ಅಧ್ಯಾಯ ಹನ್ನೆರಡು
ದೇವರಿಂದ ಕಳುಹಿಸಲ್ಪಟ್ಟ ಒಬ್ಬ ಸಂದೇಶವಾಹಕನಿಂದ ಬಲಗೊಳಿಸಲ್ಪಟ್ಟದ್ದು
1. ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ದಾನಿಯೇಲನಿಗೆ ತೀವ್ರಾಸಕ್ತಿ ಇದ್ದುದರಿಂದ, ಅವನು ಹೇಗೆ ಆಶೀರ್ವದಿಸಲ್ಪಟ್ಟನು?
ಯೆಹೋವನ ಉದ್ದೇಶವು ಹೇಗೆ ನೆರವೇರುತ್ತದೆಂಬುದರ ಕುರಿತು ದಾನಿಯೇಲನು ತೋರಿಸಿದ ತೀವ್ರಾಸಕ್ತಿಗೆ ಬಹಳಷ್ಟು ಪ್ರತಿಫಲವು ಸಿಕ್ಕಿತು. ಮೆಸ್ಸೀಯನ ಬರೋಣದ ಸಮಯಕ್ಕೆ ಸಂಬಂಧಿಸಿದ 70 ವಾರಗಳ ರೋಮಾಂಚಕ ಪ್ರವಾದನೆಯು ಅವನಿಗೆ ಕೊಡಲ್ಪಟ್ಟಿತು. ತನ್ನ ಜನಾಂಗದ ನಂಬಿಗಸ್ತ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವುದನ್ನು ನೋಡುವ ಆಶೀರ್ವಾದವೂ ದಾನಿಯೇಲನಿಗೆ ಸಿಕ್ಕಿತು. ಸಾ.ಶ.ಪೂ. 537ರಲ್ಲಿ, “ಪಾರಸಿಯ ರಾಜನಾದ ಕೋರೆಷನ ಮೊದಲನೆಯ ವರುಷದ” ಅಂತ್ಯಭಾಗದಲ್ಲಿ ಇದು ಸಂಭವಿಸಿತು.—ಎಜ್ರ 1:1-4.
2, 3. ಯೆಹೂದಿ ಉಳಿಕೆಯವರೊಂದಿಗೆ ದಾನಿಯೇಲನು ಯೆಹೂದ ದೇಶಕ್ಕೆ ಹಿಂದಿರುಗದಿರಲು ಕಾರಣವೇನಾಗಿರಬಹುದು?
2 ಯೆಹೂದ ದೇಶಕ್ಕೆ ಹಿಂದಿರುಗಿ ಪ್ರಯಾಣಿಸಿದವರಲ್ಲಿ ದಾನಿಯೇಲನು ಇರಲಿಲ್ಲ. ಅವನು ತುಂಬ ವೃದ್ಧನಾಗಿದ್ದುದರಿಂದ ಪ್ರಯಾಣಿಸುವುದು ಬಹಳ ಕಷ್ಟಕರವಾಗಿದ್ದಿರಬಹುದು. ಏನೇ ಆಗಲಿ, ಅವನು ಬಾಬೆಲಿನಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಸಲ್ಲಿಸಬೇಕೆಂಬುದು ದೇವರ ಉದ್ದೇಶವಾಗಿತ್ತು. ಎರಡು ವರ್ಷಗಳು ಕಳೆದವು. ತದನಂತರ ಏನು ಸಂಭವಿಸಿತು ಎಂಬುದನ್ನು ವೃತ್ತಾಂತವು ನಮಗೆ ಹೀಗೆ ತಿಳಿಸುತ್ತದೆ: “ಪಾರಸಿಯ ರಾಜನಾದ ಕೋರೆಷನ ಆಳಿಕೆಯ ಮೂರನೆಯ ವರುಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಬಹು ಕಷ್ಟದ ಗಡುವಿನ ಆ ಸಂಗತಿಯು ಸತ್ಯ; [“ಮತ್ತು ಅಲ್ಲಿ ಒಂದು ಮಹಾ ಸೇನಾ ಕಾರ್ಯಾಚರಣೆಯಿತ್ತು,” NW] ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮಂದಟ್ಟುಮಾಡಿಕೊಂಡನು.”—ದಾನಿಯೇಲ 10:1.
3 “ಕೋರೆಷನ ಆಳಿಕೆಯ ಮೂರನೆಯ ವರುಷ”ವು ಸಾ.ಶ.ಪೂ. 536/535ಕ್ಕೆ ಸರಿಬೀಳುತ್ತದೆ. ರಾಜವಂಶೀಯರೂ ಯೆಹೂದದ ಕುಲೀನ ಮನೆತನದವರೂ ಆಗಿದ್ದ ಯೌವನಸ್ಥರೊಂದಿಗೆ ದಾನಿಯೇಲನು ಬಾಬೆಲಿಗೆ ಕರೆತರಲ್ಪಟ್ಟು 80ಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿದ್ದವು. (ದಾನಿಯೇಲ 1:3) ಒಂದುವೇಳೆ ದಾನಿಯೇಲನು ಬಾಬೆಲಿಗೆ ಆಗಮಿಸಿದ್ದಾಗ ಹದಿಪ್ರಾಯದವನಾಗಿರುತ್ತಿದ್ದಲ್ಲಿ, ಈಗ ಅವನು ಸುಮಾರು 100 ವರ್ಷ ಪ್ರಾಯದವನಾಗಿದ್ದಿರಬಹುದು. ನಂಬಿಗಸ್ತ ಸೇವೆಯ ಎಂತಹ ಒಂದು ಅದ್ಭುತಕರ ದಾಖಲೆಯು ಅವನಿಗಿತ್ತು!
4. ದಾನಿಯೇಲನು ತುಂಬ ವೃದ್ಧನಾಗಿದ್ದರೂ, ಯೆಹೋವನ ಸೇವೆಯಲ್ಲಿ ಅವನು ಯಾವ ಮಹತ್ವಪೂರ್ಣ ಪಾತ್ರವನ್ನು ವಹಿಸಲಿಕ್ಕಿದ್ದನು?
4 ದಾನಿಯೇಲನು ತುಂಬ ವೃದ್ಧನಾಗಿದ್ದರೂ, ಯೆಹೋವನ ಸೇವೆಯಲ್ಲಿನ ಅವನ ಪಾತ್ರವು ಇನ್ನೂ ಪೂರ್ಣಗೊಂಡಿರಲಿಲ್ಲ. ಅವನ ಮೂಲಕ ದೇವರು, ಇನ್ನೂ ಬಹಳ ಮಹತ್ವದ ಒಂದು ಪ್ರವಾದನಾ ಸಂದೇಶವನ್ನು ಪ್ರಕಟಿಸಲಿಕ್ಕಿದ್ದನು. ನಮ್ಮ ಸಮಯಗಳಿಗೂ ಭವಿಷ್ಯತ್ತಿಗೂ ಅನ್ವಯವಾಗುವಂತಹ ಒಂದು ಪ್ರವಾದನೆಯು ಅದಾಗಿರಲಿತ್ತು. ಈ ಕೆಲಸಕ್ಕಾಗಿ ದಾನಿಯೇಲನನ್ನು ಸಿದ್ಧಗೊಳಿಸಿ, ಮುಂದಿನ ಸೇವೆಗಾಗಿ ಅವನನ್ನು ಬಲಪಡಿಸಲಿಕ್ಕಾಗಿ ಅವನಿಗೆ ಸಹಾಯ ಮಾಡುವುದು ಸೂಕ್ತವಾದದ್ದಾಗಿದೆ ಎಂದು ಯೆಹೋವನು ಅಭಿಪ್ರಯಿಸಿದನು.
ಚಿಂತೆಗೆ ಒಂದು ಕಾರಣ
5. ಯಾವ ವರದಿಗಳು ಬಹುಶಃ ದಾನಿಯೇಲನಿಗೆ ಚಿಂತೆಯನ್ನು ಉಂಟುಮಾಡಿದ್ದಿರಬಹುದು?
