ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡಿರಿ
“ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ.”—ಯೋವೇಲ 3:14.
1. ಯೆಹೋವನಿಂದ ಘೋಷಿಸಲ್ಪಟ್ಟ ಬರಲಿರುವ ಪವಿತ್ರ ಯುದ್ಧವು ಮಾನವ ಕುಲದ “ಪವಿತ್ರ” ಯುದ್ಧಗಳಿಗಿಂತ ಏಕೆ ಬೇರೆಯಾಗಿರುವುದು?
“ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ—ಜನಾಂಗಗಳೇ, ಸನ್ನದ್ಧರಾಗಿರಿ [ಯುದ್ಧವನ್ನು ಪವಿತ್ರೀಕರಿಸಿರಿ!” NW].” (ಯೋವೇಲ 3:9) ಒಂದು ಪವಿತ್ರ ಯುದ್ಧವೆಂದು ಇದರ ಅರ್ಥವೋ? ಕ್ರೈಸ್ತ ಪ್ರಪಂಚವು ಪ್ರಧಾನ ಪಾತ್ರವನ್ನು ವಹಿಸಿದ್ದ—ದಂಡ ಯಾತ್ರೆಗಳು, ಧಾರ್ಮಿಕ ಯುದ್ಧಗಳು ಮತ್ತು ಎರಡು ಜಾಗತಿಕ ಯುದ್ಧಗಳನ್ನು ಹಿನ್ನೋಡುವಲ್ಲಿ, “ಪವಿತ್ರ” ಯುದ್ಧದ ಕುರಿತು ಕೇವಲ ನೆನಸುವುದು ಸಹ ನಮ್ಮನ್ನು ಭಯದಿಂದ ನಡುಗಿಸಬಹುದು. ಆದರೂ ಯೋವೇಲನ ಪ್ರವಾದನೆಯ ಪವಿತ್ರ ಯುದ್ಧವು ಜನಾಂಗಗಳ ನಡುವಣ ಯುದ್ಧವಲ್ಲ. ಧರ್ಮವನ್ನು ನೆವವಾಗಿ ಉಪಯೋಗಿಸುತ್ತಾ ಕ್ಷೇತ್ರಕ್ಕಾಗಿ ಅಥವಾ ಸೊತ್ತುಗಳಿಗಾಗಿ ದ್ವೇಷಭರಿತ ಹೋರಾಟವು ಅದಲ್ಲ. ಅದೊಂದು ನೀತಿಯ ಯುದ್ಧ. ದುರಾಶೆ, ಕಲಹ, ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯನ್ನು ಭೂಮಿಯಿಂದ ನಿರ್ಮೂಲಗೊಳಿಸುವ ದೇವರ ಯುದ್ಧವು ಅದಾಗಿದೆ. ಅದು ಯೆಹೋವನ ಸೃಷ್ಟಿಯ ಇಡೀ ಕ್ಷೇತ್ರದ ಮೇಲೆ ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸುವುದು. ಆ ಯುದ್ಧವು ದೇವರ ಪ್ರವಾದಿಗಳಿಂದ ಮುಂತಿಳಿಸಲ್ಪಟ್ಟ ಸಾರ್ವತ್ರಿಕ ಶಾಂತಿ, ಸಮೃದ್ಧಿ ಮತ್ತು ಸಂತೋಷದ ಸಹಸ್ರ ವರ್ಷವನ್ನು ಮಾನವರಿಗಾಗಿ ತರುವ ಕ್ರಿಸ್ತನ ರಾಜ್ಯಕ್ಕೆ ದಾರಿಯನ್ನು ಸಿದ್ಧಮಾಡುವುದು.—ಕೀರ್ತನೆ 37:9-11; ಯೆಶಾಯ 65:17, 18; ಪ್ರಕಟನೆ 20:6.
2, 3. (ಎ) ಯೋವೇಲ 3:14 ರಲ್ಲಿ ಪ್ರವಾದಿಸಲ್ಪಟ್ಟ “ಯೆಹೋವನ ದಿನ” ಯಾವುದು? (ಬಿ) ಆ ದಿನದಲ್ಲಿ ಜನಾಂಗಗಳು ಏನನ್ನು ಎದುರಿಸಲಿಕ್ಕಿವೆಯೋ ಅದಕ್ಕೆ ಅವರು ಅರ್ಹರು ಏಕೆ?
2 ಹೀಗಿರಲಾಗಿ ಯೋವೇಲ 3:14 ರಲ್ಲಿ ಮುಂತಿಳಿಸಿಲ್ಪಟ್ಟ “ಯೆಹೋವನ ದಿನ” ಎಂದರೇನು? ಯೆಹೋವನು ತಾನೇ ಉದ್ಗರಿಸುವುದು, “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನ ದಿನವಾಗಿಯೇ ಬರುವುದು.” ಅದು ನಾಶಕರವಾಗಿರುವುದು ಹೇಗೆ? ಪ್ರವಾದಿಯು ಅನಂತರ ವಿವರಿಸುವುದು: “ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ.” (ಯೋವೇಲ 1:15; 3:14) ಆ ದಿನವು ಭೂಪರಲೋಕಗಳ ಮೇಲೆ ಆತನ ನ್ಯಾಯವುಳ್ಳ ಪರಮಾಧಿಕಾರವನ್ನು ತಿರಸ್ಕರಿಸುವ ಭಕ್ತಿಹೀನ ಮಾನವ ಗುಂಪುಗಳ ಮೇಲೆ ನ್ಯಾಯ ತೀರ್ಪನ್ನು ನಿರ್ವಹಿಸುವ ದಿನವಾಗಿರುತ್ತದೆ. ಮಾನವ ಕುಲವನ್ನು ಇಷ್ಟು ಕಾಲ ತನ್ನ ಗ್ರಹಣಾಂಗಗಳಿಂದ ಬಂಧಿಸಿರುವ ಸೈತಾನನ ವ್ಯವಸ್ಥೆಯನ್ನು ನಾಶಗೊಳಿಸಲು ಯೆಹೋವನು ಮಾಡಿರುವ ತೀರ್ಪು ಅದಾಗಿರುತ್ತದೆ.—ಯೆರೆಮೀಯ 17:5-7; 25:31-33.
