ಬೆಳಕು ವಾಹಕರು—ಯಾವ ಉದ್ದೇಶಕ್ಕಾಗಿ?
“ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ.”—ಅ. ಕೃತ್ಯಗಳು 13:47.
1. ಅ. ಕೃತ್ಯಗಳು 13:47 ರಲ್ಲಿ ಸೂಚಿಸಲ್ಪಟ್ಟ ಅಪ್ಪಣೆಯ ಮೂಲಕ ಅಪೊಸ್ತಲ ಪೌಲನು ಹೇಗೆ ಪ್ರಭಾವಿತನಾದನು?
“ಯೆಹೋವ (NW) ನು ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಹೇಗಂದರೆ—ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ,” ಎಂದು ಅಪೊಸ್ತಲ ಪೌಲನು ಅಂದನು. (ಅ. ಕೃತ್ಯಗಳು 13:47) ಆತನು ಅದನ್ನು ಹೇಳಿದ್ದು ಮಾತ್ರವಲ್ಲ ಅದರ ಗಂಭೀರತೆಯನ್ನು ಕೂಡ ಅಂಗೀಕರಿಸಿದನು. ಕ್ರೈಸ್ತನಾದ ಮೇಲೆ, ಪೌಲನು ಆ ಅಪ್ಪಣೆಯನ್ನು ಪೂರೈಸಲು ತನ್ನ ಜೀವಿತವನ್ನು ಸಮರ್ಪಿಸಿದನು. (ಅ. ಕೃತ್ಯಗಳು 26:14-20) ಆ ಅಪ್ಪಣೆಯು ನಮ್ಮ ಮೇಲೂ ವಿಧಿಸಲಾಗಿದೆಯೋ? ಹಾಗಿರುವಲ್ಲಿ, ನಮ್ಮ ದಿನಗಳಲ್ಲಿ ಅದು ಯಾಕೆ ಪ್ರಾಮುಖ್ಯವಾಗಿದೆ?
ಮಾನವ ಕುಲದ ‘ಜ್ಯೋತಿಗಳು ನಂದಿದಾಗ’
2. (ಎ) ಲೋಕವು ಅದರ ಅಂತ್ಯ ಕಾಲವನ್ನು ಪ್ರವೇಶಿಸಿದಾಗ, ಅದರ ಆತ್ಮಿಕ ಮತ್ತು ನೈತಿಕ ಹವಾಮಾನದ ಮೇಲೆ ಗಾಢವಾಗಿ ಪರಿಣಾಮ ಬೀರುವಂಥಾದ್ದೇನು ಸಂಭವಿಸಿತು? (ಬಿ) ಆಗಸ್ಟ್ 1914 ರಲ್ಲಿ ಸಂಭವಿಸಿದ್ದನ್ನು ನೋಡಿದ ಬ್ರಿಟಿಷ್ ರಾಜ್ಯನೀತಿಜ್ಞನು ಹೇಗೆ ಪ್ರತಿಕ್ರಿಯಿಸಿದರು?
2 ಇಂದು ಜೀವಿಸುವ ಹೆಚ್ಚಿನ ಜನರು ಹುಟ್ಟುವುದಕ್ಕಿಂತ ಮುಂಚೆ, ಈ ಲೋಕವು ಅದರ ಕಡೇ ದಿವಸಗಳಲ್ಲಿ ಪ್ರವೇಶಿಸಿತು. ತ್ವರಿತ ಅನುಕ್ರಮದಲ್ಲಿ ದೊಡ್ಡ ಘಟನೆಗಳು ನಡೆದವು. ಆತ್ಮಿಕ ಮತ್ತು ನೈತಿಕ ಕತ್ತಲೆಯ ಪ್ರಧಾನ ಪ್ರವರ್ತಕ, ಪಿಶಾಚನಾದ ಸೈತಾನನು, ಭೂಮಿಗೆ ದೊಬ್ಬಲ್ಪಟ್ಟನು. (ಎಫೆಸ 6:12; ಪ್ರಕಟನೆ 12:7-12) ಮಾನವ ಜಾತಿಯು ಆಗಲೇ ತನ್ನ ಮೊದಲ ಲೋಕ ಯುದ್ಧದೊಳಗೆ ದುಮುಕಿತ್ತು. ಆಗಸ್ಟ್ 1914ರ ಆರಂಭದಲ್ಲಿ, ಯುದ್ಧವು ನಿಶ್ಚಿತವೆಂದು ತೋರಿದಾಗ, ಬ್ರಿಟಿಷ್ ವಿದೇಶ ಮಂತ್ರಿ ಸರ್ ಎಡರ್ಡ್ವ್ ಗ್ರೇ, ಲಂಡನ್ನಿನ ತನ್ನ ಕಚೇರಿಯ ಕಿಟಕಿಯ ಬಳಿ ನಿಂತು ಹೀಗಂದರು: “ಯೂರೋಪಿನ ಎಲ್ಲಾ ಕಡೆಯ ದೀಪಗಳು ನಂದಿಹೋಗುತ್ತಿವೆ; ನಮ್ಮ ಜೀವಮಾನ ಕಾಲದೊಳಗೆ ಪುನಃ ಅವುಗಳನ್ನು ಹೊತ್ತಿಸುವುದನ್ನು ನಾವು ಕಾಣಲಾರೆವು.”
3. ಮಾನವಜಾತಿಯ ಹೊರನೋಟವನ್ನು ಉಜ್ವಲಗೊಳಿಸಲು ಪ್ರಯತ್ನಿಸುವಲ್ಲಿ ಲೋಕ ನಾಯಕರು ಯಾವ ಯಶಸ್ಸನ್ನು ಪಡೆದಿರುತ್ತಾರೆ?
3 ಆ ಜ್ಯೋತಿಗಳು ಪುನಃ ಬೆಳಗುವಂತೆ ಮಾಡುವ ಒಂದು ಪ್ರಯತ್ನದಲ್ಲಿ, 1920 ರಲ್ಲಿ, ಜನಾಂಗ ಸಂಘವನ್ನು ಜಾರಿಯಲ್ಲಿ ಹಾಕಲಾಯಿತು. ಆದರೂ ಜ್ಯೋತಿಗಳು ವಿರಳವಾಗಿ ಮಿನುಗಿದವು. ಎರಡನೇ ಲೋಕ ಯುದ್ಧದ ಕೊನೆಯಲ್ಲಿ, ಲೋಕ ನಾಯಕರು ಪುನಃ ಪ್ರಯತ್ನಿಸಿದರು, ಈ ಸಲ ಸಂಯುಕ್ತ ರಾಷ್ಟ್ರ ಸಂಘದೊಂದಿಗೆ. ಪುನಃ ಒಮ್ಮೆ, ಜ್ಯೋತಿಗಳು ಉಜ್ವಲವಾಗಿ ಉರಿಯಲಿಲ್ಲ. ಹಾಗಿದ್ದರೂ, ಇತ್ತೀಚೆಗಿನ ಘಟನೆಗಳ ನೋಟದಲ್ಲಿ, ಲೋಕ ನಾಯಕರು “ಹೊಸ ಲೋಕ ವ್ಯವಸ್ಥೆ” ಯ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಅವರ ಸೃಷ್ಟಿಯ ಯಾವುದೇ “ಹೊಸ ಲೋಕ” ವು ನಿಜ ಸಮಾಧಾನ ಮತ್ತು ಭದ್ರತೆಯನ್ನೊದಗಿಸಿದೆ ಎಂದು ಹೇಳುವುದು ಕಷ್ಟವೇ. ಅದಕ್ಕೆ ಪ್ರತಿಯಾಗಿ, ಸಶಸ್ತ್ರ ಯುದ್ಧ, ಕುಲಸಂಬಂಧಗಳ ಕಲಹ, ಅಪರಾಧ, ನಿರುದ್ಯೋಗ, ಬಡತನ, ಪರಿಸರದ ಮಾಲಿನ್ಯ, ಮತ್ತು ಕಾಯಿಲೆಗಳೆಲ್ಲವು ಜನರ ಜೀವಿತದ ಆನಂದವನ್ನು ಕೆಡಿಸುತ್ತಾ ಮುಂದುವರಿಯುತ್ತಿವೆ.
