ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುತ್ತಿದ್ದೀರಾ?
ಒಂದು ಊರಿನಲ್ಲಿ ಒಬ್ಬ ಬಡ ಹುಡುಗನಿದ್ದ. ಜನರು ಅವನನ್ನು ನೋಡಿ ಪೆದ್ದ ಅಂತ ನಗುತ್ತಿದ್ದರು. ಆ ಊರನ್ನು ನೋಡಲು ಬರುತ್ತಿದ್ದವರ ಮುಂದೆ ಅವನನ್ನು ಗೇಲಿ ಮಾಡುತ್ತಿದ್ದರು. ಅಷ್ಟೇ ಅಲ್ಲ, ಯಾವಾಗಲೂ ಅವನಿಗೆ ಒಂದು ದೊಡ್ಡ ಬೆಳ್ಳಿ ನಾಣ್ಯವನ್ನು ಮತ್ತು ಒಂದು ಚಿಕ್ಕ ಚಿನ್ನದ ನಾಣ್ಯವನ್ನು ತೋರಿಸಿ ಇದರಲ್ಲಿ “ನಿನಗೆ ಯಾವುದು ಬೇಕು” ಅಂತ ಕೇಳುತ್ತಿದ್ದರು. ಆಗ ಆ ಹುಡುಗ ಚಿನ್ನಕ್ಕಿಂತ ಕಡಿಮೆ ಬೆಲೆಯಿರುವ ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಓಡಿಹೋಗುತ್ತಿದ್ದ.
ಒಂದಿನ ಒಬ್ಬ ವ್ಯಕ್ತಿ ಆ ಹುಡುಗನಿಗೆ “ಬೆಳ್ಳಿಗಿಂತ ಎರಡು ಪಟ್ಟು ಬೆಲೆ ಚಿನ್ನಕ್ಕಿದೆ ಅಂತ ನಿನಗೆ ಗೊತ್ತಿಲ್ವಾ?” ಅಂತ ಕೇಳಿದರು. ಆಗ ಹುಡುಗ ನಗುತ್ತಾ “ನನಗೆ ಗೊತ್ತು” ಅಂದ. “ಮತ್ಯಾಕೆ ಈ ಬೆಳ್ಳಿ ನಾಣ್ಯ ತೆಗೆದುಕೊಂಡೆ? ನೀನು ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡಿದಿದ್ದರೆ ಎರಡು ಪಟ್ಟು ಹಣ ಸಿಗುತ್ತಿತ್ತು!” ಅಂತ ಆ ವ್ಯಕ್ತಿ ಹೇಳಿದರು. ಅದಕ್ಕೆ ಹುಡುಗ “ನಾನು ಚಿನ್ನದ ನಾಣ್ಯ ತೆಗೆದುಕೊಂಡರೆ ಅವರು ಇನ್ನು ಮುಂದೆ ನಾಣ್ಯಗಳನ್ನು ತಂದು ನನಗೆ ಯಾವುದು ಬೇಕು, ತಗೋ ಅಂತ ಹೇಳಲ್ಲ. ಈ ರೀತಿ ನಾನು ಎಷ್ಟು ಬೆಳ್ಳಿನಾಣ್ಯಗಳನ್ನು ಕೂಡಿಸಿಟ್ಟಿದ್ದೇನೆ ಅಂತ ನಿಮಗೆ ಗೊತ್ತಾ?” ಅಂದ. ಆ ಚಿಕ್ಕ ಹುಡುಗನಲ್ಲಿ ಪ್ರಾಯೋಗಿಕ ವಿವೇಕ ಇತ್ತು. ಈ ಗುಣವನ್ನು ದೊಡ್ಡವರೂ ತೋರಿಸಿ ಪ್ರಯೋಜನ ಪಡೆಯಬಹುದು.
ಬೈಬಲ್ ಹೇಳುತ್ತದೆ: “ಮಗನೇ, ಸುಜ್ಞಾನವನ್ನೂ [ಪ್ರಾಯೋಗಿಕ ವಿವೇಕವನ್ನೂ, ನೂತನ ಲೋಕ ಭಾಷಾಂತರ] ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ.” (ಜ್ಞಾನೋ. 3:21, 23) “ಪ್ರಾಯೋಗಿಕ ವಿವೇಕ” ಅಂದರೇನು, ಅದನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಅಂತ ತಿಳಿದುಕೊಂಡರೆ ನಮಗೆ ಪ್ರಯೋಜನ ಆಗುತ್ತದೆ. ಆಧ್ಯಾತ್ಮಿಕವಾಗಿ ‘ನಡೆಯುವಾಗ’ ನಾವು ಎಡವದಂತೆ ಸಹಾಯ ಮಾಡುತ್ತದೆ.
