ಕ್ರೈಸ್ತರು ತಮ್ಮಷ್ಟಕ್ಕೇ ಇಟ್ಟುಕೊಳ್ಳಬಾರದ ಒಂದು ರಹಸ್ಯ!
“ನಾನು ಲೋಕಕ್ಕೆ ಬಹಿರಂಗವಾಗಿ ಮಾತಾಡಿದ್ದೇನೆ. . . . ನಾನು ಏನನ್ನೂ ರಹಸ್ಯವಾಗಿ ಮಾತಾಡಿಲ್ಲ.”—ಯೋಹಾನ 18:20, NW.
1, 2. ಶಾಸ್ತ್ರಗಳಲ್ಲಿ ಉಪಯೋಗಿಸಲ್ಪಟ್ಟಿರುವಂತೆ ಗ್ರೀಕ್ ಶಬ್ದವಾದ ಮಿಸ್ಟೀರಿಯನ್ನ ಸೂಚಿತಾರ್ಥವೇನು?
ಗ್ರೀಕ್ ಪದವಾದ ಮಿಸ್ಟೀರಿಯನ್, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ನಲ್ಲಿ 25 ಸಲ “ಪವಿತ್ರ ರಹಸ್ಯ” ಮತ್ತು 3 ಸಲ “ಮರ್ಮ” ಎಂಬುದಾಗಿ ಭಾಷಾಂತರಿಸಲ್ಪಟ್ಟಿದೆ. ಪವಿತ್ರವೆಂದು ಕರೆಯಲ್ಪಡುವ ಒಂದು ರಹಸ್ಯವು ಖಂಡಿತವಾಗಿಯೂ ಪ್ರಾಮುಖ್ಯವಾಗಿರಲೇಬೇಕು! ಅಂತಹ ಒಂದು ರಹಸ್ಯದ ಜ್ಞಾನವನ್ನು ಪಡೆದುಕೊಳ್ಳಲು ಸುಯೋಗಿತನಾಗಿರುವ ಯಾವ ವ್ಯಕ್ತಿಯೂ, ಉಚ್ಚವಾಗಿ ಸನ್ಮಾನಿಸಲ್ಪಟ್ಟ ಅನಿಸಿಕೆಯನ್ನು ಪಡೆಯಬೇಕು, ಯಾಕಂದರೆ ವಿಶ್ವದ ಸರ್ವೋಚ್ಚ ದೇವರೊಂದಿಗೆ ಒಂದು ರಹಸ್ಯದಲ್ಲಿ ಪಾಲಿಗನಾಗಲು ಅವನು ಯೋಗ್ಯನೆಂದು ಎಣಿಸಲ್ಪಟ್ಟಿದ್ದಾನೆ.
2 ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷ್ನರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ದೃಢೀಕರಿಸುವುದೇನೆಂದರೆ, ಅನೇಕ ಸಂದರ್ಭಗಳಲ್ಲಿ “ಪವಿತ್ರ ರಹಸ್ಯ” ಎಂಬ ಶಬ್ದಗಳು, “ಮರ್ಮ” ಎಂಬ ಶಬ್ದಕ್ಕಿಂತ ಹೆಚ್ಚು ಸೂಕ್ತವಾದ ಭಾಷಾಂತರ ಶಬ್ದಗಳಾಗಿವೆ. ಅದು ಮಿಸ್ಟೀರಿಯನ್ ಎಂಬ ಶಬ್ದದ ಕುರಿತಾಗಿ ಹೇಳುವದು: “[ಕ್ರೈಸ್ತ ಗ್ರೀಕ್ ಶಾಸ್ತ್ರಗಳ]ಲ್ಲಿ ಅದು (ಇಂಗ್ಲಿಷ್ ಪದದಂತೆ) ಗೂಢವಾದುದರ ಅರ್ಥವನ್ನು ಕೊಡುವುದಿಲ್ಲ. ಬದಲಾಗಿ ಆ ಗ್ರೀಕ್ ಪದವು, ಮಾನವ ಸಹಜವಾದ ಗ್ರಹಣಶಕ್ತಿಗೆ ಮೀರಿದ್ದು, ಕೇವಲ ದೈವಿಕ ಪ್ರಕಟನೆಯಿಂದ ತಿಳಿಯಲ್ಪಡಸಾಧ್ಯವಿದ್ದು, ದೇವರಿಂದ ನೇಮಿಸಲ್ಪಟ್ಟ ವಿಧ ಮತ್ತು ಸಮಯದಲ್ಲಿ ಆತನ ಆತ್ಮದಿಂದ ಜ್ಞಾನೋದಯಗೊಳಿಸಲ್ಪಟ್ಟವರಿಗೆ ಮಾತ್ರ ತಿಳಿಸಲ್ಪಡುವ ಮರ್ಮವೆಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯ ಅರ್ಥದಲ್ಲಿ, ಒಂದು ಮರ್ಮವು, ತಡೆಹಿಡಿಯಲ್ಪಟ್ಟಿರುವ ಜ್ಞಾನವನ್ನು ಸೂಚಿಸುತ್ತದೆ; ಅದರ ಶಾಸ್ತ್ರೀಯ ಮಹತ್ವಾರ್ಥವು, ಪ್ರಕಟಿಸಲ್ಪಟ್ಟಿರುವ ಸತ್ಯವೇ ಆಗಿದೆ. ಹೀಗಿರುವುದರಿಂದ, ಆ ವಿಷಯದೊಂದಿಗೆ ವಿಶೇಷವಾಗಿ ಸಂಬಂಧಿಸಿರುವ ಪದಗಳು, ‘ತಿಳಿಯಪಡಿಸಲ್ಪಟ್ಟಿತು,’ ‘ವ್ಯಕ್ತಪಡಿಸಲ್ಪಟ್ಟಿತು,’ ‘ಪ್ರಕಟಪಡಿಸಲ್ಪಟ್ಟಿತು,’ ‘ಸಾರಲ್ಪಟ್ಟಿತು,’ ‘ತಿಳಿದುಕೊ,’ ‘ಹಂಚುವಿಕೆ’ ಎಂದಾಗಿರುತ್ತವೆ.”
3. ಪ್ರಥಮ ಶತಮಾನದ ಕ್ರೈಸ್ತ ಸಭೆಯು, ರಹಸ್ಯಾತ್ಮಕವಾದ ನಿರ್ದಿಷ್ಟ ಧಾರ್ಮಿಕ ಗುಂಪುಗಳಿಂದ ಭಿನ್ನವಾಗಿದ್ದದ್ದು ಹೇಗೆ?
3 ಈ ವಿವರಣೆಯು, ಪ್ರಥಮ ಶತಮಾನದಲ್ಲಿ ಏಳಿಗೆ ಹೊಂದಿದ್ದ ರಹಸ್ಯಗರ್ಭಿತ ಧಾರ್ಮಿಕ ಗುಂಪುಗಳು ಮತ್ತು ಹೊಸದಾಗಿ ರಚಿತವಾದ ಕ್ರೈಸ್ತ ಸಭೆಯ ನಡುವಿನ ಒಂದು ದೊಡ್ಡ ವ್ಯತ್ಯಾಸವನ್ನು ಎತ್ತಿತೋರಿಸುತ್ತದೆ. ಗುಪ್ತ ಪಂಥಗಳೊಳಗೆ ದೀಕ್ಷೆ ಪಡೆಯುವವರು ಅನೇಕವೇಳೆ ಧಾರ್ಮಿಕ ಬೋಧನೆಗಳನ್ನು ಕಾಪಾಡಿಕೊಳ್ಳಲು ಮೌನ ವ್ರತದಿಂದ ಬಂಧಿಸಲ್ಪಟ್ಟಿರುವಾಗ, ಕ್ರೈಸ್ತರಾದರೊ ಎಂದೂ ಅಂತಹ ಒಂದು ನಿರ್ಬಂಧದ ಕೆಳಗೆ ಹಾಕಲ್ಪಟ್ಟಿರಲಿಲ್ಲ. ಅಪೊಸ್ತಲ ಪೌಲನು “ಪವಿತ್ರವಾದ ರಹಸ್ಯದಲ್ಲಿನ ದೇವರ ಜ್ಞಾನ”ದ (NW) ಕುರಿತಾಗಿ ಮಾತಾಡಿದ್ದು ನಿಜ. ಅವನು ಅದನ್ನು “ಮರೆಮಾಚಲ್ಪಟ್ಟಿರುವ ವಿವೇಕ” (NW) ಎಂದು ಕರೆದನು, ಅಂದರೆ ಅದು ‘ಇಹಲೋಕಾಧಿಕಾರಿಗಳಿಂದ’ ಮರೆಮಾಚಲ್ಪಟ್ಟಿತು. ದೇವರ ಆತ್ಮದ ಮೂಲಕ ಅದು ಯಾರಿಗೆ ಪ್ರಕಟಪಡಿಸಲ್ಪಟ್ಟಿತೊ ಆ ಕ್ರೈಸ್ತರಿಂದ—ಅವರು ಅದನ್ನು ಬಹಿರಂಗಗೊಳಿಸಲು ಸಾಧ್ಯವಾಗುವಂತೆ—ಅದು ಮರೆಮಾಚಲ್ಪಡಲಿಲ್ಲ.—1 ಕೊರಿಂಥ 2:7-12; ಹೋಲಿಸಿರಿ ಜ್ಞಾನೋಕ್ತಿ 1:20.
