ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ
‘ನನ್ನ ಮಗನೇ, ನೀನು ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದ ಆತನನ್ನೇ ಸೇವಿಸು.’ —1 ಪೂರ್ವ. 28:9.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಿ
ಸಾಂಕೇತಿಕ ಹೃದಯವೆಂದರೇನು?
ನಮ್ಮ ಹೃದಯವನ್ನು ಪರೀಕ್ಷಿಸುವ ಒಂದು ವಿಧಾನ ಯಾವುದು?
ನಾವು ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಬೇಕಾದರೆ ಏನು ಮಾಡಬೇಕು?
1, 2. (1) ದೇವರ ವಾಕ್ಯದಲ್ಲಿ ಶರೀರದ ಯಾವ ಅಂಗವನ್ನು ಹೆಚ್ಚು ಸಲ ಸಾಂಕೇತಿಕ ಅರ್ಥದಲ್ಲಿ ಉಲ್ಲೇಖಿಸಲಾಗಿದೆ? (2) ಸಾಂಕೇತಿಕ ಹೃದಯದ ಅರ್ಥವನ್ನು ತಿಳಿಯುವುದು ಏಕೆ ಪ್ರಾಮುಖ್ಯ?
ದೇವರ ವಾಕ್ಯದಲ್ಲಿ ಅನೇಕಸಲ ಮಾನವ ಶರೀರದ ಅಂಗಗಳನ್ನು ಸಾಂಕೇತಿಕ ಅರ್ಥದಲ್ಲಿ ಸೂಚಿಸಿ ಮಾತಾಡಲಾಗಿದೆ. ಉದಾಹರಣೆಗೆ, ಯೋಬನು “ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿರಲಿಲ್ಲವಲ್ಲಾ” ಎಂದನು. ರಾಜ ಸೊಲೊಮೋನನು, “ಕಿವಿಗೆ ಬಿದ್ದ ಒಳ್ಳೇ ಸುದ್ದಿ ಎಲುಬಿಗೆ ಪುಷ್ಟಿ” ಎಂದು ಹೇಳಿದನು. “ನಿನ್ನ ಹಣೆಯನ್ನು ಕಗ್ಗಲ್ಲಿಗಿಂತ . . . ಕಠಿನಪಡಿಸಿದ್ದೇನೆ” ಎಂದು ಯೆಹೋವನು ಯೆಹೆಜ್ಕೇಲನಿಗೆ ಹೇಳಿದನು. “ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತುಬಿಸಾಡು” ಎಂದನು ಯೇಸು.—ಯೋಬ 16:17; ಜ್ಞಾನೋ. 15:30; ಯೆಹೆ. 3:9; ಮತ್ತಾ. 18:9.
2 ಆದರೆ ಒಂದು ಅಂಗವನ್ನು ಬೇರೆಲ್ಲಾ ಅಂಗಗಳಿಗಿಂತ ಹೆಚ್ಚು ಬಾರಿ ಸಾಂಕೇತಿಕ ಅರ್ಥದಲ್ಲಿ ಸೂಚಿಸಿ ಮಾತಾಡಲಾಗಿದೆ. ಆ ಅಂಗವೇ ಹೃದಯ. ದೇವಭಕ್ತೆ ಹನ್ನಳು ತನ್ನ ಪ್ರಾರ್ಥನೆಯಲ್ಲಿ “ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ” ಎಂದಳು. (1 ಸಮು. 2:1) ವಾಸ್ತವದಲ್ಲಿ ಬೈಬಲ್ ಲೇಖಕರು ಹೆಚ್ಚುಕಡಿಮೆ ಸಾವಿರ ಬಾರಿ ‘ಹೃದಯ’ ಎಂಬ ಪದವನ್ನು ಬಳಸಿದ್ದಾರೆ. ಹೆಚ್ಚಾಗಿ ಸಾಂಕೇತಿಕ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಹೃದಯ ಎಂಬ ಪದ ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಅತಿ ಪ್ರಾಮುಖ್ಯ. ಏಕೆಂದರೆ ಹೃದಯವನ್ನು ನಾವು ಕಾಪಾಡಿಕೊಳ್ಳಬೇಕೆಂದು ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ.—ಜ್ಞಾನೋಕ್ತಿ 4:23 ಓದಿ.
ಸಾಂಕೇತಿಕ ಹೃದಯ ಅಂದರೇನು?
3. ಬೈಬಲ್ನಲ್ಲಿ ಉಪಯೋಗಿಸಲಾಗಿರುವ “ಹೃದಯ” ಎಂಬ ಪದದ ಅರ್ಥವನ್ನು ನಾವು ಹೇಗೆ ಗ್ರಹಿಸಬಲ್ಲೆವು? ಉದಾಹರಣೆ ಕೊಡಿ.
3 ದೇವರ ವಾಕ್ಯ “ಹೃದಯ” ಎಂಬ ಪದಕ್ಕೆ ಶಬ್ದಕೋಶದಂತೆ ಅರ್ಥವಿವರಣೆಯನ್ನು ಕೊಡುವುದಿಲ್ಲವಾದರೂ ಆ ಪದದ ಅರ್ಥವನ್ನು ಗ್ರಹಿಸಲು ಸಹಾಯ ಮಾಡುತ್ತದೆ. ಹೇಗೆಂಬುದನ್ನು ತಿಳಿಯಲು ಮೋಸೇಇಕ್ ಚಿತ್ರಕಲೆಯ ಉದಾಹರಣೆಯನ್ನು ತೆಗೆದುಕೊಳ್ಳಿ. ಸಾವಿರಾರು ಚಿಕ್ಕಚಿಕ್ಕ ಉರುಟುಗಲ್ಲುಗಳನ್ನು ಒತ್ತೊತ್ತಾಗಿ ಅಂಟಿಸಿ ಮಾಡಿದ ಸುಂದರ ಚಿತ್ರಕಲೆಯನ್ನು ಮೋಸೇಇಕ್ ಕಲೆ ಎನ್ನುತ್ತಾರೆ. ಇದನ್ನು ನಾವು ಸ್ವಲ್ಪ ದೂರ ನಿಂತು ನೋಡಿದರೆ ಎಲ್ಲ ಕಲ್ಲುಗಳಿಂದ ಯಾವ ಚಿತ್ರವು ರೂಪುಗೊಂಡಿದೆ ಎಂದು ಗೊತ್ತಾಗುತ್ತದೆ. ತದ್ರೀತಿ, ಬೈಬಲಿನಲ್ಲಿ “ಹೃದಯ” ಎಂಬ ಪದವನ್ನು ಬೇರೆ ಬೇರೆ ಸಂದರ್ಭದಲ್ಲಿ ಉಪಯೋಗಿಸಲಾಗಿದೆ. ಈ ಒಂದೊಂದು ಸಂದರ್ಭವನ್ನು ಮೋಸೇಇಕ್ ಚಿತ್ರದ ಒಂದೊಂದು ಕಲ್ಲಿಗೆ ಹೋಲಿಸಬಹುದು. ಇವೆಲ್ಲವನ್ನು ಒಟ್ಟಾಗಿ ನೋಡಿದರೆ ನಮಗೆ ಒಂದು ಚಿತ್ರಣ ಕಂಡುಬರುತ್ತದೆ. ಯಾವ ಚಿತ್ರಣ?
