ಅಧ್ಯಾಯ ಆರು
ಮಹಾ ವೃಕ್ಷವೊಂದರ ಗೂಢಾರ್ಥವನ್ನು ಬಿಡಿಸಿಹೇಳುವುದು
1. ಅರಸನಾದ ನೆಬೂಕದ್ನೆಚ್ಚರನಿಗೆ ಏನು ಸಂಭವಿಸಿತು, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
ನೆಬೂಕದ್ನೆಚ್ಚರನು ಒಬ್ಬ ಲೋಕಾಧಿಪತಿಯಾಗುವಂತೆ ಯೆಹೋವನು ಅನುಮತಿಸಿದನು. ಬಾಬೆಲಿನ ಸಾಮ್ರಾಟನಾಗಿದ್ದ ಅವನ ಬಳಿ ಅಪಾರವಾದ ಧನಸಂಪತ್ತು, ಪುಷ್ಕಳವಾದ ಆಹಾರಪದಾರ್ಥ, ಮತ್ತು ಸಕಲ ವೈಭವದಿಂದ ಕೂಡಿದ ಒಂದು ಅರಮನೆಯಿತ್ತು. ಅಂದರೆ ಪ್ರಾಪಂಚಿಕ ರೀತಿಯಲ್ಲಿ ಅವನು ಬಯಸಿದ್ದೆಲ್ಲವೂ ಅವನ ಬಳಿಯಿತ್ತು. ಆದರೆ ಇದ್ದಕ್ಕಿದ್ದಂತೆ ಅವನು ಅಪಮಾನವನ್ನು ಅನುಭವಿಸಿದನು. ನೆಬೂಕದ್ನೆಚ್ಚರನಿಗೆ ಮತಿಭ್ರಮಣೆಯಾಗಿ, ಅವನು ಒಂದು ಕಾಡುಮೃಗದಂತೆ ವರ್ತಿಸಿದನು! ರಾಜಯೋಗ್ಯ ಘನತೆ ಹಾಗೂ ಮಹಾ ವೈಭವವಿದ್ದ ಅರಮನೆಯಿಂದ ಓಡಿಸಲ್ಪಟ್ಟಿದ್ದ ಅವನು, ಹೊಲಗಳಲ್ಲಿ ಜೀವಿಸಿದನು ಮತ್ತು ದನದಂತೆ ಹುಲ್ಲು ತಿಂದನು. ಈ ವಿಪತ್ತು ಸಂಭವಿಸಲು ಯಾವುದು ಕಾರಣವಾಯಿತು? ಮತ್ತು ಇದು ಏಕೆ ನಮಗೆ ಆಸಕ್ತಿಕರವಾದ ಸಂಗತಿಯಾಗಿರಬೇಕು?—ಹೋಲಿಸಿರಿ ಯೋಬ 12:17-19; ಪ್ರಸಂಗಿ 6:1, 2.
ಅರಸನು ಪರಾತ್ಪರ ದೇವರನ್ನು ಘನತೆಗೇರಿಸುತ್ತಾನೆ
2, 3. ತನ್ನ ಪ್ರಜೆಗಳ ವಿಷಯದಲ್ಲಿ ಬಾಬೆಲಿನ ಅರಸನಿಗೆ ಯಾವ ಬಯಕೆಯಿತ್ತು, ಮತ್ತು ಪರಾತ್ಪರ ದೇವರ ಬಗ್ಗೆ ಅವನಿಗೆ ಯಾವ ಭಾವನೆಯಿತ್ತು?
2 ಈ ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಸ್ವಲ್ಪ ಸಮಯದ ಬಳಿಕ, ಏನು ಸಂಭವಿಸಿತೋ ಅದರ ಬಗ್ಗೆ ನೆಬೂಕದ್ನೆಚ್ಚರನು ತನ್ನ ಸಾಮ್ರಾಜ್ಯದಾದ್ಯಂತ ಒಂದು ಗಮನಾರ್ಹವಾದ ವರದಿಯನ್ನು ಕಳುಹಿಸಿದನು. ಈ ಘಟನೆಗಳ ನಿಷ್ಕೃಷ್ಟ ದಾಖಲೆಯನ್ನು ಸಂರಕ್ಷಿಸಿಡುವಂತೆ ಯೆಹೋವನು ಪ್ರವಾದಿಯಾದ ದಾನಿಯೇಲನನ್ನು ಪ್ರೇರಿಸುತ್ತಾನೆ. ಅದು ಈ ಮಾತುಗಳಿಂದ ಆರಂಭವಾಗುತ್ತದೆ: “ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗಕುಲಭಾಷೆಗಳವರಿಗೆ ರಾಜನಾದ ನೆಬೂಕದ್ನೆಚ್ಚರನ ಪ್ರಕಟನೆ—ನಿಮಗೆ ಸುಖವು ಹೆಚ್ಚೆಚ್ಚಾಗಲಿ! ಪರಾತ್ಪರ ದೇವರು ನನ್ನ ವಿಷಯದಲ್ಲಿ ನಡಿಸಿರುವ ಮಹತ್ತುಗಳನ್ನೂ [“ಸೂಚನೆಗಳನ್ನೂ,” NW] ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿಬಂದಿದೆ. ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳಿಕೆಯು ತಲತಲಾಂತರಕ್ಕೂ ನಿಲ್ಲುವದು.”—ದಾನಿಯೇಲ 4:1-3.
3 ನೆಬೂಕದ್ನೆಚ್ಚರನ ಪ್ರಜೆಗಳು “ಲೋಕದಲ್ಲೆಲ್ಲಾ ವಾಸಿಸು”ತ್ತಿದ್ದರು—ಅಂದರೆ ಅವನ ಸಾಮ್ರಾಜ್ಯವು ಬೈಬಲಿನಲ್ಲಿ ದಾಖಲೆಯಾಗಿದ್ದ ಲೋಕದ ಅಧಿಕಾಂಶ ಭಾಗವನ್ನು ಆವರಿಸಿತ್ತು. ದಾನಿಯೇಲನ ದೇವರ ಕುರಿತು ಅರಸನು ಹೇಳಿದ್ದು: “ಆತನ ರಾಜ್ಯವು ಶಾಶ್ವತರಾಜ್ಯ.” ಬಾಬೆಲ್ ಸಾಮ್ರಾಜ್ಯದಾದ್ಯಂತ ಈ ಮಾತುಗಳು ಯೆಹೋವನನ್ನು ಎಷ್ಟೊಂದು ಘನತೆಗೇರಿಸಿದವು! ಅಷ್ಟುಮಾತ್ರವಲ್ಲ, ದೇವರ ರಾಜ್ಯವು ಮಾತ್ರ ಅನಂತವಾಗಿದ್ದು, “ಶಾಶ್ವತವಾಗಿ” ನಿಲ್ಲುತ್ತದೆ ಎಂದು ನೆಬೂಕದ್ನೆಚ್ಚರನು ಹೇಳಿದನೆಂದು ಇಲ್ಲಿ ಎರಡನೆಯ ಬಾರಿ ತೋರಿಸಲ್ಪಟ್ಟಿದೆ.—ದಾನಿಯೇಲ 2:44.
4. ನೆಬೂಕದ್ನೆಚ್ಚರನ ಸಂಬಂಧದಲ್ಲಿ, ಯೆಹೋವನ ‘ಸೂಚನೆಗಳು ಹಾಗೂ ಅದ್ಭುತಗಳು’ ಹೇಗೆ ಆರಂಭವಾದವು?
4 “ಪರಾತ್ಪರ ದೇವರು” ಯಾವ ‘ಸೂಚನೆಗಳನ್ನು ಹಾಗೂ ಅದ್ಭುತಗಳನ್ನು’ ನಡಿಸಿದನು? ಈ ಕೆಳಗಿನ ಮಾತುಗಳಲ್ಲಿ ತಿಳಿಸಲ್ಪಟ್ಟ ಅರಸನ ವೈಯಕ್ತಿಕ ಅನುಭವದಿಂದ ಇವು ಆರಂಭಗೊಂಡವು: “ನೆಬೂಕದ್ನೆಚ್ಚರನಾದ ನಾನು ನನ್ನ ಆಲಯದಲ್ಲಿ ಹಾಯಾಗಿದ್ದೆನು, ಹೌದು ನನ್ನ ಅರಮನೆಯಲ್ಲಿ ಸೊಂಪಾಗಿದ್ದೆನು. ಹೀಗಿರಲು ನನ್ನನ್ನು ಹೆದರಿಸುವ ಒಂದು ಕನಸನ್ನು ಕಂಡೆನು; ಹಾಸಿಗೆಯಲ್ಲಿ ನನಗುಂಟಾದ ಯೋಚನೆಗಳೂ ನನ್ನ ಮನಸ್ಸಿಗೆ ಬಿದ್ದ ಸ್ವಪ್ನಗಳೂ ನನ್ನನ್ನು ಕಳವಳಗೊಳಿಸಿದವು.” (ದಾನಿಯೇಲ 4:4, 5) ಕಳವಳವನ್ನು ಉಂಟುಮಾಡುವ ಈ ಕನಸಿನ ಕುರಿತು ಬಾಬೆಲಿನ ಅರಸನು ಏನು ಮಾಡಿದನು?
5. ದಾನಿಯೇಲನ ಬಗ್ಗೆ ನೆಬೂಕದ್ನೆಚ್ಚರನಿಗೆ ಯಾವ ದೃಷ್ಟಿಕೋನವಿತ್ತು, ಮತ್ತು ಏಕೆ?
5 ನೆಬೂಕದ್ನೆಚ್ಚರನು ಬಾಬೆಲಿನ ವಿದ್ವಾಂಸರೆಲ್ಲರನ್ನೂ ಕರೆತರುವಂತೆ ಆಜ್ಞಾಪಿಸಿದನು ಮತ್ತು ಅವರಿಗೆ ಕನಸನ್ನು ತಿಳಿಸಿದನು. ಆದರೆ ಅವರು ವಿಫಲರಾದರು! ಅದರ ಅರ್ಥವನ್ನು ತಿಳಿಸಲು ಅವರು ಸಂಪೂರ್ಣವಾಗಿ ಅಶಕ್ತರಾಗಿದ್ದರು. ದಾಖಲೆಯು ಕೂಡಿಸಿದ್ದು: “ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರನೆಂಬ ಅಡ್ಡಹೆಸರನ್ನು ಹೊಂದಿದವನೂ ಪರಿಶುದ್ಧ ದೇವರುಗಳ ಆತ್ಮವುಳ್ಳವನೂ ಆದ ದಾನಿಯೇಲನು ಕಟ್ಟಕಡೆಯಲ್ಲಿ ನನ್ನ ಸನ್ನಿಧಿಗೆ ಬರಲು ನಾನು ಆ ಕನಸನ್ನು ಅವನಿಗೆ ತಿಳಿಸಿದೆನು.” (ದಾನಿಯೇಲ 4:6-8) ಅರಸನ ಆಸ್ಥಾನದಲ್ಲಿ ದಾನಿಯೇಲನನ್ನು ಬೇಲ್ತೆಶಚ್ಚರ ಎಂದು ಕರೆಯಲಾಗುತ್ತಿತ್ತು, ಮತ್ತು “ನನ್ನ ದೇವರು” ಎಂದು ಅರಸನು ಕರೆದ ಸುಳ್ಳು ದೇವತೆಯು, ಬೆಲ್ ಅಥವಾ ನೆಬೋ ಇಲ್ಲವೆ ಮಾರ್ದೂಕ್ ಆಗಿದ್ದಿರಬಹುದು. ಬಹುದೇವತೆಗಳನ್ನು ಆರಾಧಿಸುತ್ತಿದ್ದ ನೆಬೂಕದ್ನೆಚ್ಚರನು, ದಾನಿಯೇಲನಲ್ಲಿ “ಪರಿಶುದ್ಧ ದೇವರುಗಳ ಆತ್ಮ”ವಿದೆಯೆಂದು ನಂಬಿದ್ದನು. ಮತ್ತು ಬಾಬೆಲಿನ ವಿದ್ವಾಂಸರಲ್ಲಿ ಮುಖ್ಯಸ್ಥನೋಪಾದಿಯಿದ್ದ ದಾನಿಯೇಲನ ಸ್ಥಾನಮಾನದ ಕಾರಣದಿಂದ, ಅರಸನು ಅವನನ್ನು “ಜೋಯಿಸರಲ್ಲಿ ಪ್ರಧಾನನು” ಎಂದು ಸಂಬೋಧಿಸಿದನು. (ದಾನಿಯೇಲ 2:48; 4:9; ಹೋಲಿಸಿರಿ ದಾನಿಯೇಲ 1:20.) ನಂಬಿಗಸ್ತನಾದ ದಾನಿಯೇಲನು, ಮಂತ್ರತಂತ್ರವನ್ನು ನಡೆಸುವುದಕ್ಕೋಸ್ಕರ ಯೆಹೋವನ ಆರಾಧನೆಯನ್ನು ಎಂದಿಗೂ ತೊರೆಯಲಿಲ್ಲ ಎಂಬುದಂತೂ ಖಂಡಿತ.—ಯಾಜಕಕಾಂಡ 19:26; ಧರ್ಮೋಪದೇಶಕಾಂಡ 18:10-12.