4, 5. (ಎ) ಮಾನವ ಕುಟುಂಬದ ಮೇಲೆ ಯಾವಾಗ ಮತ್ತು ಹೇಗೆ ಕತ್ತಲು ಆವರಿಸಿತು? (ಬಿ) ಬಿಡುಗಡೆಯನ್ನು ಒದಗಿಸಲು ಏನು ಅಗತ್ಯ?
4 ವಾಸ್ತವದಲ್ಲಿ, ಮಾನವ ಜಾತಿಯ ಜ್ಯೋತಿಗಳು 1914ರ ಬಹಳ ಮುಂಚೆಯೆ ನಂದಿದ್ದವು. ಅದು 6,000 ವರ್ಷಗಳ ಹಿಂದೆ ಏದೆನ್ನಲ್ಲಿ, ದೇವರ ಪ್ರಕಟಿತ ಚಿತ್ತಕ್ಕೆ ಗಮನವಿಲ್ಲದೆ ತಮ್ಮ ಸ್ವಂತ ನಿರ್ಣಯಗಳನ್ನು ಮಾಡಲು ನಮ್ಮ ಮೊದಲ ಹೆತ್ತವರು ಆರಿಸಿಕೊಂಡಾಗ ಸಂಭವಿಸಿತು. ಅಂದಿನಿಂದ ಮಾನವ ಕುಲದ ಘೋರ ಅನುಭವಗಳು ಬೈಬಲ್ ಸೂಚಿಸುವ “ಅಂಧಕಾರದ ದೊರೆತನದ” ಕೆಳಗಿನ ಕೇವಲ ಘಟನಾವಳಿಗಳಾಗಿವೆ. (ಕೊಲೊಸ್ಸೆ. 1:13) ಮೊದಲ ಮಾನವನಾದ ಆದಾಮನು ಪಿಶಾಚನಾದ ಸೈತಾನನ ಪ್ರಭಾವದ ಕೆಳಗೆ ಲೋಕವನ್ನು ಪಾಪದೊಳಗೆ ತಳ್ಳಿದ್ದನು; ಮತ್ತು ಆದಾಮನಿಂದ ಪಾಪ ಮತ್ತು ಮರಣವು ಇಡೀ ಮಾನವ ಜಾತಿಗೆ ಹಬ್ಬಿತು. (ಆದಿಕಾಂಡ 3:1-6; ರೋಮಾಪುರ 5:12) ಹೀಗೆ ಬೆಳಕಿನ ಮತ್ತು ಜೀವದ ಉಗಮನಾದ, ಯೆಹೋವನ ನೆಚ್ಚಿಕೆಯನ್ನು ಮಾನವ ಜಾತಿಯು ಕಳೆದುಕೊಂಡಿತು.—ಕೀರ್ತನೆ 36:9.
5 ಮಾನವ ಜಾತಿಯ ಯಾವನಿಗೂ ಮತ್ತೊಮ್ಮೆ ಬೆಳಕು ಪ್ರಕಾಶಿಸುವಂತೆ ಮಾಡುವ ಒಂದೇ ಮಾರ್ಗವು, ಮಾನವ ಜಾತಿಯ ನಿರ್ಮಾಣಿಕನಾದ ಯೆಹೋವ ದೇವರ ನೆಚ್ಚಿಕೆಯನ್ನು ಅವರು ಸಂಪಾದಿಸಿಕೊಳ್ಳುವಲ್ಲಿಯೆ. ಆಗ, ಪಾಪದ ಕಾರಣದಿಂದುಂಟಾದ ಖಂಡನೆ, “ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕು,” ಎತ್ತಲ್ಪಡಬಹುದು. ಅದು ಹೇಗೆ ಸಾಧ್ಯವಾಗುವುದು?—ಯೆಶಾಯ 25:7.
“ಅನ್ಯಜನಾಂಗಗಳಿಗೂ ಬೆಳಕನ್ನಾಗಿ” ಕೊಡಲ್ಪಟ್ಟವನು
6. ಯೆಹೋವನು ಯೇಸು ಕ್ರಿಸ್ತನ ಮುಖಾಂತರವಾಗಿ ಯಾವ ಮಹಾ ಪ್ರತೀಕ್ಷೆಗಳನ್ನು ಸಾಧ್ಯಮಾಡಿರುತ್ತಾನೆ?
6 ಆದಾಮ ಹವ್ವರು ಏದೆನ್ ತೋಟದಿಂದ ಹೊರಹಾಕಲ್ಪಡುವ ಮೊದಲೇ, ನೀತಿ ಪ್ರಿಯರನ್ನು ಬಿಡುಗಡೆಗೊಳಿಸುವ ಒಂದು “ಸಂತಾನ” ವನ್ನು ಯೆಹೋವನು ಮುಂತಿಳಿಸಿದನು. (ಆದಿಕಾಂಡ 3:15) ಆ ವಾಗ್ದಾನಿತ ಸಂತಾನದ ಮಾನವ ಜನನವನ್ನನುಸರಿಸಿ, ಯೆಹೋವನು ಯೆರೂಸಲೇಮಿನ ದೇವಾಲಯದಲ್ಲಿ, ವಯೋವೃದ್ಧ ಸಿಮೆಯೋನನು, ಅವನನ್ನು “ಅನ್ಯದೇಶದವರಿಂದ ಮುಸುಕನ್ನು ತೆಗೆಯುವದಕ್ಕಾಗಿರುವ ಬೆಳಕು” (NW) ಎಂದು ಗುರುತಿಸುವಂತೆ ಮಾಡಿದನು. (ಲೂಕ 2:29-32) ಯೇಸುವಿನ ಪರಿಪೂರ್ಣ ಮಾನವ ಜೀವದ ಯಜ್ಞದಲ್ಲಿ ನಂಬಿಕೆಯ ಮೂಲಕ, ಮಾನವರು ಸ್ವಭಾವಸಿದ್ಧ ಪಾಪದಿಂದ ಪರಿಣಮಿಸುವ ಖಂಡನೆಯಿಂದ ಬಿಡುಗಡೆ ಹೊಂದಲು ಸಾಧ್ಯವಿದೆ. (ಯೋಹಾನ 3:36) ಈಗ ಅವರು ಯೆಹೋವನ ಚಿತ್ತದ ಹೊಂದಿಕೆಯಲ್ಲಿ, ಸ್ವರ್ಗೀಯ ರಾಜ್ಯದ ಭಾಗವಾಗಿ ಅಥವಾ ಪ್ರಮೋದವನ ಭೂಮಿಯ ಮೇಲೆ ಅದರ ಪ್ರಜೆಗಳಾಗಿ ಪರಿಪೂರ್ಣತೆಯಲ್ಲಿ ನಿತ್ಯ ಜೀವಕ್ಕಾಗಿ ಮುನ್ನೋಡಬಹುದು. ಎಂಥ ಅದ್ಭುತಕರ ಒದಗಿಸುವಿಕೆ ಅದಾಗಿರುತ್ತದೆ!
7. ಯೆಶಾಯ 42:1-4 ರಲ್ಲಿರುವ ವಾಗ್ದಾನಗಳು ಮತ್ತು ಅದರ ಮೊದಲ ಶತಮಾನದ ನೆರವೇರಿಕೆಗಳೆರಡೂ ಯಾಕೆ ನಮ್ಮಲ್ಲಿ ನಿರೀಕ್ಷೆಯನ್ನು ತುಂಬುತ್ತವೆ?