5 ಯೆಹೂದಿ ಉಳಿಕೆಯವರೊಂದಿಗೆ ದಾನಿಯೇಲನು ಯೆಹೂದ ದೇಶಕ್ಕೆ ಹಿಂದಿರುಗಲಿಲ್ಲವಾದರೂ, ತನ್ನ ಮೆಚ್ಚಿನ ಸ್ವದೇಶದಲ್ಲಿ ಸಂಭವಿಸುತ್ತಿದ್ದ ಸಂಗತಿಗಳಲ್ಲಿ ಅವನಿಗೆ ಅತ್ಯಾಸಕ್ತಿಯಿತ್ತು. ಅವನಿಗೆ ತಲಪಿದ್ದ ವರದಿಗಳ ಮೂಲಕ ದಾನಿಯೇಲನು, ಎಲ್ಲ ಕೆಲಸಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುದನ್ನು ತಿಳಿದುಕೊಂಡಿದ್ದನು. ಯೆರೂಸಲೇಮಿನಲ್ಲಿ ಯಜ್ಞವೇದಿಯು ಪುನಃ ಕಟ್ಟಲ್ಪಟ್ಟಿತ್ತು ಮತ್ತು ದೇವಾಲಯಕ್ಕಾಗಿ ಅಸ್ತಿವಾರವು ಹಾಕಲ್ಪಟ್ಟಿತ್ತು. (ಎಜ್ರ, 3ನೆಯ ಅಧ್ಯಾಯ) ಆದರೆ ಇದನ್ನು ಪುನಃ ಕಟ್ಟುವ ಯೋಜನೆಯನ್ನು ಅಕ್ಕಪಕ್ಕದ ಜನಾಂಗಗಳು ವಿರೋಧಿಸುತ್ತಿದ್ದವು, ಮತ್ತು ಅವು ಹಿಂದಿರುಗಿದ್ದಂತಹ ಯೆಹೂದ್ಯರ ವಿರುದ್ಧ ಕೇಡನ್ನು ಬಯಸುತ್ತಾ ಒಳಸಂಚನ್ನು ನಡೆಸುತ್ತಿದ್ದವು. (ಎಜ್ರ 4:1-5) ಆದುದರಿಂದ, ಖಂಡಿತವಾಗಿಯೂ ದಾನಿಯೇಲನು ಅನೇಕ ವಿಷಯಗಳ ಬಗ್ಗೆ ಚಿಂತೆಗೊಳಗಾಗಸಾಧ್ಯವಿತ್ತು.
6. ಯೆರೂಸಲೇಮಿನಲ್ಲಿದ್ದ ಪರಿಸ್ಥಿತಿಗಳು ದಾನಿಯೇಲನಿಗೆ ಏಕೆ ಕಳವಳವನ್ನು ಉಂಟುಮಾಡಿದವು?
6 ದಾನಿಯೇಲನಿಗೆ ಯೆರೆಮೀಯನ ಪ್ರವಾದನೆಯು ಚಿರಪರಿಚಿತವಾಗಿತ್ತು. (ದಾನಿಯೇಲ 9:2) ಯೆರೂಸಲೇಮಿನಲ್ಲಿ ದೇವಾಲಯವನ್ನು ಪುನಸ್ಸ್ಥಾಪಿಸುವುದು ಹಾಗೂ ಸತ್ಯಾರಾಧನೆಯನ್ನು ಪುನಃ ಆರಂಭಿಸುವುದು, ತನ್ನ ಜನರ ವಿಷಯದಲ್ಲಿ ಯೆಹೋವನಿಗಿದ್ದಂತಹ ಉದ್ದೇಶದೊಂದಿಗೆ ನಿಕಟವಾಗಿ ಸಂಬಂಧಿಸಿತ್ತು ಮತ್ತು ಇದೆಲ್ಲವೂ ವಾಗ್ದತ್ತ ಮೆಸ್ಸೀಯನು ಕಂಡುಬರುವುದಕ್ಕೆ ಮುಂಚೆ ಸಂಭವಿಸಲಿಕ್ಕಿದೆ ಎಂಬುದು ಅವನಿಗೆ ಗೊತ್ತಿತ್ತು. ವಾಸ್ತವದಲ್ಲಿ, “ಎಪ್ಪತ್ತು ವಾರಗಳ” ಕುರಿತಾದ ಪ್ರವಾದನೆಯನ್ನು ಯೆಹೋವನಿಂದ ಪಡೆದುಕೊಳ್ಳುವಂತಹ ಅತ್ಯಮೂಲ್ಯ ಸುಯೋಗವು ದಾನಿಯೇಲನಿಗೆ ದೊರಕಿತ್ತು. ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ 69 “ವಾರಗಳು” ಕಳೆದ ಬಳಿಕ, ಮೆಸ್ಸೀಯನು ಬರುವನು ಎಂಬುದನ್ನು ಆ ಪ್ರವಾದನೆಯಿಂದ ಅವನು ಅರ್ಥಮಾಡಿಕೊಂಡನು. (ದಾನಿಯೇಲ 9:24-27) ಆದರೂ, ಯೆರೂಸಲೇಮಿನ ಹಾಳುಗೆಡವಲ್ಪಟ್ಟ ಸ್ಥಿತಿಯನ್ನು ಹಾಗೂ ದೇವಾಲಯವನ್ನು ಕಟ್ಟುವ ಕೆಲಸವು ವಿಳಂಬಿಸಲ್ಪಟ್ಟದ್ದನ್ನು ಮನಸ್ಸಿನಲ್ಲಿಡುವಾಗ, ದಾನಿಯೇಲನು ಏಕೆ ನಿರುತ್ಸಾಹಗೊಂಡವನೂ, ಮಂಕಾದವನೂ, ಮನಗುಂದಿದವನೂ ಆಗಿದ್ದಿರಸಾಧ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬ ಸುಲಭ.
7. ಮೂರು ವಾರಗಳ ವರೆಗೆ ದಾನಿಯೇಲನು ಏನು ಮಾಡಿದನು?
7 “ಆ ಕಾಲದಲ್ಲಿ ದಾನಿಯೇಲನಾದ ನಾನು ಮೂರು ವಾರ ಶೋಕಿಸುತ್ತಿದ್ದೆನು. ಮೂರು ವಾರ ಮುಗಿಯುವ ತನಕ ನಾನು ರುಚಿಪದಾರ್ಥವನ್ನು ತಿನ್ನಲಿಲ್ಲ, ಮಾಂಸವನ್ನೂ ದ್ರಾಕ್ಷಾರಸವನ್ನೂ ನನ್ನ ಬಾಯಿಗೆ ಹಾಕಲಿಲ್ಲ, ಎಣ್ಣೆಯನ್ನು ಹಚ್ಚಿಕೊಳ್ಳಲಿಲ್ಲ” ಎಂದು ವೃತ್ತಾಂತವು ಹೇಳುತ್ತದೆ. (ದಾನಿಯೇಲ 10:2, 3) “ಮೂರು ವಾರ” ಅಥವಾ 21 ದಿವಸಗಳ ವರೆಗೆ ಶೋಕಿಸುತ್ತಾ ಉಪವಾಸಮಾಡುವುದು, ಅಸಾಮಾನ್ಯವಾಗಿ ತುಂಬ ದೀರ್ಘ ಸಮಯವಾಗಿದೆ. “ಮೊದಲನೆಯ ತಿಂಗಳಿನ ಇಪ್ಪತ್ತು ನಾಲ್ಕನೆಯ ದಿನದಲ್ಲಿ” ಬಹುಶಃ ಅದು ಮುಗಿದಿರಬೇಕು. (ದಾನಿಯೇಲ 10:4) ಆದುದರಿಂದ, ದಾನಿಯೇಲನ ಉಪವಾಸದ ಕಾಲಾವಧಿಯಲ್ಲಿ, ಮೊದಲನೆಯ ತಿಂಗಳಾದ ನೈಸಾನ್ 14ನೆಯ ದಿನದಂದು ಆಚರಿಸಲ್ಪಡುವ ಪಸ್ಕವೂ, ಅದರ ನಂತರ ಬರುವಂತಹ ಏಳು ದಿನಗಳ ಹುಳಿಯಿಲ್ಲದ ರೊಟ್ಟಿಯ ಹಬ್ಬವೂ ಒಳಗೊಂಡಿರಬೇಕು.
8. ಈ ಮುಂಚೆ ಯಾವ ಸಂದರ್ಭದಲ್ಲಿ ದಾನಿಯೇಲನು ಶ್ರದ್ಧಾಪೂರ್ವಕವಾಗಿ ಯೆಹೋವನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದನು, ಮತ್ತು ಅದರ ಪರಿಣಾಮವು ಏನಾಗಿತ್ತು?
