ದೇವದೂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?
ದೇವರ ವಾಕ್ಯವು, ದೇವದೂತರ ಅಸ್ತಿತ್ವವನ್ನು ದೃಢೀಕರಿಸುತ್ತದೆ. ಈ ಆತ್ಮ ಜೀವಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿದ್ದಾರೆಂದು ಅದು ನಮಗೆ ಹೇಳುತ್ತದೆ. ಯೆಹೋವ ದೇವರ ಸೇವಕನಾದ ದಾನಿಯೇಲನು ಬರೆದ ಸ್ವರ್ಗೀಯ ಸಂಗತಿಗಳ ಕುರಿತು ಅವನಿಗೆ ಈ ದರ್ಶನವಾಯಿತು: “ಲಕ್ಷೋಪಲಕ್ಷ ದೂತರು [ದೇವರನ್ನು] ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.”—ದಾನಿಯೇಲ 7:10.
ದಾನಿಯೇಲನ ಈ ಹೇಳಿಕೆಯು, ಅನೇಕ ದೇವದೂತರಿದ್ದಾರೆಂಬ ವಿಷಯಕ್ಕಿಂತಲೂ ಹೆಚ್ಚಿನದ್ದನ್ನು ತಿಳಿಸುತ್ತದೆಂಬುದನ್ನು ಗಮನಿಸಿರಿ. ದೇವದೂತರು, ದೇವರ ಶುಶ್ರೂಷೆಯನ್ನು ಮಾಡುತ್ತಾರೆಂಬುದನ್ನೂ ಅದು ಸೂಚಿಸುತ್ತದೆ. ಅವರು ಆತನ ಸೇವಕರಾಗಿದ್ದಾರೆ. ಇದಕ್ಕೆ ಹೊಂದಿಕೆಯಲ್ಲಿ, ಕೀರ್ತನೆಗಾರನು ಹಾಡಿದ್ದು: “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ. ಆತನ ಸೈನ್ಯಗಳೇ ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.”—ಕೀರ್ತನೆ 103:20, 21.
ದೇವದೂತರ ಜೀವನವು, ಭೂಮಿಯ ಮೇಲೆ ಮಾನವರೋಪಾದಿ ಆರಂಭವಾಗಲಿಲ್ಲವೆಂದೂ ಬೈಬಲ್ ವಿವರಿಸುತ್ತದೆ. ಭೂಮಿಯನ್ನು ಸೃಷ್ಟಿಸುವ ಮುಂಚೆಯೇ ಯೆಹೋವನು ದೇವದೂತರನ್ನು ಸ್ವರ್ಗದಲ್ಲಿ ಸೃಷ್ಟಿಸಿದನು. ದೇವರು ‘ಲೋಕಕ್ಕೆ ಅಸ್ತಿವಾರಹಾಕಿದಾಗ, ದೇವಕುಮಾರರೆಲ್ಲರೂ ಆನಂದಘೋಷಮಾಡುತ್ತಾ ಇದ್ದರು.’—ಯೋಬ 38:4-7.
ದೇವದೂತರು ಆತ್ಮ ಜೀವಿಗಳಾಗಿದ್ದು, ಅದೃಶ್ಯರು, ಶಕ್ತಿಶಾಲಿಗಳು ಮತ್ತು ಬುದ್ಧಿವಂತರಾಗಿದ್ದಾರೆ. ಬೈಬಲಿನಲ್ಲಿ ಒಂದು ಆತ್ಮ ಜೀವಿಗೆ ಸೂಚಿಸುವಾಗ ಉಪಯೋಗಿಸಲ್ಪಟ್ಟಿರುವ ಮಲಖ್ ಎಂಬ ಹೀಬ್ರು ಪದ ಮತ್ತು ಆಂಗೆಲಾಸ್ ಎಂಬ ಗ್ರೀಕ್ ಪದವನ್ನು, “ದೇವದೂತ” ಎಂದು ಭಾಷಾಂತರಿಸಲಾಗಿದೆ. ಈ ಪದಗಳು, ಬೈಬಲಿನಲ್ಲಿ ಕಡಿಮೆಪಕ್ಷ 400 ಸಲ ತೋರಿಬರುತ್ತವೆ. ಈ ಎರಡೂ ಪದಗಳಿಗೆ, “ಸಂದೇಶವಾಹಕ” ಎಂಬ ಒಂದೇ ಅರ್ಥವಿದೆ.
