ಅಧ್ಯಾಯ ಹದಿಮೂರು
ಮೆಸ್ಸೀಯನ ಆಳ್ವಿಕೆಯ ಕೆಳಗೆ ರಕ್ಷಣೆ ಮತ್ತು ಹರ್ಷೋಲ್ಲಾಸ
1. ಯೆಶಾಯನ ದಿನಗಳಲ್ಲಿ ದೇವರ ಒಡಂಬಡಿಕೆಯ ಜನರ ಆತ್ಮಿಕ ಪರಿಸ್ಥಿತಿಯನ್ನು ವರ್ಣಿಸಿರಿ.
ಯೆಶಾಯನ ದಿನಗಳಲ್ಲಿ, ಯೆಹೂದದಲ್ಲಿ ದೇವರ ಒಡಂಬಡಿಕೆಯ ಜನರ ಆತ್ಮಿಕ ಸ್ಥಿತಿಯು ತೀರ ಕೆಳಮಟ್ಟದ್ದಾಗಿತ್ತು. ಉಜ್ಜೀಯ ಮತ್ತು ಯೋತಾಮರಂತಹ ನಂಬಿಗಸ್ತ ರಾಜರ ಸಮಯದಲ್ಲೂ, ಅನೇಕ ಜನರು ಪೂಜಾಸ್ಥಳಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸಿದರು. (2 ಅರಸುಗಳು 15:1-4, 34, 35; 2 ಪೂರ್ವಕಾಲವೃತ್ತಾಂತ 26:1, 4) ಆದಕಾರಣ, ಹಿಜ್ಕೀಯನು ರಾಜನಾದಾಗ, ಬಾಳನ ಆರಾಧನೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಮತ್ತು ಆಚರಣೆಗಳನ್ನು ಆ ದೇಶದಿಂದ ತೆಗೆಯಬೇಕಾಯಿತು. (2 ಪೂರ್ವಕಾಲವೃತ್ತಾಂತ 31:1) ಇಂತಹ ಸುಳ್ಳಾರಾಧನೆಯನ್ನು ಬಿಟ್ಟು ತನ್ನ ಕಡೆಗೆ ಹಿಂದಿರುಗುವಂತೆ ಯೆಹೋವನು ತನ್ನ ಜನರಿಗೆ ಉತ್ತೇಜನ ನೀಡಿದ್ದು ಮಾತ್ರವಲ್ಲ, ಅವರು ಹಾಗೆ ಮಾಡದಿದ್ದಲ್ಲಿ ಬರಲಿರುವ ಶಿಕ್ಷೆಯ ಕುರಿತು ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದು ಆಶ್ಚರ್ಯಕರವೇನಲ್ಲ!
2, 3. ಅಪನಂಬಿಗಸ್ತಿಕೆಯು ವ್ಯಾಪಕವಾಗಿದ್ದರೂ ಯೆಹೋವನನ್ನು ಸೇವಿಸಲು ಬಯಸುವವರಿಗೆ ಆತನು ಯಾವ ಉತ್ತೇಜನವನ್ನು ನೀಡುತ್ತಾನೆ?
2 ಹಾಗಿದ್ದರೂ, ದೇವಜನರಲ್ಲಿ ಎಲ್ಲರೂ ದಂಗೆಕೋರರಾಗಿರುವುದಿಲ್ಲ. ಯೆಹೋವನಿಗೆ ನಂಬಿಗಸ್ತ ಪ್ರವಾದಿಗಳಿದ್ದರು ಮತ್ತು ಇವರ ಸಂದೇಶಕ್ಕೆ ಕೆಲವು ಯೆಹೂದ್ಯರು ಕಿವಿಗೊಟ್ಟಿದ್ದಿರಬಹುದು. ಇಂತಹವರಿಗೆ ಯೆಹೋವನು ಸಾಂತ್ವನ ನೀಡಿದನು. ಅಶ್ಶೂರ್ಯರು ಆಕ್ರಮಣಮಾಡಿದಾಗ ಯೆಹೂದವು ಅನುಭವಿಸಲಿರುವ ಭಯಂಕರವಾದ ಸುಲಿಗೆಯ ವಿವರಣೆಯನ್ನು ನೀಡಿದ ಬಳಿಕ, ಇಡೀ ಬೈಬಲಿನಲ್ಲೇ ಇರುವಂತಹ ಅತಿ ಸುಂದರವಾದ ಉದ್ಧರಣೆಗಳಲ್ಲೊಂದನ್ನು ಬರೆಯುವಂತೆ ಪ್ರವಾದಿಯಾದ ಯೆಶಾಯನು ಪ್ರೇರೇಪಿಸಲ್ಪಟ್ಟನು. ಇದು ಮೆಸ್ಸೀಯನ ಆಳ್ವಿಕೆಯ ಕೆಳಗೆ ಜನರು ಅನುಭವಿಸಲಿರುವ ಆಶೀರ್ವಾದಗಳ ವರ್ಣನೆಯಾಗಿದೆ.a ಯೆಹೂದ್ಯರು ಬಾಬೆಲಿನ ಸೆರೆವಾಸದಿಂದ ಹಿಂದಿರುಗಿದಾಗ, ಈ ಆಶೀರ್ವಾದಗಳ ಕೆಲವು ಅಂಶಗಳು ಚಿಕ್ಕ ಪ್ರಮಾಣದಲ್ಲಿ ನೆರವೇರಿದವು. ಆದರೆ ಇಂದು, ಈ ಇಡೀ ಪ್ರವಾದನೆಯು ಒಂದು ದೊಡ್ಡ ಪ್ರಮಾಣದಲ್ಲಿ ನೆರವೇರುತ್ತಿದೆ. ಈ ಆಶೀರ್ವಾದಗಳನ್ನು ಕಣ್ಣಾರೆ ಕಾಣಲು, ಯೆಶಾಯನಾಗಲಿ ಅವನ ಸಮಯದ ಇತರ ನಂಬಿಗಸ್ತ ಯೆಹೂದ್ಯರಾಗಲಿ ಬದುಕಿರಲಿಲ್ಲ, ನಿಜ. ಆದರೆ ಅವರು ನಂಬಿಕೆಯಿಂದ ಅವುಗಳಿಗಾಗಿ ಎದುರುನೋಡಿದರು ಮತ್ತು ಪುನರುತ್ಥಾನದ ನಂತರ ಯೆಶಾಯನ ಮಾತುಗಳ ನೆರವೇರಿಕೆಯನ್ನು ಕಣ್ಣಾರೆ ಕಾಣುವರು.—ಇಬ್ರಿಯ 11:35.
3 ಆಧುನಿಕ ದಿನದ ಯೆಹೋವನ ಜನರಿಗೂ ಉತ್ತೇಜನದ ಅಗತ್ಯವಿದೆ. ಏಕೆಂದರೆ, ಲೋಕದಲ್ಲಿ ಶರವೇಗದಲ್ಲಿ ಕೆಡುತ್ತಾ ಇರುವ ನೈತಿಕ ಮೌಲ್ಯಗಳು, ರಾಜ್ಯ ಸಂದೇಶಕ್ಕೆ ತೀವ್ರವಾದ ವಿರೋಧ ಮತ್ತು ವೈಯಕ್ತಿಕ ಬಲಹೀನತೆಗಳು ಅವರೆಲ್ಲರಿಗೂ ಒಂದು ಸವಾಲಾಗಿದೆ. ಮೆಸ್ಸೀಯ ಮತ್ತು ಅವನ ಆಳ್ವಿಕೆಯ ಕುರಿತಾದ ಯೆಶಾಯನ ಸೊಗಸಾದ ಮಾತುಗಳು, ದೇವಜನರನ್ನು ಬಲಪಡಿಸಿ, ಈ ಸವಾಲುಗಳನ್ನು ಎದುರಿಸಲು ಸಹಾಯಮಾಡುತ್ತವೆ.
ಮೆಸ್ಸೀಯ—ಒಬ್ಬ ಸಮರ್ಥ ನಾಯಕ
4, 5. ಮೆಸ್ಸೀಯನ ಬರುವಿಕೆಯ ಬಗ್ಗೆ ಯೆಶಾಯನು ಏನನ್ನು ಪ್ರವಾದಿಸಿದನು, ಮತ್ತು ಯೆಶಾಯನ ಮಾತುಗಳ ಯಾವ ಅನ್ವಯವನ್ನು ಮತ್ತಾಯನು ಮಾಡಿದನು?
4 ಯೆಶಾಯನಿಗಿಂತ ಅನೇಕ ಶತಮಾನಗಳ ಮುಂಚೆಯೇ, ಬೈಬಲಿನ ಇತರ ಹೀಬ್ರು ಬರಹಗಾರರು ಮೆಸ್ಸೀಯನ ಬರುವಿಕೆಯ ಕುರಿತು ತಿಳಿಸಿದರು. ಇವನು, ಇಸ್ರಾಯೇಲ್ ದೇಶಕ್ಕೆ ಯೆಹೋವನು ಕಳುಹಿಸಲಿದ್ದ ನಿಜವಾದ ನಾಯಕನಾಗಿದ್ದನು. (ಆದಿಕಾಂಡ 49:10; ಧರ್ಮೋಪದೇಶಕಾಂಡ 18:18; ಕೀರ್ತನೆ 118:22, 26) ಈಗ ಯೆಶಾಯನ ಮೂಲಕ ಯೆಹೋವನು ಹೆಚ್ಚಿನ ವಿವರಗಳನ್ನು ನೀಡುತ್ತಾನೆ. ಯೆಶಾಯನು ಬರೆಯುವುದು: “ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು.” (ಯೆಶಾಯ 11:1; ಹೋಲಿಸಿ ಕೀರ್ತನೆ 132:11.) ಮೆಸ್ಸೀಯನು, ಇಷಯನ ಮಗನಾದ ದಾವೀದನ ವಂಶಜ ಆಗಿರುವನೆಂದು “ಚಿಗುರು” ಮತ್ತು “ತಳಿರು” ಎಂಬ ಎರಡೂ ಪದಗಳು ಸೂಚಿಸುತ್ತವೆ. ಈ ದಾವೀದನು ಇಸ್ರಾಯೇಲಿನ ರಾಜನಾಗಿ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟಿದ್ದನು. (1 ಸಮುವೇಲ 16:13; ಯೆರೆಮೀಯ 23:5; ಪ್ರಕಟನೆ 22:16) ಮತ್ತು ನಿಜವಾದ ಮೆಸ್ಸೀಯನು ಆಗಮಿಸುವಾಗ, ದಾವೀದನ ಮನೆತನದಿಂದ ಬಂದ ಈ “ಚಿಗುರು” ಒಳ್ಳೆಯ ಫಲವನ್ನು ನೀಡಲಿದೆ.