ಪ್ರಾಯೋಗಿಕ ವಿವೇಕ ಅಂದರೇನು?
ಪ್ರಾಯೋಗಿಕ ವಿವೇಕ ಎನ್ನುವುದು ಜ್ಞಾನ ಮತ್ತು ತಿಳುವಳಿಕೆಗಿಂತ ಭಿನ್ನವಾಗಿದೆ. ಜ್ಞಾನ ಇರುವ ವ್ಯಕ್ತಿ ಮಾಹಿತಿಯನ್ನು, ವಿಷಯಗಳನ್ನು ಸಂಗ್ರಹಿಸುತ್ತಾನೆ. ತಿಳುವಳಿಕೆ ಇರುವಂಥ ವ್ಯಕ್ತಿ ಆ ಮಾಹಿತಿ ಅಥವಾ ವಿಷಯಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಅಂತ ನೋಡುತ್ತಾನೆ. ವಿವೇಕ ಇರುವಂಥ ವ್ಯಕ್ತಿ ಜ್ಞಾನ ಮತ್ತು ತಿಳುವಳಿಕೆಯನ್ನು ಬಳಸಿ ಹೇಗೆ ಅದನ್ನು ಕಾರ್ಯರೂಪಕ್ಕೆ ಹಾಕಬಹುದೆಂದು ಯೋಚಿಸುತ್ತಾನೆ.
ಉದಾಹರಣೆಗೆ, ಒಬ್ಬ ವ್ಯಕ್ತಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಅಧ್ಯಯನ ಮಾಡುತ್ತಿರುವಾಗ ಬೇಗ ಅರ್ಥಮಾಡಿಕೊಳ್ಳಬಹುದು. ಸರಿಯಾದ ಉತ್ತರವನ್ನೂ ಕೊಡಬಹುದು. ಕೂಟಗಳಿಗೆ ಹಾಜರಾಗಿ ಅಲ್ಲಿ ಒಳ್ಳೇ ಉತ್ತರಗಳನ್ನು ಕೊಡಬಹುದು. ಇದೆಲ್ಲ ಆತನು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿದ್ದಾನೆ ಅಂತ ತೋರಿಸುತ್ತದೆ. ಹಾಗಂತ ಆತನಲ್ಲಿ ವಿವೇಕ ಇದೆ ಅಂತ ಅರ್ಥಕೊಡುತ್ತದಾ? ಇಲ್ಲ. ಆತನು ಪಡೆದುಕೊಂಡ ಜ್ಞಾನ, ತಿಳುವಳಿಕೆಯನ್ನು ಕಾರ್ಯರೂಪಕ್ಕೆ ಹಾಕಿದಾಗ ಮಾತ್ರ ವಿವೇಕಿ ಆಗುತ್ತಾನೆ. ಆತನು ಚೆನ್ನಾಗಿ ಯೋಚನೆ ಮಾಡಿ, ಒಳ್ಳೇ ತೀರ್ಮಾನಗಳನ್ನು ಮಾಡಿ ಒಳ್ಳೇ ಫಲಿತಾಂಶಗಳನ್ನು ಪಡೆದಾಗ ಆತನಲ್ಲಿ ಪ್ರಾಯೋಗಿಕ ವಿವೇಕವಿದೆ ಅಂತ ಗೊತ್ತಾಗುತ್ತದೆ.
