ಯೆಹೋವ—ರಹಸ್ಯಗಳನ್ನು ಪ್ರಕಟಪಡಿಸುವ ದೇವರು
“ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ.”—ದಾನಿಯೇಲ 2:28.
1, 2. (ಎ) ಯೆಹೋವನು ತನ್ನ ಮಹಾ ಶತ್ರುವಿನಿಂದ ಹೇಗೆ ಭಿನ್ನನಾಗಿದ್ದಾನೆ? (ಬಿ) ಮಾನವರು ಈ ಭಿನ್ನತೆಯನ್ನು ಹೇಗೆ ಪ್ರತಿಬಿಂಬಿಸುತ್ತಾರೆ?
ವಿಶ್ವದ ಪರಮ ಪ್ರಧಾನ ಮತ್ತು ಪ್ರೀತಿಪರ ದೇವರಾಗಿರುವ ಏಕೈಕ ಸೃಷ್ಟಿಕರ್ತನಾದ ಯೆಹೋವನು, ವಿವೇಕ ಮತ್ತು ನ್ಯಾಯದ ದೇವರಾಗಿದ್ದಾನೆ. ಆತನಿಗೆ ತನ್ನ ಗುರುತನ್ನು, ತನ್ನ ಕೆಲಸಗಳನ್ನು ಅಥವಾ ತನ್ನ ಉದ್ದೇಶಗಳನ್ನು ಮರೆಮಾಚುವ ಅಗತ್ಯವಿಲ್ಲ. ತನ್ನ ಸ್ವಂತ ಸಮಯದಲ್ಲಿ ಮತ್ತು ತನ್ನ ಸ್ವಂತ ಅಪೇಕ್ಷೆಯ ಮೇರೆಗೆ ಆತನು ತನ್ನನ್ನು ಪ್ರಕಟಗೊಳಿಸಿಕೊಳ್ಳುತ್ತಾನೆ. ಈ ವಿಧದಲ್ಲಿ ಆತನು ತನ್ನ ಶತ್ರುವಾದ, ಪಿಶಾಚನಾದ ಸೈತಾನನಿಂದ ಭಿನ್ನನಾಗಿದ್ದಾನೆ. ಸೈತಾನನು ತನ್ನ ನಿಜವಾದ ಗುರುತು ಮತ್ತು ಉದ್ದೇಶಗಳನ್ನು ಮರೆಮಾಚಲು ಪ್ರಯತ್ನಿಸುತ್ತಾನೆ.
2 ಯೆಹೋವನು ಮತ್ತು ಸೈತಾನನು ವಿರುದ್ಧ ಸ್ವಭಾವದ ವ್ಯಕ್ತಿಗಳಾಗಿರುವಂತೆಯೇ, ಅವರ ಆರಾಧಕರೂ ಹಾಗೆಯೇ ಇದ್ದಾರೆ. ಸೈತಾನನ ನೇತೃತ್ವವನ್ನು ಹಿಂಬಾಲಿಸುವವರಲ್ಲಿ, ವಂಚನೆ ಮತ್ತು ಮೋಸಗಾರಿಕೆಯ ಸ್ವಭಾವಲಕ್ಷಣಗಳಿರುತ್ತವೆ. ಅವರು ಅಂಧಕಾರಕ್ಕೆ ಸೇರಿರುವ ಕೆಲಸಗಳನ್ನು ಮಾಡುತ್ತಿರುವಾಗ, ತಮ್ಮನ್ನು ಉಪಕಾರಿಗಳಾಗಿ ಪ್ರಸ್ತುತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ವಾಸ್ತವಾಂಶದಿಂದ ಆಶ್ಚರ್ಯಗೊಳ್ಳದಿರುವಂತೆ ಕೊರಿಂಥದ ಕ್ರೈಸ್ತರಿಗೆ ಹೇಳಲಾಯಿತು. “ಆದರೆ ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆ. (2 ಕೊರಿಂಥ 11:13, 14) ಇನ್ನೊಂದು ಬದಿಯಲ್ಲಿ, ಕ್ರೈಸ್ತರು ತಮ್ಮ ನಾಯಕನೋಪಾದಿ ಕ್ರಿಸ್ತನ ಕಡೆಗೆ ನೋಡುತ್ತಾರೆ. ಭೂಮಿಯಲ್ಲಿದ್ದಾಗ, ಅವನು ತನ್ನ ತಂದೆಯಾದ ಯೆಹೋವ ದೇವರ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಇಬ್ರಿಯ 1:1-3) ಹೀಗೆ, ಕ್ರಿಸ್ತನನ್ನು ಹಿಂಬಾಲಿಸುವ ಮೂಲಕ ಕ್ರೈಸ್ತರು, ಸತ್ಯ, ಮುಚ್ಚುಮರೆಯಿಲ್ಲದಿರುವಿಕೆ ಮತ್ತು ಬೆಳಕಿನ ದೇವರಾಗಿರುವ ಯೆಹೋವನನ್ನು ಅನುಕರಿಸುತ್ತಿದ್ದಾರೆ. ಅವರಿಗೂ ತಮ್ಮ ಗುರುತು, ತಮ್ಮ ಕೆಲಸಗಳು, ಅಥವಾ ತಮ್ಮ ಉದ್ದೇಶಗಳನ್ನು ಮರೆಮಾಚುವ ಅಗತ್ಯವಿಲ್ಲ.—ಎಫೆಸ 4:17-19; 5:1, 2.
3. ಯೆಹೋವನ ಸಾಕ್ಷಿಗಳಾಗುವವರು ಒಂದು “ರಹಸ್ಯ ಪಂಗಡ”ವನ್ನು ಸೇರಲು ಒತ್ತಾಯಿಸಲ್ಪಡುತ್ತಾರೆಂಬ ಆರೋಪವನ್ನು ನಾವು ಹೇಗೆ ಸುಳ್ಳೆಂದು ಸಿದ್ಧಪಡಿಸಬಲ್ಲೆವು?
