ವಿಧೇಯರಾಗಿರುವವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುತ್ತಾನೆ
“ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.”—ಜ್ಞಾನೋಕ್ತಿ 1:33.
1, 2. ದೇವರಿಗೆ ವಿಧೇಯರಾಗಿರುವುದು ಪ್ರಾಮುಖ್ಯವೇಕೆ? ದೃಷ್ಟಾಂತಿಸಿ.
ತುಪ್ಪುಳುಗರಿಯ ಹಳದಿ ಬಣ್ಣದ ಆ ಚಿಕ್ಕ ಕೋಳಿಮರಿಗಳು ಹುಲ್ಲಿನ ಮೇಲೆ ಕೊಕ್ಕಿನಿಂದ ಕುಕ್ಕುತ್ತಾ ಆಹಾರವನ್ನು ಹೆಕ್ಕಿ ತಿನ್ನುವುದರಲ್ಲಿ ಮಗ್ನವಾಗಿವೆ. ಮೇಲಿನಿಂದ ಒಂದು ಗಿಡುಗವು ಅವುಗಳನ್ನು ಗಮನಿಸುತ್ತಿದೆಯೆಂಬ ಪರಿವೆಯೇ ಅವುಗಳಿಗಿಲ್ಲ. ತಟ್ಟನೆ ತಾಯಿ ಕೋಳಿಯು, ಉಚ್ಚಸ್ವರದಲ್ಲಿ ಎಚ್ಚರಿಕೆಯ ಕೂಗನ್ನು ಕೊಟ್ಟು ತನ್ನ ರೆಕ್ಕೆಗಳನ್ನು ಚಾಚುತ್ತದೆ. ಆಗ ಕೋಳಿಮರಿಗಳು ಓಡಿಬಂದು, ಒಡನೆ ತಾಯಿಯ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳುತ್ತವೆ. ಗಿಡುಗವು ಆಕ್ರಮಣಮಾಡುವ ತನ್ನ ಹಂಚಿಕೆಯನ್ನು ಕೈಬಿಡುತ್ತದೆ.a ಇದರಲ್ಲಿನ ಪಾಠವೇನು? ವಿಧೇಯತೆಯು ಜೀವರಕ್ಷಕವಾಗಿದೆ!
2 ಆ ಪಾಠವು ವಿಶೇಷವಾಗಿ ಇಂದು ಕ್ರೈಸ್ತರಿಗೆ ಪ್ರಾಮುಖ್ಯವಾಗಿದೆ, ಏಕೆಂದರೆ ಸೈತಾನನು ದೇವಜನರನ್ನು ಬೇಟೆಯಾಗಿ ಮಾಡಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾನೆ. (ಪ್ರಕಟನೆ 12:9, 12, 17) ನಾವು ಯೆಹೋವನ ಅನುಗ್ರಹವನ್ನೂ ನಿತ್ಯಜೀವದ ಪ್ರತೀಕ್ಷೆಯನ್ನೂ ಕಳೆದುಕೊಳ್ಳುವಂತೆ ನಮ್ಮ ಆಧ್ಯಾತ್ಮಿಕತೆಯನ್ನು ಹಾಳುಮಾಡುವುದೇ ಅವನ ಗುರಿಯಾಗಿದೆ. (1 ಪೇತ್ರ 5:8) ಆದರೆ ನಾವು ದೇವರಿಗೆ ನಿಕಟವಾಗಿದ್ದು, ಆತನ ವಾಕ್ಯ ಹಾಗೂ ಸಂಸ್ಥೆಯ ಮೂಲಕ ಬರುವ ಮಾರ್ಗದರ್ಶನಕ್ಕೆ ಒಡನೆ ಓಗೊಡುವುದಾದರೆ, ನಮಗೆ ಆತನ ರಕ್ಷಾಪರಾಮರಿಕೆಯ ಆಶ್ವಾಸನೆಯಿದೆ. ಕೀರ್ತನೆಗಾರನು ಬರೆದುದು: “ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ.”—ಕೀರ್ತನೆ 91:4.
ಅವಿಧೇಯ ಜನಾಂಗವೊಂದು ಬೇಟೆಯಾಗುತ್ತದೆ
3. ಇಸ್ರಾಯೇಲಿನ ಪುನರಾವರ್ತಿತ ಅವಿಧೇಯತೆಯ ಫಲಿತಾಂಶವೇನಾಗಿತ್ತು?
3 ಇಸ್ರಾಯೇಲ್ ಜನಾಂಗವು ಯೆಹೋವನಿಗೆ ವಿಧೇಯತೆ ತೋರಿಸುತ್ತಿದ್ದಾಗ ಅದು ಆತನ ನಿಗಾವಣೆಯ ಪರಾಮರಿಕೆಯಿಂದಾಗಿ ನಿರಂತರವೂ ಲಾಭಪಡೆಯಿತು. ಆದರೂ, ತೀರ ಹೆಚ್ಚು ಬಾರಿ, ಆ ಜನರು ತಮ್ಮ ನಿರ್ಮಾಣಿಕನನ್ನು ತೊರೆದು, ‘ಲಾಭವೂ ರಕ್ಷಣೆಯೂ ಸಿಕ್ಕದ ವ್ಯರ್ಥವಾದ’ ಮರ ಮತ್ತು ಕಲ್ಲಿನ ದೇವತೆಗಳ ಕಡೆಗೆ ತಿರುಗಿದರು. (1 ಸಮುವೇಲ 12:21) ಎಷ್ಟೋ ಶತಮಾನಗಳ ದಂಗೆಯ ಕಾರಣ, ಅವರು ಒಂದು ಜನಾಂಗದೋಪಾದಿ ಧರ್ಮಭ್ರಷ್ಟತೆಯಲ್ಲಿ ಎಷ್ಟು ಮುಳುಗಿಹೋಗಿದ್ದರೆಂದರೆ, ಅವರು ಅದರಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದರು. ಆದುದರಿಂದಲೇ ಯೇಸು ಪ್ರಲಾಪಿಸಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟಿದೆ.”—ಮತ್ತಾಯ 23:37, 38.
4. ಯೆಹೋವನು ಯೆರೂಸಲೇಮನ್ನು ತ್ಯಜಿಸಿದ್ದನೆಂಬುದು ಸಾ.ಶ. 70ರಲ್ಲಿ ಹೇಗೆ ವ್ಯಕ್ತವಾಯಿತು?
4 ಹೀಗೆ ದ್ರೋಹ ಮಾಡಿದ ಇಸ್ರಾಯೇಲನ್ನು ಯೆಹೋವನು ತ್ಯಜಿಸಿದ ವಿಷಯವು ಸಾ.ಶ. 70ರಲ್ಲಿ ವಿಷಾದಕರವಾದ ರೀತಿಯಲ್ಲಿ ವ್ಯಕ್ತವಾಯಿತು. ಆ ವರುಷ, ಗಿಡುಗನ ಚಿತ್ರವುಳ್ಳ ಪತಾಕೆಗಳನ್ನು ಎತ್ತಿ ಹಿಡಿದಿದ್ದ ರೋಮನ್ ಸೈನ್ಯಗಳು ಭಯಂಕರವಾದ ಸಂಹಾರಕ್ಕಾಗಿ ಯೆರೂಸಲೇಮಿನ ಮೇಲೆ ಎರಗಿ ಬಂದವು. ಆಗ ನಗರವು ಪಸ್ಕ ಹಬ್ಬವನ್ನು ಆಚರಿಸಲಿಕ್ಕಾಗಿ ಬಂದವರಿಂದ ತುಂಬಿಕೊಂಡಿತ್ತು. ಅವರ ಅನೇಕಾನೇಕ ಯಜ್ಞಗಳು ದೇವರ ಅನುಗ್ರಹವನ್ನು ಸಂಪಾದಿಸುವುದರಲ್ಲಿ ತಪ್ಪಿಹೋದವು. ಅವಿಧೇಯ ಅರಸನಾದ ಸೌಲನಿಗೆ ಸಮುವೇಲನು ಹೇಳಿದ ಮಾತುಗಳ ದುರಂತಕರವಾದ ಜ್ಞಾಪನವು ಅದಾಗಿತ್ತು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.”—1 ಸಮುವೇಲ 15:22.
