“ಕದಲು” ವಂತಹ ಒಂದು ಬೆಟ್ಟ
ಐಯರ್ಲೆಂಡ್ನ ಪಶ್ಚಿಮ ಭಾಗದಲ್ಲಿ, ಕ್ರೋಪ್ಯಾಟ್ರಿಕ್ನ ಅಪೂರ್ವವಾದ ಶಂಕುವಿನಾಕಾರವು, ಸುತ್ತಮುತ್ತಲಿನ ಬೆಟ್ಟಗಳ ಹೋಲಿಕೆಯಲ್ಲಿ ಎದ್ದು ಕಾಣುವಂಥದ್ದಾಗಿದೆ. ಪ್ರತಿ ವರ್ಷ, ಜುಲೈ ತಿಂಗಳಿನ ಕೊನೆಯ ಆದಿತ್ಯವಾರದಂದು, ಎಲ್ಲ ವಯೋಮಿತಿಯ 30,000 ದಷ್ಟು ಜನರು ಒಂದು ವಾರ್ಷಿಕ ತೀರ್ಥಯಾತ್ರೆಯ ಸಂದರ್ಭದಲ್ಲಿ ಶಿಖರವನ್ನು (765 ಮೀಟರುಗಳು) ಏರುವಾಗ, ಬೆಟ್ಟದ ತುದಿಯು ಕದಲುತ್ತಿರುವಂತೆ ತೋರುತ್ತದೆ.
ಈ ದಿನದಂದು, ಯಾತ್ರಿಕರು ಇಕ್ಕಟ್ಟು, ಒರಟು, ಮತ್ತು ಕೆಲವು ಸ್ಥಳಗಳಲ್ಲಿ ಅಪಾಯಕರವೂ ಆಗಿರುವ ಕಾಲುದಾರಿಯ ಮೇಲೆ ಏರುತ್ತಾರೆ ಮತ್ತು ಇಳಿಯುತ್ತಾರೆ. ವಾಸ್ತವದಲ್ಲಿ, ಅಂತಿಮ ಏರಿಕೆಯು (ಸುಮಾರು 300 ಮೀಟರುಗಳು) ಅತಿ ಕಡಿದಾದದ್ದು ಮತ್ತು ಸಂಪೂರ್ಣವಾಗಿ ಸಡಿಲವಾದ ಬಂಡೆಗಳಿಂದ ಕೂಡಿರುವಂಥದ್ದೂ ಆಗಿದೆ. ಹೀಗೆ ಹತ್ತುವುದನ್ನು ಇದು ಅಪಾಯಕರವಾಗಿಯೂ ಆಯಾಸಕರವಾಗಿಯೂ ಮಾಡುತ್ತದೆ.
ಈ ಆರೋಹಣವನ್ನು ಕೆಲವರು ಬರಿಯ ಕಾಲಿನಲ್ಲಿ ಮಾಡುವರು, ಮತ್ತು ಕೆಲವರು ಕೆಲವು ಭಾಗಗಳನ್ನು ಮಂಡಿಯೂರಿ ಪೂರ್ಣಗೊಳಿಸುವರು. ಹಿಂದಿನ ಸಮಯಗಳಲ್ಲಿ, ತೀರ್ಥಯಾತ್ರೆಯು ರಾತ್ರಿಯ ಕತ್ತಲಿನಲ್ಲಿ ಆರಂಭಗೊಂಡಿತು.
ಕ್ರೋಪ್ಯಾಟ್ರಿಕ್ ಅನೇಕರಿಗೆ ಅಂತಹ ಒಂದು ಪ್ರಾಮುಖ್ಯವಾದ ಅನುಭವವಾಗಿದೆ ಏಕೆ?
