“ಸಂತೋಷದ ದೇವರ” ಆರಾಧಕರು ಸಂತೋಷಿತರು
“ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು.”—ಕೀರ್ತ. 144:15.
1. ಯೆಹೋವನ ಸಾಕ್ಷಿಗಳು ಸಂತೋಷವಾಗಿರಲು ಕಾರಣ ಏನು? (ಲೇಖನದ ಆರಂಭದ ಚಿತ್ರ ನೋಡಿ.)
ಯೆಹೋವನ ಸಾಕ್ಷಿಗಳು ಸಂತೋಷವಾಗಿರುವ ಜನರು. ಅವರು ಸಭೆಯಲ್ಲಾಗಲಿ, ಸಮ್ಮೇಳನದಲ್ಲಾಗಲಿ, ಪಾರ್ಟಿಯಲ್ಲಾಗಲಿ ಒಟ್ಟಿಗಿರುವಾಗೆಲ್ಲಾ ಮಾತಾಡುತ್ತಾ ನಗುನಗುತ್ತಾ ಇರುತ್ತಾರೆ. ಅವರು ಇಷ್ಟು ಸಂತೋಷವಾಗಿರಲು ಕಾರಣ ಏನು? ಅವರು ‘ಸಂತೋಷದ ದೇವರಾದ’ ಯೆಹೋವನ ಬಗ್ಗೆ ತಿಳುಕೊಂಡಿದ್ದಾರೆ. ಆತನನ್ನು ಆರಾಧಿಸುತ್ತಾರೆ ಮತ್ತು ಆತನಂತೆ ನಡೆಯಲು ಪ್ರಯತ್ನಿಸುತ್ತಾರೆ. (1 ತಿಮೊ. 1:11; ಕೀರ್ತ. 16:11) ಯೆಹೋವನು ಸಂತೋಷದ ಮೂಲನಾಗಿದ್ದಾನೆ. ನಾವು ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಸಂತೋಷವಾಗಿರಲು ಅನೇಕ ವಿಷಯಗಳನ್ನು ಕೊಟ್ಟಿದ್ದಾನೆ.—ಧರ್ಮೋ. 12:7; ಪ್ರಸಂ. 3:12, 13.
2, 3. (ಎ) ಸಂತೋಷವಾಗಿರುವುದು ಅಂದರೆ ಏನು? (ಬಿ) ಕೆಲವೊಮ್ಮೆ ಸಂತೋಷವಾಗಿರಲು ಯಾಕೆ ಕಷ್ಟವಾಗುತ್ತದೆ?
2 ನಿಮ್ಮ ವಿಷಯದಲ್ಲಿ ಏನು? ನೀವು ಸಂತೋಷವಾಗಿದ್ದೀರಾ? ಸಂತೋಷವಾಗಿರುವುದು ಅಂದರೆ ಮನಸ್ಸು ನಿರಾಳವಾಗಿರುವುದು, ಇರುವುದರಲ್ಲೇ ತೃಪ್ತಿಯಿಂದ ಇರುವುದು ಅಥವಾ ತುಂಬ ಖುಷಿಯಾಗಿರುವುದು. ಯೆಹೋವನ ಜೊತೆ ಒಳ್ಳೇ ಸಂಬಂಧ ಇರುವವರು ನಿಜವಾಗಿಯೂ ಸಂತೋಷವಾಗಿರುತ್ತಾರೆ ಎಂದು ಬೈಬಲ್ ತೋರಿಸುತ್ತದೆ. ಆದರೆ ಇಂದಿನ ಲೋಕದಲ್ಲಿ ಸಂತೋಷವಾಗಿರುವುದು ಕಷ್ಟ. ಯಾಕೆ?
3 ಒತ್ತಡದ ಸನ್ನಿವೇಶಗಳು ಎದುರಾಗುವುದರಿಂದ ಸಂತೋಷವಾಗಿರಲು ಕಷ್ಟವಾಗುತ್ತದೆ. ನಮ್ಮ ಆಪ್ತರು ತೀರಿಕೊಂಡಾಗ ಅಥವಾ ಅವರಿಗೆ ಬಹಿಷ್ಕಾರ ಆದಾಗ ನಮಗೆ ಕಷ್ಟವಾಗುತ್ತದೆ. ವಿವಾಹ ವಿಚ್ಛೇದನ ಆದಾಗ ಅಥವಾ ಕೆಲಸ ಕಳಕೊಂಡಾಗ ಸಂತೋಷ ಮಾಯವಾಗುತ್ತದೆ. ಮನೆಯಲ್ಲಿ ಯಾವಾಗಲೂ ಜಗಳ ಆಗುತ್ತಿದ್ದರೆ ಸಂತೋಷವಾಗಿರಲು ಕಷ್ಟವಾಗುತ್ತದೆ. ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಬೇರೆಯವರು ನಮಗೆ ಗೇಲಿಮಾಡುವಾಗ ಅಥವಾ ನಾವು ಯೆಹೋವನನ್ನು ಆರಾಧಿಸುತ್ತಿರುವುದಕ್ಕಾಗಿ ನಮ್ಮನ್ನು ಹಿಂಸಿಸಿ ಜೈಲಿಗೆ ಹಾಕುವಾಗ ಕಷ್ಟವಾಗುತ್ತದೆ. ನಮ್ಮ ಆರೋಗ್ಯ ಹಾಳಾಗುತ್ತಿರುವಾಗ, ಏನಾದರೂ ಗಂಭೀರ ಕಾಯಿಲೆ ಬಂದಾಗ ಅಥವಾ ಖಿನ್ನತೆಗೆ ಒಳಗಾದಾಗ ಸಂತೋಷವಾಗಿರಲು ಆಗಲ್ಲ. ಆದರೆ ನೆನಪಿಡಿ, ‘ಸಂತೋಷಭರಿತ ಏಕಾಧಿಪತಿಯಾದ’ ಯೇಸು ಕ್ರಿಸ್ತನಿಗೆ ಜನರನ್ನು ಸಾಂತ್ವನಗೊಳಿಸುವುದು ಮತ್ತು ಸಂತೋಷಗೊಳಿಸುವುದು ಇಷ್ಟ. (1 ತಿಮೊ. 6:15; ಮತ್ತಾ. 11:28-30) ಹಾಗಾಗಿ ನಾವು ಸಂತೋಷವಾಗಿರಲು ಬೇಕಾದ ಗುಣಗಳ ಬಗ್ಗೆ ಯೇಸು ಪರ್ವತ ಪ್ರಸಂಗದಲ್ಲಿ ಮಾತಾಡಿದನು. ಸೈತಾನನ ಈ ಲೋಕದಲ್ಲಿ ಕಷ್ಟಗಳ ಮಧ್ಯೆಯೂ ಸಂತೋಷವಾಗಿರಲು ಈ ಗುಣಗಳು ಸಹಾಯ ಮಾಡುತ್ತವೆ.
