ಪರಿಶಿಷ್ಟ
ಯೇಸು ಕ್ರಿಸ್ತನು—ವಾಗ್ದತ್ತ ಮೆಸ್ಸೀಯನು
ಮೆಸ್ಸೀಯನನ್ನು ಗುರುತಿಸಲು ನಮಗೆ ಸಹಾಯಮಾಡಲಿಕ್ಕಾಗಿ ಅನೇಕ ಮಂದಿ ಬೈಬಲ್ ಪ್ರವಾದಿಗಳು ಆ ವಾಗ್ದತ್ತ ವಿಮೋಚಕನ ಜನನ, ಶುಶ್ರೂಷೆ ಮತ್ತು ಮರಣದ ಕುರಿತು ವಿವರಗಳನ್ನು ಒದಗಿಸುವಂತೆ ಯೆಹೋವ ದೇವರು ಅವರನ್ನು ಪ್ರೇರಿಸಿದನು. ಈ ಬೈಬಲ್ ಪ್ರವಾದನೆಗಳೆಲ್ಲವೂ ಯೇಸು ಕ್ರಿಸ್ತನಲ್ಲಿ ನೆರವೇರಿದವು. ಅವು ಬೆರಗುಗೊಳಿಸುವಷ್ಟು ನಿಷ್ಕೃಷ್ಟವೂ ಸವಿವರವೂ ಆಗಿವೆ. ಇದನ್ನು ದೃಷ್ಟಾಂತಿಸಲಿಕ್ಕಾಗಿ, ಮೆಸ್ಸೀಯನ ಜನನ ಮತ್ತು ಬಾಲ್ಯದ ಬಗ್ಗೆ ಮುಂತಿಳಿಸಲಾದ ಕೆಲವು ಪ್ರವಾದನೆಗಳನ್ನು ನಾವು ಪರಿಗಣಿಸೋಣ.
ಮೆಸ್ಸೀಯನು ಅರಸ ದಾವೀದನ ವಂಶಜನಾಗಿರುವನೆಂದು ಪ್ರವಾದಿ ಯೆಶಾಯನು ಮುಂತಿಳಿಸಿದನು. (ಯೆಶಾಯ 9:7) ಯೇಸು ವಾಸ್ತವದಲ್ಲಿ ದಾವೀದನ ವಂಶದಲ್ಲೇ ಜನಿಸಿದನು.—ಮತ್ತಾಯ 1:1, 6-17.
ದೇವರ ಇನ್ನೊಬ್ಬ ಪ್ರವಾದಿಯಾದ ಮೀಕನು, ಈ ಮಗು ಕಟ್ಟಕಡೆಗೆ ಒಬ್ಬ “ಆಳತಕ್ಕವನು” ಆಗುವನೆಂದು ಮತ್ತು ಅವನು ‘ಎಫ್ರಾತದ ಬೇತ್ಲೆಹೇಮ್’ನಲ್ಲಿ ಜನಿಸುವನೆಂದು ಮುಂತಿಳಿಸಿದನು. (ಮೀಕ 5:2) ಯೇಸುವಿನ ಜನನದ ಸಮಯದಲ್ಲಿ, ಇಸ್ರಾಯೇಲಿನಲ್ಲಿ ಬೇತ್ಲೆಹೇಮ್ ಎಂಬ ಹೆಸರಿನ ಎರಡು ಪಟ್ಟಣಗಳಿದ್ದವು. ಒಂದು, ದೇಶದ ಉತ್ತರ ಭಾಗದಲ್ಲಿದ್ದ ನಜರೇತಿನ ಬಳಿ ಇತ್ತು, ಮತ್ತು ಇನ್ನೊಂದು ಯೆಹೂದದಲ್ಲಿದ್ದ ಯೆರೂಸಲೇಮಿನ ಹತ್ತಿರದಲ್ಲಿತ್ತು. ಯೆರೂಸಲೇಮಿನ ಸಮೀಪದಲ್ಲಿದ್ದ ಬೇತ್ಲೆಹೇಮ್ನ ಮುಂಚಿನ ಹೆಸರು ಎಫ್ರಾತ ಎಂದಾಗಿತ್ತು. ಆ ಪ್ರವಾದನೆ ಮುಂತಿಳಿಸಿದಂತೆಯೇ ಯೇಸು ಆ ಪಟ್ಟಣದಲ್ಲೇ ಜನಿಸಿದನು!—ಮತ್ತಾಯ 2:1.
