ದೇವರಿಗೆ ಮೆಚ್ಚಿಗೆಯಾಗುವಂತಹ ಕೊಡುವಿಕೆ
ಮರಿಯ, ಮಾರ್ಥ, ಮತ್ತು ಇತ್ತೀಚೆಗೆ ಪುನರುತ್ಥಾನ ಮಾಡಲ್ಪಟ್ಟಿದ್ದ ಲಾಜರನ ಸಮೇತ ಅನೇಕ ಸ್ನೇಹಿತರೊಂದಿಗೆ ಯೇಸು ಮತ್ತು ಅವನ ಶಿಷ್ಯರು ಬೇಥಾನ್ಯದಲ್ಲಿ ಒಂದು ಔತಣವನ್ನು ಆನಂದಿಸುತ್ತಿದ್ದರು. ಮರಿಯಳು ಒಂದು ಸೇರಷ್ಟು ಬಹು ಬೆಲೆಯುಳ್ಳ ತೈಲವನ್ನು ತಂದು ಯೇಸುವಿನ ಪಾದಕ್ಕೆ ಹಚ್ಚಿದಾಗ, ಇಸ್ಕರಿಯೋತ ಯೂದನು ಅದರಿಂದ ಅಸಮಾಧಾನಗೊಂಡು ತನ್ನ ಅಭಿಪ್ರಾಯವನ್ನು ತಿಳಿಯಪಡಿಸಿದನು. “ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ” ಎಂದು ಹೇಳಿ ಅವನು ತನ್ನ ವಿರೋಧವನ್ನು ವ್ಯಕ್ತಪಡಿಸಿದನು. ಇತರರೂ ಕೂಡಲೆ ಅದೇ ರೀತಿಯ ಅಭಿಪ್ರಾಯವನ್ನು ತಿಳಿಸಿದರು.—ಯೋಹಾನ 12:1-6; ಮಾರ್ಕ 14:3-5.
ಹಾಗಿದ್ದರೂ, ಯೇಸು ಉತ್ತರಿಸಿದ್ದು: “ಈಕೆಯನ್ನು ಬಿಡಿರಿ. . . . ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರಮಾಡಬಹುದು; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.” (ಮಾರ್ಕ 14:6-9) ಧರ್ಮಕಾರ್ಯಗಳನ್ನು ಮಾಡುವುದು ಸದ್ಗುಣಶೀಲವೆಂದೂ ಅದು ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಸಹ ಒದಗಿಸಸಾಧ್ಯವಿದೆಯೆಂದೂ ಯೆಹೂದಿ ಧಾರ್ಮಿಕ ಮುಖಂಡರು ಕಲಿಸುತ್ತಿದ್ದರು. ಇನ್ನೊಂದು ಬದಿಯಲ್ಲಿ ಯೇಸುವಾದರೋ, ದೇವರು ಮೆಚ್ಚುವಂಥ ಕೊಡುವಿಕೆಯಲ್ಲಿ ಕೇವಲ ಬಡವರಿಗೆ ಉದಾರವಾಗಿ ಕೊಡುಗೆಗಳನ್ನು ನೀಡುವುದಕ್ಕಿಂತಲೂ ಹೆಚ್ಚು ಒಳಗೂಡಿದೆ ಎಂಬುದನ್ನು ಸ್ಪಷ್ಟಪಡಿಸಿದನು.
ಆರಂಭದ ಕ್ರೈಸ್ತ ಸಭೆಯಲ್ಲಿ ಯಾವ ರೀತಿಯ ಕೊಡುವಿಕೆಯಿತ್ತು ಎಂಬುದನ್ನು ಸ್ವಲ್ಪ ಪರಿಗಣಿಸುವುದು, ನಾವು ಜನರ ಕಡೆಗೆ ನಮ್ಮ ಹಿತಚಿಂತನೆಯನ್ನು ತೋರಿಸಸಾಧ್ಯವಿರುವ ಮತ್ತು ಈ ರೀತಿಯಲ್ಲಿ ನಮ್ಮ ಕೊಡುವಿಕೆಗಳ ಮೂಲಕ ದೇವರನ್ನು ಮೆಚ್ಚಿಸಬಹುದಾದ ಕೆಲವೊಂದು ಪ್ರಾಯೋಗಿಕ ವಿಧಗಳನ್ನು ಎತ್ತಿತೋರಿಸುವುದು. ಅಷ್ಟುಮಾತ್ರವಲ್ಲದೆ, ಅತಿ ಪ್ರಯೋಜನಕಾರಿಯಾಗಿರುವ ಒಂದು ವಿಧದ ಕೊಡುವಿಕೆಯನ್ನು ಸಹ ಅದು ಗುರುತಿಸುತ್ತದೆ.
