ಯೆಹೋವನು ಕ್ಷಮಿಸುವಂತೆ ನೀವು ಕ್ಷಮಿಸುತ್ತೀರೊ?
“ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.”—ಮತ್ತಾಯ 6:14, 15.
1, 2. ಯಾವ ರೀತಿಯ ದೇವರ ಅಗತ್ಯ ನಮಗಿದೆ, ಮತ್ತು ಏಕೆ?
“ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೂ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:8-14.
2 ಪಾಪದಲ್ಲಿ ರೂಪಗೊಂಡು, ದೋಷದಿಂದ ಜನ್ಮತಾಳಿ, ಪಾಪದ ನಿಯಮಕ್ಕೆ ನಮ್ಮನ್ನು ಕೈದಿಗಳಾಗಿ ನಡೆಸಲು ಯಾವಾಗಲೂ ಪ್ರಯತ್ನಿಸುವ ಪಿತ್ರಾರ್ಜಿತವಾಗಿ ಪಡೆದ ಅಸಂಪೂರ್ಣತೆಗಳೊಂದಿಗೆ, ‘ನಾವು ಮಣ್ಣಿನಿಂದ ಮಾಡಲ್ಪಟ್ಟಿದ್ದೇವೆಂದು ಜ್ಞಾಪಿಸಿಕೊಳ್ಳುವ’ ಒಬ್ಬ ದೇವರ ಅಗತ್ಯ ನಮಗೆ ತೀವ್ರವಾಗಿದೆ. ಯೆಹೋವನನ್ನು ಅಷ್ಟು ಸುಂದರವಾಗಿ 103 ನೆಯ ಕೀರ್ತನೆಯಲ್ಲಿ ದಾವೀದನು ವರ್ಣಿಸಿ ಮುನ್ನೂರು ವರ್ಷಗಳ ಅನಂತರ, ಇನ್ನೊಬ್ಬ ಬೈಬಲ್ ಬರಹಗಾರನಾದ ಮೀಕನು, ಒಮ್ಮೆ ಮಾಡಲಾದ ಪಾಪಗಳ ಆತನ ಕೃಪಾಪೂರ್ಣ ಕ್ಷಮಿಸುವಿಕೆಗಾಗಿ ಹೆಚ್ಚು ಕಡಿಮೆ ತದ್ರೀತಿಯಲ್ಲಿ ಅದೇ ದೇವರನ್ನು ಕೊಂಡಾಡಿದನು: “ನಿನಗೆ ಯಾವ ದೇವರು ಸಮಾನ? ನೀನು ಅಪರಾಧವನ್ನು ಕ್ಷಮಿಸುವವನೂ, ದ್ರೋಹವನ್ನು ಲಕ್ಷಿಸದವನೂ, ನಿತ್ಯವೂ ಕೋಪಿಸುವವನಾಗಿರದೆ, ಕರುಣೆಯನ್ನು ತೋರಿಸುವುದರಲ್ಲಿಯೇ ಹರ್ಷಿಸುವವನಾಗಿದ್ದಿ. ಇನ್ನೊಮ್ಮೆ ನಮ್ಮನ್ನು ಕನಿಕರಿಸು, ನಮ್ಮ ಅಪರಾಧಗಳನ್ನು ಅಣಗಿಸು, ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಡಿಬಿಡು.”—ಮೀಕ 7:18, 19, ದ ಜೆರೂಸಲೇಮ್ ಬೈಬಲ್.
3. ಕ್ಷಮಿಸುವುದರ ಅರ್ಥವೇನು?
3 ಗ್ರೀಕ್ ಶಾಸ್ತ್ರವಚನಗಳಲ್ಲಿ, “ಕ್ಷಮಿಸು” ಎಂಬ ಪದಕ್ಕಾಗಿರುವ ಅರ್ಥವು “ಬಿಟ್ಟುಬಿಡು” ಎಂಬುದಾಗಿದೆ. ಮೇಲೆ ನಮೂದಿಸಲಾದ ದಾವೀದನು ಮತ್ತು ಮೀಕನು, ಅದೇ ಅರ್ಥವನ್ನು ಆಕರ್ಷಕ, ವರ್ಣನಾತ್ಮಕ ಮಾತುಗಳಲ್ಲಿ ತಿಳಿಸುತ್ತಾರೆಂಬುದನ್ನು ಗಮನಿಸಿರಿ. ಯೆಹೋವನ ಕ್ಷಮಾಪಣೆಯ ವಿಸ್ಮಯಕರ ವ್ಯಾಪ್ತಿಯನ್ನು ಪೂರ್ಣವಾಗಿ ಗಣ್ಯಮಾಡಲು, ಅದರ ಅನೇಕ ಉದಾಹರಣೆಗಳಲ್ಲಿ ಕೆಲವು ಕಾರ್ಯಗತವಾಗುವುದನ್ನು ಪುನರ್ವಿಮರ್ಶಿಸೋಣ.
ಮೋಶೆ ಮಧ್ಯಸಿಕ್ತೆ ಮಾಡುತ್ತಾನೆ—ಯೆಹೋವನು ಆಲಿಸುತ್ತಾನೆ
4. ಯೆಹೋವನ ಶಕ್ತಿಯ ಯಾವ ಪ್ರದರ್ಶನಗಳ ಬಳಿಕವೂ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಇನ್ನೂ ಹೆದರಿದರು?
