ದೇವರಿಂದ ಬಂದ ಒಂದು ಗ್ರಂಥ
“ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:21.
1, 2. (ಎ) ಬೈಬಲು ನಮ್ಮ ಆಧುನಿಕ ಜೀವಿತಕ್ಕೆ ಸುಸಂಬದ್ಧವಾಗಿದೆಯೊ ಎಂದು ಕೆಲವರು ಪ್ರಶ್ನಿಸುವುದೇಕೆ? (ಬಿ) ಬೈಬಲು ದೇವರಿಂದ ಬಂದದ್ದಾಗಿದೆಯೆಂಬುದನ್ನು ತೋರಿಸಲಿಕ್ಕಾಗಿ ನಾವು ಯಾವ ಮೂರು ರುಜುವಾತುಗಳನ್ನು ಉಪಯೋಗಿಸಸಾಧ್ಯವಿದೆ?
ಇಪ್ಪತ್ತೊಂದನೆಯ ಶತಮಾನದ ಅಂಚಿನಲ್ಲಿ ಜೀವಿಸುತ್ತಿರುವ ಜನರಿಗೆ, ಬೈಬಲು ಸುಸಂಬದ್ಧವಾದ ಗ್ರಂಥವಾಗಿದೆಯೊ? ಇಲ್ಲವೆಂದು ಕೆಲವರು ನೆನಸುತ್ತಾರೆ. ಬೈಬಲು ಏಕೆ ಹಿಂದಿನಕಾಲದ್ದಾಗಿದೆಯೆಂದು ತಮಗನಿಸಿತು ಎಂಬುದನ್ನು ವಿವರಿಸುತ್ತಾ, “ಒಂದು ಆಧುನಿಕ ರಸಾಯನಶಾಸ್ತ್ರದ ತರಗತಿಯಲ್ಲಿ ಉಪಯೋಗಿಸಲಿಕ್ಕಾಗಿ, ಯಾರೊಬ್ಬರೂ 1924ರಲ್ಲಿ ಮುದ್ರಿಸಲ್ಪಟ್ಟ ರಸಾಯನಶಾಸ್ತ್ರ ಪಠ್ಯ[ಪುಸ್ತಕ]ದ ಉಪಯೋಗವನ್ನು ಸಮರ್ಥಿಸುವುದಿಲ್ಲ—ಅಂದಿನಿಂದ ರಸಾಯನಶಾಸ್ತ್ರದ ಕುರಿತು ಅತ್ಯಧಿಕ ವಿಷಯಗಳನ್ನು ಕಲಿತುಕೊಳ್ಳಲಾಗಿದೆ” ಎಂದು ಡಾ. ಈಲಿ ಎಸ್. ಚೆಸೆನ್ ಬರೆದರು. ಮೇಲ್ನೋಟಕ್ಕೆ ಈ ವಾಗ್ವಾದವು ಅರ್ಥವನ್ನು ಕೊಡುವಂತೆ ತೋರುತ್ತದೆ. ಎಷ್ಟೆಂದರೂ, ಬೈಬಲ್ ಸಮಯಗಳಂದಿನಿಂದ ಮನುಷ್ಯನು, ವಿಜ್ಞಾನ, ಮಾನಸಿಕ ಆರೋಗ್ಯ, ಹಾಗೂ ಮಾನವ ನಡವಳಿಕೆಯ ವಿಷಯದಲ್ಲಿ ಹೆಚ್ಚು ವಿಚಾರಗಳನ್ನು ಕಲಿತಿದ್ದಾನೆ. ಆದುದರಿಂದಲೇ, ಕೆಲವರು ಹೀಗೆ ಆಶ್ಚರ್ಯಪಡುತ್ತಾರೆ: ‘ಅಂತಹ ಪುರಾತನ ಗ್ರಂಥವೊಂದು, ವೈಜ್ಞಾನಿಕ ಅನಿಷ್ಕೃಷ್ಟತೆಗಳಿಂದ ಹೇಗೆ ಮುಕ್ತವಾಗಿರಸಾಧ್ಯವಿದೆ? ಆಧುನಿಕ ಜೀವಿತಕ್ಕಾಗಿ ಪ್ರಾಯೋಗಿಕವಾಗಿರುವ ಸಲಹೆಯನ್ನು ಅದು ಹೇಗೆ ಒಳಗೊಂಡಿರಸಾಧ್ಯವಿದೆ?’
2 ಬೈಬಲು ತಾನೇ ಉತ್ತರವನ್ನು ಕೊಡುತ್ತದೆ. 2 ಪೇತ್ರ 1:21ರಲ್ಲಿ, ಬೈಬಲ್ ಪ್ರವಾದಿಗಳು “ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು” ಎಂದು ನಮಗೆ ಹೇಳಲಾಗಿದೆ. ಹೀಗೆ ಬೈಬಲು, ಅದು ದೇವರಿಂದ ಬಂದ ಒಂದು ಗ್ರಂಥವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ, ಇದು ದೇವರಿಂದ ಬಂದ ಒಂದು ಗ್ರಂಥವಾಗಿದೆಯೆಂದು ನಾವು ಇತರರಿಗೆ ಹೇಗೆ ಮನಗಾಣಿಸಸಾಧ್ಯವಿದೆ? ಬೈಬಲು ದೇವರ ವಾಕ್ಯವಾಗಿದೆ ಎಂಬುದಕ್ಕೆ ಮೂರು ರುಜುವಾತುಗಳನ್ನು ನಾವು ಪರಿಗಣಿಸೋಣ: (1) ಅದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ, (2) ಆಧುನಿಕ ಜೀವನಕ್ಕೆ ಪ್ರಾಯೋಗಿಕವಾಗಿರುವ ಅನಂತಕಾಲಿಕ ಮೂಲತತ್ವಗಳನ್ನು ಅದು ಒಳಗೊಂಡಿದೆ, ಮತ್ತು (3) ಐತಿಹಾಸಿಕ ವಾಸ್ತವಾಂಶಗಳಿಂದ ರುಜುಪಡಿಸಲ್ಪಟ್ಟಿರುವಂತೆ, ಅದು ನೆರವೇರಿರುವ ನಿರ್ದಿಷ್ಟ ಪ್ರವಾದನೆಗಳನ್ನು ಒಳಗೊಂಡಿದೆ.
ವಿಜ್ಞಾನದೊಂದಿಗೆ ಒಮ್ಮತದಿಂದಿರುವ ಒಂದು ಗ್ರಂಥ
3. ಬೈಬಲು ವೈಜ್ಞಾನಿಕ ಅನ್ವೇಷಣೆಗಳಿಂದ ಏಕೆ ಅಪಾಯಕ್ಕೊಳಗಾಗಿಲ್ಲ?
3 ಬೈಬಲು ಒಂದು ವಿಜ್ಞಾನ ಪಠ್ಯಪುಸ್ತಕವಲ್ಲ. ಹಾಗಿದ್ದರೂ, ಅದು ಸತ್ಯದ ಗ್ರಂಥವಾಗಿದೆ, ಮತ್ತು ಸತ್ಯವು ಕಾಲಪರೀಕ್ಷೆಯನ್ನು ಎದುರಿಸಬಲ್ಲದು. (ಯೋಹಾನ 17:17) ವೈಜ್ಞಾನಿಕ ಅನ್ವೇಷಣೆಗಳು ಬೈಬಲಿಗೆ ಯಾವುದೇ ಅಪಾಯವನ್ನು ತಂದೊಡ್ಡಿಲ್ಲ. ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅದು ಪ್ರಸ್ತಾಪಿಸುವಾಗ, ಕೇವಲ ಮಿಥ್ಯೆಗಳಾಗಿ ಪರಿಣಮಿಸಿದ ಪುರಾತನ “ವೈಜ್ಞಾನಿಕ” ಕಲ್ಪನೆಗಳಿಂದ ಅದು ಸಂಪೂರ್ಣವಾಗಿ ಮುಕ್ತವಾಗಿದೆ. ವಾಸ್ತವವಾಗಿ, ವೈಜ್ಞಾನಿಕವಾಗಿ ಸರಿಯಾಗಿರುವ ಹೇಳಿಕೆಗಳನ್ನು ಮಾತ್ರವಲ್ಲ, ಆ ದಿನದ ಅಂಗೀಕೃತ ಅಭಿಪ್ರಾಯಗಳನ್ನು ನೇರವಾಗಿ ವಿರೋಧಿಸಿದ ಅನೇಕ ಹೇಳಿಕೆಗಳನ್ನು ಸಹ ಅದು ಒಳಗೊಂಡಿದೆ. ಉದಾಹರಣೆಗೆ, ಬೈಬಲ್ ಹಾಗೂ ವೈದ್ಯಕೀಯ ವಿಜ್ಞಾನದ ನಡುವೆಯಿರುವ ಒಮ್ಮತವನ್ನು ಪರಿಗಣಿಸಿರಿ.
