ಯೋಹಾನನಿಗೆ ಕೊಟ್ಟ ಪ್ರಕಟನೆ
17 ಏಳು ಬಟ್ಟಲುಗಳನ್ನ ಹಿಡಿದಿದ್ದ ಏಳು ದೇವದೂತರಲ್ಲಿ ಒಬ್ಬ+ ನನ್ನ ಹತ್ರ ಬಂದು ಹೀಗೆ ಹೇಳಿದ: “ಬಾ, ನೀರಿನ ಮೇಲೆ ಕೂತಿರೋ ಆ ಪ್ರಸಿದ್ಧ ವೇಶ್ಯೆಗೆ ಯಾವ ತೀರ್ಪಾಗುತ್ತೆ ಅಂತ ನಿನಗೆ ತೋರಿಸ್ತೀನಿ.+ 2 ಭೂಮಿಯ ರಾಜರು ಅವಳ ಜೊತೆ ಲೈಂಗಿಕ ಅನೈತಿಕತೆ* ಮಾಡಿದ್ದಾರೆ.+ ಅಷ್ಟೇ ಅಲ್ಲ, ಭೂಮಿಯಲ್ಲಿರೋ ಜನ್ರು ಅವಳ ಲೈಂಗಿಕ ಅನೈತಿಕತೆ* ಅನ್ನೋ ದ್ರಾಕ್ಷಾಮದ್ಯ ಕುಡಿದು ಮತ್ತರಾಗಿದ್ದಾರೆ.”+
3 ಆ ದೇವದೂತ ಪವಿತ್ರಶಕ್ತಿಯಿಂದ ನನ್ನನ್ನ ಕಾಡಿಗೆ ಕರ್ಕೊಂಡು ಹೋದ. ಅಲ್ಲಿ ನಾನೊಬ್ಬ ಸ್ತ್ರೀಯನ್ನ ನೋಡ್ದೆ. ಅವಳು ಒಂದು ಕೆಂಪು ಕಾಡುಪ್ರಾಣಿ ಮೇಲೆ ಕೂತಿದ್ದಳು. ಆ ಪ್ರಾಣಿಯ ಮೈತುಂಬ ದೇವರಿಗೆ ಅವಮಾನ ಮಾಡೋ ಹೆಸ್ರುಗಳಿದ್ವು. ಅದಕ್ಕೆ ಏಳು ತಲೆ, ಹತ್ತು ಕೊಂಬು ಇತ್ತು. 4 ಆ ಸ್ತ್ರೀ ನೇರಳೆ+ ಮತ್ತು ಕೆಂಪು ಬಣ್ಣದ ಬಟ್ಟೆ ಹಾಕೊಂಡಿದ್ದಳು. ಅವಳು ಚಿನ್ನ, ದುಬಾರಿ ರತ್ನ ಮತ್ತು ಮುತ್ತುಗಳಿಂದ+ ಮಾಡಿದ ಒಡವೆಗಳನ್ನ ಹಾಕೊಂಡಿದ್ದಳು. ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು. ಅದ್ರಲ್ಲಿ ಎಲ್ಲ ಅಸಹ್ಯ ವಿಷ್ಯಗಳು, ಅವಳ ಲೈಂಗಿಕ ಅನೈತಿಕತೆಯಿಂದ* ಕೂಡಿದ್ದ ಅಶುದ್ಧ ವಿಷ್ಯಗಳು ತುಂಬಿದ್ವು. 5 ಅವಳ ಹಣೆ ಮೇಲೆ ಒಂದು ರಹಸ್ಯವಾದ ಹೆಸ್ರು ಬರೆದಿತ್ತು. ಆ ಹೆಸ್ರು ಏನಂದ್ರೆ “ಮಹಾ ಬಾಬೆಲ್. ವೇಶ್ಯೆಯರ ಮತ್ತು ಭೂಮಿಯಲ್ಲಿರೋ ಎಲ್ಲ ಅಸಹ್ಯ ವಸ್ತುಗಳ ತಾಯಿ.”+ 6 ಅವಳು ಪವಿತ್ರ ಜನ್ರ ರಕ್ತವನ್ನ, ಯೇಸುವಿನ ಸಾಕ್ಷಿಗಳ ರಕ್ತವನ್ನ ಕುಡಿದು ಅಮಲೇರಿ ಇರೋದನ್ನ ನಾನು ನೋಡ್ದೆ.+