ಯೆಹೋವನೊಂದಿಗೆ ಆಪ್ತ ಸ್ನೇಹವಿದ್ದರೆ ಸಂತೋಷವಾಗಿರುತ್ತೇವೆ
4, 5. ನಾವು ಯಾವಾಗಲೂ ಸಂತೋಷವಾಗಿರಲು ಏನು ಮಾಡಬೇಕು?
4 ಯೇಸು ಹೇಳಿದ ಮೊದಲ ವಿಷಯ ತುಂಬ ಪ್ರಾಮುಖ್ಯವಾಗಿದೆ. ಆತನು ಹೇಳಿದ್ದೇನೆಂದರೆ, “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾ. 5:3) ನಮಗೆ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇದ್ದರೆ ನಾವು ಯೆಹೋವನ ಬಗ್ಗೆ ತಿಳಿದುಕೊಳ್ಳುತ್ತೇವೆ. ಆತನ ಸಹಾಯ ಮತ್ತು ಮಾರ್ಗದರ್ಶನ ಬೇಕಾಗಿದೆ ಎಂದು ಅರ್ಥಮಾಡಿಕೊಳ್ಳುತ್ತೇವೆ. ಬೈಬಲನ್ನು ಓದುತ್ತೇವೆ, ಆತನ ಆಜ್ಞೆಗಳನ್ನು ಪಾಲಿಸುತ್ತೇವೆ ಮತ್ತು ಆತನ ಆರಾಧನೆಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುತ್ತೇವೆ. ಈ ವಿಷಯಗಳನ್ನು ಮಾಡುವುದರಿಂದ ನಮಗೆ ಸಂತೋಷ ಸಿಗುತ್ತದೆ. ದೇವರು ಮಾಡಿರುವ ವಾಗ್ದಾನಗಳು ಬೇಗ ನೆರವೇರುತ್ತವೆ ಎಂಬ ನಮ್ಮ ನಂಬಿಕೆ ಬಲವಾಗುತ್ತದೆ. ಬೈಬಲ್ ತಿಳಿಸುವ “ಸಂತೋಷಕರವಾದ ನಿರೀಕ್ಷೆ” ನಮಗೆ ಪ್ರೋತ್ಸಾಹ ನೀಡುತ್ತದೆ.—ತೀತ 2:13.
5 ನಮಗೆಷ್ಟೇ ಕಷ್ಟ ಬಂದರೂ ನಾವು ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಯೆಹೋವನೊಂದಿಗಿರುವ ನಮ್ಮ ಸ್ನೇಹವನ್ನು ಬಲಪಡಿಸುತ್ತಾ ಇರಬೇಕು. ಅಪೊಸ್ತಲ ಪೌಲ ಹೀಗೆ ಬರೆದನು: “ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.” (ಫಿಲಿ. 4:4) ಯೆಹೋವನೊಂದಿಗೆ ಆಪ್ತ ಸ್ನೇಹಿತರಾಗಬೇಕೆಂದರೆ ನಮ್ಮಲ್ಲಿ ದೈವಿಕ ವಿವೇಕ ಇರಬೇಕು. ದೇವರ ವಾಕ್ಯ ಹೇಳುವುದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”—ಜ್ಞಾನೋ. 3:13, 18.
6. ನಾವು ಸದಾ ಸಂತೋಷವಾಗಿರಲು ಇನ್ನೂ ಏನು ಮಾಡಬೇಕು?
