ಹೊಸ ಒಡಂಬಡಿಕೆಯ ಮುಖಾಂತರ ಹೆಚ್ಚು ಶ್ರೇಷ್ಠವಾದ ಆಶೀರ್ವಾದಗಳು
“ಯೇಸು . . . ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.”—ಇಬ್ರಿಯ 8:6.
1. ಏದೆನಿನಲ್ಲಿ ವಾಗ್ದಾನಿಸಲ್ಪಟ್ಟ ‘ಸ್ತ್ರೀಯ ಸಂತಾನ’ ಆಗಿ ಯಾರು ಪರಿಣಮಿಸಿದನು, ಮತ್ತು ಅವನು ‘ಹಿಮ್ಮಡಿಯಲ್ಲಿ ಕಚ್ಚಲ್ಪಟ್ಟದ್ದು’ ಹೇಗೆ?
ಆದಾಮ ಹವ್ವರು ಪಾಪಗೈದ ಬಳಿಕ, ಹವ್ವಳನ್ನು ವಂಚಿಸಿದ ಸೈತಾನನ ಮೇಲೆ ತೀರ್ಪನ್ನು ಪ್ರಕಟಿಸುತ್ತಾ ಯೆಹೋವನು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಸಾ.ಶ. 29ರಲ್ಲಿ ಯೇಸು ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡಾಗ, ಏದೆನಿನಲ್ಲಿ ವಾಗ್ದಾನಿಸಲ್ಪಟ್ಟ ಸಂತಾನವು ಕೊನೆಗೂ ತೋರಿಬಂತು. ಸಾ.ಶ. 33ರಲ್ಲಿ ಯಾತನಾ ಕಂಬದ ಮೇಲೆ ಅವನು ಮರಣಹೊಂದಿದಾಗ, ಆ ಪುರಾತನ ಪ್ರವಾದನೆಯ ಒಂದು ಭಾಗವು ನೆರವೇರಿಸಲ್ಪಟ್ಟಿತು. ಸೈತಾನನು ಸಂತಾನದ ‘ಹಿಮ್ಮಡಿಯನ್ನು ಕಚ್ಚಿ’ದ್ದನು.
2. ಯೇಸುವಿನ ಸ್ವಂತ ಮಾತುಗಳಿಗನುಸಾರ, ಅವನ ಮರಣವು ಮಾನವಕುಲಕ್ಕೆ ಹೇಗೆ ಪ್ರಯೋಜನವನ್ನು ತರುತ್ತದೆ?
2 ಸಂತೋಷಕರವಾಗಿ ಆ ಗಾಯವು ಯಾತನಾಮಯವಾಗಿ ನೋವುಭರಿತವಾಗಿದ್ದರೂ, ಶಾಶ್ವತವಾಗಿರಲಿಲ್ಲ. ಯೇಸು ಸತ್ತವರೊಳಗಿಂದ ಒಂದು ಅಮರ ಆತ್ಮವಾಗಿ ಎಬ್ಬಿಸಲ್ಪಟ್ಟು, ಸ್ವರ್ಗದಲ್ಲಿದ್ದ ತನ್ನ ತಂದೆಯ ಬಳಿ ಏರಿಹೋದನು. ಅಲ್ಲಿ ಅವನು, ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡಾಗಿ’ ತನ್ನ ಸುರಿಸಲ್ಪಟ್ಟ ರಕ್ತದ ಮೌಲ್ಯವನ್ನು ನೀಡಿದನು. ಹೀಗೆ, ಅವನ ಸ್ವಂತ ಮಾತುಗಳು ಸತ್ಯವಾಗಿ ಪರಿಣಮಿಸಿದವು: “ಮನುಷ್ಯಕುಮಾರನು ತನ್ನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಎತ್ತರದಲ್ಲಿಡಲ್ಪಡಬೇಕು. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಮತ್ತಾಯ 20:28; ಯೋಹಾನ 3:14-16; ಇಬ್ರಿಯ 9:12-14) ಯೇಸುವಿನ ಪ್ರವಾದನೆಯ ನೆರವೇರಿಕೆಯಲ್ಲಿ ಹೊಸ ಒಡಂಬಡಿಕೆಯು ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಹೊಸ ಒಡಂಬಡಿಕೆ
3. ಹೊಸ ಒಡಂಬಡಿಕೆಯು ಜಾರಿಯಲ್ಲಿದ್ದದ್ದನ್ನು ಯಾವಾಗ ಪ್ರಥಮವಾಗಿ ನೋಡಲಾಯಿತು?
3 ಯೇಸು ತನ್ನ ಮರಣದ ಸ್ವಲ್ಪ ಸಮಯದ ಮುಂಚೆ ತನ್ನ ಹಿಂಬಾಲಕರಿಗೆ, ತನ್ನ ಸುರಿಸಲ್ಪಟ್ಟ ರಕ್ತವು “[ಹೊಸ] ಒಡಂಬಡಿಕೆಯ ರಕ್ತ”ವಾಗಿದೆಯೆಂದು ಹೇಳಿದನು. (ಮತ್ತಾಯ 26:28; ಲೂಕ 22:20) ಅವನು ಸ್ವರ್ಗಕ್ಕೆ ಏರಿಹೋಗಿ ಹತ್ತು ದಿನಗಳಾದ ನಂತರ, ಯೆರೂಸಲೇಮಿನಲ್ಲಿ ಮಹಡಿಯ ಮೇಲಿನ ಕೋಣೆಯೊಂದರಲ್ಲಿ ಒಟ್ಟುಗೂಡಿದ್ದ ಸುಮಾರು 120 ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಆ ಹೊಸ ಒಡಂಬಡಿಕೆಯು ಜಾರಿಯಲ್ಲಿರುವುದನ್ನು ನೋಡಲಾಯಿತು. (ಅ. ಕೃತ್ಯಗಳು 1:15; 2:1-4) ಹೊಸ ಒಡಂಬಡಿಕೆಯೊಳಗೆ ಈ 120 ಶಿಷ್ಯರ ಒಳಸೇರಿಸುವಿಕೆಯು, “ಮೊದಲಿದ್ದ” ಒಡಂಬಡಿಕೆ, ಧರ್ಮಶಾಸ್ತ್ರದೊಡಂಬಡಿಕೆಯು ಈಗ ರೂಢಿಯಲ್ಲಿಲ್ಲವೆಂಬುದನ್ನು ತೋರಿಸಿತು.—ಇಬ್ರಿಯ 8:13.
4. ಹಳೆಯ ಒಡಂಬಡಿಕೆಯು ಕೊರತೆಯುಳ್ಳದಾಗಿತ್ತೊ? ವಿವರಿಸಿರಿ.