“ಕರುಣೆಯ ದಾನಗಳನ್ನು ಕೊಡಿರಿ”
ಅನೇಕ ಸಂದರ್ಭಗಳಲ್ಲಿ ಯೇಸು ತನ್ನ ಶಿಷ್ಯರಿಗೆ “ಕರುಣೆಯ ದಾನಗಳನ್ನು ಕೊಡಿರಿ” ಅಥವಾ ಕನ್ನಡ ಬೈಬಲಿನಲ್ಲಿ ತಿಳಿಸಿದಂತೆ “ದಾನಾಕೊಡಿರಿ” ಎಂಬುದಾಗಿ ಉತ್ತೇಜಿಸಿದನು. (ಲೂಕ 12:33, NW) ಆದರೆ, ದೇವರನ್ನು ಘನಪಡಿಸುವ ಬದಲಾಗಿ ಕೊಡುವವನನ್ನು ಘನಪಡಿಸುವ ಉದ್ದೇಶದಿಂದ ಆಡಂಬರದ ಪ್ರದರ್ಶನವನ್ನು ಮಾಡುವುದರ ವಿರುದ್ಧ ಯೇಸು ಎಚ್ಚರಿಸಿದನು. “ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ” ಎಂಬುದಾಗಿ ಅವನು ತಿಳಿಸಿದನು. (ಮತ್ತಾಯ 6:1-4) ಈ ಬುದ್ಧಿವಾದವನ್ನು ಅನುಸರಿಸುತ್ತಾ, ಆರಂಭದ ಕ್ರೈಸ್ತರು ತಮ್ಮ ದಿನಗಳ ಧರ್ಮಾಡಂಬರದ ಧಾರ್ಮಿಕ ಮುಖಂಡರಂತೆ ತೋರಿಕೆಗಾಗಿ ಧರ್ಮಕಾರ್ಯವನ್ನು ಮಾಡದೆ ಅಗತ್ಯದಲ್ಲಿದ್ದವರಿಗೆ ವೈಯಕ್ತಿಕ ಸೇವೆಯನ್ನು ಮಾಡುವುದರ ಮೂಲಕ ಅಥವಾ ಖಾಸಗಿ ಕೊಡುವಿಕೆಯಿಂದ ಸಹಾಯಮಾಡಿದರು.
ಉದಾಹರಣೆಗಾಗಿ ಲೂಕ 8:1-3ರಲ್ಲಿ, ಮಗ್ದಲದ ಮರಿಯಳು, ಯೋಹಾನಳು, ಸುಸನ್ನಳು, ಮತ್ತು ಬೇರೆ ಅನೇಕರು ಯಾವುದೇ ಪ್ರದರ್ಶನವಿಲ್ಲದೆ ಯೇಸು ಮತ್ತು ಅವನ ಅಪೊಸ್ತಲರಿಗೆ ಸೇವೆಸಲ್ಲಿಸುವಾಗ “ತಮ್ಮ ಆಸ್ತಿ”ಯನ್ನು ಉಪಯೋಗಿಸಿದರು ಎಂಬುದಾಗಿ ನಮಗೆ ಹೇಳಲ್ಪಟ್ಟಿದೆ. ಯೇಸು ಮತ್ತು ಅವನ ಅಪೊಸ್ತಲರು ನಿರ್ಗತಿಕರಾಗಿರದಿದ್ದರೂ, ಶುಶ್ರೂಷೆಯಲ್ಲಿ ತಮ್ಮ ಶಕ್ತಿಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸುವ ಸಲುವಾಗಿ ತಮ್ಮ ಜೀವನಾಧಾರವನ್ನು ತ್ಯಜಿಸಿಬಂದವರಾಗಿದ್ದರು. (ಮತ್ತಾಯ 4:18-22; ಲೂಕ 5:27, 28) ಅವರು ತಮ್ಮ ದೇವದತ್ತ ಕೆಲಸವನ್ನು ಪೂರೈಸಲು ಸಹಾಯಮಾಡುವ ಮೂಲಕ ಈ ಸ್ತ್ರೀಯರು ಕಾರ್ಯತಃ ದೇವರನ್ನು ಘನಪಡಿಸಿದರು. ಮತ್ತು ದೇವರು ತನ್ನ ಮೆಚ್ಚಿಕೆಯನ್ನು ವ್ಯಕ್ತಪಡಿಸುತ್ತಾ, ಮುಂದಿನ ಸಂತತಿಯವರು ಓದಿ ತಿಳಿದುಕೊಳ್ಳುವಂತೆ ಅವರ ಕರುಣಾಭರಿತ ಉದಾರ ಮನೋಭಾವದ ದಾಖಲೆಯನ್ನು ಬೈಬಲಿನಲ್ಲಿ ಸಂರಕ್ಷಿಸಿಟ್ಟನು.—ಜ್ಞಾನೋಕ್ತಿ 19:17; ಇಬ್ರಿಯ 6:10.
