ದೇವರ ನೀತಿಯನ್ನು ಯೇಸು ಮಹಿಮೆಪಡಿಸುವ ವಿಧ
“ದೇವರು ಪಾಪನಿವಾರಣ ಯಜ್ಞವಾಗಿ [ಕ್ರಿಸ್ತನನ್ನು] ಇಟ್ಟನು; ಪಾಪನಿವಾರಣೆಯು ಅವನ ರಕ್ತದಲ್ಲಿ ನಂಬಿಕೆಯಿಡುವ ಮೂಲಕ ದೊರಕುವುದು. ದೇವರು ತನ್ನ ಸ್ವಂತ ನೀತಿಯನ್ನು ತೋರ್ಪಡಿಸುವುದಕ್ಕಾಗಿಯೇ ಇದನ್ನು ಮಾಡಿದನು.”—ರೋಮ. 3:25.
1, 2. (ಎ) ಮಾನವಕುಲದ ಪರಿಸ್ಥಿತಿಯ ಕುರಿತು ಬೈಬಲ್ ಏನನ್ನು ಕಲಿಸುತ್ತದೆ? (ಬಿ) ಈ ಲೇಖನವು ಯಾವ ಪ್ರಶ್ನೆಗಳನ್ನು ಪರಿಗಣಿಸುತ್ತದೆ?
ಏದೆನ್ ತೋಟದಲ್ಲಾದ ದಂಗೆಯ ಕುರಿತ ಬೈಬಲ್ ವೃತ್ತಾಂತವು ಸುಪರಿಚಿತ. ಆದಾಮನ ಪಾಪದ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ. ಅದನ್ನು ಈ ಮಾತುಗಳಲ್ಲಿ ವಿವರಿಸಲಾಗಿದೆ: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮ. 5:12) ಸರಿಯಾದದ್ದನ್ನು ಮಾಡಲು ನಾವೆಷ್ಟೇ ಪ್ರಯಾಸಪಟ್ಟರೂ ತಪ್ಪುಗಳನ್ನು ಮಾಡಿಯೇ ಮಾಡುತ್ತೇವೆ. ಇದಕ್ಕಾಗಿ ನಮಗೆ ದೇವರ ಕ್ಷಮಾಪಣೆ ಬೇಕು. ಅಪೊಸ್ತಲ ಪೌಲನು ಸಹ ಪ್ರಲಾಪಿಸಿದ್ದು: “ನಾನು ಬಯಸುವ ಒಳ್ಳೇದನ್ನು ಮಾಡದೆ ಬಯಸದಿರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ. ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು!”—ರೋಮ. 7:19, 24.
2 ನಾವೆಲ್ಲರೂ ಹುಟ್ಟಿನಿಂದಲೇ ಪಾಪಿಗಳಾಗಿರುವುದರಿಂದ ಈ ಮುಖ್ಯ ಪ್ರಶ್ನೆಗಳು ಉದ್ಭವಿಸುತ್ತವೆ. ನಜರೇತಿನ ಯೇಸು ಪಾಪವನ್ನು ಬಾಧ್ಯತೆಯಾಗಿ ಪಡೆಯದೆ ಪಾಪ ವಿಮುಕ್ತನಾಗಿ ಹುಟ್ಟಲು ಹೇಗೆ ಸಾಧ್ಯವಾಯಿತು? ಅವನು ದೀಕ್ಷಾಸ್ನಾನ ಪಡಕೊಂಡದ್ದೇಕೆ? ಯೇಸುವಿನ ಜೀವನರೀತಿಯು ಯೆಹೋವನ ನೀತಿಯನ್ನು ಮಹಿಮೆಪಡಿಸಿದ್ದು ಹೇಗೆ? ಎಲ್ಲಕ್ಕಿಂತಲೂ ಮುಖ್ಯವಾಗಿ, ಕ್ರಿಸ್ತನ ಮರಣವು ಏನನ್ನು ನೆರವೇರಿಸಿತು?
ದೇವರ ನೀತಿಗೆ ಸವಾಲು
3. ಸೈತಾನನು ಹವ್ವಳನ್ನು ಮೋಸಗೊಳಿಸಿದ್ದು ಹೇಗೆ?
3 ನಮ್ಮ ಆದಿ ಹೆತ್ತವರಾದ ಆದಾಮಹವ್ವರು ದೇವರ ಪರಮಾಧಿಕಾರವನ್ನು ಅವಿವೇಕದಿಂದ ತಿರಸ್ಕರಿಸಿದರು. ಮತ್ತು ‘ಪಿಶಾಚನೆಂದೂ ಸೈತಾನನೆಂದೂ ಕರೆಯಲ್ಪಡುವ ಪುರಾತನ ಸರ್ಪನ’ ಆಳಿಕೆಯನ್ನು ಸ್ವೀಕರಿಸಿದರು. (ಪ್ರಕ. 12:9) ಇದು ಹೇಗೆ ಸಂಭವಿಸಿತೆಂದು ಗಮನಿಸಿರಿ. ಯೆಹೋವ ದೇವರು ನೀತಿಯಿಂದ ಆಳ್ವಿಕೆ ನಡೆಸುತ್ತಾನೋ ಇಲ್ಲವೋ ಎಂಬ ಸಂದೇಹವನ್ನು ಸೈತಾನನು ಎಬ್ಬಿಸಿದನು. ಆ ಸಂದೇಹವನ್ನು ಎಬ್ಬಿಸುವುದಕ್ಕಾಗಿ ಅವನು ಹವ್ವಳಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ?” ಎಂದು ಕೇಳಿದನು. ಅದಕ್ಕೆ ಹವ್ವಳು, ಒಂದು ನಿರ್ದಿಷ್ಟ ಮರದ ಫಲವನ್ನು ಮುಟ್ಟಲೂಬಾರದು ತಿನ್ನಲೂಬಾರದು, ತಿಂದರೆ ಸತ್ತುಹೋಗುವರೆಂದು ಹೇಳಲಾದ ದೇವರ ಸ್ಪಷ್ಟ ಆಜ್ಞೆಯನ್ನು ತಿಳಿಸಿದಳು. ದೇವರು ಸುಳ್ಳು ಹೇಳುತ್ತಾನೆಂದು ಆಗ ಸೈತಾನನು ಆರೋಪಿಸಿದನು. “ನೀವು ಹೇಗೂ ಸಾಯುವದಿಲ್ಲ” ಎಂದನು ಆ ಪಿಶಾಚನು. ಯಾವುದೋ ಸಂಗತಿಯೊಂದನ್ನು ದೇವರು ಮರೆಮಾಚುತ್ತಿದ್ದಾನೆ ಹಾಗೂ ಹಣ್ಣು ತಿನ್ನುವ ಮೂಲಕ ಹವ್ವಳು ನೈತಿಕ ಸ್ವಾತಂತ್ರ್ಯವನ್ನು ಹೊಂದಿದವಳಾಗಿ ದೇವರಂತೆ ಆಗುವಳೆಂದು ನಂಬುವಂತೆ ಅವನು ಹವ್ವಳನ್ನು ಮೋಸಗೊಳಿಸಿದನು.—ಆದಿ. 3:1-5.
