ಯೇಸುವಿನ ಜೀವನ ಮತ್ತು ಶುಶ್ರೂಷೆ
ಇನ್ನೂ ಹೆಚ್ಚು ತಿದ್ದುವ ಬುದ್ಧಿವಾದ
ಕಪೆರ್ನೌಮಿನ ಮನೆಯಲ್ಲಿರುವಾಗ ಯಾರು ದೊಡ್ಡವನೆಂಬ ಅಪೊಸ್ತಲರ ವಿವಾದವಲ್ಲದೆ ಇನ್ನೊಂದು ವಿಷಯವೂ ಚರ್ಚಿಸಲ್ಪಡುತ್ತದೆ. ಈ ಸಂಭವವೂ ಅವರು ಕಪೆರ್ನೌಮಿಗೆ ಬಂದ ಮೇಲೆ ಯೇಸು ವ್ಯಕ್ತಿಪರವಾಗಿ ಇಲ್ಲದಿರುವಾಗ ಸಂಭವಿಸಿದಿರ್ದಬಹುದು. ಅಪೊಸ್ತಲ ಯೋಹಾನನು ವರದಿ ಮಾಡುವುದು: “ಬೋಧಕನೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವುದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅದಕ್ಕೆ ಅಡ್ಡಿ ಮಾಡಿದೆವು.”
ಯೋಹಾನನು ಅಪೊಸ್ತಲರನ್ನು ಅವರು ವಾಸಿ ಮಾಡುವವರ ಪ್ರತ್ಯೇಕವಾದ, ಹಕ್ಕುಳ್ಳ ತಂಡವೆಂಬಂತೆ ಕಾಣುತ್ತಾನೆಂದು ಇದರಿಂದ ವ್ಯಕ್ತವಾಗುತ್ತದೆ. ಆ ಮನುಷ್ಯನು ತಮ್ಮ ಗುಂಪಿನ ಭಾಗವಾಗದೆ ಇರುವುದರಿಂದ ಅವನು ಅದ್ಭುತಕಾರ್ಯಗಳನ್ನು ಅಯೋಗ್ಯವಾಗಿ ಮಾಡುತ್ತಿದ್ದಾನೆಂದು ಯೋಹಾನನ ಅಭಿಪ್ರಾಯ.
ಆದರೆ ಯೇಸು ಬುದ್ಧಿ ಹೇಳುವುದು: “ಅವನಿಗೆ ಅಡ್ಡಿ ಮಾಡಬೇಡಿರಿ. ನನ್ನ ಹೆಸರಿನ ಮೇಲೆ ಮಹತ್ತನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಯಾವನೂ ಇಲ್ಲ. ನಮ್ಮನ್ನು ಎದುರಿಸದವನು ನಮ್ಮ ಪಕ್ಷದವನೇ. ನೀವು ಕ್ರಿಸ್ತನವರೆಂದು ನಿಮಗೆ ಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲ.”
ಈ ಮನುಷ್ಯನು ಶಾರೀರಿಕವಾಗಿ ಯೇಸುವನ್ನು ಅನುಸರಿಸಿ ಯೇಸುವಿನ ಪಕ್ಷದವನಾಗುವ ಅವಶ್ಯವಿರಲಿಲ್ಲ. ಕ್ರೈಸ್ತ ಸಭೆ ಇನ್ನೂ ಸ್ಥಾಪಿಸಲ್ಪಟ್ಟಿರಲ್ಲಿಲ. ಆದುದರಿಂದ ಇವನು ಅವರ ಗುಂಪಿನಲ್ಲಿಲ್ಲದೆ ಇರುವುದು, ಇವನು ಪ್ರತ್ಯೇಕ ಸಭೆಯಾಗಿದ್ದಾನೆಂದು ಅರ್ಥವಾಗುವುದಿಲ್ಲ. ಈ ಮನುಷ್ಯನಿಗೆ ಯೇಸುವಿನಲ್ಲಿ ನಂಬಿಕೆಯಿತ್ತು ಮತ್ತು ಹೀಗೆ, ಅವನು ದೆವ್ವ ಬಿಡಿಸುವುದರಲ್ಲಿ ಸಾಫಲ್ಯ ಪಡೆದನು. ಪ್ರತಿಫಲಕ್ಕೆ ಯೋಗ್ಯನೆಂದು ಯೇಸು ಹೇಳಿದುದಕ್ಕೆ ಸುಸದೃಶವಾದ ವಿಷಯಗಳನ್ನು ಅವನು ಮಾಡಿದನು. ಹೀಗೆ ಮಾಡಿದ ಕಾರಣ, ಅವನಿಗೆ ಪ್ರತಿಫಲ ತಪ್ಪುವುದಿಲ್ಲವೆಂದು ಯೇಸು ಹೇಳುತ್ತಾನೆ.