8 ಈ ಮುಂಚೆಯೂ ಒಂದು ಸಂದರ್ಭದಲ್ಲಿ ದಾನಿಯೇಲನಿಗೆ ತದ್ರೀತಿಯ ಅನುಭವವಾಗಿತ್ತು. ಆಗ ಯೆರೂಸಲೇಮಿನ 70 ವರ್ಷಗಳ ನಿರ್ಜನ ಸ್ಥಿತಿಯ ಕುರಿತಾದ ಯೆಹೋವನ ಪ್ರವಾದನೆಯ ನೆರವೇರಿಕೆಯ ಬಗ್ಗೆ ಅವನು ಕಂಗೆಟ್ಟಿದ್ದನು. ಆಗ ದಾನಿಯೇಲನು ಏನು ಮಾಡಿದನು? “ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿಬಳಿದುಕೊಂಡು [“ಸತ್ಯ ದೇವರಾದ ಯೆಹೋವನ,” NW] ಕಡೆಗೆ ಮುಖವೆತ್ತಿ ಪ್ರಾರ್ಥನೆವಿಜ್ಞಾಪನೆಗಳಲ್ಲಿ ನಿರತನಾದೆನು” ಎಂದು ದಾನಿಯೇಲನು ಹೇಳಿದನು. ಯೆಹೋವನು ತನ್ನ ದೇವದೂತನಾದ ಗಬ್ರಿಯೇಲನನ್ನು ಒಂದು ಸಂದೇಶದೊಂದಿಗೆ ದಾನಿಯೇಲನ ಬಳಿಗೆ ಕಳುಹಿಸುವ ಮೂಲಕ ಅವನ ಪ್ರಾರ್ಥನೆಗೆ ಉತ್ತರ ನೀಡಿದ್ದನು. ಮತ್ತು ಈ ಸಂದೇಶವು ದಾನಿಯೇಲನಿಗೆ ತುಂಬ ಉತ್ತೇಜನದಾಯಕವಾಗಿತ್ತು. (ದಾನಿಯೇಲ 9:3, 21, 22) ಈಗಲೂ ಯೆಹೋವನು ಅದೇ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿ, ದಾನಿಯೇಲನಿಗೆ ಅತ್ಯಗತ್ಯವಾಗಿದ್ದ ಉತ್ತೇಜನವನ್ನು ಒದಗಿಸಲಿದ್ದನೋ?
ಭಯಭಕ್ತಿಯನ್ನು ಪ್ರೇರಿಸುವ ಒಂದು ದರ್ಶನ
9, 10. (ಎ) ದಾನಿಯೇಲನಿಗೆ ದರ್ಶನವು ಕಂಡುಬಂದಾಗ ಅವನು ಎಲ್ಲಿದ್ದನು? (ಬಿ) ದಾನಿಯೇಲನು ದರ್ಶನದಲ್ಲಿ ಏನು ಕಂಡನು ಎಂಬುದನ್ನು ವಿವರಿಸಿರಿ.
9 ದಾನಿಯೇಲನು ಆಶಾಭಂಗಗೊಳ್ಳಲಿಲ್ಲ. ಈ ಕೆಳಗಿನಂತೆ ಹೇಳುವ ಮೂಲಕ, ಮುಂದೆ ಏನು ಸಂಭವಿಸಿತೆಂಬುದನ್ನು ಅವನು ನಮಗೆ ವಿವರಿಸುತ್ತಾನೆ: “ನಾನು ಹಿದ್ದೆಕೆಲೆಂಬ ಮಹಾನದಿಯ ದಡದ ಮೇಲೆ ಇದ್ದು ಕಣ್ಣೆತ್ತಿ ನೋಡಲು ಇಗೋ, ನಾರಿನ ಬಟ್ಟೆಯನ್ನು ಹೊದ್ದುಕೊಂಡು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡ ಒಬ್ಬ ಪುರುಷನು ನನಗೆ ಕಾಣಿಸಿದನು.” (ದಾನಿಯೇಲ 10:4, 5) ಏದೆನ್ ತೋಟದಲ್ಲಿ ಹುಟ್ಟಿ ಹರಿಯುತ್ತಿದ್ದ ನಾಲ್ಕು ನದಿಗಳಲ್ಲಿ ಹಿದ್ದೆಕೆಲ್ ಒಂದಾಗಿತ್ತು. (ಆದಿಕಾಂಡ 2:10-14) ಹಳೇ ಪರ್ಷಿಯನ್ ಭಾಷೆಯಲ್ಲಿ, ಹಿದ್ದೆಕೆಲ್ ನದಿಯು ಟೈಗ್ರಾ ಎಂದು ಪ್ರಸಿದ್ಧವಾಗಿತ್ತು; ಮತ್ತು ಇದರಿಂದಲೇ ಟೈಗ್ರಿಸ್ ಎಂಬ ಗ್ರೀಕ್ ಹೆಸರು ಬಂತು. ಹಿದ್ದೆಕೆಲ್ ಹಾಗೂ ಯೂಫ್ರೇಟೀಸ್ ನದಿಯ ಮಧ್ಯೆ ಇದ್ದ ಪ್ರಾಂತವನ್ನೇ ಮೆಸಪೊಟೇಮಿಯ ಎಂದು ಕರೆಯಲಾಗುತ್ತಿತ್ತು, ಇದರ ಅರ್ಥ “ನದಿಗಳ ನಡುವಣ ಭೂಪ್ರದೇಶ” ಎಂದಾಗಿತ್ತು. ದಾನಿಯೇಲನು ಈ ದರ್ಶನವನ್ನು ಪಡೆದುಕೊಂಡಾಗ, ಬಹುಶಃ ಅವನು ಬಾಬೆಲ್ ಪಟ್ಟಣದ ಒಳಗಲ್ಲದಿದ್ದರೂ, ಬಾಬೆಲ್ಗೆ ಸೇರಿದ್ದ ಪ್ರದೇಶದಲ್ಲೇ ಇದ್ದನು ಎಂಬುದನ್ನು ಇದು ದೃಢಪಡಿಸುತ್ತದೆ.
10 ದಾನಿಯೇಲನು ಎಂತಹ ಒಂದು ದರ್ಶನವನ್ನು ಕಂಡನು! ಅವನು ಕಣ್ಣೆತ್ತಿ ನೋಡಿದಾಗ, ಒಬ್ಬ ಅಸಾಮಾನ್ಯ ಮನುಷ್ಯನನ್ನು ನೋಡಿದನೆಂಬುದು ಸುವ್ಯಕ್ತ. ದಾನಿಯೇಲನು ಈ ಸ್ಪಷ್ಟವಾದ ವಿವರಣೆಯನ್ನು ಒದಗಿಸುತ್ತಾನೆ: “ಅವನ ಶರೀರವು ಪೀತರತ್ನದ ಹಾಗೆ ಕಂಗೊಳಿಸಿತು, ಅವನ ಮುಖವು ಮಿಂಚಿನಂತೆ ಹೊಳೆಯಿತು, ಅವನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು, ಅವನ ಕೈಕಾಲುಗಳು ಬೆಳಗಿದ ತಾಮ್ರದ ಹಾಗೆ ಥಳಥಳಿಸಿದವು, ಅವನ ಮಾತಿನ ಶಬ್ದವು ಸಂದಣಿಯ ಕೋಲಾಹಲದಂತೆ ಕೇಳಿಸಿತು.”—ದಾನಿಯೇಲ 10:6.
11. ಆ ದರ್ಶನವು, ದಾನಿಯೇಲನ ಮೇಲೆ ಹಾಗೂ ಅವನೊಂದಿಗಿದ್ದವರ ಮೇಲೆ ಯಾವ ಪರಿಣಾಮವನ್ನು ಬೀರಿತು?