7 ಯೇಸು ಕ್ರಿಸ್ತನು ತಾನೇ ಈ ಮಹಾ ಪ್ರತೀಕ್ಷೆಗಳ ನೆರವೇರಿಕೆಯ ಖಾತರಿಯಾಗಿದ್ದಾನೆ. ಸಂಕಟಪಡುವ ಜನರಿಗೆ ಯೇಸುವಿನ ಗುಣಪಡಿಸುವಿಕೆಯ ಸಂಬಂಧದಲ್ಲಿ, ಯೆಶಾಯ 42:1-4 ರಲ್ಲಿ ಬರೆದಿರುವುದನ್ನು ಅಪೊಸ್ತಲ ಮತ್ತಾಯನು ಆತನಿಗೆ ಅನ್ವಯಿಸಿದನು. ಆ ವಚನವು ಭಾಗಶಃ ಅನ್ನುವುದು: “ಇಗೋ, ನನ್ನ ಸೇವಕನು; ಈತನನ್ನು ನಾನು ಆರಿಸಿಕೊಂಡೆನು; ಈತನು ನನಗೆ ಇಷ್ಟನು; ನನ್ನ ಪ್ರಾಣ ಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು.” ಮತ್ತು ಇದು ಎಲ್ಲಾ ಜನಾಂಗಗಳ ಜನರಿಗೆ ಅಗತ್ಯವಲ್ಲವೊ? ಪ್ರವಾದನೆಯು ಮುಂದುವರಿಸುವುದು: “ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದು ಹಾಕದೆಯೂ, ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ” ಇರುವನು. ಇದಕ್ಕೆ ಹೊಂದಿಕೆಯಲ್ಲಿ, ಯೇಸುವು ಆಗಲೇ ಸಂಕಟಪಡುತ್ತಿದ್ದ ಜನರೊಂದಿಗೆ ಕ್ರೂರವಾಗಿ ವರ್ತಿಸಲಿಲ್ಲ. ಆತನು ಅವರಿಗೋಸ್ಕರ ಕನಿಕರಪಟ್ಟನು, ಯೆಹೋವನ ಉದ್ದೇಶಗಳ ಕುರಿತು ಅವರಿಗೆ ಕಲಿಸಿದನು, ಮತ್ತು ಅವರನ್ನು ಗುಣಪಡಿಸಿದನು.—ಮತ್ತಾಯ 12:15-21.
8. ಯಾವ ಅರ್ಥದಲ್ಲಿ ಯೇಸುವು “ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ” ಮತ್ತು “ಅನ್ಯಜನಗಳಿಗೆ ಬೆಳಕನ್ನಾಗಿ” ಯೆಹೋವನಿಂದ ಕೊಡಲ್ಪಟ್ಟಿರುತ್ತಾನೆ?
8 ಈ ಪ್ರವಾದನೆಯನ್ನು ಕೊಟ್ಟಾತನು ತನ್ನ ಸೇವಕನಿಗೆ, ಯೇಸುವಿಗೆ, ತಾನೇ ಹೇಳುವುದು: “ನೀನು ಕುರುಡರಿಗೆ ಕಣ್ಣು ಕೊಟ್ಟು ಬಂದಿಗಳನ್ನು ಸೆರೆಯಿಂದಲೂ ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ಕರತರಬೇಕು ಎಂದು ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕರೆದು ಕೈಹಿಡಿದು ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.” (ಯೆಶಾಯ 42:6, 7) ಹೌದು, ಯೆಹೋವನು ಯೇಸುವನ್ನು ಒಡಂಬಡಿಕೆಯೋಪಾದಿ, ಶಾಸ್ತ್ರೋಕ್ತ ವಾಗ್ದಾನದ ಖಾತರಿಯೋಪಾದಿ ಕೊಟ್ಟಿದ್ದಾನೆ. ಅದು ಎಷ್ಟೊಂದು ಪ್ರೋತ್ಸಾಹನೀಯವಾಗಿದೆ! ಯೇಸುವು ಭೂಮಿಯಲ್ಲಿದ್ದಾಗ ಆತನು ಮಾನವಜಾತಿಯ ಕಡೆಗೆ ನಿಜ ಚಿಂತೆಯನ್ನು ವ್ಯಕ್ತಪಡಿಸಿದನು; ಮಾನವಜಾತಿಗಾಗಿ ಆತನು ತನ್ನ ಜೀವವನ್ನು ಕೂಡ ಕೊಟ್ಟನು. ಈತನಿಗೆ ಯೆಹೋವನು ಎಲ್ಲಾ ಜನಾಂಗಗಳ ಮೇಲೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟಿರುತ್ತಾನೆ. ಅನ್ಯಜನಾಂಗಗಳ ಬೆಳಕು ಎಂದು ಆತನ ಕುರಿತು ಯೆಹೋವನು ಸೂಚಿಸಿರುವುದು ಆಶ್ಚರ್ಯವಲ್ಲ. ಯೇಸು ತಾನೇ ಅಂದದ್ದು: “ನಾನೇ ಲೋಕಕ್ಕೆ ಬೆಳಕು.”—ಯೋಹಾನ 8:12.
9. ಆಗ ಆಸ್ತಿತ್ವದಲ್ಲಿದ್ದ ವಿಷಯಗಳ ವ್ಯವಸ್ಥೆಯನ್ನು ಉತ್ತಮಗೊಳಿಸಲು ಯೇಸು ತನ್ನನ್ನೇ ಯಾಕೆ ಸಮರ್ಪಿಸಿಕೊಳ್ಳಲಿಲ್ಲ?
9 ಯೇಸುವು ಯಾವ ಉದ್ದೇಶಕ್ಕಾಗಿ ಲೋಕದ ಬೆಳಕಾಗಿ ಸೇವೆ ಸಲ್ಲಿಸಿದನು? ಅದು ಯಾವುದೇ ಲೌಕಿಕ ಯಾ ಪ್ರಾಪಂಚಿಕ ಉದ್ದೇಶಕ್ಕಾಗಿ ಖಂಡಿತವಾಗಿಯೂ ಅಲ್ಲ. ಆತನು ಆಗ ಆಸ್ತಿತ್ವದಲ್ಲಿದ್ದ ರಾಜಕೀಯ ವ್ಯವಸ್ಥೆಯನ್ನು ಸರಿ ಪಡಿಸಲು ಪ್ರಯತ್ನಿಸಲಿಲ್ಲ ಮತ್ತು ಲೋಕದ ಅಧಿಪತಿಯಾದ ಸೈತಾನನಿಂದಾಗಲಿ ಯಾ ಜನರಿಂದಾಗಲಿ ರಾಜತನವನ್ನು ಸ್ವೀಕರಿಸಲಿಲ್ಲ. (ಲೂಕ 4:5-8; ಯೋಹಾನ 6:15; 14:30) ಸಂಕಟಕ್ಕೊಳಗಾದವರಿಗಾಗಿ ಯೇಸುವು ಮಹಾ ಕನಿಕರವನ್ನು ತೋರಿಸಿದನು ಮತ್ತು ಇತರರು ತರಲಾರದ ಪರಿಹಾರವನ್ನು ಆತನು ಅವರಿಗೆ ತಂದನು. ಆದರೆ ಸ್ವಭಾವಸಿದ್ಧ ಪಾಪದಿಂದಾಗಿ ಮತ್ತು ಅದೃಶ್ಯ ದುಷ್ಟಾತ್ಮ ಶಕ್ತಿಗಳ ಮೂಲಕ ನಡಸಲ್ಪಟ್ಟದ್ದಾಗಿ, ದೈವಿಕ ಖಂಡನೆಗೊಳಗಾದ ಮಾನವ ಸಮಾಜದ ರಚನೆಯೊಳಗೆ ಶಾಶ್ವತ ಪರಿಹಾರ ಪಡೆಯಲು ಸಾಧ್ಯವಿಲ್ಲವೆಂಬುದು ಆತನಿಗೆ ಗೊತ್ತಿತ್ತು. ದೈವಿಕ ಒಳನೋಟದೊಂದಿಗೆ, ಯೇಸುವು ತನ್ನ ಇಡೀ ಜೀವಿತವನ್ನು ದೇವರ ಚಿತ್ತ ಮಾಡುವುದರ ಮೇಲೆ ಕೇಂದ್ರೀಕರಿಸಿದ್ದನು.—ಇಬ್ರಿಯ 10:7.
