ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ ಎಚ್ಚರವಾಗಿರಿ!
“ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
1. ದೇವದೂತನೊಬ್ಬ ಹೇಗೆ ಸೈತಾನನಾದನೆಂದು ವಿವರಿಸಿ.
ಒಂದು ಕಾಲದಲ್ಲಿ ಅವನಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇತ್ತು. ಆದರೆ ಸಮಯ ದಾಟಿದಂತೆ ಈ ಆತ್ಮಜೀವಿ ಅಥವಾ ದೇವದೂತನಲ್ಲಿ ಮಾನವರು ತನ್ನನ್ನು ಆರಾಧಿಸಬೇಕೆಂಬ ಆಸೆ ಹುಟ್ಟಿತು. ಈ ಕೆಟ್ಟ ಆಸೆಯನ್ನು ಆಗಲೇ ತಳ್ಳಿಹಾಕುವ ಬದಲು ಪಾಪ ಮಾಡುವ ವರೆಗೆ ಅದನ್ನು ಬೆಳೆಯುವಂತೆ ಬಿಟ್ಟುಕೊಟ್ಟ. (ಯಾಕೋ. 1:14, 15) ಅವನ ನಿಜವಾದ ಹೆಸರೇನೆಂದು ನಮಗೆ ಗೊತ್ತಿಲ್ಲ. ಆದರೆ ಅವನನ್ನು ಸೈತಾನ ಎಂದು ಕರೆಯಲಾಗುತ್ತದೆ. ಅವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ.” ಯೆಹೋವನ ವಿರುದ್ಧ ದಂಗೆ ಎದ್ದು ‘ಸುಳ್ಳಿಗೆ ತಂದೆ’ ಆದ.—ಯೋಹಾ. 8:44.
2, 3. “ಸೈತಾನ,” “ಪಿಶಾಚ,” “ಸರ್ಪ,” “ಘಟಸರ್ಪ” ಎಂಬ ಪದಗಳಿಂದ ಯೆಹೋವನ ಮಹಾ ವೈರಿಯ ಬಗ್ಗೆ ಏನು ಗೊತ್ತಾಗುತ್ತದೆ?
2 ಸೈತಾನನು ದಂಗೆಯೆದ್ದ ದಿನದಿಂದ ಯೆಹೋವನಿಗೆ ಮಹಾ ವೈರಿಯಾಗಿದ್ದಾನೆ. ಮಾನವರಿಗೂ ವೈರಿಯಾಗಿದ್ದಾನೆ. ಅವನೆಷ್ಟು ಕೆಟ್ಟವನೆಂದು ಬೈಬಲ್ ಅವನನ್ನು ವರ್ಣಿಸುವ ರೀತಿಯಿಂದ ಗೊತ್ತಾಗುತ್ತದೆ. ಸೈತಾನ ಎಂದರೆ “ವಿರೋಧಿ.” ಈ ಕೆಟ್ಟ ದೇವದೂತ ದೇವರ ಆಳ್ವಿಕೆಯನ್ನು ದ್ವೇಷಿಸುತ್ತಾನೆ ಮತ್ತು ಶಕ್ತಿಮೀರಿ ಅದರ ವಿರುದ್ಧ ಹೋರಾಡುತ್ತಾನೆಂದು ಈ ಹೆಸರು ತೋರಿಸುತ್ತದೆ. ಯೆಹೋವನ ಆಳ್ವಿಕೆಯನ್ನು ಕೊನೆಗಾಣಿಸುವುದೇ ಸೈತಾನನ ಆಸೆ.
3 ಪ್ರಕಟನೆ 12:9ರಲ್ಲಿ ಸೈತಾನನನ್ನು ಪಿಶಾಚ ಎಂದು ಕರೆಯಲಾಗಿದೆ. ಅದರ ಅರ್ಥ “ಚಾಡಿಕೋರ.” ಅವನು ದೇವರನ್ನು ಸುಳ್ಳುಗಾರ ಎಂದು ಕರೆಯುವ ಮೂಲಕ ದೇವರಿಗೆ ಅಗೌರವ ತೋರಿಸಿದ್ದಾನೆ. “ಪುರಾತನ ಸರ್ಪ” ಎಂಬ ಪದ ಸೈತಾನನು ಸರ್ಪವನ್ನು ಉಪಯೋಗಿಸಿ ಹವ್ವಳನ್ನು ವಂಚಿಸಿದ್ದನ್ನು ನೆನಪಿಗೆ ತರುತ್ತದೆ. ಅವನು ತುಂಬ ಉಗ್ರ, ಕ್ರೂರಿ, ಕೆಡುಕನಾಗಿರುವುದರಿಂದ ಅವನನ್ನು “ಮಹಾ ಘಟಸರ್ಪ” ಎಂದು ವರ್ಣಿಸಲಾಗಿರುವುದು ಸೂಕ್ತ. ದೇವರ ಉದ್ದೇಶ ನೆರವೇರುವುದನ್ನು ತಡೆದು ದೇವಜನರನ್ನು ನಾಶಮಾಡುವುದೇ ಅವನ ಹೆಬ್ಬಯಕೆ.
4. ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
4 ನಮ್ಮ ಸಮಗ್ರತೆಗೆ ಅಪಾಯ ಬರುವುದು ಸೈತಾನನಿಂದಲೇ ಎನ್ನುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ಬೈಬಲ್ ನಮ್ಮನ್ನು ಎಚ್ಚರಿಸುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಈ ಲೇಖನದಲ್ಲಿ ಸೈತಾನನ ಮೂರು ಗುಣಗಳನ್ನು ಚರ್ಚಿಸಲಾಗಿದೆ. ಇದು ಯೆಹೋವ ಮತ್ತು ಆತನ ಜನರ ವೈರಿಯಾದ ಸೈತಾನನಿಂದ ನಮ್ಮನ್ನು ಏಕೆ ಕಾಪಾಡಿಕೊಳ್ಳಬೇಕೆಂದು ತೋರಿಸುತ್ತದೆ.
