ಯಾರು “ಸುರಕ್ಷಿತರಾಗಿ ಪಾರಾಗುವರು”?
“ಯೆಹೋವನ ನಾಮವನ್ನು ಕರೆಯುವ ಪ್ರತಿಯೊಬ್ಬನು ರಕ್ಷಿಸಲ್ಪಡುವನು.”—ಅ. ಕೃತ್ಯಗಳು 2:21, NW.
1. ಸಾ.ಶ. 33ರ ಪಂಚಾಶತ್ತಮವು, ಲೋಕ ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿತ್ತು ಏಕೆ?
ಸಾಮಾನ್ಯ ಶಕ 33ನೆಯ ಪಂಚಾಶತ್ತಮವು, ಲೋಕ ಇತಿಹಾಸದಲ್ಲೇ ಒಂದು ಪ್ರಮುಖ ದಿನವಾಗಿತ್ತು. ಯಾಕೆ? ಯಾಕೆಂದರೆ ಆ ದಿನದಂದು ಒಂದು ಹೊಸ ಜನಾಂಗವು ಹುಟ್ಟಿತು. ಆರಂಭದಲ್ಲಿ, ಅದು ಒಂದು ಬಹು ದೊಡ್ಡ ಜನಾಂಗವಾಗಿರಲಿಲ್ಲ—ಯೆರೂಸಲೇಮಿನ ಒಂದು ಮೇಲಂತಸ್ತಿನಲ್ಲಿ ಕೂಡಿದಂತಹ ಯೇಸುವಿನ 120 ಶಿಷ್ಯರು ಮಾತ್ರ ಇದ್ದರು. ಆದರೆ ಇಂದು, ಆಗ ಅಸ್ತಿತ್ವದಲ್ಲಿದ್ದ ಹೆಚ್ಚಿನ ಜನಾಂಗಗಳು ಮರೆತುಬಿಡಲ್ಪಟ್ಟಿರುವ ಸಮಯದಲ್ಲಿ, ಆ ಮೇಲಂತಸ್ತಿನಲ್ಲಿ ಹುಟ್ಟಿದ ಜನಾಂಗವು ಈಗಲೂ ನಮ್ಮೊಂದಿಗಿದೆ. ಮಾನವಕುಲದ ಮುಂದೆ ತನ್ನ ಸಾಕ್ಷಿಗಳಾಗಿರಲು ದೇವರಿಂದ ನೇಮಿಸಲ್ಪಟ್ಟಿರುವ ಜನಾಂಗ ಇದಾಗಿರುವುದರಿಂದ ಈ ವಾಸ್ತವಾಂಶವು ನಮ್ಮೆಲ್ಲರಿಗೂ ಅತ್ಯಧಿಕ ಮಹತ್ವದ ಸಂಗತಿಯಾಗಿದೆ.
2. ಹೊಸ ಜನಾಂಗದ ಜನನವನ್ನು ಯಾವ ಅದ್ಭುತಕರ ಘಟನೆಗಳು ಗುರುತಿಸಿದವು?
2 ಆ ಹೊಸ ಜನಾಂಗವು ಅಸ್ತಿತ್ವಕ್ಕೆ ಬಂದಾಗ, ಯೋವೇಲನ ಪ್ರವಾದನಾ ಮಾತುಗಳನ್ನು ನೆರವೇರಿಸಿದಂತಹ ಪ್ರಾಮುಖ್ಯ ಘಟನೆಗಳು ಸಂಭವಿಸಿದವು. ಈ ಘಟನೆಗಳ ಕುರಿತಾಗಿ ನಾವು ಅ. ಕೃತ್ಯಗಳು 2:2-4ರಲ್ಲಿ ಓದುವುದು: “ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.” ಈ ರೀತಿಯಲ್ಲಿ ಆ 120 ನಂಬಿಗಸ್ತ ಸ್ತ್ರೀಪುರುಷರು ಒಂದು ಆತ್ಮಿಕ ಜನಾಂಗವಾಗಿ ಪರಿಣಮಿಸಿದರು. ಇವರು, ಅಪೊಸ್ತಲ ಪೌಲನು ತದನಂತರ ಯಾವುದನ್ನು “ದೇವರ ಇಸ್ರಾಯೇಲ್” (NW) ಎಂದು ಕರೆದನೊ ಅದರ ಪ್ರಥಮ ಸದಸ್ಯರಾದರು.—ಗಲಾತ್ಯ 6:16.
3. ಸಾ.ಶ. 33ರ ಪಂಚಾಶತ್ತಮದಲ್ಲಿ, ಯೋವೇಲನ ಯಾವ ಪ್ರವಾದನೆಯು ನೆರವೇರಿಸಲ್ಪಟ್ಟಿತು?
3 ‘ಬೀಸುವ ಬಿರುಗಾಳಿಯ’ ಕುರಿತಾಗಿ ಪರೀಕ್ಷಿಸಿನೋಡಲು ಜನರ ಗುಂಪುಗಳು ಕೂಡಿದವು ಮತ್ತು ಯೋವೇಲನ ಪ್ರವಾದನೆಗಳಲ್ಲಿ ಒಂದು ಪ್ರವಾದನೆಯು ನೆರವೇರುತ್ತಿದೆಯೆಂದು ಅಪೊಸ್ತಲ ಪೇತ್ರನು ಅವರಿಗೆ ವಿವರಿಸಿದನು. ಯಾವ ಪ್ರವಾದನೆ? ಅವನೇನನ್ನು ಹೇಳಿದನೊ ಅದಕ್ಕೆ ಕಿವಿಗೊಡಿರಿ: “ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು; ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸುವರು. ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವದಕ್ಕೆ ಮುಂಚೆ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ, ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು; ಆದರೂ ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ [“ಕರೆಯುವ ಪ್ರತಿಯೊಬ್ಬನು,” NW] ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ ಎಂಬದೇ.” (ಅ. ಕೃತ್ಯಗಳು 2:17-21) ಪೇತ್ರನು ಉದ್ಧರಿಸಿದ ಮಾತುಗಳು ಯೋವೇಲ 2:28-32ರಲ್ಲಿ ಕಂಡುಬರುತ್ತವೆ, ಮತ್ತು ಅವುಗಳ ನೆರವೇರಿಕೆಯು, ಯೆಹೂದ್ಯರಿಗಾಗಿ ಸಮಯವು ಮುಗಿಯುತ್ತಾ ಇದೆಯೆಂಬುದನ್ನು ಅರ್ಥೈಸಿದವು. “ಕರ್ತನ [“ಯೆಹೋವನ,” NW] ಆಗಮನದ ಗಂಭೀರವಾದ ಮಹಾ ದಿನ,” ಅಪನಂಬಿಗಸ್ತ ಇಸ್ರಾಯೇಲಿನ ಮುಯ್ಯಿತೀರಿಸುವ ಸಮಯವು, ಸಮೀಪವಾಗಿತ್ತು. ಆದರೆ ಯಾರು ರಕ್ಷಣೆಹೊಂದುವರು ಅಥವಾ ಸುರಕ್ಷಿತರಾಗಿ ಪಾರಾಗುವರು? ಮತ್ತು ಇದು ಏನನ್ನು ಮುನ್ಚಿತ್ರಿಸಿತು?