ತೀರ್ಥಯಾತ್ರೆಯ ಒಂದು ಸ್ಥಳದೋಪಾದಿ ಬಹಳ ಹಿಂದೆಯೇ ಸ್ಥಾಪನೆಗೊಂಡದ್ದು
ಸಾ.ಶ. ಐದನೆಯ ಶತಮಾನದ ಆದಿ ಭಾಗದಲ್ಲಿ, ರೋಮನ್ ಕ್ಯಾತೊಲಿಕ್ ಚರ್ಚು, ಪ್ಯಾಟ್ರಿಕ್ನನ್ನು ಒಬ್ಬ ಮಿಷನೆರಿ ಬಿಷಪನೋಪಾದಿ ಐಯರ್ಲೆಂಡ್ಗೆ ಕಳುಹಿಸಿತು. ಅವನ ಮುಖ್ಯ ಗುರಿಯು ಐರಿಷ್ ಜನರನ್ನು ಕ್ರೈಸ್ತತ್ವಕ್ಕೆ ಮತಾಂತರಿಸುವುದಾಗಿತ್ತು, ಮತ್ತು ಜನರ ಮಧ್ಯದಲ್ಲಿ ಅವನು ಸಾರಿದ ಮತ್ತು ಕೆಲಸಮಾಡಿದ ವರ್ಷಗಳಲ್ಲಿ, ಕ್ಯಾತೊಲಿಕ್ ಚರ್ಚಿಗಾಗಿ ಅಲ್ಲಿ ಅಸ್ತಿವಾರವನ್ನು ಹಾಕಿರುವುದಾಗಿ ಪ್ಯಾಟ್ರಿಕ್ಗೆ ಗೌರವ ಸಲ್ಲಿಸಲಾಗುತ್ತದೆ.
ಅವನ ಕೆಲಸವು ಅವನನ್ನು ದೇಶದ ಉದ್ದಕ್ಕೂ ಹಲವಾರು ಸ್ಥಳಗಳಿಗೆ ಕೊಂಡೊಯ್ದಿತು. ಒಂದು, ಐಯರ್ಲೆಂಡ್ನ ಪಶ್ಚಿಮ ಭಾಗವಾಗಿತ್ತು. ಅಲ್ಲಿ, ಕೆಲವು ಮೂಲಗಳಿಗನುಸಾರ, ಕ್ರೋಪ್ಯಾಟ್ರಿಕ್ (“ಪ್ಯಾಟ್ರಿಕ್ನ ಬೆಟ್ಟ” ಎಂಬರ್ಥ) ಎಂಬುದಾಗಿ ಅವನ ಹೆಸರಿನ ಸೂಚಕವಾಗಿ ಹೆಸರಿಸಲ್ಪಟ್ಟ ಒಂದು ಬೆಟ್ಟದ ತುದಿಯ ಮೇಲೆ ಅವನು 40 ದಿನಗಳನ್ನು ಮತ್ತು ರಾತ್ರಿಗಳನ್ನು ವ್ಯಯಿಸಿದನು. ಅಲ್ಲಿ ಅವನು ತನ್ನ ನಿಯೋಗದ ಯಶಸ್ಸಿಗಾಗಿ ಉಪವಾಸ ಮಾಡಿದನು ಮತ್ತು ಪ್ರಾರ್ಥಿಸಿದನು.
ಅನೇಕ ವರ್ಷಗಳಿಂದ ಅವನ ಸಾಹಸಕಾರ್ಯಗಳ ಕುರಿತು ಅನೇಕ ಪುರಾಣ ಕಥೆಗಳು ವಿಕಾಸಗೊಂಡಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಯಾವುದೆಂದರೆ, ಆ ಬೆಟ್ಟದ ಮೇಲೆ ಇರುವಾಗ, ಪ್ಯಾಟ್ರಿಕ್ ಐಯರ್ಲೆಂಡ್ನಿಂದ ಎಲ್ಲ ಹಾವುಗಳನ್ನು ತೊಲಗಿಸಿಬಿಟ್ಟನೆಂಬ ಕಥೆಯೇ.
ಶಿಖರದ ಮೇಲೆ ಅವನೊಂದು ಸಣ್ಣ ಚರ್ಚುನ್ನು ಕಟ್ಟಿದನೆಂದು ಸಂಪ್ರದಾಯವು ಪ್ರತಿಪಾದಿಸುತ್ತದೆ. ಆ ಕಟ್ಟಡವು ಒಂದು ದೀರ್ಘ ಸಮಯದಿಂದ ಅಲ್ಲಿರದಿದ್ದರೂ, ಮೂಲಭೂತ ಅಸ್ತಿವಾರವು ಇನ್ನೂ ಅಸ್ತಿತ್ವದಲ್ಲಿದೆ, ಮತ್ತು ಅನೇಕ ವರ್ಷಗಳಿಂದ ಆ ಸ್ಥಳ ಅಷ್ಟೇ ಅಲ್ಲದೆ ಆ ಬೆಟ್ಟವು ತೀರ್ಥಯಾತ್ರೆಯ ಒಂದು ಸ್ಥಾನವಾಗಿದೆ.