6 ನಾವು ಸದಾ ಸಂತೋಷವಾಗಿ ಇರಬೇಕೆಂದರೆ ಬೈಬಲಲ್ಲಿ ಓದಿದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುತ್ತಾ ಇರಬೇಕು. ಯೇಸು ಈ ಪ್ರಾಮುಖ್ಯವಾದ ವಿಷಯವನ್ನು ಹೀಗೆ ಒತ್ತಿಹೇಳಿದನು: “ನೀವು ಈ ವಿಷಯಗಳನ್ನು ತಿಳಿದು ಅವುಗಳನ್ನು ಕೈಕೊಂಡು ನಡೆಯುವುದಾದರೆ ಸಂತೋಷಿತರು.” (ಯೋಹಾ. 13:17; ಯಾಕೋಬ 1:25 ಓದಿ.) ಹೀಗೆ ಮಾಡಿದರೆ ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಮತ್ತು ಎಂದೆಂದಿಗೂ ಸಂತೋಷವಾಗಿರಲು ಸಾಧ್ಯವಾಗುತ್ತದೆ. ಆದರೆ ಸಂತೋಷವನ್ನು ಕಿತ್ತುಕೊಳ್ಳುವ ವಿಷಯಗಳು ನಮ್ಮನ್ನು ಸುತ್ತಿಕೊಂಡಿರುವಾಗ ನಾವು ಸಂತೋಷವಾಗಿರಲು ಹೇಗೆ ತಾನೇ ಸಾಧ್ಯ? ಅದನ್ನು ತಿಳಿಯಲು ಯೇಸು ಪರ್ವತ ಪ್ರಸಂಗದಲ್ಲಿ ಹೇಳಿದ ಇನ್ನೊಂದು ವಿಷಯವನ್ನು ಈಗ ನೋಡೋಣ.
ಸಂತೋಷವಾಗಿರಲು ಬೇಕಾದ ಗುಣಗಳು
7. ದುಃಖಿಸುವವರು ಸಂತೋಷವಾಗಿರಲು ಹೇಗೆ ಸಾಧ್ಯ?
7 “ದುಃಖಿಸುವವರು ಸಂತೋಷಿತರು; ಅವರಿಗೆ ಸಾಂತ್ವನ ದೊರೆಯುವುದು.” (ಮತ್ತಾ. 5:4) ‘ಒಬ್ಬನು ದುಃಖದಲ್ಲಿರುವಾಗ ಹೇಗೆ ತಾನೇ ಸಂತೋಷವಾಗಿರಲು ಆಗುತ್ತದೆ?’ ಎಂದು ನಾವು ಯೋಚಿಸಬಹುದು. ಇಲ್ಲಿ ಯೇಸು ಕ್ರಿಸ್ತನು, ದುಃಖದಲ್ಲಿರುವ ಎಲ್ಲಾ ಜನರ ಬಗ್ಗೆ ಹೇಳುತ್ತಿಲ್ಲ. ಯಾಕೆಂದರೆ ‘ನಿಭಾಯಿಸಲು ಕಷ್ಟಕರವಾದ ಈ ಕಡೇ ದಿವಸಗಳಲ್ಲಿ’ ಒತ್ತಡದ ಕಾರಣದಿಂದಾಗಿ ಅನೇಕ ಕೆಟ್ಟ ಜನರು ಸಹ ದುಃಖದಲ್ಲಿ ಅಥವಾ ಬೇಸರದಲ್ಲಿ ಇರಬಹುದು. (2 ತಿಮೊ. 3:1) ಇಂಥವರು ಯೆಹೋವನ ಬಗ್ಗೆ ಯೋಚಿಸುವುದನ್ನು ಬಿಟ್ಟು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇಲ್ಲ. ಇದರಿಂದಾಗಿ ಅವರು ಜೀವನದಲ್ಲಿ ಸಂತೋಷವಾಗಿಲ್ಲ. ಹಾಗಾದರೆ ಯೇಸು ಇಲ್ಲಿ ಮಾತಾಡುತ್ತಿರುವುದು ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳ ಜನರ ಬಗ್ಗೆ. ಇವರು ಯಾಕೆ ದುಃಖಪಡುತ್ತಾರೆ? ಯಾಕೆಂದರೆ ತಮ್ಮ ಸುತ್ತಮುತ್ತ ಇರುವ ಜನರು ದೇವರನ್ನು ತಿರಸ್ಕರಿಸಿರುವುದನ್ನು ಮತ್ತು ದೇವರಿಗೆ ಇಷ್ಟವಿಲ್ಲದ ರೀತಿ ಜೀವನ ಮಾಡುತ್ತಿರುವುದನ್ನು ನೋಡುತ್ತಾರೆ. ಜೊತೆಗೆ ತಾವು ಪಾಪಿಗಳು ಎಂದು ಅರ್ಥಮಾಡಿಕೊಂಡಿದ್ದಾರೆ ಮತ್ತು ಪಾಪದಿಂದಾಗಿ ಲೋಕದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದು ನೋಡುತ್ತಾರೆ. ಹೀಗೆ ಯಥಾರ್ಥವಾಗಿ ದುಃಖಪಡುತ್ತಿರುವ ಜನರನ್ನು ಯೆಹೋವನು ಗಮನಿಸುತ್ತಾನೆ ಮತ್ತು ಅವರಿಗೆ ಬೇಕಾದ ಸಾಂತ್ವನವನ್ನು ತನ್ನ ವಾಕ್ಯದ ಮೂಲಕ ಕೊಡುತ್ತಾನೆ. ಅಷ್ಟೇ ಅಲ್ಲ ಅವರಿಗೆ ಸಂತೋಷ ಮತ್ತು ನಿತ್ಯಜೀವ ಕೊಡುತ್ತಾನೆ.—ಯೆಹೆಜ್ಕೇಲ 5:11; 9:4 ಓದಿ.
8. ಸಂತೋಷವಾಗಿರಲು ಸೌಮ್ಯಭಾವ ಹೇಗೆ ಸಹಾಯ ಮಾಡುತ್ತದೆ?