4, 5. (ಎ) ರೋಗದ ಕುರಿತಾಗಿ ಪುರಾತನ ಕಾಲದ ವೈದ್ಯರಿಗೆ ಯಾವುದು ಅರ್ಥವಾಗಲಿಲ್ಲ? (ಬಿ) ಐಗುಪ್ತದ ವೈದ್ಯರ ವೈದ್ಯಕೀಯ ಪದ್ಧತಿಗಳೊಂದಿಗೆ ಮೋಶೆ ನಿಸ್ಸಂದೇಹವಾಗಿ ಪರಿಚಿತನಿದ್ದನೇಕೆ?
4 ಪುರಾತನ ಕಾಲದ ವೈದ್ಯರಿಗೆ ರೋಗವು ಹೇಗೆ ಹರಡುತ್ತದೆ ಎಂದು ಪೂರ್ತಿಯಾಗಿ ತಿಳಿದಿರಲೂ ಇಲ್ಲ, ರೋಗವನ್ನು ತಡೆಗಟ್ಟುವುದರಲ್ಲಿ ನೈರ್ಮಲ್ಯದ ಪ್ರಮುಖತೆಯನ್ನು ಅವರು ಗ್ರಹಿಸಿರಲೂ ಇಲ್ಲ. ಅನೇಕ ಪುರಾತನ ವೈದ್ಯಕೀಯ ಪದ್ಧತಿಗಳು, ಆಧುನಿಕ ಮಟ್ಟಗಳ ಪ್ರಕಾರ ಅಸಂಸ್ಕೃತವೆಂದು ಕಂಡುಬರುತ್ತಿದ್ದವು. ಅತಿ ಹಳೆಯ ವೈದ್ಯಕೀಯ ಮೂಲಗ್ರಂಥಗಳಲ್ಲಿ ಒಂದು, ಏಬರ್ಸ್ ಪಪೈರಸ್ ಆಗಿದೆ. ಇದು ಸುಮಾರು ಸಾ.ಶ.ಪೂ. 1550ರ ಸಮಯದ್ದಾಗಿದ್ದು, ಈಜಿಪ್ಷಿಯನ್ ವೈದ್ಯಕೀಯ ಜ್ಞಾನ ಸಂಕಲನವಾಗಿದೆ. ಇದು “ಮೊಸಳೆ ಕಡಿತದಿಂದ ಹಿಡಿದು ಕಾಲ್ಬೆರಳಿನ ಉಗುರಿನ ಬೇನೆಯ ವರೆಗಿನ” ವಿವಿಧ ರೋಗಗಳಿಗೆ ಸುಮಾರು 700 ಔಷಧಿಗಳನ್ನು ಒಳಗೊಂಡಿದೆ. ಈ ಔಷಧಗಳಲ್ಲಿ ಹೆಚ್ಚಿನವು ಪರಿಣಾಮಕಾರಕವಾಗಿರಲಿಲ್ಲ, ಆದರೆ ಅವುಗಳಲ್ಲಿ ಕೆಲವು ವಿಪರೀತ ಅಪಾಯಕರವಾಗಿದ್ದವು. ಒಂದು ಗಾಯದ ಚಿಕಿತ್ಸೆಗಾಗಿ, ಶಿಫಾರಸ್ಸು ಮಾಡಲ್ಪಟ್ಟ ಔಷಧಗಳಲ್ಲಿ ಒಂದು, ವಿವಿಧ ವಸ್ತುಗಳನ್ನು ಸೇರಿಸಿದ್ದ ಮಾನವ ಮಲದಿಂದ ಮಾಡಿದ ಒಂದು ಮಿಶ್ರಣವನ್ನು ಹಚ್ಚುವುದಾಗಿತ್ತು.
5 ಈಜಿಪ್ಷಿಯನ್ ವೈದ್ಯಕೀಯ ಔಷಧಗಳ ಈ ಮೂಲಗ್ರಂಥವು, ಮೋಶೆಯ ಧರ್ಮಶಾಸ್ತ್ರವಿದ್ದ ಬೈಬಲಿನ ಮೊದಲನೆಯ ಐದು ಪುಸ್ತಕಗಳು ಬರೆಯಲ್ಪಟ್ಟ ಸಮಯದಲ್ಲಿಯೇ ಬರೆಯಲ್ಪಟ್ಟಿತ್ತು. ಸಾ.ಶ.ಪೂ. 1593ರಲ್ಲಿ ಹುಟ್ಟಿದ ಮೋಶೆಯು ಐಗುಪ್ತದಲ್ಲಿ ಬೆಳೆದನು. (ವಿಮೋಚನಕಾಂಡ 2:1-10) ಫರೋಹನ ಮನೆವಾರ್ತೆಯಲ್ಲಿ ಬೆಳೆಸಲ್ಪಟ್ಟ ಮೋಶೆಯು, “ಐಗುಪ್ತದವರ ಸರ್ವವಿದ್ಯೆಗಳಲ್ಲಿಯೂ ಉಪದೇಶ” ಹೊಂದಿದವನಾಗಿದ್ದನು. (ಅ. ಕೃತ್ಯಗಳು 7:22) ಅವನಿಗೆ ಐಗುಪ್ತದ “ವೈದ್ಯರ” ಪರಿಚಯವಿತ್ತು. (ಆದಿಕಾಂಡ 50:1-3) ಅವರ ಪರಿಣಾಮಕರವಲ್ಲದ ಅಥವಾ ಅಪಾಯಕರವಾದ ವೈದ್ಯಕೀಯ ಪದ್ಧತಿಗಳು ಅವನ ಬರವಣಿಗೆಗಳ ಮೇಲೆ ಪ್ರಭಾವ ಬೀರಿದವೊ?
6. ಮೋಶೆಯ ಧರ್ಮಶಾಸ್ತ್ರದಲ್ಲಿರುವ ಯಾವ ನೈರ್ಮಲ್ಯ ನಿಯಮಗಳು, ಆಧುನಿಕ ವೈದ್ಯಕೀಯ ವಿಜ್ಞಾನದಿಂದ ಸಮಂಜಸವೆಂದು ಪರಿಗಣಿಸಲ್ಪಡಸಾಧ್ಯವಿದೆ?
6 ಇದಕ್ಕೆ ವ್ಯತಿರಿಕ್ತವಾಗಿ, ಮೋಶೆಯ ಧರ್ಮಶಾಸ್ತ್ರವು, ಆಧುನಿಕ ವೈದ್ಯಕೀಯ ವಿಜ್ಞಾನದಿಂದ ಗಮನಾರ್ಹವೆಂದು ಪರಿಗಣಿಸಲ್ಪಡಸಾಧ್ಯವಿರುವ ನೈರ್ಮಲ್ಯ ನಿಯಮಗಳನ್ನು ಒಳಗೊಂಡಿತ್ತು. ದೃಷ್ಟಾಂತಕ್ಕೆ, ಸೈನಿಕ ಪಾಳೆಯದ ಕುರಿತಾದ ಒಂದು ನಿಯಮವು, ಮಲವು ಪಾಳೆಯದ ಹೊರಗೆ ಹೂಳಲ್ಪಡುವುದನ್ನು ಅಗತ್ಯಪಡಿಸಿತು. (ಧರ್ಮೋಪದೇಶಕಾಂಡ 23:13) ಇದು ವ್ಯಾಧಿಯನ್ನು ತಡೆಗಟ್ಟುವ ಅತ್ಯಂತ ಪ್ರಗತಿಪರವಾದ ಕ್ರಮವಾಗಿತ್ತು. ಇದು ಜಲಮೂಲಗಳು ಕಲುಷಿತಗೊಳ್ಳದಂತೆ ಸಹಾಯ ಮಾಡಿ, ಬಹುಮಟ್ಟಿಗೆ ವರ್ಧಿಷ್ಣು ದೇಶಗಳಲ್ಲಿ ಪ್ರತಿ ವರುಷ ಲಕ್ಷಗಟ್ಟಲೆ ಜೀವಗಳನ್ನು ಇನ್ನೂ ಆಹುತಿತೆಗೆದುಕೊಳ್ಳುತ್ತಿರುವ ನೊಣ ರವಾನಿತ ಶಿಗಲೋಸಿಸ್ ಮತ್ತಿತರ ಭೇದಿಸಂಬಂಧಿತ ರೋಗಗಳಿಂದ ಸಂರಕ್ಷಣೆಯನ್ನೊದಗಿಸಿತು.
7. ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಯಾವ ನೈರ್ಮಲ್ಯ ನಿಯಮಗಳು, ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡಿದವು?
