ದಿವ್ಯಭಕ್ತಿಯ ಪವಿತ್ರ ರಹಸ್ಯದ ಜ್ಞಾನ ಸಂಪಾದಿಸುವುದು
“ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ಬಿಟ್ಟುಹೋದನು.”—1 ಪೇತ್ರ 2:21.
1. ‘ದಿವ್ಯಭಕ್ತಿಯ ಪವಿತ್ರ ರಹಸ್ಯ’ ದ ಕುರಿತು ಯೆಹೋವನ ಉದ್ದೇಶ ಏನಾಗಿತ್ತು?
“ದಿವ್ಯ ಭಕ್ತಿಯ ಪವಿತ್ರ ರಹಸ್ಯ” ಇನ್ನು ಮುಂದೆ ರಹಸ್ಯವಾಗಿರುವುದಿಲ್ಲ! (1 ತಿಮೋಥಿ 3:16) ಸುಳ್ಳು ಧರ್ಮದ ರಹಸ್ಯಗಳಿಗಿಂತ, ಇನ್ನೂ ರಹಸ್ಯವಾಗಿರುವ ರಹಸ್ಯಗರ್ಭಿತ ತ್ರಯೈಕ್ಯದಂತಹ ಮರ್ಮಗಳಿಗಿಂತ ಇದೆಷ್ಟು ಭಿನ್ನ! ಅವುಗಳನ್ನು ಯಾರೂ ತಿಳಿಯರು. ಆದರೆ, ಯೇಸುಕ್ರಿಸ್ತನೆಂಬ ವ್ಯಕ್ತಿಯಲ್ಲಿ ಪ್ರಕಟವಾದ ಪವಿತ್ರ ರಹಸ್ಯವನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಪ್ರಚಾರಮಾಡಬೇಕೆಂದು ಯೆಹೋವನು ಉದ್ದೇಶಿಸಿದ್ದಾನೆ. ಯೇಸು ತಾನೇ, ದೇವರ ರಾಜ್ಯದ ಆಸಕ್ತ ಘೋಷಕನ ಆದರ್ಶ ಮಾದರಿಯಾದನು. ಅವನ ಸಂದೇಶ ಮತ್ತು ಸಾರುವ ವಿಧಾನಗಳಿಂದ, ಮುಂದೆ ನೋಡಲಿರುವಂತೆ, ನಾವು ಅನೇಕಾನೇಕ ವಿಷಯಗಳನ್ನು ಕಲಿಯಬಲ್ಲೆವು.
2. ಯೇಸುವಿನ ಸುವಾರ್ತಾ ಸೇವೆಯನ್ನು ಈಡಿಗಿಂತ ಮೊದಲು ಏಕೆ ಕೊಡಲಾಗಿದೆ? (ಮತ್ತಾಯ 20:28)
2 ಯೇಸು “ಶರೀರದಲ್ಲಿ ಕಾಣಿಸಲ್ಪಟ್ಟನು” ಎಂಬದನ್ನು ನಾವು ಇನ್ನೂ ಹೆಚ್ಚು ಪರಿಗ್ರಹಿಸೋಣ. (1 ತಿಮೋಥಿ 3:16) ಮತ್ತಾಯ 20:28 ರಲ್ಲಿ, ಯೇಸು “ಸೇವೆ ಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು” ಎಂದು ನಾವು ಓದುತ್ತೇವೆ. ಈ ವಚನದಲ್ಲಿ, ಈಡುಕೊಡುವದಕ್ಕೆ ಮುಂಚಿತವಾಗಿ ‘ಸೇವೆಮಾಡುವದನ್ನು’ ಹಾಕಿರುವದನ್ನು ನಾವು ನೋಡುತ್ತೇವೆ. ಹಾಗೇಕೆ? ಏದೆನಿನಲ್ಲಿ, ಕುಯುಕ್ತಿಯ ಸರ್ಪವು ಮಾನವರ ಮೇಲೆ ದೇವರಿಗಿದ್ದ ಸಮರ್ಪಕ ಪರಮಾಧಿಕಾರದ ಕುರಿತು ವಿವಾದವನ್ನೆಬ್ಬಿಸಿತ್ತು. ದೇವರ ಸೃಷ್ಟಿಯಲ್ಲಿ ದೋಷವಿದೆ ಮತ್ತು ಪರೀಕ್ಷೆ ಬರುವಲ್ಲಿ ಸರ್ವೋನ್ನತನಿಗೆ ಸಮಗ್ರತೆಯನ್ನು ಯಾರೂ ಕಾಪಾಡನು ಎಂದು ಅದು ಸೂಚಿಸಿತು. (ಯೋಬ 1:6-12; 2:1-10 ಹೋಲಿಸಿ.) ಆದರೆ ಪರಿಪೂರ್ಣ ಮನುಷ್ಯನೂ “ಕಡೇ ಆದಾಮನೂ” ಆದ ಯೇಸುವಿನ ದೋಷರಹಿತ ಸುವಾರ್ತಾಸೇವೆಯು ಸ್ಪರ್ಧಿಯಾದ ಸೈತಾನನು ದುಷ್ಟನಾದ ಸುಳ್ಳನೆಂದು ತೋರಿಸಿತು. (1 ಕೊರಿಂಥ 15:45) ಇದಲ್ಲದೆ, ದೇವರು ನೇಮಿಸಿದ ‘ನಾಯಕನೂ ರಕ್ಷಕನೂ’ ಆಗಿ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಮಾಡಲು “ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆಗೆ” ತನಗಿರುವ ಯೋಗ್ಯತೆಯನ್ನು ಯೇಸು ಪೂರ್ತಿಯಾಗಿ ರುಜುಪಡಿಸಿದನು.—ಅಪೋಸ್ತಲರ ಕೃತ್ಯ 5:31; 17:31.
3. ಯೇಸು ಸೈತಾನನ ಪಂಥಾಹ್ವಾನವನ್ನು ಪೂರ್ಣ ತಪ್ಪೆಂದು ಹೇಗೆ ತೋರಿಸಿದನು?
