ಒಳನೋಟ ಮತ್ತು ಮನವೊಪ್ಪಿಸುವ ಕೌಶಲದೊಂದಿಗೆ ಕಲಿಸಿರಿ
“ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ [“ಒಳನೋಟವನ್ನೂ,” “NW”] ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ [“ಮನವೊಪ್ಪಿಸುವ ಕೌಶಲವನ್ನು,” “NW”] ಹೆಚ್ಚಿಸುವದು.”—ಜ್ಞಾನೋಕ್ತಿ 16:23.
1. ದೇವರ ವಾಕ್ಯವನ್ನು ಕಲಿಸುವುದರಲ್ಲಿ ಕೇವಲ ಮಾಹಿತಿಯನ್ನು ಕೊಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ ಏಕೆ?
ದೇವರ ವಾಕ್ಯದ ಶಿಕ್ಷಕರೋಪಾದಿ ನಮ್ಮ ಗುರಿಯು, ನಮ್ಮ ವಿದ್ಯಾರ್ಥಿಗಳ ಮನಸ್ಸುಗಳನ್ನು ಮಾತ್ರವಲ್ಲ, ಅವರ ಹೃದಯಗಳನ್ನೂ ಜ್ಞಾನೋದಯಗೊಳಿಸುವುದು ಆಗಿದೆ. (ಎಫೆಸ 1:18) ಆದುದರಿಂದ ಕಲಿಸುವುದರಲ್ಲಿ, ಕೇವಲ ಮಾಹಿತಿಯನ್ನು ಕೊಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ [“ಮನವೊಪ್ಪಿಸುವಿಕೆಯ ಕೌಶಲವನ್ನು,” NW] ಹೆಚ್ಚಿಸುವದು.”
2. (ಎ) ಮನವೊಪ್ಪಿಸುವುದರ ಅರ್ಥವೇನು? (ಬಿ) ಎಲ್ಲ ಕ್ರೈಸ್ತರು ಮನವೊಪ್ಪಿಸುವಂತಹ ಶಿಕ್ಷಕರಾಗಲು ಸಾಧ್ಯವಿರುವುದು ಹೇಗೆ?
2 ಅಪೊಸ್ತಲ ಪೌಲನು ತನ್ನ ಬೋಧನೆಯ ಕೆಲಸದಲ್ಲಿ ನಿಶ್ಚಯವಾಗಿಯೂ ಈ ಮೂಲತತ್ವವನ್ನು ಅನ್ವಯಿಸಿದನು. ಅವನು ಕೊರಿಂಥದಲ್ಲಿದ್ದಾಗ, “ಅವನು ಪ್ರತಿಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು [“ಮನವೊಪ್ಪಿಸುತ್ತಿದ್ದನು,” NW].” (ಅ. ಕೃತ್ಯಗಳು 18:4) ಒಂದು ಪ್ರಮಾಣಗ್ರಂಥಕ್ಕನುಸಾರ, ಇಲ್ಲಿ “ಮನವೊಪ್ಪಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದದ ಅರ್ಥ, “ತಾರ್ಕಿಕ ಅಥವಾ ನೈತಿಕ ವಿಚಾರಗಳ ಪ್ರಭಾವದಿಂದಾಗಿ ಮನಸ್ಸನ್ನು ಬದಲಾಯಿಸುವುದು” ಆಗಿದೆ. ಮನಗಾಣಿಸುವಂತಹ ತರ್ಕಸರಣಿಗಳ ಮೂಲಕ, ಜನರು ತಮ್ಮ ಆಲೋಚನಾ ರೀತಿಯನ್ನೇ ಬದಲಾಯಿಸುವುದರಲ್ಲಿ ಪೌಲನು ಸಫಲನಾಗಿದ್ದನು. ಅವನು ಎಷ್ಟು ಚೆನ್ನಾಗಿ ಮನವೊಪ್ಪಿಸಸಾಧ್ಯವಿತ್ತೆಂದರೆ, ಅವನ ಶತ್ರುಗಳು ಸಹ ಅವನಿಗೆ ಹೆದರುತ್ತಿದ್ದರು. (ಅ. ಕೃತ್ಯಗಳು 19:24-27) ಹಾಗಿದ್ದರೂ, ಪೌಲನ ಬೋಧನೆಯು, ಮಾನವ ಸಾಮರ್ಥ್ಯದ ಪ್ರದರ್ಶನವಾಗಿರಲಿಲ್ಲ. ಅವನು ಕೊರಿಂಥದವರಿಗೆ ಹೇಳಿದ್ದು: “ನಿಮ್ಮ ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಂಡಿರಬೇಕೆಂದು ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೆ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.” (1 ಕೊರಿಂಥ 2:4, 5) ಎಲ್ಲ ಕ್ರೈಸ್ತರಿಗೆ ಯೆಹೋವ ದೇವರ ಆತ್ಮದ ಸಹಾಯವಿರುವುದರಿಂದ, ಅವರೆಲ್ಲರೂ ಮನವೊಪ್ಪಿಸುವಂತಹ ಶಿಕ್ಷಕರಾಗಬಹುದು. ಆದರೆ ಹೇಗೆ? ನಾವು ಕೆಲವೊಂದು ಪರಿಣಾಮಕಾರಿ ಬೋಧನಾ ವಿಧಾನಗಳ ಕಡೆಗೆ ನೋಟವನ್ನು ಹರಿಸೋಣ.
ಚೆನ್ನಾಗಿ ಕಿವಿಗೊಡುವವರಾಗಿರಿ
3. ಇತರರಿಗೆ ಕಲಿಸುವಾಗ ಒಳನೋಟವು ಅಗತ್ಯವಾಗಿದೆ ಏಕೆ, ಮತ್ತು ಒಬ್ಬ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ನಾವು ಹೇಗೆ ಸ್ಪರ್ಶಿಸಬಲ್ಲೆವು?
3 ಬೋಧಿಸುವ ಮೊದಲನೆಯ ವಿಧಾನದಲ್ಲಿ, ಮಾತಾಡುವುದು ಅಲ್ಲ, ಬದಲಾಗಿ ಕಿವಿಗೊಡುವುದು ಒಳಗೂಡಿರುತ್ತದೆ. ಜ್ಞಾನೋಕ್ತಿ 16:23ರಲ್ಲಿ ತಿಳಿಸಲ್ಪಟ್ಟಿರುವಂತೆ, ಇತರರ ಮನವೊಪ್ಪಿಸುವವರಾಗಿರಲು ನಮಗೆ ಒಳನೋಟವಿರಬೇಕು. ತಾನು ಕಲಿಸಿದ ಜನರ ಕುರಿತಾಗಿ ಯೇಸುವಿಗೆ ನಿಶ್ಚಯವಾಗಿಯೂ ಒಳನೋಟವಿತ್ತು. ಯೋಹಾನ 2:25 ಹೇಳುವುದು: “ಆತನು ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವನಾ”ಗಿದ್ದನು. ಆದರೆ ನಾವು ಯಾರಿಗೆ ಕಲಿಸುತ್ತಿದ್ದೇವೊ ಅವರ ಹೃದಯಲ್ಲಿ ಏನಿದೆಯೆಂಬುದನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲೆವು? ಒಂದು ವಿಧವು, ಚೆನ್ನಾಗಿ ಕಿವಿಗೊಡುವವನಾಗಿರುವುದೇ ಆಗಿದೆ. ಯಾಕೋಬ 1:19 ಹೇಳುವುದು: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.” ಎಲ್ಲ ಜನರು ತಮ್ಮ ವಿಚಾರಗಳನ್ನು ತತ್ಕ್ಷಣವೇ ತಿಳಿಸುವುದಿಲ್ಲವೆಂಬುದು ನಿಜ. ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ನಾವು ನಿಜವಾದ ಆಸಕ್ತಿಯನ್ನು ತೋರಿಸುತ್ತಿದ್ದೇವೆಂದು ಅವರಿಗೆ ಮನವರಿಕೆಯಾದಾಗ, ತಮ್ಮ ನಿಜವಾದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವರಿಗೆ ಇನ್ನೂ ಹೆಚ್ಚು ಮನಸ್ಸಾಗಬಹುದು. ದಯಾಪರವಾದರೂ ಪರೀಕ್ಷಾತ್ಮಕವಾದ ಪ್ರಶ್ನೆಗಳನ್ನು ಕೇಳುವ ಮೂಲಕ ನಾವು ಅವರ ಹೃದಯವನ್ನು ಸ್ಪರ್ಶಿಸಿ, ಅಂತಹ ಮಾತುಗಳನ್ನು ಅವರಿಂದ ‘ಸೇದಬಲ್ಲೆವು.’—ಜ್ಞಾನೋಕ್ತಿ 20:5.