“ಪವಿತ್ರ ರಹಸ್ಯ”ವು ಗುರುತಿಸಲ್ಪಟ್ಟದ್ದು
4. “ಪವಿತ್ರ ರಹಸ್ಯ”ವು ಯಾರ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ಹೇಗೆ?
4 ಯೆಹೋವನ “ಪವಿತ್ರ ರಹಸ್ಯ”ವು ಯೇಸು ಕ್ರಿಸ್ತನ ಮೇಲೆ ಕೇಂದ್ರೀಕರಿಸುತ್ತದೆ. ಪೌಲನು ಬರೆದುದು: “[ಯೆಹೋವನು] ರಹಸ್ಯವಾದ ತನ್ನ ಸಂಕಲ್ಪವನ್ನು [“ಪವಿತ್ರ ರಹಸ್ಯವನ್ನು,” NW] ನಮಗೆ ತಿಳಿಯಪಡಿ”ಸಿದ್ದಾನೆ. “ತಾನು ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪವನ್ನು ಆತನು ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆಮಾಡಿಕೊಂಡಿದ್ದನು. ಅದೇನಂದರೆ ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬದೇ. ಕ್ರಿಸ್ತನಲ್ಲಿಯೇ ಸಮಸ್ತವು ಒಂದಾಗುವದು.” (ಎಫೆಸ 1:8-10) “ದೇವರ ಪವಿತ್ರ ರಹಸ್ಯ, ಕಾರ್ಯತಃ ಕ್ರಿಸ್ತನ ಕುರಿತಾದ ಒಂದು ನಿಷ್ಕೃಷ್ಟ ಜ್ಞಾನ”ದ (NW) ಅಗತ್ಯಕ್ಕೆ ಪೌಲನು ಕೈತೋರಿಸಿದಾಗ, ಅವನು ಆ “ಪವಿತ್ರ ರಹಸ್ಯ”ದ ಸ್ವರೂಪದ ಕುರಿತಾಗಿ ಇನ್ನೂ ಹೆಚ್ಚು ನಿರ್ದಿಷ್ಟವಾಗಿದ್ದನು.—ಕೊಲೊಸ್ಸೆ 2:2.
5. “ಪವಿತ್ರ ರಹಸ್ಯ”ದಲ್ಲಿ ಏನು ಒಳಗೂಡಿದೆ?
5 ಆದಾಗಲೂ “ಪವಿತ್ರ ರಹಸ್ಯವು,” ಅನೇಕ ಮುಖಗಳುಳ್ಳ ಒಂದು ರಹಸ್ಯವಾಗಿರುವುದರಿಂದ ಅದರಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿರುತ್ತದೆ. ಅದು, ಯೇಸು ವಾಗ್ದಾನಿತ ಸಂತಾನ ಅಥವಾ ಮೆಸ್ಸೀಯನೆಂಬ ಗುರುತಿಸುವಿಕೆ ಮಾತ್ರ ಆಗಿರುವುದಿಲ್ಲ; ಅದು ಅವನು ದೇವರ ಉದ್ದೇಶದಲ್ಲಿ ವಹಿಸುವಂತೆ ನೇಮಿಸಲ್ಪಟ್ಟಿರುವ ಪಾತ್ರವನ್ನು ಒಳಗೂಡಿಸುತ್ತದೆ. ಅದು ಒಂದು ಸ್ವರ್ಗೀಯ ಸರಕಾರವಾದ, ದೇವರ ಮೆಸ್ಸೀಯ ಸಂಬಂಧಿತ ರಾಜ್ಯವನ್ನು ಒಳಗೊಳ್ಳುತ್ತದೆ. ಇದನ್ನು ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳುವಾಗ ಸ್ಪಷ್ಟವಾಗಿ ವಿವರಿಸಿದನು: “ಪರಲೋಕರಾಜ್ಯದ ಗುಟ್ಟುಗಳನ್ನು [“ಪವಿತ್ರ ರಹಸ್ಯಗಳನ್ನು,” NW] ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 13:11.
6. (ಎ) “ಪವಿತ್ರ ರಹಸ್ಯ”ವು “ಅನಾದಿಯಾಗಿ ಗುಪ್ತವಾಗಿಡಲ್ಪಟ್ಟಿ”ತ್ತೆಂದು ಹೇಳುವುದು ಏಕೆ ಸರಿಯಾಗಿದೆ? (ಬಿ) ಅದು ಹೇಗೆ ಪ್ರಗತಿಪರವಾಗಿ ಪ್ರಕಟಿಸಲ್ಪಟ್ಟಿತು?
6 ಮೆಸ್ಸೀಯ ಸಂಬಂಧಿತ ರಾಜ್ಯಕ್ಕಾಗಿ ಒಂದು ಆಧಾರವನ್ನು ಒದಗಿಸಲಿಕ್ಕಾಗಿರುವ ದೇವರ ಉದ್ದೇಶದ ಕುರಿತಾದ ಮೊದಲನೆಯ ಪ್ರಸ್ತಾಪ ಮತ್ತು “ಪವಿತ್ರ ರಹಸ್ಯವು . . . ಮುಕ್ತಾಯಕ್ಕೆ ತರಲ್ಪಡು”ವುದರ (NW) ನಡುವೆ ಒಂದು ದೀರ್ಘ ಸಮಯಾವಧಿಯು ಗತಿಸಲಿತ್ತು. (ಪ್ರಕಟನೆ 10:7; ಆದಿಕಾಂಡ 3:15) ಪ್ರಕಟನೆ 10:7 ಮತ್ತು 11:15ರ ಒಂದು ತುಲನೆಯು ರುಜುಪಡಿಸುವಂತೆ, ರಾಜ್ಯದ ಸ್ಥಾಪನೆಯೊಂದಿಗೆ ಅದು ಮುಕ್ತಾಯಕ್ಕೆ ತರಲ್ಪಡುವ ಸಂಭವವಿತ್ತು. ವಾಸ್ತವದಲ್ಲಿ, ಏದೆನಿನಲ್ಲಿ ಪ್ರಥಮ ರಾಜ್ಯ ವಾಗ್ದಾನವನ್ನು ಕೊಡುವುದರಿಂದ ಹಿಡಿದು, ಸಾ.ಶ. 29ರಲ್ಲಿ ರಾಜ ಅಭಿಷಿಕ್ತನ ತೋರಿಬರುವಿಕೆಯ ವರೆಗೆ ಸುಮಾರು 4,000 ವರ್ಷಗಳು ದಾಟಿಹೋದವು. 1914ರಲ್ಲಿ ಸ್ವರ್ಗದಲ್ಲಿ ರಾಜ್ಯವು ಸ್ಥಾಪಿಸಲ್ಪಡುವ ಮುನ್ನ ಇನ್ನೂ 1,885 ವರ್ಷಗಳು ದಾಟಿಹೋದವು. ಹೀಗೆ, “ಪವಿತ್ರ ರಹಸ್ಯ”ವು ಬಹುಮಟ್ಟಿಗೆ 6,000 ವರ್ಷಗಳ ಅವಧಿಯ ಆದ್ಯಂತ ಪ್ರಗತಿಪರವಾಗಿ ಪ್ರಕಟಪಡಿಸಲ್ಪಟ್ಟಿತು. (ಪುಟ 16ನ್ನು ನೋಡಿ.) “ಅನಾದಿಯಾಗಿ ಗುಪ್ತವಾಗಿಡಲ್ಪಟ್ಟ ಆದರೆ ಈಗ ಪ್ರಕಟಿಸಲ್ಪಟ್ಟು ತಿಳಿದುಬಂದಿರುವ ಪವಿತ್ರ ರಹಸ್ಯದ ಪ್ರಕಟನೆ”ಯ (NW) ಕುರಿತಾಗಿ ಪೌಲನು ಮಾತಾಡುತ್ತಿದ್ದಾಗ ಸರಿಯಾದುದನ್ನೇ ಹೇಳುತ್ತಿದ್ದನು.—ರೋಮಾಪುರ 16:25-27; ಎಫೆಸ 3:4-11.
7. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಲ್ಲಿ ನಾವು ಏಕೆ ಸಂಪೂರ್ಣ ಭರವಸೆಯನ್ನು ಇಡಸಾಧ್ಯವಿದೆ?
7 ಒಂದು ಸೀಮಿತ ಆಯುಷ್ಯವಿರುವ ಮನುಷ್ಯರಿಗೆ ವ್ಯತಿರಿಕ್ತವಾಗಿ, ಯೆಹೋವನು ತನ್ನ ರಹಸ್ಯಗಳನ್ನು ತಕ್ಕ ಸಮಯಕ್ಕಿಂತ ಮುಂಚೆಯೇ ಪ್ರಕಟಪಡಿಸಲು ಸಮಯದ ಅಭಾವದಿಂದ ಒತ್ತಾಯಿಸಲ್ಪಡುವುದಿಲ್ಲ. ನಿಶ್ಚಿತ ಬೈಬಲ್ ಪ್ರಶ್ನೆಗಳನ್ನು ಸದ್ಯದಲ್ಲಿ ನಮಗೆ ತೃಪ್ತಿಪಡಿಸುವಂತಹ ರೀತಿಯಲ್ಲಿ ವಿವರಿಸಲು ಸಾಧ್ಯವಿರದಿರುವಾಗ, ಈ ವಾಸ್ತವಾಂಶವು ನಾವು ಅಸಹನೆಯುಳ್ಳವರಾಗುವುದರಿಂದ ನಮ್ಮನ್ನು ತಡೆಗಟ್ಟಬೇಕು. ಕ್ರೈಸ್ತ ಮನೆವಾರ್ತೆಗೆ ಸರಿಯಾದ ಸಮಯದಲ್ಲಿ ಆಹಾರವನ್ನು ಒದಗಿಸಲು ನಿಯೋಗಿಸಲ್ಪಟ್ಟಿರುವ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ವತಿಯಿಂದ ತೋರಿಸಲ್ಪಡುವ ವಿನಯಶೀಲತೆಯು, ಅದು ಅಹಂಭಾವದಿಂದ ಮುಂದೆ ಓಡಿ, ಈಗಲೂ ಅಸ್ಪಷ್ಟವಾಗಿರುವ ವಿಷಯಗಳ ಕುರಿತಾಗಿ ಗೊತ್ತುಗುರಿಯಿಲ್ಲದೆ ಊಹಾಪೋಹ ಮಾಡುವುದರಿಂದ ಅದನ್ನು ತಡೆಗಟ್ಟುತ್ತದೆ. ಆಳು ವರ್ಗವು, ಉದ್ಧಟತನದಿಂದ ತತ್ತ್ವವನ್ನು ಹೇರುವುದರಿಂದ ದೂರವಿರಲು ಪ್ರಯಾಸಪಡುತ್ತದೆ. ಜ್ಞಾನೋಕ್ತಿ 4:18ನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಡುತ್ತಾ, ಅದು ಪ್ರಸ್ತುತವಾಗಿ ಪ್ರತಿಯೊಂದು ಪ್ರಶ್ನೆಯನ್ನು ಉತ್ತರಿಸಲು ಸಾಧ್ಯವಿಲ್ಲವೆಂಬುದನ್ನು ಒಪ್ಪಿಕೊಳ್ಳುವಷ್ಟು ನಮ್ರವಾಗಿದೆ. ಆದರೆ ಯೆಹೋವನು, ತನ್ನ ತಕ್ಕ ಸಮಯದಲ್ಲಿ ಮತ್ತು ತನ್ನ ಸ್ವಂತ ವಿಧದಲ್ಲಿ ತನ್ನ ಉದ್ದೇಶಗಳ ಕುರಿತಾದ ತನ್ನ ರಹಸ್ಯಗಳನ್ನು ಪ್ರಕಟಪಡಿಸುವುದನ್ನು ಮುಂದುವರಿಸುವನು ಎಂಬುದನ್ನು ಅರಿಯುವುದು ಎಷ್ಟು ರೋಮಾಂಚಕ! ಅವಿವೇಕತನದಿಂದ, ರಹಸ್ಯಗಳನ್ನು ಪ್ರಕಟಪಡಿಸುವಾತನಿಗಿಂತ ಮುಂದೆ ಓಡಲು ಪ್ರಯತ್ನಿಸುತ್ತಾ, ಯೆಹೋವನ ಏರ್ಪಾಡಿನೊಂದಿಗೆ ನಾವು ಎಂದಿಗೂ ಅಸಹನೆಯುಳ್ಳವರಾಗಬಾರದು. ಯೆಹೋವನು ಇಂದು ಉಪಯೋಗಿಸುತ್ತಿರುವ ಮಾಧ್ಯಮವು ಹಾಗೆ ಮಾಡುವುದಿಲ್ಲವೆಂಬುದನ್ನು ತಿಳಿಯುವುದು ಎಷ್ಟು ಪುನರ್ಆಶ್ವಾಸನೀಯ! ಅದು ನಂಬಿಗಸ್ತವೂ ವಿವೇಕಿಯೂ ಆಗಿದೆ.—ಮತ್ತಾಯ 24:45; 1 ಕೊರಿಂಥ 4:6.
ಪ್ರಕಟಪಡಿಸಲ್ಪಟ್ಟಿರುವ ರಹಸ್ಯವು ಹೇಳಲ್ಪಡಲೇಬೇಕು!
8. “ಪವಿತ್ರ ರಹಸ್ಯ”ವು ಪ್ರಸಿದ್ಧಪಡಿಸಲ್ಪಡಬೇಕೆಂದು ನಮಗೆ ಹೇಗೆ ತಿಳಿದಿದೆ?
8 ಯೆಹೋವನು ಕ್ರೈಸ್ತರಿಗೆ ತನ್ನ “ಪವಿತ್ರ ರಹಸ್ಯ”ವನ್ನು ಪ್ರಕಟಪಡಿಸಿರುವುದು, ಅದನ್ನು ಮರೆಮಾಚಲಿಕ್ಕಾಗಿ ಅಲ್ಲ. ಅದು ಪ್ರಸಿದ್ಧಪಡಿಸಲ್ಪಡಬೇಕು. ಇದು, ಯೇಸು ತನ್ನ ಎಲ್ಲಾ ಹಿಂಬಾಲಕರಿಗೆ—ಕೇವಲ ಕೆಲವು ಪಾದ್ರಿವರ್ಗದವರಿಗಲ್ಲ—ಸ್ಥಾಪಿಸಿದ ಮೂಲತತ್ತ್ವದೊಂದಿಗೆ ಹೊಂದಿಕೆಯಲ್ಲಿದೆ: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.”—ಮತ್ತಾಯ 5:14-16; 28:19, 20.
9. ಕೆಲವರು ವಾದಿಸುವಂತೆ ಯೇಸು ಕ್ರಾಂತಿಕಾರಿಯಾಗಿರಲಿಲ್ಲವೆಂದು ಯಾವುದು ರುಜುಪಡಿಸುತ್ತದೆ?
