“ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ”
“ನಾನು ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿಯೇ . . . ಈ ಲೋಕಕ್ಕೆ ಬಂದಿದ್ದೇನೆ.”—ಯೋಹಾ. 18:37.
1, 2. (ಎ) ಇಂದು ಲೋಕ ಹೇಗೆ ಛಿದ್ರಛಿದ್ರವಾಗುತ್ತಿದೆ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
“ನಾನು ಚಿಕ್ಕ ವಯಸ್ಸಿಂದ ಬರೀ ಅನ್ಯಾಯವನ್ನೇ ನೋಡಿದೆ. ಇದರಿಂದ ನನ್ನ ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ದ್ವೇಷ ಬೆಳೆಸಿಕೊಂಡೆ. ಅಂಥ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುವವರಿಗೆ ಬೆಂಬಲ ಕೊಟ್ಟೆ. ಎಷ್ಟೋ ವರ್ಷ ಒಬ್ಬ ಭಯೋತ್ಪಾದಕನ ಪ್ರೇಯಸಿಯಾಗಿದ್ದೆ” ಎಂದು ದಕ್ಷಿಣ ಯೂರೋಪ್ನಲ್ಲಿರುವ ಒಬ್ಬ ಸಹೋದರಿ ತನ್ನ ಹಿಂದಿನ ಜೀವನದ ಬಗ್ಗೆ ಹೇಳುತ್ತಾಳೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ಒಬ್ಬ ಸಹೋದರ ಯಾಕೆ ಮುಂಚೆ ತುಂಬ ಹಿಂಸೆ, ದೌರ್ಜನ್ಯ ಮಾಡುತ್ತಿದ್ದರೆಂದು ವಿವರಿಸುತ್ತಾರೆ. ಅವರು ಹೇಳುವುದು: “ಬೇರೆಲ್ಲ ಬುಡಕಟ್ಟು ಜನಾಂಗಕ್ಕಿಂತ ನನ್ನ ಜನಾಂಗವೇ ಶ್ರೇಷ್ಠ ಎಂದು ನಾನು ಅಂದುಕೊಂಡಿದ್ದೆ. ನಾನೊಂದು ರಾಜಕೀಯ ಪಕ್ಷಕ್ಕೂ ಸೇರಿಕೊಂಡೆ. ಬೇರೆ ರಾಜಕೀಯ ಪಕ್ಷಗಳಿಗೆ ಯಾರು ಬೆಂಬಲ ಕೊಡುತ್ತಾರೋ, ಅವರು ನಮ್ಮ ಕುಲದವರಾದರೂ ಪರವಾಗಿಲ್ಲ ಅವರನ್ನೆಲ್ಲ ಈಟಿಯಿಂದ ಕೊಲ್ಲಬೇಕೆಂದು ನಮಗೆ ಕಲಿಸಲಾಗಿತ್ತು.” ಮಧ್ಯ ಯೂರೋಪಿನಲ್ಲಿರುವ ಒಬ್ಬ ಸಹೋದರಿ ತಿಳಿಸುವುದು: “ನನಗೆ ಪೂರ್ವಗ್ರಹ ಇತ್ತು. ಬೇರೆ ದೇಶದವರನ್ನಾಗಲಿ, ಧರ್ಮದವರನ್ನಾಗಲಿ ಕಂಡರೆ ನನಗೆ ಇಷ್ಟಾನೇ ಆಗುತ್ತಿರಲಿಲ್ಲ.”
2 ಈ ಮೂವರಲ್ಲಿ ಇದ್ದಂತೆ, ಇವತ್ತು ಹೆಚ್ಚೆಚ್ಚು ಜನರಲ್ಲಿ ಇಂಥ ಮನೋಭಾವ ಕಾಣಿಸಿಕೊಳ್ಳುತ್ತಿದೆ. ಸ್ವಾತಂತ್ರ್ಯಕ್ಕಾಗಿ ಚಳವಳಿಗಳನ್ನು ನಡೆಸುತ್ತಿರುವವರು ಹಿಂಸಾಚಾರದ ಮೊರೆ ಹೋಗುತ್ತಾರೆ. ರಾಜಕೀಯ ಪಕ್ಷಗಳು ಕಿತ್ತಾಡುತ್ತಿವೆ. ತಮ್ಮ ದೇಶಕ್ಕೆ ಬಂದಿರುವ ವಿದೇಶಿಯರ ಜೊತೆ ಜನರು ಸರಿಯಾಗಿ ನಡಕೊಳ್ಳಲ್ಲ. ಬೈಬಲ್ ಮುಂಚೆಯೇ ತಿಳಿಸಿದಂತೆ ಈ ಕಡೇ ದಿವಸಗಳಲ್ಲಿ ಜನರು “ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲ.” (2 ತಿಮೊ. 3:1, 3) ಲೋಕ ಇಷ್ಟು ಛಿದ್ರಛಿದ್ರವಾಗುತ್ತಿರುವಾಗ ಕ್ರೈಸ್ತರು ಹೇಗೆ ಐಕ್ಯತೆ ಕಾಪಾಡಿಕೊಳ್ಳಬಹುದು? ನಾವು ಯೇಸುವಿನ ಉದಾಹರಣೆಯಿಂದ ಇದರ ಬಗ್ಗೆ ಹೆಚ್ಚನ್ನು ಕಲಿಯಬಹುದು. ಅವನ ದಿನಗಳಲ್ಲೂ ರಾಜಕೀಯ ಗುಂಪುಗಳ ಪ್ರಭಾವದಿಂದ ಜನರ ಮಧ್ಯೆ ಅನ್ಯೋನ್ಯತೆ ಇರಲಿಲ್ಲ. ಈ ಲೇಖನದಲ್ಲಿ ನಾವು ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ: ಯೇಸು ಯಾಕೆ ಯಾವುದೇ ರಾಜಕೀಯ ಗುಂಪಿಗೆ ಸೇರಲು ಒಪ್ಪಲಿಲ್ಲ? ದೇವಜನರು ರಾಜಕೀಯಕ್ಕೆ ಸಂಬಂಧಪಟ್ಟ ವಿವಾದಗಳಲ್ಲಿ ತಲೆಹಾಕಬಾರದು ಎಂದು ಯೇಸು ಹೇಗೆ ತೋರಿಸಿಕೊಟ್ಟನು? ನ್ಯಾಯಕ್ಕಾಗಿ ನಾವು ಹಿಂಸಾಚಾರದ ಮೊರೆ ಹೋಗಬಾರದು ಎಂದು ಯೇಸು ಹೇಗೆ ಕಲಿಸಿದನು?
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರಿಗೆ ಯೇಸು ಬೆಂಬಲ ಕೊಟ್ಟನಾ?