ಒಂದು ಭಾರೀ ವೃಕ್ಷ
6, 7. ನೆಬೂಕದ್ನೆಚ್ಚರನು ತನ್ನ ಕನಸಿನಲ್ಲಿ ಏನನ್ನು ಕಂಡನೋ ಅದನ್ನು ನೀವು ಹೇಗೆ ವಿವರಿಸುವಿರಿ?
6 ಬಾಬೆಲಿನ ಅರಸನ ಭೀಕರ ಕನಸಿನಲ್ಲಿ ಏನು ಅಡಕವಾಗಿತ್ತು? ನೆಬೂಕದ್ನೆಚ್ಚರನು ಹೇಳಿದ್ದು: “ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳು ಇವೇ—ಇಗೋ, ಲೋಕದ ನಡುವೆ ಬಹು ಎತ್ತರವಾದ ಒಂದು ವೃಕ್ಷವನ್ನು ಕಂಡೆನು. ಆ ವೃಕ್ಷವು ಬೆಳೆದು ಬಲಗೊಂಡಿತ್ತು, ಅದರ ತುದಿಯು ಆಕಾಶವನ್ನು ಮುಟ್ಟಿತ್ತು, ಅದು ಭೂಲೋಕದ ಕಟ್ಟಕಡೆಗೂ ಕಾಣಿಸುತ್ತಿತ್ತು. ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಅದರಿಂದ ಎಲ್ಲಕ್ಕೂ ಆಹಾರ, ನೆರಳು ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ.” (ದಾನಿಯೇಲ 4:10-12) ನೆಬೂಕದ್ನೆಚ್ಚರನು ಲೆಬನೋನಿನ ದೇವದಾರು ವೃಕ್ಷಗಳನ್ನು ತುಂಬ ಇಷ್ಟಪಡುತ್ತಿದ್ದನು, ಅವುಗಳನ್ನು ನೋಡಲು ಹೋಗುತ್ತಿದ್ದನು, ಮತ್ತು ಆ ಮರದ ದಿಮ್ಮಿಗಳನ್ನು ಸಹ ಬಾಬೆಲಿಗೆ ತಂದಿದ್ದನು ಎಂದು ವರದಿಯು ತೋರಿಸುತ್ತದೆ. ಆದರೆ ತನ್ನ ಕನಸಿನಲ್ಲಿ ಕಂಡಿದ್ದಂತಹ ರೀತಿಯ ವೃಕ್ಷವನ್ನು ಅವನು ಈ ಮುಂಚೆ ಎಂದೂ ಕಂಡಿರಲೇ ಇಲ್ಲ. “ಲೋಕದ ನಡುವೆ” ಒಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದ ಆ ವೃಕ್ಷವನ್ನು, ಭೂವ್ಯಾಪಕವಾಗಿ ನೋಡಸಾಧ್ಯವಿತ್ತು; ಹಾಗೂ ಅದು ಎಷ್ಟೊಂದು ಫಲಭರಿತವಾಗಿತ್ತೆಂದರೆ, ಅದು ಸಕಲ ಜೀವರಾಶಿಗಳಿಗೆ ಆಹಾರವನ್ನು ಒದಗಿಸುತ್ತಿತ್ತು.
7 ಆ ಕನಸಿನಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿತ್ತು, ಏಕೆಂದರೆ ಕನಸನ್ನು ಮುಂದುವರಿಸುತ್ತಾ ನೆಬೂಕದ್ನೆಚ್ಚರನು ಹೇಳಿದ್ದು: “ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸಿನಲ್ಲಿ ಅನಿಮಿಷನಾದ ದೇವದೂತನು [“ಒಬ್ಬ ಕಾವಲುಗಾರನು, ಅಂದರೆ ಪವಿತ್ರನೊಬ್ಬನು ಕೂಡ,” NW] ಆಕಾಶದಿಂದಿಳಿದು ಗಟ್ಟಿಯಾಗಿ ಕೂಗಿ—ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ! ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ; ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಭೂಮಿಯ ಹುಲ್ಲು ಮೃಗಗಳಿಗೆ ಗತಿಯಾದಂತೆ ಅದಕ್ಕೆ ಗತಿಯಾಗಲಿ.”—ದಾನಿಯೇಲ 4:13-15.
8. ಆ “ಕಾವಲುಗಾರ”ನು ಯಾರಾಗಿದ್ದನು?
8 ದೇವದೂತರ ಬಗ್ಗೆ ಹಾಗೂ ದುರಾತ್ಮ ಜೀವಿಗಳ ಬಗ್ಗೆ ಬಾಬೆಲಿನವರಿಗೆ ತಮ್ಮದೇ ಆದ ಧಾರ್ಮಿಕ ಕಲ್ಪನೆಯಿತ್ತು. ಆದರೆ ಆಕಾಶದಿಂದಿಳಿದು ಬಂದ ಈ “ಕಾವಲುಗಾರನು” ಅಥವಾ ಪಹರೆಯವನು ಯಾರಾಗಿದ್ದನು? “ಪವಿತ್ರನು” ಎಂದು ಕರೆಯಲ್ಪಡುತ್ತಿದ್ದ ಇವನು, ದೇವರನ್ನು ಪ್ರತಿನಿಧಿಸುವ ಒಬ್ಬ ನೀತಿವಂತ ದೇವದೂತನಾಗಿದ್ದನು. (ಹೋಲಿಸಿರಿ ಕೀರ್ತನೆ 103:20, 21.) ನೆಬೂಕದ್ನೆಚ್ಚರನ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡಿದ್ದಿರಬಹುದಾದ ಪ್ರಶ್ನೆಗಳನ್ನು ಕಲ್ಪಿಸಿಕೊಳ್ಳಿರಿ! ಈ ವೃಕ್ಷವನ್ನು ಏಕೆ ಕಡಿಯಬೇಕು? ಬುಡದ ಮೋಟು ಬೆಳೆಯದಂತೆ, ಕಬ್ಬಿಣ ಹಾಗೂ ತಾಮ್ರದ ಪಟ್ಟೆಗಳು ಬಿಗಿಯಲ್ಪಟ್ಟಿರುವುದರಿಂದ ಯಾವ ಪ್ರಯೋಜನವಿದೆ? ಅಷ್ಟುಮಾತ್ರವಲ್ಲ, ಒಂದು ಬುಡದ ಮೋಟು ಯಾವ ಉದ್ದೇಶವನ್ನು ಪೂರೈಸುತ್ತದೆ?
9. ಮೂಲತಃ, ಕಾವಲುಗಾರನು ಏನು ಹೇಳಿದನು, ಮತ್ತು ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?
9 ಕಾವಲುಗಾರನ ಮುಂದಿನ ಮಾತುಗಳನ್ನು ಕೇಳಿಸಿಕೊಂಡಾಗ, ನೆಬೂಕದ್ನೆಚ್ಚರನು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದಿರಬೇಕು: “ಅದಕ್ಕೆ ಮಾನುಷ ಹೃದಯವು ಹೋಗಿ ಮೃಗದ ಹೃದಯವು ಬರಲಿ; ಹೀಗೆ ಅದಕ್ಕೆ ಏಳು ವರುಷ [“ಏಳು ಕಾಲಗಳು,” NW] ಕಳೆಯಲಿ. ಇದು ಅನಿಮಿಷರ [“ಕಾವಲುಗಾರರ,” NW] ತೀರ್ಮಾನ, ದೇವರ ತೀರ್ಪು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇಮಿಸುತ್ತಾನೆಂಬದು ಜೀವಂತರಿಗೆ ತಿಳಿದು ಬರಬೇಕೆಂದೇ ಈ ತೀರ್ಮಾನವಾಯಿತು.” (ದಾನಿಯೇಲ 4:16, 17) ಒಂದು ವೃಕ್ಷದೊಳಗೆ ಬಡಿಯುತ್ತಿರುವ ಮಾನುಷ ಹೃದಯವು ಇರುವುದಿಲ್ಲ. ಹಾಗಾದರೆ, ಒಂದು ವೃಕ್ಷಕ್ಕೆ ಮೃಗದ ಹೃದಯವನ್ನು ಹೇಗೆ ಕೊಡಸಾಧ್ಯವಿದೆ? “ಏಳು ಕಾಲಗಳು” ಅಂದರೇನು? ಮತ್ತು “ಮನುಷ್ಯರ ರಾಜ್ಯ”ದಲ್ಲಿನ ಆಳ್ವಿಕೆಗೆ ಇದೆಲ್ಲವೂ ಹೇಗೆ ಸಂಬಂಧಿಸಿದ್ದಾಗಿದೆ? ಖಂಡಿತವಾಗಿಯೂ ನೆಬೂಕದ್ನೆಚ್ಚರನು ಈ ವಿಷಯಗಳನ್ನು ತಿಳಿದುಕೊಳ್ಳಲು ಬಯಸಿದನು.
ಅರಸನಿಗೆ ಕೆಟ್ಟ ವಾರ್ತೆ
10. (ಎ) ಶಾಸ್ತ್ರೀಯವಾಗಿ ಹೇಳುವುದಾದರೆ, ವೃಕ್ಷಗಳು ಯಾವುದನ್ನು ಸಂಕೇತಿಸುತ್ತವೆ? (ಬಿ) ಭಾರೀ ವೃಕ್ಷವು ಏನನ್ನು ಪ್ರತಿನಿಧಿಸುತ್ತದೆ?