8 “ಸೌಮ್ಯಭಾವದವರು ಸಂತೋಷಿತರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾ. 5:5) ಸಂತೋಷವಾಗಿರಲು ಸೌಮ್ಯಭಾವ ಹೇಗೆ ಸಹಾಯ ಮಾಡುತ್ತದೆ? ಅನೇಕ ಜನರು ಒರಟಾಗಿ ಮತ್ತು ಕೋಪದಿಂದ ವರ್ತಿಸುವುದರಿಂದ ತುಂಬ ತೊಂದರೆಗಳು ಆಗುತ್ತವೆ. ಆದರೆ ಅವರು ಸತ್ಯ ಕಲಿತಾಗ ತಮ್ಮನ್ನೇ ಬದಲಾಯಿಸಿಕೊಂಡಿದ್ದಾರೆ ಮತ್ತು “ನೂತನ ವ್ಯಕ್ತಿತ್ವವನ್ನು” ಧರಿಸಿಕೊಂಡಿದ್ದಾರೆ. ಈಗ ಅವರು ‘ಸಹಾನುಭೂತಿಯ ಕೋಮಲ ಮಮತೆ, ದಯೆ, ದೀನಮನಸ್ಸು, ಸೌಮ್ಯಭಾವ, ದೀರ್ಘ ಸಹನೆ’ ಇಂಥ ಗುಣಗಳನ್ನು ತೋರಿಸುತ್ತಾರೆ. (ಕೊಲೊ. 3:9-12) ಇದರ ಫಲಿತಾಂಶವಾಗಿ ಅವರು ತಮ್ಮ ಜೀವನದಲ್ಲಿ ಶಾಂತಿಯಿಂದ ಇದ್ದಾರೆ, ಬೇರೆಯವರ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಂಡಿದ್ದಾರೆ ಮತ್ತು ಸಂತೋಷವಾಗಿದ್ದಾರೆ. ಅಷ್ಟೇ ಅಲ್ಲ ಇವರು ಮುಂದೆ “ಭೂಮಿಗೆ ಬಾಧ್ಯರಾಗುವರು” ಎಂದು ದೇವರ ವಾಕ್ಯ ಮಾತು ಕೊಡುತ್ತದೆ.—ಕೀರ್ತ. 37:8-10, 29.
9. (ಎ) ಸೌಮ್ಯಭಾವದವರು “ಭೂಮಿಗೆ ಬಾಧ್ಯರಾಗುವರು” ಎಂದು ಯೇಸು ಹೇಳಿದ ಮಾತಿನ ಅರ್ಥವೇನು? (ಬಿ) ‘ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ’ ಇರುವವರು ಯಾಕೆ ಸಂತೋಷವಾಗಿರುತ್ತಾರೆ?
9 ಸೌಮ್ಯಭಾವದವರು “ಭೂಮಿಗೆ ಬಾಧ್ಯರಾಗುವರು” ಎಂದು ಯೇಸು ಹೇಳಿದ ಮಾತಿನ ಅರ್ಥವೇನು? ಅಭಿಷಿಕ್ತರು ರಾಜರಾಗಿ ಮತ್ತು ಯಾಜಕರಾಗಿ ಭೂಮಿಯನ್ನು ಆಳುವಾಗ ಅದನ್ನು ಬಾಧ್ಯತೆಯಾಗಿ ಪಡೆಯುವರು. (ಪ್ರಕ. 20:6) ಸ್ವರ್ಗದ ನಿರೀಕ್ಷೆ ಇಲ್ಲದಂಥ ಕೋಟ್ಯಾಂತರ ಜನರಿಗೆ ಭೂಮಿ ಮೇಲೆ ಪರಿಪೂರ್ಣರಾಗಿ ಶಾಂತಿ-ಸಂತೋಷದ ಜೀವನ ನಡೆಸುತ್ತಾ ಸದಾಕಾಲ ಬದುಕುವ ಅವಕಾಶ ಸಿಗುತ್ತದೆ. ಹೀಗೆ ಅವರು ಭೂಮಿಗೆ ಬಾಧ್ಯರಾಗುವರು. “ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರು ಸಂತೋಷಿತರು” ಎಂದು ಯೇಸು ಯಾರ ಬಗ್ಗೆ ಹೇಳಿದನೋ ಆ ಜನರು ಇವರೇ. (ಮತ್ತಾ. 5:6) ಯೆಹೋವನು ಭೂಮಿಯಿಂದ ಕೆಟ್ಟತನವನ್ನು ತೆಗೆದುಹಾಕುವಾಗ ನೀತಿಗಾಗಿ ಇವರಿಗಿರುವ ಆಸೆ ನೆರವೇರುತ್ತದೆ. (2 ಪೇತ್ರ 3:13) ಹೊಸ ಲೋಕದಲ್ಲಿ ದುಷ್ಟ ಜನರ ಸುಳಿವೇ ಇಲ್ಲದಿರುವಾಗ ಈ ನೀತಿವಂತ ಜನರು ಸಂತೋಷವಾಗಿ ಇರುತ್ತಾರೆ ಮತ್ತು ಇವರು ಎಂದಿಗೂ ದುಃಖಿಸುವುದಿಲ್ಲ.—ಕೀರ್ತ. 37:17.
10. ಕರುಣೆಯುಳ್ಳವರು ಏನು ಮಾಡುತ್ತಾರೆ?
