪತೆಯ ಸಂಬಂಧದಲ್ಲಿ ಯಾವ ಹೊಸ ತಿಳುವಳಿಕೆಯು ನ್ಯಾಯಸಮ್ಮತವು? (ಜ್ಞಾನೋಕ್ತಿ 4:18)
20 ಪುರಾತನ ಬಾಬೆಲಿನ ಸೆರೆವಾಸದಿಂದ ಹಿಂತಿರುಗಿ ಬಂದ ಇಸ್ರಾಯೇಲ್ಯೇತರರೆಲ್ಲರೂ ಈಗ ಆತ್ಮಿಕ ಇಸ್ರಾಯೇಲ್ಯ ಉಳಿಕೆಯವರೊಂದಿಗೆ ಸೇವೆ ಮಾಡುತ್ತಿರುವ ಬೇರೆ ಕುರಿಗಳಿಗೆ ಅನುರೂಪವಾಗಿದ್ದಾರೆ. ಆದರೆ ಬೈಬಲು ನೆತಿನಿಮರನ್ನು ಮತ್ತು ಸೊಲೊಮೋನನ ದಾಸರ ಸಂತಾನವನ್ನು ಪ್ರತ್ಯೇಕವಾಗಿ ಎತ್ತಿಹೇಳಿದ ವಿಷಯದಲ್ಲೇನು? ಈ ನಮೂನೆಯಲ್ಲಿ, ನೆತಿನಿಮರಿಗೆ ಮತ್ತು ಸೊಲೊಮೋನನ ದಾಸರ ಸಂತಾನದವರಿಗೆ ಬೇರೆ ಇಸ್ರಾಯೇಲ್ಯೇತರ ಹಿಂತಿರುಗಿ ಬಂದವರಿಗಿಂತ ಹೆಚ್ಚಿನ ಸುಯೋಗಗಳು ಕೊಡಲ್ಪಟ್ಟಿದ್ದವು. ಇಂದು ದೇವರು ಬಲಿತವರೂ ಸಿದ್ಧಮನಸ್ಕರೂ ಆದ ಕೆಲವು ಬೇರೆ ಕುರಿಗಳಿಗೆ ನೀಡಿರುವ ವಿಶೇಷ ಸುಯೋಗಗಳನ್ನು ಮತ್ತು ಹೆಚ್ಚಿನ ಕರ್ತವ್ಯಗಳನ್ನು ಇದು ಚೆನ್ನಾಗಿ ಮುನ್ಸೂಚಿಸುತ್ತದೆ.
21. ಭೂನಿರೀಕ್ಷೆಯುಳ್ಳ ಕೆಲವು ಸಹೋದರರು ಅಧಿಕ ಕರ್ತವ್ಯಗಳನ್ನು ಮತ್ತು ವಿಶೇಷ ಸುಯೋಗಗಳನ್ನು ಪಡೆದದ್ದು ಹೇಗೆ?
21 ನೆತಿನಿಮರ ಹೆಚ್ಚಿನ ಸುಯೋಗಗಳು ಆತ್ಮಿಕ ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿವೆ. ಸೊಲೊಮೋನನ ದಾಸರ ಸಂತತಿಯವರು ಕಾರ್ಯನಿರ್ವಾಹಕ ಜವಾಬ್ದಾರಿಕೆಗಳನ್ನು ಪಡೆದಿದ್ದರೆಂಬದು ವ್ಯಕ್ತ. ಅದೇ ರೀತಿಯಲ್ಲಿ ಇಂದು ಯೆಹೋವನು ತನ್ನ ಜನರ ಅಗತ್ಯತೆಗಳನ್ನು ನಿರ್ವಹಿಸುವುದಕ್ಕಾಗಿ “ಮನುಷ್ಯರಲ್ಲಿ ದಾನ” ಗಳಿಂದ ಅವರನ್ನು