3 ಯೇಸು ಸೈತಾನನ ಮೂದಲಿಸುವ ಪಂಥಾಹ್ವಾನವನ್ನು ತಪ್ಪೆಂದು ಪೂರ್ಣವಾಗಿ ತೋರಿಸಿಕೊಟ್ಟನು! ಇತಿಹಾಸದಲ್ಲಿ ಯಾವ ಮಾನವನೂ ಅಪಹಾಸ್ಯ, ದಂಡನೆ, ಮತ್ತು ಶಾರೀರಿಕ ಹಾಗೂ ಮಾನಸಿಕ ಚಿತ್ರಹಿಂಸೆಯ ಎದುರಲ್ಲಿ ದೇವರಿಗೆ ಅಷ್ಟು ಪೂರ್ಣ ಭಕ್ತಿಯನ್ನು ತೋರಿಸಿದ್ದಿಲ್ಲ. ದೇವಪುತ್ರನಾದ ಕ್ರಿಸ್ತನು ದೇವದೂಷಣೆಯ ನಿಂದೆಗಳನ್ನು ತಾಳಿಕೊಳ್ಳಬೇಕಾಯಿತು. ಇವೆಲ್ಲವುಗಳ ಎದುರಿನಲ್ಲಿ—ಕ್ರೂರ ಮತ್ತು ಅವಮಾನಕರ ಮರಣದ ಎದುರಿನಲ್ಲೂ—ತನ್ನ ತಂದೆಗೆ ತೋರಿಸಿದ ಕರ್ತವ್ಯನಿಷ್ಟೆಯಲ್ಲಿ ದೃಢಚಿತ್ತನೂ ನಿಶ್ಚಲನೂ ಆದನು. ಯೇಸು ‘ಮರಣದ ತನಕ, ಹೌದು, ಯಾತನೆಯ ಶೂಲದ ಮೇಲಿನ ಮರಣದ ತನಕವೂ ವಿಧೇಯನಾದ್ದರಿಂದ ದೇವರು ಅವನನ್ನು ಮಹಿಮೆಗೇರಿಸಿ ಇತರ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಟವಾದ ಹೆಸರನ್ನು ಕೊಟ್ಟನು’ ಎಂದು ಪೌಲನು ಫಿಲಿಪ್ಪಿ 2:8, 9 ರಲ್ಲಿ ಬರೆಯುತ್ತಾನೆ. ಯೇಸು ಸೈತಾನನ್ನು ಅವನು ವಿಷಪೂರಿತ ಸುಳ್ಳನೆಂದು ಬಯಲುಪಡಿಸಿದನು!
4. ತಾನು ಸತ್ಯಕ್ಕೆ ಸಾಕ್ಷಿ ನೀಡುವುದಕ್ಕೆ ಬಂದಿದ್ದೇನೆಂದು ಯೇಸು ಪಿಲಾತನಿಗೆ ಏಕೆ ಹೇಳ ಸಾಧ್ಯವಿತ್ತು?
4 ಹೀಗೆ ಕೆಲವೇ ವರ್ಷಗಳ ತೀಕ್ಷ್ಣ ಸಾರುವಿಕೆಯ ಸಮಾಪ್ತಿಯಲ್ಲಿ ಯೇಸು ಪೊಂತ್ಯ ಪಿಲಾತನಿಗೆ ಧೈರ್ಯದಿಂದ, “ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವುದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಗೊಡುತ್ತಾರೆ” ಎಂದು ಸಾಕ್ಷಿ ಹೇಳ ಸಾಧ್ಯವಾಯಿತು. (ಯೋಹಾನ 18:37) ಪಲೆಸ್ತೀನದಲ್ಲೆಲ್ಲಾ ದೇವರ ರಾಜ್ಯದ ಸತ್ಯವನ್ನು ಸಾರುತ್ತಾ, ಯೇಸು ಪರಮ ಶ್ರೇಷ್ಟವಾದ ದಿವ್ಯಭಕ್ತಿಯನ್ನು ತೋರಿಸಿದ್ದನು. ತನ್ನ ಶಿಷ್ಯರೂ ಆಸಕ್ತಿಯುಳ್ಳ ಉಪದೇಶಕರಾಗುವಂತೆ ಅವನು ತರಬೇತು ಕೊಟ್ಟನು. ಈ ಮಾದರಿ ನಾವು ಇಂದು ಅವನ ಹೆಜ್ಜೇಜಾಡಲ್ಲಿ ನಡೆಯುವರೇ ನಮಗೆಷ್ಟು ಉತ್ತೇಜನೀಯವಾಗಿದೆ!
ನಮಗೆ ಆದರ್ಶವಾಗಿರುವವನಿಂದ ಕಲಿಯುವುದು
5. ಯೇಸುವನ್ನು ದಿಟ್ಟಿಸುನೋಡುವಾಗ ದಿವ್ಯಭಕ್ತಿಯ ಕುರಿತು ನಾವೇನನ್ನು ಕಲಿಯಬಲ್ಲೆವು?
5 ಯೆಹೋವನ ಇಷ್ಟವನ್ನು ಮಾಡುವದರಲ್ಲಿ ನಾವು ತೋರಿಸುವ ದಿವ್ಯಭಕ್ತಿಯಿಂದ ಸೈತಾನನು ಸುಳ್ಳನೆಂದು ನಾವೂ ರುಜುಪಡಿಸಬಹುದು. ನಮಗೆ ಯಾವ ಕಷ್ಟಗಳು ಬಂದರೂ ಅವು ಯೇಸು ಅನುಭವಿಸಿದ ಸಂಕಟ ಮತ್ತು ಅವಮಾನಗಳಿಗೆ ಸಮಾನವಾಗಿರವು. ಆದುದರಿಂದ ನಾವು ನಮಗೆ ಆದರ್ಶಪ್ರಾಯನಾಗಿರುವವನಿಂದ ಕಲಿಯೋಣ. ಇಬ್ರಿಯ 12:1, 2 ಪ್ರೋತ್ಸಾಹಿಸುವಂತೆ, “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು” ನಾವು ತಾಳ್ಮೆಯಿಂದ ಓಟವನ್ನು ಓಡುವಂತಾಗಲಿ. ದಿವ್ಯ ಭಕ್ತಿಯ ಪರೀಕ್ಷೆಯಲ್ಲಿ ವಿಫಲಗೊಂಡ ಆದಾಮನಿಗೆ ಅಸದೃಶವಾಗಿ, ಯೇಸು ಎಲ್ಲಾ ಪರೀಕ್ಷೆಗಳನ್ನು ಪರಿಪೂರ್ಣವಾಗಿ ನಿಭಾಯಿಸಿದ ಭೂಮಿಯ ಏಕಮಾತ್ರ ಮನುಷ್ಯನಾದನು. ಮರಣದ ಪರ್ಯಂತವೂ ಅವನು “ಪರಿಶುದ್ಧನೂ ನಿರ್ದೋಷಿಯೂ ನಿಷ್ಕಲಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ” ಆದನು. (ಇಬ್ರಿಯ 7:26) ಆದುದರಿಂದ, ದೋಷರಹಿತವಾದ ಸಮಗ್ರತೆಯಿಂದ ಅವನು ವೈರಿಗಳಿಗೆ, “ನನ್ನಲ್ಲಿ ಪಾಪವನ್ನು ತೋರಿಸಿ ಕೊಡುವವರು ನಿಮ್ಮೊಳಗೆ ಯಾರಿದ್ದಾರೆ?” ಎಂದು ಹೇಳ ಸಾಧ್ಯವಾಯಿತು. ಯೇಸು ಸೈತಾನನ ಪಂಥಾಹ್ವಾನವನ್ನು ಅವನ ಮೇಲೇ ಹಿಂದಕ್ಕೆ ಎಸೆದು, “ಜಗತ್ತಿನ ಅಧಿಕಾರಿ ಬರುತ್ತಿದ್ದಾನೆ. ನಾನು ಅವನ ಯಾವ ಹಿಡಿತದೊಳಗೂ ಇರುವುದಿಲ್ಲ” ಎಂದು ಹೇಳಿದನು. ಅವನನ್ನು ವಂಚಿಸಿ ದಸ್ತಗಿರಿ ಮಾಡುವ ಮೊದಲು ತನ್ನ ಶಿಷ್ಯರಿಗೆ ಕೊಟ್ಟ ಅಂತಿಮ ಭಾಷಣದ ಸಮಾಪ್ತಿಯಲ್ಲಿ ಅವನು ಹೇಳಿದ್ದು: “ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾನ 8:46; 14:30; 16:33.