10 “ಕರುಣೆಯುಳ್ಳವರು ಸಂತೋಷಿತರು; ಅವರಿಗೆ ಕರುಣೆಯು ತೋರಿಸಲ್ಪಡುವುದು.” (ಮತ್ತಾ. 5:7) ಕರುಣೆಯುಳ್ಳವರು ಪ್ರೀತಿ, ಕೋಮಲಭಾವ ಮತ್ತು ಕನಿಕರ ತೋರಿಸುತ್ತಾರೆ. ಕಷ್ಟದಲ್ಲಿರುವವರನ್ನು ಕಂಡರೆ ಅವರಿಗೆ ಕರುಳು ಕಿತ್ತುಬರುತ್ತದೆ. ಆದರೆ ಕರುಣೆ ಕೇವಲ ಒಂದು ಭಾವನೆ ಅಲ್ಲ. ಕರುಣೆ ಇರುವ ವ್ಯಕ್ತಿ ಬೇರೆಯವರಿಗೆ ಸಹಾಯ ಮಾಡಲು ಮುಂದೆ ಬರುತ್ತಾನೆ ಎಂದು ಬೈಬಲ್ ಹೇಳುತ್ತದೆ.
11. ಸಮಾರ್ಯದವನ ಕುರಿತಾದ ದೃಷ್ಟಾಂತದಿಂದ ನಾವೇನು ಕಲಿಯಬಹುದು?
11 ಲೂಕ 10:30-37 ಓದಿ. ಕರುಣೆ ತೋರಿಸುವುದು ಅಂದರೆ ಏನೆಂದು ಅರ್ಥಮಾಡಿಕೊಳ್ಳಲು ಸಮಾರ್ಯದವನ ಬಗ್ಗೆ ಯೇಸು ಕೊಟ್ಟ ದೃಷ್ಟಾಂತ ಸಹಾಯ ಮಾಡುತ್ತದೆ. ಆ ಸಮಾರ್ಯದವನು ನಿಜವಾದ ನೆರೆಯವನಂತೆ ಸಹಾಯ ಮಾಡಿದನು. ಒಬ್ಬ ಬಡಪಾಯಿಯ ಜೀವ ಅಪಾಯದಲ್ಲಿರುವುದನ್ನು ನೋಡಿ ಅವನಿಗೆ ಕರುಳು ಕಿತ್ತುಬಂತು. ಅವನು ತನ್ನಿಂದಾದ ಸಹಾಯ ಮಾಡಲು ಮುಂದೆ ಬಂದನು. ಯೇಸು ಆ ದೃಷ್ಟಾಂತವನ್ನು ಹೇಳಿದ ಮೇಲೆ, ತನಗೆ ಪ್ರಶ್ನೆ ಕೇಳಿದ್ದ ವ್ಯಕ್ತಿಗೆ “ನೀನೂ ಹೋಗಿ ಅದರಂತೆಯೇ ಮಾಡುತ್ತಾ ಇರು” ಎಂದನು. ಆದ್ದರಿಂದ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನಾನು ಆ ಸಮಾರ್ಯದವನ ತರ ನಡಕೊಳ್ಳುತ್ತೇನಾ? ಬೇರೆಯವರು ಕಷ್ಟದಲ್ಲಿರುವುದನ್ನು ನೋಡುವಾಗ ಅವರಿಗೆ ಸಹಾಯ ಮಾಡಲು ನಾನು ಮುಂದೆ ಬರುತ್ತೇನಾ? ಸಭೆಯಲ್ಲಿರುವ ವಯಸ್ಸಾದವರಿಗೆ, ವಿಧವೆಯರಿಗೆ ಸಹಾಯ ಮಾಡುತ್ತೇನಾ? ಸತ್ಯದಲ್ಲಿ ತಬ್ಬಲಿಗಳಂತಿರುವ ಮಕ್ಕಳಿಗೆ ಸಹಾಯ ಮಾಡುತ್ತೇನಾ? “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡುತ್ತೇನಾ”?’—1 ಥೆಸ. 5:14; ಯಾಕೋ. 1:27.
12. ನಾವು ಬೇರೆಯವರಿಗೆ ಕರುಣೆ ತೋರಿಸುವಾಗ ನಮಗೆ ಹೇಗೆ ಸಂತೋಷ ಸಿಗುತ್ತದೆ?
12 ಕರುಣೆ ತೋರಿಸುವಾಗ ನಮಗೆ ಹೇಗೆ ಸಂತೋಷ ಸಿಗುತ್ತದೆ? ನಾವು ಕರುಣೆ ತೋರಿಸುವಾಗ ಕೊಡುವುದರಿಂದ ಸಿಗುವ ಸಂತೋಷ ನಮಗೆ ಸಿಗುತ್ತದೆ. ನಾವು ಕರುಣೆ ತೋರಿಸುವುದನ್ನು ನೋಡಿ ಯೆಹೋವನಿಗೆ ಸಂತೋಷವಾಗುತ್ತದೆ ಎಂದು ತಿಳಿದಾಗಲೂ ನಮಗೆ ಖುಷಿಯಾಗುತ್ತದೆ. (ಅ. ಕಾ. 20:35; ಇಬ್ರಿಯ 13:16 ಓದಿ.) ಕರುಣೆ ತೋರಿಸುವವರಿಗೆ ಯಾವ ಪ್ರತಿಫಲ ಸಿಗುತ್ತದೆ ಎಂದು ರಾಜ ದಾವೀದ ಹೇಳಿದ್ದು: “ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು.” (ಕೀರ್ತ. 41:1, 2) ನಾವು ಬೇರೆಯವರಿಗೆ ಕರುಣೆ, ಕನಿಕರ ತೋರಿಸುವಾಗ ಯೆಹೋವನು ನಮಗೆ ಕರುಣೆ ತೋರಿಸುತ್ತಾನೆ. ಇದರಿಂದ ನಾವು ಸದಾಕಾಲ ಸಂತೋಷವಾಗಿರುತ್ತೇವೆ.—ಯಾಕೋ. 2:13.
