ಅಂತ್ಯವು ಸಮೀಪಿಸುವಾಗ “ಚಿತ್ತಸ್ವಾಸ್ಥ್ಯ”
“ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ . . . ಸ್ವಸ್ಥಚಿತ್ತರಾಗಿಯೂ ಇರ್ರಿ.” —1 ಪೇತ್ರ 4:7.
1. “ಸ್ವಸ್ಥಚಿತ್ತ”ರಾಗಿರುವುದರಲ್ಲಿ ಏನು ಒಳಗೊಂಡಿದೆ?
ಅಪೊಸ್ತಲ ಪೇತ್ರನ ಈ ಮೇಲಿನ ಮಾತುಗಳು, ಕ್ರೈಸ್ತರು ತಮ್ಮ ಜೀವನಗಳನ್ನು ನಡೆಸುವ ವಿಧದ ಮೇಲೆ ಗಾಢವಾದ ಪ್ರಭಾವವನ್ನು ಬೀರಬೇಕು. ಆದರೂ, ತಮ್ಮ ಐಹಿಕ ಜವಾಬ್ದಾರಿಕೆಗಳು ಮತ್ತು ಜೀವನದ ಚಿಂತೆಗಳಿಂದ ಅವರು ಹಿಮ್ಮೆಟ್ಟಬೇಕೆಂದು ಪೇತ್ರನು ತನ್ನ ಓದುಗರಿಗೆ ಹೇಳಿದ್ದೂ ಇಲ್ಲ; ಬರಲಿದ್ದ ನಾಶನದ ವಿಷಯದಲ್ಲಿ ಚಿತ್ತಕ್ಷೋಭೆಯುಳ್ಳವರಾಗಿರುವುದನ್ನು ಅವನು ಪ್ರೋತ್ಸಾಹಿಸಿದ್ದೂ ಇಲ್ಲ. ಬದಲಿಗೆ, ಅವನು “ಸ್ವಸ್ಥಚಿತ್ತ”ರಾಗಿರುವಂತೆ ಪ್ರೋತ್ಸಾಹಿಸಿದನು. “ಸ್ವಸ್ಥಚಿತ್ತ”ರಾಗಿರುವುದರಲ್ಲಿ ಸುವಿವೇಚನೆಯನ್ನು ತೋರಿಸುವುದು, ನ್ಯಾಯಪ್ರಜ್ಞೆ, ಮುಂದಾಲೋಚನೆಯುಳ್ಳವರಾಗಿರುವುದು, ನಮ್ಮ ನಡೆನುಡಿಗಳಲ್ಲಿ ತರ್ಕಸಮ್ಮತರಾಗಿರುವುದು ಸೇರಿದೆ. ದೇವರ ವಾಕ್ಯವು ನಮ್ಮ ಯೋಚನೆ ಮತ್ತು ಕ್ರಿಯೆಗಳನ್ನು ಆಳುವಂತೆ ಬಿಡುವುದೆಂದು ಇದರ ಅರ್ಥ. (ರೋಮಾಪುರ 12:2) ನಾವು “ವಕ್ರಬುದ್ಧಿಯ ಮೂರ್ಖಜಾತಿಯ” ಮಧ್ಯೆ ಜೀವಿಸುವುದರಿಂದ ಸಮಸ್ಯೆಗಳನ್ನು ಮತ್ತು ಕಷ್ಟಗಳನ್ನು ತೊಲಗಿಸಲು ಸ್ವಸ್ಥಚಿತ್ತವು ಅಗತ್ಯ.—ಫಿಲಿಪ್ಪಿ 2:15.
2. ಯೆಹೋವನ ತಾಳ್ಮೆ ಇಂದು ಕ್ರೈಸ್ತರಿಗೆ ಹೇಗೆ ಪ್ರಯೋಜನ ತರುತ್ತದೆ?
2 “ಚಿತ್ತಸ್ವಾಸ್ಥ್ಯವು” ನಮ್ಮ ಕುರಿತಾಗಿ ನಮಗೆ ಸಮಚಿತ್ತದ, ವಸ್ತುಸ್ಥಿತಿಯ ಪರಿಜ್ಞಾನವಿರುವಂತೆಯೂ ಸಹಾಯಮಾಡುತ್ತದೆ. (ತೀತ 2:12; ರೋಮಾಪುರ 12:3) “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ,” ಎಂಬ 2 ಪೇತ್ರ 3:9ರಲ್ಲಿ ದಾಖಲೆಯಾಗಿರುವ ಮಾತುಗಳ ನೋಟದಲ್ಲಿ ಇದು ಅತ್ಯಾವಶ್ಯಕ. ಯೆಹೋವನು ಅವಿಶ್ವಾಸಿಗಳೊಂದಿಗೆ ಮಾತ್ರವಲ್ಲ, “ನಿಮ್ಮ ವಿಷಯದಲ್ಲಿ”—ಕ್ರೈಸ್ತ ಸಭೆಯ ಸದಸ್ಯರ ವಿಷಯದಲ್ಲಿ ಸಹ ತಾಳ್ಮೆಯುಳ್ಳವನೆಂಬುದನ್ನು ಗಮನಿಸಿರಿ. ಏಕೆ? ಏಕೆಂದರೆ “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟ” ಪಡುವುದಿಲ್ಲ. ಪ್ರಾಯಶಃ ಕೆಲವರು ನಿತ್ಯಜೀವದ ಕೊಡುಗೆಗೆ ಅರ್ಹರಾಗುವರೆ, ಇನ್ನೂ ಬದಲಾವಣೆಗಳನ್ನು ಮತ್ತು ಹೊಂದಿಸಿಕೊಳ್ಳುವಿಕೆಗಳನ್ನು ಮಾಡಲಿಕ್ಕಿದ್ದೀತು. ಆದುದರಿಂದ ಕೆಲವು ಹೊಂದಿಸಿಕೊಳ್ಳುವಿಕೆಗಳು ಬೇಕಾಗಬಹುದಾದ ವಿಚಾರಕ್ಷೇತ್ರಗಳ ಕಡೆ ನಾವು ನೋಡೋಣ.
ನಮ್ಮ ವೈಯಕ್ತಿಕ ಸಂಬಂಧಗಳಲ್ಲಿ “ಚಿತ್ತಸ್ವಾಸ್ಥ್ಯ”
3. ತಮ್ಮ ಮಕ್ಕಳ ಕುರಿತು ಹೆತ್ತವರು ಯಾವ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬಹುದು?