ಪ್ರವಾದನೆಯ ಎರಡು ನೆರವೇರಿಕೆಗಳು
4, 5. ಸಂಭವಿಸಲಿರುವ ಘಟನೆಗಳ ನೋಟದಲ್ಲಿ ಪೇತ್ರನು ಯಾವ ಸಲಹೆಯನ್ನು ಕೊಟ್ಟನು, ಮತ್ತು ಆ ಸಲಹೆಯು ಅವನ ದಿನಕ್ಕಿಂತ ಮುಂದಿನ ಸಮಯದಲ್ಲಿ ಅನ್ವಯವಾಗುವಂತಹದ್ದು ಆಗಿತ್ತೇಕೆ?
4 ಸಾ.ಶ. 33ನ್ನು ಹಿಂಬಾಲಿಸಿ ಬಂದ ವರ್ಷಗಳಲ್ಲಿ, ದೇವರ ಆತ್ಮಿಕ ಇಸ್ರಾಯೇಲ್ ಏಳಿಗೆ ಹೊಂದಿತು, ಆದರೆ ಮಾಂಸಿಕ ಇಸ್ರಾಯೇಲ್ ಜನಾಂಗವು ಏಳಿಗೆ ಹೊಂದಲಿಲ್ಲ. ಸಾ.ಶ. 66ರಲ್ಲಿ ಮಾಂಸಿಕ ಇಸ್ರಾಯೇಲ್ ರೋಮ್ನೊಂದಿಗೆ ಯುದ್ಧವನ್ನು ನಡಿಸುತ್ತಿತ್ತು. ಸಾ.ಶ. 70ರಲ್ಲಿ, ಇಸ್ರಾಯೇಲ್ ಬಹುಮಟ್ಟಿಗೆ ಅಸ್ತಿತ್ವಹೀನವಾಯಿತು ಮತ್ತು ಯೆರೂಸಲೇಮ್ ಅದರ ದೇವಾಲಯದೊಂದಿಗೆ ಸುಟ್ಟು ನೆಲಸಮಮಾಡಲ್ಪಟ್ಟಿತು. ಬರಲಿದ್ದ ಆ ದುರಂತವನ್ನು ದೃಷ್ಟಿಯಲ್ಲಿಡುತ್ತಾ, ಪಂಚಾಶತ್ತಮ ಸಾ.ಶ. 33ರಲ್ಲಿ ಪೇತ್ರನು ಉತ್ತಮ ಸಲಹೆಯನ್ನು ಕೊಟ್ಟನು. ಯೋವೇಲನನ್ನು ಪುನಃ ಉದ್ಧರಿಸುತ್ತಾ, ಅವನು ಹೇಳಿದ್ದು: “ಯೆಹೋವನ ನಾಮವನ್ನು ಕರೆಯುವ ಪ್ರತಿಯೊಬ್ಬನು ರಕ್ಷಿಸಲ್ಪಡುವನು” (NW). ಪ್ರತಿಯೊಬ್ಬ ಯೆಹೂದ್ಯನೂ, ಯೆಹೋವನ ನಾಮವನ್ನು ಕರೆಯುವ ವೈಯಕ್ತಿಕ ನಿರ್ಣಯವನ್ನು ಮಾಡಬೇಕಿತ್ತು. ಇದು ಪೇತ್ರನ ಮುಂದಿನ ಸೂಚನೆಗಳನ್ನು ಪಾಲಿಸುವುದನ್ನು ಒಳಗೂಡಿತ್ತು: “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ.” (ಅ. ಕೃತ್ಯಗಳು 2:38) ಇಸ್ರಾಯೇಲ್ ಒಂದು ಜನಾಂಗದೋಪಾದಿ ತಿರಸ್ಕರಿಸಿದಂತಹ ಮೆಸ್ಸೀಯನನ್ನು ಪೇತ್ರನ ಕೇಳುಗರು ಅಂಗೀಕರಿಸಬೇಕಾಗಿತ್ತು.
5 ಯೋವೇಲನ ಆ ಪ್ರವಾದನಾ ಮಾತುಗಳು, ಪ್ರಥಮ ಶತಮಾನದ ದೀನ ವ್ಯಕ್ತಿಗಳ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದವು. ಆದಾಗಲೂ, ಅವು ಇಂದು ಇನ್ನೂ ಹೆಚ್ಚು ಮಹತ್ತಾದ ಪ್ರಭಾವವನ್ನು ಬೀರಿವೆ ಯಾಕಂದರೆ, 20ನೆಯ ಶತಮಾನದ ಘಟನೆಗಳು ತೋರಿಸುವಂತೆ, ಯೋವೇಲನ ಪ್ರವಾದನೆಯ ಎರಡನೆಯ ನೆರವೇರಿಕೆಯೊಂದು ಇದೆ. ಹೇಗೆಂದು ನಾವು ನೋಡೋಣ.
6. ದೇವರ ಇಸ್ರಾಯೇಲಿನ ಗುರುತು, 1914 ಸಮೀಪಿಸಿದಂತೆ ಸ್ಪಷ್ಟವಾಗತೊಡಗಿದ್ದು ಹೇಗೆ?
6 ಅಪೊಸ್ತಲರ ಮರಣದ ಅನಂತರ, ದೇವರ ಇಸ್ರಾಯೇಲ್, ಸುಳ್ಳು ಕ್ರೈಸ್ತತ್ವದ ಹಣಜಿಗಳಿಂದಾಗಿ ಮರೆಮಾಡಲ್ಪಟ್ಟಿತು. ಆದರೆ 1914ರಲ್ಲಿ ಆರಂಭಿಸಿದ ಅಂತ್ಯದ ಸಮಯದಲ್ಲಿ, ಈ ಆತ್ಮಿಕ ಜನಾಂಗದ ಗುರುತು ಪುನಃ ಒಮ್ಮೆ ಸ್ಪಷ್ಟವಾಯಿತು. ಇದೆಲ್ಲವೂ ಗೋಧಿ ಮತ್ತು ಹಣಜಿಗಳ ಯೇಸುವಿನ ಸಾಮ್ಯದ ನೆರವೇರಿಕೆಯಾಗಿತ್ತು. (ಮತ್ತಾಯ 13:24-30, 36-43) 1914 ಸಮೀಪಿಸಿದಂತೆ, ಅಭಿಷಿಕ್ತ ಕ್ರೈಸ್ತರು ತಮ್ಮನ್ನು ಅಪನಂಬಿಗಸ್ತ ಕ್ರೈಸ್ತಪ್ರಪಂಚದಿಂದ ಪ್ರತ್ಯೇಕಿಸಿಕೊಳ್ಳಲಾರಂಭಿಸಿ, ಧೈರ್ಯದಿಂದ ಅವಳ ಸುಳ್ಳು ಸಿದ್ಧಾಂತಗಳನ್ನು ತಿರಸ್ಕರಿಸಿದರು ಮತ್ತು “ಅನ್ಯದೇಶದವರ ಸಮಯಗಳ” ಬರಲಿರುವ ಅಂತ್ಯದ ಕುರಿತಾಗಿ ಸಾರಿದರು. (ಲೂಕ 21:24) ಆದರೆ 1914ರಲ್ಲಿ ಆರಂಭಿಸಿದ ಪ್ರಥಮ ಜಾಗತಿಕ ಯುದ್ಧದ ಅನಂತರ, ಅವರು ಯಾವುದಕ್ಕಾಗಿ ಸಿದ್ಧರಾಗಿರಲಿಲ್ಲವೊ ಅಂತಹ ವಿವಾದಾಂಶಗಳು ಎದ್ದವು. ವಿಪರೀತ ಒತ್ತಡದ ಕೆಳಗೆ ಅನೇಕರು ನಿಧಾನಿಸಿದರು, ಮತ್ತು ಕೆಲವರು ರಾಜಿಮಾಡಿಕೊಂಡರು. 1918ರೊಳಗೆ, ಅವರ ಸಾರುವ ಚಟುವಟಿಕೆಯು ಕಾರ್ಯತಃ ನಿಂತುಹೋಗಿತ್ತು.
