ಭೂಮಿಯಲ್ಲಿನ ಯೇಸುವಿನ ಕಡೇ ದಿವಸಗಳನ್ನು ಪುನರನುಭವಿಸುವುದು
ಇದು ಸಾ.ಶ. 33ರ ಯೆಹೂದಿ ತಿಂಗಳಾದ ನೈಸಾನ್ನ ಏಳನೇ ದಿನವಾಗಿದೆ. ರೋಮನ್ ಪ್ರಾಂತ್ಯದ ಯೂದಾಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೀವು ಗಮನಿಸುತ್ತಿದ್ದೀರೆಂದು ಭಾವಿಸಿಕೊಳ್ಳಿರಿ. ಯೆರಿಕೊ ಮತ್ತು ಅದರ ಹುಲುಸಾದ ಮರಗಿಡಗಳನ್ನು ಬಿಟ್ಟು, ಯೇಸು ಕ್ರಿಸ್ತನೂ ಅವನ ಶಿಷ್ಯರು ಧೂಳು ತುಂಬಿದ, ಅಂಕುಡೊಂಕಾದ ರಸ್ತೆಯಲ್ಲಿ ಆಯಾಸದಿಂದ ಹೆಜ್ಜೆಯನ್ನು ಹಾಕುತ್ತಿದ್ದಾರೆ. ಇತರ ಅನೇಕ ಪಯಣಿಗರೂ ವಾರ್ಷಿಕ ಪಸ್ಕಹಬ್ಬದ ಆಚರಣೆಗಾಗಿ ಯೆರೂಸಲೇಮಿಗೆ ಹತ್ತಿಹೋಗುವ ದಾರಿಯಲ್ಲಿದ್ದಾರೆ. ಆದರೆ, ಕ್ರಿಸ್ತನ ಶಿಷ್ಯರ ಮನಸ್ಸಿನಲ್ಲಿ ಈ ಆಯಾಸಗೊಳಿಸುವ ಹತ್ತುವಿಕೆಗಿಂತಲೂ ಹೆಚ್ಚಿನದ್ದು ಏನೋ ಇದೆ.
ರೋಮನ್ ನೊಗದಿಂದ ಬಿಡುಗಡೆಯನ್ನು ತರಬಲ್ಲ ಒಬ್ಬ ಮೆಸ್ಸೀಯನಿಗಾಗಿ ಯೆಹೂದ್ಯರು ಹಾತೊರೆಯುತ್ತಿದ್ದಾರೆ. ದೀರ್ಘಕಾಲದಿಂದ ಎದುರುನೋಡಲ್ಪಟ್ಟ ರಕ್ಷಕನು ನಜರೇತಿನ ಯೇಸುವೆಂದು ಅನೇಕರು ನಂಬುತ್ತಾರೆ. ಮೂರೂವರೆ ವರ್ಷಗಳ ತನಕ, ಅವನು ದೇವರ ರಾಜ್ಯದ ಕುರಿತು ಮಾತಾಡುತ್ತಿದ್ದಾನೆ. ಅವನು ಅಸ್ವಸ್ಥರನ್ನು ವಾಸಿಮಾಡಿ, ಹಸಿದವರಿಗೆ ಉಣಿಸಿದ್ದಾನೆ. ಹೌದು, ಅವನು ಜನರಿಗೆ ಸಾಂತ್ವನವನ್ನು ತಂದಿದ್ದಾನೆ. ಆದರೆ ಧಾರ್ಮಿಕ ಮುಖಂಡರ ಬಗ್ಗೆ ಯೇಸು ಮಾಡಿದ ತೀವ್ರ ಖಂಡನೆಯಿಂದಾಗಿ, ಅವರು ಸಿಡಿಮಿಡಿಗೊಂಡು, ಅವನನ್ನು ಕೊಲ್ಲಲು ದೃಢಮನಸ್ಕರಾಗಿದ್ದಾರೆ. ಆದರೂ, ಅವನು ಅಲ್ಲಿ ತನ್ನ ಶಿಷ್ಯರ ಮುಂದೆ, ಒಣಗಿಹೋಗಿದ್ದ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ನಡೆದುಹೋಗುತ್ತಿದ್ದಾನೆ.—ಮಾರ್ಕ 10:32.
ಎದುರಿಗಿದ್ದ ಎಣ್ಣೇಮರಗಳ ಗುಡ್ಡದ ಮರೆಯಲ್ಲಿ ಸೂರ್ಯನು ಮುಳುಗಿದಂತೆ, ಯೇಸು ಮತ್ತು ಅವನ ಸಂಗಡಿಗರು ಬೇಥಾನ್ಯದ ಹಳ್ಳಿಯನ್ನು ತಲಪುತ್ತಾರೆ. ಅಲ್ಲಿ ಅವರು ಮುಂದಿನ ಆರು ರಾತ್ರಿಗಳನ್ನು ಕಳೆಯಲಿಕ್ಕಿದ್ದಾರೆ. ಅಲ್ಲಿ ಅವರನ್ನು ಸ್ವಾಗತಿಸಲು ಅವರ ಆಪ್ತ ಸ್ನೇಹಿತರಾದ, ಲಾಜರನು, ಮರಿಯ ಹಾಗೂ ಮಾರ್ಥರು ಇದ್ದಾರೆ. ಆ ಸಂಜೆಯು, ಸುಡುಬಿಸಿಲಿನ ಪ್ರಯಾಣದಿಂದ ಒಂದು ತಂಪಾದ ಉಪಶಮನವನ್ನು ಕೊಡುತ್ತದೆ ಮತ್ತು ನೈಸಾನ್ 8ರ ಸಬ್ಬತ್ತಿನ ಆರಂಭವನ್ನು ಸೂಚಿಸುತ್ತದೆ.—ಯೋಹಾನ 12:1, 2.
ನೈಸಾನ್ 9
ಸಬ್ಬತ್ತಿನ ಅನಂತರ, ಯೆರೂಸಲೇಮು ಲವಲವಿಕೆಯಿಂದ ಕೂಡಿದೆ. ಸಾವಿರಾರು ಭೇಟಿಗಾರರು ಈಗಾಗಲೇ ಪಸ್ಕಹಬ್ಬಕ್ಕಾಗಿ ನಗರದಲ್ಲಿ ನೆರೆದುಬಂದಿದ್ದಾರೆ. ಆದರೆ ನಾವು ಕೇಳಿಸಿಕೊಳ್ಳುತ್ತಿರುವ ಈ ಗದ್ದಲಭರಿತ ಕೋಲಾಹಲವು ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಇರುವುದಕ್ಕಿಂತಲೂ ಹೆಚ್ಚಾಗಿದೆ. ಕುತೂಹಲಭರಿತ ಗುಂಪುಗಳು ನಗರದ ದ್ವಾರದ ಕಡೆಗೆ ಹೋಗುವ ಕಿರಿದಾದ ರಸ್ತೆಗಳ ಕಡೆಗೆ ಧಾವಿಸುತ್ತಿದ್ದಾರೆ. ಅವರು ಕಿಕ್ಕಿರಿದ ದ್ವಾರಗಳಿಂದ ನೂಕಿಕೊಂಡು ಹೋದ ಹಾಗೆ, ಎಂಥ ಒಂದು ನೋಟವು ಅವರಿಗೆ ಕಾಣಸಿಗುತ್ತದೆ! ಉಲ್ಲಾಸಭರಿತರಾದ ಅನೇಕ ಜನರು ಬೇತ್ಫಗೆಯಿಂದ ಬರುವ ರಸ್ತೆಯಲ್ಲಿ ಎಣ್ಣೇಮರಗಳ ಗುಡ್ಡದಿಂದ ಇಳಿದುಬರುತ್ತಿದ್ದಾರೆ. (ಲೂಕ 19:37) ಇದೆಲ್ಲದರ ಅರ್ಥವು ಏನಾಗಿದೆ?
ಅಲ್ಲಿ ನೋಡಿ! ನಜರೇತಿನ ಯೇಸು ಕತ್ತೆಮರಿಯ ಮೇಲೆ ಸವಾರಿಮಾಡುತ್ತಾ ಬರುತ್ತಿದ್ದಾನೆ. ಜನರು ಅವನ ಮುಂದೆ ರಸ್ತೆಯಲ್ಲಿ ವಸ್ತ್ರಗಳನ್ನು ಹಾಸುತ್ತಾರೆ. ಇತರರು ಆಗ ತಾನೇ ಕತ್ತರಿಸಿದ ಖರ್ಜೂರದ ಗರಿಗಳನ್ನು ಬೀಸುತ್ತಾ, ಹರ್ಷದಿಂದ ಹೀಗೆ ಕೂಗುತ್ತಾರೆ: “ಜಯ, ಕರ್ತನ [“ಯೆಹೋವನ,” NW] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಆಶೀರ್ವಾದ.”—ಯೋಹಾನ 12:12-15.
