ಬೈಬಲಿನ ದೃಷ್ಟಿಕೋನ
ನಾವು ನಮ್ಮ ಹರಕೆಗಳನ್ನು ಸಲ್ಲಿಸಬೇಕೊ?
ಅನ್ಯಥಾ ಸಂತೋಷದಿಂದಿರುವ ಒಂದು ವಿವಾಹಿತ ದಂಪತಿಗಳು ತೀವ್ರ ವೇದನೆಯನ್ನು ಉಂಟುಮಾಡುವ ಸಮಸ್ಯೆವೊಂದನ್ನು ಎದುರಿಸುತ್ತಾರೆ. ವರ್ಷಗಳ ಹಿಂದೆ, ಅವರು ಒಂದು ಜಟಿಲವಾದ ಕೌಟುಂಬಿಕ ಇಕ್ಕಟ್ಟಿನಲ್ಲಿ ಆಳವಾಗಿ ಸಿಕ್ಕಿಬಿದ್ದಿದ್ದಾಗ, ದೇವರು ಅವರನ್ನು ತಮ್ಮ ತೊಂದರೆಗಳಿಂದ ಬಿಡಿಸುವದಾದರೆ ಆತನಿಗೆ ತಮ್ಮ ಆದಾಯದಲ್ಲಿ ದಶಾಂಶವನ್ನು ದಾನವಾಗಿ ಕೊಡುತ್ತೇವೆಂದು ಹರಕೆಮಾಡಿದ್ದರು. ಈಗ, ವಯಸ್ಸಿನಲ್ಲಿ ವೃದ್ಧರಾಗಿ ಮತ್ತು ಅನಿರೀಕ್ಷಿತ ಹಣದ ಸಮಸ್ಯೆಗಳಿಂದ ಹೇರಲ್ಪಟ್ಟವರಾಗಿ, “ಈ ಹರಕೆಯನ್ನು ನೆರವೇರಿಸಲು ನಾವು ನಿರ್ಬಂಧಿಸಲ್ಪಟ್ಟಿದ್ದೇವೊ?” ಎಂದು ಅವರು ಯೋಚಿಸುತ್ತಾರೆ.
ಅವರ ಸಂದಿಗ್ಧ ಸ್ಥಿತಿಯು, ಮಾತಿನಲ್ಲಿ ಹೆಚ್ಚು ಅವಸರ ಪಡುವುದರ ವಿರುದ್ಧ ಕೊಡಲ್ಪಟ್ಟ ವಿವೇಕಿ ಮನುಷ್ಯನ ಸಲಹೆಯನ್ನು ಒತ್ತಿಹೇಳುತ್ತದೆ: “ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆಮಾಡಿಕೊಳ್ಳದೆ ಇರುವದು ವಾಸಿ. ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ; ಇದು ಅಜಾಗ್ರತೆಯಿಂದಾಯಿತೆಂದು ದೂತನ ಮುಂದೆ ಹೇಳಬೇಡ.”—ಪ್ರಸಂಗಿ 5:5, 6.
