“ಮಹಾ ಸಂಕಟ”ಕ್ಕೆ ಮುಂಚೆ ಸುರಕ್ಷಿತತೆಗೆ ಪಲಾಯನ
“ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.”—ಲೂಕ 21:20, 21.
1. ಇನ್ನೂ ಲೋಕದ ಭಾಗವಾಗಿರುವವರಿಗೆ ಪಲಾಯನವು ಜರೂರಿಯದ್ದಾಗಿದೆ ಏಕೆ?
ಸೈತಾನನ ಲೋಕದ ಭಾಗವಾಗಿರುವವರೆಲ್ಲರಿಗೆ, ಪಲಾಯನವು ಜರೂರಿಯದ್ದಾಗಿದೆ. ಪ್ರಚಲಿತ ವಿಷಯಗಳ ವ್ಯವಸ್ಥೆಯು ಈ ಭೂಮಿಯಿಂದ ತೆಗೆದುಹಾಕಲ್ಪಡುವಾಗ, ಅವರು ಜೀವದಿಂದ ಉಳಿಯಬೇಕಾದಲ್ಲಿ, ತಾವು ಯೆಹೋವನ ಪಕ್ಷದಲ್ಲಿ ದೃಢವಾಗಿ ತಮ್ಮ ನಿಲುವನ್ನು ತೆಗೆದುಕೊಂಡಿದ್ದೇವೆಂದು ಮತ್ತು ಇನ್ನು ಮುಂದೆ ಸೈತಾನನು ಅರಸನಾಗಿರುವ ಲೋಕದ ಭಾಗವಾಗಿರುವುದಿಲ್ಲವೆಂಬ ಮಂದಟ್ಟುಮಾಡುವ ರುಜುವಾತನ್ನು ಅವರು ಕೊಡಬೇಕು.—ಯಾಕೋಬ 4:4; 1 ಯೋಹಾನ 2:17.
2, 3. ಮತ್ತಾಯ 24:15-22ರಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಮಾತುಗಳ ಸಂಬಂಧದಲ್ಲಿ, ಯಾವ ಪ್ರಶ್ನೆಗಳನ್ನು ನಾವು ಚರ್ಚಿಸಲಿಕ್ಕಿದ್ದೇವೆ?
2 ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ತನ್ನ ಮಹಾ ಪ್ರವಾದನೆಯಲ್ಲಿ, ಅಂತಹ ಪಲಾಯನಕ್ಕಾಗಿರುವ ಅತ್ಯಾವಶ್ಯಕ ಅಗತ್ಯವನ್ನು ಯೇಸು ಒತ್ತಿಹೇಳಿದನು. ಮತ್ತಾಯ 24:4-14ರಲ್ಲಿ ದಾಖಲಿಸಲ್ಪಟ್ಟಿರುವ ವಿಷಯವನ್ನು ನಾವು ಪದೇ ಪದೇ ಚರ್ಚಿಸುತ್ತೇವೆ; ಆದರೂ, ಅದನ್ನು ಹಿಂಬಾಲಿಸುವ ವಿಷಯವು ಅಷ್ಟೇ ಪ್ರಾಮುಖ್ಯವಾಗಿದೆ. ನಿಮ್ಮ ಬೈಬಲುಗಳನ್ನು ಈಗ ತೆರೆದು, 15ರಿಂದ 22 ವಚನಗಳನ್ನು ಓದುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.
3 ಆ ಪ್ರವಾದನೆಯು ಏನನ್ನು ಅರ್ಥೈಸುತ್ತದೆ? ಪ್ರಥಮ ಶತಮಾನದಲ್ಲಿ, “ಹಾಳುಮಾಡುವ ಅಸಹ್ಯ ವಸ್ತು” ಏನಾಗಿತ್ತು? “ಪವಿತ್ರಸ್ಥಾನದಲ್ಲಿ” ಅದರ ಇರುವಿಕೆಯು ಏನನ್ನು ಮುನ್ಸೂಚಿಸಿತು? ಆ ವಿಕಸನವು ನಮಗೆ ಯಾವ ಮಹತ್ವದ್ದಾಗಿರುತ್ತದೆ?
“ಓದುವವನು ವಿವೇಚನೆಯನ್ನು ಉಪಯೋಗಿಸಲಿ”
4. (ಎ) ಯೆಹೂದ್ಯರ ವತಿಯಿಂದ ಮೆಸ್ಸೀಯನ ತಿರಸ್ಕಾರವನ್ನು ಯಾವುದು ಹಿಂಬಾಲಿಸುವುದೆಂದು ದಾನಿಯೇಲ 9:27 ಹೇಳಿತು? (ಬಿ) ಇದಕ್ಕೆ ಸೂಚಿಸುವಾಗ, “ಓದುವವನು ವಿವೇಚನೆಯನ್ನು ಉಪಯೋಗಿಸಲಿ” ಎಂದು ವ್ಯಕ್ತವಾಗಿ ಯೇಸು ಹೇಳಿದ್ದೇಕೆ?
4 ಮತ್ತಾಯ 24:15ರಲ್ಲಿ ಯೇಸು, ದಾನಿಯೇಲನ ಪುಸ್ತಕದಲ್ಲಿ ಬರೆಯಲ್ಪಟ್ಟಿದ್ದ ವಿಷಯಕ್ಕೆ ಸೂಚಿಸಿದನು ಎಂಬುದನ್ನು ಗಮನಿಸಿರಿ. ಆ ಪುಸ್ತಕದ 9ನೆಯ ಅಧ್ಯಾಯದಲ್ಲಿ, ಮೆಸ್ಸೀಯನ ಬರೋಣವನ್ನು ಮತ್ತು ಅವನನ್ನು ತಿರಸ್ಕರಿಸಿದುದಕ್ಕಾಗಿ ಯೆಹೂದಿ ರಾಷ್ಟ್ರದ ಮೇಲೆ ವಿಧಿಸಲ್ಪಡಲಿದ್ದ ನ್ಯಾಯತೀರ್ಪನ್ನು ಮುಂತಿಳಿಸಿದಂತಹ ಒಂದು ಪ್ರವಾದನೆಯು ಇದೆ. 27ನೆಯ ವಚನದ (NW) ಕೊನೆಯ ಭಾಗವು ಹೇಳುವುದು: “ಅಸಹ್ಯ ವಸ್ತುಗಳ ರೆಕ್ಕೆಯ ಮೇಲೆ ಹಾಳುಮಾಡುವ ಒಬ್ಬನು ಇರುವನು.” ಆದಿ ಯೆಹೂದಿ ಸಂಪ್ರದಾಯವು ದಾನಿಯೇಲನ ಪ್ರವಾದನೆಯ ಆ ಭಾಗವನ್ನು, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ IVನೆಯ ಆ್ಯಂಟಿಯಾಕಸ್ನ ಮೂಲಕ ಯೆರೂಸಲೇಮಿನಲ್ಲಿ ಯೆಹೋವನ ಆಲಯದ ಅಪವಿತ್ರಗೊಳಿಸುವಿಕೆಗೆ ಅನ್ವಯಿಸಿತು. ಆದರೆ ಯೇಸು ಎಚ್ಚರಿಕೆ ನೀಡಿದ್ದು: “ಓದುವವನು ವಿವೇಚನೆಯನ್ನು ಉಪಯೋಗಿಸಲಿ.” IVನೆಯ ಆ್ಯಂಟಿಯಾಕಸ್ನ ಮೂಲಕ ಆಲಯದ ಅಪವಿತ್ರಗೊಳಿಸುವಿಕೆಯು, ಖಂಡಿತವಾಗಿಯೂ ಅಸಹ್ಯವಾಗಿದ್ದರೂ, ಯೆರೂಸಲೇಮಿನ, ಆಲಯದ, ಅಥವಾ ಯೆಹೂದಿ ರಾಷ್ಟ್ರದ ಹಾಳುಗೆಡುವಿಕೆಯಲ್ಲಿ ಪರಿಣಮಿಸಲಿಲ್ಲ. ಆದುದರಿಂದ ಇದರ ನೆರವೇರಿಕೆಯು ಗತಕಾಲದಲ್ಲಿ ಅಲ್ಲ, ಆದರೆ ಇನ್ನೂ ಭವಿಷ್ಯತ್ತಿನಲ್ಲಿತ್ತೆಂಬುದನ್ನು ಯೇಸು ತನ್ನ ಕೇಳುಗರನ್ನು ಎಚ್ಚರಿಸುತ್ತಿದ್ದನೆಂಬುದು ವ್ಯಕ್ತ.