“ಹೃದಯದಲ್ಲಿ ಶುದ್ಧರಾಗಿರುವವರು” ಸಂತೋಷಿತರು
13, 14. ‘ಹೃದಯದಲ್ಲಿ ಶುದ್ಧರಾಗಿ ಇರುವುದು’ ಯಾಕೆ ಪ್ರಾಮುಖ್ಯ?
13 “ಹೃದಯದಲ್ಲಿ ಶುದ್ಧರಾಗಿರುವವರು ಸಂತೋಷಿತರು; ಅವರು ದೇವರನ್ನು ನೋಡುವರು” ಎಂದು ಯೇಸು ಹೇಳಿದನು. (ಮತ್ತಾ. 5:8) ಹೃದಯದಲ್ಲಿ ಶುದ್ಧರಾಗಿರಬೇಕಾದರೆ ನಮ್ಮ ಆಸೆಗಳು, ಆಲೋಚನೆಗಳು ಶುದ್ಧವಾಗಿರಬೇಕು. ಇದು ತುಂಬ ಪ್ರಾಮುಖ್ಯ. ಇಲ್ಲವಾದರೆ ಯೆಹೋವನು ನಮ್ಮ ಆರಾಧನೆಯನ್ನು ಸ್ವೀಕರಿಸುವುದಿಲ್ಲ.—2 ಕೊರಿಂಥ 4:2 ಓದಿ; 1 ತಿಮೊ. 1:5.
14 ಹೃದಯದಲ್ಲಿ ಶುದ್ಧರಾಗಿರುವವರಿಗೆ ಯೆಹೋವ ದೇವರ ಜೊತೆ ಒಳ್ಳೇ ಸಂಬಂಧ ಇರುತ್ತದೆ, ಸಂತೋಷ ಇರುತ್ತದೆ. ಯಾಕೆಂದರೆ “ತಮ್ಮ ನಿಲುವಂಗಿಗಳನ್ನು ತೊಳೆದುಕೊಳ್ಳುವವರು ಸಂತೋಷಿತರು” ಎಂದು ಯೆಹೋವನೇ ಹೇಳಿದ್ದಾನೆ. (ಪ್ರಕ. 22:14) ತಮ್ಮ ‘ನಿಲುವಂಗಿಗಳನ್ನು ತೊಳೆದುಕೊಳ್ಳುವುದು’ ಅಂದರೆ ಏನು? ಅಭಿಷಿಕ್ತರ ವಿಷಯದಲ್ಲಿ ಯೆಹೋವನು ಅವರನ್ನು ಶುದ್ಧರಾಗಿ ನೋಡುತ್ತಾನೆ ಎಂದರ್ಥ. ಆತನು ಅವರಿಗೆ ಸ್ವರ್ಗದಲ್ಲಿ ಅಮರತ್ವ ಕೊಡುತ್ತಾನೆ. ಅಲ್ಲಿ ಅವರು ಸದಾಕಾಲ ಸಂತೋಷವಾಗಿ ಇರುತ್ತಾರೆ. ಭೂಮಿಯ ಮೇಲೆ ಜೀವಿಸಲಿರುವ ಮಹಾ ಸಮೂಹದವರ ವಿಷಯದಲ್ಲಿ ಯೆಹೋವನು ಅವರನ್ನು ಸ್ನೇಹಿತರಾಗಿ ಸ್ವೀಕರಿಸಿದ್ದಾನೆ ಎಂದರ್ಥ. ಯಾಕೆಂದರೆ ಆತನು ಅವರನ್ನು ನೀತಿವಂತರೆಂದು ನೋಡುತ್ತಾನೆ. “ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದುಕೊಂಡು ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ.”—ಪ್ರಕ. 7:9, 13, 14.
15, 16. ಹೃದಯದಲ್ಲಿ ಶುದ್ಧರಾಗಿರುವವರು ಹೇಗೆ “ದೇವರನ್ನು ನೋಡುವರು”?
15 “ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು” ಎಂದು ಯೆಹೋವನು ಹೇಳಿದ್ದಾನೆ. (ವಿಮೋ. 33:20) ಹಾಗಾದರೆ ಹೃದಯದಲ್ಲಿ ಶುದ್ಧರಾಗಿರುವವರು ಹೇಗೆ “ದೇವರನ್ನು ನೋಡುವರು”? “ನೋಡು” ಎಂದು ಭಾಷಾಂತರವಾಗಿರುವ ಗ್ರೀಕ್ ಪದಕ್ಕೆ ಚಿತ್ರಿಸಿಕೊ, ಅರ್ಥಮಾಡಿಕೊ, ತಿಳಿದುಕೊ ಎಂಬ ಅರ್ಥವೂ ಇದೆ. ಹಾಗಾದರೆ “ದೇವರನ್ನು ನೋಡುವರು” ಎಂಬುದರ ಅರ್ಥ ಆತನು ಎಂಥ ವ್ಯಕ್ತಿ ಎಂದು ಅರ್ಥಮಾಡಿಕೊಳ್ಳುವರು, ಆತನಲ್ಲಿರುವ ಗುಣಗಳನ್ನು ಮಾನ್ಯಮಾಡುವರು ಎಂದಾಗುತ್ತದೆ. (ಎಫೆ. 1:18) ದೇವರ ಗುಣಗಳನ್ನು ಯೇಸು ಪರಿಪೂರ್ಣವಾಗಿ ಅನುಕರಿಸಿದ್ದರಿಂದ “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದನು.—ಯೋಹಾ. 14:7-9.