9 ರಹಸ್ಯವಾದ ಉದ್ದೇಶಗಳನ್ನು ಬೆನ್ನಟ್ಟಲಿಕ್ಕಾಗಿ, ಹಿಂಬಾಲಕರ ಒಂದು ಭೂಗತ ಸಂಸ್ಥೆಯನ್ನು ರಚಿಸುವ ಯಾವುದೇ ಕ್ರಾಂತಿಕಾರಿ ಉದ್ದೇಶ ಯೇಸುವಿಗಿರಲಿಲ್ಲ. ಆದಿ ಕ್ರೈಸ್ತತ್ವ ಮತ್ತು ಸಮಾಜ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ರಾಬರ್ಟ್ ಎಮ್. ಗ್ರ್ಯಾಂಟ್, ಆದಿ ಕ್ರೈಸ್ತರ ಪಕ್ಷದಲ್ಲಿ ಎರಡನೆಯ ಶತಮಾನದ ಸಮರ್ಥಕನಾದ ಜಸ್ಟಿನ್ ಮಾರ್ಟರ್ನಿಂದ ಮಾಡಲ್ಪಟ್ಟ ಸಮರ್ಥನೆಯ ಕುರಿತಾಗಿ ಬರೆದುದು: “ಕ್ರೈಸ್ತರು ಕ್ರಾಂತಿಕಾರಿಗಳಾಗಿರುತ್ತಿದ್ದರೆ, ಅವರು ತಮ್ಮ ಗುರಿಯನ್ನು ತಲಪಲಿಕ್ಕಾಗಿ ಅವಿತುಕೊಂಡಿರುತ್ತಿದ್ದರು.” ಆದರೆ ಕ್ರೈಸ್ತರು “ಅವಿತುಕೊಂಡಿ”ದ್ದು, ಅದೇ ಸಮಯದಲ್ಲಿ ‘ಗುಡ್ಡದ ಮೇಲೆ ಕಟ್ಟಿರುವ ಊರಿ’ನಂತೆ ಹೇಗಿರಸಾಧ್ಯವಿತ್ತು? ಅವರು ತಮ್ಮ ಬೆಳಕನ್ನು ಒಂದು ಕೊಳಗದೊಳಗೆ ಅಡಗಿಸಿಡಬಾರದಾಗಿತ್ತು! ಆದುದರಿಂದ, ಅವರ ಚಟುವಟಿಕೆಯ ಕುರಿತಾಗಿ ಸರಕಾರವು ಭಯಪಡುವ ಅಗತ್ಯವೇ ಇರಲಿಲ್ಲ. ಈ ಬರಹಗಾರನು ಅವರನ್ನು, “ಶಾಂತಿ ಮತ್ತು ಸುವ್ಯವಸ್ಥೆಯ ಪರವಾಗಿ ಸಾಮ್ರಾಟನ ಅತ್ಯುತ್ತಮ ಮಿತ್ರರು” ಎಂದು ಮುಂದುವರಿಯುತ್ತಾ ವರ್ಣಿಸಿದನು.
10. ಕ್ರೈಸ್ತರು ತಮ್ಮ ಗುರುತನ್ನು ರಹಸ್ಯವಾಗಿಡಬಾರದೇಕೆ?
10 ತನ್ನ ಶಿಷ್ಯರು ಒಂದು ಧಾರ್ಮಿಕ ಪಂಗಡವೆಂದು ಹೇಳಿಕೊಳ್ಳುವ ಪಂಗಡದ ಸದಸ್ಯರೋಪಾದಿ ತಮ್ಮ ಗುರುತನ್ನು ರಹಸ್ಯವಾಗಿಡುವಂತೆ ಯೇಸು ಬಯಸಲಿಲ್ಲ. (ಅ. ಕೃತ್ಯಗಳು 24:14; 28:22) ಇಂದು ನಮ್ಮ ಬೆಳಕನ್ನು ಪ್ರಕಾಶಿಸಲು ಬಿಡುವುದನ್ನು ತಪ್ಪುವುದು, ಕ್ರಿಸ್ತನಿಗೂ ರಹಸ್ಯಗಳನ್ನು ಪ್ರಕಟಿಸುವಾತನಾದ ಅವನ ತಂದೆಗೂ ಅಪ್ರಸನ್ನಕರವಾಗಿರುವುದು ಮತ್ತು ನಮ್ಮನ್ನು ಸಂತೋಷವಾಗಿರಿಸದು.
11, 12. (ಎ) ಕ್ರೈಸ್ತತ್ವವು ಪ್ರಸಿದ್ಧಪಡಿಸಲ್ಪಡಬೇಕೆಂದು ಯೆಹೋವನು ಅಪೇಕ್ಷಿಸುವುದೇಕೆ? (ಬಿ) ಯೇಸು ಯೋಗ್ಯವಾದ ಮಾದರಿಯನ್ನಿಟ್ಟದ್ದು ಹೇಗೆ?
11 ಯೆಹೋವನು “ಯಾವನಾದರೂ ನಾಶವಾಗುವದರಲ್ಲಿ . . . ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸು”ತ್ತಾನೆ. (2 ಪೇತ್ರ 3:9; ಯೆಹೆಜ್ಕೇಲ 18:23; 33:11; ಅ. ಕೃತ್ಯಗಳು 17:30) ಪಶ್ಚಾತ್ತಾಪಿ ಮನುಷ್ಯರ ಪಾಪಗಳ ಕ್ಷಮಾಪಣೆಗಾಗಿರುವ ಆಧಾರವು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಾಗಿದೆ. “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ಅವನು ಎಲ್ಲರಿಗಾಗಿ—ಕೇವಲ ಕೆಲವರಿಗೆ ಮಾತ್ರವಲ್ಲ—ತನ್ನನ್ನು ಒಂದು ಪ್ರಾಯಶ್ಚಿತ್ತವಾಗಿ ಒಪ್ಪಿಸಿಕೊಟ್ಟನು. (ಯೋಹಾನ 3:16) ಬರುವಂತಹ ನ್ಯಾಯತೀರ್ಪಿನ ಸಮಯದಲ್ಲಿ, ಜನರು ಆಡುಗಳಾಗಿ ಅಲ್ಲ ಬದಲಾಗಿ ಕುರಿಗಳಾಗಿ ತೀರ್ಪು ಹೊಂದಲು ಅವರನ್ನು ಅರ್ಹರನ್ನಾಗಿ ಮಾಡುವ ಆವಶ್ಯಕ ಹೆಜ್ಜೆಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುವುದು ಅತಿ ಪ್ರಾಮುಖ್ಯ.—ಮತ್ತಾಯ 25:31-46.
12 ನಿಜ ಕ್ರೈಸ್ತತ್ವವು ಮರೆಮಾಚಲ್ಪಡಬಾರದು; ಅದು ಸಾಧ್ಯವಿರುವ ಪ್ರತಿಯೊಂದು ಸೂಕ್ತ ವಿಧದಲ್ಲಿ ಪ್ರಸಿದ್ಧಪಡಿಸಲ್ಪಡಬೇಕು. ಯೇಸು ತಾನೇ ಒಂದು ಯೋಗ್ಯ ಮಾದರಿಯನ್ನು ಇಟ್ಟನು. ಅವನ ಶಿಷ್ಯರು ಮತ್ತು ಅವನ ಬೋಧನೆಯ ಕುರಿತಾಗಿ ಮಹಾ ಯಾಜಕನಿಂದ ಪ್ರಶ್ನಿಸಲ್ಪಟ್ಟಾಗ ಅವನು ಹೇಳಿದ್ದು: “ನಾನು ಲೋಕಕ್ಕೆ ಬಹಿರಂಗವಾಗಿ ಮಾತಾಡಿದ್ದೇನೆ. ನಾನು ಯಾವಾಗಲೂ, ಎಲ್ಲಾ ಯೆಹೂದ್ಯರು ಕೂಡಿಬರುವಂತಹ ಸಭಾಮಂದಿರ ಮತ್ತು ದೇವಾಲಯದಲ್ಲಿ ಕಲಿಸಿದ್ದೇನೆ; ಮತ್ತು ನಾನು ಏನನ್ನೂ ರಹಸ್ಯವಾಗಿ ಮಾತಾಡಿಲ್ಲ.” (ಯೋಹಾನ 18:19, 20, NW) ಈ ಪೂರ್ವನಿದರ್ಶನದ ನೋಟದಲ್ಲಿ, ದೇವರು ಏನನ್ನು ಬಹಿರಂಗಗೊಳಿಸಬೇಕೆಂದು ಘೋಷಿಸಿದ್ದಾನೊ ಅದನ್ನು ಯಾವ ದೇವಭೀರು ವ್ಯಕ್ತಿಯು ರಹಸ್ಯವಾಗಿಡಲು ಎಣಿಸುವನು? ನಿತ್ಯಜೀವಕ್ಕೆ ನಡಿಸುವ “ಜ್ಞಾನದ ಕೀಲಿ ಕೈಯನ್ನು” (NW) ಯಾರು ಅಡಗಿಸಿಡಲು ಧೈರ್ಯಮಾಡುವರು? ಹಾಗೆ ಮಾಡುವುದು, ಅವನನ್ನು ಪ್ರಥಮ ಶತಮಾನದ ಧಾರ್ಮಿಕ ಕಪಟಿಗಳಂತೆ ಮಾಡುವುದು.—ಲೂಕ 11:52; ಯೋಹಾನ 17:3.
