ಸಿದ್ಧಪಡಿಸಿಕೊಂಡ ಹೃದಯದಿಂದ ಯೆಹೋವನನ್ನು ಹುಡುಕುವುದು
ಇಸ್ರಾಯೇಲ್ಯ ಯಾಜಕನಾದ ಎಜ್ರನು ಒಬ್ಬ ಪ್ರಮುಖ ಸಂಶೋಧಕನು, ವಿದ್ವಾಂಸಕನು, ನಕಲುಗಾರನು ಮತ್ತು ನಿಯಮಶಾಸ್ತ್ರದ ಶಿಕ್ಷಕನೂ ಆಗಿದ್ದನು. ಇಂದಿನ ಕ್ರೈಸ್ತರಿಗೆ ಪೂರ್ಣ ಹೃದಯದಿಂದ ಸೇವೆಯನ್ನು ಮಾಡುವುದರಲ್ಲಿ ಅವನು ಅತ್ಯುತ್ತಮ ಉದಾಹರಣೆಯಾಗಿದ್ದಾನೆ. ಹೇಗೆ? ಹೇಗೆಂದರೆ, ಅವನು ಸುಳ್ಳು ದೇವರುಗಳ ಮತ್ತು ದೆವ್ವಗಳ ಆರಾಧನೆಯಿಂದ ತುಂಬಿದ್ದ ಪಟ್ಟಣವಾದ ಬಾಬೆಲಿನಲ್ಲಿದ್ದಾಗಲೂ ತನ್ನ ದೇವಭಕ್ತಿಯನ್ನು ಕಾಪಾಡಿಕೊಂಡಿದ್ದನು.
ಎಜ್ರನ ದೇವಭಕ್ತಿಯು ಆಕಸ್ಮಿಕವಾಗಿ ಉಂಟಾಗಲಿಲ್ಲ. ಅವನು ಅದಕ್ಕಾಗಿ ಶ್ರಮಪಟ್ಟು ಕೆಲಸಮಾಡಿದನು. ಆದುದರಿಂದಲೇ, ಅವನು “ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ, ಅದನ್ನು ಅನುಸರಿಸಲಿಕ್ಕಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನು” ಎಂದು ನಮಗೆ ಹೇಳುತ್ತಾನೆ.—ಎಜ್ರ 7:10, NW.
ಎಜ್ರನಂತೆ, ಇಂದು ಯೆಹೋವನ ಜನರು ಸತ್ಯಾರಾಧನೆಗೆ ವಿರೋಧವನ್ನು ತೋರಿಸುವ ಲೋಕದಲ್ಲಿ ಜೀವಿಸುತ್ತಿರುವುದಾದರೂ, ಯೆಹೋವನು ತಮ್ಮಿಂದ ಕೇಳಿಕೊಳ್ಳುವುದೆಲ್ಲವನ್ನೂ ಮಾಡಲು ಅವರು ಬಯಸುತ್ತಾರೆ. ಆದುದರಿಂದ, ನಾವು ಕೂಡ ನಮ್ಮ ಆಲೋಚನೆಗಳನ್ನು, ಮನೋಭಾವಗಳನ್ನು, ಆಕಾಂಕ್ಷೆಗಳನ್ನು ಮತ್ತು ಪ್ರೇರಣೆಗಳನ್ನು ಒಳಗೊಂಡಿರುವ ಆಂತರಿಕ ವ್ಯಕ್ತಿಯಾಗಿರುವ ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಸಾಧ್ಯವಿರುವ ಮತ್ತು ‘ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ, ಅದನ್ನು ಅನುಸರಿಸುವ’ ಮಾರ್ಗಗಳನ್ನು ಪರೀಕ್ಷಿಸೋಣ.
ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳುವುದು
“ಸಿದ್ಧಪಡಿಸು” ಎಂಬುದರ ಅರ್ಥವು, “ಒಂದು ಉದ್ದೇಶಕ್ಕಾಗಿ ಮುಂಚಿತವಾಗಿಯೇ ತಯಾರಿಮಾಡುವುದು ಎಂದಾಗಿದೆ. ಹೀಗೆ ಅದು ಮುಂದೊಂದು ದಿನ ಒಂದು ವಿಶೇಷ ಉಪಯೋಗಕ್ಕೆ, ಅನ್ವಯಕ್ಕೆ ಅಥವಾ ಮನೋವೃತ್ತಿಯನ್ನು ಸರಿಯಾದ ಸ್ಥಿತಿಯಲ್ಲಿ ಇಡುವುದಕ್ಕೆ ಸಹಾಯಕಾರಿಯಾಗುತ್ತದೆ.” ಹೌದು, ನೀವು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡವರೂ ಮತ್ತು ಯೆಹೋವನಿಗೆ ನಿಮ್ಮ ಜೀವಿತವನ್ನು ಸಮರ್ಪಿಸಿಕೊಂಡವರೂ ಆಗಿರುವುದಾದರೆ, ನಿಮ್ಮ ಹೃದಯವು ನಿಜವಾಗಿಯೂ ಸಿದ್ಧಪಡಿಸಿಕೊಂಡ ಸ್ಥಿತಿಯಲ್ಲಿಡಲ್ಪಟ್ಟಿದೆ ಎಂಬುದು ರುಜುವಾಗುತ್ತದೆ ಹಾಗೂ ಬಿತ್ತುವವನ ಸಾಮ್ಯದ ವಿಷಯದಲ್ಲಿ ಯೇಸು ಹೇಳಿದ “ಒಳ್ಳೆಯ ನೆಲ”ಕ್ಕೆ ಅದನ್ನು ಹೋಲಿಸಬಹುದು.—ಮತ್ತಾಯ 13:18-23.