3 ಮನೆಯು ಶಾಂತಿಯ ಒಂದು ಆಶ್ರಯಧಾಮವಾಗಿರಬೇಕು. ಆದರೆ ಕೆಲವರ ಮನೆಗಳ ವಿಷಯದಲ್ಲಿಯಾದರೊ ಅದೊಂದು “ವ್ಯಾಜ್ಯದ ಮನೆ” ಆಗಿರುತ್ತದೆ. (ಜ್ಞಾನೋಕ್ತಿ 17:1) ನಿಮ್ಮ ಕುಟುಂಬದ ವಿಷಯದಲ್ಲಿ ಏನು? ನಿಮ್ಮ ಮನೆಯು “ಕ್ರೋಧ ಕಲಹ ದೂಷಣೆ”ಯಿಂದ ಮುಕ್ತವಾಗಿದೆಯೆ? (ಎಫೆಸ 4:31) ನಿಮ್ಮ ಮಕ್ಕಳ ವಿಷಯದಲ್ಲೇನು? ತಾವು ಪ್ರೀತಿಸಲ್ಪಡುತ್ತೇವೆ ಮತ್ತು ಮಾನ್ಯಮಾಡಲ್ಪಡುತ್ತೇವೆಂಬ ಅನಿಸಿಕೆ ಅವರಿಗಿದೆಯೆ? (ಹೋಲಿಸಿ ಲೂಕ 3:22.) ಅವರಿಗೆ ಶಿಕ್ಷಣಕೊಡಲು ಮತ್ತು ತರಬೇತುಮಾಡಲು ನೀವು ಸಮಯವನ್ನು ತೆಗೆದುಕೊಳ್ಳುತ್ತೀರೊ? ಕ್ರೋಧ ಮತ್ತು ಸಿಟ್ಟಿನ ಬದಲು ನೀವು ಅವರಿಗೆ “ನೀತಿಶಿಕ್ಷೆ”ಯನ್ನು ಕೊಡುತ್ತೀರೊ? (2 ತಿಮೊಥೆಯ 3:16) ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯ” ಆಗಿರುವುದರಿಂದ, ಅವರು ಉಪಚರಿಸಲ್ಪಡುವ ವಿಧದಲ್ಲಿ ಆತನಿಗೆ ತೀವ್ರಾಸಕ್ತಿಯಿದೆ.—ಕೀರ್ತನೆ 127:3.
4. (ಎ) ಒಬ್ಬ ಗಂಡನು ತನ್ನ ಹೆಂಡತಿಯೊಂದಿಗೆ ಕ್ರೂರವಾಗಿ ವರ್ತಿಸುವುದಾದರೆ ಏನು ಪರಿಣಮಿಸಬಲ್ಲದು? (ಬಿ) ಹೆಂಡತಿಯರು ದೇವರೊಂದಿಗೆ ಶಾಂತಿ ಮತ್ತು ಇಡೀ ಕುಟುಂಬದಲ್ಲಿ ಸಂತೋಷವನ್ನು ಹೇಗೆ ಉತ್ತೇಜಿಸಬಲ್ಲರು?
4 ನಮ್ಮ ವಿವಾಹ ಸಂಗಾತಿಯ ವಿಷಯದಲ್ಲೇನು? “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ. . . . ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.” (ಎಫೆಸ 5:28-30) ದೂಷಿಸುವ, ಅಹಂಭಾವದಿಂದ ವರ್ತಿಸುವ ಮತ್ತು ವಿವೇಚನೆಯಿಲ್ಲದ ಪುರುಷನು ಮನೆಯ ಪ್ರಶಾಂತತೆಗೆ ಅಪಾಯ ತರುತ್ತಾನೆ ಮಾತ್ರವಲ್ಲ, ದೇವರೊಂದಿಗಿನ ತನ್ನ ಸಂಬಂಧಕ್ಕೂ ಕೆಡುಕನ್ನುಂಟುಮಾಡುತ್ತಾನೆ. (1 ಪೇತ್ರ 3:7) ಹೆಂಡತಿಯರ ಕುರಿತೇನು? ಅವರೂ ಹಾಗೆಯೇ, ‘ಕರ್ತನಿಗೆ ಹೇಗೋ ಹಾಗೆಯೇ ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.’ (ಎಫೆಸ 5:22) ದೇವರನ್ನು ಮೆಚ್ಚಿಸುವ ವಿಷಯದಲ್ಲಿ ಯೋಚಿಸುವುದು, ಹೆಂಡತಿಯು ತನ್ನ ಗಂಡನ ದೋಷಗಳನ್ನು ಅಲಕ್ಷಿಸುವಂತೆ ಮತ್ತು ಅಸಮಾಧಾನಪಡದೆ ಅವನಿಗೆ ಅಧೀನಳಾಗುವಂತೆ ಸಹಾಯಮಾಡಬಲ್ಲದು. ಕೆಲವೊಮ್ಮೆ, ಹೆಂಡತಿಯು ಮುಚ್ಚುಮರೆಯಿಲ್ಲದೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬದ್ಧಳಾಗಬಹುದು. ಜ್ಞಾನೋಕ್ತಿ 31:26, ಸಮರ್ಥಳಾದ ಹೆಂಡತಿಯ ಕುರಿತು ಹೇಳುವುದು: “ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವದು.” ಆಕೆಯ ಗಂಡನನ್ನು ದಯಾಭಾವದಿಂದ, ಗೌರವಪೂರ್ವಕವಾಗಿ ಉಪಚರಿಸುವ ಮೂಲಕ, ಆಕೆ ದೇವರೊಂದಿಗೆ ಶಾಂತಿಯನ್ನು ಕಾಪಾಡಿಕೊಂಡು, ಇಡೀ ಕುಟುಂಬದ ಸಂತೋಷಕ್ಕೆ ಉತ್ತೇಜನ ಕೊಡುವಳು.—ಜ್ಞಾನೋಕ್ತಿ 14:1.
5. ತಮ್ಮ ಹೆತ್ತವರನ್ನು ಉಪಚರಿಸುವುದರ ಕುರಿತಾದ ಬೈಬಲ್ ಸಲಹೆಯನ್ನು ಯುವ ಜನರು ಏಕೆ ಅನುಸರಿಸಬೇಕು?
5 ಎಳೆಯರೇ, ನೀವು ನಿಮ್ಮ ಹೆತ್ತವರನ್ನು ಹೇಗೆ ಉಪಚರಿಸುತ್ತೀರಿ? ಲೋಕವು ಅನೇಕ ವೇಳೆ ಯಾವುದನ್ನು ಸಹಿಸಿಕೊಳ್ಳುತ್ತದೊ ಅಂತಹ, ಮನನೋಯಿಸುವ, ಅಗೌರವದ ಮಾತುಗಳನ್ನು ನೀವು ಬಳಸುತ್ತೀರೊ? ಇಲ್ಲವೆ, ಬೈಬಲಿನ “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ” ಎಂಬ ಆಜ್ಞೆಗೆ ವಿಧೇಯರಾಗುತ್ತಿದ್ದೀರೊ?—ಎಫೆಸ 6:1-3.
6. ಜೊತೆ ಆರಾಧಕರೊಂದಿಗೆ ನಾವು ಶಾಂತಿಯನ್ನು ಹೇಗೆ ಹುಡುಕಬಲ್ಲೆವು?
6 ಜೊತೆ ಆರಾಧಕರೊಂದಿಗೆ “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡುವಾಗಲೂ ನಾವು “ಚಿತ್ತಸ್ವಾಸ್ಥ್ಯ”ವನ್ನು ಪ್ರದರ್ಶಿಸುತ್ತೇವೆ. (1 ಪೇತ್ರ 3:11) ಭಿನ್ನಾಭಿಪ್ರಾಯಗಳು ಮತ್ತು ತಪ್ಪು ತಿಳಿವಳಿಕೆಗಳು ಆಗಾಗ ಏಳುತ್ತವೆ. (ಯಾಕೋಬ 3:2) ಬದ್ಧವೈರಗಳು ಕೀವುಗಟ್ಟುವಂತೆ ಬಿಡುವಲ್ಲಿ, ಇಡೀ ಸಭೆಯ ಶಾಂತಿಯು ಅಪಾಯಕ್ಕೊಳಗಾಗಬಹುದು. (ಗಲಾತ್ಯ 5:15) ಆದಕಾರಣ ವಾಗ್ವಾದಗಳನ್ನು ಬೇಗನೆ ಬಗೆಹರಿಸಿರಿ; ಶಾಂತಿಕಾರಕ ಪರಿಹಾರಗಳನ್ನು ಹುಡುಕಿರಿ.—ಮತ್ತಾಯ 5:23-25; ಎಫೆಸ 4:26; ಕೊಲೊಸ್ಸೆ 3:13, 14.
