‘ಕುಲುಮೆಯಂತೆ ಉರಿಯುವ’ ದಿನ
“ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ.”—ಮಲಾಕಿಯ 4:1.
1. ಮಲಾಕಿಯ 4:1ರ ಸಂಬಂಧದಲ್ಲಿ ಯಾವ ಪ್ರಶ್ನೆಗಳು ಏಳುತ್ತವೆ?
ಈ ಕಡೇ ದಿವಸಗಳಲ್ಲಿ, ಯಾರ ಹೆಸರುಗಳನ್ನು ಯೆಹೋವನು ತನ್ನ ಜ್ಞಾಪಕದ ಪುಸ್ತಕದಲ್ಲಿ ಬರೆಯಲು ಇಚ್ಛಿಸುತ್ತಾನೊ ಅವರು ಧನ್ಯರು. ಆದರೆ ಆ ಸುಯೋಗಕ್ಕೆ ಅರ್ಹರಾಗಲು ವಿಫಲರಾಗುವವರ ಕುರಿತೇನು? ಅವರು ಪ್ರಭುಗಳಾಗಿರಲಿ ಅಥವಾ ಕೇವಲ ಸಾಮಾನ್ಯ ಜನರಾಗಿರಲಿ, ದೇವರ ರಾಜ್ಯದ ಘೋಷಕರನ್ನು ಮತ್ತು ಅವರ ಸಂದೇಶವನ್ನು ಅಲಕ್ಷಿಸುವುದಾದರೆ, ಅವರಿಗೆ ಏನು ಸಂಭವಿಸುವುದು? ಲೆಕ್ಕ ಒಪ್ಪಿಸುವ ದಿನದ ಕುರಿತು ಮಲಾಕಿಯನು ಮಾತಾಡುತ್ತಾನೆ. 4 ನೆಯ ಅಧ್ಯಾಯದ 1 ನೆಯ ವಚನದಲ್ಲಿ ನಾವು ಓದುವುದು: “ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು; ಬುಡರೆಂಬೆಗಳಾವದನ್ನೂ ಉಳಿಸದು.”
2. ಯೆಹೋವನ ನ್ಯಾಯತೀರ್ಪಿನ ಯಾವ ಸುಸ್ಪಷ್ಟ ವರ್ಣನೆಯನ್ನು ಯೆಹೆಜ್ಕೇಲನ ಮೂಲಕ ಕೊಡಲಾಗಿದೆ?
2 ಯೆಹೋವನಿಂದ ರಾಷ್ಟ್ರಗಳ ನ್ಯಾಯತೀರಿಸುವಿಕೆಯನ್ನು ಇತರ ಪ್ರವಾದಿಗಳು ಸಹ ಕುಲುಮೆಯೊಂದರ ಅತಿ ಉಷ್ಣದ ತಾಪಕ್ಕೆ ಹೋಲಿಸುತ್ತಾರೆ. ದೇವರಿಂದ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಪಂಗಡಗಳ ನ್ಯಾಯತೀರಿಸುವಿಕೆಗೆ ಯೆಹೆಜ್ಕೇಲ 22:19-22 ಎಷ್ಟು ಸಮಂಜಸವಾಗಿ ಅನ್ವಯಿಸುತ್ತದೆ! ಅದು ಓದುವುದು: “ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ನೀವೆಲ್ಲರು ಕಸರಾಗಿರುವದರಿಂದ ಇಗೋ, ನಿಮ್ಮನ್ನು . . . ಕೂಡಿಸುವೆನು. ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಕೂಡಿಸಿ ಊದಿ ಉರಿಹತ್ತಿಸಿ ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರಕೋಪದಲ್ಲಿ ಕೂಡಿಸಿ ಇಟ್ಟುಬಿಟ್ಟು ಕರಗಿಸುವೆನು. ಹೌದು, ನಾನು ನಿಮ್ಮನ್ನು ನನ್ನ ರೋಷಾಗ್ನಿಯಲ್ಲಿ ಕೂಡಿಸಿ ಊದಲು ನೀವು ಅದರೊಳಗೆ ಕರಗಿಹೋಗುವಿರಿ. ಬೆಳ್ಳಿಯು ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವದು.”
3, 4. (ಎ) ಯಾವ ಕಪಟಾಚಾರದ ವಾದವನ್ನು ಪಾದ್ರಿ ವರ್ಗದವರು ಮಾಡಿದ್ದಾರೆ? (ಬಿ) ಧರ್ಮದ ಕುತ್ಸಿತ ದಾಖಲೆಯು ಏನಾಗಿದೆ?
3 ನಿಶ್ಚಯವಾಗಿಯೂ ಪ್ರಬಲವಾದೊಂದು ದೃಷ್ಟಾಂತ! ಯೆಹೋವನ ನಾಮವನ್ನು ಬಳಸಲು ನಿರಾಕರಿಸಿರುವ ಅಷ್ಟೇ ಅಲ್ಲದೆ ಪವಿತ್ರವಾದ ಆ ನಾಮವನ್ನು ದೂಷಿಸುವ ಪಾದ್ರಿ ವರ್ಗವು, ಮುಯ್ಯಿ ತೀರಿಸುವ ಆ ದಿನವನ್ನು ಎದುರಿಸಲೇಬೇಕು. ಭೂಮಿಯ ಮೇಲೆ ತಾವು ಮತ್ತು ತಮ್ಮ ರಾಜಕೀಯ ಸಹವಾಸಿಗಳು ದೇವರ ರಾಜ್ಯವನ್ನು ಸ್ಥಾಪಿಸುವೆವೆಂದು, ಅಥವಾ ಕನಿಷ್ಠ ಪಕ್ಷ ಭೂಮಿಯನ್ನು ರಾಜ್ಯಕ್ಕಾಗಿ ತಕ್ಕದಾದ ಸ್ಥಳವನ್ನಾಗಿ ಮಾಡುವೆವೆಂದು ಅವರು ದುರಹಂಕಾರದಿಂದ ಹೇಳಿಕೊಳ್ಳುತ್ತಾರೆ.