ದೇವದೂತರ ಕಾಣಿಸಿಕೊಳ್ಳುವಿಕೆಗಳು
ದೇವದೂತರು ಖಂಡಿತವಾಗಿಯೂ ಸಂದೇಶವಾಹಕರಾಗಿದ್ದಾರೆ. ದೇವದೂತ ಗಬ್ರಿಯೇಲನು ಮರಿಯಳಿಗೆ ಕಾಣಿಸಿಕೊಂಡ ಸಮಯದ ಕುರಿತಾದ ಬೈಬಲ್ ವೃತ್ತಾಂತವು ನಿಮಗೆ ಚಿರಪರಿಚಿತವಾಗಿರಬಹುದು. ಮರಿಯಳು ಒಬ್ಬ ಕನ್ಯೆಯಾಗಿದ್ದರೂ, ಯೇಸು ಎಂದು ಕರೆಯಲ್ಪಡುವ ಒಬ್ಬ ಮಗನನ್ನು ಅವಳು ಹೆರುವಳೆಂದು ಗಬ್ರಿಯೇಲನು ಅವಳಿಗೆ ಹೇಳಿದನು. (ಲೂಕ 1:26-33) ಹೊಲದಲ್ಲಿದ್ದ ಕೆಲವು ಕುರುಬರಿಗೂ ಒಬ್ಬ ದೇವದೂತನು ಕಾಣಿಸಿಕೊಂಡನು. ಅವನು ಘೋಷಿಸಿದ್ದು: ‘ಈ ಹೊತ್ತು ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.’ (ಲೂಕ 2:8-11) ಇದೇ ರೀತಿಯಲ್ಲಿ ಹಾಗರ, ಅಬ್ರಹಾಮ, ಲೋಟ, ಯಾಕೋಬ, ಮೋಶೆ, ಗಿದ್ಯೋನ, ಯೇಸು ಮತ್ತು ಬೈಬಲ್ನಲ್ಲಿ ತಿಳಿಸಲ್ಪಟ್ಟಿರುವ ಇನ್ನಿತರರಿಗೆ ದೇವದೂತರು ಸಂದೇಶಗಳನ್ನು ತಲಪಿಸಿದರು.—ಆದಿಕಾಂಡ 16:7-12; 18:1-5, 10; 19:1-3; 32:24-30; ವಿಮೋಚನಕಾಂಡ 3:1, 2; ನ್ಯಾಯಸ್ಥಾಪಕರು 6:11-22; ಲೂಕ 22:39-43; ಇಬ್ರಿಯ 13:2.
ದೇವದೂತರು ತಲಪಿಸಿದ ಈ ಎಲ್ಲ ಸಂದೇಶಗಳು, ಆ ಮನುಷ್ಯರ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಅಲ್ಲ ಬದಲಾಗಿ ದೇವರ ಉದ್ದೇಶಗಳ ನೆರವೇರಿಕೆಗೆ ಹೊಂದಿಕೆಯಲ್ಲಿದ್ದವು ಎಂಬುದು ಗಮನಾರ್ಹವಾದ ಸಂಗತಿ. ದೇವದೂತರು ದೇವರ ಪ್ರತಿನಿಧಿಗಳೋಪಾದಿ, ಆತನ ಚಿತ್ತ ಮತ್ತು ಸಮಯಕ್ಕನುಸಾರವಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರು ಭೂಮಿಗೆ ಬರುವಂತೆ ಮನುಷ್ಯರು ಅವರಿಗೆ ಕರೆಕೊಡುತ್ತಿರಲಿಲ್ಲ.