5. (ಎ) ಸುವಾರ್ತಾ ವೃತ್ತಾಂತಗಳ ಒಂದು ಹೋಲಿಕೆಯು, ಪ್ರಥಮ ಶತಮಾನದ “ಅಸಹ್ಯ ವಸ್ತು”ವನ್ನು ಗುರುತಿಸಲು ನಮಗೆ ಹೇಗೆ ಸಹಾಯ ಮಾಡುತ್ತದೆ? (ಬಿ) ಸಾ.ಶ. 66ರಲ್ಲಿ ಸೆಸ್ಟಿಯಸ್ ಗ್ಯಾಲಸ್ ಯೆರೂಸಲೇಮಿಗೆ ರೋಮನ್ ಸೈನಿಕರನ್ನು ರಭಸದಿಂದ ಕಳುಹಿಸಿದ್ದೇಕೆ?
5 ಅವರು ಎದುರುನೋಡಬೇಕಾಗಿದ್ದ “ಅಸಹ್ಯ ವಸ್ತು” ಏನಾಗಿತ್ತು? ಮತ್ತಾಯನ ವೃತ್ತಾಂತವು ಹೀಗೆ ಹೇಳುವುದು ಗಮನಾರ್ಹವಾಗಿದೆ: “ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ.” ಹಾಗಿದ್ದರೂ, ಲೂಕ 21:20ರಲ್ಲಿರುವ ಸಮಾಂತರ ವೃತ್ತಾಂತವು ಓದುವುದು: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.” (ಓರೆಅಕ್ಷರಗಳು ನಮ್ಮವು.) ಸಾ.ಶ. 66ರಲ್ಲಿ, ಯೆರೂಸಲೇಮಿನಲ್ಲಿ ಜೀವಿಸುತ್ತಿದ್ದ ಕ್ರೈಸ್ತರು ಯೇಸು ಮುಂತಿಳಿಸಿದ್ದನ್ನು ಖಂಡಿತವಾಗಿಯೂ ನೋಡಿದರು. ಯೆಹೂದಿ ಹಾಗೂ ರೋಮನ್ ಅಧಿಕಾರಿಗಳ ನಡುವಿನ ಘರ್ಷಣೆಯನ್ನೊಳಗೊಂಡ ಕೆಲವು ಘಟನಾವಳಿಗಳು, ಯೆರೂಸಲೇಮನ್ನು ರೋಮ್ನ ವಿರುದ್ಧ ದಂಗೆಗೆ ಸಹಾಯಕ ಸ್ಥಳವಾಗುವುದಕ್ಕೆ ನಡೆಸಿತು. ಫಲಿತಾಂಶವಾಗಿ, ಯೂದಾಯ, ಸಮಾರ್ಯ, ಗಲಿಲಾಯ, ಡೆಕಾಪೊಲಿಸ್, ಮತ್ತು ಫೋನಿಷಿಯ, ಉತ್ತರದಲ್ಲಿ ಸಿರಿಯ, ಮತ್ತು ದಕ್ಷಿಣದಲ್ಲಿ ಐಗುಪ್ತದ ಉದ್ದಕ್ಕೂ ಹಿಂಸಾಚಾರವು ಹೊರಚಿಮ್ಮಿತು. ರೋಮನ್ ಸಾಮ್ರಾಜ್ಯದ ಆ ಭಾಗಕ್ಕೆ ಒಂದಿಷ್ಟು ಶಾಂತಿಯನ್ನು ಸ್ಥಾಪಿಸುವ ಸಲುವಾಗಿ, ಸೆಸ್ಟಿಯಸ್ ಗ್ಯಾಲಸ್ ಸಿರಿಯದಿಂದ ಯೆರೂಸಲೇಮಿಗೆ—ಯಾವುದನ್ನು ಯೆಹೂದ್ಯರು ತಮ್ಮ “ಪವಿತ್ರನಗರ” ಎಂಬುದಾಗಿ ಮಾತಾಡಿದರೊ, ಅಲ್ಲಿಗೆ—ಮಿಲಿಟರಿ ಸೇನೆಗಳನ್ನು ರಭಸದಿಂದ ಕೊಂಡೊಯ್ದನು.—ನೆಹೆಮೀಯ 11:1; ಯೆಶಾಯ 52:1.
6. ಹಾಳುಮಾಡುವ ಒಂದು “ಅಸಹ್ಯ ವಸ್ತು” “ಪವಿತ್ರಸ್ಥಾನದಲ್ಲಿ ನಿಂತಿರುವುದು” ಹೇಗೆ ಸತ್ಯವಾಗಿತ್ತು?
6 ರೋಮನ್ ಸೈನ್ಯದಳಗಳಿಗೆ ಧ್ವಜಗಳನ್ನು ಅಥವಾ ಲಾಂಛನಗಳನ್ನು ಒಯ್ಯುವುದು ವಾಡಿಕೆಯ ವಿಷಯವಾಗಿತ್ತು; ಇದನ್ನು ಅವರು ಪವಿತ್ರವೆಂದು ವೀಕ್ಷಿಸಿದರೂ, ಯೆಹೂದ್ಯರು ಅದನ್ನು ಮೂರ್ತಿಪೂಜಾತ್ಮಕವಾಗಿ ವೀಕ್ಷಿಸಿದರು. ಆಸಕ್ತಿಕರವಾಗಿ, ದಾನಿಯೇಲನ ಪುಸ್ತಕದಲ್ಲಿ “ಅಸಹ್ಯ ವಸ್ತು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದವು, ಪ್ರಧಾನವಾಗಿ ಮೂರ್ತಿಗಳಿಗೆ ಮತ್ತು ಮೂರ್ತಿಪೂಜೆಗೆ ಉಪಯೋಗಿಸಲ್ಪಟ್ಟಿದೆ.a (ಧರ್ಮೋಪದೇಶಕಾಂಡ 29:17) ಯೆಹೂದ್ಯರಿಂದ ಪ್ರತಿಭಟನೆಯ ಹೊರತೂ, ತಮ್ಮ ಮೂರ್ತಿಪೂಜಾತ್ಮಕ ಲಾಂಛನಗಳನ್ನು ಹೊತ್ತ ರೋಮನ್ ಸೇನೆಗಳು, ಸಾ.ಶ. 66ರ ನವೆಂಬರ್ ತಿಂಗಳಿನಲ್ಲಿ ಯೆರೂಸಲೇಮಿನೊಳಗೆ ನುಗ್ಗಿ, ತದನಂತರ ಉತ್ತರ ದಿಕ್ಕಿನಲ್ಲಿದ್ದ ಆಲಯದ ಗೊಡೆಯನ್ನು ಶಿಥಿಲಗೊಳಿಸಲಾರಂಭಿಸಿದವು. ಇದರ ಕುರಿತು ಯಾವ ಸಂದೇಹವೂ ಇರಲಿಲ್ಲ—ಯೆರೂಸಲೇಮನ್ನು ಸಂಪೂರ್ಣವಾಗಿ ಹಾಳುಮಾಡುವ “ಅಸಹ್ಯ ವಸ್ತು” ‘ಪವಿತ್ರಸ್ಥಾನದಲ್ಲಿ ನಿಂತಿತ್ತು’! ಆದರೆ ಯಾರಾದರೂ ಹೇಗೆ ಪಲಾಯನಗೈಯಸಾಧ್ಯವಿತ್ತು?
ಪಲಾಯನವು ಜರೂರಿಯದ್ದಾಗಿತ್ತು!
7. ರೋಮನ್ ಸೇನೆಯು ಅನಿರೀಕ್ಷಿತವಾಗಿ ಏನನ್ನು ಮಾಡಿತು?
