ಅಪೊಸ್ತಲರ ಕಾರ್ಯ
9 ಆದ್ರೆ ಪ್ರಭುವಿನ ಶಿಷ್ಯರನ್ನ ಕಂಡ್ರೆ ಸೌಲ ಕೋಪದಿಂದ ಕುದಿತಾ ಇದ್ದ.+ ಅವ್ರನ್ನ ಸಾಯಿಸಿಬಿಡೋ ಬೆದರಿಕೆ ಹಾಕಿದ. ಅವನು ಮಹಾ ಪುರೋಹಿತನ ಹತ್ರ ಹೋಗಿ 2 ‘ದೇವ್ರ ಮಾರ್ಗ’+ ಪಕ್ಷಕ್ಕೆ ಸೇರಿದ ಗಂಡಸರಾಗಲಿ ಹೆಂಗಸರಾಗಲಿ ಸಿಕ್ಕಿದ್ರೆ ಅವ್ರನ್ನ ಬಂಧಿಸಿ ಯೆರೂಸಲೇಮಿಗೆ ಕರ್ಕೊಂಡು ಬರೋಕೆ ದಮಸ್ಕದಲ್ಲಿ ಇರೋ ಸಭಾಮಂದಿರಗಳಿಗೆ ಪತ್ರಗಳನ್ನ ಬರೆದು ಕೊಡೋಕೆ ಕೇಳಿದ.
3 ಸೌಲ ಪ್ರಯಾಣ ಮಾಡ್ತಾ ದಮಸ್ಕದ ಹತ್ರ ಬಂದಾಗ ಇದ್ದಕ್ಕಿದ್ದ ಹಾಗೆ ಆಕಾಶದಿಂದ ಒಂದು ಬೆಳಕು ಅವನ ಸುತ್ತ ಮಿಂಚಿತು.+ 4 ಅವನು ನೆಲಕ್ಕೆ ಬಿದ್ದುಬಿಟ್ಟ. “ಸೌಲ, ಸೌಲ, ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅನ್ನೋ ಧ್ವನಿಯನ್ನ ಅವನು ಕೇಳಿಸ್ಕೊಂಡ. 5 ಆಗ ಸೌಲ “ಪ್ರಭು, ನೀನು ಯಾರು?” ಅಂತ ಕೇಳಿದ. ಅದಕ್ಕೆ ಆತನು “ನೀನು ಹಿಂಸೆ ಕೊಡ್ತಿರೋ+ ಯೇಸುನೇ+ ನಾನು. 6 ನೀನೆದ್ದು ದಮಸ್ಕ ಪಟ್ಟಣಕ್ಕೆ ಹೋಗು. ನೀನು ಏನು ಮಾಡ್ಬೇಕು ಅಂತ ಅಲ್ಲಿ ನಿನಗೆ ಒಬ್ಬ ವ್ಯಕ್ತಿ ಹೇಳ್ತಾನೆ” ಅಂದನು. 7 ಸೌಲನ ಜೊತೆ ಪ್ರಯಾಣ ಮಾಡ್ತಿದ್ದವ್ರಿಗೆ ಈ ಧ್ವನಿ ಕೇಳಿಸಿದ್ರೂ ಮಾತಾಡಿದ ವ್ಯಕ್ತಿ ಕಾಣಿಸಲಿಲ್ಲ. ಹಾಗಾಗಿ ಅವರು ಮೂಕವಿಸ್ಮಿತರಾಗಿ ನಿಂತಿದ್ರು.+ 8 ಸೌಲ ನೆಲದಿಂದ ಮೇಲೆದ್ದಾಗ ಅವನ ಕಣ್ಣು ತೆರೆದಿದ್ರೂ ಅವನಿಗೆ ಏನೂ ಕಾಣಿಸಲಿಲ್ಲ. ಹಾಗಾಗಿ ಅವನ ಜೊತೆ ಇದ್ದವರು ಕೈಹಿಡಿದು ನಡೆಸ್ಕೊಂಡು ದಮಸ್ಕಕ್ಕೆ ಕರ್ಕೊಂಡು ಹೋದ್ರು. 9 ಮೂರು ದಿನದ ತನಕ ಅವನಿಗೆ ಏನೂ ಕಾಣಿಸಲಿಲ್ಲ.+ ಅವನು ಏನೂ ತಿನ್ನಲಿಲ್ಲ, ಏನೂ ಕುಡಿಲಿಲ್ಲ.