“ಸತ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದ” ಇನ್ನೊಬ್ಬ ದಯಾಪರ ಸ್ತ್ರೀಯು ದೊರ್ಕಳು. ಸಮುದ್ರ ಬದಿಯ ತನ್ನ ನಗರವಾದ ಯೊಪ್ಪದಲ್ಲಿ, ಕಷ್ಟದಲ್ಲಿರುವ ವಿಧವೆಯರಿಗೆ ಆಕೆಯು ಬಟ್ಟೆಗಳನ್ನು ತಯಾರಿಸಿ ಕೊಡುತ್ತಿದ್ದಳು. ಅವಳು ಬಟ್ಟೆಯ ಪೂರ್ತಿ ಹಣವನ್ನು ಸ್ವತಃ ನೀಡುತ್ತಿದ್ದಳೋ ಅಥವಾ ಯಾವುದೇ ಹಣ ಪಡೆದುಕೊಳ್ಳದೆ ಬಟ್ಟೆಯನ್ನು ಕೇವಲ ನೆಯ್ದುಕೊಡುತ್ತಿದ್ದಳೋ, ಅದು ನಮಗೆ ತಿಳಿಯದು. ಆದರೆ ಅವಳು, ಸತ್ಕಾರ್ಯಗಳ ನಿಮಿತ ಯಾರಿಗೆ ಸಹಾಯಮಾಡುತ್ತಿದ್ದಳೋ ಅವರ ಮತ್ತು ಅವಳ ಈ ಒಳ್ಳೇತನಕ್ಕಾಗಿ ಕರುಣಾಭರಿತನಾಗಿ ಪ್ರತಿಫಲನೀಡಿದ ದೇವರ ಪ್ರೀತಿಪಾತ್ರಳಾದಳು.—ಅ. ಕೃತ್ಯಗಳು 9:36-41.
ಯೋಗ್ಯವಾದ ಹೇತು ಅತ್ಯಾವಶ್ಯಕವಾಗಿದೆ
ಕೊಡುವಂತೆ ಈ ವ್ಯಕ್ತಿಗಳನ್ನು ಯಾವುದು ಪ್ರಚೋದಿಸಿತು? ಇದು ಸಹಾಯವನ್ನು ಬೇಡುತ್ತಾ ಮಾಡಲ್ಪಟ್ಟಿರುವ ಒಂದು ಭಾವನಾತ್ಮಕ ಮೊರೆಯನ್ನು ಕೇಳಿ ಹೊರಹೊಮ್ಮಿರುವ, ಸಹಾನುಭೂತಿಯ ಹಠಾತ್ತಾದ ಕ್ರಿಯೆಯಾಗಿರಲಿಲ್ಲ. ಬಡತನ, ಅನನುಕೂಲ ಪರಿಸ್ಥಿತಿ, ಅಸ್ವಸ್ಥತೆ, ಅಥವಾ ಇತರ ಸಂಕಷ್ಟಗಳನ್ನು ಎದುರಿಸುತ್ತಿರುವವರಿಗೆ ಸಹಾಯಮಾಡಲು, ಪ್ರತಿದಿನ ತಮ್ಮಿಂದ ಸಾಧ್ಯವಿರುವಷ್ಟನ್ನು ಮಾಡುವುದು ತಮ್ಮ ವೈಯಕ್ತಿಕ ನೈತಿಕ ಹೊಣೆಗಾರಿಕೆಯಾಗಿದೆ ಎಂಬುದನ್ನು ಅವರು ತಿಳಿದಿದ್ದರು. (ಜ್ಞಾನೋಕ್ತಿ 3:27, 28; ಯಾಕೋಬ 2:15, 16) ಈ ರೀತಿಯ ಕೊಡುವಿಕೆಯು ದೇವರನ್ನು ಮೆಚ್ಚಿಸುತ್ತದೆ. ಇದು, ದೇವರ ಕಡೆಗಿನ ನಮ್ಮ ಆಳವಾದ ಪ್ರೀತಿ ಮತ್ತು ಆತನ ಕರುಣಾಭರಿತ ಹಾಗೂ ಉದಾರಭಾವದ ವ್ಯಕ್ತಿತ್ವವನ್ನು ಅನುಕರಿಸಬೇಕೆಂಬ ಬಯಕೆಯಿಂದ ಮುಖ್ಯವಾಗಿ ಪ್ರಚೋದಿಸಲ್ಪಡುತ್ತದೆ.—ಮತ್ತಾಯ 5:44, 45; ಯಾಕೋಬ 1:17.
“ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?” ಎಂದು ಪ್ರಶ್ನಿಸಿದಾಗ ಅಪೊಸ್ತಲ ಯೋಹಾನನು ಕೊಡುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದನು. (1 ಯೋಹಾನ 3:17) ಅವನು ಕೇಳಿದ ಪ್ರಶ್ನೆಗೆ ಉತ್ತರವು ಸ್ಪಷ್ಟವಾಗಿದೆ. ದೇವರ ಮೇಲಣ ಪ್ರೀತಿಯು, ದಾನಧರ್ಮಗಳನ್ನು ಮಾಡುವಂತೆ ಜನರನ್ನು ಪ್ರೇರಿಸುತ್ತದೆ. ಆತನಂತೆಯೇ ಉದಾರ ಮನೋಭಾವವನ್ನು ಪ್ರದರ್ಶಿಸುವ ಜನರನ್ನು ದೇವರು ಗಣ್ಯಮಾಡುತ್ತಾನೆ ಮತ್ತು ಅವರಿಗೆ ಪ್ರತಿಫಲವನ್ನು ಕೊಡುತ್ತಾನೆ. (ಜ್ಞಾನೋಕ್ತಿ 22:9; 2 ಕೊರಿಂಥ 9:6-11) ಇಂದು ನಾವು ಈ ರೀತಿಯ ಉದಾರ ಮನೋಭಾವವನ್ನು ನೋಡುತ್ತೇವೋ? ಇತ್ತೀಚೆಗೆ ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ನಡೆದಿರುವ ಸಂಗತಿಯನ್ನು ಪರಿಗಣಿಸಿರಿ.
ಒಬ್ಬಾಕೆ ವೃದ್ಧ ಕ್ರೈಸ್ತ ಸ್ತ್ರೀಯ ಮನೆಯು ಬಹಳ ದುಸ್ಥಿತಿಯಲ್ಲಿದ್ದು, ಹೆಚ್ಚಿನ ದುರಸ್ತಿಯನ್ನು ಅಗತ್ಯಪಡಿಸುವಂತಿತ್ತು. ಅವಳು ಒಂಟಿಯಾಗಿದ್ದಳು ಮತ್ತು ಅವಳಿಗೆ ಸಹಾಯ ಮಾಡಲು, ಆಕೆಯ ಕುಟುಂಬದಲ್ಲಿ ಯಾರೂ ಇರಲಿಲ್ಲ. ಅನೇಕ ವರುಷಗಳಿಂದ ಅವಳ ಮನೆಯಲ್ಲಿ ಕ್ರೈಸ್ತ ಕೂಟಗಳು ನಡೆಯುತ್ತಿದ್ದವು ಮತ್ತು ಅನೇಕ ಬಾರಿ ಅವಳು ಇತರರಿಗೆ ಅತಿಥಿ ಸತ್ಕಾರ್ಯವನ್ನೂ ಮಾಡುತ್ತಿದ್ದಳು. (ಅ. ಕೃತ್ಯಗಳು 16:14, 15, 40) ಅವಳ ಪರಿಸ್ಥಿತಿಯನ್ನು ನೋಡಿ, ಸಭೆಯ ಸದಸ್ಯರು ಒಟ್ಟಾಗಿ ಅವಳಿಗೆ ಸಹಾಯಮಾಡಲು ಮುಂದೆಬಂದರು. ಕೆಲವರು ಹಣವನ್ನು ನೀಡಿದರು, ಇನ್ನಿತರರು ತಮ್ಮ ಶ್ರಮವನ್ನು ನೀಡಿದರು. ಕೆಲವು ವಾರಾಂತ್ಯಗಳಲ್ಲಿಯೇ ಸ್ವಯಂಸೇವಕರು, ಒಂದು ಹೊಸ ಚಾವಣಿ ಹಾಕಿ, ಹೊಸ ಸ್ನಾನದ ಕೋಣೆಯನ್ನು ಕಟ್ಟಿ, ಮೊದಲನೆಯ ಮಹಡಿಗೆ ಗಾರೆ ಗಿಲಾವು ಮಾಡಿ ಬಣ್ಣ ಬಳಿದರು ಮತ್ತು ಅಡಿಗೆ ಕೋಣೆಯಲ್ಲಿ ಹೊಸ ಅಲಮಾರುಗಳನ್ನು ಅಳವಡಿಸಿದರು. ಅವರ ಕೊಡುವಿಕೆಯು, ಆ ಸ್ತ್ರೀಯ ಅಗತ್ಯತೆಗಳನ್ನು ಪೂರೈಸಿದವು ಮಾತ್ರವಲ್ಲದೆ ಸಭೆಯಲ್ಲಿರುವವರೂ ಒಬ್ಬರಿಗೊಬ್ಬರು ಆಪ್ತರಾದರು ಮತ್ತು ಇದು ನಿಜ ಕ್ರೈಸ್ತ ಕೊಡುವಿಕೆಯ ಉದಾಹರಣೆಯೋಪಾದಿ ನೆರೆಹೊರೆಯ ಜನರನ್ನು ಪ್ರಭಾವಿಸಿತು.