4 ಯೆಹೋವನು ಇಸ್ರಾಯೇಲ್ ಜನಾಂಗವನ್ನು ಸುರಕ್ಷಿತವಾಗಿ ಐಗುಪ್ತದಿಂದ ಹೊರಗೆ ಮತ್ತು ಸ್ವದೇಶದಂತೆ ಅವರಿಗೆ ತಾನು ವಾಗ್ದಾನಿಸಿದ್ದ ದೇಶದ ಹತ್ತಿರ ಕರೆದುತಂದನು, ಆದರೆ ಕಾನಾನಿನಲ್ಲಿದ್ದ ಮನುಷ್ಯಮಾತ್ರದವರಿಗೆ ಹೆದರಿ ಮುಂದೆ ಸಾಗಲು ಅವರು ನಿರಾಕರಿಸಿದರು. ಯೆಹೋವನು ಹತ್ತು ವಿನಾಶಕರ ಬಾಧೆಗಳಿಂದ ಅವರನ್ನು ಐಗುಪ್ತದಿಂದ ಬಿಡಿಸಿದ್ದನ್ನು, ಕೆಂಪು ಸಮುದ್ರದ ಮುಖಾಂತರ ತಪ್ಪಿಸಿಕೊಳ್ಳುವ ಒಂದು ಮಾರ್ಗವನ್ನು ತೆರೆದದ್ದನ್ನು, ಅವರನ್ನು ಹಿಂಬಾಲಿಸಲು ಪ್ರಯತ್ನಿಸಿದ ಐಗುಪ್ತದ ಸೇನೆಯನ್ನು ನಾಶಮಾಡಿದ್ದನ್ನು, ಅವರನ್ನು ಯೆಹೋವನ ಆಯ್ದ ಜನಾಂಗವನ್ನಾಗಿ ಮಾಡಿದ ನಿಯಮದ ಒಡಂಬಡಿಕೆಯನ್ನು ಅವರೊಂದಿಗೆ ಸೀನಾಯಿ ಬೆಟ್ಟದಲ್ಲಿ ಆರಂಭಿಸಿದ್ದನ್ನು, ಮತ್ತು ಅವರನ್ನು ಪೋಷಿಸಲು ಪರಲೋಕದಿಂದ ದೈನಿಕ ಮನ್ನವನ್ನು ಅದ್ಭುತಕರವಾಗಿ ಸರಬರಾಯಿ ಮಾಡಿದ್ದನ್ನು ಕಂಡ ಬಳಿಕವೂ, ಕೆಲವು ದೈತ್ಯರಂತಹ ಕಾನಾನ್ಯರಿಂದಾಗಿ ವಾಗ್ದತ್ತ ದೇಶವನ್ನು ಪ್ರವೇಶಿಸಲು ಅವರು ಭಯಪಟ್ಟರು!—ಅರಣ್ಯಕಾಂಡ 14:1-4.
5. ಇಬ್ಬರು ನಂಬಿಗಸ್ತ ಗೂಢಾಚಾರರು ಇಸ್ರಾಯೇಲನ್ನು ಚೇತರಿಸಲು ಹೇಗೆ ಪ್ರಯತ್ನಿಸಿದರು?
5 ಮೋಶೆ ಮತ್ತು ಆರೋನರು ನಿರುತ್ಸಾಹಗೊಂಡು ಬೋರಲಬಿದ್ದರು. ಇಬ್ಬರು ನಂಬಿಗಸ್ತ ಗೂಢಾಚಾರರಾದ ಯೆಹೋಶುವ ಮತ್ತು ಕಾಲೇಬರು, ಇಸ್ರಾಯೇಲನ್ನು ಚೇತರಿಸಲು ಪ್ರಯತ್ನಿಸಿದರು: ‘ದೇಶವು ಅತ್ಯುತ್ತಮವಾದದ್ದು; ಅದು ಹಾಲೂ ಜೇನೂ ಹರಿಯುವ ದೇಶ; ಆ ದೇಶದ ಜನರಿಗೆ ದಿಗಿಲುಪಡಬೇಡಿರಿ; ನಮ್ಮ ಕಡೆ ಯೆಹೋವನು ಇದ್ದಾನೆ.’ ಇಂತಹ ಮಾತುಗಳಿಂದ ಉತ್ತೇಜನಗೊಳ್ಳುವ ಬದಲಿಗೆ, ದಿಗಿಲುಗೊಂಡ, ದಂಗೆಕೋರ ಜನರು ಯೆಹೋಶುವ ಮತ್ತು ಕಾಲೇಬರನ್ನು ಕಲ್ಲೆಸೆದು ಕೊಲ್ಲಲು ಪ್ರಯತ್ನಿಸಿದರು.—ಅರಣ್ಯಕಾಂಡ 14:5-10.
6, 7. (ಎ) ವಾಗ್ದತ್ತ ದೇಶದೊಳಗೆ ಪ್ರವೇಶಿಸಲು ಇಸ್ರಾಯೇಲ್ ಪ್ರತಿರೋದಿಸಿದಾಗ ಯೆಹೋವನು ಏನನ್ನು ಮಾಡಲು ನಿರ್ಧರಿಸಿದನು? (ಬಿ) ಇಸ್ರಾಯೇಲಿನ ಮೇಲಿದ್ದ ಯೆಹೋವನ ತೀರ್ಪಿಗೆ ಮೋಶೆಯು ಯಾಕೆ ಆಕ್ಷೇಪಿಸಿದನು, ಮತ್ತು ಯಾವ ಪರಿಣಾಮದೊಂದಿಗೆ?
6 ಯೆಹೋವನು ಕೋಪಗೊಂಡನು! “ಯೆಹೋವನು ಮೋಶೆಗೆ—ಈ ಜನರು ಇನ್ನು ಎಷ್ಟರ ಮಟ್ಟಿಗೆ ನನ್ನನ್ನು ಅಲಕ್ಷ್ಯಮಾಡುವರೋ; ನಾನು ನಡಿಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ. ಆಗಲಿ, ನಾನು ಇವರಿಗೆ ವ್ಯಾಧಿಯನ್ನುಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು ಎಂದು ಹೇಳಿದನು. ಅದಕ್ಕೆ ಮೋಶೆ—ನೀನು ಹೀಗೆ ಮಾಡುವದಾದರೆ ಐಗುಪ್ತ್ಯರು ಈ ಸಮಾಚಾರವನ್ನು ಕೇಳುವರು. ನೀನು ತಮ್ಮ ಕೈಯೊಳಗಿಂದ ಈ ಜನವನ್ನು ಭುಜಪರಾಕ್ರಮದಿಂದ ತಪ್ಪಿಸಿದ ಸಂಗತಿಯನ್ನು ಈ [ಕಾನಾನ್] ದೇಶದ ನಿವಾಸಿಗಳಿಗೆ ತಿಳಿಸಿರುವರು. . . . ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ—ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವದಕ್ಕೆ ಶಕಿಸ್ತಾಲದೆ ಅವರನ್ನು ಅರಣ್ಯದಲ್ಲಿ ಕೊಂದುಹಾಕಿಬಿಟ್ಟನು ಎಂದು ಮಾತಾಡಿಕೊಳ್ಳುವರು.”—ಅರಣ್ಯಕಾಂಡ 14:11-16.
