ಭೂಮಿಯ ಮೇಲೆ ನಿತ್ಯಜೀವ —ದೇವದತ್ತ ನಿರೀಕ್ಷೆ
“ಸೃಷ್ಟಿಯು . . . ನಿರೀಕ್ಷೆಯ ಆಧಾರದಲ್ಲಿ ವ್ಯರ್ಥತ್ವಕ್ಕೆ ಒಳಗಾಯಿತು.”—ರೋಮ. 8:20.
1, 2. (ಎ) ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆ ನಮಗೇಕೆ ಪ್ರಾಮುಖ್ಯ? (ಬಿ) ಭೂಮಿಯ ಮೇಲಿನ ನಿತ್ಯಜೀವದ ಕುರಿತು ಅನೇಕ ಜನರಿಗೆ ಸಂಶಯವಿರುವುದೇಕೆ?
ಜನರು ವೃದ್ಧರಾಗುವುದಿಲ್ಲ, ಸಾಯುವುದಿಲ್ಲ ಬದಲಾಗಿ ಭೂಮಿಯ ಮೇಲೆ ಸದಾಕಾಲ ಜೀವಿಸುವರು ಎಂಬ ಮಾತುಗಳನ್ನು ಮೊತ್ತಮೊದಲ ಬಾರಿ ಕೇಳಿಸಿಕೊಂಡಾಗ ಆದ ಆನಂದ ನಿಮಗೀಗಲೂ ನೆನಪಿರಬಹುದಲ್ಲವೇ? (ಯೋಹಾ. 17:3; ಪ್ರಕ. 21:3, 4) ಬಹುಶಃ ನೀವು ಆ ಶಾಸ್ತ್ರಾಧಾರಿತ ನಿರೀಕ್ಷೆಯನ್ನು ಇತರರಿಗೆ ತಿಳಿಸುವುದರಲ್ಲಿ ಆನಂದಿಸುತ್ತಿರಬಹುದು. ನಿತ್ಯಜೀವದ ಈ ನಿರೀಕ್ಷೆಯೇ ನಾವು ಸಾರುವ ಸುವಾರ್ತೆಯ ಅವಿಭಾಜ್ಯ ಅಂಗವಾಗಿದೆ. ಅಲ್ಲದೆ, ನಾವು ಜೀವನವನ್ನು ಹೇಗೆ ವೀಕ್ಷಿಸುತ್ತೇವೆ, ಹೇಗೆ ಬಳಸುತ್ತೇವೆ ಮತ್ತು ನಮ್ಮ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನೂ ಅದು ಪ್ರಭಾವಿಸುತ್ತದೆ.
2 ಕ್ರೈಸ್ತಪ್ರಪಂಚದ ಧರ್ಮಗಳಲ್ಲಿ ಹೆಚ್ಚಿನವು ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ನಿರ್ಲಕ್ಷಿಸಿವೆ. ಆತ್ಮ ಸಾಯುತ್ತದೆಂದು ಬೈಬಲ್ ಬೋಧಿಸುವಾಗ, ಅಧಿಕಾಂಶ ಚರ್ಚ್ಗಳಾದರೋ ಮರಣಾನಂತರ ಆತ್ಮಲೋಕದಲ್ಲಿ ಜೀವಿಸುವ ಅಮರ ಆತ್ಮ ಮಾನವನಲ್ಲಿದೆ ಎಂಬ ಶಾಸ್ತ್ರಾಧಾರವಿಲ್ಲದ ಬೋಧನೆಯನ್ನು ಕಲಿಸುತ್ತಿವೆ. (ಪ್ರಸಂ. 9:5) ಹಾಗಾಗಿ, ಅನೇಕ ಜನರಿಗೆ ಭೂಮಿಯ ಮೇಲಿನ ನಿತ್ಯಜೀವದ ಕುರಿತು ಸಂಶಯವಿದೆ. ಆದ್ದರಿಂದ, ಈ ನಿರೀಕ್ಷೆಯನ್ನು ಬೈಬಲ್ ನಿಜವಾಗಿಯೂ ಬೆಂಬಲಿಸುತ್ತದೋ? ಹಾಗಿರುವಲ್ಲಿ, ಮಾನವರಿಗೆ ದೇವರು ಈ ನಿರೀಕ್ಷೆಯನ್ನು ಮೊದಲು ಬಹಿರಂಗಪಡಿಸಿದ್ದು ಯಾವಾಗ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳಬಹುದು.
“ನಿರೀಕ್ಷೆಯ ಆಧಾರದಲ್ಲಿ ವ್ಯರ್ಥತ್ವಕ್ಕೆ ಒಳಗಾಯಿತು”
3. ಮಾನವಕುಲದ ಕಡೆಗಿನ ದೇವರ ಉದ್ದೇಶ ಮಾನವ ಇತಿಹಾಸದ ಆರಂಭದಲ್ಲೇ ವ್ಯಕ್ತವಾದದ್ದು ಹೇಗೆ?