ತೀರ್ಥಯಾತ್ರೆಯ ವೈಶಿಷ್ಟ್ಯಗಳು
ವೃದ್ಧರಾಗಿರುವವರಿಗೆ ಅಥವಾ ಬೆಟ್ಟ ಹತ್ತುವುದರ ರೂಢಿ ಇರದವರಿಗೆ, ಗುಡ್ಡದ ಮೇಲಕ್ಕೆ 5 ಕಿಲೊಮೀಟರಿನ ಪ್ರಯಾಣವನ್ನು ಪೂರ್ಣಗೊಳಿಸಿ ಸುರಕ್ಷಿತವಾಗಿ ಕೆಳಗಿಳಿಯುವುದು ತಾನೇ ಗಣನೀಯವಾದೊಂದು ಸಾಧನೆಯಾಗಿದೆ.
ಪಥದ ಉದ್ದಕ್ಕೂ ಅತಿ ಪ್ರಮುಖ ಸ್ಥಳಗಳಲ್ಲಿ, ಬಗೆಬಗೆಯ ಗಾಯಗಳೊಂದಿಗೆ ನಿರ್ವಹಿಸಲು ತುರ್ತು ಪರಿಸ್ಥಿತಿಯ ತಂಡಗಳು ಸಿದ್ಧವಾಗಿ ನಿಂತಿರುತ್ತವೆ.
ಪಯಣ ಮಾರ್ಗದಲ್ಲಿ ಮೂರು ಸ್ಥಳಗಳು, ಯಾ ನಿಲ್ದಾಣಗಳು ಇವೆ. ಅಲ್ಲಿ ಯಾತ್ರಿಕರು ವಿಭಿನ್ನ ಪ್ರಾಯಶ್ಚಿತ್ತ ಆಚರಣೆಗಳನ್ನು ನಡೆಸುತ್ತಾರೆ. ಹತ್ತುವಿಕೆಯ ಆರಂಭದಲ್ಲಿ ಇವು ಪೂರ್ಣವಾಗಿ ಒಂದು ಪ್ರಕಟನೆಯ ಹಲಗೆಯ ಮೇಲೆ ವಿವರಿಸಲ್ಪಟ್ಟಿವೆ.—ರೇಖಾಚೌಕವನ್ನು ನೋಡಿರಿ.
ಅವರು ಹತ್ತುವುದು ಏಕೆ?
ಈ ಪ್ರಯಾಸಕರ ತೀರ್ಥಯಾತ್ರೆಯನ್ನು ಇಷ್ಟು ಮಂದಿ ಕೈಕೊಳ್ಳುವುದು ಏಕೆ? ಹತ್ತುವಾಗ ಕೆಲವರು ಅಂತಹ ವಿಪರೀತ ಕಾರ್ಯಗಳನ್ನು ಮಾಡುವುದೇಕೆ?