7 ಯೆಹೋವನ ನಾಮಕ್ಕೋಸ್ಕರ ಮೋಶೆ ಕ್ಷಮಾಪಣೆಗಾಗಿ ಬೇಡಿಕೊಂಡನು: “ನಾವು ಐಗುಪ್ತದೇಶದಿಂದ ಬಂದದ್ದು ಮೊದಲುಗೊಂಡು ಇದು ವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. . . . ಅದಕ್ಕೆ ಯೆಹೋವನು—ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಕ್ಷಮಿಸಿದ್ದೇನೆ.”—ಅರಣ್ಯಕಾಂಡ 14:19, 20.
ಮನಸ್ಸೆಯ ಮೂರ್ತಿಪೂಜೆ ಮತ್ತು ದಾವೀದನ ವ್ಯಭಿಚಾರ
8. ಯಾವ ರೀತಿಯ ದಾಖಲೆಯನ್ನು ಯೆಹೂದದ ರಾಜ ಮನಸ್ಸೆಯು ರೂಪಿಸಿದನು?
8 ಯೆಹೋವನ ಕ್ಷಮಾಪಣೆಯ ಎದ್ದುಕಾಣುವ ಒಂದು ದೃಷ್ಟಾಂತವು, ಒಳ್ಳೆಯ ರಾಜನಾದ ಹಿಜ್ಕೀಯನ ಮಗನಾದ ಮನಸ್ಸೆಯ ವಿದ್ಯಮಾನವಾಗಿದೆ. ಯೆರೂಸಲೇಮಿನಲ್ಲಿ ಆಳಿಕೆ ನಡಿಸಲು ಮನಸ್ಸೆ ತೊಡಗಿದಾಗ ಅವನು 12 ವರ್ಷ ಪ್ರಾಯದವನಾಗಿದ್ದನು. ಅವನು ಪೂಜಾಸ್ಥಳಗಳನ್ನು ನಿರ್ಮಿಸಿದನು, ಬಾಳ್ದೇವತೆಗಳಿಗೆ ಯಜ್ಞವೇದಿಗಳನ್ನು ಸ್ಥಾಪಿಸಿದನು, ನಕ್ಷತ್ರಮಂಡಲಕ್ಕೆ ಕೈಮುಗಿದನು, ಯಂತ್ರಮಂತ್ರಗಳನ್ನು ಆಚರಿಸಿದನು, ಪ್ರೇತವ್ಯವಹಾರ ಮಾಧ್ಯಮಗಳನ್ನು ಮತ್ತು ಕಣಿಹೇಳುವವರನ್ನು ಉತ್ತೇಜಿಸಿದನು, ಕೆತ್ತನೆಮಾಡಿದ ಒಂದು ವಿಗ್ರಹವನ್ನು ಯೆಹೋವನ ಆಲಯದಲ್ಲಿ ಇಟ್ಟನು, ಮತ್ತು ಹಿನ್ನೋಮ್ ತಗ್ಗಿನಲ್ಲಿದ್ದ ಬೆಂಕಿಯಲ್ಲಿ ತನ್ನ ಸ್ವಂತ ಗಂಡುಮಕ್ಕಳನ್ನು ಆಹುತಿಕೊಟ್ಟನು. “ಯೆಹೋವನ ದೃಷ್ಟಿಯಲ್ಲಿ ಅಸಹ್ಯವಾಗಿದ್ದನ್ನು ಅವನು ದೊಡ್ಡ ಪ್ರಮಾಣದಲ್ಲಿ ಮಾಡಿದನು” ಮತ್ತು “ಇಸ್ರಾಯೇಲ್ಯರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ಅತಿ ಕೆಟ್ಟದ್ದನ್ನು ಮಾಡುವಂತೆ ಯೆಹೂದ್ಯರನ್ನು ಮತ್ತು ಯೆರೂಸಲೇಮಿನ ನಿವಾಸಿಗಳನ್ನು ಪ್ರೇರೇಪಿಸುತ್ತಾ ಇದ್ದನು.”—2 ಪೂರ್ವಕಾಲವೃತ್ತಾಂತ 33:1-9, NW.
9. ಮನಸ್ಸೆಯ ಕಡೆಗೆ ಯೆಹೋವನ ಕೋಪವು ಹೇಗೆ ಶಾಂತವಾಯಿತು, ಮತ್ತು ಯಾವ ಫಲಿತಾಂಶದೊಂದಿಗೆ?
