ಶೀಘ್ರದಲ್ಲೇ ಯುದ್ಧರಹಿತವಾದ ಒಂದು ಲೋಕ
ಯೆಶಾಯ ಪುಸ್ತಕದಲ್ಲಿ ಹೀಗೆ ಹೇಳುವ ಬೈಬಲ್ ಪ್ರವಾದನೆಯನ್ನು ಮತ್ತೊಮ್ಮೆ ನೋಡಿರಿ: “ಅವರೋ ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು: ರಾಷ್ಟ್ರವು ರಾಷ್ಟ್ರದ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಮುಂದೆ ಅವರು ಯುದ್ಧವನ್ನು ಕಲಿಯರು.” ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡುವವರು, ದೇವರ ಮಾರ್ಗಗಳಲ್ಲಿ ನಡೆಯುವ “ಅನೇಕ ಜನರು” ಎಂಬುದಾಗಿ ಪೂರ್ವಾಪರದಿಂದ ಗಮನಿಸಿರಿ. (ಯೆಶಾಯ 2:2-4, ಕಿಂಗ್ ಜೇಮ್ಸ್ ವರ್ಷನ್) ಇದರ ಅರ್ಥವೇನೆಂದರೆ, ಈ ಜನರು ಯೆಹೋವ ದೇವರನ್ನು ಆರಾಧಿಸಿ, ಆತನ ನಿಯಮಗಳಿಗೆ ವಿಧೇಯರಾಗುತ್ತಾರೆ ಎಂಬುದೇ. ಅವರು ಯಾರು?
ಅವರು ಕೇವಲ ಯುದ್ಧದ ಆಯುಧಗಳನ್ನು ತಿರಸ್ಕರಿಸಿದವರಾಗಿದ್ದಾರೆ ಮಾತ್ರವಲ್ಲ, ಕಲಹ ಮತ್ತು ಕಾದಾಟಕ್ಕೆ ನಡೆಸುವ ಮನೋಭಾವಗಳು ಮತ್ತು ಪ್ರವೃತ್ತಿಗಳನ್ನು ತಮ್ಮ ಮನಸ್ಸು ಹಾಗೂ ಹೃದಯಗಳಿಂದ ಸಂಪೂರ್ಣವಾಗಿ ಕಿತ್ತುಹಾಕಲು ಕಾರ್ಯನಡಿಸಿದವರೂ ಆಗಿರುವ ಒಂದು ಬಹುರಾಷ್ಟ್ರೀಯ ಜನರಾಗಿರಲೇಬೇಕು. (ರೋಮಾಪುರ 12:2) ಅವರು ತಮ್ಮ ನೆರೆಯವನನ್ನು ಕೊಲ್ಲುವ ಬದಲು, ಅವನನ್ನು ಪ್ರೀತಿಸುತ್ತಾರೆ. (ಮತ್ತಾಯ 22:36-39) ಆ ರೀತಿಯ ಜನರ ಕುರಿತು ನೀವು ಕೇಳಿದ್ದೀರೊ?
ಯೆಹೋವನ ಸಾಕ್ಷಿಗಳು ಒಂದು ಅಂತಾರಾಷ್ಟ್ರೀಯ ಸಹೋದರತ್ವವನ್ನು ಅನುಭವಿಸುತ್ತಾರೆಂದು ಮತ್ತು ಇತರರನ್ನು ಕೊಲ್ಲಲು ಆಯುಧಗಳನ್ನು ತೆಗೆದುಕೊಳ್ಳುವುದನ್ನು ತ್ಯಜಿಸಿದ್ದಾರೆಂದು ಬಹುಶಃ ನೀವು ಕೇಳಿದ್ದೀರಿ. ಅದರ ಕುರಿತು ಯೋಚಿಸಿರಿ: ಭೂಮಿಯಲ್ಲಿರುವ ಪ್ರತಿಯೊಬ್ಬರು ಆ ದೃಷ್ಟಿಕೋನವನ್ನೇ ಪಡೆದಿರುವವರಾಗಿದ್ದರೆ, ಈ ಭೂಗ್ರಹವು ಈಗಾಗಲೇ ಶಾಂತಿ ಮತ್ತು ಭದ್ರತೆಯ ಒಂದು ಸ್ಥಳವಾಗಿರುತ್ತಿರಲಿಲ್ಲವೊ?