ಒಳ್ಳೆಯದು, ತೀರ್ಥಯಾತ್ರೆಯ ಸಮಯದಲ್ಲಿ ಪ್ರಾರ್ಥಿಸುವ ಮೂಲಕ ವೈಯಕ್ತಿಕ ಪ್ರಯೋಜನಕ್ಕಾಗಿರುವ ತಮ್ಮ ಬೇಡಿಕೆಗಳು ಆಲಿಸಲ್ಪಡುವ ಸಾಧ್ಯತೆಗಳು ಹೆಚ್ಚು ಎಂದು ಕೆಲವರು ನಂಬುತ್ತಾರೆ. ಇತರರು ಇದನ್ನು ಯಾವುದೊ ತಪ್ಪಿಗಾಗಿ ಕ್ಷಮಾಪಣೆಯ ಬೆನ್ನಟ್ಟುವಿಕೆಯಲ್ಲಿ ಮಾಡುತ್ತಾರೆ. ಇನ್ನೂ ಕೆಲವರಿಗೆ, ಇದು ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಧವಾಗಿದೆ. ಖಂಡಿತವಾಗಿಯೂ ಅನೇಕರು ಅದರ ಸಡಗರಕ್ಕಾಗಿ ಹೋಗುತ್ತಾರೆ. ಒಬ್ಬ ಅಧಿಕಾರಿಯು ಹೇಳಿದ್ದೇನೆಂದರೆ, ಅದು ‘ಸಮುದಾಯ ಭಾವನೆ ಮತ್ತು ಸಾಮುದಾಯಿಕ ಪ್ರೀತಿಯ ಅಭಿವ್ಯಕ್ತಿಯಾಗಿದೆ.’ ಕ್ರೋಪ್ಯಾಟ್ರಿಕನ್ನು ಹತ್ತುವುದು “ಸೆಂಟ್ ಪ್ಯಾಟ್ರಿಕ್ನ ಹೆಜ್ಜೆಜಾಡುಗಳನ್ನು ಅನುಸರಿಸುವ ಮತ್ತು ನಂಬಿಕೆಯಲ್ಲಿ ಆತನಿಗೆ ಸಲ್ಲಿಸಬೇಕಾದ ಸಾಲವನ್ನು ಗುರುತಿಸುವ ಅವರ ವಿಧವಾಗಿತ್ತು” ಎಂದು ಸಹ ಅವರು ಹೇಳಿದರು. ಅತ್ಯಂತ ಪ್ರಾಮುಖ್ಯವಾಗಿ, ಹತ್ತುವುದು “ಒಂದು ರೀತಿಯ ದೇಹ ದಂಡನೆಯಾಗಿದೆ ಯಾಕೆಂದರೆ ಒಳಗೊಂಡಿರುವ ಶಾರೀರಿಕ ಪ್ರಯಾಸವು ನಿಜವಾದ ಒಂದು ಪ್ರಾಯಶ್ಚಿತ್ತ ಸಾಧನೆಯೇ. ಬೆಟ್ಟದ ತುದಿಗೆ ಮಾಡಲ್ಪಡುವ ನಿಧಾನವಾದ ಆರೋಹಣವು ಪಶ್ಚಾತ್ತಾಪದ ಲಂಬಿಸಿದ ಕ್ರಿಯೆಯಾಗಿದೆ,” ಎಂದು ಅವರು ಕೂಡಿಸಿದರು.
ಇಪ್ಪತ್ತೈದು ಬಾರಿ ತಾನು ಬೆಟ್ಟವನ್ನು ಹತ್ತಿದ್ದೆನೆಂದು ಒಬ್ಬ ಮನುಷ್ಯನು ಹೆಮ್ಮೆಯಿಂದ ಹೇಳಿದನು! “ಒಂದಿಷ್ಟು ದೇಹದಂಡನೆಯನ್ನು ನೀಡಿಕೊಳ್ಳಲು!” ಅದನ್ನು ಮಾಡಿದೆನೆಂದು ಅವನು ಹೇಳಿದನು. ಇನ್ನೊಬ್ಬನು ಸರಳವಾಗಿ ವಿವರಿಸಿದ್ದು, “ಕಷ್ಟವಿಲ್ಲ, ಲಾಭವಿಲ್ಲ!”
ಅಗತ್ಯವಾಗಿರದಿದ್ದರೂ, ಅನೇಕರು ಬರಿಯ ಕಾಲಿನಲ್ಲಿ ಬೆಟ್ಟವನ್ನು ಹತ್ತುತ್ತಾರೆ. ಹಾಗೆ ಮಾಡುವ ಕಾರಣವೇನು? ಪ್ರಥಮವಾಗಿ, ಅವರು ನೆಲವನ್ನು “ಪವಿತ್ರ” ವೆಂದು ಪರಿಗಣಿಸುವುದರಿಂದ ತಮ್ಮ ಪಾದರಕ್ಷೆಗಳನ್ನು ತೆಗೆಯುತ್ತಾರೆ. ಎರಡನೆಯದಾಗಿ, ‘ಒಂದಿಷ್ಟು ದೇಹದಂಡನೆಯನ್ನು ನೀಡಿಕೊಳ್ಳುವ’ ತಮ್ಮ ಉದ್ದೇಶದೊಂದಿಗೆ ಅದು ಅನುರೂಪವಾಗಿದೆ. ಕೆಲವರು ನಿಲ್ದಾಣಗಳ ವಿಭಿನ್ನ ಪ್ರಾಯಶ್ಚಿತ್ತ ಸಾಧನೆಗಳನ್ನು ಮಂಡಿಯೂರಿ ಯಾಕೆ ಮಾಡುತ್ತಾರೆಂದು ಸಹ ಇದು ವಿವರಿಸುತ್ತದೆ.