ನಾವು ಇತರರಿಗೆ ವೈಯಕ್ತಿಕವಾಗಿ ಸಹಾಯನೀಡಬಲ್ಲ ಅನೇಕ ವಿಧಗಳಿವೆ. ನಾವು ತಂದೆಯಿಲ್ಲದ ಹುಡುಗನಿಗಾಗಿ ಅಥವಾ ಹುಡುಗಿಗಾಗಿ ಸಮಯವನ್ನು ವ್ಯಯಿಸಬಲ್ಲೆವೋ? ನಮಗೆ ತಿಳಿದಿರುವ ಒಬ್ಬ ವೃದ್ಧ ವಿಧವೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವುದರಲ್ಲಿ ಅಥವಾ ಬಟ್ಟೆ ಹೊಲಿದುಕೊಡುವುದರಲ್ಲಿ ನಾವು ಸಹಾಯಮಾಡಬಲ್ಲೆವೋ? ಆರ್ಥಿಕ ಬಿಕ್ಕಟ್ಟಿನಲ್ಲಿರುವವರಿಗೆ ಒಂದು ಊಟವನ್ನೋ ಅಥವಾ ಸ್ವಲ್ಪ ಹಣವನ್ನೋ ನಮ್ಮಿಂದ ನೀಡಸಾಧ್ಯವಿದೆಯೋ? ಇತರರಿಗೆ ಸಹಾಯಮಾಡಲು ನಾವು ಐಶ್ವರ್ಯವಂತರಾಗಿರಬೇಕಾಗಿಲ್ಲ. ಅಪೊಸ್ತಲ ಪೌಲನು ಬರೆದುದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.” (2 ಕೊರಿಂಥ 8:12) ವೈಯಕ್ತಿಕವಾದ, ನೇರವಾಗಿ ಕೊಡುವ ಕೊಡುವಿಕೆಯು ಮಾತ್ರವೇ ದೇವರು ಆಶೀರ್ವದಿಸುವ ಕೊಡುವಿಕೆಯಾಗಿದೆಯೆ? ಇಲ್ಲ.
ವ್ಯವಸ್ಥಾಪಿತ ಪರಿಹಾರದ ಕುರಿತಾಗಿ ಏನು?
ಕೆಲವೊಮ್ಮೆ ವೈಯಕ್ತಿಕ ಪ್ರಯತ್ನಗಳು ಸಾಕಾಗುವುದಿಲ್ಲ. ವಾಸ್ತವದಲ್ಲಿ, ಬಡವರಿಗೆ ಸಹಾಯಮಾಡುವ ಉದ್ದೇಶದಿಂದ, ಎಲ್ಲರಿಗೂ ಸೇರಿದ ಒಂದು ಹಣದ ಚೀಲವನ್ನು ಯೇಸು ಮತ್ತು ಅವನ ಅಪೊಸ್ತಲರು ಇಟ್ಟರು ಮತ್ತು ತಮ್ಮ ಸೇವೆಯಲ್ಲಿ ಭೇಟಿಯಾದ ಜನರಿಂದ ದಾನವನ್ನು ಅವರು ಸ್ವೀಕರಿಸಿದರು. (ಯೋಹಾನ 12:6; 13:29) ಅಂತೆಯೇ, ಪ್ರಥಮ ಶತಮಾನದ ಸಭೆಗಳು ಆಗತ್ಯವಿದ್ದಾಗ ಹಣವನ್ನು ಒಟ್ಟುಸೇರಿಸುತ್ತಿದ್ದರು ಮತ್ತು ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ವ್ಯವಸ್ಥಾಪಿಸುತ್ತಿದ್ದರು.—ಅ. ಕೃತ್ಯಗಳು 2:44, 45; 6:1-3; 1 ತಿಮೊಥೆಯ 5:9, 10.