3 ಮಾನವಕುಲದ ಕಡೆಗಿನ ದೇವರ ಉದ್ದೇಶ ಮಾನವ ಇತಿಹಾಸದ ಆರಂಭದಲ್ಲೇ ವ್ಯಕ್ತವಾಯಿತು. ವಿಧೇಯನಾಗಿರುವಲ್ಲಿ ಶಾಶ್ವತವಾಗಿ ಬದುಕುವಿ ಎಂದು ಆದಾಮನಿಗೆ ದೇವರು ಸ್ಪಷ್ಟವಾಗಿ ತಿಳಿಸಿದ್ದನು. (ಆದಿ. 2:9, 17; 3:22) ಮಾನವನು ಪರಿಪೂರ್ಣತೆಯನ್ನು ಕಳೆದುಕೊಂಡಿರುವುದರ ಬಗ್ಗೆ ಆದಾಮನ ಆರಂಭಿಕ ವಂಶಸ್ಥರಿಗೆ ತಿಳಿದಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಅದನ್ನು ಮನದಟ್ಟು ಮಾಡುವ ಕೆಲವೊಂದು ಸಾಕ್ಷ್ಯಗಳು ಅವರ ಕಣ್ಮುಂದೆಯೇ ಇದ್ದವು. ಉದಾಹರಣೆಗೆ, ಏದೆನ್ ತೋಟದ ಪ್ರವೇಶದ್ವಾರವನ್ನು ಮುಚ್ಚಲಾಗಿತ್ತು ಮತ್ತು ಜನರು ವೃದ್ಧರಾಗಿ ಸಾಯುತ್ತಿದ್ದರು. (ಆದಿ. 3:23, 24) ಸಮಯಸಂದಂತೆ ಮಾನವರ ಜೀವಿತಾವಧಿ ಇಳಿಮುಖವಾಯಿತು. ಆದಾಮನು 930 ವರ್ಷ ಬದುಕಿದನು. ಜಲಪ್ರಳಯವನ್ನು ಪಾರಾದ ಶೇಮನು ಕೇವಲ 600 ವರ್ಷ ಮತ್ತು ಅವನ ಮಗನಾದ ಅರ್ಪಕ್ಷದನು 438 ವರ್ಷ ಬದುಕಿದನು. ಅಬ್ರಹಾಮನ ತಂದೆ ತೆರಹನು 205 ವರ್ಷ ಬದುಕಿದನು. ಅಬ್ರಹಾಮನ ಜೀವಿತಾವಧಿ 175 ವರ್ಷ; ಅವನ ಮಗನಾದ ಇಸಾಕನದ್ದು 180 ವರ್ಷ; ಯಾಕೋಬನದ್ದು 147 ವರ್ಷ. (ಆದಿ. 5:5; 11:10-13, 32; 25:7; 35:28; 47:28) ಜೀವಿತಾವಧಿಯು ಇಳಿಮುಖವಾದದ್ದು, ಮಾನವರು ನಿತ್ಯಜೀವದ ನಿರೀಕ್ಷೆಯನ್ನು ಕಳೆದುಕೊಂಡದ್ದರಿಂದಲೇ ಎಂಬುದನ್ನು ಅನೇಕ ಜನರು ಅರ್ಥಮಾಡಿಕೊಂಡಿದ್ದಿರಬೇಕು. ನಿತ್ಯಜೀವವನ್ನು ಪುನಃ ಪಡೆಯಬಹುದು ಎಂದು ನಂಬಲು ಅವರಿಗೆ ಯಾವುದಾದರೂ ಕಾರಣವಿತ್ತೋ?
4. ಆದಾಮನು ಕಳೆದುಕೊಂಡ ಆಶೀರ್ವಾದಗಳನ್ನು ದೇವರು ಪುನಃ ಕೊಡಲಿದ್ದಾನೆ ಎಂದು ನಂಬಲು ಪ್ರಾಚೀನಕಾಲದ ನಂಬಿಗಸ್ತ ಪುರುಷರಿಗೆ ಯಾವ ಆಧಾರವಿತ್ತು?
4 ದೇವರ ವಾಕ್ಯ ತಿಳಿಸುವುದು: “[ಮಾನವ] ಸೃಷ್ಟಿಯು . . . ನಿರೀಕ್ಷೆಯ ಆಧಾರದಲ್ಲಿ ವ್ಯರ್ಥತ್ವಕ್ಕೆ ಒಳಗಾಯಿತು.” (ರೋಮ. 8:20) ಯಾವ ನಿರೀಕ್ಷೆ? ‘ಸರ್ಪನ ತಲೆಯನ್ನು ಜಜ್ಜಲಿರುವ ಸಂತಾನದ’ ಕಡೆಗೆ ಬೈಬಲ್ನ ಪ್ರಪ್ರಥಮ ಪ್ರವಾದನೆಯು ಕೈತೋರಿಸಿತು. (ಆದಿಕಾಂಡ 3:1-5, 15 ಓದಿ.) ಸಂತಾನದ ಕುರಿತ ಈ ವಾಗ್ದಾನವು ನಂಬಿಗಸ್ತ ಮಾನವರಿಗೆ, ದೇವರೆಂದೂ ಮಾನವಕುಲದ ಕಡೆಗಿನ ಉದ್ದೇಶವನ್ನು ಕೈಬಿಡನು ಎಂಬ ನಿರೀಕ್ಷೆಗೆ ಆಧಾರ ಕೊಟ್ಟಿತು. ಆದಾಮನು ಕಳೆದುಕೊಂಡ ಆಶೀರ್ವಾದಗಳನ್ನು ದೇವರು ಪುನಃ ಕೊಡಲಿದ್ದಾನೆಂದು ನಂಬಲು ಹೇಬೆಲ ಮತ್ತು ನೋಹರಂಥ ವ್ಯಕ್ತಿಗಳಿಗೆ ಅದು ಕಾರಣ ಕೊಟ್ಟಿತು. ‘ಸಂತಾನದ ಹಿಮ್ಮಡಿಯನ್ನು ಕಚ್ಚುವುದರಲ್ಲಿ’ ರಕ್ತವನ್ನು ಸುರಿಸುವುದು ಒಳಗೂಡಿದೆ ಎಂಬುದನ್ನು ಈ ನಂಬಿಗಸ್ತರು ಗ್ರಹಿಸಿದ್ದಿರಬೇಕು.—ಆದಿ. 4:4; 8:20; ಇಬ್ರಿ. 11:4.
5. ಅಬ್ರಹಾಮನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತೆಂದು ಯಾವುದು ತೋರಿಸುತ್ತದೆ?