10. ಯಾವ ವಿಧಗಳಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಯೇಸು ಲೋಕದ ಬೆಳಕಾಗಿ ಸೇವೆ ಸಲ್ಲಿಸಿದನು?
10 ಹಾಗಾದರೆ, ಯಾವ ವಿಧಾನಗಳಲ್ಲಿ ಮತ್ತು ಯಾವ ಉದ್ದೇಶದಿಂದ ಯೇಸುವು ಲೋಕದ ಬೆಳಕಾಗಿ ಸೇವೆ ಸಲ್ಲಿಸಿದನು? ಆತನು ತನ್ನನ್ನು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕೆ ಸಮರ್ಪಿಸಿಕೊಂಡನು. (ಲೂಕ 4:43; ಯೋಹಾನ 18:37) ಯೆಹೋವನ ಉದ್ದೇಶದ ಕುರಿತು ಸತ್ಯಕ್ಕೆ ಸಾಕ್ಷಿಯಾಗಿರುವುದರ ಮೂಲಕ, ಯೇಸುವು ತನ್ನ ಸ್ವಗೀಯ ತಂದೆಯ ಹೆಸರನ್ನೂ ಮಹಿಮೆಪಡಿಸಿದನು. (ಯೋಹಾನ 17:4, 6) ಇನ್ನೂ ಕೂಡಿಸಿ, ಲೋಕದ ಬೆಳಕಾಗಿ, ಯೇಸುವು ಧಾರ್ಮಿಕ ಸುಳ್ಳುಗಳನ್ನು ಹೊರಗೆಡಹಿದನು ಮತ್ತು ಹೀಗೆ ಧಾರ್ಮಿಕ ಬಂಧನದೊಳಗೆ ಹಿಡಿದಿಡಲ್ಪಟ್ಟವರಿಗೆ ಆತ್ಮಿಕ ಬಿಡುಗಡೆಯನ್ನು ಒದಗಿಸಿದನು. ಯಾರು ತಾವು ಸೈತಾನನಿಂದ ಬಳಸಲ್ಪಡುವಂತೆ ಬಿಡುತ್ತಾರೋ ಅಂಥವರ ಅದೃಶ್ಯ ಪ್ರಭಾವಿ ಅವನೇ ಎಂದು ಅವನು ಸೈತಾನನನ್ನು ಬಯಲುಪಡಿಸಿದನು. ಮತ್ತೂ ಯೇಸುವು ಕತ್ತಲೆಗೆ ಸಂಬಂಧಪಟ್ಟ ಕೃತ್ಯಗಳನ್ನು ಸ್ಪಷ್ಟವಾಗಿಗಿ ಗುರುತಿಸಿದನು. (ಮತ್ತಾಯ 15:3-9; ಯೋಹಾನ 3:19-21; 8:44) ಪ್ರಮುಖವಾಗಿ, ಈಡಾಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ಕೊಡುವುದರ ಮೂಲಕ ಲೋಕದ ಬೆಳಕಾಗಿ ಅವನು ಪರಿಣಮಿಸಿದನು. ಹೀಗೆ, ಯಾರು ಈ ಒದಗಿಸುವಿಕೆಯಲ್ಲಿ ನಂಬಿಕೆಯನ್ನಿಡುತ್ತಾರೋ ಅವರಿಗೆ ಪಾಪಗಳ ಕ್ಷಮೆ, ದೇವರೊಂದಿಗೆ ಒಂದು ನೆಚ್ಚಿಕೆಯ ಸಂಬಂಧ, ಮತ್ತು ಯೆಹೋವನ ವಿಶ್ವ ಕುಟುಂಬದ ಭಾಗವಾಗಿ ನಿತ್ಯ ಜೀವದ ಪ್ರತೀಕ್ಷೆಯನ್ನು ಪಡೆಯುವುದಕ್ಕೆ ಅವನು ಮಾರ್ಗವನ್ನು ತೆರೆದನು. (ಮತ್ತಾಯ 20:28; ಯೋಹಾನ 3:16) ಮತ್ತು ಕೊನೆಯದಾಗಿ, ತನ್ನ ಇಡೀ ಜೀವಿತದಲ್ಲಿ ಪರಿಪೂರ್ಣ ದೇವ ಭಕ್ತಿಯನ್ನು ಕಾಪಾಡಿಕೊಳ್ಳುವುದರ ಮೂಲಕ, ಯೇಸುವು ಯೆಹೋವನ ಸಾರ್ವಭೌಮತೆಯನ್ನು ಎತ್ತಿ ಹಿಡಿದನು ಮತ್ತು ಪಿಶಾಚನು ಸುಳ್ಳುಗಾರನೆಂದು ರುಜುಪಡಿಸಿದನು, ಹೀಗೆ ನೀತಿ ಪ್ರಿಯರಿಗಾಗಿ ನಿತ್ಯ ಪ್ರಯೋಜನಗಳು ಸಾಧ್ಯವಾಗುವಂತೆ ಮಾಡಿದನು. ಆದರೆ ಯೇಸು ಒಬ್ಬನೇ ಬೆಳಕು ವಾಹಕನಾಗಿರಬೇಕಿತ್ತೊ?
“ನೀವು ಲೋಕಕ್ಕೆ ಬೆಳಕಾಗಿದ್ದೀರಿ”
11. ಬೆಳಕು ವಾಹಕರಾಗಲು, ಯೇಸುವಿನ ಶಿಷ್ಯರು ಏನು ಮಾಡಬೇಕಾಗಿತ್ತು?
11 ಮತ್ತಾಯ 5:14 ರಲ್ಲಿ, ಯೇಸು ತನ್ನ ಶಿಷ್ಯರಿಗಂದದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ.” ಅವರು ಆತನ ಹೆಜ್ಜೆಜಾಡನ್ನು ಅನುಕರಿಸಬೇಕಾಗಿತ್ತು. ಅವರ ಜೀವಿತ ವಿಧಾನದ ಮೂಲಕವಾಗಿಯೂ ಮತ್ತು ಅವರ ಸಾರುವಿಕೆಯ ಮೂಲಕವಾಗಿಯೂ, ನಿಜ ಜ್ಞಾನೋದಯದ ಉಗಮನೆಂದು ಯೆಹೋವನ ಕಡೆಗೆ ಇತರರನ್ನು ಅವರು ಮಾರ್ಗದರ್ಶಿಸಬೇಕಾಗಿತ್ತು. ಯೇಸುವಿನ ಅನುಕರಣೆಯಲ್ಲಿ, ಅವರು ಯೆಹೋವನ ಹೆಸರನ್ನು ತಿಳಿಯಪಡಿಸಬೇಕಾಗಿತ್ತು ಮತ್ತು ಆತನ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕಾಗಿತ್ತು. ಯೇಸು ಮಾಡಿದಂತೆಯೇ, ಅವರು ಕೂಡ ಮಾನವಜಾತಿಯ ಒಂದೇ ನಿರೀಕ್ಷೆ ದೇವರ ರಾಜ್ಯವೆಂದು ಘೋಷಿಸಬೇಕಾಗಿತ್ತು. ಧಾರ್ಮಿಕ ಸುಳ್ಳುಗಳು ಕತ್ತಲೆಗೆ ಸಂಬಂಧಪಟ್ಟ ಕೃತ್ಯಗಳು ಮತ್ತು ಈ ವಿಷಯಗಳ ಹಿಂದೆ ದುಷ್ಟನೊಬ್ಬನು ಇದ್ದಾನೆ ಎಂದು ಸಹ ಅವರು ಹೊರಗೆಡಹಬೇಕಾಗಿತ್ತು. ಯೇಸು ಕ್ರಿಸ್ತನ ಮೂಲಕ ರಕ್ಷಣೆಗಾಗಿ ಯೆಹೋವನ ಪ್ರೀತಿಯ ಒದಗಿಸುವಿಕೆಯ ಕುರಿತು ಕ್ರಿಸ್ತನ ಹಿಂಬಾಲಕರು ಎಲ್ಲ ಕಡೆಯಲ್ಲಿಯೂ ಜನರಿಗೆ ಹೇಳಬೇಕಾಗಿತ್ತು. ಯೇಸು ಆಜ್ಞಾಪಿಸಿದಂತೆಯೇ, ಆದಿ ಕ್ರೈಸ್ತರು ಯೆರೂಸಲೇಮಿನಿಂದಾರಂಭಿಸಿ, ಯೂದಾಯ ಮತ್ತು ಅನಂತರ ಸಮಾರ್ಯದೊಳಗೆ ತೆರಳಿ, ಎಂಥಾ ಆಸಕ್ತಿಯೊಂದಿಗೆ ಆ ನೇಮಕವನ್ನು ಪೂರೈಸಿದರು!—ಅ. ಕೃತ್ಯಗಳು 1:8.