6. (ಎ) ಮಾನವರಿಗೆ ಯಾವ ಚೈತನ್ಯದ ಅಗತ್ಯವಿದೆಂದು ಯೇಸುವಿಗೆ ಗೊತ್ತೇಕೆ? (ಬಿ) ಯೇಸು ದೇವ ಭಯವನ್ನು ಎಷ್ಟರ ಮಟ್ಟಿಗೆ ಪ್ರದರ್ಶಿಸಿದನು?
6 ಭೂಮಿಯ ಮೇಲೆ ಶರೀರದಲ್ಲಿದ್ದ ಯೇಸು ಮಾನವನಾಗಿರುವ, “ದೇವದೂತರಿಗಿಂತ ಸ್ವಲ್ಪವೇ ಕಡಿಮೆ” ಯಾಗಿರುವ ಅವಸ್ಥೆಯನ್ನು ಅನುಭವಿಸಿದನು. (ಇಬ್ರಿಯ 2:7) ಮಾನವ ಬಲಹೀನತೆಗಳ ಪರಿಚಯವು ಅವನಿಗಾದುದರಿಂದ, ಮಾನವ ಕುಲದ ಮೇಲೆ ಒಂದು ಸಹಸ್ರ ವರ್ಷ ರಾಜನೂ ನ್ಯಾಯಾಧೀಶನೂ ಆಗಿ ಸೇವೆಮಾಡಲು ಅವನು ಸುಸಜ್ಜಿತನಾಗಿದ್ದಾನೆ. “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು” ಎಂದು ಹೇಳಿದ ದೇವಪುತ್ರನಿಗೆ, ಮಾನವರಿಗೆ ಯಾವ ರೀತಿಯ ಚೈತನ್ಯಬೇಕೆಂಬದು ತಿಳಿದಿದೆ. (ಮತ್ತಾಯ 11:28) ಇಬ್ರಿಯ 5:7-9 ಹೇಳುವುದು: “ಕ್ರಿಸ್ತನು ತಾನು ಭೂಲೋಕದಲಿದ್ಲಾಗ್ದ ಮರಣಕ್ಕೆ ತಪ್ಪಿಸಿ ಕಾಪಾಡಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು. ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು (ವಿಧೇಯತೆಯಲ್ಲಿ) ಸಿದ್ಧಿಗೆ ಬಂದು ತನಗೆ ವಿಧೇಯರಾಗುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.” ಯೇಸು ದ್ವೇಷಭರಿತನಾದ ಸರ್ಪನಿಂದ ‘ಹಿಮ್ಮಡಿ ಗಾಯ’ ವನ್ನು ಪಡೆದು ಮಾನವ ಮರಣದ ಕೊಂಡಿಯನ್ನು ಅನುಭವಿಸುವ ತನಕ ತಾಳಬೇಕಾಗಿ ಬಂದರೂ ಅವನ ಅಸ್ಥಿರನಾಗಲಿಲ್ಲ. (ಆದಿಕಾಂಡ 3:15) ಯೇಸುವಿನಂತೆ ನಾವು ಸಹಾ, ಅವಶ್ಯಬೀಳುವಲ್ಲಿ ಮರಣದ ತನಕವೂ, ದಿವ್ಯಭಕ್ತಿ ತೋರಿಸಿ ಯೆಹೋವ ದೇವರು ನಮ್ಮ ವಿಜ್ಞಾಪನೆಗಳನ್ನು ಕೇಳಿ ರಕ್ಷಣೆಯನ್ನೊದಗಿಸುವನೆಂಬ ಭರವಸದಿಂದಿರೋಣ.
‘ನೀತಿಯ ವಿಷಯದಲ್ಲಿ ಜೀವಿಸುವುದು’
7. 1 ಪೇತ್ರ 2:21-24 ಕ್ಕನುಸಾರ, ಯೇಸು ನಮಗೆ ಯಾವ ಮಾದರಿಯಿಟ್ಟನು, ಮತ್ತು ಆ ಮಾದರಿ ನಮ್ಮ ಮೇಲೆ ಹೇಗೆ ಪರಿಣಾಮ ಬೀರಬೇಕು?
7 ಶರೀರದಲ್ಲಿ ಕಾಣಿಸಿಕೊಂಡು ಯೇಸು ದಿವ್ಯಭಕ್ತಿಯ ಪವಿತ್ರ ರಹಸ್ಯವನ್ನು ನಿಷ್ಟೆಯಿಂದ ಬಿಚ್ಚಿದನು. 1 ಪೇತ್ರ 2:21-24 ರಲ್ಲಿ ನಾವು ಓದುವುದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆವನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ. ಆತನು ಬಾಧೆಯನ್ನು ಅನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವವನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. ನಾವು ಪಾಪದ ಪಾಲಿಗೆ ಸತ್ತು ನೀತವಂತರಾಗಿ ಬದುಕುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಭವನ್ನು ಏರಿದನು.” ನಾವು ಯೇಸುವಿನ ಮಾರ್ಗವನ್ನು ಧ್ಯಾಸಿಸುವಾಗ ನಾವೂ ದೈವಿಕ ಭಕ್ತಿಯನ್ನು ಅನುಸರಿಸಿ, ಸಮಗ್ರತೆಯನ್ನು ಕಾಪಾಡಿ, ಅವನಂತೆ ನೀತಿಗಾಗಿ ಜೀವಿಸುವಂತೆ ಇದೆಷ್ಟು ನಮ್ಮನ್ನು ಪ್ರೋತ್ಸಾಹಿಸುತ್ತದೆ!
8. ಯೇಸುವಿನಂತೆ ನಾವು ಹೇಗೆ ನೀತಿಗಾಗಿ ಜೀವಿಸಬಹುದು?