4 ಭಯಂಕರವಾದ ಯುದ್ಧಗಳನ್ನು ಕಾದಾಡುವುದರಲ್ಲಿ ಧರ್ಮಭ್ರಷ್ಟ ಕ್ರೈಸ್ತಪ್ರಪಂಚವು ರಾಜಕೀಯ ಪ್ರಭುಗಳೊಂದಿಗೆ ಸೇರಿದೆ. ಇತಿಹಾಸವು ಮಧ್ಯ ಯುಗದ ಧರ್ಮಯುದ್ಧಗಳನ್ನು, ಸ್ಪ್ಯಾನಿಷ್ ನ್ಯಾಯಸ್ಥಾನದ ಬಲವಂತದ ಮತಾಂತರಗಳನ್ನು, 17 ನೆಯ ಶತಮಾನದಲ್ಲಿ ಯೂರೋಪಿಗೆ ತೀವ್ರ ನಷ್ಟವನ್ನುಂಟುಮಾಡಿದ ಮೂವತ್ತು ವರ್ಷಗಳ ಯುದ್ಧವನ್ನು, ಮತ್ತು ಸ್ಪೆಯಿನ್ನಲ್ಲಿ ಕ್ಯಾತೊಲಿಕ್ ಚರ್ಚಿನ ಸ್ಥಾನವನ್ನು ದೃಢಪಡಿಸಲು ಕಾದಾಡಲಾದ 1930 ಗಳ ಸ್ಪ್ಯಾನಿಷ್ ಅಂತರ್ಯುದ್ಧವನ್ನು ದಾಖಲಿಸುತ್ತದೆ. ಅತ್ಯಂತ ಮಹತ್ತರವಾದ ರಕ್ತಪಾತವು ನಮ್ಮ ಶತಮಾನದ ಎರಡು ಲೋಕ ಯುದ್ಧಗಳಲ್ಲಿ ಸಂಭವಿಸಿತು. ಆಗ ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು ತಾರತಮ್ಯವಿಲ್ಲದೆ ಜೊತೆ ವಿಶ್ವಾಸಿಗಳನ್ನು ಅಷ್ಟೇ ಅಲ್ಲದೆ ಇತರ ಧರ್ಮಗಳ ಸದಸ್ಯರನ್ನು ಕೊಲ್ಲುತ್ತಾ, ನಿಯಮರಹಿತವಾದ ಯುದ್ಧದಲ್ಲಿ ತೊಡಗಿದ್ದರು. ಹೆಚ್ಚು ಇತ್ತೀಚೆಗೆ, ಐಯರ್ಲೆಂಡ್ನಲ್ಲಿ ಕ್ಯಾತೊಲಿಕರ ಮತ್ತು ಪ್ರಾಟೆಸ್ಟಂಟರ ನಡುವೆ, ಭಾರತದಲ್ಲಿ ಧಾರ್ಮಿಕ ಪಂಗಡಗಳ ನಡುವೆ, ಮತ್ತು ಪೂರ್ವ ಯುಗೊಸ್ಲಾವಿಯದ ಧಾರ್ಮಿಕ ಗುಂಪುಗಳ ನಡುವೆ ಬರ್ಬರ ಕಾದಾಟವು ಸಂಭವಿಸಿದೆ. ಧಾರ್ಮಿಕ ಇತಿಹಾಸದ ಪುಟಗಳು ಯೆಹೋವನ ಸಾವಿರಾರು ನಂಬಿಗಸ್ತ ಸಾಕ್ಷಿಗಳ ಹುತಾತ್ಮತೆಯಿಂದ ಸಹ ರಕ್ತಮಯವಾಗಿವೆ.—ಪ್ರಕಟನೆ 6:9, 10.
5. ಯಾವ ನ್ಯಾಯತೀರ್ಪು ಸುಳ್ಳು ಧರ್ಮಕ್ಕಾಗಿ ಕಾದುಕೊಂಡಿದೆ?
5 ಅದರ ಬೆಂಬಲಿಗರೊಂದಿಗೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಮೇಲೆ, ಸಮೀಪಿಸುತ್ತಿರುವ ಯೆಹೋವನ ಮರಣದಂಡನೆಯ ನಿಷ್ಪಕ್ಷಪಾತವನ್ನು ನಾವು ಗಣ್ಯಮಾಡದೆ ಇರಲು ಸಾಧ್ಯವಿಲ್ಲ. ಈ ಮರಣದಂಡನೆಯು ಪ್ರಕಟನೆ 18:21, 24 ರಲ್ಲಿ ವರ್ಣಿಸಲ್ಪಟ್ಟಿದೆ: “ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಹಾಕಿ—ಮಹಾ ಪಟ್ಟಣವಾದ ಬಾಬೆಲು ಹೀಗೆಯೇ ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ನಿನ್ನಲ್ಲಿ ಸಿಕ್ಕಿತು.”
6. (ಎ) ಯಾರು ಹೊಟ್ಟಿನಂತಾಗಬೇಕು, ಮತ್ತು ಏಕೆ? (ಬಿ) ಯೆಹೋವನಿಗೆ ಭಯಪಡುವವರಿಗೆ ಯಾವ ಆಶ್ವಾಸನೆಯಿದೆ?