5 ಅಬ್ರಹಾಮನನ್ನು ಪರಿಗಣಿಸಿ. ಅವನು ಪರೀಕ್ಷಿಸಲ್ಪಟ್ಟಾಗ ‘ತನ್ನ ಏಕೈಕಜಾತ ಪುತ್ರನಾದ ಇಸಾಕನನ್ನು ಅರ್ಪಿಸುವಷ್ಟರ ಮಟ್ಟಿಗೆ’ ಮುಂದಾದನು. (ಇಬ್ರಿ. 11:17, 18) ಅವನಿದನ್ನು ಮಾಡಲು ಸಿದ್ಧನಿದ್ದದ್ದೇಕೆ? (ಇಬ್ರಿಯ 11:19 ಓದಿ.) ಅವನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು. ಹಾಗೆ ನಂಬಲು ಅವನಿಗೆ ಆಧಾರವೂ ಇತ್ತು. ಏಕೆಂದರೆ, ಯೆಹೋವನು ಅವನ ಹಾಗೂ ಸಾರಳ ಸಂತಾನೋತ್ಪತ್ತಿಯ ಶಕ್ತಿಯನ್ನು ಪುನಃಶ್ಚೇತನಗೊಳಿಸಿ ಅವರು ವೃದ್ಧಾಪ್ಯದಲ್ಲಿ ಆ ಮಗನನ್ನು ಪಡೆಯುವಂತೆ ಸಾಧ್ಯಮಾಡಿದ್ದನು. (ಆದಿ. 18:10-14; 21:1-3; ರೋಮ. 4:19-21) ಅಲ್ಲದೇ ಯೆಹೋವನು ಅಬ್ರಹಾಮನಿಗೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ಮಾತುಕೊಟ್ಟಿದ್ದನು. (ಆದಿ. 21:12) ಹೀಗೆ, ದೇವರು ಇಸಾಕನನ್ನು ಪುನರುತ್ಥಾನಗೊಳಿಸುವನೆಂದು ನಿರೀಕ್ಷಿಸಲು ಅಬ್ರಹಾಮನಿಗೆ ಬಲವಾದ ಕಾರಣಗಳಿದ್ದವು.
6, 7. (ಎ) ಯೆಹೋವನು ಅಬ್ರಹಾಮನೊಂದಿಗೆ ಯಾವ ಒಡಂಬಡಿಕೆ ಮಾಡಿಕೊಂಡನು? (ಬಿ) ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನ ಮಾನವಕುಲಕ್ಕೆ ನಿರೀಕ್ಷೆ ಕೊಡುವುದು ಹೇಗೆ?
6 ಅಬ್ರಹಾಮನ ಅಸಾಧಾರಣ ನಂಬಿಕೆಯ ನಿಮಿತ್ತವೇ ಯೆಹೋವನು ಅವನ ವಂಶ ಇಲ್ಲವೇ “ಸಂತತಿಯ” ಸಂಬಂಧದಲ್ಲಿ ಒಂದು ಒಡಂಬಡಿಕೆಯನ್ನು ಮಾಡಿದನು. (ಆದಿಕಾಂಡ 22:18 ಓದಿ.) ಆ ‘ಸಂತತಿಯ’ ಪ್ರಧಾನ ಭಾಗ ಯೇಸು ಕ್ರಿಸ್ತನೆಂಬುದು ಕ್ರಮೇಣ ಪ್ರಕಟವಾಯಿತು. (ಗಲಾ. 3:16) “ನಿನ್ನ ಸಂತತಿಯನ್ನು . . . ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ” ಮಾಡುವೆನೆಂದು ಯೆಹೋವನು ಅಬ್ರಹಾಮನಿಗೆ ಹೇಳಿದ್ದನು. ಆ ಸಂಖ್ಯೆ ಎಷ್ಟೆಂದು ಅಬ್ರಹಾಮನಿಗೆ ತಿಳಿದಿರಲಿಲ್ಲ. (ಆದಿ. 22:17) ಕಾಲಾನಂತರ ಆ ಸಂಖ್ಯೆಯನ್ನೂ ಪ್ರಕಟಪಡಿಸಲಾಯಿತು. ಯೇಸು ಕ್ರಿಸ್ತ ಮತ್ತು ಅವನ ರಾಜ್ಯದಲ್ಲಿ ಅವನೊಂದಿಗೆ ಆಳುವ 1,44,000 ಮಂದಿ ಆ “ಸಂತತಿ” ಆಗಿದ್ದಾರೆ. (ಗಲಾ. 3:29; ಪ್ರಕ. 7:4; 14:1) ‘ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವದು’ ಈ ಮೆಸ್ಸೀಯ ರಾಜ್ಯದ ಮೂಲಕವೇ.
7 ಅಬ್ರಹಾಮನಿಗೆ, ಯೆಹೋವನು ತನ್ನೊಟ್ಟಿಗೆ ಮಾಡಿದ ಒಡಂಬಡಿಕೆಯ ಪೂರ್ಣ ಮಹತ್ತ್ವಾರ್ಥ ತಿಳಿದಿರಲಿಕ್ಕಿಲ್ಲ. ಹಾಗಿದ್ದರೂ “ಅವನು ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು . . . ಎದುರುನೋಡುತ್ತಿದ್ದನು” ಎಂದು ಬೈಬಲ್ ಹೇಳುತ್ತದೆ. (ಇಬ್ರಿ. 11:10) ಆ ಪಟ್ಟಣವು ದೇವರ ರಾಜ್ಯವಾಗಿದೆ. ಆ ರಾಜ್ಯದಡಿಯಲ್ಲಿ ಆಶೀರ್ವಾದಗಳನ್ನು ಪಡೆಯಬೇಕಾದರೆ ಅಬ್ರಹಾಮನು ಪುನಃ ಜೀವಿಸಲೇಬೇಕು. ಪುನರುತ್ಥಾನದ ಮೂಲಕವೇ ಅವನಿಗೆ ಭೂಮಿಯ ಮೇಲಿನ ನಿತ್ಯಜೀವ ಸಾಧ್ಯವಾಗುವುದು. ಅರ್ಮಗೆದೋನನ್ನು ಪಾರಾಗುವವರಿಗೆ ಅಥವಾ ಮೃತಾವಸ್ಥೆಯಿಂದ ಎದ್ದುಬರುವವರಿಗೆ ಸಹ ಭೂಮಿಯ ಮೇಲೆ ನಿತ್ಯಜೀವ ಪಡೆಯಲು ಸಾಧ್ಯವಾಗುವುದು.—ಪ್ರಕ. 7:9, 14; 20:12-14.
