ಯೇಸುವಿನಲ್ಲಿದ್ದ ದೀನತೆ ಕೋಮಲತೆ ನಿಮ್ಮಲ್ಲೂ ಇರಲಿ
“ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು.”—1 ಪೇತ್ರ 2:21.
1. ಯೇಸುವಿನಲ್ಲಿದ್ದ ಗುಣಗಳನ್ನು ನಾವು ಬೆಳೆಸಿಕೊಂಡರೆ ಯೆಹೋವನಿಗೆ ಹೇಗೆ ಆಪ್ತರಾಗುತ್ತೇವೆ?
ನಾವು ಯಾರಲ್ಲಾದರೂ ಒಳ್ಳೇದನ್ನು ನೋಡಿ ಇಷ್ಟಪಟ್ಟರೆ ಅವರ ಹಾಗೆಯೇ ಇರಲು ಪ್ರಯತ್ನಿಸುತ್ತೇವೆ. ಮನುಷ್ಯರಲ್ಲೇ ತುಂಬ ಒಳ್ಳೇ ವ್ಯಕ್ತಿಯೆಂದರೆ ಯೇಸು ಕ್ರಿಸ್ತ. ನಾವು ಅವನ ಹಾಗೆ ಇರಲು ಪ್ರಯತ್ನಿಸಬೇಕು. ಯಾಕೆ? ಯಾಕೆಂದರೆ, “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಯೇಸು ಹೇಳಿದನು. (ಯೋಹಾ. 14:9) ಹೀಗೆ ಹೇಳಲು ಕಾರಣವೇನೆಂದರೆ ಅವನು ಯೆಹೋವ ದೇವರಲ್ಲಿರುವ ಗುಣಗಳನ್ನು ಪೂರ್ಣವಾಗಿ ತೋರಿಸಿದನು. ಹಾಗಾಗಿ ನಾವು ಯೇಸುವನ್ನು ತಿಳಿದುಕೊಂಡರೆ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಆಗುತ್ತದೆ. ಯೇಸುವಿನಲ್ಲಿದ್ದ ಗುಣಗಳನ್ನು ನಾವೂ ಬೆಳೆಸಿಕೊಂಡರೆ ಯೆಹೋವನಿಗೆ ಹೆಚ್ಚು ಆಪ್ತರಾಗುತ್ತೇವೆ. ಇಡೀ ವಿಶ್ವದಲ್ಲೇ ಮಹಾನ್ ವ್ಯಕ್ತಿಯಾಗಿರುವ ಯೆಹೋವನಿಗೆ ಆಪ್ತರಾಗುವುದು ನಿಜಕ್ಕೂ ಒಂದು ದೊಡ್ಡ ಸೌಭಾಗ್ಯ!
2, 3. (ಎ) ಯೇಸುವಿನ ಜೀವನ ಕಥೆಯನ್ನು ದೇವರು ಬೈಬಲಿನಲ್ಲಿ ಏಕೆ ಬರೆಯಿಸಿದ್ದಾನೆ? (ಬಿ) ನಾವೇನು ಮಾಡಬೇಕೆಂದು ದೇವರು ಇಷ್ಟಪಡುತ್ತಾನೆ? (ಸಿ) ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ನಾವು ಏನನ್ನು ತಿಳಿಯಲಿದ್ದೇವೆ?
2 ಯೆಹೋವನು ತನ್ನ ಮಗನ ಜೀವನ ಕಥೆಯನ್ನು ಬೈಬಲಿನಲ್ಲಿ ಬರೆಯಿಸಿದ್ದಾನೆ. ಏಕೆಂದರೆ ನಾವು ಯೇಸುವನ್ನು ಚೆನ್ನಾಗಿ ತಿಳಿದುಕೊಂಡು ಅವನ ಹಾಗೆಯೇ ಇರಬೇಕು ಅನ್ನೋದು ದೇವರ ಇಷ್ಟ. (1 ಪೇತ್ರ 2:21 ಓದಿ.) ಯೇಸು ನಮಗಾಗಿ ಇಟ್ಟಿರುವ ಮಾದರಿಯನ್ನು ಬೈಬಲಿನಲ್ಲಿ ‘ಹೆಜ್ಜೆಜಾಡು’ ಎಂದು ಹೇಳಲಾಗಿದೆ. ಯಾಕೆ? ನಾವು ಯೇಸು ಇಟ್ಟಿರುವ ಹೆಜ್ಜೆಯಲ್ಲೇ ಹೆಜ್ಜೆಯಿಡಬೇಕೆಂದು ಅಂದರೆ ಎಲ್ಲ ವಿಷಯಗಳಲ್ಲಿ ಯೇಸುವನ್ನು ಅನುಸರಿಸಬೇಕೆಂದು ಯೆಹೋವನು ಬಯಸುತ್ತಾನೆ. ಯೇಸುವಿನಲ್ಲಿ ಪಾಪ ಇರಲಿಲ್ಲ, ಆದರೆ ನಾವು ಪಾಪಿಗಳು. ಹಾಗಾಗಿ ನಾವು ಸಂಪೂರ್ಣವಾಗಿ ಯೇಸುವಿನಂತೆಯೇ ಇರಬೇಕೆಂದು ಯೆಹೋವನು ಹೇಳುವುದಿಲ್ಲ. ಬದಲಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನಾವು ಯೇಸುವಿನಂತಿರಲು ಪ್ರಯತ್ನಿಸಬೇಕು.
3 ಯೇಸುವಿನಲ್ಲಿದ್ದ ಗುಣಗಳಲ್ಲಿ ನಾಲ್ಕನ್ನು ನಾವು ಚರ್ಚಿಸಲಿದ್ದೇವೆ. ಈ ಲೇಖನದಲ್ಲಿ ದೀನತೆ ಮತ್ತು ಕೋಮಲತೆ ಬಗ್ಗೆ ಚರ್ಚಿಸುತ್ತೇವೆ. ಧೈರ್ಯ ಮತ್ತು ವಿವೇಚನೆ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯುತ್ತೇವೆ. ಪ್ರತಿಯೊಂದು ಗುಣದ ಅರ್ಥ ಏನು, ಯೇಸು ಆ ಗುಣವನ್ನು ಹೇಗೆ ತೋರಿಸಿದನು, ನಾವು ಹೇಗೆ ಆ ಗುಣವನ್ನು ತೋರಿಸಬಹುದು ಎಂದು ತಿಳಿಯೋಣ.