3, 4. (ಎ) ಯೇಸುವಿನ ದಿನದಲ್ಲಿದ್ದ ಯೆಹೂದಿಗಳು ಯಾವುದಕ್ಕಾಗಿ ಬಯಸುತ್ತಿದ್ದರು? (ಬಿ) ಯೇಸುವಿನ ಶಿಷ್ಯರ ಮೇಲೆ ಈ ಭಾವನೆಗಳು ಹೇಗೆ ಪ್ರಭಾವ ಬೀರಿದವು?
3 ಯೇಸುವಿನ ಕಾಲದಲ್ಲಿದ್ದ ಅನೇಕ ಯೆಹೂದಿಗಳು ರೋಮನ್ನರಿಂದ ಸ್ವಾತಂತ್ರ್ಯ ಪಡೆಯಲು ಬಯಸುತ್ತಿದ್ದರು. ಯೆಹೂದಿ ದಂಗೆಕೋರರು (ಝೆಲೆಟ್ಸ್) ಎಂದು ಕರೆಯಲಾಗುತ್ತಿದ್ದ ಮತಾಭಿಮಾನವುಳ್ಳ ರಾಜಕೀಯ ಗುಂಪಿನವರು ಇಂಥ ಬಯಕೆಗಳಿಗೆ ತುಪ್ಪ ಸುರಿಯುತ್ತಿದ್ದರು. ಅವರಲ್ಲಿ ಅನೇಕರು ಗಲಿಲಾಯದವನಾದ ಯೂದನನ್ನು ಹಿಂಬಾಲಿಸುತ್ತಿದ್ದರು. ಇವನು ಯೇಸುವಿದ್ದ ಸಮಯದಲ್ಲೇ ಜೀವಿಸುತ್ತಿದ್ದನು. ತಾನು ಮೆಸ್ಸೀಯನೆಂದು ಹೇಳಿಕೊಂಡು ಅನೇಕರನ್ನು ಮೋಸ ಮಾಡುತ್ತಿದ್ದನು. ರೋಮ್ ವಿರುದ್ಧ ಹೋರಾಡಲು ಅವನು ಯೆಹೂದಿಗಳನ್ನು ಪ್ರಚೋದಿಸುತ್ತಿದ್ದನು. ಯಾರು ರೋಮನ್ನರಿಗೆ ತೆರಿಗೆ ಕಟ್ಟಲು ಒಪ್ಪುತ್ತಾರೋ ಅವರೆಲ್ಲ “ಹೇಡಿಗಳು” ಎಂದು ಕರೆಯುತ್ತಿದ್ದನೆಂದು ಯೆಹೂದಿ ಇತಿಹಾಸಕಾರರಾದ ಜೋಸೀಫಸ್ ಹೇಳುತ್ತಾರೆ. ರೋಮನ್ನರು ಯೂದನನ್ನು ಹಿಡಿದು ಕೊಂದುಬಿಟ್ಟರು. (ಅ. ಕಾ. 5:37) ಮೇಲೆ ತಿಳಿಸಲಾದ ಯೆಹೂದಿ ದಂಗೆಕೋರರಲ್ಲಿ ಕೆಲವರು ತಮ್ಮ ಗುರಿಗಳನ್ನು ಸಾಧಿಸಲು ಹಿಂಸೆಯ ಮಾರ್ಗ ಹಿಡಿದರು.
4 ಹೆಚ್ಚಿನ ಯೆಹೂದಿಗಳು ಮೆಸ್ಸೀಯ ಬರುತ್ತಾನೆಂದು ತುಂಬ ಕಾತುರದಿಂದ ಕಾಯುತ್ತಿದ್ದರು. ಮೆಸ್ಸೀಯನು ತಮ್ಮನ್ನು ರೋಮನ್ನರಿಂದ ಬಿಡುಗಡೆ ಮಾಡುತ್ತಾನೆ ಮತ್ತು ಇಸ್ರಾಯೇಲನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುತ್ತಾನೆಂದು ಯೋಚಿಸುತ್ತಿದ್ದರು. (ಲೂಕ 2:38; 3:15) ಮೆಸ್ಸೀಯನು ಇಸ್ರಾಯೇಲಿನಲ್ಲಿ ಒಂದು ರಾಜ್ಯವನ್ನು ಸ್ಥಾಪಿಸುವನು, ಆಗ ಬೇರೆಬೇರೆ ಕಡೆ ವಾಸಿಸುತ್ತಿರುವ ಯೆಹೂದಿಗಳು ಇಸ್ರಾಯೇಲಿಗೆ ವಾಪಸ್ ಬರುತ್ತಾರೆ ಎಂದು ಅನೇಕರು ನಂಬಿದ್ದರು. ಸ್ನಾನಿಕನಾದ ಯೋಹಾನನು ಸಹ ಒಂದು ಸಲ ಯೇಸುವಿಗೆ “ಬರತಕ್ಕವನು ನೀನೋ ಅಥವಾ ಬೇರೊಬ್ಬನನ್ನು ನಾವು ಎದುರುನೋಡಬೇಕೊ?” ಎಂದು ಕೇಳಿದನು. (ಮತ್ತಾ. 11:2, 3) ಬಹುಶಃ ಬೇರೊಬ್ಬನು ಬಂದು ಯೆಹೂದಿಗಳಿಗೆ ಸ್ವಾತಂತ್ರ್ಯ ಕೊಡಬಹುದು ಎಂದು ಯೋಹಾನನು ನೆನಸಿರಬೇಕು. ಎಮ್ಮಾಹುವಿಗೆ ಹೋಗುತ್ತಿದ್ದ ಇಬ್ಬರು ಶಿಷ್ಯರು ಸಹ ಕ್ರಿಸ್ತನೇ ಇಸ್ರಾಯೇಲನ್ನು ಬಿಡುಗಡೆ ಮಾಡುತ್ತಾನೆಂದು ಪುನರುತ್ಥಾನವಾದ ಯೇಸುವಿಗೆ ಹೇಳಿದರು. (ಲೂಕ 24:21 ಓದಿ.) ಅದಾದ ಮೇಲೆ ಅಪೊಸ್ತಲರು ಯೇಸುವನ್ನು “ಕರ್ತನೇ, ನೀನು ಈ ಕಾಲದಲ್ಲೇ ಇಸ್ರಾಯೇಲ್ಯರಿಗೆ ರಾಜ್ಯವನ್ನು ಪುನಸ್ಸ್ಥಾಪಿಸುತ್ತಿದ್ದೀಯೊ?” ಎಂದು ಕೇಳಿದರು.—ಅ. ಕಾ. 1:6.