4. ಮಾನವಕುಲವು ಸೈತಾನನ ಆಳಿಕೆಯ ಕೆಳಗೆ ಬಂದದ್ದು ಹೇಗೆ?
4 ದೇವರಿಂದ ಸ್ವತಂತ್ರರಾಗಿರುವ ಮಾರ್ಗವನ್ನು ಅನುಸರಿಸುವುದೇ ಮಾನವರಿಗೆ ಸುಖಕರ ಎಂಬುದು ಸೈತಾನನ ಮಾತಿನ ತಿರುಳಾಗಿತ್ತು. ದೇವರ ನೀತಿಯುತ ಪರಮಾಧಿಕಾರವನ್ನು ಎತ್ತಿಹಿಡಿಯುವ ಬದಲು ಆದಾಮನು ತನ್ನ ಪತ್ನಿಯ ಮಾತಿಗೆ ಕಿವಿಗೊಟ್ಟು ಅವಳೊಂದಿಗೆ ಸೇರಿ ನಿಷೇಧಿತ ಫಲವನ್ನು ತಿಂದನು. ಹೀಗೆ ಆದಾಮನು ಯೆಹೋವನೊಂದಿಗಿನ ತನ್ನ ಪರಿಪೂರ್ಣ ನಿಲುವನ್ನು ಬಿಟ್ಟುಕೊಟ್ಟು ನಮ್ಮನ್ನು ಪಾಪ ಮತ್ತು ಮರಣದ ಕ್ರೂರ ನೊಗದ ಕೆಳಗೆ ತಂದನು. ಅದೇ ಸಮಯದಲ್ಲಿ ಮಾನವಕುಲವು ‘ಈ ಪ್ರಪಂಚದ ದೇವರಾಗಿರುವ’ ಸೈತಾನನ ಆಳಿಕೆಯ ಕೆಳಗೆ ಬಂತು.—2 ಕೊರಿಂ. 4:4, BSI; ರೋಮ. 7:14.
5. (ಎ) ಯೆಹೋವನು ತಾನು ನುಡಿದಂತೆಯೇ ಕ್ರಿಯೆಗೈದದ್ದು ಹೇಗೆ? (ಬಿ) ಆದಾಮಹವ್ವರ ವಂಶಜರಿಗೆ ದೇವರು ಯಾವ ನಿರೀಕ್ಷೆಯನ್ನು ಕೊಟ್ಟನು?
5 ಯೆಹೋವನು ತನ್ನ ದೋಷಾತೀತ ಮಾತಿಗನುಸಾರ ಆದಾಮಹವ್ವರ ಮೇಲೆ ಮರಣಶಿಕ್ಷೆಯನ್ನು ವಿಧಿಸಿದನು. (ಆದಿ. 3:16-19) ಆದರೆ ಅದರ ಅರ್ಥ ದೇವರ ಉದ್ದೇಶವು ವಿಫಲವಾಯಿತು ಎಂದೋ? ಖಂಡಿತವಾಗಿಯೂ ಅಲ್ಲ! ಯೆಹೋವನು ಆದಾಮಹವ್ವರಿಗೆ ಶಿಕ್ಷೆವಿಧಿಸಿದ ಸಂದರ್ಭದಲ್ಲಿ, ಅವರ ಮುಂದಿನ ವಂಶಜರಿಗೆ ಒಂದು ಭವ್ಯ ನಿರೀಕ್ಷೆಯನ್ನಿತ್ತನು. ಆ ಕುರಿತು ತನ್ನ ಉದ್ದೇಶವನ್ನು ಪ್ರಕಟಿಸುತ್ತಾ, ತಾನು ಒಂದು ‘ಸಂತಾನವನ್ನು’ ಎಬ್ಬಿಸುವೆನೆಂದೂ ಆ ಸಂತಾನದ ಹಿಮ್ಮಡಿಯನ್ನು ಸೈತಾನನು ಕಚ್ಚುವನೆಂದೂ ಆತನು ಹೇಳಿದನು. ಆ ವಾಗ್ದತ್ತ ಸಂತಾನವಾದರೋ ಆ ಹಿಮ್ಮಡಿ ಗಾಯದಿಂದ ಪುನಃ ಚೇತರಿಸಿಕೊಂಡು ‘ಸೈತಾನನ ತಲೆಯನ್ನು ಜಜ್ಜಲಿತ್ತು.’ (ಆದಿ. 3:15) ಆ ಮುಖ್ಯ ವಿಷಯವನ್ನು ವಿಶದೀಕರಿಸುತ್ತಾ ಬೈಬಲ್ ಯೇಸು ಕ್ರಿಸ್ತನ ಸಂಬಂಧದಲ್ಲಿ ಈ ಕೆಳಗಿನ ಹೇಳಿಕೆಯನ್ನು ಕೊಡುತ್ತದೆ: “ಈ ಉದ್ದೇಶಕ್ಕಾಗಿ, ಅಂದರೆ ಪಿಶಾಚನ ಕೆಲಸಗಳನ್ನು ಭಂಗಗೊಳಿಸಲಿಕ್ಕಾಗಿಯೇ ದೇವರ ಮಗನು ಪ್ರಕಟಗೊಳಿಸಲ್ಪಟ್ಟನು.” (1 ಯೋಹಾ. 3:8) ಯೇಸುವಿನ ನಡತೆ ಮತ್ತು ಮರಣವು ದೇವರ ನೀತಿಯನ್ನು ಮಹಿಮೆಪಡಿಸಿದ್ದು ಹೇಗೆ?
ಯೇಸುವಿನ ದೀಕ್ಷಾಸ್ನಾನದ ಅರ್ಥ
6. ಆದಾಮನಿಂದ ಯೇಸು ಪಾಪವನ್ನು ಬಾಧ್ಯತೆಯಾಗಿ ಪಡೆಯಲಿಲ್ಲ ಎಂದು ನಮಗೆ ಹೇಗೆ ಗೊತ್ತು?