13. ನಾವು ಪ್ರತಿಯೊಂದೂ ಸಂದರ್ಭದಲ್ಲಿ ಸಾರಬೇಕು ಏಕೆ?
13 ಯೆಹೋವನ ಸಾಕ್ಷಿಗಳೋಪಾದಿ ನಾವು ದೇವರ ರಾಜ್ಯದ ಸಂದೇಶವನ್ನು ರಹಸ್ಯವಾಗಿಟ್ಟಿದ್ದೇವೆಂದು ಯಾರೂ ಎಂದೂ ಹೇಳಲು ಶಕ್ತರಾಗದಿರಲಿ! ಆ ಸಂದೇಶವು ಸ್ವೀಕರಿಸಲ್ಪಡಲಿ ಅಥವಾ ತಿರಸ್ಕರಿಸಲ್ಪಡಲಿ, ಅದು ಸಾರಲ್ಪಟ್ಟಿದೆಯೆಂಬುದು ಜನರಿಗೆ ತಿಳಿಯಬೇಕು. (ಯೆಹೆಜ್ಕೇಲ 2:5; 33:33ನ್ನು ಹೋಲಿಸಿರಿ.) ಆದುದರಿಂದ, ನಾವು ಎಲ್ಲರಿಗೂ—ನಾವು ಅವರನ್ನು ಎಲ್ಲಿಯೇ ಭೇಟಿಯಾಗಲಿ—ಸತ್ಯದ ಸಂದೇಶವನ್ನು ತಿಳಿಸಲು ಪ್ರತಿಯೊಂದೂ ಸಂದರ್ಭದ ಪ್ರಯೋಜನವನ್ನು ತೆಗೆದುಕೊಳ್ಳೋಣ.
ಸೈತಾನನ ದವಡೆಗೆ ಕೊಕ್ಕೆಗಳನ್ನು ಹಾಕುವುದು
14. ನಮ್ಮ ಆರಾಧನೆಯಲ್ಲಿ ನಾವು ಮುಚ್ಚುಮರೆಯಿಲ್ಲದವರಾಗಿರುವ ವಿಷಯದಲ್ಲಿ ಏಕೆ ಹಿಂಜರಿಯುವವರಾಗಿರಬಾರದು?
14 ಅನೇಕ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ಹೆಚ್ಚೆಚ್ಚಾಗಿ ವಾರ್ತಾಮಾಧ್ಯಮದ ಗಮನದ ಕೇಂದ್ರಬಿಂದುವಾಗುತ್ತಿದ್ದಾರೆ. ಆದಿ ಕ್ರೈಸ್ತರಿಗೆ ಏನು ಸಂಭವಿಸಿತೊ ಅದಕ್ಕೆ ತದ್ರೀತಿಯಲ್ಲಿ, ಅವರನ್ನು ಅನೇಕವೇಳೆ ಸಂದೇಹಾಸ್ಪದ ಧಾರ್ಮಿಕ ಪಂಥಗಳು ಮತ್ತು ಗುಪ್ತ ಸಂಸ್ಥೆಗಳ ವಿಭಾಗದಲ್ಲೇ ಇರಿಸಿ, ತಪ್ಪಾಗಿ ಪ್ರತಿನಿಧಿಸಲಾಗುತ್ತದೆ. (ಅ. ಕೃತ್ಯಗಳು 28:22) ಸಾರುವಿಕೆಯಲ್ಲಿನ ನಮ್ಮ ಮುಚ್ಚುಮರೆಯಿಲ್ಲದಿರುವಿಕೆಯು, ನಾವು ಆಕ್ರಮಣಕ್ಕೆ ತುತ್ತಾಗುವ ಸಂಭವವನ್ನು ಹೆಚ್ಚಿಸಬಹುದೊ? ಅನಾವಶ್ಯಕವಾಗಿ ನಮ್ಮನ್ನೇ ವಾಗ್ವಾದದಲ್ಲಿ ಸಿಕ್ಕಿಸಿಕೊಳ್ಳುವುದು ನಿಶ್ಚಯವಾಗಿಯೂ ಅವಿವೇಕತನದ್ದು, ಮತ್ತು ಯೇಸುವಿನ ಸಲಹೆಯನ್ನು ಅನುಸರಿಸದಿರುವಂತೆ ಇರುವುದು. (ಜ್ಞಾನೋಕ್ತಿ 26:17; ಮತ್ತಾಯ 10:16) ಆದಾಗಲೂ, ರಾಜ್ಯ ಸಾರುವಿಕೆಯ ಮತ್ತು ಜನರು ತಮ್ಮ ಜೀವಿತಗಳನ್ನು ಉತ್ತಮಗೊಳಿಸಲು ಸಹಾಯಮಾಡುವುದರ ಉಪಯುಕ್ತ ಕೆಲಸವು, ಮರೆಮಾಚಲ್ಪಡಬಾರದು. ಅದು, ಯೆಹೋವನ ಕಡೆಗೆ ಮತ್ತು ಆತನ ಸ್ಥಾಪಿತ ರಾಜ್ಯದ ಕಡೆಗೆ ಗಮನವನ್ನು ನಿರ್ದೇಶಿಸುತ್ತಾ ಆತನನ್ನು ಮಹಿಮೆಪಡಿಸುತ್ತದೆ. ಪೂರ್ವ ಯೂರೋಪ್ ಮತ್ತು ಆಫ್ರಿಕದ ಭಾಗಗಳಲ್ಲಿ ಬೈಬಲ್ ಸತ್ಯದ ಕಡೆಗಿನ ಇತ್ತೀಚಿನ ತೃಪ್ತಿಪಡಿಸುವ ಪ್ರತಿಕ್ರಿಯೆಯು, ಆಂಶಿಕವಾಗಿ ಈಗ ಸತ್ಯವು ಅಲ್ಲಿ ಹೆಚ್ಚು ಬಹಿರಂಗವಾಗಿ ಸಾರಲ್ಪಡಸಾಧ್ಯವಾದ ಕಾರಣದಿಂದಲೇ ಆಗಿದೆ.
15, 16. (ಎ) ನಮ್ಮ ಮುಚ್ಚುಮರೆಯಿಲ್ಲದಿರುವಿಕೆ ಮತ್ತು ಆತ್ಮಿಕ ಸಮೃದ್ಧಿಯಿಂದ ಯಾವ ಉದ್ದೇಶಗಳು ಪೂರೈಸಲ್ಪಡುತ್ತವೆ, ಆದರೆ ಇದು ಚಿಂತೆಗೆ ಒಂದು ಕಾರಣವಾಗಿದೆಯೊ? (ಬಿ) ಯೆಹೋವನು ಸೈತಾನನ ದವಡೆಗಳೊಳಗೆ ಕೊಕ್ಕೆಗಳನ್ನು ಹಾಕುವುದೇಕೆ?
15 ಯೆಹೋವನ ಸಾಕ್ಷಿಗಳು ಮುಚ್ಚುಮರೆಯಿಲ್ಲದೆ ಸಾರುವುದು, ಅವರು ಆನಂದಿಸುವ ಆತ್ಮಿಕ ಪ್ರಮೋದವನ, ಮತ್ತು ಅವರ ಸಮೃದ್ಧಿಯು—ಮಾನವ ಸಂಪನ್ಮೂಲಗಳು ಮತ್ತು ಭೌತಿಕ ಸಂಪತ್ತುಗಳೆರಡರಲ್ಲಿಯೂ—ಗಮನಿಸಲ್ಪಡದೇ ಹೋಗುವುದಿಲ್ಲವೆಂಬುದು ನಿಜ. ಪ್ರಾಮಾಣಿಕ ಹೃದಯದ ವ್ಯಕ್ತಿಗಳನ್ನು ಆಕರ್ಷಿಸುವಾಗ, ಈ ವಿಷಯಗಳು ವಿರೋಧಕರನ್ನು ವಿಕರ್ಷಿಸಬಹುದು. (2 ಕೊರಿಂಥ 2:14-17) ವಾಸ್ತವದಲ್ಲಿ, ಇದು ಕಟ್ಟಕಡೆಗೆ ಸೈತಾನನ ಪಡೆಗಳು ದೇವರ ಜನರನ್ನು ಆಕ್ರಮಿಸುವಂತೆ ಆಕರ್ಷಿಸುವ ಉದ್ದೇಶವನ್ನು ಪೂರೈಸಬಹುದು.
