ನ್ಯಾಯಾಸನದ ಮುಂದೆ ನೀವು ಹೇಗೆ ನಿಲ್ಲುವಿರಿ?
“ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು.”—ಮತ್ತಾಯ 25:31.
1-3. ನ್ಯಾಯದ ಸಂಬಂಧದಲ್ಲಿ ಆಶಾವಾದಕ್ಕೆ ನಮಗೆ ಯಾವ ಕಾರಣವಿದೆ?
‘ದೋಷಿಯೊ ನಿರಪರಾಧಿಯೊ?’ ಯಾವುದಾದರೂ ಕೋರ್ಟ್ ಮೊಕದ್ದಮೆಯ ವರದಿಗಳನ್ನು ಕೇಳುವಾಗ ಅನೇಕರು ಹಾಗೆ ಕುತೂಹಲಪಡುತ್ತಾರೆ. ನ್ಯಾಯಾಧೀಶರೂ ನ್ಯಾಯದರ್ಶಿಗಳೂ ಪ್ರಾಮಾಣಿಕರಾಗಿರಲು ಪ್ರಯತ್ನಿಸಬಹುದಾದರೂ, ಸಾಮಾನ್ಯವಾಗಿ ನ್ಯಾಯವು ಗೆಲ್ಲುವುದಿದೆಯೆ? ನ್ಯಾಯವಿಧಾನಗಳಲ್ಲಿ ಅನ್ಯಾಯ ಮತ್ತು ಪಕ್ಷಪಾತದ ವಿಷಯವನ್ನು ನೀವು ಕೇಳಿರುವುದಿಲ್ಲವೆ? ನಾವು ಲೂಕ 18:1-8ರಲ್ಲಿ ಕಂಡುಬರುವ ಯೇಸುವಿನ ದೃಷ್ಟಾಂತದಲ್ಲಿ ನೋಡುವಂತೆ, ಇಂತಹ ಅನ್ಯಾಯವೇನೂ ಹೊಸದಲ್ಲ.
2 ಮಾನವ ನ್ಯಾಯದ ಸಂಬಂಧದಲ್ಲಿ ನಿಮ್ಮ ಅನುಭವ ಏನೇ ಆಗಿರಲಿ, ಯೇಸುವಿನ ತೀರ್ಮಾನವನ್ನು ಗಮನಿಸಿರಿ: “ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ . . . ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?”
3 ಹೌದು, ತನ್ನ ಸೇವಕರಿಗೆ ಕೊನೆಗೆ ನ್ಯಾಯವು ದೊರೆಯುವಂತೆ ಯೆಹೋವನು ನೋಡಿಕೊಳ್ಳುವನು. ಯೇಸುವೂ ಇದರಲ್ಲಿ ವಿಶೇಷವಾಗಿ ಈಗ ಸೇರಿರುತ್ತಾನೆ, ಏಕೆಂದರೆ ನಾವು ಸದ್ಯದ ದುಷ್ಟ ಪರಿಸ್ಥಿತಿಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ. ಭೂಮಿಯಿಂದ ದುಷ್ಟತನವನ್ನು ಅಳಿಸಿಬಿಡಲು, ಯೆಹೋವನು ಬೇಗನೇ ತನ್ನ ಬಲಾಢ್ಯ ಪುತ್ರನನ್ನು ಉಪಯೋಗಿಸುವನು. (2 ತಿಮೊಥೆಯ 3:1; 2 ಥೆಸಲೊನೀಕ 1:7, 8; ಪ್ರಕಟನೆ 19:11-16) ಯೇಸುವಿನ ಪಾತ್ರದ ಒಳನೋಟವನ್ನು ನಾವು ಅವನ ಕೊನೆಯ ದೃಷ್ಟಾಂತಗಳಲ್ಲಿ ಒಂದರಿಂದ, ಕುರಿಗಳ ಮತ್ತು ಆಡುಗಳ ದೃಷ್ಟಾಂತವೆಂದು ಅನೇಕಸಲ ಕರೆಯಲ್ಪಡುವ ದೃಷ್ಟಾಂತದಿಂದ ಪಡೆಯಬಲ್ಲೆವು.
4. ಕುರಿಗಳ ಮತ್ತು ಆಡುಗಳ ದೃಷ್ಟಾಂತದ ಕಾಲನಿಯಮನವನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಆದರೆ ಆ ದೃಷ್ಟಾಂತಕ್ಕೆ ನಾವು ಈಗ ಏಕೆ ಗಮನವನ್ನು ಕೊಡುವೆವು? (ಜ್ಞಾನೋಕ್ತಿ 4:18)
4 ಈ ದೃಷ್ಟಾಂತವು, ಯೇಸುವು 1914ರಲ್ಲಿ ಅರಸನಾಗಿ ಕೂತಿರುವುದನ್ನು ಮತ್ತು ಅಂದಿನಿಂದ ನ್ಯಾಯತೀರಿಸುತ್ತಿರುವುದನ್ನು—ಕುರಿಸದೃಶವಾಗಿ ಪರಿಣಮಿಸುವವರಿಗೆ ನಿತ್ಯಜೀವ, ಆಡುಗಳಿಗೆ ಕಾಯಂ ಮರಣವನ್ನು—ಚಿತ್ರಿಸುತ್ತದೆಂದು ನಾವು ಬಹಳ ಸಮಯದಿಂದ ಅರ್ಥಮಾಡಿಕೊಂಡಿದ್ದೆವು. ಆದರೆ ಆ ದೃಷ್ಟಾಂತದ ಮರುಪರಿಗಣನೆಯು, ಅದರ ಕಾಲನಿಯಮನವನ್ನು ಮತ್ತು ಅದು ಏನನ್ನು ಚಿತ್ರಿಸುತ್ತದೋ ಅದನ್ನು ಒಂದು ಹೊಂದಿಸಿಕೊಂಡ ಅರ್ಥಗ್ರಹಿಸುವಿಕೆಗೆ ನಡೆಸುವುದು. ಈ ಸೂಕ್ಷ್ಮಾರ್ಥವು ನಮ್ಮ ಸಾರುವ ಕೆಲಸದ ಪ್ರಮುಖತೆಯನ್ನು ಮತ್ತು ಜನರ ಪ್ರತಿವರ್ತನೆಯ ವೈಶಿಷ್ಟ್ಯವನ್ನು ಬಲಪಡಿಸುತ್ತದೆ. ಆ ದೃಷ್ಟಾಂತದ ಹೆಚ್ಚು ಆಳವಾದ ಈ ತಿಳಿವಳಿಕೆಯ ಆಧಾರವನ್ನು ನೋಡಲು, ಬೈಬಲು ರಾಜರಾಗಿರುವ ಮತ್ತು ನ್ಯಾಯಾಧೀಶರಾಗಿರುವ ಯೆಹೋವನ ಮತ್ತು ಯೇಸುವಿನ ಕುರಿತು ಏನು ತೋರಿಸುತ್ತದೆಂದು ನಾವು ಪರಿಗಣಿಸೋಣ.
ಪರಮ ನ್ಯಾಯಾಧೀಶನೋಪಾದಿ ಯೆಹೋವನು
5, 6. ಯೆಹೋವನನ್ನು ರಾಜನಾಗಿಯೂ ನ್ಯಾಯಾಧೀಶನಾಗಿಯೂ ನೋಡುವುದು ಏಕೆ ತಕ್ಕದ್ದಾಗಿದೆ?