ಸಹಾಯಕ್ಕಾಗಿ ನಾವು ದೇವದೂತರನ್ನು ಕರೆಯಬೇಕೊ?
ಸಂಕಟದ ಸಮಯದಲ್ಲಿ ದೇವದೂತರನ್ನು ಕರೆಯುವುದು ಸರಿಯೊ? ಅದು ಸರಿಯಾಗಿರುವಲ್ಲಿ, ನಮಗೆ ಅತ್ಯುತ್ತಮವಾಗಿ ಸಹಾಯಮಾಡಬಲ್ಲ ದೇವದೂತನ ಹೆಸರು ನಮಗೆ ತಿಳಿದಿರಬೇಕು. ಆದುದರಿಂದ, ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಪುಸ್ತಕಗಳು ಅನೇಕ ದೇವದೂತರ ಸ್ಥಾನ, ಪದವಿಗಳು, ಮತ್ತು ಕರ್ತವ್ಯಗಳೊಂದಿಗೆ ಅವರ ಊಹಿತ ಹೆಸರುಗಳನ್ನೂ ಪಟ್ಟಿಮಾಡುತ್ತವೆ. ಒಂದು ಪುಸ್ತಕವು, “ದಿವ್ಯವಾದ ಅತಿ ಪ್ರಮುಖ ಹತ್ತು ದೇವದೂತರ” ಹೆಸರುಗಳನ್ನು ಪಟ್ಟಿಮಾಡುತ್ತದೆ. ಇವರು “ಪಾಶ್ಚಾತ್ಯ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧ ದೇವದೂತರುಗಳು” ಆಗಿದ್ದಾರೆ. ಆ ಪಟ್ಟಿಯೊಂದಿಗೆ, ಈ ಸಲಹೆ ಇದೆ: ನಿಮ್ಮ ಕಣ್ಣುಗಳನ್ನು ಮುಚ್ಚಿ, ಆ ದೇವದೂತನ ಹೆಸರನ್ನು ಅನೇಕ ಬಾರಿ ನಿಧಾನವಾಗಿ ಜಪಿಸಿರಿ, ದೀರ್ಘವಾಗಿ ಶ್ವಾಸವನ್ನು ಎಳೆದುಕೊಳ್ಳಿರಿ, ನಿಧಾನವಾಗಿ ಉಸಿರಾಡಿರಿ, ಮತ್ತು “ಅವರೊಂದಿಗಿನ ಸಂಭಾವ್ಯ ಸಂಪರ್ಕಕ್ಕಾಗಿ ತಯಾರಾಗಿರಿ.”
ಇದಕ್ಕೆ ವ್ಯತಿರಿಕ್ತವಾಗಿ, ದೇವರ ನಂಬಿಗಸ್ತ ದೇವದೂತರಲ್ಲಿ ಕೇವಲ ಇಬ್ಬರ ಹೆಸರುಗಳನ್ನು ಬೈಬಲ್ ನಮಗೆ ನೀಡುತ್ತದೆ. ಅವು ಯಾವುವೆಂದರೆ, ಮೀಕಾಯೇಲ ಮತ್ತು ಗಬ್ರಿಯೇಲ. (ದಾನಿಯೇಲ 12:1; ಲೂಕ 1:26) ಪ್ರತಿಯೊಬ್ಬ ದೇವದೂತನು, ವ್ಯಕ್ತಿಸ್ವರೂಪವಿಲ್ಲದ ಬರಿಯ ಶಕ್ತಿಯಲ್ಲ ಬದಲಿಗೆ ಒಂದು ಹೆಸರುಳ್ಳ ಅಪೂರ್ವ ಆತ್ಮ ವ್ಯಕ್ತಿಯಾಗಿದ್ದಾನೆಂಬುದನ್ನು ತೋರಿಸಲಿಕ್ಕಾಗಿಯೇ ಈ ಹೆಸರುಗಳು ಒದಗಿಸಲ್ಪಟ್ಟಿವೆ.
