ಅಧ್ಯಾಯ ಹದಿನೈದು
ಪ್ರತಿಸ್ಪರ್ಧಿ ರಾಜರು 20ನೆಯ ಶತಮಾನವನ್ನು ಪ್ರವೇಶಿಸುತ್ತಾರೆ
1. ಹತ್ತೊಂಬತ್ತನೆಯ ಶತಮಾನದ ಯೂರೋಪಿನಲ್ಲಿ ಯಾರು ಮುಂದಾಳುಗಳಾಗಿದ್ದರು ಎಂದು ಇತಿಹಾಸಕಾರರೊಬ್ಬರು ಹೇಳುತ್ತಾರೆ?
“ಹತ್ತೊಂಬತ್ತನೆಯ ಶತಕದ ಯೂರೋಪಿನಲ್ಲಿ ಹಿಂದೆಂದೂ ಇದ್ದುದಕ್ಕಿಂತಲೂ ಎಷ್ಟೋ ಹೆಚ್ಚಿನ ಚೈತನ್ಯವಿದೆ” ಎಂದು ಇತಿಹಾಸಕಾರರಾದ ನಾರ್ಮನ್ ಡೇವೀಸ್ ಬರೆಯುತ್ತಾರೆ. ಅವರು ಕೂಡಿಸಿ ಹೇಳಿದ್ದು: “ಇತಿಹಾಸದಲ್ಲಿ ಹಿಂದೆಂದೂ ಅನುಭವಿಸಿದ್ದಿರದಷ್ಟು ಅಧಿಕಾರವು ಯೂರೋಪಿಗೆ ದೊರಕಿತ್ತು: ತಾಂತ್ರಿಕ ಸಾಮರ್ಥ್ಯ, ಆರ್ಥಿಕ ಸಾಮರ್ಥ್ಯ, ಸಾಂಸ್ಕೃತಿಕ ಸಾಮರ್ಥ್ಯ, ಅಂತರ ಭೂಪ್ರದೇಶೀಯ ಅಧಿಕಾರವು ಅದಕ್ಕೆ ಸಿಕ್ಕಿತ್ತು.” ಡೇವೀಸ್ ಮುಂದುವರಿಸಿದ್ದು: “ಯೂರೋಪಿನ ಈ ‘ಅಧಿಕಾರದ ಶತಮಾನ’ದ” ಪ್ರಮುಖ ಮುಂದಾಳುಗಳು, “ಆರಂಭದಲ್ಲಿ ಗ್ರೇಟ್ ಬ್ರಿಟನ್ ಆಗಿದ್ದು, . . . ಮತ್ತು ತದನಂತರದ ದಶಕಗಳಲ್ಲಿ ಜರ್ಮನಿಯು ಆ ಸ್ಥಾನಕ್ಕೆ ಬಂತು.”
‘ಕೇಡಿನ ಮನಸ್ಸುಳ್ಳವರು’
2. ಹತ್ತೊಂಬತ್ತನೆಯ ಶತಮಾನವು ಕೊನೆಗೊಂಡಂತೆ, ಯಾವ ಲೋಕ ಶಕ್ತಿಗಳು “ಉತ್ತರರಾಜ” ಹಾಗೂ “ದಕ್ಷಿಣರಾಜ”ನ ಸ್ಥಾನಕ್ಕೆ ಬಂದವು?
2 ಹತ್ತೊಂಬತ್ತನೆಯ ಶತಮಾನವು ಕೊನೆಗೊಳ್ಳುತ್ತಾ ಬಂದಂತೆ, ಜರ್ಮನ್ ಸಾಮ್ರಾಜ್ಯವು “ಉತ್ತರರಾಜ”ನಾಗಿತ್ತು ಮತ್ತು ಬ್ರಿಟನ್ “ದಕ್ಷಿಣರಾಜನ” ಸ್ಥಾನದಲ್ಲಿ ನಿಂತಿತ್ತು. (ದಾನಿಯೇಲ 11:14, 15) “ಈ ಇಬ್ಬರು ರಾಜರು [ಒಬ್ಬರಿಗೊಬ್ಬರು] ಕೇಡಿನ ಮನಸ್ಸುಳ್ಳವರಾಗಿ ಸಹಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತಾಡಿಕೊಳ್ಳುವರು” ಎಂದು ಯೆಹೋವನ ದೂತನು ಹೇಳಿದನು. ಅವನು ಮುಂದುವರಿಸಿದ್ದು: “ಆದರೆ ಯಾವುದೂ ಯಶಸ್ವಿಯಾಗುವುದಿಲ್ಲ, ಏಕೆಂದರೆ ಅಂತ್ಯವು ಇನ್ನೂ ನೇಮಿತ ಸಮಯಕ್ಕಾಗಿರುವುದು.”—ದಾನಿಯೇಲ 11:27, NW.
3, 4. (ಎ) ಯಾರು ಜರ್ಮನ್ ಸಾಮ್ರಾಜ್ಯದ ಪ್ರಪ್ರಥಮ ಚಕ್ರವರ್ತಿಯಾದನು, ಮತ್ತು ಯಾವ ಮೈತ್ರಿ ಸಂಬಂಧವು ರೂಪಿಸಲ್ಪಟ್ಟಿತು? (ಬಿ) ಕೈಸರ್ ವಿಲ್ಹೆಲ್ಮನು ಯಾವ ಕಾರ್ಯನೀತಿಯನ್ನು ಅನುಸರಿಸಿದನು?
3 ಜನವರಿ 18, 1871ರಂದು, Iನೆಯ ವಿಲ್ಹೆಲ್ಮನು ಜರ್ಮನ್ ರೈಖ್ ಅಥವಾ ಸಾಮ್ರಾಜ್ಯದ ಪ್ರಪ್ರಥಮ ಚಕ್ರವರ್ತಿಯಾದನು. ಅವನು ಆಟೊ ವಾನ್ ಬಿಸ್ಮಾರ್ಕನನ್ನು ತನ್ನ ಅಧ್ಯಕ್ಷನನ್ನಾಗಿ ನೇಮಿಸಿಕೊಂಡನು. ಈ ಹೊಸ ಸಾಮ್ರಾಜ್ಯವನ್ನು ವಿಕಸಿಸುವ ಉದ್ದೇಶದಿಂದ, ಬಿಸ್ಮಾರ್ಕನು ಬೇರೆ ರಾಷ್ಟ್ರಗಳೊಂದಿಗೆ ಯಾವುದೇ ಹೋರಾಟವು ನಡೆಯದಂತೆ ನೋಡಿಕೊಂಡನು ಮತ್ತು ಆಸ್ಟ್ರಿಯ-ಹಂಗೇರಿ ಮತ್ತು ಇಟಲಿಗಳೊಂದಿಗೆ ತ್ರಿರಾಷ್ಟ್ರ ಮೈತ್ರಿ ಎಂದು ಪ್ರಸಿದ್ಧವಾದ ಒಂದು ಮೈತ್ರಿ ಸಂಬಂಧವನ್ನು ರೂಪಿಸಿದನು. ಆದರೆ ಉತ್ತರ ರಾಜನ ಈ ಹೊಸ ಅಭಿರುಚಿಗಳು ಹಾಗೂ ದಕ್ಷಿಣ ರಾಜನ ಅಭಿರುಚಿಗಳು ಒಂದಕ್ಕೊಂದು ಘರ್ಷಿಸಿದವು.
4 ಇಸವಿ 1888ರಲ್ಲಿ, Iನೆಯ ವಿಲ್ಹೆಲ್ಮ್ ಹಾಗೂ ಅವನ ಉತ್ತರಾಧಿಕಾರಿಯಾದ IIIನೆಯ ಫ್ರೆಡ್ರಿಕ್ ಮರಣಪಟ್ಟ ಬಳಿಕ, 29 ವರ್ಷ ಪ್ರಾಯದ IIನೆಯ ವಿಲ್ಹೆಲ್ಮ್ ಸಿಂಹಾಸನವನ್ನೇರಿದನು. IIನೆಯ ವಿಲ್ಹೆಲ್ಮ್ ಅಥವಾ ಕೈಸರ್ ವಿಲ್ಹೆಲ್ಮನು, ಬಿಸ್ಮಾರ್ಕ್ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಒತ್ತಾಯಿಸಿದನು, ಮತ್ತು ಲೋಕದಾದ್ಯಂತ ಜರ್ಮನ್ ಪ್ರಭಾವವನ್ನು ವಿಸ್ತರಿಸುವ ಕಾರ್ಯನೀತಿಯನ್ನು ಅನುಸರಿಸಿದನು. “IIನೆಯ ವಿಲ್ಹೆಲ್ಮ್ನ ಆಳ್ವಿಕೆಯ ಕೆಳಗೆ, [ಜರ್ಮನಿಯು] ಹೆಚ್ಚೆಚ್ಚು ಆಕ್ರಮಣಶೀಲ ಮನೋಭಾವವನ್ನು ತೋರಿಸುತ್ತಾ ಹೋಯಿತು” ಎಂದು ಒಬ್ಬ ಇತಿಹಾಸಕಾರನು ಹೇಳುತ್ತಾನೆ.