3 ಆ ತೀರ್ಪನ್ನು ಈ ಭೂಮಿಯ ಮೇಲಿನ ದುಷ್ಟ ವ್ಯವಸ್ಥೆಯ ಎದುರಿಸಲೇಬೇಕು. ಆದರೆ ಲೋಕ ವ್ಯವಸ್ಥೆಯ ನಿಜವಾಗಿ ಅಷ್ಟು ಕೆಟ್ಟದ್ದಾಗಿದೆಯೇ? ಅದರ ದಾಖಲೆಯ ಕಡೆಗೆ ಒಂದೇ ನೋಟವು ಸಾಕು! ಮತ್ತಾಯ 7:16 ರಲ್ಲಿ ಯೇಸು ಒಂದು ಸೂತ್ರವನ್ನು ತಿಳಿಸಿದ್ದಾನೆ: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” ಲೋಕದ ದೊಡ್ಡ ದೊಡ್ಡ ಶಹರಗಳು ಮಾದಕೌಷಧ, ಪಾತಕ, ವಿಪರೀತ ದಿಗಿಲು, ಅನೈತಿಕತೆ ಮತ್ತು ಮಾಲಿನ್ಯದ ಚರಂಡಿಗಳಾಗಿ ಪರಿಣಮಿಸಿರುವುದಿಲ್ಲವೇ? ಅನೇಕ ದೇಶಗಳಲ್ಲಿ ಹೊಸದಾಗಿ ಕಂಡುಕೊಂಡ ಸ್ವಾತಂತ್ರ್ಯಗಳು ರಾಜಕೀಯ ಗಲಿಬಿಲಿ, ಅಹಾರದ ಅಭಾವಗಳು ಮತ್ತು ಬಡತನ ಇವುಗಳಿಂದ ಕುಂದಿಸಲ್ಪಟ್ಟಿವೆ. ಒಂದು ಶತಕೋಟಿಗಿಂತಲೂ ಹೆಚ್ಚು ಜನರು ಅರೆಹೊಟ್ಟೆಯ ಪಥ್ಯಗಳಲ್ಲಿ ಜೀವಿಸುತ್ತಿದ್ದಾರೆ. ಅದಲ್ಲದೆ, ಮಾದಕೌಷಧ ಮತ್ತು ಅನೈತಿಕ ಜೀವನ ಕ್ರಮದಿಂದಾಗಿ ಉದ್ದೀಪಕಗೊಂಡ ಏಯ್ಡ್ಸ್ ವ್ಯಾಧಿಯು ಭೂಮಿಯ ಹೆಚ್ಚಿನ ಭಾಗಗಳ ಮೇಲೆ ಕರಾಳ ಮೋಡಗವಿದಿರುತ್ತದೆ. ವಿಶೇಷವಾಗಿ 1914 ರಲ್ಲಿ I ನೆಯ ಲೋಕ ಯುದ್ಧವು ಸ್ಫೋಟವಾದಂದಿನಿಂದ, ಜೀವಿತದ ಪ್ರತಿಯೊಂದು ವಿಭಾಗದಲ್ಲಿ ಒಂದು ವಿಶ್ವವ್ಯಾಪಕ ಪ್ರಮಾಣದಲ್ಲಿ ಅವನತಿಯು ತೋರಿಬಂದಿದೆ.—2 ತಿಮೊಥಿ 3:1-5 ಕ್ಕೆ ಹೋಲಿಸಿರಿ.
4. ಜನಾಂಗಗಳ ಮೇಲೆ ಯೆಹೋವನು ಯಾವ ಪಂಥಾಹ್ವಾನವನ್ನು ಎಸೆಯುತ್ತಾನೆ?
4 ಆದರೂ, ಯೆಹೋವನು ಆತನ ಮಾರ್ಗಗಳ ವಿಷಯವಾಗಿ ಬೋಧನೆ ಪಡೆಯಲು ಮತ್ತು ಆತನ ದಾರಿಗಳಲ್ಲಿ ನಡೆಯಲು ಸಂತೋಷಪಡುವ ಒಂದು ಜನರನ್ನು ಎಲ್ಲಾ ಜನಾಂಗಗಳಿಂದ ಒಟ್ಟುಗೂಡಿಸುತ್ತಿದ್ದಾನೆ. ಈ ಭೂಮಂಡಲದಲ್ಲೆಲ್ಲೂ ಇರುವ ಈ ಜನರು ಲೋಕದ ಹಿಂಸಾತ್ಮಕ ಮಾರ್ಗಗಳನ್ನು ತ್ಯಜಿಸಿಬಿಟ್ಟು, ತಮ್ಮ ಕತ್ತಿಗಳನ್ನು ಹೊಡೆದು ಗುಳಗಳನ್ನಾಗಿ ಮಾಡಿದ್ದಾರೆ. (ಯೆಶಾಯ 2:2-4) ಹೌದು, ಕತ್ತಿಗಳನ್ನು ಗುಳಗಳನ್ನಾಗಿ! ಆದರೆ ಯೋವೇಲ 3:9, 10 ರಲ್ಲಿ ಯೆಹೋವನು ಘೋಷಿಸುವಂತೆ ಮಾಡಿರುವ ಆ ಕರೆಗೆ ಇದು ವಿಪರ್ಯಸ್ತವಲ್ಲವೇ? ಅಲ್ಲಿ ನಾವು ಓದುವುದು: “ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ—ಜನಾಂಗಗಳೇ, ಸನ್ನದ್ಧರಾಗಿರಿ, [ಯುದ್ಧವನ್ನು ಪವಿತ್ರೀಕರಿಸಿರಿ! NW] ಶೂರರನ್ನು ಎಚ್ಚರಪಡಿಸಿರಿ, ಯೋಧರೆಲ್ಲರೂ ಕೂಡಲಿ, ಯುದ್ಧಕ್ಕೆ ಹೊರಡಲಿ. ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿರಿ.” ಆಹಾ, ಇಲ್ಲಿ ಲೋಕದ ಅರಸರು ತಮ್ಮ ಸಂಯುಕ್ತ ಸೇನಾ ಬಲವನ್ನು ಹರ್ಮಗೆದ್ದೋನಿನಲ್ಲಿ ತನ್ನ ವಿರುದ್ಧವಾಗಿ ತರುವಂತೆ ಯೆಹೋವನು ಪಂಥಾಹ್ವಾನಿಸುತ್ತಾನೆ. ಆದರೆ ಅವರು ಸಾಫಲ್ಯ ಪಡೆಯುವಂತಿಲ್ಲ! ಪೂರ್ಣ ಸೋಲಿನಲ್ಲಿ ಅವರು ಬಿದ್ದುಹೋಗಲೇಬೇಕು!—ಪ್ರಕಟನೆ 16:16.
5. “ಭೂಮಿಯ ದ್ರಾಕ್ಷೆ ಗೊಂಚಲುಗಳು” ಕೊಯ್ಯಲ್ಪಟ್ಟಾಗ, ಫಲಿತಾಂಶವು ಏನಾಗಲಿದೆ?