5. ಯೆಹೋವನು ಯಾವ ರೀತಿಯ ವಿಧೇಯತೆಯನ್ನು ಅವಶ್ಯಪಡಿಸುತ್ತಾನೆ, ಮತ್ತು ಅಂತಹ ವಿಧೇಯತೆಯು ಸಾಧ್ಯವೆಂಬುದು ನಮಗೆ ಹೇಗೆ ತಿಳಿದಿದೆ?
5 ಜನರು ತನಗೆ ವಿಧೇಯರಾಗಬೇಕೆಂದು ಯೆಹೋವನು ಒತ್ತಿಹೇಳುತ್ತಿದ್ದರೂ, ಅಪರಿಪೂರ್ಣ ಮಾನವರ ಇತಿಮಿತಿಗಳ ಬಗ್ಗೆ ಆತನಿಗೆ ಚೆನ್ನಾಗಿ ತಿಳಿದಿದೆ. (ಕೀರ್ತನೆ 130:3, 4) ಆತನು ಅಗತ್ಯವಾಗಿ ಬಯಸುವ ವಿಷಯಗಳು ಯಾವುವೆಂದರೆ, ಯಥಾರ್ಥ ಹೃದಯ ಮತ್ತು ನಂಬಿಕೆ, ಪ್ರೀತಿ ಮತ್ತು ಆತನನ್ನು ಅಸಮಾಧಾನಪಡಿಸುವ ವಿಷಯದಲ್ಲಿ ಹಿತಕರವಾದ ಭಯದ ಮೇಲೆ ಆಧಾರಿತವಾದ ವಿಧೇಯತೆಯೇ. (ಧರ್ಮೋಪದೇಶಕಾಂಡ 10:12, 13; ಜ್ಞಾನೋಕ್ತಿ 16:6; ಯೆಶಾಯ 43:10; ಮೀಕ 6:8; ರೋಮಾಪುರ 6:17) ಅಂತಹ ವಿಧೇಯತೆಯನ್ನು ತೋರಿಸಲು ಸಾಧ್ಯವಿದೆಯೆಂಬುದು, ದುಸ್ಸಾಧ್ಯವಾದ ಪರೀಕ್ಷೆಗಳು ಮತ್ತು ಮರಣದ ಎದುರಿನಲ್ಲೂ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡ, ‘ಮೇಘದೋಪಾದಿಯಲ್ಲಿರುವ ಕ್ರೈಸ್ತಪೂರ್ವ ಸಾಕ್ಷಿ’ಗಳಿಂದ ತೋರಿಸಲ್ಪಟ್ಟಿತು. (ಇಬ್ರಿಯ 11:36, 37; 12:1) ಈ ಜನರು ಯೆಹೋವನ ಹೃದಯವನ್ನು ಎಷ್ಟೊಂದು ಸಂತೋಷಪಡಿಸಿದರು! (ಜ್ಞಾನೋಕ್ತಿ 27:11) ಆದರೆ ಇತರರು, ಆರಂಭದಲ್ಲಿ ನಂಬಿಗಸ್ತರಾಗಿದ್ದರೂ ವಿಧೇಯತೆಯ ಮಾರ್ಗದಲ್ಲಿ ಉಳಿಯುವುದರಲ್ಲಿ ತಪ್ಪಿಹೋದರು. ಇವರಲ್ಲಿ ಒಬ್ಬನು ಪುರಾತನ ಯೆಹೂದದ ಅರಸನಾಗಿದ್ದ ಯೆಹೋವಾಷನಾಗಿದ್ದನು.
ದುಸ್ಸಹವಾಸದಿಂದ ಕೆಟ್ಟುಹೋದ ಅರಸನು
6, 7. ಯೆಹೋಯಾದನು ಜೀವದಿಂದಿದ್ದಾಗ ಯೆಹೋವಾಷನು ಯಾವ ರೀತಿಯ ಅರಸನಾಗಿದ್ದನು?
6 ಅರಸ ಯೆಹೋವಾಷನು ಶಿಶುವಾಗಿದ್ದಾಗ ಅವನ ಹತ್ಯೆಗೈಯಲು ಮಾಡಲಾದ ಪ್ರಯತ್ನದಿಂದ ಕೂದಲೆಳೆಯಷ್ಟರಲ್ಲಿ ಪಾರಾಗಿದ್ದನು. ಯೆಹೋವಾಷನು ಏಳು ವರ್ಷ ವಯಸ್ಸಿನವನಾಗಿದ್ದಾಗ, ಮಹಾಯಾಜಕನಾಗಿದ್ದ ಯೆಹೋಯಾದನು ಬಚ್ಚಿಡಲ್ಪಟ್ಟಿದ್ದ ಅವನನ್ನು ಧೈರ್ಯದಿಂದ ಹೊರತಂದು ಅರಸನನ್ನಾಗಿ ಮಾಡಿದನು. ದೇವಭಯವಿದ್ದ ಈ ಯೆಹೋಯಾದನು ಯೆಹೋವಾಷನಿಗೆ ತಂದೆಯಂತೆಯೂ ಸಲಹೆಗಾರನಂತೆಯೂ ಇದ್ದದರಿಂದ, ಆ ಯುವ ರಾಜನು, “ಯಾಜಕನಾದ ಯೆಹೋಯಾದನ ಜೀವಮಾನದಲ್ಲೆಲ್ಲಾ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಳ್ಳುತ್ತಿದ್ದನು.”—2 ಪೂರ್ವಕಾಲವೃತ್ತಾಂತ 22:10-23:1, 11; 24:1, 2.
7 ಯೆಹೋವಾಷನ ಸತ್ಕ್ರಿಯೆಗಳಲ್ಲಿ ಯೆಹೋವನ ಆಲಯದ ಜೀರ್ಣೋದ್ಧಾರವೂ ಸೇರಿತ್ತು. ಅವನು ಇದನ್ನು ಮಾಡಲು “ಮನಸ್ಸುಮಾಡಿ”ದ್ದನು. ಜೀರ್ಣೋದ್ಧಾರದ ಖರ್ಚಿಗಾಗಿ, “ಮೋಶೆಯ ವಿಧಿಗನುಸಾರವಾಗಿ” ಯೆಹೂದ ಮತ್ತು ಯೆರೂಸಲೇಮಿನಿಂದ ದೇವಾಲಯದ ಕಾಣಿಕೆಯನ್ನು ಕೂಡಿಸುವಂತೆ ಅವನು ಮಹಾಯಾಜಕನಾದ ಯೆಹೋಯಾದನಿಗೆ ಜ್ಞಾಪಕ ಹುಟ್ಟಿಸಿದನು. ಈ ಯುವ ರಾಜನು ದೇವರ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿ ಅದಕ್ಕೆ ವಿಧೇಯನಾಗುವಂತೆ ಮಾಡುವುದರಲ್ಲಿ ಯೆಹೋಯಾದನು ಸಫಲನಾಗಿದ್ದನೆಂದು ಇದರಿಂದ ವ್ಯಕ್ತವಾಗುತ್ತದೆ. ಇದರ ಪರಿಣಾಮವಾಗಿ, ದೇವಾಲಯದ ಕೆಲಸ ಮತ್ತು ದೇವಾಲಯದ ಪಾತ್ರೆಗಳನ್ನು ತಯಾರಿಸುವ ಕೆಲಸ ಬೇಗನೆ ಮುಗಿಯಿತು.—2 ಪೂರ್ವಕಾಲವೃತ್ತಾಂತ 24:4, 6, 13, 14; ಧರ್ಮೋಪದೇಶಕಾಂಡ 17:18.