10 ದಮಸ್ಕದಲ್ಲಿ ಅನನೀಯ+ ಅನ್ನೋ ಒಬ್ಬ ಶಿಷ್ಯ ಇದ್ದ. ಪ್ರಭು ಅವನಿಗೆ ದರ್ಶನದಲ್ಲಿ “ಅನನೀಯ” ಅಂತ ಕರೆದ. ಆಗ ಅವನು “ಹೇಳು ಪ್ರಭು” ಅಂದ. 11 ಪ್ರಭು ಅವನಿಗೆ “ನೀನೆದ್ದು ‘ನೇರ’ ಅನ್ನೋ ಬೀದಿಗೆ ಹೋಗು. ಅಲ್ಲಿ ಯೂದನ ಮನೆಗೆ ಹೋಗಿ, ತಾರ್ಸದಿಂದ+ ಬಂದಿರೋ ಸೌಲ ಅನ್ನುವವನು ಇದ್ದಾನಾ ಅಂತ ಕೇಳು. ಅವನೀಗ ಪ್ರಾರ್ಥನೆ ಮಾಡ್ತಿದ್ದಾನೆ. 12 ಅವನು ಒಂದು ದರ್ಶನದಲ್ಲಿ, ಅನನೀಯ ಅನ್ನೋ ವ್ಯಕ್ತಿ ಬರೋದನ್ನ, ತನ್ನ ಮೇಲೆ ಕೈಯಿಟ್ಟು ತನಗೆ ಮತ್ತೆ ಕಣ್ಣು ಬರೋ ಹಾಗೆ ಮಾಡೋದನ್ನ ನೋಡಿದ್ದಾನೆ”+ ಅಂದ. 13 ಅದಕ್ಕೆ ಅನನೀಯ “ಪ್ರಭು, ಅವನ ಬಗ್ಗೆ ಮತ್ತು ಯೆರೂಸಲೇಮಲ್ಲಿ ಇರೋ ನಿನ್ನ ಪವಿತ್ರ ಜನ್ರಿಗೆ ಅವನು ಮಾಡಿರೋ ಹಾನಿ ಬಗ್ಗೆ ತುಂಬ ಜನ ಹೇಳಿರೋದನ್ನ ನಾನು ಕೇಳಿಸ್ಕೊಂಡಿದ್ದೀನಿ. 14 ಈಗ್ಲೂ ಅವನು ಮುಖ್ಯ ಪುರೋಹಿತರಿಂದ ಅಧಿಕಾರ ಪಡ್ಕೊಂಡು ನಿನ್ನ ಶಿಷ್ಯರನ್ನೆಲ್ಲ ಬಂಧಿಸೋಕೆ ಇಲ್ಲಿಗೆ ಬಂದಿದ್ದಾನೆ”+ ಅಂದ. 15 ಆದ್ರೆ ಪ್ರಭು ಅವನಿಗೆ “ನೀನು ಅವನ ಹತ್ರ ಹೋಗು. ನಾನು ಅವನನ್ನ ಆರಿಸ್ಕೊಂಡಿದ್ದೀನಿ.+ ಅವನು ಯೆಹೂದ್ಯರಲ್ಲದ ಜನ್ರಿಗೆ,+ ರಾಜರಿಗೆ,+ ಇಸ್ರಾಯೇಲ್ ಜನ್ರಿಗೆ ನನ್ನ ಹೆಸ್ರಿನ ಬಗ್ಗೆ ಹೇಳ್ತಾನೆ. 16 ನನ್ನ ಶಿಷ್ಯನಾಗೋದ್ರಿಂದ ಅವನಿಗೆ ಎಷ್ಟೆಲ್ಲ ಕಷ್ಟ ಬರುತ್ತೆ ಅಂತ ನಾನು ಅವನಿಗೆ ತೋರಿಸ್ತೀನಿ”+ ಅಂದ.