5 ಯೆಹೋವನು ಸಕಲ ಸೃಷ್ಟಿಯ ಮೇಲೆ ಅಧಿಕಾರ ನಡೆಸುತ್ತ ವಿಶ್ವವನ್ನು ಆಳುತ್ತಾನೆ. ಆದಿಯೂ ಅಂತ್ಯವೂ ಇಲ್ಲದಿರುವ ಆತನು “ಸರ್ವಯುಗಗಳ ಅರಸನು.” (1 ತಿಮೊಥೆಯ 1:17; ಕೀರ್ತನೆ 90:2, 4; ಪ್ರಕಟನೆ 15:3) ಆತನಿಗೆ ಕಟ್ಟಳೆಗಳನ್ನು, ಅಥವಾ ನಿಯಮಗಳನ್ನು ಮಾಡುವ ಮತ್ತು ಅವುಗಳನ್ನು ಜಾರಿಗೆ ತರುವ ಅಧಿಕಾರವಿದೆ. ಆದರೆ ಆತನ ಅಧಿಕಾರದಲ್ಲಿ ನ್ಯಾಯಾಧೀಶನಾಗಿರುವುದೂ ಸೇರಿದೆ. ಯೆಶಾಯ 33:22 ಹೇಳುವುದು: “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.”
6 ಯೆಹೋವನು ವ್ಯಾಜ್ಯಗಳ ಮತ್ತು ವಿವಾದಾಂಶಗಳ ನ್ಯಾಯಾಧೀಶನೆಂಬುದನ್ನು ದೇವರ ಸೇವಕರು ಬಹುಕಾಲದಿಂದ ಅಂಗೀಕರಿಸಿದ್ದಾರೆ. ಉದಾಹರಣೆಗೆ “ಸರ್ವಲೋಕಕ್ಕೆ ನ್ಯಾಯತೀರಿಸುವವನು,” ಸೊದೋಮ್ ಮತ್ತು ಗೊಮೋರಗಳ ದುಷ್ಟತ್ವದ ಸಾಕ್ಷ್ಯವನ್ನು ತೂಗಿನೋಡಿದಾಗ, ನಿವಾಸಿಗಳು ನಾಶಪಾತ್ರರೆಂದು ನ್ಯಾಯತೀರಿಸಿದ್ದು ಮಾತ್ರವಲ್ಲ, ಆ ನೀತಿಯ ನ್ಯಾಯತೀರ್ಪನ್ನು ಜಾರಿಗೂ ತಂದನು. (ಆದಿಕಾಂಡ 18:20-33; ಯೋಬ 34:10-12) ತನ್ನ ತೀರ್ಪುಗಳನ್ನು ಸದಾ ನಿರ್ವಹಿಸಶಕ್ತನಾದ ಯೆಹೋವನು, ನೀತಿಯ ನ್ಯಾಯಾಧೀಶನೆಂದು ತಿಳಿಯುವುದು ನಮಗೆ ಎಷ್ಟು ಪುನರಾಶ್ವಾಸನೆ ಕೊಡಬೇಕು!
7. ಇಸ್ರಾಯೇಲಿನೊಂದಿಗೆ ವ್ಯವಹರಿಸುವಾಗ ಯೆಹೋವನು ನ್ಯಾಯಾಧೀಶನಾಗಿ ಹೇಗೆ ವರ್ತಿಸಿದನು?
7 ಪುರಾತನ ಕಾಲದ ಇಸ್ರಾಯೇಲಿನಲ್ಲಿ, ಯೆಹೋವನು ಕೆಲವು ಬಾರಿ ತೀರ್ಪನ್ನು ನೇರವಾಗಿ ಕೊಟ್ಟನು. ಒಬ್ಬ ಪರಿಪೂರ್ಣ ನ್ಯಾಯಾಧೀಶನು ವಿಷಯಗಳನ್ನು ನಿರ್ಣಯಿಸುತ್ತಾನೆಂದು ತಿಳಿಯುತ್ತಿದ್ದರೆ ನೀವು ಆಗ ಉಪಶಮನ ಪಡೆಯುತ್ತಿರಲಿಲ್ಲವೊ? (ಯಾಜಕಕಾಂಡ 24:10-16; ಅರಣ್ಯಕಾಂಡ 15:32-36; 27:1-11) ದೇವರು ನ್ಯಾಯತೀರಿಸಲು ಒಟ್ಟಿನ ಪರಿಣಾಮದಲ್ಲಿ ಒಳ್ಳೆಯದಾಗಿದ್ದ “ಆಜ್ಞಾವಿಧಿ” ಗಳನ್ನೂ ಒದಗಿಸಿದನು. (ಯಾಜಕಕಾಂಡ 25:18, 19; ನೆಹೆಮೀಯ 9:13; ಕೀರ್ತನೆ 19:9, 10; 119:7, 75, 164; 147:19, 20) ಆತನು “ಎಲ್ಲರಿಗೆ ನ್ಯಾಯಾಧಿಪತಿ” ಆಗಿರುವುದರಿಂದ ಅದು ನಮ್ಮೆಲ್ಲರ ಮೇಲೆ ಪ್ರಭಾವಬೀರುತ್ತದೆ.—ಇಬ್ರಿಯ 12:23.
8. ದಾನಿಯೇಲನಿಗೆ ಯಾವ ಸಂಬಂಧಪಟ್ಟ ದರ್ಶನವಾಯಿತು?
8 ಈ ವಿಷಯದ ಮೇಲೆ “ಪ್ರತ್ಯಕ್ಷಸಾಕ್ಷಿ” ಆಗಿದ್ದವನ ಸಾಕ್ಷ್ಯವೂ ನಮಗಿದೆ. ಪ್ರವಾದಿಯಾಗಿದ್ದ ದಾನಿಯೇಲನಿಗೆ ಸರಕಾರಗಳು ಅಥವಾ ಸಾಮ್ರಾಜ್ಯಗಳನ್ನು ಪ್ರತಿನಿಧೀಕರಿಸಿದ ಭಯಂಕರ ಮೃಗಗಳ ಒಂದು ದರ್ಶನ ದೊರೆಯಿತು. (ದಾನಿಯೇಲ 7:1-8, 17) ಅವನು ಕೂಡಿಸಿದ್ದು: “ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು.” (ದಾನಿಯೇಲ 7:9) ದಾನಿಯೇಲನು ನ್ಯಾಯಾಸನ [“ಸಿಂಹಾಸನ,” NW]ಗಳನ್ನು ಮತ್ತು “ಮಹಾವೃದ್ಧನೊಬ್ಬನು ಆಸೀನ”ನಾದುದನ್ನು ನೋಡಿದನು ಎಂಬುದನ್ನು ಗಮನಿಸಿರಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ, ‘ದಾನಿಯೇಲನು ಇಲ್ಲಿ ದೇವರು ರಾಜನಾಗುವುದರ ನೋಟಕನಾಗಿದನ್ದೊ?’
9. ಸಿಂಹಾಸನದ ಮೇಲೆ ‘ಕೂತುಕೊಳ್ಳುವುದು’ ಎಂಬುದರ ಒಂದು ಅರ್ಥವೇನು? ಉದಾಹರಣೆಗಳನ್ನು ಕೊಡಿ.