3 ಅತ್ಯುತ್ತಮವೆಂದು ಆತನಿಗೆ ತಿಳಿದಿರುವ ಸಮಯಗಳಲ್ಲಿ, ತನ್ನ ಉದ್ದೇಶಗಳ ಮತ್ತು ಭವಿಷ್ಯತ್ತಿನ ಕುರಿತಾಗಿ ಮಾನವರಿಗೆ ಈ ಹಿಂದೆ ಅಜ್ಞಾತವಾಗಿದ್ದ ವಿವರಗಳನ್ನು ಯೆಹೋವನು ಅನಾವರಣಗೊಳಿಸುತ್ತಾನೆ. ಈ ಅರ್ಥದಲ್ಲಿ ಆತನು ರಹಸ್ಯಗಳನ್ನು ಪ್ರಕಟಪಡಿಸುವ ಒಬ್ಬ ದೇವರಾಗಿದ್ದಾನೆ. ಹೀಗಿರುವುದರಿಂದ, ಆತನನ್ನು ಸೇವಿಸಲು ಬಯಸುವ ಜನರಿಗೆ, ಬಹಿರಂಗಪಡಿಸಲ್ಪಟ್ಟಿರುವ ಅಂತಹ ಮಾಹಿತಿಯನ್ನು ಕಲಿಯುವಂತೆ ಆಮಂತ್ರಿಸಲಾಗುತ್ತದೆ, ಹೌದು ಪ್ರೇರೇಪಿಸಲಾಗುತ್ತದೆ. 1994ರಲ್ಲಿ ನಡೆಸಲ್ಪಟ್ಟ, ಐರೋಪ್ಯ ದೇಶವೊಂದರಲ್ಲಿನ 1,45,000ಕ್ಕಿಂತಲೂ ಹೆಚ್ಚು ಸಾಕ್ಷಿಗಳ ಒಂದು ಸಮೀಕ್ಷೆಯು ಪ್ರಕಟಪಡಿಸಿದ್ದೇನೆಂದರೆ, ಅವರಲ್ಲಿ ಸರಾಸರಿ ಪ್ರತಿಯೊಬ್ಬರೂ ಒಬ್ಬ ಸಾಕ್ಷಿಯಾಗಲು ಆಯ್ಕೆಮಾಡಿಕೊಳ್ಳುವ ಮುನ್ನ ಮೂರು ವರ್ಷಗಳ ವರೆಗೆ ಯೆಹೋವನ ಸಾಕ್ಷಿಗಳ ಬೋಧನೆಗಳನ್ನು ವೈಯಕ್ತಿಕವಾಗಿ ಶೋಧಿಸಿದರು. ಅವರು ತಮ್ಮ ಸ್ವಂತ ಇಚ್ಛಾಸ್ವಾತಂತ್ರ್ಯಕ್ಕನುಸಾರ, ಯಾವುದೇ ಒತ್ತಾಯವಿಲ್ಲದೆ ಆ ಆಯ್ಕೆಯನ್ನು ಮಾಡಿಕೊಂಡರು. ಮತ್ತು ಅವರಿಗೆ ಇಚ್ಛಾಸ್ವಾತಂತ್ರ್ಯ ಹಾಗೂ ಕ್ರಿಯಾಸ್ವಾತಂತ್ರ್ಯವಿರುವುದು ಮುಂದುವರಿಯಿತು. ಉದಾಹರಣೆಗಾಗಿ, ಕ್ರೈಸ್ತರಿಗಾಗಿರುವ ನೈತಿಕತೆಯ ಉಚ್ಚ ಮಟ್ಟಗಳೊಂದಿಗೆ ಕೆಲವರು ಅಸಮ್ಮತಿಸಲಾರಂಭಿಸಿದ ಕಾರಣ, ತಾವು ಸಾಕ್ಷಿಗಳಾಗಿ ಮುಂದುವರಿಯಲು ಬಯಸುವುದಿಲ್ಲವೆಂದು ಇವರು ತದನಂತರ ನಿರ್ಣಯಿಸಿದರು. ಆದರೂ, ಕಳೆದ ಐದು ವರ್ಷಗಳಲ್ಲಿ, ಈ ಮಾಜಿ ಸಾಕ್ಷಿಗಳಲ್ಲಿ ಅಧಿಕ ಸಂಖ್ಯೆಯ ಜನರು, ಸಾಕ್ಷಿಗಳೋಪಾದಿ ತಮ್ಮ ಸಹವಾಸ ಮತ್ತು ಚಟುವಟಿಕೆಯನ್ನು ಪುನಃ ಆರಂಭಿಸಲಿಕ್ಕಾಗಿ ಹೆಜ್ಜೆಗಳನ್ನು ತೆಗೆದುಕೊಂಡದ್ದು ಆಸಕ್ತಿಕರವಾದ ಸಂಗತಿಯಾಗಿದೆ.
4. ನಂಬಿಗಸ್ತ ಕ್ರೈಸ್ತರನ್ನು ಯಾವ ವಿಷಯವು ಕ್ಷೋಭೆಗೊಳಿಸುವ ಅಗತ್ಯವಿಲ್ಲ, ಮತ್ತು ಏಕೆ ಕ್ಷೋಭೆಗೊಳಿಸಬಾರದು?
4 ಖಂಡಿತವಾಗಿಯೂ, ಮಾಜಿ ಸಾಕ್ಷಿಗಳೆಲ್ಲರೂ ಹಿಂದಿರುಗುವುದಿಲ್ಲ. ಮತ್ತು ಅವರಲ್ಲಿ ಕೆಲವರು, ಒಂದು ಸಮಯದಲ್ಲಿ ಕ್ರೈಸ್ತ ಸಭೆಯೊಳಗೆ ಜವಾಬ್ದಾರಿಯ ಸ್ಥಾನಗಳಲ್ಲಿದ್ದವರು ಆಗಿದ್ದಾರೆ. ಇದು ಆಶ್ಚರ್ಯಗೊಳಿಸುವಂತಹ ವಿಷಯವಾಗಿರಬೇಕಾಗಿಲ್ಲ, ಯಾಕಂದರೆ ಯೇಸುವಿನ ಅತ್ಯಾಪ್ತ ಹಿಂಬಾಲಕರಲ್ಲಿ ಒಬ್ಬನಾದ, ಅಪೊಸ್ತಲ ಯೂದನು, ವಿಮುಖನಾದನು. (ಮತ್ತಾಯ 26:14-16, 20-25) ಆದರೆ ಸ್ವತಃ ಕ್ರೈಸ್ತತ್ವದ ಕುರಿತಾಗಿ ಕ್ಷೋಭಿತರಾಗಿರಲು ಇದು ಒಂದು ಕಾರಣವೊ? ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ಯೆಹೋವನ ಸಾಕ್ಷಿಗಳು ಹೊಂದುತ್ತಿರುವ ಯಶಸ್ಸನ್ನು ಇದು ಇಲ್ಲವಾಗಿಸುತ್ತದೊ? ಖಂಡಿತವಾಗಿಯೂ ಇಲ್ಲ. ಹೇಗೆ ಇಸ್ಕಾರಿಯೋತ ಯೂದನ ವಿಶ್ವಾಸಘಾತುಕ ಕ್ರಿಯೆಯು ದೇವರ ಉದ್ದೇಶಗಳನ್ನು ನಿಲುಗಡೆಗೆ ತರಲಿಲ್ಲವೋ ಹಾಗೆಯೇ.
ಸರ್ವಶಕ್ತನಾದರೂ ಪ್ರೀತಿಪರನು
5. ಯೆಹೋವನು ಮತ್ತು ಯೇಸು ಮಾನವರನ್ನು ಪ್ರೀತಿಸುತ್ತಾರೆಂದು ನಮಗೆ ಹೇಗೆ ತಿಳಿದಿದೆ, ಮತ್ತು ಅವರು ಈ ಪ್ರೀತಿಯನ್ನು ಹೇಗೆ ಪ್ರದರ್ಶಿಸಿದ್ದಾರೆ?
5 ಯೆಹೋವನು ಪ್ರೀತಿಯ ದೇವರು. ಆತನು ಜನರ ಕುರಿತಾಗಿ ಕಾಳಜಿ ವಹಿಸುತ್ತಾನೆ. (1 ಯೋಹಾನ 4:7-11) ಆತನಿಗೆ ಮಹೋನ್ನತವಾದ ಸ್ಥಾನವಿದ್ದರೂ, ಆತನು ಮನುಷ್ಯರನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದರಲ್ಲಿ ಆನಂದಿಸುತ್ತಾನೆ. ಆತನ ಪುರಾತನಕಾಲದ ಸೇವಕರಲ್ಲಿ ಒಬ್ಬನ ಕುರಿತಾಗಿ ನಾವು ಓದುವುದು: “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು . . . ದೇವರ ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.” (ಯಾಕೋಬ 2:23; 2 ಪೂರ್ವಕಾಲವೃತ್ತಾಂತ 20:7; ಯೆಶಾಯ 41:8) ಮಾನವ ಸ್ನೇಹಿತರು ಗೋಪ್ಯ ಸಂಗತಿಗಳನ್ನು, ಅಥವಾ ಗುಟ್ಟುಗಳನ್ನು ಹಂಚಿಕೊಳ್ಳುವಂತೆಯೇ, ಯೆಹೋವನು ಕೂಡ ತನ್ನ ಸ್ನೇಹಿತರೊಂದಿಗೆ ರಹಸ್ಯಗಳನ್ನು ಹಂಚಿಕೊಳ್ಳುತ್ತಾನೆ. ಈ ಸಂಬಂಧದಲ್ಲಿ ಯೇಸು ತನ್ನ ತಂದೆಯನ್ನು ಅನುಕರಿಸಿದನು. ಯಾಕಂದರೆ ಅವನು ತನ್ನ ಶಿಷ್ಯರೊಂದಿಗೆ ಸ್ನೇಹವನ್ನು ಬೆಳೆಸಿ, ಅವರೊಂದಿಗೆ ರಹಸ್ಯಗಳನ್ನು ಹಂಚಿಕೊಂಡನು. ಅವನು ಅವರಿಗೆ ಹೇಳಿದ್ದು: “ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.” (ಯೋಹಾನ 15:15) ಯೆಹೋವನು, ಆತನ ಪುತ್ರನು ಮತ್ತು ಅವರ ಸ್ನೇಹಿತರು ಪಾಲಿಗರಾಗುವ ಖಾಸಗಿ ಮಾಹಿತಿಯು, ಅಥವಾ ‘ರಹಸ್ಯಗಳು’ ಅವರನ್ನು ಪ್ರೀತಿ ಮತ್ತು ಭಕ್ತಿಯ ಮುರಿಯಲಾರದಂತಹ ಬಂಧದೊಳಗೆ ಐಕ್ಯಗೊಳಿಸುತ್ತದೆ.—ಕೊಲೊಸ್ಸೆ 3:14.