6 ಯೇಸು ಬೆಳೆದು ಪ್ರೌಢ ಪುರುಷನಾದಾಗ ಪರಿಪೂರ್ಣ ಮನುಷ್ಯನಾಗಿದ್ದ ಆದಾಮನಿಗೆ ಸರಿಸಮಾನವಾಗಿ ಇರಬೇಕಿತ್ತು. (ರೋಮ. 5:14; 1 ಕೊರಿಂ. 15:45) ಯೇಸು ಪರಿಪೂರ್ಣ ಮನುಷ್ಯನಾಗಿ ಹುಟ್ಟಬೇಕಿತ್ತೆಂದೇ ಇದರ ಅರ್ಥ. ಇದು ಸಾಧ್ಯವಾದದ್ದು ಹೇಗೆ? ದೇವದೂತ ಗಬ್ರಿಯೇಲನು ಯೇಸುವಿನ ತಾಯಿ ಮರಿಯಳಿಗೆ ಸ್ಪಷ್ಟ ವಿವರಣೆಯನ್ನು ಕೊಡುತ್ತಾ “ಪವಿತ್ರಾತ್ಮವು ನಿನ್ನ ಮೇಲೆ ಬರುವುದು ಮತ್ತು ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ಹುಟ್ಟುವವನು ಪವಿತ್ರನೆಂದೂ ದೇವರ ಮಗನೆಂದೂ ಕರೆಯಲ್ಪಡುವನು” ಅಂದನು. (ಲೂಕ 1:35) ಯೇಸುವಿನ ಜನನದ ಕುರಿತಾದ ನಿರ್ದಿಷ್ಟ ವಿವರಗಳನ್ನು ಮರಿಯಳು ಅವನಿಗೆ ಅವನ ಬಾಲ್ಯದಲ್ಲಿ ತಿಳಿಸಿದ್ದಿರಬೇಕೆಂಬುದು ವ್ಯಕ್ತ. ಏಕೆಂದರೆ, ಒಂದು ಸಂದರ್ಭದಲ್ಲಿ ಮರಿಯ ಮತ್ತು ಯೇಸುವಿನ ಸಾಕುತಂದೆ ಯೋಸೇಫನು ಯೇಸುವನ್ನು ದೇವರ ಆಲಯದಲ್ಲಿ ಕಂಡುಕೊಂಡಾಗ ಬಾಲಕ ಯೇಸು, “ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” ಎಂದು ಕೇಳಿದನು. (ಲೂಕ 2:49) ಹೀಗೆ, ತಾನು ದೇವರ ಮಗನೆಂಬುದು ಯೇಸುವಿಗೆ ಅತಿ ಚಿಕ್ಕಂದಿನಲ್ಲೇ ತಿಳಿದಿತ್ತೆಂಬುದು ಸ್ಪಷ್ಟ. ಆದುದರಿಂದ ದೇವರ ನೀತಿಯನ್ನು ಮಹಿಮೆಪಡಿಸುವುದು ಅವನಿಗೆ ತುಂಬ ಮಹತ್ವದ ವಿಷಯವಾಗಿತ್ತು.
7. ಯೇಸುವಿನಲ್ಲಿ ಯಾವ ಅಮೂಲ್ಯ ಸ್ವತ್ತು-ಸಾಮರ್ಥ್ಯಗಳಿದ್ದವು?
7 ಆರಾಧನಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಆಧ್ಯಾತ್ಮಿಕ ವಿಷಯಗಳಲ್ಲಿ ಯೇಸು ತೀವ್ರಾಸಕ್ತಿಯನ್ನು ತೋರಿಸಿದನು. ಹೀಬ್ರು ಶಾಸ್ತ್ರಗ್ರಂಥದಿಂದ ಕೇಳಿಸಿಕೊಂಡ ಮತ್ತು ಓದಿದ ಎಲ್ಲ ವಿಷಯಗಳನ್ನು ಅವನು ಗ್ರಹಿಸಿಕೊಂಡಿದ್ದಿರಬೇಕು. ಏಕೆಂದರೆ ಅವನಿಗೆ ಪರಿಪೂರ್ಣ ಬುದ್ಧಿಶಕ್ತಿಯಿತ್ತು. (ಲೂಕ 4:16) ಅವನಲ್ಲಿ ಇನ್ನೊಂದು ಅಮೂಲ್ಯ ಸ್ವತ್ತು ಇತ್ತು. ಏನೆಂದರೆ ಮಾನವಕುಲದ ಪರವಾಗಿ ಯಜ್ಞಾರ್ಪಿಸಸಾಧ್ಯವಿದ್ದ ಒಂದು ಪರಿಪೂರ್ಣ ಮನುಷ್ಯ ಶರೀರ. ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಪ್ರಾರ್ಥನೆ ಮಾಡುತ್ತಿದ್ದು, ಕೀರ್ತನೆ 40:6-8ರ ಪ್ರವಾದನಾ ಮಾತುಗಳ ಕುರಿತು ಯೋಚಿಸುತ್ತಿದ್ದಿರಬಹುದು.—ಲೂಕ 3:21; ಇಬ್ರಿಯ 10:5-10 ಓದಿ.a
8. ಸ್ನಾನಿಕನಾದ ಯೋಹಾನನು ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳುವುದನ್ನು ತಡೆಯಲು ಪ್ರಯತ್ನಿಸಿದ್ದು ಏಕೆ?
8 ಯೇಸು ದೀಕ್ಷಾಸ್ನಾನ ಪಡೆಯದಂತೆ ಸ್ನಾನಿಕನಾದ ಯೋಹಾನನು ಆರಂಭದಲ್ಲಿ ತಡೆದನು. ಏಕೆ? ಏಕೆಂದರೆ ಯೋಹಾನನು ಯೆಹೂದ್ಯರಿಗೆ ದೀಕ್ಷಾಸ್ನಾನ ಕೊಡುತ್ತಿದ್ದದ್ದು ಅವರು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಮಾಡಿದ ಪಾಪಕ್ಕೆ ಪಶ್ಚಾತ್ತಾಪದ ಸೂಚಕವಾಗಿತ್ತು. ಯೋಹಾನನು ಯೇಸುವಿನ ಆಪ್ತ ಸಂಬಂಧಿಕನಾದ್ದರಿಂದ ಯೇಸು ನೀತಿವಂತನೂ ಪಶ್ಚಾತ್ತಾಪದ ಅಗತ್ಯವಿಲ್ಲದವನೂ ಆಗಿದ್ದನೆಂಬುದು ಅವನಿಗೆ ಗೊತ್ತಿದ್ದಿರಬೇಕು. ಆದರೆ ತಾನು ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಯೋಗ್ಯವೆಂದು ಯೇಸು ಯೋಹಾನನಿಗೆ ಮನವರಿಕೆ ಮಾಡುತ್ತಾ “ಈ ರೀತಿಯಲ್ಲಿ ನೀತಿಯುತವಾಗಿರುವುದೆಲ್ಲವನ್ನೂ ನಡಿಸುವುದು ನಮಗೆ ಸೂಕ್ತವಾದದ್ದಾಗಿದೆ” ಎಂದು ವಿವರಿಸಿದನು.—ಮತ್ತಾ. 3:15.