ಸೃಷ್ಟಿಕರ್ತನನ್ನು ಗಣ್ಯಮಾಡುವಂತೆ ಪ್ರೇರೇಪಿಸಲ್ಪಟ್ಟದ್ದು
ವಿಶೇಷವಾದ ದಿನದಂದು ಹತ್ತುವ ಯಾತ್ರಿಕರ ಧಾರ್ಮಿಕ ಭಾವನೆಗಳಲ್ಲಿ ಒಬ್ಬನು ಪಾಲ್ಗೊಳ್ಳದಿದ್ದರೆ ಆಗೇನು? ಒಳ್ಳೆಯ ಹವಾಮಾನ ಪರಿಸ್ಥಿತಿಗಳು ಮತ್ತು ಗಟ್ಟಿಮುಟ್ಟಾದ ಪಾದರಕ್ಷೆಗಳೊಂದಿಗೆ, ಬೆಟ್ಟವನ್ನು ಯಾವುದೇ ಸಮಯದಲ್ಲಿ ಹತ್ತಸಾಧ್ಯವಿದೆ. ಯಾತ್ರಿಕರ ಒಂದು ದೊಡ್ಡ ಗುಂಪು ಬೆಟ್ಟವನ್ನು ಹತ್ತುವ ದಿನದಂದು ನಾವು ಹತ್ತಲಿಲ್ಲ. ವಿಶ್ರಾಮ ತೆಗೆದುಕೊಳ್ಳಲು ನಮ್ಮ ಅಡಿಗಡಿಯ ನಿಲುಕಡೆಯ ಸಂದರ್ಭಗಳಲ್ಲಿ, ಆರೋಹಣ ಮತ್ತು ಇಷ್ಟು ಜನರ ಮೇಲೆ ಅದು ಬೀರಿರುವ ಪ್ರಭಾವದ ಕುರಿತು ಪ್ರತಿಬಿಂಬಿಸಲು ನಾವು ಶಕ್ತರಾದೆವು. ಈ ಪರಿಶ್ರಮದ ಆರೋಹಣವನ್ನು ಮತ್ತು ವಿಭಿನ್ನ ಪ್ರಾಯಶ್ಚಿತ್ತ ಸಾಧನೆಗಳನ್ನು ಮಾಡುವ ಸಾವಿರಾರು ಯಾತ್ರಿಕರನ್ನು ಕಲ್ಪಿಸಿಕೊಳ್ಳುವಾಗ, ಹೀಗೆ ಕುತೂಹಲಪಡುವಂತೆ ನಾವು ಒತ್ತಾಯಿಸಲ್ಪಟ್ಟೆವು, ‘ದೇವರು ಕೇಳಿಕೊಳ್ಳುವುದು ಇದನ್ನೊ? ಪ್ರಾರ್ಥನೆಗಳನ್ನು ಪುನರಾವೃತ್ತಿಸುತ್ತಾ, ಹತ್ತುವ ಅಥವಾ ನಿರ್ದಿಷ್ಟವಾದ ಸ್ಮಾರಕಗಳ ಸುತ್ತಲೂ ನಡೆಯುವ ಧರ್ಮಾಚರಣೆಯು, ನಿಜವಾಗಿಯೂ ಯಾರನ್ನಾದರೂ ದೇವರ ಹತ್ತಿರಕ್ಕೆ ಸೆಳೆಯುತ್ತದೊ?’ ಮತ್ತಾಯ 6:6, 7 ರಲ್ಲಿ ಪುನರಾವೃತ್ತಿಸುವ ಪ್ರಾರ್ಥನೆಗಳ ಕುರಿತಾದ ಯೇಸುವಿನ ಸಲಹೆಯ ಕುರಿತೇನು?