5 ಈ ವಾಗ್ದತ್ತ ಮೆಸ್ಸೀಯನೇ ಯೇಸು. ಅವನು “ನಜರಾಯ”ನೆಂದು ಕರೆಯಲ್ಪಡುವ ಮೂಲಕ ಪ್ರವಾದಿಗಳ ಮಾತುಗಳನ್ನು ನೆರವೇರಿಸುವನು ಎಂಬುದಾಗಿ ಸುವಾರ್ತಾ ಬರಹಗಾರನಾದ ಮತ್ತಾಯನು ಹೇಳಿದಾಗ, ಯೆಶಾಯ 11:1ರಲ್ಲಿರುವ ಮಾತುಗಳನ್ನು ಅವನು ಸೂಚಿಸುತ್ತಿದ್ದನು. ಯೇಸು ನಜರೇತೆಂಬ ಊರಿನಲ್ಲಿ ಬೆಳೆದು ದೊಡ್ಡವನಾದುದರಿಂದ, ನಜರಾಯನೆಂದು ಕರೆಯಲ್ಪಟ್ಟನು. ಈ ಹೆಸರು, ಯೆಶಾಯ 11:1ರಲ್ಲಿ “ತಳಿರು” ಎಂಬ ಪದಕ್ಕಾಗಿ ಉಪಯೋಗಿಸಲ್ಪಟ್ಟ ಹೀಬ್ರು ಪದಕ್ಕೆ ಸಂಬಂಧಿಸಿದೆ.b—ಮತ್ತಾಯ 2:23, NW ಪಾದಟಿಪ್ಪಣಿ; ಲೂಕ 2:39, 40.
6. ಮೆಸ್ಸೀಯನು ಯಾವ ರೀತಿಯ ಅರಸನಾಗಿರುವನೆಂದು ಪ್ರವಾದಿಸಲಾಗಿದೆ?
6 ಮೆಸ್ಸೀಯನು ಯಾವ ರೀತಿಯ ಅರಸನಾಗಿರುವನು? ಅವನು, ಇಸ್ರಾಯೇಲಿನ ಹತ್ತು ಗೋತ್ರಗಳ ಉತ್ತರ ರಾಜ್ಯವನ್ನು ನಾಶಮಾಡುವ, ಕ್ರೂರ ಹಾಗೂ ಹಟಮಾರಿ ಅಶ್ಶೂರ್ಯನಂತೆ ಇರುವನೊ? ಖಂಡಿತವಾಗಿಯೂ ಇಲ್ಲ. ಮೆಸ್ಸೀಯನ ಕುರಿತು ಯೆಶಾಯನು ಹೇಳುವುದು: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು.” (ಯೆಶಾಯ 11:2, 3ಎ) ಮೆಸ್ಸೀಯನು ಎಣ್ಣೆಯಿಂದಲ್ಲ, ದೇವರ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟನು. ಇದು ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ನಡೆಯಿತು. ಆಗ ದೇವರ ಪವಿತ್ರಾತ್ಮವು ಪಾರಿವಾಳದ ಆಕಾರದಲ್ಲಿ ಯೇಸುವಿನ ಮೇಲೆ ಇಳಿಯುವುದನ್ನು ಸ್ನಾನಿಕನಾದ ಯೋಹಾನನು ನೋಡಿದನು. (ಲೂಕ 3:22) ಹೀಗೆ ಯೆಹೋವನ ಆತ್ಮವು ಯೇಸುವಿನ ಮೇಲೆ ‘ನೆಲೆಗೊಳ್ಳುತ್ತದೆ.’ ಆಗ ಅವನು ವಿವೇಕ, ತಿಳುವಳಿಕೆ, ವಿವೇಚನೆ, ಸಾಮರ್ಥ್ಯ ಮತ್ತು ಜ್ಞಾನದಿಂದ ಕ್ರಿಯೆಗೈದು, ದೇವರ ಆತ್ಮ ಅವನಲ್ಲಿರುವ ಪುರಾವೆಯನ್ನು ನೀಡುತ್ತಾನೆ. ಒಬ್ಬ ಅರಸನಲ್ಲಿರಬೇಕಾದ ಎಂತಹ ಅತ್ಯುತ್ಕೃಷ್ಟ ಗುಣಗಳು!
7. ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಯಾವ ವಾಗ್ದಾನವನ್ನು ಕೊಟ್ಟನು?
7 ಯೇಸುವಿನ ಹಿಂಬಾಲಕರು ಕೂಡ ಪವಿತ್ರಾತ್ಮವನ್ನು ಪಡೆದುಕೊಳ್ಳಸಾಧ್ಯವಿದೆ. ಯೇಸು ತನ್ನ ಉಪದೇಶಗಳಲ್ಲೊಂದರಲ್ಲಿ ಹೇಳಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:13) ಆದುದರಿಂದ, ದೇವರಲ್ಲಿ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳಲು ನಾವೆಂದಿಗೂ ಹಿಂಜರಿಯಬಾರದು. “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ಅದರ ಹಿತಕರವಾದ ಫಲಗಳನ್ನು ಬೆಳೆಸಿಕೊಳ್ಳುತ್ತಾ ಇರಬೇಕು. (ಗಲಾತ್ಯ 5:22, 23) ಯೇಸುವಿನ ಹಿಂಬಾಲಕರು ಜೀವಿತದ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಲು “ಮೇಲಣಿಂದ ಬರುವ ಜ್ಞಾನ”ಕ್ಕಾಗಿ ಕೇಳಿಕೊಂಡರೆ, ಅದನ್ನು ಕೊಡುವುದಾಗಿ ಯೆಹೋವನು ವಾಗ್ದಾನಿಸುತ್ತಾನೆ.—ಯಾಕೋಬ 1:5; 3:17.
8. ಯೇಸು, ಯೆಹೋವನ ಭಯದಲ್ಲಿ ಆನಂದವನ್ನು ಕಂಡುಕೊಳ್ಳುವುದು ಹೇಗೆ?
8 ಮೆಸ್ಸೀಯನು ವ್ಯಕ್ತಪಡಿಸುವ ಯೆಹೋವನ ಭಯವು ಏನಾಗಿದೆ? ಯೇಸು ಖಂಡಿತವಾಗಿಯೂ ದೇವರಿಂದ ಬರಬಹುದಾದ ಖಂಡನೆಗೆ ಭಯಪಟ್ಟು, ಥರಥರನೆ ನಡುಗುವುದಿಲ್ಲ. ಬದಲಿಗೆ, ಮೆಸ್ಸೀಯನಿಗೆ ದೇವರ ಬಗ್ಗೆ ಆಳವಾದ ಗೌರವವೂ ಪೂಜ್ಯಭಾವನೆಯೂ ಇದೆ. ದೇವರಿಗೆ ಭಯಪಡುವ ಒಬ್ಬ ವ್ಯಕ್ತಿಯು “ಆತನಿಗೆ ಮೆಚ್ಚಿಕೆಯಾದದ್ದನ್ನು” ಮಾಡಲು ಸದಾ ಬಯಸುತ್ತಾನೆ. ಯೇಸು ಅದನ್ನೇ ಮಾಡುತ್ತಾನೆ. (ಯೋಹಾನ 8:29) ಯೆಹೋವನ ಹಿತಕರ ಭಯದಲ್ಲಿ ಪ್ರತಿದಿನ ನಡೆಯುವುದಕ್ಕಿಂತಲೂ ಹೆಚ್ಚಿನ ಆನಂದ ಬೇರೆ ಯಾವುದರಲ್ಲೂ ಇಲ್ಲವೆಂದು ಯೇಸು ನಡೆನುಡಿ ಮತ್ತು ಮಾದರಿಯ ಮೂಲಕ ಕಲಿಸುತ್ತಾನೆ.
ನ್ಯಾಯವಂತನೂ ದಯಾಪರನೂ ಆದ ನ್ಯಾಯಾಧಿಪತಿ
9. ಕ್ರೈಸ್ತ ಸಭೆಯಲ್ಲಿ ನ್ಯಾಯವಿಚಾರಣೆಗಳನ್ನು ಮಾಡಲು ನೇಮಿತರಾದವರಿಗೆ ಯೇಸು ಯಾವ ಮಾದರಿಯನ್ನಿಟ್ಟಿದ್ದಾನೆ?
9 ಮೆಸ್ಸೀಯನ ಗುಣವೈಶಿಷ್ಟ್ಯಗಳ ಬಗ್ಗೆ ಹೆಚ್ಚನ್ನು ಯೆಶಾಯನು ಮುಂತಿಳಿಸುವುದು: “ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ.” (ಯೆಶಾಯ 11:3ಬಿ) ನೀವು ನ್ಯಾಯಾಲಯದ ಕಟಕಟೆಯಲ್ಲಿ ನಿಂತುಕೊಳ್ಳುವ ಪ್ರಸಂಗ ಬಂದಿದ್ದರೆ, ಇಂತಹ ಒಬ್ಬ ನ್ಯಾಯಾಧಿಪತಿಗಾಗಿ ನೀವು ಕೃತಜ್ಞರಾಗಿರುತ್ತಿರಲಿಲ್ಲವೊ? ಇಡೀ ಮಾನವವರ್ಗದ ನ್ಯಾಯಾಧಿಪತಿಯಾಗಿರುವ ಮೆಸ್ಸೀಯನು, ಸುಳ್ಳು ವಾಗ್ವಾದಗಳು, ಚತುರ ವಕ್ರತನಗಳು, ಗಾಳಿಸುದ್ದಿಗಳು ಇಲ್ಲವೆ ಹಣದಂತಹ ಅಂಶಗಳಿಂದ ಪ್ರಭಾವಿತನಾಗುವುದಿಲ್ಲ. ಕಪಟತನವು ಅವನಿಗೆ ಮರೆಯಾಗಿರದು. ಹುಸಿಯಾಗಿರಬಹುದಾದ ಹೊರತೋರಿಕೆಗಳನ್ನಲ್ಲ, ಬದಲಿಗೆ “ಶಾಂತಮನಸ್ಸು ಎಂಬ ಒಳಗಣ ಭೂಷಣ”ವನ್ನು ಅಂದರೆ “ಒಳಗಿನ ಮನುಷ್ಯ”ನನ್ನು ಅವನು ಗುರುತಿಸುತ್ತಾನೆ. (1 ಪೇತ್ರ 3:4, NW ಪಾದಟಿಪ್ಪಣಿ) ಯೇಸುವಿನ ಈ ಅತಿಶ್ರೇಷ್ಠ ಉದಾಹರಣೆಯು, ಕ್ರೈಸ್ತ ಸಭೆಯಲ್ಲಿ ನ್ಯಾಯವಿಚಾರಣೆಗಳನ್ನು ಮಾಡಬೇಕಾಗುವ ಸಕಲರಿಗೂ ಒಂದು ಮಾದರಿಯಾಗಿರುತ್ತದೆ.—1 ಕೊರಿಂಥ 6:1-4.