11 ಆ ದರ್ಶನವು ಎಷ್ಟು ಪ್ರಕಾಶಮಾನವಾಗಿತ್ತೆಂದರೆ, ‘ನನ್ನೊಂದಿಗಿದ್ದವರು ಆ ದರ್ಶನವನ್ನು ಕಾಣಲಿಲ್ಲ’ ಎಂದು ದಾನಿಯೇಲನು ಹೇಳಿದನು. ವಿವರಿಸಲು ಅಸಾಧ್ಯವಾದ ಯಾವುದೋ ಒಂದು ಕಾರಣಕ್ಕಾಗಿ, “ದೊಡ್ಡ ನಡುಕವು ಅವರನ್ನು ಹಿಡಿಯಿತು, ಅವರು ಓಡಿ ಹೋಗಿ ಅವಿತುಕೊಂಡರು.” ಆದುದರಿಂದ, ನದಿಯ ದಡದಲ್ಲಿ ದಾನಿಯೇಲನು ಒಬ್ಬನೇ ಉಳಿದನು. “ಈ ಅದ್ಭುತದರ್ಶನ”ವು ಎಷ್ಟೊಂದು ಭಾವಪರವಶಗೊಳಿಸುವಂತಹದ್ದು ಆಗಿತ್ತೆಂದರೆ, ದಾನಿಯೇಲನು ಒಪ್ಪಿಕೊಂಡದ್ದು: “ನಾನು ಏಕಾಕಿಯಾಗಿ ಉಳಿದು ಆ ಅದ್ಭುತದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಿತ್ರಾಣನಾದೆನು.”—ದಾನಿಯೇಲ 10:7, 8.
12, 13. ಸಂದೇಶವಾಹಕನ (ಎ) ವಸ್ತ್ರಾಲಂಕಾರ ಹಾಗೂ ಅವನ (ಬಿ) ಅದ್ಭುತದರ್ಶನವು ಏನನ್ನು ಸೂಚಿಸುತ್ತದೆ?
12 ದಾನಿಯೇಲನಿಗೆ ಇಷ್ಟೊಂದು ಭಯವನ್ನು ಉಂಟುಮಾಡಿದಂತಹ ಈ ಅಸಾಮಾನ್ಯ ಸಂದೇಶವಾಹಕನ ಕಡೆಗೆ ನಾವು ನಿಕಟವಾಗಿ ಗಮನಹರಿಸೋಣ. ಅವನು “ನಾರಿನ ಬಟ್ಟೆಯನ್ನು ಹೊದ್ದುಕೊಂಡು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿ”ದ್ದನು. ಪುರಾತನ ಇಸ್ರಾಯೇಲಿನಲ್ಲಿ, ಮಹಾ ಯಾಜಕನ ಏಫೋದೆಂಬ ಕವಚ ಮತ್ತು ಪದಕಗಳು, ಹಾಗೂ ಇನ್ನಿತರ ಯಾಜಕರ ನಿಲುವಂಗಿಗಳು, ಅತ್ಯುತ್ತಮವಾದ ನಾರಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದು, ಚಿನ್ನದಿಂದ ಅಲಂಕರಿಸಲ್ಪಡುತ್ತಿದ್ದವು. (ವಿಮೋಚನಕಾಂಡ 28:4-8; 39:27-29) ಹೀಗೆ, ಸಂದೇಶವಾಹಕನ ವಸ್ತ್ರಾಲಂಕಾರವು ಪವಿತ್ರತೆ ಹಾಗೂ ಸ್ಥಾನಮಾನಕ್ಕೆ ತಕ್ಕದಾದ ಘನತೆಯನ್ನು ಸೂಚಿಸುತ್ತದೆ.
13 ಸಂದೇಶವಾಹಕನ ಪೀತರತ್ನದಂತಿದ್ದ ಶಾರೀರಿಕ ಪ್ರಕಾಶ, ಮುಖದ ಮಿಂಚಿನಂತಹ ಹೊಳಪು, ಉರಿಯುತ್ತಿರುವ ಕಣ್ಣುಗಳ ತೀಕ್ಷ್ಣತೆ, ಹಾಗೂ ಬಲಿಷ್ಠವಾದ ಕೈಕಾಲುಗಳ ಥಳಥಳ ಹೊಳೆಯುವಿಕೆಯ ಅದ್ಭುತದರ್ಶನವನ್ನು ನೋಡಿಯೂ ದಾನಿಯೇಲನಲ್ಲಿ ಭಯಭಕ್ತಿಯುಂಟಾಯಿತು. ಆಜ್ಞೆನೀಡುವಂತಿದ್ದ ಅವನ ಧ್ವನಿಯು ಸಹ ಭಯಪ್ರೇರಕವಾಗಿತ್ತು. ಇದೆಲ್ಲವೂ ಅವನು ದಿವ್ಯ ವ್ಯಕ್ತಿಯಾಗಿದ್ದನು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. “ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ” ಈ ಮನುಷ್ಯನು, ವಿಶೇಷ ಪದವಿಯುಳ್ಳ ಒಬ್ಬ ದೇವದೂತನೇ ಆಗಿದ್ದನು. ಈ ದೇವದೂತನು ಯೆಹೋವನ ಪವಿತ್ರ ಸಾನ್ನಿಧ್ಯದಲ್ಲಿ ಸೇವೆಮಾಡುತ್ತಿದ್ದವನಾಗಿದ್ದು, ಅಲ್ಲಿಂದಲೇ ಈ ಸಂದೇಶದೊಂದಿಗೆ ಇಲ್ಲಿಗೆ ಬಂದಿದ್ದನು.a
“ಅತಿಪ್ರಿಯನು” ಬಲಗೊಳಿಸಲ್ಪಟ್ಟದ್ದು
14. ದೇವದೂತನ ಸಂದೇಶವನ್ನು ಪಡೆದುಕೊಳ್ಳಲಿಕ್ಕಾಗಿ ದಾನಿಯೇಲನಿಗೆ ಯಾವ ಸಹಾಯದ ಅಗತ್ಯವಿತ್ತು?
14 ಯೆಹೋವನ ದೇವದೂತನು ದಾನಿಯೇಲನಿಗೆ ತಿಳಿಸಲಿಕ್ಕಿದ್ದ ಸಂದೇಶವು ತುಂಬ ಮಹತ್ವವಾದದ್ದೂ ಜಟಿಲವಾದದ್ದೂ ಆಗಿತ್ತು. ದಾನಿಯೇಲನು ಆ ಸಂದೇಶವನ್ನು ಪಡೆದುಕೊಳ್ಳುವುದಕ್ಕೆ ಮೊದಲು, ತನ್ನ ಶಾರೀರಿಕ ಹಾಗೂ ಮಾನಸಿಕ ತಳಮಳದಿಂದ ಚೇತರಿಸಿಕೊಳ್ಳಲು ಅವನಿಗೆ ಸಹಾಯದ ಅಗತ್ಯವಿತ್ತು. ಇದನ್ನು ಚೆನ್ನಾಗಿಯೇ ತಿಳಿದವನಾಗಿದ್ದ ದೇವದೂತನು, ದಾನಿಯೇಲನಿಗೆ ಬೇಕಾಗಿದ್ದ ವೈಯಕ್ತಿಕ ಸಹಾಯ ಹಾಗೂ ಉತ್ತೇಜನವನ್ನು ನೀಡಿದನು. ಏನು ಸಂಭವಿಸಿತು ಎಂಬುದರ ಕುರಿತಾಗಿ ಸ್ವತಃ ದಾನಿಯೇಲನೇ ವಿವರಿಸಿದ ಕಥನಕ್ಕೆ ನಾವು ಗಮನ ಕೊಡೋಣ.
15. ದಾನಿಯೇಲನಿಗೆ ಸಹಾಯ ಮಾಡಲಿಕ್ಕಾಗಿ ದೇವದೂತನು ಏನು ಮಾಡಿದನು?