ಕುಂಟು ನೆಪಗಳು ಇಲ್ಲ
ಪರವಾನಗಿ ಕೊಡುವ ಇಂದಿನ ಸಮಾಜದಲ್ಲಿ, ತಿರುಳಿಲ್ಲದ ಆಣೆಗಳು ಮತ್ತು ನುಣುಚಿಕೊಳ್ಳುವ ವಾಗ್ದಾನಗಳು ಅಂಗೀಕೃತವಾದ ಮಟ್ಟವಾಗಿದ್ದರೂ, ದೇವರು ಕಲ್ಪಿತ ನೆಪಗಳನ್ನು ನಂಬುವನೆಂದು ನಾವು ಅಪೇಕ್ಷಿಸಬಾರದು, ವ್ಯಾಪಾರಿಗಳಿಗೂ ಕೂಡ ಅದಕ್ಕಿಂತ ಉತ್ತಮವಾದದ್ದು ಗೊತ್ತಿದೆ. ವ್ಯಾಪಾರ ಪತ್ರಿಕೆ ಇಂಡಸ್ಟ್ರಿ ವೀಕ್ನಲ್ಲಿ “ವ್ಯಾಪಾರ ಸಮಗ್ರತೆ: ಒಂದು ವಿರೋಧಾಭಾಸವೊ?” ಎಂಬ ಲೇಖನವು ಪ್ರಲಾಪಿಸುವುದು: “ಜನರು ಸತ್ಯವನ್ನು ನುಡಿಯುವರೆಂದು, ಅನುಕೂಲವಾದ ವಿಷಯಗಳನ್ನು ಮಾಡುವ ಬದಲು ಸರಿಯಾದ ವಿಷಯವನ್ನು ಮಾಡುವರೆಂದು, ತಮ್ಮ ಕಟ್ಟುಪಾಡುಗಳಿಗೆ ಹೊಂದಿಕೆಯಾಗುವಂತೆ ಜೀವಿಸುವರೆಂದು ನಾವು ಇನ್ನು ಮುಂದೆ ನಂಬುವುದೇ ಇಲ್ಲ.” “ಹಣ ಪಾವತಿ ಮಾಡಿದ್ದೇನೆ ನಿಮಗೆ ಬೇಗನೆ ಸೇರುವುದು,” ಎಂಬ ಸೌಕರ್ಯವುಳ್ಳ ಹುಸಿನುಡಿಗಳು ಮಾನವ ಲೇಣಿದಾರರಿಂದ ಸಮಯವನ್ನು ಕೊಂಡುಕೊಳ್ಳುವದಾದರೂ, ದೇವದೂತರು ಎಂದೂ ಮೋಸಹೋಗುವದಿಲ್ಲ.
ಹರಕೆಗಳನ್ನು ಚಲಾಯಿಸಲು, ನಿರ್ಲಜ್ಜೆಯ ಲೇಣಿದಾರನು ನಿರ್ಭಾಗ್ಯ ಬಲಿಪಶುಗಳಿಂದ ಬಡ್ಡಿ ಹಣವನ್ನು ಸುಲಿಯಲು ಕೊಲೆಗಡುಕರನ್ನು ಉಪಯೋಗಿಸಬಹುದಾದ ರೀತಿಯಲ್ಲಿ ದೇವರು ದೂತರನ್ನು ಉಪಯೋಗಿಸುತ್ತಾನೆಂದು ಇದು ಅರ್ಥೈಸುವದಿಲ್ಲ. ಬದಲಾಗಿ, ದೇವರು ಪ್ರೀತಿಯಿಂದ ಆತನ ದೂತರನ್ನು “ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಭಕ್ತಿವರ್ಧಕ ಸೇವೆಗೋಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳನ್ನಾಗಿ” ಮಾಡುತ್ತಾನೆ. (ಇಬ್ರಿಯ 1:14) ಅಂತೆಯೇ, ದೂತರು ನಮ್ಮ ಯಥಾರ್ಥ ಪ್ರಾರ್ಥನೆಗಳನ್ನು ಉತ್ತರಿಸುವುದರಲ್ಲಿ ಒಂದು ಪಾತ್ರವನ್ನು ವಹಿಸಬಲ್ಲರು ಮತ್ತು ವಹಿಸುತ್ತಿದ್ದಾರೆ.
ಆದರೂ, ನಮ್ಮ ಪ್ರಾರ್ಥನೆಗಳಲ್ಲಿ ವ್ಯರ್ಥವಾದ ವಚನಗಳನ್ನು ನೀಡಲು ನಾವು ಮುಂದುವರಿಯುವದಾದರೆ, ದೇವರ ಆಶೀರ್ವಾದಗಳನ್ನು ನಾವು ಸೂಕ್ತವಾಗಿ ಅಪೇಕ್ಷಿಸಬಲ್ಲೆವೊ? ವಿವೇಕಿ ಮನುಷ್ಯನು ಹೇಳುವುದು: “ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಗೆಲಸವನ್ನು [ಸ್ವಲ್ಪ ಮಟ್ಟಿಗೆಯಾದರೂ] ಏಕೆ ಹಾಳುಮಾಡಬೇಕು?”—ಪ್ರಸಂಗಿ 5:6ಬಿ.