7 ಹಠಾತ್ತನೆ ಮತ್ತು ಮಾನವ ದೃಷ್ಟಿಕೋನದಿಂದ ಯಾವುದೇ ವ್ಯಕ್ತವಾದ ಕಾರಣವಿಲ್ಲದೆ, ಯೆರೂಸಲೇಮ್ ಸುಲಭವಾಗಿ ಜಯಿಸಲ್ಪಡಸಾಧ್ಯವಿದೆ ಎಂದು ತೋರಿದ ಸಮಯದಲ್ಲೇ, ರೋಮನ್ ಸೇನೆಯು ಹಿಮ್ಮೆಟ್ಟಿತು. ಯೆಹೂದಿ ಬಂಡಾಯಗಾರರು ಹಿಮ್ಮೆಟ್ಟುತ್ತಿದ್ದ ರೋಮನ್ ಸೈನಿಕರನ್ನು ಅಂತಿಪತ್ರಿಯಷ್ಟು ದೂರ, ಯೆರೂಸಲೇಮಿನಿಂದ ಸುಮಾರು 50 ಕಿಲೊಮೀಟರುಗಳಷ್ಟು ದೂರ ಮಾತ್ರ ಬೆನ್ನಟ್ಟಿದರು. ಅನಂತರ ಅವರು ಯೆರೂಸಲೇಮಿಗೆ ಹಿಂದಿರುಗಿದರು. ಯೆರೂಸಲೇಮನ್ನು ತಲಪಿದ ನಂತರ, ತಮ್ಮ ಮುಂದಿನ ಯುದ್ಧ ತಂತ್ರವನ್ನು ಯೋಜಿಸಲು ಅವರು ಆಲಯದಲ್ಲಿ ಕೂಡಿಬಂದರು. ಕೋಟೆಗಳನ್ನು ಬಲಪಡಿಸಲು ಮತ್ತು ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಯುವಕರನ್ನು ಸೇರಿಸಿಕೊಳ್ಳಲಾಯಿತು. ಕ್ರೈಸ್ತರು ಇದರಲ್ಲಿ ಒಳಗೊಳ್ಳಲಿದ್ದರೊ? ಅವರು ಅದನ್ನು ತೊರೆದರೂ, ರೋಮನ್ ಸೇನೆಗಳು ಹಿಂದಿರುಗಿದಾಗ ಅವರಿನ್ನೂ ಅಪಾಯದ ವಲಯದಲ್ಲಿರಲಿದ್ದರೊ?
8. ಯೇಸುವಿನ ಪ್ರವಾದನಾತ್ಮಕ ಮಾತುಗಳಿಗೆ ವಿಧೇಯತೆಯಲ್ಲಿ ಕ್ರೈಸ್ತರು ಯಾವ ಜರೂರಿಯ ಕ್ರಿಯೆಗೈದರು?
8 ಯೆರೂಸಲೇಮ್ ಮತ್ತು ಎಲ್ಲ ಯೂದಾಯದಲ್ಲಿದ್ದ ಕ್ರೈಸ್ತರು, ಯೇಸು ಕ್ರಿಸ್ತನ ಮೂಲಕ ಕೊಡಲ್ಪಟ್ಟ ಪ್ರವಾದನಾತ್ಮಕ ಎಚ್ಚರಿಕೆಗನುಸಾರ ಬೇಗನೆ ಕಾರ್ಯಮಾಡಿದರು ಮತ್ತು ಅಪಾಯದ ವಲಯದಿಂದ ಓಡಿಹೋದರು. ಪಲಾಯನವು ಜರೂರಿಯದ್ದಾಗಿತ್ತು! ಸಕಾಲದಲ್ಲಿ ಪೆರಿಯಾದ ಪ್ರಾಂತದಲ್ಲಿನ ಪೆಲ್ಲಾದಲ್ಲಿ ಕೆಲವರು ಬಹುಶಃ ನೆಲೆಸುತ್ತಾ, ಪರ್ವತ ಕ್ಷೇತ್ರಗಳಿಗೆ ಅವರು ಓಡಿಹೋದರು. ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟವರು, ತಮ್ಮ ಪ್ರಾಪಂಚಿಕ ಸ್ವತ್ತುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾ, ಮೂರ್ಖತನದಿಂದ ಹಿಂದಿರುಗಲಿಲ್ಲ. (ಲೂಕ 14:33ನ್ನು ಹೋಲಿಸಿ.) ಯೆರೂಸಲೇಮನ್ನು ಆ ಪರಿಸ್ಥಿತಿಗಳಲ್ಲಿ ಬಿಡುವಾಗ, ಗರ್ಭಿಣಿ ಸ್ತ್ರೀಯರು ಮತ್ತು ಮೊಲೆಯುಣಿಸುವ ತಾಯಂದಿರು, ಕಾಲ್ನಡೆಯಾಗಿ ಅದು ಕಷ್ಟಕರವಾದ ಪ್ರಯಾಣವೆಂದು ಕಂಡುಕೊಂಡರೆಂಬುದು ನಿಶ್ಚಯ. ಅವರ ಪಲಾಯನವು ಸಬ್ಬತ್ ದಿನದ ನಿರ್ಬಂಧಗಳಿಂದ ತಡೆಯಲ್ಪಟ್ಟಿರಲಿಲ್ಲ, ಮತ್ತು ಚಳಿಗಾಲವು ಹತ್ತಿರವಾಗಿದ್ದರೂ, ಅದು ಇನ್ನೂ ಆಗಮಿಸಿರಲಿಲ್ಲ. ಕ್ಷಿಪ್ರವಾಗಿ ಓಡಿಹೋಗುವ ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟವರು ಬೇಗನೆ ಯೆರೂಸಲೇಮ್ ಮತ್ತು ಯೂದಾಯದ ಹೊರಗೆ ಸುರಕ್ಷಿತವಾಗಿದ್ದರು. ಅವರ ಜೀವಗಳು ಇದರ ಮೇಲೆ ಅವಲಂಬಿಸಿದವು.—ಯಾಕೋಬ 3:17ನ್ನು ಹೋಲಿಸಿ.
9. ರೋಮನ್ ಸೇನೆಗಳು ಎಷ್ಟು ಬೇಗನೆ ಹಿಂದಿರುಗಿದವು, ಮತ್ತು ಯಾವ ಪರಿಣಾಮದೊಂದಿಗೆ?
9 ಮುಂದಿನ ವರ್ಷದಲ್ಲೇ, ಸಾ.ಶ. 67ರಲ್ಲಿ, ರೋಮನರು ಯೆಹೂದ್ಯರ ವಿರುದ್ಧವಾಗಿ ಯುದ್ಧ ಕಾರ್ಯಾಚರಣೆಗಳನ್ನು ನವೀಕರಿಸಿದರು. ಪ್ರಥಮವಾಗಿ, ಗಲಿಲಾಯವು ಜಯಿಸಲ್ಪಟ್ಟಿತು. ಮುಂದಿನ ವರ್ಷ, ಯೂದಾಯವು ಧ್ವಂಸಮಾಡಲ್ಪಟ್ಟಿತು. ಸಾ.ಶ. 70ರೊಳಗಾಗಿ, ರೋಮನ್ ಸೇನೆಗಳು ಸ್ವತಃ ಯೆರೂಸಲೇಮನ್ನು ಸುತ್ತುವರಿದವು. (ಲೂಕ 19:43) ಬರಗಾಲವು ವಿಪರೀತವಾಗಿ ತೀಕ್ಷ್ಣವಾಯಿತು. ನಗರದಲ್ಲಿ ಸಿಕ್ಕಿಕೊಂಡವರು ಒಬ್ಬರನ್ನೊಬ್ಬರು ಆಕ್ರಮಿಸಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು ಹತಿಸಲ್ಪಟ್ಟರು. ಅವರು ಏನನ್ನು ಅನುಭವಿಸಿದರೋ ಅದು, ಯೇಸು ಹೇಳಿದಂತೆ, “ಮಹಾ ಸಂಕಟ”ವಾಗಿತ್ತು.—ಮತ್ತಾಯ 24:21.
10. ನಾವು ವಿವೇಚನೆಯಿಂದ ಓದುವುದಾದರೆ, ಇನ್ನೂ ಯಾವ ಸಂಗತಿಯನ್ನು ನಾವು ಗಮನಿಸುವೆವು?
10 ಯೇಸು ಮುಂತಿಳಿಸಿದ್ದನ್ನು ಅದು ಸಂಪೂರ್ಣವಾಗಿ ನೆರವೇರಿಸಿತೊ? ಇಲ್ಲ, ಹೆಚ್ಚಿನ ಘಟನೆಗಳು ಸಂಭವಿಸಲಿದ್ದವು. ಯೇಸು ಸಲಹೆ ನೀಡಿದಂತೆ, ನಾವು ಶಾಸ್ತ್ರಗಳನ್ನು ವಿವೇಚನೆಯಿಂದ ಓದುವುದಾದರೆ, ಇನ್ನೂ ಮುಂದಿರುವ ವಿಷಯದ ಕುರಿತು ಗಮನ ಕೊಡುವುದರಿಂದ ನಾವು ತಪ್ಪದಿರುವೆವು. ನಮ್ಮ ಸ್ವಂತ ಜೀವಿತಗಳಲ್ಲಿ ಅದರ ಪರಿಣಾಮಗಳ ಕುರಿತು ಸಹ ನಾವು ಗಂಭೀರವಾಗಿ ಯೋಚಿಸುವೆವು.
