ಅಧ್ಯಾಯ ಇಪ್ಪತ್ತೈದು
ಪಶ್ಚಾತ್ತಾಪದ ಪ್ರಾರ್ಥನೆ
1, 2. (ಎ) ದೈವಿಕ ಶಿಕ್ಷೆಯ ಉದ್ದೇಶವೇನು? (ಬಿ) ಯೆಹೋವನ ಶಿಕ್ಷೆಯನ್ನು ಪಡೆದ ನಂತರ ಯೆಹೂದ್ಯರಿಗೆ ಯಾವ ಆಯ್ಕೆ ಇರುವುದು?
ಸಾ.ಶ.ಪೂ. 607ರಲ್ಲಿ ನಡೆದ ಯೆರೂಸಲೇಮ್ ಮತ್ತು ಅದರ ದೇವಾಲಯದ ನಾಶನವು ಯೆಹೋವನಿಂದ ಬಂದ ಶಿಕ್ಷೆಯಾಗಿತ್ತು, ಆತನ ತೀವ್ರ ಕೋಪದ ವ್ಯಕ್ತಪಡಿಸುವಿಕೆಯಾಗಿತ್ತು. ಅವಿಧೇಯ ಯೆಹೂದ ಜನಾಂಗವು ಕಠಿನ ಶಿಕ್ಷೆಗೆ ಅರ್ಹವಾಗಿತ್ತು. ಆದರೂ, ಯೆಹೂದ್ಯರು ನಾಶವಾಗಬೇಕೆಂದು ಯೆಹೋವನು ಬಯಸಲಿಲ್ಲ. ಅಪೊಸ್ತಲ ಪೌಲನು ಹೀಗೆ ಹೇಳಿದಾಗ ಯೆಹೋವನ ಶಿಕ್ಷೆಯ ಉದ್ದೇಶವನ್ನು ಸೂಚಿಸಿದನು: “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.”—ಇಬ್ರಿಯ 12:11.
2 ಈ ಕಠಿನ ಅನುಭವಕ್ಕೆ ಯೆಹೂದ್ಯರು ಹೇಗೆ ಪ್ರತಿಕ್ರಿಯಿಸುವರು? ಯೆಹೋವನ ಶಿಕ್ಷೆಯನ್ನು ಅವರು ದ್ವೇಷಿಸುವರೊ? (ಕೀರ್ತನೆ 50:16, 17) ಇಲ್ಲವೆ, ಅವರು ಅದನ್ನು ಒಂದು ತರಬೇತಿಯೋಪಾದಿ ಅಂಗೀಕರಿಸುವರೊ? ಅವರು ಪಶ್ಚಾತ್ತಾಪಪಟ್ಟು ಗುಣಮುಖರಾಗುವರೊ? (ಯೆಶಾಯ 57:18; ಯೆಹೆಜ್ಕೇಲ 18:23) ಯೆಹೂದದ ಹಿಂದಿನ ನಿವಾಸಿಗಳಲ್ಲಿ ಕೆಲವರಾದರೂ ಈ ಶಿಕ್ಷೆಗೆ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸುವರೆಂದು ಯೆಶಾಯನ ಪ್ರವಾದನೆಯು ಸೂಚಿಸುತ್ತದೆ. ಅಧ್ಯಾಯ 63ರ ಕೊನೆಯ ವಚನಗಳಿಂದ ಆರಂಭವಾಗಿ 64ನೆಯ ಅಧ್ಯಾಯದಲ್ಲೆಲ್ಲ ಯೆಹೂದ ಜನಾಂಗವನ್ನು ಪಶ್ಚಾತ್ತಾಪಪಟ್ಟ ಜನರಾಗಿ, ಯೆಹೋವನಿಗೆ ಹೃತ್ಪೂರ್ವಕವಾಗಿ ಮೊರೆಯಿಟ್ಟು ಆತನನ್ನು ಸಮೀಪಿಸುವ ಜನರಾಗಿ ತೋರಿಸಲಾಗಿದೆ. ಪ್ರವಾದಿಯಾದ ಯೆಶಾಯನು ಭವಿಷ್ಯತ್ತಿನಲ್ಲಿ ದೇಶಭ್ರಷ್ಟರಾಗಲಿದ್ದ ತನ್ನ ದೇಶಸ್ಥರ ಪರವಾಗಿ ಪಶ್ಚಾತ್ತಾಪದ ಪ್ರಾರ್ಥನೆಯನ್ನು ಮಾಡುತ್ತಾನೆ. ಹಾಗೆ ಮಾಡುವಾಗ, ಬರಲಿರುವ ಘಟನೆಗಳನ್ನು ಅವು ತನ್ನ ಕಣ್ಮುಂದೆ ನೆರವೇರುತ್ತಿವೆಯೊ ಎಂಬಂತೆ ಮಾತಾಡುತ್ತಾನೆ.
ಕರುಣಾಳು ತಂದೆ
3. (ಎ) ಯೆಶಾಯನ ಪ್ರವಾದನ ಪ್ರಾರ್ಥನೆಯು ಯೆಹೋವನನ್ನು ಹೇಗೆ ಘನತೆಗೇರಿಸುತ್ತದೆ? (ಬಿ) ಯೆಶಾಯನ ಪ್ರವಾದನ ಪ್ರಾರ್ಥನೆಯು ಬಾಬೆಲಿನಲ್ಲಿ ಪಶ್ಚಾತ್ತಾಪಪಟ್ಟ ಯೆಹೂದ್ಯರ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ ಎಂಬುದನ್ನು, ದಾನಿಯೇಲನ ಪ್ರಾರ್ಥನೆಯು ಹೇಗೆ ತೋರಿಸುತ್ತದೆ? (362ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿ.)
3 ಯೆಶಾಯನು ಯೆಹೋವನಿಗೆ ಹೀಗೆ ಪ್ರಾರ್ಥಿಸುತ್ತಾನೆ: “ಆಕಾಶದಿಂದ ನೋಡು, ಪರಿಶುದ್ಧವೂ ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು.” ಇಲ್ಲಿ ಪ್ರವಾದಿಯು ಆತ್ಮಿಕ ಆಕಾಶದ ಕುರಿತು, ಎಲ್ಲಿ ಯೆಹೋವನು ಮತ್ತು ಆತನ ಅದೃಶ್ಯ ಆತ್ಮ ಜೀವಿಗಳು ಜೀವಿಸುತ್ತಾರೋ ಆ ಆಕಾಶದ ಕುರಿತು ಮಾತಾಡುತ್ತಾನೆ. ದೇಶಭ್ರಷ್ಟರಾಗಿದ್ದ ಯೆಹೂದ್ಯರ ಆಲೋಚನೆಗಳನ್ನು ವ್ಯಕ್ತಪಡಿಸುತ್ತ, ಯೆಶಾಯನು ಮುಂದುವರಿಸುವುದು: “ನಿನ್ನ ಆಗ್ರಹವೆಲ್ಲಿ, ನಿನ್ನ ಸಾಹಸಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿಹಿಡಿದಿದ್ದೀ.” (ಯೆಶಾಯ 63:15) ಯೆಹೋವನು ತನ್ನ ಜನರ ಕಡೆಗೆ ತನ್ನ ಶಕ್ತಿಯನ್ನು ತೋರಿಸುವುದನ್ನು ತಡೆದು ಹಿಡಿದಿದ್ದಾನೆ ಮತ್ತು ತನ್ನ ಆಳವಾದ ಭಾವನೆಗಳನ್ನು ಅಂದರೆ “ಕರುಳ ಮರುಗಾಟವನ್ನೂ . . . ಕನಿಕರವನ್ನೂ” ನಿಯಂತ್ರಿಸಿಕೊಂಡಿದ್ದಾನೆ. ಆದರೂ, ಯೆಹೋವನು ಯೆಹೂದಿ ಜನಾಂಗದ “ಪಿತೃ”ವಾಗಿದ್ದಾನೆ. ಅಬ್ರಹಾಮ್ ಮತ್ತು ಇಸ್ರಾಯೇಲ (ಯಾಕೋಬ)ರು ಅವರ ಸ್ವಾಭಾವಿಕ ಮೂಲಪಿತೃಗಳಾಗಿದ್ದರು. ಒಂದುವೇಳೆ ಇವರು ಜೀವಿತರಾಗಿ ಬಂದರೂ ತಮ್ಮ ಧರ್ಮಭ್ರಷ್ಟ ಸಂತತಿಯವರನ್ನು ಅವರು ತಳ್ಳಿಹಾಕಿಯಾರು. ಆದರೆ ಯೆಹೋವನಿಗೆ ಅವರಿಗಿಂತಲೂ ಹೆಚ್ಚು ಕರುಣೆಯಿದೆ. (ಕೀರ್ತನೆ 27:10) ಹಾಗಿರುವುದರಿಂದ, ಯೆಶಾಯನು ಕೃತಜ್ಞತೆಯಿಂದ ಹೇಳುವುದು: “ಯೆಹೋವಾ, ನೀನೇ ನಮ್ಮ ಪಿತೃ; ಆದಿಯಿಂದಲೂ ನಮ್ಮ ವಿಮೋಚಕನು ಅನ್ನಿಸಿಕೊಂಡಿದ್ದೀ.”—ಯೆಶಾಯ 63:16.