ಯೇಸುವಿನಲ್ಲಿದ್ದ ದೀನತೆ
4. ದೀನತೆ ಅಂದರೇನು? ಅದನ್ನು ತೋರಿಸುವುದು ಹೇಗೆ?
4 ದೀನತೆ ಅಂದರೇನು? ಅಹಂಕಾರ ಇರುವ ಜನರ ಪ್ರಕಾರ ದೀನತೆ ಅಂದರೆ ಒಂದು ಬಲಹೀನತೆ, ನಮಗೆ ನಮ್ಮ ಮೇಲೆ ನಂಬಿಕೆ ಇಲ್ಲದಿರುವುದು. ಆದರೆ ಅದು ನಿಜವಲ್ಲ. ಏಕೆಂದರೆ ನಾವು ದೀನರಾಗಿರಬೇಕಾದರೆ ನಮ್ಮಲ್ಲಿ ಗಟ್ಟಿಮನಸ್ಸು ಮತ್ತು ಧೈರ್ಯ ಇರಬೇಕು. ಅಹಂಕಾರ, ದರ್ಪಕ್ಕೆ ವಿರುದ್ಧವಾದ ಗುಣವೇ ದೀನತೆ. ಬೈಬಲಿನಲ್ಲಿ ದೀನತೆಯನ್ನು ‘ದೀನಮನಸ್ಸು’ ಎಂದು ಸಹ ಹೇಳಲಾಗಿದೆ. (ಫಿಲಿ. 2:3) ದೀನತೆ ಇರಬೇಕಾದರೆ ನಮಗೆ ನಮ್ಮ ಬಗ್ಗೆ ಸರಿಯಾದ ಅಭಿಪ್ರಾಯ ಇರಬೇಕು. ಒಂದು ಬೈಬಲ್ ಶಬ್ದಕೋಶದಲ್ಲಿ ದೀನತೆ ಬಗ್ಗೆ ಹೀಗೆ ಹೇಳಲಾಗಿದೆ: “ದೇವರ ಮುಂದೆ ನಾವೆಷ್ಟು ಅಲ್ಪರು ಎಂದು ತಿಳಿದಿರುವುದೇ ದೀನತೆಯಾಗಿದೆ.” ದೀನತೆಯಿದ್ದರೆ ‘ನಾನು ಮೇಲು ನೀನು ಕೀಳು’ ಎಂಬ ಭಾವನೆ ನಮ್ಮಲ್ಲಿರುವುದಿಲ್ಲ. (ರೋಮ. 12:3) ಅಪರಿಪೂರ್ಣರಾದ ನಾವು ದೀನತೆಯನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಯೆಹೋವನು ಎಷ್ಟು ಉನ್ನತನು, ಶ್ರೇಷ್ಠನು ಎಂದು ಆಲೋಚಿಸಿದರೆ ಮತ್ತು ಯೇಸುವಿನಂತೆ ಇರಲು ನಾವು ಪ್ರಯತ್ನಿಸಿದರೆ ದೀನರಾಗಿರಲು ಸಾಧ್ಯ.
5, 6. (ಎ) ಪ್ರಧಾನ ದೇವದೂತನಾದ ಮೀಕಾಯೇಲ ಯಾರು? (ಬಿ) ಮೀಕಾಯೇಲನಲ್ಲಿ ದೀನತೆ ಇತ್ತೆಂದು ಹೇಗೆ ಗೊತ್ತಾಗುತ್ತದೆ?
5 ಯೇಸು ದೀನತೆಯನ್ನು ಹೇಗೆ ತೋರಿಸಿದನು? ದೇವರ ಮಗನಾಗಿ ಆತನು ಯಾವಾಗಲೂ ದೀನನಾಗಿದ್ದನು. ಬಲಿಷ್ಠ ದೇವದೂತನಾಗಿ ಸ್ವರ್ಗದಲ್ಲಿದ್ದಾಗಲೂ, ಪರಿಪೂರ್ಣ ಮನುಷ್ಯನಾಗಿ ಭೂಮಿಯಲ್ಲಿದ್ದಾಗಲೂ ದೀನನಾಗಿದ್ದನು. ಕೆಲವು ಉದಾಹರಣೆಗಳನ್ನು ನೋಡೋಣ.