ಆದರೆ, ಅಪೊಸ್ತಲರ ನಡೆ ನುಡಿಗಳಿಂದಾಗಿ ಆ ಮನುಷ್ಯನು ಮುಗ್ಗರಿಸಿ ಬೀಳುವಲ್ಲಿ ಏನು? ಇದು ತೀರಾ ಗುರುತರ! ಯೇಸು ಗಮನಿಸುವುದು: “ಮತ್ತು ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡಿಯ್ಡಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಸಮುದ್ರದಲ್ಲಿ ಹಾಕಿದರೂ ಅವನಿಗೆ ಲೇಸು.”
ತನ್ನ ಹಿಂಬಾಲಕರು ಕೈ, ಪಾದ ಯಾ ಕಣ್ಣಿನಷ್ಟು ಪ್ರಿಯವಾಗಿದ್ದು ಮುಗ್ಗರಿಸಸಾಧ್ಯವಿರುವ ಯಾವುದೇ ವಿಷಯವನ್ನು ತಮ್ಮ ಜೀವನದಿಂದ ತೊಲಗಿಸಬೇಕೆಂದು ಯೇಸು ಹೇಳುತ್ತಾನೆ. ಈ ಪ್ರಿಯವಾದ ಸಂಗತಿಯನ್ನು ಹಿಡಿದುಕೊಂಡು ನಿತ್ಯನಾಶವನ್ನು ಸೂಚಿಸುವ ಗೆಹೆನ್ನ (ಯೆರೂಸಲೇಮಿನ ಬಳಿ ಒಂದು ಕಸದ ಕೊಪ್ಪೆ)ಕ್ಕೆ ಎಸೆಯಲ್ಪಡುವುದಕ್ಕಿಂತ ಇದು ಇಲ್ಲದವನಾಗಿ ದೇವರ ರಾಜ್ಯವನ್ನು ಸೇರುವುದು ಲೇಸು.
ಯೇಸು ಮತ್ತೂ ಎಚ್ಚರಿಸುವುದು: “ಈ ಚಿಕ್ಕವರಲ್ಲಿ ಒಬ್ಬರನ್ನಾದರೂ ತಾತ್ಸಾರ ಮಾಡಬಾರದು ನೋಡಿರಿ; ಪರಲೋಕದಲ್ಲಿ ಅವರ ದೂತರು ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ.” ಆ ಬಳಿಕ ಅವನು, ಚಿಕ್ಕವರ ಅಮೂಲ್ಯತೆಯನ್ನು, 100 ಕುರಿಗಳಿದ್ದು ಒಂದನ್ನು ಕಳೆದುಕೊಂಡಿದ್ದ ಒಬ್ಬ ಮನುಷ್ಯನ ವಿಷಯ ಹೇಳಿ ಚಿತ್ರಿಸುತ್ತಾನೆ. ಈ ಮನುಷ್ಯನು ಒಂದನ್ನು ಹುಡುಕಲಿಕ್ಕಾಗಿ 99ನ್ನು ಬಿಟ್ಟು ಹೋಗುವನು ಎಂದು ಯೇಸು ಹೇಳುತ್ತಾ, ಅವನು 99ಕ್ಕಿಂತ ಹೆಚ್ಚಾಗಿ ಒಂದರ ಮೇಲೆ ಹೆಚ್ಚು ಸಂತೋಷಪಡುವನೆಂದು ಹೇಳುತ್ತಾನೆ. ಮತ್ತು ಯೇಸು ಅಂತ್ಯಗೊಳಿಸುವುದು: “ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.”
ತಮ್ಮ ಅಪೊಸ್ತಲರು ತಮ್ಮೊಳಗೆ ವಿವಾದ ಮಾಡಿರುವ ಸಂಗತಿಯನ್ನು ಪ್ರಾಯಶಃ ಜ್ಞಾಪಿಸಿಕೊಂಡು ಯೇಸು ಪ್ರೋತ್ಸಾಹಿಸುವುದು: “ನಿಮ್ಮೊಳಗೆ ಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ.” ರುಚಿಸದ ಆಹಾರ ಉಪ್ಪಿನಿಂದಾಗಿ ಹೆಚ್ಚು ರುಚಿಕರವಾಗುತ್ತದೆ. ಹಾಗೆಯೆ ಸಾಂಕೇತಿಕ ಉಪ್ಪು ಒಬ್ಬನ ಮಾತನ್ನು ಹೆಚ್ಚು ಸುಲಭವಾಗಿ ಅಂಗೀಕರಿಸುವಂತೆ ಮಾಡುತ್ತದೆ. ಮತ್ತು ಇಂಥ ಉಪ್ಪುಳ್ಳವರಾಗಿರುವುದು ಸಮಾಧಾನವನ್ನು ಕಾಪಾಡಲು ಸಹಾಯ ಮಾಡುವುದು.