ಸೈತಾನನು ಶಕ್ತಿಶಾಲಿ
5, 6. (ಎ) ದೇವದೂತರು ‘ಪರಾಕ್ರಮಶಾಲಿಗಳು’ ಎನ್ನುವುದಕ್ಕೆ ಉದಾಹರಣೆ ಕೊಡಿ. (ಬಿ) ಸೈತಾನನಿಗೆ ‘ಮರಣವನ್ನು ಉಂಟುಮಾಡುವ’ ಶಕ್ತಿ ಇರುವುದು ಯಾವ ಅರ್ಥದಲ್ಲಿ?
5 ದೇವದೂತರು ‘ಪರಾಕ್ರಮಶಾಲಿಗಳು.’ (ಕೀರ್ತ. 103:20) ಅವರಿಗೆ ಮನುಷ್ಯರಿಗಿಂತ ಹೆಚ್ಚು ಬುದ್ಧಿ, ಶಕ್ತಿ ಇದೆ. ನಂಬಿಗಸ್ತ ದೇವದೂತರು ತಮ್ಮ ಶಕ್ತಿಯನ್ನು ಒಳ್ಳೇ ಕೆಲಸಕ್ಕೆ ಬಳಸುತ್ತಾರೆ. ಉದಾಹರಣೆಗೆ, ಅಶ್ಶೂರ್ಯದ 1,85,000 ಮಂದಿ ಶತ್ರು ಸೈನಿಕರನ್ನು ಯೆಹೋವನ ದೂತರಲ್ಲಿ ಒಬ್ಬನೇ ಒಬ್ಬ ದೂತ ಕೊಂದುಹಾಕಿದನು. ಇದು ಖಂಡಿತ ಒಬ್ಬ ಮನುಷ್ಯನಿಂದ ಆಗುವ ಕೆಲಸ ಅಲ್ಲ. ಮನುಷ್ಯರ ಒಂದು ಇಡೀ ಸೈನ್ಯ ಸಹ ಇದನ್ನು ಮಾಡುವುದು ಕಷ್ಟ. (2 ಅರ. 19:35) ಇನ್ನೊಂದು ಸಂದರ್ಭದಲ್ಲಿ ಒಬ್ಬ ದೇವದೂತ ತನ್ನ ಶಕ್ತಿ, ಸಾಮರ್ಥ್ಯವನ್ನು ಬಳಸಿ ಯೇಸುವಿನ ಅಪೊಸ್ತಲರನ್ನು ಜೈಲಿನಿಂದ ಬಿಡಿಸಿದ. ಕಾವಲುಗಾರರು ಪಕ್ಕದಲ್ಲೇ ನಿಂತಿದ್ದರು. ಆದರೂ ದೇವದೂತ ಬಾಗಿಲನ್ನು ತೆರೆದದ್ದು, ಅಪೊಸ್ತಲರನ್ನು ಬಿಡಿಸಿದ್ದು, ಪುನಃ ಬಾಗಿಲನ್ನು ಮುಚ್ಚಿದ್ದು ಕಾವಲುಗಾರರಿಗೆ ಗೊತ್ತಾಗಲೇ ಇಲ್ಲ.—ಅ. ಕಾ. 5:18-23.
6 ನಂಬಿಗಸ್ತ ದೇವದೂತರು ತಮ್ಮ ಶಕ್ತಿಯನ್ನು ಒಳ್ಳೇ ಕೆಲಸಕ್ಕೆ ಬಳಸುತ್ತಾರೆ. ಆದರೆ ಸೈತಾನನು ತನ್ನ ಶಕ್ತಿಯನ್ನು ಕೆಟ್ಟದಕ್ಕೆ ಬಳಸುತ್ತಾನೆ. ಅವನಿಗಿರುವ ಶಕ್ತಿಯನ್ನು ಮತ್ತು ಇತರರ ಮೇಲೆ ಪ್ರಭಾವ ಬೀರುವ ಅವನ ಸಾಮರ್ಥ್ಯವನ್ನು ಯಾವತ್ತೂ ಕಡಿಮೆ ಅಂದಾಜು ಮಾಡಬಾರದು. ಬೈಬಲ್ ಅವನನ್ನು ‘ಲೋಕದ ಅಧಿಪತಿ’ ಮತ್ತು “ವಿಷಯಗಳ ವ್ಯವಸ್ಥೆಯ ದೇವನು” ಎಂದು ಕರೆಯುತ್ತದೆ. (ಯೋಹಾ. 12:31; 2 ಕೊರಿಂ. 4:4) ‘ಮರಣವನ್ನು ಉಂಟುಮಾಡುವ’ ಶಕ್ತಿ ಕೂಡ ಅವನಿಗಿದೆ. (ಇಬ್ರಿ. 2:14) ಎಲ್ಲ ಜನರನ್ನು ಆತನು ನೇರವಾಗಿ ಸಾಯಿಸುತ್ತಾನೆ ಎನ್ನುವುದು ಇದರ ಅರ್ಥವಲ್ಲ. ಹಾಗಾದರೆ ಇದರ ಅರ್ಥ ಏನು? ಒಂದನೇದಾಗಿ, ಈ ಭೂಮಿ ಪೂರ್ತಿ ಸೈತಾನನ ಕ್ರೂರ ಹಾಗೂ ಹಿಂಸಾತ್ಮಕ ಮನೋಭಾವದಿಂದ ತುಂಬಿದೆ. ಎರಡನೇದಾಗಿ, ಈ ಸೈತಾನನ ಸುಳ್ಳನ್ನೇ ಹವ್ವಳು ನಂಬಿದ್ದರಿಂದ ಮತ್ತು ಆದಾಮನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಮಾನವರು ಪಾಪಮಾಡಿ ಸಾಯುತ್ತಾರೆ. (ರೋಮ. 5:12) ಯೇಸು ಕರೆದಂತೆ ಸೈತಾನನೊಬ್ಬ ‘ನರಹಂತಕ.’ (ಯೋಹಾ. 8:44) ಅವನು ನಿಜವಾಗಲೂ ಒಬ್ಬ ಶಕ್ತಿಶಾಲಿ ವೈರಿ!