6 ಸಕಾಲದಲ್ಲಿ, ನೀತಿಯ ಎಲ್ಲ ವೈರಿಗಳು ಮತ್ತು ಅವರಿಗೆ ಕಿವಿಗೊಡುವವರು ‘ಹೊಟ್ಟಿನಂತೆ ಆಗಬೇಕು.’ ಯೆಹೋವನ ದಿನವು ಅವರ ಮಧ್ಯೆ ಒಂದು ಕುಲುಮೆಯಂತೆ ಉರಿಯುವುದು. “ಬುಡರೆಂಬೆಗಳಾವದನ್ನೂ ಉಳಿಸದು.” ಲೆಕ್ಕ ಒಪ್ಪಿಸುವ ಆ ದಿನದಲ್ಲಿ, ರೆಂಬೆಗಳು ಅಥವಾ ಎಳೆಯ ಮಕ್ಕಳು, ಈ ಮಕ್ಕಳ ಮೇಲೆ ಮೇಲ್ವಿಚಾರಣೆಯನ್ನು ಪಡೆದಿರುವ ಅವರ ಹೆತ್ತವರ, ಅವರ ಬುಡಗಳ ಬಗ್ಗೆ ಯೆಹೋವನ ಅಳೆಯುವಿಕೆಗನುಸಾರ ನ್ಯಾಯವಾಗಿ ವ್ಯವಹರಿಸಲ್ಪಡುವರು. ತಮ್ಮ ದುಷ್ಟ ಮಾರ್ಗಗಳನ್ನು ಶಾಶ್ವತಪಡಿಸಲು ದುಷ್ಟ ಹೆತ್ತವರಿಗೆ ಮುಂದಿನ ಪೀಳಿಗೆ ಇರುವುದಿಲ್ಲ. ಆದರೆ ದೇವರ ರಾಜ್ಯ ವಾಗ್ದಾನಗಳಲ್ಲಿ ನಂಬಿಕೆಯನ್ನಿಡುವವರು ತಲ್ಲಣಗೊಳ್ಳರು. ಆದುದರಿಂದ ಇಬ್ರಿಯ 12:28, 29 ಪ್ರೇರೇಪಿಸುವುದು: “ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ; ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.”
ಯೆಹೋವನು ಒಬ್ಬ ಕ್ರೂರ ದೇವರೊ?
7. ಯೆಹೋವನ ಪ್ರೀತಿಯು ಹೇಗೆ ಆತನ ನ್ಯಾಯತೀರ್ಪಿನೊಳಗೆ ಪ್ರವೇಶಿಸುತ್ತದೆ?
7 ಯೆಹೋವನು ಒಬ್ಬ ಕ್ರೂರ, ವೈರಸಾಧಕ ದೇವರೆಂದು ಇದು ಸೂಚಿಸುತ್ತದೊ? ಖಂಡಿತವಾಗಿಯೂ ಇಲ್ಲ! 1 ಯೋಹಾನ 4:8 ರಲ್ಲಿ, ಅಪೊಸ್ತಲನು ಮೂಲಭೂತವಾದೊಂದು ಸತ್ಯವನ್ನು ತಿಳಿಸುತ್ತಾನೆ: “ದೇವರು ಪ್ರೀತಿಸ್ವರೂಪಿಯು.” ಅನಂತರ, 16 ನೆಯ ವಚನದಲ್ಲಿ ಹೀಗೆ ಹೇಳುತ್ತಾ ಅವನು ಮಹತ್ವವನ್ನು ಕೂಡಿಸುತ್ತಾನೆ: “ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.” ಮಾನವಕುಲಕ್ಕಾಗಿರುವ ತನ್ನ ಪ್ರೀತಿಯ ನಿಮಿತ್ತ ಯೆಹೋವನು ಈ ಭೂಮಿಯನ್ನು ಎಲ್ಲ ದುಷ್ಟತನದಿಂದ ಶುದ್ಧಗೊಳಿಸಲು ಉದ್ದೇಶಿಸುತ್ತಾನೆ. ನಮ್ಮ ಪ್ರೀತಿಯ, ಕರುಣಾಮಯನಾದ ದೇವರು ಘೋಷಿಸುವುದು: “ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. . . . ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟು ಬಿಡಿರಿ; ನೀವು ಸಾಯಲೇಕೆ?—ಯೆಹೆಜ್ಕೇಲ 33:11.
8. ಪ್ರೀತಿಯ ಬಗ್ಗೆ ಯೋಹಾನನು ಪ್ರಾಧಾನ್ಯವನ್ನು ನೀಡಿದ್ದು ಹೇಗೆ, ಆದರೂ ತನ್ನನ್ನು ಗುಡುಗಿನ ಪುತ್ರನೋಪಾದಿ ತೋರಿಸಿಕೊಂಡಿದ್ದು ಹೇಗೆ?
8 ಯೋಹಾನನು, ಇತರ ಮೂರು ಸುವಾರ್ತಾ ಬರಹಗಾರರು ಸೇರಿ ಹೇಳುವುದಕ್ಕಿಂತ ಹೆಚ್ಚು ಬಾರಿ ಅಗಾಪೆ ಎಂಬ ತತಾಧ್ವಾರಿತ ಪ್ರೀತಿಯ ಕುರಿತು ಸೂಚಿಸುತ್ತಾನೆ. ಆದರೂ ಮಾರ್ಕ 3:17 ರಲ್ಲಿ, ಸ್ವತಃ ಯೋಹಾನನೇ ‘ಗುಡುಗಿನ ಪುತ್ರ’ ನೆಂದು ವರ್ಣಿಸಲ್ಪಟ್ಟಿದ್ದಾನೆ. ನ್ಯಾಯವನ್ನು ವಿಧಿಸುವ ದೇವರೋಪಾದಿ, ಯೆಹೋವನನ್ನು ಚಿತ್ರಿಸುವ ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯ ಭೀಕರ ಸಂದೇಶಗಳನ್ನು ಗುಡುಗಿನ ಈ ಪುತ್ರನು ಬರೆದದ್ದು, ಯೆಹೋವನ ಪ್ರೇರಣೆಯಿಂದಲೇ. ಈ ಪುಸ್ತಕವು, “ದೇವರ ರೌದ್ರವೆಂಬ ದೊಡ್ಡ ತೊಟ್ಟಿ,” “ಏಳು ಪಾತ್ರೆಗಳಲ್ಲಿರುವ ದೇವರ ರೌದ್ರ,” ಮತ್ತು “ಸರ್ವಶಕ್ತನಾದ ದೇವರ ಉಗ್ರಕೋಪ” ಗಳಂತಹ ನಿರ್ಣಯಾತ್ಮಕ ಅಭಿವ್ಯಕ್ತಿಗಳಿಂದ ತುಂಬಿದೆ.—ಪ್ರಕಟನೆ 14:19; 16:1; 19:15.