ಹಾಗಿದ್ದರೂ, ನಮ್ಮ ಹೃದಯಕ್ಕೆ ನಾವು ಸತತವಾದ ಗಮನವನ್ನು ಕೊಡುವ ಮತ್ತು ಅಪರಿಪೂರ್ಣ ಸ್ಥಿತಿಯಿಂದ ಅದನ್ನು ಶುದ್ಧೀಕರಿಸುವ ಅಗತ್ಯವಿದೆ. ಯಾಕೆ? ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ತೋಟವೊಂದರಲ್ಲಿರುವ ಕಳೆಗಳಂತೆ ಹಾನಿಕರ ಪ್ರವೃತ್ತಿಗಳು ಸುಲಭವಾಗಿ ಬೇರೂರುವ ಸಾಧ್ಯತೆಯಿದೆ. ವಿಶೇಷವಾಗಿ ಈ “ಕಡೇ ದಿವಸಗಳಲ್ಲಿ” ಸೈತಾನನ ವ್ಯವಸ್ಥೆಯ “ವಾಯುಮಂಡಲ”ವು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಶಾರೀರಿಕ ಆಲೋಚನೆಯ ಹಾನಿಕರ ಬೀಜಗಳಿಂದ ತುಂಬಿಹೋಗಿದೆ. (2 ತಿಮೊಥೆಯ 3:1-5; ಎಫೆಸ 2:2) ಎರಡನೆಯ ಕಾರಣವು, ಸ್ವತಃ ಮಣ್ಣಿನ ಕುರಿತಾಗಿದೆ. ಗಮನಕೊಡದೇ ಹೋದಲ್ಲಿ, ಮಣ್ಣು ಬೇಗನೇ ಒಣಗಿಹೋಗಬಹುದು, ಗಟ್ಟಿಯಾಗಬಹುದು ಮತ್ತು ಬಂಜರಾಗಬಹುದು ಅಥವಾ ತುಂಬ ಜನರು ತೋಟದಲ್ಲೆಲ್ಲಾ ಅಜಾಗರೂಕರಾಗಿ ನಡೆದು ಮಣ್ಣನ್ನು ತುಳಿಯುತ್ತಾ, ಅದನ್ನು ಗಟ್ಟಿಯಾದ ಮುದ್ದೆಯಂತೆ ಮಾಡಬಹುದು. ನಮ್ಮ ಹೃದಯವೆಂಬ ಸಾಂಕೇತಿಕ ಮಣ್ಣಿನ ವಿಷಯದಲ್ಲೂ ಇದು ಸತ್ಯವಾಗಿದೆ. ನಿರ್ಲಕ್ಷಿಸಲ್ಪಟ್ಟಲ್ಲಿ ಅಥವಾ ನಮ್ಮ ಆತ್ಮಿಕ ಹಿತಾಸಕ್ತಿಯ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಜನರಿಂದ ತುಳಿಯಲ್ಪಡುತ್ತಿರುವುದಾದರೆ, ಅದು ಬಂಜರು ನೆಲದಂತಾಗಬಹುದು.
ಹಾಗಾದರೆ, ಬೈಬಲಿನ ಈ ಸಲಹೆಯನ್ನು ನಾವೆಲ್ಲರೂ ಅನ್ವಯಿಸಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”—ಜ್ಞಾನೋಕ್ತಿ 4:23.
ನಮ್ಮ ಹೃದಯದ “ಮಣ್ಣನ್ನು” ಸಮೃದ್ಧಗೊಳಿಸುವ ಅಂಶಗಳು
ನಮ್ಮ ಹೃದಯವೆಂಬ “ಮಣ್ಣನ್ನು” ಸಮೃದ್ಧಗೊಳಿಸಿ, ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗಿರುವ ಕೆಲವು ಅಂಶಗಳನ್ನು ಅಥವಾ ಗುಣಲಕ್ಷಣಗಳನ್ನು ನಾವೀಗ ಪರಿಗಣಿಸೋಣ. ನಮ್ಮ ಹೃದಯವನ್ನು ಸುಧಾರಿಸುವ ಅನೇಕ ವಿಷಯಗಳು ಇವೆ ಎಂಬುದು ನಿಜ. ಆದರೆ ನಾವಿಲ್ಲಿ ಆರು ವಿಷಯಗಳನ್ನು ಮಾತ್ರ ಪರಿಗಣಿಸೋಣ: ನಮ್ಮ ಆತ್ಮಿಕ ಅಗತ್ಯಗಳ ಅರಿವು, ದೀನತೆ, ಪ್ರಾಮಾಣಿಕತೆ, ದೈವಿಕ ಭಯ, ನಂಬಿಕೆ ಮತ್ತು ಪ್ರೀತಿ.