ಹೀಗೆ, ನೆಪಕೊಡುವ ಬದಲು ನಮ್ಮ ಹರಕೆಗಳನ್ನು ಸಲ್ಲಿಸುವಂತೆ, ನಮ್ಮನ್ನು ಪ್ರಚೋದಿಸಬೇಕಾದದ್ದು ಒಬ್ಬ ಸೇಡು ತೀರಿಸುವ ದೇವದೂತನ ಭಯವಲ್ಲ. ಅದರ ಬದಲಾಗಿ, ನಾವು ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಬೆಲೆಯುಳ್ಳದ್ದೆಂದು ಎಣಿಸಬೇಕು ಮತ್ತು ನಮ್ಮ ಚಟುವಟಿಕೆಯ ಮೇಲೆ ದೇವರ ಅನುಗ್ರಹವನ್ನು ಪ್ರಾಮಾಣಿಕವಾಗಿ ಬಯಸಬೇಕು. ಮೇಲೆ ಸೂಚಿಸಲ್ಪಟ್ಟ ದಂಪತಿಗಳು ಅದನ್ನು ಸುಂದರವಾಗಿ ಹೀಗೆ ವ್ಯಕ್ತಪಡಿಸಿದರು: “ದೇವರ ಎದುರಿನಲ್ಲಿ ಒಂದು ಶುದ್ಧವಾದ ಮನಸ್ಸಾಕ್ಷಿಯನ್ನು ಹೊಂದಿರಲು ನಾವು ಬಯಸುತ್ತೇವೆ ಮತ್ತು ಆತನ ಚಿತ್ತಕ್ಕನುಸಾರವಾಗಿ ವರ್ತಿಸಲು ಬಯಸುತ್ತೇವೆ.”
ಒಂದು ಒಳ್ಳೆಯ ಮನಸ್ಸಾಕ್ಷಿಯನ್ನಿಡಿರಿ
ಒಂದು ಹರಕೆಯನ್ನು ಸಲ್ಲಿಸುವುದರ ಕುರಿತು ನಾವು ಒಂದು ಶುದ್ಧವಾದ ಮನಸ್ಸಾಕ್ಷಿಯನ್ನು ಹೊಂದಿರಬೇಕಾದರೆ, ನಮ್ಮಲ್ಲಿ ನಾವೇ ಪ್ರಾಮಾಣಿಕರಾಗಿರಬೇಕು. ದೃಷ್ಟಾಂತಕ್ಕೆ: ಯಾರೊ ನಿಮಗೆ ಬಹಳ ಹಣವನ್ನು ಕೊಡುವ ಹಂಗಿನಲ್ಲಿರುವನೆಂದು ಭಾವಿಸೋಣ ಮತ್ತು ಯಾವುದೊ ದೌರ್ಭಾಗ್ಯದ ನಿಮಿತ್ತ ನಿಮಗೆ ಹಣವನ್ನು ಹಿಂದಿರುಗಿಸಲು ತಾನು ಅಶಕ್ತನೆಂದು ಕಂಡುಕೊಂಡಿದ್ದಾನೆ. ಯಾವುದು ನಿಮ್ಮನ್ನು ಹೆಚ್ಚು ಸಂತೋಷಗೊಳಿಸುವುದು—ಇಡೀ ಸಾಲವನ್ನು ಹಿಂದಿರುಗಿಸುವುದು ಅಸಾಧ್ಯವೆಂದು ಅವನು ತಿರಸ್ಕರಿಸುವುದೊ ಯಾ ಕನಿಷ್ಠ ಪಕ್ಷ ಅವನಿಗೆ ಸಾಧ್ಯವಾಗುವ ಮಟ್ಟಿಗೆ ಸಣ್ಣ, ಕ್ರಮವಾದ ಮೊತ್ತಗಳನ್ನು ನಿಮಗೆ ಸಲ್ಲಿಸುವ ಏರ್ಪಾಡನ್ನು ಮಾಡುವುದೊ?