9 ಕೊನೆಯದಾಗಿ, ಯೆಹೋವನು ಅಶ್ಶೂರರನ್ನು ಯೆಹೂದದ ವಿರುದ್ಧ ತಂದನು, ಮತ್ತು ಅವರು ಮನಸ್ಸೆಯನ್ನು ಸೆರೆಹಿಡಿದು ಬಾಬೆಲಿಗೆ ಒಯ್ದರು. “ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು ಆತನು ಲಾಲಿಸಿ ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು.” (2 ಪೂರ್ವಕಾಲವೃತ್ತಾಂತ 33:11-13) ತದನಂತರ ಮನಸ್ಸೆಯು ಅನ್ಯ ದೇವತೆಗಳನ್ನು, ಮೂರ್ತಿಗಳನ್ನು, ಮತ್ತು ಯಜ್ಞವೇದಿಗಳನ್ನು ತೆಗೆಸಿ, ಅವುಗಳನ್ನು ಪಟ್ಟಣದ ಹೊರಗೆ ಹಾಕಿಸಿಬಿಟ್ಟನು. ಯೆಹೋವನ ವೇದಿಯ ಮೇಲೆ ಯಜ್ಞಗಳನ್ನು ಅರ್ಪಿಸಲು ಅವನು ತೊಡಗಿದನು ಮತ್ತು ಸತ್ಯ ದೇವರನ್ನು ಸೇವಿಸುವುದರ ಕಡೆಗೆ ಯೆಹೂದವನ್ನು ನಡೆಸಿದನು. ಪಶ್ಚಾತಾಪ್ತಕ್ಕೆ ಯೋಗ್ಯವಾಗಿರುವ ಫಲಗಳನ್ನು ದೀನತೆ, ಪ್ರಾರ್ಥನೆ, ಮತ್ತು ದೋಷತಿದ್ದುವ ಕ್ರಿಯೆ ಉತ್ಪಾದಿಸುವಾಗ, ಕ್ಷಮಿಸಲಿಕ್ಕಾಗಿರುವ ಯೆಹೋವನ ಮನಃಪೂರ್ವಕತೆಯ ಆಶ್ಚರ್ಯಕರ ಪ್ರತ್ಯಕ್ಷಾಭಿನಯವು ಇದಾಗಿತ್ತು!—2 ಪೂರ್ವಕಾಲವೃತ್ತಾಂತ 33:15, 16.
10. ಊರೀಯನ ಹೆಂಡತಿಯೊಂದಿಗೆ ತನ್ನ ಪಾಪವನ್ನು ಮರೆಮಾಡಲು ದಾವೀದನು ಹೇಗೆ ಪ್ರಯತ್ನಿಸಿದನು?
10 ಹಿತ್ತಿಯನಾದ ಊರೀಯನ ಹೆಂಡತಿಯೊಂದಿಗೆ ರಾಜ ದಾವೀದನ ವ್ಯಭಿಚಾರದ ಪಾಪವು ಸುವಿದಿತವಾಗಿದೆ. ಆಕೆಯೊಂದಿಗೆ ಅವನು ವ್ಯಭಿಚಾರವನ್ನು ಮಾತ್ರ ಮಾಡಲಿಲ್ಲ, ಆದರೆ ಆಕೆ ಗರ್ಭಿಣಿಯಾದಾಗ ವಿಸ್ತಾರವಾದೊಂದು ಮರೆಮಾಚುವ ಹಂಚಿಕೆಯನ್ನು ಸಹ ಮಾಡಿದನು. ಮನೆಗೆ ಹೋಗಿ ತನ್ನ ಹೆಂಡತಿಯೊಂದಿಗೆ ಅವನು ಸಂಭೋಗ ಮಾಡುವನೆಂದು ಅಪೇಕ್ಷಿಸುತ್ತಾ, ರಾಜನು ಊರೀಯನಿಗೆ ಯುದ್ಧದಿಂದ ರಜೆಯನ್ನು ಕೊಟ್ಟನು. ಆದರೆ, ರಣಾಗ್ರದಲ್ಲಿದ್ದ ತನ್ನ ಜೊತೆ ಸೈನಿಕರಿಗಾಗಿದ್ದ ಗೌರವದಿಂದ, ಊರೀಯನು ಅದನ್ನು ನಿರಾಕರಿಸಿದನು. ದಾವೀದನು ತದನಂತರ ಊಟಮಾಡಲು ಅವನನ್ನು ಆಮಂತ್ರಿಸಿದನು ಮತ್ತು ಕುಡಿದು ಅಮಲೇರುವಂತೆ ಮಾಡಿದನು, ಆದರೂ ಊರೀಯನು ತನ್ನ ಹೆಂಡತಿಯ ಬಳಿಗೆ ಹೋಗಲಿಲ್ಲ. ತದನಂತರ, ಊರೀಯನನ್ನು ಕೊಲ್ಲಲು, ಹೋರಾಟದ ಅತ್ಯಂತ ಸಕ್ರಿಯ ಭಾಗದಲ್ಲಿ ಅವನನ್ನು ಹಾಕುವಂತೆ ತನ್ನ ಸೇನಾಪತಿಗೆ ದಾವೀದನು ಒಂದು ಸಂದೇಶವನ್ನು ಕಳುಹಿಸಿದನು, ಮತ್ತು ಹಾಗೆಯೇ ಸಂಭವಿಸಿತು.—2 ಸಮುವೇಲ 11:2-25.
11. ತನ್ನ ಪಾಪಕ್ಕಾಗಿ ಪಶ್ಚಾತಾಪ್ತಪಡುವಂತೆ ದಾವೀದನು ಹೇಗೆ ಪ್ರೇರೇಪಿಸಲ್ಪಟ್ಟನು, ಆದರೂ ಅವನು ಏನನ್ನು ಅನುಭವಿಸಿದನು?
11 ರಾಜನ ಪಾಪವನ್ನು ಬಯಲುಗೊಳಿಸಲು ಯೆಹೋವನು ತನ್ನ ಪ್ರವಾದಿಯಾದ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. “ಆಗ ದಾವೀದನು ನಾತಾನನಿಗೆ—ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಎಂದು ಹೇಳಿದನು. ನಾತಾನನು ಅವನಿಗೆ—ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ, ನೀನು ಸಾಯುವದಿಲ್ಲ.” (2 ಸಮುವೇಲ 12:13) ತನ್ನ ಪಾಪದ ನಿಮಿತ್ತ ದಾವೀದನು ಅಪರಾಧ ಭಾವದಿಂದ ತುಂಬಿದವನಾಗಿದ್ದನು ಮತ್ತು ತನ್ನ ಪಶ್ಚಾತಾಪ್ತವನ್ನು ಯೆಹೋವನಿಗೆ ಒಂದು ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದನು: “ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸೇನು; ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ. ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತಾಪ್ತದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತನೆ 51:16, 17) ಕುಗ್ಗಿದ ಹೃದಯದಿಂದ ಅರ್ಪಿಸಲ್ಪಟ್ಟ ದಾವೀದನ ಪ್ರಾರ್ಥನೆಯನ್ನು ಯೆಹೋವನು ತಿರಸ್ಕರಿಸಲಿಲ್ಲ. ಆದರೂ, ದಾವೀದನು ಭಾರಿ ದಂಡನೆಯನ್ನು ಅನುಭವಿಸಿದನು. ಇದು ವಿಮೋಚನಕಾಂಡ 34:6, 7 ರಲ್ಲಿ ಕ್ಷಮಾಪಣೆಯ ಕುರಿತಿರುವ ಯೆಹೋವನ ಹೇಳಿಕೆಯೊಂದಿಗೆ ಹೊಂದಾಣಿಕೆಯಲ್ಲಿತ್ತು: “ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.”