10, 11. (ಎ) ಯಾವ ರೀತಿಯಲ್ಲಿ ಯೇಸು ತನ್ನ ಹಿಂಬಾಲಕರನ್ನು ತಿದ್ದುತ್ತಾನೆ? (ಬಿ) ಯೇಸು ದುಷ್ಟರಿಗೆ ಯಾವ ನ್ಯಾಯತೀರ್ಪನ್ನು ವಿಧಿಸುತ್ತಾನೆ?
10 ಯೇಸುವಿನ ಈ ಅತಿಶ್ರೇಷ್ಠ ಗುಣಗಳು ಅವನ ನ್ಯಾಯನಿರ್ಣಯಗಳನ್ನು ಹೇಗೆ ಪ್ರಭಾವಿಸುವವು? ಯೆಶಾಯನು ವಿವರಿಸುವುದು: “ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು; ಲೋಕವನ್ನು ತನ್ನ ಬಾಯ ದಂಡದಿಂದ ದಂಡಿಸುವನು, ದುಷ್ಟರನ್ನು ತನ್ನ ಬಾಯುಸುರಿನಿಂದ ಕೊಲ್ಲುವನು. ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.”—ಯೆಶಾಯ 11:4, 5.
11 ಯೇಸು ತನ್ನ ಶಿಷ್ಯರನ್ನು ತಿದ್ದಬೇಕಾದಾಗ, ಅವರು ಅದರಿಂದ ಅತಿಯಾದ ಪ್ರಯೋಜನವನ್ನು ಪಡೆದುಕೊಳ್ಳುವ ರೀತಿಯಲ್ಲೇ ಅದನ್ನು ನೀಡುತ್ತಾನೆ. ಇದು ಕ್ರೈಸ್ತ ಹಿರಿಯರಿಗೆ ಒಂದು ಅತ್ಯುತ್ಕೃಷ್ಟ ಮಾದರಿಯಾಗಿದೆ. ಮತ್ತೊಂದು ಕಡೆ, ದುಷ್ಟತನದಲ್ಲಿ ಭಾಗಿಗಳಾಗುವವರಿಗೆ ಅವನು ಕಠಿನವಾದ ನ್ಯಾಯತೀರ್ಪನ್ನು ವಿಧಿಸಬಹುದು. ದೇವರು ಈ ವಿಷಯಗಳ ವ್ಯವಸ್ಥೆಯಿಂದ ಲೆಕ್ಕವನ್ನು ಕೇಳಿಕೊಳ್ಳುವಾಗ, ಮೆಸ್ಸೀಯನು ತನ್ನ ಅಧಿಕಾರಯುಕ್ತ ವಾಣಿಯಿಂದ ಎಲ್ಲ ದುಷ್ಟರಿಗೆ ನಾಶನದ ತೀರ್ಪನ್ನು ನೀಡುತ್ತಾ “ಜನಾಂಗಗಳನ್ನು ಹೊಡೆಯು”ವನು. (ಕೀರ್ತನೆ 2:9; ಹೋಲಿಸಿ ಪ್ರಕಟನೆ 19:15.) ಕಟ್ಟಕಡೆಗೆ, ಮಾನವವರ್ಗದ ಶಾಂತಿಯನ್ನು ಕದಡಿಸಲು ಯಾವ ದುಷ್ಟರೂ ಇರಲಾರರು. (ಕೀರ್ತನೆ 37:10, 11) ನ್ಯಾಯ ಮತ್ತು ನಂಬಿಗಸ್ತಿಕೆಯನ್ನು ಸೊಂಟಕ್ಕೆ ಕಟ್ಟಿಕೊಂಡಿರುವ ಯೇಸು, ಇದನ್ನು ಸಾಧಿಸುವ ಅಧಿಕಾರವನ್ನು ಪಡೆದಿದ್ದಾನೆ.—ಕೀರ್ತನೆ 45:3-7.
ಭೂಮಿಯ ಮೇಲೆ ಬದಲಾದ ಪರಿಸ್ಥಿತಿಗಳು
12. ಯೆಹೂದ್ಯನೊಬ್ಬನು ಬಾಬೆಲಿನಿಂದ ವಾಗ್ದತ್ತ ದೇಶಕ್ಕೆ ಹಿಂದಿರುಗುವುದರ ಬಗ್ಗೆ ಯೋಚಿಸುವಾಗ, ಅವನು ಯಾವುದರ ಬಗ್ಗೆ ಚಿಂತಿಸಬಹುದು?
12 ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಿ ದೇವಾಲಯವನ್ನು ಪುನಃ ಕಟ್ಟಬೇಕೆಂಬ ಕೋರೆಷನ ಆಜ್ಞೆಯ ಬಗ್ಗೆ, ಈಗ ತಾನೇ ತಿಳಿದುಕೊಂಡಿರುವ ಒಬ್ಬ ಇಸ್ರಾಯೇಲ್ಯನನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಬಾಬೆಲಿನ ಭದ್ರತೆಯನ್ನು ತೊರೆದು, ಅವನೊಂದು ದೀರ್ಘ ಪ್ರಯಾಣವನ್ನು ಕೈಗೊಳ್ಳುವನೊ? ಇಸ್ರಾಯೇಲ್ಯರ 70 ವರ್ಷಗಳ ಗೈರುಹಾಜರಿಯಲ್ಲಿ, ಇಸ್ರಾಯೇಲಿನ ಹೊಲಗದ್ದೆಗಳು ಕಳೆಗಳಿಂದ ತುಂಬಿವೆ. ಈ ಹೊಲಗದ್ದೆಗಳಲ್ಲಿ ತೋಳಗಳು, ಚಿರತೆಗಳು, ಸಿಂಹಗಳು ಮತ್ತು ಕರಡಿಗಳು ಯಾರ ಭಯವೂ ಇಲ್ಲದೆ ಅಲೆದಾಡುತ್ತಿವೆ. ನಾಗರ ಹಾವುಗಳೂ ಅಲ್ಲಿ ಬೀಡುಮಾಡಿಕೊಂಡಿವೆ. ಹಿಂದಿರುಗುತ್ತಿರುವ ಯೆಹೂದ್ಯರು ತಮ್ಮ ಬದುಕಿಗಾಗಿ ಸಾಕು ಪ್ರಾಣಿಗಳ ಮೇಲೆಯೇ ಅವಲಂಬಿಸಬೇಕು. ದನಕುರಿಗಳು ಅವರಿಗೆ ಹಾಲು, ಉಣ್ಣೆ ಮತ್ತು ಮಾಂಸವನ್ನು ನೀಡುವವು. ಎತ್ತುಗಳು ನೆಲವನ್ನು ಉಳುವವು. ಆದರೆ ಕಾಡುಪ್ರಾಣಿಗಳು ಇವನ್ನು ಕೊಂದು ತಿಂದುಬಿಡಲಾರವೊ? ಹಾವುಗಳು ಚಿಕ್ಕ ಮಕ್ಕಳನ್ನು ಕಚ್ಚದೆ ಬಿಡುವವೊ? ಪ್ರಯಾಣಮಾಡುವಾಗ ಕಳ್ಳರ ಅಪಾಯದ ಕುರಿತೇನು?
13. (ಎ) ಯಾವ ಮನಮುಟ್ಟುವ ಚಿತ್ರಣವನ್ನು ಯೆಶಾಯನು ಚಿತ್ರಿಸುತ್ತಾನೆ? (ಬಿ) ಯೆಶಾಯನು ವರ್ಣಿಸುವಂತಹ ಶಾಂತಿಯು, ಕಾಡು ಪ್ರಾಣಿಗಳಿಂದ ಸುರಕ್ಷಿತರಾಗಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆಂದು ನಮಗೆ ಹೇಗೆ ಗೊತ್ತು?
13 ಆದರೆ ದೇವರು ಆ ದೇಶದಲ್ಲಿ ಸ್ಥಾಪಿಸಲಿರುವ ಪರಿಸ್ಥಿತಿಗಳ ಮನಮುಟ್ಟುವ ಚಿತ್ರಣವನ್ನು ಯೆಶಾಯನು ವರ್ಣಿಸುತ್ತಾನೆ. ಅವನು ಹೇಳುವುದು: “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು. ಹಸುವು ಕರಡಿಯು ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:6-9) ಈ ಮಾತುಗಳು ಹೃದಯಸ್ಪರ್ಶಿಯಾಗಿವೆಯಲ್ಲವೊ? ಇಲ್ಲಿ ವರ್ಣಿಸಲ್ಪಟ್ಟ ಪ್ರಾಣಿಗಳ ನಡುವಣ ಶಾಂತಿಯು ಯೆಹೋವನ ಜ್ಞಾನದಿಂದ ಬರುತ್ತದೆ ಎಂಬುದನ್ನು ಗಮನಿಸಿರಿ. ಆದುದರಿಂದ, ಇದು ಕೇವಲ ಕಾಡು ಪ್ರಾಣಿಗಳಿಂದ ಸುರಕ್ಷಿತರಾಗಿರುವುದನ್ನು ಮಾತ್ರವಲ್ಲ, ಇನ್ನೂ ಹೆಚ್ಚಿನದ್ದನ್ನು ಒಳಗೊಂಡಿದೆ. ಯೆಹೋವನ ಜ್ಞಾನವು ಪ್ರಾಣಿಗಳನ್ನು ಬದಲಾಯಿಸಲಾರದು ನಿಜ, ಆದರೆ ಅದು ಜನರನ್ನು ಪ್ರಭಾವಿಸಬಲ್ಲದು. ಆದಕಾರಣ, ಇಸ್ರಾಯೇಲ್ಯರು ಪ್ರಯಾಣದಲ್ಲಾಗಲಿ ತಮ್ಮ ಪುನಸ್ಸ್ಥಾಪಿತ ದೇಶದಲ್ಲಾಗಲಿ ಮೃಗಗಳಿಗೆ ಇಲ್ಲವೆ ಮೃಗದಂತಹ ಸ್ವಭಾವವುಳ್ಳ ಜನರಿಗೆ ಭಯಪಡುವ ಅಗತ್ಯವಿಲ್ಲ.—ಎಜ್ರ 8:21, 22; ಯೆಶಾಯ 35:8-10; 65:25.
