ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 8 ಕಬ್ಬಿಣ ಮತ್ತು ನೆನೆದ ಜೇಡಿಮಣ್ಣಿನ ಒಂದು ರಾಜಕೀಯ ಮಿಶ್ರಣ
ರಾಷ್ಟ್ರೀಯತೆ: ಒಂದು ರಾಷ್ಟ್ರವನ್ನು ಇತರ ಎಲ್ಲ ರಾಷ್ಟ್ರಗಳಿಗಿಂತ ಮೇಲೆತ್ತುವ ಮತ್ತು ಅದರ ಸಂಸ್ಕೃತಿ ಮತ್ತು ಅಭಿರುಚಿಗಳನ್ನು ಇತರರದ್ದಕ್ಕಿಂತ ಮೊದಲಾಗಿಡುವ ರಾಷ್ಟ್ರೀಯ ಜಾಗೃತಿ; ಈ ವಿಚಾರ 18ನೆಯ ಶತಕಾಂತ್ಯದಲ್ಲಿ ಮೊದಲು ಸ್ಪಷ್ಟವಾಗಿಯಿತಾದರೂ 20ನೆಯ ಶತಕದಲ್ಲಿ ಪರಮಾವಧಿಗೇರಿದೆ.
ಒಂದು ವಿಪತ್ತಿನಿಂದ ಇನ್ನೊಂದಕ್ಕೆ ಸಹಾಯಶೂನ್ಯವಾಗಿ ತತ್ತರಿಸುತ್ತಾ ಮಾನವ ಸರಕಾರಗಳು ಮಾನವ ಸಮಾಜಕ್ಕೆ ಸ್ಥಿರತೆಯನ್ನು ತರಲು ತಪ್ಪುತ್ತಿವೆ. ಅಮೆರಿಕದ ಮಾಜಿ ಅಧ್ಯಕ್ಷ ಜಿಮಿ ಕಾರ್ಟರ್ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಸ್ಬಿಗ್ನ್ಯೂ ಬ್ರೆಸೆನ್ಸ್ಕಿ ಎಂಬವರಿಗನುಸಾರ ಈ ಪರಿಸ್ಥಿತಿ ಬೇಗನೆ ಪರಿವರ್ತನೆ ಹೊಂದದು.
ಬ್ರೆಸೆನ್ಸ್ಕಿ ಮತ್ತು ಇತರ ಲೋಕನಾಯಕರನ್ನು ಜಾರ್ಜಿ ಆ್ಯನ್ ಗೀಯರ್ ಎಂಬ ಪತ್ರಿಕೋದ್ಯೋಗಸ್ಥೆ, 1985ರಲ್ಲಿ “ನಮ್ಮ ಶಿಥಿಲಗೊಳ್ಳುತ್ತಿರುವ ಜಗತ್ತು” ಎಂಬ ಲೇಖನವನ್ನು ತಯಾರಿಸುವಾಗ ಪತ್ರಿಕಾಭೇಟಿ ಮಾಡಿದರು. ಅದರಲ್ಲಿ ಬ್ರೆಸೆನ್ಸ್ಕಿ ಹೀಗೆ ಹೇಳಿದರೆಂದು ಅವರು ಉಲ್ಲೇಖಿಸಿದರು: “ಅಂತರರಾಷ್ಟ್ರೀಯ ಅಸ್ಥಿರತೆಗೆ ಕಾರಣವಾಗಿರುವ ಸಂಗತಿಗಳು, ಹೆಚ್ಚು ವ್ಯವಸ್ಥಾಪಿತ ಸಹಕಾರಕ್ಕೆ ಅನುಕೂಲವಾಗಿ ಕೆಲಸ ಮಾಡುವ ಶಕಿಗ್ತಳಿಗಿಂತ ಮೇಲುಗೈಯನ್ನು ಪಡೆಯುತ್ತಿವೆ. ಭೂವ್ಯಾಪಕ ಪ್ರವೃತ್ತಿಗಳ ಯಾವುದೇ ನಿಷ್ಪಕ್ಷಪಾತದ ವಿಶೇಷ್ಲಣೆಯ ತೀರ್ಮಾನವು, ಸಾಮಾಜಿಕ ಗಲಭೆ, ರಾಜಕೀಯ ಅವಿಶ್ರಾಂತಿ, ಆರ್ಥಿಕ ವಿಪತ್ತು ಮತ್ತು ಅಂತರರಾಷ್ಟ್ರೀಯ ಘರ್ಷಣೆಗಳು ಈ ಶತಮಾನದ ಬಾಕಿ ಉಳಿದಿರುವ ಸಮಯದಲ್ಲಿ ಇನ್ನೂ ಹೆಚ್ಚು ವ್ಯಾಪಕವಾಗುವ ಸಂಭವವಿದೆಯೆಂದು ತೋರಿಸುತ್ತದೆ.”
ಇದು ಮೊಬ್ಬಾದ ಭವಿಷ್ಯವಾಣಿಯೇ ಸರಿ, ಆದರೆ ಬೈಬಲ್ ವಿದ್ಯಾರ್ಥಿಗಳನ್ನು ಇದು ಅಚ್ಚರಿಗೊಳಿಸುವುದಿಲ್ಲ. ಇದೇ ಪರಿಸ್ಥಿತಿಯನ್ನು ದೀರ್ಘಕಾಲಕ್ಕೆ ಮೊದಲೇ ಮುಂತಿಳಿಸಲಾಗಿತ್ತು. ಯಾವಾಗ? ಎಲ್ಲಿ?