17 ಹಾಗಾಗಿ ಅನನೀಯ ಆ ಮನೆಗೆ ಹೋಗಿ ಸೌಲನ ಮೇಲೆ ಕೈಯಿಟ್ಟು “ಸಹೋದರ ಸೌಲ, ನಿನಗೆ ದಾರಿಯಲ್ಲಿ ಕಾಣಿಸ್ಕೊಂಡ ಯೇಸು ಪ್ರಭುನೇ ನನ್ನನ್ನ ಕಳಿಸಿದ್ದಾನೆ. ನಿನಗೆ ಮತ್ತೆ ಕಣ್ಣು ಕಾಣೋ ತರ, ಪವಿತ್ರಶಕ್ತಿ ಸಿಗೋ ತರ ಮಾಡೋಕೆ ನಾನು ಬಂದಿದ್ದೀನಿ”+ ಅಂದ. 18 ತಕ್ಷಣ ಅವನ ಕಣ್ಣುಗಳಿಂದ ಪೊರೆ ತರ ಏನೋ ಕಳಚಿ ಬಿದ್ದು ಅವನಿಗೆ ಮತ್ತೆ ಕಣ್ಣು ಬಂತು. ಆಗ ಅವನು ಹೋಗಿ ದೀಕ್ಷಾಸ್ನಾನ ತಗೊಂಡ. 19 ಆಮೇಲೆ ಊಟಮಾಡಿ ಬಲ ಪಡ್ಕೊಂಡ.
ಅವನು ಸ್ವಲ್ಪ ದಿನ ದಮಸ್ಕದಲ್ಲಿ ಶಿಷ್ಯರ ಜೊತೆ ಇದ್ದ.+ 20 ತಕ್ಷಣ ಅವನು, ಯೇಸುನೇ ದೇವರ ಮಗ ಅಂತ ಸಭಾಮಂದಿರಗಳಿಗೆ ಹೋಗಿ ಸಾರೋಕೆ ಶುರುಮಾಡಿದ. 21 ಅವನ ಮಾತು ಕೇಳಿಸ್ಕೊಂಡವ್ರಿಗೆಲ್ಲ ತುಂಬ ಆಶ್ಚರ್ಯ ಆಯ್ತು. ಅವರು ಒಬ್ರಿಗೊಬ್ರು “ಯೆರೂಸಲೇಮಲ್ಲಿ ಯೇಸು ಹೆಸ್ರಲ್ಲಿ ನಂಬಿಕೆ ಇಟ್ಟಿದ್ದ ಜನ್ರನ್ನ ಕ್ರೂರವಾಗಿ ಹಿಂಸಿಸಿದ್ದು ಇವನೇ ಅಲ್ವಾ?+ ಇವನು ಇಲ್ಲಿಗೆ ಬಂದಿದ್ದು ಯೇಸುವಿನ ಶಿಷ್ಯರನ್ನ ಬಂಧಿಸಿ ಮುಖ್ಯ ಪುರೋಹಿತರ ಹತ್ರ ಕರ್ಕೊಂಡು ಹೋಗೋಕೆ ಅಲ್ವಾ?”+ ಅಂತ ಮಾತಾಡ್ಕೊಂಡ್ರು. 22 ಆದ್ರೆ ಸೌಲ ಸಾರೋ ಕೆಲಸದಲ್ಲಿ ಪ್ರಗತಿ ಮಾಡ್ತಾ ಹೋದ. ಯೇಸುನೇ ಕ್ರಿಸ್ತ ಅಂತ ಅರ್ಥಮಾಡಿಸ್ತಾ ದಮಸ್ಕದ ಯೆಹೂದ್ಯರ ಬಾಯಿಮುಚ್ಚಿಸಿದ.+