5. (ಎ) ಗಲಿಲಾಯದ ಜನರು ಯೇಸುವನ್ನು ತಮ್ಮ ರಾಜನಾಗಿ ಮಾಡಿಕೊಳ್ಳಲು ಯಾಕೆ ಇಷ್ಟಪಟ್ಟರು? (ಬಿ) ಅವರ ಯೋಚನೆಯನ್ನು ಯೇಸು ಹೇಗೆ ಸರಿಪಡಿಸಿದನು?
5 ಮೆಸ್ಸೀಯನು ತಮ್ಮ ಕಷ್ಟಗಳನ್ನು ತೆಗೆಯುತ್ತಾನೆಂದು ಯೆಹೂದಿಗಳು ನಂಬಿದ್ದರು. ಇದೇ ಕಾರಣಕ್ಕೆ ಗಲಿಲಾಯದ ಜನರು ಯೇಸುವನ್ನು ತಮ್ಮ ರಾಜನಾಗಿ ಮಾಡಲು ಬಯಸಿರಬಹುದು. ಯೇಸು ಒಬ್ಬ ಉತ್ತಮ ನಾಯಕನಾಗುತ್ತಾನೆ ಎಂದು ಅವರು ಯೋಚಿಸಿರಬೇಕು. ಯಾಕೆಂದರೆ ಅವನು ಅತ್ಯುತ್ತಮ ಭಾಷಣಗಾರನಾಗಿದ್ದ, ಕಾಯಿಲೆ ಇರುವವರನ್ನು ವಾಸಿಮಾಡುತ್ತಿದ್ದ ಮತ್ತು ಹಸಿದವರಿಗೆ ಊಟ ಕೊಟ್ಟಿದ್ದ. 5,000 ಜನರಿಗೆ ಆಹಾರ ಒದಗಿಸಿದಾಗ ಜನರು ಆಶ್ಚರ್ಯಚಕಿತರಾದರು. ಅವರೇನು ಮಾಡಲಿಕ್ಕಿದ್ದಾರೆ ಎಂದು ಆಮೇಲೆ ಯೇಸುವಿಗೆ ಗೊತ್ತಾಯಿತು. “ಜನರು ಬಂದು ತನ್ನನ್ನು ಹಿಡಿದು ಅರಸನನ್ನಾಗಿ ಮಾಡಬೇಕೆಂದಿದ್ದಾರೆ ಎಂಬುದನ್ನು ತಿಳಿದವನಾಗಿ ಯೇಸು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೊರಟುಹೋದನು.” (ಯೋಹಾ. 6:10-15) ಮಾರನೇ ದಿನ ಜನರಲ್ಲಿ ಯೇಸುವನ್ನು ರಾಜನಾಗಿ ಮಾಡುವ ಉತ್ಸಾಹ ಕಡಿಮೆಯಾಗಿದ್ದಿರಬಹುದು. ಆಗ ಯೇಸು ತಾನು ಭೌತಿಕ ಅವಶ್ಯಕತೆಗಳನ್ನು ಪೂರೈಸುವುದಕ್ಕಲ್ಲ, ದೇವರ ರಾಜ್ಯದ ಬಗ್ಗೆ ಕಲಿಸುವುದಕ್ಕೆ ಬಂದಿದ್ದೇನೆ ಎಂದು ವಿವರಿಸಿದನು. “ನಶಿಸಿಹೋಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರಕ್ಕಾಗಿ ದುಡಿಯಿರಿ” ಎಂದು ಅವರಿಗೆ ಹೇಳಿದನು.—ಯೋಹಾ. 6:25-27.
6. ಲೋಕದ ರಾಜಕೀಯ ವಿಷಯದಲ್ಲಿ ತಾನು ಒಳಗೂಡಲು ಬಯಸುವುದಿಲ್ಲ ಎಂದು ಯೇಸು ಹೇಗೆ ಸ್ಪಷ್ಟಪಡಿಸಿದನು? (ಲೇಖನದ ಆರಂಭದಲ್ಲಿರುವ ಮೊದಲನೇ ಚಿತ್ರ ನೋಡಿ.)
6 ಯೇಸು ರಾಜನಾಗಿ ಯೆರೂಸಲೇಮಿನಲ್ಲಿ ಆಳುತ್ತಾನೆಂದು ಆತನ ಹಿಂಬಾಲಕರಲ್ಲಿ ಕೆಲವರು ನಂಬಿದ್ದರು. ಈ ವಿಷಯ ಯೇಸುವಿಗೆ ಆತನು ತೀರಿಹೋಗುವ ಸ್ವಲ್ಪ ಮುಂಚೆ ಗೊತ್ತಾಯಿತು. ಆಗ ಯೇಸು ಇದು ಆಗಲ್ಲ ಎಂದು ತನ್ನ ಹಿಂಬಾಲಕರಿಗೆ ಅರ್ಥಮಾಡಿಸಲು ಮೈನಾ ಹಣದ ದೃಷ್ಟಾಂತವನ್ನು ತಿಳಿಸಿದನು. ಆ ದೃಷ್ಟಾಂತದಲ್ಲಿ “ರಾಜಮನೆತನದ ಒಬ್ಬ ಮನುಷ್ಯ” ಅಂದರೆ ಯೇಸು ದೀರ್ಘ ಸಮಯಕ್ಕಾಗಿ ದೂರ ಹೋಗುವುದರ ಬಗ್ಗೆ ಇದೆ. (ಲೂಕ 19:11-13,15) ಲೋಕದ ರಾಜಕೀಯ ವಿಷಯಗಳಲ್ಲಿ ತನಗೆ ಆಸಕ್ತಿ ಇಲ್ಲ ಎಂದು ಯೇಸು ರೋಮನ್ ಅಧಿಕಾರಿಯಾದ ಪೊಂತ್ಯ ಪಿಲಾತನಿಗೂ ಹೇಳುವ ಸಂದರ್ಭ ಬಂತು. ಪಿಲಾತ ಯೇಸುವಿಗೆ “ನೀನು ಯೆಹೂದ್ಯರ ಅರಸನೊ?” ಎಂದು ಕೇಳಿದನು. (ಯೋಹಾ. 18:33) ಜನರು ರೋಮನ್ನರ ವಿರುದ್ಧ ದಂಗೆ ಏಳುವಂತೆ ಯೇಸು ಪ್ರಚೋದಿಸಬಹುದೆಂಬ ಭಯ ಪಿಲಾತನಿಗೆ ಇದ್ದಿರಬೇಕು. ಆದರೆ ಯೇಸು “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಎಂದು ಉತ್ತರ ಕೊಟ್ಟನು. (ಯೋಹಾ. 18:36) ಯೇಸು ರಾಜಕೀಯದಲ್ಲಿ ಒಳಗೂಡಲು ಒಪ್ಪಲಿಲ್ಲ. ಯಾಕೆಂದರೆ ಅವನ ರಾಜ್ಯವು ಸ್ವರ್ಗದಲ್ಲಿ ಇರಲಿತ್ತು. ತಾನು “ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿ” ಈ ಭೂಮಿಗೆ ಬಂದೆ ಎಂದು ಪಿಲಾತನಿಗೆ ಹೇಳಿದನು.—ಯೋಹಾನ 18:37 ಓದಿ.