9 ಒಳ್ಳೆಯದು, ಒಬ್ಬನು ಸಿಂಹಾಸನದ ಮೇಲೆ “ಆಸೀನನಾದನು” ಎಂದು ನಾವು ಓದುವಾಗ, ಆತನು ರಾಜನಾಗುವುದರ ಕುರಿತು ನಾವು ಯೋಚಿಸಬಹುದು, ಏಕೆಂದರೆ ಬೈಬಲು ಕೆಲವು ಬಾರಿ ಅಂತಹ ಭಾಷೆಯನ್ನು ಉಪಯೋಗಿಸುತ್ತದೆ. ಉದಾಹರಣೆಗೆ: “ಇವನು [ಜಿಮ್ರಿ] ಸಿಂಹಾಸನದ ಮೇಲೆ ಕೂತು ಆಳ”ತೊಡಗಿದನು. (1 ಅರಸುಗಳು 16:11; 2 ಅರಸುಗಳು 10:30; 15:12; ಯೆರೆಮೀಯ 33:17) ಒಂದು ಮೆಸ್ಸೀಯ ಸಂಬಂಧಿತ ಪ್ರವಾದನೆ ಹೀಗೆಂದಿತು: ‘ಅವನು ಸಿಂಹಾಸನದಲ್ಲಿ ಆಸೀನನಾಗಿ ಆಳುವನು.’ ಆದಕಾರಣ, ‘ಸಿಂಹಾಸನದಲ್ಲಿ ಆಸೀನನಾಗುವುದು’ ರಾಜನಾಗುವ ಅರ್ಥವನ್ನು ಕೊಡಬಲ್ಲದು. (ಜೆಕರ್ಯ 6:12, 13) ಯೆಹೋವನನ್ನು ಸಿಂಹಾಸನದಲ್ಲಿ ಕೂತು ಆಳುವ ರಾಜನಾಗಿ ವರ್ಣಿಸಲಾಗಿದೆ. (1 ಅರಸುಗಳು 22:19; ಯೆಶಾಯ 6:1; ಪ್ರಕಟನೆ 4:1-3) ಆತನು “ಸರ್ವಯುಗಗಳ ಅರಸನು.” ಆದರೂ ಪರಮಾಧಿಕಾರದ ಒಂದು ಹೊಸ ರೂಪವನ್ನು ಪ್ರತಿಪಾದಿಸಿದ ಹಾಗೆ, ಆತನು ತನ್ನ ಸಿಂಹಾಸನದ ಮೇಲೆ ಹೊಸದಾಗಿ ಕುಳಿತುಕೊಳ್ಳುತ್ತಾನೋ ಎಂಬಂತೆ, ಆತನು ರಾಜನು ಆದನು ಎಂದು ಹೇಳಸಾಧ್ಯವಿದೆ.—1 ಪೂರ್ವಕಾಲವೃತ್ತಾಂತ 16:1, 31; ಯೆಶಾಯ 52:7; ಪ್ರಕಟನೆ 11:15-17; 15:3; 19:1, 2, 6.
10. ಇಸ್ರಾಯೇಲ್ಯ ಅರಸುಗಳ ಒಂದು ಪ್ರಧಾನ ಕಾರ್ಯವು ಯಾವುದಾಗಿತ್ತು? ದೃಷ್ಟಾಂತಿಸಿರಿ.
10 ಆದರೆ ಒಂದು ಮುಖ್ಯವಿಷಯ ಇಲ್ಲಿದೆ: ಹಳೆಯ ರಾಜರ ಒಂದು ಪ್ರಧಾನ ಕಾರ್ಯವು, ವ್ಯಾಜ್ಯಗಳನ್ನು ಕೇಳಿ ನ್ಯಾಯ ವಿಧಿಸುವುದಾಗಿತ್ತು. (ಜ್ಞಾನೋಕ್ತಿ 29:14) ಒಂದು ಮಗುವನ್ನು ಇಬ್ಬರು ಸ್ತ್ರೀಯರು ತಮ್ಮದೆಂದು ವಾದಿಸಿದಾಗ ಸೊಲೊಮೋನನ ವಿವೇಕದ ನ್ಯಾಯತೀರ್ಪನ್ನು ಜ್ಞಾಪಿಸಿಕೊಳ್ಳಿರಿ. (1 ಅರಸುಗಳು 3:16-28; 2 ಪೂರ್ವಕಾಲವೃತ್ತಾಂತ 9:8) ಅವನ ಸರಕಾರೀ ಭವನಗಳಲ್ಲಿ ಒಂದು, “ಸಿಂಹಾಸನಮಂದಿರ”ವಾಗಿತ್ತು. “ಅವನು ಅಲ್ಲಿ ನ್ಯಾಯತೀರಿಸು”ತ್ತಿದ್ದನು. ಅದನ್ನು “ನ್ಯಾಯಮಂದಿರ”ವೆಂದೂ ಕರೆಯಲಾಗಿದೆ. (1 ಅರಸುಗಳು 7:7) ಯೆರೂಸಲೇಮನ್ನು “ನ್ಯಾಯಪೀಠಗಳಾಗಿರುವ . . . ಸಿಂಹಾಸನಗಳು” ಇದ್ದ ಸ್ಥಳವೆಂದು ವರ್ಣಿಸಲಾಗಿತ್ತು. (ಕೀರ್ತನೆ 122:5) ಸ್ಪಷ್ಟವಾಗಿಗಿ, ‘ಸಿಂಹಾಸನಾಸೀನನಾಗುವುದು’ ಎಂಬುದಕ್ಕೆ ನ್ಯಾಯಾಧಿಕಾರವನ್ನು ನಿರ್ವಹಿಸುವುದು ಎಂಬ ಅರ್ಥವೂ ಇರಸಾಧ್ಯವಿದೆ.—ವಿಮೋಚನಕಾಂಡ 18:13; ಜ್ಞಾನೋಕ್ತಿ 20:8.
11, 12. (ಎ) ದಾನಿಯೇಲ 7ನೆಯ ಅಧ್ಯಾಯದಲ್ಲಿ ಹೇಳಿರುವ ಯೆಹೋವನ ಕೂತುಕೊಳ್ಳುವಿಕೆಯ ಪ್ರಮುಖತೆಯೇನು? (ಬಿ) ಯೆಹೋವನು ನ್ಯಾಯತೀರಿಸಲು ಕುಳಿತುಕೊಳ್ಳುತ್ತಾನೆಂದು ಇತರ ವಚನಗಳು ಹೇಗೆ ದೃಢೀಕರಿಸುತ್ತವೆ?