ಸಾ.ಶ. 55ರ ಸುಮಾರಿಗೆ ಅಂಥ ಒಂದು ಘಟನೆಯು ಸಂಭವಿಸಿತ್ತು. ಪ್ರಾಯಶಃ ಇತ್ತೀಚಿನ ಒಂದು ದೊಡ್ಡ ಕ್ಷಾಮದಿಂದಾಗಿ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರು ಬಡತನವನ್ನು ಅನುಭವಿಸುತ್ತಿದ್ದರು. (ಅ. ಕೃತ್ಯಗಳು 11:27-30) ಯಾವಾಗಲೂ ಬಡವರ ಕುರಿತು ಚಿಂತಿತನಾಗಿದ್ದ ಅಪೊಸ್ತಲ ಪೌಲನು ಮೆಕದೋನ್ಯ ಸಭೆಯಷ್ಟು ದೂರದ ಸಭೆಗಳ ಸಹಾಯವನ್ನು ಕೋರಿದನು. ಅವನು ವೈಯಕ್ತಿಕವಾಗಿ ಹಣಸಂಗ್ರಹವನ್ನು ವ್ಯವಸ್ಥಾಪಿಸಿದನು ಮತ್ತು ಅದನ್ನು ತಲಪಿಸಲು ಯೋಗ್ಯ ಸಹೋದರರನ್ನು ಉಪಯೋಗಿಸಿದನು. (1 ಕೊರಿಂಥ 16:1-4; ಗಲಾತ್ಯ 2:10) ಅವನಾಗಲಿ ಅಥವಾ ಈ ಕೆಲಸದಲ್ಲಿ ಒಳಗೊಂಡ ಇತರರಾಗಲಿ ತಾವು ಸಲ್ಲಿಸಿದ ಸೇವೆಗೆ ಯಾವ ವೇತನವನ್ನು ಪಡೆದುಕೊಳ್ಳಲಿಲ್ಲ.—2 ಕೊರಿಂಥ 8:20, 21.
ಇಂದಿರುವ ಯೆಹೋವನ ಸಾಕ್ಷಿಗಳು ಸಹ ವಿಪತ್ತು ಬಂದೆರಗಿದಾಗ ಸಹಾಯಮಾಡಲು ಸಿದ್ಧರಿದ್ದಾರೆ. ಉದಾಹರಣೆಗೆ, 2001ರ ಬೇಸಿಗೆ ಸಮಯದಲ್ಲಿ, ಅಮೆರಿಕದ ಟೆಕ್ಸಾಸ್ನ ಹೌಸ್ಟನ್ನಲ್ಲಿ ಧಾರಾಕಾರವಾದ ಬಿರುಗಾಳಿಗಳಿಂದಾಗಿ ಭಾರಿ ನೆರೆಹಾವಳಿಯುಂಟಾಯಿತು. ಒಟ್ಟು ಮೊತ್ತದಲ್ಲಿ, ಸಾಕ್ಷಿಗಳ 723 ಮನೆಗಳು ಹಾಳಾದವು. ಕೆಲವು ಸ್ವಲ್ಪಮಟ್ಟಿಗೆ ಹಾಳಾಯಿತು, ಆದರೆ ಅನೇಕ ಮನೆಗಳು ಬಹಳಷ್ಟು ಹಾಳಾಯಿತು. ಅರ್ಹರಾದ ಕ್ರೈಸ್ತ ಹಿರಿಯರಿಂದ ಮಾಡಲ್ಪಟ್ಟ ವಿಪತ್ತು ಪರಿಹಾರ ಕಮಿಟಿಯು, ವ್ಯಕ್ತಿಗತ ಅಗತ್ಯಗಳೇನೆಂಬುದನ್ನು ನಿರ್ಧರಿಸಲು ಮತ್ತು ಸ್ಥಳಿಕ ಸಾಕ್ಷಿಗಳಿಗೆ ಪರಿಸ್ಥಿತಿಯನ್ನು ಎದುರಿಸಲು ಹಾಗೂ ತಮ್ಮ ಮನೆಗಳನ್ನು ದುರಸ್ತಿಗೊಳಿಸಲು ಸಹಾಯಾರ್ಥವಾಗಿ ಪರಿಹಾರ ನಿಧಿಯನ್ನು ಹಂಚಲು ಕೂಡಲೆ ಸಿದ್ಧವಾಯಿತು. ಅಕ್ಕಪಕ್ಕದಲ್ಲಿದ್ದ ಸಭೆಗಳಿಂದ ಬಂದ ಸ್ವಯಂಸೇವಕರು ಎಲ್ಲಾ ಕೆಲಸವನ್ನು ಮಾಡಿದರು. ಒಬ್ಬಾಕೆ ಸಾಕ್ಷಿಯು ಈ ಸಹಾಯಕ್ಕಾಗಿ ಎಷ್ಟು ಕೃತಜ್ಞಳಾಗಿದ್ದಳೆಂದರೆ, ಅವಳ ಮನೆಯ ದುರಸ್ತಿಗೆ ಆದ ಖರ್ಚನ್ನು ಸರಿದೂಗಿಸಲು ಇನ್ಶೂರೆನ್ಸ್ ಕಂಪೆನಿಯಿಂದ ಹಣ ದೊರಕಿದೊಡನೆ, ಅಗತ್ಯದಲ್ಲಿರುವವರಿಗೆ ಸಹಾಯಮಾಡಸಾಧ್ಯವಾಗುವಂತೆ ಅವಳು ಕೂಡಲೆ ಆ ಹಣವನ್ನು ಪರಿಹಾರ ನಿಧಿಗೆ ದಾನಮಾಡಿದಳು.