ಅವಳನ್ನ ನೋಡಿದಾಗ ನನಗೆ ತುಂಬ ಆಶ್ಚರ್ಯ ಆಯ್ತು. 7 ಆಗ ಆ ದೇವದೂತ ನನಗೆ ಹೀಗೆ ಹೇಳಿದ: “ನೀನ್ಯಾಕೆ ಆಶ್ಚರ್ಯಪಡ್ತಾ ಇದ್ದೀಯಾ? ಆ ಸ್ತ್ರೀ ಬಗ್ಗೆ,+ ಆ ಸ್ತ್ರೀ ಕೂತಿರೋ ಏಳು ತಲೆ ಮತ್ತು ಹತ್ತು ಕೊಂಬಿನ ಕಾಡುಪ್ರಾಣಿ+ ಬಗ್ಗೆ ಇರೋ ರಹಸ್ಯವನ್ನ ನಾನು ನಿನಗೆ ಹೇಳ್ತೀನಿ. 8 ಅದೇನಂದ್ರೆ ನೀನು ನೋಡಿದ ಆ ಕಾಡುಪ್ರಾಣಿ ಈ ಮುಂಚೆ ಇತ್ತು. ಈಗ ಇಲ್ಲ. ಆದ್ರೆ ಬೇಗನೆ ಅಗಾಧ ಸ್ಥಳದಿಂದ+ ಮೇಲೆ ಬರುತ್ತೆ. ಆಮೇಲೆ ಅದು ನಾಶ ಆಗುತ್ತೆ. ಭೂಮಿಯಲ್ಲಿರೋ ಜನ ಅಂದ್ರೆ ಲೋಕ ಹುಟ್ಟಿದಾಗಿಂದ ಯಾರ ಹೆಸ್ರನ್ನ ಜೀವಪುಸ್ತಕದಲ್ಲಿ ಬರೆದಿಲ್ಲವೋ+ ಅವರು ಆ ಕಾಡುಪ್ರಾಣಿ ಈ ಮುಂಚೆ ಇದ್ದಿದ್ದನ್ನ, ಆಮೇಲೆ ಇಲ್ಲದೇ ಹೋಗಿದ್ದನ್ನ ಮತ್ತು ಆಮೇಲೆ ಮತ್ತೆ ಬರೋದನ್ನ ನೋಡಿ ಆಶ್ಚರ್ಯಪಡ್ತಾರೆ.
9 ಇದನ್ನ ಅರ್ಥ ಮಾಡ್ಕೊಳ್ಳೋಕೆ ಬುದ್ಧಿ ಬೇಕು. ಆ ಏಳು ತಲೆಗಳು+ ಆ ಸ್ತ್ರೀ ಕೂತಿರೋ ಆ ಏಳು ಬೆಟ್ಟಗಳನ್ನ ಸೂಚಿಸುತ್ತೆ. 10 ಏಳು ರಾಜರು ಇದ್ದಾರೆ. ಅವ್ರಲ್ಲಿ ಐದು ರಾಜರು ಬಿದ್ದುಹೋಗಿದ್ದಾರೆ, ಒಬ್ಬ ರಾಜ ಈಗ ಇದ್ದಾನೆ, ಮತ್ತೊಬ್ಬ ರಾಜ ಇನ್ನೂ ಬಂದಿಲ್ಲ, ಆದ್ರೆ ಅವನು ಬಂದಾಗ ಅವನು ಸ್ವಲ್ಪ ಸಮಯ ಮಾತ್ರ ಇರ್ತಾನೆ. 11 ಈ ಮುಂಚೆ ಇದ್ದು ಈಗ ಇಲ್ಲದೇ ಇರೋ ಆ ಕಾಡುಪ್ರಾಣಿಯೇ+ ಎಂಟನೇ ರಾಜ. ಆದ್ರೆ ಅದು ಆ ಏಳು ರಾಜರ ಒಳಗಿಂದ ಹುಟ್ಟುತ್ತೆ. ಕೊನೆಗೆ ಅದು ನಾಶ ಆಗುತ್ತೆ.