11 ನಾವೀಗ ದಾನಿಯೇಲನು “ಮಹಾವೃದ್ಧನೊಬ್ಬನು ಆಸೀನ” ನಾಗುವುದನ್ನು ನೋಡಿದ ಆ ದೃಶ್ಯಕ್ಕೆ ಹಿಂದಿರುಗೋಣ. ದಾನಿಯೇಲ 7:10 ಕೂಡಿಸುವುದು: “ನ್ಯಾಯಸಭೆಯವರು [“ಆಸ್ಥಾನ,” NW] ಕೂತುಕೊಂಡರು, ಪುಸ್ತಕಗಳು ತೆರೆಯಲ್ಪಟ್ಟವು.” ಹೌದು, ಲೋಕಾಧಿಕಾರದ ಕುರಿತು ನ್ಯಾಯವಿಧಿಸಲು ಮತ್ತು ಮನುಷ್ಯಕುಮಾರನು ಆಳಲು ಯೋಗ್ಯನೆಂದು ತೀರ್ಪುಮಾಡಲು ಮಹಾವೃದ್ಧನು ಕುಳಿತಿದ್ದನು. (ದಾನಿಯೇಲ 7:13, 14) ಮನುಷ್ಯಕುಮಾರನೊಂದಿಗೆ ಆಳಲು ಯೋಗ್ಯರೆಂದು ತೀರ್ಮಾನಿಸಲ್ಪಟ್ಟವರನ್ನು, “ಮಹಾವೃದ್ಧನು ಅಯ್ತಂದು ಪರಾತ್ಪರನ ಭಕ್ತರಿಗಾಗಿ [“ಭಕ್ತರಿಗೆ ಅನುಕೂಲವಾಗಿ,” NW] ನ್ಯಾಯತೀರಿಸಿ”ದನು ಎಂಬುದಾಗಿ ನಾವು ಆ ಬಳಿಕ ಓದುತ್ತೇವೆ. (ಓರೆಅಕ್ಷರಗಳು ನಮ್ಮವು.) (ದಾನಿಯೇಲ 7:22) ಕೊನೆಗೆ, ‘ನ್ಯಾಯಸಭೆಯು ತಾನೇ ಕುಳಿತು,’ ಕೊನೆಯ ಲೋಕಶಕ್ತಿಯ ವಿರುದ್ಧ ಪ್ರತಿಕೂಲ ತೀರ್ಪನ್ನು ಕೊಡುತ್ತದೆ.—ದಾನಿಯೇಲ 7:26.a
12 ಆದಕಾರಣ, ದೇವರು ‘ಸಿಂಹಾಸನದ ಮೇಲೆ ಆಸೀನನಾಗುವುದನ್ನು’ ದಾನಿಯೇಲನು ನೋಡಿದ್ದು, ಆತನು ನ್ಯಾಯವಿಧಿಸಲಿಕ್ಕಾಗಿ ಬರುವುದನ್ನು ಅರ್ಥೈಸಿತು. ಆ ಮೊದಲು ದಾವೀದನು ಹಾಡಿದ್ದು: “ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ; ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತೀ.” (ಕೀರ್ತನೆ 9:4, 7) ಮತ್ತು ಯೋವೇಲನು ಬರೆದುದು: “ಜನಾಂಗಗಳು ಎಚ್ಚರಗೊಂಡು ಯೆಹೋವನ ನ್ಯಾಯತೀರ್ಪಿನ ತಗ್ಗಿಗೆ ಬರಲಿ; ಅಲ್ಲೇ ಸುತ್ತಣ ಜನಾಂಗಗಳಿಗೆಲ್ಲಾ ನ್ಯಾಯತೀರಿಸಲು ಆಸೀನನಾಗುವೆನು.” (ಯೋವೇಲ 3:12; ಹೋಲಿಸಿ ಯೆಶಾಯ 16:5.) ಒಬ್ಬ ಮನುಷ್ಯನು ವ್ಯಾಜ್ಯವನ್ನು ಕೇಳಲು ಕುಳಿತುಕೊಂಡು ನ್ಯಾಯವಿಧಿಸುವ ನ್ಯಾಯಸ್ಥಾನದ ಸನ್ನಿವೇಶಗಳಲ್ಲಿ, ಯೇಸು ಮತ್ತು ಪೌಲ, ಇವರಿಬ್ಬರೂ ಇದ್ದರು.b—ಯೋಹಾನ 19:12-16; ಅ. ಕೃತ್ಯಗಳು 23:3; 25:6.
ಯೇಸುವಿನ ಸ್ಥಾನ
13, 14. (ಎ) ಯೇಸುವು ರಾಜನಾಗುವನೆಂದು ದೇವರ ಜನರಿಗೆ ಯಾವ ಆಶ್ವಾಸನೆಯಿತ್ತು? (ಬಿ) ಯೇಸುವು ತನ್ನ ಸಿಂಹಾಸನದಲ್ಲಿ ಯಾವಾಗ ಕುಳಿತುಕೊಂಡನು, ಮತ್ತು ಸಾ.ಶ. 33ರಿಂದ ಅವನು ಯಾವ ಅರ್ಥದಲ್ಲಿ ಆಳಿದನು?
13 ಯೆಹೋವನು ರಾಜನೂ ನ್ಯಾಯಾಧಿಪತಿಯೂ ಆಗಿದ್ದಾನೆ. ಯೇಸುವಿನ ಕುರಿತೇನು? ಅವನ ಜನನವನ್ನು ಪ್ರಕಟಿಸಿದ ದೇವದೂತನು ಹೇಳಿದ್ದು: “ದೇವರಾಗಿರುವ ಕರ್ತ [“ಯೆಹೋವ,” NW]ನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. . . . ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ದಾವೀದನ ರಾಜತ್ವದ ಕಾಯಂ ಉತ್ತರಾಧಿಕಾರಿಯಾಗಿ ಯೇಸು ಇರಲಿದ್ದನು. (2 ಸಮುವೇಲ 7:12-16) ಅವನು ಸ್ವರ್ಗದಿಂದ ಆಳಲಿದ್ದನು, ಏಕೆಂದರೆ ದಾವೀದನು ಹೇಳಿದ್ದು: “ಯೆಹೋವನು ನನ್ನ ಒಡೆಯನಿಗೆ—ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು. ಯೆಹೋವನು ನಿನ್ನ ರಾಜದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು.”—ಕೀರ್ತನೆ 110:1-4.
14 ಅದು ಯಾವಾಗ? ಮನುಷ್ಯನಾಗಿದ್ದಾಗ ಯೇಸು ಅರಸನಾಗಿ ಆಳಲಿಲ್ಲ. (ಯೋಹಾನ 18:33-37) ಸಾ.ಶ. 33ರಲ್ಲಿ ಅವನು ಸತ್ತು, ಪುನರುತ್ಥಾನ ಹೊಂದಿ, ದಿವಕ್ಕೇರಿಹೋದನು. ಇಬ್ರಿಯ 10:12 ಹೇಳುವುದು: “ಈ ಯಾಜಕನು ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು.” ಯೇಸುವಿಗೆ ಯಾವ ಅಧಿಕಾರವಿತ್ತು? “ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾದಿಗಳ ಮೇಲೆಯೂ . . . ತನ್ನ ಬಲಗಡೆಯಲ್ಲಿ ಕೂಡ್ರಿಸಿಕೊಂಡನು. . . . ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.” (ಎಫೆಸ 1:20-22) ಆಗ ಯೇಸುವಿಗೆ ಕ್ರೈಸ್ತರ ಮೇಲೆ ರಾಜಯೋಗ್ಯ ಅಧಿಕಾರವಿದುದ್ದರಿಂದ ಯೆಹೋವನು, “ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು,” ಎಂದು ಪೌಲನಿಗೆ ಹೇಳಸಾಧ್ಯವಾಯಿತು.—ಕೊಲೊಸ್ಸೆ 1:13; 3:1.
