ಅಧ್ಯಾಯ 111
ಕಡೇ ದಿನಗಳ ಸೂಚನೆ
ಇಷ್ಟರೊಳಗೆ ಮಂಗಳವಾರದ ಮಧ್ಯಾಹ್ನವಾಗಿತ್ತು. ಎಣ್ಣೇಮರಗಳ ಗುಡ್ಡದ ಮೇಲೆ ಕೂತುಕೊಂಡು ಯೇಸುವು ಕೆಳಗಡೆ ಇರುವ ದೇವಾಲಯವನ್ನು ನೋಡುತ್ತಿದ್ದಾಗ, ಪೇತ್ರ, ಯಾಕೋಬ, ಯೋಹಾನ ಮತ್ತು ಆಂದ್ರೆಯ ಅವನೊಡನೆ ಪ್ರತ್ಯೇಕವಾಗಿ ಬಂದರು. ದೇವಾಲಯದ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ ಎಂದು ಯೇಸು ಮುನ್ನುಡಿದ್ದರಿಂದ, ಅವರಿಗೆ ಅದರ ಬಗ್ಗೆ ಚಿಂತೆ ಇತ್ತು.
ಆದರೆ ಅವರು ಯೇಸುವನ್ನು ಸಮೀಪಿಸಿದಾಗ, ಅವರ ಮನಸ್ಸುಗಳಲ್ಲಿ ಅದಕ್ಕಿಂತಲೂ ಹೆಚ್ಚಿನದು ಇತ್ತು ಎಂದು ಭಾಸವಾಗುತ್ತದೆ. “ಮನುಷ್ಯ ಕುಮಾರನು ಪ್ರತ್ಯಕ್ಷನಾಗುವ” ಸಮಯದಲ್ಲಿ ಅವನ “ಸಾನಿಧ್ಯತೆಯ” ಕುರಿತು ಕೆಲವು ವಾರಗಳ ಹಿಂದೆ ಅವನು ಮಾತಾಡಿದ್ದನು. ಮತ್ತು ಇದರ ಮುಂಚಿನ ಒಂದು ಸಂದರ್ಭದಲ್ಲಿ, ಅವನು ಅವರಿಗೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಕುರಿತು ಹೇಳಿದ್ದನು. ಆದುದರಿಂದ ಅಪೊಸ್ತಲರು ಕುತೂಹಲಿಗಳಾಗಿದ್ದರು.
“ನಮಗೆ ಹೇಳು,” ಅವರು ಹೇಳುವದು, “ಅದು ಯಾವಾಗ [ಇದರ ಫಲಿತಾಂಶವಾಗಿ ಯೆರೂಸಲೇಮಿನ ಮತ್ತು ಅದರ ದೇವಾಲಯದ ನಾಶನವು] ಆಗುವದು, ನಿನ್ನ ಸಾನಿಧ್ಯತೆಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯೇನು?” ವಾಸ್ತವದಲ್ಲಿ ಅವರದ್ದು ಮೂರು-ಭಾಗಗಳಿರುವ ಒಂದು ಪ್ರಶ್ನೆಯಾಗಿತ್ತು. ಮೊದಲನೆಯದಾಗಿ, ಯೆರೂಸಲೇಮ್ ಮತ್ತು ಅದರ ದೇವಾಲಯದ ನಾಶನದ ಕುರಿತು, ಅನಂತರ ರಾಜ್ಯದ ಶಕ್ತಿಯಿಂದ ಯೇಸುವಿನ ಸಾನಿಧ್ಯತೆಯ ಕುರಿತು, ಮತ್ತು ಕೊನೆಗೆ ವಿಷಯಗಳ ಇಡೀ ವ್ಯವಸ್ಥೆಯ ಅಂತ್ಯದ ಕುರಿತು ಅವರು ತಿಳಿಯಲು ಬಯಸಿದ್ದರು.
ಅವನ ದೀರ್ಘವಾದ ಪ್ರತಿವರ್ತನೆಯಲ್ಲಿ, ಯೇಸುವು ಪ್ರಶ್ನೆಯ ಮೂರು ಭಾಗಗಳಿಗೂ ಉತ್ತರ ನೀಡುತ್ತಾನೆ. ಯೆಹೂದಿ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುತ್ತದೆಂದು ಸೂಚನೆಯೊಂದನ್ನು ಅವನು ಒದಗಿಸುತ್ತಾನೆ; ಆದರೆ ಅವನು ಅದಕ್ಕಿಂತಲೂ ಹೆಚ್ಚಿನದ್ದನ್ನು ಒದಗಿಸುತ್ತಾನೆ. ಅವನ ಸಾನಿಧ್ಯತೆಯ ಸಮಯಾವಧಿಯಲ್ಲಿ ಮತ್ತು ವಿಷಯಗಳ ಇಡೀ ವ್ಯವಸ್ಥೆಯ ಅಂತ್ಯಕ್ಕೆ ಸಮೀಪದಲ್ಲಿ ಅವರು ಜೀವಿಸುತ್ತಿದ್ದಾರೆ ಎಂದು ಅವನ ಭಾವೀ ಶಿಷ್ಯರು ತಿಳಿದುಕೊಳ್ಳಲಾಗುವಂತೆ, ಅವರನ್ನು ಎಚ್ಚರಿಸುವ ಒಂದು ಸೂಚನೆಯನ್ನು ಕೂಡ ಅವನು ಕೊಡುತ್ತಾನೆ.
ವರುಷಗಳು ಗತಿಸಿದಷ್ಟಕ್ಕೆ, ಅಪೊಸ್ತಲರು ಯೇಸುವಿನ ಪ್ರವಾದನೆಯ ನೆರವೇರಿಕೆಯನ್ನು ಅವಲೋಕಿಸುತ್ತಾರೆ. ಹೌದು, ಅವನು ಮುಂತಿಳಿಸಿದ ಸಂಗತಿಗಳೇ ಅವರ ದಿನಗಳಲ್ಲಿ ಸಂಭವಿಸಲು ತೊಡಗುತ್ತವೆ. ಈ ರೀತಿಯಲ್ಲಿ 37 ವರ್ಷಗಳ ನಂತರ, ಸಾ.ಶ. 70ರಲ್ಲಿ ಜೀವಂತರಿದ್ದ ಕ್ರೈಸ್ತರು, ಯೆಹೂದಿ ವ್ಯವಸ್ಥೆಯು ಅದರ ದೇವಾಲಯದೊಂದಿಗೆ ನಾಶಗೊಳ್ಳುವಾಗ ಆ ವಿಷಯ ತಿಳಿಯದೇ ಇದ್ದವರಾಗಿರಲಿಲ್ಲ.
ಆದಾಗ್ಯೂ, ಕ್ರಿಸ್ತನ ಸಾನಿಧ್ಯತೆಯು ಮತ್ತು ವಿಷಯಗಳ ವ್ಯವಸ್ಥೆಯು ಸಾ.ಶ. 70 ರಲ್ಲಿ ನಡೆಯುವದಿಲ್ಲ. ರಾಜ್ಯಾಧಿಕಾರದಲ್ಲಿ ಅವನ ಬರುವಿಕೆಯು ಬಹು ಸಮಯದ ನಂತರ ನಡೆಯಲಿತ್ತು. ಆದರೆ ಯಾವಾಗ ? ಯೇಸುವಿನ ಪ್ರವಾದನೆಯನ್ನು ಪರಿಗಣಿಸುವದರಿಂದ ಇದು ಪ್ರಕಟವಾಗುತ್ತದೆ.