15 “ಅವನ ಮಾತಿನ ಶಬ್ದವು ನನ್ನ ಕಿವಿಗೆ ಬಿದ್ದಾಗ ನಾನು ಮೈಮರೆತು ಅಡಿಮೊಗವಾಗಿ ಅಡ್ಡಬಿದ್ದಿದ್ದೆನು.” ಆತಂಕ ಹಾಗೂ ಕಳವಳವು ದಾನಿಯೇಲನನ್ನು ದಿಗ್ಭ್ರಮೆಗೊಳಿಸಿದ್ದಿರಬಹುದು. ದಾನಿಯೇಲನಿಗೆ ಸಹಾಯ ಮಾಡಲಿಕ್ಕಾಗಿ ದೇವದೂತನು ಏನು ಮಾಡಿದನು? “ಆಹಾ, ನನಗೆ ಹಸ್ತಸ್ಪರ್ಶವಾಯಿತು; ನಾನು ಗಡಗಡನೆ ನಡುಗುತ್ತಾ ಮೊಣಕಾಲೂರಿ ಅಂಗೈಗಳ ಮೇಲೆ ನಿಲ್ಲುವಂತೆ ಮಾಡಿತು” ಎಂದು ದಾನಿಯೇಲನು ಹೇಳಿದನು. ಅಷ್ಟುಮಾತ್ರವಲ್ಲ, ದೇವದೂತನು ಪ್ರವಾದಿಯನ್ನು ಈ ಮಾತುಗಳಿಂದ ಉತ್ತೇಜಿಸಿದನು: “ದಾನಿಯೇಲನೇ, ಅತಿಪ್ರಿಯನೇ, ನಾನು ನುಡಿಯುವ ಮಾತುಗಳನ್ನು ಗ್ರಹಿಸು; ನಿಂತುಕೋ, ಈಗ ನಿನ್ನ ಬಳಿಗೇ ಕಳುಹಿಸಲ್ಪಟ್ಟಿದ್ದೇನೆ.” ಸಹಾಯ ಹಸ್ತ ಹಾಗೂ ಸಾಂತ್ವನದಾಯಕ ಮಾತುಗಳಿಂದಾಗಿ ದಾನಿಯೇಲನು ಪುನಃ ಚೇತರಿಸಿಕೊಂಡನು. ದಾನಿಯೇಲನು “ನಡುಗುತ್ತಾ” ಇದ್ದನಾದರೂ, “ನಿಂತುಕೊಂಡನು.”—ದಾನಿಯೇಲ 10:9-11.
16. (ಎ) ಯೆಹೋವನು ತನ್ನ ಸೇವಕರ ಪ್ರಾರ್ಥನೆಗಳಿಗೆ ಆ ಕೂಡಲೆ ಪ್ರತ್ಯುತ್ತರ ನೀಡುತ್ತಾನೆ ಎಂಬುದನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? (ಬಿ) ದಾನಿಯೇಲನ ಸಹಾಯಕ್ಕೆ ಬರಲು ದೇವದೂತನು ತಡಮಾಡಿದ್ದೇಕೆ? (ರೇಖಾಚೌಕದ ವಿಷಯವನ್ನೂ ಒಳಗೂಡಿಸಿರಿ.) (ಸಿ) ದಾನಿಯೇಲನಿಗಾಗಿ ದೇವದೂತನ ಬಳಿ ಯಾವ ಸಂದೇಶವಿತ್ತು?
16 ವಿಶೇಷವಾಗಿ ತಾನು ದಾನಿಯೇಲನನ್ನು ಬಲಪಡಿಸಲು ಬಂದಿದ್ದೇನೆ ಎಂದು ದೇವದೂತನು ಸೂಚಿಸಿದನು. “ದಾನಿಯೇಲನೇ, ಭಯಪಡಬೇಡ, ನೀನು [ದೈವಸಂಕಲ್ಪವನ್ನು] ವಿಮರ್ಶಿಸುವದಕ್ಕೂ ನಿನ್ನನ್ನು ನಿನ್ನ ದೇವರ ಮುಂದೆ ತಗ್ಗಿಸಿಕೊಳ್ಳುವದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು” ಎಂದು ದೇವದೂತನು ಹೇಳಿದನು. ತದನಂತರ ತಾನು ಬರಲು ತಡವಾದದ್ದರ ಕಾರಣವನ್ನು ದೇವದೂತನು ವಿವರಿಸಿದನು. ಅವನು ಹೇಳಿದ್ದು: “ಪಾರಸಿಯ ರಾಜ್ಯದ ದಿವ್ಯಪಾಲಕನು [“ಪ್ರಭುವು,” NW] ಇಪ್ಪತ್ತೊಂದು ದಿವಸ ನನ್ನನ್ನು ತಡೆಯಲು ಇಗೋ, ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ [“ಪ್ರಧಾನ ಪ್ರಭುಗಳಲ್ಲಿ ಒಬ್ಬನಾದ,” NW] ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು; ಅಲ್ಲಿ ಪಾರಸಿಯ ರಾಜರ ಸಂಗಡ [ಹೋರಾಡಿ] ಉಳಿದುಕೊಂಡು . . . ಬಂದೆನು.” ಮೀಕಾಯೇಲನ ಸಹಾಯದಿಂದ ದೇವದೂತನು ತನ್ನ ಕಾರ್ಯಾಚರಣೆಯನ್ನು ಪೂರೈಸಿ, ಈ ತುರ್ತಿನ ಸಂದೇಶವನ್ನು ದಾನಿಯೇಲನಿಗೆ ಮುಟ್ಟಿಸಲು ಶಕ್ತನಾಗಿದ್ದನು: “ಅಂತ್ಯಕಾಲದಲ್ಲಿ ನಿನ್ನ ಜನರಿಗಾಗುವ ಗತಿಯನ್ನು ನಿನಗೆ ತಿಳಿಸುವದಕ್ಕೋಸ್ಕರ ಬಂದೆನು; ಏಕೆಂದರೆ ಈ ದರ್ಶನವು ಭವಿಷ್ಯತ್ತಿನ ದಿನಗಳ ಕುರಿತಾಗಿದೆ.”—ದಾನಿಯೇಲ 10:12-14, NW.
17, 18. ಎರಡನೆಯ ಬಾರಿ ದಾನಿಯೇಲನಿಗೆ ಹೇಗೆ ಸಹಾಯ ದೊರಕಿತು, ಮತ್ತು ಇದರಿಂದಾಗಿ ಅವನು ಏನು ಮಾಡಲು ಶಕ್ತನಾದನು?
17 ಇಂತಹ ಒಂದು ಆಸಕ್ತಿದಾಯಕ ಸಂದೇಶವನ್ನು ಪಡೆದುಕೊಳ್ಳುವ ಪ್ರತೀಕ್ಷೆಯಿಂದ ದಾನಿಯೇಲನು ಉದ್ರೇಕಗೊಳ್ಳುವ ಬದಲಿಗೆ, ಅವನು ಕೇಳಿಸಿಕೊಂಡ ವಿಚಾರಗಳು ಅವನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದ್ದಂತೆ ಕಂಡುಬಂತು. ಆ ವೃತ್ತಾಂತವು ಹೇಳುವುದು: “ಅವನು ಈ ಮಾತುಗಳನ್ನು ನನಗೆ ಹೇಳಿದ ಕೂಡಲೆ ನಾನು ಮುಖವನ್ನು ತಗ್ಗಿಸಿಕೊಂಡು ಬಾಯಿಬಿಡಲಾರದೆ ಹೋದೆನು.” ಆದರೆ ದೇವದೂತ ಸಂದೇಶವಾಹಕನು, ಎರಡನೆಯ ಬಾರಿ ಪ್ರೀತಿಪರ ಸಹಾಯವನ್ನು ನೀಡಲು ಸಿದ್ಧನಿದ್ದನು. “ಇಗೋ, ನರರೂಪಸದೃಶನೊಬ್ಬನು ನನ್ನ ತುಟಿಗಳನ್ನು ಮುಟ್ಟಲು ನಾನು ಬಾಯಿಬಿಟ್ಟು” ಮಾತಾಡತೊಡಗಿದೆನು ಎಂದು ದಾನಿಯೇಲನು ಹೇಳಿದನು.b—ದಾನಿಯೇಲ 10:15, 16ಎ.
18 ದೇವದೂತನು ದಾನಿಯೇಲನ ತುಟಿಗಳನ್ನು ಸ್ಪರ್ಶಿಸಿದಾಗ ಅವನು ಬಲಗೊಂಡನು. (ಹೋಲಿಸಿರಿ ಯೆಶಾಯ 6:7.) ದಾನಿಯೇಲನು ಪುನಃ ಮಾತಾಡಲು ಸಮರ್ಥನಾದಾಗ, ತಾನು ಸಹಿಸುತ್ತಿದ್ದ ಕಷ್ಟದೆಸೆಯನ್ನು ದೇವದೂತ ಸಂದೇಶವಾಹಕನಿಗೆ ವಿವರಿಸಲು ಅವನು ಶಕ್ತನಾದನು. ದಾನಿಯೇಲನು ಹೇಳಿದ್ದು: “ಎನ್ನೊಡೆಯನೇ, ಈ ದರ್ಶನದಿಂದ ವೇದನೆಗಳು ನನ್ನನ್ನು ಆಕ್ರಮಿಸಿವೆ, ನಿತ್ರಾಣನಾಗಿದ್ದೇನೆ. ಎನ್ನೊಡೆಯನ ಸೇವಕನಾದ ನನ್ನಂಥವನು ಎನ್ನೊಡೆಯನಾದ ನಿನ್ನಂಥವನ ಸಂಗಡ ಹೇಗೆ ಮಾತಾಡಬಹುದು? ಈಗಿನಿಂದ ಶಕ್ತಿಯನ್ನೆಲ್ಲಾ ಕಳಕೊಂಡವನಾಗಿದ್ದೇನೆ, ನನ್ನಲ್ಲಿ ಉಸುರೇ ಇಲ್ಲ.”—ದಾನಿಯೇಲ 10:16ಬಿ, 17.