15, 16. (ಎ) ಸಾ.ಶ. 33ರಲ್ಲಿ ಯೇಸುವು ದೇವರ ರಾಜ್ಯದ ಅರಸನಾಗಲಿಲ್ಲವೆಂದು ನಾವೇಕೆ ಹೇಳುತ್ತೇವೆ? (ಬಿ) ಯೇಸುವು ದೇವರ ರಾಜ್ಯದಲ್ಲಿ ಆಳಲಾರಂಭಿಸಿದ್ದು ಯಾವಾಗ?
15 ಆದರೂ, ಆ ಸಮಯದಲ್ಲಿ ಕ್ರಿಸ್ತನು ಜನಾಂಗಗಳಿಗೆ ರಾಜನಾಗಿ ಮತ್ತು ನ್ಯಾಯಾಧೀಶನಾಗಿ ವರ್ತಿಸಲಿಲ್ಲ. ಅವನು ದೇವರ ಪಕ್ಕದಲ್ಲಿ, ದೇವರ ರಾಜ್ಯದ ರಾಜನಾಗಿ ವರ್ತಿಸುವ ಸಮಯವನ್ನು ಕಾಯುತ್ತಿದ್ದನು. ಪೌಲನು ಅವನ ಕುರಿತು ಬರೆದುದು: “ಆದರೆ ದೇವದೂತರಲ್ಲಿ ಯಾವನ ವಿಷಯದಲ್ಲಿಯಾದರೂ—ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂಬದಾಗಿ ಎಂದಾದರೂ ಹೇಳಿದ್ದಾನೋ?”—ಇಬ್ರಿಯ 1:13.
16 ಯೇಸುವಿನ ಕಾಯುವ ಅವಧಿಯು 1914ರಲ್ಲಿ, ಅದೃಶ್ಯ ಆಕಾಶಗಳಲ್ಲಿ ಅವನು ದೇವರ ರಾಜ್ಯದ ಅರಸನಾದಾಗ ಅಂತ್ಯಗೊಂಡಿತೆಂಬುದಕ್ಕೆ ಯೆಹೋವನ ಸಾಕ್ಷಿಗಳು ಧಾರಾಳ ಸಾಕ್ಷ್ಯವನ್ನು ಪ್ರಕಾಶಪಡಿಸಿದ್ದಾರೆ. ಪ್ರಕಟನೆ 11:15, 18 ಹೇಳುವುದು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” “ಜನಾಂಗಗಳು ಕೋಪಿಸಿಕೊಂಡವು, ನಿನ್ನ ಕೋಪವೂ ಪ್ರಕಟವಾಯಿತು.” ಹೌದು, Iನೆಯ ಲೋಕಯುದ್ಧದ ಸಮಯದಲ್ಲಿ ಜನಾಂಗಗಳು ಒಂದಕ್ಕೊಂದು ಕೋಪವನ್ನು ವ್ಯಕ್ತಪಡಿಸಿದವು. (ಲೂಕ 21:24) 1914ರಿಂದ ನಾವು ನೋಡಿರುವ ಯುದ್ಧಗಳು, ಭೂಕಂಪಗಳು, ವ್ಯಾಧಿಗಳು, ಆಹಾರದ ಅಭಾವಗಳು, ಇತ್ಯಾದಿ, ಯೇಸುವು ಈಗ ದೇವರ ರಾಜ್ಯದಲ್ಲಿ ಆಳುತ್ತಿದ್ದಾನೆಂದೂ ಲೋಕದ ಅಂತಿಮ ಅಂತ್ಯವು ಹತ್ತಿರವಿದೆಯೆಂದೂ ದೃಢೀಕರಿಸುತ್ತವೆ.—ಮತ್ತಾಯ 24:3-14.
17. ನಾವು ಇದುವರೆಗೆ ಯಾವ ಮುಖ್ಯ ವಿಷಯಗಳನ್ನು ಸ್ಥಾಪಿಸಿದ್ದೇವೆ?
17 ಒಂದು ಸಂಕ್ಷಿಪ್ತ ಪುನರ್ವಿಮರ್ಶೆ ಈ ಕೆಳಗಿದೆ: ದೇವರು ಅರಸನಾಗಿ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆಂದು ಹೇಳಸಾಧ್ಯವಿರುವುದಾದರೂ, ಇನ್ನೊಂದು ಅರ್ಥದಲ್ಲಿ ಆತನು ಸಿಂಹಾಸನದ ಮೇಲೆ ನ್ಯಾಯತೀರಿಸಲು ಕುಳಿತುಕೊಳ್ಳಬಲ್ಲನು. ಸಾ.ಶ. 33ರಲ್ಲಿ, ಯೇಸುವು ದೇವರ ಬಲಪಕ್ಕದಲ್ಲಿ ಕುಳಿತುಕೊಂಡನು ಮತ್ತು ಈಗ ಅವನು ರಾಜ್ಯದ ಅರಸನಾಗಿದ್ದಾನೆ. ಆದರೆ ಈಗ ಆಳುತ್ತಿರುವ ಅರಸನಾದ ಯೇಸು, ನ್ಯಾಯಾಧೀಶನಾಗಿಯೂ ಇದ್ದಾನೊ? ಮತ್ತು ಇದು, ವಿಶೇಷವಾಗಿ ಈ ಸಮಯದಲ್ಲಿ, ನಮಗೇಕೆ ಸಂಬಂಧಪಟ್ಟದ್ದಾಗಿರಬೇಕು?
18. ಯೇಸು ನ್ಯಾಯಾಧೀಶನೂ ಆಗಿರುವನೆಂಬುದಕ್ಕೆ ಯಾವ ರುಜುವಾತಿದೆ?
18 ನ್ಯಾಯಾಧಿಪತಿಗಳನ್ನು ನೇಮಿಸಲು ಹಕ್ಕುಳ್ಳವನಾದ ಯೆಹೋವನು, ಯೇಸುವನ್ನು ತನ್ನ ಮಟ್ಟಗಳನ್ನು ತಲಪುವ ನ್ಯಾಯಾಧೀಶನಾಗಿ ಆರಿಸಿಕೊಂಡನು. ಜನರು ಆತ್ಮಿಕವಾಗಿ ಜೀವಿತರಾಗುವ ಕುರಿತು ಮಾತಾಡಿದಾಗ ಯೇಸು ಇದನ್ನು ತೋರಿಸಿದನು. “ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವದೂ ಇಲ್ಲ; ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ.” (ಯೋಹಾನ 5:22) ಆದರೂ ಯೇಸುವಿನ ನ್ಯಾಯಸಂಬಂಧದ ಪಾತ್ರವು ಆ ರೀತಿಯ ನ್ಯಾಯತೀರ್ಪನ್ನು ಮೀರಿ ಹೋಗುತ್ತದೆ ಏಕೆಂದರೆ ಅವನು ಜೀವಿತರ ಮತ್ತು ಮೃತರ ನ್ಯಾಯಾಧೀಶನಾಗಿದ್ದಾನೆ. (ಅ. ಕೃತ್ಯಗಳು 10:42; 2 ತಿಮೊಥೆಯ 4:1) ಪೌಲನು ಒಮ್ಮೆ ಪ್ರಕಟಿಸಿದ್ದು: “ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ [ದೇವರು] ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು [ಯೇಸುವನ್ನು] ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.”—ಅ. ಕೃತ್ಯಗಳು 17:31; ಕೀರ್ತನೆ 72:2-7.