ಸ್ವಪ್ನದಿಂದ ಶಾಂತಿಭಂಗ
ಸಾ.ಶ.ಪೂ. 624ರಿಂದ 582ರ ವರೆಗೆ ಬಾಬೆಲಿನ ರಾಜನಾಗಿದ್ದ ನೆಬೂಕದ್ನೆಚ್ಚರನು ಒಂದು ಸ್ವಪ್ನದಿಂದಾಗಿ ಶಾಂತಿಭಂಗಗೊಂಡನು. ಅವನು ಅದರಲ್ಲಿ ಸ್ವರ್ಣಶಿರಸ್ಸು, ಬೆಳ್ಳಿಯ ಎದೆತೋಳುಗಳು, ತಾಮ್ರದ ಹೊಟ್ಟೆಸೊಂಟಗಳು, ಕಬ್ಬಿಣದ ಕಾಲುಗಳು, ಮತ್ತು ಕಬ್ಬಿಣ ಮತ್ತು ಮಣ್ಣು ಮಿಶ್ರಿತ ಪಾದ ಮತ್ತು ಕಾಲ್ಬೆರಳುಗಳನ್ನು ನೋಡಿದನು. ದೇವರ ಪ್ರವಾದಿಯಾದ ದಾನಿಯೇಲನು ನೆಬೂಕದ್ನೆಚ್ಚರನಿಗೆ ವಿಗ್ರಹದ ವಿಶೇಷತೆಯನ್ನು ತಿಳಿಸುತ್ತಾ ಹೇಳಿದ್ದು: “ಅರಸೇ., ನೀನು ರಾಜಾಧಿರಾಜ. . . . ನೀನೇ ಆ ಬಂಗಾರದ ತಲೆ. ನಿನ್ನ ಕಾಲವಾದ ಮೇಲೆ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯವುಂಟಾಗುವದು. ಅನಂತರ ಬೇರೊಂದು ಮೂರನೆಯ ರಾಜ್ಯವು ತಾಮ್ರದ್ದಾಗಿ ತಲೆದೋರಿ ಭೂಮಂಡಲವನ್ನೆಲ್ಲಾ ಆಳುವದು.” ಹೀಗೆ, ಆ ವಿಗ್ರಹಕ್ಕೂ ಮಾನವ ಸರಕಾರಕ್ಕೂ ಸಂಬಂಧವಿದೆಯೆಂಬುದು ವ್ಯಕ್ತ.—ದಾನಿಯೇಲ 2:37-39.
ದಾನಿಯೇಲನ ದಿನಗಳಿಗೆ ಮೊದಲು, ಈಜಿಪ್ಟ್ ಮತ್ತು ಅಸ್ಸೀರಿಯಗಳೆರಡೂ ಬೈಬಲಿನ ಗ್ರಂಥಕರ್ತನು ಆರಿಸಿಕೊಂಡಿದ್ದ ಜನರಾದ ಇಸ್ರಾಯೇಲ್ಯರನ್ನು ಪೀಡಿಸಿದ್ದವು. (ವಿಮೋಚನಕಾಂಡ 19:5) ಬೈಬಲಿನ ಸಂದರ್ಭಾನ್ವಯದಲ್ಲಿ, ಇದು ಅವರನ್ನು ಲೋಕಶಕ್ತಿಗಳನ್ನಾಗಿ, ವಾಸ್ತವವಾಗಿ, ಬೈಬಲಿನಲ್ಲಿ ಹೇಳಿರುವ ಏಳು ಶಕ್ತಿಗಳಲ್ಲಿ ಪ್ರಥಮ ಶಕ್ತಿಯಾಗಿ ಮಾಡಿತು. (ಪ್ರಕಟನೆ 17:10) ಬಳಿಕ, ದಾನಿಯೇಲನ ದಿನಗಳಲ್ಲಿ, ಬಾಬೆಲು ಯೆರೂಸಲೇಮನ್ನು ಸೋಲಿಸಿ ಇಸ್ರಾಯೇಲ್ಯರನ್ನು ದೇಶಭ್ರಷ್ಟರಾಗುವಂತೆ ಮಾಡಿತು. ಹೀಗೆ, ಬಾಬೆಲು ಈ ಲೋಕಶಕ್ತಿಗಳಲ್ಲಿ ಮೂರನೆಯದಾಗಿ ಪರಿಣಮಿಸಿ, “ಬಂಗಾರದ ತಲೆ”ಯೆಂದು ತಕ್ಕದ್ದಾಗಿಯೇ ಸೂಚಿಸಲ್ಪಟ್ಟದ್ದಾಯಿತು. ಬೈಬಲು ಮತ್ತು ಐಹಿಕ ಇತಿಹಾಸ ಮುಂದೆ ಬರಲಿದ್ದ ಲೋಕಶಕ್ತಿಗಳನ್ನು ಮೇದ್ಯ ಪರ್ಸಿಯ, ಗ್ರೀಸ್, ರೋಮ್ ಮತ್ತು ಅಂತಿಮವಾಗಿ ಆ್ಯಂಗ್ಲೋ ಅಮೆರಿಕವೆಂದು ಗುರುತಿಸಿದೆ.a
ಈ ಜನಾಂಗಗಳನ್ನು ಬೈಬಲು ಲೋಕಶಕ್ತಿಗಳನ್ನಾಗಿ ವರ್ಗೀಕರಿಸಿರುವುದು, ಅವು ದೇವಜನರೊಂದಿಗೆ ವ್ಯವಹರಿಸಿ ಈ ದೇವಸೇವಕರು ಸಮರ್ಥಿಸಿದ ದೈವಿಕಾಳಿಕೆಯನ್ನು ವಿರೋಧಿಸಿದ ಕಾರಣದಿಂದಲೇ. ಹೀಗೆ, ನೆಬೂಕದ್ನೆಚ್ಚರನು ನೋಡಿದ ವಿಗ್ರಹ, ಅವನ ರಾಜ್ಯವು ಅಂತ್ಯಗೊಂಡ ಬಳಿಕವೂ ಹೇಗೆ ಮಾನವಾಳಿಕೆ ದೈವಿಕ ಪರಮಾಧಿಕಾರಕ್ಕೆ ವಿರೋಧವಾಗಿ ಮುಂದುವರಿಯುವುದೆಂದು