“ಆತ್ಮವು ನನ್ನನ್ನು ಒತ್ತಾಯಮಾಡುತ್ತದೆ”
8, 9. ಯೋಬ ಪುಸ್ತಕವು ಕೇವಲ ಒಬ್ಬ ವ್ಯಕ್ತಿಗೆ ಎದುರಾದ ಕಷ್ಟಗಳ ಕುರಿತ ವೃತ್ತಾಂತವಲ್ಲವೇಕೆ?
8 ಅಬ್ರಹಾಮನ ಮರಿಮಗನಾದ ಯೋಸೇಫ ಮತ್ತು ಪ್ರವಾದಿ ಮೋಶೆ ಜೀವಿಸಿದ್ದ ಕಾಲಾವಧಿಯ ನಡುವೆ ಯೋಬನೆಂಬ ವ್ಯಕ್ತಿ ಜೀವಿಸಿದ್ದನು. ಮೋಶೆ ಬರೆದಂಥ ಯೋಬ ಎಂಬ ಬೈಬಲ್ ಪುಸ್ತಕವು, ಯೋಬನು ಕಷ್ಟಾನುಭವಿಸುವಂತೆ ಯೆಹೋವನು ಏಕೆ ಅನುಮತಿಸಿದನು ಮತ್ತು ಫಲಿತಾಂಶವೇನಾಯಿತು ಎಂಬುದನ್ನು ವಿವರಿಸುತ್ತದೆ. ಆದರೆ ಯೋಬ ಪುಸ್ತಕವು ಕೇವಲ ಒಬ್ಬ ವ್ಯಕ್ತಿಗೆ ಎದುರಾದ ಕಷ್ಟಗಳ ಕುರಿತ ವೃತ್ತಾಂತವಲ್ಲ. ಬದಲಾಗಿ ಅದು, ಎಲ್ಲಾ ಮಾನವರನ್ನೂ ಆತ್ಮಜೀವಿಗಳನ್ನೂ ಪ್ರಭಾವಿಸುವಂಥ ವಿಷಯಗಳ ಕುರಿತು ಚರ್ಚಿಸುತ್ತದೆ. ಈ ಪುಸ್ತಕವು, ಯೆಹೋವನು ನೀತಿಯುತ ವಿಧದಲ್ಲಿ ಆಳುತ್ತಾನೆ ಎಂಬ ಒಳನೋಟವನ್ನು ಕೊಡುತ್ತದೆ ಹಾಗೂ ಏದೆನ್ನಲ್ಲಿ ಎಬ್ಬಿಸಲಾದ ವಿವಾದಾಂಶದಲ್ಲಿ ದೇವರ ಭೂಸೇವಕರೆಲ್ಲರ ಸಮಗ್ರತೆ ಮತ್ತು ನಿತ್ಯಜೀವದ ಪ್ರತೀಕ್ಷೆ ಒಳಗೂಡಿದೆ ಎಂಬುದನ್ನು ಪ್ರಕಟಪಡಿಸುತ್ತದೆ. ಯೋಬನಿಗೆ ಈ ವಿವಾದಾಂಶದ ಬಗ್ಗೆ ಗೊತ್ತಿರಲಿಲ್ಲ. ಆದರೂ, ತಾನು ಸಮಗ್ರತೆ ಕಾಪಾಡಿಕೊಂಡಿಲ್ಲ ಎಂಬ ಯೋಚನೆಯನ್ನು ತನ್ನಲ್ಲಿ ಹುಟ್ಟಿಸುವಂತೆ ಅವನು ತನ್ನ ಮೂವರು ಸ್ನೇಹಿತರನ್ನು ಬಿಡಲಿಲ್ಲ. (ಯೋಬ 27:5) ಇದು ನಮ್ಮ ನಂಬಿಕೆಯನ್ನು ಬಲಪಡಿಸಬೇಕು. ನಾವೂ ಸಮಗ್ರತೆಯನ್ನು ಕಾಪಾಡಿಕೊಂಡು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಬಹುದೆಂದು ಗ್ರಹಿಸುವಂತೆಯೂ ನಮಗಿದು ಸಹಾಯ ಮಾಡಬೇಕು.
9 ಸಾಂತ್ವನಗಾರರೆಂದು ಹೇಳಿಕೊಂಡು ಬಂದ ಆ ಮೂವರು ಸ್ನೇಹಿತರು ಮಾತನಾಡುವುದನ್ನು ಮುಗಿಸಿದ ಬಳಿಕ “ಬೂಜ್ಕುಲಕ್ಕೆ ಸೇರಿದ ಬರಕೇಲನ ಮಗನಾದ . . . ಎಲೀಹು” ಮಾತಾಡಲಾರಂಭಿಸಿದನು. ಮಾತಾಡುವಂತೆ ಅವನನ್ನು ಯಾವುದು ಪ್ರಚೋದಿಸಿತು? ಅವನಂದದ್ದು: “ನನ್ನಲ್ಲಿ ಮಾತುಗಳು ತುಂಬಿವೆ, [ದೇವರ] ಆತ್ಮವು ನನ್ನನ್ನು ಒತ್ತಾಯಮಾಡುತ್ತದೆ.” (ಯೋಬ 32:5, 6, 18, NW) ದೇವಪ್ರೇರಣೆಯಿಂದ ಎಲೀಹು ಆಡಿದ ಮಾತುಗಳು ಯೋಬನು ಹಿಂದಿನ ಸ್ಥಿತಿಗೆ ಮರಳಿದಾಗ ನೆರವೇರಿದರೂ, ಅವು ಇತರರಿಗೂ ಅರ್ಥಪೂರ್ಣವಾಗಿವೆ. ಅವು ಸಮಗ್ರತೆ ಪಾಲಕರೆಲ್ಲರಿಗೂ ನಿರೀಕ್ಷೆಯನ್ನು ಕೊಡುತ್ತವೆ.