16 ಅಷ್ಟೇ ಅಲ್ಲ, ಯೆಹೋವನು ನಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ಯೋಚಿಸುವಾಗ ನಾವು ‘ದೇವರನ್ನು ನೋಡಿದಂತೆ’ ಆಗುತ್ತದೆ. (ಯೋಬ 42:5) ದೇವರ ದೃಷ್ಟಿಯಲ್ಲಿ ಶುದ್ಧವಾಗಿದ್ದು ನಿಷ್ಠೆ ತೋರಿಸುವವರು ಆತನು ಕೊಡಲಿರುವ ಆಶೀರ್ವಾದಗಳನ್ನು ತಮ್ಮ ಮನಸ್ಸಿನ ಕಣ್ಣಿಂದ ನೋಡಬಹುದು. ಅಭಿಷಿಕ್ತರು ಸ್ವರ್ಗಕ್ಕೆ ಹೋದಾಗ ಯೆಹೋವನನ್ನು ಕಣ್ಣಾರೆ ನೋಡುವರು.—1 ಯೋಹಾ. 3:2.
ಸಮಸ್ಯೆಗಳಿದ್ದರೂ ಸಂತೋಷವಾಗಿರಬಹುದು
17. ಶಾಂತಿ-ಸಮಾಧಾನದಿಂದ ಇರಲು ಮೊದಲ ಹೆಜ್ಜೆ ತೆಗೆದುಕೊಳ್ಳುವವರು ಯಾಕೆ ಸಂತೋಷವಾಗಿರುತ್ತಾರೆ?
17 “ಶಾಂತಿಶೀಲರು ಸಂತೋಷಿತರು” ಎಂದು ಯೇಸು ಹೇಳಿದನು. (ಮತ್ತಾ. 5:9) ಬೇರೆಯವರೊಂದಿಗೆ ಶಾಂತಿ-ಸಮಾಧಾನದಿಂದ ಇರಲು ನಾವೇ ಮೊದಲ ಹೆಜ್ಜೆ ತೆಗೆದುಕೊಂಡರೆ ಸಂತೋಷವಾಗಿರುತ್ತೇವೆ. “ನೀತಿಯ ಫಲದ ಬೀಜವು ಶಾಂತ ಪರಿಸ್ಥಿತಿಗಳಲ್ಲಿ ಶಾಂತಿಕರ್ತರಿಗಾಗಿ ಬಿತ್ತಲ್ಪಡುತ್ತದೆ” ಎಂದು ಯೇಸುವಿನ ಶಿಷ್ಯನಾದ ಯಾಕೋಬನು ಬರೆದಿದ್ದಾನೆ. (ಯಾಕೋ. 3:18) ಸಭೆಯಲ್ಲಿ ಅಥವಾ ಕುಟುಂಬದಲ್ಲಿ ನಮಗೆ ಯಾರೊಂದಿಗಾದರೂ ಮನಸ್ತಾಪವಿದ್ದರೆ ಅದನ್ನು ಬಗೆಹರಿಸಲು ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಳ್ಳಬೇಕು. ಆಗ ಯೆಹೋವನು ನಮಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. ಈ ಪವಿತ್ರಾತ್ಮ ಕ್ರೈಸ್ತ ಗುಣಗಳನ್ನು ತೋರಿಸಲು ನಮಗೆ ಸಹಾಯ ಮಾಡುತ್ತದೆ. ಇದರಿಂದ ನಾವು ಸಂತೋಷವಾಗಿರುತ್ತೇವೆ. ಒಬ್ಬರೊಂದಿಗೆ ಶಾಂತಿಯಿಂದಿರಲು ನಾವೇ ಮೊದಲ ಹೆಜ್ಜೆ ತೆಗೆದುಕೊಳ್ಳುವುದು ಎಷ್ಟು ಪ್ರಾಮುಖ್ಯ ಎಂದು ಯೇಸು ಒತ್ತಿಹೇಳಿದನು. ಆತನು ಹೇಳಿದ್ದೇನೆಂದರೆ, “ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.”—ಮತ್ತಾ. 5:23, 24.
18, 19. ಕ್ರೈಸ್ತರನ್ನು ಹಿಂಸಿಸಿದರೂ ಅವರು ಉಲ್ಲಾಸದಿಂದ ಇರಲು ಕಾರಣವೇನು?
18 “ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು.” ಯೇಸು ಹೇಳಿದ ಈ ಮಾತಿನ ಅರ್ಥವೇನು? ಯೇಸು ಮುಂದೆ ಏನು ಹೇಳುತ್ತಾನೋ ಅದರಲ್ಲಿ ಉತ್ತರವಿದೆ. “ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು” ಎಂದು ಆತನು ಹೇಳಿದನು. (ಮತ್ತಾ. 5:11, 12) ಅಪೊಸ್ತಲರು ಸುವಾರ್ತೆ ಸಾರುತ್ತಿರುವಾಗ ಅವರನ್ನು ಹೊಡೆದು ಸಾರಬಾರದೆಂದು ಆಜ್ಞೆ ಕೊಟ್ಟಾಗ, “ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು.” ಹೊಡೆತ ತಿನ್ನುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಯೇಸುವಿನ ಹೆಸರಿನ ನಿಮಿತ್ತ “ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ” ಸಂತೋಷಪಟ್ಟರು.—ಅ. ಕಾ. 5:41.