4 ಹಳೆಯ ಒಡಂಬಡಿಕೆಯು ಕೊರತೆಯುಳ್ಳದಾಗಿತ್ತೊ? ಇಲ್ಲವೇ ಇಲ್ಲ. ಅದು ಈಗ ಸ್ಥಾನಪಲ್ಲಟಗೊಂಡಿತ್ತಾದ್ದರಿಂದ, ಮಾಂಸಿಕ ಇಸ್ರಾಯೇಲ್ ಅಂದಿನಿಂದ ದೇವರ ವಿಶೇಷ ಜನಾಂಗವಾಗಿರಲಿಲ್ಲವೆಂಬುದು ನಿಜ. (ಮತ್ತಾಯ 23:38) ಆದರೆ ಅದು, ಇಸ್ರಾಯೇಲಿನ ಅವಿಧೇಯತೆ ಮತ್ತು ಯೆಹೋವನ ಅಭಿಷಿಕ್ತನ ತಿರಸ್ಕರಿಸುವಿಕೆಯ ಕಾರಣದಿಂದಾಗಿತ್ತು. (ವಿಮೋಚನಕಾಂಡ 19:5; ಅ. ಕೃತ್ಯಗಳು 2:22, 23) ಆದರೆ ಧರ್ಮಶಾಸ್ತ್ರವು ಸ್ಥಾನಪಲ್ಲಟಗೊಳ್ಳುವ ಮುಂಚೆ, ಅದು ಅನೇಕ ವಿಷಯಗಳನ್ನು ಪೂರೈಸಿತು. ಶತಮಾನಗಳ ವರೆಗೆ ಅದು, ದೇವರನ್ನು ಸಮೀಪಿಸುವ ಒಂದು ಮಾರ್ಗವನ್ನು ಮತ್ತು ಸುಳ್ಳು ಧರ್ಮದಿಂದ ಸಂರಕ್ಷಣೆಯನ್ನು ಒದಗಿಸಿತು. ಅದು ಹೊಸ ಒಡಂಬಡಿಕೆಯನ್ನು ಮುನ್ಚಿತ್ರಿಸಿದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು ಮತ್ತು ಅದರ ಸತತವಾದ ಯಜ್ಞಗಳಿಂದಾಗಿ, ಪಾಪ ಮತ್ತು ಮರಣದಿಂದ ವಿಮೋಚಿಸಲ್ಪಡುವ ಮನುಷ್ಯನ ತೀವ್ರ ಅಗತ್ಯವನ್ನು ಪ್ರದರ್ಶಿಸಿತು. ನಿಜವಾಗಿಯೂ, ಧರ್ಮಶಾಸ್ತ್ರವು “ಕ್ರಿಸ್ತನ ಕಡೆಗೆ ನಡೆಸುವ ಖಾಸಗಿ ಶಿಕ್ಷಕ” (NW) ಆಗಿತ್ತು. (ಗಲಾತ್ಯ 3:19, 24; ರೋಮಾಪುರ 3:20; 4:15; 5:12; ಇಬ್ರಿಯ 10:1, 2) ಆದಾಗಲೂ, ಅಬ್ರಹಾಮನಿಗೆ ವಾಗ್ದಾನಿಸಲ್ಪಟ್ಟ ಆಶೀರ್ವಾದವು, ಹೊಸ ಒಡಂಬಡಿಕೆಯ ಮುಖಾಂತರವೇ ಪೂರ್ಣವಾಗಿ ಕೈಗೂಡಲಿತ್ತು.
ಅಬ್ರಹಾಮನ ಸಂತತಿಯ ಮುಖಾಂತರ ಜನಾಂಗಗಳು ಆಶೀರ್ವದಿಸಲ್ಪಟ್ಟದ್ದು
5, 6. ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಮೂಲಭೂತ, ಆತ್ಮಿಕ ನೆರವೇರಿಕೆಯಲ್ಲಿ ಅಬ್ರಹಾಮನ ಸಂತತಿ ಯಾರು, ಮತ್ತು ಅವನ ಮುಖಾಂತರ ಆಶೀರ್ವಾದವನ್ನು ಪಡೆದುಕೊಳ್ಳುವುದರಲ್ಲಿ ಯಾವ ಜನಾಂಗವು ಪ್ರಥಮವಾಗಿತ್ತು?
5 ಯೆಹೋವನು ಅಬ್ರಹಾಮನಿಗೆ ವಾಗ್ದಾನಿಸಿದ್ದು: “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:18) ಹಳೆಯ ಒಡಂಬಡಿಕೆಯ ಕೆಳಗೆ, ಅನೇಕ ದೀನಹೃದಯದ ವಿದೇಶೀಯರು ಅಬ್ರಹಾಮನ ಜನಾಂಗೀಯ ಸಂತಾನವಾದ, ಇಸ್ರಾಯೇಲಿನೊಂದಿಗೆ ಸಹವಾಸಿಸುವ ಮೂಲಕ ಆಶೀರ್ವದಿಸಲ್ಪಟ್ಟರು. ಆದರೆ ಅದರ ಮೂಲಭೂತ ಆತ್ಮಿಕ ನೆರವೇರಿಕೆಯಲ್ಲಿ, ಅಬ್ರಹಾಮನ ಸಂತತಿಯು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದನು. ಪೌಲನು ಹೀಗೆ ಹೇಳಿದಾಗ, ಇದನ್ನು ವಿವರಿಸಿದನು: “ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. ಆತನು ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬನು ಕ್ರಿಸ್ತನೇ.”—ಗಲಾತ್ಯ 3:16.
6 ಹೌದು, ಯೇಸು ಅಬ್ರಹಾಮನ ಸಂತತಿಯಾಗಿದ್ದಾನೆ, ಮತ್ತು ಅವನ ಮೂಲಕವೇ ಜನಾಂಗಗಳು, ಮಾಂಸಿಕ ಇಸ್ರಾಯೇಲಿಗೆ ಸಾಧ್ಯವಿರುವುದಕ್ಕಿಂತಲೂ ಹೆಚ್ಚು ಶ್ರೇಷ್ಠವಾದ ಆಶೀರ್ವಾದವನ್ನು ಪಡೆದುಕೊಳ್ಳುತ್ತವೆ. ವಾಸ್ತವದಲ್ಲಿ, ಈ ಆಶೀರ್ವಾದವನ್ನು ಪಡೆದುಕೊಂಡ ಪ್ರಥಮ ಜನಾಂಗವು ಸ್ವತಃ ಇಸ್ರಾಯೇಲೇ ಆಗಿತ್ತು. ಸಾ.ಶ. 33ರ ಪಂಚಾಶತ್ತಮದ ಬಳಿಕ ಸ್ವಲ್ಪ ಸಮಯದಲ್ಲೇ, ಅಪೊಸ್ತಲ ಪೇತ್ರನು ಯೆಹೂದ್ಯರ ಒಂದು ಗುಂಪಿಗೆ ಹೇಳಿದ್ದು: “ನೀವು ಪ್ರವಾದಿಗಳ ಶಿಷ್ಯರೂ ದೇವರು ನಮ್ಮ ಪಿತೃಗಳ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ—ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ. ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಏರ್ಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ.”—ಅ. ಕೃತ್ಯಗಳು 3:25, 26.
7. ಅಬ್ರಹಾಮನ ಸಂತತಿಯಾದ ಯೇಸುವಿನ ಮುಖಾಂತರ ಯಾವ ಜನಾಂಗಗಳು ಆಶೀರ್ವದಿಸಲ್ಪಟ್ಟವು?