ಮತ್ತಾಯ 7:24-27ರಲ್ಲಿ ಇಬ್ಬರು ವ್ಯಕ್ತಿಗಳು ಮನೆ ಕಟ್ಟುವ ದೃಷ್ಟಾಂತವನ್ನು ಯೇಸು ಕ್ರಿಸ್ತನು ಹೇಳಿದನು. ಈ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ‘ವಿವೇಚನೆಯುಳ್ಳವನು.’ ಆತನು ಮರಳಿನ ಮೇಲೆ ಮನೆ ಕಟ್ಟಿದರೆ ಬೇಗ ಕಟ್ಟಿಮುಗಿಸಬಹುದು ಅಥವಾ ಕಡಿಮೆ ಖರ್ಚಲ್ಲಿ ಮನೆಕಟ್ಟಬಹುದು ಅಂತ ಯೋಚಿಸಲಿಲ್ಲ. ಬದಲಿಗೆ ಮುಂದೆ ಬರುವ ಅಪಾಯಗಳ ಬಗ್ಗೆ ಯೋಚಿಸಿ ಬಂಡೆಯ ಮೇಲೆ ಮನೆ ಕಟ್ಟಿದನು. ಇದರಿಂದ, ಜೋರಾಗಿ ಬಿರುಗಾಳಿ ಬೀಸಿದಾಗ ಆತನ ಮನೆ ಸುರಕ್ಷಿತವಾಗಿತ್ತು. ಈ ವ್ಯಕ್ತಿಯಲ್ಲಿ ಪ್ರಾಯೋಗಿಕ ವಿವೇಕವಿತ್ತು. ಈ ಗುಣವನ್ನು ನಾವು ಹೇಗೆ ಪಡೆದುಕೊಳ್ಳಬಹುದು? ಅದನ್ನು ಹೇಗೆ ಭದ್ರವಾಗಿ ಇಟ್ಟುಕೊಳ್ಳಬಹುದು? ಅಂತ ನೋಡೋಣ.
ಹೇಗೆ ಪಡೆದುಕೊಳ್ಳಬಹುದು?
ನಾವು ಮೊದಲನೇದಾಗಿ ಮೀಕ 6:9 ಏನು ಹೇಳುತ್ತದೆ ಅಂತ ನೋಡೋಣ: “[ದೇವರ] ನಾಮದಲ್ಲಿ ಭಯಭಕ್ತಿಯಿಡುವದು ಸುಜ್ಞಾನವೇ (ಪ್ರಾಯೋಗಿಕ ವಿವೇಕವೇ, ನೂತನ ಲೋಕ ಭಾಷಾಂತರ).” ಯೆಹೋವನ ನಾಮದಲ್ಲಿ ಭಯಭಕ್ತಿ ಇಡುವುದು ಅಂದರೆ ಆತನನ್ನು ಗೌರವಿಸುವುದು ಆಗಿದೆ. ಆತನ ಮಟ್ಟಗಳನ್ನು ಭಯಭಕ್ತಿಯಿಂದ ಪಾಲಿಸುವುದು ಕೂಡ ಇದರಲ್ಲಿ ಸೇರಿದೆ. ಯೆಹೋವನನ್ನು ಗೌರವಿಸಲು ನಾವು ಮೊದಲು ಆತನ ಮನಸ್ಸನ್ನು, ಯೋಚನೆಗಳನ್ನು ತಿಳಿದುಕೊಳ್ಳಬೇಕು. ಆಗ ನಮಗೆ ಆತನ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಮಾತ್ರವಲ್ಲ, ಯೆಹೋವನಂತೆ ಉತ್ತಮ ನಿರ್ಣಯಗಳನ್ನು ಮಾಡಿ ಯಶಸ್ಸು ಪಡೆಯುತ್ತೇವೆ. ನಮ್ಮ ಕ್ರಿಯೆಗಳು ಆತನ ಜೊತೆ ನಮಗಿರುವ ಸಂಬಂಧವನ್ನು ಮುಂದೆ ಹಾಳುಮಾಡುತ್ತದಾ ಅಂತ ಯೋಚಿಸಿ ಆತನ ಮಟ್ಟಗಳಿಗೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳುವುದಾದರೆ ಪ್ರಾಯೋಗಿಕ ವಿವೇಕವನ್ನು ಪಡೆದುಕೊಳ್ಳುತ್ತೇವೆ.