7. ದೆವ್ವಗಳು ತಮಗೆ ಶಕ್ತಿ ಇದೆ ಎಂದು ಹೇಗೆ ತೋರಿಸಿಕೊಟ್ಟಿವೆ?
7 ನಾವು ಸೈತಾನನನ್ನು ವಿರೋಧಿಸುವಾಗ ಅವನ ಪಕ್ಷ ವಹಿಸುವ ಎಲ್ಲರನ್ನು ಮತ್ತು ದೇವರ ಆಳ್ವಿಕೆಯ ವಿರುದ್ಧ ನಿಲ್ಲುವವರನ್ನು ಸಹ ವಿರೋಧಿಸುತ್ತೇವೆ. ಇದರಲ್ಲಿ ಯೆಹೋವನ ವಿರುದ್ಧ ದಂಗೆಯೆದ್ದ ದೇವದೂತರ ಅಂದರೆ ದೆವ್ವಗಳ ದೊಡ್ಡ ಗುಂಪೂ ಸೇರಿದೆ. (ಪ್ರಕ. 12:3, 4) ಅವು ಮಾನವರಿಗೆ ತುಂಬ ಕಷ್ಟಸಮಸ್ಯೆಗಳನ್ನು ತರುವ ಮೂಲಕ ಮನುಷ್ಯರಿಗಿಂತ ಶಕ್ತಿಶಾಲಿಗಳೆಂದು ಅನೇಕ ಬಾರಿ ತೋರಿಸಿಕೊಟ್ಟಿವೆ. (ಮತ್ತಾ. 8:28-32; ಮಾರ್ಕ 5:1-5) ದೆವ್ವಗಳು ಮತ್ತು ಅವುಗಳ ಒಡೆಯ ಎಷ್ಟು ಶಕ್ತಿಶಾಲಿಗಳೆಂದು ಯಾವತ್ತೂ ಮರೆಯಬೇಡಿ. (ಮತ್ತಾ. 9:34) ಯೆಹೋವನ ಸಹಾಯ ಇಲ್ಲದೆ ಸೈತಾನನೊಟ್ಟಿಗೆ ಹೋರಾಡಿ ಜಯಗಳಿಸಲಿಕ್ಕೆ ನಮ್ಮಿಂದ ಆಗುವುದೇ ಇಲ್ಲ.
ಸೈತಾನನು ಕ್ರೂರಿ
8. (ಎ) ಸೈತಾನನ ಉದ್ದೇಶ ಏನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ನಿಮ್ಮ ಗಮನಕ್ಕೆ ಬಂದಿರುವ ಪ್ರಕಾರ ಈ ಲೋಕ ಸಹ ಸೈತಾನನ ಹಾಗೆ ಕ್ರೂರಿಯಾಗಿದೆ ಎಂದು ಹೇಗೆ ಹೇಳುತ್ತೀರಾ?
8 ಅಪೊಸ್ತಲ ಪೇತ್ರ ಸೈತಾನನನ್ನು “ಗರ್ಜಿಸುವ ಸಿಂಹ”ಕ್ಕೆ ಹೋಲಿಸಿದನು. “ಗರ್ಜಿಸು” ಎಂಬ ಪದದ ಗ್ರೀಕ್ ಭಾಷೆಯ ಅನುವಾದದ ಅರ್ಥ, “ಹಸಿದಿರುವ ಮೃಗದ ಜೋರಾದ ಕೂಗು” ಎಂದು ಪರಾಮರ್ಶ ಕೃತಿಯೊಂದು ವಿವರಿಸಿದೆ. ಸೈತಾನನ ಕ್ರೂರ ಹಾಗೂ ಕೆಟ್ಟ ಮನೋಭಾವವನ್ನು ಅದೆಷ್ಟು ಚೆನ್ನಾಗಿ ಚಿತ್ರಿಸುತ್ತದೆ! ಇಡೀ ಲೋಕ ಈಗಾಗಲೇ ಅವನ ಕೈಯಲ್ಲಿದೆ. ಅಷ್ಟು ಸಾಲದೆಂದು ಇನ್ನೂ ಅನೇಕರನ್ನು ಬೇಟೆಯಾಡಬೇಕೆಂದು ಹಸಿದಿರುವ ಸಿಂಹದಂತಿದ್ದಾನೆ. (1 ಯೋಹಾ. 5:19) ಭೂಮಿಯಲ್ಲಿ ಇನ್ನೂ ಜೀವಿಸುತ್ತಿರುವ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಜೊತೆಗಿರುವ “ಬೇರೆ ಕುರಿಗಳೂ” ಅವನ ಮುಖ್ಯ ಗುರಿಯಾಗಿದ್ದಾರೆ. (ಯೋಹಾ. 10:16; ಪ್ರಕ. 12:17) ಹೇಗಾದರೂ ಮಾಡಿ ದೇವಜನರನ್ನು ನಾಶಮಾಡುವುದೇ ಸೈತಾನನ ಉದ್ದೇಶ. ಒಂದನೇ ಶತಮಾನದಿಂದ ಇಂದಿನ ತನಕ ಕ್ರೈಸ್ತರು ಅನುಭವಿಸಿರುವ ಹಿಂಸೆಯು ಸೈತಾನನೆಷ್ಟು ಕ್ರೂರಿ ಎಂದು ತೋರಿಸಿಕೊಡುತ್ತದೆ.