7 ಬೇಗನೆ, ಆ ಆಶೀರ್ವಾದವು ಸಮಾರ್ಯದವರಿಗೆ, ಮತ್ತು ಅನಂತರ ಅನ್ಯಜನಾಂಗದವರಿಗೆ ವಿಸ್ತರಿಸಲ್ಪಟ್ಟಿತು. (ಅ. ಕೃತ್ಯಗಳು 8:14-17; 10:34-38) ಸಾ.ಶ. 50 ಮತ್ತು 52ರ ನಡುವಿನ ಒಂದು ಸಮಯದಲ್ಲಿ ಪೌಲನು ಏಷಿಯ ಮೈನರ್ನ ಗಲಾತ್ಯದಲ್ಲಿದ್ದ ಕ್ರೈಸ್ತರಿಗೆ ಬರೆದುದು: “ದೇವರು ಅನ್ಯಜನರನ್ನು ನಂಬಿಕೆಯ ನಿಮಿತ್ತವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬದಾಗಿ ಶಾಸ್ತ್ರವು ಮೊದಲೇ ಕಂಡು ಅಬ್ರಹಾಮನಿಗೆ—ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವದೆಂಬ ಶುಭವರ್ತಮಾನವನ್ನು ಮುಂಚಿತವಾಗಿಯೇ ತಿಳಿಸಿತು. ಹೀಗಿರಲಾಗಿ ನಂಬುವವರು ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಸೌಭಾಗ್ಯವನ್ನು ಹೊಂದುವರು.” (ಗಲಾತ್ಯ 3:8, 9; ಆದಿಕಾಂಡ 12:3) ಗಲಾತ್ಯದಲ್ಲಿದ್ದ ಅನೇಕ ಕ್ರೈಸ್ತರು “ಅನ್ಯಜನರು” ಆಗಿದ್ದರೂ, ತಮ್ಮ ನಂಬಿಕೆಯ ಕಾರಣದಿಂದಾಗಿ ಅವರು ಯೇಸುವಿನ ಮುಖಾಂತರ ಆಶೀರ್ವದಿಸಲ್ಪಟ್ಟರು. ಯಾವ ವಿಧದಲ್ಲಿ?
8. ಪೌಲನ ದಿನದಲ್ಲಿದ್ದ ಕ್ರೈಸ್ತರಿಗೆ, ಅಬ್ರಹಾಮನ ಸಂತತಿಯ ಮುಖಾಂತರ ಆಶೀರ್ವದಿಸಲ್ಪಡುವುದರಲ್ಲಿ ಏನು ಒಳಗೊಂಡಿತ್ತು, ಮತ್ತು ಕೊನೆಯಲ್ಲಿ ಎಷ್ಟು ಮಂದಿ ಅಂತಹ ಒಂದು ಆಶೀರ್ವಾದವನ್ನು ಪಡೆಯುತ್ತಾರೆ?
8 ಗಲಾತ್ಯದ ಕ್ರೈಸ್ತರು ಯಾವುದೇ ಹಿನ್ನೆಲೆಯವರಾಗಿದ್ದಿರಲಿ, ಪೌಲನು ಅವರಿಗೆ ಹೇಳಿದ್ದು: “ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.” (ಗಲಾತ್ಯ 3:29) ಆ ಗಲಾತ್ಯದವರಿಗೆ, ಅಬ್ರಹಾಮನ ಸಂತತಿಯ ಮುಖಾಂತರ ಬರುವ ಆಶೀರ್ವಾದವು, ಅವರು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವುದನ್ನು ಮತ್ತು ಯೇಸುವಿನೊಂದಿಗೆ ಜೊತೆಬಾಧ್ಯಸ್ಥರು, ಅಬ್ರಹಾಮನ ಸಂತತಿಯಲ್ಲಿ ಯೇಸುವಿನೊಂದಿಗೆ ಜೊತೆಗಾರರೂ ಆಗಿರುವುದನ್ನು ಒಳಗೊಂಡಿತ್ತು. ಪುರಾತನ ಇಸ್ರಾಯೇಲಿನ ಜನಸಂಖ್ಯೆಯ ಕುರಿತು ನಮಗೆ ತಿಳಿದಿಲ್ಲ. ಅದು “ಸಮುದ್ರತೀರದ ಉಸುಬಿನಷ್ಟು ಅಸಂಖ್ಯ”ವಾಗಿತ್ತೆಂಬುದಷ್ಟೇ ನಮಗೆ ತಿಳಿದಿದೆ. (1 ಅರಸುಗಳು 4:20) ಆದರೆ, ಆತ್ಮಿಕ ಸಂತತಿಯಲ್ಲಿ ಯೇಸುವಿನ ಜೊತೆಗಾರರ ಜನಸಂಖ್ಯೆ ನಮಗೆ ತಿಳಿದಿದೆ—1,44,000. (ಪ್ರಕಟನೆ 7:4; 14:1) ಆ 1,44,000 ಮಂದಿ, ಮಾನವಕುಲದ “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಬಂದವರಾಗಿದ್ದಾರೆ ಮತ್ತು ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಆಶೀರ್ವಾದಗಳನ್ನು ಇನ್ನೂ ಇತರರಿಗೆ ಕೊಡುವುದರಲ್ಲಿ ಪಾಲಿಗರಾಗುತ್ತಾರೆ.—ಪ್ರಕಟನೆ 5:9.
ನೆರವೇರಿದ ಒಂದು ಪ್ರವಾದನೆ
9. ಹೊಸ ಒಡಂಬಡಿಕೆಯಲ್ಲಿರುವವರಿಗೆ, ತಮ್ಮೊಳಗೆ ಯೆಹೋವನ ಧರ್ಮಶಾಸ್ತ್ರವು ಇರುವುದು ಹೇಗೆ?
9 ಹೊಸ ಒಡಂಬಡಿಕೆಯ ಕುರಿತಾಗಿ ಮುಂತಿಳಿಸುವಾಗ, ಯೆರೆಮೀಯನು ಬರೆದುದು: “ಯೆಹೋವನು ಇಂತೆನ್ನುತ್ತಾನೆ—ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು—ನನ್ನ ಧರ್ಮೋಪದೇಶವನ್ನು [“ಧರ್ಮಶಾಸ್ತ್ರವನ್ನು,” NW] ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು.” (ಯೆರೆಮೀಯ 31:33) ಯೆಹೋವನನ್ನು ಪ್ರೀತಿಯಿಂದ ಸೇವಿಸುವುದು ಹೊಸ ಒಡಂಬಡಿಕೆಯಲ್ಲಿರುವವರ ಒಂದು ವಿಶಿಷ್ಟ ಲಕ್ಷಣವಾಗಿದೆ. (ಯೋಹಾನ 13:35; ಇಬ್ರಿಯ 1:9) ಯೆಹೋವನ ಧರ್ಮಶಾಸ್ತ್ರವು ಅವರ ಹೃದಯದಲ್ಲಿ ಬರೆಯಲ್ಪಟ್ಟಿದೆ, ಮತ್ತು ಅವರು ಆತನ ಚಿತ್ತವನ್ನು ಮಾಡಲು ಉತ್ಕಟಭಾವದಿಂದ ಬಯಸುತ್ತಾರೆ. ಪುರಾತನ ಇಸ್ರಾಯೇಲಿನಲ್ಲಿ ಕೆಲವು ನಂಬಿಗಸ್ತ ವ್ಯಕ್ತಿಗಳು ಯೆಹೋವನ ಧರ್ಮಶಾಸ್ತ್ರವನ್ನು ಗಾಢವಾಗಿ ಪ್ರೀತಿಸಿದರೆಂಬುದು ನಿಜ. (ಕೀರ್ತನೆ 119:97) ಅನೇಕರು ಪ್ರೀತಿಸಲಿಲ್ಲವಾದರೂ, ಅವರು ಇನ್ನೂ ಆ ಜನಾಂಗದ ಭಾಗವಾಗಿಯೇ ಉಳಿದರು. ಯಾವ ವ್ಯಕ್ತಿಯ ಹೃದಯದಲ್ಲಿ ದೇವರ ಧರ್ಮಶಾಸ್ತ್ರವು ಬರೆಯಲ್ಪಟ್ಟಿಲ್ಲವೊ, ಆ ವ್ಯಕ್ತಿಯು ಹೊಸ ಒಡಂಬಡಿಕೆಯಲ್ಲಿ ಉಳಿಯಲಾರನು.