12. (ಎ) ಆತ್ಮಿಕ ಬೆಳಕು ಎಷ್ಟು ವಿಸ್ತಾರವಾಗಲಿಕಿತ್ತು? (ಬಿ) ಯೆಶಾಯ 42:6 ರ ಕುರಿತು ಪೌಲನು ಏನನ್ನು ವಿವೇಚಿಸುವಂತೆ ಯೆಹೋವನ ಆತ್ಮವು ಮಾಡಿತು, ಮತ್ತು ಆ ಪ್ರವಾದನೆಯು ನಮ್ಮನ್ನು ಹೇಗೆ ಪ್ರಭಾವಿಸತಕ್ಕದ್ದು?
12 ಆದಾಗ್ಯೂ, ಸುವಾರ್ತೆಯನ್ನು ಸಾರುವುದು ಆ ಕ್ಷೇತ್ರಕ್ಕೆ ಸೀಮಿತಗೊಳಿಸಬೇಕಾಗಿರಲಿಲ್ಲ. “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು. (ಮತ್ತಾಯ 28:19) ತಾರ್ಸದ ಸೌಲನ ಮತಾಂತರದ ಸಮಯದಲ್ಲಿ, ಸೌಲನು (ನಂತರ ಅಪೊಸ್ತಲ ಪೌಲನಾದವನು) ಕೇವಲ ಯೆಹೂದ್ಯರಿಗೆ ಮಾತ್ರವಲ್ಲ ಅನ್ಯಜನರಿಗೂ ಕೂಡ ಸಾರಬೇಕಾಗಿತ್ತು ಎಂದು ಕರ್ತನು ನಿರ್ದಿಷ್ಟವಾಗಿ ಸೂಚಿಸಿದನು. (ಅ. ಕೃತ್ಯಗಳು 9:15) ಪವಿತ್ರಾತ್ಮದ ಸಹಾಯದೊಂದಿಗೆ, ಅದರಲ್ಲಿ ಏನು ಒಳಗೂಡಿರುತ್ತದೆ ಎಂದು ಪೌಲನು ಗಣ್ಯಮಾಡುವವನಾದನು. ಹೀಗೆ, ಯೇಸು ಕ್ರಿಸ್ತನಲ್ಲಿ ನೇರವಾಗಿ ನೆರವೇರಿದ ಯೆಶಾಯ 42:6ರ ಪ್ರವಾದನೆಯು, ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಎಲ್ಲರಿಗೂ ಧ್ವನಿತವಾಗುವ ಆಜ್ಞೆ ಎಂದು ಆತನು ವಿವೇಚಿಸಿದನು. ಆದ್ದರಿಂದ, ಅ. ಕೃತ್ಯಗಳು 13:47 ರಲ್ಲಿ, ಪೌಲನು ಯೆಶಾಯನಿಂದ ಉಲ್ಲೇಖಿಸುವಾಗ ಅಂದದ್ದು: “ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಹೇಗಂದರೆ—ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ.” ನಿಮ್ಮ ವಿಷಯದಲ್ಲೇನು? ಬೆಳಕು ವಾಹಕರಾಗಿರುವ ನಿಮ್ಮ ಹಂಗನ್ನು ನೀವು ಹೃದಯಕ್ಕೆ ತಕ್ಕೊಂಡಿರುವಿರೊ? ಯೇಸು ಮತ್ತು ಪೌಲರಂತೆ, ದೇವರ ಚಿತ್ತವನ್ನು ಮಾಡುವುದರ ಮೇಲೆ ನಿಮ್ಮ ಜೀವಿತವನ್ನು ಕೇಂದ್ರೀಕರಿಸುತ್ತಿರೊ?
ನಮ್ಮನ್ನು ನಡಿಸಲು ದೇವರಿಂದ ಬೆಳಕು ಮತ್ತು ಸತ್ಯ
13. ಕೀರ್ತನೆ 43:3 ರ ಹೊಂದಿಕೆಯಲ್ಲಿ, ನಮ್ಮ ಶ್ರದ್ಧಾಪೂರ್ವಕ ಪ್ರಾರ್ಥನೆಯು ಏನಾಗಿದೆ, ಮತ್ತು ಇದು ಯಾವುದರ ವಿರುದ್ಧ ನಮ್ಮನ್ನು ಕಾಪಾಡುತ್ತದೆ?
13 ಮಾನವ ಜಾತಿಯ ಭವಿಷ್ಯವನ್ನು ಉಜ್ವಲಗೊಳಿಸಲು, ನಮ್ಮ ಸ್ವಂತ ಸಾಧನಗಳ ಮೂಲಕ ‘ಜ್ಯೋತಿಗಳನ್ನು ಪುನಃ ಹೊತ್ತಿಸುವಂತೆ ಮಾಡಲು’ ನಾವು ಪ್ರಯತ್ನಿಸುವಲ್ಲಿ, ದೇವರ ಪ್ರೇರಿತ ವಾಕ್ಯದ ಉದ್ದೇಶವನ್ನು ಗಂಭೀರವಾಗಿ ತಪ್ಪಬಲ್ಲೆವು. ಆದಾಗ್ಯೂ, ಸರ್ವಸಾಮಾನ್ಯವಾದ ಲೋಕವು ಮಾಡುವುದನ್ನು ಗಣನೆಗೆ ತಾರದೆ, ಸಾಚ ಕ್ರೈಸ್ತರು ನಿಜ ಬೆಳಕಿನ ಉಗಮನೋಪಾದಿ ಯೆಹೋವನ ಕಡೆಗೆ ನೋಡುತ್ತಾರೆ. ಅವರ ಪ್ರಾರ್ಥನೆಯು ಕೀರ್ತನೆ 43:3 ರಲ್ಲಿ ದಾಖಲೆಯಾದ ಪ್ರಾರ್ಥನೆಯಂತಿದೆ, ಅದು ಹೇಳುವುದು: “ನಿನ್ನ ಬೆಳಕು ಮತ್ತು ನಿನ್ನ ಸತ್ಯವನ್ನು ಕಳುಹಿಸು (NW). ಅವೇ ನಿನ್ನ ಪರಿಶುದ್ಧ ಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ.”
14, 15. (ಎ) ಯಾವ ವಿಧಗಳಲ್ಲಿ ಯೆಹೋವನು ಈಗ ಆತನ ಬೆಳಕು ಮತ್ತು ಸತ್ಯವನ್ನು ಕಳುಹಿಸುತ್ತಾನೆ? (ಬಿ) ದೇವರ ಸತ್ಯ ಮತ್ತು ಬೆಳಕು ನಿಜವಾಗಿಯೂ ನಮ್ಮನ್ನು ನಡಿಸುತ್ತದೆಂದು ನಾವು ಹೇಗೆ ತೋರಿಸಬಹುದು?