8. (ಎ) ಯೆಹೋವಾಷನ ಆತ್ಮಿಕ ಪತನಕ್ಕೆ ನಡೆಸಿದ ಪ್ರಧಾನ ವಿಷಯವು ಯಾವುದು? (ಬಿ) ಅರಸನ ಅವಿಧೇಯತೆಯು ಅವನು ಕೊನೆಗೆ ಏನು ಮಾಡುವಂತೆ ನಡೆಸಿತು?
8 ದುಃಖಕರವಾಗಿ, ಯೆಹೋವಾಷನು ಯೆಹೋವನಿಗೆ ತೋರಿಸಿದ ವಿಧೇಯತೆ ಹೆಚ್ಚು ಕಾಲ ಬಾಳಲಿಲ್ಲ. ಏಕೆ? ದೇವರ ವಾಕ್ಯವು ಹೇಳುವುದು: “ಯೆಹೋಯಾದನು ಮೃತನಾದ ಮೇಲೆ ಯೆಹೂದಪ್ರಭುಗಳು ಅರಸನ ಬಳಿಗೆ ಬಂದು ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು; ಅಂದಿನಿಂದ ಅವರು ತಮ್ಮ ಪಿತೃಗಳ ದೇವರಾದ ಯೆಹೋವನ ಆಲಯವನ್ನು ನಿರಾಕರಿಸಿ ಅಶೇರಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸುವವರಾದರು. ಅವರ ಈ ಅಪರಾಧದ ದೆಸೆಯಿಂದ ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ದೈವಕೋಪವುಂಟಾಯಿತು.” ಯೆಹೂದದ ಪ್ರಭುಗಳ ಅಹಿತಕರವಾದ ಪ್ರಭಾವವು, ಅರಸನು ದೇವರ ಪ್ರವಾದಿಗಳ ಮಾತನ್ನೂ ಕೇಳಿಸಿಕೊಳ್ಳದಂತೆ ನಡೆಸಿತು. ಈ ಪ್ರವಾದಿಗಳಲ್ಲಿ ಒಬ್ಬನು, ಅವಿಧೇಯತೆಗಾಗಿ ಯೆಹೋವಾಷನನ್ನೂ ಜನರನ್ನೂ ಧೈರ್ಯದಿಂದ ಗದರಿಸಿದ ಯೆಹೋಯಾದನ ಪುತ್ರ ಜೆಕರ್ಯನಾಗಿದ್ದನು. ಪಶ್ಚಾತ್ತಾಪಪಡುವ ಬದಲು ಯೆಹೋವಾಷನು ಜೆಕರ್ಯನನ್ನು ಕಲ್ಲೆಸೆದು ಕೊಲ್ಲಿಸಿದನು. ಈ ಯೆಹೋವಾಷನು ಎಷ್ಟು ನಿರ್ದಯಿ ಹಾಗೂ ಅವಿಧೇಯ ವ್ಯಕ್ತಿಯಾಗಿ ಪರಿಣಮಿಸಿದನು—ಇದೆಲ್ಲವೂ ಆದದ್ದು ಅವನು ದುಸ್ಸಹವಾಸದ ಪ್ರಭಾವಕ್ಕೆ ಬಲಿಬಿದ್ದುದರಿಂದಲೇ!—2 ಪೂರ್ವಕಾಲವೃತ್ತಾಂತ 24:17-22; 1 ಕೊರಿಂಥ 15:33.
9. ಯೆಹೋವಾಷನಿಗೂ ಪ್ರಭುಗಳಿಗೂ ಸಿಕ್ಕಿದ ಅಂತಿಮ ಫಲವು, ಅವಿಧೇಯತೆಯ ಮೌಢ್ಯವನ್ನು ಹೇಗೆ ಒತ್ತಿಹೇಳುತ್ತದೆ?
9 ಯೆಹೋವನನ್ನು ತ್ಯಜಿಸಿದ್ದರಿಂದ ಯೆಹೋವಾಷನಿಗೂ ಅವನ ದುಷ್ಟ ರಾಜವಂಶೀಯ ಸಹವಾಸಿಗಳಿಗೂ ಏನು ಸಂಭವಿಸಿತು? ಅರಾಮ್ಯರ “ಚಿಕ್ಕ” ಸೈನ್ಯವು ಯೆಹೂದವನ್ನು ಆಕ್ರಮಿಸಿ, “ಎಲ್ಲಾ ಜನಾಧಿಪತಿಗಳನ್ನು ನಿರ್ನಾಮ”ಮಾಡಿತು. ಅರಸನು ತನ್ನ ಸ್ವಂತ ಸ್ವತ್ತುಗಳನ್ನೂ ದೇವಾಲಯದ ಬೆಳ್ಳಿಬಂಗಾರವನ್ನೂ ಅವರಿಗೆ ಕೊಡುವಂತೆಯೂ ಆ ಆಕ್ರಮಣಕಾರರು ಬಲವಂತಪಡಿಸಿದರು. ಯೆಹೋವಾಷನು ಇದರಿಂದ ಪಾರಾಗಿ ಉಳಿದರೂ, ಅವನು ಬಲಹೀನನೂ ರೋಗಿಯೂ ಆಗಿಬಿಟ್ಟನು. ಬಳಿಕ ಸ್ಪಲ್ಪ ಸಮಯದಲ್ಲೇ, ಅವನ ಸ್ವಂತ ಸೇವಕರಲ್ಲಿ ಕೆಲವರು ಒಳಸಂಚು ಮಾಡಿ ಅವನನ್ನು ವಧಿಸಿದರು. (2 ಪೂರ್ವಕಾಲವೃತ್ತಾಂತ 24:23-25; 2 ಅರಸುಗಳು 12:17, 18) ಇಸ್ರಾಯೇಲ್ಯರಿಗೆ ಯೆಹೋವನು ಹೇಳಿದ್ದ ಈ ಮಾತುಗಳು ಎಷ್ಟು ಸತ್ಯ: “ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆ . . . ಆತನ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ ಈ ಅಶುಭಗಳು ನಿಮಗೆ ಪ್ರಾಪ್ತವಾಗುವವು”!—ಧರ್ಮೋಪದೇಶಕಾಂಡ 28:15.
ವಿಧೇಯತೆಯಿಂದ ಬದುಕಿ ಉಳಿದ ಒಬ್ಬ ಕಾರ್ಯದರ್ಶಿ
10, 11. (ಎ) ಬಾರೂಕನಿಗೆ ಯೆಹೋವನು ಕೊಟ್ಟ ಸಲಹೆಯ ಕುರಿತು ಚಿಂತಿಸುವುದು ಏಕೆ ಸಹಾಯಕರ? (ಬಿ) ಯೆಹೋವನು ಬಾರೂಕನಿಗೆ ಯಾವ ಸಲಹೆಯನ್ನು ಕೊಟ್ಟನು?