8 ಯೇಸು ನಿಜವಾಗಿಯೂ ನೀತಿಗಾಗಿ ಜೀವಿಸಿದನು. “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ” ಎಂದು ಕೀರ್ತನೆ 45:7 ಅವನ ಕುರಿತು ಪ್ರವಾದಿಸಿತು. ಈ ಮಾತುಗಳನ್ನು ಅಪೋಸ್ತಲ ಪೌಲನು ಯೇಸುವಿಗೆ ಪ್ರಯೋಗಿಸಿ, “ನೀನು ಧರ್ಮವನ್ನು ಪ್ರೀತಿಸಿದಿ; ಅಧರ್ಮವನ್ನು ದ್ವೇಷಿಸಿದಿ” ಎಂದು ಇಬ್ರಿಯ 1:9 ರಲ್ಲಿ ಹೇಳುತ್ತಾನೆ. ಈ ದಿವ್ಯಭಕ್ತಿಯ ಪವಿತ್ರ ರಹಸ್ಯದ ನಮ್ಮ ತಿಳುವಳಿಕೆಯ ಬೆಳಕಿನಲ್ಲಿ ನಾವೂ ಯೇಸುವಿನಂತೆ ಸದಾ ನೀತಿಯನ್ನು ಪ್ರೀತಿಸಿ ಕೆಟ್ಟದನ್ನು ದ್ವೇಷಿಸುವಂತಾಗಲಿ. ಇಂದು ಸೈತಾನನ ಜಗತ್ತಿನಿಂದ ತೀಕ್ಷ್ಣ ಆಕ್ರಮಣಕ್ಕೊಳಗಾಗಿರುವ ಕ್ರೈಸ್ತ ನೀತಿ ಶೀಲತೆಯಲ್ಲಿ ಮತ್ತು ದೇವರ ಸಂಸ್ಥೆಯ ಹೊರಗೆ ಮತ್ತು ಒಳಗೆ ನಾವು ಮಾಡುವ ವ್ಯವಹಾರದಲ್ಲಿ ನೀತಿಯಲ್ಲಿ ಜೀವಿಸುತ್ತಾ ಯೆಹೋವನ ನೀತಿಯ ಸೂತ್ರಗಳನ್ನು ಸಮರ್ಥಿಸಲು ದೃಢ ನಿರ್ಧಾರವನ್ನು ಮಾಡೋಣ. ಸೈತಾನ ಮತ್ತು ಅವನ ಕುಯುಕ್ತಿಗಳನ್ನು ತಡೆಯಲು ಅಗತ್ಯವಾಗಿರುವ ದಿವ್ಯ ಒಳನೋಟವನ್ನು ಲಭಿಸಿಕೊಳ್ಳಲಿಕ್ಕಾಗಿ ನಾವು ದೇವರ ವಾಕ್ಯದ ಸವಿಯೂಟವನ್ನು ಮಾಡುತ್ತಾ ಹೋಗೋಣ!
9.ಯೇಸುವಿಗೆ ಸುವಾರ್ತಾಸೇವೆಯಲ್ಲಿದ್ದ ಆಸಕ್ತಿಗೆ ಯಾವುದು ಹೆಚ್ಚು ಬಲಕೊಟ್ಟಿತು, ಮತ್ತು ಸುಳ್ಳುಧರ್ಮದ ಕುರುಬರ ವಿಷಯದಲ್ಲಿ ಇದರಲ್ಲಿ ಏನು ಸೇರಿದೆ?
9 ಯೇಸು ಸುವಾರ್ತಾಸೇವೆಯಲ್ಲಿ ಆಸಕ್ತನಾಗಿರುವಂತೆ ಇನ್ನಾವುದೋ ವಿಷಯ ಅವನನ್ನು ಪ್ರಚೋದಿಸಿತು. ಅದಾವುದು? ಮತ್ತಾಯ 9:36 ರಲ್ಲಿ ನಾವು ಓದುವುದು: “ಜನರ ಗುಂಪುಗಳನ್ನು ನೋಡಿ ಅವನು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ ಎಂದು ಅವರ ಮೇಲೆ ಕನಿಕರಪಟ್ಟನು. ಆದುದರಿಂದ ಅವನು “ಅವರಿಗೆ ಬಹಳ ಉಪದೇಶ ಮಾಡುತ್ತಿದ್ದನು.” (ಮಾರ್ಕ 6:34) ಇದರಲ್ಲಿ ಸುಳ್ಳು ಧರ್ಮದ ಕುರುಬರ ದುಷ್ಟತ್ವ ಮತ್ತು ನಿಯಮರಾಹಿತ್ಯವನ್ನು ಬಯಲು ಮಾಡುವುದೂ ಅಗತ್ಯವಾಗಿತ್ತೆಂಬದು ನಿಶ್ಚಯ. ಮತ್ತಾಯ 15:7-9ಕ್ಕನುಸಾರ, ಇವರಲ್ಲಿ ಕೆಲವರಿಗೆ ಯೇಸು ಹೇಳಿದ್ದು: “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ. ಅವನು ಬರೆದದ್ದೇನಂದರೆ- ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನು ಅವರು ಭೋದಿಸುವುದರಿಂದ ನನಗೆ ಭಕ್ತಿ ತೋರಿಸುವುದು ವ್ಯರ್ಥ ಎಂಬದೇ.”
ನಿಂದನೀಯ ರಹಸ್ಯ
10. ಇಂದು “ಈ ನಿಯಮರಾಹಿತ್ಯ ರಹಸ್ಯ” ಯಾರಲ್ಲಿ ಕೇಂದ್ರಿಸುತ್ತದೆ ಮತ್ತು ಅವರ ಅಪರಾಧವೇನು?