7 ಮೋಶೆಯ ಧರ್ಮಶಾಸ್ತ್ರದಲ್ಲಿ, ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡಿದ ಇನ್ನಿತರ ನೈರ್ಮಲ್ಯ ನಿಯಮಗಳೂ ಇದ್ದವು. ಅಂಟುಜಾಡ್ಯವಿದ್ದ ಅಥವಾ ಇದೆಯೆಂದು ಸಂದೇಹಿಸಲ್ಪಟ್ಟಿರುವ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. (ಯಾಜಕಕಾಂಡ 13:1-5) ತಾನಾಗಿಯೇ (ಪ್ರಾಯಶಃ ರೋಗದಿಂದ) ಸತ್ತಿದ್ದ ಪ್ರಾಣಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಬಟ್ಟೆಗಳಾಗಲಿ, ಪಾತ್ರೆಗಳಾಗಲಿ, ಪುನರುಪಯೋಗಕ್ಕೆ ಮೊದಲು ತೊಳೆಯಬೇಕಾಗಿತ್ತು, ಇಲ್ಲವೆ ನಾಶಗೊಳಿಸಬೇಕಾಗಿತ್ತು. (ಯಾಜಕಕಾಂಡ 11:27, 28, 32, 33) ಹೆಣವನ್ನು ಮುಟ್ಟಿದ ಯಾವನೇ ವ್ಯಕ್ತಿಯು ಅಶುದ್ಧನೆಂದೆಣಿಸಲ್ಪಟ್ಟು, ಬಟ್ಟೆಗಳನ್ನು ಒಗೆದು ಸ್ನಾನಮಾಡುವುದನ್ನು ಒಳಗೊಂಡಿದ್ದ ಶುದ್ಧೀಕರಣ ವಿಧಾನವನ್ನು ಅನುಸರಿಸಬೇಕಿತ್ತು. ಏಳು ದಿನಗಳ ಅಶುದ್ಧಾವಧಿಯಲ್ಲಿ, ಅವನು ಇತರರೊಂದಿಗೆ ಶಾರೀರಿಕ ಸಂಪರ್ಕವನ್ನು ತಪ್ಪಿಸಬೇಕಾಗಿತ್ತು.—ಅರಣ್ಯಕಾಂಡ 19:1-13.
8, 9. ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ನೈರ್ಮಲ್ಯ ನಿಯಮಾವಳಿಯು, ಆ ಸಮಯಕ್ಕಿಂತ ಬಹಳಷ್ಟು ಮುಂದುವರಿದದ್ದಾಗಿತ್ತು ಎಂದು ಏಕೆ ಹೇಳಸಾಧ್ಯವಿದೆ?
8 ಈ ನೈರ್ಮಲ್ಯ ನಿಯಮಾವಳಿಯು ಬಹಳಷ್ಟು ಮುಂದುವರಿದಿದ್ದ ವಿವೇಕವನ್ನು ತಿಳಿಯಪಡಿಸುತ್ತದೆ. ಆಧುನಿಕ ವೈದ್ಯಕೀಯ ವಿಜ್ಞಾನವು, ರೋಗದ ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ವಿಷಯದಲ್ಲಿ ಹೆಚ್ಚನ್ನು ಕಲಿತಿದೆ. ಉದಾಹರಣೆಗೆ, 19ನೆಯ ಶತಮಾನದ ವೈದ್ಯಕೀಯ ಪ್ರಗತಿಗಳು, ಪೂತಿರೋಧ (ಆ್ಯಂಟಿಸೆಪ್ಸಿಸ್)—ಸೋಂಕುಗಳನ್ನು ಕಡಿಮೆಮಾಡಲು ಶುಚಿತ್ವ—ದ ಪರಿಚಯಕ್ಕೆ ನಡೆಸಿದವು. ಪರಿಣಾಮವಾದರೋ ಸೋಂಕುಗಳಲ್ಲಿ ಮತ್ತು ಅಕಾಲ ಮರಣಗಳಲ್ಲಿ ಗಮನಾರ್ಹವಾದ ಇಳಿತವಾಗಿತ್ತು. 1900ನೆಯ ವರ್ಷದಲ್ಲಿ, ಅನೇಕ ಯೂರೋಪಿಯನ್ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ, ಜನನದ ಸಮಯದಲ್ಲಿ ಜೀವ ನಿರೀಕ್ಷಣೆಯು 50ಕ್ಕಿಂತಲೂ ಕಡಿಮೆಯಾಗಿತ್ತು. ಅಂದಿನಿಂದ, ಅದು ಗಮನಾರ್ಹವಾಗಿ ವೃದ್ಧಿಯಾಗಿರುವುದು, ರೋಗ ನಿಯಂತ್ರಣದಲ್ಲಿ ವೈದ್ಯಕೀಯ ಪ್ರಗತಿಯ ಕಾರಣ ಮಾತ್ರವಲ್ಲ, ಹೆಚ್ಚು ಉತ್ತಮ ನೈರ್ಮಲ್ಯ ಮತ್ತು ಜೀವಿಸುವ ಪರಿಸ್ಥಿತಿಗಳಿಂದಾಗಿಯೂ ಆಗಿದೆ.
9 ಆದರೂ, ರೋಗವು ಹೇಗೆ ಹರಡುತ್ತದೆಂದು ವೈದ್ಯಕೀಯ ವಿಜ್ಞಾನವು ತಿಳಿಯುವುದಕ್ಕೆ ಸಾವಿರಾರು ವರ್ಷಗಳಿಗೆ ಮೊದಲು, ಬೈಬಲು ರೋಗರಕ್ಷಣೆಯ ಸಲುವಾಗಿ ಸಮಂಜಸವಾದ ಪ್ರತಿರೋಧ ಕ್ರಮಗಳನ್ನು ಸೂಚಿಸಿತು. ತನ್ನ ದಿನಗಳ ಸಾಮಾನ್ಯ ಇಸ್ರಾಯೇಲ್ಯರು, 70 ಇಲ್ಲವೆ 80 ವಯಸ್ಸಿನ ತನಕ ಬದುಕಿ ಉಳಿಯುತ್ತಾರೆಂದು ಮೋಶೆಯು ಹೇಳಶಕ್ತನಾದುದು ಆಶ್ಚರ್ಯಕರವಲ್ಲ. (ಕೀರ್ತನೆ 90:10) ಅಂತಹ ನೈರ್ಮಲ್ಯ ನಿಯಮಗಳ ಕುರಿತು ಮೋಶೆಯು ಹೇಗೆ ತಿಳಿದಿರಸಾಧ್ಯವಿತ್ತು? ಬೈಬಲು ತಾನೇ ವಿವರಿಸುವುದು: ಧಮಶಾಸ್ತ್ರದ ನಿಯಮಾವಳಿಯು “ದೇವದೂತರ ಮುಖಾಂತರ ರವಾನಿಸಲ್ಪಟ್ಟಿತು.” (ಗಲಾತ್ಯ 3:19, NW) ಹೌದು, ಬೈಬಲು ಮಾನವ ವಿವೇಕದ ಒಂದು ಗ್ರಂಥವಾಗಿಲ್ಲ; ಅದು ದೇವರಿಂದ ಬಂದ ಒಂದು ಗ್ರಂಥವಾಗಿದೆ.
ಆಧುನಿಕ ಜೀವನಕ್ಕೆ ಪ್ರಾಯೋಗಿಕವಾದೊಂದು ಗ್ರಂಥ
10. ಬೈಬಲು ಸುಮಾರು 2,000 ವರ್ಷಗಳ ಹಿಂದೆಯೇ ಪೂರ್ಣಗೊಳಿಸಲ್ಪಟ್ಟಿತ್ತಾದರೂ, ಅದರ ಸಲಹೆಯ ವಿಷಯದಲ್ಲಿ ಯಾವುದು ಸತ್ಯವಾಗಿದೆ?
10 ಸಲಹೆ ನೀಡುವ ಪುಸ್ತಕಗಳು ಹಳೆಯದಾಗುವ ಪ್ರವೃತ್ತಿಯಿದ್ದು, ಅವು ಬೇಗನೆ ಪರಿಷ್ಕರಿಸಲ್ಪಡುತ್ತವೆ ಅಥವಾ ಬದಲಿಮಾಡಲ್ಪಡುತ್ತವೆ. ಆದರೆ ಬೈಬಲು ನಿಜವಾಗಿಯೂ ಅಪೂರ್ವವಾಗಿದೆ. “ನಿನ್ನ ಆಜ್ಞೆಗಳು ಬಹುಖಂಡಿತವಾಗಿವೆ [“ಅತಿ ವಿಶ್ವಾಸಾರ್ಹವಾಗಿವೆ,” NW]” ಎಂದು ಕೀರ್ತನೆ 93:5 ಹೇಳುತ್ತದೆ. ಬೈಬಲು ಸುಮಾರು 2,000 ವರ್ಷಗಳ ಹಿಂದೆ ಪೂರ್ಣಗೊಳಿಸಲ್ಪಟ್ಟಿತ್ತಾದರೂ, ಅದರ ಮಾತುಗಳು ಇನ್ನೂ ಅನ್ವಯಯೋಗ್ಯ. ಮತ್ತು ಅವು, ನಮ್ಮ ಚರ್ಮದ ಬಣ್ಣವು ಯಾವುದೇ ಆಗಿರಲಿ ಅಥವಾ ನಾವು ಯಾವುದೇ ದೇಶದಲ್ಲಿ ಜೀವಿಸುತ್ತಿರಲಿ, ಅಷ್ಟೇ ಪರಿಣಾಮಕಾರಿಯಾಗಿ ಅನ್ವಯಿಸುತ್ತವೆ. ಬೈಬಲಿನ ಅನಂತಕಾಲಿಕ, “ಅತಿ ವಿಶ್ವಾಸಾರ್ಹ” ಸಲಹೆಗಳ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
11. ಹಲವಾರು ದಶಕಗಳ ಹಿಂದೆ, ಮಕ್ಕಳಿಗೆ ಶಿಸ್ತು ನೀಡುವುದರ ಕುರಿತು ಏನನ್ನು ನಂಬುವಂತೆ ಅನೇಕ ಹೆತ್ತವರನ್ನು ಮಾರ್ಗದರ್ಶಿಸಲಾಯಿತು?