4. ಕ್ರೈಸ್ತ ಹಿರಿಯರು ಚೆನ್ನಾಗಿ ಕಿವಿಗೊಡುವವರಾಗಿರಬೇಕು ಏಕೆ?
4 ಕ್ರೈಸ್ತ ಹಿರಿಯರು ಚೆನ್ನಾಗಿ ಕಿವಿಗೊಡುವವರಾಗಿರುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಕೇವಲ ಆಗ ಅವರು “ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳು”ವರು. (ಕೊಲೊಸ್ಸೆ 4:6) ಜ್ಞಾನೋಕ್ತಿ 18:13 ಎಚ್ಚರಿಸುವುದು: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.” ಒಮ್ಮೆ ಇಬ್ಬರು ಸಹೋದರರು, ಒಬ್ಬ ಸಹೋದರಿಯು ಕೆಲವೊಂದು ಕೂಟಗಳಿಗೆ ಬಾರದೆ ಇದ್ದದ್ದರಿಂದ ಸದುದ್ದೇಶದೊಂದಿಗೆ ಅವಳಿಗೆ ಪ್ರಾಪಂಚಿಕತೆಯ ಕುರಿತು ಸಲಹೆಯನ್ನು ಕೊಟ್ಟರು. ಇದರಿಂದಾಗಿ ಆ ಸಹೋದರಿಯು ತುಂಬ ಮನನೊಂದಳು. ಯಾಕಂದರೆ, ಅವಳು ಏಕೆ ಬರುತ್ತಿರಲಿಲ್ಲವೆಂಬ ಕಾರಣವನ್ನು ಅವರು ಅವಳಿಗೆ ಕೇಳಿರಲಿಲ್ಲ. ನಿಜ ಸಂಗತಿಯೇನಂದರೆ, ಅವಳು ಇತ್ತೀಚೆಗೆ ಒಳಗಾಗಿದ್ದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾ ಇದ್ದಳು. ಆದುದರಿಂದ, ನಾವು ಸಲಹೆಯನ್ನು ಕೊಡುವ ಮುಂಚೆ ಕಿವಿಗೊಡುವುದು ಎಷ್ಟೊಂದು ಪ್ರಾಮುಖ್ಯವಾಗಿದೆ!
5. ಸಹೋದರರ ನಡುವೆ ಉದ್ಭವಿಸುವ ಕಲಹಗಳನ್ನು ಹಿರಿಯರು ಹೇಗೆ ನಿರ್ವಹಿಸಬಲ್ಲರು?
5 ಹಿರಿಯರು ಬೋಧಿಸುವಾಗ, ಅನೇಕವೇಳೆ ಅದರಲ್ಲಿ ಇತರರಿಗೆ ಸಲಹೆಯನ್ನು ಕೊಡುವುದು ಸೇರಿರುತ್ತದೆ. ಹೀಗೆ ಮಾಡುವಾಗಲೂ ಚೆನ್ನಾಗಿ ಕಿವಿಗೊಡುವವರಾಗಿರುವುದು ಮಹತ್ವಪೂರ್ಣವಾಗಿದೆ. ಜೊತೆ ಕ್ರೈಸ್ತರ ನಡುವೆ ಕಲಹಗಳು ಏಳುವ ಸಮಯದಲ್ಲಿ ಕಿವಿಗೊಡುವುದು ವಿಶೇಷವಾಗಿ ಆವಶ್ಯಕವಾಗಿದೆ. ಕಿವಿಗೊಟ್ಟ ನಂತರವೇ ಹಿರಿಯರು, ‘ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನಾದ ತಂದೆಯನ್ನು’ ಅನುಕರಿಸಸಾಧ್ಯವಿದೆ. (1 ಪೇತ್ರ 1:17) ಅಂತಹ ಪರಿಸ್ಥಿತಿಗಳಲ್ಲಿ ಭಾವನೆಗಳು ತೀಕ್ಷ್ಣವಾಗಿರುತ್ತವೆ. ಆದುದರಿಂದ “ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು” ಎಂಬ ಜ್ಞಾನೋಕ್ತಿ 18:17ರ ಸಲಹೆಯನ್ನು ಒಬ್ಬ ಹಿರಿಯನು ಮನಸ್ಸಿನಲ್ಲಿಡುವುದು ಒಳ್ಳೇದು. ಒಬ್ಬ ಪರಿಣಾಮಕಾರಿ ಶಿಕ್ಷಕನು ಎರಡೂ ಪಕ್ಷಗಳಿಗೆ ಕಿವಿಗೊಡುವನು. ಒಂದು ಪ್ರಾರ್ಥನೆಯನ್ನು ಮಾಡುವ ಮೂಲಕ, ಪರಿಸ್ಥಿತಿಯನ್ನು ಶಾಂತಗೊಳಿಸಲು ಅವನು ಸಹಾಯಮಾಡುತ್ತಾನೆ. (ಯಾಕೋಬ 3:18) ಆ ಇಬ್ಬರು ಸಹೋದರರು ತೀರ ಭಾವುಕರಾಗುವಲ್ಲಿ, ಅವರು ಪರಸ್ಪರ ಕಚ್ಚಾಡುವ ಬದಲಿಗೆ ತಮ್ಮ ಚಿಂತೆಗಳನ್ನು ನೇರವಾಗಿ ತನಗೆ ಸಂಬೋಧಿಸುವಂತೆ ಅವನು ಸಲಹೆಕೊಡಬಹುದು. ಸೂಕ್ತವಾದ ಪ್ರಶ್ನೆಗಳ ಮೂಲಕ, ಪರಿಗಣಿಸಲಾಗುತ್ತಿರುವ ವಾದಾಂಶಗಳನ್ನು ಬಗೆಹರಿಸಲು ಹಿರಿಯನು ಶಕ್ತನಾಗಬಹುದು. ಅನೇಕ ಸಂದರ್ಭಗಳಲ್ಲಿ, ಅಂತಹ ಕಲಹಗಳ ಕಾರಣವು ವೈರತ್ವವಲ್ಲ, ಬದಲಾಗಿ ಮಾತುಕತೆಯ ಕೊರತೆಯೇ ಆಗಿರುತ್ತದೆ. ಆದರೆ ಬೈಬಲ್ ಮೂಲತತ್ವಗಳು ಉಲ್ಲಂಘಿಸಲ್ಪಟ್ಟಿರುವಲ್ಲಿ, ಒಬ್ಬ ಪ್ರೀತಿಪೂರ್ವಕ ಶಿಕ್ಷಕನು ಎರಡೂ ಪಕ್ಷದವರ ಮಾತುಗಳಿಗೆ ಕಿವಿಗೊಟ್ಟಿರುವುದರಿಂದ, ಈಗ ಅವನು ಒಳನೋಟದೊಂದಿಗೆ ಉಪದೇಶಿಸಬಲ್ಲನು.