6 ಯೇಸುವಿನ ಮನೋಭಾವ. ಯೇಸು ಭೂಮಿಗೆ ಬರುವುದಕ್ಕಿಂತ ಮುಂಚೆ ನಡೆದ ಒಂದು ಘಟನೆ ಯೂದ ಪುಸ್ತಕದಲ್ಲಿದೆ. (ಯೂದ 9 ಓದಿ.) ಪ್ರಧಾನ ದೇವದೂತನಾದ ಮೀಕಾಯೇಲನಿಗೆ ಅಂದರೆ ಯೇಸುವಿಗೆ “ಪಿಶಾಚನೊಂದಿಗೆ ಭಿನ್ನಾಭಿಪ್ರಾಯದ ಕಾರಣ ವಾಗ್ವಾದ” ಆಯಿತು. ಅದು “ಮೋಶೆಯ ದೇಹದ ವಿಷಯದಲ್ಲಿ.” ಮೋಶೆ ಸತ್ತ ನಂತರ ಅವನ ಶವವನ್ನು ಯೆಹೋವ ದೇವರು ಯಾರಿಗೂ ತಿಳಿಯದ ಸ್ಥಳದಲ್ಲಿ ಸಮಾಧಿ ಮಾಡಿದನು. (ಧರ್ಮೋ. 34:5, 6) ಸೈತಾನನು ಮೋಶೆಯ ದೇಹವನ್ನು ಬಳಸಿಕೊಂಡು ಇಸ್ರಾಯೇಲ್ಯರಲ್ಲಿ ಸುಳ್ಳು ಆರಾಧನೆಯ ವಿಷಬೀಜ ಬಿತ್ತಲು ಪ್ರಯತ್ನಿಸಿರಬೇಕು. ಸೈತಾನನು ಆ ರೀತಿ ಮಾಡದಂತೆ ಮೀಕಾಯೇಲನು ಧೈರ್ಯದಿಂದ ತಡೆದನು. ಯೂದ ಪುಸ್ತಕದ 9ನೇ ವಚನದಲ್ಲಿರುವ “ಭಿನ್ನಾಭಿಪ್ರಾಯ,” “ವಾಗ್ವಾದ” ಎಂಬುದರ ಗ್ರೀಕ್ ಪದಗಳನ್ನು “ನ್ಯಾಯಾಲಯದಲ್ಲಿ ಆಗುವ ವಾದವಿವಾದಕ್ಕೂ” ಬಳಸಲಾಗುತ್ತದೆ; ಇದರರ್ಥ ‘ಮೋಶೆಯ ದೇಹವನ್ನು ತೆಗೆದುಕೊಳ್ಳಲು ನಿನಗೆ ಯಾವ ಹಕ್ಕಿದೆ?’ ಎಂದು ಯೇಸು ಸೈತಾನನನ್ನು ಪ್ರಶ್ನಿಸಿರಬಹುದು ಎಂದು ಒಂದು ಪುಸ್ತಕ ಹೇಳುತ್ತದೆ. ಹಾಗಿದ್ದರೂ ಸೈತಾನನನ್ನು ತೀರ್ಪುಮಾಡುವ ಹಕ್ಕು ತನಗಿಲ್ಲ, ವಿಶ್ವದ ಪರಮಾಧಿಕಾರಿಯಾಗಿರುವ ಯೆಹೋವನಿಗೆ ಮಾತ್ರ ಆ ಅಧಿಕಾರ ಇದೆ ಎಂದು ಮೀಕಾಯೇಲನು ತಿಳಿದಿದ್ದನು. ಹಾಗಾಗಿ ಆ ವಿಷಯವನ್ನು ಯೆಹೋವನ ಕೈಗೆ ಒಪ್ಪಿಸಿದನು. ನಿಜಕ್ಕೂ ಯೇಸು ತುಂಬ ದೀನನಾಗಿದ್ದನು!
7. ಯೇಸು ಮಾತಿನಲ್ಲೂ ಕಾರ್ಯದಲ್ಲೂ ಹೇಗೆ ದೀನತೆ ತೋರಿಸಿದನು?
7 ಭೂಮಿಯಲ್ಲಿದ್ದಾಗಲೂ ಯೇಸು ದೀನನಾಗಿದ್ದನು. ಅವನ ಮಾತುಗಳು, ಕೆಲಸಗಳು ಅದನ್ನು ತೋರಿಸುತ್ತವೆ. ಯೇಸುವಿನ ಮಾತು. ಎಲ್ಲರೂ ತನ್ನನ್ನು ಹಾಡಿಹೊಗಳಬೇಕು ಎಂದು ಯೇಸು ಯಾವತ್ತೂ ಬಯಸಲಿಲ್ಲ. ಎಲ್ಲ ಮಹಿಮೆ ಯೆಹೋವನಿಗೇ ಹೋಗಬೇಕು ಅಂತ ಬಯಸಿದನು. (ಮಾರ್ಕ 10:17, 18; ಯೋಹಾ. 7:16) ಶಿಷ್ಯರೊಂದಿಗೆ ಅವನು ಮಾತಾಡಿದ ರೀತಿಯಲ್ಲೂ ದೀನತೆ ನೋಡಬಹುದು. ‘ಅವನಷ್ಟು ತಿಳಿವಳಿಕೆ ನಮಗಿಲ್ಲ,’ ‘ನಾವು ಅವನಷ್ಟು ಶ್ರೇಷ್ಠರಲ್ಲ’ ಎಂಬ ಭಾವನೆಯನ್ನು ಶಿಷ್ಯರಲ್ಲಿ ಹುಟ್ಟಿಸಲಿಲ್ಲ. ಬದಲಿಗೆ ಅವರನ್ನು ಗೌರವಿಸಿದನು, ಅವರಲ್ಲಿದ್ದ ಒಳ್ಳೇ ಗುಣಗಳನ್ನು ನೋಡಿ ಹೊಗಳಿದನು. ತನಗೆ ಅವರಲ್ಲಿ ನಂಬಿಕೆಯಿದೆಯೆಂದು ಮಾತುಗಳಲ್ಲಿ ತೋರಿಸಿದನು. (ಲೂಕ 22:31, 32; ಯೋಹಾ. 1:47) ಕಾರ್ಯಗಳು. ಯೇಸು ಸಿರಿ ಸಂಪತ್ತನ್ನು ಕೂಡಿಸಿಕೊಳ್ಳಲಿಲ್ಲ, ಬದಲಿಗೆ ತುಂಬ ಸರಳ ಜೀವನ ನಡೆಸಿದನು. (ಮತ್ತಾ. 8:20) ಬೇರೆ ಜನರು ಮಾಡಲು ಇಷ್ಟಪಡದ ಕೀಳಾದ ಕೆಲಸವನ್ನೂ ಯೇಸು ಪೂರ್ಣ ಮನಸ್ಸಿನಿಂದ ಮಾಡಿದನು. (ಯೋಹಾ. 13:3-15) ದೇವರ ಮಾತಿನಂತೆ ನಡೆಯುವ ಮೂಲಕ ದೀನತೆ ತೋರಿಸಿದನು. ಹೀಗೆ ಎಲ್ಲರಿಗೂ ಮಾದರಿಯಿಟ್ಟನು. (ಫಿಲಿಪ್ಪಿ 2:5-8 ಓದಿ.) ಸಾಮಾನ್ಯವಾಗಿ, ಅಹಂಕಾರಿಗಳು ಬೇರೆಯವರ ಮಾತನ್ನು ಕೇಳುವುದಿಲ್ಲ. ಯೇಸುವಾದರೋ ಯೆಹೋವನು ಹೇಳಿದ್ದೆಲ್ಲವನ್ನು ಮಾಡಿದನು. ‘ಸಾಯಲೂ’ ತಯಾರಾದನು. ಯೇಸು ‘ದೀನಹೃದಯದವನು’ ಎಂಬ ವಿಷಯದಲ್ಲಿ ಸ್ವಲ್ಪವೂ ಸಂಶಯವಿಲ್ಲ.—ಮತ್ತಾ. 11:29.