“ಚಿತ್ತಸ್ವಾಸ್ಥ್ಯ” ಮತ್ತು ಕೌಟುಂಬಿಕ ಜವಾಬ್ದಾರಿಗಳು
7. (ಎ) ಐಹಿಕ ವಿಷಯಗಳಲ್ಲಿ “ಚಿತ್ತಸ್ವಾಸ್ಥ್ಯ”ವನ್ನು ತೋರಿಸುವರೆ ಪೌಲನು ಹೇಗೆ ಪ್ರೋತ್ಸಾಹಿಸಿದನು? (ಬಿ) ಗೃಹಕೃತ್ಯದ ಜವಾಬ್ದಾರಿಗಳ ಕಡೆಗೆ ಕ್ರೈಸ್ತ ಗಂಡಂದಿರಿಗೂ ಹೆಂಡತಿಯರಿಗೂ ಯಾವ ಮನೋಭಾವವಿರಬೇಕು?
7 ಅಪೊಸ್ತಲ ಪೌಲನು ಕ್ರೈಸ್ತರಿಗೆ ಅವರು “ಚಿತ್ತಸ್ವಾಸ್ಥ್ಯದಿಂದ . . . ಜೀವಿಸಬೇಕೆಂದು” ಸಲಹೆ ನೀಡಿದನು. (ತೀತ 2:12, NW) ಈ ಸಂದರ್ಭದಲ್ಲಿ, ಪೌಲನು ಸ್ತ್ರೀಯರಿಗೆ “ನೀವು ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೇ ಕೆಲಸಮಾಡುವವರೂ . . . ಆಗಿರಬೇಕೆಂದು” ಬುದ್ಧಿವಾದ ಹೇಳುವುದು ಆಸಕ್ತಿಕರವಾಗಿದೆ. (ತೀತ 2:4, 5) ಪೌಲನು ಇದನ್ನು ಸಾ.ಶ. 61-64 ವರ್ಷಗಳಲ್ಲಿ, ಯೆಹೂದಿ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವುದಕ್ಕೆ ಕೆಲವು ವರ್ಷಗಳಿಗೆ ಮೊದಲು ಬರೆದನು. ಆದರೂ, ಮನೆಯ ಕೆಲಸದಂತಹ ಐಹಿಕ ವಿಷಯಗಳು ಆಗಲೂ ಪ್ರಾಮುಖ್ಯವಾಗಿದ್ದವು. ಆದಕಾರಣ ಗಂಡಂದಿರೂ ಹೆಂಡತಿಯರೂ, “ದೇವರ ವಾಕ್ಯಕ್ಕೆ ದೂಷಣೆಯಾಗದಂತೆ” ತಮ್ಮ ಗೃಹಕೃತ್ಯದ ಜವಾಬ್ದಾರಿಗಳ ವಿಷಯದಲ್ಲಿ ಹಿತಕರವಾದ, ಸಕಾರಾತ್ಮಕ ವೀಕ್ಷಣವನ್ನು ಕಾಪಾಡಿಕೊಳ್ಳಬೇಕು. ಒಬ್ಬ ಕುಟುಂಬದ ಯಜಮಾನನು ತನ್ನ ಮನೆಯು ನಾಚಿಕೆಗೊಳಪಡಿಸುವ ತೋರಿಕೆಗೊಳಗಾಗಿರುವುದಕ್ಕೆ ಒಬ್ಬ ಭೇಟಿಕಾರನೊಂದಿಗೆ ಕ್ಷಮೆಕೋರಿದನು. “ತಾನು ಪಯನೀಯರ್ ಸೇವೆಯನ್ನು ಮಾಡುತ್ತಿದ್ದುದರಿಂದ” ಮನೆಯು ಸರಿಯಾಗಿ ಇಡಲ್ಪಟ್ಟಿಲ್ಲ ಎಂದು ಅವನು ವಿವರಿಸಿದನು. ರಾಜ್ಯದ ಸಲುವಾಗಿ ನಾವು ತ್ಯಾಗಗಳನ್ನು ಮಾಡುವುದು ಪ್ರಶಂಸನೀಯವಾದರೂ, ನಮ್ಮ ಕುಟುಂಬಗಳ ಹಿತವನ್ನು ತ್ಯಾಗಮಾಡದಂತೆ ಎಚ್ಚರಿಕೆ ವಹಿಸಬೇಕು.
8. ಕುಟುಂಬ ತಲೆಗಳು ತಮ್ಮ ಕುಟುಂಬಗಳ ಆವಶ್ಯಕತೆಗಳಿಗೆ ಸಮತೆಯ ವಿಧದಲ್ಲಿ ಹೇಗೆ ಪರಾಮರಿಸಬಲ್ಲರು?
8 ತನ್ನ ಕುಟುಂಬಕ್ಕೆ ಒದಗಿಸದಿರುವವನು, “ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ” ಎಂದು ಹೇಳುತ್ತ, ತಂದೆಗಳು ತಮ್ಮ ಕುಟುಂಬಗಳಿಗೆ ಆದ್ಯತೆಯನ್ನು ಕೊಡಬೇಕೆಂದು ಬೈಬಲು ಉತ್ತೇಜನ ಕೊಡುತ್ತದೆ. (1 ತಿಮೊಥೆಯ 5:8) ಲೋಕದಾದ್ಯಂತವಾಗಿ ಜೀವನ ಮಟ್ಟಗಳು ಭಿನ್ನವಾಗಿರುತ್ತವೆ ಮತ್ತು ಪ್ರಾಪಂಚಿಕ ನಿರೀಕ್ಷಣೆಗಳನ್ನು ಮಿತವಾಗಿಡುವುದು ಒಳ್ಳೆಯದು. “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡ”ಬೇಡವೆಂದು ಜ್ಞಾನೋಕ್ತಿ 30:8ರ ಬರಹಗಾರನು ಪ್ರಾರ್ಥಿಸಿದನು. ಆದರೂ, ತಮ್ಮ ಮಕ್ಕಳ ಪ್ರಾಪಂಚಿಕ ಆವಶ್ಯಕತೆಗಳನ್ನು ಹೆತ್ತವರು ಅಸಡ್ಡೆಮಾಡಬಾರದು. ದೃಷ್ಟಾಂತಕ್ಕೆ, ದೇವಪ್ರಭುತ್ವಾತ್ಮಕ ಸುಯೋಗಗಳನ್ನು ಬೆನ್ನಟ್ಟುವ ಸಲುವಾಗಿ ಒಬ್ಬನು ತನ್ನ ಕುಟುಂಬವನ್ನು ಮೂಲಾವಶ್ಯಕತೆಯಿಲ್ಲದ್ದಾಗಿ ಬೇಕೆಂದು ಬಿಟ್ಟುಹೋಗುವುದು ವಿವೇಕಪ್ರದವೊ? ಅದು ಅವನ ಮಕ್ಕಳಲ್ಲಿ ವೈಮನಸ್ಯ ಉಂಟುಮಾಡಲಿಕ್ಕಿಲ್ಲವೊ? ಇನ್ನೊಂದು ಕಡೆಯಲ್ಲಿ, “ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು,” ಎಂದು ಜ್ಞಾನೋಕ್ತಿ 24:27 ಹೇಳುತ್ತದೆ. ಹೌದು, ಪ್ರಾಪಂಚಿಕ ವಿಷಯಗಳ ಚಿಂತೆಗೆ ಅದರದ್ದೇ ಆದ ಸ್ಥಾನವಿರುವುದಾದರೂ, ‘ಮನೆಯನ್ನು ಕಟ್ಟುವುದು’—ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ, ಅತಿ ಮಹತ್ತ್ವವುಳ್ಳದ್ದು.