ಯೇಸು ಹೇಳಿದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ದೈಹಿಕ ಹಸಿವು ಊಟವನ್ನು ಮಾಡುವ ಅಗತ್ಯವನ್ನು ನಮಗೆ ನೆನಪಿಸುವಂತೆಯೇ, ನಮ್ಮ ಆತ್ಮಿಕ ಅಗತ್ಯಗಳ ಅರಿವು ಆತ್ಮಿಕ ಆಹಾರಕ್ಕಾಗಿರುವ ಹಸಿವನ್ನು ಉಂಟುಮಾಡುತ್ತದೆ. ಸ್ವಾಭಾವಿಕವಾಗಿಯೇ, ಮಾನವರು ಇಂತಹ ಆಹಾರಕ್ಕಾಗಿ ಹಂಬಲ ಉಳ್ಳವರಾಗಿದ್ದಾರೆ. ಯಾಕೆಂದರೆ ಅದು ಜೀವಿತಕ್ಕೆ ಅರ್ಥ ಮತ್ತು ಉದ್ದೇಶವನ್ನು ಕೊಡುತ್ತದೆ. ಸೈತಾನನ ವಿಷಯಗಳ ವ್ಯವಸ್ಥೆಯಿಂದ ಬರುವ ಒತ್ತಡಗಳು ಅಥವಾ ಅಧ್ಯಯನಮಾಡಬೇಕಾಗಿರುವ ಸಮಯದಲ್ಲಿ ಶುದ್ಧ ಸೋಮಾರಿಗಳಾಗಿರುವುದು ಈ ಅಗತ್ಯಕ್ಕಾಗಿರುವ ನಮ್ಮ ಪ್ರಜ್ಞೆಯನ್ನು ನಂದಿಸಬಹುದು. ಹೀಗಿದ್ದರೂ, ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”—ಮತ್ತಾಯ 4:4.
ಅಕ್ಷರಾರ್ಥ ರೀತಿಯಲ್ಲಿ ನೋಡುವುದಾದರೂ ಕ್ರಮದ, ಸಂತುಲಿತ ಮತ್ತು ಆರೋಗ್ಯಕರ ಆಹಾರವು ದೈಹಿಕ ಆರೋಗ್ಯವನ್ನು ಉಂಟುಮಾಡುತ್ತದೆ. ಅಷ್ಟುಮಾತ್ರವಲ್ಲ, ಮುಂದಿನ ಆಹಾರವನ್ನು ತೆಗೆದುಕೊಳ್ಳುವ ಸಮಯ ಬರುವಾಗ ಹಸಿವನ್ನು ನೀಗಿಸಿಕೊಳ್ಳುವಂತೆಯೂ ಅದು ನಮ್ಮ ಶರೀರವನ್ನು ಸಿದ್ಧಗೊಳಿಸುತ್ತದೆ. ಇದು ಆತ್ಮಿಕ ಅರ್ಥದಲ್ಲೂ ಸತ್ಯವಾಗಿದೆ. ನೀವು ನಿಮ್ಮನ್ನು ವ್ಯಾಸಂಗನಿಷ್ಠರಾಗಿರುವ ವ್ಯಕ್ತಿಯಾಗಿ ಪರಿಗಣಿಸದಿರಬಹುದು. ಆದರೆ, ದೇವರ ವಾಕ್ಯವನ್ನು ಪ್ರತಿದಿನವೂ ಓದುವ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಕ್ರಮವಾಗಿ ಅಭ್ಯಾಸಿಸುವ ವಾಡಿಕೆಯನ್ನು ನೀವು ಮಾಡುವುದಾದರೆ, ಆಗ ನಿಮ್ಮ ಹಸಿವು ಹೆಚ್ಚುತ್ತಾ ಇರುವುದನ್ನು ನೀವು ಕಂಡುಕೊಳ್ಳುವಿರಿ. ವಾಸ್ತವದಲ್ಲಿ, ಬೈಬಲ್ ಅಭ್ಯಾಸಮಾಡುವ ಸಮಯಕ್ಕಾಗಿ ನೀವು ಉತ್ಸಾಹದಿಂದ ಎದುರುನೋಡುವಿರಿ. ಆದುದರಿಂದ ನೀವು ಸುಲಭವಾಗಿ ಬಿಟ್ಟುಕೊಡಬೇಡಿರಿ; ಆರೋಗ್ಯಕರ ಆತ್ಮಿಕ ಹಸಿವನ್ನು ಬೆಳೆಸಿಕೊಳ್ಳಲು ಕಷ್ಟಪಟ್ಟು ಕೆಲಸಮಾಡಿರಿ.