14 ತನ್ನ ನಿಷ್ಠ ಸೇವಕರ ಆ ಪ್ರಾರ್ಥನೆಯನ್ನು ಯೆಹೋವನು ಉತ್ತರಿಸುತ್ತಾ ಇದ್ದಾನೆ. ತನ್ನ ಉದ್ದೇಶಗಳನ್ನು ಪ್ರಕಟಿಸುವುದರ ಮೂಲಕ, ತನ್ನ ಸೇವಕರು ಅದನ್ನು ತಿಳಿಯುವಂತೆ ಮಾಡುವುದರ ಮೂಲಕ, ಮತ್ತಾನಂತರ ಆತನು ಪ್ರಕಟಿಸಿದ್ದನ್ನು ನೆರವೇರಿಕೆಗೆ ತರುವುದರ ಮೂಲಕ, ಆತನು ಬೆಳಕನ್ನು ಕಳುಹಿಸುತ್ತಾನೆ. ನಾವು ದೇವರನ್ನು ಪ್ರಾರ್ಥಿಸುವಾಗ, ಅದು ಕೇವಲ ಪವಿತ್ರತೆಯ ಒಂದು ಸೋಗನ್ನು ಕೊಡಲು ಮಾಡುವ ಬರಿಯ ಶಾಸ್ತ್ರಾಚಾರವಾಗಿರುವುದಿಲ್ಲ. ಕೀರ್ತನೆ ಹೇಳುವಂತೆ, ಯೆಹೋವನಿಂದ ಬರುವ ಬೆಳಕು ನಮ್ಮನ್ನು ನಡಿಸಬೇಕೆಂಬುದು ನಮ್ಮ ತೀವ್ರಾಪೇಕ್ಷೆಯಾಗಿರುತ್ತದೆ. ದೇವರು ಒದಗಿಸುವ ಬೆಳಕನ್ನು ಪಡಕೊಳ್ಳುವುದರೊಂದಿಗಿನ ಜವಾಬ್ದಾರಿಯನ್ನು ನಾವು ಸ್ವೀಕರಿಸುತ್ತೇವೆ. ಅಪೊಸ್ತಲ ಪೌಲನಂತೆ, ದೇವರ ವಾಕ್ಯದ ನೆರವೇರಿಕೆಯು ತನ್ನೊಟ್ಟಿಗೆ ಅದರಲ್ಲಿ ನಂಬಿಕೆಯನ್ನಿಡುವವರೆಲ್ಲರಿಗೆ ಒಂದು ಧ್ವನಿತವಾಗುವ ಆಜ್ಞೆಯನ್ನು ಒಳಗೂಡಿಸುತ್ತದೆಂದು ನಾವು ವಿವೇಚಿಸುತ್ತೇವೆ. ಇತರ ಜನರಿಗೆ ಸುವಾರ್ತೆಯನ್ನು ನೀಡುವ ವರೆಗೆ ನಾವು ಅವರ ಸಾಲಗಾರರೋ ಎಂಬಂತೆ ನಮಗೆ ಭಾಸವಾಗುತ್ತದೆ ಯಾಕಂದರೆ ದೇವರು ಆ ಉದ್ದೇಶಕ್ಕಾಗಿಯೇ ಅದನ್ನು ನಮಗೆ ವಹಿಸಿಕೊಟ್ಟಿರುತ್ತಾನೆ.—ರೋಮಾಪುರ 1:14, 15.
15 ನಮ್ಮ ದಿನಗಳಲ್ಲಿ ಯೆಹೋವನು ಕಳುಹಿಸಿದ ಬೆಳಕು ಮತ್ತು ಸತ್ಯವು, ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ಸಿಂಹಾಸನದಿಂದ ಕ್ರಿಯಾಶೀಲನಾಗಿ ಆಳುತ್ತಾನೆ ಎಂದು ವ್ಯಕ್ತಪಡಿಸುತ್ತದೆ. (ಕೀರ್ತನೆ 2:6-8; ಪ್ರಕಟನೆ 11:15) ತನ್ನ ರಾಜವೈಭವದ ಸಾನ್ನಿಧ್ಯದಲ್ಲಿ ರಾಜ್ಯದ ಸುವಾರ್ತೆಯು ಸಾಕ್ಷಿಗಾಗಿ ಇಡೀ ನಿವಾಸಿತ ಭೂಮಿಯಲ್ಲಿ ಸಾರಲ್ಪಡುವುದನ್ನು ಯೇಸು ಮುಂತಿಳಿಸಿದನು. (ಮತ್ತಾಯ 24:3, 14) ಆ ಕೆಲಸವು, ಈಗ, ಭೂಸುತ್ತಲು ತೀವ್ರವಾಗಿ ಮಾಡಲ್ಪಡುತ್ತಾ ಇದೆ. ಆ ಕೆಲಸವನ್ನು ನಮ್ಮ ಜೀವಿತದಲ್ಲಿ ಅತಿ ಪ್ರಾಮುಖ್ಯ ವಿಷಯನ್ನಾಗಿ ಮಾಡುವಲ್ಲಿ, ಕೀರ್ತನೆಗಾರನಂದಂತೆ, ಆಗ ದೇವರ ಬೆಳಕು ಮತ್ತು ಸತ್ಯವು ನಮ್ಮನ್ನು ನಡಿಸುತ್ತದೆ.
ಯೆಹೋವನ ಮಹಿಮೆಯೇ ಪ್ರಕಾಶಿಸಲ್ಪಟ್ಟಿದೆ
16, 17. ಯೆಹೋವನು ಹೇಗೆ ತನ್ನ ಸ್ತ್ರೀ ತರಹದ ಸಂಸ್ಥಾಪನೆಯ ಮೇಲೆ 1914 ರಲ್ಲಿ ತನ್ನ ಮಹಿಮೆಯನ್ನು ಪ್ರಕಾಶಿಸಿದ್ದಾನೆ, ಮತ್ತು ಯಾವ ಆಜ್ಞೆಯನ್ನಾತನು ಆಕೆಗೆ ಕೊಟ್ಟನು?
16 ಆತ್ಮ ಉದ್ರೇಕಿಸುವ ಭಾಷೆಯಲ್ಲಿ, ಶಾಸ್ತ್ರವಚನಗಳು ಎಲ್ಲಾ ಕಡೆಯಲ್ಲಿರುವ ಜನರಿಗೆ ದೈವಿಕ ಬೆಳಕು ಹರಡುತ್ತಿರುವ ವಿಧಾನವನ್ನು ವರ್ಣಿಸುತ್ತವೆ. ಯೆಹೋವನ “ಸ್ತ್ರೀ” ಯನ್ನು, ಯಾ ನಿಷ್ಠಾವಂತ ಸೇವಕರ ಆತನ ಸ್ವರ್ಗೀಯ ಸಂಸ್ಥಾಪನೆಯನ್ನುದ್ದೇಶಿಸಿ, ಯೆಶಾಯ 60:1-3 ಹೇಳುವುದು: “ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ. ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು. ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನ ಉದಯಪ್ರಕಾಶಕ್ಕೆ ಬರುವರು.”
17 ಯೆಹೋವನ ಮಹಿಮೆಯು 1914 ರಲ್ಲಿ ಆತನ ಸ್ವರ್ಗೀಯ ಸ್ತ್ರೀಯಂಥಾ ಸಂಸ್ಥಾಪನೆಯ ಮೇಲೆ ಪ್ರಕಾಶಿಸಿದಾಗ, ಬಹಳ ಸಮಯದ ನಿರೀಕ್ಷಣೆಯ ನಂತರ, ಯೇಸು ಕ್ರಿಸ್ತನು ರಾಜನಾಗಿರುವ, ಮೆಸ್ಸೀಯ ರಾಜ್ಯಕ್ಕೆ ಆಕೆ ಜನ್ಮವಿತಳ್ತು. (ಪ್ರಕಟನೆ 12:1-5) ಇಡೀ ಭೂಮಿಗೆ ಯುಕ್ತವಾದದ್ದಾಗಿ ಆ ಸರಕಾರದ ಮೇಲೆ ಯೆಹೋವನ ಮಹಿಮಾಭರಿತ ಬೆಳಕು ನೆಚ್ಚಿಕೆಯೊಂದಿಗೆ ಪ್ರಕಾಶಿಸುತ್ತದೆ.