ಆಧುನಿಕ ದಿನದ “ಅಸಹ್ಯ ವಸ್ತು”
11. ಇನ್ನಾವ ಎರಡು ಉದ್ಧರಣಗಳಲ್ಲಿ ದಾನಿಯೇಲನು “ಅಸಹ್ಯ ವಸ್ತು”ವಿಗೆ ನಿರ್ದೇಶಿಸುತ್ತಾನೆ, ಮತ್ತು ಯಾವ ಸಮಯಾವಧಿಯು ಅಲ್ಲಿ ಚರ್ಚಿಸಲಾಗುತ್ತದೆ?
11 ನಾವು ದಾನಿಯೇಲ 9:27ರಲ್ಲಿ ನೋಡಿರುವ ವಿಷಯಕ್ಕೆ ಸೇರಿಸಿ, ದಾನಿಯೇಲ 11:31 ಮತ್ತು 12:11ರಲ್ಲಿ “ಹಾಳುಮಾಡುವ ಅಸಹ್ಯ ವಸ್ತು”ವಿಗೆ ಹೆಚ್ಚಿನ ನಿರ್ದೇಶಗಳಿವೆ ಎಂಬುದನ್ನು ಗಮನಿಸಿರಿ. ಈ ನಂತರದ ದೃಷ್ಟಾಂತಗಳಲ್ಲಿ—ಎರಡರಲ್ಲಿಯೂ—ಯೆರೂಸಲೇಮಿನ ನಾಶನವು ಚರ್ಚಿಸಲ್ಪಡಲಾಗುತ್ತಿಲ್ಲ. ವಾಸ್ತವದಲ್ಲಿ, ದಾನಿಯೇಲ 12:11ರಲ್ಲಿ ಹೇಳಲ್ಪಟ್ಟ ವಿಷಯವು, “ಅಂತ್ಯಕಾಲದ” ನಿರ್ದೇಶದ ಕೇವಲ ಎರಡು ವಚನಗಳ ತರುವಾಯ ಕಾಣಿಸಿಕೊಳ್ಳುತ್ತದೆ. (ದಾನಿಯೇಲ 12:9) ನಾವು 1914ರಂದಿನಿಂದ ಇಂತಹ ಒಂದು ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆ. ಆದುದರಿಂದ ಆಧುನಿಕ ದಿನದ “ಹಾಳುಮಾಡುವ ಅಸಹ್ಯ ವಸ್ತು”ವನ್ನು ಗುರುತಿಸಲು ಎಚ್ಚರದಿಂದಿರುವ ಮತ್ತು ಅನಂತರ ನಾವು ಅಪಾಯದ ವಲಯದಿಂದ ಹೊರಬರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.
12, 13. ಜನಾಂಗ ಸಂಘವನ್ನು ಆಧುನಿಕ ದಿನದ “ಅಸಹ್ಯ ವಸ್ತು”ವಿನೋಪಾದಿ ವರ್ಣಿಸುವುದು ಏಕೆ ಸೂಕ್ತವಾಗಿದೆ?
12 ಆಧುನಿಕ ದಿನದ ಆ “ಅಸಹ್ಯ ವಸ್ತು” ಏನಾಗಿದೆ? ಸಾಕ್ಷ್ಯವು, ಲೋಕವು ತನ್ನ ಅಂತ್ಯದ ಸಮಯವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ನಂತರ, 1920ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ ಜನಾಂಗ ಸಂಘಕ್ಕೆ ಸೂಚಿಸುತ್ತದೆ. ಆದರೆ ಅದು ಹೇಗೆ “ಹಾಳುಮಾಡುವ ಅಸಹ್ಯ ವಸ್ತು” ಆಗಿರಸಾಧ್ಯವಿತ್ತು?
13 “ಅಸಹ್ಯ ವಸ್ತು” ಎಂಬುದಕ್ಕಿರುವ ಹೀಬ್ರು ಪದವು, ಬೈಬಲಿನಲ್ಲಿ ಪ್ರಧಾನವಾಗಿ ಮೂರ್ತಿಗಳು ಮತ್ತು ಮೂರ್ತಿಪೂಜೆಯ ಆಚರಣೆಗಳನ್ನು ಸೂಚಿಸುತ್ತಾ ಬಳಸಲ್ಪಟ್ಟಿದೆ ಎಂಬುದನ್ನು ಜ್ಞಾಪಿಸಿಕೊಳ್ಳಿ. ಸಂಘವು ಪೂಜಿಸಲ್ಪಟ್ಟಿತ್ತೊ? ಖಂಡಿತವಾಗಿಯೂ ಪೂಜಿಸಲ್ಪಟ್ಟಿತ್ತು! ವೈದಿಕರು ಅದನ್ನು “ಪವಿತ್ರಸ್ಥಾನದಲ್ಲಿ” ಇಟ್ಟರು, ಮತ್ತು ಅವರ ಹಿಂಬಾಲಕರು ಅದಕ್ಕೆ ಭಾವೋದ್ದೀಪ್ತ ಭಕ್ತಿಯನ್ನು ಕೊಡಲು ಮುಂದುವರಿದರು. ಅಮೆರಿಕದಲ್ಲಿನ ಚರ್ಚಸ್ ಆಫ್ ಕ್ರೈಸ್ಟ್ನ ಫೆಡರಲ್ ಕೌನ್ಸಿಲ್ ಪ್ರಕಟಿಸಿದ್ದೇನೆಂದರೆ, ಸಂಘವು “ಭೂಮಿಯ ಮೇಲೆ ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿ” ಆಗಿರುವುದು. ಅಮೆರಿಕದ ಶಾಸನ ಸಭೆಯು, ಜನಾಂಗ ಸಂಘದ ಒಡಂಬಡಿಕೆಯನ್ನು ಸ್ಥಿರೀಕರಿಸುವಂತೆ, ಅದನ್ನು ಪ್ರೇರಿಸುವ ಧಾರ್ಮಿಕ ಗುಂಪುಗಳಿಂದ ಟಪಾಲುಗಳ ಒಂದು ಪ್ರವಾಹವನ್ನು ಪಡೆಯಿತು. ಬ್ರಿಟನ್ನಲ್ಲಿರುವ ಬ್ಯಾಪ್ಟಿಸ್ಟ್, ಕಾಂಗ್ರಿಗೇಷನಲಿಸ್ಟ್, ಮತ್ತು ಪ್ರೆಸ್ಬಿಟಿಯೆರಿಯನ್ನ ಮಂಡಲಿಯು ಅದನ್ನು, “[ಭೂಮಿಯ ಮೇಲೆ ಶಾಂತಿಯನ್ನು] ಸಾಧಿಸಲು, ಲಭ್ಯವಿರುವ ಏಕೈಕ ಸಾಧನ” ಎಂಬುದಾಗಿ ಹೊಗಳಿತು.—ಪ್ರಕಟನೆ 13:14, 15ನ್ನು ನೋಡಿ.
14, 15. ಯಾವ ವಿಧದಲ್ಲಿ ಸಂಘವು ಮತ್ತು ತದನಂತರ ವಿಶ್ವ ಸಂಸ್ಥೆಯು “ಪವಿತ್ರಸ್ಥಾನದಲ್ಲಿ” ಇದ್ದವು?