ಜನಸಮೂಹವು ಯೆರೂಸಲೇಮನ್ನು ಸಮೀಪಿಸಿದಂತೆ, ಯೇಸು ಆ ನಗರದತ್ತ ನೋಡಿ, ತುಂಬ ಮನಕರಗಿದವನಾಗುತ್ತಾನೆ. ಅವನು ಅಳಲಾರಂಭಿಸುತ್ತಾನೆ ಮತ್ತು ಈ ನಗರವು ನಾಶಗೊಳಿಸಲ್ಪಡುವುದು ಎಂಬುದನ್ನು ಅವನು ಮುಂತಿಳಿಸುತ್ತಿರುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಸ್ವಲ್ಪ ಸಮಯದ ಅನಂತರ ಯೇಸು ದೇವಾಲಯಕ್ಕೆ ಬಂದಾಗ, ಅವನು ಜನಸಮೂಹಗಳಿಗೆ ಬೋಧಿಸುತ್ತಾನೆ ಮತ್ತು ತನ್ನ ಬಳಿಗೆ ಬರುವ ಕುರುಡರನ್ನೂ ಕುಂಟರನ್ನೂ ವಾಸಿಮಾಡುತ್ತಾನೆ.—ಮತ್ತಾಯ 21:14; ಲೂಕ 19:41-44, 47.
ಇದನ್ನು ಮಹಾಯಾಜಕರು ಹಾಗೂ ಶಾಸ್ತ್ರಿಗಳು ಗಮನಿಸದೆ ಇರುವುದಿಲ್ಲ. ಯೇಸು ಮಾಡುವ ಅದ್ಭುತಕರ ವಿಷಯಗಳನ್ನು ಹಾಗೂ ಜನಸಮೂಹದವರ ಸಂಭ್ರಮೋಲ್ಲಾಸವನ್ನು ನೋಡುವುದು ಅವರನ್ನು ಎಷ್ಟು ರೇಗಿಸುತ್ತದೆ! ತಮ್ಮ ರೋಷವನ್ನು ಮುಚ್ಚಿಡಲು ಅಶಕ್ತರಾಗಿ, ಆ ಫರಿಸಾಯರು ಬಲವಂತಪಡಿಸುವುದು: “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು.” ಯೇಸು ಉತ್ತರಿಸುವುದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ.” ಅಲ್ಲಿಂದ ಹೊರಟುಹೋಗುವ ಮುಂಚೆ, ದೇವಾಲಯದಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳನ್ನು ಯೇಸು ಗಮನಿಸುತ್ತಾನೆ.—ಲೂಕ 19:39, 40; ಮತ್ತಾಯ 21:15, 16; ಮಾರ್ಕ 11:11.
ನೈಸಾನ್ 10
ಯೇಸು ಹೊತ್ತಿಗೆ ಮುಂಚೆ ದೇವಾಲಯಕ್ಕೆ ಬರುತ್ತಾನೆ. ತನ್ನ ತಂದೆಯ ಆರಾಧನೆಯು ಗಂಭೀರತರವಾಗಿ ವ್ಯಾಪಾರೀಕರಣ ಮಾಡಲ್ಪಟ್ಟಿರುವುದನ್ನು ನೋಡಿ ಅವನಿಗೆ ನಿನ್ನೆಯ ದಿನ ಕೋಪವನ್ನು ತಡೆದುಕೊಳ್ಳಲಿಕ್ಕಾಗಲಿಲ್ಲ. ಆದುದರಿಂದ, ತುಂಬ ಹುರುಪಿನಿಂದ ಅವನು ದೇವಾಲಯದಲ್ಲಿ ಕೊಂಡುಕೊಳ್ಳುತ್ತಿರುವವರನ್ನೂ ಮಾರುತ್ತಿರುವವರನ್ನೂ ಓಡಿಸಲಾರಂಭಿಸುತ್ತಾನೆ. ಅನಂತರ ಅವನು ಲೋಭಿ ಚಿನಿವಾರರ ಮೇಜುಗಳನ್ನೂ ಪಾರಿವಾಳಮಾರುತ್ತಿರುವವರ ಕಾಲ್ಮಣೆಗಳನ್ನೂ ಕೆಡವಿಹಾಕುತ್ತಾನೆ. ಯೇಸು ಉದ್ಗರಿಸುವುದು: “ನನ್ನ ಆಲಯವು ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದದೆ. ಆದರೆ ನೀವು ಅದನ್ನು ಕಳ್ಳರ ಗವಿ ಮಾಡುತ್ತೀರಿ.”—ಮತ್ತಾಯ 21:12, 13.
ಮಹಾಯಾಜಕರು, ಶಾಸ್ತ್ರಿಗಳು ಮತ್ತು ಮುಖ್ಯಸ್ಥರು ಯೇಸುವಿನ ವ್ಯವಹಾರಗಳನ್ನು ಮತ್ತು ಸಾರ್ವಜನಿಕ ಬೋಧನೆಯನ್ನು ದ್ವೇಷಿಸುತ್ತಾರೆ. ಅವರು ಅವನನ್ನು ಕೊಲ್ಲಲು ಎಷ್ಟೊಂದು ಹಾತೊರೆಯುತ್ತಾರೆ! ಆದರೆ ಅವರು ಹಾಗೆ ಮಾಡುವಂತೆ ಜನಸಮೂಹವು ಬಿಡುವುದಿಲ್ಲ. ಏಕೆಂದರೆ ಜನರು ಯೇಸುವಿನ ಬೋಧನೆಯಿಂದ ಸ್ತಬ್ಧಗೊಂಡು, ‘ಆತನನ್ನು ಅಂಟಿಕೊಂಡು . . . ಕೇಳುತ್ತಿದ್ದರು.’ (ಲೂಕ 19:47, 48) ಸಂಜೆಯಾಗುತ್ತಿದ್ದಂತೆ, ಯೇಸು ಮತ್ತು ಅವನ ಸಂಗಡಿಗರು ರಾತ್ರಿ ಒಳ್ಳೇ ವಿಶ್ರಾಂತಿಯನ್ನು ಪಡೆದುಕೊಳ್ಳಲಿಕ್ಕಾಗಿ ಬೇಥಾನ್ಯಕ್ಕೆ ಆರಾಮವಾಗಿ ನಡೆದುಕೊಂಡು ಹೋಗುತ್ತಾರೆ.
ನೈಸಾನ್ 11
ಮುಂಜಾನೆಯಾಗಿದೆ, ಯೇಸು ಮತ್ತು ಅವನ ಶಿಷ್ಯರು ಯೆರೂಸಲೇಮಿಗೆ ಹೋಗಲಿಕ್ಕಾಗಿ ಈಗಾಗಲೇ ಎಣ್ಣೇಮರಗಳ ಗುಡ್ಡವನ್ನು ದಾಟಿಹೋಗುತ್ತಿದ್ದಾರೆ. ಅವರು ದೇವಾಲಯವನ್ನು ತಲಪಿದಾಗ, ಮಹಾಯಾಜಕರು ಮತ್ತು ಪ್ರಜೆಯ ಹಿರಿಯರು ಯೇಸುವನ್ನು ಮುಖಾಮುಖಿಯಾಗಿ ಭೇಟಿಮಾಡಲು ಧಾವಿಸಿಬರುತ್ತಾರೆ. ದೇವಾಲಯದಲ್ಲಿನ ಚಿನಿವಾರರ ಹಾಗೂ ವ್ಯಾಪಾರಿಗಳ ವಿರುದ್ಧ ಅವನು ತೆಗೆದುಕೊಂಡ ಕ್ರಮವು ಅವರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವನ ಶತ್ರುಗಳು ವಿಷಕಾರುತ್ತಾ ಬಲವಂತಪಡಿಸುವುದು: “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು.” ಅದಕ್ಕೆ ಯೇಸು ಪ್ರತಿಯಾಗಿ ಹೇಳುವುದು, “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನೂ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬದನ್ನು ನಿಮಗೆ ಹೇಳುತ್ತೇನೆ. ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ? ಮನುಷ್ಯರಿಂದಲೋ.” ಎದುರಾಳಿಗಳು ಒಟ್ಟಾಗಿ ಗುಂಪುಗೂಡಿ ತರ್ಕಮಾಡುವುದು: “ಪರಲೋಕದಿಂದ ಬಂತೆಂದು ನಾವು ಹೇಳಿದರೆ ಹಾಗಾದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ನಮಗೆ ಹೇಳಾನು; ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ.” ದಿಕ್ಕೆಟ್ಟವರಾಗಿ, ಅವರು ಮೆಲ್ಲನೆ ಉತ್ತರಿಸುವುದು: “ನಾವರಿಯೆವು.” ಯೇಸು ಶಾಂತಚಿತ್ತನಾಗಿ ಉತ್ತರಿಸುವುದು: “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ.”—ಮತ್ತಾಯ 21:23-27.