ಎರಡನೇದಾಗಿ ಜ್ಞಾನೋಕ್ತಿ 18:1 ಹೇಳುತ್ತದೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ (ಪ್ರಾಯೋಗಿಕ ವಿವೇಕಕ್ಕೂ, ನೂತನ ಲೋಕ ಭಾಷಾಂತರ) ರೇಗುವನು.” ಹೌದು, ನಾವು ಜಾಗರೂಕರಾಗಿ ಇಲ್ಲವಾದರೆ ಯೆಹೋವನಿಂದ ಮತ್ತು ಆತನ ಜನರಿಂದ ದೂರಹೋಗಲಿಕ್ಕೆ ಸಾಧ್ಯತೆ ಇದೆ. ಆದ್ದರಿಂದ ಯಾರು ದೇವರ ನಾಮದಲ್ಲಿ ಭಯಭಕ್ತಿ ಇಡುತ್ತಾರೋ, ಆತನ ಮಟ್ಟಗಳನ್ನು ಪಾಲಿಸುತ್ತಾರೋ ಅಂಥವರೊಟ್ಟಿಗೆ ನಾವು ಸಮಯ ಕಳಿಯಬೇಕು. ರಾಜ್ಯ ಸಭಾಗೃಹದಲ್ಲಿ ಸಹೋದರ ಸಹೋದರಿಯರ ಜೊತೆ ಸಹವಾಸ ಮಾಡಬೇಕು. ಕೂಟ ನಡೆಯುತ್ತಿರುವಾಗ ನಾವು ಚೆನ್ನಾಗಿ ಕೇಳಿಸಿಕೊಂಡು ನಮ್ಮ ಹೃದಮನವನ್ನು ಸ್ಪರ್ಶಿಸುವಂತೆ ಬಿಡಬೇಕು.
ಇದರ ಜೊತೆಗೆ, ಪ್ರಾರ್ಥನೆ ಮೂಲಕ ಯೆಹೋವನಿಗೆ ನಮ್ಮ ಅಂತರಂಗವನ್ನು ತೋಡಿಕೊಳ್ಳಬೇಕು. ಆಗ ನಾವು ಯೆಹೋವನೊಟ್ಟಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ. (ಜ್ಞಾನೋ. 3:5, 6) ದೇವರ ವಾಕ್ಯವನ್ನು ಮತ್ತು ಯೆಹೋವನ ಸಂಘಟನೆಯ ಪ್ರಕಾಶನಗಳನ್ನು ಮನಸ್ಸುಕೊಟ್ಟು ಓದಬೇಕು. ಆಗ ನಮಗೆ, ನಾವು ಇಡುತ್ತಿರುವ ಹೆಜ್ಜೆಗಳ ಪರಿಣಾಮ ಏನು ಅಂತ ಮೊದಲೇ ಗೊತ್ತಾಗುತ್ತದೆ ಮತ್ತು ಅಪಾಯಕ್ಕೆ ಗುರಿಮಾಡುವಂಥ ಹೆಜ್ಜೆಗಳನ್ನು ಇಡದಂತೆ ಸಹಾಯ ಮಾಡುತ್ತದೆ. ಪ್ರೌಢ ಸಹೋದರರು ನಮಗೆ ಸಲಹೆ ಕೊಡುವಾಗ ಸ್ವೀಕರಿಸಬೇಕು. (ಜ್ಞಾನೋ. 19:20) ಹೀಗೆ ಮಾಡಿದರೆ, ನಾವು ಪ್ರಾಯೋಗಿಕ ವಿವೇಕವನ್ನು ಪಡೆದುಕೊಳ್ಳುತ್ತೇವೆ.
ಹೇಗೆ ಕುಟುಂಬಕ್ಕೆ ಸಹಾಯ ಮಾಡುತ್ತದೆ?
ಪ್ರಾಯೋಗಿಕ ವಿವೇಕ ಕುಟುಂಬಗಳನ್ನು ಭದ್ರವಾಗಿಡುತ್ತದೆ ಅಂದರೆ ಸಂರಕ್ಷಿಸುತ್ತದೆ. ಉದಾಹರಣೆಗೆ, “ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು” ಅಂತ ಬೈಬಲ್ ಹೇಳುತ್ತದೆ. (ಎಫೆ. 5:33) ಹಾಗಾದರೆ ಹೆಂಡತಿಯ ಆಳವಾದ ಗೌರವವನ್ನು ಪಡೆಯಲು ಒಬ್ಬ ಗಂಡ ಏನು ಮಾಡಬೇಕು? ಒತ್ತಾಯದಿಂದ ಗೌರವ ಪಡೆದುಕೊಳ್ಳಲು ಪ್ರಯತ್ನಿಸಿದರೆ ಅಥವಾ ಒರಟಾಗಿ ವರ್ತಿಸಿದರೆ, ಆತನಿರುವಾಗ ಹೆಂಡತಿ ಗೌರವ ತೋರಿಸಬಹುದು. ಆದರೆ, ಆತನಿಲ್ಲದಿರುವಾಗ ಗೌರವ ತೋರಿಸುತ್ತಾಳಾ? ಬಹುಶಃ ಇಲ್ಲ. ಹಾಗಾದರೆ ಗಂಡ ಏನು ಮಾಡಬೇಕು? ಆತನು ಪವಿತ್ರಾತ್ಮದ ಫಲವನ್ನು ಅಂದರೆ ಪ್ರೀತಿ, ದಯೆ ತೋರಿಸುವುದಾದರೆ ತನ್ನ ಹೆಂಡತಿಯ ಆಳವಾದ ಗೌರವವನ್ನು ಯಾವಾಗಲೂ ಪಡೆದುಕೊಳ್ಳುತ್ತಾನೆ. ಅದೇನೇ ಆದರೂ, ಕ್ರೈಸ್ತ ಹೆಂಡತಿ ತನ್ನ ಗಂಡ ಹೇಗೇ ಇರಲಿ ಆಳವಾದ ಗೌರವವನ್ನು ತೋರಿಸುತ್ತಾಳೆ.—ಗಲಾ. 5:22, 23.
ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಬೇಕು ಅಂತ ಬೈಬಲ್ ಹೇಳುತ್ತದೆ. (ಎಫೆ. 5:28, 33) ತನ್ನ ಗಂಡ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳನ್ನು ಹೆಂಡತಿ ಮುಚ್ಚಿಡುತ್ತಾಳೆ ಅಂತ ನೆನಸಿ. ಮುಚ್ಚಿಡುವುದರಿಂದ ತನ್ನ ಗಂಡನ ಪ್ರೀತಿಯನ್ನು ಪಡೆದುಕೊಳ್ಳಬಹುದು ಅಂತ ಅವಳು ನೆನಸುತ್ತಾಳೆ. ಆದರೆ ಈ ರೀತಿ ಮಾಡಿದರೆ ಅವಳು ಪ್ರಾಯೋಗಿಕ ವಿವೇಕವನ್ನು ತೋರಿಸುತ್ತಾಳಾ? ಅವಳು ಮುಚ್ಚಿಟ್ಟ ವಿಷಯ ಗೊತ್ತಾದರೆ ಅದರ ಪರಿಣಾಮ ಏನಾಗುತ್ತದೆ? ಇದರಿಂದ ಗಂಡನ ಪ್ರೀತಿ ಹೆಚ್ಚಾಗುತ್ತಾ? ಇಲ್ಲ, ಅವಳನ್ನು ಪ್ರೀತಿಸಲು ಅವನಿಗೆ ಕಷ್ಟವಾಗುತ್ತದೆ. ಅವಳು ಸಮಯ ನೋಡಿ ಆ ವಿಷಯವನ್ನು ತಿಳಿಸಿದರೆ ಗಂಡ ಅವಳ ಪ್ರಾಮಾಣಿಕತೆ ನೋಡಿ ಮೆಚ್ಚಬಹುದು. ಮಾತ್ರವಲ್ಲ, ಅವಳ ಮೇಲೆ ಅವನಿಗೆ ಪ್ರೀತಿ ಹೆಚ್ಚಾಗುತ್ತದೆ.
ಮಕ್ಕಳು ಹೆತ್ತವರಿಗೆ ವಿಧೇಯರಾಗಿರಬೇಕು ಮತ್ತು ಹೆತ್ತವರು ಮಕ್ಕಳನ್ನು ಯೆಹೋವನ ಶಿಸ್ತಿನಲ್ಲಿ ಬೆಳೆಸಬೇಕು. (ಎಫೆ. 6:1, 4) ಅದಕ್ಕಾಗಿ ಮಕ್ಕಳಿಗೆ ಒಂದಷ್ಟು ನಿಯಮಗಳನ್ನು ಇಟ್ಟರೆ ಸಾಕಾ? ನಿಯಮಗಳನ್ನು ಇಡುವುದು ಮತ್ತು ಅದನ್ನು ಮೀರಿದಾಗ ಮಕ್ಕಳಿಗೆ ಶಿಕ್ಷೆಕೊಡುವುದು ಸಾಕಾಗುವುದಿಲ್ಲ. ನಿಯಮಗಳಿಗೆ ಯಾಕೆ ವಿಧೇಯರಾಗಿರಬೇಕು ಅಂತ ಮಕ್ಕಳಿಗೆ ಅರ್ಥಮಾಡಿಸಬೇಕು. ಹೀಗೆ ಹೆತ್ತವರು ಪ್ರಾಯೋಗಿಕ ವಿವೇಕವನ್ನು ತೋರಿಸಬಹುದು.