14 ದೇವರ ಮೆಸ್ಸೀಯ ಸಂಬಂಧಿತ ರಾಜ್ಯವು ಪರಲೋಕದಲ್ಲಿ 1914ರಲ್ಲಿ ಸ್ಥಾಪಿಸಲ್ಪಟ್ಟಿತ್ತು, ಆದರೆ ರಾಷ್ಟ್ರಗಳು ತಮ್ಮ ಸ್ವಂತ ಪರಮಾಧಿಕಾರಕ್ಕಾಗಿ ಹೋರಾಡುವುದನ್ನು ಮುಂದುವರಿಸಿದವು. (ಕೀರ್ತನೆ 2:1-6) ಜನಾಂಗ ಸಂಘವು ಪ್ರಸ್ತಾಪಿಸಲ್ಪಟ್ಟಾಗ, ಪ್ರಥಮ ಜಾಗತಿಕ ಯುದ್ಧದಲ್ಲಿ ಆಗ ತಾನೇ ಹೋರಾಡಿದ್ದ ರಾಷ್ಟ್ರಗಳು, ಅಷ್ಟೇ ಅಲ್ಲದೆ ತಮ್ಮ ಸೈನಿಕರನ್ನು ಆಶೀರ್ವದಿಸಿದ್ದ ವೈದಿಕರು, ತಾವು ಈಗಾಗಲೇ ದೇವರ ನಿಯಮವನ್ನು ತೊರೆದುಬಿಟ್ಟಿದ್ದೇವೆಂಬುದನ್ನು ಪ್ರದರ್ಶಿಸಿದ್ದರು. ಅವರು ಕ್ರಿಸ್ತನನ್ನು ರಾಜನೋಪಾದಿ ನೋಡುತ್ತಿರಲಿಲ್ಲ. ಹೀಗೆ ಅವರು ದೇವರ ರಾಜ್ಯದ ಪಾತ್ರವನ್ನು ಒಂದು ಮಾನವ ಸಂಸ್ಥೆಗೆ ವಹಿಸಿದರು; ಅವರು ಜನಾಂಗ ಸಂಘವನ್ನು, ಅದು ಯಾವ ಸ್ಥಾನಕ್ಕೆ ಸೇರಿರಲಿಲ್ಲವೊ, ಆ “ಪವಿತ್ರಸ್ಥಾನದಲ್ಲಿ” ಇಟ್ಟರು.
15 ಸಂಘದ ಉತ್ತರಾಧಿಕಾರಿಯೋಪಾದಿ, ವಿಶ್ವ ಸಂಸ್ಥೆಯು 1945, ಅಕ್ಟೋಬರ್ 24ರಂದು ಅಸ್ತಿತ್ವಕ್ಕೆ ಬಂದಿತು. ತದನಂತರ, ರೋಮ್ನ ಪೋಪರು, ವಿಶ್ವ ಸಂಸ್ಥೆಯನ್ನು “ಸಾಮರಸ್ಯ ಹಾಗೂ ಶಾಂತಿಗಾಗಿರುವ ಅಂತಿಮ ನಿರೀಕ್ಷೆ” ಮತ್ತು “ಶಾಂತಿ ಹಾಗೂ ನ್ಯಾಯದ ಅತಿಶ್ರೇಷ್ಠ ಸಭಾಸ್ಥಾನ”ದೋಪಾದಿ ಜಯಕಾರ ಮಾಡಿದರು. ಹೌದು, ಜನಾಂಗ ಸಂಘ, ಅದರೊಂದಿಗೆ ಅದರ ಉತ್ತರಾಧಿಕಾರಿಯಾದ ವಿಶ್ವ ಸಂಸ್ಥೆಯು, ನಿಜವಾಗಿಯೂ ಒಂದು ಮೂರ್ತಿಯಾಗಿ, ದೇವರ ಹಾಗೂ ಆತನ ಜನರ ದೃಷ್ಟಿಯಲ್ಲಿ ಒಂದು “ಅಸಹ್ಯ ವಸ್ತು”ವಾಗಿ ಪರಿಣಮಿಸಿತು.
ಯಾವುದರಿಂದ ಪಲಾಯನ?
16. ಯಾವುದರಿಂದ ನೀತಿಪ್ರಿಯರು ಇಂದು ಓಡಿಹೋಗುವ ಅಗತ್ಯವಿದೆ?
16 ಇದನ್ನು ‘ಕಾಣುವಾಗ,’ ಆ ಅಂತಾರಾಷ್ಟ್ರೀಯ ಸಂಸ್ಥೆಯು ಏನಾಗಿದೆ ಮತ್ತು ಅದು ಹೇಗೆ ಪೂಜಿಸಲ್ಪಡುತ್ತಿದೆ ಎಂಬುದನ್ನು ಗುರುತಿಸುವಾಗ, ನೀತಿಪ್ರಿಯರು ಸುರಕ್ಷಿತತೆಗೆ ಓಡುವ ಅಗತ್ಯವಿದೆ. ಯಾವುದರಿಂದ ಪಲಾಯನ? ಅಪನಂಬಿಗಸ್ತ ಯೆರೂಸಲೇಮಿನ ಆಧುನಿಕ ದಿನದ ಪ್ರತಿನಿಧಿರೂಪವಾಗಿರುವ, ಅಂದರೆ, ಕ್ರೈಸ್ತಪ್ರಪಂಚದಿಂದ ಮತ್ತು ಸುಳ್ಳು ಧರ್ಮದ ಲೋಕವ್ಯಾಪಕ ವ್ಯವಸ್ಥೆಯಾಗಿರುವ ಸಮಸ್ತ ಮಹಾ ಬಾಬೆಲಿನಿಂದ ಪಲಾಯನ.—ಪ್ರಕಟನೆ 18:4.
17, 18. ಆಧುನಿಕ ದಿನದ “ಅಸಹ್ಯ ವಸ್ತು” ಯಾವ ಹಾಳುಗೆಡುವಿಕೆಯನ್ನು ಉಂಟುಮಾಡುವುದು?
17 ಪ್ರಥಮ ಶತಮಾನದಲ್ಲಿ, ರೋಮನ್ ಸೇನೆಯು ತನ್ನ ಮೂರ್ತಿಪೂಜಾತ್ಮಕ ಧ್ವಜಗಳೊಂದಿಗೆ ಯೆಹೂದ್ಯರ ಪವಿತ್ರ ನಗರದೊಳಗೆ ಪ್ರವೇಶಮಾಡಿದಾಗ, ಯೆರೂಸಲೇಮ್ ಮತ್ತು ಅದರ ಆರಾಧನಾ ವ್ಯವಸ್ಥೆಯನ್ನು ಹಾಳುಮಾಡಲು ಅದು ಅಲ್ಲಿತ್ತೆಂಬುದನ್ನೂ ಜ್ಞಾಪಿಸಿಕೊಳ್ಳಿ. ನಮ್ಮ ದಿನದಲ್ಲಿ, ಈ ಹಾಳುಗೆಡುವಿಕೆಯು ಕೇವಲ ಒಂದು ನಗರದ ಮೇಲಲ್ಲ, ಇಲ್ಲವೆ ಕ್ರೈಸ್ತಪ್ರಪಂಚದ ಮೇಲೆ ಮಾತ್ರವಲ್ಲ, ಬದಲಾಗಿ ಸುಳ್ಳು ಧರ್ಮದ ಇಡೀ ಲೋಕವ್ಯಾಪಕ ವ್ಯವಸ್ಥೆಯ ಮೇಲೆ ಬರಲಿದೆ.—ಪ್ರಕಟನೆ 18:5-8.
18 ಪ್ರಕಟನೆ 17:16ರಲ್ಲಿ, ಸಾಂಕೇತಿಕವಾದೊಂದು ಕೆಂಪು ವರ್ಣದ ಕಾಡು ಮೃಗವು—ಯಾವುದು ವಿಶ್ವ ಸಂಸ್ಥೆಯಾಗಿ ರುಜುವಾಗಿದೆಯೊ, ಅದು—ಜಾರಸ್ತ್ರೀಯಂಥ ಮಹಾ ಬಾಬೆಲಿನ ಮೇಲೆ ತಿರುಗಿ, ಆಕೆಯನ್ನು ಹಿಂಸಾತ್ಮಕವಾಗಿ ನಾಶಮಾಡುವುದೆಂದು ಮುಂತಿಳಿಸಲಾಗಿದೆ. ಸ್ಪಷ್ಟವಾದ ಭಾಷೆಯನ್ನು ಉಪಯೋಗಿಸುತ್ತಾ, ಅದು ಹೇಳುವುದು: “ಇದಲ್ಲದೆ ಹತ್ತು ಕೊಂಬುಗಳನ್ನೂ ಮೃಗವನ್ನೂ ಕಂಡಿಯಲ್ಲ? ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” ಇದು ಅರ್ಥೈಸುವ ವಿಷಯವು, ಆಲೋಚಿಸಲು ಭಯಾನಕವಾದ ವಿಷಯವಾಗಿದೆ. ಅದು ಭೂಮಿಯ ಎಲ್ಲ ಭಾಗಗಳಲ್ಲಿರುವ ಪ್ರತಿಯೊಂದು ಪ್ರಕಾರದ ಸುಳ್ಳು ಧರ್ಮದ ಅಂತ್ಯದಲ್ಲಿ ಪರಿಣಮಿಸುವುದು. ಮಹಾ ಸಂಕಟವು ಆರಂಭಿಸಿದೆ ಎಂಬುದನ್ನು ಇದು ನಿಶ್ಚಯವಾಗಿಯೂ ತೋರಿಸುವುದು.