9. ತಮ್ಮ ಮರಣದ ಅಥವಾ ಅಸ್ವಸ್ಥತೆಯ ಸಾಧ್ಯತೆಯ ವಿಷಯದಲ್ಲಿ ಕುಟುಂಬದ ತಲೆಗಳು ಚಿಂತಿಸುವುದು ಏಕೆ ವಿವೇಕಪ್ರದ?
9 ಒಂದು ವೇಳೆ ನಿಮಗೆ ಅಕಾಲಿಕ ಮರಣವು ಸಂಭವಿಸುವಲ್ಲಿ, ನಿಮ್ಮ ಕುಟುಂಬದ ಪರಾಮರಿಕೆಗಾಗಿ ನೀವು ಮುನ್ನೇರ್ಪಾಡುಗಳನ್ನು ಮಾಡಿದ್ದೀರೊ? ಜ್ಞಾನೋಕ್ತಿ 13:22 ಹೇಳುವುದು: “ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ.” ಯೆಹೋವನ ಜ್ಞಾನದ ಮತ್ತು ಆತನೊಂದಿಗಿನ ಸಂಬಂಧದ ಪಿತ್ರಾರ್ಜಿತಕ್ಕೆ ಕೂಡಿಸಿ, ತಮ್ಮ ಮಕ್ಕಳಿಗೆ ಪ್ರಾಪಂಚಿಕವಾಗಿಯೂ ಒದಗಿಸುವುದರಲ್ಲಿ ಹೆತ್ತವರು ಆಸಕ್ತರಾಗಿರುವರು. ಅನೇಕ ದೇಶಗಳಲ್ಲಿ ಕುಟುಂಬದ ತಲೆಗಳು ತುಸು ಉಳಿತಾಯ, ಒಂದು ಕಾನೂನುಬದ್ಧ ಉಯಿಲು ಮತ್ತು ವಿಮೆ ಪಡೆದಿರುವಂತೆ ಪ್ರಯತ್ನಿಸುವರು. ಎಷ್ಟೆಂದರೂ, ಯೆಹೋವನ ಜನರು “ಕಾಲ ಮತ್ತು ಮುಂಗಾಣದ ಸಂಭವ”ದಿಂದ ರಕ್ಷಿತರಲ್ಲ. (ಪ್ರಸಂಗಿ 9:11, NW) “ಧನವು . . . ಆಶ್ರಯ”ವಾಗಿದೆ ಮತ್ತು ಜಾಗರೂಕತೆಯ ಯೋಜನೆಯು ಅನೇಕ ವೇಳೆ ಕಷ್ಟದೆಸೆಗಳನ್ನು ನಿವಾರಿಸಬಲ್ಲದು. (ಪ್ರಸಂಗಿ 7:12) ವೈದ್ಯಕೀಯ ಆರೈಕೆಗೆ ಸರಕಾರವು ಹಣವನ್ನು ತೆರದ ದೇಶಗಳಲ್ಲಿ, ಕೆಲವರು ಆರೋಗ್ಯಾವಶ್ಯಕತೆಗಳಿಗಾಗಿ ಹಣವನ್ನು ಬದಿಗಿಡಲು ಅಥವಾ ಯಾವುದೇ ವಿಧದ ಆರೋಗ್ಯ ವಿಮಾರಕ್ಷಣೆಯನ್ನು ಏರ್ಪಡಿಸಲು ಆಯ್ದುಕೊಳ್ಳಬಹುದು.a
10. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗಾಗಿ ಹೇಗೆ “ಕೂಡಿಸಿಡ”ಬಹುದು?
10 “ಮಕ್ಕಳು ತಂದೆತಾಯಿಗಳಿಗೋಸ್ಕರ ದ್ರವ್ಯವನ್ನು ಕೂಡಿಸಿಡುವದು ಧರ್ಮವಲ್ಲ, ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುವದೇ ಧರ್ಮ” ಎಂದೂ ಶಾಸ್ತ್ರಗಳು ಹೇಳುತ್ತವೆ. (2 ಕೊರಿಂಥ 12:14) ಲೋಕದಲ್ಲಿ, ಮಕ್ಕಳಿಗೆ ಜೀವನದಲ್ಲಿ ಉತ್ತಮ ಆರಂಭವನ್ನು ಕೊಡುವಂತೆ, ಹೆತ್ತವರು ತಮ್ಮ ಮಕ್ಕಳ ಭಾವೀ ವಿದ್ಯಾಭ್ಯಾಸ ಮತ್ತು ವಿವಾಹಕ್ಕಾಗಿ ಹಣವನ್ನು ಕೂಡಿಸಿಡುವುದು ಸಾಮಾನ್ಯ. ನಿಮ್ಮ ಮಗುವಿನ ಆತ್ಮಿಕ ಭವಿಷ್ಯತ್ತಿಗಾಗಿ ಕೂಡಿಸಿಡುವುದರ ಕುರಿತು ನೀವು ಯೋಚಿಸಿದ್ದೀರೊ? ದೃಷ್ಟಾಂತಕ್ಕೆ, ಬೆಳೆದ ಮಗನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯುತ್ತಿದ್ದಾನೆಂದು ಭಾವಿಸಿ. ಪೂರ್ಣ ಸಮಯದ ಸೇವಕರು ಹೊರಗಣ ಬೆಂಬಲವನ್ನು ಕೇಳಲೂ ಬಾರದು, ಅಪೇಕ್ಷಿಸಲೂ ಬಾರದೆಂಬುದು ನಿಜವಾದರೂ, ಪ್ರೀತಿಪೂರ್ಣ ಹೆತ್ತವರು, ಅವನು ಪೂರ್ಣ ಸಮಯದ ಸೇವೆಯಲ್ಲಿ ಉಳಿಯುವಂತೆ ಅವನಿಗೆ ಸಹಾಯಮಾಡುವ ಸಲುವಾಗಿ, ‘ಅವನ ಅಗತ್ಯಗಳಿಗನುಸಾರ ಅವನೊಂದಿಗೆ ಪಾಲಿಗರಾಗಲು’ (NW) ಆರಿಸಿಕೊಳ್ಳಬಹುದು.—ರೋಮಾಪುರ 12:13; 1 ಸಮುವೇಲ 2:18, 19; ಫಿಲಿಪ್ಪಿ 4:14-18.
11. ಹಣದ ವಿಷಯದಲ್ಲಿ ವಾಸ್ತವಿಕವಾದ ನೋಟವು ನಂಬಿಕೆಯ ಕೊರತೆಯನ್ನು ಸೂಚಿಸುತ್ತದೊ? ವಿವರಿಸಿ.