ಸೊಲೊಮೋನನ ದೇವಾಲಯ ಸಮರ್ಪಣೆ
12. ದೇವಾಲಯದ ಸಮರ್ಪಣೆಯ ಸಮಯದಲ್ಲಿ ಸೊಲೊಮೋನನು ಏನನ್ನು ವಿನಂತಿಸಿದನು, ಮತ್ತು ಯೆಹೋವನ ಪ್ರತಿಕ್ರಿಯೆಯು ಏನಾಗಿತ್ತು?
12 ಯೆಹೋವನ ದೇವಾಲಯದ ನಿರ್ಮಾಣವನ್ನು ಸೊಲೊಮೋನನು ಪೂರ್ಣಗೊಳಿಸಿದಾಗ, ತನ್ನ ಸಮರ್ಪಣೆಯ ಪ್ರಾರ್ಥನೆಯಲ್ಲಿ ಅವನಂದದ್ದು: “ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವಾಗ ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹಗಳನ್ನು ಕೇಳಿ ಕ್ಷಮೆಯನ್ನು ಅನುಗ್ರಹಿಸು.” ಯೆಹೋವನು ಪ್ರತಿಕ್ರಿಯಿಸಿದ್ದು: “ನಾನು ಆಕಾಶವನ್ನು ಮಳೆಗರೆಯದಂತೆ ಮುಚ್ಚುವಾಗಲೂ ದೇಶವನ್ನು ತಿಂದುಬಿಡುವದಕ್ಕೆ ಮಿಡಿತೆಗಳನ್ನು ಕಳುಹಿಸುವಾಗಲೂ ನನ್ನ ಪ್ರಜೆಯ ಮೇಲೆ ಘೋರವ್ಯಾಧಿಯನ್ನು ಬರಮಾಡುವಾಗಲೂ ನನ್ನವರೆಂದು ಹೆಸರುಗೊಂಡ ನನ್ನ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು.”—2 ಪೂರ್ವಕಾಲವೃತ್ತಾಂತ 6:21; 7:13, 14.
13. ಒಬ್ಬ ವ್ಯಕ್ತಿಯ ಕುರಿತು ಯೆಹೋವನ ವೀಕ್ಷಣೆಯ ಸಂಬಂಧದಲ್ಲಿ ಯೆಹೆಜ್ಕೇಲ 33:13-16 ಏನನ್ನು ತೋರಿಸುತ್ತದೆ?
13 ಯೆಹೋವನು ನಿಮ್ಮನ್ನು ದೃಷ್ಟಿಸುವಾಗ, ನೀವು ಈಗ ಏನಾಗಿರುವಿರೊ ಅದಕ್ಕಾಗಿ ನಿಮ್ಮನ್ನು ಆತನು ಸ್ವೀಕರಿಸುತ್ತಾನೆ, ನೀವು ಏನಾಗಿದ್ದಿರೊ ಅದಕ್ಕಾಗಿ ಅಲ್ಲ. ಅದು ಯೆಹೆಜ್ಕೇಲ 33:13-16 ಹೇಳುವಂತೆ ಇರುವುದು: “ನಾನು ಶಿಷ್ಟನಿಗೆ—ನೀನು ಬಾಳೇ ಬಾಳುವಿ ಎಂದು ಹೇಳಲು ಅವನು ತನ್ನ ಪುಣ್ಯದ ಮೇಲೆ ಭರವಸವಿಟ್ಟು ಪಾಪ ಮಾಡಿದರೆ ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ಅವನು ಮಾಡುವ ಪಾಪದಿಂದಲೇ ಅವನು ಸಾಯುವನು. ನಾನು ದುಷ್ಟನಿಗೆ—ನೀನು ಸತ್ತೇ ಸಾಯುವಿ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸುವ ಪಕ್ಷದಲ್ಲಿ, ಅಂದರೆ ಆ ದುಷ್ಟನು ಒತ್ತೆಯನ್ನು ಬಿಗಿಹಿಡಿಯದೆ ದೋಚಿಕೊಂಡದನ್ನು ಹಿಂದಕ್ಕೆ ಕೊಟ್ಟು ಜೀವಾಧಾರವಾದ ವಿಧಿಗಳನ್ನು ಅನುಸರಿಸಿ ಸಕಲದುಷ್ಕರ್ಮಗಳಿಗೂ ದೂರನಾಗಿರುವ ಪಕ್ಷದಲ್ಲಿ ಸಾಯನು, ಬಾಳೇ ಬಾಳುವನು. ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ನೀತಿನ್ಯಾಯಗಳನ್ನು ನಡಿಸುತ್ತಿದ್ದಾನಲ್ಲಾ; ಬಾಳೇ ಬಾಳುವನು.”
14. ಯೆಹೋವನ ಕ್ಷಮಾಪಣೆಯ ಕುರಿತು ಯಾವುದು ವಿಶಿಷ್ಟವಾಗಿದೆ?