5 ಸಾರ್ವಭೌಮ ಕರ್ತನಾದ ಯೆಹೋವನ ವಿರುದ್ಧವಾಗಿ ಬಲಾಢ್ಯ ಅರಸರು ಭೀತಿದಾಯಕ ಶಸ್ತ್ರಾಸ್ತ್ರಗಳ ತೋಪಖಾನೆಗಳನ್ನು ಕಟ್ಟಿರುತ್ತಾರೆ—ಆದರೆ ಅವು ವ್ಯರ್ಥವೇ ಸರಿ! ಯೋವೇಲ 3:13 ರಲ್ಲಿ ಯೆಹೋವನು ಆಜ್ಞೆಯನ್ನು ಕೊಡುವುದು: “ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ; ಬನ್ನಿರಿ, ತುಳಿಯಿರಿ; ದ್ರಾಕ್ಷೆಯ ಅಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿ ತುಳುಕುತ್ತಿವೆ; ಜನಾಂಗಗಳ ದುಷ್ಟತನವು ವಿಪರೀತವೇ ಸರಿ.” ಈ ಮಾತುಗಳು ಪ್ರಕಟನೆ 14:18-20 ರ ಮಾತುಗಳಿಗೆ ಸಮರೂಪವಾಗಿವೆ, ಅಲ್ಲಿ ಕಿರೀಟಧಾರಿ ಮೆಸ್ಸೀಯ ರಾಜನಾದ ಯೇಸುವಿಗೆ, “ಭೂಮಿಯ ದ್ರಾಕ್ಷೇಗೊಂಚಲುಗಳನ್ನು ಕೊಯ್ಯಿ; ಅದರ ಹಣ್ಣುಗಳು ಪೂರಾ ಮಾಗಿವೆ” ಎಂದು ಆಜ್ಞಾಪಿಸಲಾಯಿತು. ಆಗ ಅರಸನು ತನ್ನ ಹರಿತವಾದ ಕುಡುಗೋಲನ್ನು ಹಾಕಿ ವಿರೋಧಿ ಜನಾಂಗಗಳನ್ನು “ದೇವರ ರೌದ್ರವೆಂಬ ದೊಡ್ಡ ತೊಟ್ಟಿಗೆ” ಎಸೆಯುತ್ತಾನೆ. ಸಾಂಕೇತಿಕವಾಗಿ, ಆ ತೊಟ್ಟಿಯೊಳಗಿಂದ ಹೊರಟುಬಂದ ರಕ್ತವು ಕುದುರೆಗಳ ಕಡಿವಾಣವನ್ನು ಮುಟ್ಟುವಷ್ಟು ಎತ್ತರದಲ್ಲಿ 1,600 ಫರ್ಲಾಂಗು—ಸುಮಾರು 300 ಕಿಲೊಮೀಟರ್ ದೂರ ಹರಿಯುತ್ತದೆ! ಯೆಹೋವನನ್ನು ಅಗೌರವಿಸುವ ರಾಷ್ಟ್ರಗಳಿಗೆ ಎಂಥ ಭೀತಿದಾಯಕ ಪ್ರತೀಕ್ಷೆಯು!
ನಿಯಮಪಾಲಕ ನಾಗರಿಕರು
6. ಯೆಹೋವನ ಸಾಕ್ಷಿಗಳು ರಾಷ್ಟ್ರಗಳನ್ನು ಮತ್ತು ಅವರ ಅರಸರನ್ನು ಯಾವ ನೋಟದಲ್ಲಿ ನೋಡುತ್ತಾರೆ?
6 ಯೆಹೋವನ ಸಾಕ್ಷಿಗಳು ರಾಷ್ಟ್ರಗಳಿಗೆ ಮತ್ತು ಅವುಗಳ ಅಧಿಪತಿಗಳಿಗೆ ಅನಾದರಣೆ ತೋರಿಸುತ್ತಾರೆಂದು ಇದರ ಅರ್ಥವೂ? ಖಂಡಿತವಾಗಿಯೂ ಅಲ್ಲ! ಅವರು ಕೇವಲ ಹೇಸುವುದು ಎಲ್ಲರೂ ಸ್ಪಷ್ಟವಾಗಿಗಿ ಕಾಣಬಲ್ಲ ಭಷ್ಟಾಚಾರವನ್ನು, ಮತ್ತು ಆತನ ತೀರ್ಪನ್ನು ನಿರ್ವಹಿಸಲು ತೀವ್ರವಾಗಿ ಧಾವಿಸುತ್ತಿರುವ ಯೆಹೋವನ ದಿನದ ಕುರಿತು ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಅದೇ ಸಮಯದಲ್ಲಿ, ರೋಮಾಪುರ 13:1 ರಲ್ಲಿ ಅಪೊಸ್ತಲ ಪೌಲನ ಅಪ್ಪಣೆಯನ್ನು ಅವರು ದೀನತೆಯಿಂದ ಪಾಲಿಸುತ್ತಾರೆ: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” ಈ ಮಾನವ ಅಧಿಪತಿಗಳಿಗೆ ಸಲ್ಲತಕ್ಕ ಗೌರವವನ್ನು ಅವರು ಸಲ್ಲಿಸುತ್ತಾರೆ, ಆದರೆ ಆರಾಧನೆಯನ್ನಲ್ಲ. ನಿಯಮ ಪಾಲಕ ನಾಗರಿಕರೋಪಾದಿ, ಅವರು ಬೈಬಲ್ ಮಟ್ಟಗಳಾದ ಪ್ರಾಮಾಣಿಕತೆ, ಸತ್ಯಪರತೆ, ಮತ್ತು ಶುದ್ಧತೆಯನ್ನು ಪಾಲಿಸುತ್ತಾರೆ ಮತ್ತು ತಮ್ಮ ಸ್ವಂತ ಕುಟುಂಬಗಳನ್ನು ನೀತಿತತ್ವಗಳಿಂದ ಕಟ್ಟುತ್ತಾರೆ. ಇತರರು ಸಹ ಇದನ್ನು ಹೇಗೆ ಮಾಡಬಹುದೆಂದು ಕಲಿಸಲು ಅವರು ಸಹಾಯ ಮಾಡುತ್ತಾರೆ. ವಿರೋಧ ಪ್ರದರ್ಶನಗಳಲ್ಲಿ ಅಥವಾ ರಾಜಕೀಯ ಕ್ರಾಂತಿಗಳಲ್ಲಿ ಅವರು ಒಳಗೂಡದೆ ಇದ್ದು, ಎಲ್ಲಾ ಮನುಷ್ಯರೊಂದಿಗೆ ಶಾಂತಿಯಿಂದ ಜೀವಿಸುತ್ತಾರೆ. ಈ ಭೂಮಿಗೆ ಪರಿಪೂರ್ಣ ಶಾಂತಿ ಮತ್ತು ನೀತಿಯ ಸರಕಾರವನ್ನು ಪುನಃಸ್ಥಾಪಿಸುವಂತೆ ಸರ್ವ ಶ್ರೇಷ್ಠ ಅಧಿಕಾರಿಯಾದ ಸಾರ್ವಭೌಮ ಕರ್ತ ಯೆಹೋವನನ್ನು ಅವರು ಕಾಯುತ್ತಿರುವಾಗ, ಮಾನವ ಮೇಲಧಿಕಾರಿಗಳ ನಿಯಮಗಳಿಗೆ ವಿಧೇಯರಾಗುವುದರಲ್ಲಿ ಯೆಹೋವನ ಸಾಕ್ಷಿಗಳು ಆದರ್ಶ ಮಾದರಿಗಳಾಗಿರಲು ಸದಾ ಪ್ರಯತ್ನಿಸುತ್ತಾರೆ.
ಆತನ ತೀರ್ಪನ್ನು ನಿರ್ವಹಿಸುವುದು
7, 8. (ಎ) ಯಾವ ರೀತಿಯಲ್ಲಿ ಜನಾಂಗಗಳು ನಡುಗಿಸಲ್ಪಡುವರು ಮತ್ತು ಅವರ ಮೇಲೆ ಕತ್ತಲೆಯು ಕವಿಯುವುದು? (ಬಿ) ಇಂದು ಯೋವೇಲನು ಯಾರಿಗೆ ಚಿತ್ರರೂಪವಾಗಿದ್ದಾನೆ, ಲೋಕದ ಜನಸಾಮಾನ್ಯರಿಗಿಂತ ಪ್ರತಿತುಲನೆಯಲ್ಲಿ ಇವರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆ?