5. ಇಬ್ಬರು ರಾಜರು “ಸಹಪಂಕ್ತಿಯಲ್ಲಿ” ಹೇಗೆ ಕುಳಿತುಕೊಂಡರು, ಮತ್ತು ಅಲ್ಲಿ ಅವರು ಏನು ಮಾತಾಡಿದರು?
5 ಆಗಸ್ಟ್ 24, 1898ರಂದು, ನೆದರ್ಲೆಂಡ್ಸ್ನ ದ ಹೇಗ್ನಲ್ಲಿ, ರಷ್ಯಾದ IIನೆಯ ಸಾರ್ ನಿಕೊಲಸನು ಒಂದು ಶಾಂತಿ ಸಮ್ಮೇಳನಕ್ಕೆ ಕರೆಕೊಟ್ಟಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಂಬ ಉದ್ವೇಗದ ವಾತಾವರಣವಿತ್ತು. ಈ ಸಮ್ಮೇಳನ ಹಾಗೂ 1907ರಲ್ಲಿ ನಡೆಸಲ್ಪಟ್ಟ ಸಮ್ಮೇಳನವು, ದ ಹೇಗ್ನಲ್ಲಿ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ಅನ್ನು ಸ್ಥಾಪಿಸಿತು. ಈ ಕೋರ್ಟ್ನ ಸದಸ್ಯರಾಗುವ ಮೂಲಕ, ಜರ್ಮನ್ ಸಾಮ್ರಾಜ್ಯ ಹಾಗೂ ಗ್ರೇಟ್ ಬ್ರಿಟನ್ಗಳು, ತಾವು ಶಾಂತಿಯನ್ನು ಇಷ್ಟಪಡುತ್ತೇವೆ ಎಂಬ ಅಭಿಪ್ರಾಯವನ್ನು ಮೂಡಿಸಿದವು. ಅವು ಸ್ನೇಹವನ್ನು ತೋರಿಸಿಕೊಳ್ಳುತ್ತಾ, “ಸಹಪಂಕ್ತಿಯಲ್ಲಿ” ಕುಳಿತುಕೊಂಡವಾದರೂ, ‘ಅವು ಕೇಡಿನ ಮನಸ್ಸುಳ್ಳವುಗಳಾಗಿದ್ದವು.’ ‘ಸಹಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತಾಡಿಕೊಳ್ಳುವ’ ರಾಜತಾಂತ್ರಿಕ ತಂತ್ರೋಪಾಯವು, ನಿಜವಾದ ಶಾಂತಿಯನ್ನು ಉತ್ತೇಜಿಸಸಾಧ್ಯವಿರಲಿಲ್ಲ. ಅವರ ರಾಜಕೀಯ, ವಾಣಿಜ್ಯ, ಹಾಗೂ ಮಿಲಿಟರಿ ಆಕಾಂಕ್ಷೆಗಳು ‘ಏನೂ ಸಾಗುವುದಿಲ್ಲ,’ ಏಕೆಂದರೆ ಈ ಇಬ್ಬರು ರಾಜರ ಅಂತ್ಯವು ಯೆಹೋವ ದೇವರಿಂದ “ನೇಮಿತ ಸಮಯ”ದಲ್ಲಿ ನೆರವೇರಲಿಕ್ಕಿತ್ತು.
“ಪವಿತ್ರ ಒಡಂಬಡಿಕೆಗೆ ವಿರುದ್ಧವಾಗಿ”
6, 7. (ಎ) ಯಾವ ರೀತಿಯಲ್ಲಿ ಉತ್ತರ ರಾಜನು “ಸ್ವದೇಶಕ್ಕೆ ಹಿಂದಿರುಗುವನು”? (ಬಿ) ಉತ್ತರ ರಾಜನ ವ್ಯಾಪಕವಾದ ಪ್ರಭಾವಕ್ಕೆ ದಕ್ಷಿಣ ರಾಜನು ಹೇಗೆ ಪ್ರತಿಕ್ರಿಯಿಸಿದನು?
6 ಪ್ರವಾದನೆಯನ್ನು ಮುಂದುವರಿಸುತ್ತಾ ದೇವದೂತನು ಹೇಳಿದ್ದು: “ಅನಂತರ ಉತ್ತರರಾಜನು ಬಹು ಆಸ್ತಿಯನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂದಿರುಗುವನು; ಅವನ ಮನಸ್ಸು ಪರಿಶುದ್ಧನಿಬಂಧನೆಗೆ [“ಪವಿತ್ರ ಒಡಂಬಡಿಕೆಗೆ,” NW] ವಿರುದ್ಧವಾಗಿರುವದು; ಅವನು ಮಾಡುವಷ್ಟು ಮಾಡಿ [“ಪರಿಣಾಮಕಾರಿಯಾಗಿ ಕ್ರಿಯೆಗೈದು,” NW] ಮತ್ತೆ ಸ್ವದೇಶವನ್ನು ಸೇರುವನು.”—ದಾನಿಯೇಲ 11:28.
7 ಕೈಸರ್ ವಿಲ್ಹೆಲ್ಮನು ತನ್ನ “ಸ್ವದೇಶ”ಕ್ಕೆ, ಅಥವಾ ಪುರಾತನ ಉತ್ತರ ರಾಜನ ಭೂಪರಿಸ್ಥಿತಿಗೆ ಹಿಂದಿರುಗಿದನು. ಹೇಗೆ? ಜರ್ಮನ್ ಸಾಮ್ರಾಜ್ಯವನ್ನು ವಿಸ್ತರಿಸಿ, ಅದರ ಪ್ರಭಾವವನ್ನು ವ್ಯಾಪಕವಾಗಿ ಹಬ್ಬಿಸಲಿಕ್ಕಾಗಿ ಯೋಜಿಸಲ್ಪಟ್ಟ ಪರಮಾಧಿಕಾರವನ್ನು ಸ್ಥಾಪಿಸುವ ಮೂಲಕವೇ. IIನೆಯ ವಿಲ್ಹೆಲ್ಮನು ಆಫ್ರಿಕದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ನೆಲಸುನಾಡಿಗೆ ಸಂಬಂಧಪಟ್ಟ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿದನು. ಬ್ರಿಟಿಷ್ ಸರ್ವಾಧಿಕಾರಕ್ಕೆ ಸವಾಲೊಡ್ಡಲಿಕ್ಕಾಗಿ, ಅವನು ಒಂದು ಪ್ರಬಲವಾದ ನೌಕಾಪಡೆಯನ್ನು ಕಟ್ಟಲು ಆರಂಭಿಸಿದನು. “ತೀರ ಚಿಕ್ಕದಾಗಿದ್ದ ಜರ್ಮನಿಯ ನೌಕಾಪಡೆಯು, ಒಂದು ದಶಕಕ್ಕಿಂತಲೂ ಹೆಚ್ಚು ಸಮಯದೊಳಗೆ ಬ್ರಿಟನ್ಗೆ ಎರಡನೆಯ ಸ್ಥಾನವನ್ನು ಪಡೆಯಿತು” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ತನ್ನ ಪರಮಾಧಿಕಾರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಬ್ರಿಟನ್ ಸಹ ತನ್ನ ನೌಕಾಪಡೆಯನ್ನು ಇನ್ನೂ ಹೆಚ್ಚಿಸಬೇಕಾಗಿತ್ತು. ಬ್ರಿಟನ್ ಕೂಡ ಫ್ರಾನ್ಸ್ನೊಂದಿಗೆ ಸ್ನೇಹಪರ ಒಪ್ಪಂದವನ್ನು ಮಾಡಿಕೊಂಡಿತು ಹಾಗೂ ರಷ್ಯಾದೊಂದಿಗೂ ತದ್ರೀತಿಯ ಒಡಂಬಡಿಕೆಯನ್ನು ಮಾಡಿ, ತ್ರಿಮೈತ್ರಿಕೂಟವನ್ನು ರೂಪಿಸಿತು. ಈಗ ಯೂರೋಪ್ ಎರಡು ಮಿಲಿಟರಿ ಸೈನ್ಯಗಳಾಗಿ ವಿಭಾಗವಾಯಿತು—ಒಂದು ಪಕ್ಷದಲ್ಲಿ ತ್ರಿರಾಷ್ಟ್ರ ಮೈತ್ರಿ ಮತ್ತು ಇನ್ನೊಂದು ಪಕ್ಷದಲ್ಲಿ ತ್ರಿಮೈತ್ರಿಕೂಟ.