10 ಕನಸನ್ನು ಕೇಳಿಸಿಕೊಂಡ ಬಳಿಕ, ದಾನಿಯೇಲನು ದಿಗಿಲುಪಟ್ಟು ತುಸುಹೊತ್ತು ಸ್ತಬ್ಧನಾದನು. ಕನಸನ್ನು ವಿವರಿಸುವಂತೆ ನೆಬೂಕದ್ನೆಚ್ಚರನು ಪ್ರಚೋದಿಸಿದ್ದರಿಂದ, ಪ್ರವಾದಿಯು ಹೇಳಿದ್ದು: “ಎನ್ನೊಡೆಯನೇ, ಆ ಕನಸು ನಿನ್ನ ಹಗೆಗಳಿಗೆ ಫಲಿಸಲಿ, ಅದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ! ಯಾವ ವೃಕ್ಷವು ಬೆಳೆದು ಬಲಗೊಂಡು . . . ಕನಸಿನಲ್ಲಿ ನಿನಗೆ ತೋರಿತೋ ಆ ವೃಕ್ಷವು ನೀನೇ; ರಾಜಾ, ನೀನು ಬೆಳೆದು ಬಲಗೊಂಡಿದ್ದೀ, ನಿನ್ನ ಮಹಿಮೆಯು ವೃದ್ಧಿಯಾಗಿ ಆಕಾಶಕ್ಕೆ ಮುಟ್ಟಿದೆ, ನಿನ್ನ ಆಳಿಕೆಯು ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.” (ದಾನಿಯೇಲ 4:18-22) ಶಾಸ್ತ್ರವಚನಗಳಲ್ಲಿ, ವೃಕ್ಷಗಳು ವ್ಯಕ್ತಿಗಳನ್ನು, ರಾಜರನ್ನು, ಹಾಗೂ ರಾಜ್ಯಗಳನ್ನು ಸಂಕೇತಿಸುತ್ತವೆ. (ಕೀರ್ತನೆ 1:3; ಯೆರೆಮೀಯ 17:7, 8; ಯೆಹೆಜ್ಕೇಲ 31ನೆಯ ಅಧ್ಯಾಯ) ತನ್ನ ಕನಸಿನಲ್ಲಿನ ಭಾರೀ ವೃಕ್ಷದಂತೆ, ಒಂದು ಲೋಕ ಶಕ್ತಿಯ ಮುಖ್ಯಸ್ಥನೋಪಾದಿ ನೆಬೂಕದ್ನೆಚ್ಚರನು “ಬೆಳೆದು ಬಲಗೊಂಡಿ”ದ್ದನು. ಆದರೆ ಇಡೀ ಮನುಷ್ಯರ ರಾಜ್ಯವನ್ನು ಒಳಗೊಂಡಿದ್ದು, ‘ಲೋಕದ ಕಟ್ಟಕಡೆಗೂ ವ್ಯಾಪಿಸಿರುವ ಆಳಿಕೆಯು,’ ಆ ಮಹಾ ವೃಕ್ಷದಿಂದ ಪ್ರತಿನಿಧಿಸಲ್ಪಡುತ್ತದೆ. ಆದುದರಿಂದ, ಅದು ವಿಶೇಷವಾಗಿ ಭೂಮಿಯ ಕಡೆಗಿನ ಯೆಹೋವನ ವಿಶ್ವ ಪರಮಾಧಿಕಾರವನ್ನು ಸಂಕೇತಿಸುತ್ತದೆ.—ದಾನಿಯೇಲ 4:17.
11. ಅರಸನು ಕೀಳ್ಮಟ್ಟಕ್ಕೆ ಇಳಿಯುವಂತಹ ಒಂದು ಬದಲಾವಣೆಯನ್ನು ಅನುಭವಿಸಲಿದ್ದಾನೆ ಎಂಬುದನ್ನು ಅವನ ಕನಸು ಹೇಗೆ ತೋರಿಸಿಕೊಟ್ಟಿತು?
11 ನೆಬೂಕದ್ನೆಚ್ಚರನನ್ನು ಕೀಳ್ಮಟ್ಟಕ್ಕೆ ಇಳಿಸುವಂತಹ ಒಂದು ಬದಲಾವಣೆಯು ಅವನಿಗಾಗಿ ಕಾದಿತ್ತು. ಈ ವಿಕಸನದ ಬಗ್ಗೆ ಸೂಚಿಸುತ್ತಾ ದಾನಿಯೇಲನು ಕೂಡಿಸಿದ್ದು: “ಅನಿಮಿಷನಾದ ದೇವದೂತನು [“ಒಬ್ಬ ಕಾವಲುಗಾರನು, ಅಂದರೆ ಪವಿತ್ರನೊಬ್ಬನು ಕೂಡ,” NW] ಆಕಾಶದಿಂದಿಳಿದು—ವೃಕ್ಷವನ್ನು ಕಡಿದು ಹಾಳುಮಾಡಿರಿ; ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ, ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಅದಕ್ಕೆ ಏಳು ವರುಷ [“ಏಳು ಕಾಲಗಳು,” NW] ಕಳೆಯುವ ತನಕ ಕಾಡುಮೃಗಗಳ ಸಹವಾಸದ ಗತಿಯು ಬರಲಿ ಎಂದು ಸಾರುವದನ್ನು ರಾಜನಾದ ನೀನು ನೋಡಿದಿಯಲ್ಲಾ; ರಾಜನೇ, ಇದರ ತಾತ್ಪರ್ಯವೇನಂದರೆ, ಎನ್ನೊಡೆಯನಾದ ಅರಸನಿಗೆ ಉಂಟಾಗಿರುವ ಪರಾತ್ಪರನ ತೀರ್ಪು ಹೀಗಿದೆ.” (ದಾನಿಯೇಲ 4:23, 24) ಖಂಡಿತವಾಗಿಯೂ ಪರಾಕ್ರಮಿಯಾದ ಒಬ್ಬ ಅರಸನಿಗೆ ಈ ಸಂದೇಶವನ್ನು ತಿಳಿಯಪಡಿಸಲು ಒಬ್ಬನಿಗೆ ಧೈರ್ಯದ ಅಗತ್ಯವಿತ್ತು!
12. ನೆಬೂಕದ್ನೆಚ್ಚರನಿಗೆ ಏನು ಸಂಭವಿಸಲಿತ್ತು?
12 ನೆಬೂಕದ್ನೆಚ್ಚರನಿಗೆ ಏನು ಸಂಭವಿಸಲಿತ್ತು? ದಾನಿಯೇಲನು ಈ ಕೆಳಗಿನ ವಿಷಯವನ್ನು ಕೂಡಿಸಿದಾಗ, ನೆಬೂಕದ್ನೆಚ್ಚರನು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಊಹಿಸಿಕೊಳ್ಳಿರಿ: “ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡುಮೃಗಗಳೊಂದಿಗೆ [“ಹೊಲದ ಮೃಗಗಳೊಂದಿಗೆ,” NW] ವಾಸಿಸುವಿ, ದನಗಳಂತೆ ಹುಲ್ಲು ಮೇಯುವದೇ ನಿನಗೆ ಗತಿಯಾಗುವದು, ಆಕಾಶದ ಇಬ್ಬನಿಯು ನಿನ್ನನ್ನು ತೋಯಿಸುವದು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನಗೆ ತಿಳಿದು ಬರುವುದರೊಳಗೆ ಏಳು ವರುಷ ನಿನಗೆ ಹೀಗೆ ಕಳೆಯುವದು.” (ದಾನಿಯೇಲ 4:25) ನೆಬೂಕದ್ನೆಚ್ಚರನ ಆಸ್ಥಾನದ ಅಧಿಕಾರಿಗಳು ಸಹ ‘ಅವನನ್ನು ಮನುಷ್ಯರೊಳಗಿಂದ ತಳ್ಳಿಬಿಡ’ಸಾಧ್ಯವಿತ್ತು ಎಂಬುದು ಸುವ್ಯಕ್ತ. ಆದರೆ ಸಹಾನುಭೂತಿಯುಳ್ಳ ದನಕಾಯುವವರು ಅಥವಾ ಕುರುಬರು ಅವನ ಆರೈಕೆ ಮಾಡುವರೊ? ಖಂಡಿತವಾಗಿಯೂ ಇಲ್ಲ, ಏಕೆಂದರೆ ನೆಬೂಕದ್ನೆಚ್ಚರನು “ಕಾಡುಮೃಗಗಳೊಂದಿಗೆ” ವಾಸಿಸುವಂತೆ ದೇವರು ಆಜ್ಞಾಪಿಸಿದ್ದನು.
13. ಒಬ್ಬ ಲೋಕಾಧಿಪತಿಯೋಪಾದಿ ನೆಬೂಕದ್ನೆಚ್ಚರನ ಸ್ಥಾನಕ್ಕೆ ಏನು ಸಂಭವಿಸಲಿದೆ ಎಂಬುದನ್ನು ಕಡಿದ ವೃಕ್ಷದ ಕನಸು ತೋರಿಸಿತು?
13 ಆ ಭಾರೀ ವೃಕ್ಷವು ಕಡಿದುಹಾಕಲ್ಪಟ್ಟಂತೆಯೇ, ನೆಬೂಕದ್ನೆಚ್ಚರನು ಲೋಕದ ಆಳ್ವಿಕೆಯಿಂದ ಉರುಳಿಸಲ್ಪಡಲಿದ್ದನು, ಆದರೆ ಸ್ವಲ್ಪ ಕಾಲಾವಧಿಯ ವರೆಗೆ ಮಾತ್ರ. ದಾನಿಯೇಲನು ವಿವರಿಸಿದ್ದು: “ವೃಕ್ಷದ ಬುಡದ ಮೋಟನ್ನು ಉಳಿಸಿರಿ ಎಂದು ಅಪ್ಪಣೆಯಾಯಿತಲ್ಲಾ; ಇದರ ತಾತ್ಪರ್ಯವೇನಂದರೆ ಪರಲೋಕಕ್ಕೆ ಸರ್ವಾಧಿಕಾರವುಂಟೆಂಬದನ್ನು ನೀನು ತಿಳಿದುಕೊಂಡ ನಂತರ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.” (ದಾನಿಯೇಲ 4:26) ನೆಬೂಕದ್ನೆಚ್ಚರನು ಕನಸಿನಲ್ಲಿ ಯಾವ ವೃಕ್ಷವನ್ನು ಕಂಡಿದ್ದನೋ, ಆ ಕಡಿಯಲ್ಪಟ್ಟ ವೃಕ್ಷದ ಬುಡ ಅಥವಾ ಮೋಟನ್ನು ನೆಲದಲ್ಲಿ ಉಳಿಸಲಾಗಿತ್ತು. ಆದರೆ ಅದು ಬೆಳೆಯದಂತೆ ಪಟ್ಟೆಯನ್ನು ಬಿಗಿಯಲಾಗಿತ್ತು. ತದ್ರೀತಿಯಲ್ಲಿ, ಬಾಬೆಲಿನ ಅರಸನ “ಬುಡದ ಮೋಟು” ಉಳಿಸಲ್ಪಡುವುದು, ಆದರೆ “ಏಳು ಕಾಲಗಳ” ವರೆಗೆ ಸೊಂಪಾಗಿ ಬೆಳೆಯುವುದರಿಂದ ತಡೆಹಿಡಿಯಲ್ಪಡುವುದು. ಲೋಕಾಧಿಪತಿಯೋಪಾದಿ ಅವನ ಸ್ಥಾನವು, ಪಟ್ಟೆ ಬಿಗಿಯಲ್ಪಟ್ಟ ಬುಡದ ಮೋಟಿನಂತೆ ಇರುವುದು. ಏಳು ಕಾಲಗಳು ಕಳೆಯುವ ತನಕ ಅವನ ಸ್ಥಾನವು ಸುರಕ್ಷಿತವಾಗಿ ಇರಿಸಲ್ಪಡುವುದು. ಆ ಸಮಯಾವಧಿಯಲ್ಲಿ, ನೆಬೂಕದ್ನೆಚ್ಚರನಿಗೆ ಬದಲಾಗಿ ಅವನ ಮಗನಾದ ಎವೀಲ್ಮೆರೋದಕನು ತಾತ್ಕಾಲಿಕವಾಗಿ ಅಧಿಕಾರ ನಡೆಸಿದ್ದಿರಬಹುದಾದರೂ, ಬಾಬೆಲಿನ ಏಕಮಾತ್ರ ಅಧಿಪತಿಯಾಗಿದ್ದ ನೆಬೂಕದ್ನೆಚ್ಚರನಿಗೆ ಬದಲಾಗಿ ಯಾರೊಬ್ಬರೂ ಉತ್ತರಾಧಿಕಾರಿಯಾಗದಂತೆ ಯೆಹೋವನು ನೋಡಿಕೊಳ್ಳುವನು.