14 ಯೆಹೋವ ದೇವರು ನಮಗಾಗಿ ಒದಗಿಸುವ ಕ್ಷಮಾಪಣೆಗೆ ಒಂದು ವಿಶೇಷಲಕ್ಷಣವಿದೆ—ಯೆಹೋವನು ಕ್ಷಮಿಸುವವನೂ ಮರೆಯುವವನೂ ಆಗಿದ್ದಾನೆ. ಇದು ಮಾನವ ಜೀವಿಗಳಿಗೆ, ತಾವು ಒಬ್ಬರಿಗೊಬ್ಬರು ನೀಡುವ ಕ್ಷಮಾಪಣೆಯೊಂದಿಗೆ ಸೇರಿಸಲು ಕಠಿನವಾದ ವಿಷಯವಾಗಿದೆ. ಕೆಲವು ಜನರು ಹೀಗೆ ಹೇಳುವರು, ‘ನೀನು ಏನು ಮಾಡಿರುವಿಯೊ ಅದನ್ನು ನಾನು ಕ್ಷಮಿಸಬಲ್ಲೆ, ಆದರೆ ಅದನ್ನು ಮರೆಯಲು ನನಗೆ ಸಾಧ್ಯವಿಲ್ಲ (ಯಾ ನಾನು ಮರೆಯಲಾರೆ).’ ಅದಕ್ಕೆ ಪ್ರತಿಕೂಲವಾಗಿ, ತಾನು ಏನು ಮಾಡುವೆನೆಂದು ಯೆಹೋವನು ಹೇಳುವುದನ್ನು ಗಮನಿಸಿರಿ: “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.”—ಯೆರೆಮೀಯ 31:34.
15. ಕ್ಷಮಾಪಣೆಯ ಯಾವ ದಾಖಲೆ ಯೆಹೋವನಿಗಿದೆ?
15 ಯೆಹೋವನು ಭೂಮಿಯಲ್ಲಿರುವ ತನ್ನ ಆರಾಧಕರನ್ನು ಸಾವಿರಾರು ವರ್ಷಗಳಿಂದ ಕ್ಷಮಿಸುತ್ತಾ ಬಂದಿದ್ದಾನೆ. ತಾವು ಮಾಡಿದ್ದೇವೆಂದು ಅರಿವಿರುವ ಪಾಪಗಳನ್ನು ಆತನು ಕ್ಷಮಿಸಿದ್ದಾನೆ ಅಷ್ಟೇ ಅಲ್ಲದೆ ಅವರಿಗೆ ಅರಿವಿರದ ಅನೇಕ ಪಾಪಗಳನ್ನು ಸಹ ಆತನು ಕ್ಷಮಿಸಿದ್ದಾನೆ. ಕರುಣೆ, ದೀರ್ಘ ಶಾಂತಿ, ಮತ್ತು ಕ್ಷಮಾಪಣೆಯ ಆತನ ಒದಗಿಸುವಿಕೆ ಅಂತ್ಯರಹಿತವಾದದ್ದಾಗಿದೆ. ಯೆಶಾಯ 55:7 ಹೇಳುವುದು: “ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.”
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಕ್ಷಮಾಪಣೆಯು
16. ಯೇಸುವಿನ ಕ್ಷಮಾಪಣೆಯ ಆಚರಣೆಯು ಯೆಹೋವನ ಕ್ಷಮಾಪಣೆಯೊಂದಿಗೆ ಹೊಂದಾಣಿಕೆಯಲ್ಲಿದೆ ಎಂದು ನಾವು ಏಕೆ ಹೇಳಬಲ್ಲೆವು?
16 ದೇವರ ಕ್ಷಮಾಪಣೆಯ ವೃತ್ತಾಂತಗಳು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿರುವ ದಾಖಲೆಯನ್ನೂ ವ್ಯಾಪಿಸುತ್ತವೆ. ಈ ವಿಷಯದ ಕುರಿತು ಯೆಹೋವನ ನೋಟದೊಂದಿಗೆ ಹೊಂದಾಣಿಕೆಯಲ್ಲಿದ್ದಾನೆಂದು ತೋರಿಸುತ್ತಾ, ಯೇಸು ಅದರ ಕುರಿತು ಅನೇಕ ವೇಳೆ ಮಾತಾಡುತ್ತಾನೆ. ಯೇಸುವಿನ ಆಲೋಚನೆಯು ಯೆಹೋವನಿಂದ ಬರುತ್ತದೆ, ಅವನು ಯೆಹೋವನನ್ನು ಪ್ರತಿಬಿಂಬಿಸುತ್ತಾನೆ, ಅವನು ಯೆಹೋವನ ಸ್ವರೂಪದ ನಿಷ್ಕೃಷ್ಟವಾದ ಬಿಂಬವಾಗಿದ್ದಾನೆ; ಅವನನ್ನು ನೋಡುವುದು ಯೆಹೋವನನ್ನು ನೋಡುವಂತಿದೆ.—ಯೋಹಾನ 12:45-50; 14:9; ಇಬ್ರಿಯ 1:3.
17. “ವಿಶಾಲವಾದ ರೀತಿಯಲ್ಲಿ” ಯೆಹೋವನ ಕ್ಷಮಿಸುವಿಕೆಯನ್ನು ಯೇಸು ಹೇಗೆ ದೃಷ್ಟಾಂತಿಸಿದನು?