7 ಸ್ಫುಟವಾದ ಸಾಂಕೇತಿಕ ಭಾಷೆಯಲ್ಲಿ ಯೆಹೋವನು ತನ್ನ ತೀರ್ಪಿನ ನಿರ್ಣಯದ ಈ ಅಧಿಕ ವಿವರವನ್ನು ಕೊಡುತ್ತಾನೆ: “ಸೂರ್ಯ ಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ. ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ದನಿಗೈಯುತ್ತಾನೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು.” (ಯೋವೇಲ 3:15, 16) ಹೊಳಪೂ ಸಮೃದ್ಧವೂ ಆಗಿ ತೋರುವ ಮಾನವ ಪರಿಸ್ಥಿತಿಯು ಮಸುಕಾಗಿ, ಕೆಟ್ಟು ಹೋಗುವುದು ಮತ್ತು ಈ ಜರ್ಜರಿತ ಲೋಕ ವ್ಯವಸ್ಥೆಯ ಒಂದು ಮಹಾ ಭೂಕಂಪದಿಂದಲೋ ಎಂಬಂತೆ ಧ್ವಂಸವಾಗಿ ಅಸ್ತಿತ್ವರಹಿತವಾಗಿ ಹೋಗುವುದು.—ಹಗ್ಗಾಯ 2:20-22.
8 ಯೆಹೋವನು ತನ್ನ ಜನರಿಗೆ ಆಶ್ರಯವೂ ರಕ್ಷಣದುರ್ಗವೂ ಆಗಿರುವನು ಎಂಬ ಆನಂದಕರ ಆಶ್ವಾಸನೆಯನ್ನು ಗಮನಿಸಿರಿ! ಹಾಗೆ ಏಕೆ? ಏಕೆಂದರೆ, “ನಾನು ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು” ಎಂಬ ಯೆಹೋವನ ಮಾತಿಗೆ ಪ್ರತಿಕ್ರಿಯೆ ತೋರಿಸಿದ ಒಂದು ಜನರು—ಒಂದು ಅಂತರ್ರಾಷ್ಟ್ರೀಯ ಜನತೆ—ಅವರಾಗಿದ್ದಾರೆ. (ಯೋವೇಲ 3:17) ಯೋವೇಲ ಎಂಬ ಹೆಸರಿನ ಅರ್ಥವು “ಯೆಹೋವನು ದೇವರು” ಎಂದಾಗಿರುವುದರಿಂದ, ಅವನು ಇಂದು ಯೆಹೋವನ ಪರಮಾಧಿಕಾರವನ್ನು ಧೈರ್ಯದಿಂದ ಸಾರುತ್ತಿರುವ ಆಧುನಿಕ ದಿನದ ಯೆಹೋವನ ಅಭಿಷಿಕ್ತ ಸಾಕ್ಷಿಗಳನ್ನು ಸರಿಯಾಗಿ ಚಿತ್ರಿಸುತ್ತಾನೆ. (ಮಲಾಕಿಯ 1:11 ಕ್ಕೆ ಹೋಲಿಸಿ.) ಯೋವೇಲನ ಪ್ರವಾದನೆಯ ಆರಂಭದ ಮಾತುಗಳಿಗೆ ಹಿಂತಿರುಗುವಲ್ಲಿ, ಇಂದಿನ ದೇವ ಜನರ ಚಟುವಟಿಕೆಯನ್ನು ಅವನು ಎಷ್ಟು ಸ್ಪಷ್ಟವಾಗಿಗಿ ಮುಂತಿಳಿಸುತ್ತಾನೆ ಎಂಬದನ್ನು ನಾವು ಕಾಣುವೆವು.
ಮಿಡತೆಗಳ ಒಂದು ತಂಡ
9, 10. (ಎ) ಯೋವೇಲನಿಂದ ಯಾವ ಬಾಧೆಯು ಮುಂತಿಳಿಸಲ್ಪಟ್ಟಿದೆ? (ಬಿ) ಒಂದು ಬಾಧೆಯ ಕುರಿತಾದ ಯೋವೇಲನ ಪ್ರವಾದನೆಯನ್ನು ಪ್ರಕಟನೆಯು ಪ್ರತಿದ್ವನಿಸುವುದು ಹೇಗೆ ಮತ್ತು ಕ್ರೈಸ್ತ ಪ್ರಪಂಚದ ಮೇಲೆ ಈ ಬಾಧೆಯ ಪರಿಣಾಮವೇನು?
9 ಈಗ “ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯ” ಕ್ಕೆ ಕಿವಿಗೊಡಿರಿ: “ವೃದ್ಧರೇ ಕೇಳಿರಿ! ದೇಶ ನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ! ಇಂಥ ಬಾಧೆಯು ನಿಮ್ಮ ಕಾಲದಲ್ಲಿಯಾಗಲಿ ನಿಮ್ಮ ತಂದೆಗಳ ಕಾಲದಲ್ಲಿಯಾಗಲಿ ಸಂಭವಿಸಿತ್ತೋ? ಇದನ್ನು ನಿಮ್ಮ ಮಕ್ಕಳಿಗೆ ವರ್ಣಿಸಿರಿ, ಅವರು ತಮ್ಮ ಮಕ್ಕಳಿಗೆ ವಿವರಿಸಲಿ, ಅವರು ಮುಂದಿನ ತಲೆಗಳಿಗೆ ತಿಳಿಸಲಿ. ಚೂರಿಮಿಡತೆ ತಿಂದು ಮಿಕ್ಕದ್ದನ್ನು ಗುಂಪು ಮಿಡತೆ ತಿಂದುಬಿಟ್ಟಿತು; ಗುಂಪು ಮಿಡತೆ ತಿಂದು ಮಿಕ್ಕದ್ದನ್ನು ಸಣ್ಣ ಮಿಡತೆ ತಿಂದುಬಿಟ್ಟಿತು; ಸಣ್ಣ ಮಿಡತೆ ತಿಂದು ಮಿಕ್ಕದ್ದನ್ನು ದೊಡ್ಡ ಮಿಡತೆ ತಿಂದುಬಿಟ್ಟಿತು.”—ಯೋವೇಲ 1:1-4.