8. ಜರ್ಮನ್ ಸಾಮ್ರಾಜ್ಯವು ಹೇಗೆ “ಬಹು ಆಸ್ತಿಯನ್ನು ಕೊಳ್ಳೆಹೊಡೆ”ಯಿತು?
8 ಜರ್ಮನ್ ಸಾಮ್ರಾಜ್ಯವು ತುಂಬ ಆಕ್ರಮಣಶೀಲ ಕಾರ್ಯನೀತಿಯನ್ನು ಅನುಸರಿಸಿತು. ಇದರ ಫಲಿತಾಂಶವಾಗಿ ಜರ್ಮನಿಗೆ “ಬಹು ಆಸ್ತಿಯು” ದೊರಕಿತು, ಏಕೆಂದರೆ ಜರ್ಮನಿಯು ತ್ರಿರಾಷ್ಟ್ರ ಮೈತ್ರಿಯ ಪ್ರಮುಖ ಭಾಗವಾಗಿತ್ತು. ಆಸ್ಟ್ರಿಯ-ಹಂಗೇರಿ ಮತ್ತು ಇಟಲಿಯು ರೋಮನ್ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದ್ದವು. ಆದುದರಿಂದ, ತ್ರಿರಾಷ್ಟ್ರ ಮೈತ್ರಿಯು ಪೋಪ್ನ ಅನುಗ್ರಹವನ್ನು ಸಹ ಪಡೆಯಿತು. ಆದರೆ ಹೆಚ್ಚಾಗಿ ಕ್ಯಾಥೊಲಿಕರಲ್ಲದ ಜನರಿಂದ ಕೂಡಿದ್ದ ತ್ರಿಮೈತ್ರಿಕೂಟದ ದಕ್ಷಿಣ ರಾಜನು ಪೋಪ್ನ ಅನುಗ್ರಹವನ್ನು ಪಡೆಯಲಿಲ್ಲ.
9. ಉತ್ತರ ರಾಜನ ಮನಸ್ಸು “ಪವಿತ್ರ ಒಡಂಬಡಿಕೆಗೆ” ಹೇಗೆ ವಿರುದ್ಧವಾಗಿತ್ತು?
9 ಯೆಹೋವನ ಜನರ ಕುರಿತಾಗಿ ಏನು? 1914ರಲ್ಲಿ “ಅನ್ಯಜನಾಂಗಗಳ ನೇಮಿತ ಸಮಯಗಳು” ಕೊನೆಗೊಳ್ಳಲಿವೆ ಎಂದು ಅವರು ಬಹಳ ಸಮಯದ ಮುಂಚೆಯೇ ಪ್ರಕಟಿಸಿದ್ದರು.a (ಲೂಕ 21:24, NW) ಆ ವರ್ಷದಲ್ಲಿ, ಅರಸನಾದ ದಾವೀದನ ವಂಶದ ಬಾಧ್ಯಸ್ಥನಾಗಿದ್ದ ಯೇಸು ಕ್ರಿಸ್ತನ ಕೆಳಗೆ, ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿತು. (2 ಸಮುವೇಲ 7:12-16; ಲೂಕ 22:28, 29) ಮಾರ್ಚ್ 1880ರಷ್ಟು ಹಿಂದೆಯೇ, ವಾಚ್ ಟವರ್ ಪತ್ರಿಕೆಯು, ದೇವರ ರಾಜ್ಯದ ಆಳ್ವಿಕೆಯನ್ನು “ಅನ್ಯಜನಾಂಗಗಳ ನೇಮಿತ ಸಮಯಗಳು” ಅಥವಾ “ಅನ್ಯದೇಶದವರ ಸಮಯಗಳ” ಅಂತ್ಯದೊಂದಿಗೆ ಜೋಡಿಸಿತ್ತು. (ಕಿಂಗ್ ಜೇಮ್ಸ್ ವರ್ಷನ್) ಆದರೆ ಉತ್ತರದ ಜರ್ಮನ್ ರಾಜನ ಮನಸ್ಸು ‘ಪವಿತ್ರ ರಾಜ್ಯದ ಒಡಂಬಡಿಕೆಗೆ ವಿರುದ್ಧವಾಗಿತ್ತು.’ ರಾಜ್ಯದ ಆಳ್ವಿಕೆಯನ್ನು ಅಂಗೀಕರಿಸುವುದಕ್ಕೆ ಬದಲಾಗಿ, ಲೋಕಾಧಿಪತ್ಯಕ್ಕಾಗಿರುವ ತನ್ನ ಒಳಸಂಚುಗಳನ್ನು ಮುಂದುವರಿಸುವ ಮೂಲಕ ಕೈಸರ್ ವಿಲ್ಹೆಲ್ಮನು ‘ಪರಿಣಾಮಕಾರಿಯಾಗಿ ಕ್ರಿಯೆಗೈದನು.’ ಆದರೂ, ಹೀಗೆ ಮಾಡುವ ಮೂಲಕ ಅವನು Iನೆಯ ಲೋಕ ಯುದ್ಧದ ಬೀಜಗಳನ್ನು ಬಿತ್ತಿದನು.
ಒಂದು ಯುದ್ಧದಲ್ಲಿ ಆ ರಾಜನು “ಎದೆಗುಂದಿ”ದವನಾಗುತ್ತಾನೆ
10, 11. ಒಂದನೆಯ ಲೋಕ ಯುದ್ಧವು ಹೇಗೆ ಆರಂಭಗೊಂಡಿತು, ಮತ್ತು ಇದು ಹೇಗೆ “ನೇಮಿತ ಸಮಯದಲ್ಲಿ” ನೆರವೇರಿತು?
10 ದೇವದೂತನು ಮುಂತಿಳಿಸಿದ್ದು: “ನೇಮಿತ ಸಮಯದಲ್ಲಿ ಅವನು [ಉತ್ತರ ರಾಜನು] ಹಿಂದಿರುಗುವನು, ಮತ್ತು ಅವನು ಪುನಃ ದಕ್ಷಿಣ ದೇಶದ ವಿರುದ್ಧ ದಂಡೆತ್ತಿ ಹೋಗುವನು; ಆದರೆ ಮೊದಲಿನಂತೆ ಎರಡನೆಯ ಸಲ ಸಂಭವಿಸುವುದಿಲ್ಲ.” (ದಾನಿಯೇಲ 11:29, NW) ಭೂಮಿಯ ಮೇಲೆ ಅನ್ಯಜನಾಂಗಗಳ ಆಳ್ವಿಕೆಗೆ ದೇವರು ‘ನೇಮಿಸಿದ ಸಮಯವು’ 1914ರಲ್ಲಿ ಬಂತು; ಆಗ ಆತನು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಿದನು. ಆ ವರ್ಷದ ಜೂನ್ 28ರಂದು, ಆಸ್ಟ್ರಿಯದ ಆರ್ಚ್ಡ್ಯೂಕ್ ಫ್ರಾನ್ಸಿಸ್ ಫರ್ಡಿನ್ಯಾಂಡ್ ಹಾಗೂ ಅವರ ಪತ್ನಿಯನ್ನು, ಬಾಸ್ನಿಯದ ಸಾರಯೇವೊದಲ್ಲಿ ಸರ್ಬಿಯನ್ ಭಯೋತ್ಪಾದಕರು ಹತಿಸಿಬಿಟ್ಟರು. Iನೆಯ ಲೋಕ ಯುದ್ಧವನ್ನು ಆರಂಭಿಸಿದ ಕಿಡಿಯು ಇದೇ ಆಗಿತ್ತು.