11 ಹಲವಾರು ದಶಕಗಳ ಹಿಂದೆ ಅನೇಕ ಮಂದಿ ಹೆತ್ತವರು, ಮಗುವನ್ನು ಬೆಳೆಸುವ ವಿಷಯದಲ್ಲಿ “ನಾವೀನ್ಯ ತರುವ ವಿಚಾರ”ಗಳಿಂದ ಉತ್ತೇಜಿತರಾಗಿ “ನಿಷೇಧಿಸುವುದು ನಿಷಿದ್ಧ” ಎಂದೆಣಿಸಿದರು. ಮಕ್ಕಳಿಗೆ ಮಿತಿಗಳನ್ನು ಇಡುವುದು, ಮಾನಸಿಕ ಆಘಾತ ಮತ್ತು ಹತಾಶೆಯನ್ನು ಉಂಟುಮಾಡೀತೆಂದು ಅವರು ಭಯಪಟ್ಟರು. ಹೆತ್ತವರು ತಮ್ಮ ಮಕ್ಕಳಿಗೆ ಮೃದುವಾದ ತಿದ್ದುಪಾಟಿಗಿಂತ ಹೆಚ್ಚಿನದ್ದೇನನ್ನೂ ಕೊಡಬಾರದೆಂದು ಸದ್ಭಾವನೆಯ ಸಲಹೆಗಾರರು ಪಟ್ಟುಹಿಡಿದು ಹೇಳುತ್ತಿದ್ದರು. ಅಂತಹ ಪರಿಣತರಲ್ಲಿ ಅನೇಕರು ಈಗ, “ಸ್ವಲ್ಪ ಹೆಚ್ಚು ಕಟ್ಟುನಿಟ್ಟಿನವರಾಗುವಂತೆ, ತಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವಂತೆ ಹೆತ್ತವರನ್ನು ಪುನಃ ಪ್ರಚೋದಿಸುತ್ತಿದ್ದಾರೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ.
12. “ಶಿಸ್ತು” ಎಂಬುದಾಗಿ ಭಾಷಾಂತರಿಸಿದ ಗ್ರೀಕ್ ನಾಮಪದದ ಅರ್ಥವೇನು, ಮತ್ತು ಮಕ್ಕಳಿಗೆ ಅಂತಹ ಶಿಸ್ತಿನ ಅಗತ್ಯವಿದೆ ಏಕೆ?
12 ಆದರೆ ಈ ಎಲ್ಲ ಸಮಯಗಳಲ್ಲಿ, ಮಕ್ಕಳ ತರಬೇತಿಯ ವಿಷಯದಲ್ಲಿ ಸ್ಪಷ್ಟವಾದ ಮತ್ತು ಸಮಂಜಸವಾದ ಸಲಹೆಯನ್ನು ಬೈಬಲು ನೀಡಿದೆ. ಅದು ಬುದ್ಧಿವಾದ ನೀಡುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ [“ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ,” NW] ಅವರನ್ನು ಸಾಕಿಸಲಹಿರಿ.” (ಎಫೆಸ 6:4) “ಶಿಸ್ತು” ಎಂಬುದಾಗಿ ಭಾಷಾಂತರಿಸಿದ ಗ್ರೀಕ್ ನಾಮಪದದ ಅರ್ಥವು, “ಬೆಳೆಸುವುದು, ತರಬೇತು ನೀಡುವುದು, ಉಪದೇಶಿಸುವುದು” ಎಂದಾಗಿದೆ. ಶಿಸ್ತು ಅಥವಾ ಉಪದೇಶವು ಹೆತ್ತವರ ಪ್ರೇಮದ ಸಾಕ್ಷ್ಯವೆಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 13:24) ಸ್ಪಷ್ಟವಾದ ನೈತಿಕ ಮಾರ್ಗದರ್ಶನಗಳ ಕೆಳಗೆ ಮಕ್ಕಳು ಏಳಿಗೆ ಹೊಂದುತ್ತಾರೆ, ಮತ್ತು ಇದು ಸರಿ ಹಾಗೂ ತಪ್ಪಿನ ಸಂಬಂಧವಾದ ಪ್ರಜ್ಞೆಯನ್ನು ವಿಕಸಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ಸರಿಯಾಗಿ ಕೊಡಲ್ಪಟ್ಟ ಶಿಸ್ತು ಅವರಲ್ಲಿ ಭದ್ರತೆಯ ಭಾವವನ್ನು ಉಂಟುಮಾಡಲು ಸಹಾಯ ಮಾಡುತ್ತದೆ; ಹೆತ್ತವರು ತಮ್ಮ ವಿಷಯದಲ್ಲಿ ಮತ್ತು ತಾವು ಯಾವ ವಿಧದ ವ್ಯಕ್ತಿಯಾಗಿ ಪರಿಣಮಿಸುತ್ತಿದ್ದೇವೆಂಬ ವಿಷಯದಲ್ಲಿ ಚಿಂತೆಮಾಡುತ್ತಾರೆಂದು ಅದು ಅವರಿಗೆ ತಿಳಿಸುತ್ತದೆ.—ಹೋಲಿಸಿರಿ ಜ್ಞಾನೋಕ್ತಿ 4:10-13.
13. (ಎ) ಶಿಸ್ತಿನ ವಿಷಯದಲ್ಲಿ, ಬೈಬಲು ಹೆತ್ತವರಿಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ? (ಬಿ) ಬೈಬಲು ಯಾವ ವಿಧದ ಶಿಸ್ತನ್ನು ಶಿಫಾರಸ್ಸು ಮಾಡುತ್ತದೆ?
13 ಆದರೆ ಶಿಸ್ತಿನ ಈ ವಿಷಯದಲ್ಲಿ ಬೈಬಲು ಹೆತ್ತವರಿಗೆ ಎಚ್ಚರಿಕೆ ನೀಡುತ್ತದೆ. ಹೆತ್ತವರ ಅಧಿಕಾರವು ಎಂದಿಗೂ ತಪ್ಪಾಗಿ ಬಳಸಲ್ಪಡಬಾರದು. (ಜ್ಞಾನೋಕ್ತಿ 22:15) ಯಾವುದೇ ಮಗುವನ್ನು ಎಂದೂ ಕ್ರೂರವಾದ ದಂಡನೆಗೆ ಒಳಪಡಿಸಬಾರದು. ಬೈಬಲಿಗನುಸಾರ ಜೀವಿಸುವ ಕುಟುಂಬದಲ್ಲಿ, ಶಾರೀರಿಕ ಹಿಂಸೆಗೆ ಯಾವುದೇ ಸ್ಥಳವಿಲ್ಲ. (ಕೀರ್ತನೆ 11:5) ಒಂದು ಮಗುವಿನ ಆತ್ಮವನ್ನು ಜರ್ಜರಿತಗೊಳಿಸಸಾಧ್ಯವಿರುವ ಎಲ್ಲ ಭಾವನಾತ್ಮಕ ಹಿಂಸೆ—ಕಟುನುಡಿಗಳು, ಸತತವಾದ ಟೀಕೆ, ಮತ್ತು ಚುಚ್ಚುವಂತಹ ಅಣಕನುಡಿ—ಗೂ ಯಾವುದೇ ಸ್ಥಳವಿಲ್ಲ. (ಹೋಲಿಸಿರಿ ಜ್ಞಾನೋಕ್ತಿ 12:18.) ವಿವೇಕಯುತವಾಗಿ, ಬೈಬಲು ಹೆತ್ತವರನ್ನು ಎಚ್ಚರಿಸುವುದು: “ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ [ಅಥವಾ, “ನೀವು ಅವರ ಹೃದಯವನ್ನು ಬರಿದುಮಾಡಬೇಡಿ,” ಫಿಲಿಪ್ಸ್].” (ಕೊಲೊಸ್ಸೆ 3:21) ಬೈಬಲು ತಡೆಗಟ್ಟುವ ಸೂಕ್ತಕ್ರಮಗಳನ್ನು ಶಿಫಾರಸ್ಸುಮಾಡುತ್ತದೆ. ಧರ್ಮೋಪದೇಶಕಾಂಡ 11:19ರಲ್ಲಿ, ಹೆತ್ತವರು ತಮ್ಮ ಮಕ್ಕಳಲ್ಲಿ ನೈತಿಕ ಮತ್ತು ಆತ್ಮಿಕ ಮೌಲ್ಯಗಳನ್ನು ಬೇರೂರಿಸಲು ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. ಮಕ್ಕಳನ್ನು ಬೆಳೆಸುವುದರ ಕುರಿತಾದ ಅಂತಹ ಸ್ಪಷ್ಟವಾದ, ಸಮಂಜಸ ಸಲಹೆಯು, ಬೈಬಲ್ ಸಮಯಗಳಲ್ಲಿ ಹೇಗಿತ್ತೋ ಹಾಗೆಯೇ ಇಂದು ಸುಸಂಬದ್ಧವಾಗಿದೆ.