ವ್ಯಕ್ತವಾಗಿ ಚಿತ್ರಿಸಿತು. ವಿಗ್ರಹದ ವಿವಿಧ ಭಾಗಗಳಿಂದ ಚಿತ್ರಿತವಾದ ಲೋಕಶಕ್ತಿಗಳ ಅನುಕ್ರಮವು ಅದರ ತಲೆಯಿಂದಾರಂಭವಾಗಿ ಕೆಳಮುಖವಾಗಿ ಹೋಯಿತು. ಹಾಗಾದರೆ, ದಾನಿಯೇಲನು ಹೇಳಿದಂತೆ, “ಅಂತ್ಯಕಾಲದಲ್ಲಿ” ಇರುವ ಮಾನವಾಳಿಕೆಯ ಅಂತಿಮ ಪ್ರದರ್ಶನವು ಪಾದ ಮತ್ತು ಕಾಲ್ಬೆರಳುಗಳಿಂದ ಚಿತ್ರಿತವಾಗುವುದು ತರ್ಕಸಮ್ಮತ. ಹಾಗಾದರೆ, ನಾವೇನು ಪ್ರತೀಕ್ಷಿಸಬೇಕು?—ದಾನಿಯೇಲ 2:41, 42; 12:4.
‘ಹತ್ತು ಕಾಲ್ಬೆರಳುಗಳು’
ಈಗ ದೇವರ ಸೇವಕರು, ಅವರನ್ನು ಒಂದೇ ಲೋಕಶಕ್ತಿ ಪೀಡಿಸಲಾಗುವಂತೆ, ಒಂದು ರಾಷ್ಟ್ರ ಯಾ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. (ಅಪೊಸ್ತಲರ ಕೃತ್ಯ 1:8; 10:34, 35) ಸಕಲ ರಾಷ್ಟ್ರಗಳ ಸದಸ್ಯರು, ಪ್ರತಿಯೊಂದು ವಿಧದ ಮಾನವ ಸರಕಾರದ ನಾಗರಿಕರು ಆಗಿರುವ ಅವರು, ಅಂತ್ಯಕಾಲ ಆರಂಭವಾಗಿದೆ ಮತ್ತು ಮಾನವಾಳಿಕೆಯ ಅನುಕೂಲ ಕಾಲ ಮುಗಿದದೆ ಮತ್ತು ದೈವಿಕಾಳಿಕೆಯಿಂದ ಬೇಗನೆ ಅದರ ಸ್ಥಾನಭರ್ತಿಯಾಗಲಿದೆ ಎಂದು ಹುರುಪಿನಿಂದ ಪ್ರಕಟಿಸುತ್ತಾರೆ.b ಹೀಗೆ, ಅವರು ಘೋಷಿಸುವ ಧೈರ್ಯದ ಸಂದೇಶ ಈಗಿರುವ ಸಕಲ ರಾಜಕೀಯ ಶಕಿಗ್ತಳಿಗೆ ಎದುರುಬದುರಾಗುತ್ತದೆ. ತಕ್ಕದ್ದಾಗಿಯೆ, ಬೈಬಲು ಉಪಯೋಗಿಸಿರುವ “ಹತ್ತು” ಸಂಖ್ಯೆ ಭೂಸಂಬಂಧವಾದ ವಿಷಯಗಳ ಪೂರ್ಣತೆಯನ್ನು ಸೂಚಿಸುತ್ತದೆ. ಹೀಗೆ, ಅಂತ್ಯ ಸಮಯದಲ್ಲಿ ದೈವಿಕ ಪರಮಾಧಿಕಾರವನ್ನು ಸಂಯುಕ್ತವಾಗಿ ವಿರೋಧಿಸುವ ರಾಜಕೀಯ ಮಾನವಾಳಿಕೆಯ ಮೊತ್ತವನ್ನು ವಿಗ್ರಹದ ಆ ‘ಹತ್ತು ಕಾಲ್ಬೆರಳುಗಳು’ ಪ್ರತಿನಿಧೀಕರಿಸುವುದು ತರ್ಕಸಮ್ಮತ.
ಈ ಮುಂತಿಳಿಸಲ್ಪಟ್ಟ ಸಮಯಾವಧಿಯ ಆರಂಭದಲ್ಲಿ ರಾಜಕೀಯ ಪರಿಸ್ಥಿತಿ ಹೇಗಿತ್ತು? 1800ಗಳಲ್ಲಿ ಯೂರೋಪಿಯನ್ ರಾಷ್ಟ್ರಗಳು ಭೂಮುಖದಲ್ಲಿ 35 ಪ್ರತಿಶತವನ್ನು ತಮ್ಮ ಹತೋಟಿಯೊಳಗೆ ತಂದಿದ್ದವಾದರೂ 1914ರೊಳಗೆ ಈ ಸಂಖ್ಯೆ 84 ಪ್ರತಿಶತಕ್ಕೇರಿತ್ತು! ದ ಕಾಲಿನ್ಸ್ ಆ್ಯಟ್ಲಸ್ ಆಫ್ ವರ್ಲ್ಡ್ ಹಿಸ್ಟರಿ ಗಮನಿಸುವುದು: “1914ರ ಯುದ್ಧಕ್ಕೆ ಪೂರ್ವಭಾವಿಯಾಗಿ, ಅನೇಕ ಮಹಾ ಶಕ್ತಿಗಳ ಮಧ್ಯೆ ಜಗತ್ತಿನ ವಿಂಗಡವು ಅಧಿಕಾಂಶ ಮುಗಿದಿತ್ತು.” ವಾಸ್ತವವಾಗಿ, ಇಂಗ್ಲೆಂಡಿನ ಎಸೆಕ್ಸ್ ವಿಶ್ವವಿದ್ಯಾಲಯದ ಇತಿಹಾಸ ಪ್ರೊಫೆಸರ್, ಹ್ಯೂ ಬ್ರಾಗನ್ ಹೇಳುವುದೇನಂದರೆ, “ಇಡೀ ಲೋಕವು ಅರ್ಧ ಡಜನ್ ಶಕಿಗ್ತಳಿಂದ ಆಳಲ್ಪಡಲು ಹೆಚ್ಚು ಸಮಯವಿರುವುದಿಲ್ಲ” ಎಂಬಂತೆ ಕಂಡುಬಂತು.