9. ಯೆಹೋವನ ನ್ಯಾಯತೀರ್ಪುಗಳ ಮೇಲೆ ಯಾವ ಅಭಿವ್ಯಕ್ತಿಗಳನ್ನು ಯೇಸು ಮಾಡಿದನು, ಮತ್ತು ಅವನ ಪ್ರವಾದನೆಗಳು ಹೇಗೆ ನೆರವೇರಿದವು?
9 “ಅದೃಶ್ಯನಾದ ದೇವರ ಪ್ರತಿರೂಪ” ನಾಗಿರುವ ನಮ್ಮ ಕರ್ತನಾದ ಯೇಸು ಕ್ರಿಸ್ತನು, ಭೂಮಿಯಲ್ಲಿರುವಾಗ ಯೆಹೋವನ ನ್ಯಾಯತೀರ್ಪುಗಳನ್ನು ಧೈರ್ಯದಿಂದ ಘೋಷಿಸಿದನು. (ಕೊಲೊಸ್ಸೆ 1:15) ಉದಾಹರಣೆಗೆ, ತನ್ನ ದಿನದ ಧಾರ್ಮಿಕ ಕಪಟಿಗಳ ವಿರುದ್ಧ ಅವನು ನೇರವಾಗಿ ಘೋಷಿಸಿದ ಮತ್ತಾಯ 23 ನೆಯ ಅಧ್ಯಾಯದ ಏಳು ಅಯ್ಯೋಗಳಿವೆ. ಆ ಖಂಡನಾತ್ಮಕ ನ್ಯಾಯತೀರ್ಪನ್ನು ಅವನು ಈ ಮಾತುಗಳೊಂದಿಗೆ ಮುಕ್ತಾಯಗೊಳಿಸಿದನು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” ಮೂವತ್ತೇಳು ವರ್ಷಗಳಾನಂತರ, ಜನರಲ್ ಟೈಟಸ್ನ ಅಧಿಕಾರದಲ್ಲಿ ರೋಮನ್ ಸೇನೆಯ ಮೂಲಕ ನ್ಯಾಯತೀರ್ಪು ವಿಧಿಸಲ್ಪಟ್ಟಿತು. ಅದೊಂದು ಭಯಂಕರವಾದ ದಿನವಾಗಿತ್ತು. ಅದು ಯಾವುದು ಎಲ್ಲ ಮಾನವ ಅನುಭವದಲ್ಲಿ ಅತ್ಯಂತ ಭಯ ಹುಟ್ಟಿಸುವ ದಿನವಾಗಿ ಪರಿಣಮಿಸುವುದೊ, ಆ ಬೇಗನೆ ಹೊರಚಿಮ್ಮಲಿರುವ ಯೆಹೋವನ ದಿನದ ಭವಿಷ್ಯ ಸೂಚಕವಾಗಿತ್ತು.
“ಸೂರ್ಯನು” ಪ್ರಕಾಶಿಸುತ್ತಾನೆ
10. ‘ನೀತಿಯ ಸೂರ್ಯನು’ ದೇವರ ಜನರಿಗೆ ಆನಂದವನ್ನು ತರುವುದು ಹೇಗೆ?
10 ಆತನ ದಿನವನ್ನು ಪಾರಾಗುವವರು ಇರುವರೆಂದು ಯೆಹೋವನು ತಿಳಿಯಪಡಿಸುತ್ತಾನೆ. ಮಲಾಕಿಯ 4:2 ರಲ್ಲಿ ಅವರನ್ನು ಸೂಚಿಸಿ, ಹೀಗೆ ಹೇಳುತ್ತಾನೆ: “ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ [ದೇವರ] ಧರ್ಮ (“ನೀತಿ,” NW) ವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು.” ನೀತಿಯ ಆ ಸೂರ್ಯನು ಸ್ವತಃ ಯೇಸು ಕ್ರಿಸ್ತನಲ್ಲದೆ ಬೇರೆ ಯಾರೂ ಅಲ್ಲ. ಅವನು ‘ಲೋಕದ ಆತ್ಮಿಕ ಬೆಳಕು’ ಆಗಿದ್ದಾನೆ. (ಯೋಹಾನ 8:12) ಅವನು ಹೇಗೆ ಪ್ರಕಾಶಿಸುತ್ತಾನೆ? ಅವನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುತ್ತಾನೆ—ಮೊದಲು ಇಂದು ಸಹ ನಾವು ಅನುಭವಿಸಸಾಧ್ಯವಿರುವ ಆತ್ಮಿಕ ಗುಣಪಡಿಸುವಿಕೆ, ಮತ್ತು ನಂತರ, ಬರಲಿರುವ ಹೊಸ ಲೋಕದಲ್ಲಿ, ಎಲ್ಲ ರಾಷ್ಟ್ರಗಳಿಂದ ಬರುವ ಜನರ ಶಾರೀರಿಕ ಗುಣಪಡಿಸುವಿಕೆ. (ಮತ್ತಾಯ 4:23; ಪ್ರಕಟನೆ 22:1, 2) ಸಾಂಕೇತಿಕವಾಗಿ, ಮಲಾಕಿಯನು ಹೇಳಿದಂತೆ, ಗುಣಹೊಂದಿದವರು ಕೊಟ್ಟಿಗೆಯಿಂದ ಆಗ ತಾನೇ ಬಿಡುಗಡೆ ಹೊಂದಿದ “ಕರುಗಳಂತೆ . . . ಹೊರಟು ಬಂದು ಕುಣಿದಾಡು” ವರು. ಮಾನವ ಪರಿಪೂರ್ಣತೆಯನ್ನು ಪಡೆಯುವ ಪ್ರತೀಕ್ಷೆಯೊಂದಿಗೆ ಎಬ್ಬಿಸಲ್ಪಡುವ ಪುನರುತ್ಥಾನ ಹೊಂದುವವರಿಂದ ಸಹ ಎಂತಹ ಆನಂದವು ಅನುಭವಿಸಲ್ಪಡುವುದು!