10 ಕ್ರೈಸ್ತ ಶುಶ್ರೂಷೆಯಲ್ಲಿ ನೀವು ಭೇಟಿಯಾಗುವ ಜನರಲ್ಲಿ ಸುವಾರ್ತೆಯಲ್ಲಿ ಆಸಕ್ತಿ ತೋರಿಸುವವರು ತೀರ ಕೊಂಚ ಮಂದಿ ಆಗಿರುವುದರಿಂದ ನೀವು ಕೆಲವು ಬಾರಿ ನಿರುತ್ತೇಜಿತರಾಗುತ್ತೀರೊ? ಕೆಲವು ಬಾರಿ ಧನಿಕರನ್ನೂ ಅವರ ಸ್ವೇಚ್ಛಾತೃಪ್ತಿಯ ಜೀವನ ರೀತಿಯನ್ನೂ ನೋಡಿ ನೀವು ತುಸು ಅಸೂಯೆಪಡುತ್ತೀರೊ? ಹಾಗಿರುವಲ್ಲಿ, ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನ ಮತ್ತು ಯೆಹೋವನು ಅವನಿಗೆ ಕೊಟ್ಟ ಪ್ರೀತಿಪೂರ್ವಕವಾದ ಸಲಹೆಯ ಕುರಿತೂ ಜಾಗರೂಕತೆಯಿಂದ ಚಿಂತಿಸಿ ನೋಡಿರಿ.
11 ಬಾರೂಕನು ಒಂದು ಪ್ರವಾದನಾ ಸಂದೇಶವನ್ನು ಬರೆಯುತ್ತಿದ್ದಾಗ, ಸ್ವತಃ ಅವನೇ ಯೆಹೋವನ ಗಮನದ ಕೇಂದ್ರಬಿಂದುವಾದನು. ಏಕೆ? ಏಕೆಂದರೆ ಬಾರೂಕನು ತನ್ನ ಸನ್ನಿವೇಶದ ಕುರಿತು ಪ್ರಲಾಪಿಸತೊಡಗಿ, ದೇವರ ಸೇವೆಯಲ್ಲಿ ತನಗಿದ್ದ ವಿಶೇಷ ಸುಯೋಗಕ್ಕಿಂತಲೂ ಯಾವುದೊ ಹೆಚ್ಚಿನ ವಿಷಯವನ್ನು ಬಯಸಿದನು. ಬಾರೂಕನ ಮನೋಭಾವದಲ್ಲಿ ಆದ ಈ ಬದಲಾವಣೆಯನ್ನು ನೋಡಿ, ಯೆಹೋವನು ಅವನಿಗೆ ಸ್ಪಷ್ಟವೂ ದಯಾಭರಿತವೂ ಆದ ಈ ಸಲಹೆಯನ್ನು ಕೊಟ್ಟನು: “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ; ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡುಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು.”—ಯೆರೆಮೀಯ 36:4; 45:5.
12. ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ನಾವು ನಮಗಾಗಿ “ಮಹಾಪದವಿಯನ್ನು” ಹುಡುಕುವುದರಿಂದ ಏಕೆ ದೂರವಿರಬೇಕು?
12 ಬಾರೂಕನಿಗೆ ಸಂಬೋಧಿಸಲ್ಪಟ್ಟ ಯೆಹೋವನ ಮಾತುಗಳಲ್ಲಿ, ಯೆರೆಮೀಯನ ಜೊತೆಯಲ್ಲಿ ತುಂಬ ನಂಬಿಗಸ್ತಿಕೆಯಿಂದಲೂ ಧೈರ್ಯದಿಂದಲೂ ಸೇವೆ ಮಾಡಿರುವ ಈ ಒಳ್ಳೆಯ ಮನುಷ್ಯನ ವಿಷಯದಲ್ಲಿ ದೇವರಿಗಿದ್ದ ಆಳವಾದ ಚಿಂತೆಯನ್ನು ನೀವು ಗ್ರಹಿಸಬಲ್ಲಿರೊ? ಹಾಗೆಯೇ ಇಂದು, ಈ ವಿಷಯಗಳ ವ್ಯವಸ್ಥೆಯಲ್ಲಿ ಹೆಚ್ಚು ಲಾಭಕರವಾದ ಸಂಪಾದನೆಯ ಅವಕಾಶಗಳನ್ನು ಹುಡುಕಲು ಪ್ರೇರಿಸಲ್ಪಡುವವರ ಕುರಿತು ಯೆಹೋವನು ಗಾಢವಾದ ಚಿಂತೆಯನ್ನು ತೋರಿಸುತ್ತಾನೆ. ಸಂತೋಷದ ವಿಷಯವೇನಂದರೆ, ಇಂಥವರಲ್ಲಿ ಅನೇಕರು ಬಾರೂಕನಂತೆ, ಪ್ರೌಢ ಆತ್ಮಿಕ ಸಹೋದರರು ಕೊಟ್ಟಿರುವ ಪ್ರೀತಿಪೂರ್ವಕವಾದ ಮತ್ತು ಸರಿಹೊಂದಿಸುವಂಥ ಸಲಹೆಗಳಿಗೆ ಪ್ರತಿವರ್ತನೆ ತೋರಿಸಿದ್ದಾರೆ. (ಲೂಕ 15:4-7) ಹೌದು, ಈ ವ್ಯವಸ್ಥೆಯಲ್ಲಿ “ಮಹಾಪದವಿಯನ್ನು” ಹುಡುಕುವವರಿಗೆ ಭವಿಷ್ಯವೇ ಇಲ್ಲ ಎಂಬುದನ್ನು ನಾವೆಲ್ಲರೂ ಗ್ರಹಿಸೋಣ. ಅವರು ನಿಜ ಸಂತೋಷವನ್ನು ಕಂಡುಕೊಳ್ಳಲು ತಪ್ಪುವುದು ಮಾತ್ರವಲ್ಲ, ಅದಕ್ಕಿಂತಲೂ ಕೆಟ್ಟದ್ದೇನೆಂದರೆ, ಈ ಲೋಕ ಮತ್ತು ಅದರ ಎಲ್ಲ ಸ್ವಾರ್ಥದಾಶೆಗಳೊಂದಿಗೆ ಅವರೂ ಬೇಗನೆ ಗತಿಸಿಹೋಗುವರು.—ಮತ್ತಾಯ 6:19, 20; 1 ಯೋಹಾನ 2:15-17.
13. ಬಾರೂಕನ ವೃತ್ತಾಂತವು ದೈನ್ಯಭಾವದ ವಿಷಯದಲ್ಲಿ ನಮಗೆ ಯಾವ ಪಾಠವನ್ನು ಕಲಿಸುತ್ತದೆ?