ಕೆಲವು ದೇವದೂತರು, ತಮ್ಮ ಹೆಸರುಗಳನ್ನು ಮನುಷ್ಯರಿಗೆ ತಿಳಿಸಲು ನಿರಾಕರಿಸಿದ್ದು ನಿಜವಾಗಿಯೂ ಗಮನಸೆಳೆಯುವ ವಿಷಯ. ಯಾಕೋಬನು ಒಬ್ಬ ದೇವದೂತನಿಗೆ ಅವನ ಹೆಸರನ್ನು ಕೇಳಿದಾಗ, ಅವನದನ್ನು ತಿಳಿಸಲಿಲ್ಲ. (ಆದಿಕಾಂಡ 32:29) ಯೆಹೋಶುವನು, ತನ್ನ ಎದುರಿಗೆ ಬಂದ ಒಬ್ಬ ದೇವದೂತನಿಗೆ ತನ್ನ ಗುರುತನ್ನು ತಿಳಿಸುವಂತೆ ಕೇಳಿದಾಗ, ಆ ದೇವದೂತನು ತಾನು “ಯೆಹೋವನ ಸೇನಾಪತಿ” ಎಂದಷ್ಟೇ ಹೇಳಿದನು. (ಯೆಹೋಶುವ 5:14) ಸಂಸೋನನ ಹೆತ್ತವರು, ಒಬ್ಬ ದೇವದೂತನಿಗೆ ಅವನ ಹೆಸರನ್ನು ಕೇಳಿದಾಗ, ಅವನು ಹೇಳಿದ್ದು: “ನನ್ನ ಹೆಸರನ್ನು ಕೇಳುವದೇಕೆ? ಅದು ಆಶ್ಚರ್ಯಕರವಾದದ್ದು.” (ನ್ಯಾಯಸ್ಥಾಪಕರು 13:17, 18) ಹೀಗೆ ಬೈಬಲ್, ದೇವದೂತರ ಹೆಸರುಗಳ ಪಟ್ಟಿಯನ್ನು ಕೊಡದಿರುವ ಮೂಲಕ, ನಾವು ಅವರಿಗೆ ಅನುಚಿತವಾದ ಗೌರವವನ್ನು ಕೊಡುವುದರಿಂದ ಮತ್ತು ಆರಾಧಿಸುವುದರಿಂದ ನಮ್ಮನ್ನು ದೂರವಿರಿಸುತ್ತದೆ. ನಾವು ಮುಂದೆ ನೋಡಲಿರುವಂತೆ, ದೇವದೂತರಿಗೆ ಮೊರೆಯಿಡುವಂತೆ ಬೈಬಲ್ ನಮಗೆ ಕಲಿಸುವುದಿಲ್ಲ.
ದೇವರಿಗೆ ಪ್ರಾರ್ಥಿಸುವುದು
ಆತ್ಮ ಜೀವಿಗಳ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ವಿಷಯಗಳ ಕುರಿತು ನಮಗೆ ಏನು ತಿಳಿದಿರಬೇಕಾಗಿದೆಯೊ ಅದೆಲ್ಲವನ್ನು ಬೈಬಲ್ ತಿಳಿಸುತ್ತದೆ. ಅಪೊಸ್ತಲ ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ . . . ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ನಮಗೆ ಅನೇಕ ದೇವದೂತರ ಹೆಸರುಗಳು ತಿಳಿದಿರಬೇಕೆಂದು ದೇವರು ಬಯಸುತ್ತಿದ್ದರೆ, ಆತನು ಅವುಗಳನ್ನು ತನ್ನ ವಾಕ್ಯವಾದ ಬೈಬಲಿನಲ್ಲಿ ಪ್ರಕಟಿಸುತ್ತಿದ್ದನು. ಮತ್ತು ನಾವು ದೇವದೂತರನ್ನು ಹೇಗೆ ಸಂಪರ್ಕಿಸಬೇಕು ಹಾಗೂ ಅವರೊಂದಿಗೆ ಪ್ರಾರ್ಥನೆಯಲ್ಲಿ ಹೇಗೆ ಮಾತಾಡಬೇಕೆಂಬ ಸೂಚನೆಗಳನ್ನು ಆತನು ಕೊಡಲು ಬಯಸುತ್ತಿದ್ದಲ್ಲಿ, ಆ ಮಾಹಿತಿಯನ್ನು ಖಂಡಿತವಾಗಿ ಶಾಸ್ತ್ರಗಳಲ್ಲಿ ಕೊಟ್ಟಿರುತ್ತಿದ್ದನು.