“ಯುದ್ಧಗಳಾಗುವದೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳೂ” ಅಲ್ಲಿರುವವು ಎಂದು ಯೇಸುವು ಮುನ್ನುಡಿದಿದ್ದಾನೆ. “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವು ಏಳುವವು” ಎಂದವನು ಹೇಳುತ್ತಾನೆ, ಮತ್ತು ಅಲ್ಲಿ ಆಹಾರದ ಕ್ಷಾಮವು, ಭೂಕಂಪಗಳು ಮತ್ತು ಅಂಟುರೋಗಗಳು ಇರುವವು. ಅವನ ಶಿಷ್ಯರನ್ನು ದ್ವೇಷಿಸುವರು ಮತ್ತು ಕೊಲ್ಲುವರು. ಸುಳ್ಳು ಪ್ರವಾದಿಗಳು ಏಳುವರು ಮತ್ತು ಅನೇಕರನ್ನು ಮೋಸಗೊಳಿಸುವರು. ನಿಯಮಾರಾಹಿತ್ಯತೆಯು ಹೆಚ್ಚಾಗುವದು ಮತ್ತು ಬಹುಮಂದಿಯ ಪ್ರೀತಿಯು ತಣ್ಣಗಾಗಿ ಹೋಗುವದು. ಆದರೆ ಅದೇ ಸಮಯದಲ್ಲಿ, ದೇವರ ರಾಜ್ಯದ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.
ಸಾ.ಶ. 70 ರಲ್ಲಿ ಯೆರೂಸಲೇಮ್ ನಾಶನವಾಗುವ ಮೊದಲು ಯೇಸುವಿನ ಪ್ರವಾದನೆಯ ನೆರವೇರಿಕೆಯು ಸೀಮಿತ ರೀತಿಯಲ್ಲಿ ನೆರವೇರಿದರೂ, ಅದರ ಪ್ರಮುಖ ನೆರವೇರಿಕೆಯು ಅವನ ಸಾನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ನಡೆಯಲಿರುವದು. ಯೇಸುವಿನ ಬಹು ಪರಿಣಾಮಕಾರಿಯಾದ ಪ್ರವಾದನೆಯು ಆ ವರ್ಷದಿಂದ ಅದರ ಪ್ರಮುಖ ನೆರವೇರಿಕೆಯನ್ನು ಹೊಂದುತ್ತಾ ಇದೆ ಎಂದು 1914 ರಿಂದೀಚಿಗಿನ ಲೋಕ ಘಟನೆಗಳ ಒಂದು ಜಾಗರೂಕ ಪರೀಕ್ಷಣೆಯ ಪ್ರಕಟಿಸುತ್ತದೆ.
ಯೇಸುವು ಕೊಟ್ಟ ಸೂಚನೆಯ ಇನ್ನೊಂದು ಭಾಗವು “ಹಾಳು ಮಾಡುವ ಅಸಹ್ಯ ವಸ್ತುವಿನ” ಗೋಚರಿಸುವಿಕೆಯಾಗಿದೆ. ಸಾ.ಶ. 66 ರಲ್ಲಿ ಈ ಅಸಹ್ಯ ವಸ್ತುವು, ಯೆರೂಸಲೇಮನ್ನೂ, ಅದರ ದೇವಾಲಯದ ಗೋಡೆಗಳನ್ನೂ ಸುತ್ತುಗಟ್ಟಿದ್ದ ರೋಮೀಯ “ಮುತ್ತಿಗೆ ಹಾಕಿರುವ ಸೇನೆಯ” ರೂಪದಲ್ಲಿ ಗೋಚರಿಸಿತು. ಎಲ್ಲಿ ಅದು ನಿಲ್ಲಕೂಡದೋ ಅಲ್ಲಿ ಅದು ನಿಂತಿತ್ತು.
ಈ ಸೂಚನೆಯ ಪ್ರಮುಖ ನೆರವೇರಿಕೆಯಲ್ಲಿ, ಅಸಹ್ಯ ವಸ್ತುವು ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯಾದ ಸಂಯುಕ್ತ ರಾಷ್ಟ್ರ ಸಂಘವಾಗಿರುತ್ತದೆ. ಲೋಕ ಶಾಂತಿಗಾಗಿರುವ ಈ ಸಂಸ್ಥೆಯು ದೇವರ ರಾಜ್ಯದ ಒಂದು ಬದಲಿಯೋಪಾದಿ ಕ್ರೈಸ್ತಧರ್ಮಗಳಿಂದ ವೀಕ್ಷಿಸಲ್ಪಟ್ಟಿದೆ. ಎಂಥಾ ಒಂದು ಅಸಹ್ಯತೆ! ಆದಕಾರಣ, ತಕ್ಕ ಸಮಯದಲ್ಲಿ, ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಜೊತೆಯಾಗಿರುವ ರಾಜಕೀಯ ಶಕ್ತಿಗಳು ಕ್ರೈಸ್ತ ಧರ್ಮಗಳ (ಯೆರೂಸಲೇಮಿನ ಪಡಿರೂಪ) ಮೇಲೆ ತಿರುಗಿ ಬೀಳುವವು ಮತ್ತು ಅವಳನ್ನು ಧ್ವಂಸಗೊಳಿಸುವವು.
ಈ ರೀತಿಯಲ್ಲಿ ಯೇಸುವು ಮುನ್-ನುಡಿದದ್ದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರೆಂದು ವರದಿಯಾಗಿದ್ದ ಸಾ.ಶ. 70 ರಲ್ಲಿ ಸಂಭವಿಸಿದ ಯೆರೂಸಲೇಮಿನ ನಾಶನವು ಖಂಡಿತವಾಗಿಯೂ ಒಂದು ಮಹಾ ಸಂಕಟವಾಗಿತ್ತು. ಯೇಸುವಿನ ಪ್ರವಾದನೆಯ ಈ ಭಾಗದ ಪ್ರಮುಖ ನೆರವೇರಿಕೆಯು ಇನ್ನೂ ಹೆಚ್ಚು ವಿಸ್ತಾರತೆಯದ್ದಾಗಲಿರುವುದು.
ಕಡೇ ದಿನಗಳಲ್ಲಿ ಭರವಸ
ನೈಸಾನ್ 11, ಮಂಗಳವಾರವು ಅಂತ್ಯಗೊಳ್ಳುತ್ತಿದ್ದಂತೆ, ಯೇಸುವು ಅವನ ಅಪೊಸ್ತಲರೊಂದಿಗಿನ ರಾಜ್ಯ ಶಕ್ತಿಯಲ್ಲಿ ಅವನ ಸಾನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾಗಿರುವ ಸಂಭಾಷಣೆಯನ್ನು ಮುಂದುವರಿಸುತ್ತಾನೆ. ಸುಳ್ಳು ಕ್ರಿಸ್ತರುಗಳನ್ನು ಹಿಂಬಾಲಿಸುವದರ ಕುರಿತು ಅವನು ಅವರನ್ನು ಎಚ್ಚರಿಸುತ್ತಾನೆ. “ಸಾಧ್ಯವಾದರೆ ಆದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ” ಪ್ರಯತ್ನಗಳು ಮಾಡಲ್ಪಡುವವು ಎಂದು ಅವನು ಹೇಳುತ್ತಾನೆ. ಆದರೆ ದೂರದೃಷ್ಟಿಯ ಹದ್ದುಗಳಂತೆ ಆದುಕೊಳ್ಳಲ್ಪಟ್ಟವರು ಎಲ್ಲಿ ನಿಜವಾದ ಆತ್ಮಿಕ ಆಹಾರವು ಕಾಣಸಿಗುತ್ತದೋ ಅಲ್ಲಿ, ವಿಶೇಷವಾಗಿ ಅವನ ಅದೃಶ್ಯ ಸಾನಿಧ್ಯತೆಯಲ್ಲಿ ನಿಜ ಕ್ರಿಸ್ತನೊಂದಿಗೆ ಅವರು ಒಟ್ಟಾಗಿ ಸೇರುವರು. ಅವರು ತಪ್ಪು ದಾರಿಗೆಳೆಯಲ್ಪಡರು ಮತ್ತು ಸುಳ್ಳು ಕ್ರಿಸ್ತನೊಂದಿಗೆ ಒಟ್ಟು ಸೇರಿಸಲ್ಪಡಲಾರರು.