ಸರಳತೆಯ ಮಹತ್ವ
6. ಸರಳವಾಗಿ ಕಲಿಸುವ ವಿಷಯದಲ್ಲಿ ಪೌಲನು ಮತ್ತು ಯೇಸು ಹೇಗೆ ಮಾದರಿಯನ್ನಿಟ್ಟರು?
6 ಬೋಧಿಸುವ ಇನ್ನೊಂದು ಅಮೂಲ್ಯ ಕೌಶಲವು, ಸರಳತೆಯೇ ಆಗಿದೆ. ಬೈಬಲ್ ವಿದ್ಯಾರ್ಥಿಗಳು ಸತ್ಯದ ‘ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ಗ್ರಹಿಸ’ಬೇಕೆಂದು ನಾವೆಲ್ಲರೂ ಖಂಡಿತವಾಗಿಯೂ ಬಯಸುತ್ತೇವೆ. (ಎಫೆಸ 3:18) ಬೈಬಲ್ ಬೋಧನೆಗಳಲ್ಲಿ ಕೆಲವೊಂದು ಭಾಗಗಳು ಸ್ತಬ್ಧಗೊಳಿಸುವಂಥವುಗಳೂ ಅನೇಕವೇಳೆ ಪಂಥಾಹ್ವಾನಕರವೂ ಆಗಿವೆ. (ರೋಮಾಪುರ 11:33) ಹಾಗಿದ್ದರೂ, ಪೌಲನು ಗ್ರೀಕರಿಗೆ ಸಾರುತ್ತಿದ್ದಾಗ ‘ಕ್ರಿಸ್ತನು ಕಂಬಕ್ಕೇರಿಸಲ್ಪಟ್ಟನು’ ಎಂಬ ಸರಳ ಸಂದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿದನು. (1 ಕೊರಿಂಥ 2:1, 2, NW) ತದ್ರೀತಿಯಲ್ಲಿ, ಯೇಸು ಒಂದು ಸ್ಪಷ್ಟ, ಆಕರ್ಷಕ ರೀತಿಯಲ್ಲಿ ಸಾರಿದನು. ಅವನು ತನ್ನ ಪರ್ವತ ಪ್ರಸಂಗದಲ್ಲಿ ತೀರ ಸರಳವಾದ ಶಬ್ದಗಳನ್ನು ಉಪಯೋಗಿಸಿದನಾದರೂ, ಹಿಂದೆಂದೂ ವ್ಯಕ್ತಪಡಿಸಲ್ಪಟ್ಟಿರದ ಅತ್ಯಂತ ಗಾಢವಾದ ಕೆಲವೊಂದು ಸತ್ಯಗಳು ಆ ಪ್ರಸಂಗದಲ್ಲಿ ಅಡಕವಾಗಿವೆ.—ಮತ್ತಾಯ, 5-7ನೆಯ ಅಧ್ಯಾಯಗಳು.
7. ಬೈಬಲ್ ಅಭ್ಯಾಸಗಳನ್ನು ನಡೆಸುವಾಗ ನಾವು ಹೇಗೆ ಸರಳವಾಗಿ ಕಲಿಸಬಹುದು?
7 ಅಂತೆಯೇ ನಾವು ಕೂಡ ಬೈಬಲ್ ಅಭ್ಯಾಸಗಳನ್ನು ನಡೆಸುವಾಗ ಸರಳವಾದ ರೀತಿಯಲ್ಲಿ ಕಲಿಸಬೇಕು. ಹೇಗೆ? “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳ” ಮೇಲೆ ಕೇಂದ್ರೀಕರಿಸುವ ಮೂಲಕವೇ. (ಫಿಲಿಪ್ಪಿ 1:10, NW) ಗಹನವಾದ ವಿಷಯಗಳನ್ನು ವಿವರಿಸುತ್ತಿರುವಾಗ, ನಾವು ಅದನ್ನು ಸ್ಪಷ್ಟವಾದ ಮಾತುಗಳಲ್ಲಿ ಹೇಳಬೇಕು. ಒಂದು ಪ್ರಕಾಶನದಲ್ಲಿ ಕೊಡಲ್ಪಟ್ಟಿರುವ ಪ್ರತಿಯೊಂದು ಬೈಬಲ್ ವಚನವನ್ನು ಓದಿ ಚರ್ಚಿಸಲು ಪ್ರಯತ್ನಿಸುವ ಬದಲಿಗೆ, ನಾವು ಮುಖ್ಯ ಶಾಸ್ತ್ರವಚನಗಳ ಮೇಲೆ ಕೇಂದ್ರೀಕರಿಸಬೇಕು. ಇದಕ್ಕಾಗಿ ನಾವು ಒಳ್ಳೆಯ ತಯಾರಿಯನ್ನು ಮಾಡುವುದು ಆವಶ್ಯಕ. ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳನ್ನು ಒಳತಂದು ಮುಖ್ಯ ವಿಷಯದಿಂದ ಪಕ್ಕಸರಿಯದಂತೆ, ನಾವು ವಿದ್ಯಾರ್ಥಿಯನ್ನು ತೀರ ಹೆಚ್ಚಿನ ವಿವರಗಳೊಂದಿಗೆ ಮುಳುಗಿಸಬಾರದು. ನಾವು ಅಭ್ಯಾಸ ಮಾಡುತ್ತಿರುವ ವಿಷಯಕ್ಕೆ ನೇರವಾಗಿ ಸಂಬಂಧಿಸದ ಒಂದು ಪ್ರಶ್ನೆಯನ್ನು ವಿದ್ಯಾರ್ಥಿಯು ಕೇಳುವಲ್ಲಿ, ಅಭ್ಯಾಸವು ಮುಗಿದ ನಂತರ ಅದನ್ನು ಚರ್ಚಿಸೋಣವೆಂದು ನಾವು ಜಾಣ್ಮೆಯಿಂದ ತಿಳಿಸಬಹುದು.
ಪ್ರಶ್ನೆಗಳ ಪರಿಣಾಮಕಾರಿ ಬಳಕೆ
8. ಯೇಸು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದ್ದು ಹೇಗೆ?