14. ಯೆಶಾಯ 11:6-9ರ ದೊಡ್ಡ ನೆರವೇರಿಕೆಯು ಏನಾಗಿದೆ?
14 ಈ ಪ್ರವಾದನೆಗೆ ಒಂದು ದೊಡ್ಡ ಪ್ರಮಾಣದ ನೆರವೇರಿಕೆಯೂ ಇದೆ. 1914ರಲ್ಲಿ ಮೆಸ್ಸೀಯನಾದ ಯೇಸು, ಸ್ವರ್ಗೀಯ ಚೀಯೋನ್ ಪರ್ವತದ ಮೇಲೆ ಸಿಂಹಾಸನಾರೂಢನಾದನು. 1919ರಲ್ಲಿ ‘ದೇವರ ಇಸ್ರಾಯೇಲಿನ’ ಉಳಿಕೆಯವರು ಬಾಬೆಲಿನ ಸೆರೆವಾಸದಿಂದ ಬಿಡುಗಡೆ ಹೊಂದಿ, ಸತ್ಯಾರಾಧನೆಯ ಪುನಸ್ಸ್ಥಾಪನೆಯಲ್ಲಿ ಭಾಗವಹಿಸಿದರು. (ಗಲಾತ್ಯ 6:16) ಹೀಗೆ, ಪರದೈಸಿನ ಕುರಿತಾದ ಯೆಶಾಯನ ಪ್ರವಾದನೆಯು ಆಧುನಿಕ ದಿನದಲ್ಲಿ ನೆರವೇರಿಕೆಯನ್ನು ಕಾಣತೊಡಗಿತು. ಯೆಹೋವನ ಜ್ಞಾನ, ಅಂದರೆ “ನಿಷ್ಕೃಷ್ಟ ಜ್ಞಾನ”ವು (NW) ಜನರ ವ್ಯಕ್ತಿತ್ವಗಳನ್ನು ಬದಲಾಯಿಸುತ್ತಿದೆ. (ಕೊಲೊಸ್ಸೆ 3:9, 10) ಈ ಹಿಂದೆ ಹಿಂಸಾತ್ಮಕರಾಗಿದ್ದ ಜನರು ಈಗ ಶಾಂತಸ್ವಭಾವದವರಾಗಿದ್ದಾರೆ. (ರೋಮಾಪುರ 12:2; ಎಫೆಸ 4:17-24) ಯೆಶಾಯನ ಪ್ರವಾದನೆಯು ಭೂನಿರೀಕ್ಷೆಯುಳ್ಳ ಅನೇಕಾನೇಕ ಕ್ರೈಸ್ತರನ್ನು ಒಳಗೂಡಿಸುತ್ತಿರುವುದರಿಂದ, ಈ ಎಲ್ಲ ಬದಲಾವಣೆಗಳು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿವೆ. (ಕೀರ್ತನೆ 37:29; ಯೆಶಾಯ 60:22) ಇಡೀ ಭೂಮಿಯು ದೇವರ ಮೂಲ ಉದ್ದೇಶಕ್ಕನುಸಾರ ಒಂದು ಸುರಕ್ಷಿತ, ಶಾಂತಿಭರಿತ ಪರದೈಸಾಗಿ ಪುನಸ್ಸ್ಥಾಪಿಸಲ್ಪಡಲಿರುವ ಸಮಯಕ್ಕಾಗಿ ಇವರು ಎದುರುನೋಡುತ್ತಾರೆ.—ಮತ್ತಾಯ 6:9, 10; 2 ಪೇತ್ರ 3:13.
15. ಹೊಸ ಲೋಕದಲ್ಲಿ ಯೆಶಾಯನ ಮಾತುಗಳ ಅಕ್ಷರಾರ್ಥ ನೆರವೇರಿಕೆಯನ್ನು ನಾವು ನಿರೀಕ್ಷಿಸುವುದು ನ್ಯಾಯೋಚಿತವಾಗಿರುವುದೊ? ವಿವರಿಸಿರಿ.
15 ಪುನಸ್ಸ್ಥಾಪಿತ ಪರದೈಸಿನಲ್ಲಿ, ಯೆಶಾಯನ ಪ್ರವಾದನೆಯು ಇನ್ನೂ ಹೆಚ್ಚಿನ, ಅಂದರೆ ಅಕ್ಷರಾರ್ಥ ನೆರವೇರಿಕೆಯನ್ನೂ ಕಾಣುವುದೊ? ಹಾಗೆಂದು ನೆನಸುವುದು ನ್ಯಾಯೋಚಿತವಾಗಿದೆ. ಈ ಪ್ರವಾದನೆಯು, ಹಿಂದಿರುಗುತ್ತಿದ್ದ ಇಸ್ರಾಯೇಲ್ಯರಿಗೆ ಯಾವ ಆಶ್ವಾಸನೆಯನ್ನು ಕೊಟ್ಟಿತೊ ಅದೇ ಆಶ್ವಾಸನೆಯನ್ನು ಮೆಸ್ಸೀಯನ ಆಳ್ವಿಕೆಯ ಕೆಳಗೆ ಜೀವಿಸಲಿರುವ ಸಕಲರಿಗೂ ಕೊಡುತ್ತದೆ. ಅವರು ಮತ್ತು ಅವರ ಮಕ್ಕಳು ಮನುಷ್ಯನಿಂದಾಗಲಿ ಪ್ರಾಣಿಯಿಂದಾಗಲಿ ಬೆದರಿಸಲ್ಪಡಲಾರರು ಎಂಬುದೇ ಆ ಆಶ್ವಾಸನೆಯಾಗಿದೆ. ಮೆಸ್ಸೀಯನ ರಾಜ್ಯದಾಳಿಕೆಯ ಕೆಳಗೆ ಎಲ್ಲ ಭೂನಿವಾಸಿಗಳು, ಆದಾಮಹವ್ವರು ಏದೆನ್ ತೋಟದಲ್ಲಿ ಅನುಭವಿಸಿದಂತಹ ಶಾಂತಿಭರಿತ ಪರಿಸ್ಥಿತಿಗಳನ್ನೇ ಅನುಭವಿಸುವರು. ಏದೆನ್ ತೋಟದಲ್ಲಿ ಜೀವನವು ಹೇಗಿತ್ತು ಇಲ್ಲವೆ ಪರದೈಸಿನಲ್ಲಿ ಜೀವನವು ಹೇಗಿರುವುದೆಂಬುದರ ಎಲ್ಲ ವಿವರಗಳನ್ನು ಶಾಸ್ತ್ರವಚನಗಳು ನೀಡುವುದಿಲ್ಲ. ಆದರೆ ರಾಜ ಯೇಸು ಕ್ರಿಸ್ತನ ವಿವೇಕಪ್ರದ ಹಾಗೂ ಪ್ರೀತಿಯ ಆಳ್ವಿಕೆಯಲ್ಲಿ, ಎಲ್ಲವೂ ಹೇಗಿರಬೇಕೊ ಹಾಗೆಯೇ ಇರುವವು ಎಂಬ ಖಾತ್ರಿ ನಮಗಿರಸಾಧ್ಯವಿದೆ.
ಮೆಸ್ಸೀಯನ ಮೂಲಕ ಪುನಸ್ಸ್ಥಾಪಿಸಲ್ಪಟ್ಟ ಶುದ್ಧಾರಾಧನೆ
16. ಸಾ.ಶ.ಪೂ. 537ರಲ್ಲಿ, ದೇವಜನರಿಗೆ ಒಂದು ಗುರುತಾಗಿ ಕಾರ್ಯಮಾಡಿದ್ದು ಯಾವುದು?
16 ಏದೆನ್ ತೋಟದಲ್ಲಿ ಸೈತಾನನು ಆದಾಮಹವ್ವರ ಮೇಲೆ ಸಫಲಪೂರ್ಣವಾಗಿ ಪ್ರಭಾವ ಬೀರಿ, ಅವರು ಯೆಹೋವನಿಗೆ ಅವಿಧೇಯರಾಗುವಂತೆ ಮಾಡಿದನು. ಆಗ ಶುದ್ಧಾರಾಧನೆಯು ಪ್ರಥಮ ಬಾರಿ ಆಕ್ರಮಣಕ್ಕೊಳಗಾಯಿತು. ಈ ದಿನದ ವರೆಗೂ, ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ದೇವರಿಂದ ತಿರುಗಿಸುವ ತನ್ನ ಗುರಿಯನ್ನು ಸೈತಾನನು ಕೈಬಿಟ್ಟಿಲ್ಲ. ಆದರೆ ಶುದ್ಧಾರಾಧನೆಯು ಭೂಮಿಯಿಂದ ಕಣ್ಮರೆಯಾಗುವಂತೆ ಯೆಹೋವನು ಎಂದಿಗೂ ಅನುಮತಿಸಲಾರನು. ಆತನ ಹೆಸರೂ ಅದರಲ್ಲಿ ಒಳಗೂಡಿದೆ, ಮತ್ತು ಆತನನ್ನು ಸೇವಿಸುವವರ ಬಗ್ಗೆ ಆತನು ಚಿಂತೆಯುಳ್ಳವನಾಗಿದ್ದಾನೆ. ಆದಕಾರಣ, ಯೆಶಾಯನ ಮೂಲಕ ಆತನೊಂದು ಗಮನಾರ್ಹವಾದ ವಾಗ್ದಾನವನ್ನು ಮಾಡುತ್ತಾನೆ: “ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಮಸ್ಥಾನವು ವೈಭವವುಳ್ಳದ್ದಾಗಿರುವದು.” (ಯೆಶಾಯ 11:10) ಸಾ.ಶ.ಪೂ. 537ರಲ್ಲಿ, ದಾವೀದನ ದೇಶದ ರಾಜಧಾನಿಯಾಗಿದ್ದ ಯೆರೂಸಲೇಮ್, ಒಂದು ಗುರುತಾಗಿ ಕಾರ್ಯಮಾಡಿತು. ಅದು ಚದುರಿಹೋಗಿದ್ದ ಯೆಹೂದ್ಯರ ಮಧ್ಯದಿಂದ ನಂಬಿಗಸ್ತ ಉಳಿಕೆಯವರಿಗೆ ಕರೆನೀಡಿ, ಅವರು ಹಿಂದಿರುಗಿ ಬಂದು ದೇವಾಲಯವನ್ನು ಪುನಃ ಕಟ್ಟುವಂತೆ ಪ್ರೇರೇಪಿಸಿತು.