18. (ಎ) ಯೆಶಾಯ 60:2 ರಲ್ಲಿ ಮುಂತಿಳಿಸಲ್ಪಟ್ಟಂತೆ, ಕತ್ತಲು ಭೂಮಿಯನ್ನು ಆವರಿಸಿದೆ ಯಾಕೆ? (ಬಿ) ಭೂಮಿಯ ಕತ್ತಲಿಂದ ವ್ಯಕ್ತಿಗಳು ಹೇಗೆ ಬಿಡಿಸಲ್ಪಡಸಾಧ್ಯವಿದೆ?
18 ಇದಕ್ಕೆ ಭಿನ್ನವಾಗಿ, ಕತ್ತಲು ಭೂಮಿಯನ್ನು ಆವರಿಸಿದೆ ಮತ್ತು ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ. ಯಾಕೆ? ಮಾನವನ ಆಳಿಕೆಯ ಪರವಾಗಿ ದೇವರ ಪ್ರಿಯ ಮಗನ ಸರಕಾರವನ್ನು ಜನಾಂಗಗಳು ತಿರಸ್ಕರಿಸುವುದರಿಂದಲೇ. ಒಂದು ವಿಧದ ಮಾನವ ಸರಕಾರವನ್ನು ತೆಗೆದುಹಾಕಿ ಇನ್ನೊಂದನ್ನು ತೆಗೆದುಕೊಳ್ಳುವುದರ ಮೂಲಕ, ತಮ್ಮ ಸಮಸ್ಯೆಗಳನ್ನವರು ಬಗೆಹರಿಸುತ್ತಾರೆಂದು ನೆನಸುತ್ತಾರೆ. ಆದರೆ ಇದು ಅವರು ನಿರೀಕ್ಷಿಸಿರುವ ಪರಿಹಾರವನ್ನು ತರುವುದಿಲ್ಲ. ದೃಶ್ಯಗಳ ಹಿಂದೆ ಆತ್ಮಿಕ ಕ್ಷೇತ್ರದಿಂದ ಜನಾಂಗಗಳನ್ನು ಯಾರು ನಡಸುತ್ತಿದ್ದಾನೆಂದು ಕಾಣಲು ಅವರು ತಪ್ಪುತ್ತಾರೆ. (2 ಕೊರಿಂಥ 4:4) ಅವರು ನಿಜ ಬೆಳಕಿನ ಉಗಮವನ್ನು ತಿರಸ್ಕರಿಸುತ್ತಾರೆ, ಆದುದರಿಂದ ಕತ್ತಲಲ್ಲಿದ್ದಾರೆ. (ಎಫೆಸ 6:12) ಆದಾಗ್ಯೂ, ಜನಾಂಗಗಳು ಏನೇ ಮಾಡಿದರೂ, ವ್ಯಕ್ತಿಗಳು ಒಬ್ಬೊಬ್ಬರಾಗಿ ಆ ಕತ್ತಲೆಯೊಳಗಿಂದ ಬಿಡಿಸಲ್ಪಡಬಲ್ಲರು. ಯಾವ ವಿಧದಲ್ಲಿ? ದೇವರ ರಾಜ್ಯದ ಮೇಲೆ ಪೂರ್ಣ ನಂಬಿಕೆ ಇಡುವುದರ ಮೂಲಕ ಮತ್ತು ಅದಕ್ಕೆ ಅಧೀನರಾಗುವುದರ ಮೂಲಕ.
19, 20. (ಎ) ಯಾಕೆ ಮತ್ತು ಹೇಗೆ ಯೆಹೋವನ ಮಹಿಮೆಯು ಯೇಸುವಿನ ಅಭಿಷಿಕ್ತ ಹಿಂಬಾಲಕರ ಮೇಲೆ ಪ್ರಕಾಶಿಸಲ್ಪಟ್ಟಿದೆ? (ಬಿ) ಯೆಹೋವನು ತನ್ನ ಅಭಿಷಿಕ್ತರನ್ನು ಬೆಳಕು ವಾಹಕರಾಗುವಂತೆ ಮಾಡಿದ್ದು ಯಾವ ಕಾರಣಕ್ಕಾಗಿ? (ಸಿ) ಮುಂತಿಳಿಸಿದಂತೆಯೆ, “ಅರಸರು” ಮತ್ತು “ಜನಾಂಗಗಳು” ದೇವದತ್ತ ಬೆಳಕಿಗೆ ಹೇಗೆ ಸೆಳೆಯಲ್ಪಟ್ಟಿದ್ದಾರೆ?
19 ಕ್ರೈಸ್ತ ಪ್ರಪಂಚವು ದೇವರ ರಾಜ್ಯದ ಮೇಲೆ ನಂಬಿಕೆಯನ್ನಿಡಲಿಲ್ಲ ಮತ್ತು ಅದಕ್ಕೆ ಅಧೀನವಾಗಲಿಲ್ಲ. ಆದರೆ ಯೇಸು ಕ್ರಿಸ್ತನ ಆತ್ಮ ಅಭಿಷಿಕ್ತ ಹಿಂಬಾಲಕರು ಹಾಗೆ ಮಾಡಿರುತ್ತಾರೆ. ಫಲಿತಾಂಶವಾಗಿ, ಯೆಹೋವನ ದೈವಿಕ ನೆಚ್ಚಿಕೆಯ ಬೆಳಕು ಆತನ ಸ್ವರ್ಗೀಯ ಸ್ತ್ರೀಯ ಈ ದೃಶ್ಯ ಪ್ರತಿನಿಧಿಗಳ ಮೇಲೆ ಪ್ರಕಾಶಿಸಲ್ಪಟ್ಟಿದೆ, ಮತ್ತು ಆತನ ಮಹಿಮೆಯು ಅವರ ಮೇಲೆ ವ್ಯಕ್ತವಾಗಿರುತ್ತದೆ. (ಯೆಶಾಯ 60:19-21) ಲೋಕದ ರಾಜಕೀಯ ಯಾ ಆರ್ಥಿಕ ದೃಶ್ಯದಲ್ಲಾಗುವ ಯಾವುದೇ ಬದಲಾವಣೆಯು ತೊಲಗಿಸಲಾಗದ ಆತ್ಮಿಕ ಬೆಳಕಿನಲ್ಲಿ ಅವರು ಆನಂದಿಸುತ್ತಾರೆ. ಅವರು ಮಹಾ ಬಾಬೆಲಿನಿಂದ ಯೆಹೋವನ ಬಿಡುಗಡೆಯನ್ನು ಅನುಭವಿಸಿರುತ್ತಾರೆ. (ಪ್ರಕಟನೆ 18:4) ಅವರು ಆತನ ನೀತಿಶಿಕ್ಷೆಯನ್ನು ಸ್ವೀಕರಿಸಿರುತ್ತಾರೆ ಮತ್ತು ಆತನ ಸಾರ್ವಭೌಮತೆಯನ್ನು ನಿಷ್ಠೆಯಿಂದ ಎತ್ತಿ ಹಿಡಿದಿರುತ್ತಾರಾದದರಿಂದ ಆತನ ಅನುಗ್ರಹದ ನಸುನಗೆಯನ್ನು ಪಡೆಯುತ್ತಾರೆ. ಅವರಿಗೆ ಭವಿಷ್ಯತ್ತಿಗಾಗಿ ಉಜ್ವಲ ಪ್ರತೀಕ್ಷೆಗಳು ಇವೆ, ಮತ್ತು ಅವರ ಮುಂದೆ ಇಟ್ಟಿರುವ ನಿರೀಕ್ಷೆಯಲ್ಲಿ ಅವರು ಆನಂದಿಸುತ್ತಾರೆ.
