ವಾಚಕರಿಂದ ಪ್ರಶ್ನೆಗಳು
ಮತ್ತಾಯ 19:10-12ರಲ್ಲಿರುವ ಯೇಸುವಿನ ಮಾತುಗಳು ಅವಿವಾಹಿತರಾಗಿರಲು ನಿರ್ಧರಿಸಿರುವವರಿಗೆ ಅವಿವಾಹಿತ ಸ್ಥಿತಿಯ ವರ ಯಾವುದೋ ರಹಸ್ಯ ವಿಧದಲ್ಲಿ ಸಿಕ್ಕಿದೆಯೆಂದು ಸೂಚಿಸುತ್ತವೆಯೇ?
▪ ಅವಿವಾಹಿತ ಸ್ಥಿತಿಯ ಕುರಿತ ಈ ಮಾತುಗಳನ್ನು ಯೇಸು ಯಾವ ಸಂದರ್ಭದಲ್ಲಿ ಹೇಳಿದನೆಂದು ಮೊದಲು ನೋಡೋಣ. ಫರಿಸಾಯರು ಯೇಸುವಿನ ಬಳಿಬಂದು ವಿವಾಹ ವಿಚ್ಛೇದನ ಸರಿಯೋ ಎಂದು ಕೇಳಿದರು. ವಿವಾಹದ ಕುರಿತು ಯೆಹೋವನ ಮಟ್ಟವೇನೆಂದು ಯೇಸು ಅವರಿಗೆ ಸ್ಪಷ್ಟವಾಗಿ ತಿಳಿಸಿದನು. ಒಬ್ಬ ಪುರುಷನು ತನ್ನ ಪತ್ನಿಯಲ್ಲಿ “ಏನೋ ಅವಲಕ್ಷಣವನ್ನು” ಕಂಡರೆ ಅವಳಿಗೆ ವಿಚ್ಛೇದನ ಕೊಡಬಹುದೆಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿರುವುದಾದರೂ ಸೃಷ್ಟಿಯ ಆರಂಭದಿಂದ ಈ ರೀತಿಯ ಪದ್ಧತಿ ಇರಲಿಲ್ಲವೆಂದು ಅವರಿಗೆ ವಿವರಿಸಿದನು. (ಧರ್ಮೋ. 24:1, 2) ಹಾಗಾಗಿ “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ” ಎಂದು ಯೇಸು ಹೇಳಿದನು.—ಮತ್ತಾ. 19:3-9.
ಇದನ್ನು ಕೇಳಿದ ಶಿಷ್ಯರು, “ಹೆಂಡತಿಯ ವಿಷಯದಲ್ಲಿ ಗಂಡನ ಪರಿಸ್ಥಿತಿ ಹೀಗಿರುವಲ್ಲಿ ಮದುವೆಯಾಗದಿರುವುದೇ ಒಳ್ಳೇದು” ಎಂದಾಗ ಉತ್ತರವಾಗಿ ಯೇಸು ಹೀಗಂದನು: “ಈ ಮಾತಿಗೆ ಆಸ್ಪದಮಾಡಿಕೊಡುವ ವರವನ್ನು ಯಾರು ಹೊಂದಿದ್ದಾರೋ ಅವರೇ ಹೊರತು ಇನ್ನಾರೂ ಇದಕ್ಕೆ ಆಸ್ಪದಮಾಡಿಕೊಡುವುದಿಲ್ಲ. ತಾಯಿಯ ಗರ್ಭದಿಂದಲೇ ನಪುಂಸಕರಾಗಿ ಹುಟ್ಟಿದವರು ಇದ್ದಾರೆ; ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟಿರುವ ನಪುಂಸಕರು ಇದ್ದಾರೆ; ಮತ್ತು ಸ್ವರ್ಗದ ರಾಜ್ಯದ ನಿಮಿತ್ತ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡ ನಪುಂಸಕರು ಇದ್ದಾರೆ. ಇದಕ್ಕೆ ಆಸ್ಪದಮಾಡಿಕೊಳ್ಳಬಲ್ಲವನು ಆಸ್ಪದಮಾಡಿಕೊಳ್ಳಲಿ.”—ಮತ್ತಾ. 19:10-12.