17. ಯೇಸು ಪ್ರಥಮ ಶತಮಾನದಲ್ಲಿ ಮತ್ತು ನಮ್ಮ ದಿನದಲ್ಲಿ ‘ಜನಾಂಗಗಳನ್ನು ಆಳಲು ಬಂದದ್ದು’ ಹೇಗೆ?
17 ಆದರೆ, ಈ ಪ್ರವಾದನೆಯು ಇನ್ನೂ ಹೆಚ್ಚಿನ ವಿಷಯವನ್ನು ಸೂಚಿಸುತ್ತದೆ. ಈಗಾಗಲೇ ಗಮನಿಸಿದಂತೆ, ಅದು ಎಲ್ಲ ಜನಾಂಗಗಳ ಏಕೈಕ ನಾಯಕನಾದ ಮೆಸ್ಸೀಯನ ಆಳ್ವಿಕೆಯ ಕಡೆಗೆ ಕೈತೋರಿಸುತ್ತದೆ. ತನ್ನ ದಿನದಲ್ಲಿರುವ ಜನಾಂಗಗಳ ಜನರು ಕ್ರೈಸ್ತ ಸಭೆಯ ಭಾಗವಾಗಿರುವರು ಎಂಬುದನ್ನು ತೋರಿಸಲಿಕ್ಕಾಗಿ ಅಪೊಸ್ತಲ ಪೌಲನು ಯೆಶಾಯ 11:10ನ್ನು ಉದ್ಧರಿಸಿದನು. ಸೆಪ್ಟೂಅಜಿಂಟ್ ತರ್ಜುಮೆಯಿಂದ ಈ ವಚನವನ್ನು ಉಲ್ಲೇಖಿಸುತ್ತಾ, ಅವನು ಬರೆದುದು: “ಯೆಶಾಯನು ಹೇಳುವದೇನಂದರೆ—ಇಷಯನ ಅಂಕುರದವನು ಅಂದರೆ ಜನಾಂಗಗಳನ್ನು ಆಳತಕ್ಕವನು ಬರುತ್ತಾನೆ. ಜನಾಂಗಗಳು ಆತನನ್ನು ನಿರೀಕ್ಷಿಸುತ್ತಿರುವರು.” (ರೋಮಾಪುರ 15:12) ಈ ಪ್ರವಾದನೆಯು ನಮ್ಮ ದಿನಗಳಿಗೂ ಅನ್ವಯಿಸುತ್ತದೆ. ಈಗ ಸಕಲ ಜನಾಂಗಗಳವರೂ ಮೆಸ್ಸೀಯನ ಅಭಿಷಿಕ್ತ ಸಹೋದರರಿಗೆ ಬೆಂಬಲವನ್ನು ನೀಡುವ ಮೂಲಕ ಯೆಹೋವನಿಗೆ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ.—ಯೆಶಾಯ 61:5-9; ಮತ್ತಾಯ 25:31-40.
18. ನಮ್ಮ ದಿನದಲ್ಲಿ, ಯೇಸು ಒಂದು ಗುರುತು, ಒಟ್ಟುಗೂಡುವ ಸ್ಥಳವಾಗಿದ್ದಾನೆ ಹೇಗೆ?
18 ಆಧುನಿಕ ದಿನದ ನೆರವೇರಿಕೆಯಲ್ಲಿ, ಯೆಶಾಯನು ಸೂಚಿಸಿದ ‘ಆ ದಿನವು’ 1914ರಲ್ಲಿ ಆರಂಭಿಸಿತು. ಆ ಸಮಯದಲ್ಲಿ ಮೆಸ್ಸೀಯನು, ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಸಿಂಹಾಸನವನ್ನೇರಿದನು. (ಲೂಕ 21:10; 2 ತಿಮೊಥೆಯ 3:1-5; ಪ್ರಕಟನೆ 12:10) ಅಂದಿನಿಂದ ಯೇಸು ಕ್ರಿಸ್ತನು, ಆತ್ಮಿಕ ಇಸ್ರಾಯೇಲಿಗೆ ಮತ್ತು ನೀತಿಯ ಸರಕಾರಕ್ಕಾಗಿ ಹಾತೊರೆಯುವ ಎಲ್ಲ ರಾಷ್ಟ್ರಗಳ ಜನರಿಗೆ ಒಂದು ಸ್ಪಷ್ಟವಾದ ಗುರುತು, ಒಟ್ಟುಮಾಡುವ ಸ್ಥಳ ಆಗಿದ್ದಾನೆ. ಯೇಸು ಮುಂತಿಳಿಸಿದಂತೆ, ಮೆಸ್ಸೀಯನ ನಿರ್ದೇಶನದ ಕೆಳಗೆ ರಾಜ್ಯದ ಸುವಾರ್ತೆಯು ಎಲ್ಲ ರಾಷ್ಟ್ರಗಳಿಗೆ ಒಯ್ಯಲ್ಪಟ್ಟಿದೆ. (ಮತ್ತಾಯ 24:14; ಮಾರ್ಕ 13:10) ಈ ಸುವಾರ್ತೆಯು ಬಹಳ ಪರಿಣಾಮಕಾರಿಯಾಗಿದೆ. “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ”ಗಳಿಂದ ಹೊರಬಂದು, ಅಭಿಷಿಕ್ತ ಉಳಿಕೆಯವರೊಂದಿಗೆ ಶುದ್ಧಾರಾಧನೆಯಲ್ಲಿ ಜೊತೆಸೇರುವ ಮೂಲಕ ಮೆಸ್ಸೀಯನಿಗೆ ಅಧೀನವಾಗುತ್ತಿದೆ. (ಪ್ರಕಟನೆ 7:9) ಯೆಹೋವನ ಆತ್ಮಿಕ “ಪ್ರಾರ್ಥನಾಲಯ”ದಲ್ಲಿರುವ ಉಳಿಕೆಯವರೊಂದಿಗೆ ಇನ್ನೂ ಅನೇಕ ಹೊಸಬರು ಜೊತೆಸೇರಲು ಮುಂದುವರಿದಂತೆ, ಅವರು ಮೆಸ್ಸೀಯನ ‘ವಿಶ್ರಮಸ್ಥಾನಕ್ಕೆ’ ಅಂದರೆ ದೇವರ ಮಹಾ ಆತ್ಮಿಕ ಆಲಯಕ್ಕೆ ವೈಭವವನ್ನು ಕೂಡಿಸುತ್ತಾರೆ.—ಯೆಶಾಯ 56:7; ಹಗ್ಗಾಯ 2:7.
ಐಕ್ಯರಾದ ಜನರು ಯೆಹೋವನನ್ನು ಸೇವಿಸುತ್ತಾರೆ
19. ಯಾವ ಎರಡು ಸಂದರ್ಭಗಳಲ್ಲಿ ಯೆಹೋವನು, ಭೂಮಿಯಾದ್ಯಂತ ಚದರಿಹೋಗಿರುವ ತನ್ನ ಜನರ ಉಳಿಕೆಯವರನ್ನು ಪುನಸ್ಸ್ಥಾಪಿಸಿದನು?