6. ಯೆಹೋವನು ತನ್ನ ಉದ್ದೇಶಗಳನ್ನು ಮರೆಮಾಚುವ ಅಗತ್ಯವಿಲ್ಲವೇಕೆ?
6 ಯೆಹೋವ ಎಂಬ ಹೆಸರಿನ ಅರ್ಥ, “ಆತನು ಆಗಿಸುತ್ತಾನೆ” ಎಂದಾಗಿದೆ. ಇದು, ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಆತನು ಏನು ಆಗಬೇಕೊ ಹಾಗೆ ಆಗುವ ಆತನ ಸಾಮರ್ಥ್ಯವನ್ನು ಸೂಚಿಸುತ್ತದೆ. ತನ್ನ ಉದ್ದೇಶಗಳನ್ನು ನೆರವೇರಿಸುವುದರಿಂದ ಇತರರು ತನ್ನನ್ನು ಅಡ್ಡೈಸಲು ಶಕ್ತರಾಗುವರೆಂದು ಮನುಷ್ಯರಂತೆ ಹೆದರಿ, ತನ್ನ ಉದ್ದೇಶಗಳನ್ನು ಮರೆಮಾಚುವ ಅಗತ್ಯ ಯೆಹೋವನಿಗಿಲ್ಲ. ಆತನು ವಿಫಲನಾಗುವ ಸಾಧ್ಯತೆಯೇ ಇಲ್ಲ. ಆದುದರಿಂದ ತನ್ನ ವಾಕ್ಯವಾದ ಬೈಬಲಿನಲ್ಲಿ, ಆತನು ಏನನ್ನು ಮಾಡಲು ಉದ್ದೇಶಿಸುತ್ತಾನೊ ಅದನ್ನು ಆತನು ಮುಚ್ಚುಮರೆಯಿಲ್ಲದೆ ಪ್ರಕಟಪಡಿಸುತ್ತಾನೆ. ಆತನು ವಾಗ್ದಾನಿಸುವುದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.
7. (ಎ) ಏದೆನಿನಲ್ಲಿ ಯೆಹೋವನು ಏನನ್ನು ಮುಂತಿಳಿಸಿದನು, ಮತ್ತು ದೇವರು ಸತ್ಯವಂತನಾಗಿದ್ದಾನೆಂಬುದನ್ನು ಸೈತಾನನು ಹೇಗೆ ರುಜುಪಡಿಸಿದನು? (ಬಿ) 2 ಕೊರಿಂಥ 13:8ರಲ್ಲಿರುವ ಮೂಲತತ್ತ್ವವು ಹೇಗೆ ಯಾವಾಗಲೂ ಅನ್ವಯವಾಗುವಾಗುತ್ತದೆ?
7 ಏದೆನಿನಲ್ಲಿನ ದಂಗೆಯ ಸ್ವಲ್ಪ ಸಮಯದ ಅನಂತರ, ಯೆಹೋವನು ತನ್ನ ಮತ್ತು ತನ್ನ ಶತ್ರುವಾದ ಸೈತಾನನ ನಡುವೆ ನಡೆಯುತ್ತಿರುವ ವಾಗ್ವಾದದ ಕೊನೆಯ ಫಲಿತಾಂಶವನ್ನು ಸಂಕ್ಷೇಪವಾಗಿ ಪ್ರಕಟಪಡಿಸಿದನು. ದೇವರ ವಾಗ್ದಾನಿತ ಸಂತಾನವು ವೇದನಾಮಯವಾಗಿ ಜಜ್ಜಲ್ಪಡುವುದು, ಆದರೂ ಶಾಶ್ವತವಾಗಿಯಲ್ಲ. ಆದರೆ, ಸೈತಾನನು ಅಂತಿಮವಾಗಿ ಒಂದು ಮಾರಣಾಂತಿಕ ಜಜ್ಜುವಿಕೆಯನ್ನು ಅನುಭವಿಸುವನು. (ಆದಿಕಾಂಡ 3:15) ಸಾ.ಶ. 33ರಲ್ಲಿ, ಆ ಸಂತಾನವಾದ ಕ್ರಿಸ್ತ ಯೇಸುವಿಗೆ ಮರಣವನ್ನು ಉಂಟುಮಾಡುವ ಮೂಲಕ ಸೈತಾನನು ಅವನನ್ನು ವಾಸ್ತವದಲ್ಲಿ ಜಜ್ಜಿದನು. ಈ ರೀತಿಯಲ್ಲಿ, ಸೈತಾನನು ಶಾಸ್ತ್ರವಚನವನ್ನು ನೆರವೇರಿಸಿದನು ಮತ್ತು ಅದೇ ಸಮಯದಲ್ಲಿ, ಯೆಹೋವನನ್ನು ಸತ್ಯದ ದೇವರಾಗಿ—ಹೀಗೆ ಮಾಡುವುದು ಸೈತಾನನ ಉದ್ದೇಶವಾಗಿರದಿದ್ದರೂ—ರುಜುಪಡಿಸಿದನು. ಸತ್ಯ ಮತ್ತು ನೀತಿಗಾಗಿರುವ ಅವನ ದ್ವೇಷವು, ಹಾಗೂ ಅವನ ಹೆಮ್ಮೆಯ, ಪಶ್ಚಾತ್ತಾಪರಹಿತ ಮನೋಭಾವವು, ಅವನು ಏನು ಮಾಡುವನೆಂದು ದೇವರು ಮುಂತಿಳಿಸಿದನೊ ಸರಿಯಾಗಿ ಅದನ್ನೇ ಮಾಡುವಂತೆ ಅವನನ್ನು ನಡಿಸಿತು. ಹೌದು, ಸತ್ಯದ ಎಲ್ಲಾ ವಿರೋಧಿಗಳಿಗೆ, ಸ್ವತಃ ಸೈತಾನನಿಗೂ, ಈ ಮೂಲತತ್ತ್ವವು ಅನ್ವಯಿಸುತ್ತದೆ: “ನಾವು ಸತ್ಯದ ವಿರುದ್ಧವಾಗಿ ಏನನ್ನೂ ಮಾಡಲಾರೆವು, ಬದಲಾಗಿ ಕೇವಲ ಸತ್ಯದ ಪರವಾಗಿಯೇ ಮಾಡಬಲ್ಲೆವು.”—2 ಕೊರಿಂಥ 13:8, NW.