4. (1) “ಹೃದಯ” ಎಂಬ ಪದ ಏನನ್ನು ಸೂಚಿಸುತ್ತದೆ? (2) ಮತ್ತಾಯ 22:37ರಲ್ಲಿರುವ ಯೇಸುವಿನ ಮಾತುಗಳ ಅರ್ಥವೇನು?
4 ಬೈಬಲ್ ಲೇಖಕರು “ಹೃದಯ” ಎಂಬ ಪದವನ್ನು ಒಬ್ಬ ವ್ಯಕ್ತಿಯ ಇಡೀ ಆಂತರ್ಯವನ್ನು ವರ್ಣಿಸಲು ಉಪಯೋಗಿಸಿದ್ದಾರೆ. ಅಂದರೆ ಅವನ ಬಯಕೆಗಳು, ಯೋಚನೆಗಳು, ಮನೋಸ್ಥಿತಿ, ಮನೋಭಾವಗಳು, ಸಾಮರ್ಥ್ಯಗಳು, ಪ್ರಚೋದನೆಗಳು ಮತ್ತು ಗುರಿಗಳನ್ನು ಇದು ಆವರಿಸುತ್ತದೆ. (ಕೀರ್ತನೆ 95:8; ಜ್ಞಾನೋಕ್ತಿ 16:1; ಅಪೊಸ್ತಲರ ಕಾರ್ಯಗಳು 2:26 ಓದಿ.) ಒಂದು ಗ್ರಂಥ ಹೇಳುವಂತೆ ಇದು “ಒಬ್ಬ ಮನುಷ್ಯನ ಇಡೀ ಆಂತರ್ಯವನ್ನು ಸೂಚಿಸುತ್ತದೆ.” ಆದರೆ ಕೆಲವು ಸಂದರ್ಭದಲ್ಲಿ “ಹೃದಯ” ಎಂಬ ಪದವನ್ನು ಸೀಮಿತ ಅರ್ಥದಲ್ಲಿ ಬಳಸಲಾಗಿದೆ. ಉದಾಹರಣೆಗೆ, “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದು ಯೇಸು ಹೇಳಿದನು. (ಮತ್ತಾ. 22:37) ಇಲ್ಲಿ “ಹೃದಯ” ಎಂಬುದು ಇಡೀ ಆಂತರಿಕ ವ್ಯಕ್ತಿಯನ್ನಲ್ಲ ಬದಲಾಗಿ ಕೇವಲ ಭಾವನೆಗಳು, ಬಯಕೆಗಳು ಮತ್ತು ಅನಿಸಿಕೆಗಳನ್ನು ಸೂಚಿಸುತ್ತದೆ. ಹೃದಯ, ಪ್ರಾಣ ಮತ್ತು ಮನಸ್ಸು ಎಂದು ಯೇಸು ಬಿಡಿಸಿ ಹೇಳಿದಾಗ ದೇವರಲ್ಲಿ ನಮಗಿರುವ ಪ್ರೀತಿಯನ್ನು ನಮ್ಮ ಅನಿಸಿಕೆ, ಜೀವನರೀತಿ ಮತ್ತು ಮಾನಸಿಕ ಸಾಮರ್ಥ್ಯಗಳ ಮೂಲಕ ವ್ಯಕ್ತಪಡಿಸಬೇಕೆಂದು ಒತ್ತಿಹೇಳಿದನು. (ಯೋಹಾ. 17:3; ಎಫೆಸ 6:6) ಆದರೆ “ಹೃದಯ” ಎಂಬ ಪದವನ್ನು ಮಾತ್ರ ಪ್ರತ್ಯೇಕವಾಗಿ ಉಲ್ಲೇಖಿಸಿರುವಾಗ ಅದು ಇಡೀ ಆಂತರಿಕ ವ್ಯಕ್ತಿಗೆ ಅನ್ವಯವಾಗುತ್ತದೆ.
ಹೃದಯವನ್ನು ಏಕೆ ಕಾಪಾಡಿಕೊಳ್ಳಬೇಕು?
5. ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಲು ನಮ್ಮಿಂದಾದಷ್ಟು ಪ್ರಯತ್ನ ಮಾಡಬೇಕೇಕೆ?
5 ಹೃದಯದ ಬಗ್ಗೆ ರಾಜ ದಾವೀದನು ಸೊಲೊಮೋನನಿಗೆ ಹೀಗಂದನು: “ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣ ಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವ. 28:9) ಹೌದು, ಯೆಹೋವನು ನಮ್ಮ ಹೃದಯಗಳನ್ನು ಪರೀಕ್ಷಿಸುತ್ತಾನೆ. ಮಾತ್ರವಲ್ಲ ಸಕಲ ಜನರ ಹೃದಯಗಳನ್ನೂ ಪರೀಕ್ಷಿಸುತ್ತಾನೆ. (ಜ್ಞಾನೋ. 17:3; 21:2) ಹಾಗೆ ಪರೀಕ್ಷಿಸುವಾಗ ನಮ್ಮ ಹೃದಯ ಸ್ಥಿತಿ ಆತನಿಗೆ ಮೆಚ್ಚಿಕೆಯಾಗಿ ಕಂಡುಬಂದರೆ ನಾವಾತನ ಸ್ನೇಹಿತರಾಗಲು ಸಾಧ್ಯವಿದೆ ಮತ್ತು ಆನಂದಕರ ಭವಿಷ್ಯತ್ತು ನಮ್ಮದಾಗಬಲ್ಲದು. ಹೀಗಿರುವುದರಿಂದ, ದಾವೀದನ ಪ್ರೇರಿತ ಸಲಹೆಯಂತೆ ನಾವು ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಲು ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತಾ ಇರೋಣ.
6. ಯೆಹೋವನ ಸೇವೆಮಾಡಲು ನಾವು ಮಾಡಿರುವ ನಿರ್ಧಾರದ ಬಗ್ಗೆ ಏನನ್ನು ನೆನಪಿನಲ್ಲಿಡಬೇಕು?