ವ್ಯವಸ್ಥಾಪಿತ ಧರ್ಮಕಾರ್ಯಸಂಸ್ಥೆಗಳ ವಿರುದ್ಧವಾಗಿ ಬರುವ ಅನೇಕ ದೂರುಗಳನ್ನು ನಾವು ಈಗಾಗಲೇ ಕೇಳಿಸಿಕೊಂಡಿರುವುದರಿಂದ ನಾವು ಜಾಗ್ರತೆಯಿಂದಿರಬೇಕು. ಕೆಲವು ಧರ್ಮಕಾರ್ಯಸಂಸ್ಥೆಗಳು ತಮ್ಮ ಆಡಳಿತ ಸಿಬ್ಬಂದಿಗಾಗಿ ಇಲ್ಲವೆ ಹಣಸಂಗ್ರಹ ಮಾಡುವದಕ್ಕಾಗಿ ತುಂಬ ಹಣವನ್ನು ವ್ಯಯಿಸುತ್ತದೆ. ಆದುದರಿಂದ, ಯಾವ ಉದ್ದೇಶಕ್ಕಾಗಿ ಅವರು ಹಣವನ್ನು ಸಂಗ್ರಹಿಸಿದ್ದಾರೋ ಅದಕ್ಕೆ ಅವರ ಬಳಿ ಸ್ವಲ್ಪವೇ ಹಣ ಉಳಿದಿರುತ್ತದೆ. “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಎಂದು ಜ್ಞಾನೋಕ್ತಿ 14:15 ತಿಳಿಸುತ್ತದೆ. ಆದುದರಿಂದ, ನಿಜತ್ವಗಳನ್ನು ಕೂಲಂಕಷವಾಗಿ ಪರೀಕ್ಷಿಸುವುದು ವಿವೇಕಯುತವಾಗಿದೆ.
ಅತ್ಯುತ್ತಮ ಪ್ರಯೋಜನವನ್ನು ತರಬಲ್ಲ ಕೊಡುವಿಕೆ
ದಾನಧರ್ಮಕ್ಕಿಂತಲೂ ಅತಿ ಪ್ರಾಮುಖ್ಯವಾದ ಒಂದು ಕೊಡುವಿಕೆಯಿದೆ. ಇದನ್ನು ಯೇಸು, ಒಬ್ಬ ಐಶ್ವರ್ಯವಂತನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಮಾಡಬೇಕೆಂದು ಕೇಳಿದಾಗ ತಿಳಿಸಿದನು. ಯೇಸು ಅವನಿಗಂದದ್ದು: “ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.” (ಮತ್ತಾಯ 19:16-22) ಯೇಸು ಕೇವಲ, ‘ಬಡವರಿಗೆ ಕೊಡು, ನಿನಗೆ ಜೀವ ದೊರಕುತ್ತದೆ’ ಎಂದು ಹೇಳಲಿಲ್ಲವೆಂಬುದನ್ನು ಗಮನಿಸಿರಿ. ಅದಕ್ಕೆ ಬದಲಾಗಿ ಅವನು ಕೂಡಿಸಿದ್ದು, “ನೀನು ಬಂದು ನನ್ನನ್ನು ಹಿಂಬಾಲಿಸು.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಧರ್ಮಕಾರ್ಯಗಳು ಮೆಚ್ಚತಕ್ಕದ್ದೂ ಪ್ರಯೋಜನಕಾರಿಯೂ ಆಗಿದ್ದರೂ ಕ್ರೈಸ್ತ ಶಿಷ್ಯತನದಲ್ಲಿ ಅದಕ್ಕಿಂತಲೂ ಹೆಚ್ಚಿನದ್ದು ಒಳಗೊಂಡಿದೆ.