10, 11. ಹೊಸ ಒಡಂಬಡಿಕೆಯಲ್ಲಿರುವವರಿಗೆ, ಯೆಹೋವನು ಯಾವ ವಿಧದಲ್ಲಿ ‘ಅವರ ದೇವರಾಗುತ್ತಾನೆ,’ ಮತ್ತು ಅವರೆಲ್ಲರೂ ಆತನನ್ನು ತಿಳಿಯುವುದು ಹೇಗೆ?
10 ಹೊಸ ಒಡಂಬಡಿಕೆಯಲ್ಲಿರುವವರ ಕುರಿತಾಗಿ ಯೆಹೋವನು ಇನ್ನೂ ಹೇಳಿದ್ದು: “ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” (ಯೆರೆಮೀಯ 31:33) ಪುರಾತನ ಇಸ್ರಾಯೇಲಿನಲ್ಲಿ, ಅನೇಕರು ಜನಾಂಗಗಳ ದೇವತೆಗಳನ್ನು ಆರಾಧಿಸಿದರೂ, ಅವರು ಇಸ್ರಾಯೇಲ್ಯರಾಗಿಯೇ ಉಳಿದರು. ಹೊಸ ಒಡಂಬಡಿಕೆಯ ಆಧಾರದ ಮೇಲೆ, ಮಾಂಸಿಕ ಇಸ್ರಾಯೇಲನ್ನು ಸ್ಥಾನಪಲ್ಲಟಗೊಳಿಸಲಿಕ್ಕಾಗಿ ಯೆಹೋವನು ಒಂದು ಆತ್ಮಿಕ ಜನಾಂಗವನ್ನು, “ದೇವರ ಇಸ್ರಾಯೇಲ್” (NW) ಅನ್ನು ರಚಿಸಿದನು. (ಗಲಾತ್ಯ 6:16; ಮತ್ತಾಯ 21:43; ರೋಮಾಪುರ 9:6-8) ಆದರೆ, ಒಬ್ಬ ವ್ಯಕ್ತಿಯು ಯೆಹೋವನನ್ನು ಮತ್ತು ಕೇವಲ ಆತನನ್ನು ಆರಾಧಿಸುವುದನ್ನು ನಿಲ್ಲಿಸುವಲ್ಲಿ, ಅವನು ಆ ಹೊಸ ಆತ್ಮಿಕ ಜನಾಂಗದ ಭಾಗವಾಗಿ ಉಳಿಯುವುದಿಲ್ಲ.
11 ಯೆಹೋವನು ಮತ್ತೂ ಹೇಳಿದ್ದು: “ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು.” (ಯೆರೆಮೀಯ 31:34) ಇಸ್ರಾಯೇಲಿನಲ್ಲಿ, ಅನೇಕರು ಯೆಹೋವನನ್ನು ಅಲಕ್ಷಿಸಿದರು. ಅವರು ಕಾರ್ಯತಃ ಹೀಗನ್ನುತ್ತಿದ್ದರು: “ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು.” (ಚೆಫನ್ಯ 1:12) ಯಾವುದೇ ವ್ಯಕ್ತಿಯು ಯೆಹೋವನನ್ನು ಅಲಕ್ಷಿಸುವಲ್ಲಿ ಅಥವಾ ಶುದ್ಧಾರಾಧನೆಯನ್ನು ಮಲಿನಗೊಳಿಸುವಲ್ಲಿ, ಅವನು ದೇವರ ಇಸ್ರಾಯೇಲಿನ ಭಾಗವಾಗಿ ಉಳಿಯುವುದಿಲ್ಲ. (ಮತ್ತಾಯ 6:24; ಕೊಲೊಸ್ಸೆ 3:5) ಆತ್ಮಿಕ ಇಸ್ರಾಯೇಲ್ಯರು ‘ತಮ್ಮ ದೇವರನ್ನು ಅರಿತವರು’ ಆಗಿದ್ದಾರೆ. (ದಾನಿಯೇಲ 11:32) ಅವರು ‘ಒಬ್ಬನೇ ಸತ್ಯದೇವರನ್ನೂ ಯೇಸು ಕ್ರಿಸ್ತನನ್ನೂ ತಿಳಿಯಲು’ ಹರ್ಷಿಸುತ್ತಾರೆ. (ಯೋಹಾನ 17:3) ಯೇಸು ಒಂದು ವಿಶೇಷ ರೀತಿಯಲ್ಲಿ “[ದೇವರನ್ನು] ತಿಳಿಯಪಡಿಸಿ”ರುವುದರಿಂದ, ಯೇಸುವನ್ನು ತಿಳಿದುಕೊಳ್ಳುವುದು, ದೇವರ ಕುರಿತಾದ ಅವರ ಜ್ಞಾನವನ್ನು ಗಾಢಗೊಳಿಸುತ್ತದೆ.—ಯೋಹಾನ 1:18; 14:9-11.
12, 13. (ಎ) ಹೊಸ ಒಡಂಬಡಿಕೆಯಲ್ಲಿರುವವರ ಪಾಪಗಳನ್ನು ಯೆಹೋವನು ಯಾವ ಆಧಾರದ ಮೇಲೆ ಕ್ಷಮಿಸುತ್ತಾನೆ? (ಬಿ) ಪಾಪಗಳ ಕ್ಷಮಾಪಣೆಯ ವಿಷಯದಲ್ಲಿ, ಹೊಸ ಒಡಂಬಡಿಕೆಯು ಹಳೆಯ ಒಡಂಬಡಿಕೆಗಿಂತ ಶ್ರೇಷ್ಠವಾಗಿದೆ ಹೇಗೆ?