7. (ಎ) ಸಾ.ಶ. 33ನೆಯ ಪಂಚಾಶತ್ತಮಕ್ಕೆ ಹೋಲುವಂತಹ ಯಾವ ಘಟನೆ 1919ರಲ್ಲಿ ಸಂಭವಿಸಿತು? (ಬಿ) 1919ರಲ್ಲಿ ಆರಂಭಿಸುತ್ತಾ, ಯೆಹೋವನ ಸೇವಕರ ಮೇಲೆ ದೇವರ ಆತ್ಮದ ಸುರಿಸುವಿಕೆಯು ಯಾವ ಪರಿಣಾಮವನ್ನು ಬೀರಿತು?
7 ಆದರೂ, ಅದು ಹೆಚ್ಚು ಸಮಯ ಹಾಗೆ ಉಳಿಯಲಿಲ್ಲ. 1919ರಲ್ಲಿ ಆರಂಭಿಸುತ್ತಾ, ಸಾ.ಶ. 33ರ ಪಂಚಾಶತ್ತಮವನ್ನು ನೆನಪಿಗೆ ತರುವಂತಹ ವಿಧದಲ್ಲಿ ಯೆಹೋವನು ತನ್ನ ಜನರ ಮೇಲೆ ತನ್ನ ಆತ್ಮವನ್ನು ಸುರಿಸಲಾರಂಭಿಸಿದನು. ನಿಶ್ಚಯವಾಗಿಯೂ, 1919ರಲ್ಲಿ ವಿವಿಧ ಭಾಷೆಗಳಲ್ಲಿ ಮಾತಾಡುವುದು ಮತ್ತು ಬೀಸುವ ಬಿರುಗಾಳಿಯು ಇರಲಿಲ್ಲ. 1 ಕೊರಿಂಥ 13:8ರಲ್ಲಿರುವ ಪೌಲನ ಮಾತುಗಳಿಂದ ನಮಗೆ ತಿಳಿದುಬರುತ್ತದೇನೆಂದರೆ, ಅದ್ಭುತಕಾರ್ಯಗಳಿಗಾಗಿದ್ದ ಸಮಯವು ಬಹಳ ಹಿಂದೆಯೆ ಗತಿಸಿಹೋಗಿತ್ತು. ಆದರೂ, 1919ರಲ್ಲಿ ಅಮೆರಿಕದ ಓಹಾಯೋದ ಸೀಡರ್ ಪಾಯಿಂಟ್ನಲ್ಲಿನ ಒಂದು ಅಧಿವೇಶನದಲ್ಲಿ, ನಂಬಿಗಸ್ತ ಕ್ರೈಸ್ತರು ಪುನರ್ಚೇತನಗೊಳಿಸಲ್ಪಟ್ಟು, ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವನ್ನು ಪುನಃ ಆರಂಭಿಸಿದಾಗ, ದೇವರ ಆತ್ಮವು ಸ್ಪಷ್ಟವಾಗಿ ವ್ಯಕ್ತವಾಗಿತ್ತು. 1922ರಲ್ಲಿ ಅವರು ಸೀಡಾರ್ ಪಾಯಿಂಟ್ಗೆ ಹಿಂದಿರುಗಿದರು ಮತ್ತು “ರಾಜನನ್ನೂ, ಆತನ ರಾಜ್ಯವನ್ನೂ ಘೋಷಿಸಿರಿ, ಘೋಷಿಸಿರಿ, ಘೋಷಿಸಿರಿ” ಎಂಬ ಕರೆಯಿಂದ ಹುರಿದುಂಬಿಸಲ್ಪಟ್ಟರು. ಪ್ರಥಮ ಶತಮಾನದಲ್ಲಿ ಸಂಭವಿಸಿದಂತೆ, ದೇವರ ಆತ್ಮದ ಸುರಿಸುವಿಕೆಯ ಪರಿಣಾಮಗಳಿಗೆ ಗಮನ ಕೊಡುವಂತೆ ಲೋಕವು ಒತ್ತಾಯಿಸಲ್ಪಟ್ಟಿತು. ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನು—ಗಂಡೂಹೆಣ್ಣೂ, ಆಬಾಲವೃದ್ಧರೂ—‘ಪ್ರವಾದಿಸಲು,’ ಅಂದರೆ, “ದೇವರ ಮಹತ್ತುಗಳ ವಿಷಯವಾಗಿ” ಘೋಷಿಸಲು ಆರಂಭಿಸಿದರು. (ಅ. ಕೃತ್ಯಗಳು 2:11) ಪೇತ್ರನಂತೆ ಅವರು ದೀನ ವ್ಯಕ್ತಿಗಳಿಗೆ ಪ್ರೇರಿಸಿದ್ದು: “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ.” (ಅ. ಕೃತ್ಯಗಳು 2:40) ಪ್ರತಿಕ್ರಿಯೆ ತೋರಿಸುವ ವ್ಯಕ್ತಿಗಳು ಅದನ್ನು ಹೇಗೆ ಮಾಡಸಾಧ್ಯವಿತ್ತು? “ಯೆಹೋವನ ನಾಮವನ್ನು ಕರೆಯುವವರೆಲ್ಲರು ಸುರಕ್ಷಿತರಾಗಿ ಪಾರಾಗುವರು” ಎಂಬ ಯೋವೇಲ 2:32 (NW)ರಲ್ಲಿರುವ ಯೋವೇಲನ ಮಾತುಗಳನ್ನು ಪಾಲಿಸುವ ಮೂಲಕವೇ.