9, 10. (ಎ) ಸೈತಾನನು ಇಸ್ರಾಯೇಲ್ ಜನಾಂಗದ ಮೇಲೆ ಹೇಗೆ ಆಕ್ರಮಣ ಮಾಡಿದನು? (ಉದಾಹರಣೆಗಳನ್ನು ಕೊಡಿ.) (ಬಿ) ಪ್ರಾಚೀನ ಇಸ್ರಾಯೇಲ್ಯರ ಮೇಲೆ ಸೈತಾನನು ಒಂದು ಕಣ್ಣಿಡಲು ಯಾವ ವಿಶೇಷ ಕಾರಣವಿತ್ತು? (ಸಿ) ಇಂದು ಯೆಹೋವನ ಸೇವಕನೊಬ್ಬ ಗಂಭೀರ ಪಾಪಮಾಡಿದರೆ ಸೈತಾನನಿಗೆ ಹೇಗನಿಸುತ್ತದೆ?
9 ಸೈತಾನನು ತನ್ನ ಕ್ರೂರತನವನ್ನು ಇನ್ನೊಂದು ವಿಧದಲ್ಲಿ ತೋರಿಸಿದ್ದಾನೆ. ತುಂಬ ಹಸಿದಿರುವ ಸಿಂಹಕ್ಕೆ ತಾನು ಬೇಟೆಯಾಡಲಿರುವ ಪ್ರಾಣಿಯ ಮೇಲೆ ಅನುಕಂಪ ಹುಟ್ಟುವುದಿಲ್ಲ. ಪ್ರಾಣಿಯನ್ನು ಕೊಲ್ಲುವ ಮುಂಚೆಯಾಗಲೀ, ಕೊಂದ ಮೇಲಾಗಲೀ ಹಸಿದಿರುವ ಸಿಂಹಕ್ಕೆ ‘ಅಯ್ಯೋ ಪಾಪ’ ಎಂದನಿಸುವುದಿಲ್ಲ. ಅದೇ ರೀತಿ ಸೈತಾನನು ಯಾರ ಮೇಲೆ ಆಕ್ರಮಣ ಮಾಡುತ್ತಾನೋ ಅವರ ಮೇಲೆ ಒಂಚೂರು ಅನುಕಂಪ ಹುಟ್ಟಲ್ಲ. ಉದಾಹರಣೆಗೆ, ಇಸ್ರಾಯೇಲ್ಯರು ಯಾವಾಗೆಲ್ಲ ಅನೈತಿಕತೆ ಮತ್ತು ದುರಾಶೆಗೆ ಬಲಿಯಾದರೊ ಆಗೆಲ್ಲಾ ಸೈತಾನನಿಗೆ ಹೇಗನಿಸಿರಬೇಕು? ಜಿಮ್ರೀ ಅನೈತಿಕತೆ ನಡೆಸಿದಾಗ, ಗೇಹಜಿ ದುರಾಶೆಗೆ ಬಲಿಯಾದಾಗ ಇಬ್ಬರೂ ಭಯಾನಕ ಶಿಕ್ಷೆ ಅನುಭವಿಸಿದರು. ಇದನ್ನು ನೋಡಿ ಸೈತಾನ ‘ನಾನು ಗೆದ್ದುಬಿಟ್ಟೆ’ ಎಂದು ಕುಣಿದುಕುಪ್ಪಳಿಸಿದ್ದನ್ನು ಚಿತ್ರಿಸಿಕೊಳ್ಳಬಲ್ಲಿರಾ?—ಅರ. 25:6-8, 14, 15; 2 ಅರ. 5:20-27.
10 ಪ್ರಾಚೀನ ಇಸ್ರಾಯೇಲ್ಯರ ಮೇಲೆ ಸೈತಾನನಿಗೆ ಒಂದು ಕಣ್ಣಿತ್ತು. ಅದಕ್ಕೆ ಒಂದು ವಿಶೇಷ ಕಾರಣವೂ ಇತ್ತು. ಅದೇನೆಂದರೆ ಸೈತಾನನನ್ನು ನಾಶಮಾಡಿ ಯೆಹೋವನಿಗೆ ಮಾತ್ರ ಆಳುವ ಹಕ್ಕಿದೆ ಎಂದು ರುಜುಪಡಿಸಲಿದ್ದ ಮೆಸ್ಸೀಯನು ಈ ಜನಾಂಗದಿಂದ ಬರಲಿದ್ದನು. (ಆದಿ. 3:15) ಆದ್ದರಿಂದಲೇ ಇಸ್ರಾಯೇಲ್ಯರು ಯೆಹೋವನ ಮೆಚ್ಚುಗೆ ಪಡೆಯುವುದು ಸೈತಾನನಿಗೆ ಇಷ್ಟವಿರಲಿಲ್ಲ. ಹಾಗಾಗಿ ಪಾಪಮಾಡುವಂತೆ ಅವರನ್ನು ಪ್ರೇರಿಸಲು ಶಕ್ತಿಮೀರಿ ಪ್ರಯತ್ನಿಸಿದನು. ದಾವೀದನು ವ್ಯಭಿಚಾರಮಾಡಿದಾಗ ಅವನ ಮೇಲೆ ಸೈತಾನನಿಗೆ ಅನುಕಂಪ ಹುಟ್ಟಿತೆಂದು ಭಾವಿಸಬೇಡಿ. ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶವನ್ನು ಮೋಶೆ ಕಳೆದುಕೊಂಡಾಗ ಸೈತಾನನಿಗೆ ಅವನ ಮೇಲೆ ಮರುಕ ಹುಟ್ಟಲಿಲ್ಲ. ಯೆಹೋವನ ಸೇವಕನೊಬ್ಬನು ಗಂಭೀರ ಪಾಪ ಮಾಡಿದಾಗ ಸೈತಾನನಿಗೆ ಎಲ್ಲಿಲ್ಲದ ಖುಷಿ ಆಗುತ್ತದೆ! ನಿಜ ಹೇಳಬೇಕೆಂದರೆ ಸೈತಾನನು ತನಗೆ ಸಿಕ್ಕಿದ ಈ ಜಯವನ್ನು ಉಪಯೋಗಿಸಿ ಯೆಹೋವನನ್ನು ಹಂಗಿಸುತ್ತಾ ಇರುತ್ತಾನೆ.—ಜ್ಞಾನೋ. 27:11.