23 ತುಂಬ ದಿನ ಆದಮೇಲೆ ಅಲ್ಲಿದ್ದ ಯೆಹೂದ್ಯರು ಸೌಲನನ್ನ ಕೊಲ್ಲಬೇಕಂತ ಒಳಸಂಚು ಮಾಡಿದ್ರು.+ 24 ಆದ್ರೆ ಅವರು ಮಾಡಿದ ಒಳಸಂಚು ಸೌಲನಿಗೆ ಗೊತ್ತಾಯ್ತು. ಅವನನ್ನ ಸಾಯಿಸಬೇಕಂತ ಯೆಹೂದ್ಯರು ಪ್ರತಿದಿನ ಹಗಲೂ ರಾತ್ರಿ ಪಟ್ಟಣದ ಮುಖ್ಯ ಬಾಗಿಲ ಹತ್ರ ಕಾಯ್ತಾ ಇರ್ತಿದ್ರು. 25 ಹಾಗಾಗಿ ಸೌಲನನ್ನ ಅವನ ಶಿಷ್ಯರು ರಾತ್ರಿ ಹೊತ್ತಲ್ಲಿ ಪಟ್ಟಣದ ಗೋಡೆ ಹತ್ರ ಕರ್ಕೊಂಡು ಹೋದ್ರು. ಅವನನ್ನ ಒಂದು ದೊಡ್ಡ ಬುಟ್ಟಿಯಲ್ಲಿ ಕೂರಿಸಿ ಗೋಡೆಯಲ್ಲಿದ್ದ ಕಿಟಕಿಯಿಂದ ಕೆಳಗೆ ಇಳಿಸಿದ್ರು.+
26 ಸೌಲ ಯೆರೂಸಲೇಮಿಗೆ+ ಹೋದಾಗ ಅಲ್ಲಿದ್ದ ಶಿಷ್ಯರ ಜೊತೆ ಸೇರ್ಕೊಳ್ಳೋಕೆ ಪ್ರಯತ್ನಿಸಿದ. ಆದ್ರೆ ಶಿಷ್ಯರು ಅವನಿಗೆ ಭಯಪಟ್ರು. ಯಾಕಂದ್ರೆ ಅವನು ಯೇಸುವಿನ ಶಿಷ್ಯನಾಗಿದ್ದಾನೆ ಅಂತ ಅವರು ನಂಬಲಿಲ್ಲ. 27 ಆಗ ಬಾರ್ನಬ+ ಅವನ ಸಹಾಯಕ್ಕೆ ಬಂದ. ಅವನನ್ನ ಅಪೊಸ್ತಲರ ಹತ್ರ ಕರ್ಕೊಂಡು ಹೋದ. ಪ್ರಭು ಸೌಲನಿಗೆ ದಾರಿಯಲ್ಲಿ ಕಾಣಿಸ್ಕೊಂಡು ಅವನ ಹತ್ರ ಮಾತಾಡಿದ್ದನ್ನ ಅವ್ರಿಗೆ ಹೇಳಿದ.+ ದಮಸ್ಕದಲ್ಲಿ ಸೌಲ ಯೇಸು ಹೆಸ್ರಲ್ಲಿ ಧೈರ್ಯದಿಂದ ಮಾತಾಡಿದ್ದನ್ನ ಅವ್ರಿಗೆ ವಿವರಿಸಿದ.