13 ಬಾರೂಕನ ವೃತ್ತಾಂತವು ನಮಗೆ ದೈನ್ಯಭಾವದ ವಿಷಯದಲ್ಲೂ ಒಂದು ಉತ್ತಮ ಪಾಠವನ್ನು ಕಲಿಸುತ್ತದೆ. ಯೆಹೋವನು ಬಾರೂಕನಿಗೆ ನೇರವಾಗಿ ಸಲಹೆ ನೀಡದೆ, ಯಾರ ಅಪರಿಪೂರ್ಣತೆಗಳು ಮತ್ತು ವಿಲಕ್ಷಣ ರೀತಿಗಳು ಬಾರೂಕನಿಗೆ ಪ್ರಾಯಶಃ ಚೆನ್ನಾಗಿ ತಿಳಿದಿದ್ದವೋ ಆ ಯೆರೆಮೀಯನ ಮೂಲಕವೇ ಕೊಟ್ಟನು. (ಯೆರೆಮೀಯ 45:1, 2) ಆದರೂ ಬಾರೂಕನು ಗರ್ವವನ್ನು ತೋರಿಸಲಿಲ್ಲ. ಅವನು ದೈನ್ಯದಿಂದ ಆ ಸಲಹೆಯ ನಿಜ ಮೂಲನು ಯೆಹೋವನೆಂಬುದನ್ನು ಗ್ರಹಿಸಿದನು. (2 ಪೂರ್ವಕಾಲವೃತ್ತಾಂತ 26:3, 4, 16; ಜ್ಞಾನೋಕ್ತಿ 18:12; 19:20) ಆದುದರಿಂದ, ‘ನಾವು ಯಾವುದೋ ಒಂದು ದೋಷದಲ್ಲಿ ಸಿಕ್ಕಿಹಾಕಿಕೊಂಡರೆ,’ ಮತ್ತು ಆಗ ಬೇಕಾಗಿರುವ ಸಲಹೆಯು ದೇವರ ವಾಕ್ಯದಿಂದ ನಮಗೆ ದೊರೆಯುವಲ್ಲಿ, ನಾವು ಬಾರೂಕನ ಪ್ರೌಢತೆ, ಆತ್ಮಿಕ ವಿವೇಚನಾಶಕ್ತಿ ಮತ್ತು ದೈನ್ಯವನ್ನೂ ಅನುಕರಿಸೋಣ.—ಗಲಾತ್ಯ 6:1.
14. ನಮ್ಮಲ್ಲಿ ಮುಂದಾಳತ್ವವನ್ನು ವಹಿಸುವವರಿಗೆ ವಿಧೇಯರಾಗುವುದು ಒಳ್ಳೆಯದೇಕೆ?
14 ನಾವು ಇಂತಹ ದೈನ್ಯಭಾವವನ್ನು ತೋರಿಸುವುದು ಸಲಹೆ ನೀಡುವವರಿಗೂ ಸಹಾಯಮಾಡುತ್ತದೆ. ಇಬ್ರಿಯ 13:17 ಹೇಳುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” ಹಿರಿಯರು ತಮ್ಮ ಕುರಿಪಾಲನೆಯ ಕೆಲಸದ ಈ ಕಷ್ಟಕರವಾದ ಭಾಗವನ್ನು ಪೂರೈಸಲಿಕ್ಕಾಗಿ ಎಷ್ಟೊಂದು ಸಾರಿ ಧೈರ್ಯ, ವಿವೇಕ ಮತ್ತು ಸಮಯೋಚಿತ ನಯಕ್ಕಾಗಿ ಯೆಹೋವನಲ್ಲಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾರೆ! ನಾವು ‘ಇಂಥವರನ್ನು ಸನ್ಮಾನಿಸೋಣ.’—1 ಕೊರಿಂಥ 16:18.
15. (ಎ) ಯೆರೆಮೀಯನಿಗೆ ಬಾರೂಕನಲ್ಲಿ ಭರವಸೆಯಿತ್ತು ಎಂಬುದನ್ನು ಅವನು ಹೇಗೆ ತೋರಿಸಿದನು? (ಬಿ) ತನ್ನ ದೈನ್ಯಭಾವದ ವಿಧೇಯತೆಗಾಗಿ ಬಾರೂಕನಿಗೆ ಹೇಗೆ ಪ್ರತಿಫಲ ದೊರೆಯಿತು?
15 ಬಾರೂಕನು ತನ್ನ ಯೋಚನೆಯಲ್ಲಿ ಹೊಂದಾಣಿಕೆಗಳನ್ನು ಮಾಡಿದನೆಂಬುದು ಸುಸ್ಪಷ್ಟ; ಏಕೆಂದರೆ, ಯೆರೆಮೀಯನು ಬಳಿಕ ಅವನಿಗೆ ಅತ್ಯಂತ ಪಂಥಾಹ್ವಾನದಾಯಕವಾದ ನೇಮಕವೊಂದನ್ನು ಕೊಟ್ಟನು. ಅವನು ದೇವಾಲಯಕ್ಕೆ ಹೋಗಿ, ಯೆರೆಮೀಯನು ಅವನಿಂದಲೇ ಬರೆಸಿದಂಥ ತೀರ್ಪಿನ ಸಂದೇಶವನ್ನು ಗಟ್ಟಿಯಾಗಿ ಓದಬೇಕಾಗಿತ್ತು. ಬಾರೂಕನು ಇದಕ್ಕೆ ವಿಧೇಯನಾದನೋ? ಹೌದು, ಅವನು “ಪ್ರವಾದಿಯಾದ ಯೆರೆಮೀಯನು ವಿಧಿಸಿದಂತೆಯೇ ಮಾಡಿದನು.” ವಾಸ್ತವವಾಗಿ ಅವನು ಯೆರೂಸಲೇಮಿನ ಪ್ರಧಾನರಿಗೂ ಅದೇ ಸಂದೇಶವನ್ನು ಓದಿ ಹೇಳಿದನು. ಮತ್ತು ಇದಕ್ಕೆ ತುಂಬ ಧೈರ್ಯವು ಬೇಕಿತ್ತೆಂಬುದು ನಿಶ್ಚಯ. (ಯೆರೆಮೀಯ 36:1-6, 8, 14, 15) ಸುಮಾರು 18 ವರುಷಗಳ ನಂತರ ಆ ನಗರವು ಬಾಬೆಲಿನ ವಶವಾದಾಗ, ತಾನು ಯೆಹೋವನ ಎಚ್ಚರಿಕೆಯನ್ನು ಕೇಳಿ, ತನಗಾಗಿ “ಮಹಾಪದವಿಯನ್ನು” ಹುಡುಕುವುದನ್ನು ನಿಲ್ಲಿಸಿದ ಕಾರಣ ತನ್ನ ಪ್ರಾಣವು ಉಳಿಸಲ್ಪಟ್ಟದ್ದಕ್ಕಾಗಿ ಬಾರೂಕನು ಅದೆಷ್ಟು ಆಭಾರಿಯಾಗಿದ್ದಿರಬೇಕೆಂಬುದನ್ನು ತುಸು ಊಹಿಸಿಕೊಳ್ಳಿರಿ!—ಯೆರೆಮೀಯ 39:1, 2, 11, 12; 43:5, 6.
ಮುತ್ತಿಗೆಯ ಸಮಯದಲ್ಲಿ ವಿಧೇಯತೆಯು ಜೀವರಕ್ಷಣೆ ಮಾಡಿತು
16. ಸಾ.ಶ.ಪೂ. 607ರಲ್ಲಿ ಬಾಬೆಲಿನ ಮುತ್ತಿಗೆಯ ಸಮಯದಲ್ಲಿ ಯೆಹೋವನು ಯೆರೂಸಲೇಮಿನಲ್ಲಿದ್ದ ಯೆಹೂದ್ಯರಿಗೆ ಹೇಗೆ ಕನಿಕರ ತೋರಿಸಿದನು?