ಆಶೀರ್ವದಿಸಿದ್ದಾನೆ. (ಎಫೆಸ 4:8, 11, 12) ಈ ಒದಗಿಸುವಿಕೆಯಲ್ಲಿ, ಸರ್ಕಿಟ್ ಮತ್ತು ಡಿಸ್ಟ್ರಿಕ್ ಮೇಲ್ವಿಚಾರಕರಾಗಿ ಮತ್ತು ವಾಚ್ ಟವರ್ ಸೊಸೈಟಿಯ 98 ಬ್ರಾಂಚ್ಗಳ ಬ್ರಾಂಚ್ ಕಮಿಟಿಗಳಲ್ಲಿ ಸೇವೆ ಮಾಡುತ್ತಾ ‘ಮಂದೆಯ ಪರಿಪಾಲನೆಯಲ್ಲಿ’ ಭಾಗವಹಿಸುವ ನೂರಾರು ಮಂದಿ ಬಲಿತ, ಅನುಭವಸ್ಥ ಸಹೋದರರು ಕೂಡಿರುತ್ತಾರೆ. (ಯೆಶಾಯ 61:5) ಸೊಸೈಟಿಯ ಜಾಗತಿಕ ಮುಖ್ಯ ಕಾರ್ಯಾಲಯದಲ್ಲಿ, “ನಂಬಿಗಸ್ತ ಮನೆವಾರ್ತೆಯವನ” ಮತ್ತು ಅದರ ಆಡಳಿತ ಮಂಡಲಿಯ ಮಾರ್ಗದರ್ಶನೆಯ ಕೆಳಗೆ, ಆತ್ಮಿಕ ಆಹಾರ ಸಂಗ್ರಹಗಳನ್ನು ತಯಾರಿಸುವುದರಲ್ಲಿ ಸಹಾಯಮಾಡಲು ನುರಿತ ಪುರುಷರು ತರಬೇತನ್ನು ಪಡೆಯುತ್ತಾರೆ. (ಲೂಕ 12:42) ಇತರ ದೀರ್ಘ-ಕಾಲಿಕ ಸಮರ್ಪಿತ ಸ್ವಯಂಸೇವಕರು ಬೆತೆಲ್ ಮನೆಗಳನ್ನು ಮತ್ತು ಫ್ಯಾಕ್ಟರಿಗಳನ್ನು ನಡಿಸಲು ಮತ್ತು ಕ್ರೈಸ್ತ ಆರಾಧನೆಗಾಗಿ ಹೊಸ ಬ್ರಾಂಚ್ ಸೌಕರ್ಯಗಳನ್ನು ಮತ್ತು ಹಾಲ್ಗಳನ್ನು ಕಟ್ಟುವುದರಲ್ಲಿ ವಿಶ್ವವ್ಯಾಪಕ ಕಾರ್ಯಕ್ರಮಗಳ ಮೇಲ್ವಿಚಾರ ನಡಿಸಲು ತರಬೇತನ್ನು ಪಡೆದಿದ್ದಾರೆ. ಅವರು ರಾಜ ಯಾಜಕ ವರ್ಗದ ಭಾಗವಾಗಿರುವ ಅಭಿಷಿಕ್ತ ಉಳಿಕೆಯವರ ಆಪ್ತ ಸಹಾಯಕರಾಗಿ ಕೆಲಸ ಮಾಡುವುದರಲ್ಲಿ ಅತಿಶಯಿಸಿದ್ದಾರೆ.—1 ಕೊರಿಂಥ 4:17 ಹೋಲಿಸಿರಿ; 14:40; 1 ಪೇತ್ರ 2:9.
22. ಬೇರೆ ಕುರಿಗಳಲ್ಲಿ ಕೆಲವರಿಗೆ ಘನವಾದ ಜವಾಬ್ದಾರಿಕೆಗಳು ಈಗ ಕೊಡಲ್ಪಡುವುದು ಏಕೆ ಯುಕ್ತವಾಗಿದೆ, ಮತ್ತು ನಾವಿದಕ್ಕೆ ಹೇಗೆ ಪ್ರತಿವರ್ತನೆ ತೋರಿಸಬೇಕು?