10. ಯೆಹೋವನು ನಿರ್ದಿಷ್ಟ ವ್ಯಕ್ತಿಗಳಿಗೆ ಕೊಡುವ ಸಂದೇಶ ಕೆಲವೊಮ್ಮೆ ವಿಶಾಲಾರ್ಥದಲ್ಲಿ ಇಡೀ ಮಾನವಕುಲಕ್ಕೂ ಅನ್ವಯಿಸುತ್ತದೆ ಎಂಬುದನ್ನು ಯಾವುದು ತೋರಿಸುತ್ತದೆ?
10 ಯೆಹೋವನು ನಿರ್ದಿಷ್ಟ ವ್ಯಕ್ತಿಗಳಿಗೆ ಕೊಡುವ ಸಂದೇಶ ಕೆಲವೊಮ್ಮೆ ವಿಶಾಲಾರ್ಥದಲ್ಲಿ ಇಡೀ ಮಾನವಕುಲಕ್ಕೂ ಅನ್ವಯಿಸುತ್ತದೆ. ಇದನ್ನು, ಬಹು ಎತ್ತರವಾದ ವೃಕ್ಷವನ್ನು ಕಡಿದುಹಾಕುವ ಬಗ್ಗೆ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನಿಗೆ ಬಿದ್ದ ಕನಸಿನ ಕುರಿತ ದಾನಿಯೇಲನ ಪ್ರವಾದನೆಯಿಂದ ತಿಳಿಯಬಹುದು. (ದಾನಿ. 4:10-27) ಆ ಕನಸು ಪ್ರಾಥಮಿಕವಾಗಿ ನೆಬೂಕದ್ನೆಚ್ಚರನ ಸಂಬಂಧದಲ್ಲಿ ನೆರವೇರಿತಾದರೂ ಇನ್ನೂ ಹೆಚ್ಚಿನ ನೆರವೇರಿಕೆ ಅದಕ್ಕಿತ್ತು. ರಾಜ ದಾವೀದನ ವಂಶಜರು ಆಳುತ್ತಿದ್ದ ರಾಜ್ಯದ ಮೂಲಕ ಭೂಮಿಯಲ್ಲಿ ನಡೆಸಲ್ಪಡುತ್ತಿದ್ದ ದೈವಿಕ ಪರಮಾಧಿಕಾರವು ಪುನಃ ಪ್ರಕಟವಾಗುವುದೆಂದು ಆ ಕನಸು ಸೂಚಿಸಿತು. ಇದು ಸಾ.ಶ.ಪೂ. 607ರಿಂದಾರಂಭಿಸಿ 2,520 ವರ್ಷಗಳಾನಂತರ ಆಗುವುದೆಂದು ಅದು ತೋರಿಸಿತು.a 1914ರಲ್ಲಿ ಯೇಸು ಕ್ರಿಸ್ತನು ಸ್ವರ್ಗೀಯ ರಾಜನಾದಾಗ ನಮ್ಮ ಭೂಮಿಯ ಕಡೆಗಿನ ಯೆಹೋವನ ಪರಮಾಧಿಕಾರ ಪುನಃ ಒಮ್ಮೆ ಪ್ರಕಟವಾಯಿತು. ಆ ರಾಜ್ಯದ ಆಡಳಿತವು ವಿಧೇಯ ಮಾನವಕುಲದ ನಿರೀಕ್ಷೆಗಳನ್ನು ಹೇಗೆ ಬೇಗನೆ ಈಡೇರಿಸಲಿದೆ ಎಂಬುದನ್ನು ಸ್ವಲ್ಪ ಊಹಿಸಿ ನೋಡಿ!
“ಕುಣಿಗೆ ಇಳಿಯುವುದರಿಂದ ಅವನನ್ನು ಬಿಡಿಸುತ್ತಾನೆ”
11. ಎಲೀಹುವಿನ ಮಾತುಗಳು ದೇವರ ಬಗ್ಗೆ ಏನನ್ನು ತಿಳಿಯಪಡಿಸುತ್ತವೆ?