19. ಮೂರನೆಯ ಬಾರಿ ದಾನಿಯೇಲನಿಗೆ ಹೇಗೆ ಸಹಾಯ ನೀಡಲ್ಪಟ್ಟಿತು, ಮತ್ತು ಅದರ ಫಲಿತಾಂಶವೇನು?
19 ಇಲ್ಲಿ ದಾನಿಯೇಲನು ದೂರುಹೊರಿಸುತ್ತಿರಲಿಲ್ಲ ಅಥವಾ ಸುಮ್ಮನೆ ನೆವವನ್ನು ಕೊಡುತ್ತಿರಲಿಲ್ಲ. ಬದಲಾಗಿ ಅವನು ತನ್ನ ಕಷ್ಟಕರ ಸನ್ನಿವೇಶವನ್ನು ದೇವದೂತನ ಬಳಿ ಹೇಳಿಕೊಳ್ಳುತ್ತಿದ್ದನು, ಮತ್ತು ದೇವದೂತನು ಅವನ ಮಾತನ್ನು ಅಂಗೀಕರಿಸಿದನು. ಹೀಗೆ, ಮೂರನೆಯ ಬಾರಿ ದೇವದೂತ ಸಂದೇಶವಾಹಕನು ದಾನಿಯೇಲನಿಗೆ ಸಹಾಯ ಮಾಡಿದನು. “ಮನುಷ್ಯಸದೃಶನು ಪುನಃ ನನ್ನನ್ನು ಮುಟ್ಟಿ ಬಲಪಡಿಸಿದನು” ಎಂದು ಪ್ರವಾದಿಯು ಹೇಳಿದನು. ಬಲಪಡಿಸುವಂತಹ ರೀತಿಯಲ್ಲಿ ಸ್ಪರ್ಶಿಸಿದ ಬಳಿಕ ಆ ದೇವದೂತನು ಈ ಸಾಂತ್ವನದಾಯಕ ಮಾತುಗಳನ್ನು ನುಡಿದನು: “ಅತಿಪ್ರಿಯನೇ, ಭಯಪಡಬೇಡ; ನಿನಗೆ ಸಮಾಧಾನವಿರಲಿ, ಬಲಗೊಳ್ಳು, ಬಲಗೊಳ್ಳು.” ಈ ಸಂದರ್ಭದಲ್ಲಿ ದಾನಿಯೇಲನಿಗೆ, ಪ್ರೀತಿಪರ ಸ್ಪರ್ಶ ಹಾಗೂ ಭಕ್ತಿವೃದ್ಧಿಮಾಡುವಂತಹ ಈ ಮಾತುಗಳೇ ಅತ್ಯಗತ್ಯವಾಗಿದ್ದವು. ಇದರ ಫಲಿತಾಂಶವೇನು? ದಾನಿಯೇಲನು ಹೇಳಿದ್ದು: “ಅವನು ಈ ಮಾತನ್ನು ಹೇಳಿದ ಕೂಡಲೆ ನಾನು ಬಲಗೊಂಡು—ಎನ್ನೊಡೆಯನೇ, ಮಾತಾಡು; ನನ್ನನ್ನು ಬಲಗೊಳಿಸಿದ್ದೀ ಎಂದರಿಕೆಮಾಡಿ”ದೆನು. ಈಗ ದಾನಿಯೇಲನು ಪಂಥಾಹ್ವಾನದಾಯಕವಾದ ಇನ್ನೊಂದು ನೇಮಕವನ್ನು ಸ್ವೀಕರಿಸಲು ಸಿದ್ಧನಿದ್ದನು.—ದಾನಿಯೇಲ 10:18, 19.
20. ತನ್ನ ನೇಮಕವನ್ನು ಪೂರೈಸಲಿಕ್ಕಾಗಿ ದೇವದೂತ ಸಂದೇಶವಾಹಕನು ಏಕೆ ಬಹಳ ಪ್ರಯಾಸಪಡಬೇಕಾಗಿತ್ತು?
20 ದಾನಿಯೇಲನನ್ನು ಬಲಗೊಳಿಸಿ, ತನ್ನ ಮಾನಸಿಕ ಹಾಗೂ ಶಾರೀರಿಕ ಸಾಮರ್ಥ್ಯಗಳನ್ನು ಪುನಃ ಪಡೆದುಕೊಳ್ಳುವಂತೆ ಅವನಿಗೆ ಸಹಾಯ ಮಾಡಿದ ಬಳಿಕ, ಆ ದೇವದೂತನು ತನ್ನ ಕಾರ್ಯಾಚರಣೆಯ ಉದ್ದೇಶವನ್ನು ಪುನಃ ತಿಳಿಯಪಡಿಸಿದನು. ಅವನು ಹೇಳಿದ್ದು: “ನಾನು ನಿನ್ನ ಬಳಿಗೆ ಏಕೆ ಬಂದೆನೆಂಬದು ನಿನಗೆ ಗೊತ್ತಲ್ಲವೆ; ಈಗ ನಾನು ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ [“ಪ್ರಭುವಿನೊಂದಿಗೆ,” NW] ಹೋರಾಡಲು ಹಿಂದಿರುಗಬೇಕು; ನಾನು ಆ ಹೋರಾಟವನ್ನು ತೀರಿಸಿದ ಕೂಡಲೆ ಆಹಾ, ಗ್ರೀಕ್ ರಾಜ್ಯದ ದಿವ್ಯಪಾಲಕನು [“ಪ್ರಭುವು,” NW] ಎದುರುಬೀಳುವನು. (ಆದರೂ ಸತ್ಯಶಾಸನದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುವೆನು.) ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಪಾಲಕನಾದ [“ಪ್ರಭುವಾದ,” NW] ಮೀಕಾಯೇಲನು ಹೊರತು ನನಗೆ ಬೆಂಬಲರಾಗತಕ್ಕವರು ಇನ್ನಾರೂ ಇಲ್ಲ.”—ದಾನಿಯೇಲ 10:20, 21.
21, 22. (ಎ) ತನ್ನ ಸೇವಕರೊಂದಿಗೆ ವ್ಯವಹರಿಸುವ ಯೆಹೋವನ ವಿಧಗಳ ಕುರಿತು, ದಾನಿಯೇಲನ ಅನುಭವದಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? (ಬಿ) ದಾನಿಯೇಲನು ಈಗ ಯಾವುದಕ್ಕಾಗಿ ಬಲಗೊಳಿಸಲ್ಪಟ್ಟನು?
21 ಯೆಹೋವನು ಎಷ್ಟೊಂದು ಪ್ರೀತಿಯುಳ್ಳವನೂ ವಿಚಾರಪರನೂ ಆಗಿದ್ದಾನೆ! ಆತನು ಯಾವಾಗಲೂ ತನ್ನ ಸೇವಕರ ಸಾಮರ್ಥ್ಯಗಳು ಹಾಗೂ ಮಿತಿಗಳಿಗನುಸಾರ ಅವರೊಂದಿಗೆ ವ್ಯವಹರಿಸುತ್ತಾನೆ. ಇನ್ನೊಂದು ಕಡೆಯಲ್ಲಿ, ತಾವು ಈ ನೇಮಕವನ್ನು ಮಾಡಲು ಸಮರ್ಥರಲ್ಲ ಎಂದು ಆತನ ಸೇವಕರು ಭಾವಿಸುವುದಾದರೂ, ಅವರು ಈ ನೇಮಕವನ್ನು ಪೂರೈಸಬಲ್ಲರು ಎಂಬುದು ಆತನಿಗೆ ಗೊತ್ತಿರುತ್ತದೆ ಮತ್ತು ಅದಕ್ಕನುಸಾರ ಆತನು ಅವರಿಗೆ ನೇಮಕಗಳನ್ನು ಕೊಡುತ್ತಾನೆ. ಅಷ್ಟುಮಾತ್ರವಲ್ಲ, ಆತನು ಅವರಿಗೆ ಮನಃಪೂರ್ವಕವಾಗಿ ಕಿವಿಗೊಡುತ್ತಾನೆ ಮತ್ತು ಅವರು ತಮ್ಮ ನೇಮಕಗಳನ್ನು ಪೂರೈಸುವಂತೆ ಸಹಾಯ ಮಾಡಲು ಏನು ಅಗತ್ಯವಾಗಿದೆಯೋ ಅದನ್ನು ಆತನು ಒದಗಿಸುತ್ತಾನೆ. ನಮ್ಮ ಜೊತೆ ಆರಾಧಕರನ್ನು ಪ್ರೀತಿಯಿಂದ ಉತ್ತೇಜಿಸುವ ಮೂಲಕ ಹಾಗೂ ಅವರನ್ನು ಬಲಗೊಳಿಸುವ ಮೂಲಕ, ನಾವು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಯಾವಾಗಲೂ ಅನುಕರಿಸೋಣ.—ಇಬ್ರಿಯ 10:24.