8 ಉಪಯುಕ್ತ ಬೋಧನೆಯ ಮತ್ತೊಂದು ಕೌಶಲದಲ್ಲಿ, ಪರಿಣಾಮಕಾರಿ ಪ್ರಶ್ನೆಗಳನ್ನು ಕೇಳುವುದು ಒಳಗೂಡಿದೆ. ಯೇಸು ಕ್ರಿಸ್ತನು ಕಲಿಸುತ್ತಿದ್ದಾಗ ವಿಸ್ತೃತವಾಗಿ ಪ್ರಶ್ನೆಗಳನ್ನು ಉಪಯೋಗಿಸಿದನು. ಉದಾಹರಣೆಗಾಗಿ ಯೇಸು ಪೇತ್ರನನ್ನು ಕೇಳಿದ್ದು: “ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ”? ಅವನು, “ಬೇರೆಯವರಿಂದ” ಎಂದು ಹೇಳಿದಾಗ, ಯೇಸು ಅವನಿಗೆ ಹೇಳಿದ್ದು: ‘ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ.’ (ಮತ್ತಾಯ 17:24-26) ದೇವಾಲಯದಲ್ಲಿ ಯಾರನ್ನು ಆರಾಧಿಸಲಾಗುತ್ತಿತ್ತೊ ಆತನ ಏಕಜಾತ ಪುತ್ರನೋಪಾದಿ, ಯೇಸುವಿಗೆ ನಿಜವಾಗಿ ದೇವಾಲಯದ ತೆರಿಗೆಯನ್ನು ಕೊಡುವ ಹಂಗಿರಲಿಲ್ಲ. ಆದರೆ ಯೇಸು ಈ ಸತ್ಯವನ್ನು, ಪ್ರಶ್ನೆಗಳ ಪರಿಣಾಮಕಾರಿ ಉಪಯೋಗದ ಮೂಲಕ ತಿಳಿಸಿದನು. ಈ ರೀತಿಯಲ್ಲಿ ಪೇತ್ರನ ಬಳಿ ಈಗಾಗಲೇ ಇದ್ದ ಮಾಹಿತಿಯ ಆಧಾರದ ಮೇಲೆ ಅವನು ಸರಿಯಾದ ತೀರ್ಮಾನಕ್ಕೆ ಬರುವಂತೆ ಯೇಸು ಸಹಾಯಮಾಡಿದನು.
9. ಬೈಬಲ್ ಅಭ್ಯಾಸಗಳ ಸಮಯದಲ್ಲಿ ನಾವು ಪ್ರಶ್ನೆಗಳನ್ನು ಹೇಗೆ ಉಪಯೋಗಿಸಬಲ್ಲೆವು?
9 ಬೈಬಲ್ ಅಭ್ಯಾಸಗಳ ಸಮಯದಲ್ಲಿ ನಾವು ಪ್ರಶ್ನೆಗಳ ಸದುಪಯೋಗವನ್ನು ಮಾಡಬಹುದು. ವಿದ್ಯಾರ್ಥಿಯು ತಪ್ಪಾದ ಉತ್ತರವನ್ನು ಕೊಡುವಲ್ಲಿ, ನಾವೇ ಸರಿಯಾದ ಉತ್ತರವನ್ನು ಹೇಳಿಬಿಡಲು ನಮಗೆ ಮನಸ್ಸಾಗಬಹುದು. ಆದರೆ ಹಾಗೆ ಮಾಡುವಲ್ಲಿ, ಅವನು ನಿಜವಾಗಿ ಮಾಹಿತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವನೊ? ಪ್ರಶ್ನೆಗಳನ್ನು ಕೇಳುವ ಮೂಲಕ, ಸರಿಯಾದ ತೀರ್ಮಾನಕ್ಕೆ ಬರುವಂತೆ ವಿದ್ಯಾರ್ಥಿಯನ್ನು ನಡೆಸುವುದು ಅನೇಕವೇಳೆ ಅತ್ಯುತ್ತಮವಾದ ವಿಧವಾಗಿದೆ. ದೃಷ್ಟಾಂತಕ್ಕಾಗಿ, ದೈವಿಕ ನಾಮವನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯವಾಗಿದೆಯೆಂದು ಗ್ರಹಿಸಲು ಅವನಿಗೆ ಕಷ್ಟವಾಗುತ್ತಿರುವಲ್ಲಿ, ನಾವು ಹೀಗೆ ಕೇಳಬಹುದು: ‘ನಿಮ್ಮ ಹೆಸರು ನಿಮಗೆ ಪ್ರಾಮುಖ್ಯವಾಗಿದೆಯೊ? . . . ಏಕೆ? . . . ಯಾರಾದರೂ ನಿಮ್ಮ ಹೆಸರನ್ನು ಕರೆಯಲು ನಿರಾಕರಿಸುವಲ್ಲಿ ನಿಮಗೆ ಹೇಗನಿಸುತ್ತದೆ? . . . ನಾವು ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸುವಂತೆ ಆತನು ಅಪೇಕ್ಷಿಸುವುದು ನ್ಯಾಯವಲ್ಲವೊ?’
10. ಭಾವನಾತ್ಮಕವಾಗಿ ನೊಂದಿರುವ ವ್ಯಕ್ತಿಗಳಿಗೆ ಸಹಾಯಮಾಡುವುದರಲ್ಲಿ ಹಿರಿಯರು ಪ್ರಶ್ನೆಗಳನ್ನು ಹೇಗೆ ಉಪಯೋಗಿಸಬಲ್ಲರು?
10 ಮಂದೆಯ ಪಾಲನೆ ಮಾಡುವುದರಲ್ಲಿಯೂ ಹಿರಿಯರು ಪ್ರಶ್ನೆಗಳ ಸದುಪಯೋಗವನ್ನು ಮಾಡಬಲ್ಲರು. ಸಭೆಯಲ್ಲಿರುವ ಅನೇಕರು ಸೈತಾನನ ಲೋಕದಿಂದ ಭಾವನಾತ್ಮಕವಾಗಿ ಜರ್ಜರಿತರಾಗಿದ್ದಾರೆ ಮತ್ತು ತಾವು ಅಶುದ್ಧರೂ, ಪ್ರೀತಿಸಲ್ಪಡಲು ಅಯೋಗ್ಯರೆಂದೂ ಅವರಿಗನಿಸಬಹುದು. ಅಂತಹ ಒಬ್ಬ ವ್ಯಕ್ತಿಯೊಂದಿಗೆ ಹಿರಿಯನೊಬ್ಬನು ಹೀಗೆ ಹೇಳುತ್ತಾ ವಿವೇಚಿಸಬಹುದು: ‘ನೀವು ಅಶುದ್ಧರೆಂದು ನಿಮಗನಿಸುತ್ತದಾದರೂ, ಯೆಹೋವನಿಗೆ ನಿಮ್ಮ ಕುರಿತಾಗಿ ಹೇಗನಿಸುತ್ತದೆ? ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯು ತನ್ನ ಮಗನನ್ನು ನಿಮಗಾಗಿ ಪ್ರಾಯಶ್ಚಿತ್ತವನ್ನು ಒದಗಿಸುವಂತೆ ಅನುಮತಿಸಿರುವಲ್ಲಿ, ದೇವರು ನಿಮ್ಮನ್ನು ಪ್ರೀತಿಸುತ್ತಾನೆಂದು ಅದು ಅರ್ಥೈಸುವುದಿಲ್ಲವೊ?’—ಯೋಹಾನ 3:16.
11. ಸಾರ್ವಜನಿಕರ ಮುಂದೆ ಭಾಷಣವನ್ನು ಕೊಡುತ್ತಿರುವಾಗ, ಅಲಂಕಾರಿಕ ಪ್ರಶ್ನೆಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ?
