ಲೂಕ
23 ಆಗ ಅಲ್ಲಿ ಸೇರಿಬಂದವ್ರೆಲ್ಲ ಯೇಸುವನ್ನ ಪಿಲಾತನ ಹತ್ರ ಕರ್ಕೊಂಡು ಹೋದ್ರು.+ 2 ಅಲ್ಲಿ ಅವರು ಆತನ ಮೇಲೆ ಆರೋಪ ಹಾಕೋಕೆ+ ಶುರುಮಾಡಿದ್ರು “ಜನ ಸರ್ಕಾರದ ವಿರುದ್ಧ ಏಳೋ ತರ ಇವನು ಮಾಡ್ತಿದ್ದಾನೆ, ರಾಜನಿಗೆ ತೆರಿಗೆ ಕಟ್ಟಬೇಡಿ+ ಅಂತ ಹೇಳ್ತಿದ್ದಾನೆ. ಅಷ್ಟೇ ಅಲ್ಲ ‘ನಾನೇ ಕ್ರಿಸ್ತ, ನಾನೇ ರಾಜ’+ ಅಂತ ಹೇಳ್ಕೊಳ್ತಾ ಇದ್ದ. ಆಗ ಅವನನ್ನ ಹಿಡ್ಕೊಂಡು ಬಂದ್ವಿ” ಅಂದ್ರು. 3 ಆಗ ಪಿಲಾತ ಯೇಸುಗೆ “ನೀನು ಯೆಹೂದ್ಯರ ರಾಜನಾ?” ಅಂತ ಕೇಳಿದ. ಅದಕ್ಕೆ ಆತನು “ನೀನೇ ಹೇಳ್ತಾ ಇದ್ದೀಯಲ್ಲ”+ ಅಂದನು. 4 ಆಗ ಪಿಲಾತ ಮುಖ್ಯ ಪುರೋಹಿತರಿಗೆ, ಸೇರಿದ್ದ ಜನ್ರಿಗೆ “ಈ ಮನುಷ್ಯನಲ್ಲಿ ನನಗೆ ಯಾವ ತಪ್ಪೂ ಕಾಣ್ತಿಲ್ಲ”+ ಅಂದ. 5 ಆದ್ರೆ ಅವರು “ಇವನು ಇಡೀ ಯೂದಾಯದಲ್ಲಿ, ಜನ್ರಿಗೆ ಕಲಿಸಿಕಲಿಸಿ ಅವ್ರ ತಲೆ ಕೆಡಿಸ್ತಾ ಇದ್ದಾನೆ. ಗಲಿಲಾಯದಿಂದ ಇಲ್ಲಿ ತನಕ ಅದನ್ನೇ ಮಾಡ್ತಿದ್ದಾನೆ” ಅಂತ ಹೇಳ್ತಾ ಇದ್ರು. 6 ಇದನ್ನ ಕೇಳಿ ಪಿಲಾತ ‘ಇವನು ಗಲಿಲಾಯದವನಾ?’ ಅಂತ ವಿಚಾರಿಸಿದ. 7 ಯೇಸು ಗಲಿಲಾಯಕ್ಕೆ ಸೇರಿದವನು ಅಂತ ಪಕ್ಕಾ ಆದಮೇಲೆ ಹೆರೋದನ ಹತ್ರ ಕಳಿಸಿದ. ಯಾಕಂದ್ರೆ ಗಲಿಲಾಯ ಪ್ರದೇಶ ಹೆರೋದನ ಅಧಿಕಾರದ ಕೆಳಗಿತ್ತು.+ ಆಗ ಹೆರೋದ ಸಹ ಯೆರೂಸಲೇಮಲ್ಲೇ ಇದ್ದ.
8 ಹೆರೋದನಿಗೆ ಯೇಸುವನ್ನ ನೋಡಿದಾಗ ತುಂಬ ಖುಷಿ ಆಯ್ತು. ಯಾಕಂದ್ರೆ ಅವನು ಯೇಸು ಬಗ್ಗೆ ತುಂಬ ವಿಷ್ಯ ಕೇಳಿಸ್ಕೊಂಡಿದ್ದ.+ ತುಂಬಾ ದಿನಗಳಿಂದ ಯೇಸುವನ್ನ ನೋಡಬೇಕು, ಆತನು ಮಾಡೋ ಒಂದು ಅದ್ಭುತವನ್ನಾದ್ರೂ ನೋಡಬೇಕು ಅಂತ ಕಾಯ್ತಿದ್ದ. 9 ಅವನು ಯೇಸುಗೆ ಒಂದರ ನಂತ್ರ ಒಂದು ಪ್ರಶ್ನೆ ಕೇಳೋಕೆ ಶುರುಮಾಡಿದ. ಆದ್ರೆ ಯೇಸು ಯಾವುದಕ್ಕೂ ಉತ್ತರ ಕೊಡಲಿಲ್ಲ.+ 10 ಆದ್ರೆ ಮುಖ್ಯ ಪುರೋಹಿತರು, ಪಂಡಿತರು ಮುಂದೆ ಬಂದು ಕೋಪದಿಂದ ಆತನ ಮೇಲೆ ಆರೋಪ ಹೊರಿಸ್ತಾ ಇದ್ರು. 11 ಆಮೇಲೆ ಹೆರೋದ ಸೈನಿಕರ ಜೊತೆ ಸೇರ್ಕೊಂಡು ಯೇಸುಗೆ ಗೇಲಿ ಮಾಡಿದ.+ ಆತನಿಗೆ ಸುಂದರ ಬಟ್ಟೆ ಹಾಕಿಸಿ ಅವಮಾನ ಮಾಡಿ+ ಪಿಲಾತನ ಹತ್ರ ವಾಪಸ್ ಕಳಿಸಿದ. 12 ಅವತ್ತಿಂದ ಹೆರೋದ ಮತ್ತು ಪಿಲಾತ ಸ್ನೇಹಿತರಾದ್ರು. ಈ ಮುಂಚೆ ಅವ್ರಿಗೆ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗ್ತಿರಲಿಲ್ಲ.
13 ಪಿಲಾತ ಮುಖ್ಯ ಪುರೋಹಿತರನ್ನ ಮತ್ತು ಹಿರೀಸಭೆಯ ಸದಸ್ಯರನ್ನ ಕರೆಸಿ 14 “ಜನ್ರನ್ನ ಸರಕಾರದ ವಿರುದ್ಧ ಏಳೋ ತರ ಇವನು ಮಾಡ್ತಿದ್ದಾನೆ ಅಂತ ಹೇಳಿ ನನ್ನ ಹತ್ರ ಕರ್ಕೊಂಡು ಬಂದ್ರಿ. ನೋಡಿ, ಇವನನ್ನ ನಿಮ್ಮ ಮುಂದೆನೇ ವಿಚಾರಿಸಿದೆ. ಇವನು ತಪ್ಪು ಮಾಡಿದ್ದಾನೆ ಅಂತ ನೀವು ಹೇಳ್ತಿರೋದು ಬಿಟ್ರೆ ನನಗೇನೂ ಆಧಾರ ಸಿಕ್ಕಿಲ್ಲ.+ 15 ಹೆರೋದನಿಗೂ ಸಿಗಲಿಲ್ಲ. ಅದಕ್ಕೇ ಇವನನ್ನ ನಮ್ಮ ಹತ್ರ ವಾಪಸ್ ಕಳಿಸಿದ್ದಾನೆ. ಮರಣದಂಡನೆ ಕೊಡೋ ಯಾವ ತಪ್ಪೂ ಇವನು ಮಾಡಿಲ್ಲ. 16 ಹಾಗಾಗಿ ಇವನನ್ನ ಚಾಟಿಯಿಂದ ಹೊಡೆಸಿ+ ಬಿಟ್ಟುಬಿಡ್ತೀನಿ” ಅಂದ. 17 *—— 18 ಆದ್ರೆ ಜನ್ರೆಲ್ಲ “ಅವನಿಗೆ ಮರಣದಂಡನೆ ಕೊಡು, ಬರಬ್ಬನನ್ನ ಬಿಡುಗಡೆ ಮಾಡು”+ ಅಂತ ಕಿರಿಚಿದ್ರು. 19 (ಪಟ್ಟಣದಲ್ಲಿ ಸರ್ಕಾರದ ವಿರುದ್ಧ ನಡೆದ ದಂಗೆಯಲ್ಲಿ ಸೇರಿಕೊಂಡದ್ದರಿಂದ ಮತ್ತು ಕೊಲೆ ಮಾಡಿದ್ರಿಂದ ಬರಬ್ಬನನ್ನ ಜೈಲಿಗೆ ಹಾಕಿದ್ರು.) 20 ಪಿಲಾತನಿಗೆ ಯೇಸುವನ್ನ ಬಿಡುಗಡೆ ಮಾಡಬೇಕಂತ ಇಷ್ಟ ಇತ್ತು.+ ಹಾಗಾಗಿ ಇನ್ನೊಮ್ಮೆ ಜನ್ರ ಹತ್ರ ಮಾತಾಡಿದ. 21 ಆದ್ರೆ “ಅವನನ್ನ ಕಂಬಕ್ಕೆ ಏರಿಸು! ಕಂಬಕ್ಕೆ ಏರಿಸು!”*+ ಅಂತ ಅವರು ಕಿರುಚುತ್ತಿದ್ರು. 22 ಪಿಲಾತ ಮೂರನೇ ಸಲ ಅವ್ರಿಗೆ “ಯಾಕೆ? ಇವನೇನು ತಪ್ಪು ಮಾಡಿದ? ಮರಣದಂಡನೆ ಕೊಡೋ ಯಾವ ತಪ್ಪೂ ಇವನು ಮಾಡಿಲ್ಲ. ಹಾಗಾಗಿ ಇವನನ್ನ ಚಾಟಿಯಿಂದ ಹೊಡೆಸಿ ಬಿಟ್ಟುಬಿಡ್ತೀನಿ” ಅಂದ. 23 ಆಗ ಅವರು ಯೇಸುಗೆ ಮರಣಶಿಕ್ಷೆ ಕೊಡು* ಅಂತ ಹಠಹಿಡಿದ್ರು, ಜೋರಾಗಿ ಕಿರಿಚ್ತಾನೇ ಇದ್ರು. ಕೊನೆಗೂ ಅವರು ಹೇಳಿದ್ದೇ ಆಯ್ತು.+ 24 ಪಿಲಾತ ಒತ್ತಾಯಕ್ಕೆ ಮಣಿದು ಅವ್ರಿಗಿಷ್ಟ ಇರೋ ತೀರ್ಪು ಕೊಟ್ಟ. 25 ಜನ ಕೇಳ್ಕೊಂಡ ಹಾಗೆ ದಂಗೆ ಎದ್ದು ಕೊಲೆ ಮಾಡಿ ಜೈಲಿಗೆ ಹೋಗಿದ್ದವನನ್ನ ಬಿಡುಗಡೆ ಮಾಡಿದ. ಆದ್ರೆ ಯೇಸುವನ್ನ ಅವ್ರ ಕೈಗೆ ಒಪ್ಪಿಸಿ, ನಿಮಗಿಷ್ಟ ಬಂದ ಹಾಗೆ ಮಾಡ್ಕೊಳ್ಳಿ ಅಂದ.
26 ಅವರು ಯೇಸುವನ್ನ ಕರ್ಕೊಂಡು ಹೋಗ್ತಿದ್ದಾಗ ಕುರೇನೆ ಪಟ್ಟಣದ ಸೀಮೋನ ಅವ್ರಿಗೆ ಸಿಕ್ಕಿದ. ಅವನು ಹಳ್ಳಿಯಿಂದ ಬರ್ತಿದ್ದ. ಯೇಸು ಮೇಲಿದ್ದ ಹಿಂಸಾ ಕಂಬವನ್ನ* ಅವನ ಮೇಲೆ ಹೊರಿಸಿ ಯೇಸು ಹಿಂದೆನೇ ಹೊತ್ಕೊಂಡು ಬಾ ಅಂದ್ರು.+ 27 ಯೇಸು ಹಿಂದೆ ತುಂಬ ಜನ ಬರ್ತಿದ್ರು. ಸ್ತ್ರೀಯರು ದುಃಖದಿಂದ ಎದೆಬಡ್ಕೊಳ್ತಾ ಗೋಳಾಡ್ತಾ ಇದ್ರು. 28 ಯೇಸು ಅವ್ರಿಗೆ “ಯೆರೂಸಲೇಮಿನ ಸ್ತ್ರೀಯರೇ, ನನಗಾಗಿ ಅಳೋದನ್ನ ನಿಲ್ಲಿಸಿ. ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಅಳಿ.+ 29 ಯಾಕಂದ್ರೆ ‘ಬಂಜೆಯರು, ಮಕ್ಕಳನ್ನೇ ಹೆರದ ಮತ್ತು ಹಾಲು ಕೊಡದ ಸ್ತ್ರೀಯರು ಸಂತೋಷವಾಗಿ ಇರ್ತಾರೆ’+ ಅಂತ ಹೇಳೋ ದಿನ ಬರುತ್ತೆ. 30 ಆಗ ಜನ ಬೆಟ್ಟಗಳಿಗೆ ‘ನಮ್ಮ ಮೇಲೆ ಬೀಳಿ’ ಅಂತಾರೆ. ಗುಡ್ಡಗಳಿಗೆ ‘ನಮ್ಮನ್ನ ಮುಚ್ಚಿಕೊಳ್ಳಿ’+ ಅಂತಾರೆ. 31 ಮರ ಹಸಿಯಾಗಿರುವಾಗಲೇ ಅವರು ಹೀಗೆಲ್ಲ ಮಾಡಿದ್ರೆ ಮರ ಒಣಗಿ ಹೋದಾಗ ಪರಿಸ್ಥಿತಿ ಇನ್ನು ಹೇಗೆ ಇರುತ್ತೋ?” ಅಂದನು.
32 ಯೇಸು ಜೊತೆ ಕಂಬಕ್ಕೆ ಏರಿಸೋಕೆ ಇಬ್ರು ಅಪರಾಧಿಗಳನ್ನ ಕರ್ಕೊಂಡು ಹೋಗ್ತಿದ್ರು.+ 33 ಅವರು ತಲೆಬುರುಡೆ+ ಅನ್ನೋ ಸ್ಥಳಕ್ಕೆ ಬಂದು ಯೇಸುವನ್ನ ಕಂಬಕ್ಕೆ ಜಡಿದ್ರು. ಆ ಇಬ್ರು ಅಪರಾಧಿಗಳಲ್ಲಿ ಒಬ್ಬನನ್ನ ಬಲಗಡೆ ಕಂಬಕ್ಕೆ, ಇನ್ನೊಬ್ಬನನ್ನ ಎಡಗಡೆ ಕಂಬಕ್ಕೆ ಏರಿಸಿದ್ರು.+ 34 ಆಮೇಲೆ ಆ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆ ಹಂಚ್ಕೊಂಡ್ರು.+ ಆದ್ರೆ ಯೇಸು “ಅಪ್ಪಾ, ಇವ್ರನ್ನ ಕ್ಷಮಿಸು. ಇವ್ರೇನು ಮಾಡ್ತಿದ್ದಾರೆ ಅಂತ ಇವ್ರಿಗೆ ಗೊತ್ತಿಲ್ಲ” ಅಂದನು. 35 ಜನ ಇದನ್ನೆಲ್ಲ ನೋಡ್ತಾ ಇದ್ರು. ಆದ್ರೆ ನಾಯಕರು “ಇವನು ಬೇರೆಯವರನ್ನ ಕಾಪಾಡಿದ. ಇವನು ಕ್ರಿಸ್ತನೇ ಆಗಿದ್ರೆ, ಇವನನ್ನ ದೇವರೇ ಆರಿಸ್ಕೊಂಡಿದ್ರೆ ತನ್ನನ್ನೇ ಕಾಪಾಡ್ಕೊಳ್ಳಲಿ”+ ಅಂತ ಗೇಲಿ ಮಾಡಿದ್ರು. 36 ಸೈನಿಕರು ಸಹ ಯೇಸುಗೆ ಹುಳಿ ದ್ರಾಕ್ಷಾಮದ್ಯ+ ಕೊಟ್ಟು 37 “ನೀನು ಯೆಹೂದ್ಯರ ರಾಜನಾಗಿದ್ರೆ ಮೊದಲು ನಿನ್ನನ್ನ ನೀನು ಕಾಪಾಡ್ಕೊ” ಅಂತ ಗೇಲಿ ಮಾಡಿದ್ರು. 38 ಅಷ್ಟೇ ಅಲ್ಲ ಆತನ ತಲೆ ಮೇಲೆ ಕಂಬದಲ್ಲಿ “ಇವನು ಯೆಹೂದ್ಯರ ರಾಜ”+ ಅಂತ ಕೆತ್ತಿದ ಒಂದು ಹಲಗೆ ಇಟ್ರು.
39 ಆಮೇಲೆ ಪಕ್ಕದ ಕಂಬದಲ್ಲಿದ್ದ ಅಪರಾಧಿ ಯೇಸುಗೆ “ನೀನು ಕ್ರಿಸ್ತ ಅಂತ ಹೇಳ್ಕೊಂಡೆ ತಾನೇ? ಈಗ ನಿನ್ನನ್ನೇ ಕಾಪಾಡ್ಕೊ, ನಮ್ಮನ್ನೂ ಕಾಪಾಡು ನೋಡೋಣ” ಅಂತ ಹೇಳಿ ಹಂಗಿಸಿದ.+ 40 ಆಗ ಅವನನ್ನ ಇನ್ನೊಬ್ಬ ಅಪರಾಧಿ ಹೀಗೆ ಬೈದ “ನಿನಗೆ ಸ್ವಲ್ಪನೂ ದೇವರ ಮೇಲೆ ಭಯ ಇಲ್ವಾ? ನಿನಗೆ ಸಿಕ್ಕಿರೋದೂ ಅದೇ ಶಿಕ್ಷೆ ತಾನೇ? 41 ನಮಗೆ ನ್ಯಾಯವಾಗಿಯೇ ಈ ಶಿಕ್ಷೆ ಸಿಕ್ಕಿದೆ. ನಾವು ಮಾಡಿದ ತಪ್ಪಿಗೆ ಸರಿಯಾಗಿ ಅನುಭವಿಸ್ತಾ ಇದ್ದೀವಿ. ಆದ್ರೆ ಇವನು ಯಾವ ತಪ್ಪೂ ಮಾಡಿಲ್ಲ.” 42 ಆಮೇಲೆ ಯೇಸುಗೆ “ಯೇಸು, ನೀನು ರಾಜನಾದಾಗ* ನನ್ನನ್ನ ನೆನಪು ಮಾಡ್ಕೊ”+ ಅಂದ. 43 ಅದಕ್ಕೆ ಯೇಸು “ಈ ದಿನ ನಿನಗೆ ಮಾತು ಕೊಡ್ತಾ ಇದ್ದೀನಿ, ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ”+ ಅಂದನು.
44 ಆಗ ಮಧ್ಯಾಹ್ನ ಸುಮಾರು 12 ಗಂಟೆ ಆಗಿತ್ತು. ಮೂರು ಗಂಟೆ ತನಕ ಇಡೀ ದೇಶ ಕತ್ತಲಲ್ಲಿ ಮುಳುಗಿತ್ತು.+ 45 ಯಾಕಂದ್ರೆ ಸೂರ್ಯ ಬೆಳಕು ಕೊಡೋದನ್ನ ನಿಲ್ಲಿಸಿಬಿಟ್ಟಿದ್ದ. ಆಗ ಪವಿತ್ರಸ್ಥಳದ ಪರದೆ+ ಮಧ್ಯದಲ್ಲಿ ಮೇಲಿಂದ ಕೆಳಗಿನ ತನಕ ಹರಿತು.+ 46 ಯೇಸು ಜೋರಾಗಿ “ಅಪ್ಪಾ, ನನ್ನ ಪ್ರಾಣವನ್ನ* ನಿನ್ನ ಕೈಗೆ ಒಪ್ಪಿಸ್ತಾ ಇದ್ದೀನಿ”+ ಅಂತ ಕೂಗಿ ತೀರಿಕೊಂಡನು.+ 47 ಇದನ್ನೆಲ್ಲ ನೋಡಿದ ಸೇನಾಧಿಕಾರಿ ದೇವರನ್ನ ಹೊಗಳಿ “ನಿಜವಾಗ್ಲೂ ಇವನೊಬ್ಬ ನೀತಿವಂತ”+ ಅಂದ. 48 ಅಲ್ಲಿಗೆ ಬಂದಿದ್ದವರು ಆಗಿದ್ದನ್ನೆಲ್ಲ ನೋಡಿ ಎದೆ ಬಡ್ಕೊಂಡು ಮನೆಗೆ ಹೋಗಿಬಿಟ್ರು. 49 ಆದ್ರೆ ಯೇಸುವಿನ ಪರಿಚಯ ಇದ್ದವರು ದೂರದಲ್ಲೇ ನಿಂತು ನೋಡ್ತಾ ಇದ್ರು. ಗಲಿಲಾಯದಿಂದ ಯೇಸು ಜೊತೆ ಬಂದಿದ್ದ ಸ್ತ್ರೀಯರು ಸಹ ಇದನ್ನೆಲ್ಲ ನೋಡ್ತಾ ನಿಂತಿದ್ರು.+
50 ಅಲ್ಲಿ ಯೋಸೇಫ ಅನ್ನೋ ಒಬ್ಬ ವ್ಯಕ್ತಿ ಇದ್ದ. ಇವನು ಹಿರೀಸಭೆಯ ಸದಸ್ಯನಾಗಿದ್ದ. ಒಳ್ಳೆಯವನೂ ನೀತಿವಂತನೂ ಆಗಿದ್ದ.+ 51 (ಯೋಸೇಫ ಹಿರೀಸಭೆಯವರ ಕುತಂತ್ರದಲ್ಲಿ ಸೇರಿಕೊಂಡಿರ್ಲಿಲ್ಲ, ಬೆಂಬಲ ಕೊಟ್ಟಿರ್ಲಿಲ್ಲ.) ಇವನು ಯೂದಾಯದ ಅರಿಮಥಾಯ ಅನ್ನೋ ಪಟ್ಟಣದವನು. ದೇವರ ಆಳ್ವಿಕೆಗಾಗಿ ಕಾಯ್ತಾ ಇದ್ದ. 52 ಇವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಕೇಳ್ಕೊಂಡ. 53 ಯೋಸೇಫ ಯೇಸುವಿನ ದೇಹ ತಗೊಂಡು+ ಶುದ್ಧವಾದ ಉತ್ತಮ ಗುಣಮಟ್ಟದ ನಾರಿನ ಬಟ್ಟೆಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆಸಿದ್ದ ಸಮಾಧಿಯಲ್ಲಿ ಇಟ್ಟ.+ ಅಲ್ಲಿ ತನಕ ಆ ಸಮಾಧಿಯಲ್ಲಿ ಯಾರ ಶವಾನೂ ಇಟ್ಟಿರಲಿಲ್ಲ. 54 ಅವತ್ತು ಸಿದ್ಧತೆಯ ದಿನವಾಗಿತ್ತು.+ ಸಬ್ಬತ್ ದಿನ+ ಇನ್ನೇನು ಶುರು ಆಗಲಿಕ್ಕಿತ್ತು. 55 ಗಲಿಲಾಯದಿಂದ ಯೇಸು ಜೊತೆ ಬಂದಿದ್ದ ಸ್ತ್ರೀಯರು ಸಹ ಹೋಗಿ ಸಮಾಧಿಯನ್ನ, ಯೇಸುವಿನ ದೇಹವನ್ನ ಇಟ್ಟಿರೋ ರೀತಿಯನ್ನ ನೋಡಿದ್ರು.+ 56 ಆಮೇಲೆ ಅವರು ಒಳ್ಳೇ ವಾಸನೆಯ ಎಣ್ಣೆ ಸಿದ್ಧ ಮಾಡೋಕೆ ಹೋದ್ರು. ಆದ್ರೆ ನಿಯಮ ಪುಸ್ತಕದ ಪ್ರಕಾರ ಅವರು ಸಬ್ಬತ್+ ದಿನದಲ್ಲಿ ಏನೂ ಕೆಲಸ ಮಾಡಲಿಲ್ಲ.