4, 5. (ಎ) ಯಾವ ಅರ್ಥದಲ್ಲಿ ಯೆಹೋವನು ತನ್ನ ಜನರು ತನ್ನ ಮಾರ್ಗಗಳಿಂದ ತಪ್ಪಿ ಅಲೆಯುವಂತೆ ಮಾಡುತ್ತಾನೆ? (ಬಿ) ಯೆಹೋವನು ಯಾವ ರೀತಿಯ ಆರಾಧನೆಯನ್ನು ಬಯಸುತ್ತಾನೆ?
4 ಯೆಶಾಯನು ಹೃತ್ಪೂರ್ವಕ ಮಾತುಗಳಿಂದ ಹೀಗೆ ಮುಂದುವರಿಸುತ್ತಾನೆ: “ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು.” (ಯೆಶಾಯ 63:17) ಹೌದು, ಯೆಹೋವನು ಪುನಃ ತನ್ನ ಸೇವಕರ ಕಡೆಗೆ ಗಮನ ಕೊಡಬೇಕೆಂದು ಯೆಶಾಯನು ಪ್ರಾರ್ಥಿಸುತ್ತಾನೆ. ಆದರೆ, ಯೆಹೋವನು ಯೆಹೂದ್ಯರನ್ನು ಅವರು ತನ್ನ ಮಾರ್ಗಗಳಿಂದ ತಪ್ಪಿ ಅಲೆಯುವಂತೆ ಮಾಡುವುದು ಯಾವ ಅರ್ಥದಲ್ಲಿ? ಯೆಹೋವನಿಗೆ ಭಯಪಡದಿರುವ ಅವರ ಕಠಿನ ಹೃದಯಗಳಿಗೆ ಆತನೇ ಜವಾಬ್ದಾರನೊ? ಇಲ್ಲ, ಆದರೆ ಆತನು ಅವರು ಹಾಗೆ ಮಾಡುವಂತೆ ಬಿಡುತ್ತಾನೆ, ಮತ್ತು ಈ ಕಾರಣದಿಂದ ಹತಾಶರಾದ ಯೆಹೂದ್ಯರು, ಯೆಹೋವನು ತಮಗೆ ಆ ಸ್ವಾತಂತ್ರ್ಯವನ್ನು ಕೊಟ್ಟದ್ದಕ್ಕಾಗಿ ಪ್ರಲಾಪಿಸುತ್ತಾರೆ. (ವಿಮೋಚನಕಾಂಡ 4:21; ನೆಹೆಮೀಯ 9:16) ಯೆಹೋವನು ಮಧ್ಯೆ ಪ್ರವೇಶಿಸಿ ತಾವು ತಪ್ಪುಮಾಡದಂತೆ ತಡೆಯಬೇಕಾಗಿತ್ತೆಂದು ಅವರು ಹಾರೈಸುತ್ತಾರೆ.
5 ದೇವರು ಖಂಡಿತವಾಗಿಯೂ ಆ ರೀತಿಯಲ್ಲಿ ಮನುಷ್ಯರೊಂದಿಗೆ ವ್ಯವಹರಿಸುವದಿಲ್ಲ. ನಾವು ಇಚ್ಛಾಸ್ವಾತಂತ್ರ್ಯವುಳ್ಳ ವ್ಯಕ್ತಿಗಳಾಗಿದ್ದೇವೆ. ಮತ್ತು ನಾವು ಆತನಿಗೆ ವಿಧೇಯರಾಗಬೇಕೊ ಬೇಡವೊ ಎಂಬುದನ್ನು ನಾವೇ ನಿರ್ಣಯಿಸುವಂತೆ ಯೆಹೋವನು ಬಿಡುತ್ತಾನೆ. (ಧರ್ಮೋಪದೇಶಕಾಂಡ 30:15-19) ನಿಜವಾದ ಪ್ರೀತಿಯಿಂದ ಪ್ರಚೋದಿಸಲ್ಪಡುವ ಹೃದಮನಗಳಿಂದ ಬರುವ ಆರಾಧನೆಯನ್ನು ಯೆಹೋವನು ಬಯಸುತ್ತಾನೆ. ಆದಕಾರಣ, ಯೆಹೂದ್ಯರು ತಮ್ಮ ಇಚ್ಛಾಸ್ವಾತಂತ್ರ್ಯವನ್ನು—ಅದು ಅವರು ದೇವರ ವಿರುದ್ಧ ದಂಗೆಯೇಳುವಂತೆ ಬಿಟ್ಟರೂ—ಉಪಯೋಗಿಸುವಂತೆ ಅನುಮತಿಸಿದ್ದಾನೆ. ಆತನು ಅವರ ಹೃದಯಗಳನ್ನು ಕಠಿನಮಾಡಿದ್ದು ಈ ರೀತಿಯಲ್ಲಿಯೇ.—2 ಪೂರ್ವಕಾಲವೃತ್ತಾಂತ 36:14-21.
6, 7. (ಎ) ಯೆಹೂದ್ಯರು ಯೆಹೋವನ ಮಾರ್ಗಗಳನ್ನು ಬಿಟ್ಟದ್ದರ ಫಲಿತಾಂಶವೇನು? (ಬಿ) ವ್ಯರ್ಥವಾದ ಯಾವ ಇಚ್ಛೆಯನ್ನು ವ್ಯಕ್ತಪಡಿಸಲಾಗುತ್ತದೆ, ಆದರೆ ಯೆಹೂದ್ಯರಿಗೆ ಏನನ್ನು ನಿರೀಕ್ಷಿಸುವ ಹಕ್ಕಿಲ್ಲ?