8. 1919ರಂದಿನಿಂದ, ದೇವರ ಇಸ್ರಾಯೇಲಿಗೆ ವಿಷಯಗಳು ಹೇಗೆ ಪ್ರಗತಿಹೊಂದಿವೆ?
8 ಆ ಆರಂಭದ ವರ್ಷಗಳಂದಿನಿಂದ, ದೇವರ ಇಸ್ರಾಯೇಲಿನ ವ್ಯವಹಾರಗಳು ಮುಂದುವರಿದಿವೆ. ಅಭಿಷಿಕ್ತರ ಮುದ್ರೆಯೊತ್ತುವಿಕೆಯು ಸಾಕಷ್ಟು ಮುಂದುವರಿದಿರುವಂತೆ ತೋರುತ್ತದೆ, ಮತ್ತು 1930ರುಗಳಂದಿನಿಂದ ಭೂನಿರೀಕ್ಷೆಯಿರುವ ದೀನ ವ್ಯಕ್ತಿಗಳ ಒಂದು ಮಹಾ ಸಮೂಹವು ತೋರಿಬಂದಿದೆ. (ಪ್ರಕಟನೆ 7:3, 9) ಎಲ್ಲರಿಗೂ ತುರ್ತಿನ ಪ್ರಜ್ಞೆಯ ಅನಿಸಿಕೆಯಾಗುತ್ತದೆ. ಯಾಕಂದರೆ ಯೋವೇಲ 2:28, 29ರ ಎರಡನೆಯ ನೆರವೇರಿಕೆಯು ತೋರಿಸುತ್ತದೇನೆಂದರೆ, ಲೋಕವ್ಯಾಪಕವಾದ ಧಾರ್ಮಿಕ, ರಾಜಕೀಯ ಮತ್ತು ವಾಣಿಜ್ಯ ವಿಷಯಗಳ ವ್ಯವಸ್ಥೆಯು ನಾಶಗೊಳಿಸಲ್ಪಡಲಿರುವ ಯೆಹೋವನ ಇನ್ನೂ ಹೆಚ್ಚು ಮಹತ್ತಾದ ಭಯಪ್ರೇರಕ ದಿನಕ್ಕೆ ನಾವು ನಿಕಟವಾಗಿದ್ದೇವೆ. ಯೆಹೋವನು ನಮ್ಮನ್ನು ವಿಮೋಚಿಸುವನೆಂಬ ಪೂರ್ಣ ನಂಬಿಕೆಯಿಂದ ‘ಯೆಹೋವನ ನಾಮವನ್ನು ಕರೆಯಲು’ ನಮಗೆ ಪ್ರತಿಯೊಂದು ಕಾರಣವಿದೆ!
ನಾವು ಯೆಹೋವನ ನಾಮವನ್ನು ಕರೆಯುವುದು ಹೇಗೆ?
9. ಯೆಹೋವನ ನಾಮವನ್ನು ಕರೆಯುವುದರಲ್ಲಿ ಯಾವ ಕೆಲವು ಸಂಗತಿಗಳು ಒಳಗೂಡಿವೆ?
9 ಯೆಹೋವನ ನಾಮವನ್ನು ಕರೆಯುವುದರಲ್ಲಿ ಏನು ಒಳಗೊಂಡಿದೆ? ಯೋವೇಲ 2:28, 29ರ ಪೂರ್ವಾಪರವು ನಮಗೆ ಆ ಪ್ರಶ್ನೆಯನ್ನು ಉತ್ತರಿಸಲು ಸಹಾಯ ಮಾಡುತ್ತದೆ. ಉದಾಹರಣೆಗಾಗಿ, ಯೆಹೋವನು ತನ್ನನ್ನು ಕರೆಯುವವರೆಲ್ಲರಿಗೂ ಕಿವಿಗೊಡುವುದಿಲ್ಲ. ಇನ್ನೊಬ್ಬ ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಇಸ್ರಾಯೇಲಿಗೆ ಹೇಳಿದ್ದು: “ನೀವು [ನನ್ನ ಕಡೆಗೆ] ಕೈಯೆತ್ತುವಾಗ ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು.” ಯೆಹೋವನು ತನ್ನ ಸ್ವಂತ ಜನಾಂಗಕ್ಕೆ ಕಿವಿಗೊಡಲು ನಿರಾಕರಿಸಿದ್ದೇಕೆ? ಆತನೇ ವಿವರಿಸುವುದು: “ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.” (ಯೆಶಾಯ 1:15) ರಕ್ತದೋಷಿಯಾಗಿರುವ ಅಥವಾ ಪಾಪವನ್ನು ಅಭ್ಯಾಸಿಸುತ್ತಿರುವ ಯಾರಿಗೂ ಯೆಹೋವನು ಕಿವಿಗೊಡುವುದಿಲ್ಲ. ಆದುದರಿಂದಲೇ ಪೇತ್ರನು ಪಂಚಾಶತ್ತಮದಲ್ಲಿದ್ದ ಯೆಹೂದ್ಯರಿಗೆ ಪಶ್ಚಾತ್ತಾಪಪಡಲು ಹೇಳಿದನು. ಯೋವೇಲ 2:28, 29ರ ಪೂರ್ವಾಪರದಲ್ಲಿ ಯೋವೇಲನು ಕೂಡ ಪಶ್ಚಾತ್ತಾಪವನ್ನು ಒತ್ತಿಹೇಳುವುದನ್ನು ನಾವು ಕಂಡುಕೊಳ್ಳುತ್ತೇವೆ. ಉದಾಹರಣೆಗಾಗಿ, ಯೋವೇಲ 2:12, 13ರಲ್ಲಿ ನಾವು ಹೀಗೆ ಓದುತ್ತೇವೆ: “ಯೆಹೋವನು ಇಂತೆನ್ನುತ್ತಾನೆ—ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ; ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು ನಿಮ್ಮ ದೇವರಾದ ಯೆಹೋವನ ಕಡೆಗೆ ತಿರಿಗಿಕೊಳ್ಳಿರಿ; ಆತನು ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳವನಾಗಿ ಮಾಡಬೇಕೆಂದಿದ್ದ ಕೇಡಿಗೆ ಮನಮರುಗುತ್ತಾನೆ.” 1919ರಲ್ಲಿ ಆರಂಭಿಸುತ್ತಾ, ಅಭಿಷಿಕ್ತ ಕ್ರೈಸ್ತರು ಈ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲಾರಂಭಿಸಿದರು. ಅವರು ತಮ್ಮ ತಪ್ಪುಗಳ ಕುರಿತು ಪಶ್ಚಾತ್ತಾಪಪಟ್ಟು, ಪುನಃ ಇನ್ನೆಂದಿಗೂ ರಾಜಿಮಾಡಿಕೊಳ್ಳದಿರಲು ಅಥವಾ ನಿಧಾನಿಸದಿರಲು ದೃಢನಿರ್ಧಾರಮಾಡಿದರು. ಇದು ದೇವರ ಆತ್ಮವು ಸುರಿಸಲ್ಪಡಲು ದಾರಿಯನ್ನು ತೆರೆಯಿತು. ಯೆಹೋವನ ನಾಮವನ್ನು ಕರೆದು, ಆಲಿಸಲ್ಪಡಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಇದೇ ಮಾರ್ಗಕ್ರಮವನ್ನು ಅನುಸರಿಸಬೇಕು.