11 ಹಣದ ವಿಷಯದಲ್ಲಿ ವಾಸ್ತವವಾದ ನೋಟವಿರುವುದು, ಸೈತಾನನ ದುಷ್ಟ ವ್ಯವಸ್ಥೆಯು ಅದರ ಅಂತ್ಯವನ್ನು ಸಮೀಪಿಸುತ್ತಿದೆಯೆಂಬ ವಿಷಯದಲ್ಲಿ ನಂಬಿಕೆಯ ಕೊರತೆಯನ್ನು ಸೂಚಿಸುವುದಿಲ್ಲ. ಅದು ಕೇವಲ “ಪ್ರಾಯೋಗಿಕ ವಿವೇಕ” ಮತ್ತು ಸ್ವಸ್ಥವಾದ ವಿವೇಚನೆಯ ಸಂಗತಿಯಾಗಿದೆ. (ಜ್ಞಾನೋಕ್ತಿ 2:7; 3:21) ಹಣದ ಉಪಯೋಗದ ವಿಷಯದಲ್ಲಿ, “ವಿಷಯಗಳ ಈ ವ್ಯವಸ್ಥೆಯ ಪುತ್ರರು . . . ಬೆಳಕಿನ ಪುತ್ರರಿಗಿಂತ ಪ್ರಾಯೋಗಿಕ ವಿಧದಲ್ಲಿ ಹೆಚ್ಚು ವಿವೇಕವುಳ್ಳವರು” ಎಂದು ಯೇಸು ಒಮ್ಮೆ ಹೇಳಿದನು. (ಲೂಕ 16:8, NW) ಆದಕಾರಣ ಕೆಲವರು, ತಮ್ಮ ಕುಟುಂಬಗಳ ಆವಶ್ಯಕತೆಗಳನ್ನು ಹೆಚ್ಚು ಉತ್ತಮವಾಗಿ ಪರಾಮರಿಸಲು ಸಾಧ್ಯವಾಗುವಂತೆ, ತಮ್ಮ ಸಂಪತ್ತನ್ನು ಬಳಸುವ ವಿಧದಲ್ಲಿ ಹೊಂದಿಸಿಕೊಳ್ಳುವ ಆವಶ್ಯಕತೆಯನ್ನು ಕಂಡಿರುವುದು ಆಶ್ಚರ್ಯವೇನಲ್ಲ.
ವಿದ್ಯಾಭ್ಯಾಸದ ನಮ್ಮ ವೀಕ್ಷಣದಲ್ಲಿ “ಚಿತ್ತಸ್ವಾಸ್ಥ್ಯ”
12. ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ಹೇಗೆ ಕಲಿಸಿದನು?
12 “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ [“ಬದಲಾಗುತ್ತಾ,” NW] ಇದೆ,” ಮತ್ತು ವ್ಯಾಪಕವಾದ ಆರ್ಥಿಕ ಪರಿವರ್ತನೆಗಳೂ ತಾಂತ್ರಿಕ ವಿಕಸನಗಳೂ ಕ್ಷಿಪ್ರವಾಗಿ ಸಂಭವಿಸುತ್ತಿವೆ. (1 ಕೊರಿಂಥ 7:31) ಆದರೂ ಯೇಸು ತನ್ನ ಶಿಷ್ಯರಿಗೆ ಅವರು ಹೊಂದಿಕೊಳ್ಳುವವರಾಗಿರುವಂತೆ ಕಲಿಸಿದನು. ಅವನು ಅವರನ್ನು, ಅವರ ಪ್ರಥಮ ಸಾರುವ ಕಾರ್ಯಾವಳಿಗೆ ಕಳುಹಿಸಿದಾಗ ಹೇಳಿದ್ದು: “ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ ಎರಡು ಅಂಗಿ ಕೆರ ಕೋಲು ಮೊದಲಾದವುಗಳನ್ನೂ ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ.” (ಮತ್ತಾಯ 10:9, 10) ಮುಂದಿನ ಒಂದು ಸಂದರ್ಭದಲ್ಲಿ ಯೇಸು ಹೇಳಿದ್ದು: “ಹಣದ ಚೀಲಯಿದ್ದವನು ಅದನ್ನು ತೆಗೆದುಕೊಳ್ಳಲಿ, ಜೋಳಿಗೆಯಿದ್ದವನು ಅದನ್ನು ತೆಗೆದುಕೊಳ್ಳಲಿ.” (ಲೂಕ 22:36, NW) ಏನು ಬದಲಾವಣೆಯಾಗಿತ್ತು? ಪರಿಸ್ಥಿತಿಗಳೇ. ಧಾರ್ಮಿಕ ಪರಿಸರ ಹೆಚ್ಚು ವಿರೋಧವುಳ್ಳದ್ದಾಗಿತ್ತು ಮತ್ತು ಈಗ ಅವರು ಸ್ವತಃ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿತ್ತು.
13. ವಿದ್ಯೆಯ ಮುಖ್ಯ ಉದ್ದೇಶವೇನು, ಮತ್ತು ಈ ಸಂಬಂಧದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಬೆಂಬಲಿಗರಾಗಿರಸಾಧ್ಯವಿದೆ?
13 ಹಾಗೆಯೇ ಇಂದು ಹೆತ್ತವರು, ಈ ದಿನಗಳ ಆರ್ಥಿಕ ವಾಸ್ತವಿಕತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಆವಶ್ಯಕತೆಯಿದ್ದೀತು. ಉದಾಹರಣೆಗೆ, ನಿಮ್ಮ ಮಕ್ಕಳಿಗೆ ಸಾಕಷ್ಟು ವಿದ್ಯೆ ದೊರೆಯುವ ಏರ್ಪಾಡನ್ನು ನೀವು ಮಾಡುತ್ತಿದ್ದೀರೊ? ವಿದ್ಯೆಯ ಮುಖ್ಯ ಉದ್ದೇಶವು, ಒಬ್ಬ ಯುವ ವ್ಯಕ್ತಿಯನ್ನು ಅವನು ಯೆಹೋವನ ಪರಿಣಾಮಕಾರಿಯಾದ ಶುಶ್ರೂಷಕನಾಗುವಂತೆ ಸಜ್ಜುಗೊಳಿಸುವುದೇ. ಮತ್ತು ಎಲ್ಲವುಗಳಲ್ಲಿ ಅತಿ ಪ್ರಾಮುಖ್ಯವಾದ ವಿದ್ಯೆಯು ಆತ್ಮಿಕ ವಿದ್ಯೆಯಾಗಿದೆ. (ಯೆಶಾಯ 54:13) ತಮ್ಮ ಮಕ್ಕಳಿಗೆ ಆರ್ಥಿಕವಾಗಿ ಸ್ವತಃ ಬೆಂಬಲಿಸಿಕೊಳ್ಳುವ ಸಾಮರ್ಥ್ಯವಿದೆಯೊ ಎಂಬ ವಿಷಯದಲ್ಲಿಯೂ ಹೆತ್ತವರು ಚಿಂತಿತರಾಗಿರುತ್ತಾರೆ. ಆದುದರಿಂದ ನಿಮ್ಮ ಮಕ್ಕಳಿಗೆ ಮಾರ್ಗದರ್ಶನವನ್ನು ಕೊಟ್ಟು, ತಕ್ಕದಾದ ಶಾಲಾಪಾಠ ವಿಷಯಗಳನ್ನು ಅವರು ಆರಿಸಿಕೊಳ್ಳುವಂತೆ ಸಹಾಯ ಮಾಡಿ, ಯಾವುದೇ ಪೂರಕ ಶಿಕ್ಷಣವನ್ನು ಅವರು ಮುಂದುವರಿಸುವುದು ವಿವೇಕವೊ ಅಲ್ಲವೊ ಎಂಬುದನ್ನು ಅವರೊಂದಿಗೆ ಚರ್ಚಿಸಿರಿ. ಇಂತಹ ನಿರ್ಣಯಗಳು ಕುಟುಂಬದ ಜವಾಬ್ದಾರಿಯಾಗಿವೆ, ಮತ್ತು ಆರಿಸಿಕೊಂಡ ಮಾರ್ಗವನ್ನು ಬೇರೆಯವರು ಟೀಕಿಸಬಾರದು. (ಜ್ಞಾನೋಕ್ತಿ 22:6) ತಮ್ಮ ಮಕ್ಕಳಿಗೆ ಮನೆಯಲ್ಲೇ ವಿದ್ಯಾಭ್ಯಾಸಮಾಡಿಸಲು ಆರಿಸಿಕೊಂಡಿರುವವರ ವಿಷಯದಲ್ಲೇನು?b ಅನೇಕರು ಪ್ರಶಂಸಾರ್ಹ ಕೆಲಸವನ್ನು ಮಾಡಿದ್ದಾರಾದರೂ, ಕೆಲವರಿಗೆ ಆ ಕೆಲಸವು ತಾವು ಭಾವಿಸಿದುದಕ್ಕಿಂತ ಹೆಚ್ಚು ಕಷ್ಟಕರವಾಗಿ ಕಂಡುಬಂದುದರಿಂದ, ಅವರ ಮಕ್ಕಳು ಕಷ್ಟಾನುಭವಿಸಿದ್ದಾರೆ. ಆದಕಾರಣ ನೀವು ಮನೆಯಲ್ಲಿಯೇ ವಿದ್ಯೆ ಕೊಡುವುದನ್ನು ಪರಿಗಣಿಸುತ್ತಿರುವುದಾದರೆ ಖಂಡಿತವಾಗಿ ಕಷ್ಟನಷ್ಟಗಳನ್ನು ಗುಣಿಸಿ ನೋಡಿರಿ. ಅದನ್ನು ಮಾಡಿ ಮುಗಿಸಲು ಆವಶ್ಯಕವಾದ ಕೌಶಲಗಳು ಮತ್ತು ಆತ್ಮಶಿಸ್ತು—ಇವೆರಡೂ ನಿಮಗಿವೆಯೊ ಎಂಬುದನ್ನು ವಾಸ್ತವಿಕವಾಗಿ ತೂಗಿ ನೋಡಿರಿ.—ಲೂಕ 14:28.