6 ಇದರ ಫಲಿತಾಂಶವೇನು? ಯೆಶಾಯನು ಪ್ರವಾದನಾರೂಪವಾಗಿ ಹೇಳುವುದು: “ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ [ನಿನ್ನ ಸ್ವಾಸ್ತ್ಯವನ್ನು] ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ನಿನ್ನ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ. ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ.” (ಯೆಶಾಯ 63:18, 19) ಸ್ವಲ್ಪಕಾಲ ಆತನ ಪವಿತ್ರಾಲಯವು ಯೆಹೋವನ ಜನರ ವಶದಲ್ಲಿತ್ತು. ಬಳಿಕ ಅದು ನಾಶಗೊಳ್ಳುವಂತೆ ಮತ್ತು ತನ್ನ ಜನಾಂಗವು ದೇಶಭ್ರಷ್ಟವಾಗುವಂತೆ ಯೆಹೋವನು ಅನುಮತಿಸಿದನು. ಇದು ಸಂಭವಿಸಿದಾಗ, ಸನ್ನಿವೇಶವು ಆತನ ಮತ್ತು ಅಬ್ರಹಾಮನ ಸಂತತಿಯವರ ಮಧ್ಯೆ ಯಾವ ಒಡಂಬಡಿಕೆಯೇ ಇಲ್ಲವೊ ಎಂಬಂತೆ ಮತ್ತು ಆತನ ಹೆಸರಿನಿಂದ ಅವರು ಕರೆಯಲ್ಪಟ್ಟಿರಲಿಲ್ಲವೊ ಎಂಬಂತೆ ಇತ್ತು. ಈಗ ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರು ಹತಾಶೆಯಿಂದ ಹೀಗೆ ಮೊರೆಯಿಡುತ್ತಾರೆ: “ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಲುಗಿದರೆ ಎಷ್ಟೋ ಒಳ್ಳೇದು! ಒಣಗಿಡಕ್ಕೆ ಹತ್ತುವ ಕಿಚ್ಚಿನ ಪ್ರಕಾರವೂ ನೀರನ್ನು ಕುದಿಸುವ ಉರಿಯೋಪಾದಿಯಲ್ಲಿಯೂ [ನೀನು ಪ್ರತ್ಯಕ್ಷನಾಗಿ] ನಮ್ಮ ನಿರೀಕ್ಷೆಗೆ ಮೀರಿದ ಭಯಂಕರಕೃತ್ಯಗಳನ್ನು ನಡಿಸಿ ನಿನ್ನ ನಾಮಮಹತ್ತನ್ನು ನಿನ್ನ ಶತ್ರುಗಳಿಗೆ ತಿಳಿಯಪಡಿಸಿ ಜನಾಂಗಗಳನ್ನು ನಿನ್ನ ದರ್ಶನದಿಂದ ನಡುಗಿಸಬಾರದೇ!” (ಯೆಶಾಯ 64:1-3ಎ) ಯೆಹೋವನಿಗೆ ರಕ್ಷಿಸುವ ಶಕ್ತಿಯಿದೆ ಎಂಬುದೇನೊ ಖಂಡಿತ. ಆತನು ಕೆಳಗಿಳಿದುಬಂದು ತನ್ನ ಜನರ ಪರವಾಗಿ ಹೋರಾಡಬಹುದಿತ್ತು. ಹೀಗೆ, ಆಕಾಶಸದೃಶ ಸರಕಾರೀ ವ್ಯವಸ್ಥೆಗಳನ್ನೂ ಪರ್ವತಸದೃಶ ಸಾಮ್ರಾಜ್ಯಗಳನ್ನೂ ಸೀಳಿಬಿಡಬಹುದಾಗಿತ್ತು. ಯೆಹೋವನು ತನ್ನ ಉರಿಯುವ ಹುರುಪನ್ನು ತನ್ನ ಜನರ ಪರವಾಗಿ ತೋರಿಸುತ್ತ, ತನ್ನ ನಾಮವನ್ನು ಪ್ರಸಿದ್ಧಪಡಿಸಬಹುದಾಗಿತ್ತು.
7 ಯೆಹೋವನು ಹಿಂದೆ ಅಂತಹ ಕೆಲಸಗಳನ್ನು ಮಾಡಿದ್ದನು. ಯೆಶಾಯನು ಹೇಳುವುದು: “ನಾವು ನಿರೀಕ್ಷಿಸದಿದ್ದ ಭಯೋತ್ಪಾದಕ ವಿಷಯಗಳನ್ನು ನೀನು ಮಾಡಿದಾಗ, ನೀನು ಕೆಳಗೆ ಬಂದೆ. ನಿನ್ನ ನಿಮಿತ್ತ ಪರ್ವತಗಳೇ ಕಂಪಿಸಿದವು.” (ಯೆಶಾಯ 64:3, NW) ಅಂತಹ ಮಹಾಕೃತ್ಯಗಳು ಯೆಹೋವನ ಶಕ್ತಿಯನ್ನೂ ದೇವತ್ವವನ್ನೂ ಪ್ರದರ್ಶಿಸಿದವು. ಆದರೆ, ಯೆಶಾಯನ ಕಾಲದ ಅಪನಂಬಿಗಸ್ತ ಯೆಹೂದ್ಯರಿಗೆ ಯೆಹೋವನು ತಮ್ಮ ಪ್ರಯೋಜನಾರ್ಥವಾಗಿ ಹಾಗೆ ಕ್ರಿಯೆಗೈಯುವಂತೆ ನಿರೀಕ್ಷಿಸುವ ಹಕ್ಕಿಲ್ಲ.
ಯೆಹೋವನು ಮಾತ್ರ ರಕ್ಷಿಸಬಲ್ಲನು
8. (ಎ) ಜನಾಂಗಗಳ ಸುಳ್ಳು ದೇವರುಗಳಿಂದ ಯೆಹೋವನು ಭಿನ್ನವಾಗಿರುವ ಒಂದು ವಿಧವು ಯಾವುದು? (ಬಿ) ರಕ್ಷಿಸುವ ಸಾಮರ್ಥ್ಯವಿದ್ದರೂ ಯೆಹೋವನು ತನ್ನ ಜನರನ್ನು ಏಕೆ ರಕ್ಷಿಸುವುದಿಲ್ಲ? (ಸಿ) ಪೌಲನು ಯೆಶಾಯ 64:4ನ್ನು ಹೇಗೆ ಉಲ್ಲೇಖಿಸಿ ಅನ್ವಯಿಸುತ್ತಾನೆ? (366ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿ.)
8 ಸುಳ್ಳು ದೇವರುಗಳು ತಮ್ಮ ಆರಾಧಕರಿಗಾಗಿ ರಕ್ಷಣೆಯ ಯಾವುದೇ ಪರಾಕ್ರಮ ಕೃತ್ಯಗಳನ್ನು ಮಾಡಲಾರವು. ಯೆಶಾಯನು ಬರೆಯುವುದು: “ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ. ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದೀ.” (ಯೆಶಾಯ 64:4, 5ಎ) “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವವನು ಯೆಹೋವನೊಬ್ಬನೇ. (ಇಬ್ರಿಯ 11:6) ನೀತಿಕೃತ್ಯಗಳನ್ನು ಮಾಡಿ ತನ್ನನ್ನು ಸ್ಮರಿಸುವವರನ್ನು ಆತನು ಸಂರಕ್ಷಿಸುತ್ತಾನೆ. (ಯೆಶಾಯ 30:18) ಯೆಹೂದ್ಯರು ಹಾಗೆ ವರ್ತಿಸಿದ್ದಾರೊ? ಇಲ್ಲ. ಯೆಶಾಯನು ಯೆಹೋವನಿಗೆ ಹೇಳುವುದು: “ನಮ್ಮ ಮೇಲಾದರೋ ರೋಷಗೊಂಡಿದ್ದೀ; ಆದರೂ ನಾವು ಪಾಪವನ್ನು ನಡಿಸುತ್ತಾ ಬಂದೆವು; ಬಹುಕಾಲದಿಂದ ಪಾಪದಲ್ಲಿ ಮುಣುಗಿರುವ ನಮಗೆ ರಕ್ಷಣೆಯಾದೀತೇ?” (ಯೆಶಾಯ 64:5ಬಿ) ದೇವಜನರಿಗೆ, ಪಟ್ಟುಹಿಡಿದು ಮಾಡಿದ ಪಾಪಗಳ ದೀರ್ಘ ದಾಖಲೆಯೇ ಇರುವುದರಿಂದ, ಯೆಹೋವನು ತನ್ನ ರೋಷವನ್ನು ತಡೆದುಹಿಡಿದು ಅವರ ರಕ್ಷಣೆಗಾಗಿ ಕ್ರಿಯೆಗೈಯಲು ಆತನಿಗೆ ಯಾವ ಕಾರಣವೂ ಇಲ್ಲ.
9. ಪಶ್ಚಾತ್ತಾಪಪಟ್ಟ ಯೆಹೂದ್ಯರು ಏನನ್ನು ನಿರೀಕ್ಷಿಸಬಲ್ಲರು, ಮತ್ತು ಇದರಿಂದ ನಾವೇನು ಕಲಿಯಬಲ್ಲೆವು?