ಯೇಸುವಿನಂತೆ ದೀನತೆ ತೋರಿಸಿ
8, 9. ದೀನತೆ ಇದ್ದರೆ ನಾವು ಏನು ಮಾಡುತ್ತೇವೆ?
8 ಯೇಸುವಿನಂತೆ ನಾವು ಹೇಗೆ ದೀನತೆ ತೋರಿಸಬಹುದು? ನಮ್ಮ ಮನೋಭಾವ. ನಮ್ಮಲ್ಲಿ ದೀನತೆ ಇದ್ದರೆ ನಮಗೆ ಏನು ಮಾಡಲು ಅಧಿಕಾರ ಇದೆ, ಏನು ಮಾಡಲು ಅಧಿಕಾರ ಇಲ್ಲ ಎನ್ನುವುದನ್ನು ಮನಸ್ಸಿನಲ್ಲಿಡುತ್ತೇವೆ. ಉದಾಹರಣೆಗೆ, ಬೇರೆಯವರ ಬಗ್ಗೆ ತೀರ್ಪು ಮಾಡುವ ಹಕ್ಕು ನಮಗಿಲ್ಲ. ಹಾಗಾಗಿ ಅವರು ಮಾಡಿದ್ದು ತಪ್ಪು, ಕೆಟ್ಟ ಉದ್ದೇಶದಿಂದ ಮಾಡಿದ್ದಾರೆ ಎಂದು ಕೂಡಲೆ ನಿರ್ಣಯಿಸುವುದಿಲ್ಲ. (ಲೂಕ 6:37; ಯಾಕೋ. 4:12) ದೀನತೆಯಿದ್ದರೆ ನಾವು ‘ಅತಿ ನೀತಿವಂತರಾಗಿರುವುದಿಲ್ಲ.’ ಅಂದರೆ ನಮಗಿರುವ ಯಾವುದಾದರೂ ಸುಯೋಗ, ಸಾಮರ್ಥ್ಯ ಇತರರಿಗೆ ಇಲ್ಲದಿದ್ದರೆ ಅವರಿಗಿಂತ ನಾವು ಶ್ರೇಷ್ಠರು ಎಂದು ನೆನಸುವುದಿಲ್ಲ. (ಪ್ರಸಂ. 7:16) ಸಭಾ ಹಿರಿಯರಲ್ಲಿ ದೀನತೆ ಇದ್ದರೆ ಸಭೆಯಲ್ಲಿರುವ ಬೇರೆಯವರಿಗಿಂತ ತಾವು ಶ್ರೇಷ್ಠರು ಎಂದು ಭಾವಿಸುವುದಿಲ್ಲ. ಬದಲಿಗೆ ‘ಇತರರನ್ನು ತಮಗಿಂತ ಶ್ರೇಷ್ಠರೆಂದು’ ಎಣಿಸಿ ಅವರನ್ನು ಪ್ರೀತಿಯಿಂದ ಪರಿಪಾಲಿಸುತ್ತಾರೆ.—ಫಿಲಿ. 2:3; ಲೂಕ 9:48.
9 ಸಹೋದರ ಡಬ್ಲ್ಯೂ. ಜೆ. ಥಾರ್ನ್ರವರು ದೀನತೆ ತೋರಿಸುವುದರಲ್ಲಿ ಒಳ್ಳೇ ಉದಾಹರಣೆ. 1894ರಿಂದ ಅನೇಕ ವರ್ಷಗಳ ವರೆಗೆ ಅವರು ಸಂಚರಣ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು. ಆದರೆ ನಂತರ ಅವರಿಗೆ ನ್ಯೂ ಯಾರ್ಕ್ನ ಬೆತೆಲಿನಲ್ಲಿ ಕೋಳಿಗಳನ್ನು ಸಾಕುವ ಕೆಲಸ ಕೊಡಲಾಯಿತು. ‘ಈ ಕೆಲಸ ನಾನು ಮಾಡೋದಾ? ಬೇರೆ ಯಾವುದಾದರೂ ದೊಡ್ಡ ಕೆಲಸ ಕೊಡಬೇಕಿತ್ತು ನನಗೆ’ ಎಂದು ಯಾವತ್ತಾದರೂ ಸಹೋದರ ಥಾರ್ನ್ಗೆ ಅನಿಸಿದರೆ ಅವರು ಏನು ಮಾಡುತ್ತಿದ್ದರು ಗೊತ್ತಾ? ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿದ್ದರಂತೆ: “ನೀನು ಧೂಳಿನ ಒಂದು ಕಣ ಅಷ್ಟೆ, ಅಹಂಕಾರಪಡಲು ಅಂಥದ್ದೇನಿದೆ ನಿನ್ನಲ್ಲಿ?” (ಯೆಶಾಯ 40:12-15 ಓದಿ.) ಎಷ್ಟೊಂದು ದೀನತೆ ಅವರಲ್ಲಿತ್ತು ಅಲ್ಲವೆ?
10. ನಮ್ಮ ಮಾತಿನಲ್ಲಿ ಮತ್ತು ಕಾರ್ಯದಲ್ಲಿ ದೀನತೆಯನ್ನು ತೋರಿಸುವುದು ಹೇಗೆ?