10 ಯೇಸು ಸುಳ್ಳುಧರ್ಮ ನಾಯಕರ ವಿರುದ್ಧ ಮಾತಾಡಿದಂತೆಯೇ ಇಂದು ನಾವು, ದಿವ್ಯಭಕ್ತಿಯ ಪವಿತ್ರ ರಹಸ್ಯಕ್ಕೆ ಸರಿ ವಿರುದ್ಧವಾಗಿ ನಿಂತಿರುವ ರಹಸ್ಯವೂಂದನ್ನು ನಿಂದಿಸುತ್ತೇವೆ. 2 ಥೆಸಲೋನಿಕ 2:7 ರಲ್ಲಿ ಪೌಲನು ಅದನ್ನು “ಈ ನಿಯಮರಾಹಿತ್ಯದ ರಹಸ್ಯ” ವೆಂದು ಕರೆಯುತ್ತಾನೆ. ಅದು ಒಂದನೆಯ ಶತಮಾನದಲ್ಲಿ ರಹಸ್ಯವಾಗಿತ್ತು. ಅಪೋಸ್ತಲರ ಮರಣದ ಅನೇಕ ಕಾಲಗಳ ತನಕ ಅದು ಬಯಲಾಗುವಂತಿರಲಿಲ್ಲ. ಇಂದು ಇದು ಕ್ರೈಸ್ತ ಪ್ರಪಂಚದ ಪುರೋಹಿತ ವರ್ಗದ ಮೇಲೆ ಕೇಂದ್ರೀಕರಿಸುತ್ತದೆ. ಇವರು ದೇವರ ನೀತಿಯರಾಜ್ಯದ ಸುವಾರ್ತೆಯನ್ನು ಸಾರುವ ಬದಲಿಗೆ ರಾಜಕೀಯದಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ. ಅವರ ವರ್ಗದಲ್ಲಿ ಕಪಟ ಹೇರಳವಾಗುತ್ತಿದೆ. ಕ್ರೈಸ್ತ ಪ್ರಪಂಚದ ಪ್ರಾಟೆಸ್ಟಂಟ್ ಪಂಗಡಗಳ ಟೀವೀ ಉಪದೇಶಿಗಳು ಕಣ್ಣುಕುಕ್ಕುವ ನಿದರ್ಶನಗಳು: ತಮ್ಮ ಮಂದೆಯನ್ನು ಸುಲಿದು, ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಕಟ್ಟಿ, ವೇಶ್ಯೆಯರೊಂದಿಗೆ ಒಡನಾಟಮಾಡುತ್ತಾ, ಸಿಕ್ಕಿಬೀಳುವಾಗ ಕಪಟ ಕಂಬನಿ ಸುರಿಸುತ್ತಾ, ಬಳಿಕ ಇನ್ನೂ ಹೆಚ್ಚು ಹಣ, ಯಾವಾಗಲೂ ಹೆಚ್ಚು ಹಣವನ್ನೇ ಬೇಡುವ ಪಂಡಿತವೇಶಿಗಳು. ರೋಮನ್ ಕ್ಯಾಥ್ಲಿಕ್ ಧರ್ಮದ ವ್ಯಾಟಿಕನ್ ಸಹಾ ಇದೇ ರೀತಿಯ ಅಸಹ್ಯ ಚಿತ್ರವನ್ನು ತೋರಿಸುತ್ತದೆ. ಯಾವುದಕ್ಕೂ ಹೇಸದ ರಾಜಕೀಯ ಸಂಬಂಧ, ಬಾಹ್ಯಾಡಂಬರ ಮತ್ತು ಭ್ರಷ್ಟ ಬ್ಯಾಂಕ್ ವ್ಯವಹಾರಗಳು ಅದರಲ್ಲಿವೆ.
11. ಕ್ರೈಸ್ತ ಪ್ರಪಂಚದ ವೈದಿಕ ವರ್ಗಕ್ಕೆ ಮತ್ತು ಮಹಾ ಬಾಬೆಲಿಗೆ ಏನು ಸಂಭವಿಸುವುದು?
11 ಕ್ರೈಸ್ತ ಪ್ರಪಂಚದ ಪುರೋಹಿತ ವರ್ಗವನ್ನು “ಅಧರ್ಮಸ್ವರೂಪ” ನೆಂದು ಗುರುತಿಸಬಹುದೆಂಬದರಲ್ಲಿ ಆಶ್ಚರ್ಯವಿಲ್ಲ. (2 ಥೆಸಲೋನಿಕ 2:3) ಈ ವೇಶ್ಯಾಸದೃಶ ಮಹಾ ಬಾಬೆಲಿನ ಪ್ರಧಾನ ಭಾಗವು ಸುಳ್ಳು ಧರ್ಮದ ಇತರ ಎಲ್ಲಾ ಭಾಗಗಳೊಂದಿಗೆ ಪೂರ್ತಿಯಾಗಿ ಬಯಲಾಗಿ ನಾಶಗೊಳ್ಳುವುದು. ನಾವು ಪ್ರಕಟನೆ 18:9-17 ರಲ್ಲಿ ಓದುವಂತೆ, ರಾಜಕೀಯಸ್ಥರು ಮತ್ತು ವರ್ತಕರು (ಅವರ ಬ್ಯಾಂಕ್ ಧನಿಗಳೊಂದಿಗೆ) “ಅಯ್ಯೋ, ಅಯ್ಯೋ, ಮಹಾ ಪಟ್ಟಣವೇ” ಎಂದು ಪ್ರಲಾಪಿಸುವರು. ಆಗ, ದಿವ್ಯಭಕ್ತಿಯ ಪವಿತ್ರ ರಹಸ್ಯದ ಮೇಲೆ ಬೀಳುವ ಪ್ರಕಾಶಕ್ಕೆ ತೀರಾ ವ್ಯತಿರಿಕ್ತವಾಗಿ ಮಹಾ ಬಾಬೆಲ್ ಮತ್ತು ಆಕೆಯ ರಹಸ್ಯಗಳು ಬಯಲಾಗಿರುವವು.
12. ಯೇಸುವಿನ ನೀತಿಪ್ರೀತಿ ಅವನೇನು ಮಾಡುವಂತೆ ನಡಿಸಿತು?
12 ಯೇಸುವಿನ ನೀತಿಪ್ರೀತಿ ಮತ್ತು ಅಧರ್ಮ ದ್ವೇಷವು, ಅವನು ಸತ್ಯಾರಾಧನೆಯ ಪರವಾಗಿ ಅಮಿತವಾಗಿ ಶ್ರಮಪಡುವಂತೆ ನಡಿಸಿತು. ದೇವರ ಅಭಿಷಿಕ್ತ ಕಮಾರನಾಗಿ ಅವನು ಯೆರೂಸಲೇಮನ್ನು ಪ್ರಥಮವಾಗಿ ಸಂದರ್ಶಿಸಿದಾಗ, ಕ್ರಿಸ್ತನು ವರ್ತಕರನ್ನೂ ಹಣದ ವ್ಯಾಪಾರಿಗಳನ್ನೂ ದೇವಾಲಯದಿಂದ ಹೊರಗೆ ಓಡಿಸಿ, “ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ಸಂತೆಮಾಡಬೇಡಿರಿ” ಎಂದು ಹೇಳಿದನು. (ಯೋಹಾನ 2:13-17) ಆ ಬಳಿಕ, ಇನ್ನೊಮ್ಮೆ ದೇವಾಲಯವನ್ನು ಸಂದರ್ಶಿಸಿದಾಗ ಅವನು ಯೆಹೂದಿ ವಿರೋಧಿಗಳಿಗೆ, “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲ ಪುರುಷನೂ ಆಗಿದ್ದಾನೆ. (ಯೋಹಾನ 8:44) ಆ ಧಾರ್ಮಿಕರಿಗೆ ಎದುರೆದುರಾಗಿ ಅವರು ಸುಳ್ಳರೆಂದೂ ಪಿಶಾಚನ ಮಕ್ಕಳೆಂದೂ ಹೇಳಿದಾಗ ಯೇಸು ಎಂಥ ಧೈರ್ಯವನ್ನು ತೋರಿಸಿದನು!