ಒಬ್ಬ ಹುಡುಗ ತನ್ನ ಹೆತ್ತವರೊಟ್ಟಿಗೆ ಅಗೌರವದಿಂದ ಮಾತಾಡುತ್ತಾನೆ ಅಂತ ನೆನಸಿ. ಆಗ ಹೆತ್ತವರು ಅವನನ್ನು ಎಲ್ಲರ ಮುಂದೆ ಬೈಯುವುದಾದರೆ ಅಥವಾ ಹೊಡೆಯುವುದಾದರೆ ಅವನಿಗೆ ಅವಮಾನ ಆಗುತ್ತದೆ. ಆಗ ಅವನು ಮೌನವಾಗಬಹುದು. ಆದರೆ ಕೋಪ, ಬೇಜಾರನ್ನು ಮನಸ್ಸಲ್ಲೇ ಇಟ್ಟುಕೊಳ್ಳುತ್ತಾನೆ. ಇದರಿಂದ ಅವನು ತನ್ನ ಹೆತ್ತವರಿಂದ ದೂರಹೋಗಲಿಕ್ಕೆ ಸಾಧ್ಯತೆ ಇದೆ.
ಹಾಗಾದರೆ ಹೆತ್ತವರು ಹೇಗೆ ತಿದ್ದಬೇಕು? ಅವನಿಗೆ ಥಟ್ಟನೆ ಶಿಸ್ತು ಕೊಡುವ ಬದಲು, ಖಾಸಗಿಯಾಗಿ ಪ್ರೀತಿಯಿಂದ ತಾಳ್ಮೆಯಿಂದ ಮಾತಾಡಬೇಕು. ನಿತ್ಯಜೀವ ಸಿಗಬೇಕಾದರೆ ಹೆತ್ತವರ ಮಾತನ್ನು ಕೇಳಬೇಕು ಎಂದು ಯೆಹೋವನು ಬಯಸುತ್ತಾನೆ ಅಂತ ಹೆತ್ತವರು ವಿವರಿಸಬೇಕು. ಆಗ ಅವನು, ತಾನು ಹೆತ್ತವರಿಗೆ ಗೌರವ ತೋರಿಸಿದರೆ ಯೆಹೋವನಿಗೆ ಗೌರವ ತೋರಿಸಿದಂತೆ ಆಗುತ್ತದೆ ಅಂತ ಅರ್ಥಮಾಡಿಕೊಳ್ಳುತ್ತಾನೆ. (ಎಫೆ. 6:2, 3) ಈ ರೀತಿ ಮಾತಾಡುವುದರಿಂದ ಅವನ ಹೃದಯ ಗೆಲ್ಲಬಹುದು. ಹೆತ್ತವರಿಗೆ ತನ್ನ ಮೇಲೆ ತುಂಬ ಕಾಳಜಿಯಿದೆ ಅಂತ ಅರ್ಥಮಾಡಿಕೊಳ್ಳುತ್ತಾನೆ. ಮಾತ್ರವಲ್ಲ ಅವರ ಮೇಲೆ ಅವನಿಗೆ ಗೌರವ ಹೆಚ್ಚಾಗುತ್ತದೆ. ಮುಂದೆ ಅವನಿಗೆ ಯಾವುದೇ ಸವಾಲು ಬಂದರೂ ಮುಚ್ಚಿಡದೆ ಹೆತ್ತವರೊಟ್ಟಿಗೆ ಮುಕ್ತವಾಗಿ ಮಾತಾಡುತ್ತಾನೆ. ಹೀಗೆ ಮಕ್ಕಳನ್ನು ತಿದ್ದುವ ವಿಧಾನ ಮುಂದೆ ಅವರ ಮೇಲೆ ಯಾವ ಕೆಟ್ಟ ಪರಿಣಾಮ ಬೀರಬಹುದು ಅಂತ ಪ್ರಾಯೋಗಿಕ ವಿವೇಕ ಇರುವ ಹೆತ್ತವರು ಮೊದಲೇ ಯೋಚಿಸುತ್ತಾರೆ.