9 ಯೆಹೂದ್ಯರು ತಮ್ಮ ಗತ ಪಾಪಗಳನ್ನು ರದ್ದುಗೊಳಿಸಲಾರರಾದರೂ, ಅವರು ಪಶ್ಚಾತ್ತಾಪಪಟ್ಟು ಶುದ್ಧಾರಾಧನೆಗೆ ಹಿಂದಿರುಗುವಲ್ಲಿ, ಕ್ಷಮಾಪಣೆ ಮತ್ತು ಭಾವೀ ಆಶೀರ್ವಾದಗಳನ್ನು ಅವರು ನಿರೀಕ್ಷಿಸಬಲ್ಲರು. ಯೆಹೋವನು ತಕ್ಕ ಸಮಯದಲ್ಲಿ ಬಾಬೆಲಿನ ಬಂಧಿವಾಸದಿಂದ ಅವರನ್ನು ಬಿಡಿಸುವ ಮೂಲಕ ಪಶ್ಚಾತ್ತಾಪಪಡುವವರಿಗೆ ಪ್ರತಿಫಲವನ್ನು ಕೊಡುವನು. ಆದರೂ ಅವರು ತಾಳ್ಮೆಯಿಂದಿರುವುದು ಅಗತ್ಯ. ಅವರು ಪಶ್ಚಾತ್ತಾಪಪಟ್ಟರೂ ಯೆಹೋವನು ತನ್ನ ವೇಳಾಪಟ್ಟಿಯನ್ನು ಬದಲಾಯಿಸನು. ಆದರೆ ಅವರು ಎಚ್ಚರಿಕೆಯಿಂದಿದ್ದು ಯೆಹೋವನ ಚಿತ್ತಕ್ಕೆ ಪ್ರತಿಕ್ರಿಯೆ ತೋರಿಸುವುದಾದರೆ, ಅವರಿಗೆ ಕೊನೆಯಲ್ಲಿ ಖಂಡಿತವಾಗಿಯೂ ವಿಮೋಚನೆಯು ದೊರೆಯುವುದು. ಅದೇ ರೀತಿ, ಕ್ರೈಸ್ತರು ಇಂದು ತಾಳ್ಮೆಯಿಂದ ಯೆಹೋವನನ್ನು ನಿರೀಕ್ಷಿಸುತ್ತಾರೆ. (2 ಪೇತ್ರ 3:11, 12) ನಾವು ಅಪೊಸ್ತಲ ಪೌಲನ ಈ ಮಾತುಗಳನ್ನು ಹೃದಯದಲ್ಲಿಟ್ಟುಕೊಳ್ಳುತ್ತೇವೆ: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9.
10. ಯೆಶಾಯನ ಪ್ರಾರ್ಥನೆಯಲ್ಲಿ ಯಾವ ಅಸಾಮರ್ಥ್ಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲಾಗಿದೆ?
10 ಯೆಶಾಯನ ಪ್ರವಾದನ ಪ್ರಾರ್ಥನೆಯು ಕೇವಲ ರೂಢಿಯ ಪಾಪನಿವೇದನೆಯಲ್ಲ. ಆ ಜನಾಂಗವು ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಅಸಮರ್ಥವಾಗಿದೆಯೆಂಬುದನ್ನು ಅದು ಯಥಾರ್ಥವಾಗಿ ಒಪ್ಪಿಕೊಳ್ಳುತ್ತದೆ. ಪ್ರವಾದಿಯು ಹೇಳುವುದು: “ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ತರಗೆಲೆಯೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.” (ಯೆಶಾಯ 64:6) ಪಶ್ಚಾತ್ತಾಪಪಟ್ಟಿರುವ ಯೆಹೂದ್ಯರು ದೇಶಭ್ರಷ್ಟತೆಯು ಮುಗಿಯುವುದರೊಳಗೆ ಧರ್ಮಭ್ರಷ್ಟತೆಯ ಆಚಾರಗಳನ್ನು ನಿಲ್ಲಿಸಿದ್ದಿರಬಹುದು. ಈಗ ಅವರು ತಮ್ಮ ನೀತಿಕೃತ್ಯಗಳ ಜೊತೆಗೆ ಯೆಹೋವನ ಕಡೆಗೆ ತಿರುಗಿದ್ದಿರಬಹುದು. ಆದರೆ ಅವರಿನ್ನೂ ಅಪರಿಪೂರ್ಣರು. ಪಾಪಪ್ರಾಯಶ್ಚಿತ್ತದ ಸಂಬಂಧದಲ್ಲಿ ಅವರ ಸತ್ಕಾರ್ಯಗಳು ಪ್ರಶಂಸಾರ್ಹವಾಗಿದ್ದರೂ, ಅವು ಹೊಲೆಯಾದ ಬಟ್ಟೆಗಿಂತ ಉತ್ತಮವಾಗಿರುವುದಿಲ್ಲ. ಯೆಹೋವನ ಕ್ಷಮಾಪಣೆಯಾದರೋ ಆತನ ಕರುಣೆಯಿಂದ ಪ್ರೇರಿತವಾದ ಅಪಾತ್ರ ಕೊಡುಗೆಯಾಗಿದೆ. ಅದನ್ನು ಸಂಪಾದಿಸಲು ಸಾಧ್ಯವಿಲ್ಲ.—ರೋಮಾಪುರ 3:23, 24.
11. (ಎ) ದೇಶಭ್ರಷ್ಟ ಯೆಹೂದ್ಯರಲ್ಲಿ ಹೆಚ್ಚಿನವರ ಮಧ್ಯೆ ಯಾವ ಅಹಿತಕರವಾದ ಆತ್ಮಿಕ ಸ್ಥಿತಿಗತಿಯಿದೆ, ಮತ್ತು ಇದು ಏಕಾಗಿರಬಹುದು? (ಬಿ) ದೇಶಭ್ರಷ್ಟತೆಯ ಸಮಯದಲ್ಲಿ ಯಾರು ನಂಬಿಕೆಯ ಅತ್ಯುತ್ತಮ ಮಾದರಿಗಳಾಗಿದ್ದರು?
11 ಯೆಶಾಯನು ಮುಂದಕ್ಕೆ ಏನನ್ನು ನೋಡುತ್ತಾನೆ? ಪ್ರವಾದಿಯು ಪ್ರಾರ್ಥಿಸುವುದು: “ಈಗ ನಿನ್ನ ಹೆಸರೆತ್ತಿ ಪ್ರಾರ್ಥಿಸಿ ನಿನ್ನನ್ನು ಆಶ್ರಯಿಸಲು ತ್ರಾಣತಂದುಕೊಳ್ಳುವವನು ಎಲ್ಲಿಯೂ ಇಲ್ಲ; ನೀನು ನಮಗೆ ವಿಮುಖನಾಗಿ ನಮ್ಮನ್ನು ನಮ್ಮ ಅಪರಾಧಗಳಿಗೆ ವಶಮಾಡಿದ್ದೀಯಲ್ಲಾ.” (ಯೆಶಾಯ 64:7) ಆ ಜನಾಂಗದ ಆತ್ಮಿಕ ಸ್ಥಿತಿ ತೀರ ಕೆಳಮಟ್ಟಕ್ಕಿಳಿದಿದೆ. ಜನರು ಪ್ರಾರ್ಥನೆಯಲ್ಲಿ ದೇವರ ನಾಮವನ್ನು ಎತ್ತುತ್ತಿರಲಿಲ್ಲ. ಅವರು ವಿಗ್ರಹಾರಾಧನೆ ಎಂಬ ಘೋರ ಪಾಪದ ವಿಷಯದಲ್ಲಿ ದೋಷಿಗಳಾಗಿರದಿದ್ದರೂ, ತಮ್ಮ ಆರಾಧನೆಯಲ್ಲಿ ಅವರು ಅಸಡ್ಡೆಯನ್ನು ತೋರಿಸುತ್ತಾರೆಂಬುದು ವ್ಯಕ್ತವಾಗುತ್ತಿದೆ, ಮತ್ತು ಯೆಹೋವನನ್ನು “ಆಶ್ರಯಿಸಲು ತ್ರಾಣತಂದುಕೊಳ್ಳುವವನು” ಯಾರೂ ಇಲ್ಲ. ಅವರು ಸೃಷ್ಟಿಕರ್ತನೊಂದಿಗೆ ಹಿತಕರವಾದ ಸಂಬಂಧದಲ್ಲಿ ಆನಂದಿಸುತ್ತಿಲ್ಲವೆಂಬುದು ಸ್ಪಷ್ಟ. ಕೆಲವರು ಪ್ರಾಯಶಃ, ತಾವು ಯೆಹೋವನನ್ನು ಪ್ರಾರ್ಥನೆಯಲ್ಲಿ ಸಂಬೋಧಿಸಲು ಅಯೋಗ್ಯರು ಎಂದೆಣಿಸುತ್ತಿದ್ದರು. ಇತರರು ಆತನ ವಿಷಯವಾಗಿ ಯೋಚಿಸದೆ ತಮ್ಮ ದಿನನಿತ್ಯದ ಕೆಲಸಗಳಲ್ಲೇ ಮುಳುಗಿದ್ದಿರಬಹುದು. ಹೌದು, ಈ ದೇಶಭ್ರಷ್ಟರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಮತ್ತು ಯೆಹೆಜ್ಕೇಲನಂತಹ ವ್ಯಕ್ತಿಗಳೂ ಇದ್ದಾರೆಂಬುದು ಖಂಡಿತ, ಮತ್ತು ಇವರು ನಂಬಿಕೆಯ ಅತ್ಯುತ್ತಮ ಮಾದರಿಗಳಾಗಿದ್ದಾರೆ. (ಇಬ್ರಿಯ 11:33, 34) 70 ವರುಷಗಳ ಬಂಧಿವಾಸದ ಅಂತ್ಯವು ಸಮೀಪಿಸಿದಾಗ, ಹಗ್ಗಾಯ, ಜೆಕರ್ಯ, ಜೆರುಬ್ಬಾಬೆಲ ಮತ್ತು ಮಹಾಯಾಜಕ ಯೆಹೋಶುವ ಎಂಬಂಥ ಪುರುಷರು, ಯೆಹೋವನ ನಾಮವನ್ನು ಹೇಳಿಕೊಳ್ಳುವುದರಲ್ಲಿ ಉತ್ತಮ ರೀತಿಯ ನಾಯಕತ್ವವನ್ನು ವಹಿಸಲು ಸಿದ್ಧರಾಗಿ ನಿಲ್ಲುತ್ತಾರೆ. ಆದರೂ, ಯೆಶಾಯನ ಪ್ರವಾದನಾರೂಪದ ಪ್ರಾರ್ಥನೆಯು ದೇಶಭ್ರಷ್ಟರಲ್ಲಿ ಹೆಚ್ಚಿನವರ ಸ್ಥಿತಿಯನ್ನು ವರ್ಣಿಸುವಂತೆ ತೋರುತ್ತದೆ.