7. ನಮ್ಮ ಹೃದಯದಲ್ಲೂ ರಾಜಕೀಯ ಗುಂಪುಗಳಿಗೆ ಬೆಂಬಲ ಕೊಡದೆ ಇರುವುದು ಯಾಕೆ ಕಷ್ಟವಾಗಬಹುದು?
7 ಯೇಸುವಿಗೆ ತನ್ನ ನೇಮಕ ಏನೆಂದು ಚೆನ್ನಾಗಿ ಗೊತ್ತಿತ್ತು. ನಮ್ಮ ನೇಮಕ ಏನೆಂದು ನಾವು ಅರ್ಥಮಾಡಿಕೊಂಡರೆ ಯಾವುದೇ ರಾಜಕೀಯ ಗುಂಪನ್ನು ಬೆಂಬಲಿಸುವುದಿಲ್ಲ. ನಮ್ಮ ಹೃದಯದಲ್ಲಿ ಕೂಡ ಅವುಗಳ ಕಡೆ ಒಲವು ತೋರಿಸಲ್ಲ. ಈ ರೀತಿ ಇರುವುದು ಯಾವಾಗಲೂ ಸುಲಭವಲ್ಲ. ಒಬ್ಬ ಸಂಚರಣ ಮೇಲ್ವಿಚಾರಕರು ಹೇಳುವುದನ್ನು ಗಮನಿಸಿ: “ನಮ್ಮ ಸ್ಥಳದಲ್ಲಿರುವ ಜನರು ಹೆಚ್ಚು ಉಗ್ರವಾಗುತ್ತಿದ್ದಾರೆ, ದೇಶಾಭಿಮಾನ ತುಂಬ ಜಾಸ್ತಿಯಾಗಿದೆ. ತಮ್ಮವರೇ ಆಳಿದರೆ ತಮ್ಮ ಜೀವನ ಚೆನ್ನಾಗಿರುತ್ತದೆ ಎಂದು ನಂಬುತ್ತಾರೆ. ಸಂತೋಷದ ಸಂಗತಿ ಏನೆಂದರೆ, ನಮ್ಮ ಸಹೋದರರು ಸುವಾರ್ತೆ ಸಾರುವುದರ ಕಡೆಗೆ ಗಮನಕೊಟ್ಟಿದ್ದರಿಂದ ಕ್ರೈಸ್ತ ಐಕ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ನಾವು ಅನುಭವಿಸುವಂಥ ಅನ್ಯಾಯವನ್ನು ಮತ್ತು ಬೇರೆ ಸಮಸ್ಯೆಗಳನ್ನು ದೇವರು ಸರಿಪಡಿಸುತ್ತಾನೆಂದು ನಂಬಿದ್ದಾರೆ.”
ರಾಜಕೀಯಕ್ಕೆ ಸಂಬಂಧಪಟ್ಟ ವಿವಾದಗಳಲ್ಲಿ ಯೇಸು ಹೇಗೆ ತಟಸ್ಥನಾಗಿ ಉಳಿದನು?
8. ಯೇಸುವಿನ ದಿನದಲ್ಲಿ ಅನೇಕ ಯೆಹೂದಿಗಳು ಯಾವ ಅನ್ಯಾಯವನ್ನು ಅನುಭವಿಸುತ್ತಿದ್ದರು?
8 ಕೆಲವೊಮ್ಮೆ ಜನರು ತಮ್ಮ ಸುತ್ತಮುತ್ತ ಅನ್ಯಾಯ ಆಗುತ್ತಿರುವುದನ್ನು ನೋಡಿ ರಾಜಕೀಯ ವಿಷಯಗಳಲ್ಲಿ ತಲೆಹಾಕಲು ಹೋಗುತ್ತಾರೆ. ಯೇಸುವಿನ ಕಾಲದಲ್ಲಿ ತೆರಿಗೆ ಕಟ್ಟುವ ವಿಷಯದಲ್ಲಿ ಒಂದು ದೊಡ್ಡ ಸಮಸ್ಯೆ ಇತ್ತು. ಇದರಿಂದಾಗಿ ಜನರು ರಾಜಕೀಯ ವಿಷಯದಲ್ಲಿ ತಲೆ ಹಾಕಿದರು. ಜನರು ತೆರಿಗೆ ಕಟ್ಟುತ್ತಿದ್ದಾರೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ರೋಮನ್ನರು ಖಾನೇಷುಮಾರಿ ಮಾಡುತ್ತಿದ್ದರು. ಈ ಕಾರಣಕ್ಕೇ ಗಲಿಲಾಯದ ಯೂದನು ರೋಮ್ ವಿರುದ್ಧ ದಂಗೆ ಎದ್ದನು. ಆಸ್ತಿ, ಜಮೀನು ಮತ್ತು ಮನೆ ಹೀಗೆ ಅನೇಕ ವಿಷಯಗಳಿಗೆ ಜನರು ತೆರಿಗೆ ಕಟ್ಟಬೇಕಾಗಿತ್ತು. ತೆರಿಗೆ ವಸೂಲಿಗಾರರು ಸಹ ತುಂಬ ಭ್ರಷ್ಟರಾಗಿದ್ದರಿಂದ ಸಮಸ್ಯೆ ಇನ್ನೂ ಹೆಚ್ಚಾಯಿತು. ಇವರು ಸರಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟು ಆ ಕೆಲಸ ಪಡಕೊಳ್ಳುತ್ತಿದ್ದರು. ನಂತರ ಹಣ ಮಾಡಲು ತಮಗಿದ್ದ ಅಧಿಕಾರವನ್ನು ದುರುಪಯೋಗಿಸುತ್ತಿದ್ದರು. ಯೆರಿಕೋವಿನಲ್ಲಿದ್ದ ತೆರಿಗೆ ವಸೂಲಿಗಾರರಲ್ಲಿ ಮುಖ್ಯಸ್ಥನಾಗಿದ್ದ ಜಕ್ಕಾಯನು ಜನರಿಂದ ತುಂಬ ಹಣ ದೋಚಿ ಶ್ರೀಮಂತನಾಗಿದ್ದನು.—ಲೂಕ 19:2, 8.