ಅದೇ ರೀತಿಯ ತರ್ಕದಲ್ಲಿ, ಒಬ್ಬನ ಪೂರ್ಣ ಸಮಯವನ್ನು ಯಾ ಬೇರೆ ಸಂಪನ್ಮೂಲಗಳನ್ನು ಸರಿಯಾದ ಕ್ರಿಸ್ತೀಯ ಚಟುವಟಿಕೆಗಳಿಗಾಗಿ ಸಮರ್ಪಿಸಲು ಮಾಡಿರುವ ಒಂದು ಅವಸರದ ಹರಕೆಯನ್ನು ಸಲ್ಲಿಸುವುದು ಸಾಧ್ಯವಾಗಿರಲಿಕ್ಕಿಲ್ಲವೆಂದೆಣಿಸಿ. ನಮ್ಮ ಸದ್ಯದ ಪರಿಸ್ಥಿತಿಗಳು ಅನುಮತಿಸುವಂತೆ ಅದನ್ನು ತೀರಿಸಲು ನಿಕಟ ಬರುವಂತಹ ಕರ್ತವ್ಯ ಬದ್ಧತೆಯನ್ನು ನಾವು ತೋರಬಾರದೆ? “ಕೊಡುವುದಕ್ಕೆ ಮನಸ್ಸಿರುವದಾದರೆ,” ಕೊಡಲು ನಮ್ಮಲ್ಲಿ ಹೆಚ್ಚೇ ಇರಲಿ ಯಾ ಸ್ವಲ್ಪವೇ ಇರಲಿ, ಪೌಲನು ಬರೆದದ್ದು, “ಅದು ಸಮರ್ಪಕವಾಗಿರುವದು.” (2 ಕೊರಿಂಥ 8:12) ಆದರೆ ಒಬ್ಬನು ಬೈಬಲ್ ಸತ್ಯದ ಸರಿಯಾದ ಜ್ಞಾನವನ್ನು ಹೊಂದುವ ಮೊದಲು ಮಾಡಿರುವ ಹರಕೆಗಳ ಕುರಿತೇನು?
ತಪ್ಪಾದ ಯಾ ಅಶಾಸ್ತ್ರೀಯವಾದ ಹರಕೆಗಳು
ಒಂದು ಹರಕೆಯು ಅಶುದ್ಧ ಯಾ ಅನೈತಿಕವಾಗಿದೆಯೆಂದು ನಾವು ಕಲಿತಾಗ, ನಾವದನ್ನು ಬಿಸಿ ಕೆಂಡದ ಹಾಗೆ ಬೀಳಿಸಬೇಕು! (2 ಕೊರಿಂಥ 6:16-18) ಅಶುದ್ಧ ಹರಕೆಗಳ ಉದಾಹರಣೆಗಳು:
▫ ಬಾಬೆಲಿನ “ಗಗನದ ಒಡತಿಗೆ” ಎಂಬ ಹರಕೆಯಂಥ ಸುಳ್ಳು ದೇವರುಗಳಿಗೆ ಯಾ ದೇವತೆಗಳಿಗೆ ಮಾಡಿರುವ ಹರಕೆಗಳು.—ಯೆರೆಮೀಯ 44:23, 25.
▫ ಅಪೊಸ್ತಲ ಪೌಲನನ್ನು ಕೊಲ್ಲುವ ತನಕ ಬಾಯಲ್ಲಿ ಏನೂ ಹಾಕುವದಿಲ್ಲವೆಂದು ಶಪಥವನ್ನು ಮಾಡಿದ 40 ಪುರುಷರಂತೆ, ಕಾನೂನುಬಾಹಿರವಾದ ಹರಕೆಗಳು.—ಅ. ಕೃತ್ಯಗಳು 23:13, 14.
▫ “ದೆವ್ವಗಳ ಬೋಧನೆಗಳಿಗೂ, . . . ಸುಳ್ಳು ಬೋಧಕರು . . . , ಮದುವೆಯಾಗಬಾರದೆಂತಲೂ ಇಂಥಿಂಥ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು. ಆದರೆ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ ಅವರು ಕೃತಜ್ಞತಾಸ್ತುತಿಮಾಡಿ ತಿನ್ನುವದಕ್ಕೋಸ್ಕರ ದೇವರು ಸಕಲವಿಧವಾದ ಆಹಾರವನ್ನು ಉಂಟುಮಾಡಿದನು,” ಇದನ್ನು ಹಿಂಬಾಲಿಸುವ ಧರ್ಮಭ್ರಷ್ಟ ಹರಕೆಗಳು.—1 ತಿಮೊಥೆಯ 4:1-3.