19. ಯೇಸು ನ್ಯಾಯಾಧೀಶನಾಗಿ ಕೂತುಕೊಳ್ಳುತ್ತಾನೆಂದು ಹೇಳುವುದು ಏಕೆ ಸರಿಯಾಗಿದೆ?
19 ಹಾಗಾದರೆ ಹೀಗೆ ಯೇಸುವು ಒಂದು ಮಹಿಮೆಯ ಸಿಂಹಾಸನದ ಮೇಲೆ ನ್ಯಾಯಾಧೀಶನ ನಿರ್ದಿಷ್ಟ ಪಾತ್ರವನ್ನು ವಹಿಸಿ ಕುಳಿತುಕೊಳ್ಳುತ್ತಾನೆಂದು ತೀರ್ಮಾನಿಸುವುದರಲ್ಲಿ ನಮಗೆ ತಕ್ಕಷ್ಟು ಆಧಾರಗಳಿವೆಯೆ? ಹೌದು. ಯೇಸುವು ಅಪೊಸ್ತಲರಿಗೆ ಹೇಳಿದ್ದು: “ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 19:28) ಯೇಸುವು ಈಗ ರಾಜ್ಯದ ರಾಜನಾಗಿರುವುದಾದರೂ, ಮತ್ತಾಯ 19:28ರಲ್ಲಿ ಹೇಳಿರುವ ಅವನ ಮುಂದಿನ ಕಾರ್ಯದಲ್ಲಿ, ಸಾವಿರ ವರ್ಷಗಳಲ್ಲಿ ಸಿಂಹಾಸನದ ಮೇಲೆ ಕೂತುಕೊಂಡು ನ್ಯಾಯತೀರಿಸುವುದು ಸೇರಿರುವುದು. ಆ ಸಮಯದಲ್ಲಿ ಅವನು ಸಕಲ ಮಾನವವರ್ಗಕ್ಕೆ, ನೀತಿವಂತರಿಗೂ ಅನೀತಿವಂತರಿಗೂ ನ್ಯಾಯತೀರಿಸುವನು. (ಅ. ಕೃತ್ಯಗಳು 24:15) ನಮ್ಮ ಸಮಯಕ್ಕೆ ಮತ್ತು ನಮ್ಮ ಜೀವಗಳಿಗೆ ಸಂಬಂಧಿಸುವ ಯೇಸುವಿನ ದೃಷ್ಟಾಂತಗಳಲ್ಲಿ ಒಂದಕ್ಕೆ ನಾವು ಗಮನವನ್ನು ಕೊಡುವಾಗ, ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಸಹಾಯಕರವಾಗಿದೆ.
ದೃಷ್ಟಾಂತವು ಏನನ್ನು ಹೇಳುತ್ತದೆ?
20, 21. ನಮ್ಮ ಸಮಯಕ್ಕೆ ಸಂಬಂಧಿಸುವ ಏನನ್ನು ಯೇಸುವಿನ ಅಪೊಸ್ತಲರು ಕೇಳಿದರು, ಇದು ಯಾವ ಪ್ರಶ್ನೆಗೆ ನಡಿಸಿತು?
20 ಯೇಸುವು ಸಾಯುವುದಕ್ಕೆ ತುಸು ಮೊದಲು, ಅವನ ಅಪೊಸ್ತಲರು ಅವನೊಡನೆ ಕೇಳಿದ್ದು: “ಈ ಸಂಗತಿಗಳು ಯಾವಾಗ ಆಗುವುವು ಮತ್ತು ನಿನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯೇನು?” (ಮತ್ತಾಯ 24:3, NW) ‘ಅಂತ್ಯವು ಬರುವ’ ಮೊದಲು ಭೂಮಿಯ ಮೇಲೆ ಆಗುವ ಗಮನಾರ್ಹವಾದ ವಿಕಸನಗಳ ಕುರಿತು ಯೇಸು ಮುಂತಿಳಿಸಿದನು. ಆ ಅಂತ್ಯಕ್ಕೆ ತುಸು ಮೊದಲಾಗಿ, ಜನಾಂಗಗಳು “ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು.”—ಮತ್ತಾಯ 24:14, 29, 30.
21 ಆದರೆ ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಬರುವಾಗ ಆ ಜನಾಂಗಗಳು ಹೇಗೆ ಕಂಡುಬರುವವು? ಕುರಿಗಳು ಮತ್ತು ಆಡುಗಳ ದೃಷ್ಟಾಂತದಿಂದ ನಾವು ಇದನ್ನು ಕಂಡುಹಿಡಿಯೋಣ. ಅದು ಈ ಮಾತುಗಳಿಂದ ಆರಂಭಗೊಳ್ಳುತ್ತದೆ: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು.”—ಮತ್ತಾಯ 25:31, 32.
22, 23. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ತನ್ನ ನೆರವೇರಿಕೆಯನ್ನು 1914ರಲ್ಲಿ ಆರಂಭಿಸಲಿಲ್ಲವೆಂಬುದನ್ನು ಯಾವ ವಿಷಯಗಳು ತೋರಿಸುತ್ತವೆ?
22 ನಾವು ದೀರ್ಘಸಮಯದಿಂದ ತಿಳಿದಿದ್ದಂತೆ, ಯೇಸು ರಾಜಾಧಿಕಾರದಲ್ಲಿ 1914ರಲ್ಲಿ ಕುಳಿತುಕೊಂಡಾಗ, ಈ ದೃಷ್ಟಾಂತವು ಅನ್ವಯಿಸುತ್ತದೊ? ಸರಿ, ಮತ್ತಾಯ 25:34 ಅವನನ್ನು ರಾಜನೆಂದು ಕರೆಯುವುದರಿಂದ, ತರ್ಕಬದ್ಧವಾಗಿ ಈ ದೃಷ್ಟಾಂತವು ಯೇಸು 1914ರಲ್ಲಿ ರಾಜನಾದಂದಿನಿಂದ ಅನ್ವಯವನ್ನು ಕಂಡುಕೊಳ್ಳುತ್ತದೆ. ಆದರೆ ಆ ಬಳಿಕ ಬೇಗನೆ ಅವನು ಯಾವ ನ್ಯಾಯವಿಚಾರಣೆಯನ್ನು ಮಾಡಿದನು? ಅದು “ಎಲ್ಲಾ ದೇಶಗಳ ಜನರ” ನ್ಯಾಯವಿಚಾರಣೆಯಲ್ಲ. ಬದಲಾಗಿ, ಅವನು “ದೇವರ ಮನೆ”ಯನ್ನು ರಚಿಸುವವರೆಂದು ಹೇಳಿಕೊಳ್ಳುವವರ ಮೇಲೆ ತನ್ನ ಗಮನವನ್ನು ಹರಿಸಿದನು. (1 ಪೇತ್ರ 4:17) ಮಲಾಕಿಯ 3:1-3ಕ್ಕೆ ಹೊಂದಿಕೆಯಾಗಿ, ಯೆಹೋವನ ದೂತನಾದ ಯೇಸು, ಭೂಮಿಯಲ್ಲಿ ಉಳಿದಿದ್ದ ಅಭಿಷಿಕ್ತ ಕ್ರೈಸ್ತರನ್ನು ನ್ಯಾಯನಿರ್ಣಾಯಕವಾಗಿ ಪರೀಕ್ಷಿಸಿದನು. ಅದು ಯಾರು “ದೇವರ ಮನೆ”ಯೆಂದು ತಪ್ಪಾಗಿ ಹೇಳಿಕೊಂಡಿದ್ದರೊ, ಆ ಕ್ರೈಸ್ತಪ್ರಪಂಚದ ಮೇಲೆ ನ್ಯಾಯದಂಡನೆಯ ಸಮಯವೂ ಆಗಿತ್ತು.c (ಪ್ರಕಟನೆ 17:1, 2; 18:4-8) ಆದರೂ ಆ ಸಮಯದಲ್ಲಿ, ಅಥವಾ ಅಂದಿನಿಂದ, ಯೇಸುವು ಎಲ್ಲಾ ದೇಶಗಳ ಜನರನ್ನು ಅಂತಿಮವಾಗಿ ಕುರಿಗಳಾಗಿ ಅಥವಾ ಆಡುಗಳಾಗಿ ನ್ಯಾಯತೀರಿಸಲು ಕುಳಿತನೆಂದು ಯಾವುದೂ ಸೂಚಿಸುವುದಿಲ್ಲ.