+ 28 ಹಾಗಾಗಿ ಸೌಲ ಯೆರೂಸಲೇಮಲ್ಲಿ ಆರಾಮವಾಗಿ ಎಲ್ಲಾ ಕಡೆ ತಿರುಗಾಡ್ತಾ ಪ್ರಭು ಹೆಸ್ರಲ್ಲಿ ಧೈರ್ಯದಿಂದ ಮಾತಾಡ್ತಾ ಇದ್ದ. 29 ಅವನು ಗ್ರೀಕ್ ಭಾಷೆಯ ಯೆಹೂದ್ಯರ ಜೊತೆ ಮಾತಾಡ್ತಾ ವಾದ ಮಾಡ್ತಾ ಇದ್ದ. ಆದ್ರೆ ಅವರು ಸೌಲನನ್ನ ಕೊಲ್ಲೋಕೆ ತುಂಬ ಸಲ ಪ್ರಯತ್ನ ಮಾಡಿದ್ರು.+ 30 ಸಹೋದರರಿಗೆ ಈ ವಿಷ್ಯ ಗೊತ್ತಾದಾಗ ಸೌಲನನ್ನ ಕೈಸರೈಯಕ್ಕೆ ಕರ್ಕೊಂಡು ಹೋಗಿ ತಾರ್ಸಕ್ಕೆ ಕಳಿಸಿಬಿಟ್ರು.+
31 ಇದಾದ ಮೇಲೆ ಯೂದಾಯ, ಗಲಿಲಾಯ, ಸಮಾರ್ಯದಲ್ಲಿದ್ದ+ ಸಭೆಗಳಲ್ಲಿ ಸಮಾಧಾನ ಇತ್ತು. ಯಾವುದೇ ವಿರೋಧ ಬರ್ಲಿಲ್ಲ. ಶಿಷ್ಯರ ಸಂಖ್ಯೆ ಹೆಚ್ಚಾಯ್ತು. ಯಾಕಂದ್ರೆ ಅವರು ಯೆಹೋವನ* ಮೇಲೆ ಭಯಭಕ್ತಿಯಿಂದ ಜೀವನ ಮಾಡ್ತಾ ಇದ್ರು. ಅಷ್ಟೇ ಅಲ್ಲ ಪವಿತ್ರಶಕ್ತಿಯ ಬಲ+ ಅವ್ರಿಗೆ ಸಿಕ್ತಾ ಇತ್ತು.
32 ಪೇತ್ರ ಆ ಪ್ರದೇಶದಲ್ಲೆಲ್ಲ ತಿರುಗಾಡ್ತಾ ಲುದ್ದದಲ್ಲಿ+ ವಾಸಿಸ್ತಿದ್ದ ಶಿಷ್ಯರ ಹತ್ರ ಬಂದ. 33 ಅಲ್ಲಿ ಅವನು ಐನೇಯ ಅನ್ನೋ ವ್ಯಕ್ತಿಯನ್ನ ನೋಡಿದ. ಲಕ್ವ ಹೊಡಿದು ಅವನು ಎಂಟು ವರ್ಷದಿಂದ ಹಾಸಿಗೆ ಹಿಡಿದಿದ್ದ. 34 ಪೇತ್ರ ಅವನಿಗೆ “ಐನೇಯ, ಯೇಸು ಕ್ರಿಸ್ತ ನಿನ್ನನ್ನ ವಾಸಿ ಮಾಡ್ತಾನೆ.+ ಎದ್ದು ನಿನ್ನ ಹಾಸಿಗೆ ಪಕ್ಕಕ್ಕಿಡು”+ ಅಂತ ಹೇಳಿದ. ಪಟ್ಟನೆ ಅವನು ಎದ್ದುನಿಂತ. 35 ಅವನು ವಾಸಿ ಆಗಿದ್ದನ್ನ ನೋಡಿ ಲುದ್ದ ಮತ್ತು ಸಾರೋನ ಪ್ರದೇಶದಲ್ಲಿದ್ದ ಜನ್ರೆಲ್ಲ ಪ್ರಭು ಮೇಲೆ ನಂಬಿಕೆ ಇಟ್ರು.