ಯೇಸುವನ್ನು ಬಂಧಿಸುವಂತೆ ಮಾಡಸಾಧ್ಯವಿರುವ ಯಾವುದೋ ವಿಷಯವನ್ನು ಹೇಳುವ ಮೂಲಕ ಈಗ ಅವನ ಶತ್ರುಗಳು ಅವನನ್ನು ಬಲೆಯಲ್ಲಿ ಬೀಳಿಸಲು ಪ್ರಯತ್ನಿಸುತ್ತಾರೆ. “ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ?” ಎಂದು ಅವರು ಕೇಳುತ್ತಾರೆ. ಯೇಸು ಮರುನುಡಿಯುವುದು, “ತೆರಿಗೆಗೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ.” “ಈ ತಲೆಯೂ ಈ ಮುದ್ರೆಯೂ ಯಾರದು”? ಎಂದು ಅವನು ಕೇಳಲು, ಅವರು “ಕೈಸರನದು” ಎಂದು ಹೇಳುತ್ತಾರೆ. ಅವರನ್ನು ದಿಗ್ಭ್ರಮೆಗೊಳಿಸುತ್ತಾ ಯೇಸು ಎಲ್ಲರಿಗೂ ಕೇಳಿಸುವಂತೆ ಸ್ಫುಟವಾಗಿ ಹೇಳುವುದು: “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.”—ಮತ್ತಾಯ 22:15-22.
ತಪ್ಪೆಂದು ಪ್ರಮಾಣೀಕರಿಸಲಾಗದ ವಾದದಿಂದ ತನ್ನ ಶತ್ರುಗಳ ಬಾಯಿಮುಚ್ಚಿಸಿ, ಯೇಸು ಈಗ ಜನಸಮೂಹದವರ ಹಾಗೂ ತನ್ನ ಶಿಷ್ಯರ ಮುಂದೆ ತನ್ನ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾನೆ. ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಅವನು ನಿರ್ಭೀತಿಯಿಂದ ಖಂಡಿಸುವುದನ್ನು ಕೇಳಿಸಿಕೊಳ್ಳಿರಿ. “ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ” ಎಂದು ಅವನು ಹೇಳುತ್ತಾನೆ. ಅವರನ್ನು ಕುರುಡು ಮಾರ್ಗದರ್ಶಕರು ಹಾಗೂ ಕಪಟಿಗಳೆಂದು ಗುರುತಿಸುತ್ತಾ, ಅವನು ಅವರ ಮೇಲೆ ಬರಲಿರುವ ಕೇಡುಗಳ ಸರಮಾಲೆಯನ್ನು ಧೈರ್ಯದಿಂದ ಘೋಷಿಸುತ್ತಾನೆ. ಯೇಸು ಹೇಳುವುದು: “ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ?”—ಮತ್ತಾಯ 23:1-33.
ಈ ಕಟು ಆಪಾದನೆಗಳು, ಯೇಸು ಇತರರ ಒಳ್ಳೆಯ ಗುಣಗಳಿಗೆ ಕುರುಡಾಗಿದ್ದಾನೆಂಬುದನ್ನು ಅರ್ಥೈಸುವುದಿಲ್ಲ. ಅನಂತರ, ಅವನು ಜನರು ದೇವಾಲಯದ ಬೊಕ್ಕಸದೊಳಕ್ಕೆ ಹಣಹಾಕುವುದನ್ನು ನೋಡುತ್ತಾನೆ. ಒಬ್ಬ ಬಡ ವಿಧವೆಯು ತನ್ನ ಜೀವನೋಪಾಯವನ್ನೆಲ್ಲ—ತೀರ ಕಡಿಮೆ ಬೆಲೆಯುಳ್ಳ ಎರಡು ಕಾಸುಗಳನ್ನು ಹಾಕುವುದನ್ನು ಗಮನಿಸುವುದು ಎಷ್ಟೊಂದು ಮನಮುಟ್ಟುವಂಥದ್ದಾಗಿದೆ! “ತಮಗೆ ಸಾಕಾಗಿ ಮಿಕ್ಕದ್ದರಲ್ಲಿ” ಧಾರಾಳವಾಗಿ ಕಾಣಿಕೆನೀಡಿದವರಿಗಿಂತಲೂ ಅವಳು ಹೆಚ್ಚಿನದ್ದನ್ನು ಕೊಟ್ಟಿದ್ದಾಳೆಂದು ಯೇಸು ಹಾರ್ದಿಕ ಗಣ್ಯತೆಯಿಂದ ಅದನ್ನು ಎತ್ತಿತೋರಿಸುತ್ತಾನೆ. ಯೇಸು ಕೋಮಲ ಕನಿಕರಭಾವದವನಾಗಿ, ಒಬ್ಬ ವ್ಯಕ್ತಿಗೆ ಏನು ಮಾಡಸಾಧ್ಯವಿದೆಯೋ ಅದನ್ನು ಆಳವಾಗಿ ಮಾನ್ಯಮಾಡುತ್ತಾನೆ.—ಲೂಕ 21:1-4.
ಯೇಸು ಈಗ ಕಡೆಯ ಬಾರಿಗೆ ದೇವಾಲಯವನ್ನು ಬಿಟ್ಟುಹೋಗುತ್ತಿದ್ದಾನೆ. ಅದು ‘ಅಂದವಾದ ಕಲ್ಲುಗಳಿಂದಲೂ ಹರಕೆಯ ಒಡವೆಗಳಿಂದಲೂ ಅಲಂಕೃತ’ಗೊಂಡಿದೆಯೆಂದು ಅದರ ಮಹಾವೈಭವದ ಕುರಿತು ಅವನ ಶಿಷ್ಯರಲ್ಲಿ ಕೆಲವರು ಹೇಳುತ್ತಾರೆ. ಯೇಸು ಅವರಿಗೆ ಆಶ್ಚರ್ಯವನ್ನುಂಟುಮಾಡುತ್ತಾ ಉತ್ತರಿಸುವುದು: “ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿವಸಗಳು ಬರುವವು.” (ಲೂಕ 21:5, 6) ಅಪೊಸ್ತಲರು ಯೇಸುವನ್ನು ಹಿಂಬಾಲಿಸುತ್ತಾ, ಆ ಕಿಕ್ಕಿರಿದು ತುಂಬಿರುವ ನಗರದಿಂದ ಹೊರಹೋಗುತ್ತಿದ್ದಂತೆ ಅವನು ಪ್ರಾಯಶಃ ಏನನ್ನು ಅರ್ಥೈಸಿದ್ದಿರಬಹುದೆಂದು ಅವರು ಸೋಜಿಗಪಡುತ್ತಾರೆ.
ಸ್ವಲ್ಪ ಸಮಯಾನಂತರ ಯೇಸು ಮತ್ತು ಅವನ ಅಪೊಸ್ತಲರು ಕುಳಿತುಕೊಂಡು, ಎಣ್ಣೇಮರಗಳ ಗುಡ್ಡದ ನೀರವತೆಯಲ್ಲಿ ಆನಂದಿಸುತ್ತಾರೆ. ಯೆರೂಸಲೇಮಿನ ಹಾಗೂ ದೇವಾಲಯದ ಆ ಭವ್ಯ ನೋಟವನ್ನು ಅವರು ಗಮನಿಸಿದಂತೆ, ಪೇತ್ರ, ಯಾಕೋಬ, ಯೋಹಾನ ಹಾಗೂ ಆಂದ್ರೆಯರು ಯೇಸುವಿನ ಚಕಿತಗೊಳಿಸುವ ಭವಿಷ್ಯನುಡಿಯ ಸ್ಪಷ್ಟೀಕರಣವನ್ನು ಕೇಳುತ್ತಾರೆ. ಅವರು ಹೇಳುವುದು, “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು.”—ಮತ್ತಾಯ 24:3; ಮಾರ್ಕ 13:3, 4.