17 ಯೆಹೋವನು ವಿಶಾಲವಾದ ರೀತಿಯಲ್ಲಿ ಕ್ಷಮಿಸುತ್ತಾನೆಂಬುದು, ಯೇಸುವಿನ ದೃಷ್ಟಾಂತಗಳಲ್ಲೊಂದರಲ್ಲಿ ಸೂಚಿಸಲ್ಪಟ್ಟಿದೆ. ಅದು ಒಬ್ಬ ದಾಸನ 10,000 ತಲಾಂತುಗಳ (ಸುಮಾರು 33,000,000 ಯು.ಎಸ್. ಡಾಲರುಗಳು) ಸಾಲವನ್ನು ಕ್ಷಮಿಸಿದ ರಾಜನ ದೃಷ್ಟಾಂತವಾಗಿತ್ತು. ಆದರೆ ಆ ದಾಸನು ಒಂದು ನೂರು ದಿನಾರ್ನ (ಸುಮಾರು 60 ಯು.ಎಸ್. ಡಾಲರುಗಳು) ಸಾಲವಿದ್ದ ಒಬ್ಬ ಜೊತೆ ದಾಸನನ್ನು ಕ್ಷಮಿಸದಿದ್ದಾಗ, ರಾಜನು ಅತ್ಯುಗ್ರಗೊಂಡನು. “ಎಲಾ ನೀಚನೇ, ನೀನು ನನ್ನನ್ನು ಬೇಡಿಕೊಂಡದರ್ದಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನಲ್ಲಾ; ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇ ಸೇವಕನನ್ನು ಕರುಣಿಸಬಾರದಾಗಿತ್ತೇ ಎಂದು ಹೇಳಿ ಸಿಟ್ಟುಮಾಡಿ ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಿದನು.” ತದನಂತರ ಯೇಸು ಅದರ ಅನ್ವಯವನ್ನು ಮಾಡಿದನು: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”—ಮತ್ತಾಯ 18:23-35.
18. ಕ್ಷಮಾಪಣೆಯ ಕುರಿತಾದ ಪೇತ್ರನ ನೋಟವು ಯೇಸುವಿನ ನೋಟದೊಂದಿಗೆ ಹೇಗೆ ಸದೃಶವಾಯಿತು?
18 ಮೇಲಿನ ದೃಷ್ಟಾಂತವನ್ನು ಯೇಸು ಕೊಡುವ ಸ್ವಲ್ಪ ಮುಂಚಿತವಾಗಿ, ಪೇತ್ರನು ಯೇಸುವಿನ ಬಳಿಗೆ ಬಂದು, ಕೇಳಿದ್ದು: “ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ?” ತಾನು ಬಹಳ ಉದಾರಿಯಾಗಿದ್ದೇನೆಂದು ಪೇತ್ರನು ನೆನಸಿದನು. ಶಾಸ್ತ್ರಿಗಳು ಮತ್ತು ಫರಿಸಾಯರು ಕ್ಷಮಾಪಣೆಯ ಮೇಲೆ ಒಂದು ಮಿತಿಯನ್ನು ಇಡುವುದಾದರೂ, ಯೇಸು ಪೇತ್ರನಿಗೆ ಹೇಳಿದ್ದು: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.” (ಮತ್ತಾಯ 18:21, 22) ಯೇಸು ಹೇಳಿದಂತೆ, ಒಂದು ದಿನಕ್ಕೆ ಏಳು ಸಾರಿ ಕ್ಷಮಿಸುವುದು ಸಾಲದೆ ಹೋಗಬಹುದು: “ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತಾಪ್ತಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು—ನನಗೆ ಪಶ್ಚಾತಾಪ್ತವಾಯಿತು ಎಂದು ಹೇಳಿದರೆ ಅವನಿಗೆ ಕ್ಷಮಿಸು.” (ಲೂಕ 17:3, 4) ಯೆಹೋವನು ಕ್ಷಮಿಸುವಾಗ, ಸಂತೋಷಕರವಾಗಿ ಆತನು ನಮ್ಮ ಪಾಪಗಳ ಲೆಕ್ಕವನ್ನು ಇಡುವುದಿಲ್ಲ.
19. ಯೆಹೋವನ ಕ್ಷಮಾಪಣೆಯನ್ನು ಪಡೆಯಲಿಕ್ಕಾಗಿ ನಾವು ಏನು ಮಾಡಬೇಕು?
19 ಪಶ್ಚಾತಾಪ್ತಪಡಲು ಮತ್ತು ನಮ್ಮ ಪಾಪಗಳನ್ನು ನಿವೇದಿಸಿಕೊಳ್ಳಲು ನಮಗೆ ದೀನತೆ ಇರುವುದಾದರೆ, ನಮ್ಮ ಪರವಾಗಿ ಪ್ರತಿಕ್ರಿಯಿಸಲು ಯೆಹೋವನು ಒಪ್ಪಿಕೊಳ್ಳುತ್ತಾನೆ: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.”—1 ಯೋಹಾನ 1:9.
20. ಪಾಪವನ್ನು ಕ್ಷಮಿಸಲಿಕ್ಕಾಗಿದ್ದ ಯಾವ ಮನಃಪೂರ್ವಕತೆಯು ಸೆಫ್ತನನ ಮೂಲಕ ತೋರಿಸಲ್ಪಟ್ಟಿತು?
20 ಯೇಸುವಿನ ಹಿಂಬಾಲಕನಾದ ಸೆಫ್ತನನು, ಕೆರಳಿಸಲ್ಪಟ್ಟ ಜನರ ಒಂದು ಗುಂಪು ಕಲ್ಲೆಸೆದು ಅವನನ್ನು ಕೊಲ್ಲುತ್ತಿರುವಾಗ, ಕ್ಷಮಾಪಣೆಯ ಗಮನಾರ್ಹವಾದ ಆತ್ಮದಲ್ಲಿ ಗಟ್ಟಿಯಾಗಿ ಈ ಮನವಿಯನ್ನು ಮಾಡಿದನು: “ಯೇಸು ಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ ಎಂದು ಪ್ರಾರ್ಥಿಸಿ ಮೊಣಕಾಲೂರಿ—ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು.”—ಅ. ಕೃತ್ಯಗಳು 7:59, 60.
21. ರೋಮನ್ ಸೈನಿಕರನ್ನು ಕ್ಷಮಿಸಲಿಕ್ಕಾಗಿದ್ದ ಯೇಸುವಿನ ಮನಃಪೂರ್ವಕತೆಯು ಏಕೆ ಅಷ್ಟು ದಿಗ್ಭಮ್ರೆಗೊಳಿಸುವಂಥದ್ದಾಗಿತ್ತು?