ಸುಳ್ಳು ಕ್ರಿಸ್ತರು ದೃಶ್ಯವಾಗಿ ಮಾತ್ರ ತೋರಿಬರಶಕ್ತರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಯೇಸುವಿನ ಸಾನಿಧ್ಯತೆಯು ಅದೃಶ್ಯವಾಗಿರುವದು. ಯೇಸುವು ಹೇಳುವಂತೆ, ಸಂಕಟವು ಥಟ್ಟನೆ ವ್ಯಾಪಕವಾಗಿ ಕಾಣಿಸಿಕೊಂಡಾದ ನಂತರ: “ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು.” ಹೌದು, ಮಾನವ ಕುಲದ ಅಸ್ತಿತ್ವದಲ್ಲಿಯೇ ಇದು ಅತಿ ಅಂಧಕಾರದ ಸಮಯಾವಧಿಯಾಗಿರುವದು. ಹಗಲುಹೊತ್ತಿನಲ್ಲಿ ಸೂರ್ಯನು ಕತ್ತಲಾಗಿ ಹೋಗುವದಕ್ಕೆ ಮತ್ತು ರಾತ್ರಿಯಲ್ಲಿ ಬೆಳಕು ಕೊಡಬೇಕಾದ ಚಂದ್ರನು ಅದನ್ನು ಕೊಡದೆ ಇರುವದಕ್ಕೆ ಸಮಾನವಾಗಿರುವದು.
“ಆಕಾಶದ ಶಕ್ತಿಗಳು ಕದಲುವವು,” ಯೇಸುವು ಮುಂದರಿಸುವದು. ಭೌತಿಕ ಆಕಾಶವು ಒಂದು ಕೇಡಿನ ಮುನ್-ಸೂಚಕ ಕಾಣಿಸುವಿಕೆಯನ್ನು ತೋರ್ಪಡಿಸುವವು ಎಂಬದನ್ನು ಯೇಸುವು ಈ ರೀತಿಯಲ್ಲಿ ಸೂಚಿಸಿದ್ದಾನೆ. ಗತಕಾಲದ ಮಾನವ ಇತಿಹಾಸದಲ್ಲಿ ಎಂದೂ ಅನುಭವಿಸದ ಭಯ ಮತ್ತು ಹಿಂಸಾಚಾರವು ಮಿತಿಮೀರುವದು.
ಇದರ ಫಲಿತಾಂಶವಾಗಿ, ಯೇಸುವು ಹೇಳುವದು, “ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.” ಖಂಡಿತವಾಗಿಯೂ, ಮಾನವ ಅಸ್ತಿತ್ವದ ಈ ಕರಾಳ ಅಂಧಕಾರದ ಸಮಯಾವಧಿಯು ಅದರ ಮುಕ್ತಾಯಘಟ್ಟಕ್ಕೆ ಸಮೀಪಿಸುತ್ತಿದ್ದಂತೆ, “ಆಗ ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು.”
ಆದರೆ ಈ ವಿಷಯಗಳ ವ್ಯವಸ್ಥೆಯನ್ನು ‘ಮನುಷ್ಯ ಕುಮಾರನು ಬಲದಿಂದ’ ನಾಶ ಮಾಡುವಾಗ ಎಲ್ಲರೂ ಗೋಳಾಡುವದಿಲ್ಲ. “ಆದುಕೊಂಡವರು,” ಅವನ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಭಾಗಿಗಳಾಗುವ 1,44,000 ಮಂದಿಗಳಾಗಲಿ, ಅವನ “ಬೇರೆ ಕುರಿಗಳು” ಎಂದು ಯೇಸುವು ಈ ಮುಂಚೆ ಕರೆದಿರುವ ಅವರ ಸಂಗಾತಿಗಳಾಗಲಿ ಎದೆಬಡಕೊಳ್ಳುವದಿಲ್ಲ. ಮಾನವ ಇತಿಹಾಸದ ಅತಿ ಕರಾಳ ಅಂಧಕಾರದ ಸಮಯಾವಧಿಯಲ್ಲಿ ಜೀವಿಸುತ್ತಿರುವದಾದರೂ, ಅವರು ಯೇಸುವಿನ ಉತ್ತೇಜನೆಗೆ ಪ್ರತಿಸ್ಪಂದಿಸುತ್ತಾರೆ: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”
ಕಡೇ ದಿನಗಳಲ್ಲಿ ಜೀವಿಸುತ್ತಿರುವ ಅವನ ಶಿಷ್ಯರು ಅಂತ್ಯದ ಸಮೀಪಿಸುವಿಕೆಯನ್ನು ಗೊತ್ತುಮಾಡಿ ಕೊಳ್ಳಲು ಶಕ್ತರಾಗುವಂತೆ, ಯೇಸುವು ಈ ದೃಷ್ಟಾಂತವನ್ನು ಕೊಡುತ್ತಾನೆ: “ಅಂಜೂರ ಮುಂತಾದ ಮರಗಳನ್ನೂ ನೋಡಿರಿ. ಅವು ಚಿಗುರಿದ ಕೂಡಲೇ ನೀವು ಅದನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ. ಎಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಈ ರೀತಿಯಲ್ಲಿ, ಸೂಚನೆಯ ಅನೇಕ ವಿವಿಧ ಲಕ್ಷಣಗಳು ನೆರವೇರುವದನ್ನು ಅವನ ಶಿಷ್ಯರು ಕಾಣುವಾಗ, ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಮತ್ತು ದೇವರ ರಾಜ್ಯವು ಬಲುಬೇಗನೆ ಎಲ್ಲಾ ದುಷ್ಟತನವನ್ನು ಅಳಿಸಿಹಾಕಲಿರುವದು ಎಂದು ಅವರು ತಿಳಿದು ಕೊಳ್ಳತಕ್ಕದ್ದು. ವಾಸ್ತವದಲ್ಲಿ, ಯೇಸುವು ಮುಂತಿಳಿಸಿದ ಎಲ್ಲಾ ಸಂಗತಿಗಳ ನೆರವೇರಿಕೆಯನ್ನು ನೋಡುವ ಜನರ ಜೀವಮಾನಕಾಲದಲ್ಲಿ ಇದು ಸಂಭವಿಸಲಿದೆ! ಈ ಬಹು ಪರಿಣಾಮಕಾರಿಯಾದ ಕಡೇ ದಿನಗಳಲ್ಲಿ ಜೀವಿಸುವ ಆ ಶಿಷ್ಯರಿಗೆ ಎಚ್ಚರಿಕೆಯನ್ನೀಯುತ್ತಾ, ಯೇಸುವು ಹೇಳುವದು:
“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”
ಬುದ್ಧಿವತೆಯರಾದ ಮತ್ತು ಬುದ್ಧಿಯಿಲ್ಲದವರಾದ ಕನ್ಯೆಯರು
ರಾಜ್ಯದ ಬಲದಲ್ಲಿ ಅವನ ಸಾನಿಧ್ಯತೆಯ ಒಂದು ಸೂಚನೆಗಾಗಿ ಅವನ ಅಪೊಸ್ತಲರ ಕೋರಿಕೆಗೆ ಯೇಸುವು ಉತ್ತರವನ್ನೀಯುತ್ತಿದ್ದನು. ಈಗ ಅವನು ಮೂರು ಸಾಮ್ಯಗಳ ಅಥವಾ ದೃಷ್ಟಾಂತಗಳ ಮೂಲಕ ಸೂಚನೆಯ ಇನ್ನು ಅಧಿಕ ಲಕ್ಷಣಗಳನ್ನು ಒದಗಿಸುತ್ತಾನೆ.
ಪ್ರತಿಯೊಂದು ದೃಷ್ಟಾಂತದ ನೆರವೇರಿಕೆಯು ಅವನ ಸಾನಿಧ್ಯತೆಯ ಸಮಯದಲ್ಲಿ ಜೀವಿಸುವವರಿಂದ ಅವಲೋಕಿಸಲ್ಪಡಲು ಶಕ್ಯವಿತ್ತು. ಅವನು ಮೊದಲನೆಯದನ್ನು ಈ ಮಾತುಗಳಿಂದ ಪ್ರಸ್ತಾಪಿಸುತ್ತಾನೆ: “ಆಗ ಪರಲೋಕ ರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿದೆ. ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು.”