16 ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ಅಂತ್ಯವು ಬಂದಾಗ, ವಿಧೇಯರಾಗಿರುವವರಿಗೆ ದೇವರು ತೋರಿಸಿದ ಕನಿಕರವು ಪುನಃ ವ್ಯಕ್ತವಾಯಿತು. ಮುತ್ತಿಗೆಯ ಪರಮಾವಧಿಯಲ್ಲಿ, ಯೆಹೋವನು ಯೆಹೂದ್ಯರಿಗೆ ಹೇಳಿದ್ದು: “ಇಗೋ, ನಾನು ಜೀವಿಸುವ ಮಾರ್ಗವನ್ನೂ ಸಾಯುವ ಮಾರ್ಗವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. ಪಟ್ಟಣದಲ್ಲಿ ನಿಲ್ಲುವವನು ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವನು; ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮರೆಹೊಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.” (ಯೆರೆಮೀಯ 21:8, 9) ಯೆರೂಸಲೇಮಿನ ನಿವಾಸಿಗಳು ನಾಶನಾರ್ಹರಾಗಿದ್ದರೂ, ಯೆಹೋವನು ಆ ಅಂತಿಮ ನಿರ್ಧಾರಕ ಕ್ಷಣದಲ್ಲೂ ತನಗೆ ವಿಧೇಯರಾಗುವವರಿಗೆ ಕನಿಕರವನ್ನು ತೋರಿಸಿದನು.b
17. (ಎ) ಮುತ್ತಿಗೆ ಹಾಕಲ್ಪಟ್ಟಿದ್ದ ಯೆಹೂದ್ಯರಿಗೆ, ಅವರು ‘ಕಸ್ದೀಯರ ಮರೆಹೊಗುವಂತೆ’ ಹೇಳಬೇಕೆಂದು ಯೆಹೋವನು ಯೆರೆಮೀಯನಿಗೆ ಹೇಳಿದಾಗ, ಅವನ ವಿಧೇಯತೆಯು ಯಾವ ಎರಡು ವಿಧಗಳಲ್ಲಿ ಪರೀಕ್ಷಿಸಲ್ಪಟ್ಟಿತು? (ಬಿ) ಧೈರ್ಯಪೂರ್ವಕವಾದ ವಿಧೇಯತೆಯನ್ನು ತೋರಿಸಿದ ಯೆರೆಮೀಯನ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
17 ಶರಣಾಗತರಾಗಿರಿ ಎಂದು ಯೆಹೂದ್ಯರಿಗೆ ಹೇಳುವುದು ಯೆರೆಮೀಯನ ವಿಧೇಯತೆಯನ್ನೂ ಪರೀಕ್ಷಿಸಿತೆಂಬುದು ನಿಶ್ಚಯ. ಒಂದು ಕಾರಣವೇನೆಂದರೆ ಅವನು ದೇವರ ಹೆಸರಿಗಾಗಿ ಹುರುಪುಳ್ಳವನಾಗಿದ್ದನು. ತಮ್ಮ ವಿಜಯಕ್ಕೆ ನಿರ್ಜೀವ ವಿಗ್ರಹಗಳೇ ಕಾರಣವೆಂದು ಹೇಳುವ ಶತ್ರುಗಳಿಂದ ದೇವರ ಹೆಸರಿಗೆ ಅವಮಾನವಾಗುವುದನ್ನು ಅವನು ಬಯಸಲಿಲ್ಲ. (ಯೆರೆಮೀಯ 50:2, 11; ಪ್ರಲಾಪಗಳು 2:16) ಅಲ್ಲದೆ, ಜನರು ಶರಣಾಗತರಾಗಬೇಕೆಂದು ಅವನು ಹೇಳಿದಾಗ, ಅವನು ತನ್ನ ಸ್ವಂತ ಜೀವವನ್ನೇ ದೊಡ್ಡ ಅಪಾಯಕ್ಕೊಡ್ಡುತ್ತಿದ್ದನು. ಏಕೆಂದರೆ, ಅನೇಕರು ಅವನ ಮಾತನ್ನು ದೇಶದ್ರೋಹಿ ಮಾತುಗಳೆಂದು ಹೇಳಸಾಧ್ಯವಿತ್ತು. ಆದರೂ, ಅವನು ಭಯಕ್ಕೆ ಬಗ್ಗದೆ, ಯೆಹೋವನ ಖಂಡನೆಯ ಮಾತುಗಳನ್ನು ವಿಧೇಯತೆಯಿಂದ ಸಾರಿ ಹೇಳಿದನು. (ಯೆರೆಮೀಯ 38:4, 17, 18) ಯೆರೆಮೀಯನಂತೆಯೇ ನಾವು ಕೂಡ ಸಾರಿ ಹೇಳಬೇಕಾದ ಸಂದೇಶವು ಜನಪ್ರಿಯವಾಗಿರುವುದಿಲ್ಲ. ಇದೇ ಸಂದೇಶಕ್ಕಾಗಿ ಯೇಸು ಧಿಕ್ಕರಿಸಲ್ಪಟ್ಟಿದ್ದನು. (ಯೆಶಾಯ 53:3; ಮತ್ತಾಯ 24:9) ಆದುದರಿಂದ ನಾವು ‘ಮನುಷ್ಯರಿಗೆ ಭಯ’ಪಡದೆ, ಯೆರೆಮೀಯನಂತೆ ಧೈರ್ಯದಿಂದ ಯೆಹೋವನಿಗೆ ವಿಧೇಯರಾಗುತ್ತಾ, ಆತನಲ್ಲಿ ಪೂರ್ಣ ಭರವಸೆಯನ್ನಿಡೋಣ.—ಜ್ಞಾನೋಕ್ತಿ 29:25.
ಗೋಗನ ಆಕ್ರಮಣದ ಸಮಯದಲ್ಲಿ ವಿಧೇಯತೆ
18. ಯೆಹೋವನ ಸೇವಕರು ಭವಿಷ್ಯದಲ್ಲಿ ವಿಧೇಯತೆಯ ಯಾವ ಪರೀಕ್ಷೆಗಳನ್ನು ಎದುರಿಸುವರು?
18 ಬೇಗನೆ, ಸೈತಾನನ ಇಡೀ ದುಷ್ಟ ವ್ಯವಸ್ಥೆಯು ಅಭೂತಪೂರ್ವವಾದ ಒಂದು “ಮಹಾ ಸಂಕಟ”ದಲ್ಲಿ ನಾಶವಾಗುವುದು. (ಮತ್ತಾಯ 24:20, 21) ಆ ಸಮಯಕ್ಕೆ ಮೊದಲು ಮತ್ತು ಆ ಬಳಿಕ, ದೇವಜನರು ತಮ್ಮ ನಂಬಿಕೆ ಮತ್ತು ವಿಧೇಯತೆಯ ಪರೀಕ್ಷೆಗಳನ್ನು ಎದುರಿಸುವರೆಂಬುದರಲ್ಲಿ ಸಂದೇಹವಿಲ್ಲ. ದೃಷ್ಟಾಂತಕ್ಕೆ, “ಮಾಗೋಗ್ ದೇಶದ ದೊರೆಯಾದ ಗೋಗ”ನ ಪಾತ್ರದಲ್ಲಿ ಸೈತಾನನು, “ಮಹಾಸೈನ್ಯವಾಗಿ . . . ಕಾರ್ಮುಗಿಲಿನೋಪಾದಿ ದೇಶವನ್ನು” ಮುಚ್ಚಿಬಿಡುವುದೆಂದು ವರ್ಣಿಸಲ್ಪಟ್ಟಿರುವ ಪಡೆಗಳನ್ನುಪಯೋಗಿಸಿ ಯೆಹೋವನ ಸೇವಕರ ಮೇಲೆ ದಾಳಿಯನ್ನು ನಡೆಸುವನೆಂದು ಬೈಬಲ್ ನಮಗನ್ನುತ್ತದೆ. (ಯೆಹೆಜ್ಕೇಲ 38:2, 14-16) ಆಗ, ಸಂಖ್ಯೆಯಲ್ಲಿ ಕಡಮೆಯಾಗಿರುವ ಮತ್ತು ನಿಶ್ಶಸ್ತ್ರರಾಗಿರುವ ದೇವಜನರು, ಯೆಹೋವನು ತನಗೆ ವಿಧೇಯರಾಗಿರುವವರನ್ನು ಕಾಪಾಡಲು ನೀಡುವ ಆತನ “ರೆಕ್ಕೆಗಳ”ಡಿಯಲ್ಲಿ ಆಶ್ರಯವನ್ನು ಪಡೆಯುವರು.