ಆದುದರಿಂದ, ನಿಸ್ಸಂಶಯವಾಗಿ, ನಾವು ಕೆಲವೊಂದು ಹಿಂದಿನ ಹರಕೆಗಳನ್ನು ನಿರರ್ಥಕವೆಂದು ಘೋಷಿಸಬೇಕಾಗಬಹುದು. ಆದರೆ ಅಶಾಸ್ತ್ರೀಯವಾಗಿ ಯಾವುದನ್ನೂ ಒಳಗೊಂಡಿರದ ಹರಕೆಗಳಲ್ಲಿ, ನ್ಯೂನತೆಗಳನ್ನು ಹುಡುಕುವುದೇಕೆ? ನಮ್ಮ ಸದ್ಯದ ನಿಷ್ಕೃಷ್ಟ ಜ್ಞಾನವು, ಹಿಂದಿನ ಹರಕೆಗಳಿಗೆ ಎಂದಿಗಿಂತಲೂ ಹೆಚ್ಚಿನ ಗೌರವವನ್ನು ತೋರಿಸುವಂತೆ ಮಾಡಬಾರದೆ?
ನಿಮ್ಮ ಪೂರ್ವದ ಹಾಗೂ ಭಾವೀ ಹರಕೆಗಳನ್ನು ಪರಿಗಣಿಸಿರಿ
ನಮ್ಮ ಆರಾಧನೆಗೆ ಯಾವುದೇ ಭವಿಷ್ಯದ ಹರಕೆಗಳನ್ನು ಸೇರಿಸುವ ಮೊದಲು ನಾವು ಗಂಭೀರವಾಗಿ ಯೋಚಿಸಬೇಕೆಂದು ಕೂಡ ಇದು ಅರ್ಥೈಸುತ್ತದೆ. ಹರಕೆಗಳನ್ನು ಸುಮ್ಮನೆ ಒಬ್ಬ ವ್ಯಕ್ತಿಯು ಏನಾದರೂ ಮಾಡಲು ಯಾ ಮಾಡದೆ ಇರಲು, ಉದಾಹರಣೆಗೆ, ಕ್ರಿಸ್ತೀಯ ಆರಾಧನೆಯಲ್ಲಿ ಒಬ್ಬನು ಕಳೆಯುವ ಸಮಯವನ್ನು ಹೆಚ್ಚಿಸುವಂತೆ ಯಾ ಅತಿಯಾಗಿ ಊಟಮಾಡುವದರಿಂದ ತಡೆಯುವಂತೆ ಪ್ರಚೋದಿಸಲು ಉಪಯೋಗಿಸಬಾರದು. ಯೇಸುವಾದರೊ, ಎಲ್ಲಾ ಆಣೆಗಳನ್ನು, ಉದಾಹರಣೆಗೆ ನ್ಯಾಯಾಲಯದಲ್ಲಿ ಬೇಕಾಗಿರುವವುಗಳನ್ನು ಆಕ್ಷೇಪಿಸಲಿಲ್ಲ. ಆದರೆ ಅವನು ವ್ಯಕ್ತವಾಗಿ ಗೊತ್ತುಗುರಿಯಿಲ್ಲದ ಆಣೆಗಳ ವಿಷಯದಲ್ಲಿ ಒಂದು ಮಿತಿಯನ್ನಿಟ್ಟನು: “ಮತ್ತು—ನೀನು ಸುಳ್ಳಾಣೆಯಿಡಬಾರದು; ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಆಣೆಯನ್ನೇ ಇಡಬೇಡ,” ಎಂದು ಅವನು ಎಚ್ಚರಿಸಿದನು. (ಮತ್ತಾಯ 5:33, 34) ಅವನು ಯಾಕೆ ಈ ರೀತಿ ಅಭಿಪ್ರಾಯ ಪಟ್ಟನು? ಹರಕೆಗಳು ಮೊದಲಿಗಿಂತ ಕಡಮೆ ಸೂಕ್ತವಾಗಿ ಬಿಟ್ಟಿದ್ದವೊ?