12 ಕೊನೆಯಲ್ಲಿ, ಯೆಹೋವನು ವಾಗ್ದಾನಿಸಿದ್ದು: “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.” (ಯೆರೆಮೀಯ 31:34ಬಿ) ಇಸ್ರಾಯೇಲ್ಯರು ವಿಧೇಯರಾಗುವಂತೆ ಕೇಳಲ್ಪಟ್ಟ ನೂರಾರು ಲಿಖಿತ ಕಾಯಿದೆಗಳು ಮೋಶೆಯ ಧರ್ಮಶಾಸ್ತ್ರದಲ್ಲಿದ್ದವು. (ಧರ್ಮೋಪದೇಶಕಾಂಡ 28:1, 2, 15) ಧರ್ಮಶಾಸ್ತ್ರವನ್ನು ಮುರಿದವರೆಲ್ಲರೂ, ತಮ್ಮ ಪಾಪಗಳನ್ನು ಮುಚ್ಚಲಿಕ್ಕಾಗಿ ಯಜ್ಞಗಳನ್ನು ಅರ್ಪಿಸಿದರು. (ಯಾಜಕಕಾಂಡ 4:1-7; 16:1-31) ಧರ್ಮಶಾಸ್ತ್ರಕ್ಕನುಸಾರವಾದ ತಮ್ಮ ಸ್ವಂತ ಕೆಲಸಗಳ ಮೂಲಕ ತಾವು ನೀತಿವಂತರಾಗಸಾಧ್ಯವಿದೆ ಎಂದು ಅನೇಕ ಯೆಹೂದ್ಯರು ನಂಬಲಾರಂಭಿಸಿದರು. ಕ್ರೈಸ್ತರಾದರೊ, ತಾವು ತಮ್ಮ ಸ್ವಂತ ಕೆಲಸಗಳ ಮೂಲಕ ನೀತಿಯನ್ನು ಎಂದೂ ಸಂಪಾದಿಸಲು ಸಾಧ್ಯವಿಲ್ಲವೆಂಬುದನ್ನು ಅರಿಯುತ್ತಾರೆ. ಅವರು ಪಾಪಮಾಡುವುದನ್ನು ತಪ್ಪಿಸಲಾರರು. (ರೋಮಾಪುರ 5:12) ಹೊಸ ಒಡಂಬಡಿಕೆಯ ಕೆಳಗೆ, ದೇವರ ಮುಂದೆ ಒಂದು ನೀತಿಯ ನಿಲುವನ್ನು ಹೊಂದುವುದು, ಕೇವಲ ಯೇಸುವಿನ ಯಜ್ಞದ ಆಧಾರದ ಮೇಲೆ ಸಾಧ್ಯವಿದೆ. ಆದರೆ ಅಂತಹ ನಿಲುವು ಒಂದು ಕೊಡುಗೆಯಾಗಿದೆ, ದೇವರಿಂದ ಒಂದು ಅಪಾತ್ರ ದಯೆಯಾಗಿದೆ. (ರೋಮಾಪುರ 3:20, 23, 24) ಯೆಹೋವನು ಈಗಲೂ ತನ್ನ ಸೇವಕರಿಂದ ವಿಧೇಯತೆಯನ್ನು ಕೇಳಿಕೊಳ್ಳುತ್ತಾನೆ. ಹೊಸ ಒಡಂಬಡಿಕೆಯಲ್ಲಿರುವವರು, “ಕ್ರಿಸ್ತನ ನಿಯಮಕ್ಕೊಳಗಾದ”ವರು ಆಗಿದ್ದಾರೆಂದು ಪೌಲನು ಹೇಳುತ್ತಾನೆ.—1 ಕೊರಿಂಥ 9:21.
13 ಹೀಗಿರುವುದರಿಂದ, ಕ್ರೈಸ್ತರಿಗೂ ಪಾಪಕ್ಕಾಗಿ ಒಂದು ಯಜ್ಞವಿದೆ. ಆದರೆ ಅದು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿನ ಯಜ್ಞಗಳಿಗಿಂತ ತುಂಬ ಹೆಚ್ಚು ಮೌಲ್ಯವುಳ್ಳದ್ದಾಗಿದೆ. ಪೌಲನು ಬರೆದುದು: “ಆ ಯಾಜಕರೆಲ್ಲರು [ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ] ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪನಿವಾರಣೆ ಮಾಡಲಾರದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವರು. ಆದರೆ [ಯೇಸು] ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು.” (ಇಬ್ರಿಯ 10:11, 12) ಹೊಸ ಒಡಂಬಡಿಕೆಯಲ್ಲಿರುವ ಕ್ರೈಸ್ತರು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಡುವುದರಿಂದ, ಯೆಹೋವನು ಅವರನ್ನು ನೀತಿವಂತರು, ಪಾಪವಿಲ್ಲದವರು ಎಂದು ಘೋಷಿಸುತ್ತಾನೆ, ಮತ್ತು ಈ ಕಾರಣದಿಂದ ಆತನ ಆತ್ಮಿಕ ಪುತ್ರರೋಪಾದಿ ಅಭಿಷೇಕಿಸಲ್ಪಡುವ ಸ್ಥಾನದಲ್ಲಿದ್ದಾರೆ. (ರೋಮಾಪುರ 5:1; 8:33, 34; ಇಬ್ರಿಯ 10:14-18) ಮಾನವ ಅಪರಿಪೂರ್ಣತೆಯಿಂದಾಗಿ ಅವರು ಪಾಪಮಾಡುವಾಗ, ಅವರು ಯೆಹೋವನ ಕ್ಷಮಾಪಣೆಗಾಗಿ ಬೇಡಿಕೊಳ್ಳಸಾಧ್ಯವಿದೆ, ಮತ್ತು ಯೇಸುವಿನ ಯಜ್ಞದ ಆಧಾರದ ಮೇಲೆ ಯೆಹೋವನು ಅವರನ್ನು ಕ್ಷಮಿಸುತ್ತಾನೆ. (1 ಯೋಹಾನ 2:1, 2) ಆದರೆ ಅವರು ಉದ್ದೇಶಪೂರ್ವಕ ಪಾಪದ ಮಾರ್ಗಕ್ರಮವನ್ನು ಆಯ್ದುಕೊಳ್ಳುವಲ್ಲಿ, ಅವರು ತಮ್ಮ ನೀತಿಯ ನಿಲುವನ್ನು ಮತ್ತು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವ ತಮ್ಮ ಸುಯೋಗವನ್ನು ಕಳೆದುಕೊಳ್ಳುತ್ತಾರೆ.—ಇಬ್ರಿಯ 2:2, 3; 6:4-8; 10:26-31.
ಹಳೆಯ ಮತ್ತು ಹೊಸ ಒಡಂಬಡಿಕೆ
14. ಧರ್ಮಶಾಸ್ತ್ರದೊಡಂಬಡಿಕೆಯ ಕೆಳಗೆ ಯಾವ ಸುನ್ನತಿ, ಮತ್ತು ಹೊಸ ಒಡಂಬಡಿಕೆಯ ಕೆಳಗೆ ಯಾವ ಸುನ್ನತಿಯು ಅವಶ್ಯವಾಗಿತ್ತು?