19 ಇಸ್ರಾಯೇಲ್ಯರು ಈ ಮೊದಲು ಒಬ್ಬ ಶಕ್ತಿಶಾಲಿ ವೈರಿಯಿಂದ ದಬ್ಬಾಳಿಕೆಗೆ ಗುರಿಯಾದಾಗ, ಯೆಹೋವನು ಅವರಿಗೆ ರಕ್ಷಣೆಯನ್ನು ಒದಗಿಸಿದನೆಂದು ಯೆಶಾಯನು ತರುವಾಯ ಅವರಿಗೆ ಜ್ಞಾಪಕ ಹುಟ್ಟಿಸುತ್ತಾನೆ. ಯೆಹೋವನು ಇಸ್ರಾಯೇಲ್ ಜನಾಂಗವನ್ನು ಐಗುಪ್ತದ ಸೆರೆಯಿಂದ ಬಿಡಿಸಿದ ಆ ಐತಿಹಾಸಿಕ ದಾಖಲೆಯು, ಎಲ್ಲ ನಂಬಿಗಸ್ತ ಯೆಹೂದ್ಯರಿಗೆ ಅಚ್ಚುಮೆಚ್ಚಿನ ವಿಷಯವಾಗಿದೆ. ಯೆಶಾಯನು ಬರೆಯುವುದು: “ಆ ದಿನದಲ್ಲಿ ಕರ್ತನು ತನ್ನ ಜನಶೇಷವನ್ನು ಬಿಡಿಸಿಕೊಳ್ಳುವದಕ್ಕೆ ಎರಡನೆಯ ಸಾರಿ ಕೈಹಾಕಿ ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್, ಸಮುದ್ರದ ಕರಾವಳಿ, ಈ ಸ್ಥಳಗಳಲ್ಲಿ ಉಳಿದವರನ್ನು ಬರಮಾಡಿಕೊಳ್ಳುವನು. ಅವನು ಜನಾಂಗಗಳಿಗೆ ಧ್ವಜವನ್ನೆತ್ತಿ ಇಸ್ರಾಯೇಲ್ಯರಲ್ಲಿ ಸೆರೆಗೆ ಒಯ್ಯಲ್ಪಟ್ಟವರನ್ನೂ ಯೆಹೂದದಿಂದ ಚದರಿದವರನ್ನೂ ಭೂಮಿಯ ಚತುರ್ದಿಕ್ಕುಗಳಿಂದಲೂ ಕೂಡಿಸಿಕೊಳ್ಳುವನು.” (ಯೆಶಾಯ 11:11, 12) ಅವರನ್ನು ಕೈಹಿಡಿದು ನಡೆಸುವನೊ ಎಂಬಂತೆ, ಯೆಹೋವನು ಇಸ್ರಾಯೇಲ್ ಮತ್ತು ಯೆಹೂದದಿಂದ ಆರಿಸಲ್ಪಟ್ಟ ನಂಬಿಗಸ್ತ ಉಳಿಕೆಯವರನ್ನು, ಅವರು ಚೆದುರಿಹೋಗಿರುವ ರಾಷ್ಟ್ರಗಳಿಂದ ಕೂಡಿಸಿ ತಮ್ಮ ಮನೆಗೆ ಸುರಕ್ಷಿತವಾಗಿ ಕರೆತರುವನು. ಒಂದು ಚಿಕ್ಕ ಪ್ರಮಾಣದಲ್ಲಿ ಇದು ಸಾ.ಶ.ಪೂ. 537ರಲ್ಲಿ ನೆರವೇರಿತು. ಆದರೆ ದೊಡ್ಡ ಪ್ರಮಾಣದ ನೆರವೇರಿಕೆಯು ಇನ್ನೆಷ್ಟು ಮಹಿಮಾಭರಿತವಾಗಿರುವುದು! 1914ರಲ್ಲಿ, ಯೆಹೋವನು ಸಿಂಹಾಸನವನ್ನೇರಿದ ಯೇಸು ಕ್ರಿಸ್ತನನ್ನು ‘ಜನಾಂಗಗಳಿಗೆ ಗುರುತಾಗಿ’ (NW) ಸ್ಥಾಪಿಸಿದನು. 1919ರಿಂದ ಆರಂಭಿಸುತ್ತಾ, ‘ದೇವರ ಇಸ್ರಾಯೇಲಿನ’ ಉಳಿಕೆಯವರು ಈ ಗುರುತಿನ ಕಡೆಗೆ ಗುಂಪುಗೂಡಲಾರಂಭಿಸಿದರು. ಅವರು ದೇವರ ರಾಜ್ಯದ ಕೆಳಗೆ ಶುದ್ಧಾರಾಧನೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಈ ಅಪೂರ್ವವಾದ ಆತ್ಮಿಕ ಜನಾಂಗವು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಹೊರಟು ಬಂದಿರುತ್ತದೆ.—ಪ್ರಕಟನೆ 5:9.
20. ದೇವಜನರು ಬಾಬೆಲಿನಿಂದ ಹಿಂದಿರುಗಿದ ಮೇಲೆ ಯಾವ ರೀತಿಯ ಐಕ್ಯವನ್ನು ಅನುಭವಿಸುವರು?
20 ಈ ಪುನಸ್ಸ್ಥಾಪಿತ ಜನಾಂಗದ ಐಕ್ಯವನ್ನು ಯೆಶಾಯನು ವರ್ಣಿಸುತ್ತಾನೆ. ಉತ್ತರ ರಾಜ್ಯವನ್ನು ಎಫ್ರಾಯೀಮ್ ಎಂದು ದಕ್ಷಿಣ ರಾಜ್ಯವನ್ನು ಯೆಹೂದ ಎಂದು ಸೂಚಿಸುತ್ತಾ ಅವನು ಹೇಳುವುದು: “ಎಫ್ರಾಯೀಮನ ಹೊಟ್ಟೇಕಿಚ್ಚು ತೊಲಗುವದು, ಯೆಹೂದವನ್ನು ವಿರೋಧಿಸುವವರು ನಿರ್ಮೂಲವಾಗುವರು; ಎಫ್ರಾಯೀಮು ಯೆಹೂದವನ್ನು ಮತ್ಸರಿಸದು, ಯೆಹೂದವು ಎಫ್ರಾಯೀಮನ್ನು ವಿರೋಧಿಸದು. ಇವು ಪಡುವಲಲ್ಲಿ ಫಿಲಿಷ್ಟಿಯರ ಭುಜದ ಮೇಲೆ ಎರಗುವವು, ಜೊತೆಯಾಗಿ ಮೂಡಣದವರನ್ನು ಸೂರೆಗೊಳ್ಳುವವು; ಎದೋಮಿನ ಮತ್ತು ಮೋವಾಬಿನ ಮೇಲೆ ಕೈಮಾಡುವವು; ಅಮ್ಮೋನ್ಯರು ಇವುಗಳಿಗೆ ಅಧೀನರಾಗುವರು.” (ಯೆಶಾಯ 11:13, 14) ಯೆಹೂದ್ಯರು ಬಾಬೆಲಿನಿಂದ ಹಿಂದಿರುಗುವಾಗ, ಇನ್ನು ಮುಂದೆ ಎರಡು ಜನಾಂಗಗಳಾಗಿ ವಿಂಗಡವಾಗಿ ಇರರು. ಇಸ್ರಾಯೇಲಿನ ಎಲ್ಲ ಗೋತ್ರಗಳ ಸದಸ್ಯರು ಐಕ್ಯರಾಗಿ ತಮ್ಮ ದೇಶಕ್ಕೆ ಹಿಂದಿರುಗುವರು. (ಎಜ್ರ 6:17) ಅವರು ಇನ್ನು ಮುಂದೆ ಒಬ್ಬರು ಇನ್ನೊಬ್ಬರ ಕಡೆಗೆ ಅಸಮಾಧಾನ ಮತ್ತು ದ್ವೇಷವನ್ನು ತೋರಿಸುವುದಿಲ್ಲ. ಐಕ್ಯ ಜನರೋಪಾದಿ, ಅವರು ಸುತ್ತಮುತ್ತಲಿನ ರಾಷ್ಟ್ರಗಳಲ್ಲಿರುವ ತಮ್ಮ ವೈರಿಗಳ ಎದುರು ಜಯಶಾಲಿಗಳಾಗಿ ನಿಲ್ಲುವರು.
21. ಇಂದು ದೇವಜನರ ಐಕ್ಯವು ಯಾವ ರೀತಿಯಲ್ಲಿ ಎದ್ದುಕಾಣುವಂತಹದ್ದಾಗಿದೆ?
21 ‘ದೇವರ ಇಸ್ರಾಯೇಲ್’ ಎಂಬ ಗುಂಪಿನ ಐಕ್ಯವು ಮತ್ತಷ್ಟೂ ಪ್ರಭಾವಕಾರಿಯಾಗಿದೆ. ಇವರಲ್ಲಿ ಆತ್ಮಿಕ ಇಸ್ರಾಯೇಲಿನ ಎಲ್ಲ 12 ಸಾಂಕೇತಿಕ ಗೋತ್ರಗಳು ಕೂಡಿವೆ. ಸುಮಾರು 2,000 ವರ್ಷಗಳಿಂದಲೂ ಇವರು ಅನುಭವಿಸಿರುವ ಐಕ್ಯವು, ದೇವರಿಗಾಗಿ ಮತ್ತು ತಮ್ಮ ಆತ್ಮಿಕ ಸಹೋದರ ಸಹೋದರಿಯರಿಗಾಗಿರುವ ಪ್ರೀತಿಯ ಮೇಲೆ ಆಧಾರಿತವಾಗಿದೆ. (ಕೊಲೊಸ್ಸೆ 3:14; ಪ್ರಕಟನೆ 7:4-8) ಇಂದು ಯೆಹೋವನ ಜನರು, ಅಂದರೆ ಆತ್ಮಿಕ ಇಸ್ರಾಯೇಲ್ಯರು ಮತ್ತು ಭೂನಿರೀಕ್ಷೆಯುಳ್ಳವರು, ಮೆಸ್ಸೀಯನ ಆಳ್ವಿಕೆಯ ಕೆಳಗೆ ಶಾಂತಿ ಮತ್ತು ಲೋಕವ್ಯಾಪಕ ಐಕ್ಯವನ್ನು ಅನುಭವಿಸುತ್ತಾರೆ. ಈ ಸ್ಥಿತಿಗಳ ಬಗ್ಗೆ, ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಏನೂ ಗೊತ್ತಿರುವುದಿಲ್ಲ. ಯೆಹೋವನ ಸಾಕ್ಷಿಗಳ ಆರಾಧನೆಯನ್ನು ವಿರೋಧಿಸಲು ಸೈತಾನನು ಬಹಳ ಪ್ರಯತ್ನಿಸುತ್ತಿದ್ದಾನೆ. ಅವರಾದರೊ ಐಕ್ಯರಾಗಿ ಅವನ ವಿರುದ್ಧ ಆತ್ಮಿಕ ಹೋರಾಟವನ್ನು ನಡೆಸುತ್ತಾ ಇದ್ದಾರೆ. ಏಕ ಜನಾಂಗದೋಪಾದಿ ಅವರು ಯೇಸುವಿನ ಆಜ್ಞೆಯನ್ನು ಪಾಲಿಸಿ, ಎಲ್ಲ ರಾಷ್ಟ್ರಗಳಲ್ಲಿ ಮೆಸ್ಸೀಯನ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಇದ್ದಾರೆ.—ಮತ್ತಾಯ 28:19, 20.
ತಡೆಗಳು ಜಯಿಸಲ್ಪಡುವವು
22. ಯಾವ ರೀತಿಯಲ್ಲಿ ಯೆಹೋವನು “ಐಗುಪ್ತ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ನಾಶನಮಾಡುವನು” ಮತ್ತು ‘ನದಿಯ ಮೇಲೆ ಕೈ ಝಾಡಿಸುವನು’?