“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವುದು ಉತ್ತಮ”
12. ತಮ್ಮ ನಡತೆಯನ್ನು ಬದಲಾಯಿಸಲು ಪಶ್ಚಾತ್ತಾಪಪಟ್ಟ ಯೆಹೂದ್ಯರಿಗಿದ್ದ ಸಿದ್ಧಮನಸ್ಸನ್ನು ಯೆಶಾಯನು ಹೇಗೆ ವ್ಯಕ್ತಪಡಿಸುತ್ತಾನೆ?
12 ಪಶ್ಚಾತ್ತಾಪಪಟ್ಟಿರುವ ಯೆಹೂದ್ಯರು ಬದಲಾವಣೆಯನ್ನು ಮಾಡಲು ಸಿದ್ಧಮನಸ್ಸಿನವರಾಗಿದ್ದಾರೆ. ಅವರನ್ನು ಪ್ರತಿನಿಧಿಸುತ್ತ, ಯೆಶಾಯನು ಯೆಹೋವನಿಗೆ ಪ್ರಾರ್ಥಿಸುವುದು: “ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.” (ಯೆಶಾಯ 64:8) ಈ ಮಾತುಗಳು ಪುನಃ ಒಮ್ಮೆ ತಂದೆಯೋಪಾದಿ ಅಥವಾ ಜೀವದಾತನೋಪಾದಿ ಯೆಹೋವನ ಅಧಿಕಾರವನ್ನು ಒಪ್ಪಿಕೊಳ್ಳುತ್ತವೆ. (ಯೋಬ 10:9) ಪಶ್ಚಾತ್ತಾಪಪಡುವ ಯೆಹೂದ್ಯರನ್ನು ಮೆತುವಾದ ಜೇಡಿಮಣ್ಣಿಗೆ ಹೋಲಿಸಲಾಗಿದೆ. ಯೆಹೋವನ ಶಿಕ್ಷೆಗೆ ಪ್ರತಿಕ್ರಿಯೆ ತೋರಿಸುವವರನ್ನು, ದೇವರ ಮಟ್ಟಗಳಿಗನುಸಾರ ಸಾಂಕೇತಿಕವಾಗಿ ರೂಪಿಸಬಹುದು. ಆದರೆ ಕುಂಬಾರನಾದ ಯೆಹೋವನು ಪಾಪಕ್ಷಮೆಯನ್ನು ಕೊಡುವಲ್ಲಿ ಮಾತ್ರ ಇದನ್ನು ಪೂರೈಸಸಾಧ್ಯವಿದೆ. ಈ ಕಾರಣದಿಂದ, ಯೆಹೂದ್ಯರು ಆತನ ಜನರೆಂಬುದನ್ನು ನೆನಪಿಸಿಕೊಳ್ಳುವಂತೆ ಯೆಶಾಯನು ಯೆಹೋವನ ಬಳಿ ಎರಡು ಬಾರಿ ಬೇಡಿಕೊಳ್ಳುತ್ತಾನೆ: “ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯ ವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಸ್ವಾಮೀ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.”—ಯೆಶಾಯ 64:9.
13. ದೇವಜನರು ದೇಶಭ್ರಷ್ಟರಾಗಿದ್ದಾಗ ಇಸ್ರಾಯೇಲ್ ದೇಶದ ಸ್ಥಿತಿ ಹೇಗಿದೆ?
13 ತಮ್ಮ ದೇಶಭ್ರಷ್ಟತೆಯ ಸಮಯದಲ್ಲಿ ಯೆಹೂದ್ಯರು, ವಿಧರ್ಮಿಗಳ ದೇಶದಲ್ಲಿ ಕೇವಲ ಬಂಧಿವಾಸವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ತಾಳಿಕೊಳ್ಳುತ್ತಾರೆ. ಯೆರೂಸಲೇಮಿನ ಮತ್ತು ಅದರ ದೇವಾಲಯದ ಹಾಳುಬಿದ್ದ ಪರಿಸ್ಥಿತಿಯು ಅವರಿಗೂ ಅವರ ದೇವರಿಗೂ ನಿಂದೆಯನ್ನು ತರುತ್ತದೆ. ಯೆಶಾಯನ ಪಶ್ಚಾತ್ತಾಪದ ಪ್ರಾರ್ಥನೆಯು ಈ ನಿಂದೆಗೆ ಕಾರಣವಾಗಿರುವ ಕೆಲವು ಸಂಗತಿಗಳನ್ನು ತಿಳಿಸುತ್ತದೆ: “ನಿನ್ನ ಪರಿಶುದ್ದ ಪಟ್ಟಣಗಳು ಕಾಡಾಗಿವೆ, ಚೀಯೋನು ಬೀಡಾಗಿದೆ, ಯೆರೂಸಲೇಮು ಹಾಳಾಗಿಹೋಗಿದೆ. ನಮ್ಮ ಪಿತೃಗಳು ನಿನ್ನನ್ನು ಕೀರ್ತಿಸುತ್ತಿದ್ದ ನಮ್ಮ ಸುಂದರಪವಿತ್ರಾಲಯವನ್ನು ಬೆಂಕಿಯು ಸುಟ್ಟುಬಿಟ್ಟಿದೆ, ನಮ್ಮ ಅಮೂಲ್ಯವಸ್ತುಗಳೆಲ್ಲಾ ನಾಶವಾಗಿವೆ.”—ಯೆಶಾಯ 64:10, 11.
14. (ಎ) ಈಗ ಇರುವಂಥ ಸ್ಥಿತಿಯ ಕುರಿತು ಯೆಹೋವನು ಹೇಗೆ ಎಚ್ಚರಿಸಿದ್ದನು? (ಬಿ) ಯೆಹೋವನು ತನ್ನ ಆಲಯದಲ್ಲಿ ಮತ್ತು ಅಲ್ಲಿ ಅರ್ಪಿಸಲ್ಪಡುತ್ತಿದ್ದ ಯಜ್ಞಗಳ ವಿಷಯದಲ್ಲಿ ಸಂತೋಷಪಟ್ಟರೂ, ಅವುಗಳಿಗಿಂತಲೂ ಪ್ರಾಮುಖ್ಯವಾದ ವಿಷಯ ಏನಾಗಿತ್ತು?