14 ಹಳೆಯ ಒಡಂಬಡಿಕೆಯಲ್ಲಿದ್ದ ಗಂಡುಗಳು ಧರ್ಮಶಾಸ್ತ್ರಕ್ಕೆ ಅಧೀನರಾಗಿದ್ದಾರೆಂಬುದರ ಸಂಕೇತವಾಗಿ ಸುನ್ನತಿಗೊಳಿಸಲ್ಪಟ್ಟರು. (ಯಾಜಕಕಾಂಡ 12:2, 3; ಗಲಾತ್ಯ 5:3) ಕ್ರೈಸ್ತ ಸಭೆಯು ಆರಂಭಗೊಂಡ ನಂತರ, ಯೆಹೂದ್ಯೇತರ ಕ್ರೈಸ್ತರೂ ಸುನ್ನತಿಗೊಳಿಸಲ್ಪಡಬೇಕು ಎಂದು ಕೆಲವರಿಗನಿಸಿತು. ಆದರೆ ದೇವರ ವಾಕ್ಯದಿಂದ ಮತ್ತು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ಇದು ಅಗತ್ಯವಿಲ್ಲವೆಂಬುದನ್ನು ಗ್ರಹಿಸಿದರು. (ಅ. ಕೃತ್ಯಗಳು 15:1, 5, 28, 29) ಕೆಲವು ವರ್ಷಗಳ ಬಳಿಕ, ಪೌಲನು ಹೇಳಿದ್ದು: “ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ. ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.” (ರೋಮಾಪುರ 2:28, 29) ಮಾಂಸಿಕ ಯೆಹೂದ್ಯರಿಗೂ ಮಾಡಲ್ಪಟ್ಟ ಅಕ್ಷರಶಃ ಸುನ್ನತಿಗೆ ಇನ್ನು ಮುಂದೆ ಯೆಹೋವನ ದೃಷ್ಟಿಯಲ್ಲಿ ಯಾವುದೇ ಆತ್ಮಿಕ ಮೌಲ್ಯವಿರಲಿಲ್ಲ. ಹೊಸ ಒಡಂಬಡಿಕೆಯಲ್ಲಿರುವವರಿಗೆ, ಶರೀರವಲ್ಲ ಬದಲಾಗಿ ಹೃದಯವು ಸುನ್ನತಿ ಮಾಡಲ್ಪಡಬೇಕಿತ್ತು. ಅವರ ಆಲೋಚನೆಯಲ್ಲಿ, ಬಯಕೆಗಳಲ್ಲಿ, ಮತ್ತು ಪ್ರಚೋದನೆಯಲ್ಲಿ, ಯೆಹೋವನ ದೃಷ್ಟಿಯಲ್ಲಿ ಅಪ್ರಸನ್ನಕರ ಅಥವಾ ಅಶುದ್ಧವಾಗಿರುವಂತಹದ್ದೆಲ್ಲವೂ ಕತ್ತರಿಸಿ ತೆಗೆದುಹಾಕಲ್ಪಡಬೇಕು.a ಇಂದು ಅನೇಕರು, ಈ ವಿಧದಲ್ಲಿ ಯೋಚನಾ ನಮೂನೆಗಳನ್ನು ಪರಿವರ್ತಿಸಲಿಕ್ಕಾಗಿ ಇರುವ ಪವಿತ್ರಾತ್ಮದ ಶಕ್ತಿಗೆ ಜೀವಂತ ಸಾಕ್ಷ್ಯವಾಗಿದ್ದಾರೆ.—1 ಕೊರಿಂಥ 6:9-11; ಗಲಾತ್ಯ 5:22-24; ಎಫೆಸ 4:22-24.
15. ಮಾಂಸಿಕ ಇಸ್ರಾಯೇಲ್ ಮತ್ತು ದೇವರ ಇಸ್ರಾಯೇಲ್, ರಾಜಸದೃಶ ಆಳ್ವಿಕೆಯ ವಿಷಯದಲ್ಲಿ ಹೇಗೆ ಹೋಲುತ್ತವೆ?
15 ಧರ್ಮಶಾಸ್ತ್ರದ ಒಡಂಬಡಿಕೆಯ ಏರ್ಪಾಡಿನಲ್ಲಿ, ಯೆಹೋವನು ಇಸ್ರಾಯೇಲಿನ ಅರಸನಾಗಿದ್ದನು, ಮತ್ತು ಸಕಾಲದಲ್ಲಿ ಆತನು ಯೆರೂಸಲೇಮಿನಲ್ಲಿದ್ದ ಮಾನವ ರಾಜರ ಮುಖಾಂತರ ತನ್ನ ಪರಮಾಧಿಕಾರವನ್ನು ಚಲಾಯಿಸಿದನು. (ಯೆಶಾಯ 33:22) ಯೆಹೋವನು, ದೇವರ ಇಸ್ರಾಯೇಲ್ ಆಗಿರುವ ಆತ್ಮಿಕ ಇಸ್ರಾಯೇಲಿನ ಅರಸನೂ ಆಗಿದ್ದಾನೆ, ಮತ್ತು ಸಾ.ಶ. 33ರಂದಿನಿಂದ ಆತನು, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ”ವನ್ನು ಪಡೆದಿರುವ ಯೇಸು ಕ್ರಿಸ್ತನ ಮೂಲಕ ಆಳ್ವಿಕೆ ನಡೆಸಿದ್ದಾನೆ. (ಮತ್ತಾಯ 28:18; ಎಫೆಸ 1:19-23; ಕೊಲೊಸ್ಸೆ 1:13, 14) ಇಂದು, ದೇವರ ಇಸ್ರಾಯೇಲ್ ಯೇಸುವನ್ನು, 1914ರಲ್ಲಿ ಸ್ಥಾಪಿಸಲ್ಪಟ್ಟ ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ ಅಂಗೀಕರಿಸುತ್ತದೆ. ಯೇಸು ಹಿಜ್ಕೀಯ, ಯೋಷೀಯ ಮತ್ತು ಪುರಾತನ ಇಸ್ರಾಯೇಲಿನ ಇತರ ನಂಬಿಗಸ್ತ ರಾಜರುಗಳಿಗಿಂತಲೂ ಎಷ್ಟೊ ಹೆಚ್ಚು ಉತ್ತಮ ರಾಜನಾಗಿದ್ದಾನೆ.—ಇಬ್ರಿಯ 1:8, 9; ಪ್ರಕಟನೆ 11:15.
16. ದೇವರ ಇಸ್ರಾಯೇಲ್ ಯಾವ ರೀತಿಯ ಯಾಜಕತ್ವವಾಗಿದೆ?
16 ಇಸ್ರಾಯೇಲ್ ಒಂದು ರಾಜ್ಯವಾಗಿತ್ತು ಮಾತ್ರವಲ್ಲ, ಅದು ಒಂದು ಅಭಿಷಿಕ್ತ ಯಾಜಕತ್ವವನ್ನೂ ಪಡೆದಿತ್ತು. ಸಾ.ಶ. 33ರಲ್ಲಿ, ದೇವರ ಇಸ್ರಾಯೇಲ್ ಮಾಂಸಿಕ ಇಸ್ರಾಯೇಲನ್ನು ಸ್ಥಾನಪಲ್ಲಟಗೊಳಿಸಿ, ಯೆಹೋವನ “ಸೇವಕ,” ಆತನ “ಸಾಕ್ಷಿಗಳು” ಆಗಿ ಪರಿಣಮಿಸಿತು. (ಯೆಶಾಯ 43:10) ಯೆಶಾಯ 43:21 ಮತ್ತು ವಿಮೋಚನಕಾಂಡ 19:5, 6ರಲ್ಲಿ ಇಸ್ರಾಯೇಲಿಗಾಗಿ ದಾಖಲಿಸಲ್ಪಟ್ಟಿರುವ ಯೆಹೋವನ ಮಾತುಗಳು, ಅಂದಿನಿಂದ ದೇವರ ಆತ್ಮಿಕ ಇಸ್ರಾಯೇಲಿಗೆ ಅನ್ವಯವಾಗತೊಡಗಿತು. ದೇವರ ಹೊಸ ಆತ್ಮಿಕ ಜನಾಂಗವು ಈಗ ‘ಗುಣಾತಿಶಯಗಳನ್ನು ಪ್ರಚಾರಮಾಡಲು’ ಜವಾಬ್ದಾರರಾಗಿರುವ “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ” ಆಗಿತ್ತು. (1 ಪೇತ್ರ 2:9) ದೇವರ ಇಸ್ರಾಯೇಲಿನಲ್ಲಿರುವವರೆಲ್ಲರೂ, ಸ್ತ್ರೀಪುರುಷರು, ಒಂದು ಸಾಮೂಹಿಕ ಯಾಜಕತ್ವವನ್ನು ರಚಿಸುತ್ತಾರೆ. (ಗಲಾತ್ಯ 3:28, 29) ಅಬ್ರಹಾಮನ ಸಂತತಿಯ ಸಹಾಯಕ ಭಾಗದೋಪಾದಿ, ಅವರೀಗ ಹೇಳುವುದು: “ಜನಾಂಗಗಳಿರಾ, ದೇವರ ಜನರೊಡನೆ ಉಲ್ಲಾಸಪಡಿರಿ.” (ಧರ್ಮೋಪದೇಶಕಾಂಡ 32:43, NW) ಭೂಮಿಯ ಮೇಲೆ ಇನ್ನೂ ಉಳಿದಿರುವ ಆತ್ಮಿಕ ಇಸ್ರಾಯೇಲಿನವರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ರಚಿಸುತ್ತಾರೆ. (ಮತ್ತಾಯ 24:45-47) ಅವರೊಂದಿಗೆ ಸಹವಾಸಿಸುವಾಗ ಮಾತ್ರವೇ, ದೇವರಿಗೆ ಸ್ವೀಕಾರಯೋಗ್ಯವಾದ ಪವಿತ್ರ ಸೇವೆಯು ಸಲ್ಲಿಸಲ್ಪಡಸಾಧ್ಯವಿದೆ.