6 ಯೆಹೋವನ ಜನರಾದ ನಾವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹುರುಪಿನಿಂದ ಭಾಗವಹಿಸುತ್ತಿರುವುದು ತಾನೇ ನಮಗೆ ಸಂಪೂರ್ಣ ಹೃದಯದಿಂದ ಆತನ ಸೇವೆಮಾಡುವ ಬಯಕೆಯಿದೆ ಎಂದು ತೋರಿಸುತ್ತದೆ. ಆದರೆ ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಏನೆಂದರೆ ಸೈತಾನನ ದುಷ್ಟಲೋಕದಿಂದ ಬರುವ ಒತ್ತಡಗಳು ಮತ್ತು ನಮ್ಮ ಸ್ವಂತ ಪಾಪ ಪ್ರವೃತ್ತಿಗಳು ಸಂಪೂರ್ಣ ಹೃದಯದಿಂದ ದೇವರ ಸೇವೆಮಾಡಬೇಕೆಂಬ ನಮ್ಮ ನಿರ್ಧಾರವನ್ನು ಶಿಥಿಲಗೊಳಿಸಬಲ್ಲವು. (ಯೆರೆ. 17:9; ಎಫೆ. 2:2) ಹೀಗೆ ಆಗಬಾರದಾದರೆ ನಾವು ಪದೇಪದೇ ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳುತ್ತಾ ಇರಬೇಕು. ನಾವಿದನ್ನು ಮಾಡುವುದು ಹೇಗೆ?
7. ನಮ್ಮ ಹೃದಯದ ನಿಜ ಸ್ಥಿತಿಯನ್ನು ಯಾವುದು ತೋರಿಸುತ್ತದೆ?
7 ನಾವು ಆಂತರ್ಯದಲ್ಲಿ ಏನಾಗಿದ್ದೇವೆ ಎನ್ನುವುದು ಇತರರ ಕಣ್ಣಿಗೆ ಕಾಣುವುದಿಲ್ಲ. ಮರದ ತಿರುಳು ಹೇಗೆ ಹೊರಗೆ ಕಾಣುವುದಿಲ್ಲವೋ ಹಾಗೆಯೇ. ಆದರೂ, ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದಂತೆ ಮರವು ಎಂಥದ್ದೆಂದು ಅದರ ಫಲಗಳಿಂದ ತಿಳಿಯಸಾಧ್ಯವಿದೆ. ಹಾಗೆಯೇ ನಮ್ಮ ಹೃದಯದ ನಿಜ ಸ್ಥಿತಿ ಏನಾಗಿದೆ ಎಂಬುದನ್ನು ನಮ್ಮ ಕ್ರಿಯೆಗಳಿಂದ ತಿಳಿಯಸಾಧ್ಯವಿದೆ. (ಮತ್ತಾ. 7:17-20) ಅಂಥ ಕ್ರಿಯೆಗಳಲ್ಲಿ ಒಂದನ್ನು ನಾವೀಗ ಪರಿಗಣಿಸೋಣ.
ಹೃದಯವನ್ನು ಪರೀಕ್ಷಿಸಿಕೊಳ್ಳುವ ಒಂದು ವಿಧ
8. ಮತ್ತಾಯ 6:33ರಲ್ಲಿರುವ ಯೇಸುವಿನ ಮಾತುಗಳಿಗನುಸಾರ ನಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ಹೇಗೆ ತೋರಿಸಿಕೊಡುತ್ತೇವೆ?
8 ಒಬ್ಬ ವ್ಯಕ್ತಿಗೆ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಬೇಕೆಂಬ ಬಯಕೆಯಿದೆ ಎನ್ನುವುದು ಅವನ ನಿರ್ದಿಷ್ಟ ಕ್ರಿಯೆಯಿಂದ ತೋರಿಬರುತ್ತದೆ ಎಂದು ಯೇಸು ತನ್ನ ಪರ್ವತ ಪ್ರಸಂಗದಲ್ಲಿ ತಿಳಿಸಿದನು. ಆ ನಿರ್ದಿಷ್ಟ ಕ್ರಿಯೆ ಯಾವುದು? ಅವನಂದದ್ದು: “ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” (ಮತ್ತಾ. 6:33) ನಾವು ಜೀವನದಲ್ಲಿ ಯಾವುದನ್ನು ಮೊದಲಾಗಿಡುತ್ತೇವೋ ಅದರಿಂದ ನಾವು ಹೃದಯದಾಳದಲ್ಲಿ ಏನನ್ನು ಬಯಸುತ್ತಿದ್ದೇವೆ, ಆಲೋಚಿಸುತ್ತಿದ್ದೇವೆ, ಯೋಜಿಸುತ್ತಿದ್ದೇವೆ ಎನ್ನುವುದು ಬಹಿರಂಗವಾಗುತ್ತದೆ. ಹೀಗೆ, ಜೀವನದಲ್ಲಿ ನಮಗಿರುವ ಆದ್ಯತೆಗಳನ್ನು ಪರೀಕ್ಷಿಸುವುದು ನಾವು ದೇವರನ್ನು ಸಂಪೂರ್ಣ ಹೃದಯದಿಂದ ಸೇವಿಸುತ್ತಿದ್ದೇವೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುವ ಒಂದು ವಿಧವಾಗಿದೆ.
9. (1) ಕೆಲವು ಪುರುಷರಿಗೆ ಯೇಸು ಯಾವ ಆಮಂತ್ರಣ ನೀಡಿದನು? (2) ಅವರ ಪ್ರತಿಕ್ರಿಯೆಗಳಿಂದ ಏನು ವ್ಯಕ್ತವಾಯಿತು?