“ಅರ್ಧ ಡಜನ್ ಶಕ್ತಿ”ಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿರದ ಲೋಕ ಸರಕಾರಗಳ ಮೊತ್ತವನ್ನು ‘ಹತ್ತು ಕಾಲ್ಬೆರಳು’ಗಳಿಂದ ಸೂಚಿಸುವುದು ನ್ಯಾಯಸಮ್ಮತವೆಂದು ಕಾಣುವುದಿಲ್ಲ. ಆದುದರಿಂದ, ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ, ‘ಹತ್ತು ಕಾಲ್ಬೆರಳು’ಗಳಿಗೆ ನಿಜ ಗಮನಾರ್ಹತೆ ಬರಬೇಕಾದರೆ, 1914ರಲ್ಲಿದ್ದ ರಾಜಕೀಯ ಪರಿಸ್ಥಿತಿ ಬದಲಾವಣೆ ಹೊಂದಬೇಕಾಗಿತ್ತು.
ಜಗತ್ತು ನೋಡಿದ್ದ ಅತ್ಯಂತ ದೊಡ್ಡ ಸಾಮ್ರಾಜ್ಯವಾದ ಬ್ರಿಟಿಷ್ ಸಾಮ್ರಾಜ್ಯ, 1900ಗಳು ಉದಯವಾದಾಗ ಅದು ಭೂಮಿಯ ನಾಲ್ವರಲ್ಲಿ ಒಬ್ಬನನ್ನು ಆಳುತ್ತಿತ್ತು. ಇತರ ಯೂರೋಪಿಯನ್ ಸಾಮ್ರಾಜ್ಯಗಳು ಇತರ ಕೋಟ್ಯಾಂತರ ಜನರನ್ನು ಅಧೀನ ಮಾಡಿದ್ದವು. ಆದರೆ Iನೆಯ ಜಾಗತಿಕ ಯುದ್ಧ ರಾಷ್ಟ್ರೀಯತೆಯ ವಿಜಯದಲ್ಲಿ ಅಂತ್ಯಗೊಂಡಿತು. ಯೇಲ್ ಯೂನಿವರ್ಸಿಟಿಯ ಇತಿಹಾಸದ ಪ್ರೊಫೆಸರ್, ಪೌಲ್ ಕೆನೆಡಿ ವಿವರಿಸುವುದು: “ಪ್ರಾದೇಶಿಕ ಮತ್ತು ನ್ಯಾಯ ವ್ಯಾವಹಾರಿಕ ರೀತಿಯಲ್ಲಿ ಅಳೆಯುವಾಗ, ಯೂರೋಪಿನ ಅತಿ ಗಮನಾರ್ಹ ಬದಲಾವಣೆ—ಪೋಲೆಂಡ್, ಚೆಕಸ್ಲೊವಾಕಿಯ, ಆಸ್ಟ್ರಿಯ, ಹಂಗೆರಿ, ಯುಗೊಸ್ಲಾವಿಯ, ಫಿನ್ಲೆಂಡ್, ಇಸ್ಟಾನಿಯ, ಲ್ಯಾಟಿಯ್ವ, ಮತ್ತು ಲಿತುವೇನಿಯ ಎಂಬ ರಾಷ್ಟ್ರ ಸರಕಾರಗಳು, ಮೊದಲು ಹ್ಯಾಬ್ಸ್ಬರ್ಗ್, ರೋಮನಾಫ್, ಮತ್ತು ಹೋಹೆನ್ಸಾಲೆನ್ ಆಗಿದ್ದ ಸಾಮ್ರಾಜ್ಯಗಳ ಸ್ಥಾನದಲ್ಲಿ ನಿರ್ಗಮನವಾದವು.”
IIನೆಯ ಲೋಕ ಯುದ್ಧ ಕಳೆದ ಮೇಲೆ, ಈ ಪ್ರವೃತ್ತಿ ಹೆಚ್ಚು ವೇಗವಾಗಿ ಮುಂದುವರಿಯಿತು. ರಾಷ್ಟ್ರೀಯತೆ ಪೂರ್ಣ ಶಕಿಯ್ತಿಂದ ಸ್ಫೋಟಗೊಂಡಿತು. ವಿಶೇಷವಾಗಿ 1950ಗಳ ಮಧ್ಯದಿಂದ ಹಿಡಿದರೆ, ಈ ಪ್ರವೃತ್ತಿ ಮಾರ್ಪಡಿಸಲಾಗದ್ದಾಗಿತ್ತು. ಐದು ಶತಮಾನಗಳ ಯೂರೋಪಿಯನ್ ವಿಕಸನ ಪತನಗೊಂಡಿರುವ ವಸಾಹತು ಸಾಮ್ರಾಜ್ಯಗಳ ಚೂರುಪಾರುಗಳಿಂದ ಅಂತ್ಯಗೊಳ್ಳುವುದರಲ್ಲಿತ್ತು. ಆಫ್ರಿಕ, ಏಷ್ಯಾ, ಮತ್ತು ಮಧ್ಯ ಪ್ರಾಚ್ಯದಲ್ಲಿ ರಾಷ್ಟ್ರಗಳ ಸಂಖ್ಯೆ ನಾಟಕೀಯವಾಗಿ ವೃದ್ಧಿಯಾಯಿತು.