‘ಮಹಾಪದವಿಯನ್ನು ನಿರೀಕ್ಷಿಸಬೇಡ’
14, 15. (ಎ) ಬಾರೂಕನು ತನ್ನ ಆತ್ಮಿಕ ಸಮತೆಯನ್ನು ಹೇಗೆ ಕಳೆದುಕೊಂಡನು? (ಬಿ) ‘ಮಹಾಪದವಿಗಳನ್ನು’ ಹುಡುಕುವುದು ಅವನಿಗೆ ಏಕೆ ಮೂರ್ಖತನವಾಗಿತ್ತು?
14 ಈ ವ್ಯವಸ್ಥೆಯ ಅಂತ್ಯ ಇನ್ನೂ ಬಂದಿಲ್ಲದಿರುವುದರಿಂದ, ಕೆಲವರಿಗೆ ಲೋಕವು ನೀಡುವ ವಿಷಯಗಳನ್ನು—ಘನತೆಯ ವೃತ್ತಿಗಳು, ಲಾಭಪ್ರದ ಉದ್ಯೋಗಗಳು ಮತ್ತು ಸಂಪತ್ತು—ಹುಡುಕುವ ಪ್ರವೃತ್ತಿಯಿರಬಹುದು. ಯೆರೆಮೀಯನ ಕಾರ್ಯದರ್ಶಿ ಬಾರೂಕನ ಕುರಿತು ಪರ್ಯಾಲೋಚಿಸಿರಿ. ಅವನು ಪ್ರಲಾಪಿಸಿದ್ದು: “ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ; ನಾನು ನರಳಿ ನರಳಿ ದಣಿದಿದ್ದೇನೆ, ನನಗೆ ಯಾವ ವಿಶ್ರಾಂತಿಯೂ ದೊರಕದು.” (ಯೆರೆಮೀಯ 45:3) ಬಾರೂಕನು ದಣಿದಿದ್ದನು. ಯೆರೆಮೀಯನ ಕಾರ್ಯದರ್ಶಿಯಾಗಿ ಸೇವೆಮಾಡುವುದು ಕಷ್ಟಕರವಾದ, ಒತ್ತಡಭರಿತ ಕೆಲಸವಾಗಿತ್ತು. (ಯೆರೆಮೀಯ 36:14-26) ಮತ್ತು ಒತ್ತಡವು ಅಂತ್ಯವಿಲ್ಲದ್ದಾಗಿ ತೋರಿತು. ಯೆರೂಸಲೇಮು ನಾಶಗೊಳ್ಳಲು ಇನ್ನೂ 18 ವರ್ಷಗಳಿದ್ದವು.
15 ಯೆಹೋವನು ಬಾರೂಕನಿಗೆ ಹೇಳಿದ್ದು: “ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆಮಾಡುವೆನು. ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ.” ಬಾರೂಕನು ಸಮತೆಯನ್ನು ಕಳೆದುಕೊಂಡಿದ್ದನು. ಅವನು ‘ಮಹಾಪದವಿಯನ್ನು,’ ಪ್ರಾಯಶಃ ಸಂಪತ್ತು, ಪ್ರಾಧಾನ್ಯ ಅಥವಾ ಪ್ರಾಪಂಚಿಕ ಭದ್ರತೆಯನ್ನು ಹುಡುಕಲು ತೊಡಗಿದ್ದನು. ಯೆಹೋವನು ‘ಭೂಮಂಡಲವನ್ನೇ ಕಿತ್ತುಹಾಕುತ್ತಿದ್ದುದರಿಂದ’ ಅಂತಹ ವಿಷಯಗಳನ್ನು ಹುಡುಕುವುದರಿಂದ ಏನು ಪ್ರಯೋಜನವಿತ್ತು? ಆದಕಾರಣ ಯೆಹೋವನು ಬಾರೂಕನಿಗೆ ಈ ಸಮಚಿತ್ತಕ್ಕೆ ತರುವ ಜ್ಞಾಪನವನ್ನು ಕೊಟ್ಟನು: “ಆಹಾ, ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು; ಆದರೆ ನೀನು ಎಲ್ಲಿಗೆ ಹೋದರೂ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವದಕ್ಕೆ ನಿನಗೆ ಅವಕಾಶ ಕೊಡುವೆನು.” ಪ್ರಾಪಂಚಿಕ ಸಂಪತ್ತು ಯೆರೂಸಲೇಮಿನ ನಾಶನವನ್ನು ಪಾರಾಗಿ ಉಳಿಯದು! ಅವನ “ಪ್ರಾಣ” ರಕ್ಷಣೆಯ ಖಾತರಿಯನ್ನು ಮಾತ್ರ ಯೆಹೋವನು ಕೊಟ್ಟನು.—ಯೆರೆಮೀಯ 45:4, 5.
16. ಬಾರೂಕನ ಅನುಭವದಿಂದ ಇಂದು ಯೆಹೋವನ ಜನರು ಯಾವ ಪಾಠವನ್ನು ಕಲಿಯಬಲ್ಲರು?
16 ಯೆಹೋವನ ತಿದ್ದುಪಾಟಿಗೆ ಬಾರೂಕನು ಕಿವಿಗೊಟ್ಟನು. ಮತ್ತು ಯೆಹೋವನ ವಚನಾನುಸಾರ ಬಾರೂಕನು ತನ್ನ ಪ್ರಾಣದೊಂದಿಗೆ ಪಾರಾದನು. (ಯೆರೆಮೀಯ 43:6, 7) ಇಂದು ಯೆಹೋವನ ಜನರಿಗೆ ಇದು ಎಂತಹ ಶಕ್ತಿಯುಳ್ಳ ಪಾಠವಾಗಿದೆ! ಇದು ನಮಗಾಗಿ ‘ಮಹಾಪದವಿಯನ್ನು ನಿರೀಕ್ಷಿಸುವ’ ಸಮಯವಲ್ಲ. ಏಕೆ? ಏಕೆಂದರೆ, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ.”—1 ಯೋಹಾನ 2:17.