9 ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ’ ಎಂದು ಯೇಸು ತನ್ನ ಶಿಷ್ಯರಿಗೆ ಉತ್ತೇಜಿಸಿದ ಸ್ವಲ್ಪ ಸಮಯದ ಬಳಿಕ ನಡೆದ ಒಂದು ಘಟನೆಯನ್ನು ಗಮನಿಸಿ. ಒಬ್ಬನು ತನ್ನ ಜೀವನದಲ್ಲಿ ಯಾವುದನ್ನು ಮೊದಲಾಗಿ ಇಡುತ್ತಾನೋ ಅದರಿಂದ ಅವನ ಹೃದಯದ ಸ್ಥಿತಿ ಬಯಲಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಈ ಘಟನೆ ಲೂಕ ಪುಸ್ತಕದಲ್ಲಿದೆ. ಯೆರೂಸಲೇಮಿನಲ್ಲಿ ತನಗೆ ಅಪಾಯ ಕಾದಿದೆ ಎಂದು ಯೇಸುವಿಗೆ ತಿಳಿದಿದ್ದರೂ ಅವನು “[ಅಲ್ಲಿಗೆ] ಹೋಗಲು ಮನಸ್ಸನ್ನು ದೃಢಮಾಡಿಕೊಂಡನು.” ಅಪೊಸ್ತಲರೊಂದಿಗೆ ಅವನು “ದಾರಿಯಲ್ಲಿ ಹೋಗುತ್ತಿದ್ದಾಗ” ಕೆಲವು ಪುರುಷರಿಗೆ ತನ್ನ ಹಿಂಬಾಲಕರಾಗುವಂತೆ ಆಮಂತ್ರಿಸಿದನು. ಯೇಸುವಿನ ಆಮಂತ್ರಣವನ್ನು ಅಂಗೀಕರಿಸಲು ಅವರಿಗೆ ಮನಸ್ಸಿದ್ದರೂ ನಿರ್ದಿಷ್ಟ ಷರತ್ತುಗಳನ್ನು ಹಾಕಿದರು. “ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರಲು ಅನುಮತಿ ಕೊಡು” ಎಂದ ಒಬ್ಬ. “ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುವೆ; ಆದರೆ ಮೊದಲು ಹೋಗಿ ನನ್ನ ಮನೆಯವರಿಗೆ ವಿದಾಯ ಹೇಳಿ ಬರಲು ಅನುಮತಿ ನೀಡು” ಎಂದ ಇನ್ನೊಬ್ಬ. (ಲೂಕ 9:51, 57-61) ಯೇಸುವಿನ ದೃಢ, ಸಂಪೂರ್ಣ ಹೃದಯದ ನಿರ್ಧಾರಕ್ಕೂ ಈ ಪುರುಷರ ಅರ್ಥರಹಿತ ಷರತ್ತುಗಳಿಗೂ ಎಷ್ಟೊಂದು ವ್ಯತ್ಯಾಸ! ರಾಜ್ಯಾಭಿರುಚಿಗಳಿಗಿಂತ ತಮ್ಮ ಸ್ವಂತ ಇಚ್ಛೆಗಳನ್ನೇ ಮೊದಲಾಗಿಡುವ ಮೂಲಕ ಸಂಪೂರ್ಣ ಹೃದಯದಿಂದ ದೇವರ ಸೇವೆಮಾಡುವ ಬಯಕೆ ತಮ್ಮಲ್ಲಿಲ್ಲ ಎಂದು ತೋರಿಸಿದರು.
10. (1) ತನ್ನ ಹಿಂಬಾಲಕರಾಗುವಂತೆ ಯೇಸು ಕೊಟ್ಟ ಆಮಂತ್ರಣಕ್ಕೆ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ? (2) ಯೇಸು ಯಾವ ಸಂಕ್ಷಿಪ್ತ ದೃಷ್ಟಾಂತ ಕೊಟ್ಟನು?
10 ನಾವು ಆ ಪುರುಷರಂತಿರದೆ ವಿವೇಕದಿಂದ ಯೇಸುವಿನ ಆಮಂತ್ರಣವನ್ನು ಸ್ವೀಕರಿಸಿ ಪ್ರತಿದಿನ ಯೆಹೋವನ ಸೇವೆಮಾಡುತ್ತಿದ್ದೇವೆ. ಹೀಗೆ, ನಮ್ಮ ಹೃದಯದಲ್ಲಿ ಯೆಹೋವನ ಕಡೆಗೆ ಯಾವ ಅನಿಸಿಕೆಯಿದೆ ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. ನಾವು ಸಭೆಯಲ್ಲಿ ಕ್ರಿಯಾಶೀಲರಾಗಿದ್ದರೂ ನಮ್ಮ ಹೃದಯಕ್ಕೆ ಉಂಟಾಗಬಹುದಾದ ಹಾನಿಯ ಕುರಿತು ಎಚ್ಚರದಿಂದಿರಬೇಕು. ಯಾವ ಹಾನಿ? ದಾರಿಯಲ್ಲಿ ಯೇಸು ಆ ಪುರುಷರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಇದನ್ನು ತಿಳಿಸಿದನು: “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದೆ ಇರುವ ವಿಷಯಗಳನ್ನು ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ.” (ಲೂಕ 9:62) ಈ ದೃಷ್ಟಾಂತದಿಂದ ನಮಗಿರುವ ಪಾಠ?
ನಾವು “ಒಳ್ಳೇದನ್ನು ಬಿಗಿಯಾಗಿ” ಹಿಡಿದುಕೊಳ್ಳುತ್ತೇವೊ?
11. (1) ಯೇಸುವಿನ ದೃಷ್ಟಾಂತದಲ್ಲಿ ಉಳುವವನ ಕೆಲಸ ಏನಾಯಿತು? (2) ಏಕೆ?
11 ಯೇಸು ಹೇಳಿದ ಆ ದೃಷ್ಟಾಂತದ ಪಾಠವನ್ನು ಸ್ಪಷ್ಟವಾಗಿ ತಿಳಿಯುವ ಸಲುವಾಗಿ ಅದಕ್ಕೆ ಕೆಲವು ವಿವರಗಳನ್ನು ಕೂಡಿಸಿ ಚಿತ್ರಿಸಿಕೊಳ್ಳೋಣ. ಒಬ್ಬ ಕೆಲಸಗಾರನು ಹೊಲವನ್ನು ಉಳುತ್ತಿದ್ದಾನೆ. ಉಳುತ್ತಿರುವಾಗ ಅವನ ಯೋಚನೆ ಮನೆಯ ಕಡೆ ಹೋಗುತ್ತದೆ. ಮನೆಯಲ್ಲಿದ್ದರೆ ನೆರಳಿನಲ್ಲಿ ಹಾಯಾಗಿ ಕುಳಿತು ಬಂಧು ಮಿತ್ರರೊಂದಿಗೆ ಸಂಗೀತ ಆಲಿಸುತ್ತಾ ನಗುತ್ತಾ ಉಣ್ಣುತ್ತಾ ಸಂತೋಷಿಸಬಹುದಿತ್ತು ಎಂದು ಅವನ ಹೃದಯ ಹಂಬಲಿಸುತ್ತದೆ. ಹೊಲದ ಹೆಚ್ಚಿನ ಭಾಗವನ್ನು ಉಳುಮೆ ಮಾಡುವುದರಷ್ಟಕ್ಕೆ ಅವನ ಹಂಬಲ ಎಷ್ಟು ಹೆಚ್ಚಾಯಿತೆಂದರೆ ಕೆಲಸವನ್ನು ಅಲ್ಲಿಗೇ ಬಿಟ್ಟು ಮನೆಗೆ ಹಿಂದಿರುಗುತ್ತಾನೆ. ಯೇಸು ಹೇಳಿದಂತೆ ಅವನು “ಹಿಂದೆ ಇರುವ ವಿಷಯಗಳ” ಕಡೆಗೆ ಗಮನಸರಿಸಿದನು. ಹೊಲ ನೆಡಲ್ಪಡುವ ಮುಂಚೆ ಇನ್ನೂ ತುಂಬ ಕೆಲಸ ಮಾಡಲಿಕ್ಕಿದ್ದರೂ, ಆ ಕೆಲಸಗಾರನು ಅಪಕರ್ಷಿತನಾದನು. ಅವನ ಕೆಲಸ ಪೂರ್ತಿಯಾಗಲಿಲ್ಲ. ಕೆಲಸಗಾರನು ಪಟ್ಟುಹಿಡಿದು ಕೆಲಸ ಮುಗಿಸದ ಕಾರಣ ಅವನ ಧಣಿಗೆ ನಿರಾಶೆಯಾಗುತ್ತದೆ.