11 ಸರ್ಬಿಯದ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಕೈಸರ್ ವಿಲ್ಹೆಲ್ಮನು ಆಸ್ಟ್ರಿಯ-ಹಂಗೇರಿಗಳನ್ನು ಪ್ರಚೋದಿಸಿದನು. ಜರ್ಮನಿಯ ಬೆಂಬಲ ಖಂಡಿತವಾಗಿಯೂ ಸಿಗುತ್ತದೆ ಎಂಬ ಭರವಸೆಯಿಂದ, 1914ರ ಜುಲೈ 28ರಂದು ಆಸ್ಟ್ರಿಯ-ಹಂಗೇರಿಗಳು ಸರ್ಬಿಯದ ಮೇಲೆ ಯುದ್ಧವನ್ನು ಘೋಷಿಸಿಬಿಟ್ಟವು. ಆದರೆ ರಷ್ಯಾವು ಸರ್ಬಿಯದ ಸಹಾಯಕ್ಕೆ ಬಂತು. ಜರ್ಮನಿಯು ರಷ್ಯಾದ ಮೇಲೆ ಯುದ್ಧವನ್ನು ಘೋಷಿಸಿದಾಗ, ಫ್ರಾನ್ಸ್ ದೇಶವು (ತ್ರಿಮೈತ್ರಿಕೂಟದ ಒಂದು ಮಿತ್ರ ರಾಷ್ಟ್ರ) ರಷ್ಯಾಕ್ಕೆ ಬೆಂಬಲ ನೀಡಿತು. ಈಗ ಜರ್ಮನಿಯು ಫ್ರಾನ್ಸ್ನ ಮೇಲೆ ಯುದ್ಧಕ್ಕೆ ಹೊರಟಿತು. ಪ್ಯಾರಿಸನ್ನು ಸುಲಭವಾಗಿ ಪ್ರವೇಶಿಸಸಾಧ್ಯವಾಗುವಂತೆ, ಜರ್ಮನಿಯು ಬೆಲ್ಜಿಯಮ್ನ ಮೇಲೆ ದಾಳಿಮಾಡಿತು. ಯಾಕೆಂದರೆ ಯುದ್ಧದಲ್ಲಿ ಬೆಲ್ಜಿಯಮ್ ಭಾಗವಹಿಸಬೇಕಾಗಿಲ್ಲವೆಂದು ಬ್ರಿಟನ್ ಈಗಾಗಲೇ ಅದಕ್ಕೆ ಭರವಸೆ ನೀಡಿತ್ತು. ಆದುದರಿಂದ ಈಗ ಬ್ರಿಟನ್ ಸಹ ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಿತು. ಬೇರೆ ರಾಷ್ಟ್ರಗಳೂ ಇದರಲ್ಲಿ ಒಳಗೂಡಿದವು, ಮತ್ತು ಇಟಲಿಯು ಮೊದಲಿದ್ದ ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷವನ್ನು ಸೇರಿತು. ಯುದ್ಧದ ಸಮಯದಲ್ಲಿ, ಸೂಯೆಸ್ ಕಾಲುವೆಯನ್ನು ಅಡ್ಡಗಟ್ಟಿ, ದಕ್ಷಿಣ ರಾಜನಿಗೆ ಸೇರಿದ್ದ ಪುರಾತನ ಪ್ರದೇಶವಾದ ಐಗುಪ್ತವನ್ನು ಉತ್ತರ ರಾಜನು ಆಕ್ರಮಿಸದಂತೆ ತಡೆಯಲು, ಬ್ರಿಟನ್ ಐಗುಪ್ತವನ್ನು ತನ್ನ ರಕ್ಷಿತ ಸಂಸ್ಥಾನವನ್ನಾಗಿ ಮಾಡಿಕೊಂಡಿತು.
12. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಯಾವ ರೀತಿಯಲ್ಲಿ ಘಟನೆಗಳು “ಮೊದಲಿನಂತೆ ಎರಡನೆಯ ಸಲ” ಸಂಭವಿಸಲಿಲ್ಲ?
12 “ಮಿತ್ರಪಡೆಗಳು ಅಸಂಖ್ಯಾತವಾಗಿದ್ದು, ಎಷ್ಟೇ ಬಲಿಷ್ಠವಾಗಿದ್ದರೂ, ಯುದ್ಧದಲ್ಲಿ ಜರ್ಮನಿಯೇ ಗೆಲ್ಲುವುದು ಎಂಬಂತೆ ತೋರುತ್ತಿತ್ತು” ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಈ ಮುಂಚೆ ನಡೆದಿದ್ದ ಇಬ್ಬರು ರಾಜರ ನಡುವಿನ ಹೋರಾಟಗಳಲ್ಲಿ, ಉತ್ತರ ರಾಜನಾಗಿದ್ದ ರೋಮನ್ ಸಾಮ್ರಾಜ್ಯವು ಸತತವಾಗಿ ಜಯವನ್ನು ಗಳಿಸಿತ್ತು. ಆದರೆ ಈಗ ‘ಘಟನೆಗಳು ಮೊದಲಿನಂತೆ ಎರಡನೆಯ ಸಲ ಸಂಭವಿಸಲಿಲ್ಲ.’ ಯುದ್ಧದಲ್ಲಿ ಉತ್ತರ ರಾಜನು ಸೋತುಹೋದನು. ಇದಕ್ಕೆ ಕಾರಣವನ್ನು ಕೊಡುತ್ತಾ ದೇವದೂತನು ಹೇಳಿದ್ದು: “ಅವನಿಗೆ ವಿರುದ್ಧವಾಗಿ ಕಿತ್ತೀಮಿನ ಹಡಗುಗಳು ಬರಲು ಅವನು ಎದೆಗುಂದು”ವನು. (ದಾನಿಯೇಲ 11:30ಎ) ಈ “ಕಿತ್ತೀಮಿನ ಹಡಗುಗಳು” ಏನಾಗಿದ್ದವು?
13, 14. (ಎ) ಉತ್ತರ ರಾಜನ ವಿರುದ್ಧವಾಗಿ ಬಂದ “ಕಿತ್ತೀಮಿನ ಹಡಗುಗಳು” ಏನಾಗಿದ್ದವು? (ಬಿ) ಮೊದಲನೆಯ ಲೋಕ ಯುದ್ಧವು ಮುಂದುವರಿಯುತ್ತಿದ್ದಂತೆ ಕಿತ್ತೀಮಿನ ಹಡಗುಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೇಗೆ ಬಂದವು?
13 ದಾನಿಯೇಲನ ಕಾಲದಲ್ಲಿ ಕಿತ್ತೀಮ್ ಸೈಪ್ರಸ್ ದೇಶವಾಗಿತ್ತು. ಮೊದಲನೆಯ ಲೋಕ ಯುದ್ಧದ ಆರಂಭದಲ್ಲಿ, ಬ್ರಿಟನ್ ಸೈಪ್ರಸನ್ನು ಸ್ವಾಧೀನಪಡಿಸಿಕೊಂಡಿತು. ಅಷ್ಟುಮಾತ್ರವಲ್ಲ, ಸಾಂಡರ್ವ್ಯಾನ್ ಪಿಕ್ಟೋರಿಯಲ್ ಎನ್ಸೈಕ್ಲೊಪೀಡಿಯ ಆಫ್ ದ ಬೈಬಲ್ಗೆ ಅನುಸಾರವಾಗಿ, ಕಿತ್ತೀಮ್ ಎಂಬ ಹೆಸರನ್ನು, “ಸಾಮಾನ್ಯವಾಗಿ [ಪಶ್ಚಿಮ]ವನ್ನು, ವಿಶೇಷವಾಗಿ ದೊಡ್ಡ ದೊಡ್ಡ ನೌಕಾಪಡೆಗಳಿರುವ [ಪಶ್ಚಿಮ] ದೇಶಗಳನ್ನು ಒಳಗೂಡಿಸುತ್ತದೆ.” ನ್ಯೂ ಇಂಟರ್ನ್ಯಾಷನಲ್ ವರ್ಷನ್ “ಕಿತ್ತೀಮಿನ ಹಡಗುಗಳು” ಎಂಬ ಅಭಿವ್ಯಕ್ತಿಯನ್ನು, “ಪಶ್ಚಿಮ ಕರಾವಳಿ ಪ್ರದೇಶಗಳ ಹಡಗುಗಳು” ಎಂದು ಭಾಷಾಂತರಿಸುತ್ತದೆ. ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ, ಯೂರೋಪಿನ ಪಶ್ಚಿಮ ಕರಾವಳಿಯಿಂದ ತುಸು ದೂರದಲ್ಲಿ ಇಡಲ್ಪಟ್ಟಿದ್ದ ಬ್ರಿಟನ್ನ ಹಡಗುಗಳು, ಕಿತ್ತೀಮಿನ ಹಡಗುಗಳಾಗಿ ಕಂಡುಬಂದಿದ್ದವು.
14 ಯುದ್ಧವು ನಿಧಾನವಾಗಿ ಮುಂದುವರಿದಂತೆ, ಬ್ರಿಟಿಷ್ ನೌಕಾಪಡೆಯು ಕಿತ್ತೀಮಿನ ಅಧಿಕ ಸಂಖ್ಯೆಯ ಹಡಗುಗಳಿಂದ ಬಲಗೊಳಿಸಲ್ಪಟ್ಟಿತು. 1915ರ ಮೇ 7ರಂದು, U-20 ಜರ್ಮನ್ ಸಬ್ಮೆರೀನ್, ಐರ್ಲೆಂಡ್ನ ದಕ್ಷಿಣ ತೀರದಲ್ಲಿ ಲೂಸಿಟೇನಿಯ ಎಂಬ ಪ್ರಯಾಣಿಕ ಹಡಗನ್ನು ಮುಳುಗಿಸಿಬಿಟ್ಟಿತು. ಸತ್ತವರಲ್ಲಿ 128 ಮಂದಿ ಅಮೆರಿಕನರೂ ಸೇರಿದ್ದರು. ತದನಂತರ, ಜರ್ಮನಿಯು ತನ್ನ ಸಬ್ಮೆರೀನ್ ಯುದ್ಧವನ್ನು ಅಟ್ಲಾಂಟಿಕ್ನ ವರೆಗೂ ವಿಸ್ತರಿಸಿತು. ಇದರ ಫಲಿತಾಂಶವಾಗಿ, 1917ರ ಏಪ್ರಿಲ್ 6ರಂದು, ಅಮೆರಿಕದ ಅಧ್ಯಕ್ಷರಾದ ವುಡ್ರೋ ವಿಲ್ಸನ್ ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಿದರು. ಅಮೆರಿಕದ ಯುದ್ಧನೌಕೆಗಳು ಹಾಗೂ ಸೈನ್ಯಗಳನ್ನು ಹೆಚ್ಚಿಸಿಕೊಂಡ ದಕ್ಷಿಣ ರಾಜನಾದ ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯು, ತನ್ನ ಪ್ರತಿಸ್ಪರ್ಧಿ ಅರಸನೊಂದಿಗೆ ಸಂಪೂರ್ಣವಾಗಿ ಯುದ್ಧದಲ್ಲಿ ಒಳಗೂಡಿತು.