8, 9. (ಎ) ಸೈತಾನನಿಗೆ ಏನು ತಿಳಿದಿದೆ, ಆದರೆ ಈ ತಿಳಿವು ಯೆಹೋವನ ಉದ್ದೇಶಗಳ ನೆರವೇರಿಕೆಯನ್ನು ಭಂಗಗೊಳಿಸುತ್ತದೊ? (ಬಿ) ಯೆಹೋವನ ವಿರೋಧಿಗಳು ಯಾವ ಸ್ಪಷ್ಟ ಎಚ್ಚರಿಕೆಯನ್ನು ಕಡೆಗಣಿಸುತ್ತಾರೆ, ಮತ್ತು ಏಕೆ?
8 ದೇವರ ರಾಜ್ಯವು 1914ರಲ್ಲಿ ಅದೃಶ್ಯವಾಗಿ ಸ್ಥಾಪಿಸಲ್ಪಟ್ಟಂದಿನಿಂದ, ಪ್ರಕಟನೆ 12:12 ಅನ್ವಯವಾಗಿದೆ: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ಆದರೂ, ತನಗೆ ಸ್ವಲ್ಪ ಕಾಲವಿದೆಯೆಂಬ ತಿಳಿವು, ಸೈತಾನನು ತನ್ನ ಮಾರ್ಗಕ್ರಮವನ್ನು ಬದಲಾಯಿಸುವಂತೆ ಮಾಡುತ್ತದೊ? ಹಾಗೆ ಮಾಡುವುದು, ಯೆಹೋವನು ಸತ್ಯದ ದೇವರು ಮತ್ತು ಪರಮ ಪ್ರಧಾನ ಪ್ರಭುವಾಗಿ, ಆತನೊಬ್ಬನೇ ಆರಾಧನೆಗೆ ಯೋಗ್ಯನಾಗಿದ್ದಾನೆಂದು ಸೈತಾನನು ಒಪ್ಪಿಕೊಂಡಂತಾಗುವುದು. ಆದಾಗಲೂ, ಪಿಶಾಚನಿಗೆ ಯೆಹೋವನ ಕುರಿತಾದ ಈ ವಾಸ್ತವಾಂಶಗಳು ತಿಳಿದಿದ್ದರೂ, ಅವನು ಸೋಲನ್ನು ಒಪ್ಪಿಕೊಳ್ಳಲು ಸಿದ್ಧನಾಗಿರುವುದಿಲ್ಲ.
9 ಸೈತಾನನ ಲೋಕ ವ್ಯವಸ್ಥೆಯ ಮೇಲೆ ಕ್ರಿಸ್ತನು ನ್ಯಾಯತೀರ್ಪನ್ನು ವಿಧಿಸಲು ಬರುವಾಗ ಏನು ಸಂಭವಿಸುವುದೆಂಬುದನ್ನು ಯೆಹೋವನು ಮುಚ್ಚುಮರೆಯಿಲ್ಲದೆ ಪ್ರಕಟಪಡಿಸುತ್ತಾನೆ. (ಮತ್ತಾಯ 24:29-31; 25:31-46) ಈ ವಿಷಯದಲ್ಲಿ, ಆತನ ವಾಕ್ಯವು ಲೋಕ ನಾಯಕರ ಕುರಿತಾಗಿ ಪ್ರಕಟಿಸುವುದು: “‘ಶಾಂತಿ ಮತ್ತು ಭದ್ರತೆ!’ ಎಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು.” (1 ಥೆಸಲೊನೀಕ 5:3, NW) ಸೈತಾನನ ನೇತೃತ್ವವನ್ನು ಹಿಂಬಾಲಿಸುವವರು ಈ ಸ್ಪಷ್ಟವಾದ ಎಚ್ಚರಿಕೆಯನ್ನು ಕಡೆಗಣಿಸುತ್ತಾರೆ. ತಮ್ಮ ದುಷ್ಟ ಹೃದಯಗಳಿಂದಾಗಿ ಅವರು ಕುರುಡಾಗಿಸಲ್ಪಟ್ಟಿದ್ದಾರೆ. ಇದು ಅವರು ತಮ್ಮ ದುಷ್ಟ ಮಾರ್ಗಕ್ರಮದಿಂದ ಪಶ್ಚಾತ್ತಾಪಪಡುವುದರಿಂದ ಮತ್ತು ಯೆಹೋವನ ಉದ್ದೇಶಗಳನ್ನು ಅಡ್ಡಗಟ್ಟಲು ಪ್ರಯತ್ನಿಸುವ ಅವರ ಯೋಜನೆಗಳನ್ನು ಹಾಗೂ ಯುಕ್ತಿಯನ್ನು ಬದಲಾಯಿಸುವುದರಿಂದ ಅವರನ್ನು ತಡೆಗಟ್ಟುತ್ತದೆ.
10. (ಎ) 1 ಥೆಸಲೊನೀಕ 5:3 ಎಷ್ಟರ ಮಟ್ಟಿಗೆ ನೆರವೇರಿಕೆಯನ್ನು ಹೊಂದಿದ್ದಿರಬಹುದು, ಆದರೆ ಯೆಹೋವನ ಜನರು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ದೇವರ ಜನರನ್ನು ವಿರೋಧಿಸುವುದರಲ್ಲಿ ನಂಬಿಕೆಯಿಲ್ಲದ ಜನರು ಭವಿಷ್ಯತ್ತಿನಲ್ಲಿ ಹೆಚ್ಚು ಉದ್ಧಟರಾಗಬಹುದು ಏಕೆ?
10 ವಿಶ್ವ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಶಾಂತಿಯ ವರ್ಷವು ಪ್ರಕಟಿಸಲ್ಪಟ್ಟಿರುವ 1986ರಂದಿನಿಂದ ವಿಶೇಷವಾಗಿ, ಲೋಕವು ಶಾಂತಿ ಮತ್ತು ಭದ್ರತೆಯ ಕುರಿತಾದ ಮಾತುಕತೆಯಿಂದ ತುಂಬಿಕೊಂಡಿದೆ. ಲೋಕ ಶಾಂತಿಯನ್ನು ತರುವ ಒಂದು ಪ್ರಯತ್ನದಲ್ಲಿ ಖಂಡಿತವಾದ ಹೆಜ್ಜೆಗಳು ತೆಗೆದುಕೊಳ್ಳಲ್ಪಟ್ಟಿವೆ. ಈ ಪ್ರಯತ್ನವು ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ಉತ್ಪಾದಿಸಿದೆ. ಇದು ಈ ಪ್ರವಾದನೆಯ ಪೂರ್ಣ ನೆರವೇರಿಕೆಯಾಗಿದೆಯೊ, ಅಥವಾ ಭವಿಷ್ಯತ್ತಿನಲ್ಲಿ ಯಾವುದೊ ಒಂದು ವಿಧದ ಬೆಚ್ಚಿಬೀಳಿಸುವಂತಹ ಘೋಷಣೆಯನ್ನು ನಾವು ನಿರೀಕ್ಷಿಸಬೇಕೊ? ಯೆಹೋವನು ಆ ವಿಷಯವನ್ನು ತನ್ನ ತಕ್ಕ ಸಮಯದಲ್ಲಿ ಸ್ಪಷ್ಟೀಕರಿಸುವನು. ಅಷ್ಟರ ವರೆಗೆ, ನಾವು “ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ” ಆತ್ಮಿಕವಾಗಿ ಎಚ್ಚರವಾಗಿ ಉಳಿಯೋಣ. (2 ಪೇತ್ರ 3:11) ಶಾಂತಿ ಮತ್ತು ಭದ್ರತೆಯ ಇನ್ನೂ ಹೆಚ್ಚಿನ ಮಾತುಕತೆಯೊಂದಿಗೆ ಸಮಯವು ದಾಟಿ ಹೋಗುತ್ತಿರುವಂತೆಯೇ, ಈ ಎಚ್ಚರಿಕೆಯ ಕುರಿತಾಗಿ ತಿಳಿದಿರುವ ಆದರೆ ಅದನ್ನು ಕಡೆಗಣಿಸಲು ಆರಿಸಿಕೊಳ್ಳುವ ಕೆಲವು ವ್ಯಕ್ತಿಗಳು, ಯೆಹೋವನು ತನ್ನ ಮಾತನ್ನು ನೆರವೇರಿಸದಿರುವನು ಅಥವಾ ನೆರವೇರಿಸಲು ಸಾಧ್ಯವಿಲ್ಲವೆಂದು ಊಹಿಸಿಕೊಳ್ಳುವುದರಿಂದ ಹೆಚ್ಚು ಉದ್ಧಟರಾಗಬಹುದು. (ಹೋಲಿಸಿರಿ ಪ್ರಸಂಗಿ 8:11-13; 2 ಪೇತ್ರ 3:3, 4.) ಆದರೆ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವನೆಂದು ನಿಜ ಕ್ರೈಸ್ತರಿಗೆ ತಿಳಿದಿದೆ!