10. (ಎ) ನಿಜ ಪಶ್ಚಾತ್ತಾಪವೆಂದರೇನು? (ಬಿ) ನಿಜ ಪಶ್ಚಾತ್ತಾಪಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ?
10 ನಿಜ ಪಶ್ಚಾತ್ತಾಪವು, ಕೇವಲ “ನನ್ನನ್ನು ಕ್ಷಮಿಸು” ಎಂದು ಹೇಳುವುದಕ್ಕಿಂತಲೂ ಹೆಚ್ಚಾಗಿದೆಯೆಂಬುದನ್ನು ನೆನಪಿನಲ್ಲಿಡಿರಿ. ಇಸ್ರಾಯೇಲ್ಯರು, ತಮ್ಮ ಭಾವನೆಗಳ ತೀವ್ರತೆಯನ್ನು ತೋರಿಸಲಿಕ್ಕಾಗಿ ತಮ್ಮ ಹೊರ ಉಡುಪುಗಳನ್ನು ಹರಿದುಕೊಳ್ಳುತ್ತಿದ್ದರು. ಆದರೆ ಯೆಹೋವನು ಹೇಳುವುದು: ‘ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ.’ ನಿಜ ಪಶ್ಚಾತ್ತಾಪವು, ನಮ್ಮ ಅಂತರಾಳದಿಂದ, ಹೃದಯದಿಂದ ಬರುತ್ತದೆ. “ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ” ಎಂಬುದಾಗಿ ನಾವು ಯೆಶಾಯ 55:7ರಲ್ಲಿ ಓದುವಂತೆ, ಅದು ನಾವು ತಪ್ಪುಗೈಯುವಿಕೆಯನ್ನು ತ್ಯಜಿಸುವುದನ್ನು ಒಳಗೊಳ್ಳುತ್ತದೆ. ಇದು, ಯೇಸು ಮಾಡಿದಂತೆ ಪಾಪವನ್ನು ದ್ವೇಷಿಸುವುದನ್ನು ಒಳಗೊಳ್ಳುತ್ತದೆ. (ಇಬ್ರಿಯ 1:9) ಅನಂತರ, ಯೆಹೋವನು ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಮ್ಮನ್ನು ಕ್ಷಮಿಸುವಂತೆ ಆತನ ಮೇಲೆ ಭರವಸೆಯಿಡುತ್ತೇವೆ. ಯಾಕಂದರೆ ಯೆಹೋವನು, “ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳವನಾಗಿ”ದ್ದಾನೆ. ಆತನು ನಮ್ಮ ಆರಾಧನೆಯನ್ನು, ನಮ್ಮ ಆತ್ಮಿಕ ಧಾನ್ಯಪಾನನೈವೇದ್ಯವನ್ನು ಅಂಗೀಕರಿಸುವನು. ನಾವು ಆತನ ಹೆಸರನ್ನು ಕರೆಯುವಾಗ ಅವನು ಕಿವಿಗೊಡುವನು.—ಯೋವೇಲ 2:14.
11. ಸತ್ಯಾರಾಧನೆಗೆ ನಮ್ಮ ಜೀವಿತಗಳಲ್ಲಿ ಯಾವ ಸ್ಥಾನವಿರಬೇಕು?
11 ಪರ್ವತ ಪ್ರಸಂಗದಲ್ಲಿ, “ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ,” ಎಂದು ಯೇಸು ಹೇಳಿದಾಗ, ಅವನು ನಮಗೆ ಬೇರೊಂದು ವಿಷಯವನ್ನು ಮನಸ್ಸಿನಲ್ಲಿಡುವಂತೆ ಕೊಟ್ಟನು. (ಮತ್ತಾಯ 6:33) ನಮ್ಮ ಆರಾಧನೆಯು, ನಮ್ಮ ಮನಸ್ಸಾಕ್ಷಿಯನ್ನು ಶಮನಗೊಳಿಸಲಿಕ್ಕಾಗಿ ಒಂದು ನಾಮಮಾತ್ರ ವಿಧದಲ್ಲಿ ನಾವು ಮಾಡುವಂತಹ ವಿಷಯವಾಗಿ, ನಿರ್ಲಕ್ಷ್ಯದಿಂದ ವೀಕ್ಷಿಸಲ್ಪಡಬಾರದು. ದೇವರಿಗೆ ಸೇವೆ ಸಲ್ಲಿಸುವುದು ನಮ್ಮ ಜೀವನದಲ್ಲಿ ಪ್ರಥಮ ಸ್ಥಾನಕ್ಕೆ ಅರ್ಹವಾಗಿದೆ. ಹೀಗಿರುವುದರಿಂದ ಯೆಹೋವನು ಯೋವೇಲನ ಮೂಲಕ ಹೇಳುತ್ತಾ ಮುಂದುವರಿಯುವುದು: “ಚೀಯೋನಿನಲ್ಲಿ ಕೊಂಬೂದಿರಿ, . . . ಜನರನ್ನು ಒಟ್ಟಿಗೆ ಬರಮಾಡಿರಿ, ಕೂಟವನ್ನು ಏರ್ಪಡಿಸಿರಿ, ವೃದ್ಧರನ್ನು ಕೂಡಿಸಿರಿ, ಮಕ್ಕಳನ್ನೂ ಮೊಲೆಕೂಸುಗಳನ್ನೂ ಸೇರಿಸಿರಿ; ವಧೂವರರೂ ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ.” (ಯೋವೇಲ 2:15, 16) ನವ ವಿವಾಹಿತರ ಗಮನವು ಪರಸ್ಪರರ ಮೇಲೆ ಮಾತ್ರ ಇರುತ್ತಾ, ಅವರು ಅಪಕರ್ಷಿತರಾಗಿರುವುದು ಸ್ವಾಭಾವಿಕ. ಆದರೆ ಅವರಿಗೂ, ಯೆಹೋವನಿಗೆ ಸೇವೆ ಸಲ್ಲಿಸುವುದು ಪ್ರಥಮವಾಗಿರಬೇಕು. ನಮ್ಮ ದೇವರ ನಾಮವನ್ನು ಕರೆಯುತ್ತಾ, ಆತನ ಸತ್ಯಾರಾಧನೆಯಲ್ಲಿ ನಾವು ಒಟ್ಟುಗೂಡಿಸಲ್ಪಡುವ ವಿಷಯದ ಮುಂದೆ ಇನ್ಯಾವ ವಿಷಯವು ಬರಬಾರದು.