ಈ “ವಿಕಸನ, ಹಿಂದಿನ 2,000 ವರ್ಷಗಳಲ್ಲಿ ರಾಜಕೀಯ ವಿಚಾರವನ್ನು ಅಂಕೆಯಲ್ಲಿಟ್ಟಿದ್ದ ಕಲ್ಪನೆಗಳಿಗೆ ವಿರೋಧಾತ್ಮಕವಾಗಿತ್ತು,” ಎನ್ನುತ್ತದೆ ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ. “ಅಷ್ಟರ ವರೆಗೆ ಮಾನವನು ಸರ್ವಸಾಮಾನ್ಯವಾದುದನ್ನು ಮತ್ತು ಸಾರ್ವತ್ರಿಕವಾದುದನ್ನು ಸಾಮಾನ್ಯವಾಗಿ ಒತ್ತಿ ಹೇಳಿ ಐಕ್ಯವು ಅಪೇಕ್ಷಣೀಯ ಗುರಿ,” ಎಂದು ಹೇಳುತ್ತಿದ್ದನು. ಆದರೆ ಈಗ ರಾಷ್ಟ್ರೀಯತೆ ಐಕ್ಯಗೊಳಿಸುವ ಬದಲು ರಾಷ್ಟ್ರೀಯ ವ್ಯತ್ಯಾಸಗಳನ್ನು ಒತ್ತಿಹೇಳಿತು. ಐಕ್ಯಗೊಳಿಸುವ ಬದಲಿಗೆ ಅನೈಕ್ಯಗೊಳಿಸುವ ಪ್ರವೃತ್ತಿ ಅದಕ್ಕಿತ್ತು.
ಕಬ್ಬಿಣ ಮತ್ತು ನೆನೆದ ಜೇಡಿಮಣ್ಣು
ಬೈಬಲು ವಿಗ್ರಹದ ಪಾದ ಮತ್ತು ಕಾಲ್ಬೆರಳುಗಳನ್ನು “ಒಂದಂಶವು ಕುಂಬಾರನ ಮಣ್ಣೂ ಒಂದಂಶವು ಕಬ್ಬಿಣವೂ” ಎಂದು ಕರೆದು, ಕೂಡಿಸಿದ್ದು: “ಆ ರಾಜ್ಯವು ಭಿನ್ನಭಿನ್ನವಾಗಿರುವದು, . . . ಒಂದಂಶವು ಗಟ್ಟಿ ಒಂದಂಶವು ಬೆಂಡು. . . . ಅವು ಒಂದಕ್ಕೊಂದು ಅಂಟಿಕೊಳ್ಳುವದಿಲ್ಲ.” (ದಾನಿಯೇಲ 2:33, 41-43) ಈ ಐಕ್ಯದಲ್ಲಿ ಅಂಟಿಕೊಳ್ಳುವ ಕೊರತೆ ನಿರ್ವಸಾಹತೀಕರಣ ಮುಂದುವರಿದಂತೆ, ರಾಷ್ಟ್ರೀಯತೆ ಸಮೃದ್ಧಿಯಾದಂತೆ, ಮತ್ತು ವಿಕಾಸ ಹೊಂದುತ್ತಿರುವ ದೇಶಗಳು ಉನ್ನತಿಗೊಂಡಂತೆ ಹೆಚ್ಚು ಸ್ಪಷ್ಟವಾಗಿಯಿತು. ಭೂಗೋಲ ವೇಗದಲ್ಲಿ ರಾಜಕೀಯವಾಗಿ ಚೂರಾಗತೊಡಗಿತು.