9. ಯೇಸುವಿನ ದೀಕ್ಷಾಸ್ನಾನವು ಏನನ್ನು ಸೂಚಿಸಿತು?
9 ಆದಾಮನಂತೆ ಒಂದು ಪರಿಪೂರ್ಣ ಮಾನವಕುಲವನ್ನು ಹುಟ್ಟಿಸುವ ಸಾಧ್ಯತೆಯು ತನಗಿತ್ತೆಂದು ಪರಿಪೂರ್ಣ ಮನುಷ್ಯನಾದ ಯೇಸು ನೆನಸಬಹುದಿತ್ತು. ಆದರೂ ಯೇಸು ಅಂಥ ಭವಿಷ್ಯತ್ತನ್ನು ಎಂದೂ ಅಪೇಕ್ಷಿಸಲಿಲ್ಲ. ಏಕೆಂದರೆ ಅದು ಅವನಿಗಾಗಿ ಯೆಹೋವನ ಚಿತ್ತವಾಗಿರಲಿಲ್ಲ. ದೇವರು ಯೇಸುವನ್ನು ಭೂಮಿಗೆ ಕಳುಹಿಸಿದ್ದು ವಾಗ್ದತ್ತ ಸಂತಾನ ಅಥವಾ ಮೆಸ್ಸೀಯನ ಪಾತ್ರವನ್ನು ನೆರವೇರಿಸುವುದಕ್ಕಾಗಿಯೇ. ಇದರಲ್ಲಿ ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಯಜ್ಞವಾಗಿ ಅರ್ಪಿಸುವುದು ಸೇರಿತ್ತು. (ಯೆಶಾಯ 53:5, 6, 12 ಓದಿ.) ಯೇಸುವಿನ ದೀಕ್ಷಾಸ್ನಾನಕ್ಕೆ ನಮ್ಮ ದೀಕ್ಷಾಸ್ನಾನಕ್ಕಿರುವ ಅದೇ ಅರ್ಥವಿರಲಿಲ್ಲ. ಅದರಲ್ಲಿ ಯೆಹೋವನಿಗೆ ಸಮರ್ಪಣೆಯು ಸೇರಿರಲಿಲ್ಲ. ಏಕೆಂದರೆ ಯೇಸುವು ಆ ಮೊದಲೇ ದೇವರ ಸಮರ್ಪಿತ ಜನಾಂಗವಾದ ಇಸ್ರಾಯೇಲಿನ ಭಾಗವಾಗಿದ್ದನು. ಆದುದರಿಂದ, ಯೇಸುವಿನ ದೀಕ್ಷಾಸ್ನಾನವು ದೇವರ ಚಿತ್ತವನ್ನು ಮಾಡುವುದಕ್ಕಾಗಿ ತನ್ನನ್ನು ನೀಡಿಕೊಳ್ಳುವುದನ್ನು ಸೂಚಿಸಿತು. ಇದು ಮೆಸ್ಸೀಯನ ವಿಷಯದಲ್ಲಿ ಶಾಸ್ತ್ರಗ್ರಂಥದಲ್ಲಿ ಮುಂತಿಳಿಸಿದ್ದಕ್ಕೆ ಅನುಸಾರವಾಗಿದೆ.
10. ಮೆಸ್ಸೀಯನಾಗಿ ದೇವರ ಚಿತ್ತವನ್ನು ಮಾಡುವುದರಲ್ಲಿ ಏನು ಒಳಗೂಡಿತ್ತು? ಈ ವಿಷಯದ ಕುರಿತು ಯೇಸುವಿಗೆ ಹೇಗನಿಸಿತು?
10 ಯೇಸುವಿಗಾಗಿದ್ದ ಯೆಹೋವನ ಚಿತ್ತದಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು, ಶಿಷ್ಯರನ್ನಾಗಿ ಮಾಡುವುದು ಮತ್ತು ಶಿಷ್ಯರನ್ನಾಗಿ ಮಾಡಲು ಇತರರಿಗೆ ತರಬೇತಿ ನೀಡುವುದು ಒಳಗೂಡಿತ್ತು. ಯೆಹೋವನ ಚಿತ್ತವನ್ನು ಮಾಡಲು ಯೇಸು ತನ್ನನ್ನು ನೀಡಿಕೊಂಡದ್ದರಲ್ಲಿ, ಹಿಂಸೆಯನ್ನು ತಾಳಿಕೊಳ್ಳಲು ಮತ್ತು ಯೆಹೋವ ದೇವರ ನೀತಿಯುತ ಪರಮಾಧಿಕಾರವನ್ನು ಬೆಂಬಲಿಸಲಿಕ್ಕಾಗಿ ಕ್ರೂರ ಮರಣವನ್ನು ಅನುಭವಿಸಲು ಅವನಿಗಿದ್ದ ಸಿದ್ಧಮನಸ್ಸೂ ಒಳಗೂಡಿತ್ತು. ಯೇಸು ತನ್ನ ಸ್ವರ್ಗೀಯ ತಂದೆಯನ್ನು ನಿಜವಾಗಿ ಪ್ರೀತಿಸಿದ ಕಾರಣ ಆತನ ಚಿತ್ತವನ್ನು ಮಾಡಲು ಸಂತೋಷಪಟ್ಟನು. ಅಷ್ಟೇ ಅಲ್ಲ, ತನ್ನ ದೇಹವನ್ನು ಯಜ್ಞವಾಗಿ ನೀಡಿಕೊಳ್ಳುವುದು ಅವನಿಗೆ ಆಳವಾದ ಸಂತೃಪ್ತಿಯನ್ನು ಕೊಟ್ಟಿತು. (ಯೋಹಾ. 14:31) ನಮ್ಮನ್ನು ಪಾಪ ಮತ್ತು ಮರಣದ ದಾಸತ್ವದಿಂದ ಬಿಡಿಸಲು ತನ್ನ ಪರಿಪೂರ್ಣ ಜೀವದ ಬೆಲೆಯನ್ನು ವಿಮೋಚನಾ ಮೌಲ್ಯವಾಗಿ ನೀಡಸಾಧ್ಯವಿತ್ತು ಎಂದು ತಿಳಿಯಲು ಅವನು ಸಂತೋಷಪಟ್ಟನು. ಈ ಮಹಾ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯೇಸು ತನ್ನನ್ನು ನೀಡಿಕೊಂಡದ್ದನ್ನು ದೇವರು ಮೆಚ್ಚಿದನೊ? ಖಂಡಿತವಾಗಿಯೂ!