12. ಯೇಸುವಿನ ದೃಷ್ಟಾಂತದಲ್ಲಿದ್ದ ಕೆಲಸಗಾರನ ಮತ್ತು ಇಂದಿನ ಕೆಲವು ಕ್ರೈಸ್ತರ ಮಧ್ಯೆ ಯಾವ ಹೋಲಿಕೆಯನ್ನು ನಾವು ನೋಡಬಹುದು?
12 ಈಗ ಇದನ್ನು ನಮ್ಮ ದಿನಗಳ ಸನ್ನಿವೇಶಕ್ಕೆ ಹೋಲಿಸಿ ನೋಡೋಣ. ಕೆಲವು ಕ್ರೈಸ್ತರು ಆ ಕೆಲಸಗಾರನಂತಿದ್ದಾರೆ. ಅವರು ಆಧ್ಯಾತ್ಮಿಕವಾಗಿ ಒಳ್ಳೇ ಸ್ಥಿತಿಯಲ್ಲಿದ್ದಾರೆಂದು ತೋರಬಹುದಾದರೂ ನಿಜವಾಗಿ ಆಧ್ಯಾತ್ಮಿಕ ಅಪಾಯದಲ್ಲಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ಹೀಗೆ ಊಹಿಸಿ. ಒಬ್ಬ ಸಹೋದರನು ತಪ್ಪದೆ ಕೂಟಗಳಿಗೆ ಹಾಜರಾಗುತ್ತಾನೆ. ಕ್ಷೇತ್ರ ಸೇವೆಯಲ್ಲಿಯೂ ಕಾರ್ಯಮಗ್ನನಾಗಿದ್ದಾನೆ. ಆದರೆ ಅದೇ ಸಮಯದಲ್ಲಿ ಅವನು ತನ್ನ ಹೃದಯದಾಳದಲ್ಲಿ ಲೋಕದ ಕೆಲವೊಂದು ವಿಷಯಗಳಿಗಾಗಿ ಹಂಬಲಿಸುತ್ತಿರುತ್ತಾನೆ. ಆ ಯೋಚನೆ ಪದೇಪದೇ ಅವನ ಹೃದಯದಲ್ಲಿ ಬರುತ್ತಾ ಇದ್ದಂತೆ ಅವುಗಳಿಗಾಗಿ ಹಂಬಲವೂ ಬಲವಾಗುತ್ತಾ ಹೋಗುತ್ತದೆ. ಕ್ರಮೇಣ ಲೋಕದ ವಿಷಯಗಳಿಗಾಗಿ ಅವನ ಅಪೇಕ್ಷೆ ಎಷ್ಟು ಹೆಚ್ಚಾಗುತ್ತದೆಂದರೆ ದೇವರ ಸೇವೆಯನ್ನು ಹಲವು ವರುಷಗಳ ತನಕ ಮಾಡಿದ್ದರೂ ಅವನು ತಿರುಗಿ “ಹಿಂದೆ ಇರುವ ವಿಷಯಗಳನ್ನು” ನೋಡುತ್ತಾನೆ. ಇನ್ನು ಎಷ್ಟೋ ಸೇವೆ ಮಾಡಲಿಕ್ಕಿದೆಯಾದರೂ ಅವನು “ಜೀವದ ವಾಕ್ಯಗಳನ್ನು ಬಿಗಿಯಾಗಿ” ಹಿಡಿದುಕೊಳ್ಳುವುದಿಲ್ಲ. ಆಧ್ಯಾತ್ಮಿಕ ಚಟುವಟಿಕೆಗಳು ನಿಧಾನಿಸುತ್ತವೆ. (ಫಿಲಿ. 2:16) ಅವನು ಸೇವೆಯನ್ನು ಪಟ್ಟುಹಿಡಿದು ಮುಂದುವರಿಸದ ಕಾರಣ “ಕೊಯ್ಲಿನ ಯಜಮಾನ”ನಾದ ಯೆಹೋವನಿಗೆ ದುಃಖವಾಗುತ್ತದೆ.—ಲೂಕ 10:2.
13. ಸಂಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸುವುದರ ಅರ್ಥವೇನು?
13 ಪಾಠ ಸುಸ್ಪಷ್ಟ. ನಾವು ತಪ್ಪದೆ ಕೂಟಗಳಲ್ಲಿ ಹಾಜರಿರುವುದು, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದು ನಿಜಕ್ಕೂ ಶ್ಲಾಘನೀಯ ವಿಷಯ. ಆದರೆ ಸಂಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸುವುದರಲ್ಲಿ ಇನ್ನೂ ಹೆಚ್ಚಿನ ವಿಷಯ ಸೇರಿದೆ. (2 ಪೂರ್ವ. 25:1, 2, 27) ಒಬ್ಬ ಕ್ರೈಸ್ತನು “ಹಿಂದೆ ಇರುವ ವಿಷಯಗಳನ್ನು” ಅಂದರೆ ಲೋಕದ ವಿಷಯಗಳನ್ನು ತನ್ನ ಹೃದಯದಾಳದಲ್ಲಿ ಪ್ರೀತಿಸುತ್ತಾ ಇರುವುದಾದರೆ, ದೇವರೊಂದಿಗಿರುವ ಸುಸಂಬಂಧವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ. (ಲೂಕ 17:32) ನಾವು ‘ಕೆಟ್ಟದ್ದನ್ನು ಹೇಸಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳುವಲ್ಲಿ’ ಮಾತ್ರ ‘ದೇವರ ರಾಜ್ಯಕ್ಕೆ ತಕ್ಕವರು.’ (ರೋಮ. 12:9; ಲೂಕ 9:62) ಆದಕಾರಣ, ನಾವು ಸಂಪೂರ್ಣ ಹೃದಯದಿಂದ ದೇವರ ಸೇವೆ ಮಾಡುವುದನ್ನು ಸೈತಾನನ ಲೋಕ ತಡೆಯದಂತೆ ನೋಡಿಕೊಳ್ಳೋಣ. ಸೈತಾನನ ಲೋಕದ ವಿಷಯ ಎಷ್ಟೇ ಉಪಯುಕ್ತವಾಗಿ, ಆಹ್ಲಾದಕರವಾಗಿ ಕಂಡುಬಂದರೂ ಅದಕ್ಕಾಗಿ ನಮ್ಮ ಹೃದಯ ಹಂಬಲಿಸುವಂತೆ ಬಿಡದಿರೋಣ.—2 ಕೊರಿಂ. 11:14; ಫಿಲಿಪ್ಪಿ 3:13, 14 ಓದಿ.