ವಿಗ್ರಹದ ಪಾದ ಮತ್ತು ಕಾಲ್ಬೆರಳುಗಳಲ್ಲಿದ್ದ ಕಬ್ಬಿಣ ಮತ್ತು ಜೇಡಿಮಣ್ಣಿನ ನೆಮ್ಮದಿಯಿಲ್ಲದ ಮಿಶ್ರಣದಂತೆಯೇ, ಕೆಲವು ಸರಕಾರಗಳು ಕಬ್ಬಿಣಸದೃಶ—ಸರ್ವಾಧಿಕಾರ ಯಾ ಪ್ರಜಾಪೀಡಕ—ವಾಗಿಯೂ ಇನ್ನು ಕೆಲವು ಮಣ್ಣುಸದೃಶ—ಹೆಚ್ಚು ನಮ್ಯ ಯಾ ಪ್ರಜಾಸತ್ತಾತ್ಮಕ—ವಾಗಿಯೂ ಇವೆ. ಅವರು ಲೋಕೈಕ್ಯದಲ್ಲಿ ಅಂಟಿಕೊಳ್ಳಲು ಅಶಕ್ತರಾಗಿದ್ದಾರೆ. ಇದನ್ನು ನಮ್ಮ ದಿನಗಳಲ್ಲಿ ಮೊನಚಾಗಿ ಹೇಳುತ್ತಾ, ಜರ್ಮನ್ ಪುಸ್ತಕವಾದ ‘ನಮ್ಮ ಲೋಕ—ನಿನ್ನೆ, ಇಂದು, ನಾಳೆ; 1800-2000’ ಹೇಳುವುದು: “19ನೆಯ ಶತಮಾನದೊಳಗೆ, ಸುಮಾರಾಗಿ ಎಲ್ಲ ಸಂಸ್ಕರಿತ ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಜಾರಿಯಲ್ಲಿತ್ತು, ಮತ್ತು Iನೆಯ ಲೋಕ ಯುದ್ಧದ ಅಂತ್ಯದೊಳಗೆ, ಸ್ವಾತಂತ್ರ್ಯದ ಉದ್ದೇಶ ಅಂತಿಮ ವಿಜಯವನ್ನು ಸಮೀಪಿಸುತ್ತಿತ್ತೆಂಬಂತೆ ತೋರಿತು. . . . 1917ರಲ್ಲಿ ರಷ್ಯದ ಕ್ರಾಂತಿಯಿಂದ, ನಿರಂಕುಶ ಪ್ರಭುತ್ವ ಹೊಸದಾಗಿ ಎದ್ದು ನಿಂತಿತು. ಅಂದಿನಿಂದ ಇಪ್ಪತ್ತನೆಯ ಶತಮಾನ, ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವಗಳ ಮಧ್ಯೆ ಶಾಂತಿಯ ಕೂಡುಬದುಕು ಮತ್ತು ಅಭಿಮುಖತೆ—ಇವುಗಳಿಂದ ವರ್ಣಿತವಾಗಿದೆ.”—ಒತ್ತು ನಮ್ಮದು.
ಜನಶಕ್ತಿ
‘ಹತ್ತು ಕಾಲ್ಬೆರಳುಗಳು’ ಆಳಿಕೆಯ ಸಮಯದಲ್ಲಿ, ಸಾಮಾನ್ಯ ಜನರು, “ಸಂತತಿ” [“ಮಾನವಕುಲದ ಸಂತತಿ”, NW] ಸರಕಾರಗಳಲ್ಲಿ ಹೆಚ್ಚೆಚ್ಚಾಗಿ ಸೇರಿಕೊಳ್ಳುತ್ತಾರೆಂಬುದನ್ನೂ ಗಮನಿಸಿರಿ. ಈ ಭವಿಷ್ಯ ನುಡಿಯನ್ನು ಐತಿಹಾಸಿಕ ನಿಜತ್ವಗಳು ಬೆಂಬಲಿಸುತ್ತವೆಯೆ?—ದಾನಿಯೇಲ 2:43.
ಸರ್ವಾಧಿಕಾರಗಳು ಲೋಕದ ವಿಭಿನ್ನ ಭಾಗಗಳಲ್ಲಿ 1920 ಮತ್ತು 1930ಗಳಲ್ಲಿ ಪ್ರಜಾಪ್ರಭುತ್ವ ಸರಕಾರಗಳ ಸ್ಥಾನದಲ್ಲಿ ಬಂದಿದ್ದರೂ, ಪ್ರಜಾಪ್ರಭುತ್ವ, ಅಂದರೆ ಜನರಿಂದ ಸರಕಾರ, Iನೆಯ ಲೋಕ ಯುದ್ಧವಾದೊಡನೆ ವಿಪರೀತವಾಗಿ ಜನಪ್ರಿಯವಾಗಿತ್ತು. IIನೆಯ ಲೋಕ ಯುದ್ಧದ ಬಳಿಕ, ನಿರ್ವಸಾಹತೀಕರಣ ಪುನಃ ಅನೇಕ ಹೊಸ ಪ್ರಜಾಪ್ರಭುತ್ವಗಳನ್ನು ಉಂಟುಮಾಡಿತು. ಆದರೂ ತರುವಾಯ, 1960 ಮತ್ತು 1970ಗಳಲ್ಲಿ, ಅನೇಕ ಮೊದಲಿನ ವಸಾಹತುಗಳು ಹೆಚ್ಚು ನಿರಂಕುಶ ರೀತಿಯ ಸರಕಾರಗಳನ್ನು ಆಯ್ದುಕೊಂಡವು.
ಆದರೂ, ಇಪ್ಪತ್ತನೆಯ ಶತಮಾನದಲ್ಲಿರುವ ಪ್ರವೃತ್ತಿ, ರಾಜ ಪ್ರಭುತ್ವ ಮತ್ತು ನಿರಂಕುಶ ಪ್ರಭುತ್ವಗಳನ್ನು ತೆಗೆದು ಪ್ರಜಾಪ್ರಭುತ್ವ ಯಾ ಜನರ ಸರಕಾರದಿಂದ ಸ್ಥಾನಭರ್ತಿ ಮಾಡುವುದೆ. ಕಳೆದ ವರ್ಷದ ಪೂರ್ವ ಯೂರೋಪಿನಲ್ಲಿ ನಡೆದ ರಾಜಕೀಯ ವಿಪ್ಲವಗಳನ್ನು ಟೈಮ್ ಪತ್ರಿಕೆ “ಜನತೆಯ ವರ್ಷ” ಎಂದು ಹೇಳಿ ವರ್ಣಿಸಿತು. ಮತ್ತು ಬರ್ಲಿನ್ ಗೋಡೆ ಕೊನೆಗೆ ಬಿದ್ದಾಗ, ಜರ್ಮನ್ ಪತ್ರಿಕೆ ಡರ್ ಸ್ಪೈಗೆಲ್ ತನ್ನ ಮುಖಪುಟವನ್ನು “ಜನತೆಗೆ ವಿಜಯ” ಎಂದು ಹೇಳಿ ಪ್ರಕಟಿಸಿತು!