11, 12. (ಎ) ದುಷ್ಟರಿಗೆ ಯಾವ ಅಂತಿಮ ಪ್ರತಿಫಲವು ಕಾದಿದೆ? (ಬಿ) ದೇವರ ಜನರು “ದುಷ್ಟರನ್ನು ತುಳಿದುಬಿಡು” ವುದು ಹೇಗೆ?
11 ಹಾಗಿದ್ದರೂ, ದುಷ್ಟರ ಕುರಿತೇನು? ಮಲಾಕಿಯ 4:3 ರಲ್ಲಿ ನಾವು ಓದುವುದು: “ದುಷ್ಟರನ್ನು ತುಳಿದುಬಿಡುವಿರಿ; ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನಿಮ್ಮ ಅಂಗಾಲುಗಳ ಕೆಳಗೆ ಬೂದಿಯಾಗಿ ಬಿದ್ದಿರುವರು; ಇದು ಸೇನಾಧೀಶ್ವರ ಯೆಹೋವನ ನುಡಿ.” ತನ್ನನ್ನು ಪ್ರೀತಿಸುವವರನ್ನು ರಕ್ಷಿಸುವಾಗ, ನಮ್ಮ ಯುದ್ಧವೀರ ದೇವರು ಆ ಕ್ರೂರ ವೈರಿಗಳನ್ನು ನಿರ್ಮೂಲ ಮಾಡುವ ಮೂಲಕ ಭೂಮಿಯನ್ನು ಶುದ್ಧಗೊಳಿಸುವನು. ಸೈತಾನನು ಮತ್ತು ಅವನ ದೆವ್ವಗಳು ಸೆರೆಯಲ್ಲಿಡಲ್ಪಟ್ಟಿರುವರು.—ಕೀರ್ತನೆ 145:20; ಪ್ರಕಟನೆ 20:1-3.
12 ದುಷ್ಟರನ್ನು ನಾಶಗೊಳಿಸುವುದರಲ್ಲಿ ದೇವರ ಜನರು ಯಾವ ಭಾಗವನ್ನೂ ವಹಿಸುವುದಿಲ್ಲ. ಹಾಗಾದರೆ, ಅವರು “ದುಷ್ಟರನ್ನು ತುಳಿದುಬಿಡು” ವುದು ಹೇಗೆ? ಒಂದು ಮಹಾ ವಿಜಯೋತ್ಸವದಲ್ಲಿ ಭಾಗವಹಿಸುವ ಮೂಲಕ ಇದನ್ನು ಅವರು ಸಾಂಕೇತಿಕವಾಗಿ ಮಾಡುತ್ತಾರೆ. ವಿಮೋಚನಕಾಂಡ 15:1-21 ಇಂತಹ ಒಂದು ಉತ್ಸವವನ್ನು ವರ್ಣಿಸುತ್ತದೆ. ಅದು ಕೆಂಪು ಸಮುದ್ರದಲ್ಲಿ ಫರೋಹನ ಮತ್ತು ಅವನ ಸೈನ್ಯದ ನಾಶನವನ್ನು ಹಿಂಬಾಲಿಸಿತು. ಯೆಶಾಯ 25:3-9ರ ನೆರವೇರಿಕೆಯಲ್ಲಿ, “ಭಯಂಕರ ಜನರ” ತೆಗೆದುಹಾಕುವಿಕೆಯು, ದೇವರ ವಾಗ್ದಾನದೊಂದಿಗೆ ಸಂಬಂಧಿಸಿರುವ ವಿಜಯದೌತಣದಿಂದ ಹಿಂಬಾಲಿಸಲ್ಪಡಲಿದೆ: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ. ಆ ದಿನದಲ್ಲಿ ಜನರು—ಆಹಾ, ಈತನೇ ನಮ್ಮ ದೇವರು, . . . ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ. ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು.” ಇದರಲ್ಲಿ ಆನಂದವಿದೆ, ವೈರಸಾಧನೆ ಅಥವಾ ದ್ವೇಷಬುದ್ಧಿಯ ಸಂತೋಷವಲ್ಲ, ಬದಲಿಗೆ ಯೆಹೋವನ ನಾಮ ಪವಿತ್ರೀಕರಿಸಲ್ಪಡುವುದನ್ನು ಮತ್ತು ಭೂಮಿಯು ಏಕೀಕರಿಸಲ್ಪಟ್ಟ ಮಾನವಕುಲದಿಂದ ಶಾಂತಿಭರಿತ ನಿವಾಸಕ್ಕಾಗಿ ಶುದ್ಧಮಾಡಲ್ಪಡುವುದನ್ನು ನೋಡುವುದರಲ್ಲಿ ಅತ್ಯಾನಂದವಿದೆ.
ಒಂದು ಮಹಾ ಶೈಕ್ಷಣಿಕ ಕಾರ್ಯಕ್ರಮ
13. “ನೂತನಭೂಮಂಡಲ” ದಲ್ಲಿ ಯಾವ ಶಿಕ್ಷಣ ಕಾರ್ಯವು ನಡೆಯುವುದು?