23 ಆ ದೃಷ್ಟಾಂತದಲ್ಲಿ ಯೇಸುವಿನ ಚಟುವಟಿಕೆಯನ್ನು ನಾವು ವಿಶ್ಲೇಷಿಸುವಲ್ಲಿ, ಅವನು ಎಲ್ಲಾ ದೇಶಗಳಿಗೆ ಅಂತಿಮವಾಗಿ ನ್ಯಾಯವಿಧಿಸುತ್ತಾನೆಂದು ಗಮನಿಸುತ್ತೇವೆ. ಅಂತಹ ನ್ಯಾಯವಿಚಾರಣೆಯು, ಕಳೆದ ದಶಕಗಳಲ್ಲಿ ಸತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ನಿತ್ಯಮರಣ ಅಥವಾ ನಿತ್ಯಜೀವಕ್ಕೆ ಯೋಗ್ಯನಾಗಿ ನ್ಯಾಯವಿಧಿಸಲ್ಪಟ್ಟಿದ್ದಾನೋ ಎಂಬಂತೆ, ಅನೇಕ ವರ್ಷಗಳಲ್ಲಿ ಮುಂದುವರಿಯುವುದೆಂದು ಆ ದೃಷ್ಟಾಂತವು ತೋರಿಸುವುದಿಲ್ಲ. ಇತ್ತೀಚಿನ ದಶಕಗಳಲ್ಲಿ ಸತ್ತಿರುವ ಅಧಿಕಾಂಶ ಮಂದಿ ಮಾನವ ಕುಲದ ಸಾಮಾನ್ಯ ಸಮಾಧಿಗೆ ಹೋಗಿದ್ದಾರೆಂದು ಕಾಣುತ್ತದೆ. (ಪ್ರಕಟನೆ 6:8; 20:13) ಆದರೆ ಆ ದೃಷ್ಟಾಂತವು, ಯೇಸುವು, ಆಗ ಜೀವಿಸಿರುತ್ತ ಅವನ ನ್ಯಾಯದಂಡನೆಯನ್ನು ಎದುರಿಸುವ “ಎಲ್ಲಾ ದೇಶಗಳ ಜನ”ರಿಗೆ ನ್ಯಾಯವಿಧಿಸುವ ಸಮಯವನ್ನು ಚಿತ್ರಿಸುತ್ತದೆ.
24. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯಾವಾಗ ನೆರವೇರುವುದು?
24 ಇನ್ನೊಂದು ಮಾತಿನಲ್ಲಿ, ಆ ದೃಷ್ಟಾಂತವು ಮನುಷ್ಯಕುಮಾರನು ತನ್ನ ಮಹಿಮೆಯಿಂದ ಬರುವ ಆ ಭವಿಷ್ಯತ್ತಿಗೆ ಕೈತೋರಿಸುತ್ತದೆ. ಆಗ ಜೀವಿಸುತ್ತಿರುವ ಜನರಿಗೆ ನ್ಯಾಯತೀರಿಸಲು ಅವನು ಆಸೀನನಾಗುವನು. ಅವನ ನ್ಯಾಯತೀರ್ಪು, ತಾವು ಏನಾಗಿದ್ದೇವೆಂದು ಅವರು ತೋರಿಸಿಕೊಟ್ಟಿದ್ದಾರೊ ಅದರ ಮೇಲೆ ಆಧಾರಗೊಂಡಿರುವುದು. ಆ ಸಮಯದಲ್ಲಿ, “ಶಿಷ್ಟರಿಗೂ ದುಷ್ಟರಿಗೂ . . . ಇರುವ ತಾರತಮ್ಯ”ವು ಸ್ಪಷ್ಟವಾಗಿಗಿ ಸ್ಥಾಪಿಸಲ್ಪಟ್ಟಿರುವುದು. (ಮಲಾಕಿಯ 3:18) ತೀರ್ಪಿನ ಸಾಕ್ಷತ್ ವಿಧಿಸುವಿಕೆ ಮತ್ತು ನಿರ್ವಹಿಸುವಿಕೆಯು ಒಂದು ಸೀಮಿತ ಸಮಯದಲ್ಲಿ ಜಾರಿಗೆ ಬರುವುದು. ಯೇಸುವು ವ್ಯಕ್ತಿಗಳ ಕುರಿತು ಯಾವುದು ವ್ಯಕ್ತವಾಗಿದೆಯೋ ಅದರ ಮೇಲೆ ನ್ಯಾಯವಾದ ನಿರ್ಣಯಗಳನ್ನು ಕೊಡುವನು.—2 ಕೊರಿಂಥ 5:10ನ್ನು ಸಹ ನೋಡಿರಿ.
25. ಮನುಷ್ಯಕುಮಾರನು ಒಂದು ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ಹೇಳುವಾಗ ಮತ್ತಾಯ 25:31 ಏನನ್ನು ಚಿತ್ರಿಸುತ್ತಿದೆ?
25 ಹಾಗಾದರೆ, ಇದರ ಅರ್ಥವು, ಮತ್ತಾಯ 25:31ರಲ್ಲಿ ಹೇಳಿರುವ, ಯೇಸುವು ನ್ಯಾಯತೀರ್ಪಿಗಾಗಿ ‘ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವುದು,’ ಈ ಬಲಾಢ್ಯ ಅರಸನು ಜನಾಂಗಗಳ ಮೇಲೆ ನ್ಯಾಯವನ್ನು ವಿಧಿಸುವ ಮತ್ತು ನಿರ್ವಹಿಸುವ ಆ ಭವಿಷ್ಯತ್ತಿನ ಸಮಯಕ್ಕೆ ಅನ್ವಯಿಸುತ್ತದೆ. ಹೌದು, ಮತ್ತಾಯ 25:31-33, 46ರಲ್ಲಿ, ಯೇಸುವನ್ನೊಳಗೊಳ್ಳುವ ನ್ಯಾಯತೀರ್ಪಿನ ದೃಶ್ಯವು ದಾನಿಯೇಲ 7ನೆಯ ಅಧ್ಯಾಯದ, ಆಳುತ್ತಿರುವ ರಾಜನಾದ ಮಹಾವೃದ್ಧನು ನ್ಯಾಯಾಧೀಶನೋಪಾದಿ ತನ್ನ ಪಾತ್ರವನ್ನು ವಹಿಸಲು ಕುಳಿತುಕೊಳ್ಳುವುದಕ್ಕೆ ಸರಿಹೋಲುತ್ತದೆ.