ಎಚ್ಚರವಾಗಿರಿ!
14, 15. (1) ಯೆಹೋವನ ಸೇವೆಯಲ್ಲಿ ನಮಗಿರುವ ಹುರುಪನ್ನು ಕುಂದಿಸಲು ಸೈತಾನನು ಹೇಗೆ ಪ್ರಯತ್ನಿಸುತ್ತಿದ್ದಾನೆ? (ಬಿ) ಸೈತಾನನ ಕುತಂತ್ರ ಅಪಾಯಕಾರಿ ಎಂದು ಹೇಗೆ ಉದಾಹರಿಸುವಿರಿ?
14 ಯೆಹೋವನ ಮೇಲೆ ಪ್ರೀತಿಯಿದ್ದ ಕಾರಣದಿಂದಲೇ ನಾವಾತನಿಗೆ ಸಮರ್ಪಿಸಿಕೊಂಡೆವು. ಅಂದಿನಿಂದ ಹಲವಾರು ವರ್ಷ ನಮ್ಮಲ್ಲಿ ಅನೇಕರು ಯೆಹೋವನ ಸೇವೆಯನ್ನು ಸಂಪೂರ್ಣ ಹೃದಯದಿಂದ ಮಾಡುತ್ತಾ ಬಂದಿದ್ದೇವೆ. ಹಾಗಿದ್ದರೂ ಒಂದು ವಿಷಯವನ್ನು ನಾವು ಮರೆಯಬಾರದು. ಸೈತಾನನು ನಮ್ಮನ್ನು ಅಪಕರ್ಷಿಸುವ ಪ್ರಯತ್ನವನ್ನು ಇನ್ನೂ ಬಿಟ್ಟಿಲ್ಲ. ಇಂದಿಗೂ ನಮ್ಮ ಹೃದಯವನ್ನು ವಂಚಿಸುವುದೇ ಅವನ ಮುಖ್ಯ ಗುರಿ. (ಎಫೆ. 6:12) ನಾವು ಇದ್ದಕ್ಕಿದ್ದಂತೆ ಯೆಹೋವನನ್ನು ತೊರೆದು ಬಿಡುವುದಿಲ್ಲ ಎಂದು ಅವನಿಗೆ ತಿಳಿದಿದೆ. ಆದಕಾರಣ ಅವನು ಕುತಂತ್ರದಿಂದ ಈ “ವಿಷಯಗಳ ವ್ಯವಸ್ಥೆ”ಯನ್ನು ಉಪಯೋಗಿಸಿ ದೇವರ ಸೇವೆಯಲ್ಲಿ ನಮಗಿರುವ ಹೃತ್ಪೂರ್ವಕ ಹುರುಪು ಮೆಲ್ಲಮೆಲ್ಲನೆ ಕ್ಷೀಣಿಸುವಂತೆ ಮಾಡುತ್ತಾನೆ. (ಮಾರ್ಕ 4:18, 19 ಓದಿ.) ಸೈತಾನನ ಈ ವಿಧಾನ ಏಕೆ ಅಷ್ಟೊಂದು ಕಾರ್ಯಸಾಧಕ ಎಂದು ಗೊತ್ತೆ?
15 ಉತ್ತರ ತಿಳಿಯಲು ಈ ಉದಾಹರಣೆಯನ್ನು ಗಮನಿಸಿ. 100 ವಾಟ್ ಬಲ್ಬ್ನ ಬೆಳಕಿನಲ್ಲಿ ನೀವು ಪುಸ್ತಕ ಓದುತ್ತಿದ್ದೀರಿ. ಬಲ್ಬ್ ಕೆಟ್ಟು ಹೋಗುತ್ತದೆ. ಕತ್ತಲೆಯಲ್ಲಿ ಇರುವುದರಿಂದ ಕೂಡಲೆ ಕೆಟ್ಟುಹೋದ ಬಲ್ಬ್ ತೆಗೆದು ನೀವು ಹೊಸ ಬಲ್ಬ್ ಹಾಕುತ್ತೀರಿ. ಕೋಣೆಯಲ್ಲಿ ಬೆಳಕು ಮೂಡುತ್ತದೆ. ಮರುದಿನ ಸಂಜೆ ಅದೇ ದೀಪದ ಬೆಳಕಿನಲ್ಲಿ ನೀವು ಓದುತ್ತಿದ್ದೀರಿ. ಆದರೆ ನಿಮಗೆ ತಿಳಿಸದೆ ಯಾರೋ ಒಬ್ಬರು ನೀವು ಹಾಕಿದ 100-ವಾಟ್ ಬಲ್ಬನ್ನು ತೆಗೆದು 95-ವಾಟ್ ಬಲ್ಬನ್ನು ಸಿಕ್ಕಿಸಿದ್ದಾರೆ. ಬೆಳಕಿನಲ್ಲಿರುವ ವ್ಯತ್ಯಾಸ ನಿಮ್ಮ ಲಕ್ಷ್ಯಕ್ಕೆ ಬಂದೀತೆ? ಬಹುಶಃ ಬರಲಿಕ್ಕಿಲ್ಲ. ಒಂದುವೇಳೆ ಮರುದಿನ ಪುನಃ 90-ವಾಟ್ ಬಲ್ಬನ್ನು ಅವರು ಸಿಕ್ಕಿಸಿದರೆ? ಆಗಲೂ ನೀವದನ್ನು ಲಕ್ಷಿಸದಿರಬಹುದು. ಏಕೆ? ಏಕೆಂದರೆ ಆ ದೀಪದ ಪ್ರಕಾಶ ಹಂತಹಂತವಾಗಿ ಕಡಿಮೆ ಆಗುತ್ತಿರುವುದರಿಂದ ನಿಮ್ಮ ಲಕ್ಷ್ಯಕ್ಕೆ ಬರುವುದಿಲ್ಲ. ತದ್ರೀತಿ, ಸೈತಾನನ ಲೋಕದ ಪ್ರಭಾವಗಳು ನಮ್ಮ ಹುರುಪನ್ನು ಸ್ವಲ್ಪಸ್ವಲ್ಪವಾಗಿ ಕುಂದಿಸಬಹುದು. ಹಾಗಾಗುವಲ್ಲಿ, ಯೆಹೋವನ ಸೇವೆಯಲ್ಲಿ ನಿಮಗಿರುವ 100-ವಾಟ್ನಷ್ಟು ಹುರುಪನ್ನು ಕಡಿಮೆ ಮಾಡುವುದರಲ್ಲಿ ಸೈತಾನನು ಜಯಹೊಂದಿದನೆಂದು ಅರ್ಥ. ಎಚ್ಚರ ವಹಿಸದಿರುವಲ್ಲಿ ಒಬ್ಬ ಕ್ರೈಸ್ತನಿಗೆ ತನ್ನ ಹುರುಪು ಹಂತಹಂತವಾಗಿ ಕುಂದುತ್ತಿರುವುದು ಲಕ್ಷ್ಯಕ್ಕೂ ಬಾರದಿರಬಹುದು.—ಮತ್ತಾ. 24:42; 1 ಪೇತ್ರ 5:8.