10 ಇದು ಒಂದು ಅಸಾಧಾರಣವಾದ ಚಟುವಟಿಕೆಯು, ಸದಾ ಕಾಲಕ್ಕೂ ಸ್ಮರಣೆಯಲ್ಲಿರುವಂಥಾದ್ದು. ಹಿಂಡು ಹಿಂಡಾಗಿ ಮುತ್ತುವ ಕೀಟಗಳು, ಮುಖ್ಯವಾಗಿ ಮಿಡತೆಗಳು, ದೇಶವನ್ನು ಹಾಳುಗೆಡವುತ್ತಿವೆ. ಇದರ ಅರ್ಥವೇನು? ಪ್ರಕಟನೆ 9:1-12 ಸಹ ಮಿಡತೆಗಳ ಒಂದು ಬಾಧೆಯ ಕುರಿತು ಮಾತಾಡುತ್ತದೆ, ಅದು ಯೆಹೋವನಿಂದ “ಅಧೋಲೋಕದ ಅಧಿಕಾರಿಯಾದ ದೂತನ” ಅಂದರೆ ಸ್ವತಃ ಯೇಸು ಕ್ರಿಸ್ತನ ಕೈಕೆಳಗೆ ಕಳುಹಿಸಲ್ಪಟ್ಟಿದೆ. ಅಬದ್ದೋನ್ (ಹಿಬ್ರೂ) ಮತ್ತು ಅಪೊಲ್ಲುವೋನ್ (ಗ್ರೀಕ್) ಎಂಬ ಅವನ ಹೆಸರುಗಳು “ನಾಶನ” ಮತ್ತು “ನಾಶಮಾಡುವವನು” ಎಂಬರ್ಥವುಳ್ಳವುಗಳು. ಯಾರು ಈ ಕರ್ತನ ದಿನದಲ್ಲಿ ಸುಳ್ಳು ಧರ್ಮವನ್ನು ಪೂರ್ಣವಾಗಿ ಬಯಲುಪಡಿಸುವ ಮೂಲಕ ಮತ್ತು ಅದರ ಮೇಲೆ ಯೆಹೋವನ ಸೇಡನ್ನು ಘೋಷಿಸುವ ಮೂಲಕ ಕ್ರೈಸ್ತ ಪ್ರಪಂಚದ ಹುಲ್ಲುಗಾವಲುಗಳನ್ನು ಧ್ವಂಸಗೊಳಿಸಲು ಹೊರಟಿರುತ್ತಾರೋ ಆ ಅಭಿಷಿಕ್ತ ಉಳಿಕೆಯವರಾದ ಕ್ರೈಸ್ತರಿಗೆ ಈ ಮಿಡತೆಗಳು ಚಿತ್ರರೂಪವಾಗಿವೆ.
11. ಆಧುನಿಕ ಕಾಲದ ಮಿಡತೆಗಳು ಬಲಪಡಿಸಲ್ಪಟ್ಟದ್ದು ಹೇಗೆ, ಮತ್ತು ಪ್ರತ್ಯೇಕವಾಗಿ ಯಾರು ಅವರ ಆಕ್ರಮಣಕ್ಕೆ ಗುರಿಗಳಾಗಿದ್ದಾರೆ?
11 ಪ್ರಕಟನೆ 9:13-21 ರಲ್ಲಿ ಸೂಚಿಸಲ್ಪಟ್ಟಂತೆ, ಮಿಡತೆಗಳ ಬಾಧೆಯನ್ನು ಒಂದು ದೊಡ್ಡ ಕುದುರೇ ದಂಡಿನ ಬಾಧೆಯು ಹಿಂಬಾಲಿಸಿದೆ. ಇದು ಇಂದು ಎಷ್ಟು ಸತ್ಯವು ಯಾಕಂದರೆ ಉಳಿದಿರುವ ಕೆಲವೇ ಸಾವಿರ ಅಭಿಷಿಕ್ತ ಕ್ರೈಸ್ತರು ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು “ಬೇರೆ ಕುರಿ”ಗಳಿಂದ ಬೆಂಬಲಿಸಲ್ಪಟ್ಟು ಒಟ್ಟಿಗೆ ಒಂದು ಪ್ರತಿಭಟಿಸಲಾಗದ ಕುದುರೇದಂಡು ಆಗಿರುತ್ತಾರೆ! (ಯೋಹಾನ 10:16) ಕ್ರೈಸ್ತ ಪ್ರಪಂಚದ ವಿಗ್ರಹಾರಾಧಕರ ಮೇಲೆ ಮತ್ತು ‘ಯಾರು ತಮ್ಮ ಕೊಲೆಪಾತಗಳಿಗಾಗಲಿ, ಪ್ರೇತಾರಾಧನೆಯ ಪದ್ಧತಿಗಳಿಗಾಗಲಿ, ಜಾರತ್ವಕ್ಕಾಗಲಿ ಯಾ ಕಳ್ಳತನಕ್ಕಾಗಲಿ ಪಶ್ಚಾತ್ತಾಪ ಪಡದೆ’ ಇರುವರೋ ಅವರ ಮೇಲೆ ಯೆಹೋವನ ಚುಚ್ಚುವ ತೀರ್ಪುಗಳನ್ನು ಘೋಷಿಸುವುದರಲ್ಲಿ ಅವರು ಐಕ್ಯರಾಗಿರುತ್ತಾರೆ. ಯಾರ ವಿರುದ್ಧವಾಗಿ ಈ ತೀರ್ಪಿನ ಸಂದೇಶಗಳು ನೀಡಲ್ಪಡುತ್ತವೋ ಅವರಲ್ಲಿ ಈ ಶತಮಾನದ ಕೊಲೆಪಾತಕ ಯುದ್ಧವನ್ನು ಸಕ್ರಿಯರಾಗಿ ಬೆಂಬಲಿಸಿದ—ಕ್ಯಾಥ್ಲಿಕ್ ಮತ್ತು ಪ್ರಾಟೆಸ್ಟಂಟ್—ವೈದಿಕರು, ಹಾಗೂ ಬಾಲಕಕಾಮಿ ಪಾದ್ರಿಗಳು ಮತ್ತು ನೀತಿಗೆಟ್ಟ ಟೀವೀ ಸೌವಾರ್ತಿಕರು ಸೇರಿರುತ್ತಾರೆ.
12. ಕ್ರೈಸ್ತ ಪ್ರಪಂಚದ ಮುಖಂಡರು ತೀರ್ಪಿನ ಸಂದೇಶಗಳನ್ನು ಪಡೆಯಲು ಅರ್ಹರೇಕೆ, ಮತ್ತು ಬೇಗನೇ ಮಹಾ ಬಾಬೆಲಿನ ಎಲ್ಲಾ ಸದಸ್ಯರೊಂದಿಗೆ ಅವರಿಗೆ ಏನು ಸಂಭವಿಸಲಿದೆ?