ಅದಕ್ಕೆ ಉತ್ತರವಾಗಿ ಮಹಾ ಬೋಧಕನು ನಿಜವಾಗಿಯೂ ಗಮನಾರ್ಹವಾದ ಪ್ರವಾದನೆಯೊಂದನ್ನು ನೀಡುತ್ತಾನೆ. ಅವನು ಘೋರವಾದ ಯುದ್ಧಗಳು, ಭೂಕಂಪಗಳು, ಆಹಾರದ ಅಭಾವಗಳು ಮತ್ತು ಅಂಟುರೋಗಗಳ ಬಗ್ಗೆ ಭವಿಷ್ಯನುಡಿಯುತ್ತಾನೆ. ದೇವರ ರಾಜ್ಯದ ಸುವಾರ್ತೆಯು ಭೂವ್ಯಾಪಕವಾಗಿ ಸಾರಲ್ಪಡುವುದು ಎಂಬುದನ್ನು ಸಹ ಯೇಸು ಮುಂತಿಳಿಸುತ್ತಾನೆ. ಅವನು ಎಚ್ಚರಿಸುವುದು, “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ.”—ಮತ್ತಾಯ 24:7, 14, 21; ಲೂಕ 21:10, 11.
ಯೇಸು, ‘ತನ್ನ ಪ್ರತ್ಯಕ್ಷತೆಯ ಸೂಚನೆ’ಯ ಇತರ ಅಂಶಗಳನ್ನು ಚರ್ಚಿಸಿದಂತೆ ಆ ನಾಲ್ವರು ಅಪೊಸ್ತಲರು ಗಮನವಿಟ್ಟು ಆಲಿಸುತ್ತಾರೆ. “ಎಚ್ಚರವಾಗಿ”ರುವ ಅಗತ್ಯವನ್ನು ಅವನು ಒತ್ತಿಹೇಳುತ್ತಾನೆ. ಏಕೆ? “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ” ಎಂದು ಅವನು ಹೇಳುತ್ತಾನೆ.—ಮತ್ತಾಯ 24:42; ಮಾರ್ಕ 13:33, 35, 37.
ಇದು ಯೇಸು ಮತ್ತು ಅವನ ಅಪೊಸ್ತಲರಿಗೆ ಮರೆಯಲಾರದಂಥ ಒಂದು ದಿನವಾಗಿದೆ. ವಾಸ್ತವದಲ್ಲಿ, ಇದು ಯೇಸುವಿನ ಬಂಧನ, ಪರೀಕ್ಷೆ ಮತ್ತು ಮರಣಕ್ಕೆ ಮುಂಚೆ ಅವನ ಸಾರ್ವಜನಿಕ ಶುಶ್ರೂಷೆಯ ಕಡೇ ದಿನವಾಗಿದೆ. ಕತ್ತಲೆಯಾಗುತ್ತಿರುವುದರಿಂದ, ಅವರು ಬೇಥಾನ್ಯಕ್ಕೆ ಹೋಗಲಿಕ್ಕಾಗಿ ಗುಡ್ಡ ಹತ್ತಿಹೋಗುವ ಮೂಲಕ ಅಡ್ಡದಾರಿಯನ್ನು ಹಿಡಿಯುತ್ತಾರೆ.
ನೈಸಾನ್ 12 ಮತ್ತು 13
ನೈಸಾನ್ 12ರ ದಿನವನ್ನು ಯೇಸು ತನ್ನ ಶಿಷ್ಯರೊಂದಿಗೆ ಏಕಾಂತದಲ್ಲಿ ಕಳೆಯುತ್ತಾನೆ. ಧಾರ್ಮಿಕ ಮುಖಂಡರು ತನ್ನನ್ನು ಸಾಯಿಸಲು ಹವಣಿಸುತ್ತಿದ್ದಾರೆ ಎಂಬುದನ್ನು ಅವನು ಗ್ರಹಿಸುತ್ತಾನೆ ಮತ್ತು ಮುಂದಿನ ಸಂಜೆಯ ತನ್ನ ಪಸ್ಕಹಬ್ಬದ ಆಚರಣೆಯನ್ನು ಅವರು ಅಡ್ಡಿಗೊಳಿಸುವಂತೆ ಅವನು ಬಯಸುವುದಿಲ್ಲ. (ಮಾರ್ಕ 14:1, 2) ಮರುದಿನ, ಅಂದರೆ ನೈಸಾನ್ 13ರಂದು ಜನರು ಪಸ್ಕಹಬ್ಬಕ್ಕೆ ಕಡೇ ಏರ್ಪಾಡುಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಮಧ್ಯಾಹ್ನಕ್ಕೆ ತುಸು ಮೊದಲು, ಯೆರೂಸಲೇಮಿನಲ್ಲಿರುವ ಮೇಲಂತಸ್ತಿನ ಕೊಠಡಿಯಲ್ಲಿ ಪಸ್ಕಹಬ್ಬದ ಸಿದ್ಧತೆಯನ್ನು ಮಾಡುವಂತೆ ಯೇಸು, ಪೇತ್ರಯೋಹಾನರನ್ನು ಕಳುಹಿಸುತ್ತಾನೆ. (ಮಾರ್ಕ 14:12-16; ಲೂಕ 22:8) ಸೂರ್ಯಾಸ್ತಮಾನಕ್ಕೆ ಸ್ವಲ್ಪ ಮುಂಚೆ, ಯೇಸು ಮತ್ತು ಇತರ ಹತ್ತು ಮಂದಿ ಅಪೊಸ್ತಲರು ತಮ್ಮ ಕಡೇ ಪಸ್ಕಹಬ್ಬದ ಆಚರಣೆಗೆ ಒಟ್ಟುಗೂಡುತ್ತಾರೆ.
ನೈಸಾನ್ 14, ಸೂರ್ಯಾಸ್ತಮಾನದ ಅನಂತರ
ಎಣ್ಣೇಮರಗಳ ಗುಡ್ಡದ ಮೇಲೆ ಹುಣ್ಣಿಮೆಯ ಚಂದ್ರನು ಉದಯಿಸಿದಂತೆ, ಯೆರೂಸಲೇಮು ಮುಸ್ಸಂಜೆಯ ನಸು ಬೆಳಕಿನಲ್ಲಿ ಮುಳುಗಿಹೋಗಿದೆ. ಸಜ್ಜುಗೊಳಿಸಲ್ಪಟ್ಟಿರುವ ಒಂದು ದೊಡ್ಡ ಕೊಠಡಿಯಲ್ಲಿ ಯೇಸು ಮತ್ತು 12 ಮಂದಿ ಅಪೊಸ್ತಲರು ಅಣಿಗೊಳಿಸಲ್ಪಟ್ಟ ಮೇಜಿನ ಮೇಲೆ ಒರಗಿಕೊಂಡಿದ್ದಾರೆ. “ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ” ಎಂದು ಅವನು ಹೇಳುತ್ತಾನೆ. (ಲೂಕ 22:14, 15) ಸ್ವಲ್ಪ ಸಮಯಾನಂತರ, ಯೇಸು ಎದ್ದುನಿಂತು, ತನ್ನ ಮೇಲುಡುಪನ್ನು ಒಂದು ಪಕ್ಕಕ್ಕೆ ತೆಗೆದಿಡುವುದನ್ನು ನೋಡಿ ಅಪೊಸ್ತಲರು ಆಶ್ಚರ್ಯಪಡುತ್ತಾರೆ. ಕೈಪಾವುಡವನ್ನು, ನೀರಿನ ಬೋಗುಣಿಯನ್ನು ತೆಗೆದುಕೊಂಡು ಅವನು ಅವರ ಪಾದಗಳನ್ನು ತೊಳೆಯಲು ಪ್ರಾರಂಭಿಸುತ್ತಾನೆ. ನಮ್ರಭಾವದ ಸೇವೆಯ ಕುರಿತ ಎಂಥ ಒಂದು ಅವಿಸ್ಮರಣೀಯ ಪಾಠ!—ಯೋಹಾನ 13:2-15.
ಆದರೂ, ಇವರಲ್ಲಿ ಒಬ್ಬನು—ಇಸ್ಕರಿಯೋತ ಯೂದನು—ತನ್ನನ್ನು ಧಾರ್ಮಿಕ ಮುಖಂಡರಿಗೆ ಮೋಸದಿಂದ ಒಪ್ಪಿಸಲು ಈಗಾಗಲೇ ಏರ್ಪಾಡುಮಾಡಿದ್ದಾನೆ ಎಂಬುದು ಯೇಸುವಿಗೆ ಗೊತ್ತಿದೆ. ಗ್ರಾಹ್ಯವಾಗಿಯೇ, ಅವನು ತುಂಬ ವ್ಯಥೆಪಡುತ್ತಾನೆ. “ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವ”ನು ಎಂದು ಅವನು ಪ್ರಕಟಪಡಿಸುತ್ತಾನೆ. ಈ ವಿಷಯದಿಂದ ಅಪೊಸ್ತಲರು ತುಂಬ ದುಃಖಪಡುತ್ತಾರೆ. (ಮತ್ತಾಯ 26:21, 22) ಪಸ್ಕಹಬ್ಬವನ್ನು ಆಚರಿಸಿದ ಅನಂತರ, ಯೇಸು ಯೂದನಿಗೆ ಹೀಗೆ ಹೇಳುತ್ತಾನೆ: “ನೀನು ಮಾಡುವದನ್ನು ಬೇಗನೆ ಮಾಡಿಬಿಡು.”—ಯೋಹಾನ 13:27.