13. (ಎ) ಯೇಸುವಿನ ಅಧರ್ಮದ್ವೇಷವು ವಿಶೇಷವಾಗಿ ಎಲ್ಲಿ ವ್ಯಕ್ತವಾಯಿತು? (ಬಿ) ಯೇಸು ಶಾಸ್ತ್ರಿ ಮತ್ತು ಫರಿಸಾಯರಿಗೆ ವಿಧಿಸಿದ ಸದೃಶ ತೀರ್ಪಿಗೆ ನಿಯಮರಹಿತ ಪುರೋಹಿತರೂ ಏಕೆ ಯೋಗ್ಯರು?
13 ಯೇಸುವಿನ ಅಧರ್ಮದ್ವೇಷವು, ಮತ್ತಾಯ 23ನೇ ಅಧ್ಯಾಯದಲ್ಲಿ ದಾಖಲೆಮಾಡಿರುವಂತೆ, ಅವನು ಕನ್ನಡಿ ಹಾವು ಜಾತಿಯ ಶಾಸ್ತ್ರಿಗಳು ಮತ್ತು ಫರಿಸಾಯರನ್ನು ಇರಿದು ಖಂಡಿಸಿದುದಕ್ಕಿಂತ ಹೆಚ್ಚು ಉತ್ತಮವಾಗಿ ಇನ್ನೆಲ್ಲಿಯೂ ವ್ಯಕ್ತವಾಗಿರುವುದಿಲ್ಲ. ಅಲ್ಲಿ ಅವನು ಏಳುಮಡಿ “ಅಯ್ಯೋ” ಗಳನ್ನು ನುಡಿದು, ಅವರನ್ನು ‘ಸುಣ್ಣ ಬಳಿದ ಸಮಾಧಿಗಳಿಗೆ—ಸರ್ವ ವಿಧದ ಅಶುದ್ಧತೆ, ಕಪಟ ಮತ್ತು ನಿಯಮರಾಹಿತ್ಯಗಳಿಗೆ—ಹೋಲಿಸುತ್ತಾನೆ. ಆ ನಿಯಮರಾಹಿತ್ಯದಿಂದ, ದಬ್ಬಾಳಿಕೆಯಿಂದ, ಜನರನ್ನು ಬಿಡಿಸಲು ಯೇಸು ಎಷ್ಟು ಹಂಬಲಿಸಿದನು! ಅವನು ಕೂಗುತ್ತಾ ಹೇಳಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ! ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟಿದೆ.” (37, 38ನೇ ವಚನಗಳು) ನಮ್ಮ ದಿನಗಳ ನಿಯಮರಹಿತ ವೈದಿಕರೂ ಇದೇ ರೀತಿಯ ತೀರ್ಪಿಗೆ ಯೋಗ್ಯರು, ಏಕಂದರೆ 2 ಥೆಸಲೋನಿಕ 2:12ರ ಮಾತುಗಳಲ್ಲಿ, ‘ಅವರು ಸತ್ಯವನ್ನು ನಂಬದೆ ಅನೀತಿಯಲ್ಲಿ ಸಂತೋಷಿಸುತ್ತಾರೆ.’ ಅವರ ನಿಯಮರಾಹಿತ್ಯವು ಯೇಸು ಭೂಮಿಯಲ್ಲಿದ್ದಾಗ ನಿಷ್ಟೆಯಿಂದ ಪ್ರದರ್ಶಿಸಿದ ದಿವ್ಯಭಕ್ತಿಯ ವಿರೋಧಾಲಂಕಾರವಾಗಿದೆ.
ದೇವರ ತೀರ್ಪನ್ನು ಘೋಷಿಸುವುದು
14. ದಿವ್ಯಭಕ್ತಿಯ ಪವಿತ್ರ ರಹಸ್ಯಕ್ಕೆ ಗಣ್ಯತೆ ನಮ್ಮನ್ನು ಏನು ಮಾಡುವಂತೆ ನಡಿಸಬೇಕು?
14 ದಿವ್ಯ ಭಕ್ತಿಯ ಪವಿತ್ರ ರಹಸ್ಯಕ್ಕೆ ನಾವು ತೋರಿಸುವ ಗಣ್ಯತೆ, ನಾವು ಯೇಸುವಿನ ಹೆಜ್ಜೆಗಳನ್ನು ಸದಾ ಒತ್ತಾಗಿ ಅನುಸರಿಸುವಂತೆ ಮಾಡಬೇಕು. ಅವನಂತೆ ನಾವು, ಯೆಶಾಯ 61:2 ರಲ್ಲಿ ವರ್ಣಿಸಿರುವ “ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ” ವನ್ನು ಪ್ರಕಟಿಸಲು ಆಸಕ್ತಿ ತೋರಿಸಬೇಕು. ಮತ್ತು “ದು:ಖಿತರೆಲ್ಲರನ್ನು ಸಂತೈಸುವುದಕ್ಕೆ” ನಮ್ಮಿಂದ ಮಾಡಲಾಗುವುದನ್ನು ಆಸಕ್ತಿಯಿಂದ ಮಾಡೋಣ. ಯೇಸು ಭೂಮಿಯಲ್ಲಿದ್ದಾಗ ನಡೆದಂತೆಯೇ ಇಂದು ಸಹ ಯೆಹೋವನ ತೀರ್ಪುಗಳನ್ನು ಪ್ರಕಟಿಸಲು ಧೈರ್ಯಬೇಕು. ಬಿಚ್ಚಿಮಾತಾಡುವ ಕಾವಲಿನಬುರುಜು ಲೇಖನಗಳ ಮತ್ತು ರೆವಲೇಷನ್—ಇಟ್ಸ್ ಗ್ರ್ಯಾಂಡ್ ಕ್ಲೈಮಾಕ್ಸ್ ಎಟ್ ಹ್ಯಾಂಡ್! ಪುಸ್ತಕದ ಬಲವಾದ ಸಂದೇಶಗಳನ್ನು ಸಾರಲು ಧೈರ್ಯ ಅವಶ್ಯ. ನಾವು ಧೈರ್ಯದಿಂದಲೂ ಸಮಯೋಚಿತ ನಯದಿಂದಲೂ ಮಾತಾಡತಕ್ಕದ್ದು. ನಮ್ಮ ಮಾತುಗಳು ನೀತಿ ಪ್ರವೃತ್ತಿಯವರಿಗೆ ರುಚಿಕರವಾಗಿ, “ಉಪ್ಪಿನಿಂದ ಹದಗೊಳಿಸಿದ್ದಾಗಿ” ಇರಬೇಕು. (ಕೊಲೊಸ್ಸೆ 4:6) ದಿವ್ಯಭಕ್ತಿಯ ಯೇಸುವಿನ ಮಾದರಿಯಿಂದ ಕಲಿತಿರುವ ನಾವು, ತಕ್ಕ ಸಮಯದಲ್ಲಿ, ಯೆಹೋವನು ನಮಗೆ ಕೊಟ್ಟಿರುವ ಕೆಲಸವನ್ನು ಮುಗಿಸಿದ್ದೇವೆಂದು ವರದಿಮಾಡುವಂತಾಗಲಿ.—ಮತ್ತಾಯ 24:14; ಯೋಹಾನ 17:4.