11. ಸಾರಳನ್ನು ಬಹುಶಃ ಸೈತಾನನು ಗುರಿಮಾಡಿದ್ದೇಕೆ?
11 ಮೆಸ್ಸೀಯನು ಯಾವ ವಂಶದಲ್ಲಿ ಹುಟ್ಟಿಬರಲಿದ್ದನೊ ಆ ವಂಶದ ಮೇಲೆ ಸೈತಾನನಿಗೆ ಸ್ವಲ್ಪ ಜಾಸ್ತಿಯೇ ದ್ವೇಷವಿತ್ತು. ಉದಾಹರಣೆಗೆ, ಅಬ್ರಹಾಮನು ‘ದೊಡ್ಡ ಜನಾಂಗವಾಗುವನು’ ಎಂದು ಯೆಹೋವನು ಹೇಳಿದ ನಂತರ ಏನಾಯಿತೆಂದು ನೋಡಿ. (ಆದಿ. 12:1-3) ಅಬ್ರಹಾಮ ಮತ್ತು ಸಾರ ಐಗುಪ್ತದಲ್ಲಿದ್ದಾಗ ಫರೋಹ ಸಾರಳನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಅವಳನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳಲು ಬಯಸಿದನು. ಆದರೆ ಯೆಹೋವನು ಸಾರಳನ್ನು ಸಂರಕ್ಷಿಸಿ ಈ ಕಷ್ಟದ ಪರಿಸ್ಥಿತಿಯಿಂದ ಕಾಪಾಡಿದನು. (ಆದಿಕಾಂಡ 12:14-20 ಓದಿ.) ಇಸಾಕನು ಹುಟ್ಟುವ ಮುಂಚೆ ಗೆರಾರ್ ಪಟ್ಟಣದಲ್ಲಿ ಇಂಥದ್ದೇ ಪರಿಸ್ಥಿತಿ ಪುನಃ ಒಮ್ಮೆ ಎದುರಾಯಿತು. (ಆದಿ. 20:1-7) ಈ ಪರಿಸ್ಥಿತಿಗಳಿಗೆಲ್ಲಾ ಕಾರಣ ಬಹುಶಃ ಸೈತಾನನಿರಬಹುದಾ? ನೆನಪಿಡಿ, ಸಾರಳು ಊರ್ ಎಂಬ ಶ್ರೀಮಂತ ಪಟ್ಟಣವನ್ನು ಬಿಟ್ಟು ಡೇರೆಗಳಲ್ಲಿ ವಾಸಿಸುತ್ತಿದ್ದಳು. ಆದ್ದರಿಂದ ಫರೋಹನ ಮತ್ತು ಅಬೀಮೆಲೆಕನ ದೊಡ್ಡ, ಐಷಾರಾಮಿ ಅರಮನೆಗಳನ್ನು ನೋಡಿ ಸಾರಳಲ್ಲಿ ಆಸೆ ಹುಟ್ಟಬಹುದೆಂದು ಸೈತಾನನು ಅಂದುಕೊಂಡನೇ? ಸಾರಳು ಆ ರಾಜರನ್ನು ಮದುವೆಯಾಗಿ ತನ್ನ ಗಂಡನಿಗೆ ಹಾಗೂ ಯೆಹೋವನಿಗೆ ಮೋಸಮಾಡುವಳು ಎಂದು ಸೈತಾನನು ಯೋಚಿಸಿದನೇ? ಇದರ ಬಗ್ಗೆ ಬೈಬಲ್ ಏನೂ ಹೇಳುವುದಿಲ್ಲ. ಆದರೆ ಸಾರಳು ಮೆಸ್ಸೀಯನ ಪೂರ್ವಜಳಾಗುವ ಅವಕಾಶವನ್ನು ಕಳಕೊಂಡಿದ್ದರೆ ಸೈತಾನನಿಗೆ ಖಂಡಿತ ಖುಷಿಯಾಗುತ್ತಿತ್ತು. ಸಾರಳ ವಿವಾಹ ಜೀವನ, ಅವಳ ಹೆಸರು, ಯೆಹೋವನೊಂದಿಗೆ ಆಕೆಗಿದ್ದ ಸಂಬಂಧ ಹಾಳಾದರೂ ಸೈತಾನನಿಗೆ ಬೇಜಾರಾಗುತ್ತಿರಲಿಲ್ಲ. ಅವನು ಅಷ್ಟು ಕ್ರೂರಿ ಮತ್ತು ಕೆಟ್ಟವನು!
12, 13. (ಎ) ಯೇಸು ಹುಟ್ಟಿದ ಮೇಲೆ ಸೈತಾನನು ತನ್ನ ಕ್ರೂರತನವನ್ನು ಹೇಗೆ ತೋರಿಸಿದನು? (ಬಿ) ಇಂದು ಯೆಹೋವನನ್ನು ಪ್ರೀತಿಸುವ ಮತ್ತು ಆತನ ಸೇವೆಮಾಡಲು ಪ್ರಯತ್ನಿಸುತ್ತಿರುವ ಎಳೆಯರ ಬಗ್ಗೆ ಸೈತಾನನಿಗೆ ಹೇಗನಿಸುತ್ತದೆಂದು ನೆನಸುತ್ತೀರಿ?