ಅದಕ್ಕೆ ಬದಲಾಗಿ, ಯೇಸು ಕ್ರಿಸ್ತನು ಕಲಿಸಿದ್ದು: “ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಕ್ಕೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; . . . ಆದದರಿಂದ ನೀವು ಹೀಗೆ ಪ್ರಾರ್ಥನೆ ಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:6, 9, 10) ನಾವು ದೇವದೂತರಿಗೆ ಮೊರೆಯಿಡಲೂಬಾರದು, ಅವರಿಗೆ ಪ್ರಾರ್ಥಿಸಲೂಬಾರದು, ಬದಲಿಗೆ ದೇವದೂತರ ಸೃಷ್ಟಿಕರ್ತನಾದ ದೇವರನ್ನೇ ಪ್ರಾರ್ಥನಾಪೂರ್ವಕವಾಗಿ ಸಮೀಪಿಸಬೇಕೆಂಬುದು ಶಾಸ್ತ್ರೀಯ ದೃಷ್ಟಿಕೋನವಾಗಿದೆ. ಆತನ ಹೆಸರು ಒಂದು ರಹಸ್ಯವಲ್ಲ, ಮತ್ತು ಅದನ್ನು ಪ್ರಕಟಿಸಲಿಕ್ಕಾಗಿ ಯಾವುದೇ ದಿವ್ಯಜ್ಞಾನಿಯ ಅಗತ್ಯವಿಲ್ಲ. ಆ ದೈವಿಕ ಹೆಸರನ್ನು ಮರೆಮಾಡಲು ಪ್ರಯತ್ನಗಳು ಮಾಡಲ್ಪಟ್ಟಿದ್ದರೂ ಅದು ಬೈಬಲ್ ದಾಖಲೆಯಲ್ಲಿ 7,000ಕ್ಕಿಂತಲೂ ಹೆಚ್ಚು ಬಾರಿ ತೋರಿಬರುತ್ತದೆ. ಉದಾಹರಣೆಗಾಗಿ, ಸ್ವರ್ಗೀಯ ತಂದೆಗೆ ಸೂಚಿಸುತ್ತಾ ಕೀರ್ತನೆಗಾರನು ಹಾಡಿದ್ದು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತ”ನು.—ಕೀರ್ತನೆ 83:18.
ನಾವು ಯೆಹೋವನನ್ನು ಪ್ರಾರ್ಥನೆಯಲ್ಲಿ ಯೋಗ್ಯ ರೀತಿಯಲ್ಲಿ ಸಮೀಪಿಸುವಾಗ, ಆತನು ಎಂದೂ ನಮಗೆ ಕಿವಿಗೊಡಲಾರದಷ್ಟು ಕಾರ್ಯಮಗ್ನನಾಗಿರುವುದಿಲ್ಲ. ಬೈಬಲ್ ನಮಗೆ ಈ ಆಶ್ವಾಸನೆಯನ್ನು ಕೊಡುತ್ತದೆ: “ಯೆಹೋವನು ಭೂಲೋಕದ ಎಲ್ಲ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವಕಾಲವೃತ್ತಾಂತ 16:9.