14, 15. (ಎ) ಯಾವ ರೀತಿಯಲ್ಲಿ ಬೈಬಲು ಕೇವಲ ವಿವೇಕಯುತವಾದ ಸಲಹೆಗಿಂತ ಹೆಚ್ಚಿನದ್ದನ್ನು ಒದಗಿಸುತ್ತದೆ? (ಬಿ) ವಿಭಿನ್ನ ಜಾತಿಗಳು ಹಾಗೂ ರಾಷ್ಟ್ರಗಳ ಸ್ತ್ರೀಪುರುಷರು ಒಬ್ಬರನ್ನೊಬ್ಬರು ಸಮಾನತೆಯಿಂದ ಕಾಣುವಂತೆ ಯಾವ ಬೈಬಲ್ ಬೋಧನೆಗಳು ಸಹಾಯ ಮಾಡಬಲ್ಲವು?
14 ಬೈಬಲು ಕೇವಲ ವಿವೇಕಯುತವಾದ ಸಲಹೆಗಿಂತಲೂ ಹೆಚ್ಚಿನದ್ದನ್ನು ಒದಗಿಸುತ್ತದೆ. ಅದರ ಸಂದೇಶವು ಹೃದಯಕ್ಕೆ ಹಿಡಿಸುತ್ತದೆ. ಇಬ್ರಿಯ 4:12 ಹೇಳುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” ಬೈಬಲಿನ ಪ್ರಚೋದನಾತ್ಮಕ ಶಕ್ತಿಯ ಒಂದು ಉದಾಹರಣೆಯನ್ನು ಪರಿಗಣಿಸಿರಿ.
15 ಇಂದು ಜನರು, ಜಾತೀಯ, ರಾಷ್ಟ್ರೀಯ, ಹಾಗೂ ಕುಲಸಂಬಂಧವಾದ ತಡೆಗಟ್ಟುಗಳಿಂದ ವಿಭಾಗಿತರಾಗಿದ್ದಾರೆ. ಇಂತಹ ಕೃತಕ ತಡೆಗಳು ಲೋಕದಾದ್ಯಂತದ ಯುದ್ಧಗಳಲ್ಲಿ ಮುಗ್ಧ ಮಾನವರ ಒಟ್ಟುಗಟ್ಟಳೆ ಸಂಹಾರಕ್ಕೆ ಸಹಾಯ ಮಾಡಿವೆ. ಇನ್ನೊಂದು ಕಡೆಯಲ್ಲಿ, ವಿಭಿನ್ನ ಜಾತಿಗಳು ಹಾಗೂ ರಾಷ್ಟ್ರಗಳ ಸ್ತ್ರೀಪುರುಷರು ಒಬ್ಬರನ್ನೊಬ್ಬರು ಸಮಾನತೆಯಿಂದ ಕಾಣಲು ಸಹಾಯ ಮಾಡುವ ಬೋಧನೆಗಳನ್ನು ಬೈಬಲು ಒಳಗೊಂಡಿದೆ. ದೃಷ್ಟಾಂತಕ್ಕಾಗಿ, ಅಪೊಸ್ತಲ ಕೃತ್ಯಗಳು 17:26 ಹೇಳುವುದೇನೆಂದರೆ, ದೇವರು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ”ದನು. ಇರುವುದು ನಿಜವಾಗಿಯೂ ಏಕಮಾತ್ರ ಕುಲ—ಮಾನವಕುಲ—ವೆಂದು ಇದು ತೋರಿಸುತ್ತದೆ! ಬೈಬಲು ‘ದೇವರನ್ನು ಅನುಕರಿಸುವವರಾಗಿರಿ’ ಎಂದು ಮತ್ತೂ ನಮಗೆ ಪ್ರೋತ್ಸಾಹಿಸುತ್ತಾ, ಆತನ ಕುರಿತು, “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದು ಹೇಳುತ್ತದೆ. (ಎಫೆಸ 5:1; ಅ. ಕೃತ್ಯಗಳು 10:34, 35) ಬೈಬಲಿನ ಬೋಧನೆಗಳಿಗನುಸಾರ ಜೀವಿಸಲು ನಿಜವಾಗಿಯೂ ಪ್ರಯತ್ನಿಸುವವರಿಗೆ, ಈ ಜ್ಞಾನವು ಏಕೀಕರಿಸುವ ಪರಿಣಾಮವನ್ನುಂಟುಮಾಡುತ್ತದೆ. ಅದು ಅತ್ಯಂತ ಅಗಾಧವಾದ ತಳದಲ್ಲಿ, ಅಂದರೆ ಹೃದಯದಲ್ಲಿ, ಜನರನ್ನು ವಿಭಾಗಿಸುವಂತಹ ಮಾನವನಿರ್ಮಿತ ತಡೆಗಳನ್ನು ವಿಲೀನಗೊಳಿಸುತ್ತ ಕಾರ್ಯನಡಿಸುತ್ತದೆ. ಇಂದಿನ ಲೋಕದಲ್ಲಿ ಅದು ನಿಜವಾಗಿಯೂ ಕಾರ್ಯನಡಿಸುತ್ತದೊ?
16. ಯೆಹೋವನ ಸಾಕ್ಷಿಗಳು ನಿಜವಾಗಿಯೂ ಒಂದು ಅಂತಾರಾಷ್ಟ್ರೀಯ ಸಹೋದರತ್ವವಾಗಿದ್ದಾರೆ ಎಂಬುದನ್ನು ತೋರಿಸುವ ಒಂದು ಅನುಭವವನ್ನು ತಿಳಿಸಿರಿ.
16 ನಿಶ್ಚಯವಾಗಿಯೂ ಅದು ಕಾರ್ಯನಡಿಸುತ್ತದೆ! ಯೆಹೋವನ ಸಾಕ್ಷಿಗಳು ತಮ್ಮ ಅಂತಾರಾಷ್ಟ್ರೀಯ ಸಹೋದರತ್ವಕ್ಕೆ ಪ್ರಖ್ಯಾತರಾಗಿದ್ದಾರೆ. ಇದು, ಸರ್ವಸಾಮಾನ್ಯವಾಗಿ ಒಬ್ಬರು ಇನ್ನೊಬ್ಬರೊಂದಿಗೆ ಶಾಂತಿಯಿಂದ ಇರದ ವಿಭಿನ್ನ ಹಿನ್ನೆಲೆಗಳಿಂದ ಬಂದ ಜನರನ್ನು ಐಕ್ಯಗೊಳಿಸುತ್ತದೆ. ಉದಾಹರಣೆಗಾಗಿ, ರುಆಂಡದಲ್ಲಿ ಸಂಭವಿಸಿದ ಕುಲಸಂಬಂಧಿತ ಸಂಘರ್ಷಗಳ ಸಮಯದಲ್ಲಿ, ಪ್ರತಿ ಬುಡಕಟ್ಟಿನ ಯೆಹೋವನ ಸಾಕ್ಷಿಗಳು, ಇನ್ನೊಂದು ಬುಡಕಟ್ಟಿನ ತಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಕಾಪಾಡಿದರು. ಈ ಕಾರ್ಯವನ್ನು ಮಾಡುವಾಗ ಅವರು ತಮ್ಮ ಸ್ವಂತ ಜೀವಗಳನ್ನು ಅಪಾಯಕ್ಕೊಡ್ಡಿದರು. ಒಂದು ವಿದ್ಯಮಾನದಲ್ಲಿ, ಹೂಟೂ ಸಾಕ್ಷಿಯೊಬ್ಬನು ತನ್ನ ಮನೆಯಲ್ಲಿ, ತನ್ನ ಸಭೆಯ ಆರು ಜನರ ಒಂದು ಟೂಟ್ಸಿ ಕುಟುಂಬವನ್ನು ಅಡಗಿಸಿದನು. ದುಃಖಕರವಾಗಿ, ಕಾಲಕ್ರಮೇಣ ಆ ಟೂಟ್ಸಿ ಕುಟುಂಬವನ್ನು ಕಂಡುಹಿಡಿದು, ಅವರನ್ನು ಕೊಲ್ಲಲಾಯಿತು. ಈ ಹೂಟೂ ಸಹೋದರನೂ ಅವನ ಕುಟುಂಬವೂ ಈಗ ಆ ಕೊಲೆಗಾರರ ಕೋಪವನ್ನು ಎದುರಿಸಿ, ಟಾನ್ಸೇನಿಯಕ್ಕೆ ಪಲಾಯನಮಾಡಬೇಕಾಯಿತು. ತದ್ರೀತಿಯ ಅನೇಕ ಉದಾಹರಣೆಗಳು ವರದಿಸಲ್ಪಟ್ಟವು. ಬೈಬಲಿನ ಸಂದೇಶದ ಪ್ರಚೋದನಾತ್ಮಕ ಶಕ್ತಿಯಿಂದಾಗಿ ತಮ್ಮ ಹೃದಯಗಳು ಬಹಳವಾಗಿ ಪ್ರಚೋದಿತವಾಗಿರುವುದರಿಂದಲೇ ಇಂತಹ ಐಕ್ಯವು ಸಾಧ್ಯವಿರುವುದೆಂದು ಯೆಹೋವನ ಸಾಕ್ಷಿಗಳು ಸಿದ್ಧಮನಸ್ಸಿನಿಂದ ಒಪ್ಪುತ್ತಾರೆ. ಈ ದ್ವೇಷಭರಿತ ಲೋಕದಲ್ಲಿಯೂ, ಬೈಬಲು ಜನರನ್ನು ಐಕ್ಯಗೊಳಿಸಸಾಧ್ಯವಾಗಿರುವುದು, ಅದು ದೇವರಿಂದ ಬಂದದ್ದಾಗಿದೆ ಎಂಬುದಕ್ಕೆ ಬಲವಾದ ರುಜುವಾತಾಗಿದೆ.