21 ಕ್ಷಮಿಸಲಿಕ್ಕಾಗಿರುವ ಮನಃಪೂರ್ವಕತೆಯ ಇನ್ನೂ ಅಧಿಕ ಸ್ತಬ್ಧರನ್ನಾಗಿ ಮಾಡುವ ಮಾದರಿಯನ್ನು ಯೇಸು ಸ್ಥಾಪಿಸಿದನು. ಅವನ ವೈರಿಗಳು ಅವನನ್ನು ಸೆರೆಹಿಡಿದಿದ್ದರು, ಅನ್ಯಾಯವಾಗಿ ಅವನನ್ನು ವಿಚಾರಿಸಿದರು, ಅಪರಾಧ ಹೊರಿಸಿದರು, ಅಪಹಾಸ್ಯ ಮಾಡಿದರು, ಅವನ ಮೇಲೆ ಉಗುಳಿದರು, ಬಹುಶಃ ಅವುಗಳಲ್ಲಿ ಎಲುಬಿನ ಮತ್ತು ಲೋಹದ ತುಂಡುಗಳು ಒಳಸೇರಿಸಲ್ಪಟ್ಟಿದ್ದ ಅನೇಕ ಪಟ್ಟಿಗಳಿದ್ದ ಒಂದು ಚಾವಟಿಯಿಂದ ಅವನನ್ನು ಹೊಡೆದರು, ಮತ್ತು ಅಂತಿಮವಾಗಿ ತಾಸುಗಟ್ಟಲೆ ಅವನನ್ನು ಒಂದು ಕಂಭಕ್ಕೆ ಮೊಳೆ ಹೊಡೆದು ಬಂಧಿಸಿದರು. ಇದರಲ್ಲಿ ಹೆಚ್ಚಾಗಿ ರೋಮನರು ಒಳಗೊಂಡಿದ್ದರು. ಆದರೂ, ಆ ಯಾತನಾ ಕಂಭದ ಮೇಲೆ ಯೇಸು ಸಾಯುತ್ತಿದ್ದಾಗ, ತನ್ನನ್ನು ಶೂಲಕ್ಕೆ ಏರಿಸಿದ್ದ ಸೈನಿಕರ ಕುರಿತು ತನ್ನ ಸ್ವರ್ಗೀಯ ತಂದೆಗೆ ಅವನು ಹೇಳಿದ್ದು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”—ಲೂಕ 23:34.
22. ಪರ್ವತ ಪ್ರಸಂಗದ ಯಾವ ಮಾತುಗಳನ್ನು ನಾವು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸಬೇಕು?
22 ತನ್ನ ಪರ್ವತ ಪ್ರಸಂಗದಲ್ಲಿ, ಯೇಸು ಹೀಗೆ ಹೇಳಿದ್ದನು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” ತನ್ನ ಭೂಶುಶ್ರೂಷೆಯ ಅಂತ್ಯದ ವರೆಗೆ ಸ್ವತಃ ತಾನೇ ಆ ಸೂತ್ರಕ್ಕೆ ವಿಧೇಯನಾದನು. ನಮ್ಮ ಪತನಗೊಂಡ ಶರೀರದ ಬಲಹೀನತೆಗಳೊಂದಿಗೆ ಹೆಣಗಾಡುವ ನಮಗೆ, ಅದು ಬಹಳ ನಿರ್ಬಂಧಪಡಿಸುವಂಥದ್ದಾಗಿದೆಯೊ? ಕಡಿಮೆ ಪಕ್ಷ ತನ್ನ ಶಿಷ್ಯರಿಗೆ ಮಾದರಿ ಪ್ರಾರ್ಥನೆಯನ್ನು ಕೊಟ್ಟ ಬಳಿಕ ಅವರಿಗೆ ಯೇಸು ಕಲಿಸಿದ ಮಾತುಗಳನ್ನು ಕಾರ್ಯರೂಪಕ್ಕೆ ಹಾಕಲು ನಾವು ಪ್ರಯತ್ನಿಸಬೇಕು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾಯ 5:44; 6:14, 15) ಯೆಹೋವನು ಕ್ಷಮಿಸುವಂತೆ ನಾವು ಕ್ಷಮಿಸುವುದಾದರೆ, ನಾವು ಕ್ಷಮಿಸುವೆವು ಮತ್ತು ಮರೆತುಬಿಡುವೆವು.
ನಿಮಗೆ ನೆನಪಿದೆಯೊ?
◻ ನಮ್ಮ ಪಾಪಗಳೊಂದಿಗೆ ಯೆಹೋವನು ಹೇಗೆ ವ್ಯವಹರಿಸುತ್ತಾನೆ, ಮತ್ತು ಏಕೆ?
◻ ಮನಸ್ಸೆ ತನ್ನ ಅರಸುತನಕ್ಕೆ ಪುನಃಸ್ಥಾಪಿಸಲ್ಪಟ್ಟದ್ದೇಕೆ?
◻ ಯೆಹೋವನ ಕ್ಷಮಾಪಣೆಯ ಯಾವ ವಿಶಿಷ್ಟಲಕ್ಷಣವನ್ನು ಅನುಸರಿಸುವುದು ಮಾನವರಿಗೆ ಒಂದು ಸವಾಲಾಗಿದೆ?
◻ ಕ್ಷಮಿಸಲಿಕ್ಕಾಗಿದ್ದ ಯೇಸುವಿನ ಮನಃಪೂರ್ವಕತೆಯು ಹೇಗೆ ಅಷ್ಟು ದಿಗ್ಭಮ್ರೆಗೊಳಿಸುವಂಥದ್ದಾಗಿತ್ತು?
[ಪುಟ 24 ರಲ್ಲಿರುವ ಚಿತ್ರ]
ದೇವರ ಕ್ಷಮಾಪಣೆಗಾಗಿದ್ದ ಅಗತ್ಯವನ್ನು ಮನಗಾಣುವಂತೆ ನಾತಾನನು ದಾವೀದನಿಗೆ ಸಹಾಯ ಮಾಡಿದನು