“ಪರಲೋಕ ರಾಜ್ಯವು ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿದೆ” ಎಂಬ ವಾಕ್ಸರಣಿಯಿಂದ, ಸ್ವರ್ಗೀಯ ರಾಜ್ಯಕ್ಕೆ ಬಾಧ್ಯಸ್ಥರಾಗುವವರಲ್ಲಿ ಅರ್ಧದಷ್ಟು ಮಂದಿ ಬುದ್ಧಿಯಿಲ್ಲವದರೆಂದೂ, ಅರ್ಧದಷ್ಟು ಬುದ್ಧಿವಂತರೆಂದೂ ಯೇಸುವಿನ ಅರ್ಥವಾಗಿರಲಿಲ್ಲ! ಇಲ್ಲ, ಅದರೆ ಸ್ವರ್ಗೀಯ ರಾಜ್ಯದ ಸಂಬಂಧದಲ್ಲಿ, ಇಂಥಾ ಒಂದು ಲಕ್ಷಣ ಇರುವದು ಅಥವಾ ಇರುವದಿಲ್ಲ ಅಥವಾ ರಾಜ್ಯದ ಸಂಬಂಧದ ವಿಷಯಗಳು ಹೀಗೆ ಇರುವವು ಅಥವಾ ಇರುವದಿಲ್ಲ ಎಂದವನ ಅರ್ಥವಾಗಿತ್ತು.
ಸ್ವರ್ಗೀಯ ರಾಜ್ಯಕ್ಕಾಗಿ ಸಾಲಿನಲ್ಲಿರುವ ಯಾ ಸಾಲಿನಲ್ಲಿದ್ದೇವೆ ಎಂದು ಹೇಳಿ ಕೊಳ್ಳುವ ಎಲ್ಲಾ ಕ್ರೈಸ್ತರು ಸಾಂಕೇತಿಕವಾಗಿ ಹತ್ತು ಕನ್ಯೆಯರಿಂದ ಸೂಚಿಸಲ್ಪಟ್ಟಿದ್ದಾರೆ. ಸಾ.ಶ. 33ರ ಪಂಚಾಶತ್ತಮದಲ್ಲಿ, ಪುನರುತಿತ್ಥ, ಮಹಿಮೆಗೇರಿಸಲ್ಪಟ್ಟ ಮದಲಿಂಗನಾದ ಯೇಸು ಕ್ರಿಸ್ತನಿಗೆ ಕ್ರೈಸ್ತ ಸಭೆಯು ವಿವಾಹದಲ್ಲಿ ವಾಗ್ದಾನಿಸಲ್ಪಟ್ಟಿತ್ತು. ಆದರೆ ವಿವಾಹವು ಭವಿಷ್ಯದಲ್ಲಿ ಒಂದು ಅನಿರ್ದಿತ ಸಮಯದಲ್ಲಿ ಪರಲೋಕದಲ್ಲಿ ಜರುಗಲಿತ್ತು.
ಸಾಮ್ಯದಲ್ಲಿ, ಮದಲಿಂಗನನ್ನು ಸುಸ್ವಾಗತಿಸುವ ಮತ್ತು ವಿವಾಹದ ಮೆರವಣಿಗೆಯಲ್ಲಿ ಸೇರುವ ಉದ್ದೇಶದಿಂದ ಹತ್ತು ಮಂದಿ ಕನ್ಯೆಯರು ಹೊರಡುತ್ತಾರೆ. ಅವನು ಬರುವಾಗ, ಅವರು ಆರತಿಗಳನ್ನು ಹೊತ್ತಿಸಿ ಮೆರವಣಿಗೆಯ ಮಾರ್ಗವನ್ನು ಬೆಳಗಿಸುತ್ತಾರೆ, ಈ ಮೂಲಕ ಅವಳಿಗಾಗಿ ಸಿದ್ಧ ಮಾಡಿದ ಮನೆಯಲ್ಲಿ ಮದಲಗಿತ್ತಿಯನ್ನು ಅವನು ತರುವಾಗ ಅವನನ್ನು ಗೌರವಿಸುತ್ತಾರೆ. ಆದಾಗ್ಯೂ, ಯೇಸುವು ವಿವರಿಸುವದು: “ಬುದ್ಧಿಯಿಲ್ಲದವರು ತಮ್ಮ ಆರತಿಯನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ. ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು. ಮದಲಿಂಗನು ಬರುವದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ಮಲಗಿದರು.”
ಆಳುವ ರಾಜನಾದ ಕ್ರಿಸ್ತನ ಸಾನಿಧ್ಯತೆಯು ದೂರದ ಭವಿಷ್ಯದಲ್ಲಿ ಇರುತ್ತದೆ ಎಂದು ಮದಲಿಂಗನು ತಡವಾಗಿ ಬರುವದು ಸೂಚಿಸುತ್ತದೆ. ಕೊನೆಗೆ 1914 ನೆಯ ವರ್ಷದಲ್ಲಿ ತನ್ನ ಸಿಂಹಾಸನಕ್ಕೆ ಅವನು ಬರುತ್ತಾನೆ. ಇದಕ್ಕೆ ಮೊದಲಿನ ದೀರ್ಘಕಾಲದ ರಾತ್ರಿಯ ಸಮಯದಲ್ಲಿ ಎಲ್ಲಾ ಕನ್ಯೆಯರು ಮಲಗುತ್ತಾರೆ. ಆದರೆ ಇದಕ್ಕಾಗಿ ಅವರನ್ನು ಖಂಡಿಸುವದಿಲ್ಲ. ಅವರ ಪಾತ್ರೆಗಳಲ್ಲಿ ಎಣ್ಣೆಯಿಲ್ಲದಿರುವದಕ್ಕಾಗಿ ಬುದ್ಧಿಯಿಲ್ಲದ ಕನ್ಯೆಯರನ್ನು ಖಂಡಿಸಲಾಗುತ್ತದೆ. ಮದಲಿಂಗನು ಬರುವ ಮೊದಲು ಕನ್ಯೆಯರು ಎಚ್ಚರವಾದದ್ದು ಹೇಗೆ ಎಂಬುದನ್ನು ಯೇಸುವು ವಿವರಿಸುತ್ತಾನೆ: “ಅರ್ಧ ರಾತ್ರಿಯಲ್ಲಿ—ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು. ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆ ಮಾಡಿದರು. ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ—ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ; ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಬುದ್ಧಿವಂತೆಯರು—ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು.”
ಜ್ಯೋತಿರ್ಮಂಡಲಗಳಂತೆ ನಿಜ ಕ್ರೈಸ್ತರು ಪ್ರಕಾಶಿಸಲು ಸಾಧ್ಯಮಾಡುವದನ್ನು ಎಣ್ಣೆಯು ಸೂಚಿಸುತ್ತದೆ. ಇದು ದೇವರ ಪ್ರೇರಿತ ವಾಕ್ಯವಾಗಿದೆ, ವಾಕ್ಯವನ್ನು ತಿಳಿಯಲು ಅವರಿಗೆ ಸಹಾಯ ಮಾಡುವ ಪವಿತ್ರಾತ್ಮದ ಸಹಿತ ಕ್ರೈಸ್ತರು ವಾಕ್ಯದ ಮೇಲೆ ಬಿಗಿಹಿಡಿತವನ್ನು ಇಟ್ಟುಕೊಳ್ಳುತ್ತಾರೆ. ಮದುವೆಯ ಊಟದ ಮೆರವಣಿಗೆಯ ಸಮಯದಲ್ಲಿ ಮದಲಿಂಗನನ್ನು ಸುಸ್ವಾಗತಿಸುವದರಲ್ಲಿ ಅವರ ಪ್ರಕಾಶವನ್ನು ಬೆಳಗಿಸಲು ಬುದ್ಧಿವಂತೆಯರಾದ ಕನ್ಯೆಯರಿಗೆ ಆತ್ಮಿಕ ಎಣ್ಣೆಯು ಸಾಧ್ಯಮಾಡುತ್ತದೆ. ಆದರೆ ಬುದ್ಧಿಯಿಲ್ಲದ ಕನ್ಯೆಯ ವರ್ಗದವರಿಗೆ ಸ್ವತಃ ತಮ್ಮಲ್ಲಿ, ಅವರ ಪಾತ್ರೆಗಳಲ್ಲಿ ಆವಶ್ಯಕವಾದ ಆತ್ಮಿಕ ಎಣ್ಣೆಯಿರಲಿಲ್ಲ. ಆದುದರಿಂದ ಏನು ಸಂಭವಿಸಿತು ಎನ್ನುವದನ್ನು ಯೇಸುವು ವಿವರಿಸುತ್ತಾನೆ:
“ಅವರು [ಬುದ್ಧಿಯಿಲ್ಲದ ಕನ್ಯೆಯರು] ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಲು ಮುಚ್ಚಲಾಯಿತು. ತರುವಾಯ ಉಳಿದ ಕನ್ಯೆಯರು ಸಹ ಬಂದು—ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು. ಆತನು—ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.”