ಉದ್ದ ಮಾತು, ಕಡಮೆ ಕೆಲಸ
ಜನಶಕ್ತಿಯು ರಾಜಕೀಯ ಸುಧಾರಣೆಯನ್ನು ತಂದಿರುವ ಪೂರ್ವ ಯೂರೋಪಿಯನ್ ದೇಶಗಳಲ್ಲಿ, ಅನೇಕ ರಾಜಕೀಯ ಪಕ್ಷಗಳು ಭಾಗವಹಿಸುವಂಥ ಸ್ವತಂತ್ರ ಚುನಾವಣೆ ತಮಗೆ ಬೇಕೆಂದು ಅವರ ಕೇಳಿಕೆಯಾಗಿತ್ತು. ರಾಜಕೀಯ ಪಕ್ಷಗಳು ತಮ್ಮ ಪ್ರಸ್ತುತದ ರೂಪದಲ್ಲಿ, 19ನೆಯ ಶತಮಾನದಲ್ಲಿ ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಆರಂಭಗೊಂಡವು. ಇಪ್ಪತ್ತನೆಯ ಶತಕದ ಮಧ್ಯದಿಂದಾರಂಭವಾಗಿ ಅವು ಲೋಕದಾದ್ಯಂತ ಹರಡಿವೆ. ಇಂದು, ಅವು ಹಿಂದೆಂದಿಗಿಂತಲೂ ಹೆಚ್ಚು ದೊಡ್ಡದಾದ, ಹೆಚ್ಚು ಬಲಾಢ್ಯವಾದ ಮತ್ತು ಹೆಚ್ಚು ಉತ್ತಮವಾಗಿ ವ್ಯವಸ್ಥಾಪಿತವಾದ ಪಕ್ಷಗಳಾಗಿವೆ. ಇವುಗಳ ಮೂಲಕ ಮತ್ತು ಲೇಬರ್ ಯೂನಿಯನ್, ಪ್ರಭಾವ ಬೀರುವ ಗುಂಪುಗಳು, ಪರಿಸರ ಗುಂಪುಗಳು, ಮತ್ತು ಅಸಂಖ್ಯಾತ ಇತರ ಪೌರ ಮತ್ತು ವಿಶೇಷಾಭಿರುಚಿ ಗುಂಪುಗಳ ಮೂಲಕ, ಜನಶಕ್ತಿ ಈಗ ಹಿಂದೆಂದಿಗಿಂತಲೂ ಹೆಚ್ಚು ಬಾರಿ ಮತ್ತು ಗಟ್ಟಿಯಾಗಿ ಮಾತನಾಡುತ್ತಾ ಇದೆ.
ರಾಜಕೀಯ ಕಾರ್ಯಗತಿಯಲ್ಲಿ ಒಳಗೊಂಡಿರುವ ಜನರ ಸಂಖ್ಯೆ ಹೆಚ್ಚಾಗುವಾಗ, ಒಂದು ರಾಜಕೀಯ ಒಮ್ಮತವನ್ನು ಮುಟ್ಟುವ ಸಮಸ್ಯೆಯೂ ದೊಡ್ಡದಾಗುತ್ತದೆ. ಅನೇಕಾನೇಕ ವಿರೋಧಾತ್ಮಕ ಅಭಿಪ್ರಾಯಗಳ ಮತ್ತು ಅಭಿರುಚಿಗಳ ಮಧ್ಯೆ, ಅನೇಕ ವೇಳೆ ಅಲ್ಪಸಂಖ್ಯಾತರ ಸರಕಾರಗಳು ಬಂದು, ಅವು ಉದ್ದ ಮಾತು, ಕಡಮೆ ಕೆಲಸ ಮಾಡುವ ಚಲಿಸಲಾಗದ ಸರಕಾರಗಳಾಗುತ್ತವೆ.
ಕಬ್ಬಿಣ ಮತ್ತು ನೆನೆದ ಜೇಡಿಮಣ್ಣು, ಅಂದರೆ, 1914ರಿಂದ ಹಿಡಿದು ಇರುವ ಪೂರ್ತಿ ಭೂಗೋಲಿಕ ರಾಜಕೀಯ ಮಿಶ್ರಣ ಭಿದುರವಾಗಿದೆ. ಉದಾಹರಣೆಗೆ, ಸರಕಾರದ ವಿಚಾರಗಳಲ್ಲಿ ದೈವಿಕ ಮಾರ್ಗದರ್ಶನಕ್ಕೆ ಜನರು ಬೇಡಿಕೊಳ್ಳುತ್ತಿದ್ದ ಕಾಲ ಈಗ ಹೋಗಿದೆ. “ಹೀಗೆ ಪಾಶ್ಚಿಮಾತ್ಯ ನಾಗರಿಕತೆಯ ಜನ ಈಗ ತಮ್ಮ ಜವಾಬ್ದಾರಿಕೆಗೇ ಬಿಡಲ್ಪಟ್ಟಿದ್ದಾರೆ, ಮತ್ತು ಅದರಲ್ಲಿ ಅವರಿಗೆ ಕೊರತೆಯಿದೆ ಎಂದು ಅವರು ಕಂಡುಕೊಂಡಿದ್ದಾರೆ,” ಎಂದು ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ತೀರ್ಮಾನಿಸುತ್ತದೆ.
ಆಶಾವಾದಕ್ಕೆ ಎಡೆ?
