ಲೂಕ
21 ಶ್ರೀಮಂತರು ಕಾಣಿಕೆ ಪೆಟ್ಟಿಗೆಗಳಲ್ಲಿ ಕಾಣಿಕೆ ಹಾಕ್ತಾ ಇರೋದನ್ನ ಯೇಸು ನೋಡಿದನು.+ 2 ಆಗ ಒಬ್ಬ ಬಡ ವಿಧವೆ ತುಂಬ ಕಡಿಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನ* ಹಾಕಿದಳು.+ ಅದನ್ನ ನೋಡಿ ಯೇಸು 3 “ನಿಮಗೆ ನಿಜ ಹೇಳ್ತೀನಿ, ಈ ಬಡ ವಿಧವೆ ಅವ್ರೆಲ್ಲರಿಗಿಂತ ಜಾಸ್ತಿ ಕಾಣಿಕೆ ಹಾಕಿದ್ದಾಳೆ.+ 4 ಯಾಕಂದ್ರೆ ಅವ್ರೆಲ್ಲ ತಮ್ಮ ಹತ್ರ ಇದ್ದ ಹಣದಲ್ಲಿ ಸ್ವಲ್ಪ ಹಾಕಿದ್ರು. ಆದ್ರೆ ಈ ವಿಧವೆ ಜೀವನ ನಡಿಸೋಕೆ ಆ ಹಣ ಬೇಕಾಗಿದ್ರೂ* ಇದ್ದದ್ದನ್ನೆಲ್ಲ ಹಾಕಿಬಿಟ್ಟಳು” ಅಂದನು.+
5 ಆಮೇಲೆ ಕೆಲವರು ಆಲಯದ ಒಳ್ಳೊಳ್ಳೇ ಕಲ್ಲುಗಳ ಬಗ್ಗೆ, ದೇವರಿಗೆ ಕಾಣಿಕೆಯಾಗಿ ಕೊಟ್ಟ ಒಳ್ಳೊಳ್ಳೇ ಅಲಂಕಾರದ ವಸ್ತುಗಳ ಬಗ್ಗೆ ಮಾತಾಡ್ಕೊಳ್ತಿದ್ರು.+ ಆಗ ಯೇಸು 6 “ಎಂಥಾ ದಿನ ಬರುತ್ತಂದ್ರೆ, ನೀವು ನೋಡ್ತಿರೋ ಈ ಕಲ್ಲುಗಳು ಒಂದರ ಮೇಲೆ ಒಂದು ನಿಲ್ಲದ ಹಾಗೆ ಬೀಳಿಸ್ತಾರೆ”+ ಅಂದನು. 7 ಅದಕ್ಕೆ ಅವರು “ಗುರು, ಆ ವಿಷ್ಯಗಳೆಲ್ಲ ಯಾವಾಗ ನಡಿಯುತ್ತೆ? ನೀನು ಮತ್ತೆ ಬರೋ ಕಾಲಕ್ಕೆ ಮತ್ತು ಈ ಲೋಕದ ಅಂತ್ಯಕಾಲಕ್ಕೆ ಸೂಚನೆ ಏನು? ನಮಗೆ ಹೇಳು”+ ಅಂದ್ರು. 8 ಅದಕ್ಕೆ “ಯಾರೂ ನಿಮ್ಮನ್ನ ದಾರಿತಪ್ಪಿಸದ+ ಹಾಗೆ ನೋಡ್ಕೊಳ್ಳಿ. ಯಾಕಂದ್ರೆ ತುಂಬ ಜನ ನನ್ನ ಹೆಸ್ರಲ್ಲಿ ಬರ್ತಾರೆ. ‘ನಾನೇ ಕ್ರಿಸ್ತ’ ಅಂತ ಹೇಳ್ಕೊಂಡು ಬರ್ತಾರೆ. ‘ಆ ಕಾಲ ಹತ್ರ ಆಯ್ತು’ ಅಂತಾನೂ ಹೇಳ್ತಾರೆ. ಅವ್ರ ಹಿಂದೆ ಹೋಗಬೇಡಿ.+ 9 ಇದಲ್ಲದೆ ಯುದ್ಧ ನಡಿಯೋದನ್ನ, ಪರಿಸ್ಥಿತಿ ಹದಗೆಟ್ಟಿರೋ ಸುದ್ದಿಗಳನ್ನ ನೀವು ಕೇಳಿಸ್ಕೊಳ್ತೀರ. ಆಗ ಭಯಪಡಬೇಡಿ. ಯಾಕಂದ್ರೆ ಅವೆಲ್ಲ ಆಗಲೇಬೇಕು. ಆದ್ರೆ ತಕ್ಷಣ ಅಂತ್ಯ ಬರಲ್ಲ”+ ಅಂದನು.