11 ಅಲಂಕಾರಿಕ ಪ್ರಶ್ನೆಗಳು ಬೋಧಿಸುವ ಇನ್ನೊಂದು ಉಪಯುಕ್ತ ವಿಧಾನವಾಗಿದೆ. ಈ ಪ್ರಶ್ನೆಗಳಿಗೆ ಕೇಳುಗರು ಗಟ್ಟಿಯಾಗಿ ಉತ್ತರ ಕೊಡಬೇಕಾಗಿರುವುದಿಲ್ಲ, ಆದರೆ ಅವುಗಳ ಮೂಲಕ ವಿಷಯಗಳ ಕುರಿತು ಯೋಚಿಸುವಂತೆ ಅವರಿಗೆ ಸಹಾಯವಾಗುತ್ತದೆ. ಪ್ರಾಚೀನ ಕಾಲದ ಪ್ರವಾದಿಗಳು, ತಮಗೆ ಕಿವಿಗೊಡುತ್ತಿರುವವರು ಗಾಢವಾಗಿ ಯೋಚಿಸುವಂತೆ ಮಾಡಲು ಅನೇಕವೇಳೆ ಅಂತಹ ಪ್ರಶ್ನೆಗಳನ್ನು ಕೇಳಿದರು. (ಯೆರೆಮೀಯ 18:14, 15) ಯೇಸು ಕೂಡ ಅಲಂಕಾರಿಕ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದನು. (ಮತ್ತಾಯ 11:7-11) ಅಂತಹ ಪ್ರಶ್ನೆಗಳು ಸಾರ್ವಜನಿಕರ ಮುಂದೆ ಭಾಷಣವನ್ನು ಕೊಡುವಾಗ ವಿಶೇಷವಾಗಿ ಪರಿಣಾಮಕಾರಿಯಾಗಿವೆ. ಯೆಹೋವನನ್ನು ಸಂತೋಷಪಡಿಸಲು ಆತನನ್ನು ಪೂರ್ಣ ಪ್ರಾಣದಿಂದ ಸೇವಿಸಬೇಕೆಂದು ಸಭಿಕರಿಗೆ ಸುಮ್ಮನೆ ಹೇಳಿಬಿಡುವ ಬದಲಿಗೆ, ‘ನಮ್ಮ ಸೇವೆಯನ್ನು ನಾವು ನಿಜವಾಗಿ ಪೂರ್ಣ ಪ್ರಾಣದಿಂದ ಮಾಡದಿರುವಲ್ಲಿ, ಯೆಹೋವನು ಸಂತೋಷಿಸುವನೊ?’ ಎಂದು ಕೇಳುವುದು ಹೆಚ್ಚು ಪರಿಣಾಮಕಾರಿಯಾಗಿರುವುದು.
12. ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವುದರ ಪ್ರಯೋಜನವೇನು?
12 ಒಬ್ಬ ಬೈಬಲ್ ವಿದ್ಯಾರ್ಥಿಯು ಏನನ್ನು ಕಲಿಯುತ್ತಿದ್ದಾನೊ ಅದನ್ನು ಅವನು ನಿಜವಾಗಿ ನಂಬುತ್ತಾನೊ ಇಲ್ಲವೊ ಎಂಬುದನ್ನು ನಿರ್ಧರಿಸಲಿಕ್ಕಾಗಿ ದೃಷ್ಟಿಕೋನ ಪ್ರಶ್ನೆಗಳು ಉಪಯುಕ್ತವಾಗಿವೆ. (ಮತ್ತಾಯ 16:13-16) ವ್ಯಭಿಚಾರವು ತಪ್ಪೆಂದು ವಿದ್ಯಾರ್ಥಿಯು ಸರಿಯಾಗಿಯೇ ಉತ್ತರವನ್ನು ಕೊಡಬಹುದು. ಆದರೆ ಆ ಉತ್ತರದ ನಂತರ ನೀವು, ನೈತಿಕತೆಯ ವಿಷಯದಲ್ಲಿ ದೇವರ ಮಟ್ಟದ ಕುರಿತಾಗಿ ನಿಮಗೆ ವೈಯಕ್ತಿಕವಾಗಿ ಹೇಗನಿಸುತ್ತದೆ? ಅದು ತುಂಬ ಕಟ್ಟುನಿಟ್ಟಿನದ್ದಾಗಿದೆಯೆಂದು ನಿಮಗನಿಸುತ್ತದೊ? ನೀವು ದೇವರ ಮಟ್ಟಗಳನ್ನು ಪಾಲಿಸುತ್ತೀರೊ ಇಲ್ಲವೊ ಎಂಬುದು ನಿಜವಾಗಿ ಪ್ರಾಮುಖ್ಯವಾಗಿದೆಯೆಂದು ನೀವು ಹೇಳುವಿರೋ? ಎಂಬಂತಹ ಪ್ರಶ್ನೆಗಳನ್ನು ಕೇಳುವುದು ಒಳ್ಳೇದು.
ಹೃದಯವನ್ನು ತಟ್ಟುವ ದೃಷ್ಟಾಂತಗಳು
13, 14. (ಎ) ಒಂದು ವಿಷಯವನ್ನು ದೃಷ್ಟಾಂತದ ಮೂಲಕ ತಿಳಿಸುವುದರ ಅರ್ಥವೇನು? (ಬಿ) ಒಳ್ಳೆಯ ದೃಷ್ಟಾಂತಗಳು ಏಕೆ ಪರಿಣಾಮಕಾರಿಯಾಗಿವೆ?
13 ಕಿವಿಗೊಡುತ್ತಿರುವವರ ಮತ್ತು ಬೈಬಲ್ ವಿದ್ಯಾರ್ಥಿಗಳ ಹೃದಯವನ್ನು ತಟ್ಟುವ ಇನ್ನೊಂದು ಮಾರ್ಗವು, ಪರಿಣಾಮಕಾರಿ ದೃಷ್ಟಾಂತಗಳಾಗಿವೆ. “ದೃಷ್ಟಾಂತ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಅಕ್ಷರಶಃ, “ಪಕ್ಕದಲ್ಲಿ ಅಥವಾ ಜೊತೆಯಾಗಿ ಇಡುವುದು” ಎಂಬುದನ್ನು ಅರ್ಥೈಸುತ್ತದೆ. ನೀವು ದೃಷ್ಟಾಂತವನ್ನು ಕೊಡುವಾಗ, ಹೋಲುವಂತಹ ಸಂಗತಿಯನ್ನು ‘ಪಕ್ಕದಲ್ಲಿ ಇಡುವ’ ಮೂಲಕ ಒಂದು ವಿಷಯವನ್ನು ವಿವರಿಸುತ್ತೀರಿ. ಉದಾಹರಣೆಗಾಗಿ, ಯೇಸು ಕೇಳಿದ್ದು: “ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ?” ಉತ್ತರಕೊಡುತ್ತಾ, ಯೇಸು ಎಲ್ಲರಿಗೂ ಪರಿಚಿತವಾಗಿದ್ದ ಸಾಸಿವೆ ಕಾಳಿನ ಕುರಿತಾಗಿ ತಿಳಿಸಿದನು.—ಮಾರ್ಕ 4:30-32.