13 ಮಲಾಕಿಯ 4:4 ರಲ್ಲಿ ಯೆಹೂದ್ಯರು “ಮೋಶೆಯ ಧರ್ಮಶಾಸ್ತ್ರವನ್ನು . . . ಜ್ಞಾಪಕಮಾಡಿ” ಕೊಳ್ಳುವಂತೆ ಎಚ್ಚರಿಸಲ್ಪಟ್ಟರು. ಹಾಗೆಯೇ ಇಂದು ಗಲಾತ್ಯ 6:2 ರಲ್ಲಿ ತಿಳಿಸಲಾದಂತೆ, ನಾವು “ಕ್ರಿಸ್ತನ ನಿಯಮವನ್ನು” ಅನುಸರಿಸಬೇಕಾಗಿದೆ. ಕ್ರಿಸ್ತನ ನಿಯಮದ ಮೇಲೆ ಆಧರಿಸಿದ ಹೆಚ್ಚಿನ ಉಪದೇಶಗಳು ನಿಸ್ಸಂದೇಹವಾಗಿ ಅರ್ಮಗೆದೋನ್ನಲ್ಲಿ ಪಾರಾಗುವವರಿಗೆ ಒದಗಿಸಲಾಗುವುದು, ಮತ್ತು ಇವು ಪುನರುತ್ಥಾನದ ಸಮಯದಲ್ಲಿ ತೆರೆಯಲ್ಪಡುವ ಪ್ರಕಟನೆ 20:12ರ “ಪುಸ್ತಕ” ಗಳಲ್ಲಿ ಬರೆಯಲ್ಪಡುವ ಸಾಧ್ಯತೆಗಳಿವೆ. ಪುನರುತ್ಥಾನಗೊಳಿಸಲ್ಪಟ್ಟ ಸತ್ತವರು “ನೂತನಭೂಮಂಡಲ”ದ ಜೀವನ ಶೈಲಿಯನ್ನು ಅನುಸರಿಸಲು ಶಿಕ್ಷಿಸಲ್ಪಡುವಾಗ, ಅದು ಎಂತಹ ಒಂದು ಮಹಾ ದಿನವಾಗಿರುವುದು!—ಪ್ರಕಟನೆ 21:1.
14, 15. (ಎ) ಆಧುನಿಕ ದಿನದ ಎಲೀಯನು ಗುರುತಿಸಲ್ಪಡುವುದು ಹೇಗೆ? (ಬಿ) ಯಾವ ಜವಾಬ್ದಾರಿಯನ್ನು ಎಲೀಯ ವರ್ಗವು ಪೂರೈಸುತ್ತಿದೆ?
14 ಅದು ಮಲಾಕಿಯ 4:5 ರಲ್ಲಿ ದಾಖಲಿಸಲಾದಂತೆ, ಯೆಹೋವನಿಂದ ಸೂಚಿಸಲ್ಪಟ್ಟಿರುವ ಶೈಕ್ಷಣಿಕ ಕೆಲಸದ ವಿಸ್ತರಣೆಯಾಗಿರುವುದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆಯೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು.” ಆ ಆಧುನಿಕ ದಿನದ ಎಲೀಯನು ಯಾರು? ಮತ್ತಾಯ 16:27, 28 ರಲ್ಲಿ ತೋರಿಸಲಾದಂತೆ, “ತನ್ನ ರಾಜ್ಯದಲ್ಲಿ ಬರುವದನ್ನು” ತಾನು ಸೂಚಿಸುವುದರಲ್ಲಿ, ಯೇಸು ಅಂದದ್ದು: “ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು; ಆವಾಗ ಆತನು ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು.” ಆರು ದಿನಗಳಾನಂತರ, ಪೇತ್ರ, ಯಾಕೋಬ, ಮತ್ತು ಯೋಹಾನರೊಂದಿಗೆ ಒಂದು ಬೆಟ್ಟದ ಮೇಲೆ, “ಅವರ ಕಣ್ಣ ಮುಂದೆ ಆತನ ರೂಪ ಬೇರೆಯಾಯಿತು; ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು; ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.” ಈ ದರ್ಶನದಲ್ಲಿ ಅವನು ಒಬ್ಬಂಟಿಗನಾಗಿದನ್ದೊ? ಇಲ್ಲ, ಯಾಕೆಂದರೆ “ಮೋಶೆಯೂ ಎಲೀಯನೂ ಆತನ ಸಂಗಡ ಮಾತಾಡುತ್ತಾ ಅವರಿಗೆ ಕಾಣಿಸಿಕೊಂಡರು.”—ಮತ್ತಾಯ 17:2, 3.
15 ಇದು ಏನನ್ನು ಅರ್ಥೈಸಬಹುದಿತ್ತು? ನ್ಯಾಯತೀರ್ಪಿಗಾಗಿ ಅವನ ಬರುವಿಕೆಯ ಸಮಯದಲ್ಲಿ, ಪ್ರವಾದಿಸಲ್ಪಟ್ಟ ಮಹಾ ಮೋಶೆಯೋಪಾದಿ ಅದು ಯೇಸುವಿಗೆ ಕೈತೋರಿಸಿತು. (ಧರ್ಮೋಪದೇಶಕಾಂಡ 18:18, 19; ಅ. ಕೃತ್ಯಗಳು 3:19-23) ಪ್ರಾಮುಖ್ಯವಾದೊಂದು ಕೆಲಸವನ್ನು ಅಂದರೆ ಯೆಹೋವನ ಮಹಾ ಮತ್ತು ಭಯ ಹುಟ್ಟಿಸುವ ದಿನವು ತಾಕುವ ಮೊದಲು ಇಡೀ ಭೂಮಿಯಲ್ಲಿ ರಾಜ್ಯದ ಸುವಾರ್ತೆಯ ಸಾರುವಿಕೆಯನ್ನು ಸಾಧಿಸುವ ಸಲುವಾಗಿ, ಆಗ ಅವನು ಆಧುನಿಕ ದಿನದ ಎಲೀಯನೊಂದಿಗೆ ಸೇರಿರುವನು. ಈ “ಎಲೀಯನ” ಕೆಲಸವನ್ನು ವರ್ಣಿಸುತ್ತಾ, ಮಲಾಕಿಯ 4:5, 6 ಹೇಳುವುದು: “ನಾನು ಬಂದು ದೇಶವನ್ನು ಶಾಪದಿಂದ ಹತಮಾಡದಂತೆ . . . ಅವನು ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸುವನು.” ಹೀಗೆ “ಎಲೀಯನು,” ಯಾರಿಗೆ ಯಜಮಾನನಾದ ಯೇಸು ತನ್ನ ಎಲ್ಲ ಸ್ವತ್ತುಗಳನ್ನು ವಹಿಸಿದ್ದಾನೊ, ಭೂಮಿಯ ಮೇಲಿರುವ ಆ ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಹಾಗೂ ವಿವೇಕಿಯಾದ ಆಳು ವರ್ಗವೆಂದು ಗುರುತಿಸಲ್ಪಡುತ್ತದೆ. ಇದು ನಂಬಿಕೆಯ ಮನೆವಾರ್ತೆಗೆ ಬೇಕಾದ ಆತ್ಮಿಕ ಆಹಾರವನ್ನು “ಹೊತ್ತುಹೊತ್ತಿಗೆ” ಒದಗಿಸುವುದನ್ನು ಒಳಗೊಳ್ಳುತ್ತದೆ.—ಮತ್ತಾಯ 24:45, 46.