ಪ್ರಾರ್ಥನೆ ಅತ್ಯಾವಶ್ಯಕ
16. ಸೈತಾನನ ಕುತಂತ್ರಗಳಿಂದ ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು?
16 ನಾವು ಸೈತಾನನ ಇಂಥ ಕುತಂತ್ರಗಳಿಗೆ ಬಲಿಯಾಗದೆ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡುತ್ತಾ ಮುಂದುವರಿಯಲು ಯಾವುದು ಅತ್ಯಾವಶ್ಯಕ? (2 ಕೊರಿಂ. 2:11) ಪ್ರಾರ್ಥನೆ. “ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ” ನಿಲ್ಲುವಂತೆ ಪೌಲನು ತನ್ನ ಜೊತೆವಿಶ್ವಾಸಿಗಳನ್ನು ಉತ್ತೇಜಿಸಿದ ಬಳಿಕ ಅವರು ಪ್ರತಿಯೊಂದು ವಿಧದ “ಪ್ರಾರ್ಥನೆ ಮತ್ತು ಯಾಚನೆ” ಮಾಡುತ್ತಾ, “ಪ್ರತಿಯೊಂದು ಸನ್ನಿವೇಶದಲ್ಲಿ . . . ಪ್ರಾರ್ಥಿಸುತ್ತಾ” ಇರಬೇಕೆಂದು ಪ್ರೋತ್ಸಾಹಿಸಿದನು.—ಎಫೆ. 6:11, 18; 1 ಪೇತ್ರ 4:7.
17. ಯೇಸುವಿನ ಪ್ರಾರ್ಥನೆಗಳು ನಮಗೆ ಯಾವ ಪಾಠ ಕಲಿಸುತ್ತವೆ?
17 ಸೈತಾನನನ್ನು ಎದುರಿಸಿ ಸ್ಥಿರವಾಗಿ ನಿಲ್ಲಬೇಕಾದರೆ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡಬೇಕೆಂಬ ಗಾಢ ಬಯಕೆ ಯೇಸುವಿನಂತೆ ನಮ್ಮಲ್ಲೂ ಇರಬೇಕು. ಯೇಸುವಿನಲ್ಲಿ ಆ ಬಯಕೆಯಿತ್ತು ಎಂಬುದು ಅವನ ಪ್ರಾರ್ಥನಾಪೂರ್ವಕ ಮನೋಭಾವದಿಂದ ವ್ಯಕ್ತವಾಗುತ್ತದೆ. ದೃಷ್ಟಾಂತಕ್ಕೆ, ಮರಣದ ಮುಂಚಿನ ರಾತ್ರಿ ಯೇಸು ಪ್ರಾರ್ಥಿಸಿದ ವಿಧವನ್ನು ಲೂಕ ಹೀಗೆ ದಾಖಲಿಸಿದ್ದಾನೆ: “ಅಪಾರ ದುಃಖದಿಂದಾಗಿ ಅವನು ಹೆಚ್ಚು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದನು.” (ಲೂಕ 22:44) ಈ ಮುಂಚೆಯೂ ಯೇಸು ಶ್ರದ್ಧೆಯಿಂದ ಪ್ರಾರ್ಥಿಸಿದ್ದನು. ಆದರೆ ಈ ಬಾರಿ, ತನ್ನ ಭೂಜೀವನದ ಅತಿ ಕಠಿನ ಪರೀಕ್ಷೆಯನ್ನು ಎದುರಿಸುತ್ತಿದ್ದ ಕಾರಣ ಅವನು “ಹೆಚ್ಚು ಶ್ರದ್ಧಾಪೂರ್ವಕವಾಗಿ” ಪ್ರಾರ್ಥಿಸಿದನು. ಅದಕ್ಕೆ ಉತ್ತರವೂ ದೊರೆಯಿತು. ಪ್ರಾರ್ಥನೆಯ ತೀವ್ರತೆ ಬೇರೆ ಬೇರೆ ಸಂದರ್ಭದಲ್ಲಿ ವಿಭಿನ್ನವಾಗಿರುತ್ತದೆ ಎಂದು ಯೇಸುವಿನ ಈ ಮಾದರಿ ತೋರಿಸುತ್ತದೆ. ನಾವು ಹೆಚ್ಚು ತೀಕ್ಷ್ಣ ಪರೀಕ್ಷೆಗಳನ್ನು ಎದುರಿಸುವಾಗ, ಸೈತಾನನ ಪ್ರಭಾವ ಹೆಚ್ಚುತ್ತಿರುವಾಗ ಸಂರಕ್ಷಣೆಗಾಗಿ ಯೆಹೋವನಲ್ಲಿ “ಹೆಚ್ಚು ಶ್ರದ್ಧಾಪೂರ್ವಕವಾಗಿ” ಪ್ರಾರ್ಥಿಸಬೇಕು.
18. (1) ಪ್ರಾರ್ಥನೆಯ ಬಗ್ಗೆ ನಾವೇನು ಕೇಳಿಕೊಳ್ಳಬೇಕು? ಏಕೆ? (2) ನಮ್ಮ ಹೃದಯದ ಮೇಲೆ ಯಾವ ಸಂಗತಿಗಳು ಪರಿಣಾಮ ಬೀರುತ್ತವೆ? (3) ಯಾವ ವಿಧಗಳಲ್ಲಿ? (ಪುಟ 16ರಲ್ಲಿರುವ ಚೌಕ ನೋಡಿ.)