22 ಪುರಾತನ ಕಾಲದಲ್ಲಿ ಯಾಜಕರು ಮತ್ತು ಲೇವಿಯರು ಯೆಹೂದ್ಯರೊಂದಿಗೆ ಸೇವೆನಡಿಸುವುದನ್ನು ಮುಂದರಿಸಿದ್ದರು. (ಯೋಹಾನ 1:19) ಇಂದಾದರೋ ಭೂಮಿಯಲ್ಲಿರುವ ಆತ್ಮಿಕ ಇಸ್ರಾಯೇಲ್ಯರ ಸಂಖ್ಯೆಯು ಕಡಿಮೆಯಾಗುತ್ತಾ ಹೋಗಬೇಕು. (ಯೋಹಾನ 3:30 ನ್ನು ಪ್ರತಿಹೋಲಿಸಿರಿ.) ಕೊನೆಗೆ ಮಹಾ ಬಾಬೆಲಿನ ಅವಸಾನವಾದಾಗ, ‘ಮುದ್ರೆ ಹೊಂದಿರುವ’ ಎಲ್ಲಾ 1,44,000 ಮಂದಿ ಕುರಿಮರಿಯ ವಿವಾಹಕ್ಕಾಗಿ ಪರಲೋಕದಲ್ಲಿರುವರು. (ಪ್ರಕಟನೆ 7:1-3; 19:1-8) ಆದರೆ ಈಗ ಬೇರೆ ಕುರಿಗಳು ಹೆಚ್ಚುತ್ತಾ ಹೋಗಬೇಕು. ನೆತಿನಿಮ್ ಮತ್ತು ಸೊಲೊಮೋನನ ದಾಸರ ಸಂತಾನಕ್ಕೆ ತುಲನೆಯಾಗಿರುವ ಅವರಲ್ಲಿ ಕೆಲವರು, ಈಗ ಅಭಿಷಿಕ್ತ ಉಳಿಕೆಯವರ ಮೇಲ್ವಿಚಾರದ ಕೆಳಗೆ ಘನವಾದ ಜವಾಬ್ದಾರಿಕೆಗಳಿಗೆ ನೇಮಿಸಲ್ಪಟ್ಟ ನಿಜತ್ವವು ಅವರನ್ನು ದುರಭಿಮಾನಿಗಳಾಗಿ ಅಥವಾ ಸ್ವ-ಪ್ರತಿಷ್ಠೆಯುಳ್ಳವರಾಗಿ ಮಾಡಲಾರದು. (ರೋಮಾಪುರ 12:3) ದೇವ ಜನರು “ಮಹಾ ಹಿಂಸೆಯನ್ನು” ಪಾರಾಗಿ ಬರುವಾಗ ಅಲ್ಲಿ ಬೇರೆ ಕುರಿಗಳ ನಡುವೆ ನಾಯಕತ್ವ ವಹಿಸಲು ಸಿದ್ಧರಾಗಿರುವ ಅನುಭವಸ್ಥರಾದ ಪುರುಷರು—“ಅಧಿಪತಿಗಳು” [ರಾಜಕುವರರು, NW] ಇರುವರು ಎಂಬ ಆತ್ಮವಿಶ್ವಾಸವನ್ನು ಇದು ನಮಗೆ ಕೊಡುತ್ತದೆ.—ಪ್ರಕಟನೆ 7:14; ಯೆಶಾಯ 32:1; ಇದಕ್ಕೆ ಅ.ಕೃತ್ಯಗಳು 6:2-7ನ್ನು ಹೋಲಿಸಿರಿ.
23. ದೇವರ ಸೇವೆಯ ಸಂಬಂಧದಲ್ಲಿ ನಾವೆಲ್ಲರೂ ಒಂದು ಉದಾರವಾಗಿ ಕೊಡುವ ಆತ್ಮವನ್ನು ಬೆಳೆಸಿಕೊಳ್ಳಬೇಕು ಏಕೆ?
23 ಬಾಬೆಲಿನಿಂದ ಹಿಂತಿರುಗಿ ಬಂದವರೆಲ್ಲರೂ ಕಷ್ಟಪಟ್ಟು ಕೆಲಸಮಾಡಲು ಮತ್ತು ತಮ್ಮ ಹೃದ-ಮನದಲ್ಲಿ ಯೆಹೋವನ ಆರಾಧನೆಯು ಮೊಟ್ಟಮೊದಲಾಗಿದೆ ಎಂದು ರುಜುಪಡಿಸಲು ಸಿದ್ಧಮನಸ್ಕರಾಗಿದ್ದರು. ಇಂದು ಕೂಡ ಹಾಗೆಯೇ ಇದೆ. ಅಭಿಷಿಕ್ತ ಉಳಿಕೆಯವರ ಜೊತೆಯಲ್ಲಿ “ವಿದೇಶೀಯರು