14. ದಾನಿಯೇಲನು ನೆಬೂಕದ್ನೆಚ್ಚರನಿಗೆ ಏನು ಮಾಡುವಂತೆ ಪ್ರಚೋದಿಸಿದನು?
14 ನೆಬೂಕದ್ನೆಚ್ಚರನ ಕುರಿತು ಏನು ಮುಂತಿಳಿಸಲ್ಪಟ್ಟಿತ್ತೋ ಅದನ್ನು ಪರಿಗಣಿಸುತ್ತಾ, ದಾನಿಯೇಲನು ಧೈರ್ಯದಿಂದ ಪ್ರಚೋದಿಸಿದ್ದು: “ಆದಕಾರಣ, ಅರಸೇ, ಈ ನನ್ನ ಬುದ್ಧಿವಾದವು ನಿನಗೆ ಒಪ್ಪಿಗೆಯಾಗಲಿ—ನೀನು ಧರ್ಮವನ್ನು ಆಚರಿಸಿ ನಿನ್ನ ಪಾಪಗಳನ್ನು ನಾಶಗೊಳಿಸಿ, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು; ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾದೀತು.” (ದಾನಿಯೇಲ 4:27) ಒಂದುವೇಳೆ ನೆಬೂಕದ್ನೆಚ್ಚರನು ದಬ್ಬಾಳಿಕೆ ಹಾಗೂ ಅಹಂಕಾರದ ಪಾಪಪೂರ್ಣ ಜೀವನಮಾರ್ಗವನ್ನು ಬಿಟ್ಟುಬಿಡುತ್ತಿದ್ದಲ್ಲಿ, ಬಹುಶಃ ಅವನಿಗೆ ಒದಗಿಬಂದ ಪರಿಸ್ಥಿತಿಯು ಬದಲಾಗಸಾಧ್ಯವಿತ್ತು. ಯಾಕೆಂದರೆ, ಸುಮಾರು ಎರಡು ಶತಮಾನಗಳಿಗೆ ಮುಂಚೆ, ಅಶ್ಶೂರ್ಯರ ರಾಜಧಾನಿಯಾಗಿದ್ದ ನಿನೆವೆ ಪಟ್ಟಣದ ಜನರನ್ನು ನಾಶಮಾಡಲು ಯೆಹೋವನು ನಿರ್ಧರಿಸಿದ್ದನಾದರೂ, ಆ ಪಟ್ಟಣದ ಅರಸನೂ ಅವನ ಪ್ರಜೆಗಳೂ ಪಶ್ಚಾತ್ತಾಪ ತೋರಿಸಿದ್ದರಿಂದ ಆತನು ಅವರನ್ನು ನಾಶಮಾಡಲಿಲ್ಲ. (ಯೋನ 3:4, 10; ಲೂಕ 11:32) ಅಹಂಕಾರಿಯಾದ ನೆಬೂಕದ್ನೆಚ್ಚರನ ಕುರಿತಾಗಿ ಏನು? ಅವನು ತನ್ನ ಮಾರ್ಗಗಳನ್ನು ಬದಲಾಯಿಸುವನೋ?
ಕನಸಿನ ಆರಂಭದ ನೆರವೇರಿಕೆ
15. (ಎ) ನೆಬೂಕದ್ನೆಚ್ಚರನು ಯಾವ ಮನೋಭಾವವನ್ನು ತೋರಿಸುತ್ತಾ ಮುಂದುವರಿದನು? (ಬಿ) ನೆಬೂಕದ್ನೆಚ್ಚರನ ಚಟುವಟಿಕೆಗಳ ಕುರಿತು ಶಾಸನಫಲಕಗಳು ಏನನ್ನು ಬಯಲುಪಡಿಸುತ್ತವೆ?
15 ನೆಬೂಕದ್ನೆಚ್ಚರನು ಅಹಂಕಾರಿಯಾಗಿಯೇ ಉಳಿದನು. ಕಡಿದ ವೃಕ್ಷದ ಕನಸನ್ನು ಕಂಡು ಸುಮಾರು 12 ತಿಂಗಳುಗಳು ಕಳೆದ ಬಳಿಕ, ತನ್ನ ಅರಮನೆಯ ಮೇಲೆ ತಿರುಗಾಡುತ್ತಾ ಅವನು ಜಂಬಕೊಚ್ಚಿಕೊಂಡದ್ದು: “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್.” (ದಾನಿಯೇಲ 4:28-30) ನಿಮ್ರೋದನು ಬಾಬೆಲ್ (ಬ್ಯಾಬಿಲೊನ್)ನ ಸ್ಥಾಪಕನಾಗಿದ್ದನಾದರೂ, ನೆಬೂಕದ್ನೆಚ್ಚರನು ಅದರ ವೈಭವವನ್ನು ಹೆಚ್ಚಿಸಿದನು. (ಆದಿಕಾಂಡ 10:8-10) ತನ್ನ ಬೆಣೆಲಿಪಿ ಶಾಸನಫಲಕಗಳಲ್ಲೊಂದರಲ್ಲಿ ಅವನು ಜಂಬಕೊಚ್ಚಿಕೊಳ್ಳುವುದು: “ನಾನು ನೆಬೂಕಡ್ರೆಸರ್, ಬಾಬೆಲಿನ ಅರಸನೂ, ಈಸಗಿಲ್ಲ ಹಾಗೂ ಈಸಿಡದ ಪುನಸ್ಸ್ಥಾಪಕನೂ, ನೆಬೊಪೊಲಾಸರನ ಮಗನೂ ಆಗಿದ್ದೇನೆ. . . . ನಾನೇ ಈಸಗಿಲ್ಲ ಹಾಗೂ ಬಾಬೆಲಿನ ಕೋಟೆಕೊತ್ತಲಗಳನ್ನು ಭದ್ರಪಡಿಸಿ, ನನ್ನ ಆಳ್ವಿಕೆಯ ಹೆಸರನ್ನು ಸದಾಕಾಲಕ್ಕೂ ಸ್ಥಿರಪಡಿಸಿದೆನು.” (ಪ್ರಾಕ್ತನಶಾಸ್ತ್ರ ಹಾಗೂ ಬೈಬಲ್ [ಇಂಗ್ಲಿಷ್], ಜಾರ್ಜ್ ಎ. ಬಾರ್ಟನ್ ಅವರು ಬರೆದುದು, 1949, 478-9ನೆಯ ಪುಟಗಳು) ಇನ್ನೊಂದು ಶಾಸನಫಲಕವು, ಅವನು ನವೀಕರಿಸಿದ ಅಥವಾ ಪುನಃ ಕಟ್ಟಿಸಿದ ಸುಮಾರು 20 ದೇವಾಲಯಗಳ ಕುರಿತು ಸೂಚಿಸುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೀಗೆ ಹೇಳುತ್ತದೆ: “ನೆಬೂಕದ್ನೆಚ್ಚರನ ಆಳ್ವಿಕೆಯ ಕೆಳಗೆ, ಪುರಾತನ ಲೋಕದ ಅತ್ಯಂತ ಭವ್ಯ ಪಟ್ಟಣಗಳಲ್ಲಿ ಬಾಬೆಲ್ ಒಂದಾಗಿ ಪರಿಣಮಿಸಿತು. ತನ್ನ ಸ್ವಂತ ದಾಖಲೆಗಳಲ್ಲಿ, ತನ್ನ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ನೆಬೂಕದ್ನೆಚ್ಚರನು ಹೆಚ್ಚು ವಿಷಯಗಳನ್ನು ಬರೆದಿಲ್ಲ, ಆದರೆ ತನ್ನ ಕಟ್ಟಡ ಯೋಜನೆಗಳ ಕುರಿತು ಹಾಗೂ ಬಾಬೆಲಿನ ದೇವದೇವತೆಗಳ ಕಡೆಗೆ ತಾನು ಹರಿಸಿದ ಗಮನದ ಕುರಿತು ಬರೆದಿದ್ದಾನೆ. ಪುರಾತನ ಲೋಕದ ಏಳು ಅದ್ಭುತಗಳಲ್ಲಿ ಒಂದಾಗಿರುವ ಬಾಬೆಲಿನ ತೂಗುದೋಟವನ್ನು ನೆಬೂಕದ್ನೆಚ್ಚರನೇ ಕಟ್ಟಿಸಿರಬಹುದು.”
16. ಸ್ವಲ್ಪದರಲ್ಲೇ ನೆಬೂಕದ್ನೆಚ್ಚರನು ಹೇಗೆ ಅಪಮಾನವನ್ನು ಅನುಭವಿಸಲಿದ್ದನು?
16 ಅಹಂಕಾರಿಯಾದ ನೆಬೂಕದ್ನೆಚ್ಚರನು ಜಂಬಕೊಚ್ಚಿಕೊಂಡನಾದರೂ, ಸ್ವಲ್ಪದರಲ್ಲೇ ಅವನು ಅಪಮಾನವನ್ನು ಅನುಭವಿಸಲಿದ್ದನು. ಪ್ರೇರಿತ ವೃತ್ತಾಂತವು ಹೀಗೆ ಹೇಳುತ್ತದೆ. “ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗ—ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು; ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡುಮೃಗಗಳೊಂದಿಗೆ ವಾಸಿಸುವಿ, ದನಗಳಂತೆ ಹುಲ್ಲುಮೇಯುವದೇ ನಿನಗೆ ಗತಿಯಾಗುವದು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನ್ನ ತಿಳುವಳಿಕೆಗೆ ಬರುವದರೊಳಗೆ ಏಳು ವರುಷ [“ಏಳು ಕಾಲಗಳು,” NW] ನಿನಗೆ ಹೀಗೆ ಕಳೆಯುವದು ಎಂದು ಆಕಾಶವಾಣಿಯಾಯಿತು.”—ದಾನಿಯೇಲ 4:31, 32.
17. ಅಹಂಕಾರಿಯಾದ ನೆಬೂಕದ್ನೆಚ್ಚರನಿಗೆ ಏನು ಸಂಭವಿಸಿತು, ಮತ್ತು ಸ್ವಲ್ಪದರಲ್ಲೇ ಅವನು ಯಾವ ಸನ್ನಿವೇಶಗಳಿಗೆ ತುತ್ತಾದನು?