ಪ್ರಾಚೀನ ಕಾಲದಲ್ಲಿ ನಂಬಿಗಸ್ತರಿಂದ ಮಾಡಲಾದ ಆಣೆಗಳು ಅನೇಕ ವೇಳೆ ಸೋಪಾಧಿಕವಾಗಿದ್ದವು. ಶಾಸ್ತ್ರೋಕ್ತವಾದ ಪ್ರಾರ್ಥನೆಯಲ್ಲಿ ಯೆಹೋವನಿಗೆ, ‘ನೀನು ನನ್ನನ್ನು ಈ ಮುಗ್ಗಟ್ಟಿನಿಂದ ಬಿಡಿಸುವದಾದರೆ, ನಾನು ನಿನ್ನ ಪರವಾಗಿ ಇಂಥಿಂಥದನ್ನು ಮಾಡುತ್ತೇನೆಂದು’ ಅವರು ಮಾತು ಕೊಡುತ್ತಿದ್ದರು. ಆದರೆ ಯೇಸು ಹೇಳಿದ್ದು: “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು.” ತನ್ನ ಸಮಯದ ನಂಬಿಗಸ್ತರಿಗೆ ಸೋಪಾಧಿಕ ಹರಕೆಗಳನ್ನು ಶಿಫಾರಸು ಮಾಡುವುದಕ್ಕೆ ತೀರಾ ಎದುರಾಗಿ, ಯೇಸು ಅವರಿಗೆ: “ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು” ಎಂಬ ಆಶ್ವಾಸನೆ ನೀಡಿದನು.—ಯೋಹಾನ 16:23, 24.
ಯೇಸುವಿನ ಹೆಸರು, ಯಾ ಸ್ಥಾನದಲ್ಲಿರುವ ಈ ಭರವಸೆಯು, ಯಾವನಾದರೂ—ಅವನು ಪ್ರಯತ್ನಿಸಿದರೂ ಕೂಡ—ದೇವರಿಗೆ “ಆಲೋಚಿಸದೆ . . . ಆಣೆಯಿಟ್ಟುಕೊಂಡ”ದ್ದನ್ನು ನೆರವೇರಿಸಲಾಗದ ಕಾರಣ ಇನ್ನೂ ದೋಷಿ ಮನೋಭಾವವನ್ನು ಅನುಭವಿಸುವಲ್ಲಿ ಅವನಿಗೆ ಸಾಂತ್ವನವನ್ನು ನೀಡಬೇಕು. (ಯಾಜಕಕಾಂಡ 5:4-6) ಆದುದರಿಂದ ನಮ್ಮ ಹಿಂದಿನ ಹರಕೆಗಳನ್ನು ಹಗುರವಾಗಿ ವೀಕ್ಷಿಸದೆ ಇರುವಾಗ, ನಾವು ಯೇಸುವಿನ ಹೆಸರಿನಲ್ಲಿ ಈಗ ಪ್ರಾರ್ಥಿಸಬಹುದು ಮಾತ್ರವಲ್ಲ ನಮ್ಮ ಪಾಪಗಳಿಗೆ ಯೇಸುವಿನ ವಿಮೋಚನಾ ಬಲಿಯನ್ನು ಅನ್ವಯಿಸುವಂತೆ ನಾವು ದೇವರನ್ನು ಕೋರಬಹುದು, ಮತ್ತು ಯೇಸುವಿನ ಹೆಸರಿನಲ್ಲಿ ಕ್ಷಮೆಯನ್ನು ಬೇಡಬಹುದು. ಆಗ ನಾವು “ಒಂದು ದುಷ್ಟ ಮನಸ್ಸಾಕ್ಷಿಯಿಂದ ನಮ್ಮ ಹೃದಯಗಳು [ಶುದ್ಧ] ಮಾಡಲ್ಪಟ್ಟವರಾಗಿ ನಂಬಿಕೆಯ ಪೂರ್ಣ ಆಶ್ವಾಸನೆಯನ್ನು” ಪಡೆಯಬಲ್ಲೆವು.—ಇಬ್ರಿಯ 10:21, 22, NW. (g93 4/8)
[ಪುಟ 20 ರಲ್ಲಿರುವ ಚಿತ್ರ ಕೃಪೆ]
Priests taking vows at Montmartre
ಮಾನ್ಮಾರ್ಟ್ರ್ನಲ್ಲಿ ಪಾದ್ರಿಗಳು ಹರಕೆಮಾಡುತ್ತಿದ್ದಾರೆ