16 ಇದು ಚಿಂತೆಗೆ ಕಾರಣವಾಗಿರಬೇಕೊ? ಯೆಹೆಜ್ಕೇಲ ಅಧ್ಯಾಯ 38ರಲ್ಲಿ ಕಂಡುಬರುವ ಯೆಹೋವನ ಪ್ರವಾದನೆಗನುಸಾರ, ಇಲ್ಲ. 1914ರಲ್ಲಿ ರಾಜ್ಯದ ಸ್ಥಾಪನೆಯ ನಂತರ ಭೂಮಿಯ ಕ್ಷೇತ್ರಕ್ಕೆ ಅವನು ದೊಬ್ಬಲ್ಪಟ್ಟಂದಿನಿಂದ, ಪಿಶಾಚನಾದ ಸೈತಾನನನ್ನು ವರ್ಣಿಸುವ, ಮಾಗೋಗದ ಗೋಗನು, ದೇವರ ಜನರ ಮೇಲೆ ಒಂದು ಆಕ್ರಮಣವನ್ನು ನಡಿಸುವನೆಂಬುದನ್ನು ಅದು ಮುಂತಿಳಿಸುತ್ತದೆ. (ಪ್ರಕಟನೆ 12:7-9) ಯೆಹೋವನು ಗೋಗನಿಗೆ ಹೇಳುವುದು: “ನೀನು—ಆಹಾ, ನಾನು ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳು ತುಂಬಿದ ದೇಶವನ್ನು ನುಗ್ಗಿ ಅಗುಳಿ ಬಾಗಿಲು ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು ಅಂದುಕೊಂಡು ಸೂರೆಗೆಯ್ದು ಕೊಳ್ಳೆಹೊಡೆಯಬೇಕೆಂತಲೂ ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕೆಂತಲೂ ಜನಾಂಗಗಳೊಳಗಿಂದ ಒಟ್ಟುಗೂಡಿ ದನ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು ಲೋಕದ ನಟ್ಟನಡುವೆ ವಾಸಿಸುವವರನ್ನು ಹತಿಸಬೇಕೆಂತಲೂ ಕುತಂತ್ರವನ್ನು ಕಲ್ಪಿಸುವಿ.” (ಯೆಹೆಜ್ಕೇಲ 38:11, 12) ಆದರೂ ದೇವರ ಜನರು ಈ ಆಕ್ರಮಣದ ಕುರಿತಾಗಿ ಭಯಪಡುವ ಅಗತ್ಯವಿಲ್ಲ, ಯಾಕಂದರೆ ಅದು ಯೆಹೋವನು ಮಾಡಿಸುವಂತಹ ಕೆಲಸವಾಗಿದೆಯೆಂದು 4ನೆಯ ವಚನವು ತೋರಿಸುತ್ತದೆ. ಆದರೆ ದೇವರು ತನ್ನ ಜನರ ಮೇಲಿನ ಒಂದು ಸರ್ವ ಆಕ್ರಮಣವನ್ನು ಅನುಮತಿಸುವುದು—ಹೌದು, ಅದನ್ನು ಕೆರಳಿಸುವುದೂ—ಏಕೆ? 23ನೆಯ ವಚನದಲ್ಲಿ ನಾವು ಯೆಹೋವನ ಉತ್ತರವನ್ನು ಓದುತ್ತೇವೆ: “ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.”
17. ನಾವು ಗೋಗನ ಸನ್ನಿಹಿತ ಆಕ್ರಮಣವನ್ನು ಹೇಗೆ ವೀಕ್ಷಿಸತಕ್ಕದ್ದು?
17 ಹೀಗೆ, ಗೋಗನ ಆಕ್ರಮಣದ ಭಯದಲ್ಲಿ ಜೀವಿಸುವ ಬದಲಿಗೆ, ಬೈಬಲ್ ಪ್ರವಾದನೆಯ ಈ ಹೆಚ್ಚಿನ ನೆರವೇರಿಕೆಗೆ ಯೆಹೋವನ ಜನರು ಕಾತುರತೆಯಿಂದ ಮುನ್ನೋಡುತ್ತಾರೆ. ತನ್ನ ದೃಶ್ಯ ಸಂಸ್ಥೆಯನ್ನು ಸಮೃದ್ಧಗೊಳಿಸಿ, ಆಶೀರ್ವದಿಸುವ ಮೂಲಕ, ಯೆಹೋವನು ಸೈತಾನನ ದವಡೆಗಳೊಳಗೆ ಕೊಕ್ಕೆಗಳನ್ನು ಸೇರಿಸಿ, ಅವನನ್ನೂ ಅವನ ಮಿಲಿಟರಿ ಪಡೆಯನ್ನೂ ಅವರ ಪರಾಜಯಕ್ಕೆ ಸೆಳೆಯುತ್ತಾನೆಂಬುದನ್ನು ತಿಳಿಯುವುದು ಎಷ್ಟು ರೋಮಾಂಚಕ!—ಯೆಹೆಜ್ಕೇಲ 38:4.
ಈಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಚಾರ!
18. (ಎ) ಅನೇಕ ಜನರು ಈಗ ಏನನ್ನು ಗ್ರಹಿಸಲಾರಂಭಿಸುತ್ತಿದ್ದಾರೆ, ಮತ್ತು ಏಕೆ? (ಬಿ) ರಾಜ್ಯ ಸಾರುವಿಕೆಗಾಗಿರುವ ಪ್ರತಿಕ್ರಿಯೆಯು ಒಂದು ಶಕ್ತಿಯುತ ಪ್ರಚೋದನೆಯಾಗಿ ಕಾರ್ಯನಡಿಸುವುದು ಹೇಗೆ?
18 ಆಧುನಿಕ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳು, ತಮ್ಮ ಬೈಬಲ್ ಆಧಾರಿತ ನೋಟಗಳನ್ನು—ಇವು ಹೆಚ್ಚು ಜನಪ್ರಿಯವಾಗಿರದಿದ್ದರೂ—ವ್ಯಕ್ತಪಡಿಸುವುದರಲ್ಲಿ ತುಂಬ ಮುಚ್ಚುಮರೆಯಿಲ್ಲದವರಾಗಿದ್ದಾರೆ. ಧೂಮಪಾನ ಮತ್ತು ಅಮಲೌಷಧದ ದುರುಪಯೋಗದ ಅಪಾಯಗಳು, ಮಕ್ಕಳ ಸ್ವಚ್ಛಂದವಾದ ತರಬೇತಿಯ ಮಂದದೃಷ್ಟಿ, ನಿಷಿದ್ಧವಾದ ಲೈಂಗಿಕತೆ ಮತ್ತು ಹಿಂಸಾಚಾರದೊಂದಿಗೆ ತುಂಬಿರುವ ಮನೋರಂಜನೆಯ ಕೆಟ್ಟದ್ದಾದ ಪರಿಣಾಮಗಳು ಮತ್ತು ರಕ್ತಪೂರಣಗಳ ಗಂಡಾಂತರಗಳ ಕುರಿತಾಗಿ ಅವರು ಅನೇಕ ದಶಕಗಳಿಂದ ಎಚ್ಚರಿಕೆಯನ್ನು ನೀಡಿದ್ದಾರೆ. ವಿಕಾಸವಾದದಲ್ಲಿನ ಅಸಾಮಂಜಸ್ಯತೆಗಳನ್ನೂ ಅವರು ಎತ್ತಿತೋರಿಸಿದ್ದಾರೆ. “ಅಂತೂ ಯೆಹೋವನ ಸಾಕ್ಷಿಗಳು ಹೇಳುವುದು ತಪ್ಪೇನಲ್ಲ” ಎಂದು ಹೆಚ್ಚೆಚ್ಚು ಜನರು ಈಗ ಹೇಳುತ್ತಿದ್ದಾರೆ. ನಮ್ಮ ನೋಟಗಳನ್ನು ಬಹಿರಂಗಪಡಿಸುವುದರಲ್ಲಿ ನಾವು ಇಷ್ಟು ಮುಚ್ಚುಮರೆಯಿಲ್ಲದವರು ಆಗಿರದಿದ್ದಲ್ಲಿ, ಅವರು ಈ ವಿಧದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿರುತ್ತಿರಲಿಲ್ಲ. ಮತ್ತು ಈ ರೀತಿಯ ಹೇಳಿಕೆಯನ್ನು ಮಾಡುವ ಮೂಲಕ ಅವರು, “ಸೈತಾನನೇ, ನೀನೊಬ್ಬ ಸುಳ್ಳುಗಾರ; ಎಷ್ಟೆಂದರೂ ಯೆಹೋವನೇ ಸರಿ” ಎಂದು ಹೇಳುವ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ವಾಸ್ತವಾಂಶವನ್ನು ಅಲಕ್ಷಿಸದಿರಿ. ಸತ್ಯ ವಾಕ್ಯವನ್ನು ಬಹಿರಂಗವಾಗಿ ತಿಳಿಸುವ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಲು ಮುಂದುವರಿಯುತ್ತಾ ಇರಲು ಇದು ನಮಗೆ ಎಂತಹ ಒಂದು ಶಕ್ತಿಯುತ ಪ್ರಚೋದನೆ!—ಜ್ಞಾನೋಕ್ತಿ 27:11.