14 ಯೆಹೂದ್ಯರ ಪಿತ್ರಾರ್ಜಿತ ದೇಶದ ಪರಿಸ್ಥಿತಿಯ ಬಗ್ಗೆ ಯೆಹೋವನಿಗೆ ಚೆನ್ನಾಗಿ ತಿಳಿದಿದೆಯೆಂಬುದು ನಿಶ್ಚಯ. ಯೆರೂಸಲೇಮ್ ನಾಶಗೊಳ್ಳುವ ಸುಮಾರು 420 ವರ್ಷಗಳ ಮುಂಚೆ ಆತನು ತನ್ನ ಜನರಿಗೆ, ಅವರು ತನ್ನ ಆಜ್ಞೆಗಳನ್ನು ಬಿಟ್ಟು ಬೇರೆ ದೇವರುಗಳನ್ನು ಸೇವಿಸುವಲ್ಲಿ, ‘ಅವರನ್ನು ದೇಶದಿಂದ ತೆಗೆದು ಹಾಕಲಾಗುವುದು’ ಮತ್ತು ಆ ಸುಂದರವಾದ ದೇವಾಲಯವು “ಅವಶೇಷಗಳ ಗುಡ್ಡೆಯಾಗುವುದು” ಎಂದು ಎಚ್ಚರಿಸಿದ್ದನು. (1 ಅರಸುಗಳು 9:6-9, NW) ನಿಜ, ಯೆಹೋವನು ತನ್ನ ಜನರಿಗೆ ಕೊಟ್ಟಿದ್ದ ದೇಶದಲ್ಲಿ, ತನ್ನ ಗೌರವಾರ್ಥವಾಗಿ ಕಟ್ಟಲ್ಪಟ್ಟಿದ್ದ ಭವ್ಯವಾದ ದೇವಾಲಯದಲ್ಲಿ ಮತ್ತು ತನಗೆ ಅರ್ಪಿಸಲ್ಪಟ್ಟ ಯಜ್ಞಗಳಲ್ಲಿ ಸಂತೋಷವನ್ನು ಕಂಡುಕೊಂಡನು. ಆದರೆ ಭೌತಿಕ ವಸ್ತುಗಳಿಗಿಂತ, ಯಜ್ಞಗಳಿಗಿಂತಲೂ ಹೆಚ್ಚು ಪ್ರಧಾನವಾಗಿರುವುದು ನಿಷ್ಠೆ ಮತ್ತು ವಿಧೇಯತೆಯೇ. ಪ್ರವಾದಿ ಸಮುವೇಲನು ಅರಸನಾದ ಸೌಲನಿಗೆ ತಕ್ಕದ್ದಾಗಿಯೇ ಹೇಳಿದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.”—1 ಸಮುವೇಲ 15:22.
15. (ಎ) ಯೆಶಾಯನು ಪ್ರವಾದನಾರೂಪವಾಗಿ ಯೆಹೋವನೊಂದಿಗೆ ಏನನ್ನು ಬೇಡಿಕೊಳ್ಳುತ್ತಾನೆ, ಮತ್ತು ಅದಕ್ಕೆ ಯಾವ ಉತ್ತರ ಸಿಗುತ್ತದೆ? (ಬಿ) ಯೆಹೋವನು ಕೊನೆಯದಾಗಿ ಇಸ್ರಾಯೇಲನ್ನು ಒಂದು ಜನಾಂಗದೋಪಾದಿ ತಿರಸ್ಕರಿಸುವಂತೆ ನಡೆಸಿದ ಸಂಭವಗಳಾವುವು?
15 ಹೀಗಿದ್ದರೂ, ಇಸ್ರಾಯೇಲ್ಯರ ದೇವರು, ತನ್ನ ಪಶ್ಚಾತ್ತಾಪಪಟ್ಟ ಜನರ ಮೇಲೆ ಬಂದ ವಿಪತ್ತನ್ನು ನೋಡಿಯೂ ಕನಿಕರಿಸದೆ ಇರುವುದು ಸಾಧ್ಯವೊ? ಇಂತಹ ಪ್ರಶ್ನೆಯನ್ನು ಹಾಕಿ ಯೆಶಾಯನು ತನ್ನ ಪ್ರವಾದನ ಪ್ರಾರ್ಥನೆಯನ್ನು ಮುಕ್ತಾಯಗೊಳಿಸುತ್ತಾನೆ. ದೇಶಭ್ರಷ್ಟ ಯೆಹೂದ್ಯರ ಪರವಾಗಿ ಅವನು ಬೇಡಿಕೊಳ್ಳುವುದು: “ಯೆಹೋವನೇ, ಇವುಗಳನ್ನು ನೋಡಿಯೂ ನಿನ್ನನ್ನು ಬಿಗಿಹಿಡಿಯುವಿಯೋ? ಸುಮ್ಮನಿರುವಿಯೋ? ನಮ್ಮನ್ನು ಹೆಚ್ಚಾಗಿ ಕುಗ್ಗಿಸುವಿಯೋ?” (ಯೆಶಾಯ 64:12) ಅಂತಿಮವಾಗಿ, ಯೆಹೋವನು ತನ್ನ ಜನರನ್ನು ಕ್ಷಮಿಸಿದ್ದು ನಿಶ್ಚಯ, ಮತ್ತು ಅವರು ಶುದ್ಧಾರಾಧನೆಯನ್ನು ಪುನಃ ಆರಂಭಿಸಲಾಗುವಂತೆ ಸಾ.ಶ.ಪೂ. 537ರಲ್ಲಿ ಆತನು ಅವರನ್ನು ಅವರ ದೇಶಕ್ಕೆ ಹಿಂದಿರುಗಿಸುತ್ತಾನೆ. (ಯೋವೇಲ 2:13) ಆದರೆ ಶತಮಾನಗಳು ಕಳೆದ ಬಳಿಕ, ಯೆರೂಸಲೇಮೂ ಅದರ ದೇವಾಲಯವೂ ಪುನಃ ನಾಶಗೊಳಿಸಲ್ಪಟ್ಟಿತು ಮತ್ತು ದೇವರ ಒಡಂಬಡಿಕೆಯ ಜನಾಂಗವನ್ನು ಆತನು ಅಂತಿಮವಾಗಿ ತಿರಸ್ಕರಿಸಿಬಿಟ್ಟನು. ಇದೇಕೆ? ಏಕೆಂದರೆ ಯೆಹೋವನ ಜನರು ಆತನ ಆಜ್ಞೆಗಳಿಂದ ದೂರ ಸರಿದು ಮೆಸ್ಸೀಯನನ್ನು ನಿರಾಕರಿಸಿದ್ದರು. (ಯೋಹಾನ 1:11; 3:19, 20) ಇದು ಸಂಭವಿಸಿದಾಗ, ಯೆಹೋವನು ಇಸ್ರಾಯೇಲಿನ ಸ್ಥಾನದಲ್ಲಿ ಒಂದು ಹೊಸ ಜನಾಂಗವನ್ನು, ಅಂದರೆ ‘ದೇವರ ಇಸ್ರಾಯೇಲ್’ ಎಂಬ ಹೆಸರಿನ ಆತ್ಮಿಕ ಜನಾಂಗವನ್ನು ತಂದನು.—ಗಲಾತ್ಯ 6:16; 1 ಪೇತ್ರ 2:9.
“ಪ್ರಾರ್ಥನೆಯನ್ನು ಕೇಳುವವ”ನಾದ ಯೆಹೋವನು
16. ಯೆಹೋವನ ಕ್ಷಮಾಪಣೆಯ ಕುರಿತು ಬೈಬಲ್ ಏನು ಕಲಿಸುತ್ತದೆ?
16 ಇಸ್ರಾಯೇಲ್ಯರಿಗೆ ಸಂಭವಿಸಿದ ಸಂಗತಿಗಳಿಂದ ನಾವು ಮುಖ್ಯ ಪಾಠಗಳನ್ನು ಕಲಿಯಬಲ್ಲೆವು. ಯೆಹೋವನು “ಒಳ್ಳೆಯವನೂ ಕ್ಷಮಿಸುವವನೂ” ಆಗಿದ್ದಾನೆಂದು ನಾವು ನೋಡುತ್ತೇವೆ. (ಕೀರ್ತನೆ 86:5) ಅಪರಿಪೂರ್ಣ ಜೀವಿಗಳಾದ ನಾವು ರಕ್ಷಣೆಗಾಗಿ ಆತನ ಕರುಣೆ ಮತ್ತು ಕ್ಷಮೆಯ ಮೇಲೆ ಹೊಂದಿಕೊಂಡಿದ್ದೇವೆ. ನಮ್ಮ ಯಾವುದೇ ಕೆಲಸಗಳಿಂದ ಈ ಆಶೀರ್ವಾದಗಳನ್ನು ನಾವು ಸಂಪಾದಿಸಲಾರೆವು. ಆದರೆ, ಯೆಹೋವನು ಸಿಕ್ಕಾಬಟ್ಟೆಯಾಗಿ ಕ್ಷಮಾಪಣೆಯನ್ನು ಕೊಡುವುದಿಲ್ಲ. ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಅವುಗಳಿಂದ ತಿರುಗುವವರು ಮಾತ್ರ ಆ ದೈವಿಕ ಕ್ಷಮಾಪಣೆಯನ್ನು ಪಡೆಯುವ ಸಾಲಿನಲ್ಲಿರುತ್ತಾರೆ.—ಅ. ಕೃತ್ಯಗಳು 3:19.