12 ಅಬ್ರಹಾಮನು ಹುಟ್ಟಿ ನೂರಾರು ವರ್ಷಗಳಾದ ಮೇಲೆ ಯೇಸು ಹುಟ್ಟಿದನು. ಮಗುವನ್ನು ನೋಡಿ, ‘ಎಷ್ಟು ಚೆನ್ನಾಗಿದೆ, ಮುದ್ದುಮುದ್ದಾಗಿದೆ’ ಎಂದು ಸೈತಾನನಿಗೆ ಅನಿಸಿತೆಂದು ನೆನಸಬೇಡಿ. ಈ ಮಗು ದೊಡ್ಡವನಾಗಿ ವಾಗ್ದತ್ತ ಮೆಸ್ಸೀಯನಾಗುವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಯೇಸು ಅಬ್ರಹಾಮನ ಸಂತಾನದ ಮುಖ್ಯ ಭಾಗವಾಗಿದ್ದನು ಮತ್ತು ಮುಂದೆ ಅವನು ‘ಪಿಶಾಚನ ಕೆಲಸಗಳನ್ನು ಭಂಗಗೊಳಿಸಲಿದ್ದನು.’ (1 ಯೋಹಾ. 3:8) ಒಂದು ಮಗುವನ್ನು ಕೊಲ್ಲುವುದು ಕ್ರೂರತನ ಎಂದು ಸೈತಾನನಿಗೆ ಅನಿಸಲಿಲ್ಲವಾ? ಖಂಡಿತ ಇಲ್ಲ. ಸರಿ ಮತ್ತು ತಪ್ಪಿನ ಬಗ್ಗೆ ಅವನು ತಲೆಕೆಡಿಸಿಕೊಳ್ಳುವುದಿಲ್ಲ. ಮಗುವಾಗಿದ್ದ ಯೇಸುವನ್ನು ಆದಷ್ಟು ಬೇಗ ಕೊಲ್ಲಲು ಪ್ರಯತ್ನಿಸಿದನು. ಹೇಗೆ?
13 ಜ್ಯೋತಿಷಿಗಳು ‘ಯೆಹೂದ್ಯರ ಅರಸನು’ ಹುಟ್ಟಿದ್ದಾನೆ ಎಂದು ಹೆರೋದ ರಾಜನಿಗೆ ಹೇಳಿದಾಗ ಅವನಿಗೆ ತುಂಬ ಕೋಪ ಬಂತು. ಆ ಮಗುವನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಯೋಚಿಸಿದನು. (ಮತ್ತಾ. 2:1-3, 13) ಆದ್ದರಿಂದ ಬೇತ್ಲೆಹೇಮ್ ಮತ್ತದರ ನಗರಗಳಲ್ಲಿದ್ದ ಎರಡು ವರ್ಷದ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಗಂಡು ಕೂಸುಗಳನ್ನು ಕೊಲ್ಲಬೇಕೆಂಬ ಆಜ್ಞೆ ಕೊಟ್ಟನು. (ಮತ್ತಾಯ 2:13-18 ಓದಿ.) ಯೇಸು ಆ ಕ್ರೂರವಾದ ಸಾವಿನಿಂದ ತಪ್ಪಿಸಿಕೊಂಡನು. ಆದರೆ ಇದು ನಮ್ಮ ವೈರಿ ಸೈತಾನನ ಬಗ್ಗೆ ಏನನ್ನು ಕಲಿಸುತ್ತದೆ? ಮನುಷ್ಯರ ಜೀವದ ಬಗ್ಗೆ ಅವನಿಗೆ ಚಿಂತೆ ಇಲ್ಲ. ಮಕ್ಕಳ ಬಗ್ಗೆಯಂತೂ ಅವನಿಗೆ ಕಾಳಜಿಯೇ ಇಲ್ಲ! ಹೌದು ಸೈತಾನನು ನಿಜವಾಗಿಯೂ “ಗರ್ಜಿಸುವ ಸಿಂಹದಂತೆ” ಇದ್ದಾನೆ. ಅವನೆಷ್ಟು ಕ್ರೂರಿ ಅಂತ ಯಾವತ್ತೂ ಮರೆಯಬೇಡಿ.
ಸೈತಾನನು ಮೋಸಗಾರ
14, 15. ಸೈತಾನನು ‘ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿರುವುದು’ ಹೇಗೆ?
14 ಜನರನ್ನು ನಮ್ಮ ಪ್ರೀತಿಯ ದೇವರಾದ ಯೆಹೋವನಿಂದ ದೂರಮಾಡಲು ಸೈತಾನನಿಗಿರುವ ಒಂದೇ ದಾರಿ ಯಾವುದೆಂದರೆ ಅವರನ್ನು ಮೋಸಮಾಡುವುದೇ. (1 ಯೋಹಾ. 4:8) ಸೈತಾನನು ಜನರನ್ನು ಮೋಸಮಾಡುತ್ತಿರುವುದರಿಂದ ಅವರಿಗೆ ‘ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ’ ಇಲ್ಲ, ಜೊತೆಗೆ ದೇವರ ಸಂಬಂಧ ಬೇಕೆಂದೂ ಅವರಿಗೆ ಅನಿಸುವುದಿಲ್ಲ. (ಮತ್ತಾ. 5:3) ಅವನು ‘ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿರುವುದರಿಂದ’ ಯೆಹೋವನ ಕುರಿತ ಸತ್ಯವನ್ನು ಅವರು ಗ್ರಹಿಸುವುದಿಲ್ಲ.—2 ಕೊರಿಂ. 4:4.