17 ನೆಬೂಕದ್ನೆಚ್ಚರನಿಗೆ ಸಂಪೂರ್ಣವಾಗಿ ಮತಿಭ್ರಮಣೆಯಾಯಿತು. ಮನುಷ್ಯರೊಳಗಿಂದ ತಳ್ಳಲ್ಪಟ್ಟು, ಅವನು “ದನಗಳಂತೆ” ಹುಲ್ಲು ತಿಂದನು. ಹೊಲದ ಮೃಗಗಳ ಮಧ್ಯದಲ್ಲಿರುವಾಗ, ಸಾಕ್ಷಾತ್ ಪರದೈಸದ ಹುಲ್ಲಿನ ನಡುವೆ ಪ್ರತಿ ದಿನ ಚೈತನ್ಯದಾಯಕ ಗಾಳಿಯನ್ನು ಆಸ್ವಾದಿಸುತ್ತಾ, ಅವನು ಸೋಮಾರಿಯಾಗಿ ಕುಳಿತುಕೊಂಡಿರಲಿಲ್ಲ ಎಂಬುದಂತೂ ಖಂಡಿತ. ಬಾಬೆಲಿನ ಅವಶೇಷಗಳಿರುವ ಆಧುನಿಕ ದಿನದ ಇರಾಕಿನಲ್ಲಿ, ಬೇಸಗೆ ತಿಂಗಳುಗಳಲ್ಲಿ ಉಷ್ಣಾಂಶವು 50 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಘನೀಕರಣ ಬಿಂದುವಿಗಿಂತಲೂ ಕಡಿಮೆಯಾಗಿರುತ್ತದೆ. ಆರೈಕೆ ಮಾಡದೆ ಇದ್ದುದರಿಂದ ಹಾಗೂ ಪ್ರಕೃತಿ ಶಕ್ತಿಗಳಿಗೆ ಒಡ್ಡಲ್ಪಟ್ಟದ್ದರಿಂದ, ನೆಬೂಕದ್ನೆಚ್ಚರನ ಉದ್ದವಾದ, ಜಡೆಗಟ್ಟಿದ ಕೂದಲು, ಹದ್ದುಗಳ ಗರಿಗಳಂತೆ ಕಾಣುತ್ತಿತ್ತು ಮತ್ತು ಕತ್ತರಿಸದೆ ಬಿಡಲ್ಪಟ್ಟಿದ್ದ ಅವನ ಕೈಕಾಲುಗಳ ಉಗುರುಗಳು ಪಕ್ಷಿಗಳ ಉಗುರುಗಳಂತಿದ್ದವು. (ದಾನಿಯೇಲ 4:33) ಈ ಅಹಂಕಾರಿ ಲೋಕಾಧಿಪತಿಗೆ ಎಂತಹ ಅವಮಾನ!
18. ಏಳು ಕಾಲಗಳ ಸಮಯಾವಧಿಯಲ್ಲಿ, ಬಾಬೆಲಿನ ಸಿಂಹಾಸನದ ಸಂಬಂಧದಲ್ಲಿ ಏನು ಸಂಭವಿಸಿತು?
18 ನೆಬೂಕದ್ನೆಚ್ಚರನ ಕನಸಿನಲ್ಲಿ, ಬಹು ಎತ್ತರವಾಗಿದ್ದ ಆ ವೃಕ್ಷವು ಕಡಿದುಹಾಕಲ್ಪಟ್ಟು, ಏಳು ಕಾಲಗಳ ವರೆಗೆ ಬೆಳೆಯದಂತೆ ಮಾಡಲಿಕ್ಕಾಗಿ ಅದರ ಬುಡದ ಮೋಟಿಗೆ ಪಟ್ಟೆಯನ್ನು ಬಿಗಿಯಲಾಗಿತ್ತು. ತದ್ರೀತಿಯಲ್ಲಿ, ಯೆಹೋವನು ನೆಬೂಕದ್ನೆಚ್ಚರನಿಗೆ ಮತಿಭ್ರಮಣೆಯಾಗುವಂತೆ ಮಾಡಿದಾಗ, ಅವನನ್ನು “ಅವನ ರಾಜ್ಯದ ಸಿಂಹಾಸನದಿಂದ ಕೆಳಗಿಳಿಸಲಾಯಿತು.” (ದಾನಿಯೇಲ 5:20, NW) ಇದರ ಪರಿಣಾಮವಾಗಿ, ಅರಸನ ಹೃದಯವು ಮಾನುಷ ಹೃದಯದಿಂದ ದನದ ಹೃದಯವಾಗಿ ಬದಲಾಯಿತು. ಆದರೂ, ಆ ಏಳು ಕಾಲಗಳು ಕೊನೆಗೊಳ್ಳುವ ವರೆಗೆ ದೇವರು ನೆಬೂಕದ್ನೆಚ್ಚರನ ಸಿಂಹಾಸನವನ್ನು ಅವನಿಗಾಗಿಯೇ ಕಾದಿರಿಸಿದನು. ಎವೀಲ್ಮೆರೋದಕನು ಆ ಸರಕಾರದ ತಾತ್ಕಾಲಿಕ ಮುಖಂಡನಾಗಿ ಕಾರ್ಯನಡಿಸಿರಬಹುದಾದರೂ, ದಾನಿಯೇಲನು “ಬಾಬೆಲ್ ಸಂಸ್ಥಾನ” ಮತ್ತು “ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರಿಗೂ . . . ಮುಖ್ಯಸ್ಥನಾಗಿ” ಸೇವೆಸಲ್ಲಿಸಿದನು. ಅವನ ಮೂವರು ಇಬ್ರಿಯ ಸಂಗಡಿಗರು, ಬಾಬೆಲ್ ಸಂಸ್ಥಾನದ ಉನ್ನತ ಪದವಿಯಲ್ಲಿ ಸೇವೆಸಲ್ಲಿಸುವುದನ್ನು ಮುಂದುವರಿಸಿದರು. (ದಾನಿಯೇಲ 1:11-19; 2:48, 49; 3:30) ಈ ನಾಲ್ಕು ಮಂದಿ ದೇಶಭ್ರಷ್ಟರು, “ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ” ಎಂಬುದನ್ನು ಕಲಿತುಕೊಂಡಿರುವ, ಮಾನಸಿಕ ಸ್ವಸ್ಥತೆಯನ್ನು ಮತ್ತೆ ಪಡೆದ ನೆಬೂಕದ್ನೆಚ್ಚರನು ಒಬ್ಬ ಅರಸನೋಪಾದಿ ಪುನಃ ಸಿಂಹಾಸನಾರೂಢನಾಗುವ ಸಮಯಕ್ಕಾಗಿ ಕಾಯುತ್ತಾ ಇದ್ದರು.
ನೆಬೂಕದ್ನೆಚ್ಚರನ ಪುನಸ್ಸ್ಥಾಪನೆ
19. ಯೆಹೋವನು ನೆಬೂಕದ್ನೆಚ್ಚರನ ಚಿತ್ತಸ್ವಾಸ್ಥ್ಯವನ್ನು ಪೂರ್ವಸ್ಥಿತಿಗೆ ತಂದ ಬಳಿಕ, ಬಾಬೆಲಿನ ಅರಸನು ಏನನ್ನು ಮನಗಂಡನು?
19 ಏಳು ಕಾಲಗಳು ಕೊನೆಗೊಂಡ ಬಳಿಕ ಯೆಹೋವನು ನೆಬೂಕದ್ನೆಚ್ಚರನ ಚಿತ್ತಸ್ವಾಸ್ಥ್ಯವನ್ನು ಪೂರ್ವಸ್ಥಿತಿಗೆ ತಂದನು. ಪರಾತ್ಪರ ದೇವರನ್ನು ಅಂಗೀಕರಿಸುತ್ತಾ ಅರಸನು ಹೇಳಿದ್ದು: “ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. ಆಗ ನಾನು ಪರಾತ್ಪರನನ್ನು ಕೊಂಡಾಡಿ ಸದಾ ಜೀವಿಸುವಾತನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ನಿಲ್ಲುವದು; ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಏನೂ ಅಲ್ಲದಂತಿದ್ದಾರೆ, ಪರಲೋಕಸೈನ್ಯದವರಲ್ಲಿಯೂ ಭೂಲೋಕದವರಲ್ಲಿಯೂ ತನ್ನ ಇಚ್ಛಾನುಸಾರ ನಡೆಯುತ್ತಾನೆ; ಯಾರೂ ಆತನ ಕೈಯನ್ನು ಹಿಂದಕ್ಕೆ ತಳ್ಳಲಾರರು, ನೀನು ಏನು ಮಾಡುತ್ತೀ ಎಂದು ಯಾರೂ ಕೇಳಲಾರರು.” (ದಾನಿಯೇಲ 4:34, 35) ಹೌದು, ಖಂಡಿತವಾಗಿಯೂ ಪರಾತ್ಪರ ದೇವರು ಮನುಷ್ಯರ ರಾಜ್ಯದಲ್ಲಿ ಸರ್ವಶ್ರೇಷ್ಠ ಅರಸನಾಗಿದ್ದಾನೆ ಎಂಬುದನ್ನು ನೆಬೂಕದ್ನೆಚ್ಚರನು ಮನಗಂಡನು.
20, 21. (ಎ) ಕನಸಿನ ವೃಕ್ಷದ ಬುಡದ ಮೋಟಿಗೆ ಬಿಗಿಯಲ್ಪಟ್ಟಿದ್ದ ಲೋಹದ ಪಟ್ಟೆಗಳು ಬಿಚ್ಚಲ್ಪಟ್ಟ ಸಂಗತಿಯು, ನೆಬೂಕದ್ನೆಚ್ಚರನಿಗೆ ಏನು ಸಂಭವಿಸಿತೋ ಅದರೊಂದಿಗೆ ಹೇಗೆ ಹೋಲುತ್ತದೆ? (ಬಿ) ನೆಬೂಕದ್ನೆಚ್ಚರನು ಯಾವ ವಿಷಯವನ್ನು ಅಂಗೀಕರಿಸಿದನು, ಮತ್ತು ಇದು ಅವನನ್ನು ಒಬ್ಬ ಯೆಹೋವನ ಆರಾಧಕನನ್ನಾಗಿ ಮಾಡಿತೋ?
20 ನೆಬೂಕದ್ನೆಚ್ಚರನು ಪುನಃ ಸಿಂಹಾಸನಾರೂಢನಾದಾಗ, ಕನಸಿನ ವೃಕ್ಷದ ಬುಡದ ಮೋಟಿಗೆ ಬಿಗಿಯಲ್ಪಟ್ಟಿದ್ದ ಲೋಹದ ಪಟ್ಟೆಗಳು ಬಿಚ್ಚಲ್ಪಟ್ಟಿದ್ದವೋ ಎಂಬಂತಿತ್ತು. ತನ್ನ ಪುನಸ್ಸ್ಥಾಪನೆಯ ಕುರಿತು ಅವನು ಹೇಳಿದ್ದು: “ಅದೇ ಸಮಯದಲ್ಲಿ ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು; ನನ್ನ ಪ್ರಭಾವವೈಭವಗಳು ನನಗೆ ಮತ್ತೆ ಲಭಿಸಿ ನನ್ನ ರಾಜ್ಯದ ಕೀರ್ತಿಯು ಪ್ರಕಾಶಿಸಿತು; ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಓಲೈಸಿದರು; ನನ್ನ ರಾಜ್ಯದಲ್ಲಿ ರಾಜನಾಗಿ ನೆಲೆಗೊಂಡೆನು; ನನ್ನ ಮಹಿಮೆಯು ಅತ್ಯಧಿಕವಾಯಿತು.” (ದಾನಿಯೇಲ 4:36) ಈ ಮುಂಚೆ ಆಸ್ಥಾನದ ಅಧಿಕಾರಿಗಳಲ್ಲಿ ಯಾರಾದರೂ ಮತಿಭ್ರಮಣೆಯಾಗಿದ್ದ ಅರಸನನ್ನು ಕಡೆಗಣಿಸಿದ್ದಲ್ಲಿ, ಈಗ ಅವರು ಸಂಪೂರ್ಣ ಅಧೀನಭಾವದಿಂದ ಅವನನ್ನು “ಓಲೈಸಲು” ಪ್ರಯತ್ನಿಸುತ್ತಿದ್ದರು.