12 ಉಡುಪಿನ “ಸಭ್ಯಗೃಹಸ್ಥ”ರಾದ ಅಂಥ ನೀತಿಭ್ರಷ್ಟ ವೈದಿಕರಿಗೆ ಯೆಹೋವನ ಕರೆಕೊಡುವಿಕೆ ಘಣಘಣಿಸುತ್ತದೆ: “ಅಮಲೇರಿದವರೇ, ಎಚ್ಚರಗೊಳ್ಳಿರಿ, ಅಳಿರಿ. ಕುಡಿಕರೇ, ಅರಚಿಕೊಳ್ಳಿರಿ. ದ್ರಾಕ್ಷಾರಸವು ನಿಮ್ಮ ಬಾಯಿಗೆ ಇನ್ನು ಬೀಳದು.” (ಯೋವೇಲ 1:5) ಈ 20 ನೆಯ ಶತಮಾನದಲ್ಲಿ ಕ್ರೈಸ್ತ ಪ್ರಪಂಚದ ಧರ್ಮವು ದೇವರ ವಾಕ್ಯದ ಶುದ್ಧವಾದ ನೈತಿಕ ತತ್ವಗಳಿಗೆ ಬದಲಿಯಾಗಿ ಲೋಕದ ಸ್ವೇಚ್ಛಾವೃತ್ತಿಯನ್ನು ತಕ್ಕೊಂಡಿದೆ. ಲೋಕದ ಮಾರ್ಗಗಳನ್ನು ಅಂತರ್ಗತ ಮಾಡುವುದು ಸುಳ್ಳು ಧರ್ಮಕ್ಕೆ ಮತ್ತು ಅದರ ಸದಸ್ಯರಿಗೆ ಮಧುರವಾಗಿ ತೋರಿದೆ, ಆದರೆ ಆತ್ಮಿಕ ಮತ್ತು ದೈಹಿಕ ವ್ಯಾಧಿಯ ಎಂಥ ಕೊಯ್ಲನ್ನು ಅವರು ಕೊಯ್ದಿದ್ದಾರೆ! ಪ್ರಕಟನೆ 17:16, 17 ರಲ್ಲಿ ವರ್ಣಿಸಲ್ಪಟ್ಟ ಪ್ರಕಾರ, ಬೇಗನೇ, ರಾಜಕೀಯ ಅಧಿಕಾರಗಳಿಗೆ ದೇವರ “ಅಭಿಪ್ರಾಯ” ಏನಾಗಿದೆಯೆಂದರೆ ಅವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಮೇಲೆ ತೀವ್ರವಾದ ಹಲ್ಲೆಯನ್ನು ನಡಿಸಿ ಅವಳನ್ನು ಧ್ವಂಸಗೊಳಿಸುವುದೇ. ಯೆಹೋವನ ತೀರ್ಪು ಅವಳ ವಿರುದ್ಧವಾಗಿ ನಿರ್ವಹಿಸಲ್ಪಡುವುದನ್ನು ಕಾಣುವಾಗ, ಆಗ ಮಾತ್ರವೇ, ಆಕೆ ತನ್ನ ಅಮಲಿನಿಂದ “ಎಚ್ಚರಗೊಳ್ಳು”ವಳು.
“ಪ್ರಬಲವಾದ ದೊಡ್ಡ ದಂಡು”
13. ಯಾವ ರೀತಿಯಲ್ಲಿ ಮಿಡತೆ ತಂಡವು ಕ್ರೈಸ್ತ ಪ್ರಪಂಚಕ್ಕೆ “ಪ್ರಬಲವಾದ ದೊಡ್ಡ ದಂಡಿ” ನಂತೆ ಕಾಣುವುದು?
13 ಯೆಹೋವನ ಪ್ರವಾದಿಯು ಮಿಡತೆ ತಂಡವನ್ನು “[ಜನರ, NW] ಪ್ರಬಲವಾದ ದೊಡ್ಡ ದಂಡು” ಎಂದು ವರ್ಣಿಸುತ್ತಾ ಹೋಗುತ್ತಾನೆ ಮತ್ತು ಮಹಾ ಬಾಬೆಲಿಗೆ ಅದು ಹಾಗೆ ಕಾಣುತ್ತದೆ. (ಯೋವೇಲ 2:2) ಉದಾಹರಣೆಗೆ, ಕ್ರೈಸ್ತ ಪ್ರಪಂಚದ ಧರ್ಮಗಳು ಬೌದ್ಧ ಜಪಾನಿನಲ್ಲಿ ಮತಾಂತರಗಳನ್ನು ಮಾಡಲು ಸೋತಿರುವ ನಿಜತ್ವದ ಕುರಿತು ಅದರ ವೈದಿಕರು ಪ್ರಲಾಪಿಸುತ್ತಾರೆ. ಆದರೂ ಇಂದು 1,60,000 ಕ್ಕಿಂತಲೂ ಹೆಚ್ಚು ಜಪಾನಿ ಸಾಕ್ಷಿಗಳು ಸಮೂಹವಾಗಿ ಆ ದೇಶವನ್ನು ಮುತ್ತಿದ್ದಾರೆ ಮತ್ತು 2,00,000 ಕ್ಕಿಂತಲೂ ಹೆಚ್ಚು ಜನರ ಮನೆಗಳಲ್ಲಿ ವೈಯಕ್ತಿಕ ಬೈಬಲ್ ಅಧ್ಯಯನ ನಡಿಸುತ್ತಿದ್ದಾರೆ. ಇಟೆಲಿಯಲ್ಲಿರುವ 1,80,000 ಯೆಹೋವನ ಸಾಕ್ಷಿಗಳು ಈಗ ಕಥೋಲಿಕರಿಗೆ ಮಾತ್ರವೇ ದ್ವಿತೀಯ ಸಂಖ್ಯೆಯಲ್ಲಿರುವುದಾಗಿ ಅಂಗೀಕರಿಸಲ್ಪಟ್ಟಿದ್ದಾರೆ. ಯೆಹೋವನ ಸಾಕ್ಷಿಗಳು ಪ್ರತಿ ವರ್ಷ ಚರ್ಚಿನಿಂದ ‘ಕಡಿಮೆ ಪಕ್ಷ 10,000 ನಂಬಿಗಸ್ತ ಕಥೋಲಿಕರನ್ನು’ ಒಯ್ಯುತ್ತಿದ್ದಾರೆಂಬ ನಿಜತ್ವವನ್ನು ಇಟೆಲಿಯ ರೋಮನ್ ಕ್ಯಾಥ್ಲಿಕ್ ಮಠಾಧಿಪತಿಯು ಪ್ರಲಾಪಿಸಿದ್ದು ವ್ಯರ್ಥ.a ಸಾಕ್ಷಿಗಳು ಅಂಥವರನ್ನು ಸ್ವಾಗತಿಸಲು ಸಂತೋಷಪಡುತ್ತಾರೆ.—ಯೆಶಾಯ 60:8, 22.
14, 15. ಯೋವೇಲನು ಮಿಡತೆ ತಂಡವನ್ನು ಹೇಗೆ ವರ್ಣಿಸುತ್ತಾನೆ ಮತ್ತು ಅದು ಇಂದು ಯಾವ ರೀತಿಯಲ್ಲಿ ನೆರವೇರಿದೆ?
14 ಅಭಿಷಿಕ್ತ ಸಾಕ್ಷಿಗಳ ಮಿಡತೇ ತಂಡವನ್ನು ವರ್ಣಿಸುತ್ತಾ ಯೋವೇಲ 2:7-9 ಹೇಳುವುದು: “ಅವು ಶೂರರಂತೆ ಓಡಾಡುತ್ತಿವೆ; ಯೋಧರ ಹಾಗೆ ಗೋಡೆಯೇರುತ್ತವೆ; ತಮ್ಮ ತಮ್ಮ ಸಾಲುಗಳಲ್ಲೇ ನಡಿಯುತ್ತವೆ, ಆ ಸಾಲುಗಳನ್ನು ಕಲಸುವದಿಲ್ಲ, ಒಂದಕ್ಕೊಂದು ನೂಕಾಡುವದಿಲ್ಲ, ತಮ್ಮ ತಮ್ಮ ಸಾಲುಗಳಲ್ಲೇ ನಡೆಯುತ್ತವೆ. ಆಯುಧಗಳ ನಡುವೆ ನುಗ್ಗುತ್ತವೆ, ಸಾಲುಗಳು ಒಡೆದುಹೋಗುವದಿಲ್ಲ. ಪಟ್ಟಣದಲ್ಲೆಲ್ಲಾ ತರ್ವೆಪಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಿಕಿಗಳಲ್ಲಿ ಕಳ್ಳರಂತೆ ನುಗ್ಗುತ್ತವೆ.”