ಯೂದನು ಹೊರಗೆ ಹೋದ ಅನಂತರ, ಯೇಸು ತನ್ನ ಸನ್ನಿಹಿತ ಮರಣವನ್ನು ಸ್ಮಾರಕವನ್ನಾಗಿ ಮಾಡುವುದಕ್ಕಾಗಿ ಒಂದು ಊಟವನ್ನು ಪ್ರಾರಂಭಿಸುತ್ತಾನೆ. ಅವನು ಹುಳಿಯಿಲ್ಲದ ರೊಟ್ಟಿಯನ್ನು ತೆಗೆದುಕೊಂಡು, ಪ್ರಾರ್ಥನೆಯಲ್ಲಿ ಉಪಕಾರವನ್ನು ಹೇಳಿ, ಅದನ್ನು ತುಂಡುಮಾಡಿ, ಆ 11 ಮಂದಿಗೆ ಪಾಲುತೆಗೆದುಕೊಳ್ಳುವಂತೆ ಹೇಳುತ್ತಾನೆ. “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಅವನು ಹೇಳುತ್ತಾನೆ. ಅನಂತರ ಅವನು ಕೆಂಪು ದ್ರಾಕ್ಷಾರಸದ ಒಂದು ಬಟ್ಟಲನ್ನು ತೆಗೆದುಕೊಳ್ಳುತ್ತಾನೆ. ಪ್ರಾರ್ಥನೆಯನ್ನು ಮಾಡಿದ ಬಳಿಕ, ಆ ಬಟ್ಟಲಿನಿಂದ ಅದನ್ನು ಕುಡಿಯುವಂತೆ ಅವರಿಗೆ ಹೇಳುತ್ತಾ, ಅವನು ಅದನ್ನು ದಾಟಿಸುತ್ತಾನೆ. ಯೇಸು ಕೂಡಿಸುವುದು: “ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.”—ಲೂಕ 22:19, 20; ಮತ್ತಾಯ 26:26-28.
ಆ ಬಹು ಮುಖ್ಯವಾದ ಸಂಜೆಯಂದು, ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ ಅನೇಕ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತಾನೆ ಮತ್ತು ಅವುಗಳಲ್ಲಿ ಸಹೋದರ ಪ್ರೀತಿಯ ಪ್ರಾಮುಖ್ಯದ ಕುರಿತಾದ ಪಾಠವನ್ನು ಕಲಿಸುತ್ತಾನೆ. (ಯೋಹಾನ 13:34, 35) ಅವರು ಒಬ್ಬ ‘ಸಹಾಯಕ,’ ಪವಿತ್ರಾತ್ಮವನ್ನು ಪಡೆದುಕೊಳ್ಳುವರೆಂಬ ಆಶ್ವಾಸನೆಯನ್ನು ಅವನು ನೀಡುತ್ತಾನೆ. ಅದು ಅವನು ಅವರಿಗೆ ಹೇಳಿದ ವಿಷಯಗಳನ್ನೆಲ್ಲ ಅವರ ಮನಸ್ಸಿಗೆ ಜ್ಞಾಪಕಕ್ಕೆ ತರುವುದು. (ಯೋಹಾನ 14:26) ಅನಂತರ ಆ ಸಂಜೆಯಂದು, ಅವರು ಯೇಸು ತಮ್ಮ ಪರವಾಗಿ ಮಾಡಿದ ತೀವ್ರತರದ ಪ್ರಾರ್ಥನೆಯನ್ನು ಕೇಳಿಸಿಕೊಂಡು ತುಂಬ ಉತ್ತೇಜನಗೊಂಡಿದ್ದಿರಬೇಕು. (ಯೋಹಾನ, 17ನೇ ಅಧ್ಯಾಯ) ಸ್ತುತಿಗೀತೆಗಳನ್ನು ಹಾಡಿದ ಅನಂತರ, ಅವರು ಮೇಲಂತಸ್ತಿನ ಕೊಠಡಿಯನ್ನು ಬಿಟ್ಟು, ತಣ್ಣನೆಯ ಮಧ್ಯರಾತ್ರಿಯ ನಸುಗಾಳಿಯಲ್ಲಿ ಯೇಸುವನ್ನು ಹಿಂಬಾಲಿಸುತ್ತಾರೆ.
ಕೆದ್ರೋನ್ ಕಣಿವೆಯನ್ನು ದಾಟಿ, ಯೇಸು ಮತ್ತು ಅವನ ಅಪೊಸ್ತಲರು ತಮ್ಮ ಅತಿ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದಾದ ಗೆತ್ಸೇಮನೆ ತೋಟಕ್ಕೆ ಹೋಗುತ್ತಾರೆ. (ಯೋಹಾನ 18:1, 2) ಅವನ ಅಪೊಸ್ತಲರು ಕಾದಂತೆ, ಯೇಸು ಪ್ರಾರ್ಥನೆಮಾಡಲು ಸ್ವಲ್ಪ ದೂರ ಹೋಗುತ್ತಾನೆ. ಅವನು ದೇವರ ಸಹಾಯಕ್ಕಾಗಿ ತೀವ್ರವಾಗಿ ಬೇಡಿದಂತೆ ಅವನ ಭಾವನಾತ್ಮಕ ಒತ್ತಡವು, ಮಾತುಗಳಲ್ಲಿ ವರ್ಣಿಸಲಾಗದಷ್ಟು ಹೆಚ್ಚಾಗಿರುತ್ತದೆ. (ಲೂಕ 22:44) ಅವನಿಗೆ ತಾನು ವಿಫಲಗೊಳ್ಳುವೆನಾದರೆ, ತನ್ನ ಪ್ರಿಯ ಸ್ವರ್ಗೀಯ ತಂದೆಯ ಮೇಲೆ ಹೊರಿಸಲ್ಪಡುವ ನಿಂದೆಯ ವಿಚಾರವೇ ತೀರ ವೇದನೆಯನ್ನು ತರುತ್ತದೆ.
ಯೇಸು ಆಗಷ್ಟೆ ಪ್ರಾರ್ಥನೆಮಾಡಿ ಮುಗಿಸಿದ್ದಾನೆ, ಆಗ ಕತ್ತಿ, ದೊಣ್ಣೆ ಮತ್ತು ಪಂಜುಗಳುಳ್ಳ ಒಂದು ಜನಸಮೂಹದೊಂದಿಗೆ ಇಸ್ಕರಿಯೋತ ಯೂದನು ಬರುತ್ತಾನೆ. ಯೂದನು ಮೃದುವಾಗಿ ಯೇಸುವಿಗೆ ಮುತ್ತುಕೊಟ್ಟು, “ಗುರುವೇ, ನಮಸ್ಕಾರ” ಎಂದು ಹೇಳುತ್ತಾನೆ. ಇದು ಆ ಮನುಷ್ಯರು ಯೇಸುವನ್ನು ಬಂಧಿಸಲಿಕ್ಕಾಗಿರುವ ಸನ್ನೆಯಾಗಿದೆ. ಹಠಾತ್ತಾಗಿ, ಪೇತ್ರನು ತನ್ನ ಕತ್ತಿಯನ್ನು ಹೊರತೆಗೆದು, ಮಹಾಯಾಜಕನ ದಾಸನ ಕಿವಿಯೊಂದನ್ನು ಕತ್ತರಿಸಿಬಿಡುತ್ತಾನೆ. ಆ ಮನುಷ್ಯನ ಕಿವಿಯನ್ನು ಯೇಸು ವಾಸಿಮಾಡಿದಂತೆ, ಅವನು “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂದು ಹೇಳುತ್ತಾನೆ.—ಮತ್ತಾಯ 26:47-52.