10 ಆಮೇಲೆ ಯೇಸು “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ.+ ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧ ಮಾಡುತ್ತೆ.+ 11 ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ. ಒಂದಾದ ಮೇಲೆ ಒಂದು ಜಾಗದಲ್ಲಿ ಅಂಟುರೋಗಗಳು, ಆಹಾರದ ಕೊರತೆ ಇರುತ್ತೆ.+ ಭಯಾನಕ ದೃಶ್ಯಗಳು ಮತ್ತು ಆಕಾಶದಲ್ಲಿ ದೊಡ್ಡದೊಡ್ಡ ಸೂಚನೆಗಳು ಕಾಣಿಸುತ್ತೆ.
12 ಆದ್ರೆ ಇದೆಲ್ಲ ನಡಿಯೋ ಮುಂಚೆ ಜನ ನಿಮ್ಮನ್ನ ಬಂಧಿಸ್ತಾರೆ. ಹಿಂಸೆ ಮಾಡ್ತಾರೆ.+ ಸಭಾಮಂದಿರಕ್ಕೆ ಕರ್ಕೊಂಡು ಹೋಗ್ತಾರೆ. ನ್ಯಾಯಾಲಯದ ಮೆಟ್ಟಿಲು ಹತ್ತಿಸ್ತಾರೆ. ನನ್ನಿಂದಾಗಿ ನಿಮ್ಮನ್ನ ರಾಜ್ಯಪಾಲರ ಹತ್ರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ.+ 13 ಇದ್ರಿಂದ ನಿಮಗೆ ಸಾಕ್ಷಿ ಕೊಡೋ ಅವಕಾಶ ಸಿಗುತ್ತೆ. 14 ಹಾಗಾಗಿ ನೀವು ಹೇಗೆ ಮಾತಾಡಬೇಕು ಅಂತ ಮುಂಚೆನೇ ತಯಾರಾಗೋ ಅವಶ್ಯಕತೆ ಇಲ್ಲ ಅನ್ನೋದನ್ನ ಮನಸ್ಸಲ್ಲಿ ಇಟ್ಕೊಳ್ಳಿ.+ 15 ಯಾಕಂದ್ರೆ ನಿಮ್ಮ ಎಲ್ಲ ವಿರೋಧಿಗಳು ಒಟ್ಟಿಗೆ ಬಂದ್ರೂ ನಿಮ್ಮನ್ನ ಎದುರಿಸೋಕೆ, ಸೋಲಿಸೋಕೆ ಆಗದಷ್ಟು ಬುದ್ಧಿ ಮತ್ತು ಮಾತಾಡೋ ಶಕ್ತಿ ಕೊಡ್ತೀನಿ.+ 16 ಅಷ್ಟೇ ಅಲ್ಲ ನಿಮ್ಮ ಅಪ್ಪಅಮ್ಮ, ಅಣ್ಣತಮ್ಮ, ಸಂಬಂಧಿಕರು, ಸ್ನೇಹಿತರು ನಿಮ್ಮನ್ನ ಹಿಡ್ಕೊಡ್ತಾರೆ* ಮತ್ತು ನಿಮ್ಮಲ್ಲಿ ಕೆಲವ್ರನ್ನ ಸಾಯಿಸ್ತಾರೆ.+ 17 ನೀವು ನನ್ನ ಶಿಷ್ಯರಾಗಿರೋ ಕಾರಣ ಜನ್ರೆಲ್ಲ ನಿಮ್ಮನ್ನ ದ್ವೇಷಿಸ್ತಾರೆ.+ 18 ಆದ್ರೂ ನಿಮ್ಮ ಒಂದು ತಲೆಕೂದಲನ್ನೂ ಮುಟ್ಟೋಕೆ ಅವ್ರಿಂದಾಗಲ್ಲ.+ 19 ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ.+