15. ಉತ್ತರ ರಾಜನು ಯಾವಾಗ “ಎದೆಗುಂದಿ”ದನು?
15 ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯ ದಾಳಿಯಿಂದಾಗಿ, ಉತ್ತರ ರಾಜನು “ಎದೆಗುಂದಿ”ದನು ಮತ್ತು 1918ರ ನವೆಂಬರ್ ತಿಂಗಳಿನಲ್ಲಿ ಅಸಮಾಧಾನದಿಂದ ಸೋಲನ್ನು ಒಪ್ಪಿಕೊಂಡನು. IIನೆಯ ವಿಲ್ಹೆಲ್ಮನು ನೆದರ್ಲೆಂಡ್ಸ್ಗೆ ಪಲಾಯನ ಮಾಡಿದನು, ಮತ್ತು ಜರ್ಮನಿಯು ಒಂದು ಪ್ರಜಾಪ್ರಭುತ್ವವಾಗಿ ಪರಿಣಮಿಸಿತು. ಆದರೆ ಉತ್ತರ ರಾಜನು ಇನ್ನೂ ಪೂರ್ತಿಯಾಗಿ ಕೊನೆಗೊಂಡಿರಲಿಲ್ಲ.
ರಾಜನು “ಪರಿಣಾಮಕಾರಿಯಾಗಿ” ಕ್ರಿಯೆಗೈಯುತ್ತಾನೆ
16. ಪ್ರವಾದನೆಗನುಸಾರ, ಉತ್ತರ ರಾಜನು ತನ್ನ ಸೋಲಿನ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸುವನು?
16 “ಅವನು [ಉತ್ತರ ರಾಜನು] ನಿಜವಾಗಿಯೂ ಹಿಂದಿರುಗುವನು ಮತ್ತು ಪವಿತ್ರ ಒಡಂಬಡಿಕೆಯ ವಿರುದ್ಧ ಮತ್ಸರಗೊಳ್ಳುವನು; ಮತ್ತು ಅವನು ಸ್ವದೇಶಕ್ಕೆ ಹಿಂದಿರುಗುವನು ಹಾಗೂ ಅಲ್ಲಿ ಪವಿತ್ರ ಒಡಂಬಡಿಕೆಯನ್ನು ತೊರೆದವರಿಗೆ ಪರಿಗಣನೆಯನ್ನು ತೋರಿಸುವನು.” (ದಾನಿಯೇಲ 11:30ಬಿ, NW) ಹೀಗೆಂದು ದೇವದೂತನು ಪ್ರವಾದಿಸಿದನು, ಮತ್ತು ಅವನು ಹೇಳಿದಂತೆಯೇ ಆಯಿತು.
17. ಅಡಾಲ್ಫ್ ಹಿಟ್ಲರನು ಅಧಿಕಾರಕ್ಕೆ ಬರಲು ಯಾವುದು ಕಾರಣವಾಯಿತು?
17 ಇಸವಿ 1918ರಲ್ಲಿ ಯುದ್ಧವು ಕೊನೆಗೊಂಡ ಬಳಿಕ, ಗೆಲುವನ್ನು ಪಡೆದ ಮಿತ್ರರಾಷ್ಟ್ರಗಳು ಜರ್ಮನಿಯ ಮೇಲೆ ಶಿಕ್ಷಾರೂಪದ ಶಾಂತಿ ಸಂಧಾನವನ್ನು ಸ್ಥಾಪಿಸಿದವು. ಈ ಶಾಂತಿ ಸಂಧಾನದ ಷರತ್ತುಗಳು ಜರ್ಮನ್ ಜನತೆಗೆ ತುಂಬ ಕಠಿನವಾಗಿ ತೋರಿದವು, ಮತ್ತು ಈ ಹೊಸ ಪ್ರಜಾಪ್ರಭುತ್ವವು ಆರಂಭದಿಂದಲೇ ತುಂಬ ದುರ್ಬಲವಾಗಿತ್ತು. ಕೆಲವು ವರ್ಷಗಳ ತನಕ ಜರ್ಮನಿಯು ವಿಪರೀತ ಸಂಕಟದಿಂದ ತತ್ತರಿಸಿತು ಮತ್ತು ಆರ್ಥಿಕ ಹಾಗೂ ಕೈಗಾರಿಕಾ ಕುಸಿತವನ್ನು ಅನುಭವಿಸಿತು. ಇದರ ಫಲಿತಾಂಶವಾಗಿ 60 ಲಕ್ಷ ಜನರು ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಯಿತು. 1930ಗಳ ಆರಂಭದಲ್ಲಿ, ಅಡಾಲ್ಫ್ ಹಿಟ್ಲರನು ಅಧಿಕಾರಕ್ಕೆ ಬರಲು ಪರಿಸ್ಥಿತಿಗಳು ಅನುಕೂಲಕರವಾಗಿದ್ದವು. 1933ರ ಜನವರಿಯಲ್ಲಿ ಅವನು ಅಧ್ಯಕ್ಷ [ಚಾನ್ಸೆಲರ್]ನಾದನು ಹಾಗೂ ಮರುವರ್ಷ ಯಾವುದನ್ನು ನಾಸಿಗಳು ಮೂರನೆಯ ರೈಖ್ ಎಂದು ಕರೆದರೋ ಆ ಸಾಮ್ರಾಜ್ಯದ ಅಧ್ಯಕ್ಷತೆಯನ್ನು ವಹಿಸಿಕೊಂಡನು.b
18. ಹಿಟ್ಲರನು ಹೇಗೆ “ಪರಿಣಾಮಕಾರಿಯಾಗಿ ಕ್ರಿಯೆಗೈದನು?”
18 ಹಿಟ್ಲರನು ಅಧಿಕಾರಕ್ಕೆ ಬಂದ ಕೂಡಲೆ, ಯೇಸು ಕ್ರಿಸ್ತನ ಅಭಿಷಿಕ್ತ ಸಹೋದರರಿಂದ ಪ್ರತಿನಿಧಿಸಲ್ಪಟ್ಟ “ಪವಿತ್ರ ಒಡಂಬಡಿಕೆ”ಯ ಮೇಲೆ ಹಿಂಸಾತ್ಮಕ ರೀತಿಯಲ್ಲಿ ಆಕ್ರಮಣವನ್ನು ಮಾಡಿದನು. (ಮತ್ತಾಯ 25:40) ಹೀಗೆ ಅವನು ಈ ನಿಷ್ಠಾವಂತ ಕ್ರೈಸ್ತರ ವಿರುದ್ಧ “ಪರಿಣಾಮಕಾರಿಯಾಗಿ” ಕ್ರಿಯೆಗೈದನು ಮತ್ತು ಅವರಲ್ಲಿ ಅನೇಕರನ್ನು ಕ್ರೂರವಾಗಿ ಹಿಂಸಿಸಿದನು. ಹಿಟ್ಲರನು ಆರ್ಥಿಕ ಕ್ಷೇತ್ರದಲ್ಲಿ ಮತ್ತು ರಾಜ್ಯಭಾರದ ವಿಚಾರಗಳಲ್ಲಿ ಯಶಸ್ಸನ್ನು ಪಡೆದು, ಆ ಕ್ಷೇತ್ರಗಳಲ್ಲಿಯೂ “ಪರಿಣಾಮಕಾರಿಯಾಗಿ” ಕಾರ್ಯನಡಿಸಿದನು. ಕೆಲವೇ ವರ್ಷಗಳಲ್ಲಿ ಅವನು ಜರ್ಮನಿಯನ್ನು ಜಗತ್ತಿನ ಒಂದು ಗಮನಾರ್ಹ ಶಕ್ತಿಯನ್ನಾಗಿ ಮಾಡಿದನು.
19. ಬೆಂಬಲವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಹಿಟ್ಲರನು ಯಾರೊಂದಿಗೆ ಮೈತ್ರಿ ಸಂಬಂಧವನ್ನು ಬೆಳೆಸಿದನು?