ಇತರರಿಗೆ ಆತ್ಮಿಕ ಸಹಾಯನೀಡುವುದೇ ಯೇಸುವಿನ ಮುಖ್ಯ ಆಸಕ್ತಿಯಾಗಿತ್ತು. ಅವನು ತನ್ನ ಮರಣಕ್ಕೆ ತುಸು ಮುಂಚೆ ಪೊಂತ್ಯ ಪಿಲಾತನಿಗೆ ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಬಡವರಿಗೆ ಸಹಾಯಮಾಡುವುದರಲ್ಲಿ, ಅಸ್ವಸ್ಥರನ್ನು ಗುಣಪಡಿಸುವುದರಲ್ಲಿ ಮತ್ತು ಹಸಿದವರಿಗೆ ಆಹಾರ ಕೊಡುವುದರಲ್ಲಿ ಮುಂದಾಳುತ್ವವನ್ನು ಅವನು ವಹಿಸಿದನಾದರೂ, ಪ್ರಾಮುಖ್ಯವಾಗಿ, ಯೇಸು ತನ್ನ ಶಿಷ್ಯರನ್ನು ಸಾರುವ ಕೆಲಸದಲ್ಲಿ ತರಬೇತಿಗೊಳಿಸಿದನು. (ಮತ್ತಾಯ 10:7, 8) ವಾಸ್ತವದಲ್ಲಿ, ಅವನ ಅಂತಿಮ ಆಜ್ಞೆಯು ಇದಾಗಿತ್ತು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.”—ಮತ್ತಾಯ 28:19, 20.
ನಿಶ್ಚಯವಾಗಿಯೂ, ಸಾರುವಿಕೆಯು ಲೋಕದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ಆದರೂ, ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲಾ ರೀತಿಯ ಜನರೊಂದಿಗೆ ಹಂಚಿಕೊಳ್ಳುವುದು ದೇವರನ್ನು ಘನಪಡಿಸುತ್ತದೆ. ಏಕೆಂದರೆ, ಸಾರುವಿಕೆಯು ದೇವರ ಚಿತ್ತವನ್ನು ಪೂರೈಸುತ್ತದೆ ಮತ್ತು ದೈವಿಕ ಸಂದೇಶವನ್ನು ಸ್ವೀಕರಿಸುವ ಜನರಿಗೆ ನಿತ್ಯ ಪ್ರಯೋಜನಗಳ ದಾರಿಯನ್ನು ತೆರೆಯುತ್ತದೆ. (ಯೋಹಾನ 17:3; 1 ತಿಮೊಥೆಯ 2:3, 4) ಮುಂದಿನ ಬಾರಿ ಯೆಹೋವನ ಸಾಕ್ಷಿಗಳು ನಿಮ್ಮನ್ನು ಭೇಟಿನೀಡಿದಾಗ ನೀವು ಅವರಿಗೆ ಕಿವಿಗೊಡಬಾರದೇಕೆ? ಅವರು ತಮ್ಮೊಂದಿಗೆ ಆಧ್ಯಾತ್ಮಿಕ ದಾನವನ್ನು ತರುತ್ತಾರೆ. ಮತ್ತು ಇದು ತಾನೇ, ನಿಮಗೆ ಅವರು ಕೊಡಸಾಧ್ಯವಿರುವ ಉತ್ತಮ ವಿಧವಾಗಿದೆ ಎಂಬುದನ್ನು ಅವರು ತಿಳಿದಿದ್ದಾರೆ.
[ಪುಟ 6ರಲ್ಲಿರುವ ಚಿತ್ರಗಳು]
ನಾವು ಇತರರ ಕುರಿತು ಚಿಂತಿಸುತ್ತೇವೆಂದು ತೋರಿಸಿಕೊಡಬಹುದಾದ ಅನೇಕ ವಿಧಗಳಿವೆ
[ಪುಟ 7ರಲ್ಲಿರುವ ಚಿತ್ರ]
ಸುವಾರ್ತೆಯನ್ನು ಸಾರುವ ನಮ್ಮ ಕೆಲಸವು ದೇವರನ್ನು ಮೆಚ್ಚಿಸುತ್ತದೆ ಮತ್ತು ನಿತ್ಯ ಪ್ರಯೋಜನಗಳ ದಾರಿಯನ್ನು ತೆರೆಯುತ್ತದೆ