20 ಅಷ್ಟೇ ಅಲ್ಲ ಯೆರೂಸಲೇಮ್ ಪಟ್ಟಣಕ್ಕೆ ಶತ್ರು ಸೈನ್ಯ ಮುತ್ತಿಗೆ ಹಾಕಿದಾಗ+ ಅದ್ರ ನಾಶ ಹತ್ರ ಆಯ್ತು ಅಂತ ತಿಳ್ಕೊಳ್ಳಿ.+ 21 ಆಗ ಯೂದಾಯದಲ್ಲಿ ಇರೋರು ಬೆಟ್ಟಗಳಿಗೆ ಓಡಿಹೋಗಬೇಕು.+ ಯೆರೂಸಲೇಮ್ ಪಟ್ಟಣದ ಒಳಗಿರೋರು ಅಲ್ಲಿಂದ ಜಾಗ ಖಾಲಿಮಾಡಬೇಕು. ಹಳ್ಳಿಯಲ್ಲಿ ಇರೋರು ಪಟ್ಟಣದ ಒಳಗೆ ಬರಬಾರದು. 22 ಯಾಕಂದ್ರೆ ಅದು ನ್ಯಾಯತೀರಿಸೋ ದಿನ* ಆಗಿರುತ್ತೆ. ಪವಿತ್ರ ಗ್ರಂಥದಲ್ಲಿ ಬರೆದಿರೋ ಎಲ್ಲ ಮಾತು ನಿಜ ಆಗೋಕೆ ಇದೆಲ್ಲ ಆಗುತ್ತೆ. 23 ಆಗ ಗರ್ಭಿಣಿಯರಿಗೆ, ಮೊಲೆಕೂಸು ಇರೋರಿಗೆ ತುಂಬ ಕಷ್ಟ ಆಗುತ್ತೆ!+ ಯಾಕಂದ್ರೆ ಈ ದೇಶದ ಮೇಲೆ ದೊಡ್ಡ ಸಂಕಟ ಬರುತ್ತೆ. ದೇವರು ಈ ಜನ್ರಿಗೆ ದೊಡ್ಡ ಶಿಕ್ಷೆ ಕೊಡ್ತಾನೆ. 24 ಅವ್ರನ್ನ ಕತ್ತಿಯಿಂದ ಕೊಲ್ತಾರೆ, ಅವ್ರನ್ನ ಎಲ್ಲ ದೇಶಗಳಿಗೆ ಕೈದಿಗಳಾಗಿ ಕರ್ಕೊಂಡು ಹೋಗ್ತಾರೆ.+ ಆ ದೇಶಗಳಿಗೆ ಕೊಟ್ಟಿರೋ ಸಮಯ ಮುಗಿಯೋ ತನಕ+ ಅವರು* ಯೆರೂಸಲೇಮ್ ಪಟ್ಟಣವನ್ನ ತುಳಿತಾರೆ.
25 ಅಷ್ಟೇ ಅಲ್ಲ ಸೂರ್ಯ, ಚಂದ್ರ, ನಕ್ಷತ್ರಗಳಲ್ಲೂ+ ಸೂಚನೆ ಕಾಣಿಸುತ್ತೆ. ಸಮುದ್ರದ ಗರ್ಜನೆ ಕೇಳಿ, ಅದು ಅಲ್ಲೋಲಕಲ್ಲೋಲ ಆಗಿರೋದನ್ನ ನೋಡಿ ದೇಶಗಳ ಜನ ತಪ್ಪಿಸ್ಕೊಳ್ಳೋಕೆ ಪ್ರಯತ್ನಿಸಿದ್ರೂ ಅವ್ರಿಗೆ ದಾರಿ ಕಾಣಲ್ಲ. 26 ಆಕಾಶದಲ್ಲಿರೋ ಶಕ್ತಿಗಳು ನಡುಗ್ತವೆ. ಆಗ ಭೂಮಿ ಮೇಲೆ ಏನೇನು ಆಗುತ್ತೋ ಅಂತ ಒಂದು ಕಡೆ ಚಿಂತೆ ಇನ್ನೊಂದು ಕಡೆ ಭಯದಿಂದ ಜನ ತಲೆ ತಿರುಗಿ ಬೀಳ್ತಾರೆ. 27 ಆಗ ಶಕ್ತಿ ಮತ್ತು ಅಧಿಕಾರದಿಂದ+ ಮೋಡಗಳ ಮೇಲೆ ಮನುಷ್ಯಕುಮಾರ+ ಬರೋದನ್ನ ನೋಡ್ತಾರೆ. 28 ಆದ್ರೆ ಇದೆಲ್ಲ ನಡಿಯೋವಾಗ ನಿಮ್ಮ ತಲೆ ಮೇಲಕ್ಕೆತ್ತಿ ಸ್ಥಿರವಾಗಿ ನಿಂತ್ಕೊಳ್ಳಿ. ಯಾಕಂದ್ರೆ ನಿಮ್ಮ ಬಿಡುಗಡೆ ಹತ್ರ ಆಗಿದೆ” ಅಂದನು.