9, 10. (ಎ) ರಾಜಕೀಯ ವಿವಾದದಲ್ಲಿ ಯೇಸುವನ್ನು ಎಳೆಯಲು ಆತನ ಶತ್ರುಗಳು ಹೇಗೆ ಪ್ರಯತ್ನಿಸಿದರು? (ಬಿ) ಯೇಸು ಕೊಟ್ಟ ಉತ್ತರದಿಂದ ನಾವೇನು ಕಲಿಯುತ್ತೇವೆ? (ಲೇಖನದ ಆರಂಭದಲ್ಲಿರುವ ಎರಡನೇ ಚಿತ್ರ ನೋಡಿ.)
9 ತೆರಿಗೆ ಕಟ್ಟುವ ವಿಷಯದಲ್ಲಿ ಯೇಸುವನ್ನು ವಿವಾದಕ್ಕೆಳೆಯಲು ಆತನ ಶತ್ರುಗಳು ಪ್ರಯತ್ನಿಸಿದರು. ಎಲ್ಲ ಯೆಹೂದಿಗಳು ಕೊಡಲೇಬೇಕಾಗಿದ್ದ ‘ತಲೆಗಂದಾಯದ’ ಬಗ್ಗೆ ಅವರು ಆತನನ್ನು ಕೇಳಿದರು. ಎಲ್ಲರೂ ಒಂದು ದಿನಾರು ಮೊತ್ತವನ್ನು ತಲೆಗಂದಾಯವಾಗಿ ಕೊಡಬೇಕಿತ್ತು. (ಮತ್ತಾಯ 22:16-18 ಓದಿ.) ಈ ತೆರಿಗೆ ಕಟ್ಟಲು ಯೆಹೂದಿಗಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಯಾಕೆಂದರೆ ಈ ತೆರಿಗೆ ಕಟ್ಟುವುದು ತಾವು ರೋಮನ್ ಸರ್ಕಾರದ ಕೆಳಗಿದ್ದೇವೆ ಅನ್ನುವುದನ್ನು ನೆನಪಿಸುತ್ತಿತ್ತು. ಒಂದುವೇಳೆ ತೆರಿಗೆ ಕಟ್ಟಬಾರದು ಎಂದು ಯೇಸು ಹೇಳಿದರೆ ಆತನು ರೋಮ್ ಸಾಮ್ರಾಜ್ಯದ ಶತ್ರುವಾಗಿದ್ದಾನೆ ಎಂದು ಆರೋಪ ಹೊರಿಸಲು ಹೆರೋದನ ಬೆಂಬಲಿಗರು ಕಾಯುತ್ತಿದ್ದರು. ಒಂದುವೇಳೆ ತೆರಿಗೆ ಕಟ್ಟಬೇಕು ಎಂದು ಹೇಳಿದರೆ ಜನ ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸುವ ಸಾಧ್ಯತೆ ಇತ್ತು. ಈ ಸನ್ನಿವೇಶದಲ್ಲಿ ಯೇಸು ಏನು ಮಾಡಿದನು?
10 ಯೇಸು ತುಂಬ ಜಾಗ್ರತೆಯಿಂದ ಈ ವಿಷಯವನ್ನು ನಿಭಾಯಿಸಿ ತಟಸ್ಥನಾಗಿ ಉಳಿದನು. ಆತನು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾ. 22:21) ತೆರಿಗೆ ವಸೂಲಿಗಾರರಲ್ಲಿ ಅನೇಕರು ಭ್ರಷ್ಟರಾಗಿದ್ದಾರೆ ಎಂದು ಯೇಸುವಿಗೆ ಗೊತ್ತಿತ್ತು. ಆದರೆ ಆತನು ಅದಕ್ಕೆ ಗಮನ ಕೊಡಲಿಲ್ಲ. ಆತನ ಗಮನವೆಲ್ಲ ದೇವರ ರಾಜ್ಯದ ಮೇಲೆ ಇತ್ತು. ಯಾಕೆಂದರೆ ಮಾನವಕುಲದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೇವರ ರಾಜ್ಯದಿಂದ ಮಾತ್ರ ಸಿಗಲಿತ್ತು. ಹೀಗೆ ಯೇಸು ನಮಗೆ ಒಂದು ಮಾದರಿ ಇಟ್ಟಿದ್ದಾನೆ. ನಾವು ಸರ್ಕಾರಕ್ಕೆ, ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ವಿವಾದಗಳಲ್ಲಿ ಒಳಗೂಡಬಾರದು. ಒಬ್ಬರು ಹೇಳುತ್ತಿರುವುದು ಸರಿ, ಇನ್ನೊಬ್ಬರು ಹೇಳುತ್ತಿರುವುದು ತಪ್ಪು ಎಂದು ಅನಿಸುವಾಗಲೂ ನಾವು ತಟಸ್ಥರಾಗಿ ಉಳಿಯಬೇಕು. ಕ್ರೈಸ್ತರ ಗಮನವೆಲ್ಲ ದೇವರ ರಾಜ್ಯದ ಮೇಲೆ ಮತ್ತು ದೇವರು ಯಾವುದನ್ನು ಸರಿ ಅನ್ನುತ್ತಾನೋ ಅದರ ಮೇಲಿರಬೇಕು. ಈ ಕಾರಣದಿಂದಾಗಿ ನಾವು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಬೆಳೆಸಿಕೊಳ್ಳುವುದಿಲ್ಲ, ಅವುಗಳ ವಿರುದ್ಧ ಮಾತಾಡುವುದೂ ಇಲ್ಲ.—ಮತ್ತಾ. 6:33.
11. ಅನ್ಯಾಯದ ವಿರುದ್ಧ ಹೋರಾಡುವ ಅತ್ಯುತ್ತಮ ವಿಧ ಯಾವುದು?