ದೇವಕುಮಾರನು ‘ಐಗುಪ್ತದಿಂದ ಕರೆಯಲ್ಪಡುವನು’ ಎಂದು ಇನ್ನೊಂದು ಪ್ರವಾದನೆ ಮುಂತಿಳಿಸಿತ್ತು. ಯೇಸು ಮಗುವಾಗಿದ್ದಾಗ ಐಗುಪ್ತಕ್ಕೆ ಕರೆದೊಯ್ಯಲ್ಪಟ್ಟಿದ್ದನು. ಹೆರೋದನ ಮರಣಾನಂತರ ಅವನನ್ನು ಹಿಂದೆ ಕರೆತರಲಾಯಿತು ಮತ್ತು ಹೀಗೆ ಆ ಪ್ರವಾದನೆ ನೆರವೇರಿತು.—ಹೋಶೇಯ 11:1; ಮತ್ತಾಯ 2:15.
ಪುಟ 200ರ ತಖ್ತೆಯಲ್ಲಿ, “ಪ್ರವಾದನೆ” ಎಂಬ ಮೇಲ್ಬರಹದ ಕೆಳಗೆ ಪಟ್ಟಿಮಾಡಲಾಗಿರುವ ಶಾಸ್ತ್ರವಚನಗಳು ಮೆಸ್ಸೀಯನ ಕುರಿತಾದ ವಿವರಗಳನ್ನು ಒಳಗೊಂಡಿವೆ. ಇವನ್ನು “ನೆರವೇರಿಕೆ” ಎಂಬ ಮೇಲ್ಬರಹದ ಕೆಳಗೆ ಕೊಡಲಾಗಿರುವ ಶಾಸ್ತ್ರವಚನಗಳೊಂದಿಗೆ ದಯವಿಟ್ಟು ಸರಿಹೋಲಿಸಿರಿ. ಹಾಗೆ ಮಾಡುವುದು ದೇವರ ವಾಕ್ಯದ ಸತ್ಯತೆಯಲ್ಲಿ ನಿಮಗಿರುವ ನಂಬಿಕೆಯನ್ನು ಇನ್ನೂ ಬಲಪಡಿಸುವುದು.
ನೀವು ಈ ಶಾಸ್ತ್ರವಚನಗಳನ್ನು ಪರೀಕ್ಷಿಸುವಾಗ, ಅವುಗಳಲ್ಲಿ ಪ್ರವಾದನಾತ್ಮಕ ರೂಪದವುಗಳು ಯೇಸುವಿನ ಜನನಕ್ಕೆ ನೂರಾರು ವರುಷಗಳಿಗೆ ಮುನ್ನ ಬರೆಯಲ್ಪಟ್ಟವುಗಳು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಯೇಸು ಹೇಳಿದ್ದು: “ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯ.” (ಲೂಕ 24:44) ನಿಮ್ಮ ಸ್ವಂತ ಬೈಬಲಿನಲ್ಲಿ ನೀವು ಪರೀಕ್ಷಿಸಲು ಸಾಧ್ಯವಿರುವಂತೆ, ಅವು ನಿಜವಾಗಿಯೂ ನೆರವೇರಿದವು—ಹೌದು, ಪ್ರತಿಯೊಂದು ವಿವರವೂ ನೆರವೇರಿತು!