36 ಯೊಪ್ಪದಲ್ಲಿ ತಬಿಥಾ ಅನ್ನೋ ಒಬ್ಬ ಶಿಷ್ಯಳಿದ್ದಳು. ಗ್ರೀಕ್ ಭಾಷೆಯಲ್ಲಿ ಅವಳ ಹೆಸ್ರು ದೊರ್ಕ.* ಅವಳು ಎಷ್ಟೋ ಒಳ್ಳೇ ಕೆಲಸಗಳನ್ನ ಮಾಡ್ತಾ ಇದ್ದಳು. ಬಡವ್ರಿಗೆ ಸಹಾಯ ಮಾಡ್ತಿದ್ದಳು. 37 ಪೇತ್ರ ಲುದ್ದದಲ್ಲಿ ಇದ್ದಾಗ ಅವಳು ಹುಷಾರಿಲ್ಲದೆ ತೀರಿಹೋದಳು. ಶಿಷ್ಯರಲ್ಲಿ ಕೆಲವು ಸ್ತ್ರೀಯರು ಅವಳಿಗೆ ಸ್ನಾನಮಾಡಿಸಿ ಮಹಡಿ ಮೇಲಿದ್ದ ಕೋಣೆಯಲ್ಲಿ ಮಲಗಿಸಿದ್ರು. 38 ಲುದ್ದ ಯೊಪ್ಪಗೆ ಹತ್ರ ಇದ್ದಿದ್ರಿಂದ ಪೇತ್ರ ಆ ಪಟ್ಟಣದಲ್ಲಿದ್ದಾನೆ ಅಂತ ಶಿಷ್ಯರಿಗೆ ಗೊತ್ತಾಯ್ತು. ಆಗ ಇಬ್ರು ಶಿಷ್ಯರನ್ನ ಅವನ ಹತ್ರ ಕಳಿಸಿ “ದಯವಿಟ್ಟು ಬೇಗ ಇಲ್ಲಿಗೆ ಬಾ” ಅಂತ ಕೇಳ್ಕೊಂಡ್ರು. 39 ಆಗ ಪೇತ್ರ ಅವ್ರ ಜೊತೆ ಹೋದ. ಅಲ್ಲಿಗೆ ಹೋದಾಗ ಅವರು ಅವನನ್ನ ಆ ಕೋಣೆಗೆ ಕರ್ಕೊಂಡು ಹೋದ್ರು. ವಿಧವೆಯರೆಲ್ಲ ಅವನ ಹತ್ರ ಬಂದು ಅಳ್ತಾ ದೊರ್ಕ ಮಾಡಿಕೊಟ್ಟಿದ್ದ ಎಲ್ಲ ಬಟ್ಟೆಗಳನ್ನ ತೋರಿಸಿದ್ರು. 40 ಆಮೇಲೆ ಪೇತ್ರ ಅವ್ರನ್ನೆಲ್ಲ ಹೊರಗೆ ಕಳಿಸಿದ.+ ಮಂಡಿಯೂರಿ ಪ್ರಾರ್ಥನೆ ಮಾಡಿದ. ಆಮೇಲೆ ಶವದ ಕಡೆ ತಿರುಗಿ “ತಬಿಥಾ ಎದ್ದೇಳು” ಅಂದ. ಆಗ ಅವಳು ಕಣ್ಣು ತೆರೆದಳು. ಪೇತ್ರನನ್ನ ನೋಡಿದ ತಕ್ಷಣ ಎದ್ದು ಕೂತಳು.+ 41 ಅವನು ಅವಳಿಗೆ ಕೈಕೊಟ್ಟು ಎದ್ದು ನಿಲ್ಲೋಕೆ ಸಹಾಯ ಮಾಡಿದ. ದೇವರ ಜನ್ರನ್ನ, ವಿಧವೆಯರನ್ನ ಕರೆದ. ತಬಿಥಾಗೆ ಮತ್ತೆ ಜೀವ ಬಂದಿದ್ದನ್ನ ಅವ್ರೆಲ್ಲ ನೋಡಿದ್ರು.+ 42 ಈ ಘಟನೆ ಬಗ್ಗೆ ಇಡೀ ಯೊಪ್ಪಗೆ ಗೊತ್ತಾಯ್ತು. ಹಾಗಾಗಿ ತುಂಬ ಜನ ಪ್ರಭುವನ್ನ ನಂಬಿದ್ರು.+ 43 ಆಮೇಲೆ ಪೇತ್ರ ಯೊಪ್ಪದಲ್ಲಿದ್ದ ಸೀಮೋನನ ಮನೆಯಲ್ಲಿ ತುಂಬ ದಿನ ಇದ್ದ.+ ಸೀಮೋನ ಚರ್ಮಕಾರನಾಗಿದ್ದ.