14 ದೇವರ ಪ್ರವಾದಿಗಳು ಅನೇಕ ಪ್ರಭಾವಶಾಲಿ ದೃಷ್ಟಾಂತಗಳನ್ನು ಉಪಯೋಗಿಸಿದರು. ಇಸ್ರಾಯೇಲ್ಯರನ್ನು ಶಿಕ್ಷಿಸಲು ದೇವರ ಸಾಧನದೋಪಾದಿ ಕಾರ್ಯನಡಿಸಿದ ಅಶ್ಶೂರ್ಯರು, ದಯಾಹೀನವಾಗಿ ಕ್ರೂರತೆಯನ್ನು ತೋರಿಸಿದಾಗ, ಈ ದೃಷ್ಟಾಂತದ ಮೂಲಕ ಯೆಶಾಯನು ಅವರ ದುರಹಂಕಾರವನ್ನು ಬಯಲುಪಡಿಸಿದನು: “ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಆಡಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ?” (ಯೆಶಾಯ 10:15) ಇತರರಿಗೆ ಕಲಿಸುವಾಗ, ಯೇಸು ಕೂಡ ಹಾಗೆಯೇ ಅನೇಕ ದೃಷ್ಟಾಂತಗಳನ್ನು ಉಪಯೋಗಿಸಿದನು. “ಆತನು . . . ಸಾಮ್ಯವಿಲ್ಲದೆ ಅವರಿಗೆ ಹೇಳಲಿಲ್ಲ” ಎಂದು ವರದಿಸಲಾಗಿದೆ. (ಮಾರ್ಕ 4:34) ಒಳ್ಳೆಯ ದೃಷ್ಟಾಂತಗಳು ಪರಿಣಾಮಕಾರಿಯಾಗಿವೆ, ಯಾಕಂದರೆ ಅವು ಹೃದಮನಗಳೆರಡನ್ನೂ ತಲ್ಲೀನಗೊಳಿಸುತ್ತವೆ. ಅವು, ಕಿವಿಗೊಡುತ್ತಿರುವವರು ಈಗಾಗಲೇ ಚಿರಪರಿಚಿತರಾಗಿರುವ ಸಂಗತಿಯೊಂದಿಗೆ ಹೊಸ ಮಾಹಿತಿಯನ್ನು ಹೋಲಿಸುವುದರಿಂದ ಆ ಮಾಹಿತಿಯನ್ನು ಸುಲಭವಾಗಿ ಗ್ರಹಿಸಿಕೊಳ್ಳುವಂತೆ ಸಾಧ್ಯಮಾಡುತ್ತದೆ.
15, 16. ನಾವು ದೃಷ್ಟಾಂತಗಳನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಹೇಗೆ ಮಾಡಬಲ್ಲೆವು? ಉದಾಹರಣೆಗಳನ್ನು ಕೊಡಿರಿ.
15 ನಿಜವಾಗಿಯೂ ಹೃದಯವನ್ನು ತಟ್ಟುವಂತಹ ದೃಷ್ಟಾಂತಗಳನ್ನು ನಾವು ಹೇಗೆ ಉಪಯೋಗಿಸಬಹುದು? ಪ್ರಪ್ರಥಮವಾಗಿ, ಒಂದು ದೃಷ್ಟಾಂತವು, ವಿವರಿಸಲ್ಪಡುತ್ತಿರುವ ವಿಷಯದೊಂದಿಗೆ ತಕ್ಕಮಟ್ಟಿಗೆ ಹೋಲಬೇಕು. ಹೋಲಿಕೆಯು ನಿಜವಾಗಿ ಹೊಂದಿಕೊಳ್ಳದಿರುವಲ್ಲಿ, ಆ ದೃಷ್ಟಾಂತವು ಕಿವಿಗೊಡುತ್ತಿರುವವರನ್ನು ಜ್ಞಾನೋದಯಗೊಳಿಸುವ ಬದಲಿಗೆ ಅವರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಬಹುದು. ಒಮ್ಮೆ, ಸದುದ್ದೇಶವುಳ್ಳ ಭಾಷಣಕರ್ತನೊಬ್ಬನು, ಯೇಸು ಕ್ರಿಸ್ತನಿಗೆ ಅಭಿಷಿಕ್ತರು ತೋರಿಸುವ ಅಧೀನತೆಯ ಕುರಿತು ತಿಳಿಸುತ್ತಿದ್ದಾಗ, ಅವರನ್ನು ಒಂದು ಸ್ವಾಮಿನಿಷ್ಠ ಮುದ್ದಿನ ನಾಯಿಗೆ ಹೋಲಿಸಿದನು. ಆದರೆ ಅಂತಹ ಹೀನೈಸುವ ಹೋಲಿಕೆಯು ನಿಜವಾಗಿ ಸೂಕ್ತವಾಗಿತ್ತೊ? ಬೈಬಲ್ ಅದೇ ವಿಚಾರವನ್ನು ಇನ್ನೂ ಹೆಚ್ಚು ಆಕರ್ಷಕ ಮತ್ತು ಘನಗಾಂಭೀರ್ಯವುಳ್ಳ ರೀತಿಯಲ್ಲಿ ತಿಳಿಸುತ್ತದೆ. ಅದು ಯೇಸುವಿನ 1,44,000 ಅಭಿಷಿಕ್ತ ಹಿಂಬಾಲಕರನ್ನು, “ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿ”ಗೆ ಹೋಲಿಸುತ್ತದೆ.—ಪ್ರಕಟನೆ 21:2.
16 ದೃಷ್ಟಾಂತಗಳು, ಜನರ ಜೀವಿತಗಳಿಗೆ ಸಂಬಂಧಿಸುವಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಹತಿಸಲಾದ ಕುರಿಮರಿಯ ಕುರಿತಾಗಿ ನಾತಾನನು ಕೊಟ್ಟ ದೃಷ್ಟಾಂತವು ರಾಜನಾದ ದಾವೀದನ ಹೃದಯವನ್ನು ಸ್ಪರ್ಶಿಸಿತು, ಯಾಕಂದರೆ ಅವನು ತನ್ನ ಯೌವನಾವಸ್ಥೆಯಲ್ಲಿ ಕುರುಬನಾಗಿದ್ದು, ಕುರಿಗಳನ್ನು ಪ್ರೀತಿಸುತ್ತಿದ್ದನು. (1 ಸಮುವೇಲ 16:11-13; 2 ಸಮುವೇಲ 12:1-7) ಆ ದೃಷ್ಟಾಂತವು ಒಂದು ಗೂಳಿಯ ಕುರಿತಾಗಿ ಇರುತ್ತಿದ್ದಲ್ಲಿ, ಅದು ಅಷ್ಟು ಪರಿಣಾಮಕಾರಿಯಾಗಿರುತ್ತಿರಲಿಲ್ಲ. ಅದೇ ರೀತಿಯಲ್ಲಿ, ವೈಜ್ಞಾನಿಕ ಅದ್ಭುತ ಅಥವಾ ಅಜ್ಞಾತವಾಗಿರುವ ಐತಿಹಾಸಿಕ ಘಟನೆಗಳ ಮೇಲೆ ಆಧಾರಿತವಾದ ದೃಷ್ಟಾಂತಗಳು ಕಿವಿಗೊಡುತ್ತಿರುವವರಿಗೆ ಅಷ್ಟೇನೂ ಹಿಡಿಸಲಿಕ್ಕಿಲ್ಲ. ಯೇಸು ತನ್ನ ದೃಷ್ಟಾಂತಗಳನ್ನು ದೈನಂದಿನ ಜೀವಿತದ ವಿಷಯಗಳ ಮೇಲೆ ಆಧಾರಿಸಿದನು. ಒಂದು ದೀಪ, ಆಕಾಶದಲ್ಲಿನ ಪಕ್ಷಿಗಳು, ಮತ್ತು ಅಡವಿಯ ಹೂವುಗಳಂತಹ ತೀರ ಸಾಮಾನ್ಯವಾದ ವಿಷಯಗಳ ಕುರಿತು ಅವನು ಮಾತಾಡಿದನು. (ಮತ್ತಾಯ 6:26, 28; ಲೂಕ 7:32) ಯೇಸುವಿಗೆ ಕಿವಿಗೊಡುತ್ತಿದ್ದವರು ಅವುಗಳ ನಡುವಿನ ಸಂಬಂಧವನ್ನು ಬೇಗನೆ ಗ್ರಹಿಸಸಾಧ್ಯವಿತ್ತು.