10 ನಮ್ಮ ಮಾತು. ನಾವು ಮಾತಾಡುವ ರೀತಿಯಲ್ಲೇ ಗೊತ್ತಾಗುತ್ತದೆ ನಮ್ಮಲ್ಲಿ ದೀನತೆ ಇದೆಯಾ ಇಲ್ಲವಾ ಅಂತ. (ಲೂಕ 6:45) ನಮ್ಮಲ್ಲಿ ದೀನತೆಯಿದ್ದರೆ ಇತರರೊಂದಿಗೆ ಮಾತಾಡುವಾಗ ನಮಗಿರುವ ಸುಯೋಗಗಳ ಬಗ್ಗೆ, ನಾವು ಮಾಡಿದ ಕೆಲಸಗಳ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. (ಜ್ಞಾನೋ. 27:2) ಬದಲಿಗೆ, ನಮ್ಮ ಸಹೋದರ-ಸಹೋದರಿಯರು ಮಾಡಿರುವ ಒಳ್ಳೇ ವಿಷಯಗಳ ಬಗ್ಗೆ ಮಾತಾಡಿ ಅವರನ್ನು ಶ್ಲಾಘಿಸುತ್ತೇವೆ. ಅವರ ಒಳ್ಳೇ ಗುಣಗಳನ್ನು ಸಾಮರ್ಥ್ಯಗಳನ್ನು ಮೆಚ್ಚುತ್ತೇವೆ. (ಜ್ಞಾನೋ. 15:23) ನಮ್ಮ ಕಾರ್ಯಗಳು. ದೀನರಾಗಿರುವ ಕ್ರೈಸ್ತರು ಲೋಕದಲ್ಲಿ ಹೆಸರು ಗಳಿಸಲು ಶ್ರಮಿಸುವುದಿಲ್ಲ. ಯೇಸುವಿನಂತೆ ಸರಳ ಜೀವನ ನಡೆಸುತ್ತಾರೆ. ಸಾಧಾರಣ ಉದ್ಯೋಗ ಮಾಡಲು ಹಿಂಜರಿಯುವುದಿಲ್ಲ. ಆಗ ಅವರಿಗೆ ಯೆಹೋವನ ಸೇವೆಯನ್ನು ಆದಷ್ಟು ಹೆಚ್ಚು ಮಾಡಲಿಕ್ಕಾಗುತ್ತದೆ. (1 ತಿಮೊ. 6:6, 8) ಎಲ್ಲದ್ದಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ದೀನತೆ ಇದ್ದರೆ ಸಭೆಯಲ್ಲಿ ‘ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗುತ್ತೇವೆ’ ಮತ್ತು ಯೆಹೋವನ ಸಂಘಟನೆ ನೀಡುವ ಸೂಚನೆಗಳನ್ನು ಕೇಳಿ ಅದರ ಪ್ರಕಾರ ನಡೆಯುತ್ತೇವೆ.—ಇಬ್ರಿ. 13:17.
ಯೇಸುವಿನ ಕೋಮಲತೆ
11. ಕೋಮಲತೆ ಅಂದರೇನು?
11 ಕೋಮಲತೆ ಅಂದರೇನು? ಕೋಮಲತೆ ಅಂದರೆ ಮೃದುಭಾವನೆಯಿಂದ ತೋರಿಸುವ ಕಾಳಜಿ. ಕೋಮಲತೆಯು ಪ್ರೀತಿ ತೋರಿಸುವ ಒಂದು ವಿಧವಾಗಿದೆ. ಅನುಕಂಪ, ಕರುಣೆಯಂಥದ್ದೇ ಗುಣ ಇದು. ಬೈಬಲಿನಲ್ಲಿ “ಕೋಮಲ ಕರುಣೆ,” “ಕೋಮಲ ಸಹಾನುಭೂತಿ,” “ಕೋಮಲ ಮಮತೆ” ಎಂಬ ಪದಗಳಿವೆ. (2 ಕೊರಿಂ. 1:3; ಎಫೆ. 4:32; ಫಿಲಿ. 1:8) ಬೈಬಲ್ ಬಗ್ಗೆ ಸಂಶೋಧಿಸಿ ಬರೆದ ಒಂದು ಪುಸ್ತಕದಲ್ಲಿ ನಿಜ ಕೋಮಲತೆ ಎಂದರೇನು ಎಂದು ಹೀಗೆ ತಿಳಿಸಲಾಗಿದೆ: ‘ಇನ್ನೊಬ್ಬರ ಸ್ಥಿತಿ ನೋಡಿ “ಅಯ್ಯೋ ಪಾಪ” ಅಂತ ಹೇಳುವುದು ಮಾತ್ರ ಕೋಮಲತೆ ಅಲ್ಲ, ಅವರ ಕಷ್ಟದಲ್ಲಿ ಭಾಗಿಯಾಗಿ ಅವರ ಪರಿಸ್ಥಿತಿ ಸುಧಾರಿಸಲು ಏನಾದರೂ ಮಾಡುವುದಾಗಿದೆ. ಕೋಮಲತೆ ಇರುವವರು ಕಷ್ಟದಲ್ಲಿರುವವರ ಜೀವನದಲ್ಲಿ ಸಂತೋಷವನ್ನು ತರಲು ಹಾತೊರೆಯುತ್ತಾರೆ.’
12. (ಎ) ಯೇಸುವಿಗೆ ಜನರ ಕಡೆಗೆ ಕೋಮಲ ಭಾವನೆಯಿತ್ತೆಂದು ಹೇಗೆ ಗೊತ್ತಾಗುತ್ತದೆ? (ಬಿ) ಕೋಮಲ ಭಾವನೆಯನ್ನು ಯೇಸು ಕಾರ್ಯದಲ್ಲಿ ಹೇಗೆ ತೋರಿಸಿದನು?