ಆದರೆ ಮಾನವ ಅಪೂರ್ಣತೆಯ ನಿಮಿತ್ತ ಅನೇಕ ಸಲ ಗುರುತರವಾದ ವಿವಾದಗಳೇಳುತ್ತವೆ. ಇವುಗಳನ್ನು ಪರಿಹರಿಸುವ ಮಾರ್ಗದರ್ಶನವನ್ನೂ ಯೇಸು ಕೊಡುತ್ತಾನೆ. “ನಿನ್ನ ಸಹೋದರನು ತಪ್ಪು ಮಾಡಿದರೆ” ಯೇಸು ಹೇಳುವುದು, “ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.” ಅವನು ಕೇಳದೆ ಹೋದರೆ, ಯೇಸು ಸಲಹೆ ನೀಡುವುದು, “ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು.”
ಕೇವಲ ಕೊನೆಯ ಉಪಾಯವಾಗಿ, “ಸಭೆಗೆ”, ಅಂದರೆ, ನ್ಯಾಯ ನಿರ್ಣಯಿಸಶಕ್ತರಾದ ಸಭಾ ಹಿರಿಯರಿಗೆ ಈ ವಿಷಯವನ್ನು ತೆಗೆದುಕೊಂಡು ಹೋಗಬೇಕೆಂದು ಯೇಸು ಹೇಳುತ್ತಾನೆ. ಪಾಪಿಯು ಅವರ ನಿರ್ಣಯವನ್ನು ಅನುಸರಿಸದಿರುವಲ್ಲಿ “ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ [ಅನ್ಯನಂತೆಯೂ ತೆರಿಗೆ ವಸೂಲಿಗಾರನಂತೆಯೂ, NW] ಇರಲಿ” ಎಂದು ಹೇಳಿ ಯೇಸು ಅಂತ್ಯಗೊಳಿಸುತ್ತಾನೆ.
ಇಂಥ ನಿರ್ಣಯವನ್ನು ಮಾಡುವಾಗ, ಮೇಲ್ವಿಚಾರಕರು ಯೆಹೋವನ ವಾಕ್ಯದ ಮಾಹಿತಿಗೆ ಒತ್ತಾಗಿ ಅಂಟಿಕೊಳ್ಳುವುದು ಅಗತ್ಯ. ಹೀಗೆ, ದೋಷಿಯೂ ಶಿಕ್ಷಾಪಾತ್ರನೂ ಆದವನನ್ನು ಅವರು ಕಂಡುಹಿಡಿಯುವಾಗ, ತೀರ್ಪು ‘ಆಗಲೇ ಪರಲೋಕದಲ್ಲಿ ಕಟ್ಟಲ್ಪಟ್ಟಿರುವುದು.’ ಮತ್ತು ಅವರು ಭೂಮಿಯಲ್ಲಿ ‘ಬಿಚ್ಚುವಾಗ’ ಅಂದರೆ ಅವನನ್ನು ನಿರ್ದೋಷಿಯೆಂದು ತಿಳಿಯುವಾಗ ಅದು ‘ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು.’ ಇಂಥ ನ್ಯಾಯ ನಿರ್ಣಾಯಕ ಚರ್ಚೆಗಳಲ್ಲಿ, ಯೇಸು ಹೇಳುವುದು, “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” ಮತ್ತಾಯ 18:6-20; ಮಾರ್ಕ 9:38-50; ಲೂಕ 9:49, 50.
◆ ಯೇಸುವಿನ ದಿನಗಳಲ್ಲಿ ಅವನ ಸಂಗಡ ಹೋಗಬೇಕಾಗುವ ಅವಶ್ಯವಿಲ್ಲದೆ ಇದ್ದದ್ದು ಏಕೆ?
◆ ಚಿಕ್ಕವರನ್ನು ಮುಗ್ಗರಿಸುವ ಸಂಗತಿ ಎಷ್ಟು ಗುರುತರ, ಮತ್ತು ಇಂಥ ಚಿಕ್ಕವರ ಪ್ರಾಮುಖ್ಯತೆಯನ್ನು ಯೇಸು ಹೇಗೆ ಚಿತ್ರಿಸಿದನು?
◆ ಅಪೊಸ್ತಲರಲ್ಲಿ ಉಪ್ಪು ಇರುವಂತೆ ಹೇಳಿದ ಯೇಸುವಿನ ಪ್ರೋತ್ಸಾಹದ ಮಾತುಗಳನ್ನು ಪ್ರಾಯಶಃ ಯಾವುದು ಪ್ರೇರಿಸಿರಬೇಕು?
◆ ‘ಕಟ್ಟುವುದು’ ಮತ್ತು ‘ಬಿಚ್ಚುವುದು’ ಎಂಬ ಪದಗಳ ವೈಶಿಷ್ಟ್ಯವೇನು?