15 ಸೈತಾನನು ಜನರನ್ನು ಮೋಸಮಾಡಲು ಬಳಸುವ ದೊಡ್ಡ ವಿಧಾನ ಸುಳ್ಳು ಧರ್ಮ. ಯೆಹೋವನು ತನಗೆ ಮಾತ್ರ ಭಕ್ತಿ ಸಲ್ಲಬೇಕೆಂದು ಅವಶ್ಯಪಡಿಸುತ್ತಾನೆಂದು ಸೈತಾನನಿಗೆ ಚೆನ್ನಾಗಿ ಗೊತ್ತು. (ವಿಮೋ. 20:5) ಜನರು ಪ್ರಕೃತಿಯನ್ನು, ಪ್ರಾಣಿಗಳನ್ನು ಅಥವಾ ತಮ್ಮ ಪೂರ್ವಜರನ್ನು ಪೂಜಿಸುವಾಗ ಸೈತಾನನಿಗೆಷ್ಟು ಸಂತೋಷ ಆಗುತ್ತದೆಂದು ಯೋಚಿಸಿ. ಯೆಹೋವನನ್ನು ಬಿಟ್ಟು ಜನರು ಯಾವುದೇ ವ್ಯಕ್ತಿಯನ್ನಾಗಲೀ, ವಸ್ತುವನ್ನಾಗಲಿ ಆರಾಧಿಸಿದರೂ ಅವನಿಗೆ ಖುಷಿಯೇ. ದುಃಖದ ವಿಷಯ ಏನೆಂದರೆ ದೇವರು ತಮ್ಮ ಆರಾಧನೆ ಸ್ವೀಕರಿಸುತ್ತಿದ್ದಾನೆಂದು ಅನೇಕರು ನೆನಸುತ್ತಾರೆ. ಆದರೆ ಅವೆಲ್ಲಾ ಸುಳ್ಳು ನಂಬಿಕೆ ಮತ್ತು ಪ್ರಯೋಜನವಿಲ್ಲದ ಸಂಸ್ಕಾರಗಳ ಮೇಲೆ ಆಧರಿಸಿವೆ. ಯೆಶಾಯನ ದಿನಗಳಲ್ಲಿದ್ದ ಇಸ್ರಾಯೇಲ್ಯರೂ ಇಂಥದ್ದೇ ಪರಿಸ್ಥಿತಿಯಲ್ಲಿದ್ದರು. ಯೆಹೋವನು ಅವರಿಗೆ ಹೀಗೆ ಕೇಳಿದನು: “ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ರಯಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ.”—ಯೆಶಾ. 55:2.
16, 17. (ಎ) “ಸೈತಾನನೇ, ನನ್ನಿಂದ ತೊಲಗಿಹೋಗು” ಎಂದು ಯೇಸು ಪೇತ್ರನಿಗೆ ಹೇಳಿದ್ದೇಕೆ? (ಬಿ) ಎಚ್ಚರವಾಗಿರದಂತೆ ಸೈತಾನನು ನಮ್ಮನ್ನು ಹೇಗೆ ಮೋಸಗೊಳಿಸಬಹುದು?
16 ಯೆಹೋವನ ಹುರುಪಿನ ಸೇವಕರನ್ನು ಮೋಸಮಾಡಲು ಸಹ ಸೈತಾನನಿಂದ ಸಾಧ್ಯ. ಉದಾಹರಣೆಗೆ, ಇನ್ನು ಸ್ವಲ್ಪ ಸಮಯದಲ್ಲೇ ಜನರು ತನ್ನನ್ನು ಕೊಲ್ಲುವರು ಎಂದು ಯೇಸು ಹೇಳಿದಾಗ ಏನಾಯಿತೆಂದು ನೋಡಿ. ಯೇಸುವನ್ನು ತುಂಬ ಪ್ರೀತಿಸಿದ ಅಪೊಸ್ತಲ ಪೇತ್ರನು ಹೀಗೆ ಹೇಳುತ್ತಾನೆ: “ಕರ್ತನೇ, ನಿನಗೆ ದಯೆತೋರಿಸಿಕೋ; ನಿನಗೆ ಈ ಗತಿ ಎಂದಿಗೂ ಆಗದು.” ಅದಕ್ಕೆ ಯೇಸು ಪೇತ್ರನಿಗೆ: “ಸೈತಾನನೇ, ನನ್ನಿಂದ ತೊಲಗಿಹೋಗು” ಎಂದನು. (ಮತ್ತಾ. 16:22, 23) ಯಾಕೆ ಯೇಸು ಪೇತ್ರನನ್ನು “ಸೈತಾನನೇ” ಎಂದು ಕರೆದನು? ಯಾಕೆಂದರೆ ಮುಂದೆ ಏನಾಗುತ್ತದೆ ಎಂದು ಯೇಸುವಿಗೆ ಗೊತ್ತಿತ್ತು. ಯೇಸು ಬೇಗನೆ ವಿಮೋಚನಾ ಮೌಲ್ಯವಾಗಿ ತನ್ನ ಜೀವವನ್ನು ಅರ್ಪಿಸಿ ಸೈತಾನನು ಸುಳ್ಳುಗಾರ ಎಂದು ರುಜುಪಡಿಸಲಿದ್ದನು. ಮಾನವ ಇತಿಹಾಸದಲ್ಲೇ ಇದೊಂದು ಪ್ರಾಮುಖ್ಯ ಸಮಯವಾಗಿತ್ತು. ತನಗೆ ‘ದಯೆತೋರಿಸಿಕೊಳ್ಳುವ’ ಸಮಯವಾಗಿರಲಿಲ್ಲ. ಯೇಸು ಎಚ್ಚರವಾಗಿರಲು ತಪ್ಪಿಹೋಗಿದ್ದರೆ ಸೈತಾನನಿಗೆ ಖಂಡಿತ ಸಂತೋಷ ಆಗುತ್ತಿತ್ತು.