ದೀನತೆಯು ಹೃದಯವನ್ನು ಮೃದುಗೊಳಿಸುತ್ತದೆ
ಸಿದ್ಧಪಡಿಸಿಕೊಂಡ ಹೃದಯವನ್ನು ಹೊಂದಿರುವುದರಲ್ಲಿ ಇನ್ನೊಂದು ಮಹತ್ವದ ಅಂಶವು ದೀನತೆ ಆಗಿದೆ. ಯಾಕೆಂದರೆ ಅದು ನಮ್ಮನ್ನು ಕಲಿಸಲು ಸಾಧ್ಯವಿರುವವರನ್ನಾಗಿ ಮಾಡುತ್ತದೆ ಹಾಗೂ ಪ್ರೀತಿಯುಳ್ಳ ಸಲಹೆ ಮತ್ತು ತಿದ್ದುಪಾಟನ್ನು ಹೆಚ್ಚು ಸಿದ್ಧಮನಸ್ಸಿನಿಂದ ಸ್ವೀಕರಿಸಲು ಸಹ ಅದು ನಮಗೆ ಸಹಾಯಮಾಡುತ್ತದೆ. ರಾಜನಾದ ಯೋಷೀಯನ ಅತ್ಯುತ್ತಮ ಉದಾಹರಣೆಯನ್ನು ಪರಿಗಣಿಸಿರಿ. ಅವನ ಆಳ್ವಿಕೆಯ ಸಮಯದಲ್ಲಿ ಮೋಶೆಯ ಮೂಲಕ ಕೊಡಲಾದ ದೇವರ ನಿಯಮದಿಂದ ಕೂಡಿದ ದಾಖಲೆಯು ಅವನಿಗೆ ಸಿಕ್ಕಿತು. ಯೋಷೀಯನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿಸಿಕೊಂಡಾಗ ಮತ್ತು ತನ್ನ ಪಿತೃಗಳು ಶುದ್ಧಾರಾಧನೆಯಿಂದ ಎಷ್ಟು ದೂರ ಹೋಗಿದ್ದರೆಂಬುದನ್ನು ಮನಗಂಡಾಗ, ಅವನು ಬಟ್ಟೆಗಳನ್ನು ಹರಿದುಕೊಂಡು, ಯೆಹೋವನ ಮುಂದೆ ಕಣ್ಣೀರನ್ನು ಸುರಿಸಿದನು. ದೇವರ ವಾಕ್ಯವು ಅರಸನ ಹೃದಯವನ್ನು ಇಷ್ಟು ಆಳವಾಗಿ ಯಾಕೆ ಸ್ಪರ್ಶಿಸಿತು? ವೃತ್ತಾಂತವು ಹೇಳುವಂತೆಯೇ, ಅವನ ಹೃದಯವು “ತಗ್ಗಿ”ದ್ದಾಗಿದ್ದರಿಂದ ಯೆಹೋವನ ಮಾತುಗಳನ್ನು ಕೇಳಿಸಿಕೊಂಡಾಗ ಅವನು ದೀನಭಾವವನ್ನು ತೋರಿಸಿದನು. ಯೆಹೋವನು ಯೋಷೀಯನ ದೀನ, ಪ್ರತಿಕ್ರಿಯಿಸುವ ಹೃದಯವನ್ನು ಗಮನಿಸಿದನು ಮತ್ತು ಅದೇ ಪ್ರಕಾರ ಅವನನ್ನು ಆಶೀರ್ವದಿಸಿದನು.—2 ಅರಸು 22:11, 18-20.
“ಶಾಸ್ತ್ರಾಭ್ಯಾಸ ಮಾಡದ ಸಾಧಾರಣ”ರಾಗಿದ್ದ ಯೇಸುವಿನ ಶಿಷ್ಯರಿಗೆ ಆತ್ಮಿಕ ಸತ್ಯಗಳನ್ನು ಗ್ರಹಿಸಲು ಮತ್ತು ಅನ್ವಯಿಸಲು ದೀನತೆಯು ಸಾಧ್ಯಮಾಡಿತು. ಆದರೆ ಈ ಸತ್ಯಗಳು “ಲೌಕಿಕ ದೃಷ್ಟಿಯಲ್ಲಿ” ‘ಜ್ಞಾನಿಗಳೂ ಬುದ್ಧಿವಂತರೂ’ ಆಗಿರುವವರ ಗಮನಕ್ಕೆ ಬರಲಿಲ್ಲ. (ಅ. ಕೃತ್ಯಗಳು 4:13; ಲೂಕ 10:21; 1 ಕೊರಿಂಥ 1:26) ಉಳಿದವರು ಯೆಹೋವನ ವಾಕ್ಯವನ್ನು ಸ್ವೀಕರಿಸಲು ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ, ಯಾಕೆಂದರೆ ಅವರ ಹೃದಯಗಳು ಅಹಂಭಾವದಿಂದ ಕಠಿಣವಾಗಿದ್ದವು. ಇದನ್ನು ನೋಡುವಾಗ ಯೆಹೋವನು ಅಹಂಭಾವವನ್ನು ದ್ವೇಷಿಸುತ್ತಾನೆಂಬ ವಿಷಯದಲ್ಲಿ ಕಿಂಚಿತ್ತಾದರೂ ಸಂಶಯವಿದೆಯೇ?—ಜ್ಞಾನೋಕ್ತಿ 8:13; ದಾನಿಯೇಲ 5:20.