21 ಪರಾತ್ಪರ ದೇವರು ಎಂತಹ ‘ಸೂಚನೆಗಳನ್ನು ಹಾಗೂ ಅದ್ಭುತಗಳನ್ನು’ ನಡಿಸಿದ್ದನು! ಪುನಸ್ಸ್ಥಾಪಿಸಲ್ಪಟ್ಟ ಬಾಬೆಲಿನ ಅರಸನು ಮುಂದೆ ಏನು ಹೇಳಿದನೋ ಅದರಿಂದ ನಾವು ಆಶ್ಚರ್ಯಚಕಿತರಾಗಬಾರದು: “ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.” (ದಾನಿಯೇಲ 4:2, 37) ನೆಬೂಕದ್ನೆಚ್ಚರನು ಇಷ್ಟೆಲ್ಲ ವಿಷಯವನ್ನು ಅಂಗೀಕರಿಸಿದರೂ, ಅವನು ಯೆಹೋವನ ಒಬ್ಬ ಯೆಹೂದ್ಯೇತರ ಆರಾಧಕನಾಗಲಿಲ್ಲ.
ಐಹಿಕ ಪುರಾವೆಯಿದೆಯೊ?
22. ನೆಬೂಕದ್ನೆಚ್ಚರನ ಹುಚ್ಚುತನವನ್ನು ಕೆಲವರು ಯಾವ ರೋಗದೊಂದಿಗೆ ಸಂಬಂಧಿಸುತ್ತಾರೆ, ಆದರೆ ಅವನ ಮಾನಸಿಕ ಅಸ್ವಸ್ಥತೆಯ ಕಾರಣದ ಕುರಿತು ನಾವು ಏನನ್ನು ಅರ್ಥಮಾಡಿಕೊಳ್ಳಬೇಕು?
22 ಕೆಲವರು ನೆಬೂಕದ್ನೆಚ್ಚರನ ಉನ್ಮಾದ ಸ್ಥಿತಿಯನ್ನು ತೋಳರೂಪಧಾರಣೆ (ಲೈಕ್ಯಾಂತ್ರಪಿ)ಯೊಂದಿಗೆ ಸಂಬಂಧಿಸುತ್ತಾರೆ. ಒಂದು ವೈದ್ಯಕೀಯ ಶಬ್ದಕೋಶವು ಹೇಳುವುದು: “ಲೈಕ್ಯಾಂತ್ರಪಿ . . . ಅಂದರೆ [ಲೈಕೋಸ್], ಲೂಪಸ್, ತೋಳ; [ಆ್ಯಂತ್ರೊಪಾಸ್], ಹೋಮೋ, ಮನುಷ್ಯ. ಯಾರು ತಾವು ಒಂದು ಪ್ರಾಣಿಯಾಗಿ ಬದಲಾಗಿದ್ದೇವೆ ಎಂದು ತಮ್ಮಷ್ಟಕ್ಕೇ ನಂಬಿ, ಆ ಪ್ರಾಣಿಯ ಧ್ವನಿ ಅಥವಾ ಕೂಗು, ಲಕ್ಷಣ ಅಥವಾ ವರ್ತನೆಯನ್ನು ಅನುಕರಿಸುತ್ತಾರೋ ಅಂತಹ ಅಸ್ವಸ್ಥತೆಯಿರುವ ಜನರಿಗೆ ಈ ಹೆಸರು ಕೊಡಲ್ಪಟ್ಟಿತು. ಸಾಮಾನ್ಯವಾಗಿ ಇಂತಹ ವ್ಯಕ್ತಿಗಳು, ತಾವು ಒಂದು ತೋಳ, ನಾಯಿ, ಅಥವಾ ಬೆಕ್ಕಾಗಿ ರೂಪಾಂತರಗೊಂಡಿದ್ದೇವೆಂದು ಕಲ್ಪಿಸಿಕೊಳ್ಳುತ್ತಾರೆ; ಕೆಲವೊಮ್ಮೆ ನೆಬೂಕದ್ನೆಚ್ಚರನ ಸಂಬಂಧದಲ್ಲಿ ಸಂಭವಿಸಿದಂತೆ, ತಮ್ಮನ್ನು ಒಂದು ದನವಾಗಿಯೂ ಕಲ್ಪಿಸಿಕೊಳ್ಳುತ್ತಾರೆ.” (ಡಿಕ್ಸ್ಯೊನರ್ ಡೇ ಸ್ಜಾನ್ಸ್ ಮೇಡೀಕಾಲ್, ಪಾರ್ ಉನ್ ಸಾಸ್ಯೇಟೇ ಡ ಮೇಡ್ಸಾನ್ ಏ ಡ ಶೀರ್ಯೂರ್ಸ್ಯೆನ್, ಪ್ಯಾರಿಸ್, 1818, ಸಂಪುಟ 29, ಪುಟ 246) ತೋಳರೂಪಧಾರಣೆಯ ರೋಗಲಕ್ಷಣಗಳು, ನೆಬೂಕದ್ನೆಚ್ಚರನ ಹುಚ್ಚು ಸ್ಥಿತಿಯ ರೋಗಲಕ್ಷಣಗಳಿಗೆ ಅನುರೂಪವಾಗಿವೆ. ಆದರೂ, ಅವನ ಮಾನಸಿಕ ಅಸ್ವಸ್ಥತೆಯು ದೈವಿಕ ಮೂಲದಿಂದ ಬಂದುದಾಗಿದ್ದುದರಿಂದ, ಸಾಮಾನ್ಯವಾಗಿ ಗೊತ್ತಿರುವ ಯಾವುದೇ ರೋಗದೊಂದಿಗೆ ಅದರ ಸಂಬಂಧವನ್ನು ಕಲ್ಪಿಸಲು ಸಾಧ್ಯವಿಲ್ಲ.
23. ನೆಬೂಕದ್ನೆಚ್ಚರನ ಉನ್ಮಾದ ಸ್ಥಿತಿಯ ಬಗ್ಗೆ ಯಾವ ಐಹಿಕ ಪುರಾವೆಯಿದೆ?
23 ವಿದ್ವಾಂಸರಾದ ಜಾನ್ ಇ. ಗೋಲ್ಡಿಂಗೇ ಅವರು, ನೆಬೂಕದ್ನೆಚ್ಚರನ ಉನ್ಮಾದ ಸ್ಥಿತಿ ಹಾಗೂ ಪುನಸ್ಸ್ಥಾಪನೆಗೆ ಸಮಾನವಾದ ಕೆಲವು ವೃತ್ತಾಂತಗಳನ್ನು ಉಲ್ಲೇಖಿಸುತ್ತಾರೆ. ದೃಷ್ಟಾಂತಕ್ಕಾಗಿ, ಅವರು ಹೇಳುವುದು: “ಅಪೂರ್ಣವಾದ ಒಂದು ಬೆಣೆಲಿಪಿ ಬರವಣಿಗೆಯು, ನೆಬೂಕದ್ನೆಚ್ಚರನಿಗೆ ಉಂಟಾದ ಮಾನಸಿಕ ವ್ಯಾಧಿಯ ಕುರಿತು, ಹಾಗೂ ಅವನು ಬಾಬೆಲನ್ನು ನಿರ್ಲಕ್ಷಿಸಿ, ಅದನ್ನು ಬಿಟ್ಟುಹೋದದ್ದರ ಕುರಿತು ಸ್ಪಷ್ಟವಾಗಿ ತಿಳಿಸುತ್ತದೆ.” ಗೋಲ್ಡಿಂಗೇ ಅವರು “ಬಾಬೆಲಿನ ಯೋಬ” ಎಂದು ಕರೆಯಲ್ಪಡುವ ಒಂದು ದಾಖಲೆಯ ಕುರಿತು ಉಲ್ಲೇಖಿಸುತ್ತಾ ಹೇಳಿದ್ದು: “ಅವನು ದೇವರಿಂದ ಶಿಕ್ಷೆಗೊಳಗಾದದ್ದು, ಅಸ್ವಸ್ಥತೆ, ಅವಮಾನ, ಭೀಕರವಾದ ಒಂದು ಕನಸಿನ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದು, ಒಂದು ವೃಕ್ಷದಂತೆ ಬೀಳಿಸಲ್ಪಟ್ಟದ್ದು, ಮನುಷ್ಯರೊಳಗಿಂದ ತಳ್ಳಲ್ಪಟ್ಟದ್ದು, ಹುಲ್ಲು ತಿಂದದ್ದು, ಬುದ್ಧಿಶಕ್ತಿಯನ್ನು ಕಳೆದುಕೊಂಡದ್ದು, ದನದೋಪಾದಿ ಇದ್ದದ್ದು, ಮಾರ್ದೂಕನಿಂದ ಅವನ ಮೇಲೆ ಮಳೆ ಬಿದ್ದದ್ದು, ಉಗುರು ಹಾಳಾದದ್ದು, ಕೂದಲು ಬೆಳೆದದ್ದು, ಮತ್ತು ನಿರ್ಬಂಧಿಸಲ್ಪಟ್ಟದ್ದು, ಹಾಗೂ ಕೊನೆಯದಾಗಿ ಅವನು ಪುನಸ್ಸ್ಥಾಪಿಸಲ್ಪಟ್ಟು, ಅದಕ್ಕಾಗಿ ದೇವರನ್ನು ಹೊಗಳಿದ್ದು—ಈ ಎಲ್ಲ ವಿಷಯಗಳ ಬಗ್ಗೆ ಇದು ಸಾಕಷ್ಟು ಪುರಾವೆಯನ್ನು ಒದಗಿಸುತ್ತದೆ.”
ನಮ್ಮ ಮೇಲೆಯೂ ಪರಿಣಾಮ ಬೀರುವ ಏಳು ಕಾಲಗಳು
24. (ಎ) ಕನಸಿನಲ್ಲಿ ಕಂಡ ಭಾರೀ ವೃಕ್ಷವು ಏನನ್ನು ಸೂಚಿಸುತ್ತದೆ? (ಬಿ) ಏಳು ಕಾಲಗಳ ವರೆಗೆ ಏನು ತಡೆಹಿಡಿಯಲ್ಪಟ್ಟಿತ್ತು, ಮತ್ತು ಅದು ಹೇಗೆ ಸಂಭವಿಸಿತು?