22 ದೇವದೂತನ ಸಾಂತ್ವನದಾಯಕ ಸಂದೇಶವು ದಾನಿಯೇಲನಿಗೆ ಅತ್ಯಧಿಕ ಉತ್ತೇಜನವನ್ನು ನೀಡಿತು. ದಾನಿಯೇಲನು ಬಹಳ ವೃದ್ಧ ಪ್ರಾಯದವನಾಗಿದ್ದರೂ, ನಮ್ಮ ಪ್ರಯೋಜನಕ್ಕಾಗಿ ಇನ್ನೂ ಹೆಚ್ಚಿನ ಮಹತ್ವವುಳ್ಳ ಪ್ರವಾದನೆಯನ್ನು ಪಡೆದುಕೊಂಡು, ಅದನ್ನು ದಾಖಲಿಸಲಿಕ್ಕಾಗಿ ಈಗ ಅವನು ಬಲಗೊಳಿಸಲ್ಪಟ್ಟನು ಹಾಗೂ ಸಿದ್ಧಗೊಳಿಸಲ್ಪಟ್ಟನು.
[ಅಧ್ಯಯನ ಪ್ರಶ್ನೆಗಳು]
a ಈ ದೇವದೂತನ ಹೆಸರು ಇಲ್ಲಿ ಕೊಡಲ್ಪಟ್ಟಿಲ್ಲವಾದರೂ, ದಾನಿಯೇಲನು ಈಗಷ್ಟೇ ನೋಡಿದ್ದ ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ ಗಬ್ರಿಯೇಲನನ್ನು ಕಳುಹಿಸುವಾಗ ಕೇಳಿಬಂದ ಅದೇ ಧ್ವನಿಯ ದೇವದೂತನು ಇವನಾಗಿದ್ದನು ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. (ದಾನಿಯೇಲ 8:2, 15, 16ನ್ನು 12:7, 8ರೊಂದಿಗೆ ಹೋಲಿಸಿರಿ.) ಅಷ್ಟುಮಾತ್ರವಲ್ಲ, “ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ [“ಪ್ರಧಾನ ಪ್ರಭುಗಳಲ್ಲಿ ಒಬ್ಬನಾದ,” NW]” ಮೀಕಾಯೇಲನು, ಈ ದೇವದೂತನಿಗೆ ಸಹಾಯ ಮಾಡಲು ಬಂದನು ಎಂದು ದಾನಿಯೇಲ 10:13 ತೋರಿಸುತ್ತದೆ. ಹೀಗೆ, ಈ ಅನಾಮಿಕ ದೇವದೂತನು, ಗಬ್ರಿಯೇಲನೊಂದಿಗೆ ಹಾಗೂ ಮೀಕಾಯೇಲನೊಂದಿಗೆ ನಿಕಟವಾಗಿ ಕೆಲಸಮಾಡುವ ಸುಯೋಗದಲ್ಲಿ ಆನಂದಿಸುತ್ತಿದ್ದಿರಬೇಕು.
b ದಾನಿಯೇಲನೊಂದಿಗೆ ಮಾತಾಡುತ್ತಿದ್ದ ದೇವದೂತನೇ ಅವನ ತುಟಿಗಳನ್ನು ಸ್ಪರ್ಶಿಸಿ, ಅವನು ಪುನಃ ಚೇತರಿಸಿಕೊಳ್ಳುವಂತೆ ಮಾಡಿರಬಹುದಾದರೂ, ಇಲ್ಲಿ ಕೊಡಲ್ಪಟ್ಟಿರುವ ಪದಗಳು, ಇನ್ನೊಬ್ಬ ದೇವದೂತನು—ಬಹುಶಃ ಗಬ್ರಿಯೇಲನು—ಹೀಗೆ ಮಾಡಿರಬಹುದಾದ ಸಾಧ್ಯತೆಯನ್ನು ಸೂಚಿಸುತ್ತವೆ. ಹೇಗಿದ್ದರೂ, ದಾನಿಯೇಲನು ಒಬ್ಬ ದೇವದೂತ ಸಂದೇಶವಾಹಕನಿಂದ ಬಲಗೊಳಿಸಲ್ಪಟ್ಟನು.
ನೀವೇನನ್ನು ಗ್ರಹಿಸಿದಿರಿ?
• ಸಾ.ಶ.ಪೂ. 536/535ರಲ್ಲಿ ದಾನಿಯೇಲನ ಸಹಾಯಕ್ಕೆ ಬರಲು ಯೆಹೋವನ ದೇವದೂತನಿಗೆ ಏಕೆ ತಡವಾಯಿತು?
• ದೇವದೂತ ಸಂದೇಶವಾಹಕನ ವಸ್ತ್ರಾಲಂಕಾರ ಹಾಗೂ ಅವನ ಅದ್ಭುತದರ್ಶನವು ಅವನ ಕುರಿತು ಏನನ್ನು ಸೂಚಿಸುತ್ತದೆ?
• ದಾನಿಯೇಲನಿಗೆ ಯಾವ ಸಹಾಯದ ಅಗತ್ಯವಿತ್ತು, ಮತ್ತು ದೇವದೂತನು ಮೂರು ಬಾರಿ ಆ ಸಹಾಯವನ್ನು ಹೇಗೆ ಒದಗಿಸಿದನು?
• ದಾನಿಯೇಲನಿಗಾಗಿ ದೇವದೂತನ ಬಳಿ ಯಾವ ಸಂದೇಶವಿತ್ತು?
[Box on page 204, 205]
ದಿವ್ಯಪಾಲಕರೊ ದೆವ್ವಾಧಿಪತಿಗಳೊ?
ದೇವದೂತರ ಕುರಿತು ದಾನಿಯೇಲ ಪುಸ್ತಕವು ಏನು ಹೇಳುತ್ತದೋ ಅದರಿಂದ ನಾವು ಬಹಳಷ್ಟು ವಿಷಯಗಳನ್ನು ಕಲಿಯಸಾಧ್ಯವಿದೆ. ಯೆಹೋವನ ಮಾತನ್ನು ಪೂರೈಸುವುದರಲ್ಲಿ ದೇವದೂತರ ಪಾತ್ರದ ಕುರಿತು ಹಾಗೂ ತಮ್ಮ ನೇಮಕಗಳನ್ನು ಪೂರ್ಣಗೊಳಿಸುವುದರಲ್ಲಿ ಅವರು ಪಡುವ ಪ್ರಯತ್ನದ ಕುರಿತು ಅದು ನಮಗೆ ಹೇಳುತ್ತದೆ.