11 ಯೋಬನಿಗೆ ಪ್ರತ್ಯುತ್ತರಿಸುತ್ತಾ, ‘ಸಹಸ್ರ ದೂತರಲ್ಲಿ ಒಬ್ಬನು ಮಧ್ಯಸ್ಥನಾಗಿ ಮನುಷ್ಯನಿಗೆ ಅವನ ಯಥಾರ್ಥತೆಯನ್ನು ತಿಳಿಸುವುದರ’ ಕುರಿತು ಎಲೀಹು ಮಾತಾಡುತ್ತಾನೆ. ಈ ದೂತನು ‘ದೇವರು ಮನುಷ್ಯನಿಗೆ ಕೃಪಾಳುವಾಗಿರುವಂತೆ ಬಿನ್ನಹ ಮಾಡುವಾಗ’ ಏನಾಗುತ್ತದೆ? ಎಲೀಹು ಹೇಳುವುದು: ‘ದೇವರು ಮನುಷ್ಯನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯುವುದರಿಂದ ಅವನನ್ನು ಬಿಡಿಸುತ್ತಾನೆ.’ ಅನಂತರ ದೇವರು ಆ ದೂತನಿಗೆ ಹೇಳುವುದು: “ನಾನು ವಿಮೋಚನೆಯ ಕ್ರಯವನ್ನು ಕಂಡುಕೊಂಡೆನು. ಆಗ ಅವನ ಶರೀರವು ಮಗುವಿನ ಶರೀರಕ್ಕಿಂತ ಮೃದುವಾಗಿರುವುದು; ಅವನು ತನ್ನ ಯೌವನ ದಿವಸಗಳಿಗೆ ತಿರುಗಿಕೊಳ್ಳುವನು.” (ಯೋಬ 33:23-26, NIBV) ಪಶ್ಚಾತ್ತಾಪಿ ಮಾನವರ ಪರವಾಗಿ “ವಿಮೋಚನೆಯ ಕ್ರಯ” ಇಲ್ಲವೇ ವಿಮೋಚನಾ ಮೌಲ್ಯವನ್ನು ಸ್ವೀಕರಿಸಲು ದೇವರಿಗಿರುವ ಸಿದ್ಧಮನಸ್ಸನ್ನು ಈ ಮಾತುಗಳು ತಿಳಿಯಪಡಿಸುತ್ತವೆ.—ಯೋಬ 33:24, NIBV.
12. ಎಲೀಹುವಿನ ಮಾತುಗಳು ಮನುಷ್ಯರೆಲ್ಲರಿಗೆ ಯಾವ ನಿರೀಕ್ಷೆಯನ್ನು ಕೊಡುತ್ತವೆ?
12 ಪ್ರವಾದಿಗಳಿಗೆ, ತಾವು ಬರೆದ ಎಲ್ಲಾ ಸಂಗತಿಗಳ ಪೂರ್ಣ ಮಹತ್ತ್ವಾರ್ಥ ತಿಳಿದಿರದಂತೆಯೇ ಎಲೀಹುವಿಗೂ ವಿಮೋಚನಾ ಮೌಲ್ಯದ ಪೂರ್ಣ ಮಹತ್ತ್ವಾರ್ಥ ತಿಳಿದಿರಲಿಕ್ಕಿಲ್ಲ. (ದಾನಿ. 12:8; 1 ಪೇತ್ರ 1:10-12) ಆದಾಗ್ಯೂ ಅವನ ಮಾತುಗಳು, ದೇವರು ಮುಂದೊಂದು ದಿನ ವಿಮೋಚನಾ ಮೌಲ್ಯವನ್ನು ಸ್ವೀಕರಿಸಿ ಮನುಷ್ಯರನ್ನು ವಯಸ್ಸಾಗುವಿಕೆ ಹಾಗೂ ಮರಣದಿಂದ ವಿಮುಕ್ತಗೊಳಿಸುವನು ಎಂಬ ನಿರೀಕ್ಷೆಯನ್ನು ಪ್ರತಿಫಲಿಸುತ್ತವೆ. ಅವು ನಿತ್ಯಜೀವದ ಅದ್ಭುತ ಪ್ರತೀಕ್ಷೆಯನ್ನು ಮುಂದಿಟ್ಟವು. ಅಲ್ಲದೇ, ಪುನರುತ್ಥಾನವಿರುವುದೆಂದೂ ಯೋಬ ಪುಸ್ತಕವು ತೋರಿಸುತ್ತದೆ.—ಯೋಬ 14:14, 15.
13. ಎಲೀಹುವಿನ ಮಾತುಗಳು ಕ್ರೈಸ್ತರಿಗೂ ಅರ್ಥಪೂರ್ಣವಾಗಿವೆ ಹೇಗೆ?
13 ಇಂದು ಎಲೀಹುವಿನ ಮಾತುಗಳು, ಸದ್ಯದ ವ್ಯವಸ್ಥೆಯ ನಾಶನವನ್ನು ಪಾರಾಗಲು ನಿರೀಕ್ಷಿಸುತ್ತಿರುವ ಲಕ್ಷಾಂತರ ಕ್ರೈಸ್ತರಿಗೂ ಅರ್ಥಪೂರ್ಣವಾಗಿವೆ. ಆ ನಾಶನವನ್ನು ಪಾರಾಗುವ ವೃದ್ಧರು ಯೌವನದ ಚೈತನ್ಯವನ್ನು ಮರಳಿ ಪಡೆಯುವರು. (ಪ್ರಕ. 7:9, 10, 14-17) ಪುನರುತ್ಥಿತ ಜನರು ತಮ್ಮ ಯೌವನವನ್ನು ಮರಳಿ ಪಡೆಯುವುದನ್ನು ನೋಡುವ ಪ್ರತೀಕ್ಷೆ ಈಗಲೂ ನಂಬಿಗಸ್ತ ಜನರಿಗೆ ಉಲ್ಲಾಸ ತರುತ್ತದೆ. ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ ಅಮರ ಜೀವನ ಮತ್ತು ಯೇಸುವಿನ ‘ಬೇರೆ ಕುರಿಗಳಿಗೆ’ ಭೂಮಿಯ ಮೇಲೆ ನಿತ್ಯಜೀವ ಎಂಬ ಎರಡೂ ಪ್ರತೀಕ್ಷೆಗಳು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಡುವುದರ ಮೇಲೆಯೇ ಅವಲಂಬಿಸಿವೆ.—ಯೋಹಾ. 10:16; ರೋಮ. 6:23.
