ವಾಚಕರಿಂದ ಪ್ರಶ್ನೆಗಳು
ಯೇಸುವು ಇಷಯ ಮತ್ತು ದಾವೀದ ಇವರಿಬ್ಬರ ವಂಶಕ್ರಮದಲ್ಲಿ ಬಂದಿರುವುದರಿಂದ ಅವನನ್ನು ಅವನ ಪೂರ್ವಜರಾದ ಇಷಯ ಮತ್ತು ದಾವೀದ ಇವರ “ಬೇರು” (NW, “ಅಂಕುರ,” ಕನ್ನಡ ಬೈಬಲ್) ಎಂದು ಕರೆದಿರುವುದೇಕೆ?
ಒಂದು ಮರದ ಅಥವಾ ಸಸಿಯ ಬೇರು ಅದರ ಕಾಂಡ ಅಥವಾ ಕೊಂಬೆಗಳಿಗಿಂತ ಮೊದಲು ಬರುತ್ತದೆಂದು ನೀವು ಸಾಮಾನ್ಯವಾಗಿ ಯೋಚಿಸುತ್ತೀರಿ. ಆದಕಾರಣ ಇಷಯ (ಅಥವಾ ಅವನ ಮಗ ದಾವೀದ) ನನ್ನು ಯೇಸು ಕ್ರಮೇಣ ಯಾವುದರಿಂದ ಮೊಳೆಯಲಿದ್ದನೋ ಆ ಬೇರಾಗಿ ಹೇಳಲಾಗಬೇಕೆಂದು ತೋರುವುದು. ಆದರೂ ಯೆಶಾಯ 11:10, NW, ಬರಲಿದ್ದ ಮೆಸ್ಸೀಯನು “ಇಷಯನ ಬೇರು” ಆಗುವನೆಂದು ಮುಂತಿಳಿಸಿತು, ಮತ್ತು ರೋಮಾಪುರ 15:12 ಈ ಪ್ರವಾದನೆಯನ್ನು ಯೇಸು ಕ್ರಿಸ್ತನಿಗೆ ಅನ್ವಯಿಸಿತು. ತರುವಾಯ ಪ್ರಕಟನೆ 5:5, NW, ಅವನನ್ನು, “ಯೆಹೂದ ಕುಲದ ಸಿಂಹ, ದಾವೀದನ ಬೇರು,” ಎಂದು ಕರೆಯಿತು. ಈ ಹೆಸರುಗಳಿಗೆ ಕಾರಣಗಳಿವೆ.
ಬೈಬಲು ಅನೇಕ ವೇಳೆ ಮರದಂತಹ ಒಂದು ಸಸ್ಯವನ್ನು ದೃಷ್ಟಾಂತರೂಪದಲ್ಲಿ ಬಳಸುತ್ತದೆ. ಇದು ಕೆಲವು ಬಾರಿ, ಒಂದು ಬೀಜವು ಮೊಳೆತು ಬೆಳೆಯುವಾಗ, ಬೇರುಗಳು ರೆಂಬೆಗಳ ಮೊದಲಾಗಿ ಬೆಳೆಯುವ ನಿಜತ್ವದ ಕಾರಣ, ಇತರ ಕೊಂಬೆಗಳು ಅಥವಾ ಹಣ್ಣು ಆ ಬೇರಿನಿಂದ ಆಧರಿಸಲ್ಪಡುವ ಕಾರಣ ಬಂದಿದೆಯೆಂದು ತೋರಿಸುತ್ತದೆ. ಉದಾಹರಣೆಗೆ, ಯೆಶಾಯ 37:31, NW, ಓದುವುದು: “ಯೆಹೂದನ ಮನೆತನದಲ್ಲಿ ತಪ್ಪಿಸಿಕೊಳ್ಳುವವರು, ಉಳಿಯುವಂತೆ ಬಿಡಲ್ಪಡುವವರು, ಕೆಳಮುಖವಾಗಿ ಬೇರುಬಿಟ್ಟು ಮೇಲ್ಮುಖವಾಗಿ ಫಲವನ್ನು ಉತ್ಪಾದಿಸುವರು.”—ಯೋಬ 14:8, 9; ಯೆಶಾಯ 14:29.