20 ಆದರೆ ಯಾವ ಉದ್ದೇಶಕ್ಕಾಗಿ ಯೆಹೋವನು ಅವರೊಂದಿಗೆ ಈ ವಿಧದಲ್ಲಿ ವ್ಯವಹರಿಸುತ್ತಾನೆ? ಯೆಶಾಯ 60:21 ರಲ್ಲಿ ಆತನು ತಾನೇ ಹೇಳಿದಂತೆ, ಆತನ “ಪ್ರಭಾವಕ್ಕೋಸ್ಕರ” ವೇ, ಹೀಗೆ ಆತನ ಹೆಸರು ಗೌರವಿಸಲ್ಪಡುವಂತೆ ಮತ್ತು ಇತರರು ಆತನೊಬ್ಬನೇ ಸತ್ಯ ದೇವರೆಂದು ಆತನ ಬಳಿಗೆ ಸೆಳೆಯಲ್ಪಡುವಂತೆ—ಮತ್ತದು ಅವರ ನಿತ್ಯ ಪ್ರಯೋಜನಕ್ಕಾಗಿರುವಂತೆ—ಅದಾಗಿರುತ್ತದೆ. ಇದಕ್ಕೆ ಹೊಂದಿಕೆಯಲ್ಲಿ, ಸತ್ಯ ದೇವರ ಈ ಆರಾಧಕರು 1931 ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ತೆಗೆದುಕೊಂಡರು. ಅವರ ಸಾಕ್ಷಿಕಾರ್ಯದ ಫಲವಾಗಿ, ಯೆಶಾಯನು ಮುಂತಿಳಿಸಿದಂತೆ, ಅವರು ಪ್ರತಿಫಲಿಸಿದ ಬೆಳಕಿಗೆ “ಅರಸರು” ಸೆಳೆಯಲ್ಪಟ್ಟರೋ? ಹೌದು! ಭೂಮಿಯ ರಾಜಕೀಯ ಅಧಿಕಾರಿಗಳಲ್ಲ, ಆದರೆ ಆತನ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಅರಸರುಗಳಾಗಿ ಆಳಲು ಪಂಕ್ತಿಯಲ್ಲಿರುವವರಲ್ಲಿ ಉಳಿದವರಾಗಿರುತ್ತಾರೆ. (ಪ್ರಕಟನೆ 1:5, 6; 21:24) ಮತ್ತು “ಜನಾಂಗಗಳ” ಕುರಿತಾಗಿ ಏನು? ಅವು ಈ ಬೆಳಕಿಗೆ ಆಕರ್ಷಿಸಲ್ಪಟ್ಟಿವೆಯೋ? ನಿಶ್ಚಯವಾಗಿಯೂ! ಯಾವುದೇ ವೈಯಕ್ತಿಕ ರಾಜಕೀಯ ಜನಾಂಗವು ಆಕರ್ಷಿಸಲ್ಪಟ್ಟಿಲ್ಲ, ಆದರೆ ಎಲ್ಲಾ ಜನಾಂಗಗಳಿಂದ ಬಂದಿರುವ ಮಹಾ ಸಮೂಹದ ಜನರು ದೇವರ ರಾಜ್ಯದ ಕಡೆಗೆ ತಮ್ಮ ನಿಲುವನ್ನು ತಕ್ಕೊಂಡಿರುತ್ತಾರೆ, ಮತ್ತು ದೇವರ ನೂತನ ಲೋಕದೊಳಗೆ ಪಾರಾಗುವಿಕೆಯನ್ನು ಅತ್ಯಾಸಕಿಯ್ತಿಂದ ಅವರು ಎದುರು ನೋಡುತ್ತಾರೆ. ಅದು ನಿಜಕ್ಕೂ ನೀತಿಯು ವಾಸವಾಗಿರುವ ನೂತನ ಲೋಕವಾಗಿರುವುದು.—2 ಪೇತ್ರ 3:13; ಪ್ರಕಟನೆ 7:9, 10.
21. ಆತನ ಚಿತ್ತದ ತಿಳುವಳಿಕೆಯನ್ನು ಒದಗಿಸುವಲ್ಲಿ ದೇವರು ನಮಗಾಗಿ ವಿಸ್ತರಿಸಿರುವ ಅಪಾತ್ರ ದಯೆಯ ಉದ್ದೇಶವನ್ನು ತಪ್ಪಿಹೋಗಿಲ್ಲವೆಂದು ನಾವು ಹೇಗೆ ತೋರಿಸಿಕೊಡಬಹುದು?
21 ಆ ಬೆಳಕು ವಾಹಕರ ಬೆಳೆಯುತ್ತಿರುವ ಗುಂಪಿನಲ್ಲಿ ನೀವು ಒಬ್ಬರಾಗಿರುವಿರೊ? ಯೇಸುವಿನಂತೆ ನಾವು ಬೆಳಕು ವಾಹಕರಾಗುವಂತೆ, ಆತನ ಚಿತ್ತದ ಒಂದು ತಿಳುವಳಿಕೆಯನ್ನು ಯೆಹೋವನು ನಮಗೆ ಕೊಟ್ಟಿರುತ್ತಾನೆ. ನಮ್ಮ ದಿನಗಳಲ್ಲಿ ತನ್ನ ಸೇವಕರಿಗೆ ಯೆಹೋವನು ವಹಿಸಿಕೊಟ್ಟಿರುವ ಕೆಲಸದಲ್ಲಿ ಆಸಕ್ತಿಯನ್ನು ಪ್ರದರ್ಶಿಸುವುದರ ಮೂಲಕ, ದೇವರು ನಮಗಾಗಿ ವಿಸ್ತರಿಸಿರುವ ಅಪಾತ್ರ ದಯೆಯ ಉದ್ದೇಶವನ್ನು ನಾವು ತಪ್ಪಿಹೋಗಿಲ್ಲವೆಂದು ನಾವೆಲ್ಲರು ತೋರಿಸಿಕೊಡೋಣ. (2 ಕೊರಿಂಥ 6:1, 2) ನಮ್ಮ ದಿನಗಳಲ್ಲಿ ಇದಕ್ಕಿಂತ ಹೆಚ್ಚು ಮಹತ್ವದ ಕೆಲಸವೇ ಇಲ್ಲ. ಮತ್ತು ಯೆಹೋವನಿಂದ ಬರುವ ಮಹಿಮಾಭರಿತ ಬೆಳಕನ್ನು ಇತರರಿಗೆ ಪ್ರತಿಫಲಿಸುವುದರ ಮೂಲಕ ಆತನನ್ನು ಮಹಿಮೆಪಡಿಸುವುದಕ್ಕಿಂತ ಹೆಚ್ಚು ಮಹತ್ತಾದ ಸುಯೋಗವು ಇಲ್ಲ.
ನೀವು ಹೇಗೆ ಉತ್ತರಿಸುವಿರಿ?
▫ ಮಾನವಜಾತಿಯ ವಿಪತ್ತಿನ ಮೂಲ ಕಾರಣಗಳು ಯಾವುವು?
▫ ಯಾವ ವಿಧಗಳಲ್ಲಿ ಯೇಸು ಮತ್ತು ಆತನ ಹಿಂಬಾಲಕರು “ಲೋಕದ ಬೆಳಕು” ಆಗಿದ್ದಾರೆ?
▫ ಯೆಹೋವನ ಬೆಳಕು ಮತ್ತು ಸತ್ಯ ಹೇಗೆ ನಮ್ಮನ್ನು ನಡಿಸುತ್ತಿವೆ?
▫ ಯೆಹೋವನು ತನ್ನ ಸಂಸ್ಥಾಪನೆಯ ಮೇಲೆ ಹೇಗೆ ತನ್ನ ಪ್ರಭಾವವನ್ನು ಪ್ರಕಾಶಿಸುವಂತೆ ಮಾಡಿರುತ್ತಾನೆ?
▫ ಯೆಹೋವನು ತನ್ನ ಜನರನ್ನು ಯಾವ ಉದ್ದೇಶಕ್ಕಾಗಿ ಬೆಳಕು ವಾಹಕರನ್ನಾಗಿ ಮಾಡಿರುತ್ತಾನೆ?
[ಪುಟ 9 ರಲ್ಲಿರುವ ಚಿತ್ರಗಳು]
ಏದೆನಿನ ಒಂದು ಘಟನೆಯು ಇಂದು ಮಾನವಜಾತಿಯ ವಿಪತ್ತಿನ ಸಮಸ್ಯೆಗಳನ್ನು ತಿಳಿದುಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ
[Credit Lines]
Tom Haley/Sipa
Paringaux/Sipa