22 ಇಸ್ರಾಯೇಲ್ಯರು ತಮ್ಮ ಪರದೇಶವಾಸದಿಂದ ಹಿಂದಿರುಗುವುದನ್ನು ತಡೆಯಲು, ಅನೇಕ ಅಕ್ಷರಾರ್ಥ ಹಾಗೂ ಸಾಂಕೇತಿಕ ತಡೆಗಳಿವೆ. ಇವುಗಳನ್ನು ಹೇಗೆ ಜಯಿಸಲಾಗುವುದು? ಯೆಶಾಯನು ಹೇಳುವುದು: “ಆಗ ಯೆಹೋವನು ಐಗುಪ್ತ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ನಾಶನಮಾಡುವನು; ಯೂಫ್ರೇಟೀಸ್ ನದಿಯ ಮೇಲೆ ಕೈ ಝಾಡಿಸಿ ತನ್ನ ಬಿಸಿಗಾಳಿಯಿಂದ ಅದನ್ನು ಏಳು ತೊರೆಗಳನ್ನಾಗಿ ಒಡೆದು ಜನರು ಕೆರಮೆಟ್ಟಿ ದಾಟುವಂತೆ ಮಾಡುವನು.” (ಯೆಶಾಯ 11:15) ತನ್ನ ಜನರು ಹಿಂದಿರುಗುವಾಗ ಎದುರುಗೊಳ್ಳುವ ಎಲ್ಲ ಅಡಚಣೆಗಳನ್ನು ತೆಗೆದುಹಾಕುವವನು ಯೆಹೋವನೇ ಆಗಿದ್ದಾನೆ. ಉದಾಹರಣೆಗೆ, (ಸೂಯೆಸ್ನ ಕೊಲ್ಲಿಯಂತಹ) ಕೆಂಪು ಸಮುದ್ರದ ಭೂಶಿರವಾಗಿರಲಿ ಇಲ್ಲವೆ ಹಾದುಹೋಗಲು ಅಸಾಧ್ಯವಾಗಿರುವ ಯೂಫ್ರೇಟೀಸ್ ನದಿಯಂತಹ ದುರ್ಗಮ ಅಡಚಣೆಯೇ ಆಗಿರಲಿ, ಸಾಂಕೇತಿಕ ಅರ್ಥದಲ್ಲಿ ಒಣಗಿಹೋಗುವವು. ಆಗ ವ್ಯಕ್ತಿಯೊಬ್ಬನು ತನ್ನ ಪಾದರಕ್ಷೆಗಳನ್ನು ಬಿಚ್ಚದೆಯೇ ಅವುಗಳನ್ನು ದಾಟಬಲ್ಲನು!
23. ಯಾವ ವಿಧದಲ್ಲಿ ‘ಅಶ್ಶೂರದಿಂದ ರಾಜಮಾರ್ಗವು ಸಿದ್ಧವಾಗುವದು’?
23 ಮೋಶೆಯ ದಿನದಲ್ಲಿ, ಇಸ್ರಾಯೇಲ್ಯರು ಐಗುಪ್ತದಿಂದ ಪಾರಾಗಿ ವಾಗ್ದತ್ತ ದೇಶವನ್ನು ಪ್ರವೇಶಿಸುವಂತೆ ಯೆಹೋವನು ಒಂದು ಮಾರ್ಗವನ್ನು ಸಿದ್ಧಪಡಿಸಿದನು. ಅಂತಹದ್ದೇ ಆದ ಏರ್ಪಾಡನ್ನು ಆತನು ಈಗ ಮಾಡುವನು: “ಇದಲ್ಲದೆ ಇಸ್ರಾಯೇಲ್ಯರು ಐಗುಪ್ತ ದೇಶದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಮಾರ್ಗವು ಹೇಗೆ ಸಿದ್ಧವಾಯಿತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿಕೊಂಡು ಬರುವ ಆತನ ಜನಶೇಷಕ್ಕೆ ರಾಜಮಾರ್ಗವು ಸಿದ್ಧವಾಗುವದು.” (ಯೆಶಾಯ 11:16) ಹಿಂದಿರುಗುತ್ತಿರುವ ಪರದೇಶವಾಸಿಗಳು ರಾಜಮಾರ್ಗದಲ್ಲಿ ನಡೆದು ಸ್ವದೇಶಕ್ಕೆ ಬರುತ್ತಿರುವರೊ ಎಂಬಂತೆ ಯೆಹೋವನು ಅವರನ್ನು ನಡೆಸುವನು. ವಿರೋಧಿಗಳು ಅವರನ್ನು ತಡೆಯಲು ಪ್ರಯತ್ನಿಸುವರು, ಆದರೆ ಅವರ ದೇವರಾದ ಯೆಹೋವನು ಅವರೊಂದಿಗಿರುವನು. ಇಂದು ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಾತಿಗಳು ತದ್ರೀತಿಯ ತೀವ್ರವಾದ ಆಕ್ರಮಣಕ್ಕೆ ಒಳಗಾಗುತ್ತಾರೆ, ಆದರೆ ಅವರು ಧೈರ್ಯದಿಂದ ಮುಂದೆ ಸಾಗುತ್ತಾರೆ! ಅವರು ಆಧುನಿಕ ಅಶ್ಶೂರ್ಯದಿಂದ, ಅಂದರೆ ಸೈತಾನನ ಲೋಕದಿಂದ ಹೊರಗೆ ಬಂದಿದ್ದಾರೆ ಮತ್ತು ಇತರರೂ ಅದನ್ನೇ ಮಾಡುವಂತೆ ನೆರವು ನೀಡುತ್ತಾರೆ. ಶುದ್ಧಾರಾಧನೆಯು ಯಶಸ್ವಿಯಾಗಿ ಏಳಿಗೆ ಹೊಂದುವುದೆಂಬ ವಿಷಯದಲ್ಲಿ ಅವರಿಗೆ ಸಂದೇಹವೇ ಇಲ್ಲ. ಏಕೆಂದರೆ, ಅದು ಮನುಷ್ಯನ ಕೆಲಸವಲ್ಲ, ದೇವರ ಕೆಲಸವಾಗಿದೆ.
ಮೆಸ್ಸೀಯನ ಪ್ರಜೆಗಳು ಎಂದೆಂದಿಗೂ ಹರ್ಷಿಸುವರು!
24, 25. ಸ್ತುತಿ ಮತ್ತು ಕೃತಜ್ಞತೆಯ ಯಾವ ಅಭಿವ್ಯಕ್ತಿಗಳಿಂದ ಯೆಹೋವನ ಜನರು ಕೂಗಿಕೊಳ್ಳುವರು?
24 ಯೆಹೋವನ ಜನರು ಆತನ ವಾಗ್ದಾನದ ನೆರವೇರಿಕೆಯಲ್ಲಿ ಅತ್ಯಾನಂದಪಡುವುದನ್ನು ಯೆಶಾಯನು ಈಗ ಸಂತೋಷಭರಿತ ಭಾಷೆಯಲ್ಲಿ ವರ್ಣಿಸುತ್ತಾನೆ: “ಆ ದಿನದಲ್ಲಿ ನೀನು ಹೇಳುವದೇನಂದರೆ—ಯೆಹೋವನೇ, ನಾನು ನಿನಗೆ ಕೃತಜ್ಞತೆಯನ್ನು ಸಲ್ಲಿಸುವೆನು; ನೀನು ನನ್ನ ಮೇಲೆ ಕೋಪಗೊಂಡಿದ್ದರೂ ಆ ನಿನ್ನ ಕೋಪವು ಪರಿಹಾರವಾಗಿ ನನ್ನನ್ನು ಸಂತೈಸುತ್ತೀಯಲ್ಲವೆ.” (ಯೆಶಾಯ 12:1) ಯೆಹೋವನು ತನ್ನ ಹಟಮಾರಿ ಜನರಿಗೆ ನೀಡಿರುವ ಶಿಕ್ಷೆಯು ಉಗ್ರವಾಗಿದೆ, ನಿಜ. ಆದರೆ ಇದರಿಂದ, ಆ ಜನಾಂಗವು ಯೆಹೋವನೊಂದಿಗೆ ಸುಸಂಬಂಧಕ್ಕೆ ಬರುತ್ತದೆ ಮತ್ತು ಶುದ್ಧಾರಾಧನೆಯು ಪುನಸ್ಸ್ಥಾಪಿಸಲ್ಪಡುತ್ತದೆ. ತನ್ನ ನಂಬಿಗಸ್ತ ಆರಾಧಕರನ್ನು ಆತನು ಕಟ್ಟಕಡೆಗೆ ರಕ್ಷಿಸುವನೆಂಬ ಆಶ್ವಾಸನೆಯನ್ನು ಯೆಹೋವನು ಅವರಿಗೆ ಕೊಡುತ್ತಾನೆ. ಇದಕ್ಕಾಗಿ ಅವರು ಗಣ್ಯತೆಯನ್ನು ವ್ಯಕ್ತಪಡಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
25 ಯೆಹೋವನಲ್ಲಿ ಪುನಸ್ಸ್ಥಾಪಿತ ಇಸ್ರಾಯೇಲ್ಯರಿಗಿದ್ದ ಭರವಸೆಯು ಈಗ ಸಂಪೂರ್ಣವಾಗಿ ದೃಢೀಕರಿಸಲ್ಪಡುತ್ತದೆ. ಆದಕಾರಣ ಅವರು ಕೂಗಿಕೊಳ್ಳುವುದು: “ಇಗೋ ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸಪಡುವೆನು; ನನ್ನ ಬಲವೂ ಕೀರ್ತನೆಯೂ ಯಾಹುಯೆಹೋವನಷ್ಟೆ, ಆತನೇ ನನಗೆ ರಕ್ಷಕನಾದನು ಎಂಬದೇ. ಮತ್ತು ರಕ್ಷಣೆಯೆಂಬ ಬಾವಿಗಳಿಂದ ನೀರನ್ನು ಉಲ್ಲಾಸದೊಡನೆ ಸೇದುವಿರಿ.” (ಯೆಶಾಯ 12:2, 3) ಎರಡನೆಯ ವಚನದಲ್ಲಿರುವ “ಕೀರ್ತನೆ” ಎಂಬ ಪದವು, ಸೆಪ್ಟುಅಜಿಂಟ್ ಭಾಷಾಂತರದಲ್ಲಿ “ಸ್ತುತಿ” ಎಂದು ತರ್ಜುಮೆಮಾಡಲ್ಪಟ್ಟಿದೆ. “ಯಾಹುಯೆಹೋವ”ನಿಂದ ಬರುವ ರಕ್ಷಣೆಗಾಗಿ ಆತನ ಆರಾಧಕರು ಹರ್ಷೋಲ್ಲಾಸದಿಂದ ಸ್ತುತಿಗೀತೆ ಹಾಡುತ್ತಾರೆ. ಯೆಹೋವ ಎಂಬ ಹೆಸರಿನ ಸಂಕ್ಷಿಪ್ತ ರೂಪವಾಗಿರುವ “ಯಾಹು,” ಸ್ತುತಿ ಮತ್ತು ಕೃತಜ್ಞತೆಯ ಅತ್ಯುನ್ನತ ಭಾವನೆಗಳನ್ನು ತಿಳಿಯಪಡಿಸಲು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿವೆ. “ಯಾಹುಯೆಹೋವ” ಎಂದು ದೇವರ ಹೆಸರನ್ನು ಎರಡು ಸಾರಿ ಉಚ್ಚರಿಸುವ ಮೂಲಕ, ದೇವರನ್ನು ಸ್ತುತಿಸುವ ತೀವ್ರತೆಯು ಮತ್ತಷ್ಟು ಮೇಲಕ್ಕೇರುತ್ತದೆ.