15. ದೇವರ ರಹಸ್ಯದ ಸಂಬಂಧದಲ್ಲಿ, 1914 ರಿಂದ ಏನು ಸಂಭವಿಸಿದೆ?
15 ಶರೀರದಲ್ಲಿ ಕಾಣಿಸಿಕೊಂಡಾಗ ಯೇಸು ಎಷ್ಟು ಉತ್ತಮ ಆದರ್ಶನಾಗಿದ್ದನು! ದಿವ್ಯಭಕ್ತಿಯ ಪವಿತ್ರ ರಹಸ್ಯ ಅವನಲ್ಲಿ ಎಷ್ಟು ಸ್ಪಷ್ಟವಾಗಿ ನೆರವೇರಿತು! ಅವನು ಯೆಹೋವನ ಹೆಸರನ್ನು ಎಷ್ಟು ಧೈರ್ಯದಿಂದ ಘನಪಡಿಸಿದನು! ಮತ್ತು ಯೇಸುವಿನ ತಂದೆಯು ಅವನು ಸಮಗ್ರತೆ ಕಾಪಾಡಿದುದಕ್ಕಾಗಿ ಎಷ್ಟು ಆಶ್ಚರ್ಯಕರವಾಗಿ ಪ್ರತಿಫಲಕೊಟ್ಟನು! ಆದ್ರೆ, ದೇವರ ಪವಿತ್ರ ರಹಸ್ಯದಲ್ಲಿ ಇನ್ನೂ ಹೆಚ್ಚು ವಿಷಯ ಅಡಕವಾಗಿದೆ. 1914 ರಿಂದ ಹಿಡಿದು ನಾವು “ಕರ್ತನ ದಿನದಲ್ಲಿ” ಜೀವಿಸುತ್ತಿದ್ದೇವೆ. (ಪ್ರಕಟನೆ 1:10) ಪ್ರಕಟನೆ 10:7 ಹೇಳುವಂತೆ, ಇದು, ‘ಶುಭವರ್ತಮಾನಾನುಸಾರವಾಗಿರುವ ದೇವರ ಪವಿತ್ರ ರಹಸ್ಯವು ಮುಕ್ತಾಯಕ್ಕೆ’ ಬರುವ ಸಮಯ. ಈಗ ಸ್ವರ್ಗೀಯ ದ್ವನಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತ [ಯೆಹೋವ] ನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿ ರಾಜ್ಯವನ್ನಾಳುವನು” ಎಂದು ಘೋಷಿಸಿದೆ. (ಪ್ರಕಟನೆ 11:15) ಯೆಹೋವನು ತನ್ನ ಮೇಸ್ಸೀಯ ರಾಜನಾದ ಯೇಸು ಕ್ರಿಸ್ತನನ್ನು ತನ್ನೊಂದಿಗೆ ಜೊತೆಪ್ರಭುವಾಗಿರುವಂತೆ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ!
16. ಹೊಸದಾಗಿ ಸಿಂಹಾಸನಾರೂಢನಾದ ಯೇಸು ಕ್ರಿಸ್ತನು ಸ್ವರ್ಗದಲ್ಲಿ ದಿವ್ಯಭಕ್ತಿಗೆ ಚಿಂತೆಯನ್ನು ಹೇಗೆ ತೋರಿಸಿದನು?
16 ಈ ಹೊಸದಾಗಿ ಹುಟ್ಟಿದ ರಾಜ್ಯದಲ್ಲಿ ದೇವರೊಂದಿಗೆ ಜೊತೆಪ್ರಭುವಾದ ಯೇಸುವನ್ನು ಮಿಕಾಯೇಲ (“ದೇವರಂತೆ ಯಾರಿದ್ದಾನೆ?”) ನೆಂದೂ ಕರೆಯಲಾಗಿದೆ. ಯಾವ ದಂಗೆಖೋರನೂ ದೇವರಂಥಾಗುವುದರಲ್ಲಿ ಸಾಫಲ್ಯ ಪಡೆಯನು. ಮತ್ತು ಈ ಹೊಸದಾಗಿ ಸಿಂಹಾಸನಾರೂಢನಾದ ರಾಜನು ಮೂಲ ಸರ್ಪನಾದ ಸೈತಾನನ್ನೂ ಅವನ ದೂತರನ್ನೂ ಒಡನೇ ಭೂಮಿಗೆ ದೊಬ್ಬಿ ಇದನ್ನು ಪ್ರದರ್ಶಿಸಿದನು. (ಪ್ರಕಟನೆ 12:7-9) ಹೌದು, ಯೇಸು ಭೂಮಿಯಲ್ಲಿ ದಿವ್ಯಭಕ್ತಿ ತೋರಿಸಿದಂತೆಯೇ ಅವನಿಗೆ ಸ್ವರ್ಗದಲ್ಲಿಯೂ ದಿವ್ಯಭಕ್ತಿಯ ಚಿಂತೆಯಿದೆ. ಮಹಿಮಾಭರಿತ ಯೇಸು ಕ್ರಿಸ್ತನು ಮಿಥ್ಯಾ ಧರ್ಮವನ್ನು ನಿರ್ಮೂಲಮಾಡಿ ಸೈತಾನನ ದೃಶ್ಯಾದೃಶ್ಯ ಸಂಘಟನೆಯನ್ನು ಪೂರ್ತಿ ನಿರ್ನಾಮಮಾಡುವ ತನಕ ವಿಶ್ರಮಿಸನು.
17. 1914 ರಿಂದ ಮತ್ತಾಯ 25:31-33 ರ ನೆರವೇರಿಕೆಯಾಗಿ ಏನು ಸಂಭವಿಸುತ್ತಿದೆ?