ಸತ್ಯ ಪ್ರವಾದನೆಯ ಒಂದು ಗ್ರಂಥ
17. ಬೈಬಲ್ ಪ್ರವಾದನೆಗಳು ಮಾನವ ಕಲ್ಪಿತ ಭವಿಷ್ಯನುಡಿಗಳಿಗೆ ಹೇಗೆ ಅಸದೃಶವಾಗಿವೆ?
17 “ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದ್ಧಿಯಿಂದ ವಿವರಿಸತಕ್ಕಂಥದಲ್ಲ” ಎಂದು 2 ಪೇತ್ರ 1:20 ಹೇಳುತ್ತದೆ. ಬೈಬಲ್ ಪ್ರವಾದಿಗಳು, ಅಸ್ತಿತ್ವದಲ್ಲಿರುವ ಲೋಕದಲ್ಲಿನ ವ್ಯವಹಾರಗಳನ್ನು ವಿಶ್ಲೇಷಿಸಿ, ತದನಂತರ ಈ ವಿಕಸನೆಗಳ ಕುರಿತಾದ ತಮ್ಮ ವೈಯಕ್ತಿಕ ಅರ್ಥವಿವರಣೆಯ ಮೇಲಾಧಾರಿತವಾದ ಊಹಿತ ಮುನ್ಸೂಚನೆಯನ್ನು ನೀಡಲಿಲ್ಲ. ಅಥವಾ ಯಾವುದೇ ಭಾವೀ ಸಂಭವಕ್ಕೆ ಹೊಂದಿಕೊಳ್ಳಸಾಧ್ಯವಿರುವ ಅಸ್ಪಷ್ಟವಾದ ಭವಿಷ್ಯನುಡಿಗಳನ್ನು ಅವರು ನುಡಿಯಲೂ ಇಲ್ಲ. ಒಂದು ಉದಾಹರಣೆಯೋಪಾದಿ, ಅಸಾಮಾನ್ಯವಾಗಿ ನಿರ್ದಿಷ್ಟವಾಗಿದ್ದು, ಆಗ ಜೀವಿಸುತ್ತಿದ್ದ ಜನರು ಏನನ್ನು ನಿರೀಕ್ಷಿಸಿದ್ದಿರಬಹುದೋ ಅದಕ್ಕೆ ತೀರ ವಿರುದ್ಧವಾದುದನ್ನು ಮುಂತಿಳಿಸಿದ ಒಂದು ಬೈಬಲ್ ಪ್ರವಾದನೆಯನ್ನು ನಾವು ಪರಿಗಣಿಸೋಣ.
18. ಪುರಾತನ ಬಾಬೆಲಿನ ನಿವಾಸಿಗಳಿಗೆ ನಿಸ್ಸಂಶಯವಾಗಿಯೂ ತೀರ ಸುಭದ್ರವಾದ ಅನಿಸಿಕೆ ಏಕಾಯಿತು, ಆದರೆ ಬಾಬೆಲಿನ ಕುರಿತು ಯೆಶಾಯನು ಏನನ್ನು ಮುಂತಿಳಿಸಿದ್ದನು?
18 ಸಾ.ಶ.ಪೂ. ಏಳನೆಯ ಶತಮಾನದಷ್ಟಕ್ಕೆ, ಬಾಬೆಲು ಬಾಬೆಲ್ ಸಾಮ್ರಾಜ್ಯದ ಅಭೇದ್ಯವೆಂದು ತೋರಿದ ರಾಜಧಾನಿಯಾಗಿತ್ತು. ಆ ನಗರವು ಯೂಫ್ರೇಟೀಸ್ ನದಿಯ ಮೇಲೆ ಸವಾರಿಮಾಡುವಂತೆ ಕುಳಿತಿದ್ದು, ನದಿಯ ನೀರನ್ನು ಅಗಲವಾದ ಮತ್ತು ಆಳವಾದ ಒಂದು ಕಂದಕ ಮತ್ತು ಕಾಲುವೆಗಳ ಜಾಲವನ್ನು ರಚಿಸಲು ಉಪಯೋಗಿಸಲಾಗಿತ್ತು. ಇದಲ್ಲದೆ, ನಗರವು ಸುದೃಢವಾದ ಜೋಡಿಗೋಡೆಗಳ ವ್ಯವಸ್ಥೆಯಿಂದ, ಅನೇಕ ರಕ್ಷಣಾದುರ್ಗಗಳಿಂದ ಆಸರೆ ಪಡೆದು ರಕ್ಷಿಸಲ್ಪಟ್ಟಿತ್ತು. ಬಾಬೆಲಿನ ನಿವಾಸಿಗಳಿಗೆ ಸುಭದ್ರರೆಂಬ ಅನಿಸಿಕೆಯಾದುದರಲ್ಲಿ ಆಶ್ಚರ್ಯವಿಲ್ಲ. ಆದರೂ, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಬಾಬೆಲು ಅದರ ಮಹಿಮೆಯ ಪರಮಾವಧಿಗೆ ಏರುವದಕ್ಕೂ ಮೊದಲು, ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಬಾಬೆಲಿಗೆ . . . ಕೆಡವಿದ ಸೊದೋಮ್ ಗೊಮೋರಗಳ ಗತಿಯು ಸಂಭವಿಸುವದು. ಅದು ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು; ಯಾವ ಅರಬಿಯನೂ ಗುಡಾರಹಾಕನು; ಕುರುಬರು ಮಂದೆಗಳನ್ನು ತಂಗಿಸರು.” (ಯೆಶಾಯ 13:19, 20) ಬಾಬೆಲು ನಾಶಮಾಡಲ್ಪಡುವುದೆಂದು ಮಾತ್ರವಲ್ಲ, ಅದು ಶಾಶ್ವತವಾಗಿ ಅನಿವಾಸಿತವಾಗುವುದೆಂದೂ ಆ ಪ್ರವಾದನೆಯು ಮುಂತಿಳಿಸಿತೆಂಬುದನ್ನು ಗಮನಿಸಿ. ಮುಂತಿಳಿಸಲು ಎಂತಹ ಒಂದು ಧೈರ್ಯಭರಿತ ಭವಿಷ್ಯನುಡಿ! ಯೆಶಾಯನು ನಿರ್ಜನವಾಗಿದ್ದ ಬಾಬೆಲನ್ನು ನೋಡಿದ ಬಳಿಕ ತನ್ನ ಪ್ರವಾದನೆಯನ್ನು ಬರೆದಿರಸಾಧ್ಯವಿತ್ತೊ? ಇಲ್ಲ ಎಂದು ಇತಿಹಾಸವು ಉತ್ತರಿಸುತ್ತದೆ!
19. ಸಾ.ಶ.ಪೂ. 539ರ ಅಕ್ಟೋಬರ್ 5ರಂದು ಯೆಶಾಯನ ಪ್ರವಾದನೆಯು ಏಕೆ ಸಂಪೂರ್ಣವಾಗಿ ನೆರವೇರಲಿಲ್ಲ?