26. ಈ ದೃಷ್ಟಾಂತದ ಯಾವ ಹೊಸ ವಿವರಣೆಯು ಸ್ಪಷ್ಟವಾಗಿಗುತ್ತದೆ?
26 ಕುರಿಗಳ ಮತ್ತು ಆಡುಗಳ ದೃಷ್ಟಾಂತದ ಈ ರೀತಿಯ ಅರ್ಥಮಾಡುವಿಕೆಯು ಕುರಿಗಳ ಮತ್ತು ಆಡುಗಳ ನ್ಯಾಯತೀರ್ಪು ಭವಿಷ್ಯತ್ತಿನಲ್ಲಿದೆ ಎಂದು ಸೂಚಿಸುತ್ತದೆ. ಅದು ಮತ್ತಾಯ 24:29, 30ರ “ಸಂಕಟವು” ಆರಂಭವಾದ ಬಳಿಕ ಮತ್ತು ಮನುಷ್ಯಕುಮಾರನು ‘ತನ್ನ ಮಹಿಮೆಯಲ್ಲಿ’ ಬಂದ ಬಳಿಕ ಸಂಭವಿಸುವುದು. (ಹೋಲಿಸಿ ಮಾರ್ಕ 13:24-26.) ಆ ಬಳಿಕ, ಇಡೀ ದುಷ್ಟತ್ವವು ತನ್ನ ಅಂತ್ಯದಲ್ಲಿರುವಾಗ, ಯೇಸುವು ನ್ಯಾಯಸಭೆಯನ್ನು ನಡೆಸಿ, ತೀರ್ಪನ್ನು ವಿಧಿಸಿ ಅದನ್ನು ಜಾರಿಗೆ ತರುವನು.—ಯೋಹಾನ 5:30; 2 ಥೆಸಲೊನೀಕ 1:7-10.
27. ಯೇಸುವಿನ ಕೊನೆಯ ದೃಷ್ಟಾಂತದ ಕುರಿತು ಏನನ್ನು ತಿಳಿಯಲು ನಾವು ಆಸಕ್ತರಾಗಿರಬೇಕು?
27 ಇದು ಯೇಸುವಿನ ದೃಷ್ಟಾಂತದ ಸಮಯ ನಿಯಮನದ ನಮ್ಮ ತಿಳಿವಳಿಕೆಯನ್ನು ಸ್ಪಷ್ಟಪಡಿಸುತ್ತದೆ. ಇದು ಕುರಿಗಳು ಮತ್ತು ಆಡುಗಳು ಯಾವಾಗ ನ್ಯಾಯವಿಧಿಸಲ್ಪಡುವರೆಂದು ತೋರಿಸುತ್ತದೆ. ಆದರೆ, ರಾಜ್ಯದ ಸುವಾರ್ತೆಯನ್ನು ಆಸಕ್ತಿಯಿಂದ ಸಾರುವ ನಮಗೆ ಇದು ಹೇಗೆ ತಟ್ಟುತ್ತದೆ? (ಮತ್ತಾಯ 24:14) ಇದು ನಮ್ಮ ಕೆಲಸವನ್ನು ಕಡಮೆ ವೈಶಿಷ್ಟ್ಯವುಳ್ಳದ್ದಾಗಿ ಮಾಡುತ್ತದೆಯೆ ಅಥವಾ ಅದು ಹೆಚ್ಚು ಭಾರವಿರುವ ಜವಾಬ್ದಾರಿಯನ್ನು ತರುತ್ತದೆಯೆ? ನಾವು ಹೇಗೆ ಪ್ರಭಾವಿಸಲ್ಪಡುತ್ತೇವೆಂದು ಮುಂದಿನ ಲೇಖನದಲ್ಲಿ ನಾವು ನೋಡೋಣ.
[ಅಧ್ಯಯನ ಪ್ರಶ್ನೆಗಳು]
a ದಾನಿಯೇಲ 7:10, 26ರಲ್ಲಿ “ನ್ಯಾಯಸಭೆ” ಎಂದು ಭಾಷಾಂತರಿಸಿದ ಪದವು ಎಜ್ರ 7:26ರಲ್ಲಿ ಮತ್ತು ದಾನಿಯೇಲ 4:37; 7:22ರಲ್ಲಿಯೂ ತೋರಿಬರುತ್ತದೆ.
b ಕ್ರೈಸ್ತರು ಒಬ್ಬರನ್ನೊಬ್ಬರು ಕೋರ್ಟಿಗೆ ತೆಗೆದುಕೊಂಡು ಹೋಗುವ ವಿಷಯದಲ್ಲಿ ಪೌಲನು ಕೇಳಿದ್ದು: “ತೀರ್ಪುಮಾಡುವದಕ್ಕೆ ಸಭೆಯಲ್ಲಿ ಗಣನೆಗೆ ಬರದವರನ್ನು ಕುಳ್ಳಿರಿಸಿಕೊಳ್ಳುತ್ತೀರೊ?”—1 ಕೊರಿಂಥ 6:4.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಪ್ರಕಾಶಿತ, ಪ್ರಕಟನೆ—ಅದರ ಪರಮಾವಧಿಯು ಹತ್ತಿರ! ಪುಸ್ತಕದ 56, 73, 235-45, 260 ಪುಟಗಳನ್ನು ನೋಡಿ.
ನಿಮಗೆ ಜ್ಞಾಪಕವಿದೆಯೆ?
◻ ಯೆಹೋವನು ರಾಜನೂ ನ್ಯಾಯಾಧೀಶನೂ ಆಗಿ ಹೇಗೆ ವರ್ತಿಸುತ್ತಾನೆ?
◻ ‘ಸಿಂಹಾಸನದಲ್ಲಿ ಕುಳಿತುಕೊಳ್ಳುವುದಕ್ಕೆ’ ಯಾವ ಎರಡು ಅರ್ಥಗಳಿರಸಾಧ್ಯವಿದೆ?
◻ ಮತ್ತಾಯ 25:31ರ ಕಾಲನಿಯಮನದ ಕುರಿತು ನಾವು ಹಿಂದೆ ಏನು ಹೇಳಿದೆವು, ಆದರೆ ಸರಿಹೊಂದಿಸಲ್ಪಟ್ಟ ಒಂದು ವೀಕ್ಷಣೆಗೆ ಯಾವ ಆಧಾರವಿದೆ?
◻ ಮತ್ತಾಯ 25:31ರಲ್ಲಿ ಸೂಚಿಸಲ್ಪಟ್ಟಂತೆ, ಮನುಷ್ಯಕುಮಾರನು ತನ್ನ ಸಿಂಹಾಸನದ ಮೇಲೆ ಯಾವಾಗ ಕೂತುಕೊಳ್ಳುತ್ತಾನೆ?