15 ಈಗ ಬೇರೆ ಕುರಿಗಳ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ಸಂಗಡಿಗರಿಂದ ಕೂಡಿರುವ ಅಭಿಷಿಕ್ತ “ಮಿಡತೆಗಳ” ದಂಡಿನ ಒಂದು ಸುಸ್ಪಷ್ಟವಾಗಿದ ಚಿತ್ರೀಕರಣವಿದು ನಿಶ್ಚಯ! ಧಾರ್ಮಿಕ ವಿರೋಧದ ಯಾವ “ಗೋಡೆ”ಯಾದರೂ ಇವರನ್ನು ಹಿಮ್ಮೆಟ್ಟಿಸುವುದಿಲ್ಲ. ಬಹಿರಂಗ ಸಾಕ್ಷಿಕಾರ್ಯಕ್ಕಾಗಿ ಮತ್ತು ಇತರ ಕ್ರೈಸ್ತ ಚಟುವಟಿಕೆಗಳಿಗಾಗಿ ಅವರು “ಯಾವ ಸೂತ್ರವನ್ನನುಸರಿಸಿ ಬಂದರೋ ಅದನ್ನೇ ಅನುಸರಿಸಿ” ಧೈರ್ಯದಿಂದ ನಡೆಯುತ್ತಾರೆ. (ಫಿಲಿಪ್ಪಿ 3:16 ಕ್ಕೆ ಹೋಲಿಸಿರಿ.) ನಾಝೀ ಜರ್ಮನಿಯ ಕಥೋಲಿಕ ಹಿಟ್ಲರನಿಗೆ ಜಯಕಾರವೆತ್ತಲು ನಿರಾಕರಿಸಿದ ಕಾರಣ ‘ಆಯುಧಗಳ ನಡುವೆ’ ಬಿದ್ದ ಸಾವಿರಾರು ಮಂದಿ ಸಾಕ್ಷಿಗಳಂತೆ, ಅವರು ಒಪ್ಪಂದವನ್ನು ಮಾಡಿಕೊಳ್ಳುವ ಬದಲಿಗೆ ಮರಣವನ್ನಾದರೂ ಎದುರಿಸಲು ಸಿದ್ಧರಾಗಿದ್ದಾರೆ. ಮಿಡತೆ ತಂಡವು ಕ್ರೈಸ್ತಪ್ರಪಂಚದ “ಪಟ್ಟಣದಲ್ಲೆಲ್ಲಾ” ಪೂರ್ಣ ಸಾಕ್ಷಿಯನ್ನು ಕೊಟ್ಟಿರುತ್ತದೆ, ತಮ್ಮ ಮನೆ-ಮನೆಯ ಚಟುವಟಿಕೆಯ ಮೂಲಕ ಕೋಟ್ಯಾಂತರ ಬೈಬಲ್ ಪ್ರಕಾಶನಗಳನ್ನು ಹಂಚುತ್ತಾ ಹೋದಾಗ, ಕಳ್ಳರೋ ಎಂಬಂತೆ, ಎಲ್ಲಾ ತಡೆಗಟ್ಟುಗಳನ್ನು ಹತ್ತುತ್ತಾ, ನುಗ್ಗುತ್ತಾ ಹೋಗಿರುತ್ತದೆ. ಈ ಸಾಕ್ಷಿಯನ್ನು ಕೊಡುವುದು ಯೆಹೋವನ ಚಿತ್ತವಾಗಿರುತ್ತದೆ ಮತ್ತು ಭೂಪರಲೋಕಗಳ ಯಾವುದೇ ಶಕ್ತಿಯು ಅದನ್ನು ನಿಲ್ಲಿಸಶಕವ್ತಾಗದು.—ಯೆಶಾಯ 55:11.
“ಪವಿತ್ರಾತ್ಮಭರಿತರಾಗಿ”
16, 17. (ಎ) ಯೋವೇಲ 2:28, 29 ರ ಮಾತುಗಳು ಯಾವಾಗ ಒಂದು ಮಹತ್ತಾದ ನೆರವೇರಿಕೆಯನ್ನು ಪಡೆದವು? (ಬಿ) ಯೋವೇಲನ ಯಾವ ಪ್ರವಾದನಾ ಮಾತುಗಳು ಒಂದನೆಯ ಶತಮಾನದಲ್ಲಿ ಪೂರ್ಣವಾಗಿ ನೆರವೇರಿರಲಿಲ್ಲ?
16 ಯೆಹೋವನು ತನ್ನ ಸಾಕ್ಷಿಗಳಿಗೆ ಹೇಳುವುದು: “ನಾನು [ಆತ್ಮಿಕ] ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿದ್ದೇನೆಂತಲೂ ಅದ್ವಿತೀಯನಾದ ನಾನೇ ನಿಮ್ಮ ದೇವರಾದ ಯೆಹೋವನಾಗಿದ್ದೇನೆಂತಲೂ ನಿಮಗೆ ನಿಶ್ಚಯವಾಗುವದು.” (ಯೋವೇಲ 2:27) ಈ ಅಮೂಲ್ಯ ಗ್ರಹಿಕೆಯು ಆತನ ಜನರಿಗಾದದ್ದು ಯೆಹೋವನು ಯೋವೇಲ 2:28, 29 ರ ತನ್ನ ಮಾತುಗಳನ್ನು ನೆರವೇರಿಸಲಾರಂಭಿಸಿದಾಗಲೇ: “ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿ ಗಂಡಸರೂ ಹೆಂಗಸರೂ ಪ್ರವಾದಿಸುವರು.” ಇದು ಸಾ.ಶ. 33 ರ ಪಂಚಾಶತ್ತಮದಲ್ಲಿ ಕೂಡಿಬಂದಿದ್ದ ಯೇಸುವಿನ ಶಿಷ್ಯರು “ಪವಿತ್ರಾತ್ಮಭರಿತರಾಗಿ” ಅಭಿಷೇಕವನ್ನು ಹೊಂದಿದಾಗ ಸಂಭವಿಸಿತು. ಪವಿತ್ರಾತ್ಮದ ಶಕ್ತಿಯಲ್ಲಿ ಅವರು ಸಾರಿದರು, ಮತ್ತು ಆ ದಿವಸ “ಸುಮಾರು ಮೂರು ಸಾವಿರ ಜನರು ಅವರಲ್ಲಿ ಸೇರಿದರು.”—ಅ.ಕೃತ್ಯಗಳು 2:4, 16, 17, 41.
17 ಆ ಸಂತೋಷದ ಸಂದರ್ಭದಲ್ಲಿ ಪೇತ್ರನು ಸಹ ಯೋವೇಲ 2:30-32 ನ್ನು ಉಲ್ಲೇಖಿಸಿದನು: “ಯೆಹೋವನ ಆಗಮನದ ಭಯಂಕರವಾದ ಮಹಾ ದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತ ಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು. ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” ಸಾ.ಶ. 70 ರಲ್ಲಿ ಯೆರೂಸಲೇಮು ನಾಶವಾದಾಗ, ಈ ಮಾತುಗಳು ಒಂದು ಅಂಶಿಕ ನೆರವೇರಿಕೆಯನ್ನು ಪಡೆದವು.