18 ಇಂಥ ಪ್ರಾರ್ಥನೆಗಳು ನಮಗೆ ಹೇಗೆ ಸಹಾಯ ಮಾಡುವವು? ಉತ್ತರ ಪೌಲನ ಮಾತುಗಳಲ್ಲಿದೆ. “ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ಹೌದು, ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಾ ಇರಬೇಕಾದರೆ ನಾವು ಭಾವಪೂರ್ಣವಾಗಿ ಮತ್ತು ಪದೇಪದೇ ಯೆಹೋವನಿಗೆ ಪ್ರಾರ್ಥಿಸುವುದು ಅತ್ಯಾವಶ್ಯಕ. (ಲೂಕ 6:12) ಆದಕಾರಣ ಹೀಗೆ ಕೇಳಿಕೊಳ್ಳಿ. ‘ನಾನು ಎಷ್ಟು ಶ್ರದ್ಧೆಯಿಂದ ಪ್ರಾರ್ಥಿಸುತ್ತೇನೆ? ಎಷ್ಟು ಬಾರಿ ಪ್ರಾರ್ಥಿಸುತ್ತೇನೆ?’ (ಮತ್ತಾ. 7:7; ರೋಮ. 12:12) ಇದಕ್ಕೆ ನೀವು ಕೊಡುವ ಉತ್ತರ ದೇವರ ಸೇವೆ ಮಾಡುವ ನಿಮ್ಮ ಹೃದಯದ ಬಯಕೆ ಎಷ್ಟು ಗಾಢವಾಗಿದೆ ಎಂಬುದನ್ನು ತಿಳಿಯಪಡಿಸುತ್ತದೆ.
19. ಸಂಪೂರ್ಣ ಹೃದಯದಿಂದ ಯೆಹೋವನ ಸೇವೆಯನ್ನು ಮುಂದುವರಿಸಲು ನೀವೇನು ಮಾಡುವಿರಿ?
19 ನಾವು ಗಮನಿಸಿದಂತೆ, ಜೀವನದಲ್ಲಿ ನಾವು ಇಟ್ಟಿರುವ ಆದ್ಯತೆಗಳು ನಮ್ಮ ಹೃದಯದ ಸ್ಥಿತಿಯನ್ನು ಹೊರಗೆಡವಬಲ್ಲವು. ನಾವು ಬಿಟ್ಟುಬಂದಿರುವ ವಿಷಯಗಳಾಗಲಿ ಸೈತಾನನ ಕುತಂತ್ರಗಳಾಗಲಿ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುವ ನಮ್ಮ ನಿರ್ಧಾರವನ್ನು ಶಿಥಿಲಗೊಳಿಸದಂತೆ ನೋಡಿಕೊಳ್ಳೋಣ. (ಲೂಕ 21:19, 34-36 ಓದಿ.) ಆದುದರಿಂದ ದಾವೀದನಂತೆ ನಾವು ಯೆಹೋವನಲ್ಲಿ ಹೀಗೆ ಯಾಚಿಸುತ್ತಿರೋಣ: “ಪೂರ್ಣವಾದ ಹೃದಯವನ್ನು ದಯಪಾಲಿಸು.”—ಕೀರ್ತ. 86:11, ಪವಿತ್ರ ಗ್ರಂಥ.
[ಪುಟ 16ರಲ್ಲಿರುವ ಚೌಕ]
ಆರೋಗ್ಯಕರ ಹೃದಯಕ್ಕೆ ಅಗತ್ಯವಾದ ಮೂರು ಅಂಶಗಳು
ಹೃದಯ ಆರೋಗ್ಯವಾಗಿರಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆಯೇ ಸಾಂಕೇತಿಕ ಹೃದಯವನ್ನು ಆರೋಗ್ಯವಾಗಿಡಲು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಕೆಳಗಿನ ಮೂರು ಪ್ರಮುಖ ಅಂಶಗಳನ್ನು ಗಮನಿಸಿ:
1 ಪೋಷಣೆ: ನಮ್ಮ ಹೃದಯಕ್ಕೆ ಆರೋಗ್ಯಕರ ಪೋಷಣೆಯು ಸಾಕಷ್ಟು ಪ್ರಮಾಣದಲ್ಲಿ ಅಗತ್ಯ. ಅದೇ ರೀತಿ ನಮ್ಮ ಸಾಂಕೇತಿಕ ಹೃದಯದ ಆರೋಗ್ಯಕ್ಕಾಗಿ ನಿಯತವಾದ ವೈಯಕ್ತಿಕ ಅಧ್ಯಯನ, ಧ್ಯಾನದ ಮೂಲಕ ಮತ್ತು ತಪ್ಪದೆ ಕೂಟಗಳಲ್ಲಿ ಹಾಜರಿರುವ ಮೂಲಕ ಆರೋಗ್ಯಪೂರ್ಣ ಆಧ್ಯಾತ್ಮಿಕ ಆಹಾರವನ್ನು ಸಾಕಷ್ಟು ಸೇವಿಸಬೇಕು.—ಕೀರ್ತ. 1:1, 2; ಜ್ಞಾನೋ. 15:28; ಇಬ್ರಿ. 10:24, 25.
2 ವ್ಯಾಯಾಮ: ನಮ್ಮ ಹೃದಯ ಆರೋಗ್ಯವಾಗಿರಲು ವ್ಯಾಯಾಮ ಅಗತ್ಯ. ಅದೇ ರೀತಿ ಕ್ಷೇತ್ರಸೇವೆಯಲ್ಲಿ ಹುರುಪಿನಿಂದ ಭಾಗವಹಿಸುವುದು ಮತ್ತು ನಮ್ಮ ಸೇವೆಯನ್ನು ಹೆಚ್ಚು ಮಾಡಲು ಶ್ರಮಿಸುವುದು ನಮ್ಮ ಸಾಂಕೇತಿಕ ಹೃದಯವನ್ನು ಆರೋಗ್ಯಕರವಾಗಿ ಇಡುತ್ತದೆ.—ಲೂಕ 13:24; ಫಿಲಿ. 3:12.
3 ಪರಿಸರ: ನಾವು ಜೀವಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಈ ಭಕ್ತಿಹೀನ ಲೋಕ ನಮ್ಮ ಶಾರೀರಿಕ ಹೃದಯದ ಮೇಲೂ ಸಾಂಕೇತಿಕ ಹೃದಯದ ಮೇಲೂ ಹೆಚ್ಚು ಒತ್ತಡವನ್ನು ಹಾಕುತ್ತದೆ. ಆದರೆ ನಾವು ಜೊತೆ ವಿಶ್ವಾಸಿಗಳೊಂದಿಗೆ ಹೆಚ್ಚೆಚ್ಚು ಸಹವಾಸ ಮಾಡುವಾಗ ಅಂಥ ಒತ್ತಡವನ್ನು ಕಡಿಮೆಗೊಳಿಸಬಲ್ಲೆವು. ಏಕೆಂದರೆ ಅವರಿಗೆ ನಮ್ಮ ಬಗ್ಗೆ ಯಥಾರ್ಥ ಅಕ್ಕರೆ ಇದೆ ಮತ್ತು ಅವರು ದೇವರನ್ನು ಸಂಪೂರ್ಣ ಹೃದಯದಿಂದ ಸೇವಿಸುತ್ತಾರೆ.—ಕೀರ್ತ. 119:63; ಜ್ಞಾನೋ. 13:20.