ಯೇಸು ತನ್ನ ಸ್ವರ್ಗೀಯ ರಾಜ್ಯಕ್ಕೆ ಬಂದಾದ ಮೇಲೆ, ಹಿಂತೆರಳಿದ ಮದಲಿಂಗನನ್ನು ಹೊಗಳುವದರಲ್ಲಿ, ಈ ಅಂಧಕಾರಮಯ ಲೋಕದಲ್ಲಿ ಪ್ರಕಾಶವನ್ನು ಬೀರುವ ಅವರ ಸುಯೋಗಗಳಿಗೆ ನಿಜಾಭಿಷಿಕ್ತ ಕ್ರೈಸ್ತರ ಬುದ್ಧಿವಂತೆ ಕನ್ಯೆಯರ ವರ್ಗವು ಎಚ್ಚರವಾಗಿತ್ತು. ಆದರೆ ಈ ಸುಸ್ವಾಗತಿಸುವ ಹೊಗಳುವಿಕೆಯನ್ನು ಮಾಡಲು ಸಿದ್ಧರಾಗಿರದೆ ಇರುವದನ್ನು ಬುದ್ಧಿಯಿಲ್ಲದ ಕನ್ಯೆಯರಿಂದ ಚಿತ್ರಿಸಲಾಗಿದೆ. ಸಮಯವು ಬಂದಾಗ, ಪರಲೋಕದಲ್ಲಿನ ಮದುವೆಯ ಊಟಕ್ಕೆ ಅವರಿಗಾಗಿ ಬಾಗಲನ್ನು ಕ್ರಿಸ್ತನು ತೆರೆಯುವದಿಲ್ಲ. ಲೋಕದ ಕರಾಳ ರಾತ್ರಿಯ ಅಂಧಕಾರದಲ್ಲಿ ಹೊರಗೆ, ಇತರ ಎಲ್ಲಾ ನಿಯಮರಾಹಿತ್ಯ ಕೆಲಸಗಾರರೊಂದಿಗೆ ನಾಶವಾಗಲಿಕ್ಕಾಗಿ ಅವರನ್ನು ಬಿಡುತ್ತಾನೆ. “ಆದಕಾರಣ ಆ ದಿನವಾದರೂ ಗಳಿಗೆಯಾದರೂ ಗೊತ್ತಿಲ್ಲವಾದದರಿಂದ” ಯೇಸುವು ಕೊನೆಗೊಳಿಸುವದು “ಎಚ್ಚರವಾಗಿರ್ರಿ.”
ತಲಾಂತುಗಳ ಸಾಮ್ಯ
ಇನ್ನೊಂದು ಸಾಮ್ಯವನ್ನು ಅವರಿಗೆ ಹೇಳುವದರ ಮೂಲಕ ಎಣ್ಣೇಮರಗಳ ಗುಡ್ಡದ ಮೇಲೆ ಅವನ ಅಪೊಸ್ತಲರೊಂದಿಗಿನ ಚರ್ಚೆಯನ್ನು ಯೇಸುವು ಮುಂದುವರಿಸುತ್ತಾನೆ, ಇದು ಮೂರರ ಸರಣಿಯಲ್ಲಿ ಎರಡನೆಯದು. ಕೆಲವು ದಿನಗಳ ಹಿಂದೆ ಅವನು ಯೆರಿಕೋವಿನಲ್ಲಿರುವಾಗ, ಬಹಳ ದೂರದ ಭವಿಷ್ಯದಲ್ಲಿ ರಾಜ್ಯವು ಬರಲಿದೆ ಎಂದು ತೋರಿಸಲು ಮೊಹರಿಗಳ ಸಾಮ್ಯವನ್ನು ಕೊಟ್ಟನು. ಈಗ ಅವನು ವಿವರಿಸುವ ಸಾಮ್ಯದಲ್ಲಿ, ತದ್ರೀತಿಯ ಹಲವಾರು ಲಕ್ಷಣಗಳು ಇರುವದಾದರೂ, ರಾಜ್ಯದ ಬಲದಲ್ಲಿ ಕ್ರಿಸ್ತನ ಸಾನಿಧ್ಯತೆಯ ಸಮಯದಲ್ಲಿ ನೆರವೇರುವ ಕಾರ್ಯಗಳನ್ನು ವಿವರಿಸುತ್ತದೆ. “ಅವನ ಆಸ್ತಿಯನ್ನು” ವೃದ್ಧಿ ಪಡಿಸಲು ಅವನ ಶಿಷ್ಯರು ಭೂಮಿಯಲ್ಲಿರುವಷ್ಟು ಕಾಲ ಕೆಲಸ ಮಾಡತಕ್ಕದ್ದು ಎಂದು ಉದಾಹರಿಸುತ್ತದೆ.
ಯೇಸುವು ಆರಂಭಿಸುವದು: “ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು, [ರಾಜ್ಯದೊಂದಿಗೆ ಜೋಡಿಸಲ್ಪಟ್ಟಿರುವ ಸನ್ನಿವೇಶಗಳು].” ದೇಶಾಂತರಕ್ಕೆ ಹೋಗುವ ಮೊದಲು ತನ್ನ ಸೇವಕರಿಗೆ—ಪರಲೋಕ ರಾಜ್ಯಕ್ಕಾಗಿ ಸಾಲಿನಲ್ಲಿರುವ ಶಿಷ್ಯರಿಗೆ—ಅವನ ಆಸ್ತಿಯನ್ನು ಒಪ್ಪಿಸಿಕೊಡುವ ಮನುಷ್ಯನು ಯೇಸುವಾಗಿದ್ದಾನೆ. ಈ ಆಸ್ತಿಯು ಯಾವುದೇ ಪ್ರಾಪಂಚಿಕ ಸ್ವತ್ತುಗಳಾಗಿರುವದಿಲ್ಲ, ಆದರೆ ಅದು ಇನ್ನಷ್ಟು ಅಧಿಕ ಶಿಷ್ಯರನ್ನು ತರಲು ಸಾಮರ್ಥ್ಯವಿರುವಂತೆ ಅವನು ಈಗಾಗಲೇ ಬೆಳಸಿ ಹದಮಾಡಿದ ಕಾರ್ಯ ಕ್ಷೇತ್ರವಾಗಿದೆ.
ಯೇಸುವು ತನ್ನ ಆಸ್ತಿಯನ್ನು ಅವನು ಪರಲೋಕಕ್ಕೆ ಹೋಗುವ ಸ್ವಲ್ಪ ಮುಂಚಿತವಾಗಿ ಅವನ ಆಳುಗಳಿಗೆ ಒಪ್ಪಿಸುತ್ತಾನೆ. ಅವನದನ್ನು ಮಾಡುವದು ಹೇಗೆ? ಭೂಲೋಕದ ಕಟ್ಟಕಡೆಯ ವರೆಗೂ ರಾಜ್ಯದ ಸಂದೇಶವನ್ನು ಸಾರುವದರ ಮೂಲಕ ಈಗಾಗಲೇ ಬೆಳಸಲ್ಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಅವರಿಗೆ ಅಪ್ಪಣೆಯನ್ನೀಯುವದರ ಮೂಲಕವೇ. ಯೇಸುವು ಹೇಳುವದು: “ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು.”