18. ಯೋವೇಲ 2:28, 29 ರ ಮಹಾ ನೆರವೇರಿಕೆಯು ಯಾವಾಗ ಸಂಭವಿಸತೊಡಗಿತು?
18 ಆದರೂ ಯೋವೇಲ 2:28-32 ಕ್ಕೆ ಒಂದು ಹೆಚ್ಚಿನ ಅನ್ವಯವು ಇರುವದು. ನಿಶ್ಚಯವಾಗಿಯೂ 1919 ರಿಂದ ಈ ಪ್ರವಾದನೆಯು ಒಂದು ಗಮನಾರ್ಹ ನೆರವೇರಿಕೆಯನ್ನು ಪಡೆದದೆ. ಆ ಸಮಯದಲ್ಲಿ ಅಮೆರಿಕದ ಸೀಡರ್ ಪಾಯಿಂಟ್ ಒಹಾಯೋದಲ್ಲಿ ಯೆಹೋವನ ಜನರ ಒಂದು ಸ್ಮರಣಯೋಗ್ಯ ಅಧಿವೇಶನವು ನಡೆಯಿತು. ದೇವರ ಆತ್ಮವು ಸ್ಫುಟವಾಗಿ ತೋರಿಬಂತು, ಮತ್ತು ಆತನ ಅಭಿಷಿಕ್ತ ಸೇವಕರು ಪ್ರಚಲಿತ ದಿನಗಳ ತನಕ ವಿಸ್ತರಿಸಿರುವ ಒಂದು ವಿಶ್ವವ್ಯಾಪಕ ಸಾಕ್ಷಿ ಚಟುವಟಿಕೆಯಲ್ಲಿ ಭಾಗವಹಿಸಲು ಹುರಿದುಂಬಿಸಲ್ಪಟ್ಟರು. ಎಂಥ ಮಹಾ ವಿಸ್ತಾರ್ಯವು ಫಲಿಸಿರುತ್ತದೆ! ಆ ಸೀಡರ್ ಪಾಯಿಂಟ್ ಅಧಿವೇಶನದಲ್ಲಿ ಹಾಜರಿದ್ದ 7,000 ಕ್ಕಿಂತ ತುಸು ಹೆಚ್ಚು ಸಂಖ್ಯೆಯು ಮಾರ್ಚ್ 30, 1991 ರಲ್ಲಿ ಕ್ರಿಸ್ತನ ಮರಣದ ಸ್ಮಾರಕಕ್ಕೆ ಹಾಜರಾದ ಒಟ್ಟು 1,06,50,158 ಸಂಖ್ಯೆಗೆ ಬೆಳೆದಿರುತ್ತದೆ. ಇವರಲ್ಲಿ ಕೇವಲ 8,850 ಮಂದಿ ಮಾತ್ರವೇ ಅಭಿಷಿಕ್ತ ಕ್ರೈಸ್ತರಾಗಿ ಪ್ರಕಟಿತರಾಗಿದ್ದಾರೆ. ಯೆಹೋವನ ಶಕ್ತಿಶಾಲಿ ಆತ್ಮದಿಂದ ಸಾಧ್ಯಮಾಡಲ್ಪಟ್ಟ ಈ ವಿಶ್ವವ್ಯಾಪಕ ಪ್ರತಿಫಲವನ್ನು ಕಾಣುವಾಗ ಇವರೆಲ್ಲರ ಸಂತೋಷ ಅದೆಷ್ಟು ಮಹತ್ತಾಗಿರುವದು!—ಯೆಶಾಯ 40:29, 31.
19. ಯೆಹೋವನ ದಿನದ ಸಾಮೀಪ್ಯತೆಯ ನೋಟದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬನ ಮನೋಭಾವವು ಏನಾಗಿರಬೇಕು?
19 ಸೈತಾನನ ವಿಷಯ ವ್ಯವಸ್ಥೆಯನ್ನು ಧ್ವಂಸಗೊಳಿಸುವ “ಯೆಹೋವನ ಆಗಮನದ ಭಯಂಕರವಾದ ಮಹಾ ದಿನವು” ಈಗ ಸಮೀಪದಲ್ಲೇ ಇದೆ. (ಯೋವೇಲ 2:31) ಸಂತೋಷಕರವಾಗಿಯೇ “ಕರ್ತನ [ಯೆಹೋವನ, NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ಅ.ಕೃತ್ಯಗಳು 2:21) ಅದು ಹೇಗೆ? “ಕರ್ತನ [ಯೆಹೋವನ, NW] ದಿನವು ಕಳ್ಳನು ಬರುವಂತೆ ಬರುತ್ತದೆ” ಎಂದು ಅಪೊಸ್ತಲ ಪೇತ್ರನು ನಮಗೆ ಹೇಳುತ್ತಾನೆ, ಅವನು ಮತ್ತೂ ಅಂದದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ, ಹಾರೈಸುತ್ತಾ, ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಬೇಕಲ್ಲಾ.” ಯೆಹೋವನ ದಿನವು ಸಮೀಪದಲ್ಲಿದೆ ಎಂಬದನ್ನು ಮನಸ್ಸಿನಲ್ಲಿಡುವ ಮೂಲಕ ನಾವು ಯೆಹೋವನ ವಾಗ್ದಾನವಾದ ನೀತಿಯ “ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲದ” ನೆರವೇರಿಕೆಯನ್ನೂ ಕಾಣುವುದರಲ್ಲಿ ಉಲ್ಲಾಸಪಡುವೆವು.—2 ಪೇತ್ರ 3:10-13. (w92 5⁄1)
[ಅಧ್ಯಯನ ಪ್ರಶ್ನೆಗಳು]
a ಲಾ ರಿಪಬ್ಲಿಕಾ, ರೋಮ್, ಇಟೆಲಿ, ನವಂಬರ 12, 1985, ಮತ್ತು ಲಾ ರಿವಿಸ್ಟಾ ಡೆಲ್ ಕೆರ್ಲೊ ಇಟಾಲಿಯಾನೊ, ಮೇ 1985.
ನೀವು ವಿವರಿಸಬಲ್ಲಿರೋ?
▫ “ಯೆಹೋವನ ದಿನ” ಎಂದರೇನು?
▫ ‘ಭೂಮಿಯ ದ್ರಾಕ್ಷೆಯನ್ನು’ ಯೇಸು ಹೇಗೆ ಕೊಯ್ಯುವನು ಮತ್ತು ಏಕೆ?
▫ ಯಾವ ರೀತಿಯಲ್ಲಿ ಮಿಡತೆ ಬಾಧೆಯು 1919 ರಿಂದ ಕ್ರೈಸ್ತ ಪ್ರಪಂಚವನ್ನು ಬಾಧಿಸಿದೆ?
▫ ಸಾ.ಶ. 33 ರಲ್ಲಿ ಮತ್ತು ಪುನಃ 1919 ರಲ್ಲಿ ಯೆಹೋವನಾತ್ಮವು ಆತನ ಜನರ ಮೇಲೆ ಸುರಿಸಲ್ಪಟ್ಟದ್ದು ಹೇಗೆ?