26. ಇಂದು ಯಾರು ದೇವರ ವ್ಯವಹಾರಗಳನ್ನು ರಾಷ್ಟ್ರಗಳಿಗೆ ಪ್ರಚುರಪಡಿಸುತ್ತಾರೆ?
26 ಯೆಹೋವನನ್ನು ಪ್ರಾಮಾಣಿಕವಾಗಿ ಆರಾಧಿಸುವವರು, ತಾವು ಅನುಭವಿಸುತ್ತಿರುವ ಆನಂದವನ್ನು ತಮ್ಮಲ್ಲೇ ಇಟ್ಟುಕೊಳ್ಳಲಾರರು. ಯೆಶಾಯನು ಮುಂತಿಳಿಸುವುದು: “ಆ ದಿನದಲ್ಲಿ ನೀವು ಹೇಳುವದೇನಂದರೆ—ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ, ಆತನ ನಾಮವು ಉನ್ನತೋನ್ನತವೆಂದು ಜ್ಞಾಪಕಪಡಿಸಿರಿ. ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.” (ಯೆಶಾಯ 12:4, 5) 1919ರಿಂದ ಆರಂಭಿಸಿ ಅಭಿಷಿಕ್ತ ಕ್ರೈಸ್ತರು, ‘ಅವರನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡಿದ್ದಾರೆ.’ ತದನಂತರ, ಈ ಕೆಲಸದಲ್ಲಿ ಅವರಿಗೆ ‘ಬೇರೆ ಕುರಿಗಳ’ ಸಹಾಯವೂ ಸಿಕ್ಕಿದೆ. ಈ ಅಭಿಷಿಕ್ತರು ಈ ಕೆಲಸಕ್ಕಾಗಿಯೇ ‘ಆದುಕೊಂಡ ಜನಾಂಗವೂ ರಾಜವಂಶಸ್ಥರೂ’ ಆಗಿದ್ದಾರೆ. (ಯೋಹಾನ 10:16; 1 ಪೇತ್ರ 2:9) ಯೆಹೋವನ ಪವಿತ್ರ ಹೆಸರು ಉನ್ನತಕ್ಕೆ ಏರಿಸಲ್ಪಟ್ಟಿದೆ ಎಂದು ಅಭಿಷಿಕ್ತರು ಪ್ರಕಟಿಸುತ್ತಾರೆ ಮತ್ತು ಅದನ್ನು ಭೂಮಿಯಲ್ಲೆಲ್ಲಾ ಪ್ರಚುರಪಡಿಸುವುದರಲ್ಲಿ ಭಾಗವಹಿಸುತ್ತಾರೆ. ಯೆಹೋವನು ತನ್ನ ಆರಾಧಕರಿಗೆ ಒದಗಿಸಿರುವ ರಕ್ಷಣೆಗಾಗಿ ಹರ್ಷಿಸುವುದರಲ್ಲಿ ಅವರು ಅಗ್ರಗಣ್ಯರಾಗಿದ್ದಾರೆ. ಇದು ಯೆಶಾಯನು ಉದ್ಗರಿಸುವಂತೆಯೇ ಇದೆ: “ಚೀಯೋನಿನ ನಿವಾಸಿಗಳೇ, ಕೂಗಿರಿ, ಉತ್ಸಾಹಧ್ವನಿಮಾಡಿರಿ; ಇಸ್ರಾಯೇಲ್ಯರ ಸದಮಲಸ್ವಾಮಿಯು ನಿಮ್ಮ ಮಧ್ಯದಲ್ಲಿ ಮಹತ್ತಾಗಿದ್ದಾನಷ್ಟೆ”! (ಯೆಶಾಯ 12:6) ಸ್ವತಃ ಯೆಹೋವ ದೇವರೇ ಇಸ್ರಾಯೇಲಿನ ಸದಮಲಸ್ವಾಮಿಯಾಗಿದ್ದಾನೆ.
ಭರವಸೆಯಿಂದ ಭವಿಷ್ಯತ್ತಿನ ಕಡೆಗೆ ನೋಡಿರಿ!
27. ತಮ್ಮ ನಿರೀಕ್ಷೆಯು ನಿಜವಾಗಲು ಕಾಯುತ್ತಿರುವಾಗ, ಕ್ರೈಸ್ತರು ಯಾವುದರಲ್ಲಿ ಭರವಸೆಯುಳ್ಳವರಾಗಿದ್ದಾರೆ?
27 ಇಂದು ಲಕ್ಷಾಂತರ ಜನರು, ದೇವರ ರಾಜ್ಯದ ಸಿಂಹಾಸನಾರೂಢನಾದ ಯೇಸು ಕ್ರಿಸ್ತನ ಕಡೆಗೆ, ಅಂದರೆ ‘ಜನಾಂಗಗಳ ಗುರುತಿನ’ ಕಡೆಗೆ ಗುಂಪುಗೂಡುತ್ತಿದ್ದಾರೆ. ಅವರು ಆ ರಾಜ್ಯದ ಪ್ರಜೆಗಳಾಗಿರಲು ಹರ್ಷಿಸುತ್ತಾರೆ ಮತ್ತು ಯೆಹೋವ ದೇವರು ಹಾಗೂ ಆತನ ಮಗನನ್ನು ತಿಳಿದುಕೊಳ್ಳುವುದರಲ್ಲಿ ಉಲ್ಲಾಸಿಸುತ್ತಾರೆ. (ಯೋಹಾನ 17:3) ಅವರು ಐಕ್ಯವಾದ ಕ್ರೈಸ್ತ ಒಡನಾಟದಲ್ಲಿ ಬಹಳ ಆನಂದವನ್ನು ಕಂಡುಕೊಳ್ಳುತ್ತಾರೆ ಮತ್ತು ಯೆಹೋವನ ನಿಜ ಸೇವಕರ ಗುರುತಾಗಿರುವ ಶಾಂತಿಯನ್ನು ಕಾಪಾಡಲು ಪ್ರಯಾಸಪಡುತ್ತಾರೆ. (ಯೆಶಾಯ 54:13) ಯಾಹುಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುವ ದೇವರೆಂಬ ದೃಢನಂಬಿಕೆಯಿಂದ, ಅವರು ತಮ್ಮ ನಿರೀಕ್ಷೆಯಲ್ಲಿ ಭರವಸೆಯುಳ್ಳವರಾಗಿದ್ದಾರೆ ಮತ್ತು ಅದನ್ನು ಬೇರೆಯವರಿಗೆ ತಿಳಿಯಪಡಿಸುವುದರಲ್ಲಿ ಬಹಳ ಆನಂದವನ್ನು ಕಂಡುಕೊಳ್ಳುತ್ತಾರೆ. ಯೆಹೋವನ ಪ್ರತಿಯೊಬ್ಬ ಆರಾಧಕನು ತನ್ನೆಲ್ಲ ಬಲವನ್ನು ಉಪಯೋಗಿಸಿ ದೇವರನ್ನು ಸೇವಿಸಲಿ ಮತ್ತು ಇತರರೂ ಹಾಗೆಯೇ ಮಾಡುವಂತೆ ನೆರವು ನೀಡಲಿ. ಸಕಲರೂ ಯೆಶಾಯನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಂಡು, ಯೆಹೋವನ ಮೆಸ್ಸೀಯನಿಂದ ಬರಲಿರುವ ರಕ್ಷಣೆಯಲ್ಲಿ ಹರ್ಷಿಸಲಿ!
[ಪಾದಟಿಪ್ಪಣಿಗಳು]
a “ಮೆಸ್ಸೀಯ” ಎಂಬ ಪದವು, ಮಶಿಅಕ್ ಎಂಬ ಮೂಲ ಹೀಬ್ರು ಪದದಿಂದ ಬಂದಿದೆ. ಇದರ ಅರ್ಥ “ಅಭಿಷಿಕ್ತನು” ಎಂದಾಗಿದೆ. ಇದಕ್ಕೆ ಸಮಾನವಾದ ಗ್ರೀಕ್ ಪದವು ಕ್ರಿಸ್ಟೊಸ್ ಅಥವಾ “ಕ್ರೈಸ್ಟ್” ಆಗಿದೆ.—ಮತ್ತಾಯ 2:4, NW ಪಾದಟಿಪ್ಪಣಿ.
b “ತಳಿರು” ಎಂಬ ಪದಕ್ಕಾಗಿ ಬಳಸಲ್ಪಡುವ ಹೀಬ್ರು ಪದ ನೆಟ್ಸರ್ ಆಗಿದೆ ಮತ್ತು “ನಜರಾಯ” ಎಂಬ ಪದದ ಹೀಬ್ರು ಪದ ನೋಟ್ಸ್ರಿ ಆಗಿದೆ.
[ಪುಟ 158ರಲ್ಲಿರುವ ಚಿತ್ರಗಳು]
ಮೆಸ್ಸೀಯನು ರಾಜ ದಾವೀದನ ಮೂಲಕ ಇಷಯನ “ಚಿಗುರು” ಆಗಿದ್ದನು
[ಪುಟ 162ರಲ್ಲಿ ಇಡೀ ಪುಟದ ಚಿತ್ರ]
[ಪುಟ 170ರಲ್ಲಿರುವ ಚಿತ್ರ]
ಮೃತ ಸಮುದ್ರದ ಸುರುಳಿಗಳಲ್ಲಿ ಕಾಣಿಸಿಕೊಳ್ಳುವ ಯೆಶಾಯ 12:4, 5 (ದೇವರ ಹೆಸರಿನ ಉಲ್ಲೇಖಗಳು ಎತ್ತಿತೋರಿಸಲ್ಪಟ್ಟಿವೆ)