ನಿಂತುಕೊಂಡು . . . ಮಂದೆಯನ್ನು ಮೇಯಿಸುವರು.” (ಯೆಶಾಯ 61:5) ಹೀಗೆ ದೇವರು ನೀಡಿರುವ ಯಾವುದೇ ನಿರೀಕ್ಷೆಯು ನಮಗಿರಲಿ, ಮತ್ತು ಹರ್ಮಗೆದೋನ್ದಿನಲ್ಲಿ ಯೆಹೋವನ ನಿರ್ದೋಷೀಕರಣಕ್ಕೆ ಮುಂಚೆ ಆತ್ಮ-ನಿಯುಕ್ತ ಹಿರಿಯರಿಗೆ ಯಾವುವೇ ವಿಶೇಷ ಸುಯೋಗಗಳು ನೀಡಲ್ಪಡಲಿ, ನಾವೆಲ್ಲರೂ ಒಂದು ನಿಸ್ವಾರ್ಥವೂ, ಹಿತಕರವೂ, ಔದಾರ್ಯವೂ ಉಳ್ಳ ಆತ್ಮವನ್ನು ಬೆಳೆಸುವವರಾಗೋಣ. ಯೆಹೋವನ ಎಲ್ಲ ಮಹಾ ಉಪಕಾರಗಳಿಗಾಗಿ ನಾವೆಂದೂ ಆತನಿಗೆ ಹಿಂದೆಕೊಡಲಾರೆವಾದರೂ, ಆತನ ಸಂಸ್ಥೆಯೊಳಗೆ ನಾವು ಮಾಡುತ್ತಿರುವ ಯಾವುದೇ ಕೆಲಸದಲ್ಲಿ ನಾವು ಪೂರ್ಣಾತ್ಮದಿಂದಿರುವಂತಾಗಲಿ. (ಕೀರ್ತನೆ 116:12-14; ಕೊಲೊಸ್ಸೆ 3:23) ಹೀಗೆ “ಭೂಮಿಯ ಮೇಲೆ ಅರಸರಾಗಿ ಆಳಲು” ನಿಯಮಿತರಾದ ಅಭಿಷಿಕ್ತರೊಂದಿಗೆ ಬೇರೆ ಕುರಿಗಳು ನಿಕಟವಾಗಿ ಸೇವೆಮಾಡುವಾಗ, ನಾವೆಲ್ಲರೂ ನಮ್ಮನ್ನು ಸತ್ಯಾರಾಧನೆಗಾಗಿ ಉದಾರವಾಗಿ ಕೊಟ್ಟುಕೊಳ್ಳ ಸಾಧ್ಯವಿದೆ.—ಪ್ರಕಟನೆ 5:9, 10. (w92 4/15)
[ಅಧ್ಯಯನ ಪ್ರಶ್ನೆಗಳು]
a ಪುಟಗಳು 142-8; ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇವರಿಂದ ಪ್ರಕಾಶಿಸಲ್ಪಟ್ಟದ್ದು.
ನೆನಪಿನಲ್ಲಿಡುವ ವಿಷಯಗಳು
▫ ಪುರಾತನ ಇಸ್ರಾಯೇಲಿನಲ್ಲಿ ಲೇವಿಯರು ಯಾವ ರೀತಿಯಲ್ಲಿ “ವಶಮಾಡಲ್ಪಟ್ಟವ” ರಾಗಿದ್ದರು?
▫ ಯಾವ ಇಸ್ರಾಯೇಲ್ಯೇತರರು ಸೆರೆವಾಸದಿಂದ ಹಿಂತಿರುಗಿ ಬಂದರು, ಅವರು ಯಾರನ್ನು ಮುನ್ಸೂಚಿಸಿದ್ದಾರೆ?
▫ ನೆತಿನಿಮರಲ್ಲಿ ಯಾವ ಬದಲಾವಣೆಯು ಸಂಭವಿಸಿದಂತೆ ತೋರಿಬಂತು?
▫ ನೆತಿನಿಮರ ಮತ್ತು ಸೊಲೊಮೋನನ ದಾಸರ ಸಂತಾನದವರ ವಿಷಯದಲ್ಲಿ ಯಾವ ಅನುರೂಪತೆಗಳು ಈಗ ಗಣ್ಯಮಾಡಲ್ಪಡುತ್ತವೆ?
▫ ಅಭಿಷಿಕ್ತರು ಮತ್ತು ಬೇರೆ ಕುರಿಗಳ ನಡುವಣ ಸಹಕಾರದಿಂದ ಯಾವ ಆತ್ಮವಿಶ್ವಾಸವು ಹುಟ್ಟಿಸಲ್ಪಟ್ಟಿದೆ?