17. (ಎ) ನಾವು ನಮ್ಮ ದೃಷ್ಟಾಂತಗಳನ್ನು ಯಾವುದರ ಮೇಲೆ ಆಧಾರಿಸಬಹುದು? (ಬಿ) ನಮ್ಮ ಪ್ರಕಾಶನಗಳಲ್ಲಿರುವ ದೃಷ್ಟಾಂತಗಳನ್ನು ನಮ್ಮ ವಿದ್ಯಾರ್ಥಿಗಳ ಪರಿಸ್ಥಿತಿಗಳಿಗೆ ನಾವು ಹೇಗೆ ಅಳವಡಿಸಬಹುದು?
17 ನಮ್ಮ ಶುಶ್ರೂಷೆಯಲ್ಲಿ, ನಾವು ಸರಳವಾದರೂ ಪರಿಣಾಮಕಾರಿಯಾಗಿರುವ ದೃಷ್ಟಾಂತಗಳನ್ನು ಉಪಯೋಗಿಸಲಿಕ್ಕಾಗಿ ಅನೇಕ ಅವಕಾಶಗಳಿರುತ್ತವೆ. ಗಮನಿಸುವವರಾಗಿರಿ. (ಅ. ಕೃತ್ಯಗಳು 17:22, 23) ಒಂದು ದೃಷ್ಟಾಂತವನ್ನು ಪ್ರಾಯಶಃ ಕಿವಿಗೊಡುತ್ತಿರುವವನ ಮಕ್ಕಳು, ಮನೆ, ಉದ್ಯೋಗ, ಅಥವಾ ಹವ್ಯಾಸದ ಮೇಲೆ ಆಧಾರಿಸಬಹುದು. ಅಥವಾ, ನಾವು ಅಭ್ಯಾಸ ಮಾಡುತ್ತಿರುವ ವಿಷಯದಲ್ಲಿ ನಮಗಾಗಿ ಈಗಾಗಲೇ ಕೊಡಲ್ಪಟ್ಟಿರುವ ದೃಷ್ಟಾಂತಗಳನ್ನು ಉತ್ಪ್ರೇಕ್ಷಿಸಲು, ಒಬ್ಬ ಬೈಬಲ್ ವಿದ್ಯಾರ್ಥಿಯ ಕುರಿತಾಗಿ ನಮಗೆ ವೈಯಕ್ತಿಕವಾಗಿ ಏನು ತಿಳಿದಿದೆಯೊ ಆ ಮಾಹಿತಿಯನ್ನು ಉಪಯೋಗಿಸಬಹುದು. ಉದಾಹರಣೆಗಾಗಿ, ನಿತ್ಯಜೀವಕ್ಕೆ ನಡಿಸುವ ಜ್ಞಾನ ಎಂಬ ಪುಸ್ತಕದಲ್ಲಿನ 8ನೆಯ ಅಧ್ಯಾಯದ 14ನೆಯ ಪ್ಯಾರಗ್ರಾಫ್ನಲ್ಲಿ ಉಪಯೋಗಿಸಲ್ಪಟ್ಟಿರುವ ಪರಿಣಾಮಕಾರಿ ದೃಷ್ಟಾಂತವನ್ನು ತೆಗೆದುಕೊಳ್ಳಿರಿ. ಆ ದೃಷ್ಟಾಂತದಲ್ಲಿ, ಒಬ್ಬ ನೆರೆಯವನಿಂದ ಮಿಥ್ಯಾಪವಾದಕ್ಕೊಳಗಾಗಿರುವ ಒಬ್ಬ ಪ್ರೀತಿಪರ ಹೆತ್ತವನ ಕುರಿತಾಗಿ ತಿಳಿಸಲಾಗಿದೆ. ಒಬ್ಬ ಬೈಬಲ್ ವಿದ್ಯಾರ್ಥಿಯು ಸ್ವತಃ ಒಬ್ಬ ಹೆತ್ತವನಾಗಿರುವುದಾದರೆ, ಆ ದೃಷ್ಟಾಂತವನ್ನು ನಾವು ಅವನ ಪರಿಸ್ಥಿತಿಗಳಿಗೆ ಹೇಗೆ ಅಳವಡಿಸಬಲ್ಲೆವೆಂಬುದನ್ನು ನಾವು ಸ್ವಲ್ಪ ಯೋಚಿಸಬಹುದು.
ವಚನಗಳನ್ನು ಕುಶಲತೆಯಿಂದ ಓದುವುದು
18. ನಾವು ಅಡೆತಡೆಯಿಲ್ಲದೆ ಓದುವವರಾಗಿರುವಂತೆ ಪ್ರಯಾಸಪಡಬೇಕು ಏಕೆ?
18 ಪೌಲನು ತಿಮೊಥೆಯನಿಗೆ ಬುದ್ಧಿವಾದ ನೀಡಿದ್ದು: “ನಾನು ಬರುವ ತನಕ ವೇದಪಾರಾಯಣವನ್ನೂ [“ಸಾರ್ವಜನಿಕ ವಾಚನವನ್ನೂ,” NW] ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು.” (1 ತಿಮೊಥೆಯ 4:13) ನಮ್ಮ ಬೋಧನೆಗೆ ಬೈಬಲು ಅಸ್ತಿವಾರ ಆಗಿರುವುದರಿಂದ, ಅದನ್ನು ಅಡೆತಡೆಯಿಲ್ಲದೆ ಓದಲು ಶಕ್ತರಾಗಿರುವುದು ಉಪಯುಕ್ತಕರ. ದೇವರ ಜನರಿಗೆ ಮೋಶೆಯ ಧರ್ಮಶಾಸ್ತ್ರವನ್ನು ಓದಿಹೇಳುವ ಸುಯೋಗ ಲೇವಿಯರಿಗಿತ್ತು. ಅವರು ಅದನ್ನು ತಪ್ಪುತಪ್ಪಾಗಿ ಅಥವಾ ಒಂದೇ ರೀತಿಯ ಸ್ವರದಲ್ಲಿ ಓದಿದರೊ? ಇಲ್ಲ. ನೆಹೆಮೀಯ 8:8ರಲ್ಲಿ ಬೈಬಲ್ ಹೇಳುವುದು: “ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲು ಜನರು ಗ್ರಹಿಸಿದರು.”
19. ನಾವು ವಚನಗಳನ್ನು ಓದುವ ರೀತಿಯನ್ನು ಹೇಗೆ ಉತ್ತಮಗೊಳಿಸಬಲ್ಲೆವು?