12. ಕಳೆದ ವರ್ಷದ ಜ್ಞಾಪಕದ ವರದಿಯಲ್ಲಿ, ಬೆಳವಣಿಗೆಗಾಗಿರುವ ಯಾವ ಸಾಧ್ಯತೆಯನ್ನು ನೋಡಸಾಧ್ಯವಿದೆ?
12 ಇದನ್ನು ಮನಸ್ಸಿನಲ್ಲಿಡುತ್ತಾ, ಯೆಹೋವನ ಸಾಕ್ಷಿಗಳ 1997ರ ಸೇವಾ ವರ್ಷ ವರದಿಯಿಂದ ಪ್ರಕಟಿಸಲ್ಪಟ್ಟ ಒಂದು ಸಂಖ್ಯಾಸಂಗ್ರಹಣವನ್ನು ನಾವು ಪರಿಗಣಿಸೋಣ. ಕಳೆದ ವರ್ಷ ನಮಗೆ 55,99,931 ರಾಜ್ಯ ಪ್ರಚಾರಕರ ಒಂದು ಉಚ್ಚಾಂಕವಿತ್ತು—ನಿಜವಾಗಿಯೂ, ಸ್ತುತಿಗಾರರ ಒಂದು ಮಹಾ ಸಮೂಹ! ಜ್ಞಾಪಕದ ಹಾಜರಿಯು 1,43,22,226 ಆಗಿತ್ತು. ಇದು ಪ್ರಚಾರಕರ ಸಂಖ್ಯೆಗಿಂತಲೂ ಸುಮಾರು 85 ಲಕ್ಷ ಹೆಚ್ಚು. ಆ ಸಂಖ್ಯೆಯು, ಬೆಳವಣಿಗೆಗಾಗಿರುವ ಅದ್ಭುತಕರ ಸಾಧ್ಯತೆಯನ್ನು ತೋರಿಸುತ್ತದೆ. ಆ 85 ಲಕ್ಷ ಮಂದಿಯಲ್ಲಿ ಅನೇಕರು, ಆಸಕ್ತ ವ್ಯಕ್ತಿಗಳೋಪಾದಿ ಅಥವಾ ದೀಕ್ಷಾಸ್ನಾನ ಹೊಂದಿರುವ ಹೆತ್ತವರ ಮಕ್ಕಳೋಪಾದಿ ಈಗಾಗಲೇ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದರು. ಅವರಲ್ಲಿ ಹೆಚ್ಚಿನವರು, ಮೊತ್ತ ಮೊದಲ ಬಾರಿ ಒಂದು ಕೂಟಕ್ಕೆ ಹಾಜರಾಗುತ್ತಿದ್ದರು. ಅವರು ಉಪಸ್ಥಿತರಾಗಿರುವುದು, ಯೆಹೋವನ ಸಾಕ್ಷಿಗಳಿಗೆ ಅವರ ಪರಿಚಯಮಾಡಿಕೊಳ್ಳಲು ಮತ್ತು ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ಅವರಿಗೆ ಸಹಾಯವನ್ನು ನೀಡಲು ಒಂದು ಉತ್ತಮ ಅವಕಾಶವನ್ನು ಕೊಟ್ಟಿತು. ಆಮೇಲೆ, ಪ್ರತಿ ವರ್ಷ ಜ್ಞಾಪಕಕ್ಕೆ ಹಾಜರಾಗಿ, ಪ್ರಾಯಶಃ ಇತರ ಕೆಲವು ಕೂಟಗಳಿಗೆ ಹಾಜರಾದರೂ ಯಾವುದೇ ಹೆಚ್ಚಿನ ಪ್ರಗತಿಯನ್ನು ಮಾಡದವರೂ ಇದ್ದಾರೆ. ಖಂಡಿತವಾಗಿಯೂ, ಅಂತಹವರು ಕೂಟಗಳಿಗೆ ಧಾರಾಳವಾಗಿ ಹಾಜರಾಗಬಹುದು. ಆದರೆ ಅವರು ಯೋವೇಲನ ಪ್ರವಾದನಾ ಮಾತುಗಳ ಕುರಿತು ಜಾಗರೂಕವಾಗಿ ಮನನ ಮಾಡಿ, ಯೆಹೋವನ ನಾಮವನ್ನು ಅವರು ಕರೆಯುವಾಗ ಆತನು ತಮ್ಮನ್ನು ಆಲಿಸುವನೆಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನು ಮುಂದಕ್ಕೆ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ಪರಿಗಣಿಸುವಂತೆ ನಾವು ಅವರನ್ನು ಉತ್ತೇಜಿಸುತ್ತೇವೆ.
13. ನಾವು ಈಗಾಗಲೇ ಯೆಹೋವನ ನಾಮವನ್ನು ಕರೆಯುತ್ತಿರುವುದಾದರೆ, ನಮಗೆ ಇತರರ ಕಡೆಗೆ ಯಾವ ಜವಾಬ್ದಾರಿಯಿದೆ?
13 ಅಪೊಸ್ತಲ ಪೌಲನು ದೇವರ ನಾಮವನ್ನು ಕರೆಯುವ ಇನ್ನೊಂದು ಅಂಶವನ್ನು ಒತ್ತಿಹೇಳಿದನು. ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ ಅವನು ಯೋವೇಲನ ಪ್ರವಾದನಾ ಮಾತುಗಳನ್ನು ಉದ್ಧರಿಸಿದನು: “ಯೆಹೋವನ ನಾಮವನ್ನು ಕರೆಯುವವರೆಲ್ಲರ ರಕ್ಷಣೆಯಾಗುವದು” (NW). ಅನಂತರ ಅವನು ತರ್ಕಿಸಿದ್ದು: “ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು [“ಕರೆಯುವದು,” NW] ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” (ರೋಮಾಪುರ 10:13, 14) ಹೌದು, ಇಂದಿನ ವರೆಗೂ ಯೆಹೋವನನ್ನು ತಿಳಿದಿರದ ಇತರ ಅನೇಕ ಮಂದಿ, ಆತನ ನಾಮವನ್ನು ಕರೆಯಬೇಕಾಗಿದೆ. ಯೆಹೋವನನ್ನು ಈಗಾಗಲೇ ತಿಳಿದಿರುವವರು ಅಂತಹವರಿಗೆ ಸಾರುವ ಜವಾಬ್ದಾರಿ ಮಾತ್ರವಲ್ಲದೆ, ಮುಂದೆ ಹೋಗಿ ಅವರಿಗೆ ಆ ಸಹಾಯವನ್ನು ಕೊಡುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ.
ಒಂದು ಆತ್ಮಿಕ ಪ್ರಮೋದವನ
14, 15. ಯೆಹೋವನ ಜನರು, ಆತನನ್ನು ಪ್ರಸನ್ನಗೊಳಿಸುವಂತಹ ವಿಧದಲ್ಲಿ ಆತನ ಹೆಸರನ್ನು ಕರೆಯುವ ಕಾರಣದಿಂದ, ಯಾವ ಪ್ರಮೋದವನೀಯ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ?