11. ಯೇಸುವನ್ನು ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತನಾಗಿ ತಾನು ಸ್ವೀಕರಿಸಿದ್ದೇನೆಂದು ಯೆಹೋವನು ತೋರಿಸಿದ್ದು ಹೇಗೆ?
11 ಯೇಸು ದೀಕ್ಷಾಸ್ನಾನ ಪಡೆದು ಯೋರ್ದನ್ ನದಿಯ ನೀರಿನಿಂದ ಮೇಲಕ್ಕೆ ಬಂದಾಗ ಯೆಹೋವ ದೇವರು ನುಡಿದ ಮೆಚ್ಚಿಗೆಯ ಸ್ಪಷ್ಟ ಮಾತನ್ನು ನಾಲ್ಕು ಮಂದಿ ಸುವಾರ್ತಾ ಲೇಖಕರೂ ದೃಢಪಡಿಸುತ್ತಾರೆ. ಸ್ನಾನಿಕನಾದ ಯೋಹಾನನು ಸಾಕ್ಷಿ ನೀಡುತ್ತಾ, “ಪವಿತ್ರಾತ್ಮವು ಆಕಾಶದಿಂದ ಪಾರಿವಾಳದ ರೂಪದಲ್ಲಿ ಇಳಿದುಬರುವುದನ್ನು ನಾನು ನೋಡಿದೆನು ಮತ್ತು ಅದು [ಯೇಸುವಿನ] ಮೇಲೆ ನೆಲೆಗೊಂಡಿತು. . . . ನಾನು ಅದನ್ನು ನೋಡಿದ್ದೇನೆ ಮತ್ತು ಇವನೇ ದೇವರ ಮಗನು ಎಂದು ಸಾಕ್ಷಿಕೊಟ್ಟಿದ್ದೇನೆ” ಎಂದನು. (ಯೋಹಾ. 1:32-34) ಅದಲ್ಲದೆ ಆ ಸಂದರ್ಭದಲ್ಲಿ ಯೆಹೋವನು ತಾನೇ ಘೋಷಿಸಿದ್ದು: “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ.”—ಮತ್ತಾ. 3:17; ಮಾರ್ಕ 1:11; ಲೂಕ 3:22.
ಮರಣದ ತನಕವೂ ನಂಬಿಗಸ್ತನು
12. ತನ್ನ ದೀಕ್ಷಾಸ್ನಾನದ ನಂತರ ಮೂರೂವರೆ ವರ್ಷಗಳಲ್ಲಿ ಯೇಸು ಏನೆಲ್ಲ ಮಾಡಿದನು?
12 ಮುಂದಿನ ಮೂರೂವರೆ ವರ್ಷಗಳಲ್ಲಿ ಯೇಸು ಜನರಿಗೆ ತನ್ನ ತಂದೆಯ ಕುರಿತು ಮತ್ತು ತಂದೆಯ ನೀತಿಯುತ ಪರಮಾಧಿಕಾರದ ಕುರಿತು ಕಲಿಸುವುದರಲ್ಲಿ ತನ್ನನ್ನು ಪೂರ್ಣವಾಗಿ ಒಳಗೂಡಿಸಿಕೊಂಡನು. ವಾಗ್ದತ್ತ ದೇಶದ ಉದ್ದಗಲವನ್ನು ಕಾಲ್ನಡಿಗೆಯಲ್ಲಿ ಪ್ರಯಾಣಿಸುವಾಗ ಅವನು ದಣಿದನಾದರೂ ಸತ್ಯಕ್ಕೆ ಕೂಲಂಕಷ ಸಾಕ್ಷಿಯನ್ನು ನೀಡದಂತೆ ಅವನನ್ನು ಯಾವುದೂ ತಡೆಯಶಕ್ತವಾಗಲಿಲ್ಲ. (ಯೋಹಾ. 4:6, 34; 18:37) ಯೇಸು ದೇವರ ರಾಜ್ಯದ ಕುರಿತಾಗಿ ಇತರರಿಗೆ ಕಲಿಸಿದನು. ಅವನು ಅದ್ಭುತಕರವಾಗಿ ರೋಗಿಗಳನ್ನು ವಾಸಿಮಾಡಿದನು. ಹಸಿದಿದ್ದ ಜನರ ಗುಂಪುಗಳಿಗೆ ಉಣಿಸಿದನು ಮತ್ತು ಸತ್ತವರನ್ನು ಸಹ ಎಬ್ಬಿಸಿದನು. ಈ ಮೂಲಕ ದೇವರ ರಾಜ್ಯವು ಮಾನವರಿಗಾಗಿ ಏನನ್ನು ಪೂರೈಸಲಿದೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದನು.—ಮತ್ತಾ. 11:4, 5.
13. ಪ್ರಾರ್ಥನೆಯ ಕುರಿತು ಯೇಸು ಏನನ್ನು ಕಲಿಸಿದನು?
13 ತನ್ನ ಬೋಧನೆಗಳಿಗೆ ಹಾಗೂ ವಾಸಿಕಾರಕ ಕೆಲಸಗಳಿಗೆ ವೈಯಕ್ತಿಕ ಕೀರ್ತಿಯನ್ನು ತೆಗೆದುಕೊಳ್ಳುವ ಬದಲಾಗಿ ಯೇಸು ಯೆಹೋವನಿಗೇ ಎಲ್ಲ ಸ್ತುತಿಯನ್ನು ದೀನತೆಯಿಂದ ಕೊಡುವ ಮೂಲಕ ಗಮನಾರ್ಹ ಮಾದರಿಯನ್ನು ಇಟ್ಟನು. (ಯೋಹಾ. 5:19; 11:41-44) ನಾವು ಪ್ರಾರ್ಥಿಸತಕ್ಕ ಅತಿ ಮಹತ್ವದ ವಿಷಯಗಳ ಕುರಿತು ಯೇಸು ತಿಳಿಸಿದನು. ನಮ್ಮ ಪ್ರಾರ್ಥನೆಗಳಲ್ಲಿ ಯೆಹೋವ ದೇವರ ನಾಮವು “ಪವಿತ್ರೀಕರಿಸಲ್ಪಡಲಿ” ಎಂಬ ವಿನಂತಿ ಸೇರಿರಬೇಕು ಹಾಗೂ ದೇವರ ‘ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರುವಂತೆ’ ದೇವರ ನೀತಿಯುತ ಪರಮಾಧಿಕಾರವು ಸೈತಾನನ ದುಷ್ಟ ಆಳಿಕೆಯನ್ನು ತೆಗೆದುಹಾಕಲಿ ಎಂಬ ವಿನಂತಿಗಳು ಸೇರಿರತಕ್ಕದ್ದು. (ಮತ್ತಾ. 6:9, 10) “ಮೊದಲು ರಾಜ್ಯವನ್ನೂ [ದೇವರ] ನೀತಿಯನ್ನೂ ಹುಡುಕುತ್ತಾ” ಇರುವ ಮೂಲಕ ಅಂಥ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕಾರ್ಯನಡಿಸುವಂತೆ ಯೇಸು ನಮ್ಮನ್ನು ಪ್ರೋತ್ಸಾಹಿಸಿದನು.—ಮತ್ತಾ. 6:33.