ಯೆಹೋವನು ಉಪಯೋಗಿಸುವ ಮಾಧ್ಯಮಗಳಿಗಾಗಿ ಯೋಗ್ಯವಾದ ಗೌರವ
11. ದಾನಿಯೇಲ ಮತ್ತು ಯೋಸೇಫರು ಯೆಹೋವನ ಕುರಿತಾಗಿ ಏನು ಕಲಿತರು?
11 ನವ-ಬ್ಯಾಬಿಲೋನಿಯ ಸಾಮ್ರಾಜ್ಯದ ರಾಜನಾದ ನೆಬೂಕದ್ನೆಚ್ಚರನಿಗೆ, ಅವನು ಜ್ಞಾಪಿಸಿಕೊಳ್ಳಲು ಸಾಧ್ಯವಿರದಿದ್ದ ಕಳವಳಗೊಳಿಸುವ ಒಂದು ಕನಸು ಬಿದ್ದಾಗ, ಅವನು ಸಹಾಯಕ್ಕಾಗಿ ಕೇಳಿಕೊಂಡನು. ಅವನ ಯಾಜಕರು, ಮಾಂತ್ರಿಕರು ಮತ್ತು ಮಾಟಗಾರರಿಗೆ, ಅವನ ಕನಸನ್ನು ಹೇಳಲು ಅಥವಾ ಅದು ಏನನ್ನು ಅರ್ಥೈಸುತ್ತದೆಂದೂ ಹೇಳಲು ಸಾಧ್ಯವಾಗಲಿಲ್ಲ. ದೇವರ ಸೇವಕನಾದ ದಾನಿಯೇಲನಾದರೊ ಹೇಳಶಕ್ತನಾದನು. ಆದರೂ, ಕನಸು ಮತ್ತು ಅದರ ಅರ್ಥದ ಪ್ರಕಟಗೊಳಿಸುವಿಕೆಯು ತನ್ನ ಸ್ವಂತ ವಿವೇಕದ ಫಲಿತಾಂಶವಾಗಿರಲಿಲ್ಲವೆಂದು ಅವನು ಸಿದ್ಧಮನಸ್ಸಿನಿಂದ ಒಪ್ಪಿಕೊಂಡನು. ದಾನಿಯೇಲನು ಹೇಳಿದ್ದು: “ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರಕಾಲದಲ್ಲಿ ನಡೆಯತಕ್ಕದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ.” (ದಾನಿಯೇಲ 2:1-30) ಹಲವಾರು ಶತಮಾನಗಳ ಹಿಂದೆ, ದೇವರ ಇನ್ನೊಬ್ಬ ಪ್ರವಾದಿಯಾದ ಯೋಸೇಫನು, ಯೆಹೋವನು ರಹಸ್ಯಗಳನ್ನು ಪ್ರಕಟಪಡಿಸುವಾತನಾಗಿದ್ದಾನೆ ಎಂಬುದನ್ನು ತದ್ರೀತಿಯಲ್ಲಿ ಅನುಭವಿಸಿದನು.—ಆದಿಕಾಂಡ 40:8-22; ಆಮೋಸ 3:7, 8.
12, 13. (ಎ) ಯೆಹೋವನ ಅತಿ ಮಹಾನ್ ಪ್ರವಾದಿ ಯಾರಾಗಿದ್ದನು, ಮತ್ತು ನೀವು ಹಾಗೆ ಉತ್ತರಿಸುವುದೇಕೆ? (ಬಿ) ‘ದೇವರ ಪವಿತ್ರ ರಹಸ್ಯಗಳ ಮನೆವಾರ್ತೆಯವರಾಗಿ’ ಇಂದು ಯಾರು ಸೇವೆ ಸಲ್ಲಿಸುತ್ತಾರೆ, ಮತ್ತು ನಾವು ಅವರನ್ನು ಹೇಗೆ ದೃಷ್ಟಿಸಬೇಕು?
12 ಭೂಮಿಯಲ್ಲಿ ಸೇವೆಸಲ್ಲಿಸಿದ ಯೆಹೋವನ ಅತಿ ಮಹಾನ್ ಪ್ರವಾದಿಯು ಯೇಸುವಾಗಿದ್ದನು. (ಅ. ಕೃತ್ಯಗಳು 3:19-24) ಪೌಲನು ವಿವರಿಸಿದ್ದು: “ಪುರಾತನಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಬಾಯಿಂದ ಭಾಗಭಾಗವಾಗಿಯೂ ವಿಧವಿಧವಾಗಿಯೂ ಮಾತಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು.”—ಇಬ್ರಿಯ 1:1, 2.