14 ಅಭಿಷಿಕ್ತರೂ ಬೇರೆ ಕುರಿಗಳೂ ವಿಷಯಗಳನ್ನು ದೃಷ್ಟಿಸುವ ವಿಧ ಅದಾಗಿದೆ, ಮತ್ತು ಫಲಸ್ವರೂಪವಾಗಿ ಯೆಹೋವನು ಅವರನ್ನು ಆಶೀರ್ವದಿಸುತ್ತಾನೆ. “ಯೆಹೋವನು ತನ್ನ ದೇಶಕ್ಕೆ ಹುರುಪುಳ್ಳವನಾಗಿರುವನು ಮತ್ತು ತನ್ನ ಜನರಿಗೆ ಕರುಣೆಯನ್ನು ತೋರಿಸುವನು.” (ಯೋವೇಲ 2:18, NW) 1919ರಲ್ಲಿ, ಯೆಹೋವನು ತನ್ನ ಜನರನ್ನು ಪುನಃಸ್ಥಾಪಿಸಿ ಅವರನ್ನು ಒಂದು ಆತ್ಮಿಕ ಪ್ರಮೋದವನದೊಳಗೆ ತಂದಾಗ, ತನ್ನ ಜನರಿಗಾಗಿ ಹುರುಪು ಮತ್ತು ಕರುಣೆಯನ್ನು ತೋರಿಸಿದನು. ಇದು ನಿಜವಾಗಿಯೂ ಒಂದು ಆತ್ಮಿಕ ಪ್ರಮೋದವನವಾಗಿದ್ದು, ಈ ಮಾತುಗಳಲ್ಲಿ ಯೋವೇಲನಿಂದ ಚೆನ್ನಾಗಿ ವರ್ಣಿಸಲ್ಪಟ್ಟಿದೆ: “ಭೂಮಿಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು; ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು. ಭೂಜಂತುಗಳೇ, ಅಂಜಬೇಡಿರಿ; ಕಾಡಿನ ಕಾವಲಲ್ಲಿ ಹುಲ್ಲು ಮೊಳೆಯುವದು, ಮರವು ಹಣ್ಣುಬಿಡುವದು, ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು. ಚೀಯೋನಿನ ಸಂತತಿಯವರೇ, ನಿಮ್ಮ ದೇವರಾದ ಯೆಹೋವನಲ್ಲಿ ಹರ್ಷಿಸಿರಿ, ಉಲ್ಲಾಸಿಸಿರಿ, ಆತನು ಮುಂಗಾರನ್ನು ತಕ್ಕ ಹಾಗೆ ನಿಮಗೆ ಕೊಡುವನು; ಮುಂಗಾರು ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು. ಕಣಗಳಲ್ಲಿ ಗೋದಿಯು ರಾಶಿರಾಶಿಯಾಗಿರುವದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು.”—ಯೋವೇಲ 2:21-24.
15 ಎಂತಹ ಒಂದು ಆನಂದಮಯ ಚಿತ್ರ! ಸಮೃದ್ಧವಾದ ದನಕುರಿಗಳ ಹಿಂಡುಗಳೊಂದಿಗೆ, ಇಸ್ರಾಯೇಲಿನ ಮೂರು ಪ್ರಧಾನ ಸರಕುಗಳು—ಧಾನ್ಯ, ಆಲಿವ್ ಎಣ್ಣೆ, ಮತ್ತು ದ್ರಾಕ್ಷಾರಸವು—ಹೇರಳವಾಗಿ ಒದಗಿಸಲ್ಪಡಲಿದ್ದವು. ನಮ್ಮ ದಿನದಲ್ಲಿ, ಆ ಪ್ರವಾದನಾ ಮಾತುಗಳು ಖಂಡಿತವಾಗಿಯೂ ಒಂದು ಆತ್ಮಿಕ ವಿಧದಲ್ಲಿ ನೆರವೇರಿಸಲ್ಪಡುತ್ತಿವೆ. ನಮಗೆ ಅಗತ್ಯವಿರುವ ಎಲ್ಲ ಆತ್ಮಿಕ ಆಹಾರವನ್ನು ಯೆಹೋವನು ನಮಗೆ ಕೊಡುತ್ತಾನೆ. ಅಂತಹ ದೇವದತ್ತ ಸಮೃದ್ಧಿಯಲ್ಲಿ ನಾವು ಹರ್ಷಗೊಳ್ಳುವುದಿಲ್ಲವೊ? ಮಲಾಕಿಯನು ಮುಂತಿಳಿಸಿದಂತೆ, ನಮ್ಮ ದೇವರು ನಿಜವಾಗಿಯೂ ‘ಪರಲೋಕದ ದ್ವಾರಗಳನ್ನು ತೆರೆದು ನಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಸಿ’ದ್ದಾನೆ.—ಮಲಾಕಿಯ 3:10.
ವಿಷಯಗಳ ವ್ಯವಸ್ಥೆಯ ಅಂತ್ಯ
16. (ಎ) ಯೆಹೋವನ ಆತ್ಮದ ಸುರಿಸುವಿಕೆಯು ನಮ್ಮ ಸಮಯಕ್ಕಾಗಿ ಏನನ್ನು ಸೂಚಿಸುತ್ತದೆ? (ಬಿ) ಭವಿಷ್ಯತ್ತು ಏನನ್ನು ಕಾದಿರಿಸಿದೆ?
16 ದೇವರ ಜನರ ಪ್ರಮೋದವನೀಯ ಪರಿಸ್ಥಿತಿಯನ್ನು ಮುಂತಿಳಿಸಿದ ಅನಂತರವೇ, ಯೋವೇಲನು ಯೆಹೋವನ ಆತ್ಮದ ಸುರಿಸುವಿಕೆಯ ಕುರಿತಾಗಿ ಪ್ರವಾದಿಸುತ್ತಾನೆ. ಪೇತ್ರನು ಈ ಪ್ರವಾದನೆಯನ್ನು ಪಂಚಾಶತ್ತಮದಂದು ಉದ್ಧರಿಸಿದಾಗ, ಅದು “ಕಡೇ ದಿವಸಗಳಲ್ಲಿ” ನೆರವೇರಿಸಲ್ಪಟ್ಟಿತೆಂದು ಹೇಳಿದನು. (ಅ. ಕೃತ್ಯಗಳು 2:17) ಹಿಂದೆ ಆ ಸಮಯದಲ್ಲಿ ದೇವರ ಆತ್ಮದ ಸುರಿಸುವಿಕೆಯು, ಯೆಹೂದಿ ವಿಷಯಗಳ ವ್ಯವಸ್ಥೆಗಾಗಿ ಕಡೇ ದಿವಸಗಳು ಆರಂಭಿಸಿದವೆಂಬುದನ್ನು ಅರ್ಥೈಸಿತು. 20ನೆಯ ಶತಮಾನದಲ್ಲಿ ದೇವರ ಇಸ್ರಾಯೇಲಿನ ಮೇಲೆ ದೇವರ ಆತ್ಮದ ಸುರಿಸುವಿಕೆಯು, ನಾವು ಲೋಕವ್ಯಾಪಕವಾದ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ಅರ್ಥೈಸುತ್ತದೆ. ಇದರ ನೋಟದಲ್ಲಿ, ಭವಿಷ್ಯತ್ತು ಏನನ್ನು ಕಾದಿರಿಸಿದೆ? ಯೋವೇಲನ ಪ್ರವಾದನೆಯು ನಮಗೆ ಹೀಗೆ ಹೇಳುತ್ತಾ ಮುಂದುವರಿಯುವುದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು; ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.”—ಯೋವೇಲ 2:30, 31.