19 ಸಾ.ಶ.ಪೂ. 539ರ ಅಕ್ಟೋಬರ್ 5ರ ರಾತ್ರಿಯಂದು, ಬಾಬೆಲು ಮಹಾ ಕೋರೇಷನ ಅಧಿಕಾರದ ಕೆಳಗಿದ್ದ ಮೇದ್ಯಪಾರಸಿಯ ಸೈನ್ಯಗಳಿಗೆ ವಶವಾಯಿತು. ಆದರೂ, ಯೆಶಾಯನ ಪ್ರವಾದನೆಯು ಆ ಸಮಯದಲ್ಲಿ ಪೂರ್ಣವಾಗಿ ನೆರವೇರಲಿಲ್ಲ. ಕೋರೇಷನ ವಶವಾದ ಬಳಿಕ, ನಿವಾಸಿತ ಬಾಬೆಲು—ದುರ್ಬಲವಾದ ಬಾಬೆಲಾಗಿದ್ದರೂ—ಶತಮಾನಗಳ ವರೆಗೆ ಅಸ್ತಿತ್ವದಲ್ಲಿರುತ್ತಾ ಮುಂದುವರಿಯಿತು. ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ಯೆಶಾಯನ ಮೃತ ಸಮುದ್ರ ಸುರುಳಿಯು ನಕಲುಮಾಡಲ್ಪಟ್ಟ ಸಮಯಕ್ಕೆ ಸುಮಾರಾಗಿ, ಪಾರ್ಥಿಯನರು ಬಾಬೆಲನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆಗ ಅದು ಸುತ್ತುಮುತ್ತಲಿನ ಜನಾಂಗಗಳು ಯಾವುದಕ್ಕಾಗಿ ಕಾದಾಡಿದವೋ ಆ ಅತ್ಯಂತ ಅಪೇಕ್ಷಣೀಯ ಬಹುಮಾನವಾಗಿ ವೀಕ್ಷಿಸಲ್ಪಟ್ಟಿತು. ಯೆಹೂದಿ ಇತಿಹಾಸಕಾರನಾದ ಜೋಸೀಫಸನು ವರದಿಸಿದ್ದೇನೆಂದರೆ, ಸಾ.ಶ.ಪೂ. ಒಂದನೆಯ ಶತಮಾನದಲ್ಲಿ, ಅಲ್ಲಿ “ಬಹು ದೊಡ್ಡ ಸಂಖ್ಯೆಯಲ್ಲಿ” ಯೆಹೂದ್ಯರು ವಾಸಿಸುತ್ತಿದ್ದರು. ಕೇಂಬ್ರಿಡ್ಜ್ ಪುರಾತನ ಇತಿಹಾಸ (ಇಂಗ್ಲಿಷ್)ಕ್ಕನುಸಾರ, ಸಾ.ಶ. 24ರಲ್ಲಿ, ಪಾಲ್ಮೈರದ ವ್ಯಾಪಾರಿಗಳು ಬಾಬೆಲಿನಲ್ಲಿ ಒಂದು ಸಮೃದ್ಧ ವ್ಯಾಪಾರಿ ಕಾಲೊನಿಯನ್ನು ಸ್ಥಾಪಿಸಿದರು. ಹೀಗೆ, ಸಾ.ಶ. ಒಂದನೆಯ ಶತಮಾನದಷ್ಟು ತಡವಾಗಿಯೂ, ಬಾಬೆಲು ಇನ್ನೂ ಪೂರ್ಣವಾಗಿ ನಿರ್ಜನವಾಗಿರಲಿಲ್ಲವಾದರೂ ಯೆಶಾಯನ ಪುಸ್ತಕವು ಅದಕ್ಕಿಂತಲೂ ಎಷ್ಟೋ ಮುಂಚೆಯೇ ಪೂರ್ಣಗೊಳಿಸಲ್ಪಟ್ಟಿತ್ತು.—1 ಪೇತ್ರ 5:13.
20. ಬಾಬೆಲು ಕೊನೆಗೆ ಬರಿಯ “ಹಾಳುದಿಬ್ಬ” ಆಯಿತೆಂಬುದಕ್ಕೆ ಯಾವ ಸಾಕ್ಷ್ಯವಿದೆ?
20 ಬಾಬೆಲು ನಿರ್ಜನವಾಗುವುದನ್ನು ನೋಡುವಷ್ಟು ಕಾಲ ಯೆಶಾಯನು ಬದುಕಿ ಉಳಿಯಲಿಲ್ಲ. ಆದರೆ ಪ್ರವಾದನೆಗೆ ಸರಿಯಾಗಿ, ಬಾಬೆಲು ಕೊನೆಗೆ ಬರಿಯ “ಹಾಳುದಿಬ್ಬ”ವಾಯಿತು. (ಯೆರೆಮೀಯ 51:37) ಹೀಬ್ರು ವಿದ್ವಾಂಸನಾದ ಜೆರೋಮ್ (ಸಾ.ಶ. ನಾಲ್ಕನೆಯ ಶತಮಾನದಲ್ಲಿ ಜನಿಸಿದನು) ಎಂಬವನಿಗನುಸಾರ, ಅವನ ದಿನದಷ್ಟಕ್ಕೆ ಬಾಬೆಲು “ಪ್ರತಿಯೊಂದು ಜಾತಿಯ ಪ್ರಾಣಿ”ಗಳು ಅಲೆದಾಡುತ್ತಿದ್ದ ಬೇಟೆಯಾಡುವ ಸ್ಥಳವಾಗಿತ್ತು, ಮತ್ತು ಅದು ಈ ದಿನದ ವರೆಗೂ ನಿರ್ಜನವಾಗಿ ಉಳಿದಿದೆ. ಪ್ರವಾಸಿ ಆಕರ್ಷಣೆಯೋಪಾದಿ ಬಾಬೆಲಿನ ಯಾವುದೇ ಪುನಸ್ಸ್ಥಾಪನೆಯು, ಭೇಟಿಕಾರರನ್ನು ಸೆಳೆಯಬಹುದಾದರೂ, ಯೆಶಾಯನು ಮುಂತಿಳಿಸಿದಂತೆ, ಬಾಬೆಲಿನ ‘ಜನಶೇಷವೂ ಪುತ್ರಪೌತ್ರರೂ’ ಎಂದೆಂದಿಗೂ ಇಲ್ಲದೆ ಹೋಗಿರುತ್ತಾರೆ.—ಯೆಶಾಯ 14:22.
21. ನಂಬಿಗಸ್ತ ಪ್ರವಾದಿಗಳು, ವಿಫಲವಾಗದ ನಿಷ್ಕೃಷ್ಟತೆಯೊಂದಿಗೆ ಭವಿಷ್ಯತ್ತನ್ನು ಮುಂತಿಳಿಸಲು ಏಕೆ ಶಕ್ತರಾಗಿದ್ದರು?
21 ಪ್ರವಾದಿಯಾದ ಯೆಶಾಯನು ಊಹಿತ ಮುನ್ಸೂಚನೆಯನ್ನು ಕೊಡಲಿಲ್ಲ. ಅಥವಾ ಪ್ರವಾದನೆಯಾಗಿ ತೋರಿಬರುವಂತೆ ಇತಿಹಾಸವನ್ನು ಅವನು ಪುನಃ ಬರೆಯಲೂ ಇಲ್ಲ. ಯೆಶಾಯನು ಒಬ್ಬ ನಿಜ ಪ್ರವಾದಿಯಾಗಿದ್ದನು. ತದ್ರೀತಿಯಲ್ಲಿ ಇತರ ಎಲ್ಲ ನಂಬಿಗಸ್ತ ಬೈಬಲ್ ಪ್ರವಾದಿಗಳು ನಿಜ ಪ್ರವಾದಿಗಳಾಗಿದ್ದರು. ಇತರ ಯಾವುದೇ ಮಾನವರು ಮಾಡಸಾಧ್ಯವಿಲ್ಲದ್ದನ್ನು—ವಿಫಲವಾಗದ ನಿಷ್ಕೃಷ್ಟತೆಯೊಂದಿಗೆ ಭವಿಷ್ಯತ್ತನ್ನು ಮುಂತಿಳಿಸುವುದು—ಈ ಪುರುಷರು ಮಾಡಲು ಏಕೆ ಶಕ್ತರಾಗಿದ್ದರು? ಉತ್ತರವು ಸ್ಪಷ್ಟವಾಗಿದೆ. ಆ ಪ್ರವಾದನೆಗಳು, “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸುವ” ಪ್ರವಾದನೆಯ ದೇವರಾದ ಯೆಹೋವನಿಂದ ಬಂದವುಗಳಾಗಿವೆ.—ಯೆಶಾಯ 46:10.
22. ಪ್ರಾಮಾಣಿಕ ಹೃದಯದ ಜನರು ಸ್ವತಃ ಬೈಬಲನ್ನು ಪರೀಕ್ಷಿಸುವಂತೆ ಅವರನ್ನು ಪ್ರಚೋದಿಸಲು ನಾವು ಏಕೆ ನಮ್ಮಿಂದಾದುದೆಲ್ಲವನ್ನೂ ಮಾಡಬೇಕು?