ಕೆಲವರು ಹುಟ್ಟಿನಿಂದಲೇ ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಅವಗಢದಿಂದ ಅಥವಾ ಅಂಗಹೀನ ಮಾಡಲ್ಪಟ್ಟಿರುವುದರಿಂದ ನಪುಂಸಕರಾಗಿರುತ್ತಾರೆ. ಆದರೆ ಸ್ವಇಚ್ಛೆಯಿಂದ ನಪುಂಸಕರಾದವರೂ ಇದ್ದಾರೆ. ಅವರು ವಿವಾಹ ಜೀವನ ನಡೆಸಲು ಅರ್ಹರಾಗಿದ್ದರೂ ಸ್ವನಿಯಂತ್ರಣವನ್ನು ಬೆಳೆಸಿಕೊಂಡು “ಸ್ವರ್ಗದ ರಾಜ್ಯದ ನಿಮಿತ್ತ” ಅವಿವಾಹಿತರಾಗಿಯೇ ಉಳಿಯುತ್ತಾರೆ. ಅವರು ಯೇಸುವನ್ನು ಅನುಕರಿಸುತ್ತಾ ರಾಜ್ಯದ ಸೇವೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ಅವಿವಾಹಿತರಾಗಿರುವ ಆಯ್ಕೆ ಮಾಡುತ್ತಾರೆ. ಅವರಿಗೆ ಹುಟ್ಟಿನಿಂದಲೇ ಅವಿವಾಹಿತ ಸ್ಥಿತಿಯ ವರವಿರುವುದಿಲ್ಲ. ಅಥವಾ ನಂತರ ಅದನ್ನು ಪಡೆದಿರುವುದಿಲ್ಲ. ಸ್ವತಃ ಅವರೇ ಅದಕ್ಕೆ ಆಸ್ಪದಮಾಡಿಕೊಳ್ಳುತ್ತಾರೆ. ಅಂದರೆ ಸ್ವಇಚ್ಛೆಯಿಂದ ಆ ವರವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಅಥವಾ ಅವಿವಾಹಿತರಾಗಿ ಉಳಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ.
ಯೇಸುವಿನ ಮಾತುಗಳಿಗೆ ಅಪೊಸ್ತಲ ಪೌಲನ ಮಾತುಗಳು ಹೆಚ್ಚನ್ನು ಕೂಡಿಸುತ್ತವೆ. ಅವನು ಹೇಳಿದಂತೆ, ವಿವಾಹಿತರು ಅವಿವಾಹಿತರೆಲ್ಲರೂ ದೇವರು ಮೆಚ್ಚುವಂಥ ರೀತಿಯಲ್ಲಿ ಆತನ ಸೇವೆ ಮಾಡಬಹುದಾದರೂ ಅವಿವಾಹಿತನಾಗಿರಲು ‘ಹೃದಯದಲ್ಲಿ ನಿರ್ಧರಿಸಿರುವವನು’ “ಇನ್ನೂ ಹೆಚ್ಚು ಒಳ್ಳೇದನ್ನು ಮಾಡುವನು.” ಹೇಗೆ? ವಿವಾಹಿತರು ಸಂಗಾತಿಯನ್ನು ಮೆಚ್ಚಿಸಲು, ಅವರ ಕಾಳಜಿ ವಹಿಸಲು ಸಹ ತಮ್ಮ ಶಕ್ತಿ, ಸಮಯವನ್ನು ಕೊಡಬೇಕಾಗುತ್ತದೆ. ಆದರೆ ಅವಿವಾಹಿತರು ಅಂಥ ಯಾವುದೇ ಹಂಗಿಲ್ಲದೆ ತಮ್ಮನ್ನು ದೇವರ ಸೇವೆಗೆ ಪೂರ್ತಿಯಾಗಿ ನೀಡಿಕೊಳ್ಳಬಹುದು. ಇಂಥ ಸ್ಥಿತಿಯನ್ನು ಅವರು ‘ವರವೆಂದು’ ಪರಿಗಣಿಸುತ್ತಾರೆ.—1 ಕೊರಿಂ. 7:7, 32-38.
ಹೀಗೆ ಬೈಬಲ್ ಪ್ರಕಾರ, ಕ್ರೈಸ್ತನೊಬ್ಬನು ಯಾವುದೋ ರಹಸ್ಯ ವಿಧದಲ್ಲಿ ಅವಿವಾಹಿತ ಸ್ಥಿತಿಯ ವರವನ್ನು ಪಡೆದಿರುವುದಿಲ್ಲ. ಬದಲಿಗೆ ಅಪಕರ್ಷಣೆಯಿಲ್ಲದೆ ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡಲು ಬಯಸುವ ಕ್ರೈಸ್ತನು ಅವಿವಾಹಿತನಾಗಿ ಉಳಿಯುವ ವರವನ್ನು ಅಥವಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ. ಇಂಥ ನಿರ್ಧಾರವನ್ನು ಇಂದು ಅನೇಕ ಕ್ರೈಸ್ತರು ಮಾಡಿದ್ದಾರೆ. ಈ ಅವಿವಾಹಿತ ಕ್ರೈಸ್ತರನ್ನು ಉತ್ತೇಜಿಸಲು ನಮ್ಮಿಂದಾದುದೆಲ್ಲವನ್ನು ಮಾಡೋಣ.