19. ಅದರ ರಚನೆಯಂದಿನಿಂದ ಯಾವ ಘಟಕಾಂಶಗಳು ವಿಶ್ವ ಸಂಸ್ಥೆಯ ಭಾಗವಾಗಿವೆ, ಮತ್ತು ಇದು ಮಹತ್ವದ್ದಾಗಿದೆ ಏಕೆ?
19 ವಿಶ್ವ ಸಂಸ್ಥೆಯು 1945ರಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಿದಂದಿನಿಂದ, ಅದರ ಸದಸ್ಯತ್ವದಲ್ಲಿ ನಾಸ್ತಿಕ, ಧರ್ಮವಿರುದ್ಧ ಘಟಕಾಂಶಗಳು ಪ್ರಧಾನವಾಗಿವೆ ಎಂಬುದು ಗಮನಾರ್ಹ. ಲೋಕದಾದ್ಯಂತ ಹಲವಾರು ಸಮಯಗಳಲ್ಲಿ, ಇಂತಹ ಸುಧಾರಣಾ ಘಟಕಾಂಶಗಳು, ಧಾರ್ಮಿಕ ಆಚರಣೆಗಳನ್ನು ತೀವ್ರವಾಗಿ ನಿರ್ಬಂಧಿಸುವುದರಲ್ಲಿ ಅಥವಾ ಸಂಪೂರ್ಣವಾಗಿ ನಿಷೇಧಿಸುವುದರಲ್ಲಿ ಸಾಧನವಾಗಿವೆ. ಆದರೆ, ಗತಿಸಿಹೋದ ಕೆಲವು ವರ್ಷಗಳಲ್ಲಿ, ಅನೇಕ ಸ್ಥಳಗಳಲ್ಲಿ ಧಾರ್ಮಿಕ ಗುಂಪುಗಳ ಮೇಲಿನ ಸರಕಾರಿ ಒತ್ತಡದಲ್ಲಿ ತಗ್ಗುವಿಕೆಯು ಸಂಭವಿಸಿದೆ. ಧರ್ಮಕ್ಕಿರುವ ಯಾವುದೇ ಅಪಾಯವು ತೊಲಗಿಹೋಗಿದೆ ಎಂದು ಕೆಲವು ಜನರಿಗೆ ತೋರಬಹುದು.
20. ಯಾವ ರೀತಿಯ ಖ್ಯಾತಿಯನ್ನು ಲೋಕದ ಧರ್ಮಗಳು ತಮಗಾಗಿ ಮಾಡಿಕೊಂಡಿವೆ?
20 ಮಹಾ ಬಾಬೆಲಿನ ಧರ್ಮಗಳು, ಲೋಕದಲ್ಲಿ ಹಿಂಸಾತ್ಮಕವಾಗಿ ಭೇದಿಸುವಂತಹ ಶಕ್ತಿಯಾಗಿ ಮುಂದುವರಿದಿವೆ. ವಾರ್ತಾ ತಲೆಬರಹಗಳು ಅನೇಕ ವೇಳೆ ಯುದ್ಧಮಾಡುವ ಪಂಗಡಗಳನ್ನು ಮತ್ತು ಭಯೋತ್ಪಾದಕ ಗುಂಪುಗಳನ್ನು, ಅವು ಸಮರ್ಥಿಸುವ ಧರ್ಮವನ್ನು ಹೆಸರಿಸುವ ಮೂಲಕ ಗುರುತಿಸುತ್ತವೆ. ಪ್ರತಿಸ್ಪರ್ಧಿ ಧಾರ್ಮಿಕ ಪಂಗಡಗಳ ನಡುವೆ ಹಿಂಸಾಚಾರವನ್ನು ನಿಲ್ಲಿಸಲು, ದೊಂಬಿಯ ಪೊಲೀಸರು ಮತ್ತು ಸೈನಿಕರು ದೇವಾಲಯಗಳೊಳಗೆ ಒತ್ತಾಯಪೂರ್ವಕವಾಗಿ ಪ್ರವೇಶಿಸಬೇಕಾಗಿದೆ. ಧಾರ್ಮಿಕ ಮಂಡಲಿಗಳು ರಾಜಕೀಯ ಕ್ರಾಂತಿಗೆ ಹಣದ ಬೆಂಬಲವನ್ನು ನೀಡಿವೆ. ಕುಲ ಸಂಬಂಧವಾದ ಗುಂಪುಗಳ ನಡುವೆ ಸ್ಥಿರವಾದ ಸಂಬಂಧಗಳನ್ನು ಕಾಪಾಡಲು, ವಿಶ್ವ ಸಂಸ್ಥೆಯ ಮೂಲಕ ಮಾಡಲಾದ ಪ್ರಯತ್ನಗಳನ್ನು ಧಾರ್ಮಿಕ ದ್ವೇಷವು ಆಶಾಭಂಗಗೊಳಿಸಿದೆ. ಶಾಂತಿ ಮತ್ತು ಭದ್ರತೆಯ ಗುರಿಯನ್ನು ಬೆನ್ನಟ್ಟುವುದರಲ್ಲಿ, ವಿಶ್ವ ಸಂಸ್ಥೆಯೊಳಗಿರುವ ಘಟಕಾಂಶಗಳು, ತಮ್ಮ ಮಾರ್ಗದಲ್ಲಿ ಎದುರಾಗಿ ನಿಲ್ಲುವ ಯಾವುದೇ ಧಾರ್ಮಿಕ ಪ್ರಭಾವದ ನಿರ್ಮೂಲನೆಯನ್ನು ನೋಡಲು ಬಯಸುತ್ತವೆ.
21. (ಎ) ಮಹಾ ಬಾಬೆಲು ಯಾವಾಗ ನಾಶಗೊಳಿಸಲ್ಪಡಬೇಕೆಂದು ಯಾರು ನಿರ್ಧರಿಸುವರು? (ಬಿ) ಅದಾಗುವ ಮೊದಲು ಏನು ಮಾಡುವುದು ಜರೂರಿಯದ್ದಾಗಿದೆ?
21 ಪರಿಗಣಿಸಬೇಕಾದ ಮತ್ತೊಂದು ಪ್ರಾಮುಖ್ಯವಾದ ಅಂಶವೂ ಇದೆ. ವಿಶ್ವ ಸಂಸ್ಥೆಯೊಳಗಿರುವ ಮಿಲಿಟರೀಕೃತ ಕೊಂಬುಗಳು ಮಹಾ ಬಾಬೆಲನ್ನು ನಾಶಗೊಳಿಸಲು ಉಪಯೋಗಿಸಲ್ಪಡುವುವಾದರೂ, ಆ ನಾಶನವು ನಿಜವಾಗಿಯೂ ದೈವಿಕ ನ್ಯಾಯತೀರ್ಪಿನ ಒಂದು ಅಭಿವ್ಯಕ್ತಿಯಾಗಿರುವುದು. ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯು ದೇವರ ನೇಮಿತ ಸಮಯದಲ್ಲಿ ಬರುವುದು. (ಪ್ರಕಟನೆ 17:17) ಈ ನಡುವೆ ನಾವು ಏನು ಮಾಡತಕ್ಕದ್ದು? “ಅವಳನ್ನು ಬಿಟ್ಟುಬನ್ನಿರಿ”—ಮಹಾ ಬಾಬೆಲಿನಿಂದ ಹೊರಬನ್ನಿರಿ—ಎಂಬುದಾಗಿ ಬೈಬಲು ಉತ್ತರಿಸುತ್ತದೆ.—ಪ್ರಕಟನೆ 18:4.
22, 23. ಅಂತಹ ಒಂದು ಪಲಾಯನವು ಏನನ್ನು ಒಳಗೊಳ್ಳುತ್ತದೆ?