ಭೂಮಿಯಿಂದ ಮರಣ ನಿರ್ನಾಮವಾಗುವುದು
14. ಇಸ್ರಾಯೇಲ್ಯರಿಗೆ ನಿತ್ಯಜೀವದ ನಿರೀಕ್ಷೆಯನ್ನು ಪಡೆಯಲಿಕ್ಕಾಗಿ ಮೋಶೆಯ ಧರ್ಮಶಾಸ್ತ್ರಕ್ಕಿಂತ ಹೆಚ್ಚಿನದ್ದು ಅಗತ್ಯವಿತ್ತು ಎಂಬುದನ್ನು ಯಾವುದು ತೋರಿಸುತ್ತದೆ?
14 ಅಬ್ರಹಾಮನ ಸಂತತಿಯವರು ದೇವರೊಂದಿಗೆ ಒಡಂಬಡಿಕೆಯ ಸಂಬಂಧದೊಳಗೆ ಬಂದಾಗ ಒಂದು ಸ್ವತಂತ್ರ ಜನಾಂಗವಾದರು. ಧರ್ಮಶಾಸ್ತ್ರವನ್ನು ಅವರಿಗೆ ಕೊಡುವಾಗ ಯೆಹೋವನಂದದ್ದು: “ನನ್ನ ಆಜ್ಞಾವಿಧಿಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾವಿಧಿಗಳ ಮೂಲಕ ಬದುಕುವರು. ಆದದರಿಂದ ನೀವು ಅವುಗಳನ್ನೇ ಅನುಸರಿಸಬೇಕು.” (ಯಾಜ. 18:5) ಇಸ್ರಾಯೇಲ್ಯರು ಧರ್ಮಶಾಸ್ತ್ರದ ಪರಿಪೂರ್ಣ ಮಟ್ಟಗಳಿಗನುಸಾರ ಜೀವಿಸಲು ತಪ್ಪಿಹೋದದ್ದರಿಂದ ಧರ್ಮಶಾಸ್ತ್ರದ ಶಾಪಕ್ಕೆ ಒಳಗಾದರು. ಅವರಿಗೆ ಈ ಶಾಪದಿಂದಲೇ ಬಿಡುಗಡೆಯ ಅಗತ್ಯವಿತ್ತು.—ಗಲಾ. 3:13.
15. ದಾವೀದನು ದೇವಪ್ರೇರಣೆಯಿಂದ ಭವಿಷ್ಯತ್ತಿನ ಯಾವ ಆಶೀರ್ವಾದದ ಬಗ್ಗೆ ಬರೆದನು?
15 ನಿತ್ಯಜೀವದ ನಿರೀಕ್ಷೆಯ ಕುರಿತು ತಿಳಿಸುವಂತೆ ಮೋಶೆಯ ನಂತರ ಯೆಹೋವನು ಇತರ ಬೈಬಲ್ ಲೇಖಕರನ್ನು ಪ್ರೇರಿಸಿದನು. (ಕೀರ್ತ. 21:4; 37:29) ಉದಾಹರಣೆಗೆ, ಕೀರ್ತನೆಗಾರನಾದ ದಾವೀದನು ಚೀಯೋನ್ ಪರ್ವತದಲ್ಲಿ ಸತ್ಯಾರಾಧಕರ ಐಕ್ಯದ ಕುರಿತ ಕೀರ್ತನೆಯೊಂದನ್ನು ಹೀಗೆ ಕೊನೆಗೊಳಿಸಿದನು: “ಅಲ್ಲಿ ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.”—ಕೀರ್ತ. 133:3.
16. ‘ಭೂಮಂಡಲದ’ ಭವಿಷ್ಯದ ಕುರಿತು ಯೆಶಾಯನ ಮೂಲಕ ಯೆಹೋವನು ಏನನ್ನು ವಾಗ್ದಾನಿಸಿದನು?
16 ಭೂಮಿಯ ಮೇಲಿನ ನಿತ್ಯಜೀವದ ಕುರಿತು ಪ್ರವಾದಿಸುವಂತೆ ಯೆಹೋವನು ಯೆಶಾಯನನ್ನು ಪ್ರೇರಿಸಿದನು. (ಯೆಶಾಯ 25:7, 8 ಓದಿ.) ಈ ಪ್ರವಾದನೆಯಲ್ಲಿ ಮಾಡಲಾಗಿರುವ ಹೋಲಿಕೆಯು ಮಾನವಕುಲದ ಮಹಾಶತ್ರುಗಳಾದ ಪಾಪ ಮತ್ತು ಮರಣದ ಕಡೆಗೆ ಗಮನಸೆಳೆಯುತ್ತದೆ. ಇವು ಮಾನವಕುಲದ ಮೇಲೆ ಭಾರವಾದ ಹೊರೆಯಂತಿವೆ. ಆದರೆ ಪಾಪ ಮತ್ತು ಮರಣವನ್ನು “ಭೂಮಂಡಲದಿಂದಲೇ” ನಿರ್ನಾಮಮಾಡಲಾಗುವುದು ಎಂದು ಯೆಹೋವನು ತನ್ನ ಜನರಿಗೆ ಆಶ್ವಾಸನೆ ಕೊಡುತ್ತಾನೆ.
17. ಮೆಸ್ಸೀಯನ ಯಾವ ಪ್ರವಾದನಾತ್ಮಕ ಪಾತ್ರ ನಿತ್ಯಜೀವದ ದಾರಿಯನ್ನು ತೆರೆಯುತ್ತದೆ?