ಬೇರಿಗೆ ಹಾನಿಬರುವಲ್ಲಿ ಮರದ ಉಳಿದ ಭಾಗವು ಪರಿಣಾಮವನ್ನು ಅನುಭವಿಸುತ್ತದೆ. (ಹೋಲಿಸಿ ಮತ್ತಾಯ 3:10; 13:6.) ಇದಕ್ಕೆ ಹೊಂದಿಕೆಯಾಗಿ ಮಲಾಕಿಯನು ಬರೆದುದು: “ಬರುತ್ತಿರುವ ಆ ದಿನವು ಅವರಿಗೆ ಅಗ್ನಿ ಪ್ರಲಯವಾಗುವದು; ಬುಡ ರೆಂಬೆಗಳಾವದನ್ನೂ ಉಳಿಸದು.” (ಮಲಾಕಿಯ 4:1) ಇದರ ಅರ್ಥ ಸ್ಪಷ್ಟ—ಪೂರ್ಣ ಛೇದನ. ಹೆತ್ತವರು (ಬೇರುಗಳು) ಕಡಿಯಲ್ಪಡುವರು, ಸಂತತಿಯು (ರೆಂಬೆಗಳು) ಕೂಡ.a ಇದು ಹೆತ್ತವರಿಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕಡೆಗಿರುವ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ: ಅಪ್ರಾಪ್ತ ವಯಸ್ಸಿನ ಮಕ್ಕಳ ಶಾಶ್ವತ ಭವಿಷ್ಯವನ್ನು ದೇವರ ಮುಂದೆ ನಿಂತಿರುವ ಅವರ ಹೆತ್ತವರು ನಿರ್ಣಯಿಸಬಲ್ಲರು.—1 ಕೊರಿಂಥ 7:14.
ಯೆಶಾಯ 37:31 ಮತ್ತು ಮಲಾಕಿಯ 4:1 ರ ಭಾಷೆಯು, ರೆಂಬೆಗಳು (ಮತ್ತು ಉಪಕೊಂಬೆಗಳಲ್ಲಿರುವ ಹಣ್ಣು) ಅವುಗಳ ಜೀವವನ್ನು ಬೇರುಗಳಿಂದ ಪಡೆಯುತ್ತವೆಂಬ ನಿಜತ್ವದಿಂದ ಹೀಗೆನ್ನುತ್ತದೆ. ಯೇಸು “ಇಷಯನ ಬೇರು,” ಮತ್ತು “ದಾವೀದನ ಬೇರು,” ಹೇಗೆಂದು ತಿಳಿಯಲು ಇದು ಒಂದು ಕೀಲಿ ಕೈ.
ಶಾರೀರಿಕ ರೀತಿಯಲ್ಲಿ, ಇಷಯನೂ ದಾವೀದನೂ ಯೇಸುವಿನ ಪೂರ್ವಜರು; ಅವರು ಬೇರುಗಳು ಮತ್ತು ಯೇಸು ಕೊಂಬೆ ಅಥವಾ ರೆಂಬೆ. ಯೆಶಾಯ 11:1 ಬರಲಿದ್ದ ಮೆಸ್ಸೀಯನ ಬಗೆಗೆ ಹೇಳಿದ್ದು: “ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು.” ತದ್ರೀತಿ, ಪ್ರಕಟನೆ 22:16 ರಲ್ಲಿ ಯೇಸು ತನ್ನನ್ನು, “ಅವನ [ದಾವೀದನ] ಸಂತತಿ” ಯೆಂದು ಕರೆಯುತ್ತಾನೆ. ಆದರೆ ಅವನು ತನ್ನನ್ನು, “ದಾವೀದನ ಬೇರು” (NW) ಎಂದೂ ಕರೆಯುತ್ತಾನೆ. ಇದೇಕೆ?