ಪ್ರಾಮಾಣಿಕತೆ ಮತ್ತು ದೈವಿಕ ಭಯ
ಯೆರೆಮೀಯನು ಹೀಗೆ ಬರೆದನು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ಈ ವಂಚನೆಯು ತಾನೇ ಅನೇಕ ವಿಧಗಳಲ್ಲಿ ತೋರಿಬರುತ್ತದೆ. ಉದಾಹರಣೆಗೆ, ನಾವು ತಪ್ಪುಮಾಡುವಾಗ ಸ್ವತಃ ನೆಪಗಳನ್ನು ನೀಡುವಾಗಲೂ ಅದು ತೋರಿಬರುತ್ತದೆ. ಸತ್ಯ ವಿಷಯವನ್ನು ಪರಿಗಣಿಸದೆ, ಗಂಭೀರವಾದ ವ್ಯಕ್ತಿತ್ವ ದೋಷಗಳನ್ನು ತರ್ಕಸಮ್ಮತವಾಗಿ ತೇಲಿಸಿಬಿಡುವಾಗಲೂ ಅದು ತೋರಿಬರುತ್ತದೆ. ಆದರೆ, ಪ್ರಾಮಾಣಿಕತೆಯು ನಮ್ಮ ಕುರಿತಾದ ಸತ್ಯವನ್ನು ಎದುರಿಸುವುದರಲ್ಲಿ ನಮಗೆ ನೆರವು ನೀಡುತ್ತದೆ. ಹೀಗೆ ನಾವು ಸುಧಾರಿಸಿಕೊಳ್ಳುವುದಕ್ಕೆ ಸಹಾಯವನ್ನು ಮಾಡುತ್ತಾ, ಈ ವಂಚಕ ಹೃದಯದ ಮೇಲೆ ಜಯವನ್ನು ಸಾಧಿಸುವುದಕ್ಕೆ ನಮಗೆ ಸಹಾಯಮಾಡುತ್ತದೆ. ಈ ಕೆಳಗಿನಂತೆ ಪ್ರಾರ್ಥಿಸಿದಾಗ ಕೀರ್ತನೆಗಾರನು ಇಂತಹ ಪ್ರಾಮಾಣಿಕತೆಯನ್ನು ತೋರಿಸಿದನು: “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.” ಸ್ಪಷ್ಟವಾಗಿಯೇ, ಅಶುದ್ಧ ಪ್ರವೃತ್ತಿಗಳು ತನ್ನಲ್ಲಿವೆಯೆಂಬುದನ್ನು ಕೀರ್ತನೆಗಾರನು ಒಪ್ಪಿಕೊಳ್ಳುವುದನ್ನು ಅದು ಅರ್ಥೈಸಿದ್ದಿರಬಹುದಾದರೂ, ಅವುಗಳ ಮೇಲೆ ಜಯಸಾಧಿಸಲಿಕ್ಕಾಗಿ ಅವನು ಯೆಹೋವನಿಂದ ಪರಿಶೀಲಿಸಲ್ಪಡಲು ಮತ್ತು ಪರೀಕ್ಷಿಸಲ್ಪಡಲು ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡಿದ್ದನು.—ಕೀರ್ತನೆ 17:3; 26:2.
“ಪಾಪದ್ವೇಷವನ್ನು” ಒಳಗೊಂಡಿರುವ ದೈವಿಕ ಭಯವು ಈ ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಬಹಳ ಪ್ರಬಲವಾದ ಸಹಾಯಕವಾಗಿದೆ. (ಜ್ಞಾನೋಕ್ತಿ 8:13) ಯೆಹೋವನ ಪ್ರೀತಿದಯೆ ಮತ್ತು ಒಳ್ಳೇತನವನ್ನು ಗಣ್ಯಮಾಡುತ್ತಿರುವಾಗ, ಯೆಹೋವನು ತನಗೆ ಅವಿಧೇಯರಾಗುವವರಿಗೆ ಶಿಕ್ಷೆಯನ್ನು, ಹೌದು ಮರಣವನ್ನು ವಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆಂಬುದು, ದೇವರಿಗೆ ಭಯಪಡುವ ವ್ಯಕ್ತಿಗೆ ಯಾವಾಗಲೂ ಗೊತ್ತಿರುತ್ತದೆ. ತನಗೆ ಭಯಪಡುವವರು ತನಗೆ ವಿಧೇಯತೆಯನ್ನು ಸಹ ತೋರಿಸುವರೆಂಬ ಸಂಗತಿಯನ್ನು, ಯೆಹೋವನು ಇಸ್ರಾಯೇಲ್ಯರಿಗೆ ಹೀಗೆಂದಾಗ ತೋರಿಸಿದನು: “ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು; ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವದು.”—ಧರ್ಮೋಪದೇಶಕಾಂಡ 5:29.