16. ಎಲೀಯ ವರ್ಗದ ಕಾರ್ಯದಿಂದ ಯಾವ ಸಂತಸಕರ ಫಲಿತಾಂಶಗಳು ಉಂಟಾಗಿವೆ?
16 ಲೋಕವ್ಯಾಪಕವಾಗಿ ಇಂದು, ಆ ಉಣಿಸುವ ಕಾರ್ಯಕ್ರಮದ ಸಂತಸಕರ ಫಲಿತಾಂಶಗಳನ್ನು ನಾವು ನೋಡಬಲ್ಲೆವು. ಕಾವಲಿನಬುರುಜು ಪತ್ರಿಕೆಯು, 120 ಭಾಷೆಗಳಲ್ಲಿ ಪ್ರತಿ ಸಂಚಿಕೆಯ 1,61,00,000 ಪ್ರತಿಗಳ ಮುದ್ರಣ ಮತ್ತು ಅವುಗಳಲ್ಲಿ 97 ಏಕಕಾಲಿಕವಾಗಿ ಪ್ರಕಾಶಿಸಲ್ಪಡುವುದರೊಂದಿಗೆ, ಭೂಮಿಯನ್ನು “ರಾಜ್ಯದ ಈ ಸುವಾರ್ತೆ” ಯಿಂದ ತುಂಬಿಸುತ್ತಿದೆ. (ಮತ್ತಾಯ 24:14) ಯೆಹೋವನ ಸಾಕ್ಷಿಗಳ ಸಾರುವ ಮತ್ತು ಕಲಿಸುವ ಕೆಲಸದ ವಿಭಿನ್ನ ರೂಪಗಳಲ್ಲಿ, ಅನೇಕ ಭಾಷೆಗಳಲ್ಲಿ ಇತರ ಪ್ರಕಾಶನಗಳು ಉಪಯೋಗಿಸಲ್ಪಡುತ್ತವೆ. ನಂಬಿಗಸ್ತನೂ ವಿವೇಕಿಯೂ ಆದ ಆಳು, ಎಲೀಯ ವರ್ಗವು, “ತಮ್ಮ ಆತ್ಮಿಕ ಅಗತ್ಯದ ಅರಿವುಳ್ಳ” ಎಲ್ಲರಿಗೆ ಯಥೇಷ್ಟವಾಗಿ ಒದಗಿಸುವ ವಿಷಯದಲ್ಲಿ ಜಾಗರೂಕವಾಗಿದೆ. (ಮತ್ತಾಯ 5:3, NW) ಅದೂ ಅಲ್ಲದೆ, ಈ ರಾಜ್ಯದ ನಿರೀಕ್ಷೆಯನ್ನು ಸ್ವೀಕರಿಸಿ, ಅದಕ್ಕೆ ತಕ್ಕಂತೆ ಕ್ರಿಯೆಗೈಯುವವರು, ಅದ್ಭುತಕರವಾದ ಒಂದು ಲೋಕವ್ಯಾಪಕ ಐಕ್ಯದೊಳಗೆ ಬಂಧಿಸಲ್ಪಡುತ್ತಾರೆ. “ಸಕಲ ರಾಷ್ಟ್ರಗಳು ಮತ್ತು ಜಾತಿಗಳು ಮತ್ತು ಜನಾಂಗಗಳು ಮತ್ತು ಭಾಷೆಗಳಿಂದ ಹೊರಬರುವ” ಮಹಾ ಸಮೂಹವನ್ನು ಅದು ಆವರಿಸುತ್ತದೆ. (ಪ್ರಕಟನೆ 7:9, NW) ಯೆಹೋವನು ಕೇಳಿಕೊಳ್ಳುವ ಮಟ್ಟಿಗೆ ಈ ಕೆಲಸವು ನೆರವೇರಿದಾಗ, ಆತನ ಮಹಾ ಮತ್ತು ಭಯ ಹುಟ್ಟಿಸುವ ದಿನದಲ್ಲಿ ಅಂತ್ಯವು ಬರುವುದು.
17. ಯೆಹೋವನ ಭಯ ಹುಟ್ಟಿಸುವ ದಿನವು ಯಾವಾಗ ತೊಡಗುವುದು?
17 ಆ ಭಯ ಹುಟ್ಟಿಸುವ ದಿನವು ಯಾವಾಗ ಥಟ್ಟನೆ ತೊಡಗುವುದು? ಅಪೊಸ್ತಲ ಪೌಲನು ಉತ್ತರಿಸುವುದು: “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ [ಬಹುಶಃ ಅಸಾಧಾರಣವಾದ ಒಂದು ವಿಧದಲ್ಲಿ] ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.”—1 ಥೆಸಲೊನೀಕ 5:2, 3.
18, 19. (ಎ) “ಶಾಂತಿ ಮತ್ತು ಸಮಾಧಾನ” ಹೇಗೆ ಘೋಷಿಸಲ್ಪಡುತ್ತದೆ? (ಬಿ) ಯೆಹೋವನ ಜನರು ಬಿಡುಗಡೆಯನ್ನು ಯಾವಾಗ ಪಡೆಯುವರು?