ಯೇಸು ಇಷಯ ಮತ್ತು ದಾವೀದನ “ಬೇರು” ಆಗಿರುವ ಒಂದು ವಿಧವು ಅವನ ಮೂಲಕ ಅವರ ವಂಶಾವಳಿಯು ಜೀವಿಸುತ್ತಿರುವುದರಿಂದಲೇ. ಇಂದು ಯಾವ ಮನುಷ್ಯನೂ ತಾನು ಲೇವಿ, ದಾನ್, ಇಲ್ಲವೆ ಯೆಹೂದನ ಕುಲದವನೆಂದೂ ರುಜುಮಾಡುವುದು ಅಸಾಧ್ಯ. ಆದರೆ ಇಷಯ ಮತ್ತು ದಾವೀದನ ವಂಶಾವಳಿಯು ಜೀವದಿಂದಿದೆ ಎಂಬ ವಿಷಯದಲ್ಲಿ ನಾವು ನಿಶ್ಚಯತೆಯಿಂದಿರಬಲ್ಲೆವು, ಏಕೆಂದರೆ ಯೇಸು ಈಗ ಸ್ವರ್ಗದಲ್ಲಿ ಜೀವದಿಂದಿದ್ದಾನೆ.—ಮತ್ತಾಯ 1:1-16; ರೋಮಾಪುರ 6:9.
ಯೇಸು ಸ್ವರ್ಗೀಯ ರಾಜನ ಸ್ಥಾನವನ್ನೂ ಪಡೆದಿದ್ದಾನೆ. (ಲೂಕ 1:32, 33; 19:12, 15; 1 ಕೊರಿಂಥ 15:25) ಇದು ಅವನ ಪೂರ್ವಜರ ಸಂಗಡ ಅವನಿಗಿದ್ದ ಸಂಬಂಧಕ್ಕೆ ಸುಸಂಬದ್ಧವಾಗಿದೆ. ಪ್ರವಾದನಾರೂಪವಾಗಿ ದಾವೀದನು ಯೇಸುವನ್ನು ತನ್ನ ಕರ್ತನೆಂದು ಕರೆದನು.—ಕೀರ್ತನೆ 110:1; ಅ. ಕೃತ್ಯಗಳು 2:34-36.
ಕೊನೆಯದಾಗಿ, ಯೇಸುವಿಗೆ ನ್ಯಾಯಾಧೀಶನಾಗಿ ಅಧಿಕಾರ ಕೊಡಲಾಗಿದೆ. ಬರಲಿರುವ ಸಹಸ್ರ ವರ್ಷದಾಳಿಕೆಯಲ್ಲಿ, ಯೇಸುವಿನ ಪ್ರಾಯಶ್ಚಿತದ್ತ ಪ್ರಯೋಜನಗಳು ಇಷಯ ಮತ್ತು ದಾವೀದರನ್ನೂ ಆವರಿಸುವುವು. ಆಗ ಅವರ ಭೂಜೀವಿತವು, ಅವರ “ನಿತ್ಯನಾದ ತಂದೆ” ಯಾಗಿ ಸೇವೆ ಮಾಡುವ ಯೇಸುವಿನ ಮೇಲೆ ಆಧರಿಸುವುದು.—ಯೆಶಾಯ 9:6.
ಈ ಪರಿಣಾಮವಾಗಿ, ಯೇಸು ಇಷಯ ಮತ್ತು ದಾವೀದನ ವಂಶದಿಂದ ಮೊಳೆತು ಬಂದರೂ, ಅವನು ಈಗ ಏನಾಗಿ ಪರಿಣಮಿಸಿದ್ದಾನೋ ಅದು ಮತ್ತು ಇನ್ನು ಏನು ಮಾಡಲಿರುವನೋ ಅದು, ಅವನನ್ನು “ಇಷಯನ ಬೇರು,” ಮತ್ತು “ದಾವೀದನ ಬೇರು” ಎಂದು ಕರೆಯಲು ಅರ್ಹನನ್ನಾಗಿ ಮಾಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಒಂದು ಹಳೆಯ ಫಿನೀಶಿಯದ ಶವಸಂಸ್ಕಾರ ಸ್ಮಾರಕ ಲೇಖನವು ತದ್ರೀತಿಯ ಭಾಷೆಯನ್ನು ಉಪಯೋಗಿಸಿತು. ಆ ಸಮಾಧಿಯನ್ನು ಯಾವನು ತೆರೆಯುತ್ತಾನೋ ಅವನ ಕುರಿತು ಅದು ಹೇಳಿದ್ದು: “ಅವರಿಗೆ ಕೆಳಗೆ ಬೇರಾಗಲಿ ಮೇಲೆ ಫಲವಾಗಲಿ ಇಲ್ಲದೆ ಹೋಗಲಿ!”—ವೀಟುಸ್ ಟೆಸ್ಟಾಮೆಂಟಮ್, ಎಪ್ರಿಲ್ 1961.
[ಪುಟ 31 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.