17, 18. (ಎ) ನಮ್ಮ ಆಲೋಚನೆಗಳು ಮತ್ತು ಅನಿಸಿಕೆಗಳಲ್ಲಿ ಯೆಹೋವನಿಗೆ ನಿಜವಾಗಿಯೂ ಆಸಕ್ತಿಯಿದೆಯೆಂದು ನಮಗೆ ಹೇಗೆ ಗೊತ್ತು? (ಬಿ) ಪಾಪಪೂರ್ಣ ಮಾನವರ ಕಡೆಗೆ ಯೆಹೋವನು ತಾಳ್ಮೆ ತೋರಿಸುವುದೇಕೆ?
17 ಯೆಹೋವನಿಗೆ ನಾವು ಮಾಡುವ ಪ್ರಾರ್ಥನೆಯಲ್ಲಿ ನಮ್ಮ ಆಲೋಚನೆಗಳು ಮತ್ತು ಅನಿಸಿಕೆಗಳನ್ನು ತಿಳಿಯಪಡಿಸುವಾಗ, ಆತನು ಅವುಗಳಲ್ಲಿ ತೀವ್ರಾಸಕ್ತಿಯನ್ನು ತೋರಿಸುತ್ತಾನೆಂದೂ ನಾವು ಕಲಿಯುತ್ತೇವೆ. ಆತನು “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದಾನೆ. (ಕೀರ್ತನೆ 65:2, 3) ಅಪೊಸ್ತಲ ಪೇತ್ರನು ನಮಗೆ ಭರವಸೆ ನೀಡುವುದು: “ಕರ್ತನು [ಯೆಹೋವನು] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ.” (1 ಪೇತ್ರ 3:12) ಅಲ್ಲದೆ, ಪಶ್ಚಾತ್ತಾಪದ ಪ್ರಾರ್ಥನೆಯಲ್ಲಿ ದೈನ್ಯಭಾವದ ಪಾಪನಿವೇದನೆಯು ಸೇರಿರಬೇಕೆಂದು ನಾವು ಕಲಿಯುತ್ತೇವೆ. (ಜ್ಞಾನೋಕ್ತಿ 28:13) ಆದರೆ, ನಾವು ದೇವರ ಕರುಣೆಯನ್ನು ದುರುಪಯೋಗಿಸಬಹುದೆಂದು ಇದರ ಅರ್ಥವಲ್ಲ. “ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರಿ” ಎಂದು ಬೈಬಲು ಕ್ರೈಸ್ತರನ್ನು ಎಚ್ಚರಿಸುತ್ತದೆ.—2 ಕೊರಿಂಥ 6:1.
18 ಕೊನೆಯದಾಗಿ, ತನ್ನ ಪಾಪಪೂರ್ಣ ಜನರ ಕಡೆಗೆ ದೇವರ ತಾಳ್ಮೆಯ ಉದ್ದೇಶವನ್ನು ನಾವು ತಿಳಿದುಕೊಳ್ಳುತ್ತೇವೆ. ಯೆಹೋವನು, ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿ’ದ್ದಾನೆಂದು ಅಪೊಸ್ತಲ ಪೇತ್ರನು ವಿವರಿಸಿದನು. (2 ಪೇತ್ರ 3:9) ಆದರೂ, ದೇವರ ತಾಳ್ಮೆಯನ್ನು ಪಟ್ಟುಹಿಡಿದು ದುರುಪಯೋಗಿಸುವವರು ಅಂತಿಮವಾಗಿ ಶಿಕ್ಷಿಸಲ್ಪಡುವರು. ಇದರ ಸಂಬಂಧದಲ್ಲಿ ನಾವು ಓದುವುದು: “ಆತನು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು. ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯಜೀವವನ್ನು ಕೊಡುವನು. ಯಾರು ಸ್ವೇಚ್ಛೆಯುಳ್ಳವರಾಗಿ ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ ಅವರಿಗೆ ಕೋಪ ರೌದ್ರಗಳು ಬರುವವು.”—ರೋಮಾಪುರ 2:6-8.
19. ಬದಲಾಗದಂತಹ ಯಾವ ಗುಣಗಳನ್ನು ಯೆಹೋವನು ಯಾವಾಗಲೂ ತೋರಿಸುವನು?
19 ದೇವರು ಪುರಾತನ ಕಾಲದ ಇಸ್ರಾಯೇಲ್ಯರೊಂದಿಗೆ ಇದೇ ರೀತಿ ವ್ಯವಹರಿಸಿದನು. ಯೆಹೋವನೊಂದಿಗೆ ಇಂದು ನಮಗಿರುವ ಸಂಬಂಧವನ್ನು ಸಹ ಇವೇ ಮೂಲತತ್ತ್ವಗಳು ನಿರ್ದೇಶಿಸುತ್ತವೆ. ಏಕೆಂದರೆ ಯೆಹೋವನು ಎಂದೂ ಬದಲಾಗುವವನಲ್ಲ. ಶಿಕ್ಷಾರ್ಹ ವಿಷಯಗಳಿಗೆ ಶಿಕ್ಷೆಕೊಡುವುದನ್ನು ಆತನು ತಡೆಯುವುದಿಲ್ಲವಾದರೂ, ಆತನು ಯಾವಾಗಲೂ “ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು” ಆಗಿರುವನು.—ವಿಮೋಚನಕಾಂಡ 34:6, 7.
[ಪುಟ 362ರಲ್ಲಿರುವ ಚೌಕ/ಚಿತ್ರಗಳು]
ದಾನಿಯೇಲನು ಮಾಡಿದ ಪಶ್ಚಾತ್ತಾಪದ ಪ್ರಾರ್ಥನೆ
ಪ್ರವಾದಿಯಾದ ದಾನಿಯೇಲನು ಬಾಬೆಲಿನಲ್ಲಿ ಯೆಹೂದಿ ಬಂಧಿವಾಸದ 70 ವರುಷಗಳಾದ್ಯಂತ ಜೀವಿಸಿದನು. ದೇಶಭ್ರಷ್ಟತೆಯ ಸುಮಾರು 68ನೆಯ ವರುಷದಲ್ಲಿ, ದಾನಿಯೇಲನು ಯೆರೆಮೀಯನ ಪ್ರವಾದನೆಯಿಂದ ಇಸ್ರಾಯೇಲಿನ ಬಾಬೆಲ್ ವಾಸವು ಮುಗಿಯುತ್ತಾ ಬಂದಿದೆ ಎಂಬುದನ್ನು ವಿವೇಚಿಸಿ ತಿಳಿದುಕೊಂಡನು. (ಯೆರೆಮೀಯ 25:11; 29:10; ದಾನಿಯೇಲ 9:1, 2) ಆಗ ದಾನಿಯೇಲನು ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗಿದನು. ಅದು ಇಡೀ ಯೆಹೂದಿ ಜನಾಂಗದ ಪರವಾಗಿ ಮಾಡಿದ ಪಶ್ಚಾತ್ತಾಪದ ಪ್ರಾರ್ಥನೆಯಾಗಿತ್ತು. ದಾನಿಯೇಲನು ಹೇಳುವುದು: “ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿಬಳಿದುಕೊಂಡು ಕರ್ತನಾದ [“ಯೆಹೋವ,” NW] ದೇವರ ಕಡೆಗೆ ಮುಖವೆತ್ತಿ ಪ್ರಾರ್ಥನೆವಿಜ್ಞಾಪನೆಗಳಲ್ಲಿ ನಿರತನಾದೆನು. ನನ್ನ ದೇವರಾದ ಯೆಹೋವನಿಗೆ ಹೀಗೆ ಪಾಪವನ್ನರಿಕೆ ಮಾಡಿ ಬಿನ್ನವಿಸಿದೆನು.”—ದಾನಿಯೇಲ 9:3, 4.