11 ಅನೇಕ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳ ಬಗ್ಗೆ ಮುಂಚೆ ತಮಗಿದ್ದ ಬಲವಾದ ಅಭಿಪ್ರಾಯಗಳನ್ನು ಈಗ ಮನಸ್ಸಿಂದ ತೆಗೆದುಹಾಕಿದ್ದಾರೆ. ಉದಾಹರಣೆಗೆ, ಗ್ರೇಟ್ ಬ್ರಿಟನ್ನಲ್ಲಿರುವ ಒಬ್ಬ ಸಹೋದರಿ ಸತ್ಯ ಕಲಿಯುವ ಮುಂಚೆ ಸಮಾಜಶಾಸ್ತ್ರ ಓದಲು ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಆಗ ಅವರಿಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಬೇಕೆಂದು ಅನಿಸಿತು. ಅವರು ಹೇಳುವುದು: “ಕಪ್ಪು ಜನರಿಗಿದ್ದ ಹಕ್ಕಿನ ಪರವಾಗಿ ಹೋರಾಡಬೇಕೆಂದು ನಾನು ಬಯಸಿದೆ. ಯಾಕೆಂದರೆ ನಾವು ತುಂಬ ಅನ್ಯಾಯವನ್ನು ಅನುಭವಿಸಿದ್ದೇವೆ. ಇದರ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ನಾನು ಗೆಲ್ಲುತ್ತಿದ್ದರೂ ನನ್ನನ್ನು ಹತಾಶೆ ಕಾಡುತ್ತಿತ್ತು. ಕರಿಯರು ಬಿಳಿಯರು ಎಂಬ ತಾರತಮ್ಯವನ್ನು ಜನರು ತಮ್ಮ ಮನಸ್ಸಿನಿಂದ ತೆಗೆದುಹಾಕಬೇಕು ಎಂದು ನನಗೆ ಆಮೇಲೆ ಗೊತ್ತಾಯಿತು. ನಾನು ಬೈಬಲ್ ಅಧ್ಯಯನ ತೆಗೆದುಕೊಳ್ಳಲು ಆರಂಭಿಸಿದಾಗ ಮೊದಲು ಅದನ್ನು ನನ್ನ ಮನಸ್ಸಿನಿಂದ ತೆಗೆದುಹಾಕಬೇಕು ಅಂತ ಅರ್ಥಮಾಡಿಕೊಂಡೆ. ಈ ಬದಲಾವಣೆಯನ್ನು ಮಾಡಿಕೊಳ್ಳಲು ಬಿಳಿಯರಾಗಿದ್ದ ಒಬ್ಬ ಸಹೋದರಿ ನನಗೆ ಸಹಾಯ ಮಾಡಿದರು. ಈಗ ನಾನು ಸನ್ನೆ ಭಾಷೆಯ ಸಭೆಯಲ್ಲಿ ಪಯನೀಯರ್ ಆಗಿ ಸೇವೆ ಮಾಡುತ್ತಿದ್ದೇನೆ ಮತ್ತು ಎಲ್ಲ ರೀತಿಯ ಜನರಿಗೆ ಸುವಾರ್ತೆಯನ್ನು ತಲುಪಿಸಲು ಕಲಿಯುತ್ತಿದ್ದೇನೆ.”
“ನಿನ್ನ ಕತ್ತಿಯನ್ನು ಒರೆಗೆ ಸೇರಿಸು”
12. ಯಾವ ‘ಹುಳಿಹಿಟ್ಟಿನಿಂದ’ ದೂರವಿರಲು ಯೇಸು ತನ್ನ ಶಿಷ್ಯರಿಗೆ ಹೇಳಿದನು?
12 ಯೇಸುವಿನ ದಿನದಲ್ಲಿ ಧಾರ್ಮಿಕ ಮುಖಂಡರು ಹೆಚ್ಚಾಗಿ ರಾಜಕೀಯ ಗುಂಪುಗಳಿಗೆ ಬೆಂಬಲ ಕೊಡುತ್ತಿದ್ದರು. ಉದಾಹರಣೆಗೆ, ಕ್ರಿಸ್ತನ ಸಮಯದಲ್ಲಿದ್ದ ಪ್ಯಾಲೆಸ್ತೀನಿನಲ್ಲಿ ಜನಜೀವನ (ಇಂಗ್ಲಿಷ್) ಎಂಬ ಪುಸ್ತಕ ಹೇಳುವಂತೆ ಯೆಹೂದಿಗಳಲ್ಲಿದ್ದ ಬೇರೆಬೇರೆ ಧಾರ್ಮಿಕ ಗುಂಪುಗಳು ರಾಜಕೀಯ ಪಕ್ಷಗಳಂತೆ ಇದ್ದವು. ಆದ್ದರಿಂದ ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿಯೂ ಜಾಗ್ರತೆಯಿಂದಿರಿ” ಎಂದು ಎಚ್ಚರಿಸಿದನು. (ಮಾರ್ಕ 8:15) ಯೇಸು “ಹೆರೋದನ” ಅಂತ ಹೇಳಿದ್ದು ಹೆರೋದನ ಬೆಂಬಲಿಗರನ್ನು ಸೂಚಿಸುತ್ತಿದ್ದಿರಬಹುದು. ಇನ್ನೊಂದು ಗುಂಪಾದ ಫರಿಸಾಯರು, ರೋಮನ್ ಸಾಮ್ರಾಜ್ಯದಿಂದ ಯೆಹೂದಿಗಳು ಸ್ವತಂತ್ರರಾಗಬೇಕೆಂದು ಬಯಸುತ್ತಿದ್ದರು. ಮತ್ತಾಯನ ಸುವಾರ್ತೆ ತಿಳಿಸುವಂತೆ ಯೇಸು ಈ ಎಚ್ಚರಿಕೆಯನ್ನು ಕೊಡುವಾಗ ಸದ್ದುಕಾಯರ ಬಗ್ಗೆಯೂ ತಿಳಿಸಿದನು. ಸದ್ದುಕಾಯರು ರೋಮ್ ಸಾಮ್ರಾಜ್ಯವೇ ಆಳಲಿ ಎಂದು ಬಯಸುತ್ತಿದ್ದರು. ಯಾಕೆಂದರೆ ಆ ಸಾಮ್ರಾಜ್ಯದಿಂದ ಅವರಿಗೆ ಅಧಿಕಾರದ ಸ್ಥಾನಗಳು ಸಿಗುತ್ತಿದ್ದವು. ಈ ಮೂರೂ ಗುಂಪುಗಳ ‘ಹುಳಿಹಿಟ್ಟಿನಿಂದ’ ಅಥವಾ ಬೋಧನೆಗಳಿಂದ ದೂರವಿರಿ ಎಂದು ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದನು. (ಮತ್ತಾ. 16:6, 12) ಆಸಕ್ತಿಕರವಾಗಿ ಈ ವಿಷಯವನ್ನು ಯೇಸು, ಜನರು ತನ್ನನ್ನು ರಾಜನಾಗಿ ಮಾಡಲು ಪ್ರಯತ್ನಿಸಿದ ಘಟನೆ ನಡೆದ ನಂತರ ತಿಳಿಸಿದನು.