12 ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ಅಧಿಕಾರಕ್ಕೆ ಬರದ ಹತ್ತು ರಾಜರನ್ನ ಸೂಚಿಸುತ್ತೆ. ಆದ್ರೆ ಅವ್ರಿಗೆ ಆ ಕಾಡುಪ್ರಾಣಿ ಜೊತೆ ಒಂದು ತಾಸು ರಾಜರಾಗಿ ಆಳೋ ಅಧಿಕಾರ ಸಿಗುತ್ತೆ. 13 ಈ ಹತ್ತೂ ರಾಜರ ಗುರಿ ಒಂದೇ ಆಗಿರೋದ್ರಿಂದ ಅವರು ತಮ್ಮ ಶಕ್ತಿ ಮತ್ತು ಅಧಿಕಾರವನ್ನ ಆ ಕಾಡುಪ್ರಾಣಿಗೆ ಕೊಡ್ತಾರೆ. 14 ಆ ಹತ್ತು ರಾಜರು ಕುರಿಮರಿ+ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ ಒಡೆಯರ ಒಡೆಯನೂ, ರಾಜರ ರಾಜನೂ+ ಆಗಿರೋದ್ರಿಂದ ಅವ್ರನ್ನ ಸೋಲಿಸ್ತಾನೆ.+ ಅಷ್ಟೇ ಅಲ್ಲ, ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ ಕುರಿಮರಿ ಜೊತೆ ಗೆಲ್ತಾರೆ.”+
15 ದೇವದೂತ ನನಗೆ ಹೀಗೆ ಹೇಳಿದ: “ಆ ವೇಶ್ಯೆ ಕೂತಿದ್ದ ನೀರನ್ನ ನೀನು ನೋಡ್ದೆ. ಆ ನೀರು ಜನ್ರನ್ನ, ದೇಶಗಳನ್ನ ಮತ್ತು ಭಾಷೆಗಳನ್ನ ಸೂಚಿಸುತ್ತೆ.+ 16 ನೀನು ನೋಡಿದ ಆ ಹತ್ತು ಕೊಂಬುಗಳು+ ಮತ್ತು ಆ ಕಾಡುಪ್ರಾಣಿ+ ಆ ವೇಶ್ಯೆಯನ್ನ+ ದ್ವೇಷಿಸಿ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಬಟ್ಟೆ ತೆಗೆದುಹಾಕಿ ಅವಳ ಮಾಂಸವನ್ನ ತಿಂದು ಬೆಂಕಿಯಿಂದ ಅವಳನ್ನ ಪೂರ್ತಿಯಾಗಿ ಸುಟ್ಟು ಹಾಕುತ್ತೆ.+ 17 ಯಾಕಂದ್ರೆ ದೇವರು ತನ್ನ ಯೋಚ್ನೆಯನ್ನ ಅವ್ರ ತಲೆಗೆ ಹಾಕ್ತಾನೆ.+ ಆಗ ದೇವರ ಗುರಿನೇ ಅವ್ರ ಗುರಿ ಆಗುತ್ತೆ. ಅದೇನಂದ್ರೆ ದೇವರು ಹೇಳಿದ ಪ್ರಕಾರ ಆಗೋ ತನಕ ದೇವರ ಮಾತುಗಳು ನಿಜ ಆಗೋ ತನಕ ಅವರು ತಮ್ಮ ಎಲ್ಲ ಅಧಿಕಾರವನ್ನ ಆ ಕಾಡುಪ್ರಾಣಿಗೆ ಕೊಡ್ತಾರೆ.+ 18 ನೀನು ನೋಡಿದ ಆ ಸ್ತ್ರೀ+ ಮಹಾ ಪಟ್ಟಣವನ್ನ ಸೂಚಿಸ್ತಾಳೆ. ಆ ಮಹಾ ಪಟ್ಟಣ ಭೂಮಿಯ ರಾಜರನ್ನ ಆಳುತ್ತೆ.”