19 ಹಿಟ್ಲರನು “ಪವಿತ್ರ ಒಡಂಬಡಿಕೆಯನ್ನು ತೊರೆದವರಿಗೆ ಪರಿಗಣನೆಯನ್ನು” ತೋರಿಸಿದನು. ಇವರು ಯಾರಾಗಿದ್ದರು? ದೇವರೊಂದಿಗೆ ತಮಗೆ ಒಂದು ಒಡಂಬಡಿಕೆಯ ಸಂಬಂಧವಿದೆಯೆಂದು ಹೇಳಿಕೊಂಡರೂ, ಯೇಸು ಕ್ರಿಸ್ತನ ಶಿಷ್ಯರಾಗಿ ಮುಂದುವರಿಯುವುದನ್ನು ನಿಲ್ಲಿಸಿಬಿಟ್ಟಿದ್ದ ಕ್ರೈಸ್ತಪ್ರಪಂಚದ ಮುಖಂಡರೇ ಇವರಾಗಿದ್ದರು ಎಂಬುದು ಸುಸ್ಪಷ್ಟ. ಯಾರು “ಪವಿತ್ರ ಒಡಂಬಡಿಕೆಯನ್ನು ತೊರೆ”ದರೋ ಅವರನ್ನು ಹಿಟ್ಲರನು ತನಗೆ ಬೆಂಬಲ ನೀಡುವಂತೆ ಕೇಳಿಕೊಂಡನು ಹಾಗೂ ಅದರಲ್ಲಿ ಯಶಸ್ವಿಯಾದನು. ಉದಾಹರಣೆಗಾಗಿ, ಅವನು ರೋಮ್ನಲ್ಲಿನ ಪೋಪ್ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. 1935ರಲ್ಲಿ ಹಿಟ್ಲರನು, ಮಿನಿಸ್ಟ್ರಿ ಫಾರ್ ಚರ್ಚ್ ಅಫೇರ್ಸ್ ಅನ್ನು ರಚಿಸಿದನು. ಇವ್ಯಾಂಜೆಲಿಕಲ್ ಚರ್ಚುಗಳನ್ನು ಸರಕಾರದ ಅಧಿಕಾರದ ಕೆಳಗೆ ತರುವುದೇ ಅವನ ಉದ್ದೇಶಗಳಲ್ಲಿ ಒಂದಾಗಿತ್ತು.
ರಾಜನು “ಸೈನ್ಯ”ವನ್ನು ಕಳುಹಿಸುತ್ತಾನೆ
20. ಉತ್ತರ ರಾಜನು ಯಾವ “ಸೈನ್ಯ”ವನ್ನು ಉಪಯೋಗಿಸಿದನು, ಮತ್ತು ಯಾರ ವಿರುದ್ಧವಾಗಿ?
20 ದೇವದೂತನು ಸರಿಯಾಗಿ ಮುಂತಿಳಿಸಿದ್ದಂತೆಯೇ, ಆ ಕೂಡಲೆ ಹಿಟ್ಲರನು ಯುದ್ಧಕ್ಕೆ ಹೋದನು: “ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ ನಿತ್ಯಹೋಮವನ್ನು ನೀಗಿಸಿ”ಬಿಡುವುದು. (ದಾನಿಯೇಲ 11:31ಎ) ಈ “ಸೈನ್ಯ”ಗಳು, IIನೆಯ ಲೋಕ ಯುದ್ಧದಲ್ಲಿ ದಕ್ಷಿಣ ರಾಜನನ್ನು ಸೋಲಿಸಲಿಕ್ಕಾಗಿ ಉತ್ತರ ರಾಜನು ಉಪಯೋಗಿಸಿದ ಮಿಲಿಟರಿ ಸೇನಾಬಲಗಳಾಗಿದ್ದವು. 1939ರ ಸೆಪ್ಟಂಬರ್ 1ರಂದು, ನಾಸಿ “ಸೈನ್ಯ”ಗಳು ಪೋಲೆಂಡ್ನ ಮೇಲೆ ದಾಳಿಮಾಡಿದವು. ಎರಡು ದಿನಗಳ ತರುವಾಯ, ಪೋಲೆಂಡ್ಗೆ ಸಹಾಯ ಮಾಡುವ ಸಲುವಾಗಿ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಿದವು. ಹೀಗೆ IIನೆಯ ಲೋಕ ಯುದ್ಧವು ಆರಂಭವಾಯಿತು. ಪೋಲೆಂಡ್ ಬೇಗನೆ ಸೋತುಹೋಯಿತು, ಮತ್ತು ತತ್ಕ್ಷಣವೇ ಜರ್ಮನ್ ಸೈನ್ಯಗಳು ಡೆನ್ಮಾರ್ಕ್, ನಾರ್ವೆ, ನೆದರ್ಲೆಂಡ್ಸ್, ಬೆಲ್ಜಿಯಮ್, ಲಕ್ಸೆಂಬರ್ಗ್, ಹಾಗೂ ಫ್ರಾನ್ಸ್ ಅನ್ನು ಸ್ವಾಧೀನಪಡಿಸಿಕೊಂಡವು. “1941ರ ಅಂತ್ಯಭಾಗದಲ್ಲಿ, ನಾಸಿ ಜರ್ಮನಿಯು ಭೂಖಂಡವನ್ನು ಆಳುತ್ತಿತ್ತು” ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುತ್ತದೆ.
21. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಉತ್ತರ ರಾಜನ ಪರಿಸ್ಥಿತಿಯು ಹೇಗೆ ಪ್ರತಿಕೂಲವಾಯಿತು ಮತ್ತು ಇದರ ಫಲಿತಾಂಶವೇನು?
21 ಜರ್ಮನಿ ಹಾಗೂ ರಷ್ಯಾಗಳು, ಸ್ನೇಹ, ಸಹಕಾರ, ಹಾಗೂ ಗಡಿಸ್ಥಾಪನೆಯ ವಿಷಯದಲ್ಲಿ ಮೈತ್ರಿ ಒಪ್ಪಂದಕ್ಕೆ ಸಹಿಹಾಕಿದ್ದವಾದರೂ, 1941ರ ಜೂನ್ 22ರಂದು ಹಿಟ್ಲರನು ಸೋವಿಯಟ್ ಕ್ಷೇತ್ರದ ಮೇಲೆ ದಾಳಿಮಾಡಿದನು. ಈ ಘಟನೆಯಿಂದ ಸೋವಿಯಟ್ ಒಕ್ಕೂಟವು ಬ್ರಿಟನ್ನ ಪಕ್ಷವನ್ನು ಹಿಡಿಯುವಂತಾಯಿತು. ಆರಂಭದಲ್ಲಿ ಜರ್ಮನ್ ಸೈನ್ಯಗಳು ವಿಜಯವನ್ನು ಪಡೆಯುತ್ತಾ ಮುಂದುವರಿದರೂ, ಸೋವಿಯಟ್ ಸೈನ್ಯವು ಪ್ರಬಲವಾಗಿ ಹೋರಾಡುತ್ತಾ ಹೋಯಿತು. 1941ರ ಡಿಸೆಂಬರ್ 6ರಂದು, ಮಾಸ್ಕೊ ನಗರದಲ್ಲಿ ಜರ್ಮನ್ ಸೈನ್ಯವು ಸೋಲನ್ನು ಅನುಭವಿಸಿತು. ಮರುದಿನ, ಜರ್ಮನಿಯ ಮಿತ್ರರಾಷ್ಟ್ರವಾದ ಜಪಾನ್, ಹವಾಯಿಯಲ್ಲಿರುವ ಪರ್ಲ್ ಹಾರ್ಬರ್ಗೆ ಬಾಂಬ್ ಹಾಕಿತು. ಈ ಘಟನೆಯು ಹಿಟ್ಲರನ ಕಿವಿಗೆ ಬಿದ್ದಾಗ, ಅವನು ತನ್ನ ಸೇನಾಧಿಕಾರಿಗಳಿಗೆ ಹೇಳಿದ್ದು: “ಈಗಂತೂ ನಾವು ಯುದ್ಧದಲ್ಲಿ ಸೋಲನ್ನು ಅನುಭವಿಸುವುದೇ ಇಲ್ಲ.” ಡಿಸೆಂಬರ್ 11ರಂದು, ಯಾವುದೇ ಮುಂದಾಲೋಚನೆ ಮಾಡದೆ ಅವನು ಅಮೆರಿಕದ ಮೇಲೆ ಯುದ್ಧವನ್ನು ಘೋಷಿಸಿಬಿಟ್ಟನು. ಆದರೆ ಅವನು ಸೋವಿಯಟ್ ಒಕ್ಕೂಟ ಹಾಗೂ ಅಮೆರಿಕದ ಬಲವನ್ನು ಕಡಿಮೆ ಅಂದಾಜುಮಾಡಿದ್ದನು. ಪೂರ್ವ ದಿಕ್ಕಿನಿಂದ ಸೋವಿಯಟ್ ಸೈನ್ಯವೂ, ಪಶ್ಚಿಮ ದಿಕ್ಕಿನಿಂದ ಬ್ರಿಟನ್ ಹಾಗೂ ಅಮೆರಿಕದ ಸೈನ್ಯಗಳೂ ಸಮೀಪಿಸುತ್ತಿದ್ದುದರಿಂದ, ಅತಿ ಬೇಗನೆ ಹಿಟ್ಲರನ ಪರಿಸ್ಥಿತಿಯು ಪ್ರತಿಕೂಲವಾಯಿತು. ಜರ್ಮನ್ ಸೈನ್ಯಗಳು ಒಂದಾದ ನಂತರ ಇನ್ನೊಂದು ಕ್ಷೇತ್ರವನ್ನು ಕಳೆದುಕೊಳ್ಳತೊಡಗಿದವು. ಹಿಟ್ಲರನು ಆತ್ಮಹತ್ಯೆಮಾಡಿಕೊಂಡ ಬಳಿಕ, 1945ರ ಮೇ 7ರಂದು, ಜರ್ಮನಿಯು ಮಿತ್ರರಾಷ್ಟ್ರಗಳಿಗೆ ಶರಣಾಗತವಾಯಿತು.