ಹೀಗೆ ಎಂಟು ತಲಾಂತುಗಳನ್ನು—ಕ್ರಿಸ್ತನ ಆಸ್ತಿಯನ್ನು—ಅವರವರ ಸಾಮರ್ಥ್ಯಕ್ಕನುಗುಣವಾಗಿ ಅಥವಾ ಆಳುಗಳ ಆತ್ಮಿಕ ಸಾಧ್ಯತೆಗಳಿಗನುಗುಣವಾಗಿ ಹಂಚಲಾಯಿತು. ಆಳುಗಳು ಶಿಷ್ಯರುಗಳ ವರ್ಗಗಳನ್ನು ಸೂಚಿಸುತ್ತಾರೆ. ಮೊದಲನೆಯ ಶತಮಾನದಲ್ಲಿ, ಅಪೊಸ್ತಲರನ್ನು ಒಡಗೂಡಿ, ಆ ವರ್ಗವು ಐದು ತಲಾಂತುಗಳನ್ನು ಪಡೆಯಿತು. ಐದು ಮತ್ತು ಎರಡು ತಲಾಂತುಗಳನ್ನು ಪಡೆದ ಆಳುಗಳು, ತಮ್ಮ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೂಲಕ ಅವನ್ನು ಎರಡು ಪಟ್ಟು ಹೆಚ್ಚಿಸಿದರು. ಆದಾಗ್ಯೂ, ಒಂದು ತಲಾಂತನ್ನು ಪಡೆದ ಆಳು ಅದನ್ನು ಭೂಮಿಯನ್ನು ಅಗಿದು ಬಚ್ಚಿಟ್ಟನು.
“ಬಹುಕಾಲದ ಮೇಲೆ” ಯೇಸುವು ಮುಂದುವರಿಸುವದು, “ಆ ಆಳುಗಳ ಧಣಿಯು ಅವರಿಂದ ಲೆಕ್ಕ ತೆಗೆದು ಕೊಳ್ಳಲು ಬಂದನು.” ಅದು ಈ 20-ನೆಯ ಶತಮಾನದಲ್ಲಿ, ಸುಮಾರು 1,900 ವರ್ಷಗಳ ನಂತರ ಲೆಕ್ಕವನ್ನು ತೆಗೆದುಕೊಳ್ಳಲು ಬಂದನು, ಆದದರಿಂದ ಅದು ಖಂಡಿತವಾಗಿಯೂ “ಬಹು ಕಾಲದ ಮೇಲೆ” ಎನ್ನುವದು ಸರಿಯಾಗಿದೆ. ಅನಂತರ ಯೇಸುವು ವಿವರಿಸುವದು:
“ಐದು ತಲಾಂತು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತು ತಂದು—ಸ್ವಾಮೀ, ನೀನು ಐದು ತಲಾಂತನ್ನು ನನಗೆ ಕೊಟ್ಟಿದ್ದಿಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ ಅಂದನು. ಅವನ ಧಣಿಯು—ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದೀ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಅಂದನು.” ಅದೇ ರೀತಿ ಎರಡು ತಲಾಂತು ಹೊಂದಿದವನು ಅವನ ತಲಾಂತುಗಳನ್ನು ಎರಡು ಪಟ್ಟು ಮಾಡಿದ್ದರಿಂದ ಅದೇ ರೀತಿಯ ಶಿಫಾರಸನ್ನೂ, ಬಹುಮಾನವನ್ನೂ ಪಡೆದನು.
ಆದರೆ ಅವರ ಧಣಿಯ ಸೌಭಾಗ್ಯದಲ್ಲಿ ಈ ನಂಬಿಗಸ್ತ ಆಳುಗಳು ಸೇರುವದು ಹೇಗೆ? ಒಳ್ಳೇದು, ಅವರ ಧಣಿಯಾದ ಯೇಸು ಕ್ರಿಸ್ತನು ದೇಶಾಂತರಕ್ಕೆ ಅಂದರೆ ಪರಲೋಕದಲ್ಲಿರುವ ಅವನ ತಂದೆಯ ಮನೆಗೆ ಹೋದಾಗ ರಾಜ್ಯದ ಅಧಿಕಾರವನ್ನು ಪಡೆಯುವದೇ ಆ ಸೌಭಾಗ್ಯದಲ್ಲಿ ಸೇರುವದಾಗಿದೆ. ಆಧುನಿಕ ಸಮಯಗಳಲ್ಲಿ ನಂಬಿಗಸ್ತ ಆಳುಗಳಿಗೆ, ರಾಜ್ಯದ ಜವಾಬ್ದಾರಿಕೆಗಳನ್ನು ಅವರ ವಶಕ್ಕೆ ಒಪ್ಪಿಸಿದಾಗ, ಅವರಿಗೆ ಮಹಾ ಸಂತೋಷವುಂಟಾಯಿತು ಮತ್ತು ಅವರು ತಮ್ಮ ಐಹಿಕ ಜೀವಿತವನ್ನು ಮುಗಿಸಿ, ಸ್ವರ್ಗೀಯ ರಾಜ್ಯಕ್ಕೆ ಪುನರುತ್ಥಾನಗೊಳಿಸಲ್ಪಡುವಾಗ ಆ ಸಂತೋಷವು ಶಿಕರವನ್ನೇರುವುದು. ಆದರೆ ಮೂರನೆಯ ಆಳಿನ ಕುರಿತೇನು?
“ಸ್ವಾಮೀ, ನೀನು ಕಠಿಣ ಮನುಷ್ಯನು,” ಈ ಆಳು ದೂರುವದು, “ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿ ಮಾಡಿಕೊಳ್ಳುವವನು ಎಂದು ತಿಳಿದು ಹೆದರಿ ಕೊಂಡು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು.” ಬೇಕುಬೇಕೆಂದೇ ಈ ಆಳು ಹದಗೊಳಿಸಲ್ಪಟ್ಟ ಕ್ಷೇತ್ರದಲ್ಲಿ ಸಾರಲು ಮತ್ತು ಶಿಷ್ಯರನ್ನು ಮಾಡಲು ನಿರಾಕರಿಸಿದನು. ಆದುದರಿಂದ ಧಣಿಯು ಅವನನ್ನು “ಮೈಗಳ್ಳನಾದ ಕೆಟ್ಟ ಆಳು” ಎಂದು ಕರೆಯುತ್ತಾನೆ ಮತ್ತು ಅವನ ಮೇಲೆ ನ್ಯಾಯತೀರ್ಪನ್ನು ವಿಧಿಸುತ್ತಾನೆ: “ಅವನಿಂದ ತಲಾಂತನ್ನು ತೆಗೆದು ಕೊಳ್ಳಿರಿ. . . . ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.” ಈ ಕೆಟ್ಟ ಆಳಿನ ವರ್ಗದವರು, ಹೊರಗೆ ಹಾಕಲ್ಪಡುವದರಿಂದ, ಅವರು ಯಾವುದೇ ರೀತಿಯ ಆತ್ಮಿಕ ಸಂತೋಷದಿಂದ ವಂಚಿತರಾಗುತ್ತಾರೆ.
ಕ್ರಿಸ್ತನ ಹಿಂಬಾಲಕರಾಗಿದ್ದೇವೆ ಎಂದು ಹೇಳಿಕೊಳ್ಳುವ ಎಲ್ಲರಿಗೆ ಒಂದು ಗಂಭೀರವಾದ ಪಾಠವು ಇದರಲ್ಲಿ ಇದೆ. ಅವನ ಮೆಚ್ಚುಗೆಯಲ್ಲಿ ಮತ್ತು ಬಹುಮಾನದಲ್ಲಿ ಆನಂದಿಸಬೇಕಾದರೆ ಮತ್ತು ಹೊರಗೆ ಕತ್ತಲೆಯಲ್ಲಿ ನೂಕಲ್ಪಡದೆ ಕಟ್ಟಕಡೆಗೆ ನಾಶನವಾಗದೆ ಇರಬೇಕಾದರೆ, ಸಾರುವ ಕೆಲಸದಲ್ಲಿ ಪೂರ್ಣ ಭಾಗವಹಿಸುವ ಮೂಲಕ ಅವರ ಸ್ವರ್ಗೀಯ ಧಣಿಯ ಆಸ್ತಿಗಳನ್ನು ವೃದ್ಧಿಸಲು ನಾವು ಕೆಲಸ ಮಾಡತಕ್ಕದ್ದು. ಈ ಕೆಲಸದಲ್ಲಿ ನೀವು ಶೃದ್ಧಾಪೂರ್ವಕರಾಗಿದ್ದೀರೋ?