19, 20. (ಎ) ಇಸ್ರಾಯೇಲ್ಯರು ಕೆಂಪು ಸಮುದ್ರದ ಬಳಿ ಇದ್ದಾಗ ಅವರು ವಿಧೇಯತೆಯನ್ನು ತೋರಿಸುವುದು ಏಕೆ ಮಹತ್ವಪೂರ್ಣವಾಗಿತ್ತು? (ಬಿ) ಕೆಂಪು ಸಮುದ್ರದ ಆ ವೃತ್ತಾಂತದ ಕುರಿತಾದ ಪ್ರಾರ್ಥನಾಪೂರ್ವಕವಾದ ಚಿಂತನೆಯು ನಮಗೆ ಹೇಗೆ ಪ್ರಯೋಜನವನ್ನು ತರಬಲ್ಲದು?
19 ಈ ಸನ್ನಿವೇಶವು, ಐಗುಪ್ತದಿಂದ ಇಸ್ರಾಯೇಲಿನ ನಿರ್ಗಮನವನ್ನು ಜ್ಞಾಪಕಕ್ಕೆ ತರುತ್ತದೆ. ಐಗುಪ್ತದ ಮೇಲೆ ಹತ್ತು ವಿಪತ್ಕಾರಕ ಬಾಧೆಗಳನ್ನು ಬರಮಾಡಿದ ನಂತರ, ಯೆಹೋವನು ತನ್ನ ಜನರನ್ನು ವಾಗ್ದತ್ತ ದೇಶಕ್ಕೆ ಬೇಗನೆ ತಲಪಬಹುದಾದ ಮಾರ್ಗದಲ್ಲಿ ನಡೆಸದೆ, ಅವರು ಸುಲಭವಾಗಿ ಸಿಕ್ಕಿಬಿದ್ದು, ಆಕ್ರಮಣಕ್ಕೆ ತುತ್ತಾಗಸಾಧ್ಯವಿದ್ದಂಥ ಕೆಂಪು ಸಮುದ್ರದ ಬಳಿ ನಡೆಸಿದನು. ಯುದ್ಧೋದ್ಯಮದ ದೃಷ್ಟಿಯಿಂದ ಅದು ಒಂದು ವಿಪತ್ಕಾರಕ ಯುದ್ಧಕೌಶಲವಾಗಿ ತೋರುತ್ತಿತ್ತು. ನೀವು ಅಲ್ಲಿರುತ್ತಿದ್ದಲ್ಲಿ, ವಾಗ್ದತ್ತ ದೇಶವು ಸಾಧಾರಣ ಮಟ್ಟಿಗೆ ಇನ್ನೊಂದು ದಿಕ್ಕಿನಲ್ಲಿದೆಯೆಂದು ನಿಮಗೆ ತಿಳಿದಿದ್ದರೂ ಮೋಶೆಯ ಮೂಲಕ ಯೆಹೋವನು ಕೊಟ್ಟ ಮಾತಿಗೆ ವಿಧೇಯರಾಗಿ ಪೂರ್ಣ ಭರವಸೆಯಿಂದ ಕೆಂಪು ಸಮುದ್ರದ ಮಾರ್ಗವಾಗಿ ನಡೆಯುತ್ತಿದ್ದಿರೊ?—ವಿಮೋಚನಕಾಂಡ 14:1-4.
20 ವಿಮೋಚನಕಾಂಡ 14ನೆಯ ಅಧ್ಯಾಯವನ್ನು ನಾವು ಓದುತ್ತಾ ಹೋಗುವಾಗ, ಯೆಹೋವನು ತನ್ನ ಜನರನ್ನು ಭಯಪ್ರೇರಕ ಶಕ್ತಿಯ ಪ್ರದರ್ಶನದೊಂದಿಗೆ ಹೇಗೆ ವಿಮೋಚಿಸಿದನೆಂಬದನ್ನು ನಾವು ನೋಡುತ್ತೇವೆ. ನಾವು ಇಂತಹ ವೃತ್ತಾಂತಗಳನ್ನು ಅಧ್ಯಯನ ಮಾಡಿ ಧ್ಯಾನಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುವಾಗ, ಅವು ನಮ್ಮ ನಂಬಿಕೆಯನ್ನು ಎಷ್ಟು ಬಲಪಡಿಸುತ್ತವೆ! (2 ಪೇತ್ರ 2:9) ಇದಕ್ಕೆ ಪ್ರತಿಯಾಗಿ, ಈ ಬಲವಾದ ನಂಬಿಕೆಯು, ದೇವರು ಇಟ್ಟಿರುವ ಆವಶ್ಯಕತೆಗಳು ಮಾನವ ತರ್ಕವಿಚಾರಕ್ಕೆ ವ್ಯತಿರಿಕ್ತವಾಗಿರುವಂತೆ ತೋರುವಾಗಲೂ, ನಾವು ಯೆಹೋವನಿಗೆ ವಿಧೇಯರಾಗುವಂತೆ ನಮ್ಮನ್ನು ಬಲಪಡಿಸುತ್ತದೆ. (ಜ್ಞಾನೋಕ್ತಿ 3:5, 6) ಆದುದರಿಂದ ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ನಾನು ಶೃದ್ಧಾಪೂರ್ವಕವಾದ ಬೈಬಲ್ ಅಧ್ಯಯನ, ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಹಾಗೂ ದೇವಜನರೊಂದಿಗೆ ಕ್ರಮವಾಗಿ ಕೂಡಿಬರುವುದರ ಮೂಲಕ ನನ್ನ ನಂಬಿಕೆಯನ್ನು ವರ್ಧಿಸಲು ಪ್ರಯತ್ನಿಸುತ್ತಿದ್ದೇನೊ?’—ಇಬ್ರಿಯ 10:24, 25; 12:1-3.
ವಿಧೇಯತೆಯು ನಿರೀಕ್ಷೆಯನ್ನು ತುಂಬಿಸುತ್ತದೆ
21. ಯೆಹೋವನಿಗೆ ವಿಧೇಯರಾಗುವವರಿಗೆ ಯಾವ ಸದ್ಯದ ಮತ್ತು ಭಾವೀ ಆಶೀರ್ವಾದಗಳು ಲಭ್ಯವಾಗುವವು?