13 ಯೆಹೋವನು ಆದಿ ಕ್ರೈಸ್ತರೊಂದಿಗೆ ತನ್ನ ಪುತ್ರನಾದ ಯೇಸುವಿನ ಮೂಲಕ ಮಾತಾಡಿದನು. ಅವನು ಅವರಿಗೆ ದೈವಿಕ ರಹಸ್ಯಗಳನ್ನು ತಿಳಿಯಪಡಿಸಿದನು. ಯೇಸು ಅವರಿಗೆ ಹೇಳಿದ್ದು: “ದೇವರ ರಾಜ್ಯದ ಗುಟ್ಟುಗಳನ್ನು [“ಪವಿತ್ರ ರಹಸ್ಯಗಳನ್ನು,” NW] ತಿಳಿಯುವ ವರವು ನಿಮಗೇ ಕೊಟ್ಟದೆ.” (ಲೂಕ 8:10) ಪೌಲನು ತದನಂತರ, ಅಭಿಷಿಕ್ತ ಕ್ರೈಸ್ತರು “ಕ್ರಿಸ್ತನ ಕೈಕೆಳಗಿನವರೆಂತಲೂ ದೇವರು ತಿಳಿಸಿರುವ ಸತ್ಯಾರ್ಥಗಳ [“ಪವಿತ್ರ ರಹಸ್ಯಗಳ,” NW] ವಿಷಯದಲ್ಲಿ ಮನೆವಾರ್ತೆಯವ”ರಾಗಿರುವುದಾಗಿ ಹೇಳಿದನು. (1 ಕೊರಿಂಥ 4:1) ಇಂದು ಅಭಿಷಿಕ್ತ ಕ್ರೈಸ್ತರು ಈ ಸ್ವರೂಪದಲ್ಲಿ ಸೇವೆಸಲ್ಲಿಸುತ್ತಾ ಇದ್ದಾರೆ. ಅವರು, ನಂಬಿಗಸ್ತ ಮತ್ತು ವಿವೇಕಿಯಾದ ಆಳು ವರ್ಗವನ್ನು ರಚಿಸುತ್ತಾರೆ. ಈ ಆಳು ವರ್ಗವು, ತನ್ನ ಆಡಳಿತ ಮಂಡಳಿಯ ಮೂಲಕ ಸರಿಯಾದ ಸಮಯದಲ್ಲಿ ಆತ್ಮಿಕ ಆಹಾರವನ್ನು ಒದಗಿಸುತ್ತದೆ. (ಮತ್ತಾಯ 24:45-47) ಕಳೆದುಹೋದ ದಿನಗಳ ದೇವರ ಪ್ರೇರಿತ ಪ್ರವಾದಿಗಳನ್ನು, ಮತ್ತು ವಿಶೇಷವಾಗಿ ದೇವರ ಪುತ್ರನನ್ನು ನಾವು ಉಚ್ಚವಾಗಿ ಗೌರವಿಸುವಲ್ಲಿ, ಈ ಕಠಿನ ಸಮಯಗಳಲ್ಲಿ ತನ್ನ ಜನರಿಗೆ ತುಂಬ ಆವಶ್ಯಕವಾಗಿರುವ ಬೈಬಲ್ ಸಂಬಂಧಿತ ಮಾಹಿತಿಯನ್ನು ಪ್ರಕಟಪಡಿಸಲು ಯೆಹೋವನು ಇಂದು ಉಪಯೋಗಿಸುತ್ತಿರುವ ಈ ಮಾನವ ಮಾಧ್ಯಮವನ್ನೂ ನಾವು ಗೌರವಿಸಬೇಕಲ್ಲವೊ?—2 ತಿಮೊಥೆಯ 3:1-5, 13.
ಮುಚ್ಚುಮರೆಯಿಲ್ಲದಿರುವಿಕೆಯೊ ಗೋಪ್ಯತೆಯೊ?
14. ಕ್ರೈಸ್ತರು ಯಾವಾಗ ರಹಸ್ಯವಾಗಿ ಚಟುವಟಿಕೆಗಳನ್ನು ನಡೆಸುತ್ತಾರೆ, ಹೀಗೆ ಯಾರ ಮಾದರಿಯನ್ನು ಅವರು ಅನುಸರಿಸುತ್ತಾರೆ?
14 ವಿಷಯಗಳನ್ನು ಪ್ರಕಟಪಡಿಸುವುದರಲ್ಲಿ ಯೆಹೋವನ ಮುಚ್ಚುಮರೆಯಿಲ್ಲದಿರುವಿಕೆಯು, ಕ್ರೈಸ್ತರು ಯಾವಾಗಲೂ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ತಮಗೆ ತಿಳಿದಿರುವುದೆಲ್ಲವನ್ನೂ ಹೇಳಿಬಿಡಬೇಕೆಂಬುದನ್ನು ಅರ್ಥೈಸುತ್ತದೊ? ಒಳ್ಳೇದು, ತನ್ನ ಅಪೊಸ್ತಲರು “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿ”ರಬೇಕೆಂದು ಯೇಸು ನೀಡಿದ ಬುದ್ಧಿವಾದವನ್ನು ಕ್ರೈಸ್ತರು ಅನುಸರಿಸುತ್ತಾರೆ. (ಮತ್ತಾಯ 10:16) ತಮ್ಮ ಮನಸ್ಸಾಕ್ಷಿಗಳು ಬೇಡಿಕೊಳ್ಳುವಂತಹ ರೀತಿಯಲ್ಲಿ ಅವರು ದೇವರನ್ನು ಆರಾಧಿಸಸಾಧ್ಯವಿಲ್ಲವೆಂದು ಅವರಿಗೆ ಹೇಳಲ್ಪಡುವಲ್ಲಿ, ಕ್ರೈಸ್ತರು ‘ದೇವರಿಗೆ ವಿಧೇಯರಾಗುವುದನ್ನು’ ಮುಂದುವರಿಸುತ್ತಾರೆ. ಯಾಕಂದರೆ ಯೆಹೋವನ ಆರಾಧನೆಯನ್ನು ನಿರ್ಬಂಧಿಸುವ ಹಕ್ಕು ಯಾವುದೇ ಮಾನವ ಮಾಧ್ಯಮಕ್ಕಿಲ್ಲವೆಂಬುದನ್ನು ಅವರು ಅಂಗೀಕರಿಸುತ್ತಾರೆ. (ಅ. ಕೃತ್ಯಗಳು 5:29) ಸ್ವತಃ ಯೇಸು ಇದರ ಸೂಕ್ತತೆಯನ್ನು ಪ್ರದರ್ಶಿಸಿದನು. ನಾವು ಓದುವುದು: “ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರಮಾಡುತ್ತಿದ್ದನು; ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದ್ದದರಿಂದ ಆತನಿಗೆ ಯೂದಾಯದಲ್ಲಿ ಸಂಚಾರಮಾಡುವ ಮನಸ್ಸಿರಲಿಲ್ಲ. ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ ಯೇಸು ಅವರಿಗೆ [ತನ್ನ ಅವಿಶ್ವಾಸಿ ಮಾಂಸಿಕ ಸಹೋದರರಿಗೆ]— . . . ನೀವೇ ಜಾತ್ರೆಗೆ ಹೋಗಿರಿ; ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲವೆಂದು ಹೇಳಿದನು. ಇದನ್ನು ಹೇಳಿ ಗಲಿಲಾಯದಲ್ಲಿಯೇ ನಿಂತನು. ಆದರೆ ಆತನ ಅಣ್ಣತಮ್ಮಂದಿರು ಜಾತ್ರೆಗೆ ಹೋದ ಮೇಲೆ ಆತನು ಸಹ ಹೋದನು; ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ ಹೋದನು.”—ಯೋಹಾನ 7:1, 2, 6, 8-10.
ಹೇಳಬೇಕೊ ಹೇಳಬಾರದೊ?
15. ಒಂದು ರಹಸ್ಯವನ್ನು ಕಾಪಾಡುವುದು, ಕೆಲವೊಮ್ಮೆ ಮಾಡಬೇಕಾದ ಒಂದು ಪ್ರೀತಿಪರ ಸಂಗತಿಯಾಗಿದೆಯೆಂಬುದನ್ನು ಯೋಸೇಫನು ಹೇಗೆ ಸೂಚಿಸಿದನು?
15 ಕೆಲವು ವಿದ್ಯಮಾನಗಳಲ್ಲಿ, ಒಂದು ವಿಷಯವನ್ನು ಗೋಪ್ಯವಾಗಿಡುವುದು ವಿವೇಕಯುತ ಮಾತ್ರವಲ್ಲ, ಪ್ರೀತಿಪರವೂ ಆಗಿದೆ. ಉದಾಹರಣೆಗಾಗಿ, ಯೇಸುವಿನ ದತ್ತು ತಂದೆಯಾದ ಯೋಸೇಫನಿಗೆ, ತನ್ನ ನಿಶ್ಚಿತ ವಧುವಾದ ಮರಿಯಳು ಬಸುರಾಗಿದ್ದಳೆಂದು ತಿಳಿದುಬಂದಾಗ ಅವನು ಹೇಗೆ ಪ್ರತಿಕ್ರಿಯಿಸಿದನು? ನಾವು ಓದುವುದು: “ಆದರೆ ಆಕೆಯ ಗಂಡನಾದ ಯೋಸೇಫನು ಸಜ್ಜನನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ [“ರಹಸ್ಯವಾಗಿ,” NW] ಆಕೆಯನ್ನು ಬಿಟ್ಟುಬಿಡಬೇಕೆಂದಿದ್ದನು.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 1:18, 19) ಅವಳನ್ನು ಬೈಲಿಗೆ ತರುವುದು ಎಷ್ಟು ನಿರ್ದಯವಾದ ಸಂಗತಿಯಾಗಿರುತ್ತಿತ್ತು!