22. ಉತ್ತರ ರಾಜನು ಹೇಗೆ ‘ಪವಿತ್ರಾಲಯವನ್ನು ಹೊಲೆಗೆಡಿಸಿ ನಿತ್ಯಹೋಮವನ್ನು ನೀಗಿಸಿ’ಬಿಟ್ಟನು?
22 ಅವರು “[ನಾಸಿ ಸೈನ್ಯಗಳು] ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ ನಿತ್ಯಹೋಮವನ್ನು ನೀಗಿಸಿ”ಬಿಡುವರು ಎಂದು ದೇವದೂತನು ಹೇಳಿದನು. ಪುರಾತನ ಯೆಹೂದದಲ್ಲಿ, ಪವಿತ್ರಸ್ಥಾನವು ಯೆರೂಸಲೇಮಿನಲ್ಲಿರುವ ದೇವಾಲಯದ ಒಂದು ಭಾಗವಾಗಿತ್ತು. ಆದರೂ, ಯೆಹೂದ್ಯರು ಯೇಸುವನ್ನು ತಿರಸ್ಕರಿಸಿದಾಗ, ಯೆಹೋವನು ಅವರನ್ನೂ ಅವರ ದೇವಾಲಯವನ್ನೂ ತಿರಸ್ಕರಿಸಿಬಿಟ್ಟನು. (ಮತ್ತಾಯ 23:37–24:2) ಸಾ.ಶ. ಒಂದನೆಯ ಶತಮಾನದಿಂದ, ಯೆಹೋವನ ಆಲಯವು ಕಾರ್ಯತಃ ಆತ್ಮಿಕ ಆಲಯವಾಗಿದೆ, ಹಾಗೂ ಅದರ ಮಹಾ ಪರಿಶುದ್ಧ ಸ್ಥಳವು ಪರಲೋಕದಲ್ಲಿದೆ. ಅಷ್ಟುಮಾತ್ರವಲ್ಲ, ಮಹಾ ಯಾಜಕನಾದ ಯೇಸುವಿನ ಅಭಿಷಿಕ್ತ ಸಹೋದರರು, ಅದರ ಆತ್ಮಿಕ ಅಂಗಣವಾದ ಭೂಮಿಯ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. 1930ಗಳಿಂದ, “ಮಹಾ ಸಮೂಹ”ದವರು ಅಭಿಷಿಕ್ತ ಉಳಿಕೆಯವರ ಜೊತೆಯಲ್ಲಿ ದೇವರನ್ನು ಆರಾಧಿಸುತ್ತಿದ್ದಾರೆ; ಆದಕಾರಣ, ‘ದೇವರ ಆಲಯ’ದಲ್ಲಿ ಅವರು ಸೇವೆಮಾಡುತ್ತಾರೆ ಎಂದು ಹೇಳಲಾಗುತ್ತದೆ. (ಪ್ರಕಟನೆ 7:9, 15; 11:1, 2; ಇಬ್ರಿಯ 9:11, 12, 24) ಉತ್ತರ ರಾಜನ ಅಧೀನದಲ್ಲಿದ್ದ ದೇಶಗಳಲ್ಲಿ, ಅಭಿಷಿಕ್ತ ಉಳಿಕೆಯವರನ್ನು ಮತ್ತು ಅವರ ಸಂಗಡಿಗರನ್ನು ಕ್ರೂರವಾಗಿ ಹಿಂಸಿಸುವ ಮೂಲಕ, ದೇವರ ಆಲಯದ ಐಹಿಕ ಅಂಗಣವು ಹೊಲೆಮಾಡಲ್ಪಟ್ಟಿತು. ಹಿಂಸೆಯು ಎಷ್ಟು ಉಗ್ರವಾಗಿತ್ತೆಂದರೆ, “ನಿತ್ಯಹೋಮ”ವು—ಯೆಹೋವನ ಹೆಸರಿಗೆ ಸಲ್ಲಿಸುವ ಸಾರ್ವಜನಿಕ ಸ್ತುತಿ ಯಜ್ಞವು—ನಿಲ್ಲಿಸಲ್ಪಟ್ಟಿತು. (ಇಬ್ರಿಯ 13:15) ಆದರೂ, ಭೀಕರ ಹಿಂಸೆಯ ಮಧ್ಯೆಯೂ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಹಾಗೂ ಅವರೊಂದಿಗಿರುವ “ಬೇರೆ ಕುರಿಗಳು,” IIನೆಯ ಲೋಕ ಯುದ್ಧದ ಸಮಯದಲ್ಲಿಯೂ ಸಾರುವ ಕಾರ್ಯವನ್ನು ಮಾಡುತ್ತ ಇದ್ದರು.—ಯೋಹಾನ 10:16.
“ಅಸಹ್ಯವಸ್ತು”ವು ಪ್ರತಿಷ್ಠಿಸಲ್ಪಡುತ್ತದೆ
23. ಪ್ರಥಮ ಶತಮಾನದಲ್ಲಿ “ಅಸಹ್ಯವಸ್ತು”ವು ಯಾವುದಾಗಿತ್ತು?
23 ಎರಡನೆಯ ಲೋಕ ಯುದ್ಧದ ಅಂತ್ಯವು ಸಮೀಪವಾದಾಗ, ದೇವದೂತನು ಮುಂತಿಳಿಸಿದ್ದಂತೆಯೇ ಇನ್ನೊಂದು ಘಟನೆಯು ಸಂಭವಿಸಿತು. ‘[ಅವರು] ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವರು.’ (ದಾನಿಯೇಲ 11:31ಬಿ) ಯೇಸು ಸಹ “ಅಸಹ್ಯವಸ್ತು”ವಿನ ಕುರಿತು ಮಾತಾಡಿದ್ದನು. ಪ್ರಥಮ ಶತಮಾನದಲ್ಲಿ ಇದು, ಯೆಹೂದಿ ದಂಗೆಯನ್ನು ಅಡಗಿಸಲಿಕ್ಕಾಗಿ ಸಾ.ಶ. 66ರಲ್ಲಿ ಯೆರೂಸಲೇಮಿಗೆ ಬಂದ ರೋಮನ್ ಸೈನ್ಯವಾಗಿ ಪರಿಣಮಿಸಿತು.c—ಮತ್ತಾಯ 24:15; ದಾನಿಯೇಲ 9:27.
24, 25. (ಎ) ಆಧುನಿಕ ಸಮಯಗಳಲ್ಲಿ “ಅಸಹ್ಯವಸ್ತು”ವು ಯಾವುದಾಗಿದೆ? (ಬಿ) ಯಾವಾಗ ಮತ್ತು ಹೇಗೆ “ಅಸಹ್ಯವಸ್ತು”ವು ಪ್ರತಿಷ್ಠಿಸಲ್ಪಟ್ಟಿತು?