ತಾನು ದಾನಿಯೇಲನೊಂದಿಗೆ ಮಾತಾಡಲಿಕ್ಕಾಗಿ ಬರುತ್ತಿದ್ದಾಗ, “ಪಾರಸಿಯ ರಾಜ್ಯದ ಪ್ರಭುವು” ತನ್ನನ್ನು ತಡೆದನು ಎಂದು ದೇವದೂತನು ಹೇಳಿದನು. ಸುಮಾರು 21 ದಿವಸಗಳ ವರೆಗೆ ಅವನೊಂದಿಗೆ ಹೋರಾಟ ನಡೆಸಿದ ಬಳಿಕ, “ಪ್ರಧಾನ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನು” ಸಹಾಯಕ್ಕೆ ಬಂದದ್ದರಿಂದ ಮಾತ್ರ ಈ ದೇವದೂತ ಸಂದೇಶವಾಹಕನು ತನ್ನ ಕೆಲಸವನ್ನು ಮುಂದುವರಿಸಲು ಶಕ್ತನಾದನು. ತಾನು ಪುನಃ ಆ ಶತ್ರುವಿನೊಂದಿಗೆ ಹೋರಾಡಲು ಹೋಗಬೇಕಾಗಿದೆ ಮತ್ತು “ಗ್ರೀಕ್ ರಾಜ್ಯದ ಪ್ರಭು”ವಿನೊಂದಿಗೂ ಹೋರಾಡಬೇಕಾಗಬಹುದು ಎಂದು ಆ ದೇವದೂತನು ಹೇಳಿದನು. (ದಾನಿಯೇಲ 10:13, 20) ದೇವದೂತನಿಗೆ ಸಹ ಇದು ಸುಲಭದ ಕೆಲಸವಾಗಿರಲಿಲ್ಲ! ಹಾಗಾದರೆ, ಪಾರಸಿಯ ಹಾಗೂ ಗ್ರೀಕ್ ರಾಜ್ಯದ ಈ ಪ್ರಭುಗಳು ಯಾರಾಗಿದ್ದರು?
ಮೊದಲಾಗಿ, ಮೀಕಾಯೇಲನನ್ನು “ಪ್ರಧಾನ ಪ್ರಭುಗಳಲ್ಲಿ ಒಬ್ಬನು” ಹಾಗೂ “ನಿಮ್ಮ ಪ್ರಭು” ಎಂದು ಕರೆಯಲಾಗಿದೆ ಎಂಬುದನ್ನು ನಾವು ಗಮನಿಸುತ್ತೇವೆ. ತದನಂತರ, ಮೀಕಾಯೇಲನನ್ನು “[ದಾನಿಯೇಲನ] ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕ [“ಮಹಾ ಪ್ರಭು,” NW]”ನೆಂದು ಸೂಚಿಸಲಾಗಿದೆ. (ದಾನಿಯೇಲ 10:21; 12:1) ಅರಣ್ಯದಲ್ಲಿ ಇಸ್ರಾಯೇಲ್ಯರನ್ನು ಮುನ್ನಡಿಸಲಿಕ್ಕಾಗಿ ಯೆಹೋವನಿಂದ ನೇಮಿಸಲ್ಪಟ್ಟಿದ್ದ ದೇವದೂತನು ಮೀಕಾಯೇಲನೇ ಆಗಿದ್ದನು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.—ವಿಮೋಚನಕಾಂಡ 23:20-23; 32:34; 33:2.
“ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ” ಮಾಡಿದ್ದನು ಎಂದು ಶಿಷ್ಯನಾದ ಯೂದನು ತಿಳಿಸಿರುವ ಸಂಗತಿಯು ಈ ವಿಚಾರವನ್ನು ಬೆಂಬಲಿಸುತ್ತದೆ. (ಯೂದ 9) ಮೀಕಾಯೇಲನ ಸ್ಥಾನ, ಬಲ, ಹಾಗೂ ಅಧಿಕಾರವು ಅವನನ್ನು ನಿಜವಾಗಿಯೂ “ಪ್ರಧಾನ ದೇವದೂತ” [ದಿ ಆರ್ಕೇಂಜಲ್]ನನ್ನಾಗಿ ಮಾಡಿತು. ಇದರ ಅರ್ಥ “ಮುಖ್ಯ ದೇವದೂತ” ಅಥವಾ “ಅಗ್ರ ದೇವದೂತ” ಎಂದಾಗಿದೆ. ಆದುದರಿಂದ, ಈ ಉನ್ನತ ಸ್ಥಾನವನ್ನು ದೇವಕುಮಾರನಾದ ಯೇಸು ಕ್ರಿಸ್ತನಿಗೆ—ಅವನ ಭೂಜೀವಿತಕ್ಕೆ ಮುಂಚೆ ಹಾಗೂ ಭೂಜೀವಿತದ ಬಳಿಕ—ಮಾತ್ರವೇ ಅನ್ವಯಿಸಸಾಧ್ಯವಿರುವುದು ಯೋಗ್ಯ ಸಂಗತಿಯಾಗಿದೆ.—1 ಥೆಸಲೊನೀಕ 4:16; ಪ್ರಕಟನೆ 12:7-9.
ಪಾರಸಿಯ ಹಾಗೂ ಗ್ರೀಸ್ನಂತಹ ಜನಾಂಗಗಳ ವ್ಯವಹಾರಗಳನ್ನು ಮಾರ್ಗದರ್ಶಿಸಲಿಕ್ಕಾಗಿ, ಈ ಜನಾಂಗಗಳ ಮೇಲೂ ಯೆಹೋವನು ದೇವದೂತರನ್ನು ನೇಮಿಸಿದನು ಎಂಬುದನ್ನು ಇದು ಅರ್ಥೈಸುತ್ತದೊ? ದೇವಕುಮಾರನಾದ ಯೇಸು ಕ್ರಿಸ್ತನು ಬಹಿರಂಗವಾಗಿ ಹೇಳಿದ್ದು: “ಈ ಲೋಕದ ಅಧಿಪತಿಗೆ . . . ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ” (NW). ಯೇಸು ಹೀಗೂ ಹೇಳಿದನು: “ನನ್ನ ರಾಜ್ಯವು ಈ ಲೋಕದ್ದಲ್ಲ; . . . ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 14:30; 18:36) “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅಪೊಸ್ತಲ ಯೋಹಾನನು ಪ್ರಕಟಿಸಿದನು. (1 ಯೋಹಾನ 5:19) ಲೋಕದ ಜನಾಂಗಗಳು ಎಂದೂ ದೇವರ ಅಥವಾ ಕ್ರಿಸ್ತನ ಮಾರ್ಗದರ್ಶನದ ಕೆಳಗಿರಲಿಲ್ಲ ಮತ್ತು ಈಗ ಸಹ ಇಲ್ಲ ಎಂಬುದು ಸುಸ್ಪಷ್ಟ. “ಮೇಲಧಿಕಾರಿಗಳು” ಅಸ್ತಿತ್ವದಲ್ಲಿರುವಂತೆ ಹಾಗೂ ಭೂಮಿಯ ಸರಕಾರೀ ವ್ಯವಹಾರಗಳನ್ನು ನಿಯಂತ್ರಿಸುವಂತೆ ಯೆಹೋವನು ಅನುಮತಿಸುತ್ತಾನಾದರೂ, ಆತನು ಅವರ ಮೇಲೆ ತನ್ನ ದೇವದೂತರನ್ನು ನೇಮಿಸುವುದಿಲ್ಲ. (ರೋಮಾಪುರ 13:1-7) ಅವರ ಮೇಲೆ ನೇಮಿಸಲ್ಪಟ್ಟ ಯಾವುದೇ “ಪ್ರಭುಗಳು” ಅಥವಾ “ಅಧಿಪತಿಗಳು,” “ಇಹಲೋಕಾಧಿಪತಿ”ಯಾಗಿರುವ ಪಿಶಾಚನಾದ ಸೈತಾನನಿಂದ ಮಾತ್ರ ಆ ಸ್ಥಾನದಲ್ಲಿ ನೇಮಿಸಲ್ಪಡಸಾಧ್ಯವಿದೆ. ಹಾಗಾದರೆ ಅವರು ದಿವ್ಯಪಾಲಕರಾಗಿರುವುದಕ್ಕೆ ಬದಲಾಗಿ, ದೆವ್ವಾಧಿಪತಿಗಳಾಗಿರಬೇಕು. ಹೀಗಿರುವುದರಿಂದ, ದೃಶ್ಯ ಅಧಿಪತಿಗಳ ಹಿಂದೆ ಅದೃಶ್ಯ ದೆವ್ವಗಳ ಸೇನೆಗಳು ಅಥವಾ “ಪ್ರಭುಗಳು” ಇದ್ದಾರೆ, ಮತ್ತು ರಾಷ್ಟ್ರೀಯ ಕಾದಾಟಗಳಲ್ಲಿ ಕೇವಲ ಮಾನವರು ಒಳಗೂಡುವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ.
[ಪುಟ 200 ರಲ್ಲಿ ಇಡೀ ಪುಟದ ಚಿತ್ರ]
[ಪುಟ 318 ರಲ್ಲಿ ಇಡೀ ಪುಟದ ಚಿತ್ರ]