[ಪುಟ 14 ರಲ್ಲಿರುವ ಚೌಕ]
ಒಂದು ಬದಲಾದ ದರ್ಜೆ
ಅನೇಕ ಬೈಬಲ್ ಶಬ್ದಕೋಶಗಳು ಮತ್ತು ಜ್ಞಾನಕೋಶಗಳು ಸೆರೆವಾಸದಿಂದ ಹಿಂತಿರುಗಿದ ಕೆಲವು ಇಸ್ರಾಯೇಲ್ಯೇತರರಿಂದ ಅನುಭವಿಸಲ್ಪಟ್ಟ ಬದಲಾವಣೆಗಳ ಕುರಿತು ಹೇಳಿಕೆಯನ್ನಿತ್ತಿವೆ. ದೃಷ್ಟಾಂತಕ್ಕಾಗಿ, “ಅವರ ಸ್ಥಾನದಲ್ಲಿ ಬದಲಾವಣೆ” ಇದರ ಕೆಳಗೆ ಎನ್ಸೈಕ್ಲೊಪೀಡಿಯ ಬಿಬ್ಲಿಕಾ ಹೇಳುವುದು: “ಅವರ ಸಾಮಾಜಿಕ ದರ್ಜೆಯು, ಈ ಮೊದಲೇ ಸೂಚಿಸಲ್ಪಟ್ಟ ಪ್ರಕಾರ, ಅದೇ ಸಮಯ ಅವಶ್ಯವಾಗಿ ಏರಿಸಲ್ಪಟ್ಟಿತ್ತು. [ನೆತಿನಿಮರು] ಶಬ್ದದ ನಿರ್ದಿಷ್ಟಾರ್ಥದಲ್ಲಿ ಹಿಂದಿನಂತೆ ದಾಸರಾಗಿ ತೋರಿಬರಲಿಲ್ಲ.” (ಷಾನ್ ಮತ್ತು ಬ್ಲ್ಯಾಕ್ ಇವರಿಂದ ಪರಿಷ್ಕೃತ, ಸಂಪುಟ III, ಪುಟ 3399) ಸೈಕ್ಲೊಪೀಡಿಯ ಆಫ್ ಬಿಬ್ಲಿಕಲ್ ಲಿಟ್ರೇಚರ್ ನಲ್ಲಿ ಜಾನ್ ಕಿಟೊ ಬರೆಯುವುದು: “ಅವರಲ್ಲಿ [ನೆತಿನಿಮರಲ್ಲಿ] ಹೆಚ್ಚಿನವರು ಪಲೆಸ್ತೀನದ ಈ ವಿನೀತ ಸ್ಥಾನಕ್ಕೆ ಹಿಂತಿರುಗುವರೆಂದು ನಿರೀಕ್ಷಿಸಲಾಗಿರಲಿಲ್ಲ. . . . ಹೀಗೆ ಈ ಜನರಿಂದ ತೋರಿಸಲ್ಪಟ್ಟ ಸ್ವಯಂಪೂರ್ವಕ ಭಕ್ತಿಭಾವವು ನೆತಿನಿಮರ ದರ್ಜೆಯನ್ನು ಗಮನಾರ್ಹವಾಗಿ ಏರಿಸಿತು.” (ಸಂಪುಟ II, ಪುಟ 417) ದ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ತಿಳಿಸುವುದು: “ಅವರ ಈ ಸಹವಾಸ ಮತ್ತು ಸೊಲೊಮೋನನ ಕಾಲಾವಧಿಯಲ್ಲಿ ಅವರ ಹಿನ್ನೆಲೆಯ ನೋಟದಲ್ಲಿ, ಸೊಲೊಮೋನನ ದಾಸರಿಗೆ ದ್ವಿತೀಯ ಆಲಯದಲ್ಲಿ ಗಮನಾರ್ಹ ಜವಾಬ್ದಾರಿಕೆಗಳಿದ್ದವೆಂದು ಊಹಿಸಬಹುದು.”—ಜಿ. ಡಬ್ಲ್ಯೂ. ಬ್ರಾಮ್ಲಿ ಇವರಿಂದ ಪರಿಷ್ಕೃತ, ಸಂಪುಟ 4, ಪುಟ 570.
[ಪುಟ 15 ರಲ್ಲಿರುವ ಚಿತ್ರ]
ಇಸ್ರಾಯೇಲ್ಯರು ಯೆರೂಸಲೇಮನ್ನು ಪುನಃಕಟ್ಟಲು ಹಿಂತಿರುಗಿದಾಗ, ಸಾವಿರಾರು ಇಸ್ರಾಯೇಲ್ಯೇತರರು ಅವರೊಂದಿಗೆ ಜತೆಗೂಡಿದರು
[ಕೃಪೆ]
Pictorial Archive (Near Eastern History) Est.
[ಪುಟ 17 ರಲ್ಲಿರುವ ಚಿತ್ರ]
ಕೊರಿಯದ ಬ್ರಾಂಚ್ ಕಮಿಟಿ. ಪುರಾತನ ನೆತಿನಿಮರಂತೆ, ಬೇರೆ ಕುರಿಗಳ ಪುರುಷರಿಗೆ ಇಂದು ಸತ್ಯಾರಾಧನೆಯಲ್ಲಿ ಮಹತ್ವವುಳ್ಳ ಜವಾಬ್ದಾರಿಕೆಗಳಿವೆ