19 ಯೆಹೋವನ ಸಾಕ್ಷಿಗಳು ಇಂದು ಕೂಡ ಯೇಸುವಿನ ಹೆಸರಿನ ನಿಮಿತ್ತ ಹಿಂಸೆ ಅನುಭವಿಸುವಾಗ ಸಂತೋಷದಿಂದ ತಾಳಿಕೊಳ್ಳುತ್ತಾರೆ. (ಯಾಕೋಬ 1:2-4 ಓದಿ.) ಅಪೊಸ್ತಲರಂತೆ ನಾವೂ ಹಿಂಸೆಯನ್ನು, ಹೊಡೆತ ತಿನ್ನುವುದನ್ನು ಇಷ್ಟಪಡುವುದಿಲ್ಲ. ಆದರೆ ನಾವು ಯೆಹೋವನಿಗೆ ನಿಷ್ಠರಾಗಿದ್ದರೆ ಆತನು ಧೈರ್ಯ ಕೊಟ್ಟು ತಾಳಿಕೊಳ್ಳಲು ಸಹಾಯ ಮಾಡುತ್ತಾನೆ. ಹೆನ್ರಿಕ್ ಡಾರ್ನಿಕ್ ಮತ್ತು ಅವರ ಅಣ್ಣನಿಗೆ ಏನಾಯಿತೆಂದು ನೋಡಿ. 1944ರ ಆಗಸ್ಟ್ನಲ್ಲಿ ಅವರನ್ನು ಸೆರೆಶಿಬಿರಕ್ಕೆ ಹಾಕಲಾಯಿತು. ಅವರನ್ನು ಹಿಂಸೆಪಡಿಸುವವರು ಹೀಗೆ ಹೇಳಿದರು: “ನಾವೇನೇ ಮಾಡಿದರೂ ಅವರು ತಮ್ಮ ದೇವರನ್ನು ಬಿಟ್ಟುಕೊಡಲ್ಲ. ಹುತಾತ್ಮರಾಗಿ ಸಾಯುವುದೆಂದರೆ ಅವರಿಗೆ ಇಷ್ಟ.” ಸಹೋದರ ಹೆನ್ರಿಕ್ ಹೀಗೆ ವಿವರಿಸಿದರು: “ನನಗೆ ಹುತಾತ್ಮನಾಗಲು ಇಷ್ಟ ಇರಲಿಲ್ಲ. ಆದರೆ ಕಷ್ಟಗಳನ್ನು ಧೈರ್ಯದಿಂದ ತಾಳಿಕೊಂಡೆ ಮತ್ತು ಯೆಹೋವನಿಗೆ ನಿಷ್ಠೆಯಿಂದ ಇದ್ದೆ. ಇದರಿಂದ ನನಗೆ ತುಂಬ ಸಂತೋಷವಾಯಿತು. . . . ಹೃದಯಾಳದಿಂದ ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆ. ಆತನಿಗೆ ಹತ್ತಿರವಾಗಲು ಇದು ಸಹಾಯ ಮಾಡಿತು. ಯೆಹೋವನು ತನ್ನನ್ನು ನಂಬಿದವರ ಕೈಬಿಡಲ್ಲ ಎಂದು ರುಜುಪಡಿಸಿದನು.”
20. ‘ಸಂತೋಷದ ದೇವರನ್ನು’ ಆರಾಧಿಸಲು ನಮಗೆ ಯಾಕೆ ಸಂತೋಷವಾಗುತ್ತದೆ?
20 ‘ಸಂತೋಷದ ದೇವರಾದ’ ಯೆಹೋವನ ಅನುಗ್ರಹ ನಮ್ಮ ಮೇಲಿರುವಾಗ ನಮಗೆ ಯಾವುದೇ ಹಿಂಸೆ ಬಂದರೂ, ಕುಟುಂಬದ ವಿರೋಧವಿದ್ದರೂ, ಆರೋಗ್ಯ ಸರಿಯಿಲ್ಲದಿದ್ದರೂ, ವಯಸ್ಸಾಗುತ್ತಿದ್ದರೂ ನಾವು ಸಂತೋಷವಾಗಿರುತ್ತೇವೆ. (1 ತಿಮೊ. 1:11) ನಾವು ಸಂತೋಷದಿಂದಿರಲು ಇನ್ನೊಂದು ಕಾರಣವೇನೆಂದರೆ “ಸುಳ್ಳಾಡಲು ಸಾಧ್ಯವಿಲ್ಲದ” ದೇವರಾದ ಯೆಹೋವನು ಅನೇಕ ಅದ್ಭುತ ವಿಷಯಗಳನ್ನು ಮಾಡುತ್ತೇನೆಂದು ನಮಗೆ ಮಾತು ಕೊಟ್ಟಿದ್ದಾನೆ. (ತೀತ 1:2) ಯೆಹೋವನು ತಾನು ಕೊಟ್ಟಿರುವ ಮಾತುಗಳನ್ನು ನೆರವೇರಿಸಿದಾಗ ನಾವು ಪಟ್ಟ ಕಷ್ಟಗಳು ನಮಗೆ ನೆನಪಾಗಲ್ಲ. ಅದೂ ಅಲ್ಲದೆ, ಪರದೈಸಲ್ಲಿ ಜೀವನ ಎಷ್ಟು ಸುಂದರವಾಗಿರುತ್ತದೆಂದು ಮತ್ತು ನಾವಲ್ಲಿ ಎಷ್ಟು ಸಂತೋಷವಾಗಿ ಇರುತ್ತೇವೆಂದು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ. ಹೌದು ನಾವು ‘ಮಹಾಸೌಖ್ಯದಿಂದ ಆನಂದಿಸುವೆವು.’—ಕೀರ್ತ. 37:11.