ನಿಶ್ಚಯವಾಗಿ, ಪ್ರತಿಯೊಬ್ಬರೂ ಆ ದೃಷ್ಟಿಕೋನವನ್ನು ಪಡೆದಿರುವುದಿಲ್ಲ. ಅದು ರಾಜ ಸೊಲೊಮೋನನು ಸುಮಾರು 3,000 ವರ್ಷಗಳ ಹಿಂದೆ ಬರೆದಂತಿದೆ: “ಆ ಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.
ಶಾಂತಿಪ್ರಿಯರಿಗೆ ಕರೆ
ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? ಹೌದು. ಅದು ಮನುಷ್ಯರ ಪ್ರಯತ್ನಗಳ ಮುಖಾಂತರ ಬರುವುದೊ? ಇಲ್ಲ. ಅದು ಸತ್ಯ ಧರ್ಮಕ್ಕೆ ಜನರ ಸಾಮೂಹಿಕ ಮತಾಂತರದ ಮುಖಾಂತರ ಬರುವುದೊ? ಇಲ್ಲ. ಬೈಬಲ್ ಪುಸ್ತಕವಾದ ಕೀರ್ತನೆಯು ಉತ್ತರಿಸುವುದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; . . . ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:8, 9.
ಯೆಹೋವ ದೇವರು ಅದನ್ನು ಹೇಗೆ ಮಾಡುವನು? ಜ್ಞಾನೋಕ್ತಿಗಳ ಪುಸ್ತಕವು ಉತ್ತರಿಸುವುದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ [ದೇವರ ನಿಯಮಗಳನ್ನು ಕಡೆಗಣಿಸುವವರು] ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:21, 22.
ಇದರ ಮೊದಲು ದೇವರು ಯಾಕೆ ಕ್ರಿಯೆಗೈಯಲಿಲ್ಲವೆಂಬುದಕ್ಕೆ ಒಂದು ಮುಖ್ಯ ಕಾರಣವು ಇದಾಗಿದೆ: ಜನರು ತನ್ನ ಮಾರ್ಗಗಳಲ್ಲಿ ನಡೆಯಸಾಧ್ಯವಾಗುವಂತೆ ತನ್ನ ದಾರಿಗಳ ಕುರಿತು ಕಲಿಯುವ ಒಂದು ಸಂದರ್ಭವನ್ನು ಆತನು ಅವರಿಗೆ ಕೊಡುತ್ತಿದ್ದಾನೆ. ಅಪೊಸ್ತಲ ಪೇತ್ರನು ಬರೆದುದು: “ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” (2 ಪೇತ್ರ 3:9) ಹೀಗೆ, ದೇವರ ಜನರು ಯೆಹೋವನ ಕುರಿತು ಕಲಿಯುವಂತೆ ಇತರರಿಗೆ ನಿಸ್ವಾರ್ಥರಾಗಿ ಸಹಾಯ ಮಾಡುತ್ತಾರೆ. ಯೆಶಾಯನು ಅದನ್ನು ವ್ಯಕ್ತಪಡಿಸಿದಂತೆ, ಅವರು ಕರೆ ನೀಡುವುದು: “ಬನ್ನಿರಿ, ಯೆಹೋವನ ಪರ್ವತಕ್ಕೆ . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು.”—ಯೆಶಾಯ 2:3.
“ಅಂತ್ಯಕಾಲದಲ್ಲಿ”
ಶಾಂತಿಯ ಮಾರ್ಗಗಳಲ್ಲಿ ಜನರ ಶಿಕ್ಷಣ ನೀಡುವಿಕೆಯು “ಅಂತ್ಯಕಾಲದಲ್ಲಿ” ಸಂಭವಿಸುವುದೆಂದೂ ಯೆಶಾಯದಲ್ಲಿರುವ ವಚನವು ಮುಂತಿಳಿಸಿತು. (ಯೆಶಾಯ 2:2) ನಾವು ಈಗಲೇ ಆ ಸಮಯದಲ್ಲಿ ಜೀವಿಸುತ್ತಿದ್ದೇವೆ. ಹಾಸ್ಯವ್ಯಂಗ್ಯವಾಗಿ, ಈ ಶತಮಾನದ ಯುದ್ಧಗಳು ನಾವು ಅಂತ್ಯಕಾಲದಲ್ಲಿದ್ದೇವೆಂಬುದನ್ನು ಸೂಚಿಸುತ್ತವೆ.