17 ಅಜಾಜೇಲನಿಗೋಸ್ಕರವಿದ್ದ ಹೋತದ ಸಂಬಂಧದಲ್ಲಿ ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ನಿರ್ದಿಷ್ಟ ಕಾರ್ಯವಿಧಾನವನ್ನೂ ಪರಿಗಣಿಸಿ. ವರ್ಷಕ್ಕೊಮ್ಮೆ ದೋಷಪರಿಹಾರಕ ದಿನದಂದು ಮಹಾಯಾಜಕನು, ‘ಅದರ ತಲೆಯ ಮೇಲೆ ಎರಡು ಕೈಗಳನ್ನೂ ಇಟ್ಟು ಇಸ್ರಾಯೇಲ್ಯರ ಎಲ್ಲಾ ಪಾಪಗಳನ್ನೂ ದ್ರೋಹಗಳನ್ನೂ ಅಪರಾಧಗಳನ್ನೂ ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸುತ್ತಿದ್ದನು. ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ದುರ್ಗಮವಾದ ಪ್ರದೇಶಕ್ಕೆ ಒಯ್ಯುತ್ತಿತ್ತು.’ (ಯಾಜ. 16:7-10, 21, 22) ಮೆಸ್ಸೀಯನು ಬರಲಿದ್ದಾನೆ ಮತ್ತು ಅವನು ತದ್ರೀತಿಯ ಪಾತ್ರವಹಿಸುತ್ತಾ ‘ಸಂಕಷ್ಟಗಳು,’ ‘ಸಂಕಟ’ ಹಾಗೂ ‘ಬಹು ಜನರ ಪಾಪವನ್ನು’ ಹೊತ್ತುಕೊಂಡು ಹೋಗುವ ಮೂಲಕ ನಿತ್ಯಜೀವದ ದಾರಿಯನ್ನು ತೆರೆಯುವನು ಎಂಬುದಾಗಿ ಯೆಶಾಯನು ಮುಂತಿಳಿಸಿದನು.—ಯೆಶಾಯ 53:4-6, 12 ಓದಿ.
18, 19. ಯೆಶಾಯ 26:19 ಮತ್ತು ದಾನಿಯೇಲ 12:13ರಲ್ಲಿ ಯಾವ ನಿರೀಕ್ಷೆಯನ್ನು ಒತ್ತಿಹೇಳಲಾಗಿದೆ?
18 ಯೆಶಾಯನ ಮೂಲಕ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗಂದದ್ದು: “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿ ಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂಮಿಯು ಸತ್ತವರನ್ನು ಹೊರಪಡಿಸುವದು.” (ಯೆಶಾ. 26:19) ಪುನರುತ್ಥಾನ ಹಾಗೂ ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಹೀಬ್ರು ಶಾಸ್ತ್ರಗಳು ಸ್ಪಷ್ಟವಾಗಿ ಒತ್ತಿಹೇಳುತ್ತವೆ. ಉದಾಹರಣೆಗೆ, ದಾನಿಯೇಲನು ಸುಮಾರು 100 ವರ್ಷದವನಾಗಿದ್ದಾಗ ಯೆಹೋವನು ಅವನಿಗೆ, “ನೀನು ದೀರ್ಘನಿದ್ರೆಯನ್ನು ಹೊಂದಿ ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ” ಎಂದು ಮಾತುಕೊಟ್ಟನು.—ದಾನಿ. 12:13.
19 ಮೃತಪಟ್ಟ ತಮ್ಮನ ಕುರಿತು ಮಾರ್ಥಳು ಯೇಸುವಿಗೆ, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದು ಹೇಳಿದ್ದು ಪುನರುತ್ಥಾನದ ನಿರೀಕ್ಷೆಯ ನಿಮಿತ್ತವೇ. (ಯೋಹಾ. 11:24) ಯೇಸುವಿನ ಬೋಧನೆಗಳು ಮತ್ತು ಅವನ ಶಿಷ್ಯರ ಪ್ರೇರಿತ ಬರಹಗಳು ಈ ನಿರೀಕ್ಷೆಯನ್ನು ಬದಲಾಯಿಸಿದವೋ? ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಯೆಹೋವನು ಈಗಲೂ ಮಾನವರಿಗೆ ಕೊಡುತ್ತಿದ್ದಾನೋ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ.
[ಪಾದಟಿಪ್ಪಣಿ]
a ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ 6ನೇ ಅಧ್ಯಾಯವನ್ನು ನೋಡಿ.
ನೀವು ವಿವರಿಸಬಲ್ಲಿರೋ?
• ಮಾನವ ಸೃಷ್ಟಿಯು ಯಾವ ನಿರೀಕ್ಷೆಯ ಆಧಾರದಲ್ಲಿ “ವ್ಯರ್ಥತ್ವಕ್ಕೆ ಒಳಗಾಯಿತು”?
• ಅಬ್ರಹಾಮನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತೆಂದು ಯಾವುದು ತೋರಿಸುತ್ತದೆ?
• ಎಲೀಹು ಯೋಬನಿಗೆ ನುಡಿದ ಮಾತುಗಳು ಮಾನವಕುಲಕ್ಕೆ ಯಾವ ನಿರೀಕ್ಷೆಯನ್ನು ಕೊಡುತ್ತವೆ?
• ಪುನರುತ್ಥಾನ ಹಾಗೂ ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯನ್ನು ಹೀಬ್ರು ಶಾಸ್ತ್ರಗಳು ಹೇಗೆ ಒತ್ತಿಹೇಳುತ್ತವೆ?
[ಪುಟ 5ರಲ್ಲಿರುವ ಚಿತ್ರ]
ಎಲೀಹು ಯೋಬನಿಗೆ ನುಡಿದ ಮಾತುಗಳು, ವಯಸ್ಸಾಗುವಿಕೆ ಹಾಗೂ ಮರಣದಿಂದ ಮನುಷ್ಯರು ವಿಮುಕ್ತರಾಗುವರೆಂಬ ನಿರೀಕ್ಷೆಯನ್ನು ಕೊಡುತ್ತವೆ
[ಪುಟ 6ರಲ್ಲಿರುವ ಚಿತ್ರ]
“ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ” ಎಂಬುದಾಗಿ ದಾನಿಯೇಲನಿಗೆ ಮಾತುಕೊಡಲಾಯಿತು