17 ಈ ವಿಷಯಗಳ ವ್ಯವಸ್ಥೆಯ ಅಂತ್ಯ ಹತ್ತಿರ ಬರುತ್ತಿರುವುದರಿಂದ ನಾವು ಜೀವಿಸುತ್ತಿರುವ ಸಮಯ ಕೂಡ ಪ್ರಾಮುಖ್ಯವಾದ ಸಮಯವಾಗಿದೆ. ಲೋಕದಲ್ಲಿ ಯಶಸ್ಸನ್ನು ಗಳಿಸುವುದರ ಮೇಲೆ ನಮ್ಮ ಗಮನವನ್ನಿಟ್ಟು ನಮಗೆ ನಾವೇ ‘ದಯೆತೋರಿಸಿಕೊಳ್ಳಬೇಕು’ ಎನ್ನುವುದೇ ಸೈತಾನನ ಬಯಕೆ. ನಾವು ಕಡೇ ದಿವಸಗಳಲ್ಲಿ ಇದ್ದೇವೆ ಎನ್ನುವುದನ್ನು ಮರೆತು ಎಚ್ಚರ ತಪ್ಪಬೇಕು ಎಂದು ಅವನು ಇಷ್ಟಪಡುತ್ತಾನೆ. ನಿಮಗೆ ಹೀಗಾಗದಂತೆ ನೋಡಿಕೊಂಡು “ಸದಾ ಎಚ್ಚರವಾಗಿರಿ.” (ಮತ್ತಾ. 24:42) ಅಂತ್ಯ ಇನ್ನೂ ದೂರವಿದೆ ಅಥವಾ ಅಂತ್ಯ ಬರುವುದಿಲ್ಲ ಎಂಬ ಸೈತಾನನ ಸುಳ್ಳನ್ನು ನಂಬಬೇಡಿ.
18, 19. (ಎ) ಯೆಹೋವನ ಪ್ರೀತಿಗೆ ನಾವು ಯೋಗ್ಯರಲ್ಲ ಎಂಬ ಭಾವನೆಯನ್ನು ಹುಟ್ಟಿಸಿ ಸೈತಾನನು ಹೇಗೆ ಮೋಸಮಾಡುತ್ತಾನೆ? (ಬಿ) ಎಚ್ಚರವಾಗಿರಲು ಯೆಹೋವನು ಹೇಗೆ ಸಹಾಯಮಾಡುತ್ತಾನೆ?
18 ಇನ್ನೊಂದು ವಿಧದಲ್ಲೂ ನಮ್ಮನ್ನು ಮೋಸಗೊಳಿಸಲು ಸೈತಾನನು ಪ್ರಯತ್ನಿಸುತ್ತಾನೆ. ಯೆಹೋವನ ಪ್ರೀತಿಗೆ ನಾವು ಯೋಗ್ಯರಲ್ಲ, ನಾವು ಮಾಡಿರುವ ಪಾಪಗಳನ್ನು ಆತನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ನಾವು ನಂಬಬೇಕೆಂಬುದು ಸೈತಾನನ ಬಯಕೆ. ಆದರೆ ಇವೆಲ್ಲಾ ಸೈತಾನನು ಹೇಳುವ ಸುಳ್ಳುಗಳು. ಸ್ವಲ್ಪ ಯೋಚಿಸಿ, ಯೆಹೋವನ ಪ್ರೀತಿಗೆ ನಿಜವಾಗಲೂ ಯಾರು ಯೋಗ್ಯನಲ್ಲ? ಸೈತಾನನೇ. ದೇವರು ಯಾವತ್ತೂ ಕ್ಷಮಿಸದೇ ಇರುವವನು ಅಂದರೆ ಯಾರು? ಸೈತಾನನೇ. ಆದರೆ ಬೈಬಲ್ ನಮಗೆ ಹೀಗನ್ನುತ್ತದೆ: “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.” (ಇಬ್ರಿ. 6:10) ಯೆಹೋವನನ್ನು ಮೆಚ್ಚಿಸಲು ನಾವು ಮಾಡುವ ಪ್ರತಿಯೊಂದು ಪ್ರಯತ್ನವನ್ನು ಆತನು ಮೆಚ್ಚುತ್ತಾನೆ. ಆತನಿಗಾಗಿ ನಾವು ಮಾಡುವ ಸೇವೆ ಯಾವತ್ತೂ ವ್ಯರ್ಥವಾಗುವುದಿಲ್ಲ. (1 ಕೊರಿಂಥ 15:58 ಓದಿ.) ಆದ್ದರಿಂದ ಸೈತಾನನ ಸುಳ್ಳುಗಳನ್ನು ನಂಬಿ ಮೋಸಹೋಗಬೇಡಿ.
19 ನಾವೀಗ ನೋಡಿದಂತೆ ಸೈತಾನನು ಶಕ್ತಿಶಾಲಿ, ಕ್ರೂರಿ ಮತ್ತು ಮೋಸಗಾರ. ಇಂಥಾ ವೈರಿ ಜೊತೆ ಹೋರಾಡಿ ಜಯಗಳಿಸುವುದು ಹೇಗೆ? ಯೆಹೋವನು ನಮಗೆ ಸಹಾಯಮಾಡುತ್ತಾನೆ. ‘ಸೈತಾನನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಾಗದಂತೆ’ ಅವನು ಯಾವೆಲ್ಲಾ ವಿಧಗಳನ್ನು ಬಳಸುತ್ತಾನೆಂದು ಬೈಬಲ್ ಕಲಿಸುತ್ತದೆ. (2 ಕೊರಿಂ. 2:11) ಸೈತಾನನ ಬೇರೆಬೇರೆ ವಿಧಗಳ ಆಕ್ರಮಣಗಳನ್ನು ನಾವು ಅರ್ಥಮಾಡಿಕೊಳ್ಳುವಾಗ ಎಚ್ಚರವಾಗಿರಲು ಸುಲಭವಾಗುತ್ತದೆ. ಆದರೆ ಸೈತಾನನ ಕುತಂತ್ರಗಳ ಬಗ್ಗೆ ತಿಳಿದಿರುವುದು ಮಾತ್ರ ಸಾಕಾಗಲ್ಲ. “ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು” ಎಂದು ಬೈಬಲಲ್ಲಿದೆ. (ಯಾಕೋ. 4:7) ಸೈತಾನನ ವಿರುದ್ಧ ಹೋರಾಡಿ ಜಯಗಳಿಸಬಹುದಾದ ಮೂರು ಕ್ಷೇತ್ರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.