ರಾಜ್ಯದ ಬಲದೊಂದಿಗೆ ಕ್ರಿಸ್ತನು ಬರುವಾಗ
ಯೇಸುವು ಇನ್ನೂ ಅವನ ಅಪೊಸ್ತಲರೊಂದಿಗೆ ಎಣ್ಣೇಮರಗಳ ಗುಡ್ಡದ ಮೇಲೆ ಇದ್ದಾನೆ. ಅವನ ಸಾನಿಧ್ಯತೆಯ ಮತ್ತು ವಿಷಯಗಳ ವ್ಯವಸ್ಥೆಯ ಅಂತ್ಯದ ಒಂದು ಸೂಚನೆಯ ಅವರ ವಿನಂತಿಗೆ ಉತ್ತರವಾಗಿ, ಈಗ ಅವನ ಮೂರು ಸಾಮ್ಯಗಳ ಸರಣಿಯಲ್ಲಿ ಕೊನೆಯದ್ದನ್ನು ಯೇಸುವು ಅವರಿಗೆ ಹೇಳುತ್ತಾನೆ. “ಇದಲ್ಲದೆ ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ,” ಯೇಸುವು ಆರಂಭಿಸುವದು, “ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು.”
ಅವರ ಸ್ವರ್ಗೀಯ ಮಹಿಮೆಯಲ್ಲಿ ದೇವದೂತರನ್ನು ಮಾನವರು ನೋಡಶಕ್ತರಲ್ಲ. ಆದುದರಿಂದ ದೇವದೂತರೊಂದಿಗೆ ಕೂಡಿ ಮನುಷ್ಯ ಕುಮಾರನಾದ ಯೇಸು ಕ್ರಿಸ್ತನ ಆಗಮನವು ಮಾನವ ಕಣ್ಣುಗಳಿಗೆ ಅದೃಶ್ಯವಾಗಿರಬೇಕು. ಈ ಆಗಮನವು 1914ನೆಯ ವರ್ಷದಲ್ಲಿ ನಡೆಯಿತು. ಆದರೆ ಯಾವ ಉದ್ದೇಶಕ್ಕಾಗಿ? ಯೇಸುವು ವಿವರಿಸುವದು: “ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಕುರಿಗಳನ್ನು ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.”
ಮೆಚ್ಚಿಕೆಯ ಪಕ್ಕದಲ್ಲಿರುವಂತೆ ಪ್ರತ್ಯೇಕಿಸಲ್ಪಟ್ಟವರಿಗೆ ಏನು ಸಂಭವಿಸುತ್ತದೆ ಎಂದು ವಿವರಿಸುತ್ತಾ ಯೇಸುವು ಹೇಳುವದು: “ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ತೆಗೆದುಕೊಳ್ಳಿರಿ.” ಈ ಸಾಮ್ಯದ ಕುರಿಗಳು ಕ್ರಿಸ್ತನೊಂದಿಗೆ ಆಳುವದಿಲ್ಲ, ಆದರೆ ಅದರ ಐಹಿಕ ಪ್ರಜೆಗಳಾಗಿ ಅವರು ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುತ್ತಾರೆ. ಮಾನವ ಕುಲವನ್ನು ವಿಮೋಚಿಸಲು ದೇವರ ಒದಗಿಸುವಿಕೆಯಿಂದ ಪ್ರಯೋಜನ ಪಡೆಯಬಹುದಾದ ಮಕ್ಕಳನ್ನು ಆದಾಮ ಹವ್ವರು ಮೊದಲ ಬಾರಿ ಪಡೆದಾಗ, “ಲೋಕಾದಿಯಿಂದ ಸಿದ್ಧಮಾಡುವಿಕೆ” ನಡೆಯಿತು.
ಆದರೆ ರಾಜನ ಮೆಚ್ಚಿಕೆಯ ಬಲಗಡೆಯಲ್ಲಿ ಪ್ರತ್ಯೇಕಿಸಲ್ಪಟ್ಟ ಕುರಿಗಳು ಇರುವದು ಯಾಕೆ? “ನಾನು ಹಸಿದಿದ್ದೆನು,” ಅರಸನು ಉತ್ತರಿಸುವದು, “ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನ್ದು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ. ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ.”
ಕುರಿಗಳು ಈ ಭೂಮಿಯ ಮೇಲಿದ್ದುದರಿಂದ, ಅವರ ಸ್ವರ್ಗೀಯ ಅರಸನಿಗೆ ಅವರು ಅಂಥ ಉತ್ತಮ ಕೃತ್ಯಗಳನ್ನು ಹೇಗೆ ಮಾಡಸಾಧ್ಯವಿದೆ ಎಂದು ಅವರು ತಿಳಿಯಲು ಬಯಸಿದರು. “ಸ್ವಾಮೀ, ಯಾವಾಗ ನೀನು ಹಸಿದ್ದದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು?” ಅವರು ಕೇಳಿದರು, “ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು? ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನೋಡುವದಕ್ಕೆ ಬಂದೆವು?”
“ನಿಮಗೆ ಸತ್ಯವಾಗಿ ಹೇಳುತ್ತೇನೆ,” ಅರಸನು ಉತ್ತರಿಸುವದು, “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು.” ಅವನೊಂದಿಗೆ ಪರಲೋಕದಲ್ಲಿ ಆಳುವ 1,44,000 ಮಂದಿಯಲ್ಲಿ ಭೂಮಿಯಲ್ಲಿ ಉಳಿದವರು ಕ್ರಿಸ್ತನ ಸಹೋದರರಾಗಿರುತ್ತಾರೆ. ಮತ್ತು ಅವರಿಗೆ ಒಳಿತನ್ನು ಮಾಡುವದು, ಯೇಸುವು ಹೇಳಿದಂತೆ, ಅವನಿಗೆ ಮಾಡಿದಂತೆ ಆಗುತ್ತದೆ.
ಅನಂತರ, ಅರಸನು ಆಡುಗಳನ್ನು ಸಂಬೋಧಿಸುತ್ತಾನೆ. “ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧ ಮಾಡಿರುವ ನಿತ್ಯ ಬೆಂಕಿಯೊಳಗೆ ಹೋಗಿರಿ. ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಡಲಿಲ್ಲ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆ ಮಾಡಲಿಕ್ಕೆ ಬರಲಿಲ್ಲ.”
ಆದಾಗ್ಯೂ ಆಡುಗಳು ದೂರುವದು: “ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾದದ್ದನ್ನೂ, ಬಟ್ಟೆಯಿಲ್ಲದವನಾಗಿದ್ದದ್ದನ್ನೂ, ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?” ಯಾವ ಆಧಾರದ ಮೇಲೆ ಕುರಿಗಳಿಗೆ ಅನುಕೂಲ ರೀತಿಯ ತೀರ್ಪು ಮಾಡಲಾಗಿದೆಯೋ ಅದೇ ಆಧಾರದ ಮೇಲೆ ಆಡುಗಳಿಗೆ ಪ್ರತಿಕೂಲ ರೀತಿಯ ತೀರ್ಪನ್ನು ಕೊಡಲಾಗಿದೆ. “ನೀವು ಈ [ನನ್ನ ಸಹೋದರರಲ್ಲಿ] ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡದೆ ಹೋದಿರೋ,” ಯೇಸುವು ಉತ್ತರಿಸುವದು, “ಅದನ್ನು ನನಗೂ ಮಾಡದೆ ಹೋದ ಹಾಗಾಯಿತು.”