21 ಯೆಹೋವನಿಗೆ ವಿಧೇಯತೆ ತೋರಿಸುವುದನ್ನು ತಮ್ಮ ಜೀವನಮಾರ್ಗವಾಗಿ ಮಾಡಿಕೊಳ್ಳುವವರು ಈಗಲೂ ಜ್ಞಾನೋಕ್ತಿ 1:33ರ ನೆರವೇರಿಕೆಯನ್ನು ಅನುಭವಿಸುತ್ತಾರೆ. ಅದು ಹೇಳುವುದು: “ನನ್ನ ಮಾತಿಗೆ [ವಿಧೇಯತೆಯಿಂದ] ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” ಯೆಹೋವನ ಆಗಮಿಸುತ್ತಿರುವ ಮುಯ್ಯಿ ತೀರಿಸುವ ದಿನದಲ್ಲಿ, ಈ ಸಾಂತ್ವನದ ಮಾತುಗಳು ಎಷ್ಟು ಅದ್ಭುತಕರವಾಗಿ ಅನ್ವಯಿಸುವವು! ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.” (ಲೂಕ 21:28) ಆದುದರಿಂದ, ದೇವರಿಗೆ ವಿಧೇಯರಾಗಿರುವವರಿಗೆ ಮಾತ್ರ ಈ ಮಾತುಗಳನ್ನು ಪಾಲಿಸುವ ದೃಢಭರವಸೆಯಿರುವುದು.—ಮತ್ತಾಯ 7:21.
22. (ಎ) ಯೆಹೋವನ ಜನರ ದೃಢಭರವಸೆಗೆ ಯಾವ ಕಾರಣವಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯಗಳು ಚರ್ಚಿಸಲ್ಪಡುವವು?
22 ದೃಢಭರವಸೆಗಿರುವ ಇನ್ನೊಂದು ಕಾರಣವೇನೆಂದರೆ, “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಯೆಹೋವನು ಹಿಂದೆ ಮಾಡುತ್ತಿದ್ದಂತೆ, ಇಂದು ಪ್ರವಾದಿಗಳನ್ನು ಪ್ರೇರಿಸುವುದಿಲ್ಲ. ಬದಲಿಗೆ ಆತನು ಸಮಯೋಚಿತವಾದ ಆತ್ಮಿಕ ಆಹಾರವನ್ನು ತನ್ನ ಮನೆವಾರ್ತೆಯವರಿಗೆ ಒದಗಿಸಲಿಕ್ಕಾಗಿ ನಂಬಿಗಸ್ತ ಆಳು ವರ್ಗವನ್ನು ನೇಮಿಸಿದ್ದಾನೆ. (ಮತ್ತಾಯ 24:45-47) ಆದುದರಿಂದ, ಆ “ಆಳು” ವರ್ಗದ ಕಡೆಗೆ ನಾವು ವಿಧೇಯತೆಯ ಮನೋಭಾವವನ್ನು ಪ್ರದರ್ಶಿಸುವುದು ಅದೆಷ್ಟು ಪ್ರಾಮುಖ್ಯ! ಮುಂದಿನ ಲೇಖನವು ತೋರಿಸಲಿರುವಂತೆ, ಇಂತಹ ವಿಧೇಯತೆಯು ಆ ‘ಆಳಿನ’ ಯಜಮಾನನಾದ ಯೇಸುವಿನ ಕಡೆಗೆ ನಮಗಿರುವ ಮನೋಭಾವವನ್ನೂ ಪ್ರತಿಬಿಂಬಿಸುತ್ತದೆ. ಈತನೇ ಯಾರಿಗೆ “ಅನ್ಯಜನಗಳೂ ವಿಧೇಯ”ರಾಗಲಿದ್ದಾರೊ ಅವನಾಗಿದ್ದಾನೆ.—ಆದಿಕಾಂಡ 49:10.
[ಪಾದಟಿಪ್ಪಣಿಗಳು]
a ತಾಯಿಕೋಳಿಯನ್ನು ಅನೇಕವೇಳೆ ಪುಕ್ಕಲು ಸ್ವಭಾವದ್ದೆಂದು ವರ್ಣಿಸಲಾಗುತ್ತದಾದರೂ, “ತಾಯಿಕೋಳಿಯು ತನ್ನ ಮರಿಗಳನ್ನು ಕಾಪಾಡಲು ಕೊನೆ ಉಸಿರಿನ ವರೆಗೂ ಹೋರಾಡುತ್ತದೆ” ಎಂದು ಒಂದು ಪ್ರಾಣಿ ಸಂರಕ್ಷಣ ಸಂಸ್ಥೆಯ ಸಾಹಿತ್ಯವು ಹೇಳುತ್ತದೆ.
b ಕಸ್ದೀಯರ “ಮರೆಹೊಕ್ಕಿರುವ” ಅನೇಕ ಮಂದಿ ಯೆಹೂದ್ಯರು ಮರಣದಿಂದ ಪಾರಾದರೂ, ಗಡೀಪಾರುಮಾಡಲ್ಪಟ್ಟರೆಂದು ಯೆರೆಮೀಯ 38:19 ತಿಳಿಯಪಡಿಸುತ್ತದೆ. ಯೆರೆಮೀಯನ ಮಾತುಗಳನ್ನು ಕೇಳಿ ಅವರು ಶರಣಾಗತರಾದರೊ ಎಂಬುದನ್ನು ನಮಗೆ ತಿಳಿಸಲಾಗಿರುವುದಿಲ್ಲ. ಆದರೂ ಅವರ ಪಾರಾಗುವಿಕೆಯು ಪ್ರವಾದಿಯ ಮಾತುಗಳನ್ನು ದೃಢಪಡಿಸಿತು.
ನಿಮಗೆ ಜ್ಞಾಪಕವಿದೆಯೆ?
• ಇಸ್ರಾಯೇಲು ಪದೇ ಪದೇ ಅವಿಧೇಯತೆ ತೋರಿಸಿದ್ದರ ಫಲವೇನು?
• ಅರಸ ಯೆಹೋವಾಷನು ತನ್ನ ಒಡನಾಡಿಗಳಿಂದ, ಚಿಕ್ಕ ವಯಸ್ಸಿನಲ್ಲಿ ಮತ್ತು ಆ ಬಳಿಕ ಹೇಗೆ ಪ್ರಭಾವಿತನಾದನು?
• ಬಾರೂಕನಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
• ಇಂದಿನ ವ್ಯವಸ್ಥೆಯ ಅಂತ್ಯವು ಸಮೀಪಿಸುವಾಗ, ಯೆಹೋವನ ವಿಧೇಯ ಜನರಿಗೆ ಭಯಪಡಲು ಕಾರಣವಿಲ್ಲವೇಕೆ?
[ಪುಟ 13ರಲ್ಲಿರುವ ಚಿತ್ರ]
ಯೆಹೋಯಾದನ ಮಾರ್ಗದರ್ಶನದ ಕೆಳಗೆ, ಯುವ ಯೆಹೋವಾಷನು ಯೆಹೋವನಿಗೆ ವಿಧೇಯನಾಗಿದ್ದನು
[ಪುಟ 15ರಲ್ಲಿರುವ ಚಿತ್ರ]
ದೇವರ ಪ್ರವಾದಿಯನ್ನು ಕೊಲ್ಲಿಸುವಂತೆ ದುಸ್ಸಹವಾಸಿಗಳು ಯೆಹೋವಾಷನನ್ನು ಪ್ರಭಾವಿಸಿದರು
[ಪುಟ 16ರಲ್ಲಿರುವ ಚಿತ್ರ]
ನೀವು ಯೆಹೋವನಿಗೆ ವಿಧೇಯರಾಗಿ ಆತನ ಭಯಪ್ರೇರಕವಾದ ರಕ್ಷಣಾಶಕ್ತಿಯನ್ನು ಕಣ್ಣಾರೆ ನೋಡುತ್ತಿದ್ದಿರೊ?