16. ಗೋಪ್ಯ ವಿಷಯಗಳ ಸಂಬಂಧದಲ್ಲಿ ಹಿರಿಯರಿಗೆ ಹಾಗೂ ಸಭೆಯ ಇತರ ಎಲ್ಲಾ ಸದಸ್ಯರಿಗೆ ಯಾವ ಜವಾಬ್ದಾರಿಯಿದೆ?
16 ಪೇಚಾಟ ಅಥವಾ ನೋವನ್ನುಂಟುಮಾಡಸಾಧ್ಯವಿರುವ ಗೋಪ್ಯ ಸಂಗತಿಗಳು ಅನಧಿಕೃತ ಜನರಿಗೆ ತಿಳಿಸಲ್ಪಡಬಾರದು. ಕ್ರೈಸ್ತ ಹಿರಿಯರು, ಜೊತೆ ಕ್ರೈಸ್ತರಿಗೆ ವೈಯಕ್ತಿಕ ಸಲಹೆ ಅಥವಾ ಸಾಂತ್ವನವನ್ನು ಕೊಡಬೇಕಾದಾಗ ಅಥವಾ ಯೆಹೋವನ ವಿರುದ್ಧ ಗಂಭೀರವಾಗಿ ಪಾಪಗೈದುದರಿಂದ ಶಿಸ್ತನ್ನೂ ನೀಡಬೇಕಾದಾಗ, ಇದನ್ನು ಮನಸ್ಸಿನಲ್ಲಿಡಬೇಕು. ಒಂದು ಶಾಸ್ತ್ರೀಯ ವಿಧದಲ್ಲಿ ಈ ವಿಷಯಗಳನ್ನು ನಿರ್ವಹಿಸುವುದು ಆವಶ್ಯಕ; ಒಳಗೂಡಿರದಂತಹವರಿಗೆ ಗೋಪ್ಯ ವಿವರಗಳನ್ನು ತಿಳಿಸುವುದು ಅನಾವಶ್ಯಕ ಮತ್ತು ಪ್ರೀತಿರಹಿತವಾದದ್ದಾಗಿದೆ. ಕ್ರೈಸ್ತ ಸಭೆಯ ಸದಸ್ಯರು ಹಿರಿಯರಿಂದ ಗೋಪ್ಯ ಮಾಹಿತಿಯನ್ನು ಹೊರಪಡಿಸಲು ನಿಶ್ಚಯವಾಗಿಯೂ ಪ್ರಯತ್ನಿಸದಿರುವರು, ಬದಲಾಗಿ ಗೋಪ್ಯ ವಿಷಯಗಳನ್ನು ರಹಸ್ಯವಾಗಿಡುವ ಹಿರಿಯರ ಜವಾಬ್ದಾರಿಯನ್ನು ಗೌರವಿಸುವರು. ಜ್ಞಾನೋಕ್ತಿ 25:9 ಅವಲೋಕಿಸುವುದು: “ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು; ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ.”
17. ಹೆಚ್ಚಿನ ವಿದ್ಯಮಾನಗಳಲ್ಲಿ ಕ್ರೈಸ್ತರು ಗೋಪ್ಯ ಸಂಗತಿಗಳನ್ನು ಗುಟ್ಟಾಗಿಡುತ್ತಾರೆ ಏಕೆ, ಆದರೆ ಅವರು ಯಾವಾಗಲೂ ಹಾಗೆ ಮಾಡಲು ಸಾಧ್ಯವಿಲ್ಲ ಏಕೆ?
17 ಕುಟುಂಬ ವೃತ್ತ ಅಥವಾ ನಿಕಟ ಸ್ನೇಹಿತರ ನಡುವೆಯೂ ಈ ಮೂಲತತ್ತ್ವವು ಅನ್ವಯವಾಗುತ್ತದೆ. ಕೆಲವು ಸಂಗತಿಗಳನ್ನು ಗೋಪ್ಯವಾಗಿಡುವುದು, ತಪ್ಪುತಿಳಿವಳಿಕೆಗಳು ಮತ್ತು ವಿಷಮ ಸಂಬಂಧಗಳನ್ನು ದೂರವಿರಿಸಲಿಕ್ಕಾಗಿ ಪ್ರಾಮುಖ್ಯವಾಗಿದೆ. “ಬಡಗಣಗಾಳಿ ಮಳೆ ಬರಮಾಡುವದು; ಚಾಡಿಯ [“ಗುಟ್ಟನ್ನು ಬಿಟ್ಟುಕೊಡುವ,” NW] ನಾಲಿಗೆ ಕೋಪದ ಮುಖ ಮಾಡುವದು.” (ಜ್ಞಾನೋಕ್ತಿ 25:23) ಯೆಹೋವ ಮತ್ತು ಆತನ ನೀತಿಯ ಮೂಲತತ್ತ್ವಗಳ ಕಡೆಗಿನ ನಿಷ್ಠೆ, ಹಾಗೂ ತಪ್ಪುಮಾಡುತ್ತಿರುವ ವ್ಯಕ್ತಿಗಳಿಗಾಗಿ ಪ್ರೀತಿಯು, ಗೋಪ್ಯ ವಿಷಯಗಳನ್ನೂ ಹೆತ್ತವರಿಗೆ, ಕ್ರೈಸ್ತ ಹಿರಿಯರಿಗೆ ಅಥವಾ ಇತರ ಅಧಿಕೃತ ವ್ಯಕ್ತಿಗಳಿಗೆ ತಿಳಿಸುವುದನ್ನು ಸಾಂದರ್ಭಿಕವಾಗಿ ಅವಶ್ಯಪಡಿಸುವುದು ಖಂಡಿತ.a ಆದರೆ ಹೆಚ್ಚಿನ ವಿದ್ಯಮಾನಗಳಲ್ಲಿ, ಕ್ರೈಸ್ತರು ತಮ್ಮಲ್ಲಿ ಭರವಸೆಯನ್ನು ಇಟ್ಟಿರುವ ಇತರರ ವೈಯಕ್ತಿಕ ಗುಟ್ಟುಗಳನ್ನು, ತಮ್ಮ ಗುಟ್ಟುಗಳನ್ನು ಕಾಪಾಡುವಂತೆಯೇ ಕಾಪಾಡುತ್ತಾರೆ.
18. ನಾವು ಏನನ್ನು ಹೇಳಬೇಕು ಮತ್ತು ಏನನ್ನು ಹೇಳಬಾರದೆಂಬುದನ್ನು ನಿರ್ಧರಿಸಲು ಯಾವ ಮೂರು ಕ್ರೈಸ್ತ ಗುಣಗಳು ನಮಗೆ ಸಹಾಯ ಮಾಡಬಲ್ಲವು?