ದೇವದೂತರು ಮತ್ತು ನೈತಿಕ ಮಟ್ಟಗಳು
ಅನೇಕವೇಳೆ ವಾರ್ತಾಮಾಧ್ಯಮದಲ್ಲಿ ವರ್ಣಿಸಲ್ಪಟ್ಟಿರುವ ವಿಷಯಕ್ಕೆ ತದ್ವಿರುದ್ಧವಾಗಿ, ದೇವದೂತರು ಜನರ ತೀರ್ಪನ್ನು ಮಾಡುವುದಿಲ್ಲ. ಇದು ಯುಕ್ತವಾಗಿದೆ, ಯಾಕಂದರೆ ದೇವದೂತರಿಗೆ ಮಾನವರ ತೀರ್ಪು ಮಾಡುವ ಅಧಿಕಾರವಿಲ್ಲ. ಯೆಹೋವನು “ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ,” ಅಂದರೆ ಯೇಸು ಕ್ರಿಸ್ತನಿಗೆ ಕೊಟ್ಟಿರುವುದಾದರೂ, ಆತನೇ “ಎಲ್ಲರಿಗೆ ನ್ಯಾಯಾಧಿಪತಿ” ಆಗಿದ್ದಾನೆ. (ಇಬ್ರಿಯ 12:23; ಯೋಹಾನ 5:22) ಹಾಗಿದ್ದರೂ, ನಮ್ಮ ಜೀವನ ರೀತಿಯ ಕುರಿತಾಗಿ ದೇವದೂತರಿಗೆ ಆಸಕ್ತಿಯೇ ಇಲ್ಲವೆಂದು ಭಾವಿಸುವುದು ತಪ್ಪು. ಯೇಸು ಹೇಳಿದ್ದು: “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗು”ವುದು.—ಲೂಕ 15:10.
ಆದರೆ ದೇವದೂತರು ಬರಿ ಪ್ರೇಕ್ಷಕರಲ್ಲ. ಗತಕಾಲಗಳಲ್ಲಿ, ಅವರು ದೇವರ ನ್ಯಾಯತೀರ್ಪುಗಳನ್ನು ಜಾರಿಗೊಳಿಸುತ್ತಾ, ವಧಕಾರರಾಗಿ ಕೆಲಸಮಾಡಿದರು. ಉದಾಹರಣೆಗಾಗಿ, ದೇವರು ಪ್ರಾಚೀನ ಐಗುಪ್ತ್ಯರ ವಿರುದ್ಧ ದೇವದೂತರನ್ನು ಉಪಯೋಗಿಸಿದನು. ಕೀರ್ತನೆ 78:49ಕ್ಕನುಸಾರ, “ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನೂ ಉಗ್ರಹಿಂಸೆಗಳನ್ನೂ ಸಂಹಾರದೂತಗಣವನ್ನೋ ಎಂಬಂತೆ ಕಳುಹಿಸಿದನು.” ತದ್ರೀತಿಯಲ್ಲಿ, ಒಂದೇ ರಾತ್ರಿಯಲ್ಲಿ, ಕೇವಲ ಒಬ್ಬ ದೇವದೂತನು 1,85,000 ಅಶ್ಶೂರ್ಯ ಸೈನಿಕರನ್ನು ಸಂಹರಿಸಿದನೆಂದು ಬೈಬಲ್ ವರದಿಸುತ್ತದೆ.—2 ಅರಸುಗಳು 19:35.
ದೇವದೂತರು ತದ್ರೀತಿಯಲ್ಲಿ, ದೇವರ ನೀತಿಯುತ ಮಟ್ಟಗಳಿಗನುಸಾರ ನಡೆಯಲು ನಿರಾಕರಿಸುವ ಮೂಲಕ ಇತರರ ಹಿತಕ್ಕೆ ಬೆದರಿಕೆಯನ್ನೊಡ್ಡುವವರನ್ನು ಭವಿಷ್ಯತ್ತಿನಲ್ಲಿ ನಾಶಗೊಳಿಸುವರು. ಯೇಸು ತನ್ನ “ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ . . . ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.”—2 ಥೆಸಲೊನೀಕ 1:7, 8.