24 ಆ ಭಾರೀ ವೃಕ್ಷದಿಂದ ಪ್ರತಿನಿಧಿಸಲ್ಪಟ್ಟಂತೆ, ನೆಬೂಕದ್ನೆಚ್ಚರನು ಲೋಕದ ಆಳ್ವಿಕೆಯನ್ನು ಸಂಕೇತಿಸಿದನು. ಆದರೆ, ಆ ವೃಕ್ಷವು ಬಾಬೆಲಿನ ಅರಸನ ಆಳ್ವಿಕೆ ಹಾಗೂ ಸರ್ವಾಧಿಕಾರಕ್ಕಿಂತಲೂ ಹೆಚ್ಚಿನದ್ದನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ವಿಶೇಷವಾಗಿ ಭೂಮಿಯ ಸಂಬಂಧದಲ್ಲಿ, “ಪರಲೋಕರಾಜ”ನಾಗಿರುವ ಯೆಹೋವನ ವಿಶ್ವಪರಮಾಧಿಕಾರವನ್ನು ಅದು ಸಂಕೇತಿಸುತ್ತದೆ. ಬಾಬೆಲಿನವರು ಯೆರೂಸಲೇಮನ್ನು ನಾಶಮಾಡುವುದಕ್ಕೆ ಮೊದಲು, ದಾವೀದನೂ ಅವನ ವಂಶಸ್ಥರೂ ಸೇರಿ “ಯೆಹೋವನ ಸಿಂಹಾಸನ”ದಲ್ಲಿ ಕುಳಿತುಕೊಂಡು ಆಳುತ್ತಿದ್ದ ರಾಜ್ಯವು ಆ ಪಟ್ಟಣದಲ್ಲಿ ನೆಲೆಸಿದ್ದು, ಅದು ಭೂಮಿಯ ಕಡೆಗಿನ ದೇವರ ಪರಮಾಧಿಕಾರವನ್ನು ಪ್ರತಿನಿಧಿಸಿತು. (1 ಪೂರ್ವಕಾಲವೃತ್ತಾಂತ 29:23) ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ನಾಶಮಾಡುವಂತೆ ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದಾಗ, ಅಂತಹ ಪರಮಾಧಿಕಾರವು ಉರುಳಿಸಲ್ಪಟ್ಟು, ಪಟ್ಟೆಯಿಂದ ಬಿಗಿಯಲ್ಪಡುವಂತೆ ಸ್ವತಃ ಆತನೇ ಅನುಮತಿಸಿದ್ದನು. ದಾವೀದನ ವಂಶದಿಂದ ಆಳಲ್ಪಡುವ ಒಂದು ರಾಜ್ಯದ ಮೂಲಕ ಭೂಮಿಯಲ್ಲಿ ದೈವಿಕ ಪರಮಾಧಿಕಾರವನ್ನು ನಡೆಸುವುದು, ಏಳು ಕಾಲಗಳ ವರೆಗೆ ತಡೆಹಿಡಿಯಲ್ಪಟ್ಟಿತು. ಈ ಏಳು ಕಾಲಗಳು ಎಷ್ಟು ದೀರ್ಘವಾಗಿದ್ದವು? ಅವು ಯಾವಾಗ ಆರಂಭವಾದವು, ಮತ್ತು ಅವುಗಳ ಅಂತ್ಯವನ್ನು ಯಾವುದು ಗುರುತಿಸಿತು?
25, 26. (ಎ) ನೆಬೂಕದ್ನೆಚ್ಚರನ ಸಂಬಂಧದಲ್ಲಿ ನೋಡುವುದಾದರೆ, “ಏಳು ಕಾಲಗಳು” ಎಷ್ಟು ದೀರ್ಘವಾಗಿದ್ದವು, ಮತ್ತು ನೀವು ಏಕೆ ಹೀಗೆ ಉತ್ತರಿಸುತ್ತೀರಿ? (ಬಿ) ಪ್ರಮುಖ ನೆರವೇರಿಕೆಯಲ್ಲಿ, “ಏಳು ಕಾಲಗಳು” ಹೇಗೆ ಮತ್ತು ಯಾವಾಗ ಆರಂಭಗೊಂಡವು?
25 ನೆಬೂಕದ್ನೆಚ್ಚರನು ಉನ್ಮಾದ ಸ್ಥಿತಿಯಲ್ಲಿದ್ದ ಸಮಯದಲ್ಲಿ, “ಅವನ ಕೂದಲು ಹದ್ದುಗಳ ಗರಿಯಂತೆಯೂ ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು.” (ದಾನಿಯೇಲ 4:33) ಇದಕ್ಕೆ ಏಳು ದಿನಗಳು ಅಥವಾ ಏಳು ವಾರಗಳಿಗಿಂತಲೂ ಹೆಚ್ಚು ಸಮಯ ಹಿಡಿಯಿತು. ಬೇರೆ ಬೇರೆ ಭಾಷಾಂತರಗಳು “ಏಳು ಸಮಯಗಳು” ಎಂದು ಹೇಳುತ್ತವೆ, ಮತ್ತು ಇದರ ಪರ್ಯಾಯ ಶಬ್ದಗಳು “ನೇಮಿತ (ನಿಶ್ಚಿತ) ಕಾಲಗಳು” ಅಥವಾ “ಸಮಯಾವಧಿಗಳು” ಎಂದಾಗಿವೆ. (ದಾನಿಯೇಲ 4:16, 23, 25, 32) ಪುರಾತನ ಗ್ರೀಕ್ (ಸೆಪ್ಟ್ಯುಅಜಿಂಟ್)ನ ಭಿನ್ನರೂಪವು, “ಏಳು ವರ್ಷಗಳು” ಎಂದು ಹೇಳುತ್ತದೆ. ಪ್ರಥಮ ಶತಮಾನದ ಯೆಹೂದಿ ಇತಿಹಾಸಕಾರ ಜೋಸೀಫಸನು, “ಏಳು ಕಾಲಗಳ”ನ್ನು “ಏಳು ವರ್ಷಗಳು” ಎಂದು ಭಾಷಾಂತರಿಸಿದನು. (ಯೆಹೂದ್ಯರ ಪ್ರಾಚೀನಾವಶೇಷಗಳು [ಇಂಗ್ಲಿಷ್], 10ನೆಯ ಪುಸ್ತಕ, 10ನೆಯ ಅಧ್ಯಾಯ, 6ನೆಯ ಪ್ಯಾರಗ್ರಾಫ್) ಮತ್ತು ಕೆಲವು ಹೀಬ್ರು ವಿದ್ವಾಂಸರು, ಈ “ಕಾಲಗಳ”ನ್ನು “ವರ್ಷ”ಗಳೆಂದು ಪರಿಗಣಿಸುತ್ತಾರೆ. ಆ್ಯನ್ ಅಮೆರಿಕನ್ ಟ್ರಾನ್ಸ್ಲೇಷನ್, ಟುಡೇಸ್ ಇಂಗ್ಲಿಷ್ ವರ್ಷನ್, ಮತ್ತು ಜೇಮ್ಸ್ ಮಾಫಟ್ರ ಭಾಷಾಂತರದಲ್ಲಿ, “ಏಳು ವರ್ಷಗಳು” ಎಂದೇ ತರ್ಜುಮೆಯಾಗಿದೆ.
26 ನೆಬೂಕದ್ನೆಚ್ಚರನ “ಏಳು ಕಾಲಗಳು,” ಏಳು ಚಾಂದ್ರಮಾನ ವರ್ಷಗಳನ್ನು ಒಳಗೊಂಡಿದ್ದವು ಎಂಬುದು ಸ್ಪಷ್ಟ. ಒಂದು ಚಾಂದ್ರಮಾನ ವರ್ಷದಲ್ಲಿ ಸರಾಸರಿ 360 ದಿನಗಳು ಇರುತ್ತವೆ, ಅಥವಾ ಒಂದೊಂದು ತಿಂಗಳಿನಲ್ಲಿ 30 ದಿನಗಳಿರುವ 12 ಚಾಂದ್ರಮಾನ ತಿಂಗಳುಗಳಿರುತ್ತವೆ.a (ಆದಿಕಾಂಡ 7:11–8:4; ಹೋಲಿಸಿರಿ ಪ್ರಕಟನೆ 12:6, 14.) ಆದುದರಿಂದ, ಅರಸನ “ಏಳು ಕಾಲಗಳು” ಅಥವಾ ಏಳು ವರ್ಷಗಳು, 360 ದಿನಗಳನ್ನು 7ರಿಂದ ಗುಣಿಸುವಾಗ ಬರುವ ಗುಣಲಬ್ಧವಾಗಿದ್ದವು, ಅಥವಾ 2,520 ದಿನಗಳಾಗಿದ್ದವು. ಆದರೆ ಅವನ ಕನಸಿನ ಪ್ರಮುಖ ನೆರವೇರಿಕೆಯ ಕುರಿತಾಗಿ ಏನು? ಪ್ರವಾದನಾತ್ಮಕವಾದ “ಏಳು ಕಾಲಗಳು,” 2,520 ದಿನಗಳಿಗಿಂತಲೂ ಹೆಚ್ಚು ಸಮಯದ ವರೆಗೆ ವ್ಯಾಪಿಸಿದ್ದವು. ಇದು ಯೇಸುವಿನ ಮಾತುಗಳಿಂದ ಸೂಚಿಸಲ್ಪಟ್ಟಿತು: “ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.” (ಲೂಕ 21:24) ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶಮಾಡಲ್ಪಟ್ಟು, ದೇವರ ಪ್ರಾತಿನಿಧಿಕ ರಾಜ್ಯವು ಯೆಹೂದದಲ್ಲಿ ಕಾರ್ಯನಡಿಸುವುದು ನಿಂತುಹೋದಾಗ, ಆ ‘ತುಳಿದಾಡಲ್ಪಡುವಿಕೆಯು’ ಆರಂಭಗೊಂಡಿತು. ತುಳಿದಾಡಲ್ಪಡುವಿಕೆಯು ಯಾವಾಗ ಅಂತ್ಯಗೊಳ್ಳುವುದು? “ಸಮಸ್ತವನ್ನು ಸರಿಮಾಡುವ ಕಾಲವು” ಬಂದಾಗ, ಸಾಂಕೇತಿಕ ಯೆರೂಸಲೇಮಾದ ದೇವರ ರಾಜ್ಯದ ಮೂಲಕ ದೈವಿಕ ಪರಮಾಧಿಕಾರವು ಪುನಃ ಭೂಮಿಯ ಕಡೆಗೆ ಪ್ರದರ್ಶಿಸಲ್ಪಡುವಾಗ ಅದು ಅಂತ್ಯಗೊಳ್ಳುವುದು.—ಅ. ಕೃತ್ಯಗಳು 3:21.
27. ಸಾ.ಶ.ಪೂ. 607ರಲ್ಲಿ ಆರಂಭಗೊಂಡ “ಏಳು ಕಾಲಗಳು,” ಅಕ್ಷರಾರ್ಥಕವಾದ 2,520 ದಿನಗಳ ಬಳಿಕ ಏಕೆ ಕೊನೆಗೊಳ್ಳಲಿಲ್ಲ?