ಆದುದರಿಂದ ಮಹಾ ಸಂಕಟದಲ್ಲಿ ಈ ವಿಷಯಗಳ ದುಷ್ಟ ವ್ಯವಸ್ಥೆಯ ಅಂತ್ಯದ ಕೊಂಚ ಮೊದಲು, ರಾಜ್ಯದ ಬಲದಲ್ಲಿ ಕ್ರಿಸ್ತನ ಸಾನಿಧ್ಯತೆಯು ನ್ಯಾಯತೀರ್ಪಿನ ಒಂದು ಸಮಯವಾಗಲಿರುವದು. ಆಡುಗಳು “ನಿತ್ಯಶಿಕ್ಷೆಗೂ, ನೀತಿವಂತರು [ಕುರಿಗಳು] ನಿತ್ಯ ಜೀವಕ್ಕೂ ಹೋಗುವರು.” ಮತ್ತಾಯ 24:2—25:46; 13:40, 49; ಮಾರ್ಕ 13:3-37; ಲೂಕ 21:7-36; 19:43, 44; 17:20-30; 2 ತಿಮೊಥಿ 3:1-5; ಯೋಹಾನ 10:16; ಪ್ರಕಟನೆ 14:1-3.
▪ ಅಪೊಸ್ತಲರ ಪ್ರಶ್ನೆಯನ್ನು ಪ್ರಚೋದಿಸಿದ್ದು ಯಾವುದು, ಆದರೆ ಅವರ ಮನಸ್ಸಿನಲ್ಲಿ ಪ್ರಾಯಶಃ ಬೇರೆ ಯಾವದು ಇದ್ದಿರಬಹುದು?
▪ ಸಾ.ಶ.70ರಲ್ಲಿ ಯೇಸುವಿನ ಪ್ರವಾದನೆಯ ಯಾವ ಭಾಗವು ನೆರವೇರಿತು, ಆದರೆ ಆಗ ಏನು ಸಂಭವಿಸಲಿಲ್ಲ?
▪ ಯೇಸುವಿನ ಪ್ರಥಮ ನೆರವೇರಿಕೆಯು ಯಾವಾಗ ಆಯಿತು, ಆದರೆ ಅದರ ಕೊನೆಯ ನೆರವೇರಿಕೆ ಯಾವಾಗ ಆಗುತ್ತದೆ?
▪ ಅದರ ಪ್ರಥಮ ಮತ್ತು ಕೊನೆಯ ನೆರವೇರಿಕೆಗಳಲ್ಲಿ ಅಸಹ್ಯ ವಸ್ತು ಯಾವದು?
▪ ಯೆರೂಸಲೇಮಿನ ನಾಶನದೊಂದಿಗೆ ಮಹಾ ಸಂಕಟದ ಕೊನೆಯ ನೆರವೇರಿಕೆಯು ಯಾಕೆ ಆಗಲಿಲ್ಲ?
▪ ಕ್ರಿಸ್ತನ ಸಾನಿಧ್ಯತೆಯು ಯಾವ ಲೋಕ ಘಟನೆಗಳಿಂದ ಗುರುತಿಸಲ್ಪಟ್ಟಿದೆ?
▪ ‘ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವದು’ ಯಾವಾಗ, ಆದರೆ ಕ್ರಿಸ್ತನ ಹಿಂಬಾಲಕರು ಏನು ಮಾಡುವರು?
▪ ಅಂತ್ಯವು ಯಾವಾಗ ಸಮೀಪವೆಂಬದನ್ನು ಅವನ ಭಾವೀ ಶಿಷ್ಯರು ತಿಳಿಯುವಂತೆ, ಸಹಾಯಕ್ಕಾಗಿ ಯೇಸುವು ಯಾವ ದೃಷ್ಟಾಂತವನ್ನು ಒದಗಿಸಿದನು?
▪ ಕಡೇ ದಿನಗಳಲ್ಲಿ ಜೀವಿಸುವ ಅವನ ಶಿಷ್ಯರಿಗೆ ಯೇಸುವು ಯಾವ ಎಚ್ಚರಿಕೆಯನ್ನು ಒದಗಿಸಿದನು?
▪ ಹತ್ತು ಕನ್ಯೆಯರಿಂದ ಯಾರು ಸೂಚಿಸಲ್ಪಟ್ಟಿದ್ದಾರೆ?
▪ ಮದಲಿಂಗನಿಗೆ ಕ್ರೈಸ್ತ ಸಭೆಯು ವಿವಾಹದಲ್ಲಿ ಯಾವಾಗ ವಾಗ್ದಾನಿಸಲ್ಪಟ್ಟಿತ್ತು, ಆದರೆ ಮದುವೆಯ ಊಟಕ್ಕೆ ತನ್ನ ಮದಲಗಿತ್ತಿಯನ್ನು ಕೊಂಡೊಯ್ಯಲು ಮದಲಿಂಗನು ಯಾವಾಗ ಬರುತ್ತಾನೆ?
▪ ಎಣ್ಣೆಯು ಏನನ್ನು ಪ್ರತಿನಿಧಿಸುತ್ತದೆ, ಮತ್ತು ಬುದ್ಧಿವಂತೆಯರಾದ ಕನ್ಯೆಯರ ಹತ್ತಿರ ಅದು ಇದ್ದುದರಿಂದ ಏನನ್ನು ಮಾಡಲು ಅವರಿಗೆ ಸಾಧ್ಯ ಮಾಡಿತು?
▪ ಮದುವೆಯ ಊಟವು ಎಲ್ಲಿ ನಡೆಯುತ್ತದೆ?
▪ ಬುದ್ಧಿಯಿಲ್ಲದ ಕನ್ಯೆಯರು ಯಾವ ಮಹಾ ಬಹುಮಾನವನ್ನು ಕಳೆದು ಕೊಳ್ಳುತ್ತಾರೆ ಮತ್ತು ಅವರ ಅಂತ್ಯಗತಿಯೇನು?
▪ ತಲಾಂತುಗಳ ಸಾಮ್ಯವು ಯಾವ ಪಾಠವನ್ನು ಕಲಿಸುತ್ತದೆ?
▪ ಆಳುಗಳು ಯಾರು, ಮತ್ತು ಅವರ ವಶಕ್ಕೆ ಕೊಡಲ್ಪಟ್ಟ ಆಸ್ತಿಯು ಯಾವುದು?
▪ ಧಣಿಯು ಲೆಕ್ಕ ತೆಗೆದು ಕೊಳ್ಳಲು ಯಾವಾಗ ಬರುತ್ತಾನೆ, ಮತ್ತು ಅವನು ಏನನ್ನು ಕಂಡುಕೊಳ್ಳುತ್ತಾನೆ?
▪ ನಂಬಿಗಸ್ತ ಆಳುಗಳು ಯಾವ ಸೌಭಾಗ್ಯದಲ್ಲಿ ಸೇರುತ್ತಾರೆ, ಮತ್ತು ಮೂರನೆಯ ಕೆಟ್ಟ ಆಳಿಗೆ ಏನು ಸಂಭವಿಸುತ್ತದೆ?
▪ ಕ್ರಿಸ್ತನ ಸಾನಿಧ್ಯತೆಯು ಯಾಕೆ ಅದೃಶ್ಯವಾಗಿರುವದು, ಮತ್ತು ಆ ಸಮಯದಲ್ಲಿ ಅವನು ಯಾವ ಕೆಲಸವನ್ನು ಮಾಡುವನು?
▪ ಕುರಿಗಳು ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುವದು ಯಾವ ಅರ್ಥದಲ್ಲಿ?
▪ “ಲೋಕಾದಿಯಿಂದ ಸಿದ್ಧಮಾಡುವಿಕೆಯು” ಯಾವಾಗ ನಡೆಯುತ್ತದೆ?
▪ ಕುರಿಗಳಾಗಿ ಅಥವಾ ಆಡುಗಳಾಗಿ ಜನರು ಯಾವುದರ ಅಧಾರದ ಮೇಲೆ ನ್ಯಾಯತೀರ್ಪು ಹೊಂದುವರು?