12 ಯೇಸು ಹೇಗೆ ಕೋಮಲತೆ ತೋರಿಸಿದನು? ಯೇಸುವಿನ ಭಾವನೆ ಮತ್ತು ಕಾರ್ಯಗಳು. ಜನರ ಬಗ್ಗೆ ಅವನ ಮನಸ್ಸಿನಲ್ಲಿ ಕೋಮಲ ಭಾವನೆ ಇತ್ತು. ಉದಾಹರಣೆಗೆ, ಲಾಜರನು ಸತ್ತಾಗ ಮರಿಯಳು ಮತ್ತು ಜನರು ಅಳುವುದನ್ನು ನೋಡಿ ಯೇಸು ಕೂಡ ಅತ್ತನು. (ಯೋಹಾನ 11:32-35 ಓದಿ.) ಯೇಸು ಕೋಮಲತೆಯನ್ನು ಕಾರ್ಯದಲ್ಲೂ ತೋರಿಸಿದನು. ಹೇಗೆ? ಈ ಹಿಂದೆ ಅವನು ಹೇಗೆ ಅನುಕಂಪದಿಂದ ವಿಧವೆಯ ಮಗನನ್ನು ಬದುಕಿಸಿದನೋ ಅದೇ ಅನುಕಂಪದಿಂದ ಲಾಜರನನ್ನೂ ಪುನರುತ್ಥಾನಗೊಳಿಸಿದನು. (ಲೂಕ 7:11-15; ಯೋಹಾ. 11:38-44) ಇದರಿಂದಾಗಿ ಲಾಜರನಿಗೆ ಒಂದು ಹೊಸ ನಿರೀಕ್ಷೆ ಅಂದರೆ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕಿರಬಹುದು. ಒಮ್ಮೆ ಯೇಸು ಜನರ ಗುಂಪನ್ನು ನೋಡಿ ‘ಕನಿಕರಪಟ್ಟನು’ ಅಂದರೆ ಮೂಲ ಭಾಷೆಗನುಸಾರ ಅವನಲ್ಲಿ “ಕೋಮಲ ಮಮತೆ” ಉಂಟಾಯಿತು. ಹಾಗಾಗಿ ಆ ಜನರಿಗೆ ‘ಅನೇಕ ವಿಷಯಗಳನ್ನು ಬೋಧಿಸಿದನು.’ (ಮಾರ್ಕ 6:34) ಆ ಬೋಧನೆಯ ಪ್ರಕಾರ ನಡೆದವರ ಜೀವನವೇ ಬದಲಾಯಿತು. ಯೇಸುವಿನ ಕೋಮಲತೆ ಕೇವಲ ಭಾವನೆ ಮಾತ್ರ ಆಗಿರಲಿಲ್ಲ, ಕಾರ್ಯದಲ್ಲೂ ಇತ್ತು. ಹಾಗಾಗಿ ಜನರಿಗೆ ಸಹಾಯ ಮಾಡಿದನು.—ಮತ್ತಾ. 15:32-38; 20:29-34; ಮಾರ್ಕ 1:40-42.
13. ಯೇಸು ಜನರೊಂದಿಗೆ ಮಾತಾಡುವಾಗ ಕೋಮಲತೆಯನ್ನು ಹೇಗೆ ತೋರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)
13 ಯೇಸುವಿನ ಕೋಮಲ ಮಾತುಗಳು. ಯೇಸುವಿನಲ್ಲಿ ಕೋಮಲತೆ ಇದ್ದದ್ದರಿಂದ ಅವನು ಇತರರೊಂದಿಗೆ, ಅದರಲ್ಲೂ ಅನ್ಯಾಯ, ಒತ್ತಡದಿಂದ ಕುಗ್ಗಿಹೋದವರೊಂದಿಗೆ ಕೋಮಲವಾಗಿ ಮಾತಾಡಿದನು. ಮತ್ತಾಯನು ಯೆಶಾಯನ ಪ್ರವಾದನೆಯಲ್ಲಿರುವ ಮಾತುಗಳನ್ನು ಉಪಯೋಗಿಸುತ್ತಾ ಯೇಸುವಿನಲ್ಲಿದ್ದ ಗುಣವನ್ನು ಹೀಗೆ ವರ್ಣಿಸಿದನು: “[ಅವನು] ಜಜ್ಜಿಹೋದ ದಂಟನ್ನು ಮುರಿದುಹಾಕುವುದಿಲ್ಲ ಮತ್ತು ಆರಿಹೋಗುತ್ತಿರುವ ಬತ್ತಿಯನ್ನು ನಂದಿಸುವುದಿಲ್ಲ.” (ಮತ್ತಾ. 12:20; ಯೆಶಾ. 42:3) ಇದರ ಅರ್ಥವೇನು? ಯೇಸು ಜನರನ್ನು ಕೆಟ್ಟದಾಗಿ, ಕೀಳಾಗಿ ಉಪಚರಿಸಲಿಲ್ಲ. ಅವರಿಗೆ ಚೈತನ್ಯ ಸಿಗುವಂಥ ರೀತಿಯಲ್ಲಿ ಮಾತಾಡಿದನು. ‘ಮನಮುರಿದವರಿಗೆ’ ನಿರೀಕ್ಷೆಯ ಮಾತುಗಳನ್ನು ಹೇಳಿ ಧೈರ್ಯತುಂಬಿದನು. (ಯೆಶಾ. 61:1) ‘ಕಷ್ಟಪಡುತ್ತಿರುವವರಿಗೆ, ಹೊರೆಹೊತ್ತಿರುವವರಿಗೆ’ ತನ್ನ ಬಳಿ ಬಂದು “ಚೈತನ್ಯ” ಪಡೆಯುವಂತೆ ಹೇಳಿದನು. (ಮತ್ತಾ. 11:28-30) ಅಷ್ಟಲ್ಲದೆ ಯೆಹೋವನು ತನ್ನ ಒಬ್ಬೊಬ್ಬ ಆರಾಧಕನಿಗೂ ಕೋಮಲತೆ ತೋರಿಸುತ್ತಾನೆ, ಲೋಕದ ಪ್ರಕಾರ ‘ಚಿಕ್ಕವರಾಗಿರುವ’ ಅಂದರೆ ಸ್ವಲ್ಪವೂ ಪ್ರಮುಖರಲ್ಲದ ವ್ಯಕ್ತಿಗಳ ಬಗ್ಗೆ ಸಹ ಕೋಮಲತೆ ತೋರಿಸುತ್ತಾನೆ ಎಂದು ಯೇಸು ಭರವಸೆ ತುಂಬಿದನು.—ಮತ್ತಾ. 18:12-14; ಲೂಕ 12:6, 7.
ಯೇಸುವಿನಂತೆ ಕೋಮಲತೆ ತೋರಿಸಿ
14. ಬೇರೆಯವರ ಕಡೆಗೆ ಕೋಮಲ ಭಾವನೆ ಬೆಳೆಸಿಕೊಳ್ಳುವುದು ಹೇಗೆ?