ಉಳಿದ ಸಮಯದ ಅತ್ಯುತ್ತಮ ಉಪಯೋಗ
17, 18. (ಎ) ನಿನೆವೆಯವರು ಪಶ್ಚಾತ್ತಾಪಪಟ್ಟಾಗ ಯೋನನು ಹೇಗೆ ಪ್ರತಿವರ್ತಿಸಿದನು? (ಬಿ) ಯೆಹೋವನು ಯೋನನಿಗೆ ಯಾವ ಪಾಠವನ್ನು ಕಲಿಸಿದನು?
17 ಹಾಗಾದರೆ, ಉಳಿದಿರುವ ಸಮಯದ ಅತ್ಯುತ್ತಮ ಉಪಯೋಗವನ್ನು ನಾವು ಹೇಗೆ ಮಾಡಬಲ್ಲೆವು? ಪ್ರವಾದಿ ಯೋನನ ಅನುಭವದಿಂದ ಕಲಿಯಿರಿ. ಅವನು “ನಿನೆವೆಗೆ ಹೋದನು. . . . ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು ಎಂದು ಸಾರತೊಡಗಿದನು.” ಯೋನನ ಆಶ್ಚರ್ಯಕ್ಕೆ, ನಿನೆವೆಯವರು ಅವನ ಸಂದೇಶಕ್ಕೆ ಪ್ರತಿಕ್ರಿಯಿಸಿ ಪಶ್ಚಾತ್ತಾಪಪಟ್ಟರು! ಯೆಹೋವನು ನಗರವನ್ನು ನಾಶಮಾಡುವುದನ್ನು ತಡೆದುಹಿಡಿದನು. ಯೋನನ ಪ್ರತಿಕ್ರಿಯೆಯೊ? “ಯೆಹೋವನೇ, ನನ್ನ ಪ್ರಾಣವನ್ನು ತೆಗೆ; ನಾನು ಬದುಕುವದಕ್ಕಿಂತ ಸಾಯುವದೇ ಲೇಸು.”—ಯೋನ 3:3, 4; 4:3.
18 ಆಗ ಯೆಹೋವನು ಯೋನನಿಗೆ ಒಂದು ಪ್ರಮುಖ ಪಾಠವನ್ನು ಕಲಿಸಿದನು. “ಯೆಹೋವನು ಯೋನನ ಮೇಲ್ಗಡೆ ಒಂದು ಸೋರೆಗಿಡವು ಹಬ್ಬಿ ಅವನ ತಲೆಗೆ ನೆರಳಾಗಿ . . . ಏರ್ಪಡಿಸಿದನು. ಆ ಸೋರೆಗಿಡದಿಂದ ಯೋನನಿಗೆ ಬಹು ಸಂತೋಷವಾಯಿತು.” ಆದರೆ ಆ ಸಸಿಯು ಬೇಗನೆ ಒಣಗಿಹೋದಾಗ ಯೋನನ ಸಂತೋಷ ಕ್ಷಣಿಕವಾಗಿ ಪರಿಣಮಿಸಿತು. ಯೋನನು ತನ್ನ ಅನಾನುಕೂಲ್ಯದ ವಿಷಯದಲ್ಲಿ “ಸಿಟ್ಟು”ಗೊಂಡನು. ಯೆಹೋವನು ತನ್ನ ಮುಖ್ಯಾರ್ಥವನ್ನು ಮನಸ್ಸಿಗೆ ನಾಟಿಸಿ ಹೇಳಿದ್ದು: “ಇಂಥ ಗಿಡಕ್ಕಾಗಿ ನೀನು ಕನಿಕರಪಟ್ಟಿರುವಲ್ಲಿ ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ.”—ಯೋನ 4:6, 7, 9-11.
19. ಯಾವ ಸ್ವವಿಚಾರಾಸಕ್ತ ಯೋಚನಾಸರಣಿಯನ್ನು ನಾವು ದೂರವಿರಿಸಲು ಬಯಸಬೇಕು?
19 ಯೋನನ ತರ್ಕವು ಎಷ್ಟು ಸ್ವವಿಚಾರಾಸಕ್ತವಾಗಿತ್ತು! ಅವನು ಒಂದು ಸಸಿಗಾಗಿ ಸಂತಾಪವನ್ನು ಸೂಚಿಸಿದರೂ ನಿನೆವೆಯ ಜನರಿಗಾಗಿ—ಆತ್ಮಿಕ ಮಾತುಗಳಲ್ಲಿ, ‘ಬಲಗೈ ಮತ್ತು ಎಡಗೈಯ ಮಧ್ಯೆ ವ್ಯತ್ಯಾಸ ತಿಳಿಯದಿದ್ದ’ ಜನರಿಗಾಗಿ—ಅವನು ಸ್ವಲ್ಪವೂ ಸಹಾನುಭೂತಿಯನ್ನು ತೋರಿಸಲಿಲ್ಲ. ನಾವೂ ಅದರಂತೆ, ಈ ದುಷ್ಟ ಲೋಕದ ನಾಶನಕ್ಕಾಗಿ ಯೋಗ್ಯವಾಗಿಯೇ ಹಂಬಲಿಸಬಹುದು! (2 ಥೆಸಲೊನೀಕ 1:8) ಆದರೆ ಹಾಗೆ ಕಾಯುತ್ತಿರುವಾಗ ನಮಗೆ, ಆತ್ಮಿಕವಾಗಿ ‘ಬಲಗೈ ಮತ್ತು ಎಡಗೈಯ ಮಧ್ಯೆ ವ್ಯತ್ಯಾಸ ತಿಳಿಯದಿರುವ’ ಪ್ರಾಮಾಣಿಕ ಹೃದಯಿಗಳಿಗೆ ಸಹಾಯ ನೀಡುವ ಜವಾಬ್ದಾರಿಯಿದೆ. (ಮತ್ತಾಯ 9:36; ರೋಮಾಪುರ 10:13-15) ಸಾಧ್ಯವಿರುವಷ್ಟು ಹೆಚ್ಚು ಜನರು ಯೆಹೋವನ ಕುರಿತ ಅಮೂಲ್ಯ ಜ್ಞಾನವನ್ನು ಪಡೆಯುವರೆ ಸಹಾಯಮಾಡಲು ನೀವು ಉಳಿದಿರುವ ಅಲ್ಪ ಸಮಯವನ್ನು ಬಳಸುವಿರೊ? ಒಬ್ಬನು ಜೀವವನ್ನು ಸಂಪಾದಿಸುವಂತೆ ಸಹಾಯಮಾಡುವುದರಲ್ಲಿರುವ ಆನಂದಕ್ಕೆ ಯಾವ ಉದ್ಯೋಗವು ತಾನೆ ಎಂದಾದರೂ ಸಾಟಿಯಾಗಬಲ್ಲದು?
“ಚಿತ್ತಸ್ವಾಸ್ಥ್ಯ” ಉಳ್ಳವರಾಗಿ ಬದುಕುತ್ತ ಮುಂದುವರಿಯಿರಿ
20, 21. (ಎ) ಮುಂಬರುವ ದಿನಗಳಲ್ಲಿ ನಾವು “ಚಿತ್ತಸ್ವಾಸ್ಥ್ಯ”ವನ್ನು ಪ್ರದರ್ಶಿಸಬಲ್ಲ ಕೆಲವು ವಿಧಗಳಾವುವು? (ಬಿ) “ಚಿತ್ತಸ್ವಾಸ್ಥ್ಯ”ದಿಂದ ಬದುಕುವುದರಿಂದ ಯಾವ ಆಶೀರ್ವಾದಗಳು ಬರುವುವು?