13, 14. (ಎ) ರಾಜಕೀಯ ಮತ್ತು ಧಾರ್ಮಿಕ ವಿವಾದಗಳು ಹೇಗೆ ಹಿಂಸಾಚಾರ ಮತ್ತು ಅನ್ಯಾಯಕ್ಕೆ ನಡೆಸುತ್ತವೆ? (ಬಿ) ನಮಗೆ ಯಾರಾದರೂ ಅನ್ಯಾಯ ಮಾಡುತ್ತಿರುವಾಗಲೂ ನಾವು ಯಾಕೆ ಹಿಂಸಾಚಾರದ ಮೊರೆ ಹೋಗಬಾರದು? (ಲೇಖನದ ಆರಂಭದಲ್ಲಿರುವ ಮೂರನೇ ಚಿತ್ರ ನೋಡಿ.)
13 ಧರ್ಮಗಳು ರಾಜಕೀಯ ವಿವಾದಗಳಲ್ಲಿ ತಲೆಹಾಕುವಾಗ ಅದು ಹೆಚ್ಚಾಗಿ ಹಿಂಸಾಚಾರಕ್ಕೆ ನಡೆಸುತ್ತದೆ. ಇಂಥ ಸನ್ನಿವೇಶಗಳಲ್ಲಿ ಸಂಪೂರ್ಣವಾಗಿ ತಟಸ್ಥರಾಗಿರಬೇಕೆಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಈ ಕಾರಣಕ್ಕೂ ಮುಖ್ಯ ಯಾಜಕರು ಮತ್ತು ಫರಿಸಾಯರು ಯೇಸುವನ್ನು ಕೊಲ್ಲಲು ಹೊಂಚುಹಾಕುತ್ತಿದ್ದರು. ಜನರು ಆತನ ಮಾತನ್ನು ಕೇಳಿ ತಮ್ಮನ್ನು ಬೆಂಬಲಿಸುವುದನ್ನು ಬಿಟ್ಟುಬಿಡುತ್ತಾರೆ ಎಂಬ ಭಯ ಅವರಿಗಿತ್ತು. ಒಂದುವೇಳೆ ಹಾಗೆ ನಡೆದರೆ ತಮ್ಮ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಅವರು ಕಳೆದುಕೊಳ್ಳುತ್ತಿದ್ದರು. “ನಾವು ಅವನನ್ನು ಹೀಗೆಯೇ ಬಿಟ್ಟರೆ ಅವರೆಲ್ಲರು ಅವನಲ್ಲಿ ನಂಬಿಕೆಯಿಡುವರು ಮತ್ತು ರೋಮನರು ಬಂದು ನಮ್ಮ ಸ್ಥಳವನ್ನೂ ನಮ್ಮ ಜನಾಂಗವನ್ನೂ ಸ್ವಾಧೀನಪಡಿಸಿಕೊಳ್ಳುವರು” ಎಂದು ಹೇಳಿದರು. (ಯೋಹಾ. 11:48) ಹಾಗಾಗಿ ಮಹಾ ಯಾಜಕನಾಗಿದ್ದ ಕಾಯಫನು ಯೇಸುವನ್ನು ಕೊಲ್ಲಲು ಒಂದು ಪಿತೂರಿ ನಡೆಸಿದನು.—ಯೋಹಾ. 11:49-53; 18:14.
14 ಕಾಯಫ ರಾತ್ರಿ ಆಗುವ ವರೆಗೆ ಕಾದು ನಂತರ ಯೇಸುವನ್ನು ಬಂಧಿಸಲು ಸೈನಿಕರನ್ನು ಕಳುಹಿಸಿದನು. ಆದರೆ ಯೇಸುವಿಗೆ ತನ್ನನ್ನು ಕೊಲ್ಲಲು ನಡೆಯುತ್ತಿರುವ ಪಿತೂರಿಯ ಬಗ್ಗೆ ಗೊತ್ತಿತ್ತು. ಹಾಗಾಗಿ ಅಪೊಸ್ತಲರೊಂದಿಗೆ ಆತನು ಮಾಡಿದ ಕೊನೆಯ ಭೋಜನದ ಸಮಯದಲ್ಲಿ ಕತ್ತಿಗಳನ್ನು ತೆಗೆದುಕೊಳ್ಳಲು ಅವರಿಗೆ ಹೇಳಿದನು. ಅಪೊಸ್ತಲರಿಗೆ ಒಂದು ಪ್ರಾಮುಖ್ಯ ಪಾಠ ಕಲಿಸಲು ಎರಡು ಕತ್ತಿಗಳು ಸಾಕಾಗಿದ್ದವು. (ಲೂಕ 22:36-38) ಸ್ವಲ್ಪ ಸಮಯದ ನಂತರ ಯೇಸುವನ್ನು ಬಂಧಿಸಲು ಜನರ ಗುಂಪು ಬಂತು. ಆಗ ಈ ಅನ್ಯಾಯವನ್ನು ಸಹಿಸಕ್ಕಾಗದೆ ಪೇತ್ರ ಕೋಪಗೊಂಡು ಕತ್ತಿಯನ್ನು ಹೊರತೆಗೆದು ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಮೇಲೆ ಆಕ್ರಮಣ ಮಾಡಿದನು. (ಯೋಹಾ. 18:10) ಆದರೆ ಯೇಸು ಪೇತ್ರನಿಗೆ, “ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು” ಎಂದು ಹೇಳಿದನು. (ಮತ್ತಾ. 26:52, 53) ಯೇಸುವಿನ ಶಿಷ್ಯರು ಯಾವ ಪ್ರಾಮುಖ್ಯ ಪಾಠ ಕಲಿತರು? ಅವರು ಲೋಕದ ಭಾಗವಾಗಬಾರದು ಎಂಬ ಪಾಠ ಕಲಿತರು. ಇದರ ಬಗ್ಗೆಯೇ ಯೇಸು ಸ್ವಲ್ಪ ಮುಂಚೆ ಪ್ರಾರ್ಥನೆ ಮಾಡಿದ್ದನು. (ಯೋಹಾನ 17:16 ಓದಿ.) ಅನ್ಯಾಯದ ವಿರುದ್ಧ ಹೋರಾಡುವುದನ್ನು ದೇವರಿಗೆ ಬಿಟ್ಟುಬಿಡಬೇಕು.
15, 16. (ಎ) ಹೋರಾಟಗಳಿಂದ ದೂರವಿರಲು ಕ್ರೈಸ್ತರಿಗೆ ದೇವರ ವಾಕ್ಯ ಹೇಗೆ ಸಹಾಯ ಮಾಡಿದೆ? (ಬಿ) ಇಂದಿನ ಲೋಕವನ್ನು ಯೆಹೋವನು ನೋಡುವಾಗ ಯಾವ ವ್ಯತ್ಯಾಸವನ್ನು ನೋಡುತ್ತಾನೆ?