ದೇವರ ರಾಜ್ಯ—ಕೊನೆಯ ನೆರವೇರಿಕೆ
17. ಹೊಸ ಒಡಂಬಡಿಕೆಯಲ್ಲಿರುವವರು ಯಾವ ಜನನವನ್ನು ಅನುಭವಿಸುತ್ತಾರೆ?
17 ಸಾ.ಶ.ಪೂ. 1513ರ ಬಳಿಕ ಜನಿಸಿದಂತಹ ಇಸ್ರಾಯೇಲ್ಯರು, ಜನನದಿಂದಲೇ ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ಬಂದರು. ಹೊಸ ಒಡಂಬಡಿಕೆಯೊಳಗೆ ಯೆಹೋವನು ಯಾರನ್ನು ಒಳಸೇರಿಸಿಕೊಳ್ಳುತ್ತಾನೊ ಅವರೂ ಒಂದು ಜನನವನ್ನು ಅನುಭವಿಸುತ್ತಾರೆ—ಅವರ ಸಂಬಂಧದಲ್ಲಿ, ಅದು ಒಂದು ಆತ್ಮಿಕ ಜನನವಾಗಿದೆ. ಫರಿಸಾಯನಾದ ನಿಕೊದೇಮನಿಗೆ ಹೀಗೆ ಹೇಳಿದಾಗ ಯೇಸು ಇದನ್ನು ತಿಳಿಸಿದನು: “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ [“ಪುನಃ,” NW] ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.” (ಯೋಹಾನ 3:3) ಸಾ.ಶ. 33ರ ಪಂಚಾಶತ್ತಮದಲ್ಲಿದ್ದ 120 ಶಿಷ್ಯರು, ಈ ಹೊಸ ಜನನವನ್ನು ಅನುಭವಿಸಿದ ಪ್ರಥಮ ಅಪರಿಪೂರ್ಣ ಮಾನವರಾಗಿದ್ದರು. ಹೊಸ ಒಡಂಬಡಿಕೆಯ ಕೆಳಗೆ ನೀತಿವಂತರೆಂದು ಘೋಷಿಸಲ್ಪಟ್ಟವರಾಗಿ, ಅವರು ತಮ್ಮ ರಾಜಯೋಗ್ಯ ಬಾಧ್ಯತೆಯ “ಸಂಚಕಾರ”ವಾಗಿ ಪವಿತ್ರಾತ್ಮವನ್ನು ಪಡೆದುಕೊಂಡರು. (ಎಫೆಸ 1:14) ಅವರು ದೇವರ ದತ್ತು ಪುತ್ರರಾಗಿ ಪರಿಣಮಿಸಲು “ಆತ್ಮನಿಂದ ಹುಟ್ಟಿ”ದವರಾಗಿದ್ದರು. ಇದು ಅವರನ್ನು ಯೇಸುವಿನ ಸಹೋದರರು ಮತ್ತು ಹೀಗೆ “ಕ್ರಿಸ್ತನೊಂದಿಗೆ ಬಾಧ್ಯ”ರನ್ನಾಗಿ ಮಾಡಿತು. (ಯೋಹಾನ 3:6; ರೋಮಾಪುರ 8:16, 17) ಅವರು ‘ಪುನಃ ಹುಟ್ಟುವುದು,’ ಅದ್ಭುತಕರವಾದ ಪ್ರತೀಕ್ಷೆಗಳಿಗೆ ಮಾರ್ಗವನ್ನು ತೆರೆಯಿತು.
18. ಪುನಃ ಹುಟ್ಟುವುದು, ಹೊಸ ಒಡಂಬಡಿಕೆಯಲ್ಲಿರುವವರಿಗೆ ಯಾವ ಅದ್ಭುತಕರವಾದ ಪ್ರತೀಕ್ಷೆಗಳನ್ನು ತೆರೆಯುತ್ತದೆ?
18 ಹೊಸ ಒಡಂಬಡಿಕೆಯ ಮಧ್ಯಸ್ಥಿಕೆಯನ್ನು ಮಾಡುತ್ತಿದ್ದಾಗ, ಯೇಸು ತನ್ನ ಹಿಂಬಾಲಕರಿಗೆ ಹೀಗೆ ಹೇಳುತ್ತಾ, ಅವರೊಂದಿಗೆ ಮತ್ತೊಂದು ಒಡಂಬಡಿಕೆಯನ್ನು ಮಾಡಿದನು: “ನನ್ನ ತಂದೆಯು ನನ್ನೊಂದಿಗೆ ಒಂದು ರಾಜ್ಯಕ್ಕೋಸ್ಕರವಾಗಿ ಒಂದು ಒಡಂಬಡಿಕೆಯನ್ನು ಮಾಡಿದಂತೆ, ನಾನೂ ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ.” (ಲೂಕ 22:29, NW) ಈ ರಾಜ್ಯ ಒಡಂಬಡಿಕೆಯು, ದಾನಿಯೇಲ 7:13, 14, 22, 27ರಲ್ಲಿ ದಾಖಲಿಸಲ್ಪಟ್ಟಿರುವ ಒಂದು ಗಮನಾರ್ಹ ದರ್ಶನದ ನೆರವೇರಿಕೆಗೆ ದಾರಿಯನ್ನು ಸಿದ್ಧಪಡಿಸುತ್ತದೆ. “ಮನುಷ್ಯ ಕುಮಾರನಂತಿರುವವ”ನಿಗೆ ರಾಜಸದೃಶ ಅಧಿಕಾರವು “ಮಹಾವೃದ್ಧ”ನಾದ ಯೆಹೋವ ದೇವರಿಂದ ಕೊಡಲ್ಪಡುವುದನ್ನು ದಾನಿಯೇಲನು ನೋಡಿದನು. ‘ಪವಿತ್ರ ಜನರು ರಾಜ್ಯವನ್ನೇ ಸ್ವಾಧೀನಕ್ಕೆ ತೆಗೆದುಕೊಳ್ಳುವುದನ್ನು’ (NW) ದಾನಿಯೇಲನು ಅನಂತರ ನೋಡಿದನು. ಆ “ಮನುಷ್ಯ ಕುಮಾರನಂತಿರುವವನು” ಯೇಸು ಆಗಿದ್ದಾನೆ. ಅವನು 1914ರಲ್ಲಿ ಯೆಹೋವ ದೇವರಿಂದ ಸ್ವರ್ಗೀಯ ರಾಜ್ಯವನ್ನು ಪಡೆದುಕೊಂಡನು. ಅವನ ಆತ್ಮಾಭಿಷಿಕ್ತ ಶಿಷ್ಯರು, ಆ ರಾಜ್ಯದಲ್ಲಿ ಅವನೊಂದಿಗೆ ಪಾಲಿಗರಾಗುವ “ಭಕ್ತ ಜನರು” [“ಪವಿತ್ರ ವ್ಯಕ್ತಿಗಳು,” NW] ಆಗಿದ್ದಾರೆ. (1 ಥೆಸಲೊನೀಕ 2:12) ಹೇಗೆ?