ವಿಷಯಗಳ ಈ ವ್ಯವಸ್ಥೆಯ ಅಂತ್ಯವನ್ನು ಯಾವುದು ಗುರುತಿಸುವುದೆಂದು ಯೇಸುವಿನ ಶಿಷ್ಯರು ಅವನನ್ನು ಕೇಳಿದಾಗ, ಅವನು “ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು” ಎಂದು ಮುಂತಿಳಿಸಿದನು. (ಲೂಕ 21:11; ಮತ್ತಾಯ 24:3) ಅವನು ಮತ್ತೂ ಹೇಳಿದ್ದು: “ಇದಲ್ಲದೆ ಯುದ್ಧಗಳೂ ಗಲಿಬಿಲಿಗಳೂ ಆಗುವದನ್ನು ನೀವು ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇದೆಲ್ಲಾ ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು. ಆಗ ಆತನು ಅವರಿಗೆ ಹೇಳಿದ್ದೇನಂದರೆ—ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.”—ಲೂಕ 21:9, 10.
ಸಾವಿರಾರು ವರ್ಷಗಳಿಂದ ಯುದ್ಧಗಳು ನಡೆಯುತ್ತಲೆ ಬಂದಿದ್ದರೂ, ಈ ಶತಮಾನವೊಂದೆ ಎರಡು ಜಾಗತಿಕ ಯುದ್ಧಗಳನ್ನು ಮತ್ತು ಕೆಲವು ಲೆಕ್ಕಾಚಾರಗಳಿಗನುಸಾರ, ಅಕ್ಷರಾರ್ಥಕವಾಗಿ, ನೂರಾರು ಸಣ್ಣಪುಟ್ಟ ಯುದ್ಧಗಳನ್ನು ಕಣ್ಣಾರೆ ಕಂಡಿದೆ. ಈ ಶತಮಾನದಲ್ಲಿನ ಯುದ್ಧಗಳಲ್ಲಿ ಕೋಟಿಗಟ್ಟಲೆ ಜನರು ಕೊಲ್ಲಲ್ಪಟ್ಟಿದ್ದಾರೆಂಬ ನಿಜತ್ವವು ಎದೆಗುಂದಿಸುವಂತಹದ್ದಾಗಿದೆ. ವರ್ಲ್ಡ್ ವಾಚ್ ಪತ್ರಿಕೆಗನುಸಾರ, 20ನೆಯ ಶತಮಾನಕ್ಕೆ ಮುಂಚಿತವಾದ 2,000 ವರ್ಷಗಳ ಸಮಯದಲ್ಲಿ, ಸರಾಸರಿಯಾಗಿ ಯುದ್ಧದಲ್ಲಿ ಹತ್ತು ಲಕ್ಷ ಜನರು ಮಡಿಯಲು 50 ವರ್ಷಗಳು ಹಿಡಿದವು. ಈ ಶತಮಾನದಲ್ಲಿ ಸರಾಸರಿಯಾಗಿ, ಯುದ್ಧದಲ್ಲಿ ಹತ್ತು ಲಕ್ಷ ಜನರು ಮಡಿಯಲು ಹಿಡಿದ ಸಮಯಾವಧಿಯು ಒಂದು ವರ್ಷವಾಗಿತ್ತು.