22 ಸುರಕ್ಷಿತತೆಗೆ ಮಾಡಲ್ಪಡುವ ಈ ಪಲಾಯನವು, ಯೆರೂಸಲೇಮನ್ನು ಬಿಡುವಾಗ ಯೆಹೂದಿ ಕ್ರೈಸ್ತರು ಮಾಡಿದಂತಹ ಒಂದು ಪ್ರಾದೇಶಿಕ ಚಲನೆಯಾಗಿರುವುದಿಲ್ಲ. ಇದು ಕ್ರೈಸ್ತಪ್ರಪಂಚದ ಧರ್ಮಗಳಿಂದ, ಹೌದು, ಮಹಾ ಬಾಬೆಲಿನ ಯಾವುದೇ ಭಾಗದಿಂದ ಮಾಡಲ್ಪಡುವ ಒಂದು ಪಲಾಯನವಾಗಿದೆ. ಇದರ ಅರ್ಥ, ತನ್ನನ್ನು ಸುಳ್ಳು ಧಾರ್ಮಿಕ ಸಂಸ್ಥೆಗಳಿಂದ ಮಾತ್ರವಲ್ಲ, ಅವುಗಳ ಪದ್ಧತಿಗಳಿಂದ ಹಾಗೂ ಅವು ಹುಟ್ಟಿಸುವ ಆತ್ಮದಿಂದ ಸಂಪೂರ್ಣವಾಗಿ ಬೇರ್ಪಡಿಸಿಕೊಳ್ಳುವುದಾಗಿದೆ. ಅದು ಯೆಹೋವನ ದೇವಪ್ರಭುತ್ವ ಸಂಸ್ಥೆಯೊಳಗೆ ಸುರಕ್ಷಿತತೆಯ ಒಂದು ಸ್ಥಳಕ್ಕೆ ಮಾಡುವ ಪಲಾಯನವಾಗಿದೆ.—ಎಫೆಸ 5:7-11.
23 ಯೆಹೋವನ ಅಭಿಷಿಕ್ತ ಸೇವಕರು ಪ್ರಥಮವಾಗಿ ಆಧುನಿಕ ದಿನದ ಅಸಹ್ಯ ವಸ್ತುವನ್ನು, ಜನಾಂಗ ಸಂಘವನ್ನು, Iನೆಯ ಜಾಗತಿಕ ಯುದ್ಧದ ನಂತರ ಗುರುತಿಸಿದಾಗ, ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸಿದರು? ಅವರು ಈಗಾಗಲೇ ಕ್ರೈಸ್ತಪ್ರಪಂಚದ ಚರ್ಚುಗಳಿಂದ ತಮ್ಮ ಸದಸ್ಯತ್ವವನ್ನು ಕಿತ್ತುಹಾಕಿದ್ದರು. ಆದರೆ ಅವರು ಇನ್ನೂ ಶಿಲುಬೆಯ ಉಪಯೋಗ ಮತ್ತು ಕ್ರಿಸ್ಮಸ್ ಹಾಗೂ ಇತರ ವಿಧರ್ಮಿ ರಜಾದಿನಗಳ ಆಚರಣೆಗಳಂತಹ ಕ್ರೈಸ್ತಪ್ರಪಂಚದ ಕೆಲವೊಂದು ಪದ್ಧತಿಗಳಿಗೆ ಹಾಗೂ ಆಚರಣೆಗಳಿಗೆ ಅಂಟಿಕೊಂಡಿದ್ದರೆಂದು ಅವರು ಕ್ರಮೇಣ ಗ್ರಹಿಸಿದರು. ಈ ವಿಷಯಗಳ ಕುರಿತಾದ ಸತ್ಯವನ್ನು ಅವರು ಕಲಿತಾಗ, ಅವರು ತಡವಿಲ್ಲದೆ ಕ್ರಿಯೆಗೈದರು. ಯೆಶಾಯ 52:11ರಲ್ಲಿರುವ ಸಲಹೆಗೆ ಅವರು ಲಕ್ಷ್ಯಗೊಟ್ಟರು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!”
24. ವಿಶೇಷವಾಗಿ 1935ರಂದಿನಿಂದ ಪಲಾಯನದಲ್ಲಿ ಯಾರು ಜೊತೆಸೇರಿದ್ದಾರೆ?
24 ವಿಶೇಷವಾಗಿ 1935ರಂದಿನಿಂದ, ಬೆಳೆಯುತ್ತಿರುವ ಇತರ ಜನರ ಒಂದು ಗುಂಪು—ಒಂದು ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ಅಂಗೀಕರಿಸಿದ ಜನರು—ತದ್ರೀತಿಯ ಕ್ರಿಯೆಯನ್ನು ತೆಗೆದುಕೊಳ್ಳಲಾರಂಭಿಸಿತು. ಅವರು ಸಹ ‘ಅಸಹ್ಯ ವಸ್ತು ಪವಿತ್ರಸ್ಥಾನದಲ್ಲಿ ನಿಂತಿರುವುದನ್ನು ಕಂಡಿದ್ದಾರೆ,’ ಮತ್ತು ಅದು ಏನನ್ನು ಅರ್ಥೈಸುತ್ತೆಂಬುದನ್ನು ಅವರು ಗ್ರಹಿಸುತ್ತಾರೆ. ಓಡಿಹೋಗುವ ತಮ್ಮ ನಿರ್ಧಾರವನ್ನು ಮಾಡಿದ ಬಳಿಕ, ಮಹಾ ಬಾಬೆಲಿನ ಭಾಗವಾಗಿರುವ ಸಂಸ್ಥೆಗಳ ಸದಸ್ಯತ್ವದ ಪಟ್ಟಿಗಳಿಂದ ತಮ್ಮ ಹೆಸರುಗಳನ್ನು ಅವರು ತೆಗೆದುಹಾಕಿಸಿಕೊಂಡಿದ್ದಾರೆ.—2 ಕೊರಿಂಥ 6:14-17.
25. ಸುಳ್ಳು ಧರ್ಮದೊಂದಿಗೆ ವ್ಯಕ್ತಿಯೊಬ್ಬನಿಗೆ ಇರಬಹುದಾದ ಯಾವುದೇ ಸಂಬಂಧಗಳನ್ನು ಕಡಿದುಹಾಕುವುದರ ಜೊತೆಗೆ ಏನು ಅಗತ್ಯವಾಗಿದೆ?
25 ಹಾಗಿದ್ದರೂ, ಮಹಾ ಬಾಬೆಲಿನಿಂದ ಓಡಿಹೋಗುವುದು, ಸುಳ್ಳು ಧರ್ಮವನ್ನು ಪರಿತ್ಯಜಿಸುವುದಕ್ಕಿಂತ ಬಹಳ ಹೆಚ್ಚನ್ನು ಒಳಗೊಳ್ಳುತ್ತದೆ. ಒಂದು ರಾಜ್ಯ ಸಭಾಗೃಹದಲ್ಲಿ ಕೆಲವೊಂದು ಕೂಟಗಳನ್ನು ಹಾಜರಾಗುವುದಕ್ಕಿಂತ ಅಥವಾ ಸುವಾರ್ತೆಯನ್ನು ಸಾರುತ್ತಾ, ಕ್ಷೇತ್ರ ಸೇವೆಯಲ್ಲಿ ತಿಂಗಳಿಗೆ ಒಮ್ಮೆಯೊ ಎರಡು ಬಾರಿಯೊ ಹೋಗುವುದಕ್ಕಿಂತ ಹೆಚ್ಚಿನದ್ದು ಅದರಲ್ಲಿ ಒಳಗೂಡಿರುತ್ತದೆ. ವ್ಯಕ್ತಿಯೊಬ್ಬನು ಶಾರೀರಿಕವಾಗಿ ಮಹಾ ಬಾಬೆಲಿನ ಹೊರಗಿರಬಹುದು, ಆದರೆ ಅವನು ನಿಜವಾಗಿಯೂ ಅದನ್ನು ಹಿಂದೆ ಬಿಟ್ಟುಬಿಟ್ಟಿದ್ದಾನೊ? ಯಾವುದರ ಪ್ರಮುಖ ಭಾಗವು ಮಹಾ ಬಾಬೆಲ್ ಆಗಿದೆಯೊ, ಆ ಲೋಕದಿಂದ ಅವನು ತನ್ನನ್ನು ಬೇರ್ಪಡಿಸಿಕೊಂಡಿದ್ದಾನೊ? ಅದರ ಆತ್ಮವನ್ನು—ದೇವರ ನೀತಿಯ ಮಟ್ಟಗಳನ್ನು ಕಡೆಗಣಿಸುವ ಆತ್ಮವನ್ನು—ಪ್ರತಿಬಿಂಬಿಸುವ ಆ ವಿಷಯಗಳಿಗೆ ಅವನಿನ್ನೂ ಅಂಟಿಕೊಂಡಿದ್ದಾನೊ? ಲೈಂಗಿಕ ನೈತಿಕತೆ ಹಾಗೂ ವೈವಾಹಿಕ ನಂಬಿಗಸ್ತಿಕೆಯನ್ನು ಅವನು ಲಘುವಾಗಿ ಎಣಿಸುತ್ತಾನೊ? ಆತ್ಮಿಕ ಅಭಿರುಚಿಗಳಿಗಿಂತ ಹೆಚ್ಚಾಗಿ ಅವನು ವೈಯಕ್ತಿಕ ಹಾಗೂ ಪ್ರಾಪಂಚಿಕ ಅಭಿರುಚಿಗಳಿಗೆ ಒತ್ತನ್ನು ನೀಡುತ್ತಾನೊ? ವಿಷಯಗಳ ಈ ವ್ಯವಸ್ಥೆಯಿಂದ ಪ್ರಭಾವಿಸಲ್ಪಡುವಂತೆ ಅವನು ತನ್ನನ್ನು ಬಿಟ್ಟುಕೊಡಬಾರದು.—ಮತ್ತಾಯ 6:24; 1 ಪೇತ್ರ 4:3, 4.