15 ಲೇಖನದ ಆರಂಭದಲ್ಲಿ ತಿಳಿಸಲಾದ ದಕ್ಷಿಣ ಯೂರೋಪಿನಲ್ಲಿರುವ ಸಹೋದರಿ ಹೇಳುವುದು: “ಹಿಂಸೆಯಿಂದ ನ್ಯಾಯ ಸಿಗುವುದಿಲ್ಲ ಅನ್ನುವುದನ್ನು ನಾನು ನೋಡಿದ್ದೇನೆ. ಯಾರು ಹಿಂಸೆಯ ಮಾರ್ಗ ಹಿಡಿದರೋ ಅವರಲ್ಲಿ ಹೆಚ್ಚಿನವರು ಇವತ್ತು ಜೀವಂತವಾಗಿಲ್ಲ. ತುಂಬ ಜನರಲ್ಲಿ ದ್ವೇಷದ ಜ್ವಾಲೆ ಇನ್ನೂ ಉರಿಯುತ್ತಿದೆ. ದೇವರು ಮಾತ್ರ ಈ ಭೂಮಿಯ ಮೇಲೆ ನಿಜ ನ್ಯಾಯವನ್ನು ಸ್ಥಾಪಿಸುತ್ತಾನೆಂದು ಬೈಬಲಿನಿಂದ ಕಲಿತು ನನಗೆ ತುಂಬ ಸಂತೋಷವಾಯಿತು. ಕಳೆದ 25 ವರ್ಷಗಳಿಂದ ಈ ವಿಷಯದ ಬಗ್ಗೆ ಎಲ್ಲರಿಗೆ ಸಾರುತ್ತಿದ್ದೇನೆ.” ಆಫ್ರಿಕದ ದಕ್ಷಿಣ ಭಾಗದಲ್ಲಿರುವ ಸಹೋದರ ಈಟಿಗೆ ಬದಲಾಗಿ “ಪವಿತ್ರಾತ್ಮದ ಕತ್ತಿ” ಬಳಸುತ್ತಿದ್ದಾರೆ. (ಎಫೆ. 6:17) ಅಂದರೆ ದೇವರ ವಾಕ್ಯವನ್ನು ಬಳಸಿ ಶಾಂತಿಯ ಸಂದೇಶವನ್ನು ಎಲ್ಲ ಬುಡಕಟ್ಟು ಜನಾಂಗದವರಿಗೂ ಸಾರುತ್ತಿದ್ದಾರೆ. ಮಧ್ಯ ಯೂರೋಪಿನಲ್ಲಿರುವ ಸಹೋದರಿಯು ಯೆಹೋವನ ಸಾಕ್ಷಿಯಾದ ಮೇಲೆ ಅವರು ಮುಂಚೆ ದ್ವೇಷಿಸುತ್ತಿದ್ದ ಒಂದು ಸಂಸ್ಕೃತಿಗೆ ಸೇರಿದ ಒಬ್ಬ ಸಹೋದರನನ್ನು ಮದುವೆಯಾಗಿದ್ದಾರೆ. ಈ ಮೂವರೂ ಕ್ರಿಸ್ತನಂತೆ ಇರಲು ಬಯಸಿ ಈ ಬದಲಾವಣೆಗಳನ್ನು ಮಾಡಿಕೊಂಡರು.
16 ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬ ಪ್ರಾಮುಖ್ಯ! ಬೈಬಲು ಮಾನವಕುಲವನ್ನು ಸದಾ ಭೋರ್ಗರೆಯುತ್ತಿರುವ, ಅಲ್ಲೋಲಕಲ್ಲೋಲವಾದ ಸಮುದ್ರಕ್ಕೆ ಹೋಲಿಸುತ್ತದೆ. (ಯೆಶಾ. 17:12; 57:20, 21; ಪ್ರಕ. 13:1) ರಾಜಕೀಯ ವಿವಾದಗಳು ಜನರನ್ನು ಕೆರಳಿಸುತ್ತವೆ, ಒಡಕನ್ನು ತರುತ್ತವೆ ಮತ್ತು ಹಿಂಸಾಚಾರಕ್ಕೆ ನಡೆಸುತ್ತವೆ. ಆದರೆ ನಾವು ಶಾಂತಿಯನ್ನು ಮತ್ತು ಐಕ್ಯತೆಯನ್ನು ಕಾಪಾಡಿಕೊಂಡಿದ್ದೇವೆ. ಜನ-ಜಾತಿ-ಧರ್ಮ-ಬಣ್ಣ-ದೇಶದ ಹೆಸರಿನಲ್ಲಿ ಛಿದ್ರಛಿದ್ರವಾಗಿರುವ ಈ ಲೋಕದಲ್ಲಿ ತನ್ನ ಸೇವಕರು ಮಾತ್ರ ಒಗ್ಗಟ್ಟಿನಿಂದ ಒಡಹುಟ್ಟಿದವರಂತೆ ಇರುವುದನ್ನು ನೋಡುವಾಗ ಯೆಹೋವನಿಗೆ ತುಂಬ ಸಂತೋಷ ಆಗುತ್ತದೆ.—ಚೆಫನ್ಯ 3:17 ಓದಿ.
17. (ಎ) ನಾವು ಐಕ್ಯತೆ ಕಾಪಾಡಿಕೊಳ್ಳಲು ಯಾವ ಮೂರು ವಿಷಯಗಳನ್ನು ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
17 ಈ ಲೇಖನದಲ್ಲಿ, ಐಕ್ಯತೆ ಕಾಪಾಡಿಕೊಳ್ಳಲು ಮೂರು ವಿಷಯಗಳನ್ನು ಮಾಡಬೇಕೆಂದು ಕಲಿತೆವು. (1) ದೇವರ ರಾಜ್ಯ ಎಲ್ಲ ಅನ್ಯಾಯಗಳನ್ನು ಸರಿಮಾಡುತ್ತದೆ ಎಂದು ನಾವು ನಂಬಬೇಕು, (2) ನಾವು ರಾಜಕೀಯ ವಿವಾದಗಳಲ್ಲಿ ತಟಸ್ಥರಾಗಿರಬೇಕು ಮತ್ತು (3) ಹಿಂಸಾಚಾರದಿಂದ ದೂರವಿರಬೇಕು. ಆದರೆ ನಮ್ಮ ಮಧ್ಯೆ ಇರುವ ಐಕ್ಯತೆಯನ್ನು ಒಂದು ವಿಷಯ ಒಡೆದುಹಾಕುವ ಸಾಧ್ಯತೆ ಇದೆ. ಅದು ಪೂರ್ವಗ್ರಹವಾಗಿದೆ. ಆರಂಭದ ಕ್ರೈಸ್ತರಂತೆ ನಾವು ಹೇಗೆ ಪೂರ್ವಗ್ರಹವನ್ನು ಜಯಿಸಬಹುದು ಎಂದು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ.