ಅಧ್ಯಾಯ 110
ದೇವಾಲಯದಲ್ಲಿನ ಶುಶ್ರೂಪಷೆಯು ಮುಕ್ತಾಯಗೊಂಡದ್ದು
ಯೇಸುವು ದೇವಾಲಯದಲ್ಲಿ ತನ್ನ ಕೊನೆಯ ದರ್ಶನವನ್ನು ಮಾಡುತ್ತಾನೆ. ವಾಸ್ತವದಲ್ಲಿ, ಭವಿಷ್ಯದ ಮೂರು ದಿನಗಳಲ್ಲಿ ಅವನ ವಿಚಾರಣೆ ಮತ್ತು ವಧಿಸುವಿಕೆಯ ಹೊರತಾಗಿ, ಯೇಸುವು ತನ್ನ ಬಹಿರಂಗ ಶುಶ್ರೂಪಷೆಯನ್ನು ಮುಕ್ತಾಯಗೊಳಿಸುತ್ತಾ ಇದ್ದಾನೆ. ಈಗ ಅವನು ಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ಛೀಮೊರೆ ಹಾಕುವದನ್ನು ಮುಂದುವರಿಸುತ್ತಾನೆ.
ಇನ್ನು ಮೂರು ಬಾರಿ “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ,” ಅವನು ಉದ್ಗರಿಸುತ್ತಾನೆ! ಮೊದಲು, ಅವನು ಅವರಿಗೆ ದುರ್ಗತಿಯನ್ನು ಘೋಷಿಸುವದು ಯಾಕಂದರೆ ಅವರು “ಪಂಚಪಾತ್ರೆ ಬಟ್ಟಲು ಇವುಗಳ ಹೊರ ಭಾಗವನ್ನು” ಶುಚಿಮಾಡುತ್ತಿದ್ದರು, “ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ.” ಆದುದರಿಂದ ಅವನು ಎಚ್ಚರಿಸುವದು: “ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.”
ಅನಂತರ, ಹೊರಗಿನ ದೇವಭಕ್ತಿಯ ಮೂಲಕ ಒಳಗಿನ ಕೊಳೆಯುವಿಕೆ ಮತ್ತು ಹೊಲಸನ್ನು ಅಡಗಿಸಲು ಅವರು ಮಾಡುವ ಪ್ರಯತ್ನಕ್ಕಾಗಿ ಶಾಸ್ತ್ರಿಗಳ ಮತ್ತು ಫರಿಸಾಯರ ಮೇಲೆ ಅವನು ದುರ್ಗತಿಯನ್ನು ಉಚ್ಛರಿಸುತ್ತಾನೆ. “ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ,” ಅವನು ಹೇಳುವದು, “ಇವು ಹೊರಗೆ ಚಂದವಾಗಿ ಕಾಣುತ್ತವೆ, ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.”
ಕೊನೆಗೆ, ಅವರ ಸ್ವಂತ ಧರ್ಮಕಾರ್ಯಗಳ ಕಡೆಗೆ ಗಮನ ಸೆಳೆಯಲು, ಪ್ರವಾದಿಗಳ ಸಮಾಧಿಯನ್ನು ಕಟ್ಟಿ, ಅವುಗಳನ್ನು ಅಲಂಕರಿಸಲು ಅವರು ಇಚ್ಛೆಯುಳ್ಳವರಾಗಿರುವದರಿಂದ ಅವರ ಕಪಟತನವು ಪ್ರಕಟವಾಗುತ್ತದೆ. ಆದರೂ, ಅವರು “ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು” ಎಂದು ಯೇಸುವು ತಿಳಿಸುತ್ತಾನೆ. ಖಂಡಿತವಾಗಿ, ಅವರ ಕಪಟತನವನ್ನು ಯಾವನಾದರೊಬ್ಬನು ಬಯಲು ಪಡಿಸಲು ಧೈರ್ಯ ತಾಳಿದರೆ ಅವನು ಅಪಾಯದಲ್ಲಿರುತ್ತಾನೆ!
ಮುಂದುವರಿಸುತ್ತಾ, ಖಂಡನೆಯ ಅತಿ ಕಠಿಣವಾದ ಶಬ್ದಗಳನ್ನು ಯೇಸುವು ಉಚ್ಛರಿಸುತ್ತಾನೆ. “ಹಾವುಗಳೇ, ಸರ್ಪಜಾತಿಯವರೇ,”ಅವನು ಹೇಳುವದು, “ನರಕದಂಡನೆಗೆ [ಗೆಹೆನ್ನಾದ ದಂಡನೆ] ಹೇಗೆ ತಪ್ಪಿಸಿಕೊಂಡೀರಿ?” ಗೆಹೆನ್ನಾವು ಯೆರೂಸಲೇಮಿನ ಕಸದ ಕೊಂಪೆಯಾಗಿ ಉಪಯೋಗಿಸಲ್ಪಡುತ್ತಿದ್ದ ಒಂದು ಕಣಿವೆಯಾಗಿತ್ತು. ಆದುದರಿಂದ ತಮ್ಮ ದುಷ್ಟ ನಡತೆಯನ್ನು ಬೆನ್ನಟ್ಟುವದರ ಮೂಲಕ, ಶಾಸ್ತ್ರಿಗಳು ಮತ್ತು ಫರಿಸಾಯರು ನಿತ್ಯ ನಾಶನದ ದಂಡನೆಯನ್ನು ಅನುಭವಿಸುವರೆಂದು ಯೇಸುವು ಹೇಳುತ್ತಾನೆ.
ತನ್ನ ಪ್ರತಿನಿಧಿಗಳೋಪಾದಿ ಯಾರನ್ನು ಅವನು ಕಳುಹಿಸಿದನೋ ಅವರ ಕುರಿತಾಗಿ ಯೇಸುವು ಹೇಳುವದು: “ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ [ವಧಸ್ತಂಭ] ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿನಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ. ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದ ವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು. ಅದೆಲ್ಲಾ ಈ ಸಂತತಿಯವರ ಮೇಲೆ ಬರುವದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಜಕರೀಯನು ಇಸ್ರಾಯೇಲ್ಯರ ಅಧಿಪತಿಗಳನ್ನು ಖಂಡಿಸಿದ್ದರಿಂದ, “ಅವರು ಅವನಿಗೆ ಒಳಸಂಚು ಮಾಡಿ ಯೆಹೋವನ ಆಲಯದ ಪ್ರಾಕಾರದಲ್ಲಿ ಅರಸನ ಅಪ್ಪಣೆಯಿಂದಲೇ ಅವನನ್ನು ಕಲ್ಲೆಸೆದು ಕೊಂದರು.” ಆದರೆ, ಯೇಸುವು ಮುಂತಿಳಿಸಿದಂತೆ, ಅಂಥ ಎಲ್ಲಾ ನೀತಿವಂತ ರಕ್ತ ಸುರಿಯುವಿಕೆಗಾಗಿ ಬೆಲೆ ತೆರಬೇಕಾಗಿತ್ತು. ಅದನ್ನು 37 ವರುಷಗಳ ನಂತರ ಸಾ.ಶ. 70ರಲ್ಲಿ ಅಂದರೆ ರೋಮೀಯ ಸೇನೆಗಳು ಯೆರೂಸಲೇಮನ್ನು ನಾಶಮಾಡಿದಾಗ ಮತ್ತು ಹತ್ತು ಲಕ್ಷಕ್ಕಿಂತಲೂ ಯೆಹೂದ್ಯರು ನಾಶವಾದಾಗ ಅವರು ತೆತ್ತರು.
ಈ ಭಯಾನಕ ಸನ್ನಿವೇಶವನ್ನು ಯೇಸು ಪರಿಗಣಿಸುವಾಗ, ಅವನು ಸಂಕಟ ಪಟ್ಟನು. “ಯೆರೂಸಲೇಮೇ, ಯೆರೂಸಲೇಮೇ,” ಅವನು ಪುನಃ ಹೇಳುವದು, “ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿ ಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು! ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”
ಯೇಸುವು ಅನಂತರ ಕೂಡಿಸುವದು: “ಈಗಿನಿಂದ—ಕರ್ತನ [ಯೆಹೋವನ] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ.” ತನ್ನ ಸ್ವರ್ಗೀಯ ರಾಜ್ಯದೊಳಗೆ ಅವನು ಬಂದಾಗ ಮತ್ತು ಜನರು ತಮ್ಮ ನಂಬಿಕೆಯ ಕಣ್ಣುಗಳಿಂದ ಅವನನ್ನು ನೋಡುವಾಗ, ಆ ದಿನವು ಕ್ರಿಸ್ತನ ಸಾನಿಧ್ಯತೆಯ ದಿನವಾಗಿರುವದು.
ಈಗ ಯೇಸುವು ದೇವಾಲಯದಲ್ಲಿರುವ ಬೊಕ್ಕಸದ ಮನೆಗೆ ಎದುರಾಗಿರುವ ಒಂದು ಸ್ಥಳದಲ್ಲಿ ಕೂತುಕೊಂಡು ಜನರು ಬೊಕ್ಕಸದಲ್ಲಿ ಹಣ ಹಾಕುವದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಬಹಳ ಹಣ ಹಾಕುತ್ತಿದ್ದರು. ಆದರೆ ಅನಂತರ ಒಬ್ಬ ಬಡ ವಿಧವೆ ಬಂದಳು ಮತ್ತು ಅತಿ ಚಿಕ್ಕ ಬೆಲೆಯ ಎರಡು ಚಿಕ್ಕ ಕಾಸುಗಳನ್ನು ಹಾಕಿದಳು.
ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು, ಯೇಸುವು ಹೇಳುವದು: “ನಿಮಗೆ ನಿಜವಾಗಿ ಹೇಳುತ್ತೇನೆ, ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಎಲ್ಲರಿಗಿಂತ ಹೆಚ್ಚು ಹಾಕಿದ್ದಾಳೆ.” ಇದು ಹೇಗೆ ಸಾಧ್ಯ ಎಂದು ಅವರು ಬೆರಗಾಗಿರಬೇಕು. ಆದುದರಿಂದ ಯೇಸುವು ವಿವರಿಸುವದು: “ಹೇಗಂದರೆ ಎಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು.” ಈ ಸಂಗತಿಗಳನ್ನು ಹೇಳಿಯಾದ ನಂತರ, ಯೇಸುವು ದೇವಾಲಯವನ್ನು ಕೊನೆಯ ಬಾರಿ ಬಿಟ್ಟು ಬರುತ್ತಾನೆ.
ದೇವಾಲಯದ ಗಾತ್ರ ಮತ್ತು ಸೌಂದರ್ಯವನ್ನು ನೋಡಿ, ಆಶ್ಚರ್ಯಪಡುತ್ತಾ, ಅವನ ಶಿಷ್ಯರಲ್ಲಿ ಒಬ್ಬನು ಘೋಷಿಸುವದು: “ಗುರುವೇ, ನೋಡು, ಎಂಥಾ ಕಲ್ಲುಗಳು! ಎಂಥಾ ಕಟ್ಟಣಗಳು!” ನಿಶ್ಚಯವಾಗಿ ಆ ಕಲ್ಲುಗಳು ಸುಮಾರು 11 ಮೀಟರ್ಗಳಿಗಿಂತಲೂ ಉದ್ದ ಮತ್ತು 5 ಮೀಟರ್ಗಳಿಗಿಂತಲೂ ಅಗಲ ಮತ್ತು 3 ಮೀಟರ್ಗಳಿಗಿಂತಲೂ ಎತ್ತರವಾಗಿದ್ದವೆಂದು ವರದಿಯಾಗಿದೆ!
“ಈ ದೊಡ್ಡ ಕಟ್ಟಣಗಳನ್ನು ನೋಡುತ್ತೀಯಾ?” ಯೇಸುವು ಉತ್ತರಿಸುವದು. “ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ; ಎಲ್ಲಾ ಕೆಡವಲ್ಪಡುವದು.”
ಈ ಸಂಗತಿಗಳನ್ನು ಹೇಳಿದ ನಂತರ, ಯೇಸುವೂ, ಅವನ ಅಪೊಸ್ತಲರೂ ಕಿದ್ರೋನ್ ಕಣಿವೆಯನ್ನು ದಾಟಿ, ಎಣ್ಣೇಮರಗಳ ಗುಡ್ಡವನ್ನು ಹತ್ತುತ್ತಾರೆ. ಇಲ್ಲಿಂದ ಅವರು ಕೆಳಗಡೆ ಭವ್ಯವಾದ ದೇವಾಲಯವನ್ನು ಕಾಣಬಹುದಿತ್ತು. ಮತ್ತಾಯ 23:25—24:3; ಮಾರ್ಕ 12:41—13:3; ಲೂಕ 21:1-6; 2 ಪೂರ್ವಕಾಲವೃತ್ತಾಂತ 24:20-22.
▪ ದೇವಾಲಯಕ್ಕೆ ಕೊನೆಯ ಬಾರಿ ಭೇಟಿ ನೀಡಿದ ಸಮಯದಲ್ಲಿ ಯೇಸುವು ಏನು ಮಾಡಿದನು?
▪ ಶಾಸ್ತ್ರಿಗಳ ವತ್ತು ಫರಿಸಾಯರ ಕಪಟತನವು ಹೇಗೆ ಪ್ರಕಟವಾಯಿತು?
▪ “ಗೆಹೆನ್ನಾದ ದಂಡನೆ” ಎಂದರೆ ಅರ್ಥವೇನು?
▪ ಐಶ್ವರ್ಯವಂತರಿಗಿಂತ ವಿಧವೆಯು ಹೆಚ್ಚು ಕಾಣಿಕೆ ಹಾಕಿದಳು ಎಂದು ಯೇಸುವು ಯಾಕೆ ಹೇಳಿದನು?