18 ಸಾರಾಂಶವಾಗಿ ಹೇಳುವುದಾದರೆ, ಒಬ್ಬ ಕ್ರೈಸ್ತನು ಅವಶ್ಯವಿರುವಾಗ ನಿರ್ದಿಷ್ಟ ವಿಷಯಗಳನ್ನು ಗೋಪ್ಯವಾಗಿಡುತ್ತಾ, ಅದು ಸೂಕ್ತವಾಗಿರುವಾಗ ಮಾತ್ರ ಅವುಗಳನ್ನು ಪ್ರಕಟಪಡಿಸುವ ಮೂಲಕ ಯೆಹೋವನನ್ನು ಅನುಕರಿಸುತ್ತಾನೆ. ಏನನ್ನು ಹೇಳಬೇಕು ಮತ್ತು ಏನನ್ನು ಹೇಳಬಾರದೆಂಬುದನ್ನು ನಿರ್ಣಯಿಸುವುದರಲ್ಲಿ, ಅವನು ನಮ್ರತೆ, ನಂಬಿಕೆ ಮತ್ತು ಪ್ರೀತಿಯಿಂದ ಮಾರ್ಗದರ್ಶಿಸಲ್ಪಡುತ್ತಾನೆ. ತನಗೆ ತಿಳಿದಿರುವುದೆಲ್ಲವನ್ನು ಅವರಿಗೆ ಹೇಳುವ ಮೂಲಕ ಅಥವಾ ತಾನು ಹೇಳಸಾಧ್ಯವಿರದ ಗುಟ್ಟುಗಳೊಂದಿಗೆ ಅವರನ್ನು ಪೀಡಿಸುವ ಮೂಲಕ ಇತರರ ಮೇಲೆ ಪರಿಣಾಮವನ್ನು ಬೀರಲು ಪ್ರಯತ್ನಿಸುತ್ತಾ, ತನ್ನ ಸ್ವಂತ ಪ್ರಮುಖತೆಯನ್ನು ಅತಿಶಯಿಸದಂತೆ ನಮ್ರತೆಯು ಅವನನ್ನು ತಡೆಯುತ್ತದೆ. ಯೆಹೋವನ ವಾಕ್ಯದಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ನಂಬಿಕೆಯು, ಇತರರನ್ನು ರೇಗಿಸಬಹುದಾದ ವಿಷಯಗಳನ್ನು ಹೇಳುವ ವಿಷಯದಲ್ಲಿ ಮೊದಲೇ ಜಾಗರೂಕನಾಗಿರುವಾಗ, ದೈವಿಕವಾಗಿ ಒದಗಿಸಲ್ಪಟ್ಟಿರುವ ಬೈಬಲ್ ಸಂಬಂಧಿತ ಮಾಹಿತಿಯನ್ನು ಸಾರುವಂತೆ ಅವನನ್ನು ಪ್ರಚೋದಿಸುತ್ತದೆ. ಹೌದು, ದೇವರನ್ನು ಮಹಿಮೆಗೊಳಿಸುವ ಮತ್ತು ಜೀವವನ್ನು ಗಳಿಸಲಿಕ್ಕಾಗಿ ಜನರಿಗೆ ತಿಳಿದಿರಬೇಕಾದ ವಿಷಯಗಳನ್ನು ಬಹಿರಂಗವಾಗಿ ಹೇಳುವಂತೆ ಪ್ರೀತಿಯು ಅವನನ್ನು ಪ್ರಚೋದಿಸುವುದು. ಇನ್ನೊಂದು ಕಡೆ, ಅವನು ಗೋಪ್ಯವಾದ ವೈಯಕ್ತಿಕ ವಿಷಯಗಳನ್ನು ತಿಳಿಯಪಡಿಸುವುದು, ಹೆಚ್ಚಿನ ವಿದ್ಯಮಾನಗಳಲ್ಲಿ ತನ್ನಲ್ಲಿ ಪ್ರೀತಿಯ ಕೊರತೆಯಿರುವುದನ್ನು ಸೂಚಿಸುತ್ತದೆಂಬುದನ್ನು ಗ್ರಹಿಸುತ್ತಾ, ಅವನು ಅವುಗಳನ್ನು ಕಾಪಾಡುತ್ತಾನೆ.
19. ಯಾವ ಮಾರ್ಗಕ್ರಮವು ನಿಜ ಕ್ರೈಸ್ತರನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅದು ಯಾವುದರಲ್ಲಿ ಫಲಿಸುತ್ತದೆ?
19 ಈ ಸಮತೋಲನದ ಸಮೀಪಿಸುವಿಕೆಯು, ನಿಜ ಕ್ರೈಸ್ತರನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವರು ದೇವರ ಗುರುತನ್ನು, ನಾಮರಹಿತ ಮುಖವಾಡ ಅಥವಾ ಒಂದು ರಹಸ್ಯಾತ್ಮಕ, ವಿವರಿಸಲಾಗದ ತ್ರಯೈಕ್ಯ ಸಿದ್ಧಾಂತದ ಹಿಂದೆ ಮರೆಮಾಚುವುದಿಲ್ಲ. ಅಜ್ಞಾತ ದೇವತೆಗಳು ಸುಳ್ಳು ಧರ್ಮದ ಲಕ್ಷಣಗಳಾಗಿವೆ, ಸತ್ಯ ಧರ್ಮದವುಗಳಲ್ಲ. (ಅ. ಕೃತ್ಯಗಳು 17:22, 23ನ್ನು ನೋಡಿರಿ.) ‘ದೇವರ ಪವಿತ್ರ ರಹಸ್ಯಗಳ ಮನೆವಾರ್ತೆಯವರು’ ಆಗಿರುವ ಸುಯೋಗವನ್ನು ಯೆಹೋವನ ಅಭಿಷಿಕ್ತ ಸಾಕ್ಷಿಗಳು ನಿಜವಾಗಿಯೂ ಗಣ್ಯಮಾಡುತ್ತಾರೆ. ಈ ರಹಸ್ಯಗಳನ್ನು ಇತರರಿಗೆ ಬಹಿರಂಗವಾಗಿ ಪ್ರಕಟಪಡಿಸುವ ಮೂಲಕ, ಪ್ರಾಮಾಣಿಕ ಹೃದಯದವರು ಯೆಹೋವನ ಸ್ನೇಹವನ್ನು ಹುಡುಕುವಂತೆ ಸೆಳೆಯಲು ಅವರು ಸಹಾಯ ಮಾಡುತ್ತಾರೆ.—1 ಕೊರಿಂಥ 4:1; 14:22-25; ಜೆಕರ್ಯ 8:23; ಮಲಾಕಿಯ 3:18.
[ಪಾದಟಿಪ್ಪಣಿ]
a ಅಕ್ಟೋಬರ್ 1, 1986ರ ಕಾವಲಿನಬುರುಜು ಪತ್ರಿಕೆಯಲ್ಲಿ, “ಇತರರ ಪಾಪಗಳಲ್ಲಿ ಪಾಲುಗಾರರಾಗಬೇಡಿರಿ” ಎಂಬ ಲೇಖನವನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ತನ್ನ ಉದ್ದೇಶಗಳನ್ನು ಮರೆಮಾಚುವ ಅಗತ್ಯವಿಲ್ಲವೇಕೆ?
◻ ಯೆಹೋವನು ಯಾರಿಗೆ ತನ್ನ ರಹಸ್ಯಗಳನ್ನು ಪ್ರಕಟಪಡಿಸುತ್ತಾನೆ?
◻ ಗೋಪ್ಯ ವಿಷಯಗಳ ಸಂಬಂಧದಲ್ಲಿ ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ?
◻ ಏನನ್ನು ಹೇಳಬೇಕು ಮತ್ತು ಏನನ್ನು ಹೇಳಬಾರದೆಂಬುದನ್ನು ತಿಳಿದುಕೊಳ್ಳಲು, ಯಾವ ಮೂರು ಗುಣಗಳು ಕ್ರೈಸ್ತರಿಗೆ ಸಹಾಯ ಮಾಡುವವು?
[ಪುಟ 8,9 ರಲ್ಲಿರುವಚಿತ್ರಗಳು]
ಯೆಹೋವನು ತನ್ನ ವಾಕ್ಯದ ಮೂಲಕ ರಹಸ್ಯಗಳನ್ನು ಪ್ರಕಟಪಡಿಸುತ್ತಾನೆ