18 ಈ ಪ್ರವಾದನೆಯಲ್ಲಿರುವ “ಅವರು” ಯಾರು? ಅವರು, ಈ ಹಿಂಸಾತ್ಮಕ ಲೋಕದ ಒಡೆದ ಭಾಗಗಳಿಂದ ಒಂದು ಐಕ್ಯ ಹೊಸ ವ್ಯವಸ್ಥೆಯನ್ನು ತಾವು ನಿರ್ಮಿಸಬಲ್ಲೆವೆಂದು ಹೇಳಿಕೊಳ್ಳುವ ರಾಜಕೀಯ ಮುಖಂಡರಾಗಿದ್ದಾರೆ. ಅವರ ಮಹತ್ವೋದ್ದೇಶದ ಉತ್ಪನ್ನಗಳಾದ ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರಗಳು ಇದರಲ್ಲಿ ವಿಫಲವಾಗಿವೆ. ಯೆಹೋವನ ಪ್ರವಾದಿಯು ಮುಂತಿಳಿಸಿದಂತೆ, ಅವರು ಈಗಲೂ ‘ಶಾಂತಿಯು ಇಲ್ಲದಿರುವಾಗ ಶಾಂತಿಯಿದೆ ಶಾಂತಿಯಿದೆ ಎಂದು’ ಹೇಳುತ್ತಿದ್ದಾರೆ.—ಯೆರೆಮೀಯ 6.14; 8:11; 14:13-16, NW.
19 ಈ ನಡುವೆ, ಯೆಹೋವನ ಜನರು ಈ ನಾಸ್ತಿಕ ಲೋಕದ ಒತ್ತಡಗಳನ್ನು ಮತ್ತು ಹಿಂಸೆಗಳನ್ನು ತಾಳಿಕೊಳ್ಳುತ್ತಾರೆ. ಆದರೆ ಬೇಗನೆ, 2 ಥೆಸಲೊನೀಕ 1:7, 8 ರಲ್ಲಿ ತಿಳಿಸಲಾದಂತೆ, ಅವರು “ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ . . . ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವ” ಸಮಯದಲ್ಲಿ ಪರಿಹಾರವನ್ನು ಕಂಡುಕೊಳ್ಳುವರು.
20. (ಎ) ‘ಕುಲುಮೆಯಂತೆ ಉರಿಯುವ’ ದಿನದ ಕುರಿತು ಚೆಫನ್ಯ ಮತ್ತು ಹಬಕ್ಕೂಕ ಏನನ್ನು ಪ್ರವಾದಿಸುತ್ತಾರೆ? (ಬಿ) ಈ ಪ್ರವಾದನೆಗಳು ಯಾವ ಸಲಹೆ ಮತ್ತು ಉತ್ತೇಜನವನ್ನು ನೀಡುತ್ತವೆ?
20 ಅದು ಎಷ್ಟು ಬೇಗನೆ ಸಂಭವಿಸುವುದು? ನಮ್ಮಲ್ಲಿ ಅನೇಕರು ದೀರ್ಘ ಸಮಯದಿಂದ ಕಾದುಕೊಂಡಿದ್ದೇವೆ. ಈ ನಡುವೆ, ಪಾರಾಗುವ ನಮ್ರ ಜನರಲ್ಲಿ ಹೆಚ್ಚಿನವರು ಚೆಫನ್ಯ 2:2, 3 ರಲ್ಲಿರುವ ಕರೆಗೆ ಉತ್ತರ ನೀಡುತ್ತಿದ್ದಾರೆ: “ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” ಅನಂತರ, ಚೆಫನ್ಯ 3:8 ಈ ಎಚ್ಚರಿಕೆಯನ್ನು ನೀಡುತ್ತದೆ: “ಯೆಹೋವನು ಇಂತೆನ್ನುತ್ತಾನೆ—ಹೀಗಿರಲು ನನ್ನನ್ನು ಕಾದುಕೊಂಡಿರ್ರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯುಬ್ದಿಡುವದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ; ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವದಷ್ಟೆ.” ಅಂತ್ಯವು ಸಮೀಪವಿದೆ! ಯೆಹೋವನಿಗೆ ಆ ದಿನ ಮತ್ತು ಗಳಿಗೆ ತಿಳಿದಿದೆ ಮತ್ತು ತನ್ನ ವೇಳಾಪಟ್ಟಿಯನ್ನು ಆತನು ಬದಲಿಸುವುದಿಲ್ಲ. ನಾವು ಸೈರಣೆಯಿಂದ ತಾಳಿಕೊಳ್ಳೋಣ. “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತರ್ವೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ಯೆಹೋವನ ಭಯ ಹುಟ್ಟಿಸುವ ದಿನವು ಇನ್ನಷ್ಟು ಹತ್ತಿರ ಬರಲು ತರ್ವೆಪಡುತ್ತದೆ. ಜ್ಞಾಪಕದಲ್ಲಿಡಿ, ಆ ದಿನವು ತಾಮಸವಾಗದು!
ವಿಮರ್ಶೆಯ ವಿಧದಲ್ಲಿ:
▫ ಯೆಹೋವನ ಭಯ ಹುಟ್ಟಿಸುವ ದಿನದಲ್ಲಿ ಆಳುವವರಿಗೆ ಮತ್ತು ಆಳಲ್ಪಡುವವರಿಗೆ ಏನು ಸಂಭವಿಸುವುದು?
▫ ಯೆಹೋವನು ಯಾವ ರೀತಿಯ ದೇವರು?
▫ ಯಾವ ಬಗೆಯ ಶಿಕ್ಷಣವು ದೇವರ ಜನರಿಗಾಗಿ ವರ್ಣಿಸಲಾಗಿದೆ?
▫ ಅಂತ್ಯದ ನಿಕಟತನದ ನೋಟದಲ್ಲಿ, ದೇವರ ಪ್ರವಾದಿಗಳು ನಮ್ಮನ್ನು ಹೇಗೆ ಎಚ್ಚರಿಸುತ್ತಾರೆ?
[ಪುಟ 21 ರಲ್ಲಿರುವ ಚಿತ್ರ]
ಸ್ಪ್ಯಾನಿಷ್ ನ್ಯಾಯಸ್ಥಾನದ ಸಮಯದಲ್ಲಿ ಅನೇಕರು ಕ್ಯಾತೊಲಿಕ್ ಧರ್ಮಕ್ಕೆ ಮತಾಂತರಿಸುವಂತೆ ಬಲವಂತಮಾಡಲ್ಪಟ್ಟರು
[ಕೃಪೆ]
The Complete Encyclopedia of Illustration/J. G. Heck