27 ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನವು ಸಂಭವಿಸಿದಂದಿನಿಂದ ಅಕ್ಷರಾರ್ಥಕವಾಗಿ 2,520 ದಿನಗಳನ್ನು ಲೆಕ್ಕಿಸುವಲ್ಲಿ, ನಾವು ಸಾ.ಶ.ಪೂ. 600ಕ್ಕೆ ಬಂದು ತಲಪುತ್ತೇವೆ; ಆದರೆ ಈ ವರ್ಷಕ್ಕೆ ಯಾವುದೇ ಶಾಸ್ತ್ರೀಯ ಸೂಚಿತಾರ್ಥವಿಲ್ಲ. ಸಾ.ಶ.ಪೂ. 537ರಲ್ಲಿ, ಬಿಡುಗಡೆಗೊಳಿಸಲ್ಪಟ್ಟ ಯೆಹೂದ್ಯರು ಯೆಹೂದಕ್ಕೆ ಹಿಂದಿರುಗಿ ಬಂದಾಗಲೂ, ಭೂಮಿಯ ಮೇಲೆ ಯೆಹೋವನ ಪರಮಾಧಿಕಾರವು ಅಭಿವ್ಯಕ್ತವಾಗಲಿಲ್ಲ. ಇದಕ್ಕೆ ಕಾರಣವೇನೆಂದರೆ, ದಾವೀದನ ಸಿಂಹಾಸನದ ಉತ್ತರಾಧಿಕಾರಿಯಾದ ಜೆರುಬ್ಬಾಬೆಲನು, ಯೆಹೂದದ ಪಾರಸಿಯ ಪ್ರಾಂತದ ಅರಸನಾಗಿ ನೇಮಿತನಾಗಿರಲಿಲ್ಲ, ಬದಲಾಗಿ ಕೇವಲ ಅಧಿಪತಿಯಾಗಿ ನೇಮಿತನಾಗಿದ್ದನು.
28. (ಎ) ಪ್ರವಾದನಾತ್ಮಕವಾದ “ಏಳು ಕಾಲಗಳ” 2,520 ದಿನಗಳಿಗೆ ಯಾವ ನಿಯಮವನ್ನು ಅನ್ವಯಿಸತಕ್ಕದ್ದು? (ಬಿ) ಪ್ರವಾದನಾತ್ಮಕವಾದ “ಏಳು ಕಾಲಗಳು” ಎಷ್ಟು ದೀರ್ಘವಾಗಿದ್ದವು, ಮತ್ತು ಯಾವ ತಾರೀಖುಗಳು ಅವುಗಳ ಆರಂಭ ಹಾಗೂ ಅಂತ್ಯವನ್ನು ಗುರುತಿಸುತ್ತವೆ?
28 “ಏಳು ಕಾಲಗಳು” ಪ್ರವಾದನಾತ್ಮಕವಾಗಿರುವುದರಿಂದ, “ವರುಷ ಒಂದಕ್ಕೆ ಒಂದು ದಿನ” ಎಂಬ ಶಾಸ್ತ್ರೀಯ ನಿಯಮವನ್ನು ನಾವು 2,520 ದಿನಗಳಿಗೆ ಅನ್ವಯಿಸಬೇಕು. ಬಾಬೆಲ್ ಯೆರೂಸಲೇಮಿಗೆ ಮುತ್ತಿಗೆಹಾಕುವುದರ ಕುರಿತಾದ ಪ್ರವಾದನೆಯೊಂದರಲ್ಲಿ ಈ ನಿಯಮವನ್ನು ವಿವರಿಸಲಾಗಿದೆ. (ಯೆಹೆಜ್ಕೇಲ 4:6, 7; ಹೋಲಿಸಿರಿ ಅರಣ್ಯಕಾಂಡ 14:34.) ಆದುದರಿಂದ, ದೇವರ ರಾಜ್ಯವು ಮಧ್ಯೆಪ್ರವೇಶಿಸದೆ, ಅನ್ಯಜನಾಂಗಗಳ ಶಕ್ತಿಗಳು ಭೂಮಿಯಲ್ಲಿ ಆಧಿಪತ್ಯವನ್ನು ನಡೆಸಲಿದ್ದ “ಏಳು ಕಾಲಗಳು,” 2,520 ವರ್ಷಗಳಷ್ಟು ದೀರ್ಘವಾಗಿದ್ದವು. ಸಾ.ಶ.ಪೂ. 607ರ ಏಳನೆಯ ಚಾಂದ್ರಮಾನ ತಿಂಗಳಿ (ತೀಶ್ರಿ 15)ನಲ್ಲಿ, ಯೆಹೂದವೂ ಯೆರೂಸಲೇಮೂ ಜನಶೂನ್ಯವಾಗುವುದರೊಂದಿಗೆ ಅನ್ಯದೇಶದವರ ಸಮಯಗಳು ಆರಂಭಗೊಂಡವು. (2 ಅರಸು 25:8, 9, 25, 26) ಆ ಹಂತದಿಂದ ಸಾ.ಶ.ಪೂ. 1ರ ವರೆಗೆ 606 ವರ್ಷಗಳು. ಉಳಿದ 1,914 ವರ್ಷಗಳು, ಅಂದಿನಿಂದ ಸಾ.ಶ. 1914ರ ತನಕ ವ್ಯಾಪಿಸುತ್ತವೆ. ಹೀಗೆ, “ಏಳು ಕಾಲಗಳು” ಅಥವಾ 2,520 ವರ್ಷಗಳು, ಸಾ.ಶ. 1914ರ ತೀಶ್ರಿ 15ರಷ್ಟಕ್ಕೆ, ಅಥವಾ ಅಕ್ಟೋಬರ್ 4/5ಕ್ಕೆ ಕೊನೆಗೊಂಡವು.
29. “ಮಾನವಕುಲದವರಲ್ಲಿ ಕನಿಷ್ಠ”ನು ಯಾರಾಗಿದ್ದಾನೆ, ಮತ್ತು ಅವನನ್ನು ಸಿಂಹಾಸನಕ್ಕೇರಿಸಲಿಕ್ಕಾಗಿ ಯೆಹೋವನು ಏನು ಮಾಡಿದನು?
29 ಆ ವರ್ಷದಲ್ಲಿ “ಅನ್ಯದೇಶದವರ ಸಮಯಗಳು” ಪೂರ್ಣಗೊಂಡವು, ಮತ್ತು ವೈರಿಗಳು ಯಾರನ್ನು “ಮಾನವಕುಲದವರಲ್ಲಿ ಕನಿಷ್ಠ”ನು ಎಂದು ತುಚ್ಛವಾಗಿ ಪರಿಗಣಿಸಿ, ಅವನನ್ನು ಶೂಲಕ್ಕೇರಿಸಿದರೋ ಆ ಯೇಸು ಕ್ರಿಸ್ತನಿಗೆ ದೇವರು ಆಳುವ ಹಕ್ಕನ್ನು ಕೊಟ್ಟನು. (ದಾನಿಯೇಲ 4:17, NW) ಮೆಸ್ಸೀಯ ರಾಜನನ್ನು ಸಿಂಹಾಸನಕ್ಕೇರಿಸಲಿಕ್ಕಾಗಿ, ಯೆಹೋವನು ತನ್ನ ಸ್ವಂತ ಪರಮಾಧಿಕಾರದ “ಬುಡದ ಮೋಟಿ”ನ ಸುತ್ತಲೂ ಬಿಗಿದಿದ್ದ, ಸಾಂಕೇತಿಕವಾದ ಕಬ್ಬಿಣ ಹಾಗೂ ತಾಮ್ರದ ಪಟ್ಟೆಗಳನ್ನು ಬಿಚ್ಚಿದನು. ಹೀಗೆ ಪರಾತ್ಪರ ದೇವರು, ದಾವೀದನ ಅತಿ ಮಹಾನ್ ಉತ್ತರಾಧಿಕಾರಿಯಾದ ಯೇಸು ಕ್ರಿಸ್ತನ ವಶಕ್ಕೆ ಒಪ್ಪಿಸಲ್ಪಟ್ಟಿರುವ ಸ್ವರ್ಗೀಯ ರಾಜ್ಯದ ಮೂಲಕ, ಭೂಮಿಯ ಕಡೆಗಿನ ದೈವಿಕ ಪರಮಾಧಿಕಾರದ ಪ್ರದರ್ಶನದೋಪಾದಿ, ಆ ಮೋಟಿನಿಂದ ರಾಜಯೋಗ್ಯವಾದ ಒಂದು “ಚಿಗುರು” ಬೆಳೆಯುವಂತೆ ಮಾಡಿದನು. (ಯೆಶಾಯ 11:1, 2; ಯೋಬ 14:7-9; ಯೆಹೆಜ್ಕೇಲ 21:27) ಈ ಸಂತೋಷಭರಿತ ಫಲಿತಾಂಶಕ್ಕಾಗಿ ಮತ್ತು ಭಾರೀ ವೃಕ್ಷದ ಗೂಢಾರ್ಥವನ್ನು ಬಿಡಿಸಿಹೇಳಿದ್ದಕ್ಕಾಗಿ ಯೆಹೋವನಿಗೆ ನಾವೆಷ್ಟು ಕೃತಜ್ಞರಾಗಿದ್ದೇವೆ!
[ಅಧ್ಯಯನ ಪ್ರಶ್ನೆಗಳು]
a ಒಂದು ಚಾಂದ್ರಮಾನ ವರ್ಷದಲ್ಲಿ, ಸರಾಸರಿ ಸೌರ ವರ್ಷಕ್ಕಿಂತ 11 ದಿನಗಳು ಕಡಿಮೆಯಿರುತ್ತವೆ. ಚಾಂದ್ರಮಾನ ಹಾಗೂ ಸೌರ ಕ್ಯಾಲೆಂಡರ್ಗಳನ್ನು ಸರಿಹೊಂದಿಸಲಿಕ್ಕಾಗಿ, 19 ವರ್ಷಗಳಲ್ಲಿ ಏಳು ಬಾರಿ, 29 ದಿನಗಳ ಒಂದು 13ನೆಯ ತಿಂಗಳನ್ನು ಕೆಲವೊಂದು ವರ್ಷಗಳಿಗೆ ಕೂಡಿಸಲಾಯಿತು.
ನೀವೇನನ್ನು ಗ್ರಹಿಸಿದಿರಿ?
• ನೆಬೂಕದ್ನೆಚ್ಚರನ ಕನಸಿನ ಭಾರೀ ವೃಕ್ಷವು ಏನನ್ನು ಪ್ರತಿನಿಧಿಸಿತು?
• ನೆಬೂಕದ್ನೆಚ್ಚರನ ವೃಕ್ಷದ ಕನಸಿನ ಆರಂಭದ ನೆರವೇರಿಕೆಯಲ್ಲಿ, ಅವನಿಗೆ ಏನು ಸಂಭವಿಸಿತು?
• ನೆಬೂಕದ್ನೆಚ್ಚರನ ಕನಸಿನ ನೆರವೇರಿಕೆಯ ಬಳಿಕ, ಅವನು ಏನನ್ನು ಅಂಗೀಕರಿಸಿದನು?
• ಪ್ರವಾದನಾತ್ಮಕವಾದ ವೃಕ್ಷದ ಕನಸಿನ ಪ್ರಮುಖ ನೆರವೇರಿಕೆಯಲ್ಲಿ, “ಏಳು ಕಾಲಗಳು” ಎಷ್ಟು ದೀರ್ಘವಾಗಿದ್ದವು, ಮತ್ತು ಅವು ಯಾವಾಗ ಆರಂಭಗೊಂಡವು ಮತ್ತು ಅಂತ್ಯಗೊಂಡವು?
[ಪುಟ 94 ರಲ್ಲಿ ಇಡೀ ಪುಟದ ಚಿತ್ರ]
[ಪುಟ 02 ರಲ್ಲಿ ಇಡೀ ಪುಟದ ಚಿತ್ರ]