14 ನಮ್ಮ ಕೋಮಲ ಭಾವನೆ. ನಾವು “ಸಹಾನುಭೂತಿಯ ಕೋಮಲ ಮಮತೆ” ತೋರಿಸಬೇಕೆಂದು ಬೈಬಲ್ ಹೇಳುತ್ತದೆ. ಆ ಗುಣ ತನ್ನಿಂತಾನೆ ಬರುವುದಿಲ್ಲ. ಅದನ್ನು ತೋರಿಸಲು ಕಲಿಯಬೇಕು. ‘ನೂತನ ವ್ಯಕ್ತಿತ್ವದಲ್ಲಿ’ ಕೋಮಲ ಮಮತೆ ಸಹ ಸೇರಿದೆ. ಹಾಗಾಗಿ ನಾವದನ್ನು ಬೆಳೆಸಿಕೊಳ್ಳಲೇಬೇಕು. (ಕೊಲೊಸ್ಸೆ 3:9, 10, 12 ಓದಿ.) ನಾವು ಕೋಮಲ ಭಾವನೆಯನ್ನು ಬೆಳೆಸಿಕೊಳ್ಳುವುದು ಹೇಗೆ? ಬೈಬಲ್ ಹೇಳುವಂತೆ ‘ವಿಶಾಲ ಹೃದಯದವರಾಗಿ’ ಇರುವ ಮೂಲಕ. (2 ಕೊರಿಂ. 6:11-13) ಯಾರಾದರೂ ತಮ್ಮ ಭಾವನೆಗಳನ್ನು, ಚಿಂತೆಗಳನ್ನು ತೋಡಿಕೊಳ್ಳುವಾಗ ಗಮನಕೊಟ್ಟು ಕೇಳುವ ಮೂಲಕ. (ಯಾಕೋ. 1:19) ನಮ್ಮನ್ನೇ ಆ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಳ್ಳುವ ಮೂಲಕ. ಉದಾಹರಣೆಗೆ, ‘ನಾನಾಗಿದ್ದರೆ ಏನು ಮಾಡುತ್ತಿದ್ದೆ? ನನಗೆ ಯಾವ ರೀತಿ ಸಹಾಯ ಬೇಕಾಗುತ್ತಿತ್ತು?’ ಎಂದು ಪ್ರಶ್ನಿಸಿಕೊಳ್ಳಬಹುದು.—1 ಪೇತ್ರ 3:8.
15. ಕಷ್ಟ, ದುಃಖದಲ್ಲಿರುವವರಿಗೆ ನಾವು ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡಬಹುದು?
15 ನಮ್ಮ ಕೋಮಲ ಕಾರ್ಯಗಳು. ನಮ್ಮಲ್ಲಿ ಕೋಮಲತೆ ಇರುವಲ್ಲಿ ಎಲ್ಲರಿಗೆ ಅದರಲ್ಲೂ ಕಷ್ಟ, ದುಃಖದಲ್ಲಿರುವವರಿಗೆ ಸಹಾಯಮಾಡಲು ಮುಂದಾಗುತ್ತೇವೆ. ಯಾವ ರೀತಿಯಲ್ಲಿ ಸಹಾಯ ಮಾಡಬಹುದು? “ಅಳುವವರೊಂದಿಗೆ ಅಳಿರಿ” ಎಂದು ರೋಮನ್ನರಿಗೆ 12:15ರಲ್ಲಿ ಹೇಳಲಾಗಿದೆ. ಹೆಚ್ಚಿನ ಪರಿಸ್ಥಿತಿಗಳಲ್ಲಿ ಜನರಿಗೆ ನಿಜವಾಗಿ ಬೇಕಾಗಿರುವುದು ಸಲಹೆಯಲ್ಲ, ಸಾಂತ್ವನ. ಅವರ ಹತ್ತಿರ ಕೂತು, ಕಾಳಜಿ ತೋರಿಸುತ್ತಾ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಸ್ನೇಹಿತರು ಬೇಕಷ್ಟೆ. ಒಬ್ಬ ಸಹೋದರಿಯ ಅನುಭವ ಕೇಳಿ. ಆಕೆಯ ಮಗಳು ತೀರಿಕೊಂಡಾಗ ಸಹೋದರ ಸಹೋದರಿಯರು ಬಂದು ಆಕೆಯನ್ನು ಸಂತೈಸಿದರು. ಇದರ ಬಗ್ಗೆ ಆ ಸಹೋದರಿ ಹೇಳುತ್ತಾರೆ: “ನನ್ನ ಸ್ನೇಹಿತರು ಮನೆಗೆ ಬಂದರು, ಅವರೇನೂ ಹೇಳಲಿಲ್ಲ ಆದರೆ ನನ್ನ ಜೊತೆ ಅತ್ತರು. ಅದು ನನ್ನ ಮನಸ್ಸಿಗೆ ಎಷ್ಟೋ ಸಮಾಧಾನ ತಂದಿತು.” ಕಷ್ಟದಲ್ಲಿರುವವರಿಗೆ ಬೇಕಾದ ನೆರವನ್ನು ಕೊಡುವ ಮೂಲಕವೂ ನಾವು ಕೋಮಲತೆ ತೋರಿಸಬಹುದು. ಉದಾಹರಣೆಗೆ, ವಿಧವೆ ಸಹೋದರಿಯ ಮನೆಯಲ್ಲಿ ರಿಪೇರಿ ಕೆಲಸ ಮಾಡಲಿಕ್ಕಿದ್ದರೆ ಅದನ್ನು ಮಾಡಿಕೊಡಬಹುದು. ಅಥವಾ ವಯಸ್ಸಾದ ಸಹೋದರ ಅಥವಾ ಸಹೋದರಿಗೆ ಕೂಟಕ್ಕೆ, ಸೇವೆಗೆ ಅಥವಾ ವೈದ್ಯರ ಹತ್ತಿರ ಒಬ್ಬರೇ ಹೋಗಲು ಆಗದಿದ್ದರೆ ನಾವು ಅವರನ್ನು ಕರೆದುಕೊಂಡು ಹೋಗಬಹುದು. ನಾವು ಒಂದು ಚಿಕ್ಕ ಸಹಾಯ ಮಾಡಿದರೂ ಅವರಿಗೆ ಅದು ತುಂಬ ದೊಡ್ಡ ಸಹಾಯ. (1 ಯೋಹಾ. 3:17, 18) ಇದರೊಂದಿಗೆ ನಾವು ಇತರರಿಗೆ ಕೋಮಲತೆ ತೋರಿಸುವ ಪ್ರಮುಖ ವಿಧವೊಂದಿದೆ. ಅದು ನಮ್ಮಿಂದ ಆದಷ್ಟು ಹೆಚ್ಚು ಸುವಾರ್ತೆ ಸಾರುವುದಾಗಿದೆ. ಅದೇ ನಿಜವಾಗಿಯೂ ಜನರ ಜೀವನವನ್ನು ಸುಧಾರಿಸುತ್ತದೆ.