19, 20. (ಎ) 1922ರಲ್ಲಿ ಯೆಹೋವನ ಜನರು ಯಾವ ದೃಢನಿರ್ಧಾರವನ್ನು ವ್ಯಕ್ತಪಡಿಸಿದರು, ಮತ್ತು ಆ ಮಾತುಗಳು ಈಗಲೂ ಅನ್ವಯವಾಗುತ್ತವೊ? (ಬಿ) ನಾವು ಯೆಹೋವನ “ಪವಿತ್ರ ರಹಸ್ಯ”ವನ್ನು ಹೇಗೆ ವೀಕ್ಷಿಸತಕ್ಕದ್ದು?
19 ಈ ವಿಷಯದಲ್ಲಿ ಯೆಹೋವನ ಜನರು ಬಹುಕಾಲದ ಹಿಂದೆಯೇ ತಮ್ಮ ಹಂಗನ್ನು ಗ್ರಹಿಸಿಕೊಂಡಿದ್ದರು. 1922ರಲ್ಲಿ ನಡೆದ ಒಂದು ಗಮನಾರ್ಹ ಅಧಿವೇಶನದಲ್ಲಿ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ, ಜೆ. ಎಫ್. ರದರ್ಫರ್ಡ್, ಹೀಗೆ ಹೇಳುವ ಮೂಲಕ ತಮ್ಮ ಸಭಿಕರನ್ನು ರೋಮಾಂಚಗೊಳಿಸಿದರು: “ಸ್ತಿಮಿತವುಳ್ಳವರಾಗಿರ್ರಿ, ಜಾಗೃತರಾಗಿರ್ರಿ, ಕ್ರಿಯಾಶೀಲರಾಗಿರ್ರಿ, ಧೈರ್ಯವುಳ್ಳವರಾಗಿರ್ರಿ. ಕರ್ತನಿಗಾಗಿ ನಂಬಿಗಸ್ತರಾಗಿರ್ರಿ ಮತ್ತು ನಿಜ ಸಾಕ್ಷಿಗಳಾಗಿರ್ರಿ. ಬಾಬೆಲಿನ ಪ್ರತಿಯೊಂದು ಅವಶೇಷವು ನಾಶಗೊಳ್ಳುವ ತನಕ ಹೋರಾಟದಲ್ಲಿ ಮುಂದರಿಯಿರಿ. ಉದ್ದಗಲಕ್ಕೂ ಸಂದೇಶವನ್ನು ಘೋಷಿಸಿರಿ. ಯೆಹೋವನು ದೇವರೆಂದೂ, ಯೇಸು ಕ್ರಿಸ್ತನು ರಾಜಾಧಿರಾಜನೂ, ಕರ್ತರ ಕರ್ತನೂ ಆಗಿದ್ದಾನೆಂದು ಲೋಕವು ತಿಳಿಯತಕ್ಕದ್ದು. ಇದು ಎಲ್ಲಾ ದಿನಗಳ ದಿನವಾಗಿದೆ. ನೋಡಿರಿ, ರಾಜನು ಆಳುತ್ತಾನೆ! ನೀವು ಅವನ ಪ್ರಕಟನೋದ್ಯೋಗದ ನಿಯೋಗಿಗಳು. ಆದಕಾರಣ ರಾಜನನ್ನೂ, ಆತನ ರಾಜ್ಯವನ್ನೂ ಘೋಷಿಸಿರಿ, ಘೋಷಿಸಿರಿ, ಘೋಷಿಸಿರಿ.”
20 ಇಸವಿ 1922ರಲ್ಲಿ ಅಷ್ಟು ಪ್ರಾಮುಖ್ಯವಾಗಿದ್ದ ಈ ಮಾತುಗಳು, ನ್ಯಾಯಾಧಿಪತಿ ಮತ್ತು ಸೇಡುತೀರಿಸುವವನೋಪಾಗಿ ಕ್ರಿಸ್ತನ ಪ್ರಕಟಗೊಳಿಸುವಿಕೆಯು ತೀರ ನಿಕಟವಾಗಿರುವ ಈ ಸಮಯದಲ್ಲಿ, 75ಕ್ಕಿಂತಲೂ ಹೆಚ್ಚು ವರ್ಷಗಳ ನಂತರ ಇನ್ನೆಷ್ಟು ಹೆಚ್ಚು ಪ್ರಾಮುಖ್ಯವಾಗಿವೆ! ಯೆಹೋವನ ಸ್ಥಾಪಿತ ರಾಜ್ಯದ ಸಂದೇಶ ಮತ್ತು ದೇವರ ಜನರಿಂದ ಅನುಭವಿಸಲ್ಪಡುವ ಆತ್ಮಿಕ ಪ್ರಮೋದವನದ ಸಂದೇಶವು, ತಮ್ಮಷ್ಟಕ್ಕೆ ಇಟ್ಟುಕೊಳ್ಳಲು ತೀರ ಭವ್ಯವಾದ ಒಂದು “ಪವಿತ್ರ ರಹಸ್ಯ”ವಾಗಿದೆ. ಯೇಸು ತಾನೇ ಇಷ್ಟು ಸ್ಪಷ್ಟವಾಗಿ ತಿಳಿಸಿದಂತೆ, ಅವನ ಹಿಂಬಾಲಕರು ಪವಿತ್ರಾತ್ಮದ ಸಹಾಯದೊಂದಿಗೆ, ಯೆಹೋವನ ನಿತ್ಯ ಉದ್ದೇಶದಲ್ಲಿ ಅವನ ಮುಖ್ಯ ಸ್ಥಾನದ ಕುರಿತಾಗಿ “ಭೂಲೋಕದ ಕಟ್ಟಕಡೆಯ ವರೆಗೂ” ಸಾಕ್ಷಿಗಳಾಗಿರಲೇಬೇಕು. (ಅ. ಕೃತ್ಯಗಳು 1:8; ಎಫೆಸ 3:8-12) ವಾಸ್ತವದಲ್ಲಿ, ರಹಸ್ಯಗಳನ್ನು ಪ್ರಕಟಗೊಳಿಸುವ ದೇವರಾದ ಯೆಹೋವನ ಸೇವಕರೋಪಾದಿ, ನಾವು ಈ ರಹಸ್ಯವನ್ನು ನಮ್ಮಷ್ಟಕ್ಕೇ ಇಟ್ಟುಕೊಳ್ಳಬಾರದು!
ನೀವು ಹೇಗೆ ಉತ್ತರಿಸುವಿರಿ?
◻ “ಪವಿತ್ರ ರಹಸ್ಯ”ವು ಏನಾಗಿದೆ?
◻ ಅದು ಬಹಿರಂಗಪಡಿಸಲ್ಪಡಬೇಕೆಂದು ನಮಗೆ ಹೇಗೆ ತಿಳಿದಿದೆ?
◻ ಯೆಹೋವನ ಜನರ ಮೇಲೆ ಗೋಗನ ಆಕ್ರಮಣವನ್ನು ಯಾವುದು ಉಂಟುಮಾಡುತ್ತದೆ, ಮತ್ತು ನಾವು ಇದನ್ನು ಹೇಗೆ ವೀಕ್ಷಿಸತಕ್ಕದ್ದು?
◻ ನಮ್ಮಲ್ಲಿ ಪ್ರತಿಯೊಬ್ಬರು ಏನನ್ನು ಮಾಡಲು ದೃಢನಿರ್ಧಾರವುಳ್ಳವರಾಗಿರಬೇಕು?