ಎಲ್ಲವೂ ಕ್ಷಣಮಾತ್ರದಲ್ಲಿ ನಡೆಯುತ್ತದೆ! ಯೇಸು ಬಂಧಿಸಲ್ಪಟ್ಟು, ಅವನಿಗೆ ಬೇಡಿಹಾಕಲಾಗುತ್ತದೆ. ಭಯ ಮತ್ತು ಗಲಿಬಿಲಿಯಿಂದ, ಅಪೊಸ್ತಲರು ತಮ್ಮ ಗುರುವನ್ನು ಬಿಟ್ಟು, ಪಲಾಯನಗೈಯುತ್ತಾರೆ. ಯೇಸುವನ್ನು ಹಿಂದೆ ಮಹಾಯಾಜಕನಾಗಿದ್ದ ಅನ್ನನ ಬಳಿಗೆ ಕರೆದುಕೊಂಡುಹೋಗಲಾಗುತ್ತದೆ. ಅನಂತರ ಅವನನ್ನು ಪ್ರಸ್ತುತ ಮಹಾಯಾಜಕನಾಗಿರುವ ಕಾಯಫನ ಸಮಕ್ಷಮಕ್ಕೆ ವಿಚಾರಣೆಗಾಗಿ ಕರೆದುಕೊಂಡುಹೋಗಲಾಗುತ್ತದೆ. ಮುಂಜಾನೆಯ ತಾಸುಗಳಲ್ಲಿ, ಸನ್ಹೇದ್ರಿನ್ ಯೇಸುವಿನ ಮೇಲೆ ದೇವದೂಷಣೆಯ ಸುಳ್ಳಾರೋಪವನ್ನು ಹೊರಿಸುತ್ತದೆ. ಅನಂತರ, ಕಾಯಫನು ಅವನನ್ನು ರೋಮನ್ ದೇಶಾಧಿಪತಿಯಾದ ಪೊಂತ್ಯ ಪಿಲಾತನ ಬಳಿಗೆ ಕಳುಹಿಸುತ್ತಾನೆ. ಅವನು ಯೇಸುವನ್ನು ಗಲಿಲಾಯದ ಅಧಿಪತಿಯಾದ ಹೆರೋದ ಅಂತಿಪ್ಪನ ಬಳಿಗೆ ಕಳುಹಿಸುತ್ತಾನೆ. ಅಲ್ಲಿ ಹೆರೋದ ಮತ್ತು ಅವನ ಕಾವಲುಗಾರರು ಯೇಸುವಿಗೆ ಅಪಹಾಸ್ಯಮಾಡುತ್ತಾರೆ. ಅನಂತರ ಅವನನ್ನು ಪುನಃ ಪಿಲಾತನ ಬಳಿಗೆ ಕಳುಹಿಸಲಾಗುತ್ತದೆ. ಯೇಸುವಿನ ನಿರಪರಾಧಿತ್ವವು ಪಿಲಾತನಿಂದ ದೃಢಪಡಿಸಲ್ಪಡುತ್ತದೆ. ಆದರೆ ಯೇಸುವಿಗೆ ಮರಣದಂಡನೆ ವಿಧಿಸುವಂತೆ ಯೆಹೂದಿ ಧಾರ್ಮಿಕ ಮುಖಂಡರು ಅವನನ್ನು ಒತ್ತಾಯಪಡಿಸುತ್ತಾರೆ. ಗಣನೀಯವಾದ ಮೌಖಿಕ ಹಾಗೂ ಶಾರೀರಿಕ ದುರುಪಯೋಗದ ಅನಂತರ, ಯೇಸುವನ್ನು ಗೊಲ್ಗೊಥಾಕ್ಕೆ ಕರೆದುಕೊಂಡುಹೋಗಿ, ಅಲ್ಲಿ ಅವನನ್ನು ನಿರ್ದಾಕ್ಷಿಣ್ಯವಾಗಿ ವಧಸ್ತಂಭಕ್ಕೆ ಜಡಿಯಲಾಗುತ್ತದೆ ಮತ್ತು ಅವನು ವೇದನಾಮಯ ಮರಣವನ್ನನುಭವಿಸುತ್ತಾನೆ.—ಮಾರ್ಕ 14:50–15:39; ಲೂಕ 23:4-25.
ಯೇಸುವಿನ ಮೃತ್ಯು ಅವನ ಜೀವಿತವನ್ನು ಖಾಯಂ ಆಗಿ ಅಂತ್ಯಗೊಳಿಸಿದ್ದರೆ, ಇದು ಇತಿಹಾಸದಲ್ಲೇ ಅತ್ಯಂತ ಮಹಾ ದುರ್ಘಟನೆಯಾಗಿರುತ್ತಿತ್ತು. ಸಂತೋಷಕರವಾಗಿ, ಅದು ಹಾಗಾಗಲಿಲ್ಲ. ಸಾ.ಶ. 33, ನೈಸಾನ್ 16ರಂದು ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿರುವುದನ್ನು ಕಂಡು, ಅವನ ಶಿಷ್ಯರು ವಿಸ್ಮಯಗೊಂಡರು. ಸಕಾಲದಲ್ಲಿ, 500ಕ್ಕಿಂತಲೂ ಹೆಚ್ಚು ಜನರು ಯೇಸು ಪುನಃ ಜೀವಿತನಾಗಿದ್ದನೆಂಬುದನ್ನು ದೃಢಪಡಿಸಲು ಶಕ್ತರಾದರು. ಮತ್ತು ಅವನ ಪುನರುತ್ಥಾನದ 40 ದಿವಸಗಳ ಅನಂತರ, ನಂಬಿಗಸ್ತ ಹಿಂಬಾಲಕರ ಒಂದು ಗುಂಪು ಅವನ ಸ್ವರ್ಗಾರೋಹಣವಾಗುವುದನ್ನು ನೋಡಿತು.—ಅ. ಕೃತ್ಯಗಳು 1:9-11; 1 ಕೊರಿಂಥ 15:3-8.
ಯೇಸುವಿನ ಜೀವಿತ ಮತ್ತು ನೀವು
ಇದು ನಿಮ್ಮ ಮೇಲೆ—ವಾಸ್ತವದಲ್ಲಿ ನಮ್ಮೆಲ್ಲರ ಮೇಲೆ—ಹೇಗೆ ಪ್ರಭಾವ ಬೀರುತ್ತದೆ? ಒಳ್ಳೆಯದು, ಯೇಸುವಿನ ಶುಶ್ರೂಷೆ, ಮೃತ್ಯು ಮತ್ತು ಪುನರುತ್ಥಾನವು ಯೆಹೋವ ದೇವರನ್ನು ಉತ್ಪ್ರೇಕ್ಷಿಸುತ್ತದೆ ಮತ್ತು ಆತನ ಮಹಾ ಉದ್ದೇಶವನ್ನು ಕಾರ್ಯಗತಮಾಡುವುದರಲ್ಲಿ ನಿಷ್ಕರ್ಷಕವಾಗಿವೆ. (ಕೊಲೊಸ್ಸೆ 1:18-20) ಅವು ನಮಗೆ ತುಂಬ ಪ್ರಾಮುಖ್ಯವಾಗಿವೆ, ಏಕೆಂದರೆ ನಮ್ಮ ಪಾಪಗಳು ಯೇಸುವಿನ ಯಜ್ಞದ ಆಧಾರದ ಮೇಲೆ ಕ್ಷಮಿಸಲ್ಪಡುವವು ಮತ್ತು ಹೀಗೆ ನಾವು ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳಬಲ್ಲೆವು.—ಯೋಹಾನ 14:6; 1 ಯೋಹಾನ 2:1, 2.