ಯಾವ ವಿಷಯವೂ ನಿಮ್ಮ ಪಲಾಯನವನ್ನು ತಡೆಯದಿರಲಿ!
26. ಪಲಾಯನವನ್ನು ಕೇವಲ ಆರಂಭಿಸುವುದಕ್ಕಲ್ಲ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಯಾವುದು ನಮಗೆ ಸಹಾಯ ಮಾಡುವುದು?
26 ಸುರಕ್ಷಿತತೆಗೆ ಮಾಡಲ್ಪಡುವ ನಮ್ಮ ಪಲಾಯನದಲ್ಲಿ, ಹಿಂದೆ ಬಿಟ್ಟುಬಂದಿರುವ ವಿಷಯಗಳಿಗಾಗಿ ನಾವು ಹಾತೊರೆಯದೇ ಇರುವುದು ಅತ್ಯಗತ್ಯವಾಗಿದೆ. (ಲೂಕ 9:62) ದೇವರ ರಾಜ್ಯ ಮತ್ತು ಆತನ ನೀತಿಯ ಮೇಲೆ ನಾವು ನಮ್ಮ ಮನಸ್ಸು ಹಾಗೂ ಹೃದಯಗಳನ್ನು ದೃಢವಾಗಿ ಭದ್ರಪಡಿಸುವ ಅಗತ್ಯವಿದೆ. ಯೆಹೋವನು ಇಂತಹ ಒಂದು ನಂಬಿಗಸ್ತ ಮಾರ್ಗವನ್ನು ಆಶೀರ್ವದಿಸುವನೆಂಬ ಭರವಸೆಯೊಂದಿಗೆ, ಇವುಗಳನ್ನು ಪ್ರಥಮವಾಗಿ ಹುಡುಕುವ ಮೂಲಕ ನಮ್ಮ ನಂಬಿಕೆಯನ್ನು ನಾವು ಪ್ರದರ್ಶಿಸಲು ನಿಶ್ಚಯಮಾಡಿಕೊಂಡಿದ್ದೇವೊ? (ಮತ್ತಾಯ 6:31-33) ಲೋಕ ದೃಶ್ಯದ ಮೇಲೆ ಆಗಲಿರುವ ಮಹತ್ವದ ಬೆಳವಣಿಗೆಗಳ ಅನಾವರಣಗೊಳ್ಳುವಿಕೆಯನ್ನು ನಾವು ಆತುರದಿಂದ ಕಾದುಕೊಂಡಿರುವ ಹಾಗೆ, ನಮ್ಮ ಶಾಸ್ತ್ರಾಧಾರಿತವಾದ ನಿಶ್ಚಿತಾಭಿಪ್ರಾಯಗಳು ಆ ಗುರಿಯ ಕಡೆಗೆ ನಮ್ಮನ್ನು ಪ್ರೇರಿಸಬೇಕು.
27. ಇಲ್ಲಿ ಕೇಳಲ್ಪಟ್ಟಂತಹ ಪ್ರಶ್ನೆಗಳ ಕುರಿತು ಗಂಭೀರವಾಗಿ ಯೋಚಿಸುವುದು ಏಕೆ ಪ್ರಾಮುಖ್ಯವಾಗಿದೆ?
27 ದೈವಿಕ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯು, ಮಹಾ ಬಾಬೆಲಿನ ನಾಶನದೊಂದಿಗೆ ಆರಂಭಿಸುವುದು. ಸುಳ್ಳು ಧರ್ಮದ ಜಾರಸ್ತ್ರೀಯಂತಹ ಸಾಮ್ರಾಜ್ಯವು ನಿತ್ಯಕ್ಕೂ ಅಸ್ತಿತ್ವದಿಂದ ಅಳಿಸಲ್ಪಡುವುದು. ಆ ಸಮಯವು ಬಹಳ ಹತ್ತಿರವಿದೆ! ಬಹು ಮುಖ್ಯವಾದ ಆ ಸಮಯವು ಆಗಮಿಸುವಾಗ, ವ್ಯಕ್ತಿಗಳೋಪಾದಿ ಯೆಹೋವನ ಮುಂದೆ ನಮ್ಮ ನಿಲುವು ಏನಾಗಿರುವುದು? ಮತ್ತು ಮಹಾ ಸಂಕಟದ ಪರಮಾವಧಿಯಲ್ಲಿ, ಸೈತಾನನ ದುಷ್ಟ ವ್ಯವಸ್ಥೆಯ ಉಳಿದ ಭಾಗವು ನಾಶಗೊಳಿಸಲ್ಪಡುವಾಗ, ಯಾವ ಪಕ್ಷದಲ್ಲಿ ನಾವು ಕಂಡುಕೊಳ್ಳಲ್ಪಡುವೆವು? ಬೇಕಾದ ಕ್ರಿಯೆಯನ್ನು ನಾವು ಈಗ ಮಾಡುವುದಾದರೆ, ನಮ್ಮ ಸುರಕ್ಷಿತತೆಯು ಭದ್ರಗೊಳಿಸಲ್ಪಟ್ಟಿದೆ. ಯೆಹೋವನು ನಮಗೆ ಹೇಳುವುದು: “ನನ್ನ ಮಾತಿಗೆ ಕಿವಿಗೊಡುವವನಾದರೋ . . . ಸುರಕ್ಷಿತನಾಗಿರುವನು.” (ಜ್ಞಾನೋಕ್ತಿ 1:33) ಈ ವ್ಯವಸ್ಥೆಯ ಸಮಾಪ್ತಿಯಲ್ಲಿ ಯೆಹೋವನಿಗೆ ನಿಷ್ಠೆಯಿಂದ ಹಾಗೂ ಹರ್ಷಭರಿತರಾಗಿ ಸೇವೆಸಲ್ಲಿಸಲು ಮುಂದುವರಿಯುವ ಮೂಲಕ, ಅನಂತವಾಗಿ ಯೆಹೋವನಿಗೆ ಸೇವೆ ಸಲ್ಲಿಸಲು ನಾವು ಅರ್ಹರಾಗಬಹುದು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಸಂಪುಟ 1, ಪುಟಗಳು 634-5ನ್ನು ನೋಡಿರಿ.
ನಿಮಗೆ ನೆನಪಿದೆಯೇ?
◻ ಆಧುನಿಕ ದಿನದ “ಅಸಹ್ಯ ವಸ್ತು” ಏನಾಗಿದೆ?
◻ ಯಾವ ಅರ್ಥದಲ್ಲಿ “ಅಸಹ್ಯ ವಸ್ತು . . . ಪವಿತ್ರಸ್ಥಾನದಲ್ಲಿ” ಇದೆ?
◻ ಸುರಕ್ಷಿತತೆಗೆ ಮಾಡುವ ಪಲಾಯನದಲ್ಲಿ ಈಗ ಏನು ಒಳಗೊಂಡಿದೆ?
◻ ಅಂತಹ ಕ್ರಿಯೆಯು ಏಕೆ ಜರೂರಿಯದ್ದಾಗಿದೆ?
[ಪುಟ 16 ರಲ್ಲಿರುವ ಚಿತ್ರ]
ಬದುಕಿ ಉಳಿಯಲು, ಯೇಸುವಿನ ಹಿಂಬಾಲಕರು ತಡಮಾಡದೆ ಪಲಾಯನಗೈಯಬೇಕಿತ್ತು