ತನ್ನ ಪುಸ್ತಕದ 63 ಮತ್ತು 64ನೆಯ ಅಧ್ಯಾಯಗಳಲ್ಲಿ ಯೆಶಾಯನು ತನ್ನ ಪ್ರವಾದನ ಪ್ರಾರ್ಥನೆಯನ್ನು ಬರೆದು, ಸುಮಾರು ಇನ್ನೂರು ವರುಷಗಳು ಕಳೆದ ಅನಂತರ ದಾನಿಯೇಲನು ತನ್ನ ಈ ಪ್ರಾರ್ಥನೆಯನ್ನು ಮಾಡಿದನು. ದೇಶಭ್ರಷ್ಟತೆಯ ಆ ಕಷ್ಟಕರ ವರುಷಗಳಲ್ಲಿ, ಯಥಾರ್ಥವಂತರಾದ ಅನೇಕ ಮಂದಿ ಯೆಹೂದ್ಯರು ನಿಸ್ಸಂದೇಹವಾಗಿಯೂ ಯೆಹೋವನಿಗೆ ಪ್ರಾರ್ಥಿಸಿದರು. ಆದರೂ, ಬೈಬಲು ದಾನಿಯೇಲನ ಪ್ರಾರ್ಥನೆಯನ್ನು ಎತ್ತಿಹೇಳುತ್ತದೆ. ಮತ್ತು ಇದು ಅನೇಕ ಮಂದಿ ನಂಬಿಗಸ್ತ ಯೆಹೂದ್ಯರ ಅನಿಸಿಕೆಗಳನ್ನು ಪ್ರತಿನಿಧಿಸಿತೆಂಬುದು ಸುವ್ಯಕ್ತ. ಹೀಗೆ, ಯೆಶಾಯನ ಪ್ರವಾದನ ಪ್ರಾರ್ಥನೆಯ ಅನಿಸಿಕೆಗಳು, ನಿಜವಾಗಿಯೂ ಬಾಬೆಲಿನಲ್ಲಿದ್ದ ನಂಬಿಗಸ್ತ ಯೆಹೂದ್ಯರ ಅನಿಸಿಕೆಗಳಾಗಿದ್ದವೆಂದು ದಾನಿಯೇಲನ ಪ್ರಾರ್ಥನೆಯು ತೋರಿಸುತ್ತದೆ.
ದಾನಿಯೇಲನ ಮತ್ತು ಯೆಶಾಯನ ಪ್ರಾರ್ಥನೆಗಳ ಮಧ್ಯೆಯಿದ್ದ ಕೆಲವು ಹೋಲಿಕೆಗಳನ್ನು ಗಮನಿಸಿ.
ಯೆಶಾಯ 64:10, 11 ದಾನಿಯೇಲ 9:16-18
[ಪುಟ 366ರಲ್ಲಿರುವ ಚೌಕ]
“ಕಣ್ಣು ಕಾಣಲಿಲ್ಲ”
ಕೊರಿಂಥದವರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಯೆಶಾಯನ ಪುಸ್ತಕದಿಂದ ಉಲ್ಲೇಖಿಸಿ ಹೀಗೆ ಬರೆದನು: “ಆದರೆ ಬರೆದಿರುವ ಪ್ರಕಾರ—ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.” (1 ಕೊರಿಂಥ 2:9)a ಆದರೆ ಪೌಲನ ಹೇಳಿಕೆಯಾಗಲಿ ಯೆಶಾಯನ ಅಭಿವ್ಯಕ್ತಿಗಳಾಗಲಿ, ಯೆಹೋವನು ಸ್ವರ್ಗೀಯ ಬಾಧ್ಯತೆಯಲ್ಲಿ ಇಲ್ಲವೆ ಭೂಮಿಯ ಮೇಲಿನ ಭಾವೀ ಪರದೈಸಿನಲ್ಲಿ ತನ್ನ ಜನರಿಗಾಗಿ ಸಿದ್ಧಪಡಿಸಿರುವ ಸಂಗತಿಗಳ ವಿಷಯವಾಗಿ ಮಾತಾಡುವುದಿಲ್ಲ. ಪೌಲನು ಯೆಶಾಯನ ಆ ಮಾತುಗಳನ್ನು, ಒಂದನೆಯ ಶತಮಾನದಲ್ಲಿ ಕ್ರೈಸ್ತರು ಆಗಲೇ ಅನುಭವಿಸುತ್ತಿದ್ದ ಆಶೀರ್ವಾದಗಳಿಗೆ, ದೇವರ ಹೆಚ್ಚು ಆಳವಾಗಿದ್ದ ಸಂಗತಿಗಳ ತಿಳಿವಳಿಕೆ ಮತ್ತು ಯೆಹೋವನಿಂದ ಬರುವ ಆತ್ಮಿಕ ಜ್ಞಾನೋದಯವನ್ನು ಪಡೆದುಕೊಳ್ಳುವಂತಹ ವಿಷಯಗಳಿಗೆ ಅನ್ವಯಿಸುತ್ತಿದ್ದಾನೆ.
ಗಾಢವಾದ ಆತ್ಮಿಕ ವಿಷಯಗಳನ್ನು, ಅವುಗಳನ್ನು ಪ್ರಕಟಪಡಿಸುವ ಯೆಹೋವನ ತಕ್ಕ ಸಮಯದಲ್ಲಿ ಮಾತ್ರ ನಾವು ತಿಳಿಯಬಲ್ಲೆವು, ಮತ್ತು ಅದು ಕೂಡ ನಾವು ಯೆಹೋವನೊಂದಿಗೆ ನಿಕಟ ಸಂಬಂಧವಿರುವ ಆತ್ಮಿಕ ಜನರಾಗಿರುವಲ್ಲಿ ಮಾತ್ರ. ಪೌಲನ ಮಾತುಗಳು ಕೊಂಚ ಆತ್ಮಿಕತೆ ಇರುವ ಅಥವಾ ಆತ್ಮಿಕತೆಯೇ ಇಲ್ಲದಿರುವ ಜನರಿಗೆ ಅನ್ವಯಿಸುತ್ತವೆ. ಅವರ ಕಣ್ಣು ಆತ್ಮಿಕ ಸತ್ಯಗಳನ್ನು ಕಾಣುವುದಿಲ್ಲ ಇಲ್ಲವೆ ವಿವೇಚಿಸಿ ತಿಳಿದುಕೊಳ್ಳುವುದಿಲ್ಲ, ಮತ್ತು ಅವರ ಕಿವಿ ಅಂತಹ ವಿಷಯಗಳನ್ನು ಆಲಿಸುವುದಿಲ್ಲ ಇಲ್ಲವೆ ಅರ್ಥಮಾಡಿಕೊಳ್ಳುವುದಿಲ್ಲ. ತನ್ನನ್ನು ಪ್ರೀತಿಸುವ ಜನರಿಗಾಗಿ ದೇವರು ಸಿದ್ಧಮಾಡಿರುವ ವಿಷಯಗಳ ಕುರಿತಾದ ಜ್ಞಾನವು, ಇಂತಹ ಜನರ ಹೃದಯದೊಳಗೆ ಹೋಗುವುದೇ ಇಲ್ಲ. ಆದರೆ ಪೌಲನಂತೆ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡವರಿಗೆ, ದೇವರು ತನ್ನ ಆತ್ಮದ ಮೂಲಕ ಇಂತಹ ಸಂಗತಿಗಳನ್ನು ತಿಳಿಯಪಡಿಸಿದ್ದಾನೆ.—1 ಕೊರಿಂಥ 2:1-16.
[ಪಾದಟಿಪ್ಪಣಿ]
a ಪೌಲನ ಮಾತುಗಳು, ಹೀಬ್ರು ಶಾಸ್ತ್ರಗಳಲ್ಲಿ ನಿರ್ದಿಷ್ಟವಾಗಿ ಅವನು ಉಲ್ಲೇಖಿಸಿರುವಂತೆಯೇ ಕಂಡುಬರುವುದಿಲ್ಲ. ಅವನು ಯೆಶಾಯ 52:15; 64:4; ಮತ್ತು 65:17ರ ವಿಚಾರಗಳನ್ನು ಕೂಡಿಸಿ ಬರೆದಿರುವಂತೆ ಕಾಣುತ್ತದೆ.
[ಪುಟ 367ರಲ್ಲಿರುವ ಚಿತ್ರ]
ದೇವಜನರಿಗೆ “ಸ್ವಲ್ಪಕಾಲ” ಯೆರೂಸಲೇಮ್ ಮತ್ತು ಅದರ ಆಲಯದ ಒಡೆತನವಿತ್ತು