ದೇವರ ನಂಬಿಗಸ್ತ ದೇವದೂತರು, ಆತನ ಸೂಚನೆಗಳನ್ನು ಪಾಲಿಸುವ ಮತ್ತು ಆತನ ನೀತಿಯುತ ಮಟ್ಟಗಳನ್ನು ಎತ್ತಿಹಿಡಿಯುವ ಮೂಲಕ, ಆತನ ಚಿತ್ತವನ್ನು ಯಾವಾಗಲೂ ಮಾಡುತ್ತಾರೆಂದು ಶಾಸ್ತ್ರಗಳು ತೋರಿಸುತ್ತವೆ. ದೇವದೂತರು ನಮಗೆ ಸಹಾಯಮಾಡುವಂತೆ ನಾವು ಬಯಸುವುದಾದರೆ, ದೇವರ ಚಿತ್ತವೇನಾಗಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕನುಸಾರ ಜೀವಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕಾಗಿದೆ.
ರಕ್ಷಕ ದೂತರು
ದೇವದೂತರು ಜನರ ಕಾಳಜಿವಹಿಸಿ, ಅವರನ್ನು ಸಂರಕ್ಷಿಸುತ್ತಾರೊ? ಅಪೊಸ್ತಲ ಪೌಲನು ಕೇಳಿದ್ದು: “ಇವರೆಲ್ಲರು [ದೇವದೂತರು] ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳಲ್ಲವೋ?” (ಇಬ್ರಿಯ 1:14) ಪೌಲನ ಪ್ರಶ್ನೆಗೆ ಸ್ಪಷ್ಟವಾದ ಉತ್ತರವು, ಹೌದು ಎಂದಾಗಿದೆ.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದ್ದರಿಂದ, ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಎಂಬ ಮೂವರು ಇಬ್ರಿಯರನ್ನು, ಬಹಳಷ್ಟು ಕಾವೇರಿಸಲ್ಪಟ್ಟ ಆವಿಗೆಯೊಳಗೆ ಎಸೆಯಲಾಯಿತು. ಆದರೆ ದೇವರ ಆ ನಂಬಿಗಸ್ತ ಸೇವಕರಿಗೆ ಬೆಂಕಿಯು ತಾಗಲಿಲ್ಲ. ರಾಜನು ಆವಿಗೆಯೊಳಗೆ ನೋಡಿದಾಗ, ಅವನು “ನಾಲ್ವರನ್ನು” ನೋಡಿ, “ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು. (ದಾನಿಯೇಲ 3:25) ಕೆಲವೊಂದು ವರ್ಷಗಳ ಬಳಿಕ, ದಾನಿಯೇಲನ ನಂಬಿಗಸ್ತಿಕೆಯಿಂದಾಗಿ ಅವನನ್ನು ಸಿಂಹಗಳ ಗವಿಯೊಳಗೆ ಎಸೆಯಲಾಯಿತು. ಅವನು ಸಹ ಯಾವುದೇ ಹಾನಿಯಿಲ್ಲದೆ ಪಾರಾಗಿ, ಹೀಗೆ ಘೋಷಿಸಿದನು: “ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.”—ದಾನಿಯೇಲ 6:22.