ಖಂಡಿತವಾಗಿಯೂ, ಒಂದು ಧಾರ್ಮಿಕ ಅನುಭವವನ್ನು ಪಡೆಯವ ಕಾರಣದಿಂದ ನಾವು ಬೆಟ್ಟವನ್ನು ಹತ್ತಲಿಲ್ಲ. ಆದರೂ, ನಮ್ಮ ಸೃಷ್ಟಿಕರ್ತನಿಗೆ ಹತ್ತಿರವಾಗಿರುವಂತೆ ನಮಗೆ ಅನಿಸಿತು ಯಾಕೆಂದರೆ ನಾವು ಆತನ ಸೃಷ್ಟಿಯನ್ನು ಗಣ್ಯಮಾಡಬಹುದಿತ್ತು; ಬೆಟ್ಟಗಳು ಎಲ್ಲಿಯೇ ಇರಲಿ ಭೂಮಿಯ ಅದ್ಭುತಗಳಲ್ಲಿ ಒಂದಾಗಿವೆ. ಶಿಖರದಿಂದ ಅಟ್ಲ್ಯಾಂಟಿಕ್ ಮಹಾಸಾಗರದ ತೀರವನ್ನೂ ನೋಡುತ್ತಾ, ಸುಂದರವಾದ ಭೂದೃಶ್ಯದ ಅಡಚಣೆಯಿಲ್ಲದ ನೋಟವನ್ನು ನಾವು ಆನಂದಿಸಶಕ್ತರಾದೆವು. ಒಂದು ಪಕ್ಕದಲ್ಲಿ, ನಮ್ಮ ಕೆಳಗೆ ಕೊಲಿಯ್ಲಲ್ಲಿ ಮಂದವಾಗಿ ಪ್ರಕಾಶಿಸುತ್ತಿದ್ದ ಸಣ್ಣ ದ್ವೀಪಗಳು, ಇನ್ನೊಂದು ಪಕ್ಕದಲ್ಲಿದ್ದ ಒಡ್ಡೊಡ್ಡಾದ, ಬಂಜರು ಬೆಟ್ಟ ಪ್ರದೇಶದೊಂದಿಗೆ ಹೋಲಿಕೆಯಲ್ಲಿ ಸ್ಪಷ್ಟವಾಗಿಗಿ ತದ್ವಿರುದ್ಧವಾಗಿದ್ದವು.
ಆ ಮೂರು ನಿಲ್ದಾಣಗಳ ಕುರಿತು ನಾವು ಯೋಚಿಸಿದೆವು ಸ್ವತಃ ಯೇಸು ತನ್ನ ನಿಜ ಹಿಂಬಾಲಕರಿಗೆ ಹೇಳಿದ ಮಾತುಗಳು ನಮ್ಮ ನೆನಪಿಗೆ ಬಂದವು: “ಆದರೆ ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ.”—ಮತ್ತಾಯ 6:7.
ಬೆಟ್ಟವು, ಸಾವಿರಾರು ಜನರನ್ನು ಪ್ರಯಾಸಕರ ಮತಾಚರಣೆಯಲ್ಲಿ ಬಂಧಿಸಿರುವ ಸಂಪ್ರದಾಯದ ಒಂದು ಭಾಗವಾಗಿ ಪರಿಣಮಿಸಿತ್ತೆಂದು ನಾವು ಗ್ರಹಿಸಿದೆವು. “[ದೇವರ] ಆಜ್ಞೆಗಳನ್ನು ನಾವು ಕೈಕೊಳ್ಳುತ್ತೇವೆ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ,” ಎಂದು ಅವನು ಹೇಳಿದಾಗ, ಅಪೊಸ್ತಲ ಯೋಹಾನನಿಂದ ಹೇಳಲ್ಪಟ್ಟ ಸ್ವಾತಂತ್ರ್ಯದೊಂದಿಗೆ ಅದು ಹೇಗೆ ವೈದೃಶ್ಯವಾಗಿದೆ ಎಂದು ನಾವು ಪರಿಗಣಿಸಿದೆವು.—1 ಯೋಹಾನ 5:3, NW.