22 ಆದುದರಿಂದ ಬೈಬಲು ನಮ್ಮ ಪರೀಕ್ಷೆಗೆ ಅರ್ಹವಾಗಿದೆಯೊ? ಹೌದು ಎಂಬುದು ನಮಗೆ ಗೊತ್ತು! ಆದರೆ ಅನೇಕ ಜನರು ಅದನ್ನು ಮನಗಂಡಿಲ್ಲ. ಅವರು ಬೈಬಲನ್ನು ಎಂದೂ ಓದಿರದಿದ್ದರೂ, ಅದರ ಕುರಿತು ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದಾರೆ. ಇದರ ಹಿಂದಿನ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಲಾದ ಪ್ರೊಫೆಸರರನ್ನು ಜ್ಞಾಪಿಸಿಕೊಳ್ಳಿರಿ. ಅವರು ಬೈಬಲ್ ಅಭ್ಯಾಸಕ್ಕೆ ಒಪ್ಪಿಕೊಂಡರು, ಮತ್ತು ಜಾಗರೂಕತೆಯಿಂದ ಬೈಬಲನ್ನು ಪರೀಕ್ಷಿಸಿದ ಬಳಿಕ, ಅದು ದೇವರ ವಾಕ್ಯವಾಗಿದೆ ಎಂಬ ನಿರ್ಧಾರಕ್ಕೆ ಅವರು ಬಂದರು. ಕಾಲಕ್ರಮೇಣ ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡರು, ಮತ್ತು ಇಂದು ಅವರು ಒಬ್ಬ ಹಿರಿಯರೋಪಾದಿ ಸೇವೆಸಲ್ಲಿಸುತ್ತಾರೆ! ಪ್ರಾಮಾಣಿಕ ಹೃದಯದ ಜನರು ಸ್ವತಃ ಬೈಬಲನ್ನು ಪರೀಕ್ಷಿಸುವಂತೆ ಹಾಗೂ ತದನಂತರ ಅದರ ಕುರಿತು ಅಭಿಪ್ರಾಯವನ್ನು ರೂಪಿಸುವಂತೆ ನಾವು ಅವರನ್ನು ಪ್ರಚೋದಿಸಲು ನಮ್ಮಿಂದಾದುದೆಲ್ಲವನ್ನೂ ಮಾಡೋಣ. ಅವರೇ ಪ್ರಾಮಾಣಿಕವಾಗಿ ನೇರವಾದ ಪರೀಕ್ಷೆಯನ್ನು ಮಾಡುವುದಾದರೆ, ಈ ಅದ್ವಿತೀಯ ಗ್ರಂಥವಾಗಿರುವ ಬೈಬಲು, ನಿಜವಾಗಿಯೂ ಸಕಲ ಜನರಿಗಾಗಿರುವ ಒಂದು ಗ್ರಂಥವಾಗಿದೆಯೆಂದು ಅವರು ಗ್ರಹಿಸುವರು ಎಂಬ ದೃಢವಿಶ್ವಾಸ ನಮಗಿದೆ!
ನೀವು ವಿವರಿಸಬಲ್ಲಿರೊ?
◻ ಬೈಬಲು ಮಾನವ ಮೂಲದಿಂದ ಬಂದದ್ದಲ್ಲವೆಂಬುದನ್ನು ತೋರಿಸಲು, ನೀವು ಮೋಶೆಯ ಧರ್ಮಶಾಸ್ತ್ರವನ್ನು ಹೇಗೆ ಉಪಯೋಗಿಸಸಾಧ್ಯವಿದೆ?
◻ ಬೈಬಲಿನಲ್ಲಿರುವ ಯಾವ ಅನಂತಕಾಲಿಕ ಮೂಲತತ್ವಗಳು, ಆಧುನಿಕ ಜೀವಿತಕ್ಕೆ ಪ್ರಾಯೋಗಿಕವಾದದ್ದಾಗಿವೆ?
◻ ಯೆಶಾಯ 13:19, 20ರಲ್ಲಿರುವ ಪ್ರವಾದನೆಯು, ವಾಸ್ತವವಾಗಿ ಆ ಘಟನೆಯು ಸಂಭವಿಸಿದ ಮೇಲೆ ಬರೆಯಲ್ಪಟ್ಟಿರಸಾಧ್ಯವಿಲ್ಲವೇಕೆ?
◻ ಪ್ರಾಮಾಣಿಕ ಹೃದಯದ ಜನರು ಏನು ಮಾಡುವಂತೆ ನಾವು ಉತ್ತೇಜಿಸಬೇಕು, ಮತ್ತು ಏಕೆ?
[ಪುಟ 19 ರಲ್ಲಿರುವ ಚೌಕ]
ಪ್ರಮಾಣೀಕರಿಸಲಾಗದ ವಿಷಯಗಳ ಕುರಿತಾಗಿ ಏನು?
ಯಾವುದಕ್ಕೆ ಸ್ವಾವಲಂಬಿ ಭೌತಿಕ ಸಾಕ್ಷ್ಯವು ಇಲ್ಲವೋ ಅಂತಹ ಅನೇಕ ಹೇಳಿಕೆಗಳು ಬೈಬಲಿನಲ್ಲಿ ಅಡಕವಾಗಿವೆ. ಉದಾಹರಣೆಗೆ, ಆತ್ಮಿಕ ವ್ಯಕ್ತಿಗಳು ನಿವಾಸಿಸುವ ಅದೃಶ್ಯ ಲೋಕದ ಕುರಿತು ಅದು ಏನು ಹೇಳುತ್ತದೋ ಅದನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು ಅಥವಾ ಅಪ್ರಮಾಣೀಕರಿಸಲು ಸಾಧ್ಯವಿಲ್ಲ. ಇಂತಹ ಅಪ್ರಮಾಣೀಕೃತ ಉಲ್ಲೇಖಗಳು, ಬೈಬಲು ವಿಜ್ಞಾನದೊಂದಿಗೆ ಸಂಘರ್ಷಿಸುವಂತೆ ಮಾಡುತ್ತವೊ?
ಕೆಲವು ವರ್ಷಗಳ ಹಿಂದೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದ ಗ್ರಹಸಂಬಂಧಿತ ಭೂವಿಜ್ಞಾನಿಯೊಬ್ಬರಿಗೆ ಇದೇ ಪ್ರಶ್ನೆಯು ಎದುರಾಗಿತ್ತು. “ಆರಂಭದಲ್ಲಿ ನನಗೆ ಬೈಬಲನ್ನು ಅಂಗೀಕರಿಸುವುದು ಬಹಳ ಕಷ್ಟಕರವಾಗಿತ್ತೆಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು, ಏಕೆಂದರೆ ಕೆಲವೊಂದು ಬೈಬಲ್ ಹೇಳಿಕೆಗಳನ್ನು ನಾನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು ಅಸಮರ್ಥನಾಗಿದ್ದೆ” ಎಂದು ಅವರು ಜ್ಞಾಪಿಸಿಕೊಳ್ಳುತ್ತಾರೆ. ಈ ಯಥಾರ್ಥ ವ್ಯಕ್ತಿಯು ಬೈಬಲನ್ನು ಅಭ್ಯಾಸಿಸುತ್ತಾ ಹೋದರು ಮತ್ತು ಕಾಲಕ್ರಮೇಣ, ಲಭ್ಯವಿರುವ ಸಾಕ್ಷ್ಯವು ಅದು ದೇವರ ವಾಕ್ಯವಾಗಿದೆ ಎಂಬುದನ್ನು ತೋರಿಸುತ್ತದೆಂಬುದನ್ನು ಮನಗಾಣುವವರಾದರು. “ಬೈಬಲಿನ ಪ್ರತಿಯೊಂದು ವಾಸ್ತವಾಂಶವು ವೈಯಕ್ತಿಕವಾಗಿ ಪ್ರಮಾಣೀಕರಿಸಲ್ಪಡಬೇಕೆಂಬ ಹಂಬಲವನ್ನು ಇದು ಕಡಿಮೆಮಾಡಿತು” ಎಂದು ಅವರು ವಿವರಿಸುತ್ತಾರೆ. “ವೈಜ್ಞಾನಿಕ ಪ್ರವೃತ್ತಿಯಿರುವ ವ್ಯಕ್ತಿಯೊಬ್ಬನು ಬೈಬಲನ್ನು ಒಂದು ಆತ್ಮಿಕ ದೃಷ್ಟಿಕೋನದಿಂದ ಪರೀಕ್ಷಿಸಲು ಸಿದ್ಧಮನಸ್ಕನಾಗಿರಬೇಕು, ಇಲ್ಲದಿದ್ದರೆ ಅವನು ಎಂದೂ ಸತ್ಯವನ್ನು ಸ್ವೀಕರಿಸುವುದಿಲ್ಲ. ಬೈಬಲಿನಲ್ಲಿರುವ ಪ್ರತಿಯೊಂದು ಹೇಳಿಕೆಗಳನ್ನು ವಿಜ್ಞಾನವು ಸಮರ್ಥಿಸುವಂತೆ ನಿರೀಕ್ಷಿಸಸಾಧ್ಯವಿಲ್ಲ. ಆದರೆ ಕೆಲವು ಹೇಳಿಕೆಗಳು ಪ್ರಮಾಣೀಕರಿಸಲು ಅಸಾಧ್ಯವೆಂದ ಮಾತ್ರಕ್ಕೆ, ಅವು ಅಸತ್ಯವಾದವುಗಳಾಗಿವೆ ಎಂಬುದನ್ನು ಅದು ಅರ್ಥೈಸುವುದಿಲ್ಲ. ಪ್ರಾಮುಖ್ಯವಾದ ವಿಷಯವು ಏನೆಂದರೆ, ಎಲ್ಲೆಲ್ಲಿ ಪ್ರಮಾಣೀಕರಿಸಸಾಧ್ಯವಿದೆಯೋ ಅಲ್ಲೆಲ್ಲ ಬೈಬಲ್ ನಿಷ್ಕೃಷ್ಟತೆಯು ಸತ್ಯವೆಂದು ದೃಢಪಡಿಸಲ್ಪಟ್ಟಿದೆ.”
[ಪುಟ 17 ರಲ್ಲಿರುವ ಚಿತ್ರ]
ಅವರ ಸಮಯಕ್ಕಿಂತಲೂ ಬಹಳಷ್ಟು ಮುಂದುವರಿದದ್ದಾಗಿದ್ದ ನೈರ್ಮಲ್ಯ ನಿಯಮಗಳನ್ನು ಮೋಶೆಯು ದಾಖಲಿಸಿದನು