“ಈ ಎಲ್ಲ ಭಿನ್ನವಾದ ಆದರೂ ಸಂಬಂಧಿತ ವಿಕಸನಗಳು ಈ ಇಪ್ಪತ್ತನೆಯ ಶತಮಾನದ ಅಪರಾರ್ಧದಲ್ಲಿ ಏಕೆ ಕೂಡಿ ಬರಬೇಕು? ಲೋಕ ಛಿದ್ರವಾಗುವ ಈ ಬೆದರಿಕೆಗಳು, ಮನುಷ್ಯನು ಹಿಂದಿನ ಇತಿಹಾಸದಲ್ಲೇ ಮಾಡಿರದ ವೈಜ್ಞಾನಿಕ ಸಂಶೋಧನೆಗಳನ್ನು ಸಾಧಿಸಿರುವ ಈ ಶಕದಲ್ಲಿಯೆ ನಿಷ್ಕೃಷ್ಟವಾಗಿ ಏಕೆ ಎದ್ದು ಬಂದಿವೆ?” ಪತ್ರಿಕೋದ್ಯೋಗಸ್ಥೆ ಗೀಯರ್ ಹಾಕಿದ ಈ ಪ್ರಶ್ನೆಗಳು ಚಿಂತನೆ ಉದ್ದೀಪಕವಾಗಿವೆ. ಆದರೆ ಇವುಗಳಿಗೆ ಉತ್ತರ ಯಾವನೊಂದಿಗಾದರೂ ಇದೆಯೆ?
ಸುಮಾರು ಹತ್ತು ವಷಗಳಿಗೆ ಮೊದಲು, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಆಶಾವಾದಿಯಾಗಿ ಗಮನಿಸಿದ್ದು: “ನಮ್ಮ ಸಮಯಗಳ ಸಮಸ್ಯೆಗಳನ್ನು ಬಗೆಹರಿಸಲು ನಮಗೆ, ಹಿಂದಿನ ಯಾವ ತಲೆಮೊರೆಗಿಂತಲೂ ಹೆಚ್ಚಿನ ಅವಕಾಶ ಪ್ರಾಯಶಃ ಇದೆ.” ಆದರೆ ಈಗ, ಒಂದು ದಶಕ ಕಳೆದ ಬಳಿಕ, 1990ಗಳ ಆರಂಭದಲ್ಲಿ, ಇಂಥ ಆಶಾವಾದಕ್ಕೆ ಇನ್ನೂ ಅವಕಾಶವಿದೆಯೆ? ಶೀತಲ ಯುದ್ಧ ಮುಗಿದಿರುವುದಕ್ಕೆ, ಪೂರ್ವ ಮತ್ತು ಪಶ್ಚಿಮಗಳ ಮಧ್ಯೆ ಇರುವ ಹೆಚ್ಚಿನ ಸಹಕಾರಕ್ಕೆ, ಮತ್ತು ಜಗತ್ತಿನ ನಿರಸ್ತ್ರೀಕರಣದ ಸಂಬಂಧದಲ್ಲಿ ಮಾಡಿರುವ ಗಣನೀಯ ಪ್ರಗತಿಯ ಕಡೆಗೆ ಕೈ ತೋರಿಸುತ್ತಾ ನೀವು, ‘ಹೌದು’ ಎಂದು ಹೇಳೀರಿ.
ಅವರು ಹಾಗೆ ಮಾಡುವರೆಂದು ಬೈಬಲು ಮುಂತಿಳಿಸಿತ್ತು. ಬೈಬಲ್ ಇತಿಹಾಸದ ಏಳನೆಯ ಲೋಕಶಕ್ತಿಯ ಆಳಿಕೆಯ ಸಮಯದಲ್ಲಿ, ಒಂದು ಸಮಕಾಲಿಕ ಎಂಟನೆಯ ಶಕ್ತಿಯನ್ನು ನಿರ್ದಿಷ್ಟವಾಗಿ ರಾಷ್ಟ್ರಗಳನ್ನು ಒಂದುಗೂಡಿಸುವ ಉದ್ದೇಶದಿಂದ ಸ್ಥಾಪಿಸಲಾಗುವುದು ಎಂದು ಅದು ಸೂಚಿಸುತ್ತದೆ. (ಪ್ರಕಟನೆ 17:11) ಆದರೆ ಅದು ಸಫಲಗೊಳ್ಳುವುದೆ? “ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು” ಎಂಬುದರ 9ನೆಯ ಭಾಗ ಇದಕ್ಕೆ ಉತ್ತರ ನೀಡುವುದು. (g90 11/22)
[ಅಧ್ಯಯನ ಪ್ರಶ್ನೆಗಳು]
a ಬೈಬಲ್ ಇತಿಹಾಸದ ಈ ಲೋಕಶಕ್ತಿಗಳನ್ನು ಒಂದೊಂದಾಗಿ ದ ವಾಚ್ಟವರ್ ಪತ್ರಿಕೆ ಸ್ವಲ್ಪ ಮಟ್ಟಿಗೆ ತನ್ನ ಫೆಬ್ರವರಿ 1ರಿಂದ ಜೂನ್ 1988ರ ಸಂಚಿಕೆಗಳಲ್ಲಿ ಚರ್ಚಿಸಿದೆ.
b ಬೈಬಲಿನ ರುಜುವಾತಿಗಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ, 1990ರಲ್ಲಿ ಪ್ರಕಟಿಸಿದ ಪುಸ್ತಕದ 16 ಮತ್ತು 18ನೆಯ ಅಧ್ಯಾಯಗಳನ್ನು ನೋಡಿ.
[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ಹಾಳಾಗುವದು.”—ಮತ್ತಾಯ 12:25
[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಜನಾಂಗಗಳು ಕಳವಳಗೊಂಡವು, ರಾಜ್ಯಗಳು ತತ್ತರಿಸಿದವು.”—ಕೀರ್ತನೆ 46:6