19, 20. (ಎ) ಹೊಸ ಒಡಂಬಡಿಕೆಯಲ್ಲಿರುವವರಿಗೆ, ಯೆಹೋವನು ಅಬ್ರಹಾಮನಿಗೆ ಮಾಡಿದಂತಹ ವಾಗ್ದಾನದ ಯಾವ ಕೊನೆಯ, ಮಹಿಮಾಭರಿತ ನೆರವೇರಿಕೆಯಿರುವುದು? (ಬಿ) ಇನ್ನೂ ಯಾವ ಪ್ರಶ್ನೆಗಳು ಪರಿಗಣಿಸಲ್ಪಡಬೇಕು?
19 ಅವರ ಮರಣದ ಅನಂತರ, ಈ ಅಭಿಷಿಕ್ತರು, ಯೇಸುವಿನೊಂದಿಗೆ ಸ್ವರ್ಗದಲ್ಲಿ ರಾಜರಾಗಿಯೂ ಯಾಜಕರಾಗಿಯೂ ಸೇವೆಸಲ್ಲಿಸಲು ಅವನಂತೆ ಅಮರ ಆತ್ಮ ಜೀವಿಗಳಾಗಿ ಸತ್ತವರೊಳಗಿಂದ ಎಬ್ಬಿಸಲ್ಪಡುತ್ತಾರೆ. (1 ಕೊರಿಂಥ 15:50-53; ಪ್ರಕಟನೆ 20:4, 6) ಎಂತಹ ಒಂದು ಮಹಿಮಾಭರಿತ ನಿರೀಕ್ಷೆ! ಅವರು ಕೇವಲ ಕಾನಾನ್ ದೇಶದ ಮೇಲಲ್ಲ, ಇಡೀ “ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:10) ಅವರು ‘ಶತ್ರುಗಳ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಳ್ಳು’ವರೊ? (ಆದಿಕಾಂಡ 22:17) ಹೌದು, ಅವರು ಶತ್ರುಭಾವದ ಧಾರ್ಮಿಕ ವೇಶ್ಯೆಯಾದ ಮಹಾ ಬಾಬೆಲಿನ ನಾಶನವನ್ನು ಪ್ರತ್ಯಕ್ಷವಾಗಿ ನೋಡುವಾಗ, ಮತ್ತು ಈ ಪುನರುತ್ಥಿತ ಅಭಿಷಿಕ್ತರು “ಕಬ್ಬಿಣದ ಕೋಲಿನಿಂದ” ರಾಷ್ಟ್ರಗಳನ್ನು ಆಳುವುದರಲ್ಲಿ ಮತ್ತು ಸೈತಾನನ ತಲೆಯನ್ನು ಜಜ್ಜಿಬಿಡುವುದರಲ್ಲಿ ಪಾಲಿಗರಾಗುವಾಗ ಒಂದು ನಿರ್ಣಾಯಕ ವಿಧದಲ್ಲಿ ಅದನ್ನು ಮಾಡುವರು. ಹೀಗೆ ಆದಿಕಾಂಡ 3:15ರಲ್ಲಿರುವ ಪ್ರವಾದನೆಯ ಕೊನೆಯ ಅಂಶವನ್ನು ನೆರವೇರಿಸುವುದರಲ್ಲಿ ಅವರಿಗೆ ಒಂದು ಪಾತ್ರವಿರುವುದು.—ಪ್ರಕಟನೆ 2:26, 27; 17:14; 18:20, 21; ರೋಮಾಪುರ 16:20.
20 ಆದರೂ ನಾವು ಹೀಗೆ ಕೇಳಬಹುದು, ಅಬ್ರಹಾಮ ಸಂಬಂಧಿತ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯಲ್ಲಿ ಈ 1,44,000 ನಂಬಿಗಸ್ತ ವ್ಯಕ್ತಿಗಳು ಮಾತ್ರ ಒಳಗೂಡಿರುತ್ತಾರೊ? ಇಲ್ಲ, ಈ ಒಡಂಬಡಿಕೆಗಳಲ್ಲಿ ನೇರವಾಗಿ ಒಳಗೂಡಿರದ ಇತರರು, ಅವರ ಮುಖಾಂತರ ಆಶೀರ್ವದಿಸಲ್ಪಡುವರು. ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 470ನ್ನು ನೋಡಿರಿ.
ನಿಮಗೆ ನೆನಪಿದೆಯೆ?
◻ ಹೊಸ ಒಡಂಬಡಿಕೆಯು ಜಾರಿಯಲ್ಲಿದ್ದದ್ದನ್ನು ಯಾವಾಗ ಪ್ರಥಮವಾಗಿ ನೋಡಲಾಯಿತು?
◻ ಹಳೆಯ ಒಡಂಬಡಿಕೆಯ ಮೂಲಕ ಏನು ಸಾಧಿಸಲ್ಪಟ್ಟಿತು?
◻ ಪ್ರಧಾನವಾಗಿ ಅಬ್ರಹಾಮನ ಸಂತತಿಯು ಯಾರು, ಮತ್ತು ಆ ಸಂತತಿಯ ಮೂಲಕ ಯಾವ ಕ್ರಮಾನುಗತಿಯಲ್ಲಿ ಜನಾಂಗಗಳು ಆಶೀರ್ವದಿಸಲ್ಪಟ್ಟವು?
◻ 1,44,000 ಮಂದಿಗೆ, ಅಬ್ರಹಾಮ ಸಂಬಂಧಿತ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಕೊನೆಯ ನೆರವೇರಿಕೆಯು ಯಾವುದಾಗಿದೆ?
[ಪುಟ 15 ರಲ್ಲಿರುವ ಚಿತ್ರ]
ಪಾಪಗಳ ಕ್ಷಮಾಪಣೆಯು, ಹಳೆಯ ಒಡಂಬಡಿಕೆಯ ಕೆಳಗಿರುವವರಿಗಿಂತ ಹೊಸ ಒಡಂಬಡಿಕೆಯ ಕೆಳಗಿರುವವರಿಗೆ ಹೆಚ್ಚು ಗಾಢವಾದ ಅರ್ಥವನ್ನು ಹೊಂದಿರುತ್ತದೆ