20 ಸೈತಾನನ ವ್ಯವಸ್ಥೆಯು ನಾಶನಕ್ಕೆ ದುಮುಕುತ್ತ ಹೋಗುವಾಗ ಹೊಸ ಪಂಥಾಹ್ವಾನಗಳು ನಮ್ಮನ್ನು ಎದುರಿಸುವುದು ಖಂಡಿತ. ಎರಡನೆಯ ತಿಮೊಥೆಯ 3:13 ಮುಂತಿಳಿಸುವುದು: “ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” ಆದರೆ “ನೀವು ಮನಗುಂದಿದವರಾಗಿ ಬೇಸರಗೊಳ್ಳ”ಬೇಡಿರಿ. (ಇಬ್ರಿಯ 12:3) ಬಲಕ್ಕಾಗಿ ಯೆಹೋವನ ಮೇಲೆ ಆಶ್ರಯಿಸಿರಿ. (ಫಿಲಿಪ್ಪಿ 4:13) ನಮ್ಯರಾಗಿರಲು, ಗತ ವಿಷಯಗಳಿಗೆ ಲಕ್ಷ್ಯಕೊಡುತ್ತ ಹೋಗುವ ಬದಲು, ಕೆಡುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಕಲಿಯಿರಿ. (ಪ್ರಸಂಗಿ 7:10) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಮಾರ್ಗದರ್ಶನಕ್ಕೆ ಸಮವಾಗಿ ಹೆಜ್ಜೆಹಾಕುತ್ತ, ಪ್ರಾಯೋಗಿಕ ವಿವೇಕವನ್ನು ಉಪಯೋಗಿಸಿರಿ.—ಮತ್ತಾಯ 24:45-47.
21 ಉಳಿದಿರುವ ಸಮಯವು ಎಷ್ಟೆಂದು ನಮಗೆ ತಿಳಿಯದು. ಆದರೂ ನಾವು ಭರವಸೆಯಿಂದ, “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ” ಎಂದು ಹೇಳಬಲ್ಲೆವು. ಆ ಅಂತ್ಯವು ಬರುವ ತನಕ, ನಾವು ಒಬ್ಬರೊಂದಿಗೊಬ್ಬರು ಮಾಡುವ ವ್ಯವಹಾರಗಳಲ್ಲಿ, ನಮ್ಮ ಕುಟುಂಬಗಳನ್ನು ಪರಾಮರಿಸುವ ವಿಧದಲ್ಲಿ ಮತ್ತು ನಮ್ಮ ಐಹಿಕ ಜವಾಬ್ದಾರಿಗಳಲ್ಲಿ “ಚಿತ್ತಸ್ವಾಸ್ಥ್ಯ”ದಿಂದ ಜೀವಿಸೋಣ. ಹಾಗೆ ಮಾಡುವ ಮೂಲಕ, ನಾವು ಅಂತಿಮವಾಗಿ “ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ” ಕಂಡುಬರುವೆವು ಎಂಬ ದೃಢಭರವಸೆಯು ನಮ್ಮೆಲ್ಲರಿಗಿರಸಾಧ್ಯವಿದೆ!—2 ಪೇತ್ರ 3:14.
[ಅಧ್ಯಯನ ಪ್ರಶ್ನೆಗಳು]
a ಉದಾಹರಣೆಗೆ, ಅಮೆರಿಕದಲ್ಲಿ ಅನೇಕರಿಗೆ, ಅದು ದುಬಾರಿ ಪ್ರವೃತ್ತಿಯದ್ದಾಗಿರುವುದಾದರೂ ಆರೋಗ್ಯ ವಿಮೆಯಿದೆ. ಕುಟುಂಬಗಳಿಗೆ ವೈದ್ಯಕೀಯ ವಿಮಾರಕ್ಷಣೆಯಿರುವಲ್ಲಿ ಕೆಲವು ಡಾಕ್ಟರರು ಅರಕ್ತ ಅನ್ಯೌಷಧಿಗಳನ್ನು ಪರಿಗಣಿಸಲು ಹೆಚ್ಚು ಇಷ್ಟಪಡುತ್ತಾರೆಂದು ಕೆಲವು ಸಾಕ್ಷಿ ಕುಟುಂಬಗಳು ಕಂಡುಹಿಡಿದಿವೆ. ಅನೇಕ ವೈದ್ಯರು ಸೀಮಿತ ವಿಮಾಯೋಜನೆಗಳು ಅಥವಾ ಸರಕಾರೀ ಆರೋಗ್ಯ ವಿಮಾರಕ್ಷಣೆಯು ಅನುಮತಿಸುವ ಹಣದ ಮೊತ್ತವನ್ನು ಅಂಗೀಕರಿಸುವರು.
b ಗೃಹ ಶಿಕ್ಷಣವನ್ನು ಒಬ್ಬನು ಮುಂದುವರಿಸುತ್ತಾನೊ ಇಲ್ಲವೊ ಎಂಬುದು ವೈಯಕ್ತಿಕ ತೀರ್ಮಾನ. ಎಚ್ಚರ! ಪತ್ರಿಕೆಯ ಜುಲೈ 8, 1993ರ ಸಂಚಿಕೆಯಲ್ಲಿ ತೋರಿಬಂದ “ಗೃಹ ಶಾಲಾ ಶಿಕ್ಷಣ—ಅದು ನಿಮಗೊ?” ಎಂಬ ಲೇಖನ ನೋಡಿ.
ಪುನರ್ವಿಮರ್ಶೆಗಾಗಿ ಮುಖ್ಯಾಂಶಗಳು
◻ ನಮ್ಮ ವೈಯಕ್ತಿಕ ಸಂಬಂಧಗಳಲ್ಲಿ ನಾವು “ಚಿತ್ತಸ್ವಾಸ್ಥ್ಯ”ವನ್ನು ಹೇಗೆ ತೋರಿಸಬಲ್ಲೆವು?
◻ ನಮ್ಮ ಕುಟುಂಬ ಜವಾಬ್ದಾರಿಗಳನ್ನು ಪರಾಮರಿಸುವುದರಲ್ಲಿ ಸಮತೆಯನ್ನು ನಾವು ಹೇಗೆ ತೋರಿಸಬಲ್ಲೆವು?
◻ ತಮ್ಮ ಮಕ್ಕಳ ಐಹಿಕ ವಿದ್ಯೆಯಲ್ಲಿ ಹೆತ್ತವರು ಏಕೆ ಆಸಕ್ತಿ ವಹಿಸಬೇಕು?
◻ ಬಾರೂಕ ಮತ್ತು ಯೋನರಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ?
[ಪುಟ 18 ರಲ್ಲಿರುವ ಚಿತ್ರ]
ಗಂಡಹೆಂಡತಿ ಒಬ್ಬರೊಡನೊಬ್ಬರು ಕೆಟ್ಟದ್ದಾಗಿ ವರ್ತಿಸುವಾಗ, ಯೆಹೋವನೊಂದಿಗಿರುವ ತಮ್ಮ ಸಂಬಂಧವನ್ನು ಅವರು ಕೆಡಿಸಿಕೊಳ್ಳುತ್ತಾರೆ
[ಪುಟ 20 ರಲ್ಲಿರುವ ಚಿತ್ರ]
ಹೆತ್ತವರು ತಮ್ಮ ಮಕ್ಕಳ ವಿದ್ಯೆಯಲ್ಲಿ ಆಸಕ್ತಿ ವಹಿಸಬೇಕು