24 ಆಧುನಿಕ ಸಮಯಗಳಲ್ಲಿ ಯಾವ “ಅಸಹ್ಯವಸ್ತು”ವು ಪ್ರತಿಷ್ಠಿಸಲ್ಪಟ್ಟಿದೆ? ದೇವರ ರಾಜ್ಯದ “ಅಸಹ್ಯ”ಕರ ನಕಲೇ ಇದಾಗಿದೆ ಎಂಬುದು ಸುವ್ಯಕ್ತ. ಇದು, IIನೆಯ ಲೋಕ ಯುದ್ಧವು ತೀವ್ರಗೊಂಡಾಗ, ಅಧೋಲೋಕಕ್ಕೆ ಹೋದ ಅಥವಾ ಲೋಕ ಶಾಂತಿ ಸಂಸ್ಥೆಯೋಪಾದಿ ಅಸ್ತಿತ್ವದಲ್ಲಿಲ್ಲದೇ ಹೋದ ರಕ್ತವರ್ಣದ ಕಾಡುಮೃಗವಾದ ಜನಾಂಗ ಸಂಘವಾಗಿತ್ತು. (ಪ್ರಕಟನೆ 17:8) ಆದರೂ, ಆ “ಮೃಗ”ವು “ಅಧೋಲೋಕದಿಂದ ಏರಿಬರ”ಲಿತ್ತು. 1945ರ ಅಕ್ಟೋಬರ್ 24ರಂದು, ಹಿಂದಿನ ಸೋವಿಯಟ್ ಒಕ್ಕೂಟವೂ ಸೇರಿ 50 ಸದಸ್ಯ ರಾಷ್ಟ್ರಗಳು ವಿಶ್ವ ಸಂಸ್ಥೆಯನ್ನು ಸ್ಥಾಪಿಸಿದಾಗ, ಈ ಮೃಗವು ಮೇಲೇರಿಬಂತು. ಹೀಗೆ, ದೇವದೂತನಿಂದ ಮುಂತಿಳಿಸಲ್ಪಟ್ಟ “ಅಸಹ್ಯವಸ್ತು”ವಾದ ವಿಶ್ವ ಸಂಸ್ಥೆಯು ಪ್ರತಿಷ್ಠಿಸಲ್ಪಟ್ಟಿತು.
25 ಎರಡೂ ಲೋಕ ಯುದ್ಧಗಳ ಸಮಯದಲ್ಲಿ ಜರ್ಮನಿಯು ದಕ್ಷಿಣ ರಾಜನ ಮುಖ್ಯ ಶತ್ರುವಾಗಿತ್ತು ಮತ್ತು ಉತ್ತರ ರಾಜನ ಸ್ಥಾನವನ್ನು ಆಕ್ರಮಿಸಿತ್ತು. ಇನ್ನು ಮುಂದೆ ಆ ಸ್ಥಾನಕ್ಕೆ ಯಾರು ಬರಲಿದ್ದರು?
[ಅಧ್ಯಯನ ಪ್ರಶ್ನೆಗಳು]
a ಈ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.
b ಪವಿತ್ರ ರೋಮನ್ ಸಾಮ್ರಾಜ್ಯವು ಮೊದಲನೆಯ ರೈಖ್ ಆಗಿತ್ತು, ಮತ್ತು ಜರ್ಮನ್ ಸಾಮ್ರಾಜ್ಯವು ಎರಡನೆಯದ್ದಾಗಿತ್ತು.
c ಈ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿರಿ.
ನೀವೇನನ್ನು ಗ್ರಹಿಸಿದಿರಿ?
• ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ, ಯಾವ ಲೋಕ ಶಕ್ತಿಗಳು ಉತ್ತರ ರಾಜನ ಹಾಗೂ ದಕ್ಷಿಣ ರಾಜನ ಸ್ಥಾನಗಳನ್ನು ಪಡೆದುಕೊಂಡವು?
• ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಉತ್ತರ ರಾಜನಿಗೆ ಹೋರಾಟದ ಪರಿಣಾಮವು ಹೇಗೆ ‘ಮೊದಲಿನಂತೆ ಎರಡನೆಯ ಸಲ ಸಂಭವಿಸಲಿಲ್ಲ’?
• ಒಂದನೆಯ ಲೋಕ ಯುದ್ಧದ ಬಳಿಕ, ಹಿಟ್ಲರನು ಹೇಗೆ ಜರ್ಮನಿಯನ್ನು ಜಗತ್ತಿನ ಒಂದು ಗಮನಾರ್ಹ ಶಕ್ತಿಯನ್ನಾಗಿ ಮಾಡಿದನು?
• ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಉತ್ತರ ರಾಜ ಹಾಗೂ ದಕ್ಷಿಣ ರಾಜನ ನಡುವಿನ ಪ್ರತಿಸ್ಪರ್ಧೆಯ ಫಲಿತಾಂಶವು ಏನಾಗಿತ್ತು?
[Chart/Pictures on page 268]
ದಾನಿಯೇಲ 11:27-31ರಲ್ಲಿ ತಿಳಿಸಲ್ಪಟ್ಟಿರುವ ಅರಸರು
ಉತ್ತರ ದಕ್ಷಿಣ
ರಾಜ ರಾಜ
ದಾನಿಯೇಲ 11:27-30ಎ ಜರ್ಮನ್ ಸಾಮ್ರಾಜ್ಯ ಬ್ರಿಟನ್, ಹಾಗೂ
(Iನೆಯ ಲೋಕ ತದನಂತರ ಬರುವ
ಯುದ್ಧ) ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿ
ದಾನಿಯೇಲ 11:30ಬಿ, 31 ಹಿಟ್ಲರನ ಮೂರನೆಯ ಆ್ಯಂಗ್ಲೊ-ಅಮೆರಿಕನ್
ರೈಖ್ (IIನೆಯ ಲೋಕ ಯುದ್ಧ) ಲೋಕ ಶಕ್ತಿ
[ಚಿತ್ರ]
V ನೆಯ ಕಿಂಗ್ ಜಾರ್ಜ್ರೊಂದಿಗೆ ಅಧ್ಯಕ್ಷರಾದ ವುಡ್ರೋ ವಿಲ್ಸನ್
[ಚಿತ್ರ]
ಕೂಟ ಶಿಬಿರಗಳಲ್ಲಿ ಅನೇಕ ಕ್ರೈಸ್ತರು ಹಿಂಸಿಸಲ್ಪಟ್ಟರು
[ಚಿತ್ರ]
ಕ್ರೈಸ್ತಪ್ರಪಂಚದ ಮುಖಂಡರು ಹಿಟ್ಲರನಿಗೆ ಬೆಂಬಲ ನೀಡಿದರು
[ಚಿತ್ರ]
ಆರ್ಚ್ಡ್ಯೂಕ್ ಫರ್ಡಿನ್ಯಾಂಡ್ ಹತ್ಯೆಗೊಳಗಾದ ಮೋಟಾರುವಾಹನ
[ಚಿತ್ರ]
I ನೆಯ ಲೋಕ ಯುದ್ಧದಲ್ಲಿ ಜರ್ಮನ್ ಸೈನಿಕರು
[Picture on page 257]
1945ರಲ್ಲಿ ಯಾಲ್ಟದಲ್ಲಿ, ಬ್ರಿಟಿಷ್ ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್, ಅಮೆರಿಕದ ಅಧ್ಯಕ್ಷ ಫ್ರ್ಯಾಂಕ್ಲಿನ್ ಡಿ. ರೂಸ್ವೆಲ್ಟ್, ಮತ್ತು ಸೋವಿಯಟ್ ಪ್ರಧಾನಿ ಜೋಸೆಫ್ ಸ್ಟ್ಯಾಲಿನ್ ಅವರು, ಜರ್ಮನಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಮಾಡಲು, ಪೋಲೆಂಡ್ನಲ್ಲಿ ಹೊಸ ಸರಕಾರವನ್ನು ರೂಪಿಸಲು, ಹಾಗೂ ವಿಶ್ವ ಸಂಸ್ಥೆಯನ್ನು ಸ್ಥಾಪಿಸಲಿಕ್ಕಾಗಿ ಒಂದು ಸಮ್ಮೇಳನವನ್ನು ನಡೆಸಲು ಒಪ್ಪಿಕೊಂಡರು
[ಪುಟ 369 ರಲ್ಲಿರುವ ಚಿತ್ರಗಳು]
1. ಆರ್ಚ್ಡ್ಯೂಕ್ ಫರ್ಡಿನ್ಯಾಂಡ್ 2. ಜರ್ಮನ್ ನೌಕಾಪಡೆ 3. ಬ್ರಿಟಿಷ್ ನೌಕಾಪಡೆ 4. ಲೂಸಿಟೇನಿಯ 5. ಅಮೆರಿಕದ ಯುದ್ಧ ಘೋಷಣೆ
[ಪುಟ 374 ರಲ್ಲಿರುವ ಚಿತ್ರಗಳು]
ಯುದ್ಧಕಾಲದಲ್ಲಿ ಜರ್ಮನಿಯ ಮಿತ್ರರಾಷ್ಟ್ರವಾಗಿದ್ದ ಜಪಾನ್, ಪರ್ಲ್ ಹಾರ್ಬರಿನ ಮೇಲೆ ಬಾಂಬ್ ಹಾಕಿದಾಗ, ತಮಗೆ ಖಂಡಿತವಾಗಿಯೂ ಜಯ ದೊರಕುವುದು ಎಂಬ ದೃಢಭರವಸೆ ಅಡಾಲ್ಫ್ ಹಿಟ್ಲರನಿಗಿತ್ತು