[ಪುಟ 16 ರಲ್ಲಿರುವ ಚೌಕ]
ಪ್ರಗತಿಪರವಾಗಿ ಪ್ರಕಟಿಸಲ್ಪಟ್ಟಿರುವ ಒಂದು “ಪವಿತ್ರ ರಹಸ್ಯ”
◻ ಸಾ.ಶ.ಪೂ. 4026ರ ಅನಂತರ: ಸೈತಾನನನ್ನು ನಾಶಮಾಡಲು ದೇವರು ಒಂದು ಸಂತಾನವನ್ನು ಎಬ್ಬಿಸಲು ವಾಗ್ದಾನಿಸುತ್ತಾನೆ.—ಆದಿಕಾಂಡ 3:15
◻ ಸಾ.ಶ.ಪೂ. 1943: ಸಂತಾನವು ಅಬ್ರಹಾಮನ ಮೂಲಕ ಬರುವುದೆಂದು ವಾಗ್ದಾನಿಸುತ್ತಾ, ಅಬ್ರಹಾಮ ಸಂಬಂಧಿತ ಒಡಂಬಡಿಕೆಯು ಊರ್ಜಿತಗೊಳಿಸಲ್ಪಡುತ್ತದೆ.—ಆದಿಕಾಂಡ 12:1-7
◻ ಸಾ.ಶ.ಪೂ. 1918: ಒಡಂಬಡಿಕೆಯ ಬಾಧ್ಯಸ್ಥಗಾರನೋಪಾದಿ ಇಸಾಕನ ಜನನ.—ಆದಿಕಾಂಡ 17:19; 21:1-5
◻ ಸುಮಾರು ಸಾ.ಶ.ಪೂ. 1761: ಸಂತಾನವು ಇಸಾಕನ ಮಗನಾದ ಯಾಕೋಬನ ಮೂಲಕ ಬರುವುದೆಂಬುದನ್ನು ಯೆಹೋವನು ದೃಢೀಕರಿಸುತ್ತಾನೆ.—ಆದಿಕಾಂಡ 28:10-15
◻ ಸಾ.ಶ.ಪೂ. 1711: ಸಂತಾನವು ತನ್ನ ಮಗನಾದ ಯೆಹೂದನ ಮೂಲಕ ಬರುವುದೆಂದು ಯಾಕೋಬನು ಸೂಚಿಸುತ್ತಾನೆ.—ಆದಿಕಾಂಡ 49:10
◻ ಸಾ.ಶ.ಪೂ. 1070-1038: ಸಂತಾನವು ತನ್ನ ವಂಶಸ್ಥನಾಗಿದ್ದು, ರಾಜನಾಗಿ ಸದಾಕಾಲ ಆಳುವನೆಂದು ರಾಜ ದಾವೀದನಿಗೆ ತಿಳಿದುಬರುತ್ತದೆ.—2 ಸಮುವೇಲ 7:13-16; ಕೀರ್ತನೆ 89:35, 36
◻ ಸಾ.ಶ. 29-33: ಯೇಸುವನ್ನು ಸಂತಾನ, ಮೆಸ್ಸೀಯ, ಭಾವಿ ನ್ಯಾಯಾಧೀಶ, ಮತ್ತು ನಿಯುಕ್ತ ರಾಜನೋಪಾದಿ ಗುರುತಿಸಲಾಗುತ್ತದೆ.—ಯೋಹಾನ 1:17; 4:25, 26; ಅ. ಕೃತ್ಯಗಳು 10:42, 43; 2 ಕೊರಿಂಥ 1:20; 1 ತಿಮೊಥೆಯ 3:16
◻ ತನಗೆ ಜೊತೆ ಪ್ರಭುಗಳು ಮತ್ತು ನ್ಯಾಯಾಧೀಶರು ಇರುವರು, ಸ್ವರ್ಗೀಯ ರಾಜ್ಯಕ್ಕೆ ಐಹಿಕ ಪ್ರಜೆಗಳಿರುವರು, ಮತ್ತು ತನ್ನ ಎಲ್ಲ ಹಿಂಬಾಲಕರು ರಾಜ್ಯ ಪ್ರಚಾರಕರಾಗಿರಬೇಕೆಂದು ಯೇಸು ಪ್ರಕಟಪಡಿಸುತ್ತಾನೆ.—ಮತ್ತಾಯ 5:3-5; 6:10; 28:19, 20; ಲೂಕ 10:1-9; 12:32; 22:29, 30; ಯೋಹಾನ 10:16; 14:2, 3
◻ ಲೋಕ ಘಟನೆಗಳಿಂದ ಸ್ಥಿರಪಡಿಸಲ್ಪಟ್ಟಿರುವಂತೆ, ರಾಜ್ಯವು ಒಂದು ನಿರ್ದಿಷ್ಟ ಸಮಯದಲ್ಲಿ ಸ್ಥಾಪಿಸಲ್ಪಡುವದೆಂದು ಯೇಸು ಪ್ರಕಟಪಡಿಸುತ್ತಾನೆ.—ಮತ್ತಾಯ 24:3-22; ಲೂಕ 21:24
◻ ಸಾ.ಶ. 36: ಯೆಹೂದ್ಯೇತರರೂ ರಾಜ್ಯದ ಜೊತೆ ಬಾಧ್ಯಸ್ಥರಾಗಿರುವರೆಂದು ಪೇತ್ರನು ತಿಳಿಯುತ್ತಾನೆ.—ಅ. ಕೃತ್ಯಗಳು 10:30-48
◻ ಸಾ.ಶ. 55: ರಾಜ್ಯದ ಜೊತೆ ಬಾಧ್ಯಸ್ಥರು, ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅಮರತ್ವಕ್ಕೆ ಮತ್ತು ನಿರ್ಲಯತ್ವಕ್ಕೆ ಪುನರುತ್ಥಾನಗೊಳಿಸಲ್ಪಡುವರು ಎಂದು ಪೌಲನು ವಿವರಿಸುತ್ತಾನೆ.—1 ಕೊರಿಂಥ 15:51-54
◻ ಸಾ.ಶ. 96: ತನ್ನ ಅಭಿಷಿಕ್ತ ಹಿಂಬಾಲಕರ ಮೇಲೆ ಈಗಾಗಲೇ ಆಳುತ್ತಿರುವ ಯೇಸು, ಅವರ ಕೊನೆಯ ಸಂಖ್ಯೆಯು 1,44,000 ಆಗಿರುವುದೆಂದು ಪ್ರಕಟಪಡಿಸುತ್ತಾನೆ.—ಎಫೆಸ 5:32; ಕೊಲೊಸ್ಸೆ 1:13-20; ಪ್ರಕಟನೆ 1:1; 14:1-3
◻ ಸಾ.ಶ. 1879: ದೇವರ “ಪವಿತ್ರ ರಹಸ್ಯ”ದ ಪೂರ್ಣಗೊಳಿಸುವಿಕೆಯಲ್ಲಿ, 1914 ಮಹಾ ಸೂಚಿತಾರ್ಥವುಳ್ಳ ಒಂದು ವರ್ಷವೆಂದು ಸೈಯನ್ಸ್ ವಾಚ್ ಟವರ್ ಅದರ ಕಡೆಗೆ ಕೈತೋರಿಸುತ್ತದೆ
◻ ಸಾ.ಶ. 1925: ರಾಜ್ಯವು 1914ರಲ್ಲಿ ಜನಿಸಿತೆಂದು ದ ವಾಚ್ ಟವರ್ ವಿವರಿಸುತ್ತದೆ; ರಾಜ್ಯದ ಕುರಿತಾದ “ಪವಿತ್ರ ರಹಸ್ಯ”ವು ಬಹಿರಂಗಪಡಿಸಲ್ಪಡಲೇಬೇಕು.—ಪ್ರಕಟನೆ 12:1-5, 10, 17
[ಪುಟ 15 ರಲ್ಲಿರುವ ಚಿತ್ರಗಳು]
ತಮ್ಮ ನಾಯಕನಾದ ಯೇಸುವಿನಂತೆ, ಯೆಹೋವನ ಸಾಕ್ಷಿಗಳು ಯೆಹೋವನ ರಾಜ್ಯವನ್ನು ಬಹಿರಂಗವಾಗಿ ಘೋಷಿಸುತ್ತಾರೆ