ಕ್ರೋಪ್ಯಾಟ್ರಿಕ್ನ ಮೇಲೆ ನಮ್ಮ ಆರೋಹಣವನ್ನು ಸೇರಿಸಿ ನಮ್ಮ ವಾಯುವಿಹಾರವನ್ನು ನಾವು ಆನಂದಿಸಿದೆವು. ಎಲ್ಲ ಮಾನವಜಾತಿಯು ಬೈಬಲಿಗೆ ಸಂಬಂಧಿಸದ ಸಂಪ್ರದಾಯಗಳಿಂದ ಮುಕ್ತವಾಗಿ, ಭೂಮಿಯ ಪ್ರೀತಿಪರ ಸೃಷ್ಟಿಕರ್ತನನ್ನು ‘ಆತ್ಮ ಮತ್ತು ಸತ್ಯದಿಂದ’ ಆರಾಧಿಸಶಕ್ತರಾಗುವ ಸಮಯಕ್ಕೆ ಮುನ್ನೋಡುವಂತೆ ಅದು ನಮ್ಮನ್ನು ಪ್ರೇರೇಪಿಸಿತು.—ಯೋಹಾನ 4:24.
[ಪುಟ 27 ರಲ್ಲಿರುವ ಚೌಕ]
ತೀರ್ಥಯಾತ್ರೆಯ ಪ್ರಧಾನ ವೈಶಿಷ್ಟ್ಯಗಳು
ಸೆಂಟ್ ಪ್ಯಾಟ್ರಿಕ್ ದಿನದಂದು ಅಥವಾ ಹಬ್ಬದಿಂದ ಆ ದಿನದ ವರೆಗಿನ ಎಂಟು ದಿನಗಳೊಳಗೆ, ಅಥವಾ ಜೂನ್, ಜುಲೈ, ಆಗಸ್ಟ್ ಮತ್ತು ಸಪ್ಟಂಬರ ತಿಂಗಳಿನ ಯಾವುದೇ ಸಮಯದಲ್ಲಿ ಬೆಟ್ಟವನ್ನು ಹತ್ತಿ, ಪೋಪನ ಇಂಗಿತಗಳಿಗಾಗಿ ಪ್ರಾರ್ಥನಾ ಮಂದಿರದ ಒಳಗೆ ಅಥವಾ ಹತ್ತಿರ ಪ್ರಾರ್ಥಿಸುವ ಪ್ರತಿಯೊಬ್ಬ ಯಾತ್ರಿಕನು, ಶಿಖರದ ಮೇಲೆ ಅಥವಾ ವಾರದೊಳಗೆ ತಪ್ಪೊಪ್ಪಿಕೆ ಮತ್ತು ಪವಿತ್ರ ಕರ್ಮಕ್ಕಾಗಿ ಹೋಗುವ ಷರತ್ತಿನ ಮೇಲೆ ಪಾಪಕ್ಷಮೆಯನ್ನು ಪಡೆಯಬಹುದು.
ಸಾಂಪ್ರದಾಯಿಕ ನಿಲ್ದಾಣಗಳು
ಮೂರು “ನಿಲ್ದಾಣಗಳು” ಅಲ್ಲಿವೆ. (1) ಶಂಕುವಿನ ಅಥವಾ ಲ್ಯಾಕ್ಟ್ ಬೆನಾನ್ನ ಬುಡದಲ್ಲಿ, (2) ಶಿಖರದ ಮೇಲೆ, (3) ರಲಿಗ್ ಮರ್ವೆ, [ಒಂದು ಪಟ್ಟಣ] ಬೆಟ್ಟದ ಲ್ಯಕಾನ್ವಿ ಪಕ್ಕದಿಂದ ಸ್ವಲ್ಪ ಅಂತರದಲ್ಲಿರುವ ಸ್ಥಳ.