ಸ್ಪಷ್ಟವಾಗಿಯೇ, ಹೆದರಿಕೆಯಿಂದ ನಾವು ಅಧೀನತೆಯನ್ನು ತೋರಿಸುವುದು ದೈವಿಕ ಭಯದ ಗುರಿಯಾಗಿರುವುದಿಲ್ಲ, ಬದಲಾಗಿ ನಮ್ಮ ಪ್ರೀತಿಯುಳ್ಳ ತಂದೆಯು, ನಮ್ಮ ಅತ್ಯುತ್ತಮ ಹಿತಾಸಕ್ತಿಯನ್ನು ತನ್ನ ಮನಸ್ಸಿನಲ್ಲಿ ಯಾವಾಗಲೂ ಇಟ್ಟುಕೊಂಡಿರುತ್ತಾನೆಂಬ ಅರಿವಿನಿಂದ ಆತನಿಗೆ ವಿಧೇಯರಾಗುವಂತೆ ಅದು ನಮ್ಮನ್ನು ಪ್ರಚೋದಿಸುತ್ತದೆ. ವಾಸ್ತವದಲ್ಲಿ, ಇಂತಹ ದೈವಿಕ ಭಯವು ನಮ್ಮನ್ನು ಉನ್ನತಿಗೇರಿಸುತ್ತದೆ ಮತ್ತು ನಮ್ಮಲ್ಲಿ ಸಂತೋಷವನ್ನು ಉಂಟುಮಾಡುತ್ತದೆ. ಇದು ಯೇಸು ಕ್ರಿಸ್ತನಿಂದ ತಾನೇ ಸಾಕಷ್ಟು ತೋರಿಸಲ್ಪಟ್ಟಿತು.—ಯೆಶಾಯ 11:3; ಲೂಕ 12:5.
ಸಿದ್ಧಪಡಿಸಿಕೊಂಡ ಹೃದಯವು ನಂಬಿಕೆಯಲ್ಲಿ ಸಂಪದ್ಭರಿತವಾಗಿರುತ್ತದೆ
ನಂಬಿಕೆಯಲ್ಲಿ ಬಲವಾಗಿರುವ ಒಂದು ಹೃದಯಕ್ಕೆ, ಯೆಹೋವನು ತನ್ನ ವಾಕ್ಯದಿಂದ ಹೇಳುವ ಅಥವಾ ನಿರ್ದೇಶಿಸುವ ವಿಷಯಗಳೆಲ್ಲವೂ ಯಾವಾಗಲೂ ಸರಿಯಾಗಿರುತ್ತದೆ ಮತ್ತು ಅದು ನಮ್ಮ ಒಳಿತಿಗಾಗಿಯೇ ಆಗಿದೆ ಎಂಬುದು ತಿಳಿದಿರುತ್ತದೆ. (ಯೆಶಾಯ 48:17, 18) ಇಂತಹ ಒಂದು ಹೃದಯವುಳ್ಳ ಒಬ್ಬ ವ್ಯಕ್ತಿಯು ಜ್ಞಾನೋಕ್ತಿ 3:5, 6ರಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ಅನ್ವಯಿಸುವುದರಿಂದ ಬಹಳಷ್ಟು ತೃಪ್ತಿ ಮತ್ತು ಸಂತುಷ್ಟಿಯನ್ನು ಪಡೆದುಕೊಳ್ಳುತ್ತಾನೆ. ಅದು ಹೀಗೆ ಹೇಳುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಆದರೆ ಇದಕ್ಕೆ ವ್ಯತಿರಿಕ್ತವಾಗಿ, ನಂಬಿಕೆಯ ಕೊರತೆಯಿರುವ ಒಂದು ಹೃದಯವು ಯೆಹೋವನಲ್ಲಿ ಭರವಸೆಯಿಡಲು ಇಚ್ಛಿಸುವುದಿಲ್ಲ, ಮತ್ತು ಅದರಲ್ಲೂ ವಿಶೇಷವಾಗಿ ರಾಜ್ಯದ ಅಭಿರುಚಿಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಜೀವನವನ್ನು ಸರಳವಾಗಿರಿಸುವಂತಹ ವಿಷಯಗಳಲ್ಲಿ ತ್ಯಾಗಗಳನ್ನು ಮಾಡುವುದು ಅದರಲ್ಲಿ ಸೇರಿರುವಾಗ ಇಂತಹ ಭರವಸೆಯನ್ನು ತೋರಿಸುವುದಿಲ್ಲ. (ಮತ್ತಾಯ 6:33) ಸಕಾರಣಕ್ಕಾಗಿಯೇ ಯೆಹೋವನು ನಂಬಿಕೆಯಿಲ್ಲದ ಹೃದಯವನ್ನು “ಕೆಟ್ಟ”ದ್ದಾಗಿ ಪರಿಗಣಿಸುತ್ತಾನೆ.—ಇಬ್ರಿಯ 3:12.