14. ಯೇಸು ಪರಿಪೂರ್ಣನಾಗಿದ್ದರೂ ದೇವರ ಉದ್ದೇಶದಲ್ಲಿ ತನ್ನ ಪಾತ್ರವನ್ನು ನೆರವೇರಿಸಲು ಪ್ರಯತ್ನಪಡುವ ಅಗತ್ಯವಿತ್ತು ಏಕೆ?
14 ತನ್ನ ಯಜ್ಞಾರ್ಪಣಾ ಮರಣದ ಸಮಯವು ಸಮೀಪಿಸಿದಂತೆ ಯೇಸುವಿಗೆ ತಾನು ಹೊತ್ತಿದ್ದ ಭಾರವಾದ ಜವಾಬ್ದಾರಿಯ ತೀವ್ರ ಅರಿವುಂಟಾಯಿತು. ಯೆಹೋವನ ಉದ್ದೇಶ ಮತ್ತು ಕೀರ್ತಿಯು ಯೇಸುವು ಅನ್ಯಾಯದ ವಿಚಾರಣೆ ಮತ್ತು ಕ್ರೂರ ಮರಣವನ್ನು ತಾಳಿಕೊಳ್ಳುವುದರ ಮೇಲೆ ಹೊಂದಿಕೊಂಡಿತ್ತು. ತನ್ನ ಮರಣಕ್ಕೆ ಐದು ದಿನಗಳಿಗೆ ಮುಂಚೆ ಯೇಸು ಪ್ರಾರ್ಥಿಸಿದ್ದು: “ಈಗ ನನ್ನ ಪ್ರಾಣವು ಕಳವಳಗೊಂಡಿದೆ, ನಾನೇನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು. ಆದರೆ ನಾನು ಈ ಗಳಿಗೆಗಾಗಿಯೇ ಬಂದಿದ್ದೇನೆ.” ಈ ಮಾನವಸಹಜ ಭಾವನೆಗಳನ್ನು ವ್ಯಕ್ತಪಡಿಸಿದ ನಂತರ ಯೇಸು ನಿಸ್ವಾರ್ಥತೆಯಿಂದ ತನ್ನ ಗಮನವನ್ನು ಅತಿ ಮಹತ್ವದ ವಿಷಯಗಳ ಕಡೆಗೆ ಕೇಂದ್ರೀಕರಿಸುತ್ತಾ “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಪ್ರಾರ್ಥಿಸಿದನು. ಯೆಹೋವನು ಆ ಕೂಡಲೇ “ಮಹಿಮೆಪಡಿಸಿದ್ದೇನೆ ಮತ್ತು ಪುನಃ ಮಹಿಮೆಪಡಿಸುವೆನು” ಎಂದು ಪ್ರತಿಕ್ರಿಯಿಸಿದನು. (ಯೋಹಾ. 12:27, 28) ಹೌದು, ಬೇರೆ ಯಾವನೇ ಮಾನವನು ಎಂದೂ ಎದುರಿಸದಿದ್ದಂಥ ಸಮಗ್ರತೆಯ ಮಹಾ ಪರೀಕ್ಷೆಯನ್ನು ಎದುರಿಸಲು ಯೇಸು ಸಿದ್ಧನಾಗಿದ್ದನು. ತನ್ನ ಸ್ವರ್ಗೀಯ ತಂದೆಯ ಆ ಮಾತುಗಳನ್ನು ಕೇಳಿಸಿಕೊಂಡದ್ದು, ನಿಶ್ಚಯವಾಗಿ ಯೆಹೋವನ ಪರಮಾಧಿಕಾರವನ್ನು ಮಹಿಮೆಪಡಿಸುವುದರಲ್ಲಿ ಮತ್ತು ಸಮರ್ಥಿಸುವುದರಲ್ಲಿ ತಾನು ಯಶಸ್ವಿಯಾಗುವೆನು ಎಂಬ ತುಂಬು ಭರವಸೆಯನ್ನು ಯೇಸುವಿಗೆ ಕೊಟ್ಟಿತು. ಅವನು ಯಶಸ್ವಿಯಾದನು ಸಹ!
ಯೇಸುವಿನ ಮರಣ ಏನನ್ನು ನೆರವೇರಿಸಿತು?
15. ಯೇಸು ಸಾಯುವುದಕ್ಕೆ ತುಸು ಮುಂಚಿತವಾಗಿ “ನೆರವೇರಿತು” ಎಂದು ಹೇಳಿದ್ದೇಕೆ?