1 ನೆಯ ನಿಲ್ದಾಣ - ಲ್ಯಾಕ್ಟ್ ಬೆನಾನ್
7 ಬಾರಿ ಕರ್ತನ ಪ್ರಾರ್ಥನೆಯನ್ನು, 7 ಬಾರಿ ಮರಿಯಳ ಸ್ತೋತ್ರವನ್ನು, ಮತ್ತು ಧರ್ಮ ಪ್ರಮಾಣವೊಂದನ್ನು ಹೇಳುತ್ತಾ, ಯಾತ್ರಿಕನು ಕಲ್ಲುಗಳ ದಿಬ್ಬದ ಸುತ್ತಲೂ ಏಳು ಬಾರಿ ನಡೆಯುತ್ತಾನೆ
2 ನೆಯ ನಿಲ್ದಾಣ - ಶಿಖರ
(ಎ) ಯಾತ್ರಿಕನು ಮಂಡಿಯೂರಿ 7 ಬಾರಿ ಕರ್ತನ ಪ್ರಾರ್ಥನೆಯನ್ನು, 7 ಬಾರಿ ಮರಿಯಳ ಸ್ತೋತ್ರವನ್ನು ಮತ್ತು ಧರ್ಮ ಪ್ರಮಾಣವೊಂದನ್ನು ಹೇಳುತ್ತಾನೆ
(ಬಿ) ಪೋಪನ ಇಂಗಿತಗಳಿಗಾಗಿ ಯಾತ್ರಿಕನು ಪ್ರಾರ್ಥನ ಮಂದಿರದ ಹತ್ತಿರ ಪ್ರಾರ್ಥಿಸುತ್ತಾನೆ
(ಸಿ) 15 ಬಾರಿ ಕರ್ತನ ಪ್ರಾರ್ಥನೆಯನ್ನು, 15 ಬಾರಿ ಮರಿಯಳ ಸ್ತೋತ್ರವನ್ನು ಮತ್ತು ಧರ್ಮ ಪ್ರಮಾಣವೊಂದನ್ನು ಹೇಳುತ್ತಾ, ಯಾತ್ರಿಕನು 15 ಬಾರಿ ಪ್ರಾರ್ಥನ ಮಂದಿರದ ಸುತ್ತಲೂ ನಡೆಯುತ್ತಾನೆ
(ಡಿ) 7 ಬಾರಿ ಕರ್ತನ ಪ್ರಾರ್ಥನೆಯನ್ನು, 7 ಬಾರಿ ಮರಿಯಳ ಸ್ತೋತ್ರವನ್ನು ಮತ್ತು ಧರ್ಮ ಪ್ರಮಾಣವೊಂದನ್ನು ಹೇಳುತ್ತಾ, ಯಾತ್ರಿಕನು ಲ್ಯಾಬ ಫಾರಿಗ್ [ಪ್ಯಾಟ್ರಿಕ್ನ ಮಂಚ]ದ ಸುತ್ತಲೂ 7 ಬಾರಿ ನಡೆಯುತ್ತಾನೆ
3 ನೆಯ ನಿಲ್ದಾಣ - ರಲಿಗ್ ಮರ್ವೆ
ಯಾತ್ರಿಕನು 7 ಬಾರಿ ಕರ್ತನ ಪ್ರಾರ್ಥನೆಯನ್ನು, 7 ಬಾರಿ ಮರಿಯಳ ಸ್ತೋತ್ರವನ್ನು ಮತ್ತು ಧರ್ಮ ಪ್ರಮಾಣವೊಂದನ್ನು ಪ್ರತಿಯೊಂದು ದಿಬ್ಬದ ಬಳಿ [ಅಲ್ಲಿ ಮೂರು ದಿಬ್ಬಗಳಿವೆ] ಹೇಳುತ್ತಾ, ಕಲ್ಲುಗಳ ಪ್ರತಿಯೊಂದು ದಿಬ್ಬದ ಸುತ್ತಲೂ 7 ಬಾರಿ ನಡೆಯುತ್ತಾನೆ ಮತ್ತು ಅಂತಿಮವಾಗಿ ಪ್ರಾರ್ಥಿಸುತ್ತಾ 7 ಬಾರಿ ರಲಿಗ್ ಮರ್ವೆವಿನ ಇಡೀ ಆವರಣದ ಸುತ್ತಲೂ ಹೋಗುತ್ತಾನೆ.