ಕೆಲವು ಹೆತ್ತವರು, ಮಕ್ಕಳಿಗೆ ಶಿಸ್ತುಕೊಟ್ಟರೆ ಬೇಜಾರು ಮಾಡಿಕೊಳ್ಳುತ್ತಾರೆ ಅಂತ ನೆನಸಿ ಕೊಡದೇ ಇರಬಹುದು. ಹಾಗೆ ಮಾಡಿದರೆ, ಮಕ್ಕಳು ದೊಡ್ಡವರಾದ ಮೇಲೆ ಯೆಹೋವನಿಗೆ ಭಯಭಕ್ತಿಯಿಂದ ಇರುತ್ತಾರಾ? ದೇವರ ನಿಯಮಗಳನ್ನು ಪಾಲಿಸುವುದೇ ಪ್ರಾಯೋಗಿಕ ವಿವೇಕ ಅಂತ ಅರ್ಥಮಾಡಿಕೊಳ್ಳುತ್ತಾರಾ? ತಮ್ಮ ಹೃದಮನಗಳಿಂದ ಯೆಹೋವನನ್ನು ಸೇವಿಸುತ್ತಾರಾ ಅಥವಾ ಆಧ್ಯಾತ್ಮಿಕ ವಿಷಯಗಳಿಂದ ದೂರಹೋಗುತ್ತಾರಾ?—ಜ್ಞಾನೋ. 13:1; 29:21.
ಒಬ್ಬ ಶಿಲ್ಪಿ ತಾನೇನು ರೂಪಿಸಬೇಕು ಅಂತ ಮುಂಚೆನೇ ಯೋಚಿಸುತ್ತಾನೆ. ತಾನು ಹೇಗೆ ಕೆತ್ತಿದರೂ ರೂಪ ಬರುತ್ತದೆ ಅಂತ ನೆನಸುವುದಿಲ್ಲ. ಅದೇ ರೀತಿ ಪ್ರಾಯೋಗಿಕ ವಿವೇಕ ಇರುವ ಹೆತ್ತವರು ಯೆಹೋವನ ತತ್ವಗಳೇನು, ಅವನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಅಂತ ಅಧ್ಯಯನ ಮಾಡುತ್ತಾರೆ. ಹೀಗೆ ಯೆಹೋವನ ನಾಮದಲ್ಲಿ ಭಯಭಕ್ತಿ ತೋರಿಸುತ್ತಾರೆ. ಅವರು ಯೆಹೋವನಿಂದ ಮತ್ತು ಆತನ ಸಂಘಟನೆಯಿಂದ ದೂರ ಹೋಗದಿರುವ ಮೂಲಕ ಪ್ರಾಯೋಗಿಕ ವಿವೇಕ ಪಡೆದುಕೊಳ್ಳುತ್ತಾರೆ ಮತ್ತು ಅದರಿಂದ ಅವರು ತಮ್ಮ ಕುಟುಂಬವನ್ನು ಬಲಪಡಿಸುತ್ತಾರೆ.
ದಿನಾಲೂ ನಾವು ಒಂದಲ್ಲ ಒಂದು ನಿರ್ಣಯವನ್ನು ಮಾಡಲೇಬೇಕಾಗುತ್ತದೆ. ದುಡುಕಿ ನಿರ್ಣಯಗಳನ್ನು ಮಾಡಿದರೆ ಅದರ ಪರಿಣಾಮವನ್ನು ವರ್ಷಾನುಗಟ್ಟಲೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಾವು ಚೆನ್ನಾಗಿ ಯೋಚಿಸಿ ನಿರ್ಣಯಿಸಬೇಕು. ಮುಂದೆ ಬರುವಂಥ ಅಪಾಯಗಳ ಬಗ್ಗೆ ಜಾಗರೂಕತೆಯಿಂದ ಯೋಚಿಸಬೇಕು. ಮೊದಲು ನಾವು ಯೆಹೋವನ ಮಾರ್ಗದರ್ಶನಕ್ಕಾಗಿ ಕೋರಬೇಕು ಮತ್ತು ಅದನ್ನು ಅನ್ವಯಿಸಿಕೊಳ್ಳಬೇಕು. ಹೀಗೆ ನಾವು ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುವಾಗ ಅದು ನಮಗೆ ಜೀವವಾಗಿ ಇರುತ್ತದೆ.—ಜ್ಞಾನೋ. 3:21, 22.