ಯುದ್ಧರಹಿತವಾದ ಒಂದು ಲೋಕ
ನಮ್ಮ ಶತಮಾನದ ಭಯಂಕರ ಯುದ್ಧಗಳು, ಬೈಬಲ್ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟ ಇತರ ಅನೇಕ ವಿಕಸನಗಳ ಒಟ್ಟಿಗೆ ತೋರಿಸುವುದೇನೆಂದರೆ, ದೇವರು ನಿರ್ಮಿಸಲಿರುವ ಒಂದು ಹೊಸ ಲೋಕದ ಹೊಸ್ತಿಲಲ್ಲಿ ನಾವಿದ್ದೇವೆ. ಒಂದು “ಹೊಸ ಭೂಮಿ”ಯ ಮೂಲಕ ಸ್ಥಾನಭರ್ತಿಯಾಗಲಿರುವ ಹಳೆಯ ಲೋಕ ಅವ್ಯವಸ್ಥೆಯು ತೆಗೆದುಹಾಕಲ್ಪಡುವುದು; ಅಲ್ಲಿ ಶಾಂತಿಯೂ ನೀತಿಯೂ ವಾಸಿಸುವುವು. (2 ಪೇತ್ರ 3:13, NW) ದೇವರ ವಾಕ್ಯವು ಹೇಳುವುದು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:9, 11.
ಇಂದು ಭೂಮಿಯಾದ್ಯಂತ, ಅಗಣಿತ ಕೋಟ್ಯಂತರ ಜನರು ಯುದ್ಧರಹಿತವಾದ ಒಂದು ಲೋಕಕ್ಕಾಗಿ ಹಾತೊರೆಯುತ್ತಾರೆ. ಅಂತಹ ಒಂದು ಲೋಕವನ್ನು ಸೃಷ್ಟಿಸುವ ತನ್ನ ವಾಗ್ದಾನವನ್ನು ದೇವರು ಖಂಡಿತವಾಗಿ ನೆರವೇರಿಸುವನೆಂದು ತೋರಿಸುತ್ತಾ, ದೇವರ ಒಬ್ಬ ಪ್ರವಾದಿಯು ಬಹಳ ಕಾಲದ ಹಿಂದೆ ಬರೆದುದು: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.”—ಹಬಕ್ಕೂಕ 2:3.
ಆದುದರಿಂದ, ವಿವೇಕಯುತವಾಗಿ ದೇವರಲ್ಲಿ ನಿಮ್ಮ ಭರವಸೆಯನ್ನಿಡಿರಿ ಮತ್ತು ಆತನ ವಾಗ್ದಾನದ ನೆರವೇರಿಕೆಯನ್ನು ಅನುಭವಿಸಿರಿ: “ದೇವರು ತಾನೇ ಅವರ [ತನ್ನ ಜನರ] ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
[Box/Pictures on page 9, 10]
ಆ ಹೊಸ ಲೋಕಕ್ಕಾಗಿ ಬೈಬಲು ವಾಗ್ದಾನಿಸುವ ವಿಷಯಗಳು:
ಅಪರಾಧ, ಹಿಂಸಾಚಾರ, ಅಥವಾ ದುಷ್ಟತನವು ಇಲ್ಲ
“[ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:9.
“ಕೆಡುಕರು ತೆಗೆದುಹಾಕಲ್ಪಡುವರು . . . ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು.”—ಕೀರ್ತನೆ 37:9, 10.
ಸಕಲ ಮಾನವಜಾತಿಯು ಶಾಂತಿಯಲ್ಲಿ
“ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; . . . ಸಮಾಧಾನದ ಪ್ರಭು . . . ಅವನ ಹೆಸರು. . . . ಆಡಳಿತವು ಅಭಿವೃದ್ಧಿಯಾಗುವದು, . . . ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.”—ಯೆಶಾಯ 9:6, 7.
ಭೂಮಿಯೆಲ್ಲವು ಒಂದು ಪ್ರಮೋದವನ
ಯೇಸು ಹೇಳಿದ್ದು: “ನನ್ನ ಸಂಗಡ ಪರದೈಸಿನಲ್ಲಿರುವಿ.”—ಲೂಕ 23:43.
“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
ಒಂದು ಪ್ರೀತಿಯ ಲೋಕವ್ಯಾಪಕ ಸಹೋದರತ್ವವು
“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ಮರಣಪಟ್ಟ ಪ್ರಿಯರ ಪುನರುತ್ಥಾನ
“ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.
ಇನ್ನು ಮುಂದೆ ಅನಾರೋಗ್ಯ, ವೃದ್ಧಾಪ್ಯ ಅಥವಾ ಮರಣವಿಲ್ಲ
“ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.