19 ನಿರರ್ಗಳವಾದ ಭಾಷಣಕರ್ತರಾಗಿರುವ ಕೆಲವು ಕ್ರೈಸ್ತ ಪುರುಷರು, ಓದುವ ವಿಷಯದಲ್ಲಿ ತಪ್ಪಿಬೀಳುತ್ತಾರೆ. ಅವರು ಹೇಗೆ ಉತ್ತಮಗೊಳ್ಳಬಲ್ಲರು? ಪ್ರ್ಯಾಕ್ಟೀಸ್ ಮಾಡುವ ಮೂಲಕವೇ. ಹೌದು, ಅವರು ಸರಾಗವಾಗಿ ಓದಲು ಶಕ್ತರಾಗುವ ತನಕ ಗಟ್ಟಿಯಾಗಿ ಪುನಃ ಪುನಃ ಓದುವ ಮೂಲಕವೇ. ನಿಮ್ಮ ಭಾಷೆಯಲ್ಲಿ ಬೈಬಲಿನ ಆಡಿಯೊಕ್ಯಾಸೆಟ್ಟುಗಳು ಲಭ್ಯವಿರುವಲ್ಲಿ, ಓದುಗನು ಓದುತ್ತಿರುವಾಗ ಕೊಡುವ ಅರ್ಥ ಒತ್ತು ಮತ್ತು ಸ್ವರ ಬದಲಾವಣೆಗೆ ಕಿವಿಗೊಡುವುದು, ಮತ್ತು ಹೆಸರುಗಳು ಹಾಗೂ ಅಸಾಮಾನ್ಯವಾದ ಪದಗಳನ್ನು ಉಚ್ಚರಿಸುವ ರೀತಿಗೆ ಗಮನಕೊಡುವುದು ವಿವೇಕಯುತವಾಗಿದೆ. ಪ್ರ್ಯಾಕ್ಟೀಸ್ ಮಾಡುವಲ್ಲಿ, “ಮಹೇರ್ ಶಾಲಾಲ್ ಹಾಷ್ ಬಜ್” ಎಂಬಂತಹ ಹೆಸರುಗಳನ್ನು ಸಹ ಸುಲಭವಾಗಿ ಓದಲು ಸಾಧ್ಯವಿದೆ.—ಯೆಶಾಯ 8:1.
20. ನಾವು ಹೇಗೆ ‘ನಮ್ಮ ಬೋಧನೆಯ ವಿಷಯದಲ್ಲಿ ಎಚ್ಚರ’ರಾಗಿರಲು ಸಾಧ್ಯವಾಗುವುದು?
20 ಯೆಹೋವನ ಜನರೋಪಾದಿ, ಶಿಕ್ಷಕರಾಗಿ ಉಪಯೋಗಿಸಲ್ಪಡಲು ನಮಗೆ ಎಂತಹ ಒಂದು ಸುಯೋಗವಿದೆ! ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರು ಆ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳೋಣ. ‘ನಮ್ಮ ವಿಷಯದಲ್ಲಿಯೂ ನಮ್ಮ ಉಪದೇಶದ [“ಬೋಧನೆಯ,” NW] ವಿಷಯದಲ್ಲಿಯೂ ಎಚ್ಚರ’ವಾಗಿರೋಣ. (1 ತಿಮೊಥೆಯ 4:16) ಚೆನ್ನಾಗಿ ಕಿವಿಗೊಡುವವರಾಗಿರುವ ಮೂಲಕ, ವಿಷಯಗಳನ್ನು ಸರಳವಾಗಿ ತಿಳಿಸುವ ಮೂಲಕ, ಒಳನೋಟದಿಂದ ಪ್ರಶ್ನೆಗಳನ್ನು ಕೇಳುವ ಮೂಲಕ, ಪರಿಣಾಮಕಾರಿಯಾದ ದೃಷ್ಟಾಂತಗಳನ್ನು ಉಪಯೋಗಿಸುವ ಮೂಲಕ, ಮತ್ತು ಕೌಶಲದಿಂದ ವಚನಗಳನ್ನು ಓದುವ ಮೂಲಕ ನಾವು ಉತ್ತಮ ಶಿಕ್ಷಕರಾಗಿರಬಲ್ಲೆವು. ಯೆಹೋವನು ತನ್ನ ಸಂಸ್ಥೆಯ ಮೂಲಕ ಒದಗಿಸುವ ತರಬೇತಿಯಿಂದ ನಾವೆಲ್ಲರೂ ಪ್ರಯೋಜನ ಪಡೆಯುವಂತಾಗಲಿ. ಇದು ನಮಗೆ “ಶಿಕ್ಷಿತರ ನಾಲಿಗೆಯನ್ನು” ಹೊಂದಿರುವಂತೆ ಸಹಾಯಮಾಡಬಲ್ಲದು. (ಯೆಶಾಯ 50:4) ನಮ್ಮ ಶುಶ್ರೂಷೆಗಾಗಿ ಒದಗಿಸಲ್ಪಟ್ಟಿರುವ ಸಾಧನಗಳಲ್ಲಿ ಬ್ರೋಷರುಗಳು, ಆಡಿಯೊಕ್ಯಾಸೆಟ್ಟುಗಳು ಮತ್ತು ವಿಡಿಯೊಕ್ಯಾಸೆಟ್ಟುಗಳು ಒಳಗೂಡಿವೆ. ಅವೆಲ್ಲವನ್ನೂ ಪೂರ್ಣವಾಗಿ ಉಪಯೋಗಿಸುವ ಮೂಲಕ ನಾವು ಒಳನೋಟವನ್ನು ತೋರಿಸಿ, ಮನವೊಪ್ಪಿಸುವಂತಹ ರೀತಿಯಲ್ಲಿ ಕಲಿಸಲು ಕಲಿತುಕೊಳ್ಳಬಲ್ಲೆವು.
ನಿಮಗೆ ಜ್ಞಾಪಕವಿದೆಯೊ?
◻ ಚೆನ್ನಾಗಿ ಕಿವಿಗೊಡುವುದು ನಮ್ಮ ಬೋಧನೆಯಲ್ಲಿ ಹೇಗೆ ಸಹಾಯಮಾಡುವುದು?
◻ ಸರಳವಾಗಿ ಕಲಿಸುವುದರಲ್ಲಿ ನಾವು ಪೌಲನನ್ನು ಮತ್ತು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?
◻ ಇತರರಿಗೆ ಕಲಿಸುವಾಗ ಯಾವ ರೀತಿಯ ಪ್ರಶ್ನೆಗಳನ್ನು ನಾವು ಉಪಯೋಗಿಸಬಹುದು?
◻ ಯಾವ ದೃಷ್ಟಾಂತಗಳು ಅತಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ?
◻ ಸಾರ್ವಜನಿಕ ವಾಚಕರೋಪಾದಿ ನಮ್ಮ ಕೌಶಲವನ್ನು ನಾವು ಹೇಗೆ ಉತ್ತಮಗೊಳಿಸಬಲ್ಲೆವು?
[ಪುಟ 16 ರಲ್ಲಿರುವ ಚಿತ್ರ]
ಒಬ್ಬ ಒಳ್ಳೆಯ ಶಿಕ್ಷಕನು ಒಳನೋಟವನ್ನು ಪಡೆದುಕೊಳ್ಳಲು ಕಿವಿಗೊಡುತ್ತಾನೆ
[ಪುಟ 18 ರಲ್ಲಿರುವ ಚಿತ್ರ]
ಯೇಸು ತನ್ನ ದೃಷ್ಟಾಂತಗಳನ್ನು ದೈನಂದಿನ ಜೀವನದ ವಿಷಯಗಳ ಮೇಲೆ ಆಧಾರಿಸಿದನು