16. ಕುಗ್ಗಿಹೋಗಿರುವವರನ್ನು ಪ್ರೋತ್ಸಾಹಿಸಲು ನಾವೇನು ಹೇಳಬಹುದು?
16 ನಮ್ಮ ಕೋಮಲ ಮಾತುಗಳು. ನಮ್ಮಲ್ಲಿ ಕೋಮಲ ಭಾವನೆ ಇದ್ದರೆ ‘ಮನಗುಂದಿದವರಿಗೆ ಸಾಂತ್ವನಗೊಳಿಸುವ ರೀತಿಯಲ್ಲಿ ಮಾತಾಡುತ್ತೇವೆ.’ (1 ಥೆಸ. 5:14) ನಮ್ಮ ಮಾತುಗಳಿಂದ ಬೇರೆಯವರನ್ನು ಹೇಗೆ ಪ್ರೋತ್ಸಾಹಿಸಬಹುದು? ನಮಗೆ ಅವರ ಬಗ್ಗೆ ಎಷ್ಟು ಚಿಂತೆ ಕಾಳಜಿಯಿದೆ ಎಂದು ಹೇಳಬಹುದು. ಅವರಲ್ಲಿರುವ ಒಳ್ಳೇ ಗುಣಗಳನ್ನು, ಅವರ ಸಾಮರ್ಥ್ಯವನ್ನು ನೆನಪುಹುಟ್ಟಿಸಿ ಪ್ರಶಂಸಿಸಬಹುದು. ಅವರು ಯೆಹೋವನಿಗೆ ಅಮೂಲ್ಯರಾಗಿ ಇರುವುದರಿಂದಲೇ ಆತನು ಅವರಿಗೆ ಸತ್ಯ ಕಲಿಯುವ ಅವಕಾಶ ಕೊಟ್ಟಿದ್ದಾನೆಂದು ಅರ್ಥಮಾಡಿಸಬಹುದು. (ಯೋಹಾ. 6:44) “ಮುರಿದ ಮನಸ್ಸುಳ್ಳವರಿಗೆ” ಮತ್ತು ‘ಕುಗ್ಗಿಹೋದವರಿಗೆ’ ಯೆಹೋವನು ಬೇಕಾದ ಸಹಾಯ ಸಾಂತ್ವನ ಕೊಡುತ್ತಾನೆ ಎಂದು ಭರವಸೆ ತುಂಬಬಹುದು. (ಕೀರ್ತ. 34:18) ನಾವು ಹೀಗೆ ಕೋಮಲತೆಯಿಂದ ಮಾತಾಡಿದರೆ ಅವರಿಗೆ ಸಾಂತ್ವನ ಸಿಗುತ್ತದೆ, ಹೊಸಬಲ ಪಡೆಯುತ್ತಾರೆ.—ಜ್ಞಾನೋ. 16:24.
17, 18. (ಎ) ಹಿರಿಯರು ಯೆಹೋವನ ಕುರಿಗಳನ್ನು ಹೇಗೆ ನೋಡಿಕೊಳ್ಳಬೇಕು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಕಲಿಯುತ್ತೇವೆ?
17 ಸಭಾಹಿರಿಯರೇ, ನೀವು ಯೆಹೋವನ ಕುರಿಗಳನ್ನು ಕೋಮಲವಾಗಿ ನೋಡಿಕೊಳ್ಳಬೇಕೆಂದು ಆತನು ಬಯಸುತ್ತಾನೆ. (ಅ. ಕಾ. 20:28, 29) ಹಾಗಾಗಿ ಯೆಹೋವನ ಕುರಿಗಳಿಗೆ ಕಲಿಸುವ, ಪ್ರೋತ್ಸಾಹಿಸುವ, ಚೈತನ್ಯಗೊಳಿಸುವ ಜವಾಬ್ದಾರಿ ನಿಮಗಿದೆ ಎನ್ನುವುದನ್ನು ಮರೆಯಬೇಡಿ. (ಯೆಶಾ. 32:1, 2; 1 ಪೇತ್ರ 5:2-4) ಕೋಮಲತೆಯಿರುವ ಹಿರಿಯನು ಸಭೆಯಲ್ಲಿರುವವರನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುವುದಿಲ್ಲ. ಅಂದರೆ ಎಲ್ಲದಕ್ಕೂ ನಿಯಮಗಳನ್ನು ಮಾಡುವುದಿಲ್ಲ, ಅಥವಾ ಅವರು ಹೆಚ್ಚು ಮಾಡುತ್ತಾ ಇಲ್ಲ ಎಂಬ ಭಾವನೆಯನ್ನು ಹುಟ್ಟಿಸಿ ಅವರಿಂದ ಆಗದ್ದನ್ನು ಮಾಡುವಂತೆ ಒತ್ತಡ ಹಾಕುವುದಿಲ್ಲ. ಬದಲಿಗೆ ಯೆಹೋವ ದೇವರ ಮೇಲೆ ಅವರಿಗಿರುವ ಪ್ರೀತಿ ಅವರಿಂದಾದಷ್ಟು ಸೇವೆಮಾಡುವಂತೆ ಪ್ರಚೋದಿಸುತ್ತದೆ ಎಂದು ನಂಬುತ್ತಾರೆ ಮತ್ತು ಅವರ ಸಂತೋಷವನ್ನು ಹೆಚ್ಚಿಸಲು ನೆರವಾಗುತ್ತಾರೆ.—ಮತ್ತಾ. 22:37.
18 ಯೇಸು ತೋರಿಸಿದ ದೀನತೆ, ಕೋಮಲತೆ ಬಗ್ಗೆ ಧ್ಯಾನಿಸುವಲ್ಲಿ ನಾವೂ ಅವನಂತೆ ಇರಲು ಪ್ರಯತ್ನಿಸುತ್ತೇವೆ. ಯೇಸುವಿನಂತೆ ನಾವು ಧೈರ್ಯ ಮತ್ತು ವಿವೇಚನೆಯನ್ನು ಹೇಗೆ ತೋರಿಸಬಹುದೆಂದು ಮುಂದಿನ ಲೇಖನದಲ್ಲಿ ನೋಡೋಣ.