17 1914 ರಿಂದ ಮತ್ತಾಯ 25:31-33 ರಲ್ಲಿ ಹೇಳಿರುವ ಯೇಸುವಿನ ಸ್ವಂತ ಪ್ರವಾದನೆಯ ನೆರವೇರಿಕೆಯು ದೇವರ ಪವಿತ್ರ ರಹಸ್ಯವನ್ನು ಉಜ್ವಲವಾಗಿ ಬೆಳಗಿಸಿದೆ. ಅಲ್ಲಿ ಯೇಸು ಹೇಳಿದ್ದು: “ಇದಲ್ಲದೆ ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು. ಮತ್ತೆ ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆ ಮಾಡುವ ಹಾಗೆ ಆತನು ಅವರನ್ನು ಬೇರೆಬೇರೆ ಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿ ನಿಲ್ಲಿಸುವನು.” ಸ್ವರ್ಗದಲ್ಲಿ ಈ ಅನುಕೂಲ ಸ್ಥಳದಿಂದ, ಈ ಮಹಿಮಾಭರಿತ ಅರಸ, ನ್ಯಾಯಾಧೀಶ ಮತ್ತು ದಿವ್ಯಭಕ್ತಿಯ ಪಕ್ಷವಾದಿಯು ಮೊದಲಾಗಿ, ಅಧರ್ಮಸ್ವರೂಪನ ಮತ್ತು ಮಹಾ ಬಾಬೆಲಿನ ಇತರ ವಿಭಾಗಗಳ ಮೇಲೆಯೂ ಆ ಬಳಿಕ, ಸೈತಾನನ ದುಷ್ಟ ಐಹಿಕ ಸಂಘಟನೆಯ ಉಳಿದ ಅಂಶಗಳ ಮತ್ತು ಆಡು ಸ್ವಭಾವದ ಬೆಂಬಲಿಗರ ಮೇಲೆಯೂ ಸೇಡನ್ನು ತೀರಿಸುವನು. ಸೈತಾನನನ್ನು ಆಬಳಿಕ ಅಧೋಲೋಕಕ್ಕೆ ದೊಬ್ಬಲಾಗುವುದು. (ಪ್ರಕಟನೆ 20:1-3) ಆದರೆ ಕುರಿ ಸದೃಶರಾದ “ನೀತಿವಂತರು” ನಿತ್ಯಜೀವಕ್ಕೆ ತೆರಳುವರು. (ಮತ್ತಾಯ 25:46) ದಿವ್ಯಭಕ್ತಿಯ ನಿಮ್ಮ ಬೆನ್ನಟ್ಟುವಿಕೆ ನಿಮ್ಮನ್ನೂ ಆ ಯೋಗ್ಯ ಗುಂಪಿನಲ್ಲಿ ಇಡುವಂತಾಗಲಿ!
18. ದಿವ್ಯಭಕ್ತಿಯ ಪವಿತ್ರ ರಹಸ್ಯದ ಸಂಬಂಧದಲ್ಲಿ ನಮಗೆ ಯಾವ ಸಂತೋಷದ ಸುಯೋಗವಿದೆ?
18 ಪ್ರಕಟನೆ 19:10 ನಾವು “ದೇವರನ್ನು ಆರಾಧಿಸು” ವಂತೆ ಪ್ರೋತ್ಸಾಹಿಸುತ್ತದೆ. ಏಕೆ? ಆ ವಾಕ್ಯ ಮುಂದುವರಿಸುವುದು: “ಯೇಸುವಿಗೆ ಸಾಕ್ಷಿ ನೀಡುವುದೇ ಪ್ರವಾದಿಸುವುದನ್ನು ಪ್ರೇರಿಸುತ್ತದೆ.” ಪುರಾತನ ಕಾಲದ ಅನೇಕಾನೇಕ ಪ್ರೇರಿತ ಪ್ರವಾದನೆಗಳು ಯೇಸುವಿಗೆ ಸಾಕ್ಷಿ ನೀಡಿದವು! ಮತ್ತು ಈ ಪ್ರವಾದನೆಗಳು ನೆರವೇರಿರುವದರಿಂದ ದೇವರ ಪವಿತ್ರ ರಹಸ್ಯವು ಸ್ವಚ್ಛವೂ ಪಾರದರ್ಶಕವೂ ಆಗಿದೆ. ಆದುದರಿಂದ, ಈ ದಿವ್ಯಭಕ್ತಿಯ ಪವಿತ್ರ ರಹಸ್ಯವು ಯೇಸುವಿನಲ್ಲಿ ವ್ಯಕ್ತೀಕರಿಸಲ್ಪಟ್ಟಿರುವುದನ್ನು ತಿಳಿಯಲು ನಾವು ಸಂತೋಷಿಸುತ್ತೇವೆ. ದೇವರ ರಾಜ್ಯದ ನಮ್ರ ಶುಶ್ರೂಷಕರಾಗಿ ಅವನ ಹೆಜ್ಜೆಯಲ್ಲಿ ಹಿಂಬಾಲಿಸಲು ನಮಗಿರುವ ಸುಯೋಗ ಆಶ್ಚರ್ಯಕರವಾದದ್ದೇ ಸರಿ. ಹೌದು, ಸುವಾರ್ತೆಗನುಸಾರ ದೇವರ ಸಕಲ ಪವಿತ್ರ ರಹಸ್ಯಗಳನ್ನು ತಿಳಿದು ಅವನ್ನು ಸಾರುವುದರಲ್ಲಿ ಪಾಲಿಗರಾಗುವುದು ನಮಗೆ ಘನಗೌರವವೇ ಸರಿ! (w90 1/15)
ನೀವು ಹೇಗೆ ಉತ್ತರ ಕೊಡುವಿರಿ?
◻ ಯೇಸುವಿನ ದಿವ್ಯ ಭಕ್ತಿಯ ಮಾದರಿಯಿಂದ ನಾವೇನು ಕಲಿಯಬಲ್ಲೆವು?
◻ ಯೇಸುವಿನಂತೆ ನಾವೂ ನೀತಿಗಾಗಿ ಹೇಗೆ ಜೀವಿಸಬಹುದು?
◻ ದಿವ್ಯ ಭಕ್ತಿಯ ಪವಿತ್ರ ರಹಸ್ಯಕ್ಕೆ ತೀರಾ ವ್ಯತಿರಿಕ್ತವಾಗಿ ಯಾವ ನಿಂದನೀಯ ರಹಸ್ಯವು ನಿಂತಿದೆ?
◻ ದೈವಿಕ ಭಕ್ತಿಯ ಪವಿತ್ರ ರಹಸ್ಯಕ್ಕೆ ನಾವು ತೋರಿಸುವ ಗಣ್ಯತೆ ನಾವೇನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು?
[ಪುಟ 20 ರಲ್ಲಿರುವ ಚಿತ್ರ]
ದಿವ್ಯಭಕ್ತಿಯ ಪಕ್ಷವಾದಿ ಮತ್ತು ಆಸಕ್ತಿಯ ರಾಜ್ಯ ಘೋಷಕನಾಗಿದ್ದುದರಿಂದ ಯೇಸು, “ನಾನು ಸತ್ಯದ ವಿಷಯ ಸಾಕ್ಷಿ ಹೇಳುವದಕ್ಕೋಸ್ಕರ ಈ ಲೋಕಕ್ಕೆ ಬಂದಿದ್ದೇನೆ” ಎಂದು ಹೇಳಿದನು
[ಪುಟ 21 ರಲ್ಲಿರುವ ಚಿತ್ರ]
ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಖಂಡಿಸಿದಾಗ ಯೇಸುವಿನ ದಿವ್ಯಭಕ್ತಿ ವ್ಯಕ್ತವಾಯಿತು