15 ಯೇಸು ಯಾತನಾ ಕಂಬದಲ್ಲಿ ಪ್ರಾಣಸಂಕಟದಿಂದ ತನ್ನ ಕೊನೆಯುಸಿರು ಬಿಡುತ್ತಾ “ನೆರವೇರಿತು” ಎಂದು ಹೇಳಿದನು. (ಯೋಹಾ. 19:30) ತನ್ನ ದೀಕ್ಷಾಸ್ನಾನದಿಂದ ಹಿಡಿದು ಮರಣದ ತನಕ ಮೂರೂವರೆ ವರ್ಷಗಳಲ್ಲಿ ದೇವರ ಸಹಾಯದಿಂದ ಯೇಸು ಎಷ್ಟೆಲ್ಲ ವಿಷಯಗಳನ್ನು ನೆರವೇರಿಸಶಕ್ತನಾದನು! ಯೇಸು ಸತ್ತಾಗ ಅಲ್ಲಿ ಭೀಕರ ಭೂಕಂಪವಾಯಿತು. ಯೇಸುವಿನ ಮರಣದಂಡನೆಯ ಮೇಲುಸ್ತುವಾರಿ ವಹಿಸಿದ್ದ ರೋಮನ್ ಶತಾಧಿಪತಿ ಸಹ “ಖಂಡಿತವಾಗಿಯೂ ಇವನು ದೇವಕುಮಾರನಾಗಿದ್ದನು” ಎಂದು ಹೇಳುವಂತೆ ಪ್ರೇರೇಪಿಸಲ್ಪಟ್ಟನು. (ಮತ್ತಾಯ 27:54) ತಾನು ದೇವಕುಮಾರನೆಂದು ಯೇಸು ಹೇಳಿದ್ದಾಗ ಜನರು ಗೇಲಿಮಾಡಿದ್ದನ್ನು ಆ ಅಧಿಕಾರಿ ಕಂಡಿದ್ದನೆಂಬುದು ವ್ಯಕ್ತ. ಯೇಸು ಸಕಲ ಕಷ್ಟಗಳ ಮಧ್ಯೆಯೂ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು ಹಾಗೂ ಸೈತಾನನನ್ನು ಘೋರ ಸುಳ್ಳುಗಾರನಾಗಿ ರುಜುಪಡಿಸಿದನು. ದೇವರ ಪರಮಾಧಿಕಾರವನ್ನು ಬೆಂಬಲಿಸುವ ಎಲ್ಲರ ವಿಷಯದಲ್ಲಿ ಸೈತಾನನು, “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಸವಾಲು ಹಾಕಿದ್ದನು. (ಯೋಬ 2:4) ಆದಾಮಹವ್ವರು ತಮ್ಮ ಮುಂದೆ ಇಡಲಾಗಿದ್ದ ಹೆಚ್ಚು ಸುಲಭದ ಪರೀಕ್ಷೆಯ ಕೆಳಗೆ ನಂಬಿಗಸ್ತರಾಗಿ ಉಳಿಯಸಾಧ್ಯವಿತ್ತು ಎಂದು ಯೇಸು ತನ್ನ ನಂಬಿಗಸ್ತಿಕೆಯ ಮೂಲಕ ತೋರಿಸಿದನು. ಎಲ್ಲದಕ್ಕಿಂತ ಅತಿ ಮುಖ್ಯವಾಗಿ ಯೇಸುವಿನ ಜೀವನ ಮತ್ತು ಮರಣವು ಯೆಹೋವನ ಪರಮಾಧಿಕಾರ ನೀತಿಯುತವಾದದ್ದು ಎಂಬುದನ್ನು ಎತ್ತಿಹಿಡಿಯಿತು ಮತ್ತು ಮಹಿಮೆಪಡಿಸಿತು. (ಜ್ಞಾನೋಕ್ತಿ 27:11 ಓದಿ.) ಯೇಸುವಿನ ಮರಣವು ಇನ್ನೇನನ್ನಾದರೂ ನೆರವೇರಿಸಿತೊ? ನಿಶ್ಚಯವಾಗಿಯೂ ಹೌದು!
16, 17. (ಎ) ಕ್ರೈಸ್ತ ಪೂರ್ವ ಯೆಹೋವನ ಸಾಕ್ಷಿಗಳಿಗೆ ದೇವರೊಂದಿಗೆ ನೀತಿಯ ನಿಲುವನ್ನು ಇಟ್ಟುಕೊಳ್ಳಲು ಸಾಧ್ಯವಾಯಿತು ಏಕೆ? (ಬಿ) ತನ್ನ ಮಗನ ನಂಬಿಗಸ್ತಿಕೆಗೆ ಯೆಹೋವನು ಪ್ರತಿಫಲವನ್ನು ಕೊಟ್ಟದ್ದು ಹೇಗೆ? ಕರ್ತನಾದ ಯೇಸು ಕ್ರಿಸ್ತನು ಏನನ್ನು ಮಾಡುತ್ತಾ ಇದ್ದಾನೆ?
16 ಯೇಸು ಭೂಮಿಗೆ ಬರುವ ಮುಂಚೆಯೇ ಯೆಹೋವನ ಅನೇಕ ಸೇವಕರು ಜೀವಿಸಿದ್ದರು. ದೇವರ ಮುಂದೆ ಅವರು ನೀತಿಯ ನಿಲುವನ್ನು ಹೊಂದಿದ್ದರು. ಹಾಗಾಗಿ ಪುನರುತ್ಥಾನದ ನಿರೀಕ್ಷೆಯೂ ಅವರಿಗೆ ಕೊಡಲ್ಪಟ್ಟಿತ್ತು. (ಯೆಶಾ. 25:8; ದಾನಿ. 12:13) ಆದರೆ ಯಾವ ನ್ಯಾಯಬದ್ಧ ಆಧಾರದ ಮೇಲೆ ಪರಿಶುದ್ಧ ದೇವರಾದ ಯೆಹೋವನು ಪಾಪಪೂರ್ಣ ಮಾನವರನ್ನು ಅಂಥ ಆಶ್ಚರ್ಯಕರ ರೀತಿಯಲ್ಲಿ ಆಶೀರ್ವದಿಸಸಾಧ್ಯವಿತ್ತು? ಬೈಬಲ್ ವಿವರಿಸುವುದು: “ದೇವರು ಪಾಪನಿವಾರಣ ಯಜ್ಞವಾಗಿ [ಯೇಸು ಕ್ರಿಸ್ತನನ್ನು] ಇಟ್ಟನು; ಪಾಪನಿವಾರಣೆಯು ಅವನ ರಕ್ತದಲ್ಲಿ ನಂಬಿಕೆಯಿಡುವ ಮೂಲಕ ದೊರಕುವುದು. ದೇವರು ತನ್ನ ಸ್ವಂತ ನೀತಿಯನ್ನು ತೋರ್ಪಡಿಸುವುದಕ್ಕಾಗಿಯೇ ಇದನ್ನು ಮಾಡಿದನು, ಏಕೆಂದರೆ ದೇವರು ಸಹನಶೀಲತೆಯನ್ನು ತೋರಿಸುತ್ತಿದ್ದಾಗ ಪೂರ್ವದಲ್ಲಿ ಸಂಭವಿಸಿದ ಪಾಪಗಳನ್ನು ಕ್ಷಮಿಸುತ್ತಿದ್ದನು; ಆದುದರಿಂದ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮನುಷ್ಯನನ್ನು ನೀತಿವಂತನೆಂದು ನಿರ್ಣಯಿಸುವಾಗಲೂ ದೇವರು ತನ್ನನ್ನು ನೀತಿವಂತನಾಗಿ ತೋರಿಸಿಕೊಳ್ಳಲು ತನ್ನ ಸ್ವಂತ ನೀತಿಯನ್ನು ಈ ವರ್ತಮಾನಕಾಲದಲ್ಲಿ ತೋರ್ಪಡಿಸಿದ್ದಾನೆ.”—ರೋಮ. 3:25, 26.b