ಸಾ.ಶ. ಒಂದನೆಯ ಶತಮಾನದಲ್ಲಿ ಕ್ರಿಸ್ತನ ಹಿಂಬಾಲಕರ ಸಭೆಯ ಸ್ಥಾಪನೆಯಾದಾಗ, ಅಪೊಸ್ತಲರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸುತ್ತಾ ದೇವದೂತರು ಪುನಃ ಒಮ್ಮೆ ಕಾಣಿಸಿಕೊಂಡರು. (ಅ. ಕೃತ್ಯಗಳು 5:17-24; 12:6-12) ಮತ್ತು ಸಮುದ್ರ ಪ್ರಯಾಣದ ಸಮಯದಲ್ಲಿ ಪೌಲನ ಜೀವವು ಗಂಡಾಂತರದಲ್ಲಿದ್ದಾಗ, ಅವನು ಸುರಕ್ಷಿತವಾಗಿ ರೋಮ್ ತಲಪುವನೆಂದು ಒಬ್ಬ ದೇವದೂತನು ಆಶ್ವಾಸನೆ ನೀಡಿದನು.—ಅ. ಕೃತ್ಯಗಳು 27:13-24.
ದೇವರ ಅದೃಶ್ಯ ದೇವದೂತ ಪಡೆಗಳು ನೈಜವಾಗಿವೆ, ಮತ್ತು ಅವರು ಎಲೀಷ ಹಾಗೂ ಅವನ ಸೇವಕನನ್ನು ಸಂರಕ್ಷಿಸಿದಂತೆ, ತಮಗೂ ಸಂರಕ್ಷಣೆಯನ್ನು ಒದಗಿಸಲು ಶಕ್ತರಾಗಿದ್ದಾರೆಂದು, ಯೆಹೋವ ದೇವರ ಪ್ರಚಲಿತ ದಿನದ ಸೇವಕರಿಗೆ ಪೂರ್ಣ ಮನವರಿಕೆಯಿದೆ. (2 ಅರಸುಗಳು 6:15-17) ಖಂಡಿತವಾಗಿಯೂ, “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.”—ಕೀರ್ತನೆ 34:7; 91:11.
ದೇವದೂತರು ಒಯ್ಯುವ ಸಂದೇಶ
ದೇವದೂತರು, ಯೆಹೋವ ದೇವರನ್ನು ಸೇವಿಸುವವರ ಹಿತಚಿಂತಕರಾಗಿದ್ದಾರೆ. ಅದೇ ಸಮಯದಲ್ಲಿ, ಜನರು ಆತನ ಕುರಿತು ಮತ್ತು ಆತನ ಉದ್ದೇಶದ ಕುರಿತು ಕಲಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿಯೂ ಅವರು ಒಳಗೂಡಿದ್ದಾರೆ. ಅಪೊಸ್ತಲ ಯೋಹಾನನು ಬರೆದುದು: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು—ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, . . . ಎಂದು ಮಹಾ ಶಬ್ದದಿಂದ ಹೇಳಿದನು.”—ಪ್ರಕಟನೆ 14:6, 7.
ಈ “ನಿತ್ಯವಾದ ಶುಭವರ್ತಮಾನ”ದಲ್ಲಿ ಏನು ಒಳಗೂಡಿದೆಯೆಂದು ನೀವು ತಿಳಿದುಕೊಳ್ಳಲು ಬಯಸುತ್ತೀರೊ? ಹಾಗಿರುವಲ್ಲಿ, ಯೆಹೋವನ ಸಾಕ್ಷಿಗಳನ್ನು ಕೇಳಿರಿ. ಅದನ್ನು ನಿಮಗೆ ತಿಳಿಯಪಡಿಸಲು ಅವರು ಸಂತೋಷಪಡುವರು.
[ಪುಟ 7 ರಲ್ಲಿರುವ ಚಿತ್ರ]
ಆಕಾಶಮಧ್ಯದಲ್ಲಿ ಒಬ್ಬ ದೇವದೂತನು ನಿತ್ಯವಾದ ಶುಭವರ್ತಮಾನವನ್ನು ಸಾರಿಹೇಳುತ್ತಿದ್ದಾನೆ. ನೀವು ಅದರ ಕುರಿತು ತಿಳಿದುಕೊಳ್ಳಲು ಬಯಸುತ್ತೀರೊ?