17, 18. (ಎ) ಯೆರೂಸಲೇಮಿನ ಮೇಲೆ ಯೆಹೋವನ ಯಾವ ಭಯಪ್ರೇರಕ ದಿನವು ಎರಗಿತು? (ಬಿ) ಯೆಹೋವನ ಭವಿಷ್ಯತ್ತಿನ ಭಯಪ್ರೇರಕ ದಿನದ ನಿಶ್ಚಿತತೆಯು, ನಾವು ಏನನ್ನು ಮಾಡುವಂತೆ ಪ್ರಚೋದಿಸುತ್ತದೆ?
17 ಸಾ.ಶ. 70ರಲ್ಲಿನ ಯೆಹೋವನ ಭಯಂಕರವಾದ ಮಹಾದಿನದ ಪರಾಕಾಷ್ಠೆಯ ಕಡೆಗೆ ಘಟನೆಗಳು ಕಠೋರವಾಗಿ ಚಲಿಸಿದಾಗ ಈ ಪ್ರವಾದನಾ ಮಾತುಗಳು ಯೂದಾಯದಲ್ಲಿ ಸಾ.ಶ. 66ರಲ್ಲಿ ನಿಜವಾಗಲಾರಂಭಿಸಿದವು. ಆ ಸಮಯದಲ್ಲಿ, ಯೆಹೋವನ ನಾಮವನ್ನು ಘನತೆಗೇರಿಸದೇ ಇದ್ದವರ ನಡುವೆ ಇರುವುದು ಎಷ್ಟು ಭಯಾನಕವಾಗಿತ್ತು! ಇಂದು, ಅಷ್ಟೇ ಭಯಾನಕ ಘಟನೆಗಳು ಸಂಭವಿಸಲಿವೆ. ಆಗ ಈ ಇಡೀ ಲೋಕದ ವಿಷಯಗಳ ವ್ಯವಸ್ಥೆಯು ಯೆಹೋವನಿಂದ ನಾಶಗೊಳಿಸಲ್ಪಡುವುದು. ಆದರೂ, ಪಲಾಯನವು ಸಾಧ್ಯ. ಆ ಪ್ರವಾದನೆಯು ಮುಂದುವರಿಯುತ್ತಾ ಹೇಳುವುದು: “ಆದರೂ ಯೆಹೋವನ ನಾಮವನ್ನು ಕರೆಯುವವರೆಲ್ಲರು ಸುರಕ್ಷಿತರಾಗಿ ಪಾರಾಗುವರು; ಯಾಕಂದರೆ ಯೆಹೋವನು ಹೇಳಿರುವಂತೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಪಲಾಯನಗೈದವರು ಇರುವರು, ಮತ್ತು ಯೆಹೋವನು ಕರೆಯುವ ಬದುಕುಳಿದವರಲ್ಲಿ ಅವರು ಸೇರಿದವರಾಗಿರುವರು.” (ಯೋವೇಲ 2:32, NW) ಯೆಹೋವನ ನಾಮವನ್ನು ತಿಳಿದಿರುವುದಕ್ಕಾಗಿ ಯೆಹೋವನ ಸಾಕ್ಷಿಗಳು ನಿಜವಾಗಿಯೂ ಆಭಾರಿಗಳಾಗಿದ್ದಾರೆ, ಮತ್ತು ತಾವು ಆತನನ್ನು ಕರೆಯುವಾಗ ಆತನು ಅವರನ್ನು ರಕ್ಷಿಸುವನೆಂದು ಅವರಿಗೆ ಸಂಪೂರ್ಣ ಭರವಸೆಯಿದೆ.
18 ಆದರೆ ಯೆಹೋವನ ಮಹಾ ಮತ್ತು ಪ್ರಖ್ಯಾತ ದಿನವು ತನ್ನ ಪೂರ್ಣ ರೋಷದಲ್ಲಿ ಈ ಲೋಕವನ್ನು ಬಡಿಯುವಾಗ ಏನು ಸಂಭವಿಸುವುದು? ಅದು ಕೊನೆಯ ಅಭ್ಯಾಸ ಲೇಖನದಲ್ಲಿ ಚರ್ಚಿಸಲ್ಪಡುವುದು.
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಯೆಹೋವನು ತನ್ನ ಜನರ ಮೇಲೆ ಪವಿತ್ರಾತ್ಮವನ್ನು ಪ್ರಥಮವಾಗಿ ಸುರಿಸಿದ್ದು ಯಾವಾಗ?
◻ ಯೆಹೋವನ ನಾಮವನ್ನು ಕರೆಯುವುದರಲ್ಲಿ ಒಳಗೂಡಿರುವ ಕೆಲವು ಸಂಗತಿಗಳು ಯಾವುವು?
◻ ಯೆಹೋವನ ಮಹಾ ಮತ್ತು ಪ್ರಖ್ಯಾತ ದಿನವು ಮಾಂಸಿಕ ಇಸ್ರಾಯೇಲಿನ ಮೇಲೆ ಬಂದದ್ದು ಯಾವಾಗ?
◻ ಇಂದು ತನ್ನ ಹೆಸರನ್ನು ಕರೆಯುವವರನ್ನು ಯೆಹೋವನು ಆಶೀರ್ವದಿಸುವುದು ಹೇಗೆ?
[ಪುಟ 15 ರಲ್ಲಿರುವ ಚಿತ್ರ]
ಸಾ.ಶ. 33ರ ಪಂಚಾಶತ್ತಮದಲ್ಲಿ ಒಂದು ಹೊಸ ಜನಾಂಗವು ಹುಟ್ಟಿತು
[ಪುಟ 17 ರಲ್ಲಿರುವ ಚಿತ್ರ]
ಈ ಶತಮಾನದ ಆದಿ ಭಾಗದಲ್ಲಿ, ಯೋವೇಲ 2:28, 29ರ ನೆರವೇರಿಕೆಯಲ್ಲಿ ಯೆಹೋವನು ತನ್ನ ಜನರ ಮೇಲೆ ಆತ್ಮವನ್ನು ಸುರಿಸಿದನು
[ಪುಟ 18 ರಲ್ಲಿರುವ ಚಿತ್ರ]
ಯೆಹೋವನ ನಾಮವನ್ನು ಕರೆಯಲು ಜನರಿಗೆ ಸಹಾಯಮಾಡಬೇಕು