17 ಯೆಹೋವನು ಯೇಸುವನ್ನು ಪುನರುತ್ಥಾನದ ಮೂಲಕ ಬಹುಮಾನಿಸಿದನು; ಭೂಮಿಗೆ ಬರುವ ಮುಂಚೆ ಅವನಿಗಿದ್ದ ಸ್ಥಾನಕ್ಕಿಂತ ಶ್ರೇಷ್ಠ ಸ್ಥಾನವನ್ನು ಕೊಟ್ಟನು. ಯೇಸು ಈಗ ಮಹಿಮಾಭರಿತ ಆತ್ಮಜೀವಿಯಾಗಿ ಅಮರತ್ವವನ್ನು ಪಡೆದಿದ್ದಾನೆ. (ಇಬ್ರಿ. 1:3) ಮಹಾ ಯಾಜಕನೂ ಅರಸನೂ ಆದ ಯೇಸು ಕ್ರಿಸ್ತನು ದೇವರ ನೀತಿಪರತೆಯನ್ನು ಮಹಿಮೆಪಡಿಸಲು ತನ್ನ ಹಿಂಬಾಲಕರಿಗೆ ಸಹಾಯಮಾಡುತ್ತಿದ್ದಾನೆ. ಯಾರು ದೇವರ ನೀತಿಪರತೆಯನ್ನು ಮಹಿಮೆಪಡಿಸುತ್ತಾರೋ ಮತ್ತು ತನ್ನ ಮಗನ ಅನುಕರಣೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾರೋ ಅವರಿಗೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು ಪ್ರತಿಫಲವನ್ನು ಕೊಡುತ್ತಾನೆ ಎಂಬುದಕ್ಕೆ ನಾವೆಷ್ಟು ಕೃತಜ್ಞರು!—ಕೀರ್ತನೆ 34:3; ಇಬ್ರಿಯ 11:6 ಓದಿ.
18. ಮುಂದಿನ ಅಧ್ಯಯನ ಲೇಖನದ ವಿಷಯವು ಯಾವುದು?
18 ಹೇಬೆಲನ ಕಾಲದಿಂದಲೂ ಜೀವಿಸಿದ ನಂಬಿಗಸ್ತ ಮಾನವರೆಲ್ಲರೂ ಯೆಹೋವನೊಂದಿಗೆ ಆಪ್ತ ಸಂಬಂಧದಲ್ಲಿ ಆನಂದಿಸಿದರು. ಏಕೆಂದರೆ ಅವರು ವಾಗ್ದತ್ತ ಸಂತಾನದಲ್ಲಿ ನಂಬಿಕೆಯನ್ನು ತೋರಿಸಿದರು ಮತ್ತು ಭರವಸೆಯಿಟ್ಟರು. ತನ್ನ ಮಗನು ಸಮಗ್ರತೆಯನ್ನು ಕಾಪಾಡಿಕೊಳ್ಳುವನೆಂದೂ ಅವನ ಮರಣವು “ಲೋಕದ ಪಾಪವನ್ನು” ಪರಿಪೂರ್ಣವಾಗಿ ಮುಚ್ಚುವುದು ಎಂದೂ ಯೆಹೋವನಿಗೆ ಗೊತ್ತಿತ್ತು. (ಯೋಹಾ. 1:29) ಇಂದು ಜೀವಿಸುತ್ತಿರುವ ಜನರು ಕೂಡ ಯೇಸುವಿನ ಮರಣದಿಂದ ಪ್ರಯೋಜನವನ್ನು ಪಡೆಯುತ್ತಾರೆ. (ರೋಮ. 3:26) ಹಾಗಾದರೆ ಕ್ರಿಸ್ತನ ವಿಮೋಚನಾ ಮೌಲ್ಯವು ನಿಮಗೆ ಯಾವ ಆಶೀರ್ವಾದಗಳನ್ನು ತರಬಲ್ಲದು? ಈ ವಿಷಯವನ್ನು ನಾವು ಮುಂದಿನ ಅಧ್ಯಯನ ಲೇಖನದಲ್ಲಿ ಚರ್ಚಿಸಲಿದ್ದೇವೆ.
[ಪಾದಟಿಪ್ಪಣಿಗಳು]
a ಇಲ್ಲಿ ಅಪೊಸ್ತಲ ಪೌಲನು ಗ್ರೀಕ್ ಸೆಪ್ಟ್ಯುಅಜಿಂಟ್ ಭಾಷಾಂತರದಿಂದ ಕೀರ್ತನೆ 40:6-8ನ್ನು ಉಲ್ಲೇಖಿಸಿದ್ದಾನೆ. ಆ ಭಾಷಾಂತರದಲ್ಲಿ “ನೀನು ನನಗಾಗಿ ದೇಹವನ್ನು ಸಿದ್ಧಮಾಡಿದಿ” ಎಂಬ ಮಾತುಗಳಿವೆ. ಆದರೆ ಈ ವಾಕ್ಯವು ಇಂದು ಲಭ್ಯವಿರುವ ಪುರಾತನ ಹೀಬ್ರು ಶಾಸ್ತ್ರಗ್ರಂಥದ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ.
b ಪುಟ 6 ಮತ್ತು 7ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.
ನಿಮ್ಮ ಉತ್ತರವೇನು?
• ದೇವರ ನೀತಿಪರತೆಗೆ ಸವಾಲು ಹಾಕಲಾದದ್ದು ಹೇಗೆ?
• ಯೇಸುವಿನ ದೀಕ್ಷಾಸ್ನಾನವು ಏನನ್ನು ಸೂಚಿಸಿತು?
• ಯೇಸುವಿನ ಮರಣವು ಏನನ್ನು ನೆರವೇರಿಸಿತು?
[ಪುಟ 9ರಲ್ಲಿರುವ ಚಿತ್ರ]
ಯೇಸುವಿನ ದೀಕ್ಷಾಸ್ನಾನದಿಂದ ಏನು ಸೂಚಿಸಲ್ಪಟ್ಟಿತು ಎಂದು ನಿಮಗೆ ಗೊತ್ತೊ?