ಯೆಹೋವನಲ್ಲಿ ನಮಗಿರುವ ನಂಬಿಕೆಯು ಅನೇಕ ವಿಷಯಗಳಲ್ಲಿ ಪ್ರದರ್ಶಿಸಲ್ಪಡುತ್ತದೆ. ಇದು ನಾವು ನಮ್ಮ ಮನೆಯ ಏಕಾಂತತೆಯಲ್ಲಿ ಮಾಡುವ ವಿಷಯಗಳನ್ನು ಸಹ ಒಳಗೂಡಿಸುತ್ತದೆ. ಉದಾಹರಣೆಗೆ, ಗಲಾತ್ಯ 6:7ರ ಮೂಲತತ್ವವನ್ನು ತೆಗೆದುಕೊಳ್ಳಿರಿ: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” ಈ ಮೂಲತತ್ವದಲ್ಲಿರುವ ನಮ್ಮ ನಂಬಿಕೆಯು, ನಾವು ನೋಡುವ ಚಲನಚಿತ್ರಗಳು, ನಾವು ಓದುವ ಪುಸ್ತಕಗಳು, ನಾವು ಮಾಡುವ ಬೈಬಲ್ ಅಧ್ಯಯನದ ಪ್ರಮಾಣ ಮತ್ತು ನಮ್ಮ ಪ್ರಾರ್ಥನೆಗಳು ಇವೇ ಮುಂತಾದ ವಿಷಯಗಳಲ್ಲಿ ಪ್ರತಿಬಿಂಬಿತವಾಗುತ್ತದೆ. ಹೌದು, ‘ಆತ್ಮನನ್ನು ಕುರಿತು ಬಿತ್ತುವುದಕ್ಕೆ’ ನಮ್ಮನ್ನು ಪ್ರೇರಿಸುವ ಬಲವಾದ ನಂಬಿಕೆಯು, ಯೆಹೋವನ ವಾಕ್ಯವನ್ನು ಸ್ವೀಕರಿಸಲು ಮತ್ತು ಅದಕ್ಕೆ ವಿಧೇಯರಾಗಲು ಸಿದ್ಧಪಡಿಸಿಕೊಂಡ ಹೃದಯವನ್ನು ಹೊಂದಿರುವುದರಲ್ಲಿ ಬಹು ಮುಖ್ಯವಾದ ಅಂಶವಾಗಿದೆ.—ಗಲಾತ್ಯ 6:8.
ಪ್ರೀತಿ—ಅತ್ಯಂತ ಮಹಾನ್ ಗುಣ
ಇತರ ಎಲ್ಲ ಗುಣಗಳಿಗಿಂತಲೂ ಹೆಚ್ಚಾಗಿ ಪ್ರೀತಿಯು ನಮ್ಮ ಹೃದಯವೆಂಬ ಮಣ್ಣನ್ನು ಯೆಹೋವನ ವಾಕ್ಯಕ್ಕೆ ಯಾವಾಗಲೂ ಪ್ರತಿಕ್ರಿಯಿಸುವಂತೆ ಮಾಡುತ್ತದೆ ಎಂಬುದು ನಿಜ. ಹೀಗೆ, ಅಪೊಸ್ತಲ ಪೌಲನು ಪ್ರೀತಿಯನ್ನು ನಂಬಿಕೆ ಮತ್ತು ನಿರೀಕ್ಷೆಯೊಂದಿಗೆ ಹೋಲಿಸುವಾಗ, “ಇವುಗಳಲ್ಲಿ ದೊಡ್ಡದು” ಪ್ರೀತಿಯೇ ಎಂದು ವಿವರಿಸಿದ್ದಾನೆ. (1 ಕೊರಿಂಥ 13:13) ದೇವರಿಗಾಗಿ ಪ್ರೀತಿಯಿಂದ ತುಂಬಿರುವ ಒಂದು ಹೃದಯವು ಆತನಿಗೆ ವಿಧೇಯರಾಗುವುದರಿಂದ ಸಿಗುವ ಆಳವಾದ ಸಂತೃಪ್ತಿ ಮತ್ತು ಆನಂದವನ್ನು ಅನುಭವಿಸುವುದು; ಅದು ನಿಶ್ಚಯವಾಗಿಯೂ ದೇವರ ಆವಶ್ಯಕತೆಗಳಿಂದ ಸಿಡಿಮಿಡಿಗೊಳ್ಳುವುದಿಲ್ಲ. ಅಪೊಸ್ತಲ ಯೋಹಾನನು ಹೇಳಿದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಇದೇ ಯೋಚನಾಸರಣಿಯಲ್ಲಿ ಯೇಸು ಹೇಳಿದ್ದು: “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು.” (ಯೋಹಾನ 14:23) ಅಂತಹ ಪ್ರೀತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಗಮನಿಸಿರಿ. ಹೌದು, ಪ್ರೀತಿಯಿಂದ ತನ್ನ ಕಡೆಗೆ ಸೆಳೆಯಲ್ಪಟ್ಟವರನ್ನು ಯೆಹೋವನು ಆಳವಾಗಿ ಪ್ರೀತಿಸುತ್ತಾನೆ.