29 ಆಮೇಲೆ ಯೇಸು ಒಂದು ಉದಾಹರಣೆ ಹೇಳಿದನು. “ಅಂಜೂರ ಮರವನ್ನ ಮತ್ತು ಬೇರೆ ಎಲ್ಲ ಮರಗಳನ್ನ ನೋಡಿ.+ 30 ಅವು ಚಿಗುರೋದನ್ನ ನೋಡಿದ ತಕ್ಷಣ ಬೇಸಿಗೆಕಾಲ ಹತ್ರ ಆಯ್ತು ಅಂತ ನಿಮಗೆ ಗೊತ್ತಾಗುತ್ತೆ. 31 ಅದೇ ತರ ಈ ಎಲ್ಲ ವಿಷ್ಯ ನಡಿಯೋದನ್ನ ನೋಡಿದಾಗ ದೇವರ ಆಳ್ವಿಕೆ ತುಂಬ ಹತ್ರ ಇದೆ ಅಂತ ತಿಳ್ಕೊಳ್ಳಿ. 32 ನಿಜ ಹೇಳ್ತೀನಿ, ಇವೆಲ್ಲ ನಡಿಯೋ ತನಕ ಈ ಪೀಳಿಗೆ ನಾಶವಾಗಲ್ಲ.+ 33 ಆಕಾಶ ಭೂಮಿ ನಾಶ ಆಗುತ್ತೆ. ಆದ್ರೆ ನನ್ನ ಮಾತು ಯಾವತ್ತೂ ನಾಶ ಆಗಲ್ಲ.+
34 ಹುಷಾರಾಗಿರಿ. ಮಿತಿಮೀರಿ ತಿನ್ನೋದ್ರಲ್ಲಿ, ವಿಪರೀತ ಕುಡಿಯೋದ್ರಲ್ಲಿ+ ಮತ್ತು ಜೀವನದ ಚಿಂತೆಗಳಲ್ಲೇ+ ಮುಳುಗಿ ಹೋಗಬೇಡಿ.* ಯಾಕಂದ್ರೆ ಆ ದಿನ ದಿಢೀರಂತ ನಿಮ್ಮ ಮೇಲೆ ಬಂದುಬಿಡುತ್ತೆ. 35 ಭೂಮಿ ಮೇಲಿರೋ ಎಲ್ರ ಮೇಲೆ ಆ ದಿನ ಬಂದೇ ಬರುತ್ತೆ. ಪ್ರಾಣಿಗಳು ಉರುಲಿನಲ್ಲಿ ಸಿಕ್ಕಿಕೊಳ್ಳೋ ತರ ನೀವು ಸಿಕ್ಕಿಹಾಕಿಕೊಳ್ಳಬೇಡಿ.+ 36 ಯಾವಾಗ್ಲೂ ಎಚ್ಚರವಾಗಿದ್ದು+ ಪ್ರಾರ್ಥನೆ ಮಾಡ್ತಾ ಇರಿ.+ ಆಗ ನಡಿಬೇಕಾದ ಈ ಎಲ್ಲ ವಿಷ್ಯಗಳಿಂದ ತಪ್ಪಿಸ್ಕೊಂಡು ಮನುಷ್ಯಕುಮಾರನ ಮುಂದೆ ನಿಲ್ಲೋಕಾಗುತ್ತೆ.”+
37 ಹೀಗೆ ಯೇಸು ಇಡೀ ದಿನ ದೇವಾಲಯದಲ್ಲಿ ಕಲಿಸ್ತಿದ್ದನು. ರಾತ್ರಿ ಆದಾಗ ಆಲೀವ್ ಗುಡ್ಡಕ್ಕೆ ಹೋಗಿ ಅಲ್ಲಿ ಉಳ್ಕೊಳ್ತಿದ್ದನು. 38 ಜನ್ರೆಲ್ಲ ಆತನ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಬೆಳಿಗ್ಗೆನೇ ಎದ್ದು ದೇವಾಲಯಕ್ಕೆ ಬರ್ತಿದ್ರು.