ಮೃತರಾಗಿರುವ ಜನರಿಗೂ ಇದು ಫಲಿತಾಂಶಗಳನ್ನು ತರುತ್ತದೆ. ಯೇಸುವಿನ ಪುನರುತ್ಥಾನವು ದೇವರ ವಾಗ್ದತ್ತ ಪ್ರಮೋದವನ ಭೂಮಿಯಲ್ಲಿ ಅವರನ್ನು ಪುನಃ ಜೀವಿತಕ್ಕೆ ತರುವುದಕ್ಕೆ ಮಾರ್ಗವನ್ನು ತೆರೆಯುತ್ತದೆ. (ಲೂಕ 23:39-43; 1 ಕೊರಿಂಥ 15:20-22) ಇಂಥ ವಿಚಾರಗಳ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ, ನಿಮ್ಮ ಸ್ಥಳದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವೊಂದರಲ್ಲಿ, 1998, ಏಪ್ರಿಲ್ 11ರಂದು ಜರುಗಲಿರುವ ಕ್ರಿಸ್ತನ ಮರಣದ ಜ್ಞಾಪಕವನ್ನು ಹಾಜರಾಗುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 6 ರಲ್ಲಿರುವ ಚೌಕ]
“ಕಳ್ಳರ ಗವಿ”
ಲೋಭಿ ವರ್ತಕರು ದೇವರ ಆಲಯವನ್ನು “ಕಳ್ಳರ ಗವಿ”ಯಾಗಿ ಪರಿವರ್ತಿಸಿದ್ದರೆಂದು ಹೇಳುವುದಕ್ಕೆ ಯೇಸುವಿಗೆ ಸಾಕಾದಷ್ಟು ಕಾರಣವಿತ್ತು. (ಮತ್ತಾಯ 21:12, 13) ದೇವಾಲಯದ ತೆರಿಗೆಯನ್ನು ಕೊಡಲು, ಬೇರೆ ದೇಶಗಳಿಂದ ಬಂದ ಯೆಹೂದಿಗಳು ಹಾಗೂ ಯೆಹೂದ್ಯ ಮತಾವಲಂಬಿಗಳು ಸ್ವೀಕರಣೀಯ ಹಣಕ್ಕಾಗಿ ತಮ್ಮ ವಿದೇಶೀ ಹಣವನ್ನು ವಿನಿಮಯಮಾಡಿಕೊಳ್ಳಬೇಕಾಗುತ್ತಿತ್ತು. ಆ್ಯಲ್ಫ್ರೆಡ್ ಎಡರ್ಶೈಮ್, ಮೆಸ್ಸೀಯನಾದ ಯೇಸುವಿನ ಜೀವನ ಮತ್ತು ಸಮಯಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ವಿವರಿಸುವುದೇನೆಂದರೆ, ಚಿನಿವಾರರು ಪಸ್ಕಹಬ್ಬಕ್ಕೆ ಒಂದು ತಿಂಗಳು ಮುಂಚೆ, ಆಡಾರ್ 15ರಂದು ಪ್ರಾಂತ್ಯಗಳಲ್ಲಿ ತಮ್ಮ ವ್ಯಾಪಾರಗಳನ್ನು ಪ್ರಾರಂಭಿಸುತ್ತಿದ್ದರು. ಆಡಾರ್ 25ರಿಂದ ಪ್ರಾರಂಭಿಸಿ, ಹೆಚ್ಚು ಸಂಖ್ಯೆಯಲ್ಲಿ ಒಳಬರುತ್ತಿದ್ದ ಯೆಹೂದಿಗಳು ಹಾಗೂ ಯೆಹೂದ್ಯ ಮತಾವಲಂಬಿಗಳಿಂದ ಲಾಭವನ್ನು ಪಡೆದುಕೊಳ್ಳಲಿಕ್ಕಾಗಿ ಯೆರೂಸಲೇಮಿನಲ್ಲಿರುವ ದೇವಾಲಯದ ಕ್ಷೇತ್ರಕ್ಕೆ ಅವರು ಸ್ಥಳಾಂತರಿಸುತ್ತಿದ್ದರು. ದಲ್ಲಾಳಿಗಳು ವಿನಿಮಯಮಾಡಿಕೊಳ್ಳಲ್ಪಟ್ಟ ಪ್ರತಿಯೊಂದು ನಾಣ್ಯಕ್ಕೂ ಶುಲ್ಕವನ್ನು ತೆಗೆದುಕೊಳ್ಳುವ ಮೂಲಕ ಒಂದು ಯಶಸ್ವೀ ವ್ಯಾಪಾರವನ್ನು ಮಾಡುತ್ತಿದ್ದರು. ಯೇಸು ಅವರನ್ನು ಕಳ್ಳರು ಎಂದು ಹೇಳುತ್ತಿದ್ದದ್ದು ಸೂಚಿಸುತ್ತದೇನೆಂದರೆ, ಅವರ ಶುಲ್ಕಗಳು ಎಷ್ಟೊಂದು ಹೆಚ್ಚಾಗಿದ್ದವೆಂದರೆ, ಅವರು ಕಾರ್ಯತಃ ಬಡವರಿಂದ ಹಣವನ್ನು ಸುಲಿಯುತ್ತಿದ್ದರು.
ಕೆಲವರಿಗೆ ತಮ್ಮ ಸ್ವಂತ ಯಜ್ಞಬಲಿ ಪ್ರಾಣಿಗಳನ್ನು ತರಲಿಕ್ಕೆ ಆಗುತ್ತಿರಲಿಲ್ಲ. ತೆಗೆದುಕೊಂಡು ಬರುತ್ತಿದ್ದವರು ದೇವಾಲಯದಲ್ಲಿದ್ದ ಪರೀಕ್ಷಾಧಿಕಾರಿಯಿಂದ ಪ್ರಾಣಿಯನ್ನು—ಶುಲ್ಕ ಕೊಟ್ಟು—ಪರೀಕ್ಷೆ ಮಾಡಿಸಬೇಕಾಗಿತ್ತು. ಅಷ್ಟು ದೂರದಿಂದ ಪ್ರಾಣಿಯನ್ನು ತೆಗೆದುಕೊಂಡು ಬಂದ ಅನಂತರ ಅದು ತಿರಸ್ಕರಿಸಲ್ಪಡುವ ಗಂಡಾಂತರವನ್ನು ಬಯಸದೆ, ಅನೇಕರು ದೇವಾಲಯದಲ್ಲಿದ್ದ ಭ್ರಷ್ಟ ದಲ್ಲಾಳಿಗಳಿಂದ ಯಾಜಕೀಯ ಮಟ್ಟಗಳಿಗನುಸಾರವಾಗಿ “ಮಂಜೂರು ಮಾಡಲ್ಪಟ್ಟ” ಪ್ರಾಣಿಯನ್ನು ತಂದರು. “ಅನೇಕ ಬಡ ರೈತಾಪಿಗಳನ್ನು ಅಲ್ಲಿ ಚೆನ್ನಾಗಿ ಲೂಟಿಮಾಡಲಾಗುತ್ತಿತ್ತು” ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ.
ಒಂದು ಕಾಲದಲ್ಲಿ ಮಹಾ ಯಾಜಕನಾಗಿದ್ದ ಅನ್ನನಿಗೆ ಮತ್ತು ಅವನ ಕುಟುಂಬಕ್ಕೆ ದೇವಾಲಯದ ವರ್ತಕರ ಕಡೆಗೆ ಸ್ವಾರ್ಥಪರ ಆಸಕ್ತಿಯಿತ್ತು ಎಂಬ ಪುರಾವೆಯಿದೆ. ರಬ್ಬಿಸಂಬಂಧಿತ ಬರವಣಿಗೆಗಳು, “ಅನ್ನನ ಪುತ್ರರ [ದೇವಾಲಯ] ಮಾರುಕಟ್ಟೆಗಳ” ಬಗ್ಗೆ ಹೇಳುತ್ತವೆ. ಚಿನಿವಾರರಿಂದ ಮತ್ತು ದೇವಾಲಯದ ಆವರಣಗಳೊಳಗಿಂದ ಪ್ರಾಣಿಗಳನ್ನು ಮಾರುವುದರಿಂದ ಬರುವ ಕಂದಾಯವು, ಅವರ ಆದಾಯದ ಮುಖ್ಯ ಮೂಲಗಳಾಗಿದ್ದವು. ವರ್ತಕರನ್ನು ಓಡಿಸಿಬಿಡುವುದರಲ್ಲಿನ ಯೇಸುವಿನ ಕೃತ್ಯವು “ಯಾಜಕರ ಪ್ರತಿಷ್ಠೆಯನ್ನು ಮಾತ್ರವಲ್ಲ ಅವರ ಜೇಬುಗಳನ್ನು ಬಾಧಿಸಿದವು” ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ. ಕಾರಣವು ಏನೇ ಆಗಿರಲಿ, ಅವನ ಶತ್ರುಗಳು ಅವನನ್ನು ಕೊಲ್ಲಲು ಬಯಸಿದರೆಂಬುದು ನಿಶ್ಚಯ!—ಲೂಕ 19:45-48.
[ಪುಟ 4 ರಲ್ಲಿರುವ ಚಿತ್ರ]
ಯೇಸುವಿನ ಮಾನವ ಜೀವಿತದ ಕಡೇ ದಿವಸಗಳು
ಸಾ.ಶ.33ರ ನೈಸಾನ್ ಘಟನೆಗಳು ಅತ್ಯಂತ ಮಹಾನ್ ಪುರುಷ
7 ಶುಕ್ರವಾರ ಯೇಸು ಮತ್ತು ಅವನ ಶಿಷ್ಯರು 101,ಪ್ಯಾರ. 1
ಯೆರಿಕೊವಿನಿಂದ ಯೆರೂಸಲೇಮಿಗೆ ಪ್ರಯಾಣಿಸುತ್ತಾರೆ (ಇಬ್ರಿಯ ದಿನಗಳು ಒಂದು
ಸಂಜೆಯಿಂದ ಮತ್ತೊಂದಕ್ಕೆ ಹರಡಿದರೂ, ನೈಸಾನ್ 7 1998, ಏಪ್ರಿಲ್ 5eರ ಆದಿತ್ಯವಾರಕ್ಕೆ ಸಮಾನವಾಗಿದೆ)
8 ಶುಕ್ರವಾರ ಯೇಸು ಮತ್ತು ಅವನ ಶಿಷ್ಯರು 101,ಪ್ಯಾರಗಳು2-4
ಸಂಜೆ ಬೇಥಾನ್ಯಕ್ಕೆ ಬಂದುಸೇರುತ್ತಾರೆ; ಸಬ್ಬತ್ ಆರಂಭಗೊಳ್ಳುತ್ತದೆ
ಶನಿವಾರ ಸಬ್ಬತ್ (1998, ಏಪ್ರಿಲ್ 6ರ 101, ಪ್ಯಾರ. 4
ಸೋಮವಾರ) 9 ಶನಿವಾರ ಕುಷ್ಠರೋಗಿಯಾದ ಸಿಮೋನನೊಟ್ಟಿಗೆ101, ಪ್ಯಾರಗಳು 5-9 ಸಂಜೆ ಊಟ; ಮರಿಯಳು ಸುಗಂಧ ತೈಲದಿಂದ ಯೇಸುವನ್ನು ಅಭಿಷೇಕಿಸುತ್ತಾಳೆ; ಅನೇಕರು ಯೇಸುವನ್ನು ನೋಡಲು ಮತ್ತು ಅವನ ಉಪದೇಶವನ್ನು ಆಲಿಸಲು ಯೆರೂಸಲೇಮಿನಿಂದ ಬರುತ್ತಾರೆ
ಆದಿತ್ಯವಾರ ಯೆರೂಸಲೇಮಿನೊಳಗೆ ವಿಜಯೋತ್ಸಾಹದ 102
ಪ್ರವೇಶ; ದೇವಾಲಯದಲ್ಲಿ ಬೋಧಿಸುತ್ತಾನೆ
10 ಸೋಮವಾರ ಯೆರೂಸಲೇಮಿಗೆ ಹೊತ್ತಿಗೆ ಮುಂಚೆ 103, 104
ಪ್ರಯಾಣಿಸುತ್ತಾನೆ; ದೇವಾಲಯವನ್ನು ಶುದ್ಧೀಕರಿಸುತ್ತಾನೆ; ಯೆಹೋವನು ಸ್ವರ್ಗದಿಂದ ಮಾತಾಡುತ್ತಾನೆ
11 ಮಂಗಳವಾರ ಯೆರೂಸಲೇಮಿನ 105ರಿಂದ 112ರ ವರೆಗೆ, ದೇವಾಲಯದಲ್ಲಿ ದೃಷ್ಟಾಂತಗಳನ್ನು 100,ಪ್ಯಾರ.1 ಉಪಯೋಗಿಸುತ್ತಾ ಕಲಿಸುತ್ತಾನೆ; ಫರಿಸಾಯರನ್ನು ಖಂಡಿಸುತ್ತಾನೆ;
ವಿಧವೆಯ ಕಾಣಿಕೆಯನ್ನು ಗಮನಿಸುತ್ತಾನೆ; ತನ್ನ ಭಾವಿ ಉಪಸ್ಥಿತಿಯ ಸೂಚನೆಯನ್ನು ಕೊಡುತ್ತಾನೆ
12 ಬುಧವಾರ ಬೇಥಾನ್ಯದಲ್ಲಿ ಶಿಷ್ಯರೊಂದಿಗೆ 112,ಪ್ಯಾರಗಳು 2-4 ಏಕಾಂತದಲ್ಲಿ ಕಳೆಯುವ ದಿನ; ಯೂದನು ದ್ರೋಹಬಗೆಯಲು ಏರ್ಪಡಿಸುತ್ತಾನೆ
13 ಗುರುವಾರ ಯೆರೂಸಲೇಮಿನಲ್ಲಿ 112,ಪ್ಯಾರ.5ರಿಂದ ಪಸ್ಕಹಬ್ಬಕ್ಕಾಗಿ ಪೇತ್ರಯೋಹಾನರು 113,ಪ್ಯಾರ.1ರವರೆಗೆ ತಯಾರಿಸುತ್ತಾರೆ; ಯೇಸು ಮತ್ತು ಇತರ ಹತ್ತು ಮಂದಿ
ಅಪೊಸ್ತಲರು ಸಂಜೆ ಆಗಮಿಸುತ್ತಾರೆ (1998, ಏಪ್ರಿಲ್ 11ರ ಶನಿವಾರ)
14 ಗುರುವಾರ ಪಸ್ಕಹಬ್ಬದ ಆಚರಣೆ; 113,ಪ್ಯಾರ.2ರಿಂದ ಸಂಜೆ ಯೇಸು ಅಪೊಸ್ತಲರ ಪಾದಗಳನ್ನು 117ರ ವರೆಗೆ ತೊಳೆಯುತ್ತಾನೆ; ಯೂದನು ಯೇಸುವಿಗೆ ದ್ರೋಹಬಗೆಯಲು ಹೋಗುತ್ತಾನೆ;
ಕ್ರಿಸ್ತನು ತನ್ನ ಮರಣದ ಜ್ಞಾಪಕವನ್ನು ಆರಂಭಿಸುತ್ತಾನೆ(ಸೂರ್ಯಾಸ್ತಮಾನದ ಅನಂತರ, 1998, ಏಪ್ರಿಲ್ 11ರ ಶನಿವಾರ) ಮಧ್ಯರಾತ್ರಿಯ ಗೆತ್ಸೇಮನೆ ತೋಟದಲ್ಲಿ 118ರಿಂದ 120ರ ವರೆಗೆ ದ್ರೋಹಬಗೆಯುವಿಕೆ ಮತ್ತು ಬಂಧನ; ಅಪೊಸ್ತಲರು ಪಲಾಯನಗೈಯುತ್ತಾರೆ;
ಮಹಾಯಾಜಕರ ಅನಂತರ ಮತ್ತು ಸನ್ಹೇದ್ರಿನ್ ಮುಂದೆ ವಿಚಾರಣೆ; ಪೇತ್ರನು ಯೇಸುವನ್ನು ಅಲ್ಲಗಳೆಯುತ್ತಾನೆ
ಶುಕ್ರವಾರ ಪುನಃ ಸನ್ಹೇದ್ರಿನ್ ಮುಂದೆ; ಪಿಲಾತ, 121ರಿಂದ127 ಹೆರೋದ, ಅನಂತರ ಪುನಃ ಪ್ಯಾರ. 7 ಸೂರ್ಯೋದಯದಿಂದ ಪಿಲಾತನ ಮುಂದೆ; ಮರಣದಂಡನೆ ಕೊಡಲ್ಪಟ್ಟದ್ದು; ಶೂಲಕ್ಕೇರಿಸಲ್ಪಟ್ಟದ್ದು;
ಸೂರ್ಯಾಸ್ತಮಾನದ ತನಕ ಹೂಳಲ್ಪಟ್ಟದ್ದು
15 ಶನಿವಾರ ಸಬ್ಬತ್: ಯೇಸುವಿನ 127,ಪ್ಯಾರಗಳು 8-10 ಸಮಾಧಿಯನ್ನು ಕಾಯುವುದಕ್ಕಾಗಿ ಪಿಲಾತನು ಕಾವಲುಗಾರರಿಗೆ ಅನುಮತಿಯನ್ನು ನೀಡುತ್ತಾನೆ
16 ಆದಿತ್ಯವಾರ ಯೇಸು ಪುನರುತ್ಥಾನಗೊಳಿಸಲ್ಪಟ್ಟದ್ದು 128
ಇಲ್ಲಿ ಪಟ್ಟಿಮಾಡಲ್ಪಟ್ಟಿರುವ ನಂಬ್ರಗಳು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದಲ್ಲಿರುವ ಅಧ್ಯಾಯಗಳನ್ನು ಸೂಚಿಸುತ್ತದೆ. ಯೇಸುವಿನ ಅಂತಿಮ ಶುಶ್ರೂಷೆಗಾಗಿ ಸವಿವರ ಶಾಸ್ತ್ರೀಯ ಉಲ್ಲೇಖಗಳನ್ನು ಒಳಗೊಂಡಿರುವ ಚಾರ್ಟ್ಗಾಗಿ, “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪ್ಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಶಿಯಲ್” ಎಂಬ ಪುಸ್ತಕದ, ಪುಟ 290ನ್ನು ನೋಡಿರಿ. ಈ ಪುಸ್ತಕಗಳು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.