ನಾವು ಅಪರಿಪೂರ್ಣರಾಗಿದ್ದೇವೆ ಮತ್ತು ಆತನ ವಿರುದ್ಧ ಯಾವಾಗಲೂ ಪಾಪಮಾಡುತ್ತೇವೆ ಎಂಬುದು ಯೆಹೋವನಿಗೆ ಗೊತ್ತಿದೆ. ಹಾಗಿದ್ದರೂ, ಆತನು ತನ್ನನ್ನು ನಮ್ಮಿಂದ ದೂರವಿರಿಸಿಕೊಳ್ಳುವುದಿಲ್ಲ. ಯೆಹೋವನು ತನ್ನ ಸೇವಕರಲ್ಲಿ, “ಮನಸ್ಸಂತೋಷದಿಂದ” ಮತ್ತು ಸ್ವಇಚ್ಛೆಯಿಂದ ಸೇವಿಸಲು ಪ್ರೇರಿಸುವ “ಸಂಪೂರ್ಣಹೃದಯ”ವನ್ನು ನೋಡುತ್ತಾನೆ. (1 ಪೂರ್ವಕಾಲವೃತ್ತಾಂತ 28:9) ನಿಜ, ನಮ್ಮ ಹೃದಯದಲ್ಲಿ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಮತ್ತು ಹೀಗೆ ಆತ್ಮದ ಫಲಗಳನ್ನು ಉತ್ಪಾದಿಸುವುದಕ್ಕೆ ನಮಗೆ ಸಮಯ ಮತ್ತು ಪ್ರಯತ್ನದ ಅಗತ್ಯವಿದೆ ಎಂಬುದು ಯೆಹೋವನಿಗೆ ಗೊತ್ತಿದೆ. (ಗಲಾತ್ಯ 5:22, 23) ಆದುದರಿಂದ ಆತನು ನಮ್ಮೊಂದಿಗೆ ತಾಳ್ಮೆಯುಳ್ಳವನಾಗಿದ್ದಾನೆ, ಯಾಕೆಂದರೆ “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಅದೇ ಮನೋಭಾವವನ್ನು ಪ್ರತಿಬಿಂಬಿಸುತ್ತಾ, ಯೇಸುವು ಎಂದೂ ತನ್ನ ಶಿಷ್ಯರನ್ನು ಅವರ ದೋಷಗಳಿಗಾಗಿ ಕಟುವಾಗಿ ಟೀಕಿಸಲಿಲ್ಲ, ಆದರೆ ಅವರಿಗೆ ತಾಳ್ಮೆಯಿಂದ ಸಹಾಯಮಾಡಿದನು ಮತ್ತು ಅವರಿಗೆ ಉತ್ತೇಜನವನ್ನು ಸಹ ಕೊಟ್ಟನು. ಯೆಹೋವನ ಮತ್ತು ಯೇಸುವಿನ ಇಂತಹ ಪ್ರೀತಿ, ಕರುಣೆ ಮತ್ತು ತಾಳ್ಮೆಯು, ಅವರನ್ನು ಅತ್ಯಧಿಕವಾಗಿ ಪ್ರೀತಿಸುವಂತೆ ನಿಮ್ಮನ್ನು ಪ್ರಚೋದಿಸುವುದಿಲ್ಲವೋ?—ಲೂಕ 7:47; 2 ಪೇತ್ರ 3:9.
ಆಳವಾಗಿ ಬೇರೂರಿರುವ ಹಣಜಿಯಂತಿರುವ ಗುಣಗಳು ಅಥವಾ ಕಠಿಣವಾದ ಜಡಸ್ವಭಾವಗಳನ್ನು ಬಿಟ್ಟುಬಿಡುವುದನ್ನು ನೀವು ಒಂದು ಹೋರಾಟವಾಗಿ ಕಂಡುಕೊಳ್ಳುವುದಾದರೆ, ಎದೆಗುಂದಬೇಡಿರಿ ಅಥವಾ ನಿರುತ್ತೇಜನಗೊಳ್ಳಬೇಡಿರಿ. ಅದಕ್ಕೆ ಬದಲಾಗಿ, ಯೆಹೋವನ ಆತ್ಮಕ್ಕಾಗಿ ಆತನ ಬಳಿ ಪದೇ ಪದೇ ಬೇಡಿಕೊಳ್ಳುವುದರೊಂದಿಗೆ ನೀವು “ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುತ್ತಾ,” ಪ್ರಗತಿಯನ್ನು ಮಾಡಲು ಪ್ರಯತ್ನಿಸುತ್ತಾ ಇರಿ. (ರೋಮಾಪುರ 12:12, NW) ಆತನ ಮನಃಪೂರ್ವಕ ಸಹಾಯದಿಂದ, ಎಜ್ರನಂತೆ ನೀವು ಸಹ “ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅದನ್ನು ಅನುಸರಿಸಲು” ಪೂರ್ಣವಾಗಿ ಸಿದ್ಧಪಡಿಸಿಕೊಂಡಿರುವ ಹೃದಯವನ್ನು ಹೊಂದಿರುವುದರಲ್ಲಿ ಸಾಫಲ್ಯವನ್ನು ಪಡೆಯುವಿರಿ.
[ಪುಟ 31ರಲ್ಲಿರುವ ಚಿತ್ರ]
ಎಜ್ರನು ಬಾಬೆಲಿನಲ್ಲಿರುವಾಗಲೂ ತನ್ನ ದೇವಭಕ್ತಿಯನ್ನು ಕಾಪಾಡಿಕೊಂಡನು
[ಪುಟ 29ರಲ್ಲಿರುವ ಚಿತ್ರ ಕೃಪೆ]
Garo Nalbandian